ಕೊಳಾರದಲ್ಲಿ ಮೊಟ್ಟಮೊದಲು ಆರಂಭವಾದ ಪ್ರಮುಖ ಮತ್ತು ದೊಡ್ಡ ಕೆಮಿಕಲ್ ಕಾರ್ಖಾನೆ ಎಜಿಐಪಿಐ. ಇದು ನಿಜಾಂಪುರಕ್ಕೆ ಸಮೀಪದಲ್ಲಿತ್ತು. ಈ ಕಂಪನಿಗೇ ಸೇರಿದ ಎಸ್ಓಎಲ್ ಎನ್ನುವ ಮತ್ತೊಂದು ದೊಡ್ಡ ಕಾರ್ಖಾನೆ ಕೊಳಾರಕ್ಕೆ ಸಮೀಪದಲ್ಲಿ ಹೊಸದಾಗಿ ಕಾರ್ಯಾರಂಭ ಮಾಡಿತ್ತು. ಆ ಪ್ರದೇಶದಲ್ಲಿ ಅದೇ ಅತಿದೊಡ್ಡ ಕಾರ್ಖಾನೆ; ಸುಮಾರು ಒಂದು ಸಾವಿರದಷ್ಟು ಕಾರ್ಮಿಕರಿದ್ದರು. ಹೆಚ್ಚಿನವರು ಸ್ಥಳೀಯ ಗುತ್ತಿಗೆ ಕಾರ್ಮಿಕರೇ. ಇದರಿಂದ ಗಾಳಿ ಮತ್ತು ನೀರಿನ ಮಾಲಿನ್ಯವೂ ಅತಿ ಹೆಚ್ಚಾಗಿತ್ತು. ಜನರ ಆಕ್ರೋಶ ಹೆಚ್ಚಾಗಿದ್ದಿದ್ದು ಇದರ ವಿರುದ್ಧವೇ.
ಮೊದಲ ಭಾಗದಲ್ಲಿ: 1990ರ ದಶಕದ ಆರಂಭದಲ್ಲಿ ಬೀದರ್ ನಗರಕ್ಕೆ ಕೇವಲ 7 ಕಿ.ಮೀ. ಸಮೀಪದಲ್ಲಿ 1760 ಎಕರೆ ವಿಸ್ತೀರ್ಣದ ಕೊಳಾರ ಕೈಗಾರಿಕಾ ಪ್ರದೇಶʼದಲ್ಲಿ ಹತ್ತಾರು ರಾಸಾಯನಿಕ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅವುಗಳ ನಿರಂತರ ಮಾಲಿನ್ಯದಿಂದಾಗಿ ಸುತ್ತಲಿನ ಎಂಟು-ಹತ್ತು ಹಳ್ಳಿಗಳಲ್ಲಿ ನೀರು-ಗಾಳಿ, ಭೂಮಿ-ವಾತಾವರಣ, ಹೊಲ-ಬೆಳೆ, ಜನ-ಜಾನುವಾರು ಎಲ್ಲವನ್ನೂ ಒಳಗೊಂಡು ವ್ಯಾಪಕ ವಿನಾಶ ಉಂಟಾಗತೊಡಗಿತು. ಕರ್ನಾಟಕ ವಿಮೋಚನಾ ರಂಗದ ರಾಜ್ಯ ಸಮಿತಿಯ ಬೀದರಿನ ಸದಸ್ಯರ ಪ್ರಸ್ತಾಪದ ಮೇರೆಗೆ ರಾಜ್ಯ ಸಮಿತಿಯು ಸಮಸ್ಯೆಯ ವಿವರವಾದ ಮಾಹಿತಿ ಸಂಗ್ರಹಿಸಿ, ಬಳಿಕ ರೈತರು ಮತ್ತು ಜನಪರ ಕಾಳಜಿಯ ವ್ಯಕ್ತಿಗಳ-ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ, ಮಾಲಿನ್ಯದ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲು ತೀರ್ಮಾನಿಸಿತು. ಅದಕ್ಕಾಗಿ ಸ್ಥಳೀಯ ಮುಂದಾಳುಗಳನ್ನೊಳಗೊಂಡ ಹೋರಾಟ ಸಮಿತಿ ರಚನೆಯಾಗಿ, ನನ್ನನ್ನು ಅದರ ಸಂಚಾಲಕನಾಗಿ ಆಯ್ಕೆ ಮಾಡಿದರು. ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸಿ ಪರಿಹಾರಕ್ಕೆ ಎರಡು ತಿಂಗಳ ಗಡುವು ಕೊಡಲಾಯಿತು. ಏನೂ ಪರಿಹಾರ ಕಾಣದಿದ್ದಾಗ, 1994ರ ಫೆ 27ರಂದು ಪ್ರತಿಭಟನೆ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿತು. ಡಿಸಿಗೆ, ಎಸ್ಪಿಗೆ ಮಾಹಿತಿ ತಿಳಿಸಿ, ಪ್ರತಿಭಟನಾ ಹೋರಾಟಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಯಿತು. ಮುಂದೆ ಓದಿ…
ಬ್ಯಾನರ್ ಹಿಡಿಯಲು ಇಬ್ಬರು ಹುಡುಗರು, ತಮಟೆ ಬಡಿಯುತ್ತ ನಾನು…
ಹೋರಾಟ ಸಮಿತಿಯಲ್ಲಿ ತೀರ್ಮಾನವಾಗಿದ್ದಂತೆ, ಕೊಳಾರದಲ್ಲಿ ಫೆ 27ರ ಬೆಳಿಗ್ಗೆ ಎದ್ದು ಎಲ್ಲ ಸಲಕರಣೆಗಳೊಂದಿಗೆ ಕೇಂದ್ರ ಸ್ಥಳವಾದ ಬಸವೇಶ್ವರ ಚೌಕದ ಬಳಿ ಹೋಗಿ ಬ್ಯಾನರ್, ತಮಟೆ ಸಿದ್ಧಪಡಿಸಿಕೊಂಡು ನಿಂತೆ. ಎಷ್ಟು ಕಾದರೂ ಯಾರೂ ಬಂದು ಸೇರಿಕೊಳ್ಳುವ ಸೂಚನೆ ಕಾಣಲಿಲ್ಲ! ಯಾವಾಗಲೂ ನನ್ನೊಂದಿಗೆ ಓಡಾಡಿಕೊಂಡಿರುತ್ತಿದ್ದ 10-12 ವರ್ಷ ಪ್ರಾಯದ ಮೂರ್ನಾಲ್ಕು ಹುಡುಗರು ಬಂದು ಜೊತೆ ನಿಂತರು ಅಷ್ಟೇ. ಮತ್ತೆ ಸ್ವಲ್ಪ ಹೊತ್ತು ನೋಡಿ, ಆಗಿದ್ದಾಗಲಿ ಎಂದುಕೊಂಡು ಹತ್ತೂವರೆಗೆ ಸರಿಯಾಗಿ, ಇಬ್ಬರು ಹುಡುಗರ ಕೈಲಿ ಬ್ಯಾನರ್ ಹಿಡಿಸಿಕೊಂಡು ನಾನು ತಮಟೆ ಬಡಿಯುತ್ತ ಮೂರೇ ಜನರ “ಬೃಹತ್ ಪ್ರತಿಭಟನಾ ಮೆರವಣಿಗೆ” ಹೊರಡಿಸಿಬಿಟ್ಟೆ! ಸ್ವಲ್ಪ ದೂರ ಹೋಗುವಷ್ಟರಲ್ಲಿ ಕೆಲ ಯುವಕರು, ರೈತರು ಒಬ್ಬೊಬ್ಬರಾಗಿ ಬಂದು ಸೇರಿದರು. ಅರ್ಧ ಕಿ.ಮೀ. ದೂರದ ಹೆದ್ದಾರಿ ಅಗಸಿ ಕಮಾನಿನ ಬಳಿಗೆ ಬರುವ ಹೊತ್ತಿಗೆ ಸುಮಾರು 20-25 ಜನ ಮೆರವಣಿಗೆಯಲ್ಲಿದ್ದರು. ಅಲ್ಲೇ ತಮಟೆ ಬಡಿಯುತ್ತ, ಘೋಷಣೆ ಕೂಗುತ್ತ, ಹೋಗುಬರುವವರಿಗೆ ಕರಪತ್ರ ಹಂಚುತ್ತ ಸ್ವಲ್ಪ ಹೊತ್ತು ಕಳೆದೆವು. ಆಗ ಹಜ್ಜರಗಿ, ನಿಜಾಂಪುರ, ಕಮಾಲಪೂರ, ಬೆಳ್ಳೂರುಗಳಿಂದ ಜನ ಬಂದು ಸೇರತೊಡಗಿದರು. ಸಾಕಷ್ಟು ಮಂದಿ ಮಹಿಳೆಯರೂ ಬಂದರು. ಹನ್ನೊಂದೂವರೆ ಹೊತ್ತಿಗೆ ಸುಮಾರು 250-300 ಜನರ ಮೆರವಣಿಗೆ ಕಾರ್ಖಾನೆ ಪ್ರದೇಶದ ಸರ್ವೀಸ್ ರಸ್ತೆಗುಂಟ ಮುನ್ನಡೆಯಿತು. ಜನರ ರೋಷಾವೇಶದ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಕೊಳಾರದಲ್ಲಿ ಮೊಟ್ಟಮೊದಲು ಆರಂಭವಾದ ಪ್ರಮುಖ ಮತ್ತು ದೊಡ್ಡ ಕೆಮಿಕಲ್ ಕಾರ್ಖಾನೆ ಎಜಿಐಪಿಐ. ಇದು ನಿಜಾಂಪುರಕ್ಕೆ ಸಮೀಪದಲ್ಲಿತ್ತು. ಈ ಕಂಪನಿಗೇ ಸೇರಿದ ಎಸ್ಓಎಲ್ ಎನ್ನುವ ಮತ್ತೊಂದು ದೊಡ್ಡ ಕಾರ್ಖಾನೆ ಕೊಳಾರಕ್ಕೆ ಸಮೀಪದಲ್ಲಿ ಹೊಸದಾಗಿ ಕಾರ್ಯಾರಂಭ ಮಾಡಿತ್ತು. ಆ ಪ್ರದೇಶದಲ್ಲಿ ಅದೇ ಅತಿದೊಡ್ಡ ಕಾರ್ಖಾನೆ; ಸುಮಾರು ಒಂದು ಸಾವಿರದಷ್ಟು ಕಾರ್ಮಿಕರಿದ್ದರು. ಹೆಚ್ಚಿನವರು ಸ್ಥಳೀಯ ಗುತ್ತಿಗೆ ಕಾರ್ಮಿಕರೇ. ಇದರಿಂದ ಗಾಳಿ ಮತ್ತು ನೀರಿನ ಮಾಲಿನ್ಯವೂ ಅತಿ ಹೆಚ್ಚಾಗಿತ್ತು. ಜನರ ಆಕ್ರೋಶ ಹೆಚ್ಚಾಗಿದ್ದಿದ್ದು ಇದರ ವಿರುದ್ಧವೇ. ಈ ಎರಡೂ ಕಾರ್ಖಾನೆಗಳಿಗೆ ಒಟ್ಟಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಮದನ ಮೋಹನ ರೆಡ್ಡಿ ಎಂಬವರು ಅಂದಿನ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಹತ್ತಿರದ ಸಂಬಂಧಿ ಎನ್ನಲಾಗಿತ್ತು. ಅವರೇ ಆ ಪ್ರದೇಶದ ಎಲ್ಲ ರಾಸಾಯನಿಕ ಕಾರ್ಖಾನೆಗಳ ನಾಯಕ ಮತ್ತು ವಕ್ತಾರನಂತಿದ್ದರು.
ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ “ಇಸ್ಟ್ರೈಕ್”
ಹೊಸ ಹರಯದ ಯುವಕರ ಮಾತಿರಲಿ, ಬಹುತೇಕ ರೈತರೂ ಸಹ ಬಹುಶಃ ಜೀವನದಲ್ಲಿ ಮೊಟ್ಟಮೊದಲ ಸಲ ಈ ರೀತಿಯ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. [ಅವರ ಮಾತಿನಲ್ಲಿ ಯಾವುದೇ ಪ್ರತಿಭಟನೆ ಎಂದರೆ ʻಸ್ಟ್ರೈಕ್ʼ (“ಇಸ್ಟ್ರೈಕ್”)]. ಯಾರ ಮೇಲಾದರೂ ಹಲ್ಲೆ ಮಾಡುವುದು, ಕಲ್ಲೆಸೆಯುವುದು ಮುಂತಾಗಿ ಏನೂ ಮಾಡಬಾರದು, ಶಾಂತಿಯುತವಾಗಿ ಸ್ಟ್ರೈಕ್ ಮಾಡಬೇಕು ಎಂದು ಮೊದಲೇ ಪರಿಪರಿಯಾಗಿ ಮನವರಿಕೆ ಮಾಡಿದ್ದರೂ ಸಹ, ಮೆರವಣಿಗೆ ಎಸ್ಓಎಲ್ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದಂತೆ ಜನರ ರೋಷ ಉಕ್ಕೇರಿತು: “ಇರೋದೊಂದಿನ ಹೋಗೋದೊಂದಿನ, ಬರ್ರಲೇ!” ಎನ್ನುತ್ತ ಅಂಗೈಯಗಲದ ಕಲ್ಲು, ಇಟ್ಟಿಗೆ ತುಂಡುಗಳನ್ನು ಕಾರ್ಖಾನೆ ಕಡೆ ಬೀಸಿ ಎಸೆಯತೊಡಗಿದರು. ಅವು ಪೌಳಿಗೋಡೆಯಿಂದ ಕನಿಷ್ಠ ನೂರು ಅಡಿ ಒಳಕ್ಕಿದ್ದ ಕಾರ್ಖಾನೆಯ ಎರಡು-ಮೂರನೇ ಅಂತಸ್ತಿಗೆ ಹೋಗಿ ಬಡಿಯುತ್ತಿದ್ದವು! ಜನರನ್ನು ಸಮಾಧಾನಪಡಿಸಲು ಹೋದರೆ, “ಎರಡು ತಿಂಗಳ ಗಡುವು ಮುಗಿದಿದೆ, ಕಾರ್ಖಾನಿ ಬಂದ್ ಆಗಲೇಬೇಕು!” ಎಂದು ಹಟ ಹಿಡಿದರು. ಹಾಗೂ ಹೀಗೂ ಸಮಾಧಾನಪಡಿಸಿ ಕಾರ್ಖಾನೆಯ ಮುಖ್ಯ ಗೇಟಿನ ಮುಂದಕ್ಕೆ ಬಂದು ಧರಣಿ ಕೂತೆವು. ಮಾಲೀಕರು ಹೊರಗೆ ಬಂದು ಜನರ ಡಿಮ್ಯಾಂಡ್ಗಳಿಗೆ ಉತ್ತರ ಕೊಡಬೇಕು ಎನ್ನುವುದು ಆ ಕ್ಷಣದ ಒತ್ತಾಯವಾಗಿತ್ತು. ಕಾರ್ಖಾನೆಯೊಳಗೆ ಯಾವುದೋ ಕೆಲಸದ ಗುತ್ತಿಗೆ ಹಿಡಿದಿದ್ದ ನೌಬಾದಿನ ವ್ಯಕ್ತಿಯೊಬ್ಬನ ಬಗ್ಗೆ, ಆತ ರೈತರ ಜೊತೆಗೂ ಇದ್ದಂತೆ ನಟಿಸುತ್ತ ʻಗದ್ದಾರಿʼ (ದ್ರೋಹ) ಮಾಡ್ತಿದ್ದಾನೆ ಎಂಬ ಆರೋಪವಿತ್ತು. ಧರಣಿಯ ಬಳಿ ಬಂದ ಆತ ಜನರಿಗೆ ಉಪಕಾರ ಮಾಡುವವನಂತೆ ಏನೋ ಮಾತಾಡಲು ಹೋದೊಡನೆ ಯುವಕರಿಂದ ಅವನಿಗೆ ನಾಲ್ಕು ಗೂಸಾ ಬಿದ್ದವು. ಅವನನ್ನು ಬಚಾವು ಮಾಡಿ ಕಳಿಸಿದ್ದಾಯಿತು. ಕಾರ್ಖಾನೆಯೊಳಗೆ ಗುತ್ತಿಗೆ ತೆಗೆದುಕೊಳ್ಳುವವರ ಕುರಿತು ಜನರಲ್ಲಿ ತೀವ್ರವಾದ ತಿರಸ್ಕಾರ, ಅಸಹನೆ ಇದ್ದವು; ಅದನ್ನೊಂದು ಜನರ ವಿರುದ್ಧದ ದ್ರೋಹ ಎಂದೇ ಪರಿಗಣಿಸುತ್ತಿದ್ದರು.

ಬಿರು ಬಿಸಿಲಿನಲ್ಲಿ ಒಂದು ಗಂಟೆ ಧರಣಿ ಕೂತರೂ ಯಾರೂ ಮಾತಾಡಲು ಬರದಿದ್ದಾಗ ರೈತರು ಮತ್ತೊಮ್ಮೆ ರೊಚ್ಚಿಗೆದ್ದರು, ಕಾರ್ಖಾನೆಗೆ ನುಗ್ಗಲು ಹೊರಟುಬಿಟ್ಟರು. ಎರಡಾಳೆತ್ತರದ ಗೇಟನ್ನು ಇನ್ನೇನು ಮುರಿದೇ ಬಿಡ್ತಾರೇನೋ ಎನ್ನುವಾಗ ಪೊಲೀಸರು ಮುಂದೆ ಬಂದು, ಮ್ಯಾನೇಜ್ಮೆಂಟ್ನವರನ್ನು ಕರೆತರುವುದಾಗಿ ಹೇಳಿ ಜನರನ್ನು ಸಮಾಧಾನಪಡಿಸಿ ಒಳಹೋದರು. ನಂತರ ಕಂಪನಿಯ ಸೀನಿಯರ್ ಮ್ಯಾನೇಜರ್ ಜನರ ಬಳಿ ಬಂದು, ಮಾಲೀಕರ ಜೊತೆ ಚರ್ಚಿಸುವುದಾಗಿಯೂ, ಸರ್ಕಾರದ ಜೊತೆ ಸಮಾಲೋಚಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿಯೂ ಮಾತಾಡಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೂ ಬಂದು, ʻಇಲ್ಲಿನ ಮಾಲಿನ್ಯದ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ನೀಡಿದ್ದೇವೆ; ಮತ್ತೊಮ್ಮೆ ಸಮಸ್ಯೆಯನ್ನು ವಿವರಿಸಿ ಶೀಘ್ರ ಪರಿಹಾರಕ್ಕೆ ಒತ್ತಾಯಿಸುತ್ತೇವೆ…ʼ ಮುಂತಾಗಿ ಮಾತು ಕೊಟ್ಟರು. ತಹಸೀಲ್ದಾರ್ ಕಡೆಯಿಂದಲೂ ಇಂಥದೇ ಮಾತು ಬಂತು. ಅಷ್ಟಾದ ಮೇಲೆ, ಪೂರ್ತಿ ಸಮಾಧಾನವಾಗದಿದ್ದರೂ ಜನರು, “ಇನ್ನೂ ಒಂದು ತಿಂಗಳು ನೋಡ್ತೀವಿ. ಸಮಸ್ಯೆ ಬಗೆಹರಿಸದಿದ್ದಲ್ಲಿ ಫ್ಯಾಕ್ಟರಿಗೆ ಬೆಂಕಿ ಹಚ್ತೀವಿ…” ಎಂದು ಎಚ್ಚರಿಕೆ ನೀಡಿ, ಒಲ್ಲದ ಮನಸ್ಸಿನಿಂದ ನಿಧಾನವಾಗಿ ಚದುರಿದರು. ಜೀವನದ ಮೊಟ್ಟಮೊದಲ ಈ ಸ್ಟ್ರೈಕು ಜನಸಾಮಾನ್ಯರಲ್ಲಿ ಏನೋ ಒಂದು ರೀತಿಯ ಅವ್ಯಕ್ತ ಖುಷಿ ಮತ್ತು ಹೊಸ ಚೈತನ್ಯವನ್ನು ಉಂಟುಮಾಡಿದ್ದು ಎದ್ದುಕಾಣುತ್ತಿತ್ತು. ಮುಂದಿನ ಕೆಲವು ದಿನ ಎಲ್ಲ ಕಡೆಯೂ ಅದರದ್ದೇ ಮಾತು ನಡೆಯಿತು. ಬೀದರಿನ ಪೊಲೀಸರಿಗೂ ಸಮಸ್ಯೆಯ ಗಂಭೀರತೆಯ ಅರಿವಿದ್ದುದರಿಂದ ಯಾವುದೇ ಕೇಸ್ ದಾಖಲು ಮಾಡಲಿಲ್ಲ.
ಎಚ್ಚೆತ್ತ ಜಿಲ್ಲಾಡಳಿತ: ಫ್ಯಾಕ್ಟರಿಗಳ ಬಂದ್ಗೆ ಆದೇಶ
ಈ ಪ್ರತಿಭಟನೆ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿತು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದು 2028ರಲ್ಲಿ ನಿವೃತ್ತರಾದ ರತ್ನಪ್ರಭಾ ಅವರು ಆಗ ಬೀದರ್ ಜಿಲ್ಲಾಧಿಕಾರಿಯಾಗಿದ್ದರು. ಅವರು ಕೂಡಲೇ ಜಿಲ್ಲೆಯ ಎಲ್ಲ ಸಂಬಂಧಪಟ್ಟ ಪ್ರಮುಖ ಅಧಿಕಾರಿಗಳ ಸಭೆ ಕರೆದು ಹೋರಾಟ ಸಮಿತಿಯನ್ನೂ ಆಹ್ವಾನಿಸಿದರು. ಸಭೆಯಲ್ಲಿ ಕೂಲಂಕಷ ಚರ್ಚೆ ಆದನಂತರ ಅವರು ಕೂಡಲೇ ಕೆಲವು ಕ್ರಮಗಳನ್ನು ಕೈಗೊಂಡರು. ವೈದ್ಯರ ತಂಡ ರಚಿಸಿ, ಬಾಧಿತ ಹಳ್ಳಿಗಳಲ್ಲಿ ಜನರ ಆರೋಗ್ಯ ತಪಾಸಣೆ ಕೈಗೊಂಡು, ಈ ಪ್ರದೇಶದ ಕಾರ್ಖಾನೆಗಳ ಮಾಲಿನ್ಯಕ್ಕೆ ಸಂಬಂಧಿಸಿರಬಹುದಾದ ಹೊಸ ಕಾಯಿಲೆಗಳನ್ನು ಪತ್ತೆಹಚ್ಚಿ ಒಂದು ವಾರದಲ್ಲಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು. ಕೈಗಾರಿಕಾ ಪ್ರದೇಶದ ಪ್ರಮುಖ ಜಲಮೂಲಗಳ ಪರಿಶೀಲನೆ ನಡೆಸಿ, ಅವು ಕುಡಿಯಲು ಮತ್ತು ಕೃಷಿಗೆ ಯೋಗ್ಯವಾಗಿವೆಯಾ ಎಂಬುದನ್ನು ನಿರ್ಧರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು. ಅಲ್ಲದೆ ನೀರು ಮತ್ತು ಗಾಳಿಯ ಮಾಲಿನ್ಯ ನಿಯಂತ್ರಣಕ್ಕೆ ಸಾಮೂಹಿಕ ಶುದ್ಧೀಕರಣ ಘಟಕದ ಸಾಧ್ಯತೆಯನ್ನೂ ಒಳಗೊಂಡಂತೆ, ಕೈಗೊಳ್ಳಬಹುದಾದ ಕ್ರಮಗಳನ್ನು ಅಧ್ಯಯನ ಮಾಡಿ ವರದಿ ಕೊಡಲೂ ಸೂಚಿಸಿದರು.
ನಿಜಾಂಪುರ ಕೆರೆ, ಹಜ್ಜರಗಿಯ ತೆರೆದ ಬಾವಿಗಳು ಸೇರಿದಂತೆ ಜನರು ಬಳಸುತ್ತಿದ್ದ 11 ಜಲಮೂಲಗಳು ಕುಡಿಯಲು ಮತ್ತು ಕೃಷಿಗೆ ಯೋಗ್ಯವಾಗಿಲ್ಲ ಎಂಬುದಾಗಿಯೂ, ಈ ಪ್ರದೇಶದ ಕೆಮಿಕಲ್ ಮಾಲಿನ್ಯಕ್ಕೆ ನೇರವಾಗಿ ಸಂಬಂಧ ಕಲ್ಪಿಸಬಹುದಾದ 7 ಬಗೆಯ ಹೊಸ ಆರೋಗ್ಯ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಂಡಿರುವುದಾಗಿಯೂ ವರದಿಗಳು ಅವರ ಕೈ ಸೇರಿದವು. ಕುಡಿವ ನೀರಿನ ಮೂಲಗಳ ಶುದ್ಧೀಕರಣಕ್ಕೆ ಹಾಗೂ ಹೊಸ ರೀತಿಯ ಆರೋಗ್ಯ ಸಮಸ್ಯೆಗಳ ಶಮನಕ್ಕೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಕ್ರಮಗಳನ್ನು ಆದೇಶಿಸಿದ ಅವರು, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವವರೆಗೆ ಎಲ್ಲ ಕೆಮಿಕಲ್ ಕಾರ್ಖಾನೆಗಳನ್ನೂ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದರು. ಅಲ್ಲದೆ, ಈ ವರದಿಗಳನ್ನೇ ಉಲ್ಲೇಖಿಸಿ, ಕೊಳ್ಹಾರ ಕೈಗಾರಿಕಾ ಪ್ರದೇಶದಲ್ಲಿ ಹೊಸದಾಗಿ ಯಾವುದೇ ಕೆಮಿಕಲ್ ಕಾರ್ಖಾನೆಗೆ ಪರವಾನಗಿ ಕೊಡಬಾರದೆಂದು ಸರ್ಕಾರಕ್ಕೆ ಶಿಫಾರಸು ಸಹ ಮಾಡಿದರು. ಕಾರ್ಖಾನೆಗಳು ಒಮ್ಮಿಂದೊಮ್ಮೆಲೆ ಬಂದ್ ಆಗಿದ್ದು ಕಂಡು ಜನರಿಗೆ ಬಹಳ ಖುಷಿಯಾಯಿತು. ಆದರೆ, “ಕಾರ್ಖಾನೆಗಳನ್ನು ಮುಚ್ಚಿಸಿರುವುದು ಕೇವಲ ತಾತ್ಕಾಲಿಕ. ಅವರು ಹೈಕೋರ್ಟಿನಿಂದ ಸ್ಟೇ ತರುತ್ತಾರೆ ನೋಡಿ” ಎಂದೂ ರತ್ನಪ್ರಭಾ ಅವರು ನಮಗೆ ಹೇಳಿದ್ದರು. ಹಾಗೇ ಆಯಿತು. ಒಂದು ವಾರದೊಳಗೆ ಹೈಕೋರ್ಟ್ನಿಂದ ಡಿಸಿ ಆದೇಶದ ವಿರುದ್ಧ ಸ್ಟೇ ಪಡೆದು ಕಾರ್ಖಾನೆಗಳು ಪುನರಾರಂಭವಾದವು. ಇದು ಜನರಲ್ಲಿ ಹೋರಾಟದ ಕೆಚ್ಚನ್ನೂ ನಿರ್ಧಾರವನ್ನೂ ಮತ್ತಷ್ಟು ಗಟ್ಟಿಗೊಳಿಸಿತು.
ಬಗಲ ಚೀಲವೇ ʻದಫ್ತರುʼ!
ಬೀದರ್ ಹೋರಾಟ ನಡೆಯುತ್ತಿದ್ದ ಮೂರೂವರೆ ವರ್ಷಗಳಲ್ಲಿ ನಾನು ಬೀದರ್ ನಗರದಲ್ಲಾಗಲಿ ಹಳ್ಳಿಗಳಲ್ಲಾಗಲಿ ಪ್ರತ್ಯೇಕ ವಸತಿಯನ್ನೇನೂ ಮಾಡಿಕೊಂಡಿರಲಿಲ್ಲ. ಹೆಚ್ಚಾಗಿ ಕೊಳಾರದಲ್ಲೇ ರೈತರ ಮನೆಗಳಲ್ಲಿ ಊಟ ಮಾಡಿಕೊಂಡು, ದಿನವೂ ಯಾರದಾದರೊಬ್ಬರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಇದ್ದುದರಲ್ಲಿ ಸ್ವಲ್ಪ ಹತ್ತಿರಹತ್ತಿರವಾಗಿದ್ದ ನೌಬಾದ್, ಹಜ್ಜರಗಿ, ನಿಜಾಂಪುರ ಮತ್ತು ಬೆಳ್ಳೂರು ಈ ಹಳ್ಳಿಗಳಲ್ಲೂ ಉಳಿದುಕೊಳ್ಳುತ್ತಿದ್ದೆ. ಬೀದರಿನಲ್ಲಿ ಉಳಿಯಬೇಕಾದಲ್ಲಿ ಪತ್ರಕರ್ತ ಮಿತ್ರ ಮಾರುತಿ ಭಾವಿದೊಡ್ಡಿಯವರ ಇಷ್ಟಗಲದ ರೂಮಿನಲ್ಲಿ ಮೂವರು ಅಣ್ಣತಮ್ಮಂದಿರ ಜೊತೆ ನಾನೂ ಸೇರಿಕೊಳ್ಳುತ್ತಿದ್ದೆ. ಹೋರಾಟದ ವಿಶೇಷ ಚಟುವಟಿಕೆಗಳೇನೂ ಇಲ್ಲದೆ ಬಿಡುವಿದ್ದಾಗ, ರಾಜ್ಯ ಸಮಿತಿ ಸಭೆ ಅಥವಾ ಇನ್ಯಾವುದಾದರೂ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಇಲ್ಲವೇ ಇನ್ನೆಲ್ಲಿಗಾದರೂ ಹೋಗುವಾಗ-ಬರುವಾಗ ಮಾತ್ರ ಗುಲ್ಬರ್ಗದ ಮನೆಗೆ ಒಂದೆರಡು ದಿನ ಹೋಗಿ ಬರುತ್ತಿದ್ದೆ.
ಗಟ್ಟಿಯಾದ ದೊಡ್ಡ ಬಗಲ ಚೀಲವೊಂದನ್ನು ಇಟ್ಟುಕೊಂಡಿದ್ದೆ. ಅದರಲ್ಲೇ ಒಂದು ಜೊತೆ ಉಡುಪು, ದಿನಬಳಕೆ ಸಲಕರಣೆಗಳು ಮತ್ತಿತರ ಅಗತ್ಯ ವಸ್ತುಗಳ ಜೊತೆ ಹೋರಾಟ ಸಮಿತಿಯ ಲೆಟರ್ಹೆಡ್, ಸೀಲು, ಇಂಕ್ ಪ್ಯಾಡ್ ಮುಂತಾಗಿ ಸಕಲ ಆವಶ್ಯಕ ಸಾಧನ-ಸಾಮಗ್ರಿಗಳನ್ನೂ ತುಂಬಿಕೊಂಡಿರುತ್ತಿದ್ದೆ. ಇದರಿಂದ ದಿನವೂ ಎಲ್ಲಿಬೇಕಾದರಲ್ಲಿ ಉಳಿದುಕೊಳ್ಳಲು ಅನುಕೂಲವಾಗುತ್ತಿತ್ತು. ಅದನ್ನು ನೋಡಿ ಹಳ್ಳಿ ಜನ “ನಾಗರಾಜ ಸಾಬರ ಬ್ಯಾಗೇ ಅವರ ದಫ್ತರು” (ಕಚೇರಿ) ಎಂದು ತಮಾಷೆ ಮಾಡುತ್ತಿದ್ದರು.
ಮುಂದುವರಿದ ಮಾಲಿನ್ಯ, ಮುಂದುವರಿದ ಪ್ರತಿರೋಧ
ಜಿಲ್ಲಾಧಿಕಾರಿಯ ಬಂದ್ ಆದೇಶಕ್ಕೆ ಹೈಕೋರ್ಟ್ ಸ್ಟೇ ದೊರೆತ ನಂತರ ಫ್ಯಾಕ್ಟರಿ ಮಾಲೀಕರುಗಳ ದಾರ್ಷ್ಟ್ಯಕ್ಕೆ ಕೋಡು ಮೂಡಿದಂತಾಯಿತು. ಗಾಳಿಯ ಮಾಲಿನ್ಯಕ್ಕಂತೂ ಹೇಗೂ ಅಡೆತಡೆಯಿರಲಿಲ್ಲ; ಇಡೀ ಪ್ರದೇಶದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಅಸಹನೀಯವಾದ ಘಾಟು-ವಾಸನೆಯಲ್ಲೇ ಜನ ಬದುಕಬೇಕಾಗಿತ್ತು. ಜೊತೆಗೆ ಲಕ್ಷಗಟ್ಟಲೆ ಗ್ಯಾಲನ್ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಎಲ್ಲೆಂದರಲ್ಲಿ ಹರಿಯಬಿಡುವುದನ್ನು ಎಗ್ಗಿಲ್ಲದೆ ಮುಂದುವರಿಸಿದರು. ಜಾನುವಾರುಗಳ ಪ್ರಾಣಹಾನಿ ಹೆಚ್ಚುತ್ತಾ ಹೋಯಿತು. ಜನರ ಪ್ರತಿರೋಧವೂ ತೀವ್ರವಾಗುತ್ತ ಬಂದಿತು. ಇಂದು ಹೆಸರಾಂತ ಪರಿಸರ ತಜ್ಞರೆಂದು ಖ್ಯಾತರಾಗಿರುವ ಆ.ನ. ಯಲ್ಲಪ್ಪ ರೆಡ್ಡಿಯವರು ಆಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದರು. ಹೋರಾಟ ಸಮಿತಿಯ ನಿಯೋಗ ಬೆಂಗಳೂರಿಗೆ ಹೋಗಿ ಅವರನ್ನು ಕಂಡು, ʻಒಂದೋ ಕಟ್ಟುನಿಟ್ಟಿನ ಮಾಲಿನ್ಯ ನಿಯಂತ್ರಣ ಕ್ರಮಗಳನ್ನಾದರೂ ಕೈಗೊಳ್ಳಿʼ, ಇಲ್ಲದಿದ್ದರೆ ಕಾರ್ಖಾನೆಗಳನ್ನೇ ಮುಚ್ಚಿಸಿ, ಎಂದು ಒತ್ತಾಯಿಸಿದೆವು. ಅವರು ಸಾಮೂಹಿಕ ತ್ಯಾಜ್ಯ ಸಂಸ್ಕರಣ ಘಟಕ (ಕಾಮನ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್) ನಿರ್ಮಿಸುವ ಪ್ರಯತ್ನ ನಡೆಸುತ್ತಿರುವುದಾಗಿಯೂ, ಆದಷ್ಟು ಶೀಘ್ರವಾಗಿ ಮಾಲಿನ್ಯದ ಸಮಸ್ಯೆಗೆ ಪರಿಹಾರ ದೊರಕುವುದೆಂದೂ ಭರವಸೆ ನೀಡಿದರು. ಸಾಕಷ್ಟು ಸಮಯ ಕಳೆದರೂ ಮಾಲಿನ್ಯ ನಿಯಂತ್ರಣ ಕ್ರಮಗಳೇನೂ ಜಾರಿ ಆಗದಿದ್ದಾಗ ಬೀದರ್ ನಗರದಲ್ಲಿ ದೊಡ್ಡ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾಯಿತು. ರತ್ನಪ್ರಭಾ ವರ್ಗವಾಗಿ ಬಿ.ಎಚ್.ಮಂಜುನಾಥ್ ಎಂಬ ಜಿಲ್ಲಾಧಿಕಾರಿ ಬಂದಿದ್ದರು. ಅವರು ರಾಜಕೀಯ ನಾಯಕರನ್ನು, ಸಂಘಟನೆಗಳ ಮುಖಂಡರನ್ನು, ಪತ್ರಕರ್ತರನ್ನು ಒಳಗೊಂಡು ಸಭೆ ಕರೆದು ಸಮಾಲೋಚನೆ ನಡೆಸಿದರು. ಎಲ್ಲರ ಅಭಿಪ್ರಾಯ: “ಒಂದೋ ಕಟ್ಟುನಿಟ್ಟಿನ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ, ಇಲ್ಲವೇ ಕಾರ್ಖಾನೆಗಳನ್ನು ಮುಚ್ಚಿಸಿ” ಎಂಬುದೇ ಆಗಿತ್ತು.

ದ್ರೋಹ ಬಗೆದ ಮುಖಂಡರು
ಒಂದೆಡೆ ಮಾಲಿನ್ಯದ ಸಮಸ್ಯೆಯ ಜೊತೆ ಜನರು ಹೀಗೆ ಪರದಾಟ-ಗುದ್ದಾಟ ನಡೆಸಿದ್ದರೆ, ಮತ್ತೊಂದೆಡೆ ’94ರ ಮಧ್ಯಭಾಗದ ಹೊತ್ತಿಗೆ ಹೋರಾಟ ಸಮಿತಿಯೊಳಗೆ ಜನದ್ರೋಹ ತಲೆಯೆತ್ತಿತು. ಹೋರಾಟ ಸಮಿತಿಯ ನಾಲ್ವರು ಪ್ರಮುಖರು – ಇವರು ಊರ ಮುಂದಾಳುಗಳೆಂಬ ಕಾರಣಕ್ಕೆ ಹೋರಾಟ ಸಮಿತಿಯ ಮುಂದಾಳುಗಳಾಗಿಯೂ ಆಯ್ಕೆ ಆಗಿದ್ದವರು, ಅಂತೆಯೇ ಮೀಟಿಂಗ್ಗಳಿಗೆ ಬಂದವರೇ ಹೊರತು ಹೋರಾಟಕ್ಕೆ ಬಂದು ಬಿಸಿಲಲ್ಲಿ ಬಳಲಿದವರಲ್ಲ- ಇಬ್ಬರು ಮಾಜಿ ಸರಪಂಚರು, ಒಬ್ಬರು ʻಮುಂದುವರಿದʼ ಶ್ರೀಮಂತರು, ಮತ್ತೊಬ್ಬ ಗೂಸಾ ತಿಂದ ಅಸಾಮಿ – ಇವರುಗಳು ಕಾರ್ಖಾನೆ ಮಾಲೀಕರು ನೀಡಿದ 25 ಸಾವಿರ ರೂಪಾಯಿಗಳಿಗೆ ತಮ್ಮನ್ನು ಮಾರಿಕೊಂಡು ಮಾಲೀಕರ ಜೊತೆ ಶಾಮೀಲಾಗಿ ಬಿಟ್ಟರು. ಕುರಿ ಕಳೆದುಕೊಂಡಿದ್ದ ಇಬ್ಬರಿಗೆ 25 ಸಾವಿರದಲ್ಲಿ ತಲಾ ಒಂದೊಂದು ಸಾವಿರ ಕೊಟ್ಟು ಮಿಕ್ಕಿದ್ದನ್ನು ತಮ್ಮಲ್ಲೇ ಹಂಚಿಕೊಂಡು ತಿಂದರು (25 ಸಾವಿರ ಅಂತ ಜನರಿಗೆ ಹೇಳಿದ್ದು; ಎಷ್ಟು ತಿಂದರೋ ಗೊತ್ತಿಲ್ಲ!).
ಅವರು ಹೋರಾಟ ಸಮಿತಿಯಿಂದ ಸಭೆ ಕರೆಯದೆ, ಕೊಳಾರದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಮೀಟಿಂಗ್ ನಡೆಸಿ, “ಮಾಲಿನ್ಯ ಕಮ್ಮಿಯಾಗಿದೆ, ಕೆಮಿಕಲ್ ನೀರು ಹೊರಕ್ಕೆ ಹರಿಸುತ್ತಿಲ್ಲ, ಇನ್ನು ಮುಂದೆ ಅದನ್ನು ಟ್ಯಾಂಕರ್ಗಳಲ್ಲಿ ಪಟ್ಟಂಚೆರುವುಗೆ ಸಾಗಿಸ್ತಾರಂತೆ, ಟ್ರೀಟ್ಮೆಂಟ್ ಪ್ಲಾಂಟ್ ಹಾಕ್ತಾರೆ, ದನ-ಕುರಿ ಕಳೆದುಕೊಂಡವರಿಗೆ ಅಂತ 25 ಸಾವಿರ ಪರಿಹಾರ ಕೊಟ್ಟಿದ್ದಾರೆ …” ಎಂದೆಲ್ಲ ಹೇಳಿ, ಮುಂದೆ ಹೋರಾಟ ಮಾಡುವ ಅಗತ್ಯ ಇಲ್ಲ ಎಂದು ಜನರನ್ನು ಒಪ್ಪಿಸಲು ನೋಡಿದರು. ಆದರೆ ಜನ ಒಪ್ಪದೆ ತಿರುಗಿ ಬಿದ್ದರು. ಆದರೂ ಇದರಿಂದ ಹೋರಾಟಕ್ಕೆ ಆಗಬಹುದಾಗಿದ್ದ ಡ್ಯಾಮೇಜ್ ಆಗಿಯೇ ಬಿಟ್ಟಿತು. ಸಾಲದ್ದಕ್ಕೆ, ಈ ಪ್ರದೇಶದಲ್ಲಿ ಕಾರ್ಮಿಕ ಸಂಘಟನೆ ಇದ್ದುದು ಎಜಿಐಪಿಐ ಕಾರ್ಖಾನೆಯಲ್ಲಿ ಮಾತ್ರ, ಅದರ ಮುಖಂಡ ಅಮೃತ್ ಚಿಮಕೋಡೆ ಎಂಬವನೂ ಈ ಜನದ್ರೋಹಿಗಳ ಜೊತೆ ಭಾಗಿಯಾಗಿ ಮಾಲೀಕರ ಪರ ವಹಿಸಿದ; ಕಾರ್ಖಾನೆಗಳನ್ನು ಬಂದ್ ಮಾಡಬಾರದೆಂದು ಡಿಸಿ ಕಚೇರಿಯೆದುರು ಒಂದು ದಿನದ ಧರಣಿಯನ್ನೂ ಏರ್ಪಡಿಸಿದ. ಆದರೆ ಮಾಲಿನ್ಯದ ಬಗ್ಗೆ ಚಕಾರ ಕೂಡ ಎತ್ತಲಿಲ್ಲ! ಹೀಗೆ, ಮುಖಂಡರುಗಳೇ ಗದ್ದಾರಿ ಮಾಡಿದ ಮೇಲೆ ಹೋರಾಟ ಮಾಡುವುದು ಹೇಗೆ ಎಂಬುದಾಗಿ ಜನರಲ್ಲಿ ಹತಾಶೆ ತಲೆದೋರಿತು. “ಎಲ್ಲಾ ಇದ್ದೋರೇ ಹೀಗೆ ರೊಕ್ಕಕ್ಕೆ ಬಾಯಿ ಬಿಡುತ್ತಾರೆಂದರೆ ನಾವು ಗೋರ್ಗರೀಬರು ಯಾರಿಗೆ ನಂಬಬೇಕು?”… ಎಲ್ಲರದೂ ಒಂದೇ ಬೇಸರದ ಮಾತು: ಹೋರಾಟ ಸಮಿತಿಗೆ ಪುನಃ ಚಾಲನೆ ಕೊಟ್ಟು ಹೋರಾಟ ಮುಂದುವರಿಸುವ ಅತ್ಯಂತ ಕ್ಲಿಷ್ಟಕರ ಸವಾಲು ಎದುರಾಯಿತು.
ಹೋರಾಟದಲ್ಲಿ ಮೊದಲಿನಿಂದಲೂ ಗಟ್ಟಿಯಾಗಿ ಜೊತೆಗೆ ನಿಂತವರು ಬಹುಪಾಲು ಯುವಕರೇ. ಅಲ್ಲದೆ ಸಾಮಾನ್ಯ ರೈತರು ಮತ್ತು ಮಹಿಳೆಯರದೂ ಗಣನೀಯ ಪಾಲಿತ್ತು. ಕೊಳ್ಹಾರದ ಚಂದ್ರಮ್ಮಕ್ಕ ಎಂಬ ಹಿರಿಯ ರೈತಾಪಿ ಮಹಿಳೆಯ ದಿಟ್ಟತನ ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು. ಹಳ್ಳಿಯಲ್ಲಿ ಎಲ್ಲ ಸಭೆಗಳಲ್ಲೂ ಹಾಜರಿರುತ್ತಿದ್ದ ಆಕೆ ಯಾರಿಗೂ ಮುಲಾಜು ನೋಡುತ್ತಿರಲಿಲ್ಲ. ದ್ರೋಹಿ ಮುಖಂಡರು ನಡೆಸಿದ ಸಭೆಯಲ್ಲೂ ಆಕೆ ಅವರಿಗೆ ಚೆನ್ನಾಗಿ ಬೆವರಿಳಿಸಿದರು. ಆದರೆ ಅವರು ಮರ್ಯಾದೆಗೆ ಅಂಜುವವರಲ್ಲ ಎಂಬುದನ್ನು ಸಾಬೀತು ಮಾಡಿ ಆಗಿತ್ತು. ಇಂಥ ದಿಟ್ಟ ಮಹಿಳೆಯರು ಎಲ್ಲ ಹಳ್ಳಿಗಳಲ್ಲೂ ಒಬ್ಬಿಬ್ಬರಾದರೂ ಇದ್ದರು.

ರೀಬಿಲ್ಡಿಂಗ್ ಫೇಸ್
ಸಮಿತಿಯನ್ನೂ ಹೋರಾಟವನ್ನೂ ಹೊಸದಾಗಿ ಕಟ್ಟಿನಿಲ್ಲಿಸುವ ʻರೀಬಿಲ್ಡಿಂಗ್ ಫೇಸ್ʼ ಶುರುವಾಯ್ತು. ನಾನು ಎರಡು ತಿಂಗಳ ಕಾಲ ಎಲ್ಲಿಗೂ ಹೋಗದೆ ಹಳ್ಳಿಗಳಲ್ಲೇ ಉಳಿದೆ. ಈ ಹಂತದಲ್ಲಿ ಹುಮನಾಬಾದಿನ ಯುವ ಇಂಜಿನಿಯರ್ ಮಾರುತಿ ಗೋಖಲೆ ದೃಢವಾಗಿ ಸಾಥ್ ನೀಡಿದರು. ವಾರದಲ್ಲಿ ಮೂರು-ನಾಲ್ಕು ದಿನ ಈ ಹಳ್ಳಿಗಳಲ್ಲಿ ನನ್ನ ಜೊತೆ ಇರುತ್ತಿದ್ದರು. ದಿನವೂ ಯುವಕರ ಜೊತೆ, ರೈತಾಪಿ ಮುಖಂಡರ ಜೊತೆ, ಅಕ್ಕಂದಿರ ಜೊತೆ ಮಾತಾಡುತ್ತ ಎಲ್ಲರಲ್ಲೂ ಹೊಸ ಉತ್ಸಾಹ, ಚೈತನ್ಯ ತುಂಬಲು ಶ್ರಮಿಸಿದೆವು. ಹೊಸ ಹಾಡುಗಳನ್ನು ಕಟ್ಟಿ ನಾವೂ ಹಾಡಿ, ಜೊತೆಯ ಹುಡುಗರಿಗೂ ಕಲಿಸಿದೆವು. ಮಾಲಿನ್ಯ ಮತ್ತು ದ್ರೋಹ ಕುರಿತು ಬೀದಿ ನಾಟಕ ರಚಿಸಿ ಹಳ್ಳಿಗಳಲ್ಲಿ ಆಡಿದೆವು. ಗೋಖಲೆ ತನ್ನ ತಲೆಯ ಮೇಲೊಂದು ಕಾಂಗ್ರೆಸ್ ಟೋಪಿ ಇಟ್ಕೊಂಡು ನಟಿಸುತ್ತಿದ್ದ ʻಪುಡಾರಿ ಫುಗಸಟ್ಯಪ್ಪʼನ ಪಾತ್ರವಂತೂ ಜನರನ್ನು ಚೆನ್ನಾಗಿ ರಂಜಿಸುತ್ತಿತ್ತು. ತಾನೊಬ್ಬ ಉನ್ನತ ಸರ್ಕಾರಿ ಇಂಜಿನಿಯರ್ ಎಂಬುದನ್ನು ಎಳ್ಳಷ್ಟೂ ಲೆಕ್ಕಕ್ಕೆ ಇಟ್ಟುಕೊಳ್ಳದೆ ಪಕ್ಕಾ ಪೂರ್ಣಾವಧಿ ಆಕ್ಟಿವಿಸ್ಟ್ ರೀತಿ ಅವರು ಜನರೊಂದಿಗೆ, ಯುವಕರು ಮತ್ತು ಮಕ್ಕಳೊಂದಿಗೆ ಬೆರೆಯುತ್ತಿದ್ದರು. ಒಳ್ಳೊಳ್ಳೆಯ ಪ್ರತಿಭಟನಾ ಘೋಷಣೆಗಳನ್ನು ಹುಟ್ಟುಹಾಕಿದೆವು. 10-12ರ ಪ್ರಾಯದ ಮಕ್ಕಳಂತೂ ನಮ್ಮ ಜೊತೆ ಇಡೀ ಹಳ್ಳಿ ಸುತ್ತುತ್ತಿದ್ದರು. “ಆಂಧ್ರ ಕಳ್ಳರು ಬಂದಾರ, ಕೊಳಕ್ಕು ಫ್ಯಾಕ್ಟ್ರಿ ಹಾಕ್ಯಾರ” ಎಂಬುದು, ಯಾವಾಗಲೋ ನಮ್ಮ ಮಾತಿನ ಮಧ್ಯೆ ಬಂದ ಒಂದು ವಾಕ್ಯವನ್ನು ಮಕ್ಕಳೇ ಒಂದು ರಾಗವಾದ ಘೋಷಣೆಯಾಗಿ ಮಾಡಿಕೊಂಡಿದ್ದು; ಅದು ಮಕ್ಕಳ ಬಾಯಲ್ಲಿ ಸದಾ ಅನುರಣಿಸುತ್ತ ಅಷ್ಟೂ ಹಳ್ಳಿಗಳಲ್ಲಿ ಜನಜನಿತವಾಗಿ ಹೋಗಿತ್ತು. ಜನ ಕ್ರಮೇಣ ದ್ರೋಹದ ನೆನಪನ್ನು ಬದಿಗೊತ್ತಿ, ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗತೊಡಗಿದರು. ಮೂವತ್ತು ವರ್ಷಗಳ ನಂತರವೂ ಹಳ್ಳಿಗಳ ಹಳಬರು ಆ ಘೋಷಣೆಗಳನ್ನೂ, ಆಗ ನಾವು ಕಟ್ಟಿ ಹಾಡಿದ್ದ ಹಾಡುಗಳನ್ನೂ ಜ್ಞಾಪಕ ಇಟ್ಟಿದ್ದಾರೆ. ಕೊಳಾರದ ಸರಸ್ವತಕ್ಕ ಈಗಲೂ ಅವುಗಳನ್ನು ಪ್ರೀತಿಯಿಂದ ಹಾಡುತ್ತಾರೆ.
ಇದನ್ನೂ ಓದಿ ಜೋಳಿಗೆ | ಪಟ್ಟು ಬಿಡದೆ ಹೋರಾಡಿ ದಟ್ಟ ಕಾಡು ಉಳಿಸಿಕೊಂಡ ರೈತಾಪಿ ಜನ
ಇದನ್ನೂ ಓದಿ ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ- 1
ಮಾಲಿನ್ಯದ ಸಮಸ್ಯೆ ಮುಂದುವರಿದೇ ಇತ್ತು. ಜಾನುವಾರುಗಳ ಸಾವಿನ ಸರಣಿಯಂತೂ ನಿಂತಿರಲಿಲ್ಲ. ಕಾರ್ಖಾನೆ ಮಾಲೀಕರುಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದರು: ಶುದ್ಧೀಕರಣ ಘಟಕ ಸ್ಥಾಪಿಸ್ತೀವಿ ಅಂತ ಒಮ್ಮೆ, ಮಾಲಿನ್ಯದ ನೀರನ್ನು ಟ್ಯಾಂಕರ್‌ಗಳಲ್ಲಿ ಪಟ್ಟಂಚೆರುವುಗೆ ಸಾಗಿಸ್ತೀವಿ ಅಂತ ಒಮ್ಮೆ, ಸಾಮೂಹಿಕ ಶುದ್ಧೀಕರಣ ಘಟಕದ ಪ್ರಯೋಗ ನಡೆಯುತ್ತಿದೆ, ಸದ್ಯದಲ್ಲೇ ಅದರ ನಿರ್ಮಾಣ ಮಾಡ್ತೀವಿ ಅಂತ ಒಮ್ಮೆ… ಹೀಗೇ ಒಂದು ವರ್ಷ ತಳ್ಳಿದರು. 1994 ಹೋಗಿ 1995 ಕೂಡ ಅರ್ಧ ಭಾಗ ಕಳೆಯಿತು. ನಡುವೆ ಅನೇಕ ಬಾರಿ ಬೀದರ್ ನಗರದಲ್ಲಿ ಪ್ರತಿಭಟನಾ ಮೆರವಣಿಗೆಗಳು, ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ, ಡಿಸಿ/ಎಸಿಗಳ ನೇತೃತ್ವದಲ್ಲಿ ಸಭೆಗಳು ಏನೆಲ್ಲಾ ನಡೆದವು. ಆದರೆ ಸಮಸ್ಯೆಯ ಪರಿಹಾರ ದೂರವೇ ಉಳಿಯಿತು. ಮಾಲೀಕ ವರ್ಗದವರಿಗೆ ವ್ಯಕ್ತಿಗತವಾಗಿ ಜನರ ಕುರಿತು ಭಯವಿತ್ತು, ಆದರೆ ಸಂಸ್ಥೆಯ ನೆಲೆಯಲ್ಲಿ ಅವರಿಗೆ ಜನತೆಯ ಭಯ ಇರಲಿಲ್ಲ: ಕಾರ್ಖಾನೆ ಮುಚ್ಚಲೇಬೇಕಾದ ದಿನ ಬರುತ್ತೆ ಎಂಬ ಚಿಂತೆ ಅವರಿಗೆ ಇದ್ದಂತೆ ಕಾಣುತ್ತಿರಲಿಲ್ಲ. ಇದು ರೈತಾಪಿ ಜನರಲ್ಲಿ ಮತ್ತಷ್ಟು ರೋಷವನ್ನು ಕೆರಳಿಸಿತು. ಹೋರಾಟ ಮುಂದುವರಿಸದೆ ಬೇರೆ ದಾರಿಯಿಲ್ಲ ಎಂಬುದು ಜನರಿಗೆ ಅರ್ಥವಾಗತೊಡಗಿತು.
(ಮುಂದುವರಿಯುವುದು)

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ