ಧ್ರುವ ಪ್ರದೇಶಗಳಲ್ಲಿನ ಹಿಮಗಡ್ಡೆಯ ಹೊದಿಕೆ ಕರಗಿದರೆ ನಮ್ಮ ಬಹುದೊಡ್ಡ ನಗರಗಳು ಮುಳುಗಬಹುದು, ಕೋಟ್ಯಂತರ ಜನರ ಬದುಕು ಮಣ್ಣುಪಾಲಾಗಬಹುದು ಎನ್ನುವ ಭೀತಿಯ ನಡುವೆಯೇ, ಕೆಲವು ರಾಷ್ಟ್ರಗಳು ಇದರ ಲಾಭವನ್ನು ಹೇಗೆ ಪಡೆಯಬಹುದು ಅನ್ನುವ ಲೆಕ್ಕಾಚಾರವನ್ನು ಈಗಾಗಲೆ ಆರಂಭಿಸಿವೆ. ಹಿಮಕರಗಿದರೆ, ತಮ್ಮ ನೌಕಾ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು, ವಾಣಿಜ್ಯೋದ್ಯಮಕ್ಕೆ ಇದನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಚಿಂತನೆ ಇನ್ನು ಕೆಲವು ರಾಷ್ಟ್ರಗಳದ್ದು. ಮನು ಕುಲದ ಅಸ್ತಿತ್ವದ ಮೇಲೆ ಗೋರಿಕಟ್ಟಲು ಮನುಷ್ಯರೇ ಹೊರಟಿರುವ ದುರಂತ ಕತೆ ಇದು.
ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಭೂಗ್ರಹದಲ್ಲಿ ಹೆಚ್ಚು ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದು ಮತ್ತು ಹವಾಮಾನ ಬದಲಾವಣೆಯ ಸೂಚಕಗಳಂತೆ ಕಾರ್ಯ ನಿರ್ವಹಿಸುತ್ತಿರುವುದು ಧ್ರುವ ಪ್ರದೇಶಗಳು ಎಂದು ಕರೆಯಲ್ಪಡುವ ಅಂಟಾರ್ಕ್ಟಿಕ್ ಖಂಡ, ಆರ್ಕ್ಟಿಕ್ ಸಾಗರ ಮತ್ತು ಗ್ರೀನ್‌ಲ್ಯಾಂಡ್ ದ್ವೀಪ. ಆರ್ಕ್ಟಿಕ್ ಸಮುದ್ರ ಪ್ರದೇಶವಾಗಿದ್ದರೂ, ಭೂಪ್ರದೇಶದಿಂದ ಸುತ್ತುವರೆದಿದ್ದು, ಹೆಚ್ಚಾಗಿ ಹಿಮಗಡ್ಡೆಗಳಿಂದ ಆವೃತವಾಗಿದ್ದರೆ, ಅಂಟಾರ್ಕ್ಟಿಕ್ ಖಂಡವು ಸಮುದ್ರ ಪ್ರದೇಶವನ್ನು ಹೊಂದಿದ್ದು ಹಿಮದ ಹೊದಿಕೆಯಿಂದ ಆವರಿಸಲ್ಪಟ್ಟಿವೆ. ಸಾಮಾನ್ಯವಾಗಿ ಈ ಎಲ್ಲಾ ಶೀತಪ್ರದೇಶಗಳಲ್ಲಿ, ದೀರ್ಘಕಾಲದವರೆಗೂ ಕಠಿಣ ಚಳಿಗಾಲವಿದ್ದು, ಬೇಸಿಗೆಯ ಅವಧಿ ಅತ್ಯಲ್ಪವಾಗಿರುತ್ತದೆ.
ಆರ್ಕ್ಟಿಕ್ ಸಾಗರ ಅಗಾಧವಾಗಿದ್ದು, ಜಗತ್ತಿನ ಶೇಕಡಾ 4 ರಷ್ಟು ಭಾಗವನ್ನು ಒಳಗೊಂಡಿದೆ. ಅದೇ ರೀತಿ ಗ್ರೀನ್‌ಲ್ಯಾಂಡ್ ದ್ವೀಪ ಮತ್ತು ಅಂಟಾರ್ಕ್ಟಿಕಾದ ಹಿಮಗಡ್ಡೆಗಳು ಭೂಮಿಯ ಮೇಲಿನ ಸಮಸ್ತ ಶುದ್ಧ ನೀರಿನ ಮೂರನೇ ಎರಡರಷ್ಟು ಭಾಗವನ್ನು ಒಳಗೊಳ್ಳುತ್ತವೆ. ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿರುವ ಈ ಸಮುದ್ರ-ಹಿಮಗಡ್ಡೆಗಳ ಹೊದಿಕೆಗಳು ಸೂರ್ಯನ ಹೆಚ್ಚಿನ ಪ್ರಕಾಶವನ್ನು ಆಕಾಶಕ್ಕೆ ಪ್ರತಿಫಲಿಸುವ ಮೂಲಕ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಸೂರ್ಯನಿಂದ ಭೂಮಿಯತ್ತ ಬರುವ ತೀವ್ರ ಕಿರಣಗಳಿಗೆ ರಕ್ಷಾಕವಚದಂತೆ ವರ್ತಿಸುತ್ತವೆ.
ಆದರೆ, ಸಾಗರದ ಮೇಲ್ಮೈಯಲ್ಲಿ ಪ್ರತಿಫಲನಾ ಪದರದಂತೆ ಕಾರ್ಯ ನಿರ್ವಹಿಸುವ ಈ ಹಿಮಗಡ್ಡೆಗಳ ಹೊದಿಕೆಯ ವ್ಯಾಪ್ತಿ ದಿನೇ ದಿನೇ ಕುಗ್ಗುತ್ತಿದೆ. ಹೀಗಾಗಿ ಸೂರ್ಯನ ಬೆಳಕು ಪ್ರವೇಶಿಸದ ಸಮುದ್ರದ ಕತ್ತಲ ಪ್ರದೇಶವು ಸೂರ್ಯನಿಂದ ಭೂಮಿಗೆ ಬರುವ ಹೆಚ್ಚಿನ ಪ್ರಮಾಣದ ಶಾಖವನ್ನು ಹೀರಿಕೊಳ್ಳುತ್ತ, ಈ ಪ್ರದೇಶದ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. 1980 ರ ದಶಕದ ಆರಂಭದಿಂದಲೇ ಸಮುದ್ರ-ಹಿಮಗಡ್ಡೆಯು ಅದರ ನೈಸರ್ಗಿಕವಾಗಿರುವ ವಾತಾವರಣವನ್ನು ತಂಪಾಗಿಸುವ ಗುಣವನ್ನು ಸುಮಾರು ಶೇಕಡಾ 14ರಷ್ಟು ಕಳೆದುಕೊಂಡಿದೆ ಎಂದು ಹೇಳಲಾಗುತ್ತದೆ. ಸೂರ್ಯನ ಪ್ರಕಾಶಮಾನವಾದ ಕಿರಣಗಳನ್ನು ಪ್ರತಿಫಲಿಸುವ ಮಂಜುಗಡ್ಡೆ ಆವರಿತ ಪ್ರದೇಶವು ಆಗದಿಂದಲೇ ಕ್ಷೀಣಿಸಲು ಆರಂಭವಾಗಿತ್ತು.

ಸಮುದ್ರ ಹಿಮಗಡ್ಡೆಗಳ ಕರಗುವಿಕೆ ಮತ್ತು ಸಾಗರದ ನೀರಿನ ಮಟ್ಟ
ಭೂಮಿಯ ಮೇಲ್ಮೈ ಮತ್ತು ಸಾಗರದಲ್ಲಿ ನಿರಂತರ ತಾಪಮಾನ ಏರಿಕೆಯಿಂದಾಗಿ ಧ್ರುವ ಪ್ರದೇಶಗಳಲ್ಲಿ ಈ ಹಿಮಗಡ್ಡೆಗಳ ಹೊದಿಕೆ ಕರಗುತ್ತಿದೆ. ಸಮುದ್ರದಲ್ಲಿನ ಹಿಮಗಡ್ಡೆಗಳ ಪ್ರಮಾಣದಲ್ಲಿ ಇಳಿಕೆಗೆ ಬಿಸಿ ಗಾಳಿ, ಸಮುದ್ರ ಪ್ರದೇಶದಲ್ಲಿ ಹೆಚ್ಚಿದ ತಾಪಮಾನ ಮತ್ತು ಮಂಜುಗಡ್ಡೆಯನ್ನು ಒಡೆಯಬಲ್ಲ ತೀವ್ರ ಗಾಳಿಯ ಬೀಸುವಿಕೆ ಪ್ರಮುಖ ಕಾರಣವಾಗಿದೆ.
ಭೂ ಗ್ರಹವನ್ನು ತಂಪಾಗಿಡಲು ಸಹಾಯ ಮಾಡುವ ವಿಶ್ವದ ಈ ಪ್ರದೇಶಗಳಲ್ಲಿ ಹಿಂದೆಂದೂ ಇರದಷ್ಟು ಕಡಿಮೆ ಪ್ರಮಾಣದಲ್ಲಿ ಹಿಮಗಡ್ಡೆಗಳ ಉಪಸ್ಥಿತಿ ಇದೆ ಎಂದು ಉಪಗ್ರಹದ ದತ್ತಾಂಶವು ತೋರಿಸುತ್ತಿದೆ. ಈ ಮಂಜುಗಡ್ಡೆಗಳ ಕರಗುವಿಕೆಯಿಂದ ಬರುವ ನೀರು ಸರಿಸುಮಾರು 1993ನೇ ಇಸವಿಯಿಂದ ಜಾಗತಿಕ ಮಟ್ಟದಲ್ಲಿ ಸಮುದ್ರದ ನೀರಿನ ಮೂರನೇ ಒಂದು ಭಾಗದ ಏರಿಕೆಗೆ ಕಾರಣವಾಗಿದೆ. ಅಂಟಾರ್ಕ್ಟಿಕಾದಲ್ಲಿ ವರ್ಷಕ್ಕೆ ಸರಾಸರಿ 136 ಶತಕೋಟಿ ಟನ್‌ಗಳಷ್ಟು ಹಿಮ ಕರಗುತ್ತಿದ್ದರೆ, ಗ್ರೀನ್‌ಲ್ಯಾಂಡ್ ವರ್ಷಕ್ಕೆ ಸುಮಾರು 267 ಶತಕೋಟಿ ಟನ್‌ಗಳಷ್ಟು ಹಿಮವನ್ನು ಕಳೆದುಕೊಳ್ಳುತ್ತಿದೆ. ಇದು ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ವರದಿಗಳು ಉಲ್ಲೇಖಿಸುತ್ತಿವೆ.
ಆರ್ಕ್ಟಿಕ್ ಪ್ರದೇಶ ಮತ್ತು ಹಿಮಹೊದಿಕೆಗಳು
ಈ ಧ್ರುವ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಇಲ್ಲಿನ ಸಮುದ್ರದ ನೀರು ಹೆಪ್ಪುಗಟ್ಟಿ ಹಿಮಗಡ್ಡೆಗಳು ರೂಪುಗೊಳ್ಳುತ್ತವೆ. ಈ ರೀತಿಯಾಗಿ ರೂಪುಗೊಂಡಿರುವ ಹಿಮಗಡ್ಡೆಗಳ ಹೊದಿಕೆಗಳ ವ್ಯಾಪ್ತಿ ಮತ್ತು ಸಾಂದ್ರತೆ ಧ್ರುವ ಪ್ರದೇಶಗಳಲ್ಲಿನ ಹವಾಮಾನ ವ್ಯವಸ್ಥೆಯ ನಿರ್ಣಾಯಕ ಭಾಗವಾಗಿದ್ದು, ಇದು ಜಾಗತಿಕ ಹವಾಮಾನ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಸಮುದ್ರದ ನೀರಿನ ಮಟ್ಟಗಳ ಮೇಲೆಯೂ ಪ್ರಭಾವ ಬೀರುತ್ತದೆ. ಆದರೆ ಈ ವರ್ಷ ಮಾರ್ಚ್ 22 ರವೇಳೆಗೆ ಆರ್ಕ್ಟಿಕ್ ಪ್ರದೇಶದಲ್ಲಿ ದಾಖಲಾದ ಹಿಮಹೊದಿಕೆಗಳ ವ್ಯಾಪ್ತಿ ಮತ್ತು ಸಾಂದ್ರತೆ ಅತೀ ಕಡಿಮೆಯಾಗಿತ್ತು ಎಂದು ನಾಸಾ ಮತ್ತು ನ್ಯಾಶನಲ್ ಸ್ನೋ ಆಂಡ್ ಐಸ್ ಡಾಟಾ ಸೆಂಟರ್‌ನ ದತ್ತಾಂಶಗಳು ಬಹಿರಂಗಪಡಿಸಿವೆ.

ಸುಮಾರು 47 ವರ್ಷಗಳ ಹಿಂದೆ ಎಂದರೆ 1979ರಿಂದ ಉಪಗ್ರಹಗಳ ಮೂಲಕ ಈ ಹಿಮದಹೊದಿಕೆಯನ್ನು ಅಳತೆ ಮಾಡುವ ಕಾರ್ಯ ಆರಂಭಗೊಂಡಿತು. ಅಂದಿನಿಂದ ದಾಖಲಿಸಲಾದ ದತ್ತಾಂಶಗಳನ್ನು ಹೋಲಿಸಿದಾಗ ಈ ವರ್ಷ ದಾಖಲಾದ ಹಿಮದಹೊದಿಕೆಗಳ ಸಾಂದ್ರತೆ ಮತ್ತು ವ್ಯಾಪ್ತಿ ಅತ್ಯಂತ ಕಡಿಮೆ ಎಂಬುದು ಸಾಬೀತಾಗಿದೆ. 2017ರ ದಾಖಲೆಗಳ ಪ್ರಕಾರ ಆ ವರ್ಷದಲ್ಲಿ ಈ ಹಿಮಗಡ್ಡೆಗಳ ವ್ಯಾಪ್ತಿ 14.41 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟಿತ್ತು. ಆದರೆ ಈ ವರ್ಷ ಇದು 2017ರ ಕನಿಷ್ಠ ದಾಖಲೆಯನ್ನೂ ಮೀರಿ 14.33 ಮಿಲಿಯನ್ ಚದರ ಕಿಲೋಮೀಟರ್‌ಗೆ ಇಳಿಕೆ ಕಂಡಿದೆ.
1981–2010 ರಲ್ಲಿ ದಾಖಲಾದ ಈ ಹಿಮದ ಹೊದಿಕೆಗಳ ಗರಿಷ್ಠ ವ್ಯಾಪ್ತಿ ಸರಾಸರಿ 15.65 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟಿತ್ತು. 2025ರಲ್ಲಿ ಇದು1.32 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟು ಕುಸಿತಕಂಡಿದೆ. ಕಣ್ಮರೆಯಾಗಿರುವ ಈ ಹಿಮದ ಹೊದಿಕೆಯು ನಮ್ಮ ದೇಶದ ರಾಜಸ್ಥಾನದಂತಹ ರಾಜ್ಯಕ್ಕಿಂತ ದೊಡ್ಡ ವಿಸ್ತಿರ್ಣದ್ದು ಅಂದರೆ, ಪರಿಸ್ಥಿತಿಯ ಗಂಭೀರತೆ ನಮಗೆ ಅರಿವಾಗುತ್ತದೆ. ಕಳೆದ ಹಲವಾರು ದಶಕಗಳಲ್ಲಿ ವಿಜ್ಞಾನಿಗಳು ಗಮನಿಸಿದಂತೆ ಈ ಹಿಮದ ಹೊದಿಕೆಗಳ ವ್ಯಾಪ್ತಿ ಮತ್ತು ಸಾಂದ್ರತೆ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ಅದೇ ರೀತಿ ಅಂಟಾರ್ಕ್ಟಿಕ್ ಸಮುದ್ರದ ಹಿಮದ ಹೊದಿಕೆ 2025 ಮಾರ್ಚ್ ಹೊತ್ತಿಗೆ 1.98 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟು ಕುಗ್ಗಿತ್ತು. ಇದು ಇದುವರೆಗೆ ದಾಖಲಾದ ಎರಡನೇ ಅತ್ಯಂತ ಕಡಿಮೆ ಕನಿಷ್ಠ ದಾಖಲೆಯಾಗಿದೆ.
ಕಡಿಮೆ ಪ್ರಮಾಣದಲ್ಲಿ ಹೊಸ ಹಿಮಗಡ್ಡೆಗಳ ರೂಪುಗೊಳ್ಳುವಿಕೆ ಮತ್ತು ಹಲವು ವರ್ಷಗಳ ಹಿಂದಿನ ಹಿಮಗಡ್ಡೆಗಳ ಸಂಗ್ರಹದಲ್ಲಿ ಕುಸಿತ ಇವು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದ್ದು ಇದು ಅದೇ ರೀತಿ ಮುಂದುವರೆಯುತ್ತಿದೆ. ಹೆಚ್ಚು ತಾಪಮಾನದಿಂದ ಕೂಡಿರುವ ದಿನಗಳನ್ನು ಎದುರಿಸಲು ಇರುವ ಹಿಮಗಡ್ಡೆಗಳ ಹೊದಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಈ ಕುಸಿತದ ಹಿಂದಿನ ಪ್ರಮುಖ ಕಾರಣ ತಾಪಮಾನ ಏರಿಕೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಆರ್ಕ್ಟಿಕ್ ತಾಪಮಾನ ಏರಿಕೆಯು ಜಾಗತಿಕ ತಾಪಮಾನ ಏರಿಕೆಯ ಸರಾಸರಿಗಿಂತ ನಾಲ್ಕು ಪಟ್ಟು ವೇಗವಾಗಿದೆ.
ಸಮುದ್ರದ ಹಿಮಗಡ್ಡೆಗಳ ಪ್ರತಿಫಲನಾ ಕವಚ
ಸಮುದ್ರದ ಹಿಮಗಡ್ಡೆಗಳು ಸೂರ್ಯನಿಂದ ಭೂಮಿಗೆ ಬರುವ ಬೆಳಕು ಮತ್ತು ಶಾಖವನ್ನು ಬಾಹ್ಯಾಕಾಶಕ್ಕೆ ಪ್ರತಿಫಲಿಸುವ ಮೂಲಕ ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಈ ಹಿಮಗಡ್ಡೆಗಳ ಹೊದಿಕೆಯ ಪ್ರಮಾಣ ಕಡಿಮೆ ಆದಂತೆಲ್ಲ ಹೆಚ್ಚಿನ ಪ್ರಮಾಣದ ಶಾಖವು ಸಾಗರದಿಂದ ಹೀರಲ್ಪಡುತ್ತದೆ. ಇದು ಹವಾಮಾನ ವೈಪರೀತ್ಯಗಳಿಗೆ, ಹವಾಮಾನ ಮಾದರಿಗಳ ಬದಲಾವಣೆಗೆ ಮತ್ತು ಸಾಗರ ಪರಿಸರ ವ್ಯವಸ್ಥೆಯಲ್ಲಿನ ಆತಂಕಕ್ಕೆ ಕಾರಣವಾಗುತ್ತದೆ.

ಇದಲ್ಲದೆ, ಆರ್ಕ್ಟಿಕ್ ಸಾಗರದ ಮೇಲ್ಮೈಯಲ್ಲಿ ಕಡಿಮೆ ಪ್ರಮಾಣದ ಹಿಮಗಡ್ಡೆಗಳ ಹೊದಿಕೆ ಮತ್ತು ಹೆಚ್ಚಿನ ಪ್ರಮಾಣದ ನೀರಿನ ಪರಿಣಾಮವಾಗಿ ʻಜೆಟ್ ಸ್ಟ್ರೀಮ್ʼ (ವೇಗವಾಗಿ ಬೀಸು ಗಾಳಿಯ ಪ್ರವಾಹ) ಹೆಚ್ಚು ಹೆಚ್ಚು ಅನಿಯಮಿತವಾಗಿ ಬೀಸಬಹುದು. ಇದು ದೀರ್ಘಕಾಲದ ಬಿರುಗಾಳಿಗಳು, ತೀವ್ರ ಮಳೆ ಮತ್ತು ಉತ್ತರ ಗೋಳಾರ್ಧದಲ್ಲಿ ಥಂಡಿ ಹವಾಮಾನಗಳಿಗೆ ಕಾರಣವಾಗಬಹುದು. ಇದರೊಂದಿಗೆ ಈ ಬದಲಾವಣೆಗಳು ಕೃಷಿ, ಮೂಲಸೌಕರ್ಯ, ಆರ್ಥಿಕ ಸ್ಥಿರತೆ ಮತ್ತು ಮಾನವ ಜೀವನೋಪಾಯದ ಮೇಲೆಯೂ ತೀವ್ರ ಪರಿಣಾಮಗಳನ್ನು ಬೀರಬಹುದು.
ಸಮುದ್ರದ ಹಿಮಗಡ್ಡೆಗಳು ಮತ್ತು ಜೈವಿಕ ಸರಪಳಿ
ಸಮುದ್ರದ ಹಿಮಗಡ್ಡೆಗಳು ಆರ್ಕ್ಟಿಕ್ ಸಾಗರದ ಜೀವಿಗಳಿಗೆ ಆಹಾರದ ಆಕರವೂ ಹೌದು. ಇದು ಅನೇಕ ಸಾಗರ ಜೀವ ಪ್ರಭೇದಗಳು ಅವಲಂಬಿಸಿರುವ ಜೈವಿಕ ಸರಪಳಿಗೆ ಮೂಲಾಧಾರವಾಗಿದೆ. ಹಿಮಗಡ್ಡೆಯೊಳಗೆ ಬೆಳೆಯುವ ಪಾಚಿಗಳು ಜೂಪ್ಲಾಂಕ್‌ತಾನ್‌ನಂತಹ ಸಣ್ಣ ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ, ಇದು ಆರ್ಕ್ಟಿಕ್ ಕಾಡ್ ಎಂದು ಕರೆಯಲ್ಪಡುವ ಮೀನುಗಳಿಗೆ ಆಹಾರವಾಗಿದೆ. ಸೀಲುಗಳು ಈ ಆರ್ಕ್ಟಿಕ್ ಕಾಡ್‌ಗಳನ್ನು ಆಹಾರಕ್ಕಾಗಿ ಬೇಟೆಯಾಡಿದರೆ, ಹಿಮಕರಡಿಗಳು ಬದುಕುಳಿಯಲು ಸೀಲುಗಳನ್ನು ಅವಲಂಬಿಸಿವೆ. ಎರಡೂ ಧ್ರುವಗಳಲ್ಲಿ ಸಮುದ್ರ-ಮಂಜುಗಡ್ಡೆ ಕಡಿಮೆಯಾಗುವುದು ಹಿಮಕರಡಿಗಳು ಮತ್ತು ಪೆಂಗ್ವಿನ್‌ಗಳಂತಹ ಸ್ಥಳೀಯ ವನ್ಯಜೀವಿಗಳ ಮೇಲೂ ಪರಿಣಾಮ ಬೀರುತ್ತದೆ.
ಕುಗ್ಗುತ್ತಿರುವ ಮಂಜುಗಡ್ಡೆಯ ಹೊದಿಕೆಯು ಜೀವ ವೈವಿಧ್ಯತೆಗೆ ಅನೇಕ ಸ್ತರಗಳಲ್ಲಿ ಆತಂಕವನ್ನು ಒಡ್ಡುತ್ತಿದೆ. ಇದು ಗಮನಾರ್ಹ ಪ್ರಮಾಣದಲ್ಲಿ ಜನಸಂಖ್ಯಾ ಕುಸಿತ ಮತ್ತು ಜೀವ ಪ್ರಬೇಧಗಳ ಅಳಿವಿಗೂ ಕಾರಣವಾಗಬಹುದು.
ಕರಗುತ್ತಿರುವ ಹಿಮಗಡ್ಡೆ ಮತ್ತು ಜಿಯೊ ಪಾಲಿಟಿಕ್ಸ್
ಧ್ರುವ ಪ್ರದೇಶಗಳಲ್ಲಿ ಹಿಮಗಡ್ಡೆಗಳ ಕರಗುವಿಕೆ ಈ ಪ್ರದೇಶಗಳಲ್ಲಿ ಮಾನವನಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತಿದೆ. ಆದರೆ ಇನ್ನೊಂದೆಡೆ ಈ ಪ್ರದೇಶದ ಅಕ್ಕಪಕ್ಕದ ರಾಷ್ಟ್ರಗಳು ಈ ಹಿಮಕರಗುವಿಕೆಯಿಂದ ತಮಗಾಗಬಹುದಾದ ಲಾಭವನ್ನು ಲೆಕ್ಕಾಚಾರ ಹಾಕುತ್ತಿವೆ. ಆರ್ಕ್ಟಿಕ್‌ನಲ್ಲಿ ಹಿಮಕರಗುವಿಕೆಯಿಂದಾಗಿ ದೊರಕಬಹುದಾದ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಪಡೆಯಲು ರಾಷ್ಟ್ರಗಳು ತುರುಸಿನ ಪೈಪೋಟಿಗೆ ಇಳಿದಿರುವುದರಿಂದ , ಕರಗುತ್ತಿರುವ ಹಿಮಗಡ್ಡೆಯು ರಾಷ್ಟ್ರಗಳ ನಡುವೆ ಜಿಯೊ ಪಾಲಿಟಿಕ್ಸ್ (ಭೌಗೋಳಿಕ ರಾಜಕೀಯದ ಉದ್ವಿಗ್ನತೆಯನ್ನು) ಹೆಚ್ಚಿಸುತ್ತಿದೆ.
ಇದಕ್ಕೆ ಪೂರಕ ಎಂಬಂತೆ ವಿಶ್ವ ಸಂಸ್ಥೆಯಲ್ಲಿ ಹವಾಮಾನ ಬದಲಾವಣೆಯ ಅಧ್ಯಯನಕ್ಕಾಗಿರುವ ಅಂತರ್‌ಸಮಿತಿಯು 2050 ರ ಮೊದಲು ಬೇಸಿಗೆಯ ಅಂತ್ಯಕ್ಕೆ ಕನಿಷ್ಠ ಒಮ್ಮೆಯಾದರೂ ಆರ್ಕ್ಟಿಕ್ ಸಮುದ್ರ-ಮಂಜುಗಡ್ಡೆಯಿಂದ ಮುಕ್ತವಾಗಬಹುದು ಎನ್ನುವ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ. ಇತ್ತೀಚಿನ ಕೆಲವು ಅಧ್ಯಯನಗಳು ಇದು ವಿಶ್ವಸಂಸ್ಥೆ ಸೂಚಿಸಿದ ಅವಧಿಗೂ ಮುನ್ನವೇ ಇನ್ನೂ ಬೇಗವೇ ಸಂಭವಿಸಬಹುದು ಎಂದು ಸೂಚಿಸುತ್ತಿವೆ.

ಹೀಗಾಗಿ ಆರ್ಕ್ಟಿಕ್ ಸಮುದ್ರಕ್ಕೆ ಹೊಂದಿಕೊಂಡಂತಿರುವ ತನ್ನ ಗ್ರೀನ್‌ಲ್ಯಾಂಡ್ ದ್ವೀಪದ ಮೂಲಕ ಡೆನ್ಮಾರ್ಕ್, ಜೊತೆಗೆ ಆರ್ಕ್ಟಿಕ್ ಸಾಗರದ ಕರಾವಳಿ ಪ್ರದೇಶವನ್ನು ಹೊಂದಿರುವ ರಷ್ಯಾ, ಕೆನಡಾ, ಅಮೇರಿಕ, ನಾರ್ವೆ ದೇಶಗಳು ಆರ್ಕ್ಟಿಕ್ ಸಮುದ್ರತಳದ ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿವೆ. ಚೀನಾ ಕೂಡ ಇದಾಗಲೇ ಈ ಪ್ರದೇಶದ ಮೇಲೆ ಕಣ್ಣಿಟ್ಟು ಹಲವಾರು ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸತೊಡಗಿದೆ. ಹಿಮಗಡ್ಡೆಗಳ ಕರಗುವಿಕೆ ಸಾಗರ ವಾಣಿಜ್ಯೋದ್ಯಮಕ್ಕೆ ಹೊಸ ಮಾರ್ಗಗಳ ಸಾಧ್ಯತೆಗಳನ್ನು ತೆರೆಯುತ್ತದೆ, ಇದು ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗುತ್ತಿದೆ. ರಫ್ತು ವ್ಯವಹಾರದಲ್ಲಿ, ಪ್ರಯಾಣದ ಅವಧಿ ಕಡಿಮೆಯಾದಷ್ಟು ಲಾಭ ಎಂಬ ಲೆಕ್ಕಾಚಾರದಲ್ಲಿ ಕೆಲವು ದೇಶಗಳು ಇಲ್ಲಿ ತಾವೇ ಮೊದಲು ಬಂದರು ನಿರ್ಮಿಸಬೇಕು ಎಂಬ ಕನಸನ್ನೂ ಕಾಣತೊಡಗಿವೆ. ಹೀಗೆ ಧ್ರುವ ಪ್ರದೇಶದ ಹಿಮಗಡ್ಡೆಗಳ ಕರಗುವಿಕೆ ಅನೇಕ ಪರಿಸರ ಮತ್ತು ರಾಜಕೀಯ ಕಳವಳಗಳನ್ನೂ ಹುಟ್ಟುಹಾಕುತ್ತಿದೆ.
ಯುರೋಪಿಯನ್ ಒಕ್ಕೂಟದ, ಭೂಮಿ ಮತ್ತು ಪರಿಸರದ ಅಧ್ಯಯನಕ್ಕಾಗಿ ಮೀಸಲಾಗಿರುವ ಕೋಪರ್ನಿಕಸ್ ಯೋಜನೆಯ ಕ್ಲೈಮೇಟ್ ಚೇಂಜ್ ಸರ್ವೀಸ್ (C3S) ಪ್ರಸಕ್ತ ವರ್ಷ ಎಂದರೆ ಮೇ 2025ರಲ್ಲಿ ಜಾಗತಿಕ ತಾಪಮಾನವು ಅಪಾಯಕಾರಿ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ಎಚ್ಚರಿಸಿದೆ. ಈ ತಿಂಗಳನ್ನು ಕೇವಲ ಭೂಮಿಯಲ್ಲಿ ಮಾತ್ರವಲ್ಲ, ಸಾಗರದಲ್ಲಿಯೂ ಅತ್ಯಂತ ಹೆಚ್ಚಿನ ತಾಪಮಾನ ದಾಖಲಿಸಿದ ತಿಂಗಳು ಎಂದು ವರದಿಯು ಹೇಳುತ್ತಿದೆ.
ಇದನ್ನೂ ಓದಿ ಭೂಮ್ತಾಯಿ | ನೀವರಿಯದ ಸಂಗತಿ: ಗರ್ಭಿಣಿ- ನವಜಾತ ಶಿಶುಗಳಿಗೆ ಕಂಟಕವಾಗುತ್ತಿರುವ ಹವಾಮಾನ ಬದಲಾವಣೆ
ಪ್ಯಾರಿಸ್ ಒಪ್ಪಂದ ಭೂಗ್ರಹದ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮೀರುವಂತಿಲ್ಲ ಅದೇ ಮಿತಿಯೊಳಗಿರಬೇಕು ಎಂಬ ನಿರ್ಬಂಧನೆಯನ್ನೇನೋ ಹಾಕಿದೆ. ಆದರೆ ಕೋಪರ್ನಿಕಸ್ ಯೋಜನೆಯ ಕ್ಲೈಮೇಟ್ ಚೇಂಜ್ ಸರ್ವೀಸ್ ಪ್ರಕಾರ ಈ ವರ್ಷ ಭೂಗ್ರಹದ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್ ತಲುಪಿಯಾಗಿದೆ. ಹೆಚ್ಚು ಕಡಿಮೆ ಈ ತಾಪಮಾನ ಪ್ಯಾರಿಸ್ ಒಪ್ಪಂದದಲ್ಲಿ ಸೂಚಿಸಲಾಗಿರುವ ಗರಿಷ್ಠ ಮಿತಿಯ ಹತ್ತಿರ ಹತ್ತಿರವೇ ಇದೆ. ಏರುತ್ತಿರುವ ತಾಪಮಾನ ಪ್ಯಾರಿಸ್ ಒಪ್ಪಂದದಲ್ಲಿ ಸೂಚಿಸಲಾದ ಗಡಿಯನ್ನು ದಾಟುವ ದಿನ ಹೆಚ್ಚು ದೂರವಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಷ್ಟ್ರಗಳು ಜಾಗತಿಕ ಪರಿಸರ ಸಂಬಂಧಿ ಕಾಳಜಿಗಳನ್ನು ಪರಿಗಣಿಸದೆ, ಪರಿಸ್ಥಿತಿ ಲಾಭ ಪಡೆಯಲು ಹೊಂಚು ಹಾಕುತ್ತಿರುವುದು ಅವಿವೇಕದ ಪರಮಾವಧಿ ಎಂದು ಹೇಳಬೇಕಷ್ಟೇ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ