ತೀವ್ರವಾದ ಶಾಖವು ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಾಣಿಸಿಕೊಳ್ಳುವ ಮಾನಸಿಕ ಅಸ್ವಸ್ಥತೆ ಆಕ್ರಮಣಶೀಲ ಮನಃಸ್ಥಿತಿಗೆ ಮತ್ತು ಕೆಲವೊಮ್ಮೆ ಇದು ಹಿಂಸಾಚಾರಕ್ಕೂ ತಿರುಗುವ ಸಂಭವವಿರುತ್ತದೆ. ತಂಪಾದ ವಾತಾವರಣ ಹೊಂದಿರುವ ನಗರಗಳಿಗಿಂತ ಬಿಸಿ ವಾತಾವರಣ ಇರುವ ನಗರಗಳು ಹೆಚ್ಚು ಹಿಂಸಾತ್ಮಕ ಸ್ವರೂಪ ಹೊಂದಿವೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಹಿಂಸಾಚಾರಗಳು ಹೆಚ್ಚಬಹುದಾದ ಸಾಧ್ಯತೆಗಳು ಹೆಚ್ಚು.
ಅದೊಂದು ಕಡುಬಡತನದ ಕುಟುಂಬ. ಒಂದು ಹೊತ್ತಿನ ಗಂಜಿಗೂ ತತ್ವಾರ. ಇರುವ ತುಂಡು ಭೂಮಿಯಲ್ಲಿ ಬೆಳೆ ಬೆಳೆಯಲು ಮುಂಗಾರು ಮಳೆಯ ಜೂಜಾಟದಿಂದ ಹಿಡಿದು ಬಿತ್ತುವ ಬೀಜ ಖರೀದಿಯವರೆಗೆ ಕುಟುಂಬಕ್ಕೆ ನಾನಾ ಕಷ್ಟ. ಏನು ಮಾಡುವುದು ಎಂದು ತೋಚದೆ ಸದಾ ಯೋಚನಾಮಗ್ನನಾಗಿ ಅಸಹಾಯಕನಾಗಿರುವ ಪತಿ. ಈ ಬಡತನದ ಬೇಗೆಯ ನಡುವೆಯೂ ಅವರಿವರ ಮನೆಯಲ್ಲಿ ಸಾಲ ಮಾಡಿ ಗಂಡನಿಗೆ ಇಷ್ಟವಾಗುವ ಅಡುಗೆ ಮಾಡಿ ಬಡಿಸುವ ಹೆಂಡತಿ. ಈಕೆ “ಸಾಲ ಮಾಡಿಯಾದರೂ ತುಪ್ಪ ತಿನ್ನು” ಎನ್ನುವ ಸ್ವಭಾವದವಳೇ ಎಂದು ಮೇಲು ನೋಟಕ್ಕೆ ಅನಿಸುತ್ತಾಳಾದರೂ, ಅದರ ಹಿಂದಿನ ಆತಂಕವೇ ಬೇರೆ. ಅಕ್ಕಪಕ್ಕದ ಮನೆಯಲ್ಲಾಗುವ ಆತ್ಮಹತ್ಯೆಗಳ ಸರಣಿ ತನ್ನ ಮನೆಬಾಗಿಲನ್ನೂ ತಟ್ಟೀತೇ ಎಂಬ ದುಗುಡ ಆಕೆಗೆ. ತನ್ನ ಪತಿಯನ್ನೂ ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿರಬಹುದೇ ಎಂಬ ಅನುಮಾನ. ಆತ್ಮಹತ್ಯೆಯ ಯೋಚನೆಗಳಿಂದ ಆತನನ್ನು ಹೊರತರಲು ನಾನಾಬಗೆಯಿಂದ ಆಕೆ ನಡೆಸುತ್ತಿರುವ ಶತಪ್ರಯತ್ನಗಳಲ್ಲಿ ಇದೂ ಒಂದು.
ಇದು ರೈತರ ಸರಣಿ ಆತ್ಮಹತ್ಯೆಯ ಕುರಿತಂತೆ ಬಂದ ಒಂದು ಚಲನಚಿತ್ರದ ಕಥೆಯ ತುಣುಕು. ಹವಾಮಾನ ಬದಲಾವಣೆಯಿಂದ ಪ್ರಕೃತಿಯಲ್ಲಿ ಆಗುವ ವೈಪರೀತ್ಯಗಳು ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಉಂಟುಮಾಡಬಲ್ಲವು ಎಂಬುದಕ್ಕೆ ಇದು ಒಂದು ನಿದರ್ಶನ.
ಹವಾಮಾನ ಬದಲಾವಣೆ ಮತ್ತು ಆತ್ಮಹತ್ಯೆ
ಭೂಮಿಯಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಮಳೆ ಬೀಳುವಿಕೆಯ ಏರಿಳಿತಗಳ ಪರಿಣಾಮವನ್ನು ರೈತರು ಕೃಷಿ ವಲಯದಲ್ಲಿ ಅನುಭವಿಸುವಂತಾಗಿದೆ. ಇದು ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ವೈರುಧ್ಯ ಪರಿಣಾಮ ಬೀರುತ್ತಿರುವುದಲ್ಲದೆ ಅವರ ಮಾನಸಿಕ ಆರೋಗ್ಯವನ್ನೂ ಹದಗೆಡುವಂತೆ ಮಾಡಿದೆ. ಹೀಗಾಗಿ ಮಳೆಯ ಅಭಾವ ಕಾಡಿದ ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿ ವರದಿಯಾಗಿವೆ ಮತ್ತು ಈ ಘಟನೆಗಳ ನಂತರ ಪದೇ ಪದೇ ಆತ್ಮಹತ್ಯೆ ಕುರಿತಾದ ಆಲೋಚನೆಗಳು ಕೃಷಿಕರನ್ನು ಕಾಡುತ್ತಿವೆ ಎಂಬುದು ತಜ್ಞರ ಅಭಿಮತ.
ಕ್ಲೈಮೇಟ್ ಚೇಂಜ್ ಆಂಡ್ ಅಗ್ರಿಕಲ್ಚರಲ್ ಸೂಸೈಡ್ಸ್ ಇನ್ ಇಂಡಿಯಾ ಎನ್ನುವ ಸಂಶೋಧನಾ ಲೇಖನ ಕೇವಲ ಒಂದು ದಿನದಲ್ಲಿ ವಾತಾವರಣದಲ್ಲಿ ಕೇವಲ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ತಾಪಮಾನ ಕೂಡ ಅಂದಾಜು 70 ಆತ್ಮಹತ್ಯೆಗಳಿಗೆ ಕಾರಣವಾಗಬಹುದು ಎನ್ನುವ ಆಘಾತಕಾರಿ ಅಂಕಿಅಂಶಗಳನ್ನು ನಮ್ಮ ಮುಂದಿಡುತ್ತದೆ. ಇನ್ನೊಂದು ಲೇಖನ ಸಾಮಾನ್ಯವಾಗಿ ಬೀಳುವ ಮಳೆಯಲ್ಲಿ ಕೇವಲ ಐದು ಶೇಕಡಾದಷ್ಟು ವ್ಯತ್ಯಾಸವಾದರೂ, ರೈತರ ಆತ್ಮಹತ್ಯೆಯ ಅಂಕಿ 810ರ ಗಡಿ ದಾಟುತ್ತದೆ ಎನ್ನುತ್ತದೆ. ಹೀಗೆ ಹವಾಮಾನ ಬದಲಾವಣೆ ಕೃಷಿಯನ್ನು ರೈತರಿಗೆ ಅತ್ಯಂತ ತ್ರಾಸದಾಯಕ ಮತ್ತು ನಷ್ಟದಾಯಕವನ್ನಾಗಿ ಮಾಡುವ ಮೂಲಕ ಅವರ ಮಾನಸಿಕ ಕ್ಷೋಭೆಗೆ ಕಾರಣವಾಗಿ ಅವರಲ್ಲಿ ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುತ್ತಿದೆ.

ಹವಾಮಾನ ಬದಲಾವಣೆ ಮತ್ತು ಮಾನಸಿಕ ಆರೋಗ್ಯ
ಮಹಾ ಮಳೆಗಳು, ಅದರೊಂದಿಗೆ ಬರುವ ಭೀಕರ ಪ್ರವಾಹಗಳು, ಭೂಕುಸಿತ, ಏರುತ್ತಿರುವ ತಾಪಮಾನ, ಸಮುದ್ರ ಮಟ್ಟ ಏರಿಕೆ ಮತ್ತು ಬರಗಾಲದಂತಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮಗಳು ಪ್ರಸ್ತುತ ನಾವು ವಾಸಿಸುತ್ತಿರುವ ಭೂಮಿಯ ಚಿತ್ರಣವನ್ನೇ ಬದಲಾಯಿಸುತ್ತವೆ. ನಮ್ಮ ಆಹಾರದ ಮತ್ತು ನೀರಿನ ಮೂಲಗಳನ್ನು ಅಡ್ಡಿಪಡಿಸುತ್ತವೆ, ಕೃಷಿ ಪರಿಸ್ಥಿತಿಗಳನ್ನು ಬದಲಾಯಿಸುತ್ತವೆ. ಬಳಸಲಾಗುತ್ತಿರುವ ಮೂಲಸೌಕರ್ಯಗಳಿಗೆ ಹಾನಿಯುಂಟು ಮಾಡುತ್ತವೆ. ಈ ಎಲ್ಲವೂ ಒಟ್ಟಾರೆಯಾಗಿ ಪ್ರತಿಯೊಬ್ಬರಲ್ಲೂ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ.
ಬದಲಾಗುತ್ತಿರುವ ಹವಾಮಾನದಿಂದಾಗಿ ಆಗಾಗ್ಗೆ, ಘಟಿಸುವ ಹವಾಮಾನ ವೈಪರೀತ್ಯ ಘಟನೆಗಳು, ಆಘಾತಕಾರಿ ಘಟನೆ ಸಂಭವಿಸಿದ ನಂತರದಲ್ಲಿ ಕಾಣಿಸಿಕೊಳ್ಳುವ ಒತ್ತಡದಿಂದ ಉಂಟಾಗುವ ಅಸ್ವಸ್ಥತೆ, ಆತಂಕ, ಖಿನ್ನತೆ, ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳು ಹೆಚ್ಚಾಗುವುದು, ನಿದ್ರಾ ಹೀನತೆ, ತೀವ್ರವಾಗಿ ದುಃಖತಪ್ತರಾಗುವುದು, ಬದುಕುಳಿದವರಲ್ಲಿ ತಮ್ಮ ಕಣ್ಣೆದುರೇ ತೀರಿಹೋದವರನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ಅಪರಾಧಿ ಪ್ರಜ್ಞೆ ಕಾಡುವುದು, ಮನಸ್ಸಿಗೆ ಗಂಭೀರ ಆಘಾತ, ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಪುನಃ ಪುನಃ ಬರುವುದನ್ನು ಹೆಚ್ಚು ಹೆಚ್ಚು ಪ್ರಚೋದಿಸುತ್ತವೆ.
ಆದರೆ ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸಾಕಷ್ಟು ಗಮನ ನೀಡದೆ ಇರುವುದು ಆತಂಕಕಾರಿ ಸಂಗತಿಯಾಗಿದೆ. ಯಾವುದೇ ರೀತಿಯ ವಿಪತ್ತಿನಿಂದ ಉಂಟಾಗುವ ಮಾನಸಿಕ ಪರಿಣಾಮಗಳು ದೈಹಿಕವಾಗಿ ಉಂಟಾಗುವ ನೋವುಗಳಿಗಿಂತ 40 ಶೇಕಡಾ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ.
ಬಿಸಿಗಾಳಿ ತರುವ ಮಾನಸಿಕ ಸಮಸ್ಯೆ
ತಂಗಾಳಿ ಯಾವತ್ತೂ ಮನಸ್ಸಿಗೆ ಆಹ್ಲಾದಕರವಾಗಿ, ಮನಸ್ಸಿಗೆ ಮುದತರುವ ಉಪಮೆಯಾಗಿ ಬಳಕೆಯಾದರೆ ಇಲ್ಲಿ ಬಿಸಿಗಾಳಿ ಅಥವಾ ಶಾಖದ ಅಲೆಗಳಿಂದ ಉಂಟಾಗುವ ಒತ್ತಡವು ಸ್ಕಿಜೋಫ್ರೇನಿಯಾ, ಉನ್ಮಾದ ಮುಂತಾದ ಮಾನಸಿಕ ಆರೋಗ್ಯ ಅಸ್ವಸ್ಥತೆಯಿಂದ ಬಳಲುವವರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ, ಕಡಿಮೆ ಐಕ್ಯೂ ಮಟ್ಟದ ಜೊತೆಗೆ, ಮಾನಸಿಕ ಅಸ್ವಸ್ಥತೆಯಿಲ್ಲದವರಿಗಿಂತ ಮಾನಸಿಕ ಅಸ್ವಸ್ಥತೆ ಹೊಂದಿರುವ ಜನರು ಬಿಸಿಗಾಳಿಯಿಂದಾಗಿ ಸಾಯುವ ಸಾಧ್ಯತೆ ಮೂರು ಪಟ್ಟು ಹೆಚ್ಚುಎಂದು ಸಂಶೋಧನೆಗಳು ಹೇಳುತ್ತವೆ.
ತೀವ್ರವಾದ ಶಾಖವು ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಾಣಿಸಿಕೊಳ್ಳುವ ಮಾನಸಿಕ ಅಸ್ವಸ್ಥತೆ ಆಕ್ರಮಣಶೀಲ ಮನಃಸ್ಥಿತಿಗೆ ಮತ್ತು ಕೆಲವೊಮ್ಮೆ ಇದು ಹಿಂಸಾಚಾರಕ್ಕೂ ತಿರುಗುವ ಸಂಭವವಿರುತ್ತದೆ. ತಂಪಾದ ವಾತಾವರಣ ಹೊಂದಿರುವ ನಗರಗಳಿಗಿಂತ ಬಿಸಿ ವಾತಾವರಣ ಇರುವ ನಗರಗಳು ಹೆಚ್ಚು ಹಿಂಸಾತ್ಮಕ ಸ್ವರೂಪ ಹೊಂದಿವೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಹಿಂಸಾಚಾರಗಳು ಹೆಚ್ಚಬಹುದಾದ ಸಾಧ್ಯತೆಗಳು ಹೆಚ್ಚು.

ಪ್ರವಾಹಗಳು ತಂದೊಡ್ಡುವ ಮಾನಸಿಕ ಅಸ್ವಸ್ಥತೆ
ಪ್ರವಾಹದಂತಹ ನೈಸರ್ಗಿಕ ವಿಪತ್ತು, ಜನರಲ್ಲಿ ಜೀವನ ಮತ್ತು ಆಸ್ತಿಯ ಕಳೆದುಕೊಳ್ಳುವ ಭಯ, ಆರ್ಥಿಕ ಒತ್ತಡ, ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಮುಂತಾದ ಗಂಭೀರವಾದ ಮಾನಸಿಕ ಒತ್ತಡಗಳನ್ನು ತರುತ್ತದೆ. ಆಘಾತಾನಂತರದ ಒತ್ತಡದ ಸಮಸ್ಯೆ ಅಥವಾ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಎಂದರೆ, ಯುದ್ಧ, ಅಪಘಾತ, ಲೈಂಗಿಕ ಹಲ್ಲೆ, ನೈಸರ್ಗಿಕ ವಿಪತ್ತುಗಳಂತಹ ಆಘಾತಕಾರಿ ಅಥವಾ ಭಯಾನಕ ಘಟನೆಯನ್ನು ಅನುಭವಿಸಿದ ನಂತರ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆ. ಇದು ಆತಂಕ, ಭಯ, ಘಟನೆಯ ಫ್ಲ್ಯಾಷ್‌ಬ್ಯಾಕ್‌ಗಳು ಅಥವಾ ಕನಸುಗಳಲ್ಲಿ ಘಟನೆಯನ್ನು ಮರು ಅನುಭವಿಸುವುದು, ಮತ್ತು ಭಾವನಾತ್ಮಕ ಒತ್ತಡ ತರುವ ಮೂಲಕ ದೈನಂದಿನ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ.
ಸಮೀಕ್ಷೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಲ್ಲಿ, 20 ಶೇಕಡಾರಷ್ಟು ಜನರು ಖಿನ್ನತೆಯಿಂದ, 28.3 ಶೇಕಡಾ ಜನರು ರಷ್ಟು ಆತಂಕದಿಂದ ಮತ್ತು 36 ಶೇಕಡಾರಷ್ಟು ಜನ ಆಘಾತಾನಂತರದ ಒತ್ತಡದ ಸಮಸ್ಯೆ (ಪಿಟಿಎಸ್‌ಡಿ) ಯಿಂದ ಬಳಲುತ್ತಿದ್ದಾರೆ ಎನ್ನುತ್ತವೆ. ಭಾರತದಲ್ಲಿನ ಅನೇಕ ಅಧ್ಯಯನಗಳು ಪ್ರವಾಹದ ಮಾನಸಿಕ ಆರೋಗ್ಯದ ಪರಿಣಾಮಗಳನ್ನು ವರದಿ ಮಾಡಿವೆ. ಅವುಗಳ ಪ್ರಕಾರ ಭಾರತದಲ್ಲಿ ಪ್ರವಾಹ ಪೀಡಿತ ಜನಸಂಖ್ಯೆಯಲ್ಲಿ ಆಘಾತಾನಂತರದ ಒತ್ತಡದ ಸಮಸ್ಯೆ (ಪಿಟಿಎಸ್‌ಡಿ) ಹರಡುವಿಕೆಯು ಸುಮಾರು 50 ಶೇಕಡಾದಷ್ಟಿದೆ ಎಂದು ಅಂದಾಜಿಸಲಾಗಿದೆ. ವಿಪತ್ತು ಅಥವಾ ಘಟನೆ ಸಂಭವಿಸಿದ ಒಂದು ವರ್ಷದ ನಂತರವೂ ಈ ಪ್ರದೇಶದಲ್ಲಿ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ಹೆಚ್ಚಾಗಿ ಕಂಡುಬರುತ್ತವೆ.
ಹವಾಮಾನ ಬದಲಾವಣೆ ಉಂಟುಮಾಡುವ ವಲಸೆ ಮತ್ತು ಮಾನಸಿಕ ಪ್ರಕ್ಷುಬ್ಧತೆ
ಹವಾಮಾನ ಬದಲಾವಣೆ ತಂದೊಡ್ಡುವ ಆಹಾರ ಮತ್ತು ನೀರಿನ ಕೊರತೆ; ಕೃಷಿಯಲ್ಲಿ ನಷ್ಟ; ಆರ್ಥಿಕ ಸಂಕಷ್ಟ; ಅನಿರೀಕ್ಷಿತ ಸಾವು ನೋವುಗಳು; ವಸತಿ ಮತ್ತು ಮೂಲ ಸೌಕರ್ಯಗಳಿಗೆ ಉಂಟಾಗುವ ಹಾನಿ; ಮುಂತಾದವು ವಿಕೋಪ ಪೀಡಿತ ಪ್ರದೇಶಗಳಲ್ಲಿನ ಜನರು ಹೊಸ ಜೀವನ ಮತ್ತು ಉದ್ಯೋಗಾವಕಾಶಗಳನ್ನು ಅರಸುತ್ತಾ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡುತ್ತವೆ. ಈ ಅನಿವಾರ್ಯ ವಲಸೆ ಕೌಟುಂಬಿಕ ಸಂಬಂಧಗಳನ್ನು ದೂರಮಾಡಿ ಅನೇಕ ವಿಧದ ಮಾನಸಿಕ ತುಮುಲಗಳನ್ನು ಹಾಗು ಒತ್ತಡಗಳನ್ನು ಅನುಭವಿಸುವಂತೆ ಮಾಡುತ್ತದೆ.
ಈ ಸಂಘರ್ಷವು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಲ್ಲುದು. ಪ್ರತಿ ಐದು ವಲಸಿಗರ ಪೈಕಿ ಒಬ್ಬರು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಅನುಭವಿಸುತ್ತಾರೆ ಎನ್ನುತ್ತವೆ ಸಂಶೋಧನೆಗಳು.
ಹೊಸ ಹವಾಮಾನ ಬದಲಾವಣೆ ಮತ್ತು ಮಾನಸಿಕ ಆರೋಗ್ಯ ಪರಿಕಲ್ಪನೆಗಳು
ಜಗತ್ತಿನಲ್ಲಿ ಹವಾಮಾನ ಬದಲಾವಣೆ/ಪರಿಸರ-ಆತಂಕದಿಂದ ಪ್ರಭಾವಕ್ಕೊಳಗಾದ ಜನರ ಸಂಖ್ಯೆಯ ಕುರಿತು ಇನ್ನೂ ಯಾವುದೇ ಅಧಿಕೃತ ಅಂಕಿಅಂಶಗಳಿಲ್ಲ. ಆದರೆ ಹವಾಮಾನ ಬದಲಾವಣೆಯ ಕುರಿತು ನಡೆಸಲಾದ ಸಂಶೋಧನೆಗಳು ಪ್ರಪಂಚದಾದ್ಯಂತ ಅನೇಕ ಜನರಲ್ಲಿ ಹವಾಮಾನ ಸಂಬಂಧಿತ ಆತಂಕ ಹೆಚ್ಚಾಗಿದೆ ಎಂಬುದನ್ನು ಬಹಿರಂಗಪಡಿಸಿವೆ. 2021 ರಲ್ಲಿ ಹವಾಮಾನ ಬದಲಾವಣೆಯ ಆತಂಕ ಮತ್ತು 16-25 ವರ್ಷ ವಯಸ್ಸಿನವರ ಮೇಲೆ ಅದರ ಪ್ರಭಾವದ ಕುರಿತು ಅಧ್ಯಯನವೊಂದನ್ನು ನಡೆಸಲಾಯಿತು. ಇದರಲ್ಲಿ 10 ದೇಶಗಳ 10,000 ಮಕ್ಕಳು ಮತ್ತು ಯುವಜನರನ್ನು ಸಮೀಕ್ಷೆ ಮಾಡಲಾಯಿತು. ಈ ಅಧ್ಯಯನವು, ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರೂ ಹವಾಮಾನ ಬದಲಾವಣೆಯ ಕುರಿತು ಕಾಳಜಿ ವಹಿಸುತ್ತಾರೆ ಎಂಬ ಅಂಶವನ್ನು ಗಮನಿಸಿದೆ. ಇದರೊಂದಿಗೆ ಭಾಗವಹಿಸಿದ 50 ಪ್ರತಿಶತಕ್ಕೂ ಹೆಚ್ಚು ಜನರು ಪರಿಸರದ ಕುರಿತಾದ ತಮ್ಮ ದುಃಖ, ಚಿಂತೆ, ಕೋಪ, ಶಕ್ತಿಹೀನತೆ, ಅಸಹಾಯಕತೆ ಮತ್ತು ಅಪರಾಧಿ ಪ್ರಜ್ಞೆ ಭಾವನೆಗಳನ್ನು ಹೊರಹಾಕಿದ್ದಾರೆ. ಇವುಗಳ ಆಧಾರದ ಮೇಲೆ ಕೆಲವೊಂದು ಹೊಸ ಪರಿಸರ ಸಂಬಂಧಿ ಮಾನಸಿಕ ಆರೋಗ್ಯ ಪರಿಕಲ್ಪನೆಗಳನ್ನು ಮನೋವೈದ್ಯರು ಗುರುತಿಸುತ್ತಾರೆ.
ಪರಿಸರ–ಆತಂಕ/ Eco Anxiety
ಪರಿಸರ-ಆತಂಕವನ್ನು ಕಾಯಿಲೆ ಎಂದು ಗುರುತಿಸಿಲ್ಲವಾದರೂ, ಇದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ರೋಗ ಲಕ್ಷಣ ಎಂದು ವ್ಯಾಖ್ಯಾನಿಸಲಾಗಿದೆ. ಅಮೇರಿಕನ್ ಸೈಕಾಲಜಿ ಅಸೋಸಿಯೇಷನ್ (APA) ಪರಿಸರ-ಆತಂಕವನ್ನು “ಭೂಗ್ರಹದ ಮೇಲೆ ಹವಾಮಾನ ಬದಲಾವಣೆ ಉಂಟು ಮಾಡುವ ಹಾನಿಯನ್ನು ತಡೆಯಲು ಸಾಧ್ಯವಿಲ್ಲ. ಹೀಗಾದರೆ ನಮ್ಮ ಭವಿಷ್ಯ ಏನು? ಮುಂದಿನ ಪೀಳಿಗೆ ಹೇಗೆ ಬದುಕುತ್ತದೆ ಎಂಬ ಭಯʼ ಎಂಬುದಾಗಿ ವಿವರಿಸುತ್ತದೆ. ಇದರಿಂದ ಬಳಲುತ್ತಿರುವವರಲ್ಲಿ ನಿದ್ರಾ ಭಂಗ, ನರಗಳಲ್ಲಿ ಒತ್ತಡ, ಕೆಲವೊಮ್ಮೆ ಉಸಿರುಗಟ್ಟುವಿಕೆ ಮತ್ತು ಖಿನ್ನತೆ ಕಾಣಿಸಿಕೊಳ್ಳಬಹುದು.
ಪರಿಸರ–ಅಪರಾಧಿ ಪ್ರಜ್ಞೆ/ Eco guilt
ಪರಿಸರ-ಅಪರಾಧವನ್ನು ಜನರು ತಾವು ತಮ್ಮ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾಲಿಸಬೇಕಾದ ವೈಯಕ್ತಿಕ ಅಥವಾ ಸಾಮಾಜಿಕ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಭಾವಿಸಿದಾಗ ಅಥವಾ ಪರಿಸರವನ್ನು ಕಲುಷಿತಗೊಳಿಸುವ ಚಟುವಟಿಕೆಗಳ ಬಗ್ಗೆ ಯೋಚಿಸಿದಾಗ ಅನುಭವಿಸುವ ಅಪರಾಧಿ ಮನೋಭಾವದ ಒಂದು ರೂಪವೆಂದು ವ್ಯಾಖ್ಯಾನಿಸಲಾಗಿದೆ. ಜನರು ತಮ್ಮ ನಿಷ್ಕ್ರಿಯತೆಯ ಮೂಲಕ ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದಾಗ ಕಂಡುಬರುವ ಮನೋಭಾವ ಎನ್ನಬಹುದು. ಪ್ರವಾಸದ ಸಂದರ್ಭಗಳಲ್ಲಿ ಜನರನ್ನು ಹೆಚ್ಚಾಗಿ ಈ ಅಪರಾಧಿ ಪ್ರಜ್ಞೆ ಕಾಡುತ್ತದೆ. ಈ ರೀತಿ ಪರಿಸರ ಪರವಾಗಿರುವ ಅಪರಾಧಿ ಪ್ರಜ್ಞೆ ಜನರಲ್ಲಿ ಪರಿಸರ-ಪರ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರೇಪಣೆಯನ್ನೂ ನೀಡಬಲ್ಲುದು.

ಪರಿಸರ ದುಃಖ/Ecological grief
ಇದನ್ನು ಪರಿಸರ ನಷ್ಟಕ್ಕೆ ಸಂಬಂಧಿಸಿದಂತೆ ಉಂಟಾಗುವ ದುಃಖ ಎಂದು ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಪ್ರಬೇಧಗಳ ನಾಶ, ಪರಿಸರ ವ್ಯವಸ್ಥೆಗಳು ಮತ್ತು ತಮ್ಮ ನೆಚ್ಚಿನ ಪ್ರಕೃತಿಯ ಸುಂದರ ತಾಣಗಳ ನಷ್ಟವೂ ಸೇರಿದೆ. ಭವಿಷ್ಯದ ಪರಿಸರ ನಷ್ಟಗಳಿಗೆ ಸಂಬಂಧಿಸಿದ ದುಃಖವೂ ಇದರಲ್ಲಿ ಸೇರಿದೆ.
***
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಮಾನಸಿಕ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟಿವೆ ಮತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಸುಮಾರು 1 ಶತಕೋಟಿ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಬೃಹತ್ ಗಾತ್ರದ ಅಂಕಿಅಂಶಗಳ ಹೊರತಾಗಿಯೂ ಆರೋಗ್ಯ ಸೇವೆಗಳಲ್ಲಿ ಮಾನಸಿಕ ಆರೋಗ್ಯ ಅಷ್ಟಾಗಿ ಪರಿಗಣಿಸಲ್ಪಡುತ್ತಿಲ್ಲ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹೆಚ್ಚಿನ ಜನರು ಅದಕ್ಕೆ ಸಂಬಂಧಿಸಿದ ಆರೋಗ್ಯ ಸೇವೆಯನ್ನೂ ಪಡೆಯುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ ಪರಿಸರ ಸಂಬಂಧೀ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಅದನ್ನು ಪ್ರತ್ಯೇಕಿಸಿ, ಅದಕ್ಕೆ ತಕ್ಕುದಾದ ಪರಿಹಾರೋಪಾಯಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುವುದು ಅಷ್ಟು ಸುಲಭದ ಮಾತಲ್ಲ.
ಪ್ರಸ್ತುತ ಸಂದರ್ಭದಲ್ಲಿ ಹೇಳುವುದಾದರೆ, ಪರಿಸರ-ಸಂಬಂಧಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಕೇವಲ ವೈದ್ಯಕೀಯ ವಿಧಾನಗಳ ಮೂಲಕ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ನೀತಿ ನಿರೂಪಣೆಯ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರೋಗ್ಯ ಇಲಾಖೆ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಪರಿಸರ ಮಂತ್ರಾಲಯಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ (NMHS) ರೀತಿಯ ಇತರ ಸಣ್ಣಮಟ್ಟದ ಸಮೀಕ್ಷೆಗಳನ್ನು ತೀವ್ರ ಹವಾಮಾನ ವೈಪರೀತ್ಯದ ಘಟನೆಗಳ ನಂತರ ಕಡ್ಡಾಯವಾಗಿ ನಡೆಸುವ ಮೂಲಕ, ಆಘಾತಕ್ಕೊಳಗಾದವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡ ಬಹುದು. ಇದರೊಂದಿಗೆ ಮಾನಸಿಕ ಆರೋಗ್ಯ ಸೇವೆ ನೀಡುವ ವೃತ್ತಿಪರರನ್ನು ಪರಿಸರ ಜ್ಞಾನದೊಂದಿಗೆ, ಪರಿಸರ ಸಂಬಂಧಿ ಆಧುನಿಕ ಮಾನಸಿಕ ಸಮಸ್ಯೆಗಳ ಬಗೆಗೆ ಸಜ್ಜುಗೊಳಿಸಬೇಕಾಗಿದೆ. ತಮ್ಮ ಕೌನ್ಸೆಲಿಂಗ್ ಸಂದರ್ಭದಲ್ಲಿ ಪ್ರಕೃತಿ-ಆಧಾರಿತ ಪ್ರಶ್ನೆಗಳನ್ನು ಸೇರಿಸುವುದು, ತಮ್ಮನ್ನು ಭೇಟಿ ಮಾಡಲು ಬಂದವರು ಪರಿಸರ-ಆತಂಕವನ್ನು ಹೊಂದಿದ್ದಾರೆಯೇ ಇಲ್ಲವೇ ಎಂದು ನಿರ್ಣಯಿಸುವಲ್ಲಿ ಸಹಾಯ ಮಾಡಬಹುದು.
ಇದನ್ನೂ ಓದಿ ಹೊಗಳಿದರಷ್ಟೇ ಸಾಕೇ, ಜಾರ್ಜ್ ಮೌಲ್ಯಗಳನ್ನು ಜರ್ನಲಿಸಂಗೆ ಅಳವಡಿಸಿಕೊಳ್ಳಲೂಬೇಕೇ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಇತ್ತೀಚೆಗೆ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆಯುಷ್ಮಾನ್ ಭಾರತ ಕಾರ್ಯಕ್ರಮದಡಿಯಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟು ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರಗಳಾಗಿರುವ ಉಪ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯಕ್ಕೆ, ಆಪ್ತಸಲಹೆಗೆ, ಟೆಲಿಫೋನ್ ಮೂಲಕ ಆಪ್ತಸಲಹೆಗೆ ಒತ್ತು ನೀಡಲಾಗುತ್ತಿದೆ. ಇದರೊಂದಿಗೆ ಪರಿಸರ ಸಂಬಂಧಿ ಮಾನಸಿಕ ಸಮಸ್ಯೆಗಳನ್ನೂ ವಿಶೇಷವಾಗಿ ಸೇರಿಸಿಕೊಂಡು, ಆಪ್ತ ಸಲಹೆ ನೀಡುವವರಿಗೆ ಅದರ ಕುರಿತೂ ಮಾಹಿತಿ ಮತ್ತು ತರಬೇತಿ ನೀಡಿ ಅದರ ಬಗ್ಗೆಯೂ ಗಮನ ನೀಡುವ ಕುರಿತು ಚಿಂತಿಸಬೇಕಿದೆ.
ಇದೇ ಅಕ್ಟೋಬರ್ 10 ರಂದು ಅಂತರರಾಷ್ಟ್ರೀಯ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸೇವೆಗಳಲ್ಲಿ ಹವಾಮಾನ ಬದಲಾವಣೆ ತರುವ ಮಾನಸಿಕ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸಬೇಕಿದೆ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ