ಒಮ್ಮೆ ಹೀಗೆ ಗಿರಿಜಮ್ಮನ ಜೊತೆ ಹರಟುವಾಗ “ನೆನ್ನೆ ಶಿವಪೂಜೆ ಮಾಡುವಾಗ ಶಿವ ಪರಮಾತ್ಮನಲ್ಲಿ ಕೇಳಿಕೊಂಡೆ, ನಾನು ಬಡವ, ನನ್ನಲ್ಲಿ ಹಣವಿಲ್ಲ, ಆಸ್ಪತ್ರೆಗೆ ಹೋಗಿ ಬರುವಷ್ಟು ತ್ರಾಣವಿಲ್ಲ. ನಿನ್ನ ಬಿಟ್ಟರೆ ನನಗೆ ನೆಂಟರಿಲ್ಲ. ಹೆಚ್ಚು ಕಾಯಿಲೆ ಕಸಾಲೆ ಕೊಡಬೇಡ. ನನ್ನ ಜೀವ ಮುಗಿದಿದ್ದರೆ ಬೇಗ ನಿನ್ನ ಬಳಿಗೆ ಕರೆಸಿಕೊ ಎಂದು ಕೇಳಿಕೊಂಡೆ” ಎಂದು ಗಂಭೀರವಾಗಿ ಹೇಳಿದ್ದ ಬಸಪ್ಪ ವಾರದೊಳಗೆ ಹೊರಟುಹೋಗಿದ್ದ…
ನಮ್ಮ ಹಳ್ಳಿಯ ಎರಡು ಬೀದಿಗಳಲ್ಲಿ ಒಂದು ಸಣ್ಣನೆಯ ಊರು ಗೋಲು ಹಿಡಿದು, ಸದಾ ತುಂಡು ಬಿಳಿಪಂಚೆ, ಮೇಲೊಂದು ಹೊಲಿಸಿದ ಗಾಢ ಬಟ್ಟೆಯ ಬನೀನು, ಹಣೆಯಲ್ಲಿ ಎದ್ದು ಕಾಣುವ ಮೂರು ಎಳೆಗಳ ವಿಭೂತಿ, ಕತ್ತಿನಲ್ಲಿ ನೇತಾಡುತ್ತಿರುವ ಕರಡಿಗೆಯ ಬಟ್ಟೆಯ ಗಂಟು. ಸದಾ ಮುಗುಳ್ನಗುವ ಆ ಬೆನ್ನು ಬಾಗಿ ಸಣ್ಣ ಸಣ್ಣ ಹೆಜ್ಜೆ ಹಾಕಿ ನಡೆಯುತ್ತಿದ್ದ ಅಜ್ಜನಿಗೆ ನಾವೆಲ್ಲಾ ಕರೆಯುತ್ತಿದ್ದದ್ದು ಕುಂದೂರು ಬಸವಣ್ಣ ಉರುಫ್ ಕುಂದೂರು ಬಸಪ್ಪ.
ಕೇವಲ ಮೂವತ್ತು ಮನೆಗಳಿದ್ದ ನಮ್ಮದು ಸಣ್ಣ ಹಳ್ಳಿ, ಊರಿನಲ್ಲಿ ಎಲ್ಲರೂ ಎಲ್ಲರಿಗೂ ಪರಿಚಿತರೇ. ನಮ್ಮ ಮನೆಯ ಸಾಲಿನಿಂದ ಮುಂದಕ್ಕೆ ಎದುರುಗಡೆ ಇದ್ದ ಎರಡನೆಯ ಹಳ್ಳಿ ಹಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಳೆ ಬಂದಾಗ ಹೆಂಚುಗಳ ಸಂದಿಗಳಲ್ಲಿ ಮಳೆ ನೀರು ಹರಿದು ಮನೆಯೆಲ್ಲಾ ಒದ್ದೆಯಾಗುತ್ತಿತ್ತು. ಒಮ್ಮೊಮ್ಮೆ ಸಣ್ಣ ಇಲಿಗಳು ಸೇರಿಕೊಂಡು ಅವರು ಇಟ್ಟಿದ್ದ ಕಾಳುಗಳನ್ನು ತಿಂದು ಹಾಕಿ ಬಿಡುತ್ತಿದ್ದವು. ಅದೊಂದು ತೀರಾ ಕಿರಿದಾದ ಮನೆ. ಒಂದು ಮೂಲೆಯಲ್ಲಿ ಪುಟ್ಟ ಅಡುಗೆ ಮನೆ, ಮಣ್ಣಿನ ಒಲೆ, ಅಲ್ಲಿಯೇ ಜೋಡಿಸಿಟ್ಟ ಎರಡು ಮೂರು ಅಲ್ಯೂಮಿನಿಯಂ ಪಾತ್ರೆ, ಲೋಟ, ತಟ್ಟೆ ಅಷ್ಟೇ. ಪಕ್ಕದಲ್ಲೇ ಒಬ್ಬರಷ್ಟೇ ಮಲಗಲು ಜಾಗ. ಒಂದೆರಡು ಹಳೆ ಚಾಪೆ, ಹಾಸಿ ಹೊದೆಯಲು ಕಂಬಳಿ. ಮನೆಯನ್ನು ಪ್ರತಿದಿನ ಕಸ ಗುಡಿಸಿ, ಒಳಗೆಲ್ಲಾ ವಾರಕ್ಕೊಮ್ಮೆ ಸಗಣಿ ಸಾರಿಸಿ, ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿದ್ದರು. ಮಳೆಗಾಲ ಶುರುವಾಗುವ ಮೊದಲೇ ಅಲ್ಲಲ್ಲಿ ಆಯ್ದು ತಂದು ಅಷ್ಟಿಷ್ಟು ಸೌದೆ ಕೂಡಾಕಿಕೊಳ್ತಾ ಇದ್ದರು. ಒಮ್ಮೊಮ್ಮೆ ನಮ್ಮ ಹೊಲಕ್ಕೆ ಸೌದೆ ಆಯಲು ಬಂದಾಗ ಐದಾರು ವರ್ಷದವನಾಗಿದ್ದ ನಾನು ಅವರನ್ನು ತಡೆದು ಬೈಸಿಕೊಂಡಿದ್ದೂ ಉಂಟು.
ಅವರ ಮನೆ ಪೂರ್ತ ವಿಭೂತಿಯ ಘಮ್ಮನೇ ವಾಸನೆ ಇರುತ್ತಿತ್ತು. ಪ್ರತಿ ದಿನ ಸಂಜೆ ಬೆಳಗಿನ ಶಿವಪೂಜೆಗೆ ಒಂದಿಷ್ಟು ಹೂವು, ಅಡುಗೆಗೆಂದೂ ಸೌದೆ ಆರಿಸಿ ತರುತ್ತಿದ್ದರು. ಬೆಳಿಗ್ಗೆ ಒಮ್ಮೆ, ಸಂಜೆಯೊಮ್ಮೆ ತಪ್ಪದೇ ಶಿವಪೂಜೆ ಮಾಡುತ್ತಿದ್ದರು. ಬೆಳಿಗ್ಗೆ ರಾಗಿ ಮುದ್ದೆ, ಸಾರು ಮಾಡಿ ತಿಂದರೇ ಮುಗಿಯಿತು, ಮಧ್ಯಾಹ್ನದ ಊಟ ಮಾಡುತ್ತಿರಲಿಲ್ಲ. ಸಂಜೆಗೆ ಒಂದು ಹಿಡಿ ಅನ್ನ ಮಾಡಿ ಊಟ ಮುಗಿಸುತ್ತಿದ್ದರು. ಅವರು ಗಟ್ಟಿಯಾಗಿದ್ದಾಗ ನಮ್ಮ ಹಳ್ಳಿಯಿಂದ ಹತ್ತು ಮೈಲಿ ಸಮೀಪದಲ್ಲಿದ್ದ ಕುಂದೂರು ಬೆಟ್ಟದ ಮಠಕ್ಕೆ ಹೋಗಿ ಕೆಲ ದಿನ ಉಳಿದು ಅಲ್ಲಿನ ಸ್ವಾಮೀಜಿಗೆ ಸಹಾಯಕನಾಗಿ ಪೂಜೆಗೆ, ಅಡುಗೆಗೆ ಸಹಾಯ ಮಾಡುತ್ತಿದ್ದರು. ಹಾಗಾಗಿ ಇವರ ಹೆಸರಿನ ಹಿಂದೆ ಕುಂದೂರು ಎನ್ನುವ ಹೆಸರು ಸೇರಿತ್ತು.
ಆ ಬೆಟ್ಟದ ಬಗ್ಗೆ ನೂರೆಂಟು ಪ್ರತೀತಿಗಳು, ಕನ್ನಂಬಾಡಿ ಒಡೆದು ಹೋದರೂ ಆ ಬೆಟ್ಟ ಮುಳುಗುವುದಿಲ್ಲ ಎನ್ನುವುದು ಅದರಲ್ಲೊಂದು. ಒಮ್ಮೆ ನಾನು ಸಣ್ಣವನಿದ್ದಾಗ ನಾವು ಮನೆಯವರೆಲ್ಲಾ ಎತ್ತಿನ ಗಾಡಿಯಲ್ಲಿ ಆ ಮಠಕ್ಕೆ ಹೋಗಿದ್ದೆವು. ಆಗ ನಮ್ಮೂರಿನ ಕುಂದೂರು ಬಸಪ್ಪ ಅಲ್ಲಿದ್ದರು. ನಮ್ಮನ್ನೆಲ್ಲಾ ಕಂಡು ಒಳಗೆ ಕರೆದೊಯ್ದಿದ್ದರು. ಅಲ್ಲಿನ ಮಠದಲ್ಲಿ ಪೂಜೆ ಮಾಡಿಸಿ, ನನಗೊಂದು ಯಂತ್ರ ಕಟ್ಟಿಸಿದ್ದರು. ಯಂತ್ರ ಕಟ್ಟುವ ಮುನ್ನ ನನ್ನ ಮುಖಕ್ಕೆ ನೀರು ಚಿಮುಕಿಸಿದಾಗ ಬೆಚ್ಚಿದ ನಾನು ಸ್ವಾಮೀಜಿಗೆ ಕೆಟ್ಟದಾಗಿ ಬೈದಿದ್ದೆ. ಅಲ್ಲಿಯೇ ದಾಸೋಹ ಮಾಡಿ ಸಂಜೆ ಮನೆಗೆ ಬಂದಿದ್ದೆವು. ಅಲ್ಲಿನ ಸ್ವಾಮೀಜಿಗೆ ವೃದ್ದಾಪ್ಯದ ಕಾಯಿಲೆಯಾದಾಗ ಕುಂದೂರು ಬಸಪ್ಪ ಕೊನೆಯವರೆಗೆ ಆ ಸ್ವಾಮೀಜಿಯ ಜೊತೆಯಲ್ಲಿದ್ದು ಅವರ ಸೇವೆ ಮಾಡಿ ಕೊನೆಗೆ ನಮ್ಮೂರಿನಲ್ಲಿ ಖಾಯಂ ಆಗಿ ನೆಲೆಯಾದರು. ಆತ ನಮ್ಮೂರಿನ ಅಳಿಯ. ದುಡಿಯಲು ಎಲ್ಲಲ್ಲೋ ಅಲೆದಾಡುವಾಗ ಅವರ ಹೆಂಡತಿ ಬೇರೆ ಯಾರದೋ ಜೊತೆ ಹೋಗಿ ಮೈಸೂರಿನಲ್ಲಿ ಸಂಸಾರ ಶುರು ಮಾಡಿದ್ದರು. ಅಂದಿನಿಂದ ಇವರು ಕಾಲ ನಡಿಗೆಯಲ್ಲೇ ಊರೂರು ಸುತ್ತುತ್ತಾ ಅಲ್ಲಿದ್ದ ಮಠಗಳಲ್ಲಿ ವಾಸ್ತವ್ಯ ಹೂಡುತ್ತಾ ಸ್ವಾಮೀಜಿಗಳ ಸೇವೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ವಾಪಸ್ ಬಂದಾಗಲೇ ಅವರು ಎಲ್ಲಿಗೆ ಹೋಗಿದ್ದರು ಎನ್ನುವ ವಿಷಯ ಗೊತ್ತಾಗ್ತಿತ್ತು.

ಏನಾದ್ರೂ ಕಷ್ಟ ಕೇಳಿ ಬಂದ ಜನರಿಗೆ ವಿಭೂತಿ ಮಂತ್ರಿಸಿ ಕೊಡುತ್ತಿದ್ದರು. ನಮ್ಮಲ್ಲಿ ಎಲ್ಲಾ ಜಾತಿಯವರು ಯಾರಿಗಾದರೂ ಕಾಲ್ದೂಳು, ಕಣ್ಣೆಸೆರರಾದರೇ ಸಣ್ಣ ವಿಭೂತಿ ಉಂಡೆ ಹಿಡಿದು ಅವರ ಬಳಿ ಹೋಗುತ್ತಿದ್ದೆವು. ಸಂಜೆ ಕೈ ಕಾಲು ತೊಳೆದು, ಹಣೆಯಲ್ಲಿ ವಿಭೂತಿ ಧರಿಸಿ, ಕಣ್ಣು ಮುಚ್ಚಿ ನಿಧಾನಕ್ಕೆ ಓ ನಮಃ ಶಿವಾಯ ಹೇಳುತ್ತಾ ಅದನ್ನು ಪುಡಿ ಮಾಡಿ, ಬಂದವರ ಬಾಯಲ್ಲಿ ಸ್ವಲ್ಪ ದೂಳ್ತಾ ಹಾಕಿ, ನಂತರ ಇನ್ನೊಮ್ಮೆ ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಅವರ ಮನೆಯ ಪಕ್ಕದಲ್ಲೇ ಅವರ ಹೆಂಡತಿಯ ತಮ್ಮನ ಮನೆಯಿತ್ತು. ಮುಡುಕುತೊರೆ ಜಾತ್ರೆಯ ಸಮಯದಲ್ಲಿ ಓಡಿ ಹೋಗಿದ್ದ ಆ ಮಹಿಳೆ ತಮ್ಮನ ಮನೆಗೆ ಬರುತ್ತಿದ್ದರು. ಆಗ ಕುಂದೂರು ಬಸಪ್ಪ ಆಕೆಯನ್ನು ಮಾತನಾಡಿಸುತ್ತಿರಲಿಲ್ಲ. ಆಕೆಯ ಬಗ್ಗೆ ದ್ವೇಷದ, ಹಗೆಯ ತುಸು ಭಾವವೂ ಅವರಲ್ಲಿರಲಿಲ್ಲ. ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಯಾರ ಬಳಿಯೂ ಹಣ ಕೇಳುತ್ತಿರಲಿಲ್ಲ. ಯಾರಾದರೂ ಪ್ರೀತಿಯಿಂದ ಅಕ್ಕಿ, ಬೇಳೆ-ಕಾಳು ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮನೆ ಮುಂದೆ ಹಂಡೆಯಲ್ಲಿ ನೀರು ಕಾಯಿಸಿ, ಬೀದಿ ಬದಿಯಲ್ಲೇ ಅವರ ಬಿಸಿ ನೀರಿನ ಸ್ನಾನ. ಕೌಪೀನ ಧರಿಸಿ ಮಜ್ಜನಕ್ಕೆ ಇಳಿಯುತ್ತಿದ್ದ ಅವರು ನಿಧಾನವಾಗಿ ಮೈಯನ್ನೆಲ್ಲಾ ತೆಂಗಿನ ಚಗರೆಯಿಂದ ತಿಕ್ಕಿ ತೀಡಿ ಸ್ನಾನ ಮಾಡಿ ಮೈ ಆಯಾಸವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು.
ಸಂಜೆ ಬಿಡುವಾದಾಗ ಹರಟಲು ನಮ್ಮ ಮನೆಯ ಎದುರಿಗಿದ್ದ ನನ್ನ ಅಜ್ಜನ ಅಕ್ಕನಾದ ಗಿರಿಜಮ್ಮನ ಮನೆಗೆ ಬಂದು ತಾವು ಸುತ್ತಿದ್ದ ಊರು, ಮಾಡಿದ ಅಡುಗೆ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು. ನಮ್ಮ ಅಜ್ಜನ ಅಕ್ಕ ಗಿರಿಜಮ್ಮನಿಗೆ ಗಂಡ ತೀರಿ ಹೋಗಿ ಬಹಳ ವರ್ಷಗಳಾಗಿತ್ತು. ರಾಮಾಯಣ, ಮಹಾಭಾರತದ ಕತೆಗಳೆಲ್ಲಾ ಅವರಿಗೆ ಬಾಯಿಪಾಠವಾಗಿತ್ತು. ಕುಂದೂರು ಬಸಪ್ಪ ಮತ್ತು ಗಿರಿಜಮ್ಮ ಒಮ್ಮೊಮ್ಮೆ ಆ ಕತೆಗಳ ತಾತ್ಪರ್ಯವನ್ನು ಬಿಡಿಸಿ ಹೇಳುತ್ತಿದ್ದರು. ಬಸಪ್ಪನವರಿಗೆ ಅಷ್ಟಿಷ್ಟು ವೃದ್ದಾಪ್ಯ ವೇತನ ಬರುತ್ತಿತ್ತು. ಅದೇ ಅವರ ಆದಾಯದ ಖರ್ಚಿನ ಮೂಲ. ಅದರಲ್ಲೇ ಸಾಂಬಾರಿಗೆ ಬೇಕಾಗುವ ಪಡಿ, ಪದಾರ್ಥ ತೆಗೆದುಕೊಳ್ಳುತ್ತಿದ್ದರು.
ಒಮ್ಮೆ ಹೀಗೆ ಗಿರಿಜಮ್ಮನ ಜೊತೆ ಹರಟುವಾಗ “ಅಕ್ಕಯ್ಯ ಯಾಕೋ ನೆನ್ನೆ ಭೇದಿಯಾಯ್ತು. ಇತ್ತೀಚೆಗೆ ಯಾಕೋ ಆರೋಗ್ಯ ಸರಿಯಿಲ್ಲ. ಅದಕ್ಕೆ ನೆನ್ನೆ ಶಿವಪೂಜೆ ಮಾಡುವಾಗ ಶಿವ ಪರಮಾತ್ಮನಲ್ಲಿ ಕೇಳಿಕೊಂಡೆ, ನಾನು ಬಡವ. ನನ್ನಲ್ಲಿ ಹಣವಿಲ್ಲ, ಆಸ್ಪತ್ರೆಗೆ ಹೋಗಿ ಬರುವಷ್ಟು ತ್ರಾಣವಿಲ್ಲ, ನಿನ್ನ ಬಿಟ್ಟರೆ ನನಗೆ ನೆಂಟರಿಲ್ಲ. ಹೆಚ್ಚು ಕಾಯಿಲೆ ಕಸಾಲೆ ಕೊಡಬೇಡ. ನನ್ನ ಜೀವ ಮುಗಿದಿದ್ದರೇ ಬೇಗ ನಿನ್ನ ಬಳಿಗೆ ಕರೆಸಿಕೊ ಎಂದು ಕೇಳಿಕೊಂಡೆ” ಎಂದು ಗಂಭೀರವಾಗಿ ಹೇಳಿದಾಗ ಅಜ್ಜಿ ಗಿರಿಜಮ್ಮ ಜೋರಾಗಿ ನಕ್ಕು, “ಅದಕ್ಕೆ ನಿನ್ನ ಶಿವ ಏನು ಹೇಳಿದನಪ್ಪ…” ಅಂದ್ರು. “ಇನ್ನು ವಾರದೊಳಗೆ ನನ್ನ ಬಳಿ ಬರುವಿಯಂತೆ ಅಂತಾ ಹೇಳವ್ನೆ” ಎಂದು ಸುಮ್ಮನಾದ.
ಅಂದಿನಿಂದ ಅವರ ಮೌನ ಹೆಚ್ಚಾಯಿತು. ಅದಾದ ನಾಲ್ಕೈದು ದಿನಕ್ಕೆ ರಾತ್ರಿ ಪೂಜೆ ಮಾಡಿ, ಒಂದಿಷ್ಟು ಅನ್ನ ಊಟ ಮಾಡಿ ಮಲಗಿದ್ದಾರೆ. ಅರ್ಧ ರಾತ್ರಿಯಲ್ಲಿ ಬಯಲಿಗೆ ಹೋಗಬೇಕೆನ್ನಿಸಿದೆ. ಆಗ ತನ್ನ ಹೆಂಡತಿಯ ತಮ್ಮ ಮಾದೇವನನ್ನು ಎಬ್ಬಿಸಿ, ಬಯಲಿಗೆ ಹೋಗಿ, ಕಾಲು ಕೈ ತೊಳೆದು ವಾಪಸ್ ಬಂದು ಜಗುಲಿಯ ಮೇಲೆ ಚಾಪೆ ಹಾಸಿ, ದಿಂಬು ಇಡುವಂತೆ ಹೇಳಿದ್ದಾರೆ. ಆ ರಾತ್ರಿ ಅಲ್ಲಿಯೇ ಮನೆಯ ಹೊರಗಿನ ಜಗುಲಿಯ ಚಾಪೆಯ ಮೇಲೆ ಮಲಗಿದ್ದಾರೆ. ಬೆಳಿಗ್ಗೆ ಮಾದೇವಣ್ಣ ಅವರನ್ನು ಎಬ್ಬಿಸಲು ಹೋದಾಗ ಅವರ ಜೀವ ಇರಲಿಲ್ಲ. ಎಲ್ಲರೂ ಅವರ ಮನೆಯತ್ತ ಓಡಲೂ ಶುರು ಮಾಡಿದ್ರು. ಅಲ್ಲಿಗೆ ಓಡಿ ಹೋದ ಗಿರಿಜಮ್ಮ “ನನ್ನನ್ನು ಕ್ಷಮಿಸಿ ಬಿಡಪ್ಪ. ನಿಜಕ್ಕೂ ನೀನು ನಿಜವಾದ ಶಿವಭಕ್ತ, ಮೊನ್ನೆ ನಿನಗೆ ಅರಿಯದೇ ಹಾಸ್ಯ ಮಾಡಿಬಿಟ್ಟೆ” ಎಂದು ಕಣ್ಣೀರಿಡುತ್ತಾ ಬಹಳ ಹೊತ್ತು ಅಲ್ಲಿಯೇ ಕುಳಿತಿದ್ದರು. ನನ್ನ ಅಜ್ಜ ಅಲ್ಲಿಗೆ ಹೋಗಿ ಮಾಡಬೇಕಾದ ಕ್ರಿಯಾ ಕೆಲಸಗಳನ್ನೆಲ್ಲಾ ಎಲ್ಲರಿಗೂ ತಿಳಿಸಿ, ಅವರ ಹೆಂಡತಿಯನ್ನು ಮೈಸೂರಿನಿಂದ ಕರೆಸಿದರು. ನಂತರ ಆ ಮೃತ ದೇಹಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಇಬ್ಬರನ್ನು ಒಟ್ಟಿಗೆ ಕೂರಿಸಿ ಕೊನೆಯ ಬಾರಿಯ ಮುತ್ತೈದೆ ಪೂಜೆ ಮಾಡಿಸಿ, ನಂತರ ಊರು ತುಂಬೆಲ್ಲಾ ಕುರ್ಚಿಯಲ್ಲಿ ಮೆರವಣಿಗೆ ಮಾಡಿಸಿ, ಕ್ರಿಯಾಸಮಾಧಿ ಮಾಡಿದರು.
ಇದನ್ನೂ ಓದಿ ಹಳ್ಳಿ ಪುರಾಣ | ರಾಜನೆಂಬ ಒಕ್ಕಣ್ಣಿನ ಹುಂಜವೂ, ಅದರ ಯಜಮಾನನೂ…
ಕೊನೆಗೆ ಗೊತ್ತಾದ ಮತ್ತೊಂದು ಸಂಗತಿಯೆಂದರೇ ಆ ಸ್ವಾಭಿಮಾನಿ ಅಜ್ಜ ತನ್ನ ಸಾವಿನ ನಂತರ ಯಾರಿಗೂ ಹೊರೆಯಾಗದಂತೆ ತನ್ನ ಸಮಾಧಿ ಖರ್ಚಿಗೆ, ತಿಥಿಗೆಂದು ಮನೆಯೊಳಗೆ ಡಬ್ಬಿಯಲ್ಲಿ ಸಾವಿರ ರೂಪಾಯಿ ಕೂಡಿಸಿಟ್ಟಿದ್ದರು. ಕೆಲ ವರ್ಷದ ನಂತರ ಮಾದೇವಣ್ಣ ಆ ಸಣ್ಣ ಮನೆಯನ್ನು ಕೆಡವಿ ಅಲ್ಲೊಂದು ಹೊಸ ಮನೆ ಕಟ್ಟಿಸಿದರು. ಈಗ ಅಲ್ಲೊಂದು ದೊಡ್ಡದಾದ ಮನೆಯೇ ಇದೆ. ಆ ಮನೆ ಮುಂದೆ ತಿರುಗಾಡುವಾಗ ಕುಂದೂರು ಬಸಪ್ಪ ಈಗಲೂ ಮನಸ್ಸಿನಲ್ಲಿ ಹಾದು ಹೋಗುತ್ತಾರೆ.
ಪ್ರತಿ ಊರಿನಲ್ಲಿ ನಮ್ಮ ನಡುವೆಯೇ ಒಬ್ಬ ಇಂತಹ ಶರಣನಿರುತ್ತಾನೆ. ಆತನ ಸರಳತೆ, ಸಾಮಾನ್ಯತನ ಅಲ್ಪರಾದ ನಮಗೆ ಗೋಚರಿಸುವುದಿಲ್ಲ.

ಗಂಗಾಧರ ಸ್ವಾಮಿ
ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ
ಬಹಳ ಉತ್ತಮವಾದ ಬರಹ ಗುರುಗಳೇ,🙏 ಧನ್ಯವಾದ