ರಾಯಭಾರ | ಡಿಕೆ ಸಾಹೇಬರ ‘ಮಿಷನ್‌ ಚೀಫ್‌ ಮಿನಿಸ್ಟರ್‌’ ಎಂಬ ಯೋಜನೆ ‘ಗಾಳಿ ತೆಗೆಯುವ ಕಾರ್ಯಕ್ರಮ’ವಾದ ಪರಿ!  

Date:

Advertisements

‘ಸಿದ್ದು ಹಠಾವೋ, ಡಿಕೆಶಿ ಲಾವೋ’ ಎನ್ನುವಂತಹ ಸ್ಥಿತಿ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಡಿಕೆಶಿಯ ಪರಮಾಪ್ತರು ಹಾಗೂ ಅವರು ಪ್ರಸಕ್ತ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವ ಒಂದೇ ಒಂದು ಕೈ ಬೆರಳೆಣಿಕೆಯನ್ನೂ ಮೀರದ ನಾಯಕರೂ ಸಹ ‘ಸಿದ್ದು ಹಠಾವೋ’ ಎಂದು ಕನಸಿನಲ್ಲಿಯೂ ಉಸಿರುವುದಿಲ್ಲ, ಹಾಗೆ ಮಾಡಿದರೆ ಸರ್ಕಾರವಾದರೂ ಉಳಿದೀತೇ ಎನ್ನುವ ಆತಂಕ ಅವರಲ್ಲಿದೆ.

ಸಮಕಾಲೀನ ರಾಜಕಾರಣದ ಪ್ರೇರಣೆಗಳನ್ನು ಗಮನಿಸಿದರೆ ಮಹತ್ವಾಕಾಂಕ್ಷೆ ಹಾಗೂ ಸೇಡು ಈ ಎರಡು ಅಂಶಗಳು ಹೆಚ್ಚಾಗಿ ವಿಜೃಂಭಿಸುವುದನ್ನು ಮೇಲ್ನೋಟಕ್ಕೆ ಗುರುತಿಸಬಹುದು. ಅಧಿಕಾರದ ಸುತ್ತಲೂ ಗಿರಕಿ ಹೊಡೆಯುವ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಹಾಗೂ ಶತಾಯಗತಾಯ ಅದನ್ನು ಸಾರ್ವಜನಿಕವಾಗಿ ಸಾಧಿಸಿ ತೋರಿಸುವುದು ಇದುವೇ ಇಂದಿನ ರಾಜಕಾರಣದ ಯಶಸ್ಸಿನ ಮಾನದಂಡವಾಗಿದೆ. ಇತಿಹಾಸದುದ್ದಕ್ಕೂ ಮಹತ್ವಾಕಾಂಕ್ಷೆಗಳು ಜಗದ್ವಿಖ್ಯಾತರನ್ನು ರೂಪಿಸಿರುವಂತೆಯೇ ಅವರ ಪತನಕ್ಕೂ ನಾಂದಿ ಹಾಡಿವೆ ಎನ್ನುವುದನ್ನು ಇಲ್ಲಿ ಮರೆಯಬಾರದು.

ಕರ್ನಾಟಕದ ರಾಜಕಾರಣದಲ್ಲಿ ಕಳೆದ ಕೆಲ ತಿಂಗಳ ಅವಧಿಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದವರಿಗೆ ಅದರ ಆಂತರ್ಯದಲ್ಲಿ ಸಾಮುದಾಯಿಕ ಹಿತಾಸಕ್ತಿಗಿಂತ ಹೆಚ್ಚಾಗಿ ವೈಯಕ್ತಿಕ ಹಿತಾಸಕ್ತಿ, ಮಹತ್ವಾಕಾಂಕ್ಷೆಗಳೇ ಢಾಳಾಗಿ ಗೋಚರಿಸುತ್ತವೆ. ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್‌ ಹಾಗೂ ಮೈತ್ರಿಯೆಂಬ ವಿರೋಧಾಭಾಸದಲ್ಲಿ ಬಂಧಿಗಳಾಗಿರುವ ಬಿಜೆಪಿ, ಜೆಡಿಎಸ್‌ ಈ ಮೂರು ಪಕ್ಷಗಳಲ್ಲಿಯೂ ಕೆಲವೇ ಕೆಲ ನಾಯಕರ ವೈಯಕ್ತಿಕ ಹಿತಾಸಕ್ತಿಯ ವಿಜೃಂಭಣೆಯೇ ಆ ಪಕ್ಷಗಳು ಸಾಗುವ ಭವಿಷ್ಯದ ಹಾದಿಯ ದಿಕ್ಸೂಚಿಯಾಗಿದೆ. ಯಾವುದೇ ಪಕ್ಷದ ಭವಿಷ್ಯವು ಹೀಗೆ ನಾಯಕಮಣಿಗಳ ರಾಜಕೀಯ ಹಿತಾಸಕ್ತಿಯನ್ನು ಅವಲಂಬಿಸದೆ, ಆ ಪಕ್ಷದ ವರ್ತಮಾನ ಹಾಗೂ ಭವಿಷ್ಯವನ್ನು ರೂಪಿಸುವ ಚಿಂತನೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಅದನ್ನು ಸಾಕಾರಗೊಳಿಸುವ ತಂತ್ರಗಾರಿಕೆಯಲ್ಲಿ ರೂಪುತಳೆಯಬೇಕು. ಈ ಅಂಶಗಳೇ ಅದು ಸಾಗುವ ಮಾರ್ಗದ ದಿಕ್ಸೂಚಿಯಾಗಬೇಕು. ಆದರೆ ಸದ್ಯದ ರಾಜಕಾರಣದಲ್ಲಿ ಈ ಥಿಯರಿ ಮಕಾಡೆ ಮಲಗಿದೆ, ವ್ಯಕ್ತಿಗತ ಮಹತ್ವಾಕಾಂಕ್ಷೆಗಳೇ ಮುನ್ನೆಲೆಗೆ ಬಂದಿವೆ. 

Advertisements

ಇಂತಹದ್ದೇ ಮಹತ್ವಾಕಾಂಕ್ಷೆಯ ಬೀಸಿನಲ್ಲಿ ಪದದಡಿಯ ನೆಲವೇ ಕುಸಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ತಾನು ಗುರಿಯಿಟ್ಟಿರುವ ಕುರ್ಚಿಯನ್ನು ಕಸಿದೇ ತೀರುತ್ತೇನೆ ಎಂದು ಹೊರಟಿದ್ದಾರೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌. ಬೇರೆ ಪಕ್ಷಗಳಲ್ಲಿ ಇದಕ್ಕಿಂತ ದೊಡ್ಡ ಹಳವಂಡಗಳೇ ಘಟಿಸುತ್ತಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಾರೂಢ ಪಕ್ಷವಾದ್ದರಿಂದ ಹಾಗೂ ಡಿ ಕೆ ಶಿವಕುಮಾರ್‌ ಈ ಬೆಳವಣಿಗೆಗಳ ಕೇಂದ್ರದಲ್ಲಿರುವುದರಿಂದ ಇದು ವಿಶೇಷವಾಗಿ ಗಮನಸೆಳೆಯುತ್ತಿದೆ. ಡಿ ಕೆ ಶಿವಕುಮಾರ್‌ ಅವರ ರಾಜಕಾರಣದ ವರಸೆಯನ್ನು ಗಮನಿಸಿದವರಿಗೆ ಅಲ್ಲಿ ಸ್ವಾಮಿನಿಷ್ಠೆ! ಪಕ್ಷಕ್ಕಾಗಿ ಇತರರಿಗಿಂತ ಹತ್ತು ಮೈಲಿ ಹೆಚ್ಚು ಸಾಗುವ ಕೆಚ್ಚು! ಸಂಕಷ್ಟ ಸಂದರ್ಭಗಳಲ್ಲಿಯೂ ಬೆಂಕಿಯುಂಡೆಗಳ ನಡುವೆ ಹಾದು ಪಕ್ಷವನ್ನು ರಕ್ಷಿಸುವ ಹಿರೋಯಿಸಂ! ಕಾಣಿಸುತ್ತದೆ ಎನ್ನುವವರಿದ್ದಾರೆ. ಆದರೆ, ಅವರದೇ ಪಕ್ಷದಲ್ಲಿಯೇ ಅನೇಕರು ಅದೆಲ್ಲಾ ಹಾಗೇನಿಲ್ಲ ಸ್ವಾಮಿ, ಇದು ‘ಜಸ್ಟ್‌ ನಟೋರಿಟಿ’ ಅಷ್ಟೇ ಎನ್ನುತ್ತಾರೆ! ಮುಂದುವರೆದು, ‘ಬಾಹುಬಲಿ’ ರಾಜಕಾರಣದ ಕರ್ನಾಟಕದ ಮಾಡೆಲ್‌ ಎಂದೂ ಕ(ಜ)ರೆಯುತ್ತಾರೆ! ಸತ್ಯ ಈ ಎರಡೂ ತುದಿಗಳ ನಡುವೆ ಅತ್ತಿಂದಿತ್ತ ಜೀಕಿಕೊಳ್ಳುತ್ತಿರುತ್ತದೆ. 

ಡಿಕೆಶಿ ಕೂಡ ತಮ್ಮ ಸುತ್ತ ಇಂತಹದ್ದೊಂದು ‘ಲೆಜೆಂಡ್‌ ಹವಾ’ ಇರುವುದನ್ನು ಎಂಜಾಯ್‌ ಮಾಡುತ್ತಿರುತ್ತಾರೆ. ಅವರ ಸುತ್ತಲಿನವರು ಸಹ ಇದಕ್ಕೆ ಇನ್ನಷ್ಟು ಉಪ್ಪುಖಾರ ಹಚ್ಚಿ ಚಲಾವಣೆಗೆ ಬಿಡುತ್ತಿರುತ್ತಾರೆ. ಇತ್ತ ಪ್ರತಿಪಕ್ಷಗಳೂ ಸಹ ಜಿಗಿಯಲು ಹೆಚ್ಚು ವಿಷಯಗಳಿಲ್ಲದ್ದಾಗ ಡಿಕೆಶಿ ಮೈಮೇಲೆ ಬಿದ್ದಿರುವ ಕೆಸರನ್ನು ಒಂದೊಂದಾಗಿ ಎತ್ತಿ ಹಾಡಲು ಮುಂದಾಗುತ್ತವೆ.   

DK SHIVAKUMAR 2 1

ಅದೆಲ್ಲ ಒತ್ತಟ್ಟಿಗಿರಲಿ, ಡಿ ಕೆ ಶಿವಕುಮಾರ್‌ ಕರ್ನಾಟಕದ ರಾಜಕಾರಣದಲ್ಲಿ, ಕಾಂಗ್ರೆಸ್‌ನ ಮಟ್ಟಿಗೆ ಅಗತ್ಯವಾಗಿ ಬೇಕಿದ್ದ ಅಸ್ತ್ರ. ಅಂತಹ ಅಸ್ತ್ರದ ಸಕಲ ಅಗತ್ಯಗಳನ್ನು ಮನಗಂಡೇ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರು ಡಿಕೆಶಿ ಅವರ ಬೆನ್ನಿಗೆ ನಿಂತು ಅವರನ್ನು ‘ಬಲ’ವಾಗಿ, ‘ಸಂಪನ್ಮೂಲ’ವಾಗಿ ಬೆಳೆಸಿದರು. ಜೆಡಿಎಸ್‌-ಕಾಂಗ್ರೆಸ್‌, ಕೃಷ್ಣ-ದೇವೇಗೌಡರ ನಡುವಿನ ರಾಜಕಾರಣದ ಕಣ ಸದ್ಯಕ್ಕೆ ಈ ಅಂಕಣದ ಚರ್ಚೆಗೆ ಹೊರತಾಗಿರುವುದರಿಂದ ಅಷ್ಟಕ್ಕೇ ನಿಲ್ಲಿಸೋಣ. ಈಗ ಮರಳಿ ಡಿಕೆಶಿಯವರ ಮಹತ್ವಾಕಾಂಕ್ಷೆಯ ‘ಮಿಷನ್‌ ಚೀಫ್‌ ಮಿನಿಸ್ಟರ್’ಗೆ ಬರುವುದಾದರೆ, ಮುಖ್ಯಮಂತ್ರಿ ಹುದ್ದೆಯ ಅಧಿಕಾರದ ಹಂಚಿಕೆಯ ವಿಷಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಪಿಸುಮಾತಿನಲ್ಲಿ, ರಾಜಕಾರಣದ ಗಾಸಿಪ್‌ಗಳಲ್ಲಿ ಶುರುವಾಗಿತ್ತು ಅಥವಾ ಶುರು ಮಾಡಿಸಲಾಗಿತ್ತು. ಇದೆಲ್ಲಾ ಆಗದ ಹೋಗದ ಮಾತುಗಳು, ಡಿ ಕೆ ಶಿವಕುಮಾರ್ ಅವರು ತಮ್ಮ ದೂರಗಾಮಿ ರಾಜಕಾರಣದ ಉದ್ದೇಶದಿಂದ ಪಕ್ಷದಲ್ಲಿ ತಮಗೆ ಪೈಪೋಟಿಯೊಡ್ಡುವ ತಮ್ಮದೇ ವಾರಿಗೆಯ ಪ್ರತಿಸ್ಪರ್ಧಿಗಳನ್ನು ಬದಿಗೆ ಸರಿಸಲು, ಮುಂದಿನ ಅವಕಾಶಗಳನ್ನು ಗಟ್ಟಿಗೊಳಿಸಿಕೊಳ್ಳಲು ಹೂಡುತ್ತಿರುವ ಬಾಣಗಳು ಎನ್ನುವಷ್ಟಕ್ಕೆ ಈ ಕುರಿತಾದ ಚರ್ಚೆಗಳು ನಿಲ್ಲುತ್ತಿದ್ದವು. ಆದರೆ, ಬರಬರುತ್ತಾ ಇದು ರಾಜಕೀಯ ಪಡಸಾಲೆಗಳನ್ನು ದಾಟಿ, ಮಾಧ್ಯಮಗಳ ಸುದ್ದಿಗಳನ್ನು ಲಂಘಿಸಿ, ಯಾವಾಗ ದಿನಾಂಕ, ತೇದಿಯ ಸಹಿತ ಮುಖ್ಯಮಂತ್ರಿ ಹುದ್ದೆಯ ಹಸ್ತಾಂತರವೋ, ಅಧಿಕಾರ ಹಂಚಿಕೆಯೋ ಎಂಥದ್ದೋ ಒಂದು ಘಟಿಸುತ್ತದೆ ಎನ್ನುವ ಊಹಾಪೋಹಗಳು ಎದ್ದವೋ ಅಲ್ಲಿಗೆ ಡಿಕೆಶಿ ತಾವೇ ಹೆಣೆದ ರಾಜಕೀಯದಾಟದಲ್ಲಿ ಸಂಪೂರ್ಣವಾಗಿ ಸಿಲುಕಿದರು. 

ಇದರ ಪರಿಣಾಮವೆಂದರೆ, ಇಂದು ಡಿಕೆಶಿಯವರ ‘ಹವಾ’ ಅವರೇ ರಾಜ್ಯಾಧ್ಯಕ್ಷರಾಗಿರುವ ಪಕ್ಷದಲ್ಲಿ ಅವರ ವಾರಿಗೆಯ ಎರಡನೇ ಸಾಲಿನ ಕಾಂಗ್ರೆಸ್‌ ನಾಯಕರಲ್ಲಿ ಎಷ್ಟಿದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಈ ‘ಹವಾ’ ಇದೆ ಎಂಬುದು ಯಾವಾಗಲೂ ಮಾತಿಗೆ ಸೀಮಿತವಾಗಿದ್ದರಷ್ಟೇ ಉತ್ತಮ, ಬಳಸದ ಬತ್ತಳಿಕೆಯಲ್ಲಿನ ಅಸ್ತ್ರದಂತೆ, ಎಂದೂ ಬಾರದ ಗುಮ್ಮನಂತೆ ಅದಿದ್ದರೆ ಚೆನ್ನ. ಆದರೆ, ಒಂದೊಮ್ಮೆ ತೋರಿಸಿಯೇ ತೀರುತ್ತೇನೆ ಎಂದು ಮುಂದಾದರೆ ಒಳಗಿರುವ ‘ಗಾಳಿ ತೆಗೆಯಲು’ ಕಾದಿರುವ ನೂರೆಂಟು ಕೈಗಳು ಜೊತೆಯಾಗಿ ಬಿಡುತ್ತವೆ. ಹೀಗೆ ಗಾಳಿ ತೆಗೆಸಿಕೊಳ್ಳುವ ಕೆಲಸಕ್ಕೆ ಡಿಕೆಶಿ ಅದೇಕೆ ಮುಂದಾದರೋ ಅರ್ಥವಾಗುತ್ತಿಲ್ಲ! ಸದ್ಯದ ಮಟ್ಟಿಗೆ ಡಿಕೆಶಿಯವರ ಮಹತ್ವಾಕಾಂಕ್ಷಿ ‘ಮಿಷನ್‌ ಚೀಫ್‌ಮಿನಿಸ್ಟರ್’ ಎಂಬುದು ‘ಗಾಳಿ ತೆಗೆಯುವ ಕಾರ್ಯಕ್ರಮವಾಗಿ’ ಮಾರ್ಪಾಟಾಗಿದೆ! ಹೀಗೆ ಗಾಳಿ ತೆಗೆಯುವ ಕಾರ್ಯಕ್ರಮದಲ್ಲಿ ಒಂದು ಕಾಲದಲ್ಲಿ ಡಿಕೆಶಿಯವರ ಜೊತೆಜೊತೆಗೇ ಎಸ್‌ ಎಂ ಕೃಷ್ಣರ ಭರಪೂರ ಆಶೀರ್ವಾದದಿಂದ ಬೆಳೆದ ಜಿ ಪರಮೇಶ್ವರ್, ಇವರೇಕೆ ಇಷ್ಟೊಂದು ಮಾತನಾಡುತ್ತಾರೆ ಎಂದು ಪಕ್ಷದ ಹಿರಿಯ ನಾಯಕರೆಲ್ಲಾ ಕಸಿವಿಸಿಗೊಳ್ಳುವ ಕೆ ಎನ್‌ ರಾಜಣ್ಣ, ಹನುಮನಿಗೆ ಆವರಿಸಿದ್ದ ಮರೆವು ನೀಗಿ ಸಾಗರೋಲ್ಲಂಘನಕ್ಕೆ ಸಜ್ಜಾದಂತಿರುವ ಸತೀಶ್ ಜಾರಕಿಹೊಳಿ ಮತ್ತು ಸದಾಕಾಲ ಸಿದ್ದರಾಮಯ್ಯನವರನ್ನು ನಿಜಕ್ಕೂ ಉಸಿರಾಡುವ, ಉಸಿರಾಡುವಂತೆ ನಟಿಸುವ ಸಕಲ ನೂರೆಂಟು ಗಣಗಳೂ ಸೇರಿವೆ. ತನ್ನ ಮಹತ್ವಾಕಾಂಕ್ಷೆಯ ಈಡೇರಿಕೆಗೆಂದು ಡಿಕೆಶಿ ಉರುಳಿಸಿದ ದಾಳ ಈಗ ಅವರ ಪರವಾಗಿ ಉಳಿದಿಲ್ಲ. ಡಿಕೆಶಿಯವರೇ ಚಾಲನೆ ಕೊಟ್ಟ ಆಟದಲ್ಲಿ ಸಂಪೂರ್ಣವಾಗಿ ಎದುರಾಳಿ ಪಾಳೆಯದ ಕೈ ಮೇಲಾಗಿದೆ. ಹೀಗಾಗಿ ಸದ್ಯ ತಾನು ಶಸ್ತ್ರತ್ಯಾಗ ಮಾಡುವುದೋ, ಹುತಾತ್ಮನಾಗುವುದೋ ಅಥವಾ ತಾನೇ ಸೃಷ್ಟಿಸಿಕೊಂಡ ಈ ಪರಿಸ್ಥಿತಿಯಿಂದ ಗೌರವ ನಿರ್ಗಮನಕ್ಕೆ ದಾರಿ ಹುಡುಕುವುದೋ ಎಂಬ ಗೊಂದಲದಲ್ಲಿ ಡಿಕೆ ಸಾಹೇಬರು ಇರುವಂತಿದೆ. 

dk shivakumar meets bjp leader s m krishna

ಶತಾಯಗತಾಯ ಕಾಂಗ್ರೆಸ್‌ ಸರ್ಕಾರದ ಪ್ರಸಕ್ತ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಿ ಬಿಡಬೇಕೆಂಬ ಹಠ ತೊಟ್ಟಂತೆ ವರ್ತಿಸುತ್ತಿರುವ ಡಿ ಕೆ ಶಿವಕುಮಾರ್‌ ಅವರು ಇದರಿಂದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಿರುವಂತೆ ಈಗ ಕಾಣುತ್ತಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಸಿದ್ದರಾಮಯ್ಯ ಹೊರತುಪಡಿಸಿದರೆ ಡಿ ಕೆ ಶಿವಕುಮಾರ್‌ ಅವರು ರಾಜ್ಯ ಕಾಂಗ್ರೆಸ್‌ನ ಬೇರಾವುದೇ ನಾಯಕರಿಗಿಂತಲೂ ಗಾವುದ ದೂರ ಮುಂದೆ ಸಾಗಿರುವಂತೆ ಕಾಣುತ್ತಿದ್ದರು. ಇದಕ್ಕೆ ಕಾರಣ ರಾಜ್ಯ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಮಣಿಗಳ ಸಾಲಿನಲ್ಲಿರುವ ಘಟಾನುಘಟಿ ನಾಯಕರ ಹೊರತಾಗಿಯೂ ಡಿ ಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಗಳಿಸಿದ್ದು. ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರು ಹಾಕಿದ ಶ್ರಮ, ಸಂಘಟನೆ, ಪ್ರಚಾರದಲ್ಲಿ ತೋರಿದ ಉತ್ಸಾಹ, ಪಕ್ಷದ ಕಾರ್ಯಕರ್ತರಲ್ಲಿ ತುಂಬಿದ ಚೈತನ್ಯಕ್ಕೆ ಉಪ ಮುಖ್ಯಮಂತ್ರಿ ಪಟ್ಟ ಪ್ರತಿಫಲದಂತಿತ್ತು. ಕಾಂಗ್ರೆಸ್‌ ಹೈಕಮಾಂಡ್‌ನ ಈ ನಿರ್ಧಾರದ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶವಾಗಲಿ, ಪಕ್ಷದೊಳಗೆ ದೊಡ್ಡ ಅಪಸ್ವರಗಳಾಗಲಿ ಆ ಕ್ಷಣಕ್ಕೆ ಮೂಡಿರಲಿಲ್ಲ. ಅದೇ ರೀತಿ, ಅಧಿಕಾರ ಲಾಭದ ವಿಚಾರದಲ್ಲಿಯೂ ಡಿ ಕೆ ಶಿವಕುಮಾರ್‌ ಅವರು ಜಲಸಂಪನ್ಮೂಲದಂತಹ ಪ್ರಬಲ ಖಾತೆಯ ಜೊತೆಗೆ ಕಳಶವಿಟ್ಟಂತೆ ಬೆಂಗಳೂರು ಅಭಿವೃದ್ಧಿ ಸಚಿವರು ಆದರು. ಬೆಂಗಳೂರಿನ ಉಸ್ತುವಾರಿಯ ಹೊಣೆಯೂ ಪಡೆದರು. ಇದೆಲ್ಲವೂ ಡಿಕೆಶಿಯವರ ವಿಕ್ರಮವೆಂದೇ ಪರಿಗಣಿಸಬಹುದಾದ ಸಾಧನೆಗಳು. ಇಷ್ಟು ಸಾಲದು ಎನ್ನುವಂತೆ ತಮ್ಮ ಪ್ರಭಾವಳಿಯನ್ನು ರಾಜ್ಯಾದ್ಯಂತ ಮತ್ತಷ್ಟು ವ್ಯಾಪಕವಾಗಿ ಪಸರಿಸಿಕೊಳ್ಳಲು ಅನುವಾಗುವಂತೆ ಅವರು ರಾಜ್ಯಾಧ್ಯಕ್ಷ ಹುದ್ದೆಯಲ್ಲಿಯೂ ಮುಂದವರೆದರು. ಬಹುಶಃ ತಾವಾಗಿಯೇ ಮುಖ್ಯಮಂತ್ರಿ ಸ್ಥಾನದ ತಗಾದೆ ತೆಗೆಯದೆ ಹೋಗಿದ್ದರೆ ಆ ಹುದ್ದೆಯೂ ಸಹ ಇನ್ನಷ್ಟು ಕಾಲ ಅಬಾಧಿತವಾಗಿಯೇ ಮುಂದುವರಿಯುವ ಸಾಧ್ಯತೆ ಇತ್ತು.. 

ಆದರೆ, ಡಿಕೆಶಿ ತಮಗಿದ್ದ ಈ ವಿಶೇಷ ಅವಕಾಶವನ್ನು ಬಳಸಿಕೊಂಡು ತಮ್ಮ ಭವಿಷ್ಯದ ದಾವೆದಾರಿಕೆಯನ್ನು ಮತ್ತಷ್ಟು ಮಜಬೂತಾಗಿಸಿಕೊಳ್ಳುವಲ್ಲಿ ಸೋತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಬೇರಾವುದೇ ಅಭಿವೃದ್ಧಿಗೆ ಕವಡೆಕಾಸು ಸಿಗುತ್ತಿಲ್ಲ ಎಂದು ಪದೇಪದೇ ಕಾಲೆಳೆಯುವ ಪ್ರತಿಪಕ್ಷಗಳಿಗೆ ಜಲಸಂಪನ್ಮೂಲ ಸಚಿವರಾಗಿ, ಬೆಂಗಳೂರಿನ ಅಭಿವೃದ್ಧಿ ಸಚಿವರಾಗಿ ತಕ್ಕ ಉತ್ತರ ನೀಡುವಲ್ಲಿ ಅವರು ವಿಫಲರಾಗಿದ್ದಾರೆ. ವಾಹನ ಸವಾರರಿಗೆ ನರಕದರ್ಶನ ಮಾಡುತ್ತಿರುವ ಬೆಂಗಳೂರಿನ ರಸ್ತೆಗಳಿಗೆ ಕಾಲಕಾಲಕ್ಕೆ ಕನಿಷ್ಠ ತೇಪೆ ಹಾಕುವ ಕೆಲಸವನ್ನಾದರೂ ಮಾಡಿ ಜನರ ಆಕ್ರೋಶದಿಂದ ಪಾರಾಗುವ ಬದಲಿಗೆ ಟನಲ್‌ ರೋಡ್‌ ಮಾಡಿಸುತ್ತೇನೆ ಎಂದು ಓಡಾಡುತ್ತಿದ್ದಾರೆ! ನೀರಾವರಿ ಯೋಜನೆಗಳ ವಿಚಾರದಲ್ಲಿನ ಹಿನ್ನಡೆಗೆ ಕೇಂದ್ರ ಸರ್ಕಾರವನ್ನು ಹೊಣೆ ಮಾಡುವುದರ ಆಚೆಗೆ ತಾವು ಸಾಧಿಸುತ್ತಿರುವುದು ಏನು ಎನ್ನುವುದನ್ನು ವಿವರಿಸುವಲ್ಲಿಯೂ ವಿಫಲರಾಗಿದ್ದಾರೆ. 

ಪಕ್ಷದ ರಾಜ್ಯಾಧ್ಯಕ್ಷರಾಗಿ ಡಿಕೆಶಿ ‘ಪ್ರೆಸಿಡೆಂಟ್‌ ಕಾಂಟ್‌ ಬಿ ಎ ಡಿಸಿಡೆಂಟ್‌’ (ಪಕ್ಷದ ಅಧ್ಯಕ್ಷನೇ ಭಿನ್ನಮತೀಯನಾಗಬಾರದು) ಎನ್ನುವ ತತ್ವವನ್ನೇ ಮರೆತವರಂತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯಡೆಗಿನ ತಮ್ಮ ಹಕ್ಕುಸಾಧನೆಯನ್ನು ಅವರು ಬಹಿರಂಗವಾಗಿಯೇ ನಡೆಸಿದ ಪರಿಣಾಮ ಸುಗಮವಾಗಿ ಸಾಗುತ್ತಿದ್ದ ಕರ್ನಾಟಕದ ಆಡಳಿತದಲ್ಲಿ ಅನಪೇಕ್ಷಿತ ಚರ್ಚೆಗಳು ಹುಟ್ಟಿದವು. ಹೀಗೆ ಹುಟ್ಟಿದ ಚರ್ಚೆಗಳು, ಹೂಡಿದ ತಂತ್ರಗಳು ಕಡೆಗೆ ಡಿಕೆಶಿ ಅವರ ರಾಜ್ಯಾಧ್ಯಕ್ಷ ಹುದ್ದೆಯ ಬುಡವನ್ನೇ ಅಲುಗಾಡಿಸುವ ಹಂತಕ್ಕೆ ಬಂದು ನಿಂತಿದೆ. ಇಷ್ಟು ಮಾತ್ರವೇ ಸಾಲದು ಎನ್ನುವಂತೆ, ರಾಜ್ಯಾಧ್ಯಕ್ಷನ ಹೆಸರಿನಲ್ಲಿ ಪ್ರಭಾವಿ ಸಚಿವರ ಕೈ ತಿರುವಲು ಹೋಗಿ ತಾವೇ ಪಕ್ಷದ ವೇದಿಕೆಗಳಲ್ಲಿ ಮುಖಭಂಗಕ್ಕೀಡಾದ ಸನ್ನಿವೇಶವನ್ನೂ ಡಿಕೆಶಿ ಎದುರಿಸಿದ್ದಾರೆ. ತಮಗೆ ದೊರೆತಿದ್ದ ಅಗಾಧ ಜವಾಬ್ದಾರಿಗಳ ಹೊರೆಯನ್ನು ಸಮರ್ಥವಾಗಿ ಎಳೆದು ಜನಮನ್ನಣೆ ಗಳಿಸಬಹುದಾಗಿದ್ದ ಡಿಕೆ ಮಹತ್ವಾಕಾಂಕ್ಷೆಯ ನೊಗಕ್ಕೆ ತಮ್ಮನ್ನು ತಾವೇ ಕಟ್ಟಿಕೊಂಡು ಇಂದು ನಿತ್ರಾಣಗೊಂಡಿದ್ದಾರೆ. 

‘ಸಿದ್ದು ಹಠಾವೋ, ಡಿಕೆಶಿ ಲಾವೋ’ ಎನ್ನುವಂತಹ ಸ್ಥಿತಿ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಡಿಕೆಶಿಯ ಪರಮಾಪ್ತರು ಹಾಗೂ ಅವರು ಪ್ರಸಕ್ತ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವ ಒಂದೇ ಒಂದು ಕೈ ಬೆರಳೆಣಿಕೆಯನ್ನೂ ಮೀರದ ನಾಯಕರೂ ಸಹ ‘ಸಿದ್ದು ಹಠಾವೋ’ ಎಂದು ಕನಸಿನಲ್ಲಿಯೂ ಉಸಿರುವುದಿಲ್ಲ, ಹಾಗೆ ಮಾಡಿದರೆ ಸರ್ಕಾರವಾದರೂ ಉಳಿದೀತೇ ಎನ್ನುವ ಆತಂಕ ಅವರಲ್ಲಿದೆ. ಸಿದ್ದರಾಮಯ್ಯನವರು ಒಪ್ಪಿ, ತಾವಾಗಿಯೇ ಕುರ್ಚಿಯಿಂದ ಮೇಲೆದ್ದು ಡಿಕೆಶಿಯವರ ಕೈಹಿಡಿದು ಅವರನ್ನು ಕುರ್ಚಿಯ ಮೇಲೆ ಕೂಡಿಸಿದರೆ ಚೆನ್ನ ಎಂದು ಮನದಲ್ಲಿ ಮಂಡಿಗೆ ತಿನ್ನುವ ಪ್ರಭೃತಿಗಳು ಇವರು! ಇದನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಸಾಕಾರ ಮಾಡಿಕೊಡಬೇಕು ಎನ್ನುವುದು ಇವರ ಆಸೆ. ಅಧಿಕಾರ ಹಂಚಿಕೆಯ ವಿಷಯ ಬಂದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂದು ಎಲ್ಲಿಯೂ ಹೇಳದ ಸುರ್ಜೇವಾಲಾ, ಸ್ವಾಭಿಮಾನಿ ಸಮಾವೇಶ, ದಲಿತ ಸಮಾವೇಶದಂತಹ ವಿಚಾರಗಳಲ್ಲಿ ಡಿಕೆಶಿ ಅಣತಿಗೆ ತಕ್ಕಂತೆ ವರ್ತಿಸುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರು, ಪರಿಶಿಷ್ಟ ಸಮುದಾಯಗಳ ನಾಯಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ ಎನ್ನುವುದು ಬೇರೆಯ ಮಾತು.  

ಇದನ್ನೂ ಓದಿ ವಿಷಮ ಭಾರತ | ದಲಿತ-ಬೌದ್ಧ ಹಿನ್ನೆಲೆಯ ಜಸ್ಟಿಸ್ ಗವಾಯಿ ಹೀಗೆಲ್ಲ ಅನ್ನಬಹುದೇ?

ಡಿ ಕೆ ಶಿವಕುಮಾರ್‌ ಅವರ ಈ ಮಹತ್ವಾಕಾಂಕ್ಷಿ ಎಪಿಸೋಡಿನಲ್ಲಿ ನುಸುಳಿರುವ ಮತ್ತೊಂದು ಬಾಲಲೀಲೆ ಎಂದರೆ ಜ್ಯೋತಿಷಿಗಳದ್ದು! ‘ಸಿದ್ದು ಇಳಿಸಿ’ ಎನ್ನುವ ಘೋಷಣೆಗೆ ಯಾರೂ ತಲೆಕೊಡಲು ತಯಾರಿಲ್ಲ ಎಂದ ಮೇಲೆ ಹೇಗಾದರೂ ಮಾಡಿ ತಮ್ಮ ಮುಖ್ಯಮಂತ್ರಿಯ ಕನಸು ಉಸಿರು ಹಿಡಿದುಕೊಂಡಿರಲು ಡಿಕೆಶಿ ಹೂಡಿದ ಬಾಣವೇ ಈ ಶಕುನದ ಹಕ್ಕಿಗಳು. ಈ ಶಕುನದ ಹಕ್ಕಿಗಳೆಲ್ಲಾ ಕಳಸಾಪುರದ ಹುಡುಗರಂತೆ ಸಾಲಾಗಿ ಬಂದು ಸುದ್ದಿವಾಹಿನಿಗಳ ಮುಂದೆ ನಿಂತು ‘ಲೇಸಾಗಿ ಹರಸುವೆವು ಬಾಲಕರು ಬಂದು’ ಎನ್ನುವ ರೀತಿಯಲ್ಲಿ ಡಿಕೆಶಿಯವರ ಬಾಯಿಗೆ ಇದೇ ವರ್ಷ ಲಡ್ಡು ಬೀಳುವ ಯೋಗವಿದೆಯೆಂತಲೂ, ಆ ಮುಖ್ಯಮಂತ್ರಿ ಯೋಗವನ್ನು ಸಾಕಾರಗೊಳಿಸಲು ತಾವೆಲ್ಲರೂ ಒಗ್ಗೂಡಿ ಸೂರ್ಯಚಂದ್ರಾದಿ ಗ್ರಹಗತಿಗಳಿಗೆಲ್ಲಾ ದಿಗ್ಬಂಧನ ಹಾಕಿ ಡಿಕೆಶಿ ಅವರ ಮನೆಯ ಮುಂದೆ ಗೂಟ ಹೊಡೆದು ಕಟ್ಟಿ ಬಂದಿರುವುದಾಗಿಯೂ ಒದರಲು ಶುರು ಮಾಡಿದರು. ಇಂತಹ ಸಿನಿಮೀಯ ‘ಮಿತ್‌’ಗಳನ್ನು ಹುಟ್ಟಿಹಾಕಿ ಅದನ್ನು ಚಲಾವಣೆಗೆ ಬಿಡುವ ವರಸೆ ಸಂಘ ಪರಿವಾರದಲ್ಲಿ ಹೆಚ್ಚಾಗಿ ಉಂಟು. ಡಿಕೆಶಿ ಬಳಗದ ತಂತ್ರಕೋವಿದರು ಸಹ ಇಂತಹ ಆಮದು ಮೂಲದಿಂದಲೇ ಬಂದಿರುವ ಸಾಧ್ಯತೆ ಇದೆ. ಆದರೆ, ಇದರ ಪರಿಣಾಮ ಮಾತ್ರ ಕೆಟ್ಟದ್ದಾಯಿತು. ಇದರ ಜೊತೆಜೊತೆಗೆ ನಡೆದ ದೇವಸ್ಥಾನ ಪರ್ಯಟನೆಗಳು, ಹೋಮಹವನಗಳು ಸಹ ಡಿಕೆಯವರ ಈ ಕಸರತ್ತುಗಳೆಲ್ಲವೂ ಹೈಕಮಾಂಡ್‌ ಮುಂದಿರಿಸಿದ ಅಸಹಾಯಕ ನಿವೇದನೆಗಳಂತೆ ಕಾಣತೊಡಗಿದವು. ಅಲ್ಲಿಗೆ ಡಿಕೆಶಿ ದೆಹಲಿಯಲ್ಲಿ ಹೈಕಮಾಂಡ್‌ಅನ್ನು ಮಣಿಸಿ, ಬಗ್ಗಿಸಿ ಏನನ್ನೋ ಪಡೆದುಕೊಳ್ಳಲಾರರು ಎನ್ನುವುದು ಜಾಹೀರಾಯಿತು. ಗಾಳಿ ತೆಗೆಯಲು ಕಾದಿದ್ದವರ ಕೈ ಮೇಲಾಯಿತು. 

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನೊಳಗಿನ ಈ ಎಲ್ಲ ವಿದ್ಯಮಾನಗಳೂ ಮತ್ತಷ್ಟು ಆಸಕ್ತಿಕರವಾಗುವುದರಲ್ಲಿ ಅನುಮಾನವಿಲ್ಲ.

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X