ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ ಅವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ತನ್ನ ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು. ಬೆಂಗಳೂರು ಪೊಲೀಸರು ಗೋಪಾಲ್ ಜೋಶಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
”ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಣ ಮತ್ತು ಚೆಕ್‌ಅನ್ನು ವಾಪಸ್ ಕೇಳಲು ಹೋದಾಗ, ಚೆಕ್‌ಅನ್ನು ಮಾತ್ರವೇ ಹಿಂದಿರುಗಿಸಿದರು. ಅಲ್ಲದೆ, ಸರ್ಕಾರದಿಂದ 200 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಸಿಗಲಿದೆ. ಆಗ ಎಲ್ಲ ಹಣವನ್ನೂ ಹಿಂದಿರುಗಿಸುತ್ತೇನೆ. ಅದಕ್ಕಾಗಿ, 1.75 ಕೋಟಿ ರೂ. ಹಣದ ಅಗತ್ಯವಿದೆ. ಸಹಾಯ ಮಾಡಿ – 25 ದಿನಗಳೊಳಗೆ ಹಿಂದಿರುಗಿಸುತ್ತೇನೆಂದು ಗೋಪಾಲ್ ಜೋಶಿ ಕೇಳಿದ್ದರು. ಆ ಹಣವನ್ನು ನಾವು ಹೊಂದಿಸಿ ಕೊಟ್ಟೆವು. ಆದರೆ, ಹಲವಾರು ದಿನಗಳು ಕಳೆದರೂ ಹಣವನ್ನು ಹಿಂದಿರುಗಿಸಲಿಲ್ಲ. ಅದನ್ನು ಕೇಳಲು ಹೋಗಿದ್ದಕ್ಕೆ, ಗೋಪಾಲ್ ಜೋಶಿ ಅವರ ಸಹೋದರಿ ವಿಜಯಲಕ್ಷ್ಮಿ ಜೋಶಿ ಅವರು ನಮ್ಮನ್ನು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ, ಗೂಂಡಾಗಳನ್ನು ಕರೆಸಿ, ಬೆದರಿಕೆ ಹಾಕಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.
ಸುನೀತಾ ಚವ್ಹಾಣ್ ಅವರ ದೂರಿನ ಆಧಾರದ ಮೇಲೆ, ಗೋಪಾಲ್ ಜೋಶಿ, ವಿಜಯಲಕ್ಷ್ಮಿ ಜೋಶಿ ಹಾಗೂ ಅಜಯ್ ಜೋಶಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 126(2), 118(1), 316(2), 318(4), 61-3(5) ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.