ಭೂಮ್ತಾಯಿ | ಪರಿಸರ ಕಾನೂನುಗಳಿಗೆ ಮೃತ್ಯುಪಾಶವಾಗುತ್ತಿರುವ ಅಭಿವೃದ್ಧಿಯ ಪ್ರಸ್ತಾಪಗಳು

Date:

Advertisements

ಭಾರತವು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ, ಆದರೆ ದೇಶದಲ್ಲಿ ವಾಯು ಮಾಲಿನ್ಯದ ಪ್ರಮುಖ ಮೂಲವಾಗಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ 300ಕ್ಕೂ ಹೆಚ್ಚು ಸ್ಥಾವರಗಳು ಇನ್ನೂ ಹೊರಸೂಸುವಿಕೆಯ ಮಾನದಂಡಗಳನ್ನು ಉಲ್ಲಂಘಿಸುತ್ತಿವೆ ಎಂದು ಕೇಂದ್ರ ಪರಿಸರ ಸಚಿವಾಲಯವೇ ಈ ಹಿಂದೆ ತಿಳಿಸಿತ್ತು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಪ್ಯಾರಿಸ್‌ ಒಪ್ಪಂದದಿಂದ ಹಿಂದೆಗೆತ, ಕಲ್ಲಿದ್ದಲು ಗಣಿಗಾರಿಕೆಗೆ ಅವಧಿಯ ವಿಸ್ತರಣೆ, ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ ಇತ್ಯಾದಿಗಳನ್ನು ಘೋಷಿಸುತ್ತ ಪರಿಸರ ಪರ ಧೋರಣೆಗಳನ್ನು ತನ್ನ ದೇಶದಿಂದ ದೂರ ತಳ್ಳುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವ ಪ್ರಯತ್ನಗಳ ಕಡೆಗೆ ತಿರುಗಿಯೂ ನೋಡದೆ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ವಿಶ್ವದ ದೊಡ್ಡಣ್ಣನಾಗಿ ಎಲ್ಲರಿಗೂ ಮಾದರಿಯಾಗುವಂತೆ ದೇಶದಲ್ಲಿ ಶೂನ್ಯ-ಹೊರಸೂಸುವಿಕೆಯ ಆರ್ಥಿಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮುಂದುವರೆಯುವ ಬದಲಿಗೆ, ಇದೀಗ ಅಮೆರಿಕದಲ್ಲಿ ಈ ಮೊದಲು ಜಾರಿಗೆ ತರಲಾಗಿದ್ದ ಪರಿಸರ ಪರ ನಿಯಮಗಳನ್ನು ರದ್ದುಗೊಳಿಸಲು ಹೊರಟಿದ್ದಾರೆ.

ʻಅಮೆರಿಕವೇ ಮೊದಲುʼ ಎಂಬ ಘೋಷಣೆಯಿಂದಲೇ ಅಧಿಕಾರಕ್ಕೆ ಬಂದ ಟ್ರಂಪ್‌ ಇದನ್ನು ಸಾಬೀತುಪಡಿಸಲು ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಕಡೆಗಣಿಸಿ, ಬಂಡವಾಳ-ಕೇಂದ್ರಿತ ಅಭಿವೃದ್ಧಿ ಮಾದರಿಯನ್ನೇ ದೇಶವ್ಯಾಪಿ ಅಳವಡಿಸಲು ಮುಂದಾಗಿದ್ದಾರೆ. “ವ್ಯಾಪಕ ಸಾರ್ವಜನಿಕ ಬೆಂಬಲ”ವನ್ನು ಹೊಂದಿರುವ ಪರಿಸರ ಪರ ನೀತಿಗಳನ್ನು ರದ್ದುಗೊಳಿಸುತ್ತಿರುವ ಅವರ ನಿಲುವು ʻತುಘಲಕ್‌ ದರ್ಬಾರ್‌ʼನ್ನು ಹೋಲುವಂತಿದೆ.

Advertisements

ʻಎಂಡೇಂಜರ್‌ಮೆಂಟ್‌ ಫೈಡಿಂಗ್‌ʼ ರದ್ಧತಿ

ಪ್ರಸ್ತುತ ಅಮೆರಿಕ ಸಂಯುಕ್ತ ಸಂಸ್ಥಾನದ ಪರಿಸರ ಸಂರಕ್ಷಣಾ ಸಂಸ್ಥೆ (ಎನ್ವಿರಾನ್‌ಮೆಂಟಲ್‌ ಪ್ರೊಟೆಕ್ಷನ್‌ ಏಜೆನ್ಸಿ/EPA) ದೇಶದಲ್ಲಿ ಈ ಮೊದಲು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಮೂಲಕ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಜಾರಿಗೊಳಿಸಲಾಗಿದ್ದ ʻಎಂಡೇಂಜರ್‌ಮೆಂಟ್‌ ಫೈಡಿಂಗ್‌ʼ ವರದಿ ಆಧಾರಿತ ನಿಯಮವನ್ನು ರದ್ದುಗೊಳಿಸಲು ನಿರ್ಧರಿಸಿದೆ.

2009ರಲ್ಲಿ ಘೋಷಣೆಯಾಗಿದ್ದ ಈ ನಿಯಮದಲ್ಲಿ, ಕಾರ್ಬನ್ ಡೈಆಕ್ಸೈಡ್ ಸೇರಿದಂತೆ ಆರು ಹಸಿರುಮನೆ ಅನಿಲಗಳನ್ನು ಪಟ್ಟಿ ಮಾಡಲಾಗಿದ್ದು, ಇವು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸಾರ್ವಜನಿಕ ಆರೋಗ್ಯವನ್ನು ಅಪಾಯಕ್ಕೆ ಒಡ್ಡಬಲ್ಲವು ಎಂದು ಎಚ್ಚರಿಸಲಾಗಿತ್ತು. ಈ ಕುರಿತಾಗಿ ಸುಮಾರು 200-ಪುಟಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ಹಸಿರುಮನೆ ವಾಯು ಮಾಲಿನ್ಯದ ಬಗ್ಗೆ 3,80,000 ಕ್ಕೂ ಹೆಚ್ಚು ಸಾರ್ವಜನಿಕ ಟಿಪ್ಪಣಿಗಳನ್ನು ಸಹ ಸಲ್ಲಿಸಲಾಗಿತ್ತು. ಹೀಗಾಗಿ ಅಮೆರಿಕದಾದ್ಯಂತ ಇವುಗಳ ಹೊರಸೂಸುವಿಕೆಯ ಮಿತಿಯನ್ನು ನಿಗದಿಪಡಿಸುವ ಮೂಲಕ ನಿಯಂತ್ರಿಸಲು ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿತ್ತು.

ಪ್ಯಾರಿಸ್ ಒಪ್ಪಂದ

ಅಧಿಕಾರ ವಹಿಸಿದ ಮೊದಲ ದಿನದಿಂದಲೇ ಹವಾಮಾನ ಬದಲಾವಣೆಯಂತಹ ಗಂಭೀರ ವಿಷಯವನ್ನು ತುಚ್ಛವಾಗಿ ಕಾಣುತ್ತಿರುವ ಟ್ರಂಪ್ ಪರಿಸರ ಸಂರಕ್ಷಣಾ ಸಂಸ್ಥೆಗೆ ತಾನೇ ನಿಯೋಜಿಸಿರುವ ನಿರ್ವಾಹಕ ಲೀ ಜೆಲ್ಡಿನ್, ಮೂಲಕ ʻಎಂಡೇಂಜರ್‌ಮೆಂಟ್ ಫೈಂಡಿಂಗ್‌ʼ ಆಧಾರಿತ ನಿಯಮವನ್ನು ರದ್ದುಗೊಳಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ʻಪರಿಸರ ಸಂರಕ್ಷಣಾ ಸಂಸ್ಥೆಗೆ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ಹೈಡ್ರೋಫ್ಲೋರೋಕಾರ್ಬನ್‌ಗಳಂತಹ ಹಸಿರುಮನೆ ಅನಿಲಗಳು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ನಿರ್ಧರಿಸುವ ಕಾನೂನು ಅಧಿಕಾರವಿಲ್ಲ. ವರದಿಯಲ್ಲಿ ನೀಡಲಾಗಿರುವುದು ಕೇವಲ ವೈಜ್ಞಾನಿಕ ಊಹೆಗಳಷ್ಟೇ, ಸತ್ಯವಲ್ಲʼ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿದ್ದಾರೆ.

2009ರಲ್ಲಿ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಜಾರಿಗೊಂಡ ಆದೇಶವು ಪರಿಸರ ಸಂರಕ್ಷಣಾ ಸಂಸ್ಥೆಗೆ ದೇಶದಾದ್ಯಂತ ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಮಾಲಿನ್ಯವನ್ನು ಮಿತಿಗೊಳಿಸುವ ನಿಯಮಗಳನ್ನು ರೂಪಿಸಲು ಸೂಚಿಸಿತ್ತು. ಆದರೆ ಟ್ರಂಪ್ ಆಡಳಿತವು ಅಮೆರಿಕದ ಐತಿಹಾಸಿಕ ವರದಿ ಆಧಾರಿತ ನಿಯಮವನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಹತ್ತಿಕ್ಕುತ್ತಿದೆ.

ಟ್ರಂಪ್‌ ಅಭಿವೃದ್ಧಿ ಮಾದರಿ

ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣೀಭೂತ ದೇಶಗಳ ಹೆಸರನ್ನು ಪಟ್ಟಿ ಮಾಡಿದರೆ, ಕಾರ್ಬನ್ ಡೈಆಕ್ಸೈಡ್‌ನಂತಹ ಭೂಗ್ರಹವನ್ನು ಬಿಸಿಗೊಳಿಸುವ ಅನಿಲಗಳನ್ನು ಹೊರಸೂಸುವಲ್ಲಿ ಚೀನಾದ ನಂತರ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಆದರೆ ಒಟ್ಟು ಜನಸಂಖ್ಯೆ ಮತ್ತು ಒಟ್ಟು ಹೊರಸೂಸುವಿಕೆಯ ಪ್ರಮಾಣ ತೆಗೆದುಕೊಂಡಾಗ ಪ್ರತಿ ವ್ಯಕ್ತಿ ಹೊರಸೂಸುವ ಇಂಗಾಲದ ಪ್ರಮಾಣದಲ್ಲಿ ಅಮೆರಿಕ ಎಲ್ಲ ದೇಶಗಳಿಗಿಂತ ಮುಂಚೂಣಿಯಲ್ಲಿದೆ.

ಪರಿಸ್ಥಿತಿ ಹೀಗಿರುವಾಗಲೂ ದೇಶದಲ್ಲಿ ಹಸಿರು ಅನಿಲಗಳ ಹೊರಸೂಸುವಿಕೆಯ ಮೇಲೆ ಯಾವುದೇ ಕಡಿವಾಣ ಹಾಕದಿರುವುದು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ ಎಂದು ತಜ್ಞರು ಎಚ್ಚರಿಸುತ್ತಾರೆ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀರ್ಘಕಾಲದಿಂದ ಜಾರಿಯಲ್ಲಿರುವ ಹವಾಮಾನ ನಿಯಂತ್ರಣಗಳು ಯುಎಸ್‌ನ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ವಿತ್ತಂಡವಾದ ಮಂಡಿಸುತ್ತಾರೆ. ಈ ಆದೇಶವನ್ನು ರದ್ದುಗೊಳಿಸುವ ಮೂಲಕ ಅಮೆರಿಕನ್ನರಿಗೆ ವಾರ್ಷಿಕವಾಗಿ 54 ಶತಕೋಟಿ ಡಾಲರ್‌ ಉಳಿತಾಯವಾಗುತ್ತದೆ ಎಂಬ ಲಾಭ-ನಷ್ಟದ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.

ಟ್ರಂಪ್ ಆಡಳಿತದ ʻಅರಣ್ಯ ಸಂರಕ್ಷಣೆ ಯೋಜನೆʼಯ ರದ್ಧತಿ

ಕೇವಲ ಹಸಿರುಮನೆ ಅನಿಲ ಹೊರಸೂಸುವಿಕೆಯ ನಿಯಮಗಳ ರದ್ಧತಿ ಮಾತ್ರವಲ್ಲ ಟ್ರಂಪ್‌ 58 ಮಿಲಿಯನ್ ಎಕರೆ ರಾಷ್ಟ್ರೀಯ ಅರಣ್ಯಗಳಿಗೆ ಸಂರಕ್ಷಣೆಗಾಗಿ ವಿಧಿಸಲಾಗಿದ್ದ “ರೋಡ್‌ಲೆಸ್ ರೂಲ್” ಕೂಡ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ಕ್ಲಿಂಟನ್‌ ಅವಧಿಯಲ್ಲಿ ರೂಪಿಸಲಾಗಿದ್ದ ಈ ನಿಯಮ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಮರ ಕಡಿಯುವಿಕೆ ಇತ್ಯಾದಿ ಅಭಿವೃದ್ಧಿ ಚಟುವಟಿಕೆಗಳನ್ನು ನಿಷೇಧಿಸುವ ಮೂಲಕ ಗಮನಾರ್ಹವಾಗಿ ಯಶಸ್ವಿಯಾಗಿತ್ತು. ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಮತ್ತು ಅರಣ್ಯದ ಹೊಳೆಗಳ ಮೂಲಕ ಹರಿಯುವ ಶುದ್ಧ ಕುಡಿಯುವ ನೀರಿನ ಸಂರಕ್ಷಣೆಗೆ ಬೆಂಗಾವಲಾಗಿ ನಿಂತಿದ್ದ ಈ ನಿಯಮವನ್ನು ಪ್ರಸ್ತುತ “ಅತಿಯಾದ ನಿರ್ಬಂಧಕ” ಎಂದು ರದ್ದುಪಡಿಸಲು ನಿರ್ಧರಿಸಲಾಗಿದೆ.

coal fired

ಸಂಶೋಧನಾ ಕೇಂದ್ರದಲ್ಲಿ ಸಿಬ್ಬಂದಿ ಕಡಿತ

ನ್ಯಾಷನಲ್‌ ಓಷಿಯಾನಿಕ್‌ ಆಂಡ್‌ ಅಟ್‌ಮೋಸ್ಪಿಯರಿಕ್‌ ಅಡಮಿನಿಸ್ಟ್ರೇಶನ್‌ (NOAA) ಇದರ ಒಂದು ಭಾಗವಾದ ರಾಷ್ಟ್ರೀಯ ಹವಾಮಾನ ಸೇವಾ ವಿಭಾಗವು ದೇಶಾದ್ಯಂತ ದೈನಂದಿನ ಮತ್ತು ತೀವ್ರ ಹವಾಮಾನ ಘಟನೆಗಳ ಮುನ್ಸೂಚನೆಯನ್ನು ನೀಡುವ ಹೊಣೆಗಾರಿಕಾ ಸಂಸ್ಥೆಯಾಗಿದೆ. ಇದು ಚಂಡಮಾರುತಗಳು, ಕಾಡ್ಗಿಚ್ಚು, ಸುನಾಮಿಗಳು ಈ ರೀತಿಯ ಪ್ರಕೃತಿ ವಿಕೋಪದ ಘಟನೆಗಳನ್ನು ಟ್ರ್ಯಾಕ್ ಮಾಡುತ್ತದೆ.

ಆದರೆ ಕೆಲವು ಸಂಶೋಧನಾ ಪ್ರಯೋಗಾಲಯಗಳು, ಪ್ರಾದೇಶಿಕ ಕಚೇರಿಗಳು ಮತ್ತು ಉಪಗ್ರಹ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಕಡಿತದಿಂದಾಗಿ ಮುಚ್ಚಲ್ಪಟ್ಟಿವೆ. ಇದರೊಂದಿಗೆ 122 ಹವಾಮಾನ ಮುನ್ಸೂಚನೆ ಕಚೇರಿಗಳು, 13 ರಿವರ್ ಫೋರ್‌ಕಾಸ್ಟ್ ಸೆಂಟರ್‌ಗಳು ಮತ್ತು ಎರಡು ಸುನಾಮಿ ಎಚ್ಚರಿಕೆ ಕೇಂದ್ರಗಳೂ ಸಹ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಈ ಕೇಂದ್ರಗಳಲ್ಲಿ ನೇಮಕಾತಿ ನಡೆಸದೇ ಹೋದರೆ, 24/7 ಕಾರ್ಯಾಚರಣೆಯನ್ನು ನಡೆಸುವುದು ದುಸ್ತರವಾಗಬಹುದು. ಕರಡು ಬಜೆಟ್ ಪ್ರಸ್ತಾಪವು 2026 ರ ಹಣಕಾಸು ವರ್ಷಕ್ಕೆ ಎನ್‌ಒಎಎ ಗೆ ಕೊಡಮಾಡುವ ಅನುದಾನದಲ್ಲಿಯೂ ಸುಮಾರು ಶೇಕಡಾ 27ರಷ್ಟು ಕಡಿತವನ್ನು ಸೂಚಿಸಿದೆ ಎಂದು ಪರಿಣತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ನಿಯಮಗಳು ರದ್ದುಗೊಂಡರೆ, ಉದ್ಯಮಗಳಿಗಾಗಲಿ, ವಾಹನ ಸಂಚಾರಕ್ಕಾಗಲೀ ಯಾವುದೇ ಕಡಿವಾಣ ಇರುವುದಿಲ್ಲ. ಪರಿಸರವಾದಿಗಳು, ಹೋರಾಟಗಾರರು ಟ್ರಂಪ್‌ನ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲನ್ನು ಹತ್ತಬಹುದು. ಆದರೆ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರುವವರೆಗೆ ಈ ನಿಯಮಗಳ ಹಿಂತೆಗೆದುಕೊಳ್ಳುವಿಕೆ ಪರಿಸರದ ಮೇಲೆ ಉಂಟು ಮಾಡುವ ನಷ್ಟ ಅಗಾಧ ಪ್ರಮಾಣದ್ದು.

ಟ್ರಂಪ್‌, ಅಮೆರಿಕದ ನಾಗರಿಕರ ಸ್ವತಂತ್ರ್ಯವೇ ಮುಖ್ಯ ಅದನ್ನು ಯಾವುದೇ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ ಎಂದು ಯಾವುದೇ ದೂರದರ್ಶಿತ್ವ ಇಲ್ಲದೆ ಭೋಗ ಜೀವನ ಶೈಲಿಯನ್ನೇ ಪ್ರೋತ್ಸಾಹಿಸುತ್ತಿದ್ದಾರೆ. ಟ್ರಂಪ್‌ನ ಅಧಿಕಾರಾವಧಿ ಕೇವಲ ಕೆಲವೇ ವರ್ಷಗಳಿರಬಹುದು. ಆದರೆ ಅವರ ಪರಿಸರ ವಿರೋಧಿ ನೀತಿಗಳು ಅವರ ಅಧಿಕಾರಾವಧಿ ಮುಗಿದರೂ, ದೀರ್ಘಕಾಲದವರೆಗೆ ಪರಿಸರದ ಮೇಲೆ ನಿರಂತರ ಪರಿಣಾಮಗಳನ್ನು ಬೀರುತ್ತಲೇ ಇರುತ್ತದೆ ಎಂಬುದು ಕಳವಳಕಾರಿ ಸಂಗತಿ.

ಭಾರತ ಸರ್ಕಾರದ ಪರಿಸರಪರ ಕಾಳಜಿ?!

ಟ್ರಂಪ್‌ ತನ್ನ ಹುಂಬತನದಿಂದ ಎಲ್ಲವನ್ನು ರಾಜಾರೋಷವಾಗಿ ಮಾಡುತ್ತಿರಬಹುದು. ಹಾಗಾದರೆ ಉಳಿದ ದೇಶಗಳ ಸ್ಥಿತಿ? ಎಲ್ಲವು ತೆರೆಮರೆಯಲ್ಲಿ ನಡೆಯುತ್ತಿದೆ ಅಷ್ಟೆ. ಭಾರತದಲ್ಲಿ ಗಣಿಗಾರಿಕೆ ಮತ್ತು ಅಣೆಕಟ್ಟುಗಳಂತಹ ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರವು ಆದಿವಾಸಿಗಳ ಸಮ್ಮತಿಯನ್ನು ಪಡೆಯದೆ ಅವರನ್ನು ನಿರ್ಲಕ್ಷಿಸಿ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಪ್ರಕರಣಗಳು 11 ರಾಜ್ಯಗಳಲ್ಲಿ ಒಟ್ಟು26 ದಾಖಲಾಗಿವೆ ಎಂದು ಸ್ವತಂತ್ರ ಡೇಟಾ-ಪತ್ರಿಕೋದ್ಯಮ ಲ್ಯಾಂಡ್ ಕಾನ್‌ಫ್ಲಿಕ್ಟ್‌ ವಾಚ್ ಬಹಿರಂಗಪಡಿಸಿದೆ. ಇಲ್ಲಿ ಸಾರ್ವಜನಿಕ ಆಲಿಸುವಿಕೆ (ಪಬ್ಲಿಕ್‌ ಹಿಯರಿಂಗ್‌) ಸಂಬಂಧಿಸಿದ ಆದಿವಾಸಿಗಳು ಭಾಗವಹಿಸಲಾಗದಂತಹ ದೂರದ ಸ್ಥಳಗಳಲ್ಲಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಸ್ತಾಪಿತ 400 ಎಕರೆ ಸ್ವಾಭಾವಿಕ ಅರಣ್ಯ ಭೂಮಿ ನಾಶಹೊಂದಬಹುದು ಎಂದು ಅಂದಾಜಿಸಲಾಗಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆ ಹಾಗು ನಾಗರಹೊಳೆ ಹುಲಿ ಅಭಯಾರಣ್ಯ ಪ್ರದೇಶ ಮತ್ತು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ಪ್ರದೇಶ ಸೇರಿದಂತೆ 140 ಎಕರೆ ಅರಣ್ಯ ಪ್ರದೇಶಕ್ಕೆ ಬೇಡಿಕೆ ಇಟ್ಟಿರುವ ಮೈಸೂರಿನಿಂದ ಕುಶಾಲನಗರದವರೆಗೆ ವಿಸ್ತರಿಸಲು ಪ್ರಸ್ತಾಪಿತವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳು ಅರಣ್ಯ ಪ್ರದೇಶವನ್ನು ಹಂತ ಹಂತವಾಗಿ ಕಸಿಯುವ ಯೋಜನೆಗಳೇ ಆಗಿವೆ.

Ranganathittu Bird Sanctuary 26

ಭಾರತವು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ, ಆದರೆ ದೇಶದಲ್ಲಿ ವಾಯು ಮಾಲಿನ್ಯದ ಪ್ರಮುಖ ಮೂಲವಾಗಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ 300ಕ್ಕೂ ಹೆಚ್ಚು ಸ್ಥಾವರಗಳು ಇನ್ನೂ ಹೊರಸೂಸುವಿಕೆಯ ಮಾನದಂಡಗಳನ್ನು ಉಲ್ಲಂಘಿಸುತ್ತಿವೆ ಎಂದು ಕೇಂದ್ರ ಪರಿಸರ ಸಚಿವಾಲಯವೇ ಈ ಹಿಂದೆ ತಿಳಿಸಿತ್ತು.

ಈ ಹಿಂದೆ ಪ್ರಸ್ತಾವಿತ ಯೋಜನೆಗಳು ಪರಿಸರದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಮೌಲ್ಯಮಾಪನ ನಡೆಸಲು ಕಾನೂನಿನಲ್ಲಿ ಹೇಳಲಾಗಿರುವ ಎನ್ವಿರಾನ್‌ಮೆಂಟ್‌ ಇಂಪಾಕ್ಟ್‌ ಅಸೆಸ್‌ಮೆಂಟ್‌ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಹುನ್ನಾರ ಸಾಕಷ್ಟು ನಡೆದಿದ್ದರೂ, ಪರಿಸರಪರ ಹೋರಾಟಗಾರರು, ಎನ್‌ಜಿಒ ಹಾಗು ಸಾರ್ವಜನಿಕರ ಮಧ್ಯಪ್ರವೇಶದಿಂದ ಅದು ಸಾಧ್ಯವಾಗಿಲ್ಲ.

ನವದೆಹಲಿಯ ಪರಿಸರ ವಿಜ್ಞಾನ ಕೇಂದ್ರ/ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್‌ನ ನಿರ್ದೇಶಕಿ ಸುನೀತಾ ನಾರಾಯಣ್ ಅವರ ʻನಾವು ನೀತಿ ನಿರೂಪಣೆಯ ವಿಷಯಕ್ಕೆ ಬಂದಾಗ ಪರಿಪೂರ್ಣರಾಗಿದ್ದೇವೆ ಆದರೆ ಸಮಸ್ಯೆ ಇರುವುದು ಅನುಷ್ಠಾನದಲ್ಲಿʼ ಎಂಬ ಹೇಳಿಕೆ ಸರ್ಕಾರಗಳು ಜನರ ಕಣ್ಣಿಗೆ ಹೇಗೆ ಮಣ್ಣೆರಚುತ್ತಿವೆ ಎಂಬುದಕ್ಕೆ ಸಾಕ್ಷಿ.

ಸೊರಗಿರುವ ಹಸಿರು ನ್ಯಾಯಮಂಡಳಿ

ಭಾರತವು 2010ರಲ್ಲಿ ಪರಿಸರ ಸಂಬಂಧಿತ ಕಾನೂನು ವಿವಾದಗಳನ್ನು ಇತ್ಯರ್ಥಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು (ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌/NGT) ಸ್ಥಾಪಿಸಿತು. ಅಭಿವೃದ್ಧಿಶೀಲ ದೇಶಗಳ ಪೈಕಿ ಪರಿಸರ ಸಂಬಂಧೀ ವ್ಯಾಜ್ಯಗಳನ್ನು ಬಗೆಹರಿಸಲು ಸ್ಥಾಪಿಸಲಾದ ಮೊದಲ ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

ಅಕ್ಟೋಬರ್‌ 2010 ರಿಂದ ಅಕ್ಟೋಬರ್‌ 2021 ವರೆಗೆ ಈ ನ್ಯಾಯಾಲಯದಲ್ಲಿ ದಾಖಲಾದ 35,963 ದೂರುಗಳ ಪೈಕಿ 33,619 ದೂರುಗಳನ್ನು ಬಗೆಹರಿಸಲಾಗಿತ್ತು. ಆದರೆ, ಈ ನ್ಯಾಯಮಂಡಳಿಯು ಪ್ರಸ್ತುತ ಪ್ರಮುಖ ಆಡಳಿತಾತ್ಮಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.

ದೆಹಲಿಯ ಮುಖ್ಯ ಪೀಠ ಸೇರಿದಂತೆ ಹಸಿರು ನ್ಯಾಯಾಲಯದ ಪೀಠಗಳು ಕಳೆದ 10 ವರ್ಷಗಳಿಂದ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ, ಆರ್ಥಿಕ ಸೀಮಿತತೆಗಳು ಮತ್ತು ಬಜೆಟ್ ನಿರ್ಬಂಧಗಳನ್ನು ಖಾಲಿ ಸ್ಥಾನ ಭರ್ತಿ ಮಾಡದಿರುವಿಕೆಗೆ ಕಾರಣವಾಗಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಗತ್ಯ ಸ್ಥಾನಗಳನ್ನು ಭರ್ತಿ ಮಾಡಲು ಸಕ್ರಿಯ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂಬುದು ವ್ಯಾಪಕವಾಗಿ ಕೇಳಿಬರುತ್ತಿದೆ.

***

ಇವೆಲ್ಲವೂ ಮುಚ್ಚುಮರೆಯಲ್ಲಿ ಟ್ರಂಪ್‌ ನ ಧೋರಣೆಗಳ ಮುಂದುವರಿಕೆ ಅಷ್ಟೆ. ಆದರೆ, ಪರಿಸರ ಕಾನೂನುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸವಲ್ಲಿ ದೇಶವು ವಿಫಲವಾದರೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣವನ್ನು ಇಳಿಸುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದೆ ಇನ್ನಷ್ಟು ಬೃಹದಾಕಾರ ತಾಳುತ್ತಲೇ ಹೋಗುತ್ತದೆ.

ಇದನ್ನೂ ಓದಿ ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ʻವಿನಾಶಕಾಲೇ ವಿಪರೀತ ಬುದ್ಧಿʼ ಎಂಬಂತೆ ಹವಾಮಾನ ಬದಲಾವಣೆಯ ಪರಿಣಾಮಗಳು ದಿನದಿಂದ ದಿನಕ್ಕೆ ತೀವ್ರತೆರನಾದ ಸ್ವರೂಪ ತಾಳುತ್ತಿದ್ದರೂ, ನಮ್ಮ ಚುನಾಯಿತ ಸರ್ಕಾರಗಳು, ಜನಪ್ರತಿನಿಧಿಗಳು, ಬಂಡವಾಳಶಾಹಿಗಳು ವಿಜ್ಞಾನ ಮತ್ತು ಕಾನೂನು ಎರಡನ್ನು ಧಿಕ್ಕರಿಸುತ್ತಿದ್ದಾರೆ. ಎಷ್ಟೇ ಸಂಶೋಧನೆಗಳ ಅಂಕಿ ಅಂಶಗಳನ್ನು ಬದಲಾಯಿಸಿದರೂ, ʻಅಪೇಕ್ಷಿತʼ ಫಲಿತಾಂಶವೇ ಬರುವ ಹಾಗೆ ಸಮೀಕ್ಷೆಗಳನ್ನು ನಡೆಸಿದರೂ, ಸಂಶೋಧಕರ ನೇಮಕಾತಿ ಪ್ರಕ್ರಿಯೆ ನಡೆಯದೇ ಹೋದರೂ, ಅಥವಾ ಸಂಶೋಧನಾ ಕೇಂದ್ರಗಳಿಂದ ವಿಜ್ಞಾನಿಗಳನ್ನೇ ವಜಾಗೊಳಿಸಿದರೂ, ಹವಾಮಾನ ಬದಲಾವಣೆಯ ಕ್ರಿಯೆಗಳು ಯಾರಿಗೂ ಯಾವುದಕ್ಕೂ ಕಾಯದೆ ಪ್ರಕೃತಿಯಲ್ಲಿ ನಡೆದೇ ನಡೆಯುತ್ತವೆ. ಅದಕ್ಕೆ ಕಾಲ, ದೇಶ, ಗಡಿಗಳ ಹಂಗಿಲ್ಲದೆ, ಪರ – ವಿರೋಧಿಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಬೆಲೆ ತೆರಲೇಬೇಕು.

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುದಿ ಕಡಲು | ಧರ್ಮಸ್ಥಳ ವಿವಾದದ ಸುತ್ತಮುತ್ತ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಕೈಕಟ್ಟಿ ಕುಳಿತು ಇಂಥ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ....

ಜೋಳಿಗೆ | ʻಆಂದೋಲನʼದಲ್ಲಿ ನನ್ನ ತರಬೇತಿ- ಭಾಗ 1

ಪತ್ರಿಕೆಯ ಪೇಜ್ ಮೇಕಪ್ ಮಾಡುವುದರಲ್ಲಿ ರಾಜಶೇಖರ ಕೋಟಿಯವರದು ಬಹಳ ಅಂದಚಂದ, ಅಚ್ಚುಕಟ್ಟು....

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

Download Eedina App Android / iOS

X