ವಿಷಮ ಭಾರತ | ಧಾರಾವಿಯ ‘ಚಮಾರ್ ಸ್ಟುಡಿಯೋ’ ಎಂಬೊಂದು ದಲಿತ ತುಂಬೆಯ ಕತೆ

Date:

Advertisements

‘ಚಮಾರ್ ಸ್ಟುಡಿಯೋ’ ಎಂಬುದು ಹೀಗೆ ಅರಳಿರುವ ಒಂದು ದಲಿತ ಕುಸುಮ. ತಲೆತಲಾಂತರಗಳಿಂದ ಚರ್ಮವನ್ನು ಹದ ಮಾಡುವ ಮತ್ತು ಚರ್ಮಕಾರಿಕೆಯಲ್ಲಿ ತೊಡಗಿದ ‘ಅಸ್ಪೃಶ್ಯ’ ಜಾತಿಯ ಹೆಸರು ಇದೀಗ ದೇಶದ ಸರಹದ್ದುಗಳನ್ನು ದಾಟಿ ಪಶ್ಚಿಮ ಜಗತ್ತಿಗೆ ಕಾಲಿಟ್ಟಿರುವ ದೊಡ್ಡ ಬ್ರ್ಯಾಂಡ್. ಜಗದ್ವಿಖ್ಯಾತ ಹಾಡುಗಾರ್ತಿ ರಿಹಾನ (Rihanna) ‘ಚಮಾರ್ ಸ್ಟುಡಿಯೋ’ ಉತ್ಪನ್ನವನ್ನು ಮೆಚ್ಚಿರುವುದುಂಟು.

ಅಯ್ಯಂಗಾರರ ಬೇಕರಿ, ಬ್ರಾಹ್ಮಣರ, ಬ್ರಾಹ್ಮಣರ ಕೆಫೆ, ಬ್ರಾಹ್ಮಣರ ತಟ್ಟೆ ಇಡ್ಲಿ, ಹವ್ಯಕರ ಅಡುಗೆಮನೆ, ಲಿಂಗಾಯತ ಖಾನಾವಳಿ, ಗೌಡರ ಮಾಂಸಾಹಾರ, ಮರಾಠ ಮಿಲ್ಟ್ರಿ ಹೋಟೆಲ್, ಶೆಟ್ಟಿ ಲಂಚ್ ಹೋಮ್… ಹೀಗೆ ‘ಮೇಲ್ಜಾತಿ’ಗಳ ಹೊಟೆಲುಗಳು, ಬೇಕರಿಗಳು, ಖಾನಾವಳಿಗಳು ತಿನಿಸಿನ ಮನೆಗಳು ನಮ್ಮ ಸುತ್ತಮುತ್ತ ಜಾತಿ ವ್ಯವಸ್ಥೆಯಷ್ಟೇ ‘ಸಹಜ, ಸ್ವಾಭಾವಿಕ ಹಾಗೂ ಸಲೀಸು’. ಏಯ್, ಒಂದ್ನಿಮಿಷ ಇರ್ರೀ… ಅಯ್ಯಂಗಾರ್ ಬೇಕರಿ ಎಂಬ ಬೋರ್ಡುಗಳಿರುವ ಎಲ್ಲ ಬೇಕರಿಗಳೂ ಅಯ್ಯಂಗಾರ್ ಜಾತಿಗೆ ಸೇರಿದವುಗಳಲ್ಲ, ‘ಕೆಳಜಾತಿಗಳ’ ಜನ ಕೆಲಸ ಕಲಿತು ಈ ಬೇಕರಿಗಳನ್ನು ಆರಂಭಿಸಿದ್ದಾರೆ ತಿಳಿದುಕೊಳ್ರೀ ಎಂದು ತರಾಟೆಗೆ ತೆಗೆದುಕೊಳ್ಳುವವರಿದ್ದಾರೆ.

ಇದು ಕರ್ನಾಟಕದ ಮಾತಾಯಿತು. ಇಡೀ ದಕ್ಷಿಣ ಭಾರತವೇಕೆ, ಸಮಗ್ರ ಭಾರತದ ಕತೆಯೂ ಇದೇ ಆಗಿದೆ. ಉತ್ತರ ಭಾರತದಲ್ಲಿ ಬ್ರಾಹ್ಮಣರ (ಪಂಡಿತ್) ಜೊತೆಗೆ ವೈಶ್ಯರ (ಅಗರವಾಲ್) ಮಿಠಾಯಿ ಮನೆಗಳು, ಶುದ್ಧ ವೈಷ್ಣವ ಭೋಜನಾಲಯಗಳು

Advertisements

ಹೊಲೆಯರ ಕೆಫೆ, ಮಾದಿಗರ ಖಾನಾವಳಿ, ದಕ್ಕಲರ ಬೇಕರಿ, ಚಾಂಡಾಲ ಚಾಟ್ಸ್, ಕಡೆಯ ಪಕ್ಷ ಎಂದು ಎಲ್ಲಿಯಾದರೂ ಕೇಳಿದ್ದೀರಾ? ಇವೆಲ್ಲ ‘ಅಸ್ಪೃಶ್ಯ’ ಜಾತಿಗಳು. ಕನಿಷ್ಠ ಪಕ್ಷ ಸ್ಪೃಶ್ಯ ಜಾತಿಗಳ ಕ್ಷೌರಿಕ ಕೆಫೆ, ಧೋಬಿ ಮಿಲ್ಟ್ರಿ ಹೋಟೆಲ್, ಭೋವಿಗಳ ಭೋಜನಾಲಯ ಕೂಡ ಇಲ್ಲ ಅಲ್ಲವೇ? ಇಲ್ಲ ಎಂದರೆ ಯಾಕಿಲ್ಲ ಎಂದು ಯೋಚಿಸಿದ್ದೀವಾ?

ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಮಧ್ಯಪ್ರದೇಶ ಮುಂತಾದ ಸೀಮೆಗಳಲ್ಲಿ ಈ ಪರಿಸ್ಥಿತಿ ಅತೀವ ದಾರುಣ. ಚಮಾರ್ ಬೇಕರಿ, ಮೂಸಾಹರ ರೆಸ್ಟುರಾ, ಜಾಟವ್ ಹೊಟೆಲ್, ಪಾಸ್ವಾನ್ ಡಾಬಾ, ಬಾಲ್ಮೀಕಿ ಟೀ ಹೌಸ್ ನೆನ್ನೆ ಇರಲಿಲ್ಲ, ಇಂದು ಇಲ್ಲ, ನಾಳೆಯೂ ಬರುವುದಿಲ್ಲ.

ಜಾತಿ ವ್ಯವಸ್ಥೆಯ ಮೇಲು ಕೀಳುಗಳು, ಸ್ಪೃಶ್ಯ ಅಸ್ಪೃಶ್ಯದ ಪರಿಕಲ್ಪನೆಗಳು ಸಾರ್ವಜನಿಕ ಊಟ ತಿಂಡಿಗಳ ವಲಯಕ್ಕೂ ಅಷ್ಟೇ ಬಿಗಿಯಾಗಿ ಪಯಣಿಸಿವೆ. ಭದ್ರವಾಗಿ ತಳ ಊರಿವೆ. ಮನುಸ್ಮೃತಿ ಎಂಬ ಮನುಷ್ಯವಿರೋಧಿ ಜಾತಿ-ವರ್ಣ-ಲಿಂಗ  ತಾರತಮ್ಯದ  ಕಟ್ಟು ಕಟ್ಟಳೆಗಳು ಭರತ ಖಂಡದ ಗಾಳಿ ನೀರಿನಲ್ಲಿ ಬೆರೆತು ಉಸಿರಾಡಿವೆ. ಕರ್ನಾಟಕದ ದಲಿತ ಹೋರಾಟಗಾರರೊಬ್ಬರು ಜಾತಿಯ ಹೆಸರಿಡದೆ ಆರಂಭಿಸಿದ ಡಾಬಾ ಕದವಿಕ್ಕಲು ಬಹಳ ದಿನಗಳು ಬೇಕಾಗಲಿಲ್ಲ.

chammara studio

ಈ ಸನ್ನಿವೇಶದಲ್ಲಿ ಚಮಾರ್ (ಚಮ್ಮಾರ) ಎಂಬ ದಲಿತ ಜಾತಿಯ ಹೆಸರೊಂದು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿರುವ ವಿಸ್ಮಯವೊಂದು ಸದ್ದಿಲ್ಲದೆ ನಡೆದಿದೆ. ಆದರೆ ಊಟ ತಿಂಡಿಗೆ ಸಂಬಂಧಿಸಿದ್ದಲ್ಲ, ಚಮ್ಮಾರರ ಕಸುಬು ಚರ್ಮಕಾರಿಕೆಯದು. ಮುಂಬಯಿಯ ಧಾರಾವಿ ಏಷ್ಯಾದ ಎರಡನೆಯ ಅತಿ ದೊಡ್ಡ ಕೊಳೆಗೇರಿ. ಆದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ರುಪಾಯಿಯಷ್ಟು ಉದ್ಯಮ ವಹಿವಾಟಿನ ‘ಪವರ್ ಹೌಸ್’ ಎಂದು ಹೆಸರಾಗಿದೆ. ಚರ್ಮ, ಜವಳಿ, ಕುಂಬಾರಿಕೆ, ಲೋಹದ ಕೆಲಸ, ನಿರುತ್ಪಾದಕ ವಸ್ತುಗಳ ಮರುಬಳಕೆಯೇ ಮುಂತಾದ ಐದು ಸಾವಿರ ಉದ್ಯಮಗಳು, ಬಳಸಿ ಎಸೆದ ವಸ್ತುಗಳಿಂದ ಮರುಬಳಕೆಯ ಸಾಮಗ್ರಿ ತಯಾರಿಕೆ ಚಟುವಟಿಕೆಯೇ ಧಾರಾವಿಯ ಆರ್ಥಿಕ ಜೀವದುಸಿರು. ಒಂದೇ ಕೋಣೆಯಲ್ಲಿ ನಡೆಯುವ 15 ಸಾವಿರ ‘ಕಾರ್ಖಾನೆ’ಗಳು ಇಲ್ಲಿವೆ. 300 ವರ್ಷಗಳ ಹಿಂದೆ ಕಾಂಡಲುಗಿಗಳ (ಮ್ಯಾನ್ ಗ್ರೋವ್) ವಿಶಾಲ ಕೆಸರುಹೊಂಡವಾಗಿತ್ತು ಧಾರಾವಿ. ಇದೀಗ ಗಿಜಿಗುಡುವ ಹತ್ತು ಲಕ್ಷ ಮಂದಿಯ ಜನವಸತಿ. ನವನಾವೀನ್ಯತೆ ಮತ್ತು ಉದ್ಯಮಶೀಲತೆಯ ಹುಟ್ಟೂರೆಂಬ ಹೆಸರು ಗಳಿಸಿದೆ. ಝಾರಾ, ಜಿಯೋರ್ಜಿಯೋ, ಎಚ್ ಅಂಡ್ ಎಂ, ಅರ್ಮಾನಿ ಮುಂತಾದ ಹೆಸರಾಂತ ಫ್ಯಾಶನ್ ಕಂಪನಿಗಳ ಉತ್ಪಾದನಾ ಕೇಂದ್ರ. ಎರಡೂವರೆ ಲಕ್ಷ ಕೈಗಳಿಗೆ ಉದ್ಯೋಗ ನೀಡಿದೆ. ಮುಂಬಯಿಯ ಶೇ.60ರಷ್ಟು ನಿರುತ್ಪಾದಕ ‘ಕಸ’ವನ್ನು ಮರುಬಳಸಿದ ಹೊಸ ಆಕರ್ಷಕ ಉತ್ಪನ್ನಗಳು ಇಲ್ಲಿ ಅರಳುತ್ತವೆ.

‘ಚಮಾರ್ ಸ್ಟುಡಿಯೋ’ ಎಂಬುದು ಹೀಗೆ ಅರಳಿರುವ ಒಂದು ದಲಿತ ಕುಸುಮ. ತಲೆತಲಾಂತರಗಳಿಂದ ಚರ್ಮವನ್ನು ಹದ ಮಾಡುವ ಮತ್ತು ಚರ್ಮಕಾರಿಕೆಯಲ್ಲಿ ತೊಡಗಿದ ‘ಅಸ್ಪೃಶ್ಯ’ ಜಾತಿಯ ಹೆಸರು ಇದೀಗ ದೇಶದ ಸರಹದ್ದುಗಳನ್ನು ದಾಟಿ ಪಶ್ಚಿಮ ಜಗತ್ತಿಗೆ ಕಾಲಿಟ್ಟಿರುವ ದೊಡ್ಡ ಬ್ರ್ಯಾಂಡ್. ಜಗದ್ವಿಖ್ಯಾತ ಹಾಡುಗಾರ್ತಿ ರಿಹಾನ (Rihanna) ‘ಚಮಾರ್ ಸ್ಟುಡಿಯೋ’ ಉತ್ಪನ್ನವನ್ನು ಮೆಚ್ಚಿರುವುದುಂಟು.

ಉತ್ತರ ಭಾರತದಲ್ಲಿ ಚಮಾರ್, ದಕ್ಷಿಣ ಭಾರತದಲ್ಲಿ ಮಾದಿಗ ಎಂಬುವು ಬೈಗುಳದ ಪದಗಳು. 2015ರಲ್ಲಿ ಜಾರಿಗೊಳಿಸಿದ ದನದ ಮಾಂಸ (ಬೀಫ್) ನಿಷೇಧ ಅಪಾರ ಸಂಖ್ಯೆಯ ದಲಿತರು ಮುಸಲ್ಮಾನರನ್ನು ನಿರುದ್ಯೋಗಕ್ಕೆ ನೂಕಿತ್ತು. ಮುಟ್ಟಬಾರದ- ಮುಟ್ಟಿಸಿಕೊಳ್ಳಬಾರದ ಜಾತಿಯೆಂದು ದೂರವಿರಿಸುತ್ತ ಬಂದಿರುವ ಚಮ್ಮಾರರ ನೋವನ್ನು ಸನಿಹದಿಂದ ಕಂಡವರು ಸುದೀಪ್ ರಾಜಭರ್. ‘ಕಸ’ವನ್ನು ಮರುಬಳಸಿ ತಯಾರಿಸಿದ್ದ ರಬ್ಬರ್ ಸಾಮಗ್ರಿಯು ಗುಣ ಮತ್ತು ನೇಯ್ಗೆಯಲ್ಲಿ ಚರ್ಮದ ಹೋಲಿಕೆ ಇರುವುದನ್ನು ಗಮನಿಸಿದ್ದರು ಸುದೀಪ್. ಅದು 2017ನೆಯ ಇಸವಿ. ಆಗ ತಲೆಯತ್ತಿತ್ತು ‘ಚಮಾರ್ ಸ್ಟುಡಿಯೋ’.

481670062 1236323477853725 9006215105881056869 n

‘ಚಮಾರ್ ಸ್ಟುಡಿಯೋ’ದ ನಿರ್ಮಿತಿಗಳು ಮತ್ತು ಸಂಗ್ರಹಗಳು ಭಾರತದ ಸಾಮಾಜಿಕ ಅನ್ಯಾಯಗಳನ್ನು ಎತ್ತಿ ಹೇಳುವ ಹೋರಾಟದ ಬಾವುಟಗಳೇ ಆಗಿವೆ ದಲಿತ ಸಮುದಾಯದ ಕುರಿತು ನೆಲೆಸಿರುವ ಅಸ್ಪೃಶ್ಯತೆಯ ಭಾವನೆಗೆ ಉತ್ಕೃಷ್ಟ ಕುಶಲ ಕಲೆಗಾರಿಕೆಯ ಮೂಲಕ ಪರುವು ಪ್ರತಿಷ್ಠೆಯ ತಿರುವು ನೀಡುವುದು ಚಮಾರ್ ಬ್ರ್ಯಾಂಡಿನ ಗುರಿ. ಬಿಸಾಕಿದ ಟೈರುಗಳು ಟ್ಯೂಬುಗಳನ್ನು ಪುಡಿ ಮಾಡಿ ಅದಕ್ಕೆ ವರ್ಣದ್ರವ್ಯ (ಪಿಗ್ಮೆಂಟ್) ಮತ್ತು ಮರುಬಳಸಿದ ರಬ್ಬರನ್ನು ಬೆರೆಸಿ ಹಾಳೆಗಳ ರೂಪ ನೀಡಿದೆವು. ಈ ರಬ್ಬರ್ ಸಾಮಗ್ರಿಯ ಪಟ್ಟಿಗಳನ್ನು ಬ್ಯಾಗುಗಳನ್ನಾಗಿ ಹೆಣೆಯುವ ಕೆಲಸದಲ್ಲಿ ಕಮೀಲ್ ಬಾಸ್ಟಿಯೋ ಎಂಬ ಫ್ರೆಂಚ್ ವಿನ್ಯಾಸಕಾರನ ನೆರವು ಪಡೆದೆವು. ರಬ್ಬರ್ ಮಾಧ್ಯಮದ ಬಳಕೆ ಜನರ ಗ್ರಹಿಕೆಗಳನ್ನು ಬದಲಿಸಿದ್ದಲ್ಲದೆ, ಚಮಾರ್ ಸ್ಟುಡಿಯೋವನ್ನು ಸುಸ್ಧಿರ (Sustainable) ಬ್ರ್ಯಾಂಡ್ ಆಗಿಸಿತು. ಫ್ಯಾಶನ್ ಜಗತ್ತಿನಲ್ಲಿ ಚಮಾರ್ ಸ್ಟುಡಿಯೋಗೆ ಸ್ಥಾನಮಾನ ದೊರೆಯಿತು.

ಭಾರತದಲ್ಲಿ ಕೇವಲ ಶೇ.2ರಷ್ಟು ಬಳಕೆದಾರರು ಇಷ್ಟ ಪಡುತ್ತಾರೆ. ನಿಮ್ಮ ವಸ್ತುಗಳು ಬಹಳ ದುಬಾರಿ ಅಂತಾರೆ. ಆದರೆ ಯೂರೋಪಿನ ಗ್ರಾಹಕರು ಬಹಳ ಮೆಚ್ಚಿದ್ದಾರೆ. ಈ ಉತ್ಪನ್ನಗಳ ಹಿಂದಿನ ಸಾಮಾಜಿಕ ರಾಜಕೀಯ ಕಾರಣಗಳನ್ನೂ ಅವರು ತಿಳಿದು ಪ್ರೋತ್ಸಾಹಿಸಿದ್ದಾರೆ. ನೂರಕ್ಕೆ ನೂರು ಹಸ್ತನಿರ್ಮಿತ ಉತ್ಪನ್ನಗಳು ಎಂಬ ಅಂಶವೂ ಅವರಿಗೆ ಹಿಡಿಸಿದೆ. ಚಮಾರ್ ಒಂದು ಲಕ್ಷುರಿ ಬ್ರ್ಯಾಂಡ್ ಎಂದು ಅವರು ಪರಿಗಣಿಸಿದ್ದಾರೆ. 2024ರಲ್ಲಿ ಡಿಸೈನ್ ಮಯಾಮಿ ಫೆಸ್ಟಿವಲ್ ಅಮೆರಿಕದಲ್ಲಿ ಫ್ಲ್ಯಾಪ್ ಛೇರ್. ಕಲೆಯ ಶಕ್ತಿ. ನಮ್ಮ ಆರ್ಟ್ ವರ್ಕ್ ಇಟ್ಟಿದ್ದೆವು. ಅದರ ತಯಾರಕರು ಯಾರೆಂದೂ ರಿಹಾನಗೆ ಗೊತ್ತಿರಲಿಲ್ಲ. ಆನಂತರ ಗೊತ್ತಾಗಿರಬಹುದು. ನಾವು ಹಣ ಕೊಟ್ಟು ಅವರನ್ನು ಆ ಕುರ್ಚಿಯ ಮೇಲೆ ಕುಳ್ಳಿರಿಸಿರಲಿಲ್ಲ ಎಂಬ ವಿವರಣೆಯನ್ನು ಸುಧೀರ್ ನೀಡಿದ್ದಾರೆ.

ಚಮಾರ್ ಸ್ಟುಡಿಯೋದ ಎಲ್ಲ ಉತ್ಪನ್ನಗಳು ಹಸ್ತನಿರ್ಮಿತ. ಯಂತ್ರಗಳ ಬಳಕೆ ಇಲ್ಲ. ಹೀಗಾಗಿ ಉತ್ಪನ್ನಗಳ ಸಂಖ್ಯೆ ನೂರಾರೇ ವಿನಾ ಸಾವಿರದ ಪ್ರಮಾಣದಲ್ಲಿಲ್ಲ. ಗುಂಪಿನ ಭಾಗವಾಗುವುದು ನನಗೆ ಇಷ್ಟ ಇಲ್ಲ. ನಾವು ‘ಮಾಸ್’ ಉತ್ಪಾದನೆ ಮಾಡ್ತಿಲ್ಲ. ಉತ್ಪನ್ನಗಳ ಮೇಲೆ ಅವುಗಳನ್ನು ಮಾಡಿದ ಕರಕುಶಲಿಯ ಹೆಸರನ್ನು ನಮೂದಿಸಲಾಗುತ್ತದೆ. ಪ್ಯಾರಿಸ್ ನಲ್ಲಿ ಮೋಚಿಯನ್ನು ಕರಕುಶಲಿ ಎಂದು ಗೌರವಿಸುತ್ತಾರೆ ಸಮ್ಮಾನದಿಂದ ನೋಡುತ್ತಾರೆ. ನಮ್ಮವರೇ ಪ್ಯಾರಿಸ್ ಗೆ ಹೋಗಿ ಹಾರ್ಮೆಸ್ ಲೈನು ಹಚ್ಚಿ ಖರೀದಿಸ್ತಾರೆ. ಆದರೆ ಚಮಾರ್ ಸ್ಟುಡಿಯೋ ಉತ್ಪನ್ನಗಳು ತುಟ್ಟಿಯೆಂದು ದೂರುತ್ತಾರೆ ಎಂಬುದು ಸುಧೀರ್ ಅನಿಸಿಕೆ.

ಚಮಾರ್ ಸ್ಟುಡಿಯೋ ಹೆಸರು ಆಕಸ್ಮಿಕ ಅಲ್ಲ. ದೀರ್ಘ ಅನುಭವದಿಂದ ಬಂದದ್ದು… “ಮುಂಬೈಯಲ್ಲಿದ್ದರೂ ಉತ್ತರಪ್ರದೇಶದ ನನ್ನ ಊರಿಗೆ ಹೋಗ್ತಿರ್ತೀನಿ. ಭರ್ ಮತ್ತು ಚಮಾರರು ಚೋರರು. ಅದನ್ನು ಬಿಟ್ಟು ಇನ್ನೇನೂ ಕಿಸೀತಾರೆ ಅವರು ಅಂತ ಅವಮಾನ ಮಾಡ್ತಾರೆ. ಹಿಂಗಾಗಿ ಈ ಕೀಳೆಂದು ಜರೆಯುವ ಕಸುಬಿನ ಹೆಸರನ್ನೇ ಯಾಕೆ ಬ್ರ್ಯಾಂಡ್ ಮಾಡಬಾರದು ಅನಿಸಿತು” ಎನ್ನುತ್ತಾರೆ ಸುಧೀರ್.

ಧಾರಾವಿಯ ಈ ವಿಖ್ಯಾತ ಉದ್ಯಮ ಸಂಸ್ಥೆಗೆ ಗುರುವಾರ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಭೇಟಿ ಮತ್ತಷ್ಟು ಪ್ರಚಾರವನ್ನು ಗಳಿಸಿಕೊಟ್ಟಿದೆ. ರಾಜಭರ್ ಜೊತೆಗೆ ಚರ್ಚಿಸುವ, ದೇಶದ ದಲಿತ ಯುವಕರು ಎದುರಿಸುವ ಸವಾಲುಗಳ, ಕುಶಲಕರ್ಮಿಗಳ ಉತ್ಪಾದನಾ ಜಾಲಗಳನ್ನು ಕಟ್ಟುವಲ್ಲಿ ದಲಿತ-ಮುಸ್ಲಿಮರನ್ನು ಒಳಗೊಳ್ಳುವಿಕೆಯ ಪಾತ್ರ ಕುರಿತು ರಾಹುಲ್ ಚಿತ್ರಸಹಿತ ಟ್ವೀಟ್ ಮಾಡಿದ್ದಾರೆ.

482086798 1236324197853653 3977698619447293663 n

ಈ ದೇಶದ ಲಕ್ಷಾಂತರ ದಲಿತ ಯುವಜನರ ಬದುಕು ಮತ್ತು ಪಯಣಗಳನ್ನು ಸಾರಸಂಗ್ರಹದಲ್ಲಿ ಹೇಳುತ್ತದೆ ಚಮಾರ್ ಸ್ಟುಡಿಯೋ. ಹೊಸ ಆಲೋಚನೆಗಳ ಜೇನುಗೂಡಿನಂತೆ ಮಿಡಿಯುವ, ಯಶಸ್ಸಿಗಾಗಿ ಹಸಿದಿರುವ ಅತ್ಯಂತ ಪ್ರತಿಭಾವಂತರು ಇಲ್ಲಿದ್ದಾರೆ. ಈ ಕ್ಷೇತ್ರದ ಸಾಧಕರೊಂದಿಗೆ ಸಂಪರ್ಕ ಸಾಧಿಸಿ ಅವರೊಂದಿಗೆ ಕೈಕಲೆಸುವ ಅವಕಾಶಕ್ಕಾಗಿ ಕಾದಿದ್ದಾರೆ. ಜಾಗತಿಕ ಫ್ಯಾಶನ್ ಲೋಕದ ಪ್ರತಿಷ್ಠಿತ ಕಾರಿಡಾರುಗಳಲ್ಲಿ ಗುರುತಿಸಲಾಗುವ ಬ್ರ್ಯಾಂಡೊಂದನ್ನು ಧಾರಾವಿಯ ಕುಶಲಕರ್ಮಿಗಳು ಕಲಾವಿದರ ಜೊತೆಗೂಡಿ ಹುಟ್ಟಿ ಹಾಕಿ ಬೆಳೆಸಿದ್ದಾರೆ ಎಂದೂ ರಾಹುಲ್ ಮೆಚ್ಚುಗೆ ಪ್ರಕಟಿಸಿದ್ದಾರೆ.

ಬೀದಿ ಬದಿಯ ಮೋಚಿಗಳು, ಕಸ ಗುಡಿಸುವವರು, ಬೂಟ್ ಪಾಲಿಶ್ ವಾಲಾಗಳು, ಚರ್ಮದ ಕುಶಲಕರ್ಮಿಗಳನ್ನು ಕಲೆ ಹಾಕಿಕೊಂಡು ಬ್ಯಾಗುಗಳು, ಚಪ್ಪಲಿಗಳು, ಪೀಠೋಪಕರಣಗಳನ್ನು ನವೀನ ವಿನ್ಯಾಸಗಳಲ್ಲಿ ತಯಾರಿಸುವ ಉದ್ಯಮದ ಹೆಸರೇ ‘ಚಮಾರ್ ಸ್ಟುಡಿಯೋ’. ಈ ಬ್ಯಾಗುಗಳು, ಚಪ್ಪಲಿ ಪೀಠೋಪಕರಣಗಳೆಲ್ಲ ರಬ್ಬರುಗಳ ಕಸವನ್ನು ಕರಗಿಸಿ   ದೇಶದ ಹೊರಗೂ ಪ್ರಸಿದ್ಧವಾಗಿರುವ ಈ ಡಿಸೈನ್ ಬ್ರ್ಯಾಂಡ್‌ ಅನ್ನು ಹುಟ್ಟಿ ಹಾಕಿ, ಬೆಳೆಸಿ, ನೆಲೆಗೊಳಿಸಿರುವ ತರುಣನೇ ಸುಧೀರ್ ರಾಜಭರ್. ಕಲಾವಿದ, ವಿನ್ಯಾಸಕಾರ. ಹುಟ್ಟೂರು ಉತ್ತರಪ್ರದೇಶದ ಜೌನ್ಪುರ. ತಂದೆ ಕಾರ್ಮಿಕರಾಗಿದ್ದರು. ಸಣ್ಣದೊಂದು ಕೊಳೆಗೇರಿಯಲ್ಲಿ 10X15 ಅಳತೆಯ ಸಣ್ಣ ಜೋಪಡಿಯಲ್ಲಿ ಆರು ಮಂದಿಯ ಕುಟುಂಬ. ಶಾಲೆಯಲ್ಲಿ ಮಾಮೂಲಾಗಿ ಫೇಲಾಗುತ್ತಿದ್ದರು ಸುಧೀರ್. ಶಾಲೆಯ ಡ್ರಾಯಿಂಗ್ ಟೀಚರ್ ಪ್ರೋತ್ಸಾಹದಿಂದ ಕಲೆಯಲ್ಲಿ ಅಭಿರುಚಿ ಬೆಳೆಯಿತು. ಡಿಪ್ಲೊಮಾ ಮುಗಿಸಿದರು. ಕೊಳೆಗೇರಿಯಲ್ಲೇ ಒಂದು ಸ್ಟುಡಿಯೋ ಮಾಡಿ ಕೆಲಸ ಮಾಡಲು ಶುರು ಮಾಡಿದರು.

ದೊಡ್ಡ ದೊಡ್ಡ ಬ್ರ್ಯಾಂಡ್ ಗಳು ಧಾರಾವಿಯಲ್ಲಿ ಬಹಳ ಅಗ್ಗದ ಕೂಲಿ ಕೊಟ್ಟು ಕೆಲಸ ಮಾಡಿಕೊಳ್ಳುತ್ತಿದ್ದರು. ಈಗ ನಾವು ಚಮಾರ್ ಸ್ಟುಡಿಯೋದ ಕರಕುಶಲಿಗಳಿಗೆ ಬ್ರ್ಯಾಂಡ್, ಡಿಸೈನ್ ಏನೆಂದು ಹೇಳಿಕೊಡುತ್ತಿದ್ದೇವೆ. ಅವರಿಗೆ ಕರಕೌಶಲ್ಯ ಇದೆ, ಆದರೆ ವಿನ್ಯಾಸದಲ್ಲಿ ಹಿಂದೆ ಬಿದ್ದಿದ್ದಾರೆ. ಡೈಸೈನ್ ನಾನೇ ಮಾಡಿಕೊಡ್ತೀನಿ. ಸ್ವಂತ ಡಿಸೈನಿಂಗ್ ಹೇಗೆ ಮಾಡಬೇಕೆಂದೂ ಹೇಳಿಕೊಡ್ತೀನಿ. ಮಾರ್ಕೆಟಿಂಗ್ ಕಾನ್ಸೆಪ್ಟ್ ಕೂಡ ನಾನು ಮಾಡ್ತೀನಿ ಎಂದಿದ್ದಾರೆ ಸುಧೀರ್.

ಚಮಾರ್ ಸ್ಟುಡಿಯೋದ ಉತ್ಪನ್ನಗಳು ಜೀವಮಾನ ಪರ್ಯಂತ ಬಾಳುತ್ತವೆ. ತೊಳೆಯಲು ಸಲೀಸು, ದುರಸ್ತಿ ಸುಲಭ, ಬೆಟ್ಟದಷ್ಟು ಗಟ್ಟಿ, ಬಣ್ಣಗಳ ಬಣ್ಣಗಳ ಮೈದಾನ, ಪಾರಂಪರಿಕ ಮತ್ತು ಸಮಕಾಲೀನ ಎರಡನ್ನೂ ಬೆರೆಸಿದ ವಿನ್ಯಾಸ.  ಹೆಣ್ಣು-ಗಂಡಿನ ವ್ಯತ್ಯಾಸವಿಲ್ಲದೆ ಬಳಸಬಹುದು.  ಎಂದು ಚಮಾರ್ ಸ್ಟುಡಿಯೋದ ಜಾಲತಾಣದಲ್ಲಿ ಬಣ್ಣಿಸಲಾಗಿದೆ. ಬೋರಾ, ಝೋಲಾ, ಕಿಸಾ ಬಟವಾ ಹೀಗೆ ಉತ್ಪನ್ನಗಳನ್ನು ಹಳ್ಳಿಗಾಡಿನ ಹೆಸರುಗಳಿಂದಲೇ ಕರೆಯಲಾಗಿದೆ.

481662358 1236324104520329 5423235702360040686 n

ರಾಜಸ್ತಾನದ ಶೇಖಾವತಿಯ ಬ್ರಾಹ್ಮಣ ವಸತಿ ಪ್ರದೇಶದಲ್ಲಿ ನನ್ನದೊಂದು ಹವೇಲಿಯಿದೆ. (ಹಳೆಯ ಕಾಲದ ದೊಡ್ಡ ಮನೆ…ಬಂಗಲೆ) ನಾನು ಯಾವ ಜಾತಿಗೆ ಸೇರಿದವನೆಂಬ ಕೆಟ್ಟ ಕುತೂಹಲ… ಎಲ್ಲರೂ ನನ್ನ ಜಾತಿ ವಿಚಾರಿಸುವವರೇ. ರಾಜಸ್ತಾನದ ಪ್ರತಿ ಎರಡನೆಯ ವ್ಯಕ್ತಿ ನನ್ನ ಜಾತಿ ಯಾವುದೆಂದು ಕೇಳಿದ್ದಿದೆ. ಮುಂಬಯಿಯಲ್ಲಿ ಜಾತಿ ವಿಚಾರಿಸುವಷ್ಟು ಟೈಮು ಯಾರಿಗೂ ಇಲ್ಲ. ಶೇಖಾವತಿಯಲ್ಲಿ ನನ್ನ ಜಾತಿ ಚಮಾರ್ ಅಂತ ಗೊತ್ತಾದ ಮೇಲೆ ಜನ ದೂರ ಆದರು. ಕಲಾವಿದರು, ವಿನ್ಯಾಸಕಾರರು, ಕರಕುಶಲಿಗಳು ಕಲೆತು ಆಲೋಚಿಸುವ ಕೆಲಸ ಮಾಡುವ ಒಂದು ವಸತಿ ವ್ಯವಸ್ಥೆಯನ್ನು ಅಲ್ಲಿ ಮಾಡಬೇಕೆಂದಿದ್ದೇನೆ, ಈ ಹವೇಲಿ ಮೇಲೆ ‘ಹವೇಲಿ ಚಮಾರ್’ ಅಂತ ದೊಡ್ಡದಾಗಿ ಬರೆಯಬೇಕೆಂದಿದ್ದೇನೆ. ಪ್ರಾಣಿ ಹತ್ಯೆಯಿಲ್ಲದ ಕರಕೌಶಲ್ಯ ನಮ್ಮದು ಎಂದು ಮನ ಒಲಿಸುವ ಪ್ರಯತ್ನ ಮಾಡ್ತೀನಿ. ಚಮಾರ್ ಎಂಬುದನ್ನು ಒಂದು ‘ಬ್ರ್ಯಾಂಡ್’ ಆಗಿ ನೋಡಿ ಜಾತಿಯಾಗಿ ನೋಡಬೇಡಿ ಅಂತೀನಿ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸುಧೀರ್.

ಬ್ರಿಟಿಷರ ಕಾಲದ ಭಾರತೀಯ ಸೇನೆಯಲ್ಲಿ ಚಮಾರ್ ರೆಜಿಮೆಂಟ್ ಎಂಬ ಪ್ರತ್ಯೇಕ ತುಕಡಿಯಿತ್ತು. ಉತ್ತರಪ್ರದೇಶದ ನಗೀನಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಆಝಾದ್ ರಾವಣ್ ತಮ್ಮ ಹಳ್ಳಿಯ ಮುಂದೆ ದಿ ಗ್ರೇಟ್ ಚಮಾರ್ ಎಂಬ ಬೋರ್ಡ್ ಬರೆಯಿಸಿ ಹಾಕಿದ್ದಿದೆ.

ಮಾಂಸ ಸೇವನೆ ಸಲ್ಲದೆಂದು ಸಾರುವ ‘ಶ್ರೇಷ್ಠ’ ಜಾತಿಗಳು ಭಾರೀ ಬೀಫ್ ರಫ್ತು ಕಂಪನಿಗಳನ್ನು ನಡೆಸಬಹುದು. ಆದರೆ ‘ಕನಿಷ್ಠ’ ಜಾತಿಗಳ ಹೊಟೆಲುಗಳು ನಡೆಯುವುದು ಅಸಾಧ್ಯ. ‘ಚಮಾರ್ ಸ್ಟುಡಿಯೋ’ ಹೆಸರಿಟ್ಟುಕೊಳ್ಳುವುದು ಬಿಡುವುದು ನಿಮ್ಮ ಹಣೆಬರೆಹ. ಆದರೆ ಆಹಾರದ ಹೊಲೆ ಮಡಿಮೈಲಿಗೆಗಳ ತಂಟೆಗೆ ಬರಬೇಡಿ ಎಂಬುದು ಬ್ರಾಹ್ಮಣ್ಯವಾದಿಗಳು ವಿಧಿಸಿರುವ ಅಲಿಖಿತ ನಿಯಮ.

ಘನತೆಯ ಬದುಕಿನ ನಿರಾಕರಣೆಯನ್ನು ಎದುರಿಸುತ್ತಲೇ ದೈನ್ಯ- ಧಾಡಸಿಯ ನಡುವೆ ತುಯ್ಡಾಡುತ್ತಿರುವ ಈ ತಳ ಜಾತಿಗಳು ಇತ್ತೀಚಿನ ದಶಕಗಳಲ್ಲಿ ಅಲ್ಲಲ್ಲಿ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿವೆ.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X