ರಾಯಭಾರ | ಜಾತಿ ಗಣತಿ; ಹೆಜ್ಜೆ ಮುಂದಿಟ್ಟರಷ್ಟೇ ದಾರಿ ನಿಚ್ಚಳ

Date:

Advertisements

ಸ್ವತಃ ಕಾಂಗ್ರೆಸ್‌ ಪಕ್ಷದ ಅಗ್ರನಾಯಕ ರಾಹುಲ್‌ ಗಾಂಧಿಯವರೇ ‘ಜಾತಿ ಗಣತಿ’ ದೇಶಾದ್ಯಂತ ನಡೆಯಬೇಕು ಎಂದು ಒತ್ತಾಯಿಸುತ್ತಿರುವಾಗ ತಾವು ರಾಜ್ಯದಲ್ಲಿ ನಡೆಸಿರುವುದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಕನಿಷ್ಠ ದಿಟ್ಟತೆಯನ್ನಾದರೂ ಇಲ್ಲಿನ ನಾಯಕರು ತೋರಬೇಕು.

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015’ ಅಥವಾ ಆಡುಮಾತಿನಲ್ಲಿ ‘ಜಾತಿ ಗಣತಿ’ ಈಗ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ಕೇಂದ್ರದಲ್ಲಿರುವ ವಿಷಯ. ಕೆ. ಜಯಪ್ರಕಾಶ್‌ ಹೆಗ್ಡೆ ಅವರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯು ಸಚಿವ ಸಂಪುಟದಲ್ಲಿ ಮಂಡನೆಯಾಗಿದ್ದು ಇದರ ಚರ್ಚೆಗೆಂದೇ ಏಪ್ರಿಲ್‌ 17ರಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ.

ಈ ಸಮೀಕ್ಷೆಯನ್ನು ‘ಜಾತಿ ಗಣತಿ’ ಎನ್ನುವುದಕ್ಕೆ ಕೆಲವರಿಗೆ ರಾಜಕೀಯವಾದ ತಕರಾರುಗಳಿವೆ. ಹಾಗೆಂದ ಮಾತ್ರಕ್ಕೆ ಇದನ್ನು ಭೌಗೋಳಿಕ ಆಧಾರದಲ್ಲಿ ನಡೆದಿರುವ ಸಮೀಕ್ಷೆ ಎನ್ನಬೇಕೆ? ಧರ್ಮ, ಜನಾಂಗಗಳ ಆಧಾರದಲ್ಲಿ ನಡೆದಿರುವ ಸಮೀಕ್ಷೆ ಎನ್ನಬೇಕೆ? ಅಥವಾ ಜಾತಿಗೆ ಹೊರತಾದ ಮತ್ತಾವುದಾದರೂ ವಿಧಾನದಡಿ ನಡೆಸಲಾಗಿರುವ ಸಮೀಕ್ಷೆ ಎಂದು ಹೆಸರಿಸಬೇಕೆ? ಎಂದು ಪ್ರಶ್ನಿಸಿದರೆ ಉತ್ತರವಿರುವುದಿಲ್ಲ. ಇದಾವುದಕ್ಕೂ ಉತ್ತರ ‘ಇಲ್ಲ’ ಎಂದಾದ ಮೇಲೆ ಇದನ್ನು ಜಾತಿ ಆಧಾರಿತವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಕರೆಯಲು ಹಿಂಜರಿಯಬಾರದು. ಅದರಲ್ಲಿಯೂ ರಾಜ್ಯ ಕಾಂಗ್ರೆಸ್‌ನ ಯಾವುದೇ ಮುಖಂಡರೂ ಸಹ ಹಾಗೆ ಕರೆಯಲು ಹಿಂಜರಿಯಲೇಬಾರದು.

Advertisements

ಸ್ವತಃ ಕಾಂಗ್ರೆಸ್‌ ಪಕ್ಷದ ಅಗ್ರನಾಯಕ ರಾಹುಲ್‌ ಗಾಂಧಿಯವರೇ ‘ಜಾತಿ ಗಣತಿ’ ದೇಶಾದ್ಯಂತ ನಡೆಯಬೇಕು ಎಂದು ಒತ್ತಾಯಿಸುತ್ತಿರುವಾಗ ತಾವು ರಾಜ್ಯದಲ್ಲಿ ನಡೆಸಿರುವುದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಕನಿಷ್ಠ ದಿಟ್ಟತೆಯನ್ನಾದರೂ ಇಲ್ಲಿನ ನಾಯಕರು ತೋರಬೇಕು.

ಸೂಕ್ತ ವರ್ಗೀಕರಣ, ವಿಭಾಗಗಳು, ಪರಿಮಾಣಗಳಿಲ್ಲದೆ ಸಂಗ್ರಹಿಸುವ ಯಾವುದೇ ದತ್ತಾಂಶಗಳು ಅರ್ಥವಿಲ್ಲದ ಅಂಕಿಸಂಖ್ಯೆಗಳಾಗುತ್ತವೆಯೇ ಹೊರತು ಮಾಹಿತಿ ಆಗುವುದಿಲ್ಲ. ಹಾಗಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎನ್ನುವುದು ಭಾರತದ ಸಾಮಾಜಿಕ ವಾಸ್ತವಗಳಲ್ಲಿ ಒಂದಾಗಿರುವ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಡೆದಿರುವ ಸಮೀಕ್ಷೆಯಾಗಿದೆ. ಜಾತಿ ವ್ಯವಸ್ಥೆಯು ಹೇಗೆ ವ್ಯಕ್ತಿ ಹಾಗೂ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಗಳ ಮೇಲೆ ಪ್ರತ್ಯಕ್ಷ, ಪರೋಕ್ಷ ಪರಿಣಾಮವನ್ನು ಉಂಟು ಮಾಡಿದೆ ಎನ್ನುವುದನ್ನು ಹೆಚ್ಚು ನಿಖರವಾಗಿ ಅರಿಯುವ ಪರಿಶೋಧನೆ ಇದಾಗಿದೆ ಎನ್ನುವುದನ್ನು ಮರೆಯಬಾರದು.

ದೇಶದಲ್ಲಿ ಸಮತೆಯನ್ನು ಎತ್ತಿ ಹಿಡಿಯಲು, ಸಾಮಾಜಿಕ ನ್ಯಾಯದ ಭಿತ್ತಿಯಲ್ಲಿ ಮೀಸಲಾತಿ ಸಹಿತ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅಗತ್ಯವಾದ ದತ್ತಾಂಶ ಈ ಬಗೆಯ ಸಮೀಕ್ಷೆಗಳಿಂದಲೇ ದೊರೆಯಬೇಕಿದೆ. ಇಂತಹ ದತ್ತಾಂಶದ ಅಗತ್ಯವನ್ನು ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ವಿವಿಧ ಉಚ್ಚ ನ್ಯಾಯಾಲಗಳು ವಿವಿಧ ಸಂದರ್ಭಗಳಲ್ಲಿ ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿವೆ. ಹಾಗಾಗಿ, ಜಾತಿಯಾಧಾರಿತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಸಂವಿಧಾನದ ಆಶಯಗಳ ಜಾರಿಗೆ ಅತ್ಯಗತ್ಯವಾಗಿ ಬೇಕಿರುವ ನ್ಯಾಯಯುತವಾದ, ನ್ಯಾಯಸಮ್ಮತವಾದ ಮಾಹಿತಿಯಾಗಿದೆ ಎನ್ನುವ ಅರಿವನ್ನು ಪಕ್ಷಾತೀತವಾಗಿ ಎಲ್ಲರೂ ಇರಿಸಿಕೊಳ್ಳಬೇಕಿದೆ.

ಜಾತಿ ಗಣತಿಯು ಅಹಿಂದ ರಾಜಕಾರಣದ ಭಾಗವಾಗಿದ್ದು, ಇದರಿಂದಾಗಿ ಸಾಮಾಜಿಕ ನ್ಯಾಯವನ್ನು ಬೇಡುವಂತಹ ಜಾತಿ ಪ್ರಜ್ಞೆ ಮೊಳೆಯುತ್ತದೆ, ವಿವಿಧ ಸಮುದಾಯಗಳ ನ್ಯಾಯಯುತವಾದ ಬೇಡಿಕೆಗಳು ಮುನ್ನೆಲೆಗೆ ಬರುತ್ತವೆ ಎಂಬುದು ಬಿಜೆಪಿಯ ಆತಂಕ. ಆಗ ಹಿಂದುತ್ವದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ರಾಜಕಾರಣಕ್ಕೆ ಹಿನ್ನೆಡೆಯಾಗಲಿದೆ ಎನ್ನುವುದು ಅದರ ಚಿಂತೆ. ಇದನ್ನು ಹೀಗೆ ನೇರವಾಗಿ  ಹೇಳಲಾಗದ ಕಾರಣಕ್ಕೆ, ಜಾತಿ ಗಣತಿ ಎನ್ನುವುದು ಹಿಂದೂ ಸಮಾಜವನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಹುನ್ನಾರ, ಹಿಂದೂ ಐಕ್ಯತೆಗೆ ಸಂಚಕಾರ ಎಂದು ಬಿಜೆಪಿ ಹಾಗೂ ಬಲಪಂಥೀಯ ಶಕ್ತಿಗಳು ಆರೋಪಿಸುತ್ತಿವೆ. ವೈಜ್ಞಾನಿಕವಾಗಿ ಜಾತಿ ಗಣತಿ ನಡೆದಿಲ್ಲ ಎಂದು ಆಕ್ಷೇಪಿಸಿ ಮನೆಮನೆಗಳಿಗೆ ತೆರಳಿ ವಿಸ್ತೃತವಾಗಿ ಜಾತಿ ಗಣತಿ ಮಾಡುವಂತೆ ಆಗ್ರಹಿಸುತ್ತಿವೆ.

ಅದೇ ರೀತಿ, ಸಾಮಾಜಿಕ ರಚನೆಗಳಲ್ಲಿ ಯಾವುದೇ ಪಲ್ಲಟಗಳನ್ನು ಬೆಂಬಲಿಸದ, ಪ್ರಸ್ತುತ ತಾವು ಹೊಂದಿರುವ ರಾಜಕೀಯ, ಸಾಮಾಜಿಕ ಹಿಡಿತಕ್ಕೆ ಸಂಚಕಾರವನ್ನು ತರಬಲ್ಲ ಜಾತಿಗಣತಿಯ ವರದಿಯ ಬಗ್ಗೆ ಪ್ರಬಲ ಜಾತಿಗಳ ಹಿತಾಸಕ್ತಿಯನ್ನು(!) ಕಾಯಲು ಮುಂದಾಗಿರುವ ಅನೇಕರಿಗೂ ಸಹ ಆಕ್ಷೇಪಣೆಗಳಿವೆ. ವರದಿಯು ಸಚಿವ ಸಂಪುಟದಲ್ಲಿ ಮಂಡನೆಯಾಗಿ, ಚರ್ಚೆಯಾಗಿ ಒಪ್ಪಿಗೆ ಪಡೆದ ನಂತರವಷ್ಟೇ ಬಹಿರಂಗಗೊಳ್ಳಬೇಕಿರುವುದರಿಂದ ಈಗ ಮಾಧ್ಯಮಗಳ ಮೂಲಕ ‘ಸೋರಿಕೆ’ಯಾಗಿರುವ ಮಾಹಿತಿಗಳನ್ನಷ್ಟೇ ಬಳಸಿ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿವೆ.

ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯಿಂದ ಸೋರಿಕೆಯಾಗಿದೆ ಎನ್ನಲಾದ ಮಾಹಿತಿಯ ಆಧಾರದಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿರುವ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಗಮನಿಸಬಹುದು. ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಅವುಗಳ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯ ಅನುಸಾರ ಪ್ರಸ್ತುತ ಲಭ್ಯವಿರುವ ಮೀಸಲಾತಿಯ ಏರಿಕೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವೆಡೆ, ಇದನ್ನು ಜನಸಂಖ್ಯೆಯ ಪ್ರಮಾಣಾನುಗುಣವಾಗಿ ಮೀಸಲಾತಿ ಏರಿಕೆಗೆ ಶಿಫಾರಸ್ಸು ಮಾಡಲಾಗಿದೆ ಎಂದೂ ಹೇಳಲಾಗಿದೆ.

ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಕಿಅಂಶಗಳನ್ನು ಗಮನಿಸಿದರೆ, ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿಯನ್ನು ಪ್ರಸ್ತುತ ಇರುವ ಶೇ.೩೨ರಿಂದ ಶೇ.೫೧ಕ್ಕೆ ಏರಿಸುವಂತೆ ಆಯೋಗವು ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

ಮುಂದುವರಿದು, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಪ್ರಸ್ತುತ ಇರುವ ಮೀಸಲಾತಿ ಮಿತಿಯನ್ನು ಕ್ರಮವಾಗಿ ಶೇ.4ರಿಂದ ಶೇ.7ಕ್ಕೆ ಹಾಗೂ ಶೇ.5ರಿಂದ ಶೇ.8ಕ್ಕೆ ಹೆಚ್ಚಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿರುವುದಾಗಿ ವರದಿಯಾಗಿದೆ. ಅದೇ ರೀತಿ, ಮುಸ್ಲಿಮರ ಮೀಸಲಾತಿಯನ್ನು ಶೇ.5ರಿಂದ ಶೇ.8ಕ್ಕೆ ಹೆಚ್ಚಿಸಬೇಕು ಎಂದು ಶಿಫಾರಸ್ಸು ಮಾಡಿರುವುದಾಗಿ ಮಾಧ್ಯಮಗಳು ಹೇಳಿವೆ.

ಅಲ್ಲದೆ, ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳಿಗೆ ಕೆನೆ ಪದರ ನೀತಿ ಅನ್ವಯಿಸಬೇಕು ಎಂದು ಶಿಫಾರಸ್ಸು ಮಾಡಿರುವುದು, ಕುರುಬ ಸಮುದಾಯವನ್ನು ಅತ್ಯಂತ ಹಿಂದುಳಿದ ವರ್ಗವಾದ ಪ್ರವರ್ಗ 1ಬಿಯಡಿ ಗುರುತಿಸಿರುವುದು ಮುಂತಾದ ಅಂಶಗಳು ಆಯೋಗದ ವರದಿಯಲ್ಲಿರುವುದಾಗಿ ಬಿಂಬಿತವಾಗುತ್ತಿವೆ.

ಆಯೋಗದ ವರದಿಯದ್ದು ಎನ್ನಲಾದ ಸೋರಿಕೆಯ ಮಾಹಿತಿಯನ್ನು ಇರಿಸಿಕೊಂಡು ಹೆಚ್ಚು ಚರ್ಚೆಗಳನ್ನು ಮಾಡಲಾಗದು. ವರದಿಯನ್ನು ಇದಾಗಲೇ ತಿಳಿಸಿರುವಂತೆ ಆದಷ್ಟು ಬೇಗ ಸಂಪುಟದಲ್ಲಿ ಚರ್ಚಿಸಿ, ಅನುಮೋದಿಸಿ ಸಾರ್ವಜನಿಕಗೊಳಿಸುವುದು ಉತ್ತಮ ಹಾದಿ. ಪ್ರಬಲ ಜಾತಿಗಳಿಗೆ ಮೀಸಲಾತಿ ಹೆಚ್ಚಳದ ವಿಚಾರ, ಕೆಲ ಜಾತಿಗಳ ಮರುವರ್ಗೀಕರಣ ಮುಂತಾದ ವಿಷಯಗಳೆಲ್ಲವೂ ಶಾಸನಸಭೆಯೊಳಗೆ, ಹೊರಗೆ ವಿಸ್ತೃತ ಚರ್ಚೆಗೆ ಒಳಪಡಬೇಕಿದೆ.

ಮೇಲೆ ಹೇಳಿರುವಂತೆ ಮಾಧ್ಯಮಗಳ ವರದಿಗಳಲ್ಲಿನ ಅಂಶಗಳು ನಿಜವಾದರೆ ಆಗ ಆಯೋಗದ ವರದಿಯಲ್ಲಿನ ಅನೇಕ ವಿಚಾರಗಳು ನ್ಯಾಯಾಲಯದ ಕಟಕಟೆ ಏರುವುದರಲ್ಲಿ ಅನುಮಾನವಿಲ್ಲ. ಪ್ರಬಲ ಜಾತಿಗಳ ವಿಷಯಕ್ಕೇ ಬರುವುದಾದರೆ ಅವುಗಳ ಮೀಸಲಾತಿ ಹೆಚ್ಚಳಕ್ಕೆ ಮಾಡಿರುವ ಶಿಫಾರಸ್ಸನ್ನು ಯಾವ ಅಂಶಗಳ ಹಿನ್ನೆಲೆಯಲ್ಲಿ ಮಾಡಲಾಗಿದೆ ಎನ್ನುವ ಅಂಶವು ಚರ್ಚೆಯ ವಿಷಯವಾಗಲಿದೆ. ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಪ್ರಬಲ ಜಾತಿಗಳು ಮೀಸಲಾತಿ ವಿಚಾರವಾಗಿ ಆಗ್ರಹಿಸಿದಾಗ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು ಈ ಜಾತಿಗಳ ಹಿಂದುಳಿದಿರುವಿಕೆಯನ್ನು ಸಮರ್ಥಿಸುವಂತಹ ನಿಖರವಾದ ದತ್ತಾಂಶಗಳನ್ನು ನೀಡುವಂತೆ ಆಯಾ ರಾಜ್ಯ ಸರ್ಕಾರಗಳನ್ನು ಕೇಳಿದ್ದವು. ಬಹುತೇಕ ರಾಜ್ಯಗಳಲ್ಲಿ ಇದನ್ನು ಸಮರ್ಥಿಸಿಕೊಳ್ಳುವಂತಹ ಸಮೀಕ್ಷೆಗಳು ಇರಲಿಲ್ಲ. ಕರ್ನಾಟಕದ ವಿಚಾರದಲ್ಲಿ ಮುಂದೆ ಇಂತಹ ಸಂದರ್ಭ ಉದ್ಭವಿಸಿದರೆ ಸರ್ಕಾರಕ್ಕೆ ಆ ಒಂದು ವಿಚಾರದಲ್ಲಿ ಮುನ್ನಡೆ ದೊರೆಯಬಹುದು. ಅದು ತಾನು ಮಾಡಿರುವ ಸಮೀಕ್ಷೆಯ ವರದಿಯನ್ನು ನ್ಯಾಯಾಲಯದ ಮುಂದಿರಿಸಿ ಸಮರ್ಥಿಸಿಕೊಳ್ಳಬಹುದು. ಅದನ್ನು ಒಪ್ಪುವುದು, ಬಿಡುವುದು ನ್ಯಾಯಾಲಯಕ್ಕೆ ಬಿಟ್ಟದ್ದು.

ಒಂದಂತೂ ಸತ್ಯ, ಬಿಡುಬೀಸಾಗಿ ಜನಸಂಖ್ಯೆಯ ಪ್ರಮಾಣಾನುಗುಣವಾಗಿ ಹಿಂದುಳಿದ ವರ್ಗಗಳಡಿ ಮೀಸಲಾತಿ ನೀಡಬೇಕು ಎನ್ನುವುದು ಚರ್ಚಾರ್ಹವೂ, ನ್ಯಾಯಾಲಯಗಳಲ್ಲಿ ಪ್ರಶ್ನಾರ್ಹವೂ ಆದ ವಿಚಾರವಾಗಿದೆ. ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಲಾಗಿದೆ ಎಂದು ಎಲ್ಲ ರೀತಿಯಲ್ಲೂ ನಿರೂಪಿತವಾದಾಗ ಮಾತ್ರವೇ ಹಾಗೆ ನೀಡಲಾದ ಮೀಸಲಾತಿ ನ್ಯಾಯಿಕ ವ್ಯಾಪ್ತಿಯಲ್ಲಿ ಸಿಂಧುವಾಗಲಿದೆ. ಮರು ವರ್ಗೀಕರಣ, ಕೆನೆ ಪದರದ ವಿಚಾರಗಳು ಸಹ ಸೂಕ್ತ ರೀತಿಯಲ್ಲಿ ಸಮರ್ಥನೆಗೊಳಗಾದಾಗ ಮಾತ್ರವೇ ಮಾನ್ಯವಾಗಲಿವೆ.

ಈ ವಿಚಾರಗಳೆಲ್ಲ ಏನೇ ಇದ್ದರೂ, ಸಾಮಾಜಿಕ ನ್ಯಾಯವನ್ನು, ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯುವ ವಿಚಾರದಲ್ಲಿ ವರದಿಯನ್ನು ಒಪ್ಪಿ, ಸಾರ್ವಜನಿಕ ಚರ್ಚೆಗೆ ಇರಿಸುವುದು ಮುಂದೆ ಸಾಗುವ ಹಾದಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಕೇಂದ್ರ ಸರ್ಕಾರವು ತನ್ನ ಬಳಿ ಜಾತಿಯಾಧಾರಿತವಾದ ಯಾವುದೇ ಮಾಹಿತಿ ಇಲ್ಲ ಎಂದು ವಿವಿಧ ಸಂದರ್ಭಗಳಲ್ಲಿ ಹೇಳಿದೆ. ಮರಾಠಾ ಮೀಸಲಾತಿ ಪ್ರಶ್ನೆಯು ನ್ಯಾಯಾಲಯದ ಮುಂದೆ ಇದ್ದಾಗಲು ಸಹ ಕೇಂದ್ರ ಸರ್ಕಾರವು ತಾನು ನಡೆಸಿರುವುದು ಸಾಮಾನ್ಯ ಜನಗಣತಿಯೇ ಹೊರತು, ಜಾತಿ ಗಣತಿಯಲ್ಲ. ಹಾಗಾಗಿ, ಜಾತಿ ಆಧಾರದ ಜನಸಂಖ್ಯೆಯ ಮಾಹಿತಿಯನ್ನು ತಾನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೈತೊಳೆದುಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಮುಂದೆ ನಡೆಯಲಿರುವ ಜನಗಣತಿಯು ಜಾತಿಗಣತಿಯ ಮಾಹಿತಿಯನ್ನೂ ಒಳಗೊಳ್ಳುವಂತೆ ರೂಪಿಸಬೇಕಿದೆ. ಇದಕ್ಕಾಗಿ ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರವನ್ನು ಆಗ್ರಹಿಸಬೇಕು. ಇದಕ್ಕೆ ಅಗತ್ಯವಾಗಿರುವ 1942ರ ಜಾತಿ ಗಣತಿ ಕಾಯಿದೆಗೆ ಅಗತ್ಯ ತಿದ್ದುಪಡಿಯನ್ನು ತರಲು ಒತ್ತಾಯಿಸಬೇಕು.

ಪ್ರಸ್ತುತ, ಜನಗಣತಿಯ ವೇಳೆ ಜಾತಿಯ ಮಾಹಿತಿ ಕೋರುವುದು ಕೇಂದ್ರದ ವಿವೇಚನೆಗೆ ಬಿಟ್ಟಿರುವ ವಿಷಯವಾಗಿದ್ದು ಕಡ್ಡಾಯ ನಮೂದಿನ ಭಾಗವಾಗಿರುವುದಿಲ್ಲ. 2011ರ ಜನಗಣತಿ ಹಾಗೂ ಆನಂತರದ ಚರ್ಚೆಗಳ ವೇಳೆ ಜನಗಣತಿಯ ವೇಳೆಯೇ ಜಾತಿ ಗಣತಿಯ ಮಾಹಿತಿ ಸಂಗ್ರಹಿಸಬೇಕೆನ್ನುವ ವಿಚಾರವು ಚರ್ಚೆಯಾಗಿತ್ತು. ಈ ವಿಚಾರ ರಾಜಕೀಯವಾಗಿ, ಸಾಮಾಜಿಕವಾಗಿ ಈಗ ಹೆಚ್ಚು ಪ್ರಸ್ತುತತೆಯನ್ನು ಪಡೆದಿದ್ದು ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಜಾತಿ ಗಣತಿ ಮಾಡುವಂತೆ ಆಗ್ರಹಿಸುತ್ತಿವೆ. ಕೇಂದ್ರ ಸರ್ಕಾರವು ಈ ಸಲಹೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವ ಅಗತ್ಯವಿದೆ. ಸಂಘ ಪ್ರಣೀತವಾದ ಮಸೂದೆಗಳು, ನೀತಿಗಳ ಜಾರಿ, ಅನುಷ್ಠಾನದಲ್ಲಿಯೇ ವ್ಯಸ್ತವಾಗಿರುವ ಕೇಂದ್ರವು ಇಂತಹ ಬೇಡಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಅದರ ಆದ್ಯತೆಗಳಿಗೆ ಹಿಡಿದ ಕನ್ನಡಿಯಾಗಲಿದೆ.

ಇದೇ ವೇಳೆ, ದೇಶದ ವಿವಿಧ ರಾಜ್ಯಗಳೂ ಸಹ ತಮ್ಮ ಮಿತಿಯಲ್ಲಿ ಜಾತಿಯಾಧಾರಿತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲು ಮುಂದಾಗಬೇಕು. ಇದು ದೇಶವ್ಯಾಪಿ ನಡೆಯುವ ಜನಗಣತಿಗೂ ಮುನ್ನ ನಡೆಯಬೇಕು. ಇದರಿಂದ ದೇಶವ್ಯಾಪಿ ಜನಗಣತಿಯ ವೇಳೆ ಜಾತಿ ಗಣತಿಯ ಮಾಹಿತಿಯೂ ಸೇರ್ಪಡೆಗೊಂಡರೆ ಅದನ್ನು ಈ ರಾಜ್ಯಗಳು ತಾವು ನಡೆಸಿರುವ ಸಮೀಕ್ಷೆಗಳ ಜೊತೆಗೆ ತಾಳೆ ನೋಡಬಹುದು.ಆ ಮೂಲಕ ಹೆಚ್ಚು ನಿಖರವಾದ ಮಾಹಿತಿಯೊಂದಿಗೆ ವಿವಿಧ ಸಮುದಾಯಗಳ ಅಭ್ಯುದಯಕ್ಕೆ ನಿರ್ದಿಷ್ಟ ಪರಿಹಾರ ಕ್ರಮಗಳನ್ನು ರೂಪಿಸಲು ಸಾಧ್ಯ.

ಇದನ್ನೂ ಓದಿ ವಿಷಮ ಭಾರತ | ಸರ್ಪಗಳತ್ತ ಕುಪ್ಪಳಿಸುತ್ತಿರುವ ದಲಿತ ಕಪ್ಪೆಗಳು; ಪ್ರತ್ಯೇಕ ಮತಕ್ಷೇತ್ರಗಳೇ ಪರಿಹಾರ?

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X