ವಿಷಮ ಭಾರತ | ‘ಆಪ್’ ಹೊಸ ಹುಟ್ಟು ಪಡೆವುದು ಸಾಧ್ಯವೇ? ಹೌದಾದರೆ ಅದು ಹೇಗೆ?

Date:

Advertisements

ಯಮುನಾ ನದಿಯನ್ನು ಸ್ವಚ್ಛಗೊಳಿಸುವ, ದೆಹಲಿಯ ಎಲ್ಲ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ದೆಹಲಿಯ ರಸ್ತೆಗಳನ್ನು ದುಸ್ಥಿತಿಯಿಂದ ಮೇಲೆತ್ತುವ ಮೂರು ಭರವಸೆಗಳನ್ನು ತಮ್ಮಿಂದ ಈಡೇರಿಸಲು ಆಗಿಲ್ಲ ಎಂಬುದಾಗಿ ಅರವಿಂದ್ ಕೇಜ್ರೀವಾಲ್ ವಿಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದರು. ತುಂಬಿ ಹರಿದ ಚರಂಡಿಗಳು, ಎತ್ತದೆ ಉಳಿಸಿದ ಕಸದ ರಾಶಿಗಳು, ಚಿಂದಿಯಾದ ರಸ್ತೆಗಳು ಆಮ್ ಆದ್ಮೀ ಪಾರ್ಟಿಯ ಸೋಲಿನ ದಾರಿಯನ್ನು ಮತ್ತಷ್ಟು ಸಲೀಸು ಮಾಡಿದವು.


ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮೀ ಪಾರ್ಟಿಯ ಸೋಲು ಉಳಿದೆಲ್ಲಕ್ಕಿಂತ ಹೆಚ್ಚಾಗಿ ಪರ್ಯಾಯ ರಾಜಕಾರಣದ ಪ್ರಯೋಗಕ್ಕೆ ಬಿದ್ದ ಭಾರೀ ಹೊಡೆತ ಎಂದು ಬಗೆಯಲಾಗಿದೆ. ಮೊದಲ ಹೊಡೆತಗಳನ್ನು ಖುದ್ದು ಆಮ್ ಆದ್ಮೀ ಪಾರ್ಟಿ ತನಗೆ ತಾನೇ ಕೊಟ್ಟುಕೊಂಡಿತ್ತು.

ವಿಚಿತ್ರವಾದರೂ ನಿಜ ಎನ್ನುತ್ತಾರಲ್ಲ, ಹಾಗೆ ಆಮ್ ಆದ್ಮೀ ಪಾರ್ಟಿ ತನ್ನ ಸೋಲಿನ ಗುಂಡಿಯನ್ನು ತಾನೇ ತೋಡಿಕೊಳ್ಳತೊಡಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಯಥಾಶಕ್ತಿ ಮಣ್ಣೆಳೆದಿವೆ ಅಷ್ಟೇ. ಹೊಸ ನುಡಿಗಟ್ಟಿನ ರಾಜಕಾರಣದ ಭರವಸೆ ನೀಡಿದ್ದ, ಹೊಸ ಗಾಳಿ-ಹೊಸ ಬೆಳಕಿನ ಆಸೆ ಹುಟ್ಟಿಸಿದ್ದ ಪಕ್ಷವೊಂದು ಶೀಷ್ ಮಹಲ್- ಅಬಕಾರಿ ಹಗರಣಗಳಂತಹ ಆರೋಪ ಹೊತ್ತು ಪತನದತ್ತ ಪಯಣಿಸಿದ ದುರಂತದ ಕತೆಯಿದು.

ಹೊಸ ನುಡಿಗಟ್ಟಿನ ರಾಜಕಾರಣದ ಭರವಸೆ ಮೂಡಿಸಿದ್ದ ಈ ಹೊಸ ಪಕ್ಷ ಒಂದು ಹಂತದಲ್ಲಿ ದೇಶವ್ಯಾಪಿ ಆಗಬಲ್ಲದೆಂಬ ವಿಶ್ವಾಸ ಹುಟ್ಟಿಸಿತ್ತು. ಆದರೆ ಈ ವಿಶ್ವಾಸ ಬಹು ಕಾಲ ಉಳಿಯಲಿಲ್ಲ. ಹುದ್ದೆ ಅಧಿಕಾರಗಳ ರಕ್ತದ ರುಚಿ ಸಿಗುತ್ತಿದ್ದಂತೆ ಆಪ್ ಕೂಡ ತಾನು ತೊರೆದಿದ್ದ ಬಂಗಲೆ, ಭತ್ಯೆಗಳು, ಕಾರು, ಕೆಂಪುದೀಪ, ಮೈಗಾವಲುಗಳ ತೆವಲುಗಳನ್ನು ಹೊಸ ಬಾಯಾರಿಕೆಯಿಂದ ಅಪ್ಪಿಕೊಂಡಿತು. ಆದರ್ಶಗಳನ್ನು ಗಾಳಿಗೆ ತೂರಿತು. ಬಿಜೆಪಿ, ಕಾಂಗ್ರೆಸ್ ಮತ್ತಿತರೆ ಪಕ್ಷಗಳಿಗಿಂತ ತಾನು ಭಿನ್ನವೇನೂ ಅಲ್ಲ ಎಂದು ತೋರಿಸಿತು. ಸ್ವತಂತ್ರ ಸೈದ್ಧಾಂತಿಕ ನೆಲೆಯನ್ನೇ ಕಂಡುಕೊಳ್ಳಲಿಲ್ಲ. ಇಂತಹ ದಿಕ್ಕಿನಲ್ಲಿ ಕೈ ಹಿಡಿದು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಅಡ್ಮಿರಲ್ ರಾಮದಾಸ್, ಮೇಧಾ ಪಾಟ್ಕರ್, ಕುಮಾರ್ ವಿಶ್ವಾಸ್ ಮುಂತಾದವರನ್ನು ಹೊರಕ್ಕೆ ಎಸೆಯಿತು. ಕೇಜ್ರೀವಾಲ್ ಅವರು ಪಕ್ಷದ ಸರ್ವಾಧಿಕಾರಿಯಾಗಿ ಮೆರೆದರು. ಅವಕಾಶವಾದವೇ ಸಿದ್ಧಾಂತವಾಯಿತು. ಮೆದು ಹಿಂದುತ್ವವನ್ನು ತಬ್ಬಿಕೊಂಡ ಈ ಪಕ್ಷ ದೆಹಲಿ ಕೋಮುಗಲಭೆಗಳಲ್ಲಿ ಬಟ್ಟಬಯಲಾಯಿತು. ಬಿಜೆಪಿಯ ಜನವಿರೋಧಿ ನೀತಿಗಳ ಟೀಕೆಯನ್ನೇ ನಿಲ್ಲಿಸಿತು. ಹೆಚ್ಚೂ ಕಡಿಮೆ ಬಿಜೆಪಿಯ ಪೇಲವ ನೆರಳಾಗಿ ಹೋಯಿತು.

ಆದರೆ ಮೋಶಾ ವ್ಯವಸ್ಥೆ ಹೊಂದಿರುವ ಸರ್ಕಾರಿ ಏಜೆನ್ಸಿಗಳ ಮೇಲಿನ ಉಕ್ಕಿನ ಹಿಡಿತ, ಸ್ವಾಯತ್ತ- ಸಾಂವಿಧಾನಿಕ ಸಂಸ್ಥೆಗಳನ್ನೂ ತನ್ನ ತಾಳಕ್ಕೆ ಕುಣಿಸುವ ಸಾಮರ್ಥ್ಯ, ಅಪಾರ ಹಣಬಲ, ಮುಖ್ಯಧಾರೆಯ ಗೋದಿ ಮೀಡಿಯಾದ ಗುಲಾಮನಿಷ್ಠೆಯ ಅನುಕೂಲ ಕೇಜ್ರೀವಾಲ್ ಪಾರ್ಟಿಗೆ ಇರಲಿಲ್ಲ. ಬದಲಾಗಿ ಈ ಎಲ್ಲ ‘ಅನುಕೂಲಾಸ್ತ್ರ’ಗಳನ್ನು ಮೋಶಾ ಜೋಡಿ ಆಮ್ ಆದ್ಮಿ ಪಾರ್ಟಿಯ ಮೇಲೆಯೂ ಪ್ರಯೋಗಿಸಿತು ಎಂಬುದು ನಿಜ.

ಉತ್ತಮ ಆಡಳಿತದ ಮಾದರಿಯಾದೀತು ಎಂಬ ಆಸೆ ಉಳಿದಿತ್ತು. ಶಿಕ್ಷಣ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಆಪ್ ಸಾಧನೆ ಉತ್ತಮ. ಆದರೆ ಒಂದು ಪಕ್ಷ ಜನಮನದಲ್ಲಿ ಉಳಿದು ಬೆಳೆಯಲು ಅಷ್ಟು ಸಾಕೇ?

ಪಕ್ಷದ ಈ ಸೋಲಿಗೆ ಕೇಜ್ರೀವಾಲ್ ಅವರೇ ಮುಖ್ಯ ಕಾರಣ. ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಪರ್ಯಾಯ ರಾಜಕಾರಣ ಆಪ್ ನ ಮೂರು ಮುಖ್ಯ ಸ್ಥಾಪಕ ತತ್ವಗಳಾಗಿದ್ದವು. ಈ ತತ್ವಗಳನ್ನು ಕೇಜ್ರೀವಾಲ್ ಸಾರಾಸಗಟಾಗಿ ತ್ಯಜಿಸಿದರು. ಪಕ್ಷದ ಸರ್ವಾಧಿಕಾರಿಯಾದರು. ತಮಗಾಗಿ 45 ಕೋಟಿ ರುಪಾಯಿ ವೆಚ್ಚದ ಶೀಶ್ ಮಹಲ್ ಕಟ್ಟಿಕೊಂಡರು. ವಿಲಾಸೀ ಕಾರುಗಳಲ್ಲಿ ತಿರುಗಾಡತೊಡಗಿದರು. ಆಪ್ ಅನ್ನು ಭ್ರಷ್ಟಾಚಾರಿ ಪಕ್ಷ ಆಗಿಸಿದರು ಎಂದು ಭೂಷಣ್ ಟೀಕಿಸಿದ್ದಾರೆ.

ದೆಹಲಿಯ ನೆರೆಹೊರೆಯ ಪಂಜಾಬಿನಲ್ಲೂ ಆಪ್ ಅಧಿಕಾರದಲ್ಲಿದೆ. ದೆಹಲಿಯಲ್ಲಿ ಕೇಜ್ರೀವಾಲ್ ಸೋಲಿನ ನಂತರ ಪಂಜಾಬಿನ ಭಗವಂತ್ ಸಿಂಗ್ ಮಾನ್ ಸರ್ಕಾರ ಭಾರೀ ಒತ್ತಡಕ್ಕೆ ಸಿಲುಕಿದೆ. ಪಂಜಾಬಿನ ಆಪ್ ಸರ್ಕಾರದ 32ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಆದರೆ ಆಪ್ ಸರ್ಕಾರವನ್ನು ನಾವು ಬೀಳಿಸುವುದಿಲ್ಲ. ಬಿಜೆಪಿಯೇ ಆ ಕೆಲಸ ಮಾಡುತ್ತದೆ ಎಂದಿದ್ದಾರೆ ಅಲ್ಲಿನ ವಿಧಾನಸಭೆಯ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಂದಾಳು ಪ್ರತಾಪ್ ಸಿಂಗ್ ಬಜ್ವಾ. ಪಂಜಾಬ್ ವಿಧಾನಸಭೆಯ 117 ಸದಸ್ಯಬಲದಲ್ಲಿ ಆಪ್ 92 ಮಂದಿಯ ಭಾರೀ ಬಹುಮತ ಹೊಂದಿದೆ. ಗುಜರಾತ್ ಮತ್ತು ಹರಿಯಾಣದಲ್ಲಿ ಹೆಜ್ಜೆ ಊರುವ ಆಪ್ ಉದ್ದೇಶಗಳು ಫಲ ನೀಡಿಲ್ಲ.

Advertisements
ಮೋದಿ ಶಾ

ಇನ್ನು ದೆಹಲಿ ಚುನಾವಣೆಯ ಅಂಕಿಅಂಶಗಳ ವಿವರಗಳಿಗೆ ಮರಳೋಣ. ಸತತ 27 ವರ್ಷಗಳ ಸೋಲಿನ ನಂತರ ದೇಶದ ರಾಜಧಾನಿಯಲ್ಲಿ ಗೆಲುವನ್ನು ಕಂಡಿದೆ ಬಿಜೆಪಿ. ದೇಶವನ್ನು ಗೆದ್ದರೂ ಅದರ ರಾಜಧಾನಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾಗಿತ್ತು ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ. ಹೀಗಾಗಿ ದೆಹಲಿಯನ್ನು ಗೆಲ್ಲುವುದು ಬಿಜೆಪಿಗೆ ಹೆಚ್ಚಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮೋದಿ-ಶಾ ಜೋಡಿಯ ಅಹಮಿಕೆಯನ್ನು ತಣಿಸುವುದಾಗಿತ್ತು.

ಬಿಜೆಪಿ ‘ದೀಪ’ದ ಕೆಳಗಿನ ಕತ್ತಲೆಯಾಗಿ ಉಳಿದು ಹೋಗಿತ್ತು ರಾಜಧಾನಿ ದೆಹಲಿ. ಹಾಗೆ ನೋಡಿದರೆ ದೆಹಲಿಯ ಲೋಕಸಭಾ ಸ್ಥಾನಗಳ ಸಂಖ್ಯೆ ಕೇವಲ ಏಳು. ಏಳರ ಪೈಕಿ ಬಹುತೇಕ ಎಲ್ಲವನ್ನೂ ಗೆಲ್ಲುತ್ತಿದ್ದ ಬಿಜೆಪಿ ಈ ಸಲ ಏಳಕ್ಕೆ ಏಳನ್ನೂ ಗೆದ್ದಿತ್ತು. ಗೆಲ್ಲಲು ಉಳಿದದ್ದು ಒಂದೇ, ಅದು ದೆಹಲಿ ವಿಧಾನಸಭೆ.

ಒಟ್ಟು 70ರ ಪೈಕಿ 48 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ, ನಾಲ್ಕನೆಯ ಸಲ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದ್ದ ಆಮ್ ಆದ್ಮೀ ಪಾರ್ಟಿಗೆ ದಕ್ಕಿರುವ ಸೀಟುಗಳು 22 ಮಾತ್ರ. ದಲಿತರು ಮತ್ತು ಮುಸಲ್ಮಾನರು ಈ ಚುನಾವಣೆಯಲ್ಲಿ ಬಹುತೇಕ ಆಪ್ ಜೊತೆ ನಿಂತಿರುವುದು ಕಂಡು ಬಂದಿದೆ. 12 ಮೀಸಲು ಸೀಟುಗಳ ಪೈಕಿ ಎಂಟನ್ನು ಮತ್ತು ಏಳು ಮುಸ್ಲಿಮ್ ಬಹುಳ ಸೀಟುಗಳ ಪೈಕಿ ಆರನ್ನು ಗೆದ್ದಿದೆ ಆಪ್.

ಈ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆಯ ಪ್ರಮಾಣ ಶೇ.38.5ರಿಂದ ಶೇ.45.6ಕ್ಕೆ ಏರಿದೆ. ಕಳೆದ ಸಲಕ್ಕಿಂತ 44 ಹೆಚ್ಚು ಸೀಟುಗಳನ್ನು ಗೆದ್ದಿದೆ. ಆಮ್ ಆದ್ಮೀ ಪಾರ್ಟಿಯ ಮತಗಳಿಕೆ ಶೇ.53.5ರಿಂದ ಶೇ.43.5ಕ್ಕೆ ಕುಸಿದಿದೆ. ಸೋಲು ಗೆಲುವಿನ ಅಂತರದ ಪ್ರಮಾಣ ಶೇ.2.1 ಮಾತ್ರ.

ಅರವಿಂದ್ ಕೇಜ್ರೀವಾಲ್ ಸೇರಿದಂತೆ ಆಮ್ ಆದ್ಮೀ ಪಾರ್ಟಿಯ ಹಲವು ದಿಗ್ಗಜರು ಮಣ್ಣು ಮುಕ್ಕಿದ್ದಾರೆ. ಇವರ ಸೋಲಿನ ಅಂತರವು ಆಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗಳಿಸಿರುವ ಮತಗಳಿಗಿಂತ ಕಡಿಮೆ. ಇಂತಹ 14 ಕ್ಷೇತ್ರಗಳಿವೆಯೆಂದು ಗುರುತಿಸಲಾಗಿದೆ. ಕೇವಲ ವೋಟುಗಳ ಗಣಿತವನ್ನು ಮಾತ್ರವೇ ಗಣನೆಗೆ ತೆಗೆದುಕೊಂಡರೆ ಕಾಂಗ್ರೆಸ್ ಸ್ಪರ್ಧೆಯ ಕಾರಣ 14 ಕ್ಷೇತ್ರಗಳಲ್ಲಿ ಆಪ್ ಸೋತಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಗಳಿಸಿದೆ. ಆದರೆ ಈ ಲೆಕ್ಕಾಚಾರವು ಆಮ್ ಆದ್ಮೀ ಪಾರ್ಟಿ ಮತ್ತು ಕಾಂಗ್ರೆಸ್ ಚುನಾವಣಾ ಗೆಳೆತನ ಬೆಳೆಸಿ ಸ್ಪರ್ಧಿಸಿದ್ದರೆ ಬಿಜೆಪಿ ಸೋಲುತ್ತಿತ್ತು ಎಂದು ಸೂಚಿಸುವುದಿಲ್ಲ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು. ಆದರೆ ಎರಡೂ ಪಕ್ಷಗಳು ಚುನಾವಣಾ ಒಪ್ಪಂದ ಮಾಡಿಕೊಂಡಿದ್ದಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಇನ್ನಷ್ಟು ತಗ್ಗುತ್ತಿತ್ತು ಎಂಬುದು ನಿಶ್ಚಿತವಿತ್ತು. ಜೊತೆಗೆ ‘ಇಂಡಿಯಾ’ ಬಣದ ಒಗ್ಗಟ್ಟಿನ ಸಕಾರಾತ್ಮಕ ಸಂದೇಶ ಹೊರಹೊಮ್ಮುತ್ತಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದು ಮೊದಲು ಸಾರಿದ್ದು ಆಮ್ ಆದ್ಮೀ ಪಾರ್ಟಿಯೇ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಆಪ್ ಸರ್ಕಾರದ ಅಂದಿನ ಹಿರಿಯ ಸಚಿವ ಗೋಪಾಲ ರಾಯ್ ಈ ತೀರ್ಮಾನವನ್ನು ಬಹಿರಂಗಪಡಿಸಿದ್ದರು. ಸತತ ಮೂರನೆಯ ಸಲವೂ ಕಾಂಗ್ರೆಸ್ ಒಂದೂ ಸೀಟು ಗೆಲ್ಲಲು ಸಾಧ್ಯವಾಗಿಲ್ಲ. ಈ ಪಕ್ಷದ ಮತಪ್ರಮಾಣದಲ್ಲಿ ಗಣನೀಯ ಹೆಚ್ಚಳವೂ ಕಂಡು ಬಂದಿಲ್ಲ.

Untitled 8
ನೂತನ ಮುಖ್ಯಮಂತ್ರಿ ರೇಖಾ ಗುಪ್ತ

ಪ್ರಬಲ ಜಾಟ್ ಜನಾಂಗಕ್ಕೆ ಸೇರಿದ ಬಿಜೆಪಿಯ ಪ್ರವೇಶ್ ವರ್ಮಾ (ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಮಗ), ನವದೆಹಲಿ ಕ್ಷೇತ್ರದಲ್ಲಿ ಕೇಜ್ರೀವಾಲ್ ಅವರನ್ನು ಸೋಲಿಸಿ ‘ದೈತ್ಯಸಂಹಾರಿ’ ಎನಿಸಿದ್ದಾರೆ. ವರ್ಮಾ ಗೆಲುವಿನ ಅಂತರ 4,089 ಮತಗಳು. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳು ಸಂದೀಪ್ ದೀಕ್ಷಿತ್ (ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮಗ) 4,568 ಮತಗಳನ್ನು ಗಳಿಸಿ ಮೂರನೆಯ ಸ್ಥಾನದಲ್ಲಿದ್ದಾರೆ.

ದೇಶವಿಭಜನೆಯ ಕಾಲದಲ್ಲಿ ಪಾಕಿಸ್ತಾನಿ ಹಿಂದೂಗಳು ವಲಸೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ ಕ್ಷೇತ್ರ ಜಂಗಪುರ. ಕೇಜ್ರೀವಾಲ್ ಅವರ ಬಲಗೈ ಎನಿಸಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಟಪಡ್ ಗಂಜ್ ಕ್ಷೇತ್ರದಿಂದ ಈ ಕ್ಷೇತ್ರಕ್ಕೆ ವಲಸೆ ಬಂದು ಸ್ಪರ್ಧಿಸಿದ್ದರು. ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಕೇವಲ 675 ಮತಗಳಿಂದ ಸೋತರು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಫರ್ಹಾದ್ ಸೂರಿ ಗಳಿಸಿದ ಮತಗಳು 7,350.

ಆಪ್ ನ ಮತ್ತೊಬ್ಬ ಹಿರಿಯ ಹುದ್ದರಿ ಸೌರಭ್ ಭಾರದ್ವಾಜ್ ಕೂಡ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋತರು. ಸೋಲಿನ ಅಂತರ 3,188. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗರ್ವಿತ್ ಸಿಂಘ್ವಿ ಗಳಿಸಿದ ಮತಗಳು 6,711. ಇದೇ ರೀತಿ ಮಾಳವೀಯ ನಗರದಲ್ಲಿ ಸೋಮನಾಥ ಭಾರತಿ ಬಿಜೆಪಿ ಪ್ರತಿಸ್ಪರ್ಧಿಯ ವಿರುದ್ಧ ಸೋತ ಅಂತರ 2,131 ಮತಗಳು. ಕಾಂಗ್ರೆಸ್ ಅಭ್ಯರ್ಥಿ ಗಳಿಸಿದ ಮತಗಳು 6,770.

ಲೋಕಸಭೆ ಚುನಾವಣೆಗಳಲ್ಲಿ ಹಿನ್ನಡೆಯ ನಂತರ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ತಪ್ಪುಗಳ ತಿದ್ದಿಕೊಂಡು ಆಡಳಿತವಿರೋಧಿ ಅಲೆಯನ್ನೂ ಕಟ್ಟಿ ಹಾಕಿತ್ತು ಬಿಜೆಪಿ. ಈ ಗುರಿ ಸಾಧನೆಗೆ ಬಳಸಿದ ದಾರಿಗಳೇನು, ಅವು ನೈತಿಕವಾಗಿದ್ದವೇ ಎಂಬುದು ಬೇರೆಯೇ ಚರ್ಚೆಯ ವಿಷಯ.

ಹಿರಿಯ ರಾಜಕೀಯ ವಿಶ್ಲೇಷಕರ ಪ್ರಕಾರ ಇದು ಬಿಜೆಪಿಯ ಗೆಲುವಿಗಿಂತ ಹೆಚ್ಚಾಗಿ ಆಮ್ ಆದ್ಮೀ ಪಾರ್ಟಿಯ ಸೋಲು. ಪ್ರಧಾನಿ ಮೋದಿಯವರೇ ಮುನ್ನಡೆಸಿದ ಬಿಜೆಪಿ ಚುನಾವಣಾ ಪ್ರಚಾರದ ಸಾರಾಂಶ ಸಂದೇಶ- ಆಪ್ ನ ಜನಕಲ್ಯಾಣ ಯೋಜನೆಗಳ ಮುಂದುವರಿಕೆ-ಡಬಲ್ ಎಂಜಿನ ಸರ್ಕಾರ- ಆಪ್ ನ ‘ಭ್ರಷ್ಟಾಚಾರ’ದ ವಿರುದ್ಧ ಕ್ರಮ ಜರುಗಿಸುವುದೇ ಆಗಿತ್ತು.

ಸಂವಿಧಾನದ 239 ಎಎ ಅನುಚ್ಛೇದದ ಪ್ರಕಾರ ಸೇವೆಗಳು (ಮುಖ್ಯವಾಗಿ ಐ.ಎ.ಎಸ್. ಅಧಿಕಾರಿಗಳ ನಿಯುಕ್ತಿ ಮತ್ತು ವರ್ಗಾವಣೆ, ಬಡ್ತಿ, ಅಮಾನತು)  ಜಮೀನು, ಪೊಲೀಸ್ ವ್ಯವಸ್ಥೆಯ ಮೇಲೆ ದೆಹಲಿ ಸರ್ಕಾರದ ನಿಯಂತ್ರಣ ಇಲ್ಲ. ಅವುಗಳನ್ನು ಕೇಂದ್ರ ಸರ್ಕಾರ ತನ್ನ ವಶದಲ್ಲಿ ಇರಿಸಿಕೊಂಡಿದೆ. ಈ ಕುರಿತು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಆಪ್ ನಡುವೆ ಇತ್ತೀಚಿನ ತನಕ ದೀರ್ಘ ಸಮರವೇ ನಡೆದಿತ್ತು. ಐಎಎಸ್ ಅಧಿಕಾರಿಗಳ ನಿಯುಕ್ತಿ ಮತ್ತು ವರ್ಗಾವಣೆ ಅಧಿಕಾರ ದೆಹಲಿ ಸರ್ಕಾರಕ್ಕಿದೆ ಎಂದು ಸುಪ್ರೀಮ್ ಕೋರ್ಟು 2023ರಲ್ಲಿ ತೀರ್ಪು ನೀಡಿತ್ತು. ಆದರೆ ಮೋದಿ ಸರ್ಕಾರ ತಕ್ಷಣವೇ ಕಾಯಿದೆಗೆ ತಿದ್ದುಪಡಿ ತಂದು ಈ ಅಧಿಕಾರವನ್ನು ಪುನಃ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

ವಿಶೇಷವಾಗಿ ಹಾಲಿ ಉಪರಾಜ್ಯಪಾಲ ವಿ.ಕೆ.ಸಕ್ಸೇನ ಅವರ ಅಧಿಕಾರಾವಧಿಯಲ್ಲಿ ಬಿಜೆಪಿ-ಆಪ್ ಸಮರ ತಾರಕಕ್ಕೆ ಏರಿತ್ತು. ಆಪ್ ನ ಅಬಕಾರಿ ನೀತಿ ಹಗರಣ ಮತ್ತು ಕೇಜ್ರೀವಾಲ್ ಅವರ ಅಧಿಕೃತ ಮುಖ್ಯಮಂತ್ರಿ ನಿವಾಸ ಶೀಷ್ ಮಹಲ್ ನ  ನವೀಕರಣದ ‘ದುಂದುವೆಚ್ಚ’ದ ಆಪಾದನೆಗಳನ್ನು ಎಬ್ಬಿಸಿ ನಿಲ್ಲಿಸಿತ್ತು ಬಿಜೆಪಿ. ದೇಶದ ರಾಜಧಾನಿ ದೆಹಲಿ ನಿಜಾರ್ಥದಲ್ಲಿ ಒಂದು ‘ಅರ್ಧರಾಜ್ಯ’ ಮತ್ತು ಒಂದು ನಗರ ರಾಜ್ಯವೂ ಹೌದು. 2011ರ ಜನಗಣತಿಯ ಪ್ರಕಾರ ದೆಹಲಿ ರಾಜಧಾನಿ ಕ್ಷೇತ್ರದ ಒಟ್ಟು ಜನಸಂಖ್ಯೆ  1.68 ಕೋಟಿ. 2025ರ ಹೊತ್ತಿಗೆ ಈ ಸಂಖ್ಯೆ 3.36 ಕೋಟಿ ತಲುಪಿದೆ ಎಂದು ಅಂದಾಜು ಮಾಡಲಾಗಿದೆ. ಇದು ದೇಶದ ಹೆಚ್ಚು ಜನಸಾಂದ್ರತೆಯ ಸೀಮೆಗಳಲ್ಲೊಂದು. ಪೊಲೀಸ್ ವ್ಯವಸ್ಥೆ, ಜಮೀನು ಹಾಗೂ ಸೇವೆಗಳು ತನ್ನ ನಿಯಂತ್ರಣದಲ್ಲಿ ಇರುವ ಕಾರಣ ‘ಡಬಲ್ ಎಂಜಿನ್’ ಹೊಂದಿದ, ಆಮ್ ಆದ್ಮೀ ಪಾರ್ಟಿಗಿಂತ ಉತ್ತಮವಾದ ಆಡಳಿತ ನೀಡಿಕೆಯ ಭರವಸೆಯನ್ನು ಬಿಜೆಪಿ ಇತ್ತಿತ್ತು. ಉಚಿತ ಅಥವಾ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಯೋಜನೆಗಳು’ ಎಂದು ಟೀಕಿಸುತ್ತ ಬಂದಿದ್ದ ಪ್ರಧಾನಮಂತ್ರಿ ದೆಹಲಿ ಚುನಾವಣೆಯಲ್ಲಿ ಎಚ್ಚರ ವಹಿಸಿದರು. ಆಪ್ ಆರಂಭಿಸಿದ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂಬ ಭರವಸೆ ನೀಡಿದರು. ಜೊತೆಗೆ ‘ಹಿಂದೂ ಅಸ್ಮಿತೆ’ಯ ಬೋನಸ್ ನ್ನೂ ಸಾರಿದರು. ಪರಿಣಾಮವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ಯೋಜನೆಗಳನ್ನು ನಿಲ್ಲಿಸಿಬಿಡುತ್ತದೆ ಎಂಬ ಆಪ್ ನ ಪ್ರಚಾರ ಪೊಳ್ಳಾಯಿತು.

ಯಮುನಾ ನದಿಯನ್ನು ಸ್ವಚ್ಛಗೊಳಿಸುವ, ದೆಹಲಿಯ ಎಲ್ಲ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ದೆಹಲಿಯ ರಸ್ತೆಗಳನ್ನು ದುಸ್ಥಿತಿಯಿಂದ ಮೇಲೆತ್ತುವ ಮೂರು ಭರವಸೆಗಳನ್ನು ತಮ್ಮಿಂದ ಈಡೇರಿಸಲು ಆಗಿಲ್ಲ ಎಂಬುದಾಗಿ ಅರವಿಂದ್ ಕೇಜ್ರೀವಾಲ್ ವಿಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದರು. ತುಂಬಿ ಹರಿದ ಚರಂಡಿಗಳು, ಎತ್ತದೆ ಉಳಿಸಿದ ಕಸದ ರಾಶಿಗಳು, ಚಿಂದಿಯಾದ ರಸ್ತೆಗಳು ಆಮ್ ಆದ್ಮೀ ಪಾರ್ಟಿಯ ಸೋಲಿನ ದಾರಿಯನ್ನು ಮತ್ತಷ್ಟು ಸಲೀಸು ಮಾಡಿದವು. ಈ ದುಸ್ಥಿತಿಗೆ ಮೋದಿ ಸರ್ಕಾರ ನೇಮಕ ಮಾಡಿದ್ದ ಉಪರಾಜ್ಯಪಾಲರ ತೀವ್ರ ಅಸಹಕಾರವೇ ಕಾರಣ ಎಂದಿತ್ತು ಆಪ್. ಡಬಲ್ ಎಂಜಿನ್ ಸರ್ಕಾರವಿದ್ದರೆ ಕೇಂದ್ರ ಮತ್ತು ರಾಜ್ಯದ  ನಡುವೆ ಸಹಕಾರದ ಕೊರತೆ ಇರುವುದಿಲ್ಲ ಎಂಬ ಬಿಜೆಪಿ ಪ್ರಚಾರ ಮತದಾರರನ್ನು ಹೆಚ್ಚು ಪ್ರಭಾವಿಸಿತು.

ಮಧ್ಯಮವರ್ಗ ಯಾವುದು ಎಂಬ ಕುರಿತು ಭಿನ್ನ ವ್ಯಾಖ್ಯಾನಗಳಿವೆ. 2022ರ ‘ಪೀಪಲ್ಸ್ ರೀಸರ್ಚ್ ಆನ್ ಕನ್ಸ್ಯೂಮರ್ ಎಕಾನಮಿ’ ವರದಿಯ ಪ್ರಕಾರ ದೆಹಲಿಯ ಮಧ್ಯಮವರ್ಗಿಗಳ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.67.16. 2013ರಿಂದ ಲೋಕಸಭೆಗೆ ಬಿಜೆಪಿ ಮತ್ತು ವಿಧಾನಸಭೆಗೆ ಆಮ್ ಆದ್ಮೀ ಪಾರ್ಟಿಯನ್ನು ಆರಿಸುತ್ತ ಬಂದಿತ್ತು ಈ ಮಧ್ಯಮವರ್ಗ. ಈ ಸಲ ಎಂದಿನಂತೆ ಲೋಕಸಭೆ ಚುನಾವಣೆಯಲ್ಲಿ ಸಾರಾಸಗಟು ಬಿಜೆಪಿಯನ್ನು ಗೆಲ್ಲಿಸಿದ ಮಧ್ಯಮವರ್ಗದ ಬಹುಪಾಲು ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಕಡೆ ಜೀಕಲಿಲ್ಲ. ಬಿಜೆಪಿಯಲ್ಲಿಯೇ ಉಳಿದಿರುವುದನ್ನು ಫಲಿತಾಂಶಗಳು ನಿಚ್ಚಳವಾಗಿ ಸಾರಿವೆ. 12 ಲಕ್ಷ ರುಪಾಯಿಗಳವರೆಗಿನ ಆದಾಯಕ್ಕೆ ತೆರಿಗೆಯಿಲ್ಲ ಎಂಬ ಕೇಂದ್ರ ಬಜೆಟ್ ಘೋಷಣೆ ಮಧ್ಯಮವರ್ಗಕ್ಕೆ ತಾವು ನೀಡಿದ ಐತಿಹಾಸಿಕ ಕೊಡುಗೆ ಎಂದು ಮೋದಿ ನಂಬಿಸಿದರು.
ತಮ್ಮ ತೆರಿಗೆಯ ಹಣವನ್ನು ಬಡವರಿಗೆ ಉಚಿತ ಯೋಜನೆಗಳನ್ನು ನೀಡಲು ಬಳಸುತ್ತಿದೆ ಆಮ್ ಅದ್ಮೀ ಪಾರ್ಟಿ ಸರ್ಕಾರ ಎಂಬ ಅಸಮಾಧಾನ  ದೆಹಲಿಯ ಮಧ್ಯಮ ವರ್ಗದಲ್ಲಿ ಆರಂಭದಲ್ಲೇ ತೊಟ್ಟಿಕ್ಕಿತ್ತು. ಇದೀಗ ಅದು ಧಾರೆಯಾಗಿ ಹರಿದು ಹಗೆ ಕಾರಿಕೊಂಡಂತಿದೆ.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿಯ ತಾಯಿಬೇರು ಆರೆಸ್ಸೆಸ್ ದೊಡ್ಡ ಪ್ರಮಾಣದಲ್ಲಿ ಹೊರಬಂದು ಕೆಲಸಮಾಡಿತ್ತು. ದೆಹಲಿಯಲ್ಲಿ ಕನಿಷ್ಠ 50 ಸಾವಿರ ಪಡಸಾಲೆ ಸಭೆಗಳನ್ನು (ಡ್ರಾಯಿಂಗ್ ರೂಮ್) ಆರೆಸ್ಸೆಸ್ ಪದಾಧಿಕಾರಿಗಳು ನಡೆಸಿರುವ ಮಾತುಕತೆಗಳಿವೆ. ಕೇಜ್ರೀವಾಲ್ ಮತ್ತು ಅವರ ಅನೇಕ ಹಿರಿಯ ಸಂಗಾತಿಗಳನ್ನು ಚುನಾವಣೆಗೆ ಮುನ್ನ ಬಂಧಿಸಿ ಜೈಲಿನಲ್ಲಿ ಇರಿಸಿದ ಕುರಿತು ಸಾರ್ವಜನಿಕರಲ್ಲಿ ಇದ್ದ ಸಹಾನುಭೂತಿಯನ್ನು ಈ ಸಭೆಗಳು ತೊಡೆದು ಹಾಕಿರುವ ವರದಿಗಳಿವೆ.

ಮುಖ್ಯಮಂತ್ರಿಯನ್ನಾಗಿ ರೇಖಾ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಗುಪ್ತಾ ಅವರು ಕೇಜ್ರೀವಾಲ್ ಅವರಂತೆ ಜಾತಿಯಲ್ಲಿ ವೈಶ್ಯರು ಮತ್ತು ಹರಿಯಾಣ ಮೂಲದವರು. ಬಿಜೆಪಿಯ 16 ಮುಖ್ಯಮಂತ್ರಿಗಳ ಪೈಕಿ ಒಬ್ಬ ಮಹಿಳೆಯೂ ಇರಲಿಲ್ಲ. ಈ ಕುರಿತ ಟೀಕೆಯಿಂದ ಬಚಾವಾಗಲು ದೆಹಲಿಯಂತಹ ‘ಅರ್ಧರಾಜ್ಯ’ವೊಂದನ್ನು, ‘ನಗರ ರಾಜ್ಯ’ವೊಂದನ್ನು ಮಹಿಳೆಯ ಕೈಗಿತ್ತಿದೆ ಬಿಜೆಪಿ. ಕೇಜ್ರೀವಾಲ್ ಜಾಗದಲ್ಲಿ ‘ಮಧ್ಯಂತರ’ ಮುಖ್ಯಮಂತ್ರಿಯಾಗಿದ್ದ ಆತಿಶಿ ಇದೀಗ ಪ್ರತಿಪಕ್ಷದ ನಾಯಕಿ. ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕಿ ಇಬ್ಬರೂ ಮಹಿಳೆಯರೇ ಆಗಿರುವ ಮತ್ತೊಂದು ಉದಾಹರಣೆ ಇದ್ದಂತಿಲ್ಲ.

ದೆಹಲಿ ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಪಕ್ಷಗಳಿಗೆ ಒಳ್ಳೆಯದು ಎನಿಸಬಹುದಾದ ಯಾವ ಸುದ್ದಿಯೂ ಇಲ್ಲ. ಈ ಪ್ರತಿಷ್ಠೆಯ ಗೆಲುವು ಬಿಜೆಪಿಗೆ ಹೊಸ ಹುಮ್ಮಸ್ಸನ್ನು ತುಂಬಿದೆ. ಲೋಕಸಭಾ ಚುನಾವಣೆಗಳಲ್ಲಿ ಸರಳ ಬಹುಮತವೂ ಸಿಗದೆ ತಿಣುಕಾಡಿ ಮಿತ್ರಪಕ್ಷಗಳ ನೆರವಿನಿಂದ ಸರ್ಕಾರ ರಚಿಸಿತ್ತು ಕೇಸರಿ ಪಕ್ಷ. ದೆಹಲಿ ಚುನಾವಣೆಗಳ ಗೆಲುವು ಈ ಮಂಕುತನವನ್ನು ನಿರ್ಣಾಯಕವಾಗಿ ಝಾಡಿಸಿ ಒಗೆದಿದೆ.

ಕಾಂಗ್ರೆಸ್ ಪಕ್ಷ ಸತತ ಮೂರನೆಯ ಬಾರಿ ಶೂನ್ಯ ಸೀಟು ಸಂಪಾದನೆಯ ಸೋಲನ್ನು ಎದುರಿಸಿಯೂ ಧೃತಿಗೆಟ್ಟಿಲ್ಲ. ವಾಸ್ತವವಾಗಿ ಈ ಚುನಾವಣೆಯು ಆಪ್ ಮತ್ತು ಕಾಂಗ್ರೆಸ್ ನಡುವೆ ಪರಸ್ಪರರು ಅದುಮಿಟ್ಟುಕೊಂಡಿದ್ದ ಹಗೆತನ ಪ್ರತೀಕಾರ ಭಾವಗಳನ್ನು ಬಯಲು ಮಾಡಿತು.

70 ಸೀಟುಗಳ ಪೈಕಿ 60ರಲ್ಲಿ ಕಾಂಗ್ರೆಸ್ ಹುರಿಯಾಳುಗಳು ಠೇವಣಿ ಕಳೆದುಕೊಂಡರು. ಆದರೂ ಕಾಂಗ್ರೆಸ್ ಪಾರ್ಟಿಯು ಆಮ್ ಆದ್ಮೀ ಪಾರ್ಟಿಯ ಸೋಲನ್ನು ಸಂಭ್ರಮಿಸಿದ್ದು ಕಟು ವಾಸ್ತವ. ಆಮ್ ಆದ್ಮೀ ಪಾರ್ಟಿ ದುರಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಬೀಗಿತು ಎಂಬುದು ಕಾಂಗ್ರೆಸ್ ಭಾವನೆ. ಚುನಾವಣಾ ಮೈತ್ರಿ ಮಾಡಿಕೊಳ್ಳಬೇಕಿದ್ದರೆ ತನಗೆ ಗೌರವಯುತ ಸಂಖ್ಯೆಯ ಸೀಟುಗಳನ್ನು ಬಿಟ್ಟುಕೊಡಬೇಕೆಂಬ ತನ್ನ ಕೋರಿಕೆಯನ್ನು ಕೇಜ್ರೀವಾಲ್ ಪಕ್ಷ ತಿರಸ್ಕರಿಸಿತು ಎಂದಿವೆ ಕಾಂಗ್ರೆಸ್ ಮೂಲಗಳು. ಈ ತಿರಸ್ಕಾರ ಮತ್ತು 2012ರಲ್ಲಿ ಕೇಂದ್ರದಲ್ಲಿದ್ದ ಮನಮೋಹನಸಿಂಗ್ ಸರ್ಕಾರ ಮತ್ತು ದೆಹಲಿಯಲ್ಲಿದ್ದ ಶೀಲಾ ದೀಕ್ಷಿತ್ ನೇತೃತ್ವದ ಸರ್ಕಾರಗಳೆರಡರ ಮೇಲೂ ಕೇಜ್ರೀವಾಲ್ ಮತ್ತು ಸಂಗಾತಿಗಳು ಆರೆಸ್ಸೆಸ್ ಬೆಂಬಲದೊಂದಿಗೆ ನಡೆಸಿದ ‘ಮಿಥ್ಯಾಪ್ರಚಾರ’ವನ್ನು ಕಾಂಗ್ರೆಸ್ ಮರೆತಿಲ್ಲ.

ಶೀಲಾ ದೀಕ್ಷಿತ್ 1
ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್

ಮೂರು ಸಲ ಗೆದ್ದು ಸರ್ಕಾರ ರಚಿಸಿದ್ದ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸಿದ್ದ ಕೇಜ್ರೀವಾಲ್ ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ಶೀಲಾ ದೀಕ್ಷಿತ್ ಅವರನ್ನು ಚುನಾವಣೆಯ ನಂತರವೂ ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂಬುದು ಕಾಂಗ್ರೆಸ್ಸಿನ ಕಹಿ ನೆನಪು. ಅದೇ ಶೀಲಾ ದೀಕ್ಷಿತ್ ಅವರ ಮಗನನ್ನು ಹೂಡಿ ಕೇಜ್ರೀವಾಲ್ ಅವರನ್ನು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ಸಂಭ್ರಮಿಸಿತು ಕಾಂಗ್ರೆಸ್ ಪಕ್ಷ. ಆಪ್ ಸೋತಿರುವುದೇನೋ ಹೌದು, ಆದರೆ ಕೇಜ್ರೀವಾಲ್ ಗೆ ಕನಿಷ್ಠ ಪಕ್ಷ ಪ್ರತಿಪಕ್ಷದ ನಾಯಕನಾಗುವ ಅವಕಾಶವೂ ಉಳಿಯಲಿಲ್ಲ ಎಂದು ಬೀಗಿದೆ ಕಾಂಗ್ರೆಸ್. ಈ ಮುನ್ನ ಜರುಗಿದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮೀ ಪಾರ್ಟಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಗೆಲುವಿನ ಹೊಸ್ತಿಲಲ್ಲಿದ್ದ ತನ್ನನ್ನು ಕೆಡವಿತ್ತು ಕೇಜ್ರೀವಾಲ್ ಪಾರ್ಟಿ ಎಂಬುದು ಕಾಂಗ್ರೆಸ್ ನ ಮತ್ತೊಂದು ಗಂಭೀರ ಆರೋಪ. ಅಷ್ಟು ಆಳ, ಅದರ ಗಾಯಗಳು! ಹೀಗೆ ಬಿಜೆಪಿಯಿಂದ ಮಾತ್ರವಲ್ಲದೆ ಕಾಂಗ್ರೆಸ್ಸಿನಿಂದಲೂ ಹಣಿಸಿಕೊಂಡಿರುವ ಆಮ್ ಆದ್ಮೀ ಪಾರ್ಟಿ ಮೇಲೆ ಇದು ದಾಳಿಗಳ ಆರಂಭವೇ ವಿನಾ ಅಂತ್ಯವಲ್ಲ.

ಸ್ವತಃ ತಾನೇ ಸೋತು ದುರ್ಬಲನಾಗಿರುವ ದಂಡನಾಯಕ ಮತ್ತು ಅವನ ಸೇನೆಯ ಮೇಲೆ ಮಾರಣಾಂತಿಕ ದಾಳಿ ನಡೆಸಲು ಸಜ್ಜಾಗತೊಡಗಿದೆ ಮೋದಿ ಬಳಗ. ಕೇಜ್ರೀವಾಲ್ ಪಾರ್ಟಿಯ ರೆಕ್ಕ ಪುಕ್ಕಗಳನ್ನು ಮೋದಿ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ. ಚುನಾವಣಾ ಆಯೋಗ ಕೂಡ ಆಳುವ ಪಕ್ಷದ ಮರ್ಜಿಯನ್ನು ಅನುಸರಿಸಿ, ‘ಆಪ್’ನ 20 ಮಂದಿ ಶಾಸಕರನ್ನು ಅನರ್ಹಗೊಳಿಸಿತ್ತು. ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸದೆ ಹೋಗಿದ್ದರೆ ಈ ಅನ್ಯಾಯ ಮುಂದುವರೆಯುತ್ತಿತ್ತು.

ಕೇಜ್ರೀವಾಲ್ ಸಂಗಾತಿಗಳ ಮೇಲೆ ಕೇಸುಗಳನ್ನು ಹೆಣೆದು ಹೆಟ್ಟುವ ಕೆಲಸ ಈಗಾಗಲೇ ಶುರುವಾಗಿದ್ದರೆ ಆಶ್ಚರ್ಯವಿಲ್ಲ. ತಮ್ಮ ಪ್ರತಿಸ್ಪರ್ಧಿಗಳನ್ನು, ತಮ್ಮ ಅಹಂ ಗಳಿಗೆ ಪೆಟ್ಟು ಕೊಡುವ ರಾಜಕೀಯ ಹಗೆಗಳ ಹುಟ್ಟಡಗಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲವರು ತಾವು ಎಂದು ಮೋದಿ-ಶಾ ಜೋಡಿ ಈಗಾಗಲೆ ತೋರಿಸಿಕೊಟ್ಟಿದೆ. ಈ ಜೋಡಿ ಕೇಜ್ರೀವಾಲ್ ಪಕ್ಷದ ನಿರ್ನಾಮಕ್ಕೆ ಹೊಸ ದಾಳಗಳನ್ನು ಉರುಳಿಸುವುದು ನಿಶ್ಚಿತ.

ಈ ದಾಳಗಳನ್ನು ಹಿಮ್ಮೆಟ್ಟಿಸುವ ಚೈತನ್ಯವನ್ನು ಗಳಿಸಿಕೊಳ್ಳಬೇಕಿದ್ದರೆ ಆಪ್ ಜನಪರ ರಾಜನೀತಿಯತ್ತ ಹೊರಳಬೇಕು. ಸೋಲಿನ ಮತಗಳ ಅಂತರ ಕೇವಲ ಶೇ.2.1 ಮಾತ್ರ. ಸೋಲಿನಲ್ಲೂ 43.5ರಷ್ಟು ಮತಗಳನ್ನು ಗಳಿಸಿರುವ ಸಾಧನೆ ಸಣ್ಣದಲ್ಲ. ಮತ್ತೆ ಜನರ ನಡುವೆ ಬೆರೆಯಬೇಕು. ಸರಿದಾರಿ ಹಿಡಿಯಬೇಕು. ಮರುಹುಟ್ಟು ಪಡೆಯಬೇಕು.

ವಿಷಮ ಭಾರತ | ದಲಿತ-ಬೌದ್ಧ ಹಿನ್ನೆಲೆಯ ಜಸ್ಟಿಸ್ ಗವಾಯಿ ಹೀಗೆಲ್ಲ ಅನ್ನಬಹುದೇ?

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X