ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು, 5000 ಮೀಟರ್ ಗಿಂತ ಎತ್ತರದ ಪರ್ವತ ನೋಡಿದವರಿಗೆ ಆಸ್ಟ್ರೇಲಿಯಾದ ಪರ್ವತಗಳು ತುಂಬಾ ಎತ್ತರವಾಗಿಲ್ಲ ಎಂದೆನಿಸಬಹುದು. ಅದು ನಿಜವೂ ಹೌದು. ನ್ಯೂ ಸೌತ್ ವೇಲ್ಸ್ ರಾಜ್ಯದ ದಕ್ಷಿಣ ಭಾಗದಲ್ಲಿರುವ Snowy Mountains ಪರ್ವತಶ್ರೇಣಿಯಲ್ಲಿ ಅಡಗಿರುವ ಮೌಂಟ್ ಕೋಸಿಯಸ್ಕೋ ಆ ಭಾವನೆಗೆ ಸ್ಪಷ್ಟವಾದ ಉತ್ತರ ನೀಡುತ್ತದೆ.
ಇರುವುದೊಂದೇ ಜೀವನ – ಇದು ನನ್ನ ವೈಯಕ್ತಿಕ ನಂಬಿಕೆ, ಈ ನಂಬಿಕೆಯನ್ನೇ ಆಧಾರವಾಗಿರಿಸಿ ನಾನು ಬದುಕನ್ನು ಬದುಕುತ್ತಿರುವುದು. ಇರುವುದು ಒಂದೇ ಜೀವನವಾದರೂ, ಆ ಒಂದೇ ಒಂದು ಬದುಕನ್ನೇ ತಮ್ಮ ಕನಸು, ಇಚ್ಛೆ, ಸಾಮರ್ಥ್ಯ, ಆಶಯ ಮತ್ತು ಆಸೆಗಳಂತೆ ನಡೆಸಿಕೊಂಡು ಹೋದರೆ, ಆ ಒಂದು ಬದುಕೇ ಸಾಕು. ಪುನರ್ಜನ್ಮದಲ್ಲಿ ನಂಬಿಕೆ ಇರುವವರು ಪ್ರಸ್ತುತ ಜೀವನವನ್ನು ತಮ್ಮದೇ ದಾರಿಯಲ್ಲಿ, ಶೈಲಿಯಲ್ಲಿ ಅರ್ಥೈಸಿಕೊಳ್ಳಬಹುದು. ಆದರೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದವರಿಗೆ, ಬದುಕು ಎಂದರೆ ಇರುವುದೊಂದೇ. ಅದು, ಪ್ರಸ್ತುತ ನಾವು ಬದುಕುತ್ತಿರುವ ಬದುಕು. ಯಾರಿಗೂ ಕೂಡ, ಪುನರ್ಜನ್ಮದಲ್ಲಿ ನಂಬಿಕೆ ಇರುವವರಿಗೂ ಕೂಡ, ಹಿಂದಿನ ಜನ್ಮದ ನೆನಪಿಲ್ಲ, ಹಾಗೆಯೇ ಮುಂದಿನ ಜನ್ಮದ ಖಚಿತತೆ ಕೂಡ ಇಲ್ಲ. ವಿಜ್ಞಾನವೂ ಕೂಡ ಹಿಂದಿನ ಜನ್ಮ, ಮುಂದಿನ ಜನ್ಮ – ಇದನ್ನು ಒಪ್ಪುವುದಿಲ್ಲ. ಹೀಗಿರುವಾಗ ನಮಗೆ ಲಭ್ಯವಾಗಿರುವ ಈ ಒಂದು ಬದುಕನ್ನು ಅರ್ಥಪೂರ್ಣವಾಗಿ ಬದುಕುವುದೇ ನಮ್ಮ ಕರ್ತವ್ಯ. ಎಷ್ಟೋ ಮಂದಿಗೆ ಇರುವ ಈ ಒಂದು ಬದುಕನ್ನು ಕೂಡ ತಮ್ಮ ಕನಸು, ಇಚ್ಛೆ, ಸಾಮರ್ಥ್ಯ, ಆಶಯ ಮತ್ತು ಆಸೆಗಳಂತೆ ನಡೆಸಿಕೊಂಡು ಬದುಕಲು ಅಸಾಧ್ಯ ಎನ್ನುವುದು ಕೂಡ ಜಗತ್ತು ಕಂಡ ಸತ್ಯ. ಹಾಗಿರುವಾಗ ಯಾರಿಗೆಲ್ಲ ಈ ಸಾಧ್ಯತೆ ಇದೆಯೋ (ಅದರಲ್ಲೂ ಮುಖ್ಯವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ), ಅವರು ನಿಜಕ್ಕೂ ಭಾಗ್ಯವಂತರು. ಅಂತಹ ಬದುಕನ್ನು ಬದುಕುವುದು ಕೂಡ ಒಂದು luxury.
ಬಹು ಜನರಿಗೆ ಸುತ್ತಾಟ, ಇನ್ನೊಂದು ಊರು, ದೇಶ, ರಾಜ್ಯ, ಹಳ್ಳಿ, ನಾಡು, ಸಂಸ್ಕೃತಿ, ನಾಗರೀಕತೆ ನೋಡುವುದು ಕೂಡ, ಬದುಕನ್ನು ಅರ್ಥಪೂರ್ಣಗೊಳಿಸುವ ಒಂದು ಮಾರ್ಗ. ಇದಕ್ಕಾಗಿಯೇ, ತನ್ನ ಸಹಜೀವಿಯ, ಸಹ ಮನುಷ್ಯನ ಬಗ್ಗೆ ಕುತೂಹಲವಿರುವ ಎಷ್ಟೋ ಮಂದಿ ಪ್ರಯಾಣವನ್ನು ಆಯ್ದುಕೊಳ್ಳುತ್ತಾರೆ. ಪ್ರಯಾಣವೆಂದರೆ ಕೇವಲ ಸಂಚಾರವಲ್ಲ; ಪ್ರಯಾಣವೆಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಅಲ್ಲ, ಬದಲಾಗಿ ಅದೊಂದು ಅನುಭವ, ಜೀವನವನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶವೂ ಹೌದು. ಮನುಷ್ಯನ ಜ್ಞಾನ – ವಿಜ್ಞಾನ, ಕಲಿಕೆ – ನಲಿಕೆ, ವೇಷಭೂಷಣ, ಆಚಾರ-ವಿಚಾರ, ಉಡುಗೆ-ತೊಡುಗೆ, ಮಾತು-ಭಾಷೆ, ಹಾಡು-ಸಂಗೀತ, ನೃತ್ಯ-ಕಲೆ – ಇವೆಲ್ಲವೂ ಅವನ ಸುತ್ತಮುತ್ತಲಿನ ಪರಿಸರದ ಪ್ರತಿಫಲ. ಸುತ್ತಾಟ ಈ ನಂಟನ್ನು ಮತ್ತಷ್ಟು ಸ್ಪಷ್ಟವಾಗಿ ಮನದಟ್ಟು ಮಾಡಿಸುತ್ತದೆ. ನಾನು ಕೈಗೊಂಡ ಪ್ರತಿಯೊಂದು ಪ್ರಯಾಣವೂ ಕೂಡ ಬದುಕಿಗೆ ಹೊಸ ಉತ್ಸಾಹ ನೀಡಿದೆ, ನನ್ನ ಬದುಕಿನ ಜೀವಂತಿಕೆಯನ್ನು ಹೆಚ್ಚಿಸಿದೆ, ಜೀವಂತ ಬದುಕಿನ ಗಾಳಿಯನ್ನು ನನಗೆ ಉಸಿರಾಗಿಸಿದೆ.

ಪ್ರತಿಯೊಂದು ಚಾರಣವೂ ನನಗೆ ಹೀಗೆ ಅನಿಸುತ್ತದೆ, ಏಕೆಂದರೆ ಅವು ಪ್ರತಿಯೊಂದೂ ನನ್ನೊಳಗಿನ ವ್ಯಕ್ತಿಯನ್ನು ಒಂದಲ್ಲೊಂದು ರೀತಿಯಲ್ಲಿ ಪ್ರೇರೇಪಿಸಿವೆ, ನನ್ನ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿವೆ. ಆಸ್ಟ್ರೇಲಿಯಾದ ಮೌಂಟ್ ಕೋಸಿಯಸ್ಕೋ ಪರ್ವತಾರೋಹಣ ಕೂಡ ನನ್ನ ಬದುಕನ್ನು ಇನ್ನಷ್ಟು ಅರ್ಥಪೂರ್ಣವಾಗಿ ರೂಪಿಸಿದ ಅನುಭವವಾಗಿದ್ದು, ಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತಾ, ಬದುಕನ್ನು ಮತ್ತಷ್ಟು ಜೀವಂತವಾಗಿ ಬದುಕಲು ಪ್ರೇರೇಪಿಸಿದೆ. ಹಾಗೆಯೇ ಇರುವ ಈ ಒಂದು ಬದುಕನ್ನು ನನ್ನ ಕನಸು, ಇಚ್ಛೆ, ಸಾಮರ್ಥ್ಯ, ಆಶಯ ಮತ್ತು ಆಸೆಗಳಂತೆ ನಡೆಸಿಕೊಂಡು ಬದುಕಲು ಪ್ರೇರೇಪಿಸಿದ ಒಂದು ಚಾರಣ ಕೂಡ.
ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು, 5000 ಮೀಟರ್ ಗಿಂತ ಎತ್ತರದ ಪರ್ವತ ನೋಡಿದವರಿಗೆ ಆಸ್ಟ್ರೇಲಿಯಾದ ಪರ್ವತಗಳು ತುಂಬಾ ಎತ್ತರವಾಗಿಲ್ಲ ಎಂದೆನಿಸಬಹುದು. ಅದು ನಿಜವೂ ಹೌದು. ನ್ಯೂ ಸೌತ್ ವೇಲ್ಸ್ ರಾಜ್ಯದ ದಕ್ಷಿಣ ಭಾಗದಲ್ಲಿರುವ “Snowy Mountains” ಪರ್ವತಶ್ರೇಣಿಯಲ್ಲಿ ಅಡಗಿರುವ ಮೌಂಟ್ ಕೋಸಿಯಸ್ಕೋ ಆ ಭಾವನೆಗೆ ಸ್ಪಷ್ಟವಾದ ಉತ್ತರ ನೀಡುತ್ತದೆ. ಸಮುದ್ರಮಟ್ಟದಿಂದ ಸರಿ ಸುಮಾರು 2,228 ಮೀಟರ್ ಎತ್ತರದಲ್ಲಿರುವ ಈ ಶಿಖರವು ಆಸ್ಟ್ರೇಲಿಯಾದಲ್ಲೇ ಅತಿ ಎತ್ತರದ ಪರ್ವತವಾಗಿದ್ದು, ಪ್ರಕೃತಿ ಪ್ರಿಯರಿಗೂ ಸಾಹಸ ಪ್ರಿಯರಿಗೂ ಬಹು ಮೆಚ್ಚಿನ ಪರ್ವತ. ಈ ಪರ್ವತವು ಆಸ್ಟ್ರೇಲಿಯಾದ ಅತ್ಯಂತ ವೈವಿಧ್ಯಮಯ ಮತ್ತು ಮನಮೋಹಕ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾದ ಕೋಸಿಯಸ್ಕೋ ನ್ಯಾಷನಲ್ ಪಾರ್ಕ್‌ನ ಅವಿಭಾಜ್ಯ ಅಂಗ.
ಆಸ್ಟ್ರೇಲಿಯಾಯದ ಈ ಪರ್ವತಕ್ಕೆ “ಮೌಂಟ್ ಕೋಸಿಯಸ್ಕೋ” ಎಂಬ ಹೆಸರನ್ನು 19ನೇ ಶತಮಾನದಲ್ಲಿ, ಪೋಲಿಷ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಾಗತಿಕ ಖ್ಯಾತಿಯ ಕ್ರಾಂತಿಕಾರಿ ಟೇಡಿಯಸ್ ಕೋಸಿಯಸ್ಕೋ ಅವರ ಸ್ಮರಣಾರ್ಥವಾಗಿ ನೀಡಲಾಗಿದೆ ಎಂಬುದು ಇದರ ವೈಶಿಷ್ಟ್ಯ. ಈ ಪರ್ವತವನ್ನು ವರ್ಷದಲ್ಲಿ ವಿಭಿನ್ನ ಋತುಗಳಲ್ಲಿ ಭೇಟಿ ನೀಡುವುದು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಚಳಿಗಾಲದಲ್ಲಿ ಹಿಮಪಾತದಿಂದ ಆವೃತಗೊಂಡು, ಬಿಳಿ ಹಿಮದ ಹೊದಿಕೆ ತೊಟ್ಟಂತೆ ಹೊಳೆಯುವ ಈ ಪರ್ವತವು ಆಸ್ಟ್ರೇಲಿಯಾದ ಪ್ರಮುಖ ಸ್ಕೀಯಿಂಗ್ ಮತ್ತು ಹಿಮಕ್ರೀಡೆಗಳ ಕೇಂದ್ರವಾಗಿದೆ. ಬೇಸಿಗೆ ಕಾಲದಲ್ಲಿ, ಹಸಿರು ಕಣಿವೆಗಳು, ಬಣ್ಣ ಬಣ್ಣದ ಕಾಡು ಹೂಗಳು ಮತ್ತು ದೂರವರೆಗೆ ಹರಡುವ ಹೈಕಿಂಗ್ ಹಾದಿಗಳು ಪ್ರವಾಸಿಗರ ಮನಸ್ಸನ್ನು ಆಕರ್ಷಿಸುತ್ತವೆ. ಸೂರ್ಯಕಿರಣದಲ್ಲಿ ಮೆರುಗುವ ಆ ಹಸಿರು ನೆಲ, ತಂಪಾದ ಗಾಳಿ, ಹಕ್ಕಿಗಳ ಕಲರವ – ಇವೆಲ್ಲವುದುದರ ಜೊತೆ ಸೇರಿ ಪ್ರಕೃತಿಯ ಅದ್ಭುತ ಚಿತ್ರವನ್ನೇ ಮೂಡಿಸುತ್ತವೆ. ಹೀಗಾಗಿ, ಮೌಂಟ್ ಕೋಸಿಯಸ್ಕೋ ಕೇವಲ ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರವಲ್ಲ, ಬದಲಾಗಿ ವಿಭಿನ್ನ ಋತುಗಳಲ್ಲಿ ವಿಭಿನ್ನ ರೂಪ ತಾಳುವ ಪ್ರಕೃತಿ ನಾಟಕಶಾಲೆಯೂ ಹೌದು. ಹಾಗೆಯೇ ಪ್ರಕೃತಿ ಪ್ರಿಯರಿಗೆ ಬಹು ಸರಳವಾಗಿ ಚಾರಣ ಮಾಡಬಹುದಾದ ಒಂದು ಪರ್ವತವೂ ಹೌದು. ಹಾಗೆಯೇ ಒಂದೇ ದಿನದಲ್ಲಿ ಹೋಗಿ ಮರಳಬಹುದಾದ ಚಾರಣವೂ ಕೂಡ ಹೌದು.

ಪ್ರಯಾಣವು ಬೆಂಗಳೂರಿನಿಂದ ಆರಂಭವಾಗಿ, ಅಲ್ಲಿಂದ ಆಸ್ಟ್ರೇಲಿಯಾದ ಸಿಡ್ನಿ ನಗರ ತಲುಪಿದ ಬಳಿಕ ನಿಜವಾದ ಸಾಹಸ ಪ್ರಾರಂಭವಾಯಿತು. ಬೆಳಗಿನ ಸಿಡ್ನಿಯ ಲೋಕಲ್ ಬಸ್ಸು, ರೈಲು ಹಿಡಿದು, ನಂತರ ಕಾರಿನ ಮೂಲಕ ಮುಂದುವರಿದ ಈ ಪ್ರಯಾಣದಲ್ಲಿ, ನಗರವನ್ನು ಬಿಟ್ಟು ಹೊರಟಂತೆ ಕಿಟಕಿಯಿಂದ ಕಾಣುತ್ತಿದ್ದ ದೃಶ್ಯಗಳು ನಿಧಾನವಾಗಿ ಬದಲಾಗುತ್ತ ಹೋದವು. ಗದ್ದಲದ ಅಬ್ಬರದ ನಗರದ ಬೀದಿಗಳಿಂದ ಹಳ್ಳಿಗಳ ನಿಶ್ಚಲತೆಯತ್ತ, ಹಸಿರು ಹೊಲಗಳಿಂದ ಪರ್ವತಗಳತ್ತ. ವಿಶಾಲವಾದ ಹೆದ್ದಾರಿಯಲ್ಲಿ ಕಾರು ಚಲಿಸುತ್ತಿದ್ದಂತೆ, ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರಾಡುತ್ತಿದ್ದ ಕಾಂಗರೂಗಳನ್ನು ಕಣ್ಣಾರೆ ನೋಡುವುದು ತಾನೇ ಒಂದು ಅಪರೂಪದ ಅನುಭವವಾಗಿತ್ತು; ಮೌಂಟ್ ಕೋಸಿಯಸ್ಕೋ ಚಾರಣದ ಆರಂಭಿಕ ಪಾಯಿಂಟ್ ತಲುಪುವುದಕ್ಕೂ ಮುನ್ನವೇ ಈ ಡ್ರೈವ್ ಒಂದು ಅಡ್ವೆಂಚರ್‌ನಂತೆ ಅನಿಸಿತು. ಸುಮಾರು ಆರು-ಏಳು ಗಂಟೆಗಳ ಪ್ರಯಾಣದ ನಂತರ ನಾವು ಥ್ರೆಡ್ಬೋ (Thredbo) ಹಳ್ಳಿಯನ್ನು ತಲುಪಿದೆವು. ಇದು ಪ್ರವಾಸಿಗರ ಕೇಂದ್ರವಾಗಿದ್ದು, ಹೋಟೆಲ್‌ಗಳು, ಕಾಫಿ ಅಂಗಡಿಗಳು, ಸ್ಕೀಯಿಂಗ್ ಉಪಕರಣ ಅಂಗಡಿಗಳು – ಇಡೀ ತಾಣವೇ ಚೈತನ್ಯದಿಂದ ತುಂಬಿಕೊಂಡಿತ್ತು. ಹಳ್ಳಿಯ ಇಡೀ ವಾತಾವರಣವೇ ಒಂದು ಉತ್ಸವದಂತೆ ಕಂಗೊಳಿಸುತ್ತಿದ್ದು, ಇದು ಚಾರಣಿಕರು ಹಾಗೂ ಪ್ರವಾಸಿಗರ ಹಳ್ಳಿಯಂತೆಯೇ ಭಾಸವಾಗುತ್ತಿತ್ತು. ಥ್ರೆಡ್ಬೋ ಹಳ್ಳಿಯಿಂದಲೇ ಪರ್ವತಾರೋಹಣದ ಹಾದಿ ಆರಂಭವಾಗುತ್ತಿದ್ದು, ಇಲ್ಲಿ ಮುಖ್ಯವಾಗಿ ಎರಡು ಮಾರ್ಗಗಳಿವೆ: ಚೇರ್‌ಲಿಫ್ಟ್ (Kosciuszko Express Chairlift) ಮೂಲಕ ಹೈಕಿಂಗ್ ಹಾದಿಯ ಮಧ್ಯಭಾಗದವರೆಗೆ ನೇರವಾಗಿ ಹೋಗುವುದು, ಅಥವಾ ಹಳ್ಳಿಯಿಂದಲೇ ನಿಧಾನವಾಗಿ ನಡೆಯುತ್ತಾ, ಕಾಡು–ಹಿಮ–ಹಸಿರು ಕಣಿವೆಗಳ ಮೂಲಕ ಪರ್ವತದ ತುದಿವರೆಗೆ ತಲುಪುವದು. ಇಲ್ಲಿರುವ ಚೇರ್‌ಲಿಫ್ಟ್ – ಈ ಚಾರಣವನ್ನು ಮತ್ತಷ್ಟು ಸರಳವಾಗಿಸುತ್ತದೆ.
ಥ್ರೆಡ್ಬೋದಿಂದ ಹೊರಟ ಕೆಲವೇ ಹೊತ್ತಿನಲ್ಲೇ ಹಾದಿಯು ತನ್ನ ವೈವಿಧ್ಯತೆಯನ್ನು ತೋರಿಸಿತು. ಬೇಸಿಗೆಯ ಸಮಯವಾಗಿದ್ದರಿಂದ ಹಾದಿಯ ಬದಿಯಲ್ಲಿ ಬಣ್ಣಬಣ್ಣದ ಕಾಡುಹೂಗಳು ಅರಳಿದ್ದವು, ಹಸಿರು ಮೇವು ಹಾಸಿಗೆಯಂತೆ ನೆಲದ ಮೇಲೆ ಬಿದ್ದಿತ್ತು. ಕೆಲವು ಕಡೆ ಚಿಕ್ಕ ಚಿಕ್ಕ ಹೊಳೆಗಳು ಹರಿಯುತ್ತಿದ್ದು, ಅವುಗಳ ಮೇಲೆ ಕಟ್ಟಲಾಗಿರುವ ಮರದ ಸೇತುವೆಗಳನ್ನು ದಾಟುವುದು ವಿಶಿಷ್ಟ ಅನುಭವ ನೀಡಿತು. ಹಾದಿಯಲ್ಲಿ ಕಂಗಾರುಗಳು, ಕಪ್ಪು–ಬಿಳಿ ಬಣ್ಣದ ಹಕ್ಕಿಗಳು ಮತ್ತು ಕೆಲವೆಡೆ ಚಿಕ್ಕ ಚಿಕ್ಕ ಹಾವುಗಳು ಕಾಣಿಸಿಕೊಂಡವು.
ಸ್ಥಳೀಯರು ಹೇಳಿದಂತೆ, ಇಲ್ಲಿ “ಮೌಂಟನ್ ಪಿಗ್ಮಿ ಪೋಸಮ್” ಎಂಬ ಅಪರೂಪದ ಪ್ರಾಣಿಯೂ ಕಾಣಿಸಬಹುದು. ಹಾದಿಯ ಪ್ರತಿಯೊಂದು ತಿರುವೂ ಹೊಸ ಅನುಭವ ನೀಡುತ್ತಿತ್ತು; ಕೆಲವೊಮ್ಮೆ ದಟ್ಟವಾದ ಕಾಡಿನೊಳಗೆ ನುಗ್ಗಿದಂತೆ, ಕೆಲವೊಮ್ಮೆ ತೆರೆದ ಹಸಿರು ಕಣಿವೆಗಳಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.

ಎತ್ತರ ಹೆಚ್ಚಾದಂತೆ ಹಾದಿಯು ಕಠಿಣವಾಗುತ್ತಿತ್ತು. ಕೆಲವೆಡೆ ಬಿಳಿ ಹಿಮ ಇನ್ನೂ ಕರಗದೆ ಬಿದ್ದಿದ್ದು, ಅದರ ಮೇಲೆ ಕಾಲಿಟ್ಟರೆ ಜಾರಿ ಬೀಳುವ ಅಪಾಯವಿತ್ತು. ಬಲವಾಗಿ ಬೀಸುತ್ತಿರುವ ತಂಪಾದ ಗಾಳಿ ಉಸಿರಾಡಲು ಕಷ್ಟಕಾರಿಯಂತಿತ್ತು. ಆದರೂ ಹಾದಿಯಲ್ಲಿ ಭೇಟಿಯಾದವರು, ನನ್ನೊಂದಿಗೆ ಬಂದಿದ್ದ ಸಹ ಚಾರಣಿಗರು – “Almost there!” ಎಂದು ಪ್ರೋತ್ಸಾಹಿಸುತ್ತಿದ್ದರು. ಅದರಲ್ಲಿ ನನಗೆ ನೆನಪಾಯಿತು – ಜೀವನದಲ್ಲಿಯೂ ಹೀಗೆಯೇ, ಕೆಲವೊಮ್ಮೆ ಒಂದು ಮಾತು ಅಥವಾ ಒಂದು ನಗು ನಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತದೆ. ಪ್ರತೀ ಚಾರಣವೂ ಈ ಮಾತನ್ನು ನೆನಪಿಸುತ್ತದೆ. ಕೆಲವೊಮ್ಮೆ ಇನ್ನೇನು ನಾವು ಅಂದು ಕೊಂಡ ಹಾಗೆ ದಾರಿ ಸಾಗುತ್ತಿಲ್ಲ, ನಮ್ಮ ಯೋಜನೆಯಂತೆ ನಡೆಯಲು ಆಗುತ್ತಿಲ್ಲ ಎನ್ನುವಾಗ – ನಮ್ಮ ಒಡನಾಡಿಗಳ ಒಂದು ಪುಷ್ಟಿಯ ಮಾತು, ಒಂದು ಭರವಸೆಯ ಮಾತು, ‘ನಿನ್ನಿಂದ ಇದು ಸಾಧ್ಯ’ ಎನ್ನುವ ಒಂದು ಮಾತು – ನಮ್ಮನ್ನು ಮತ್ತಷ್ಟು ಬಲಾಢ್ಯರನ್ನಾಗಿಸುತ್ತದೆ. ನಮ್ಮಲ್ಲಿ ಹುದುಗಿರುವ ಶಕ್ತಿಯನ್ನು ನಮಗರಿವಿಲ್ಲದಂತಯೇಯೇ ಹೊರತರುತ್ತದೆ.
ಕೋಸಿಯಸ್ಕೋ ಪರ್ವತಕ್ಕೆ ಮತ್ತೊಂದು ಜನಪ್ರಿಯ ಮಾರ್ಗವಾದ Charlotte Pass ಹಾದಿಯೂ ಇದೆ. ಇದು ಆಸ್ಟ್ರೇಲಿಯಾದ ಅತಿ ಎತ್ತರದ ಗ್ರಾಮವಾಗಿದ್ದು, ಇಂದಿಗೂ ಇಲ್ಲಿ ಹಿಮ ದಟ್ಟವಾಗಿಯೇ ಇದೆ. Charlotte Pass ನಿಂದ ಪರ್ವತ ಶಿಖರವರೆಗೆ ಸುಮಾರು 18 ಕಿಮೀ ದೂರದ ಹಾದಿಯಿದ್ದು, ಹಾದುಹೋಗುವವರು Snowy River, Seamans Hut, Rawson Pass ಮುಂತಾದ ಸ್ಥಳಗಳನ್ನು ದಾಟುತ್ತಾ ಸಾಗಬೇಕು. ಕೆಲವು ಕಿಮೀಗಳಷ್ಟು ನಡೆದು ಸಾಗಬೇಕಾದ ಈ ಹಾದಿ – ನಡೆಯುವ ಅನುಭವವೇ ವಿಶಿಷ್ಟ. ಹಿಮದಿಂದ ಆವರಿತ ಹಾದಿ, ಚಿಕ್ಕ ಸೇತುವೆಗಳು ಮತ್ತು ಹರಿಯುತ್ತಿರುವ ಹೊಳೆ ಹೀಗೆ ಎಲ್ಲವೂ ಕೂಡ ಚಾರಣಿಗರ ಕಣ್ಮುಂದೆ ಒಂದು ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತವೆ.
ಅಂತಿಮವಾಗಿ, ಗಂಟೆಗಳ ಏರಿಕೆಯ ಬಳಿಕ ನಾವು ಕೋಸಿಯಸ್ಕೋ ಪರ್ವತದ ತುದಿಗೆ ತಲುಪಿದೆವು. ಅಲ್ಲಿನ ದೃಶ್ಯ ಮರೆಯಲಾಗದಂತಿತ್ತು. ಇಡೀ ಪರ್ವತ ತಟವೇ ಒಂದು ಹಿಮ ತುಂಬಿದ ವಿಶಾಲವಾಗಿ ಚಾಚಿಕೊಂಡ ಮೈದಾನದಂತೆ ಕಾಣುತಿತ್ತು. ನಾಲ್ಕು ಕಡೆ ಹಿಮಾಚ್ಛಾದಿತ ಪರ್ವತ ಶ್ರೇಣಿಗಳು, ಆಕಾಶದಲ್ಲಿ ಹರಡಿದ ಬಿಳಿ ಮೋಡಗಳ ಚಿತ್ತಾರ, ಸಂಜೆಯ ಕೆಂಪು ಸೂರ್ಯನ ಕಿರಣದಿಂದ ಹೊಳೆಯುತ್ತಿದ್ದ ಹಿಮಭರಿತ ಪರ್ವತಶ್ರೇಣಿ, ಮತ್ತು ತೀವ್ರ ಗಾಳಿ ಹೀಗೆ ಒಂದು ವಿಶಿಷ್ಟ, ಬಣ್ಣಿಸಲು ಅಸಾಧ್ಯವಾದ ದೃಶ್ಯ ಮತ್ತು ಅನುಭವ. ಆ ಕ್ಷಣದಲ್ಲಿ- ಮನಸ್ಸಿನಲ್ಲಿ ತುಂಬಿದ ಸಂತೋಷ ಹೇಳತೀರದು. ಜೀವನವೆಂದರೆ ಕೇವಲ ಜೀವಿಸುವುದಲ್ಲ, ಬದಲಿಗೆ ಪ್ರತಿ ಕ್ಷಣವನ್ನು, ಪ್ರತಿ ಗಳಿಗೆಯನ್ನು ಜೀವಂತವಾಗಿ ಸವಿಯುತ್ತ ಬದುಕುವುದು. ಹಾಗೆಯೇ ಜೀವನವೆಂದರೆ ಬರಿಯ ಗುರಿಯನ್ನು ತಲುಪುವುದು ಅಲ್ಲ, ಅದನ್ನು ಸಾಗುವ ದಿನನಿತ್ಯದ ಹಾದಿಯ ಪ್ರತಿಯೊಂದು ಹೆಜ್ಜೆಯೂ ಕೂಡ ಅಷ್ಟೇ ಮಹತ್ವದ್ದಾಗಿದೆ. ಹಾಗೆಯೇ ಎಷ್ಟೋ ಬಾರಿ ಪರ್ವತ ತಟದಲ್ಲಿ ವಿಪರೀತ ಗಾಳಿ, ಆಕ್ಸಿಜನ್ ಕೊರತೆ ಹೀಗೆ ಹಲವಾರು ಕಾರಣದಿಂದ ಜಾಸ್ತಿ ಹೊತ್ತು ಕಳೆಯಲು ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಗಬೇಕಾದ ದಾರಿಯನ್ನು ಕೂಡ ಅಷ್ಟೇ ಪ್ರೀತಿಯಿಂದ, ಜೀವಂತಿಕೆಯಿಂದ ನಡೆಯಬೇಕಾದದ್ದು ಅತೀ ಅಗತ್ಯ. ಚಾರಣದ ಗುರಿಯೊಂದಷ್ಟೇ ಅಲ್ಲ, ಸಾಗಬೇಕಾದ ಹಾದಿಯೇ ನಿಜವಾದ ಅನುಭವ. ಜೀವನವೂ ಅಷ್ಟೇ ಅಲ್ಲವೇ?
ಶಿಖರದಲ್ಲಿ ಸ್ವಲ್ಪ ಹೊತ್ತು ಕಳೆದು, ಸೂರ್ಯನ ಕೆಂಪು ಮರೆಯಾಗುತ್ತಲೇ, ನಾವು ಹಿಂತಿರುಗುವ ಹಾದಿ ಹಿಡಿದೆವು. ಹಿಂತಿರುಗುವ ದಾರಿ ತುಂಬಾ ಇಳಿಜಾರಾಗಿದ್ದುದರಿಂದ ಹಾದಿ ಸುಲಭವಾಗಿದ್ದರೂ ಶ್ರಮ ಹೆಚ್ಚಿತ್ತು. ನಮ್ಮ ಹೆಡ್ಲಾಂಪುಗಳು (headlamp), ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದವು. ಬಾನಿನಲ್ಲಿ ಆಗ ತಾನೇ ನಕ್ಷತ್ರಗಳು ಹೊಳೆಯಲು ಶುರುವಾಗಿದ್ದವು. ಕಲುಷಿತ ರಹಿತ ಪ್ರಕೃತಿಯೇ ಒಂದು luxury. ಇನ್ನು ಅಂತಹ ದಾರಿಯಲ್ಲಿ ಮುಸ್ಸಂಜೆಯ ವೇಳೆಯಲ್ಲಿ ಸಾಗುತ್ತ, ನೀಲಿ ಕಪ್ಪು ಮಿಶ್ರಿತ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳನ್ನು ನೋಡುವುದು ಜೀವನ ನೀಡಿದ ಕೊಡುಗೆ. ಹಾಗೆಯೇ ಅದಕ್ಕೆ ತಕ್ಕನಾದ ದೈಹಿಕ ಸಾಮಾರ್ಥ್ಯ ಇರುವುದು ಕೂಡ ಜೀವನದ luxury. ಹೀಗೆ ನಮಗೆ, ನಮ್ಮ ಸಾಮರ್ಥ್ಯಕ್ಕೆ ದಕ್ಕುವ ಪ್ರತಿಯೊಂದನ್ನು, ಪ್ರತಿಯೊಂದು ಅನುಭವವನ್ನು ಕೂಡ ಜೀವಂತವಾಗಿ ಬದುಕಿದರೆ, ಬದುಕು ನಿಜವಾಗಿಯೂ ಬದುಕಿದಂತೆ. ಅಂತಹ ಒಂದು ಬದುಕು ಸಾಕು.
ಈ ಪರ್ವತ ಚಾರಣ ನನಗೆ ಮೂರು ಪ್ರಮುಖ ಪಾಠಗಳನ್ನು ಕಲಿಸಿತು: ಬದುಕಿನದ್ದಾಗಲಿ, ಚಾರಣದ್ದಾಗಲೀ – ಹಾದಿಯ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗಿದೆ. ಬರೇ ಗುರಿಯಷ್ಟೇ ಅಲ್ಲ, ಹಾದಿಯನ್ನು ಸಾಗಬೇಕಾದ ಅನುಭವವೂ ಜೀವನವನ್ನು ಸಾರ್ಥಕಗೊಳಿಸುತ್ತದೆ. ಬದುಕನ್ನು ಬದುಕಲು – ದೈಹಿಕ ಶ್ರಮ ಮತ್ತು ಮಾನಸಿಕ ಉತ್ಸಾಹ ಎರಡೂ ಅಗತ್ಯವಿದೆ. ದೇಹದ ಶ್ರಮವಿಲ್ಲದೆ ಏನೂ ಸಾಧ್ಯವಿಲ್ಲ, ಹಾಗೆಯೇ ಮನಸ್ಸಿನ ಉತ್ಸಾಹವಿಲ್ಲದೆ ಶ್ರಮಕ್ಕೆ ಮೌಲ್ಯವಿಲ್ಲ. ಪ್ರಕೃತಿಯ ಮಡಿಲಲ್ಲಿ ನಿಂತಾಗ ಮಾನವನ ಅಹಂಕಾರ ಕರಗುತ್ತದೆ ಮತ್ತು ಬದುಕಿನ ನಿಜವಾದ ಅರ್ಥ ಅರಿವಾಗುತ್ತದೆ.
ಸಿಡ್ನಿಗೆ ಹಿಂತಿರುಗಿದಾಗ ನನ್ನೊಳಗೆ ಒಂದು ಶಾಂತಿ ತುಂಬಿ ಹೋದಂತೆ ಇತ್ತು. ದಿನನಿತ್ಯದ ಗದ್ದಲದಲ್ಲಿಯೂ ಆ ಪರ್ವತಾರೋಹಣದ ನೆನಪು ನನಗೆ ನೆನಪಾಗುತ್ತಿತ್ತು. ಇರುವುದೊಂದೇ ಜೀವನ, ಅದನ್ನು ಹೇಗೆ ಬದುಕುತ್ತೇವೆ ಎನ್ನುವುದು ನಮ್ಮ ಕೈಯಲ್ಲಿದೆ. ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ನನ್ನ ಜೀವನದಲ್ಲಿ ಒಂದು ಅಮೂಲ್ಯ ನೆನಪು.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.