ದಿಲ್ಲಿ ಮಾತು | ಜಾತಿ ತಾರತಮ್ಯ ಹಾಗೂ ದಲಿತ ಹೋರಾಟವನ್ನು ಚಿತ್ರಿಸುವ ಧಡಕ್ 2

Date:

Advertisements

2016 ರಲ್ಲಿ ನಾಗರಾಜ್ ಮಂಜುಳೆ ನಿರ್ದೇಶಿಸಿದ ’ಸೈರಾಟ್ ಚಿತ್ರವನ್ನು ನೋಡಿದವರಿಗೆ ಧಡಕ್ ಅರ್ಥವಾಗುತ್ತದೆ. ಸೈರಾಟ್ ನಲ್ಲಿ ಮೇಲ್ಜಾತಿಯ ಜಮೀನುದಾರ ಕುಟುಂಬದ ಯುವತಿ ಮತ್ತು ಹಿಂದುಳಿದ ಜಾತಿಯ ಬಡ ರೈತನ ಮಗ ಇವರಿಬ್ಬರ ನಡುವಿನ ಪ್ರೇಮ ಕತೆ, ಕೊನೆಗೆ ಅವರಿಬ್ಬರೂ ಕುಟುಂಬವನ್ನು ತೊರೆದು ದೂರದ ಊರಲ್ಲಿ ಹೋಗಿ ಬದುಕು ಕಟ್ಟಿಕೊಂಡರೂ ಹುಡುಗಿಯ ಕುಟುಂಬ ಅವರಿಬ್ಬರನ್ನು ನಾಯಿಯಂತೆ ಹುಡುಕಿ ಹುಡುಕಿ ಕೊನೆಗೆ ಕೊಂದುಹಾಕುತ್ತದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸು ಫ್ರಂ ಸೊ ಸಿನಿಮಾ ಟಿಕೆಟ್ ಸಿಗದೇ ಕೊನೆಗೆ ʼಧಡಕ್ 2ʼ ನೋಡಿಕೊಂಡು ಬಂದೆವು. ಜಾತಿ ತಾರತಮ್ಯವನ್ನು ಚಿತ್ರಿಸಿದ ಅನೇಕ ಚಿತ್ರಗಳು ಬಂದಿರಬಹುದು. ಆದರೆ ಕೆಲವೊಮ್ಮೆ wrong timeನಲ್ಲಿ ಅತ್ಯುತ್ತಮ ಕಥಾವಸ್ತುವಿರುವ ಚಿತ್ರಗಳು ಬಿಡುಗಡೆಯಾದರೆ ಅವು ಪ್ರೇಕ್ಷಕರ ಗಮನ ಸೆಳೆಯದೇ ಹೋಗುವ ಸಂದರ್ಭಗಳೂ ಇರುತ್ತದೆ. ಬೆರಳೆಣಿಕೆಯಲ್ಲಿನ ಪ್ರೇಕ್ಷಕರನ್ನು ನೋಡಿ ಬಹುಶಃ ಧಡಕ್ 2 ಚಿತ್ರಕ್ಕೂ ಹೀಗೇ ಆಗುತ್ತದೆ ಎಂಬ ಕಳವಳದಲ್ಲಿ ಬರೆಯಲೇ ಬೇಕೆನ್ನಿಸ್ತು.   

ಇದೇ ರೀತಿಯ ಲೆಕ್ಕಾಚಾರ ಗುರುದತ್ತನಂತಹ ಧೀಮಂತ ಚಿತ್ರ ನಿರ್ದೇಶಕ ಮತ್ತು ಅದ್ಭುತ ನಟನ ಚಿತ್ರಗಳ ಸಂದರ್ಭದಲ್ಲಿಯೂ ಹೇಳಬಹುದು. ಕಾಗಜ್ ಕೇ ಫೂಲ್, ಪ್ಯಾಸಾ, ಸಾಹಬ್ ಬೀಬಿ ಔರ್ ಗುಲಾಮ್ ನಂತಹ ಚಿತ್ರಗಳು ಗುರುದತ್ತ ಮರಣದ ನಂತರ ಹೆಚ್ಚು ಹೆಚ್ಚು ಪ್ರದರ್ಶನಗೊಂಡವು ಮತ್ತು ಇವತ್ತಿಗೂ ಅವರ ಚಿತ್ರಗಳ ಕ್ಲಾಸಿಕ್ ಚಿತ್ರಗಳಪಟ್ಟಿಯಲ್ಲಿ ಅಗ್ರಗಣ್ಯವಾಗಿವೆ. ಇದೇ ರೀತಿ ಪಾಕೀಜಾ ಮೀನಾಕುಮಾರಿಯ ಮರಣದ ನಂತರ ಹೆಚ್ಚು ಪ್ರದರ್ಶನಗೊಂಡ ಅತ್ಯುತ್ತಮ ಕಥಾವಸ್ತು, ನಿರ್ದೇಶನದ ಚಿತ್ರ. ಪಾಕೀಜಾ ಅನೇಕ ಏಳುಬೀಳು ಸಮಸ್ಯೆಗಳಲ್ಲಿ ಮುಳುಗಿ ಎದ್ದು ಕೊನೆಗೆ ಬರೋಬ್ಬರಿ ಹದಿನಾರು ವರ್ಷಗಳ ಬಳಿಕ ಕಮಲ್ ಅಮ್ರೋಹಿಯವರ ಕನಸಿನ ಪಾಕೀಜಾ ಪ್ರೇಕ್ಷಕರನ್ನು ತಲುಪಿತು. ಇರಲಿ ಈಗ ಧಡಕ್ ವಿಷಯಕ್ಕೆ ಬರೋಣ. 

Advertisements
Pariyerum Peruma 1
ತಮಿಳು ಚಿತ್ರ ʼಪರಿಯೆರಂ ಪೆರುಮಾಳ್‌ʼ ದೃಶ್ಯ

ಈ ಚಿತ್ರವು ತಮಿಳು ಚಿತ್ರ Pariyerum Perumal ನ ರೀಮೇಕ್ ಆಗಿದ್ದು, ಜಾತಿ ಆಧಾರಿತ ತಾರತಮ್ಯ ಮತ್ತು ನವಿರಾದ ಪ್ರೇಮಕತೆಯನ್ನು ಕೇಂದ್ರೀಕರಿಸಿದೆ. ಸಿದ್ಧಾಂತ್ ಚತುರ್ವೇದಿ (ನೀಲೇಶ್) ಮತ್ತು ತೃಪ್ತಿ ಡಿಮ್ರಿ (ವಿಧಿ) ನಟಿಸಿದ್ದಾರೆ. 2016 ರಲ್ಲಿ ಮರಾಠಿ ಚಿತ್ರರಂಗದ ನಾಗರಾಜ್ ಮಂಜುಳೆ ನಿರ್ದೇಶಿಸಿದ ಸೈರಾಟ್ ಚಿತ್ರವನ್ನು ನೋಡಿದವರಿಗೆ ಧಡಕ್ ಅರ್ಥವಾಗುತ್ತದೆ. ಸೈರಾಟ್ ನಲ್ಲಿ ಮೇಲ್ಜಾತಿಯ ಜಮೀನುದಾರ ಕುಟುಂಬದ ಯುವತಿ ಮತ್ತು ಹಿಂದುಳಿದ ಜಾತಿಯ ಬಡ ರೈತನ ಮಗ ಇವರಿಬ್ಬರ ನಡುವಿನ ಪ್ರೇಮ ಕತೆ, ಕೊನೆಗೆ ಅವರಿಬ್ಬರೂ ಕುಟುಂಬವನ್ನು ತೊರೆದು ದೂರದ ಊರಲ್ಲಿ ಹೋಗಿ ಬದುಕುಕಟ್ಟಿಕೊಂಡರೂ ಹುಡುಗಿಯ ಕುಟುಂಬ ಅವರಿಬ್ಬರನ್ನು ನಾಯಿಯಂತೆ ಹುಡುಕಿ ಹುಡುಕಿ ಕೊನೆಗೆ ಕೊಂದು ಹಾಕುತ್ತದೆ. ಇದು ಮರ್ಯಾದೆ ಹತ್ಯೆ, ಗೌರವದ ಹತ್ಯೆ (Honour Killing) ಎಂಬ ಜಾತಿ ತಾರತಮ್ಯದ ಭೀಕರ ಸತ್ಯವನ್ನು ತೆರೆಯ ಮೇಲೆ ಸಮರ್ಥವಾಗಿ ಕಟ್ಟಿಕೊಟ್ಟ ಚಿತ್ರ.

ಇದನ್ನೇ ಹಿಂದಿಯಲ್ಲಿ ಧಡಕ್ ಎಂಬ ಹೆಸರಿನಲ್ಲಿ ಡಬ್ಬಿಂಗ್ ಮಾಡಲಾಯಿತು. ಇಲ್ಲಿ ನಾನು ನಟ ನಟಿಯರ ಕೌಶಲ್ಯ, ತಂತ್ರಗಾರಿಕೆಯ ಬಗ್ಗೆ ವಿಮರ್ಶೆ ಮಾಡದೇ ಕೇವಲ ಸಮಾಜದ ವಾಸ್ತವಿಕತೆಯ ಬಗ್ಗೆ ಬರೆಯುತ್ತಿದ್ದೇನೆ. ’ಸೈರಾಟ್’ ನಲ್ಲಿ ನಾಯಕ ನಾಯಕಿಯನ್ನು ಕುಟುಂಬದ  ಮರ್ಯಾದೆ ಹೆಸರಿನಲ್ಲಿ ಕೊಲೆ ಮಾಡಲಾಗುತ್ತದೆ. ಆದರೆ  ಧಡಕ್- 2 ನಲ್ಲಿ ಮರ್ಯಾದೆ ಹತ್ಯೆಯನ್ನು ಖಂಡಿಸುವ ರೀತಿಯಲ್ಲಿ ಅವರಿಬ್ಬರೂ ಮುಂದೆ ಸುಖವಾಗಿ ಬಾಳಿದರು ಎನ್ನುವ ಸಂದೇಶವಿದೆ. ಧಡಕ್-2 ಭಿನ್ನವಾಗುವುದು ಇಲ್ಲಿಯೇ. ’ಸೈರಾಟ್’ ವಸ್ತು ವಿಷಯದಂತೆಯೇ ಇಲ್ಲಿಯೂ ಜಾತಿ ತಾರತಮ್ಯದಿಂದ ಉಂಟಾದ ನೋವು, ಅವಮಾನ ಮತ್ತು ದಲಿತರ ಹೋರಾಟವಿದೆ. ಇಲ್ಲಿ ಬಳಸಿದ ಕವಿತೆಗಳು, ಕಾವ್ಯಾತ್ಮಕವಾದ ಸಂಭಾಷಣೆಗಳು ತೀಕ್ಷ್ಣವಾದ ಸಾಮಾಜಿಕ ವಿಮರ್ಶೆಯನ್ನು ಒಳಗೊಂಡಿವೆ. ಸಂಭಾಷಣೆಗಳಲ್ಲಿ ಡಾ.ಅಂಬೇಡ್ಕರ್ ಅವರ ತಾತ್ವಿಕತೆಯ ಝಲಕುಗಳಿವೆ. ಇದು ಶತಮಾನಗಳ ಜಾತಿ ಆಧಾರಿತ ತಾರತಮ್ಯ ಮತ್ತು ಒಡಗೂಡಿರುವ ಸಮುದಾಯಗಳ ತಾಕತ್ತು ದೌರ್ಜನ್ಯ ಇವತ್ತಿಗೂ ಜೀವಂತವಾಗಿದೆಯೆಂಬುದನ್ನು ಒತ್ತಿ ಹೇಳುತ್ತದೆ. ನಾವು ತೆರೆಯ ಮೇಲೆ ನೋಡಿದ್ದನ್ನು ಕೆಲಕಾಲ ಚರ್ಚೆ ಮಾಡಿ ಮತ್ತೆ ಮರೆತು ಹೋಗಬಹುದು. ಆದರೆ ನಾವು ಉಸಿರಾಡುತ್ತಿರುವ ಇದೇ ಸಮಾಜದಲ್ಲಿ ಇಂತಹದ್ದೇ ಘಟನೆ ಘಟಿಸಿ ಹೋದಾಗ ತಣ್ಣಗೆ ಕುಳಿತಿರುವುದಾದರೂ ಹೇಗೆ? ಜನರ ಸಂವೇದನೆಗಳು ಮರಗಟ್ಟಿಹೋಗುತ್ತಿವೆಯೇ?     

sairat
ʼಸೈರಾಟ್‌ʼ ಮರಾಠಿ ಚಿತ್ರದ ದೃಶ್ಯ

ಇತ್ತೀಚೆಗೆ ಜುಲೈ 27, 2025 ರಂದು ಕವಿನ್ ಸೆಲ್ವಗಣೇಶ್ (27) ಎಂಬ ದಲಿತ ಯುವಕನ ಕೊಲೆ ಪ್ರಕರಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ. ಚೆನ್ನೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕವಿನ್, ಪ್ರಬಲ ಜಾತಿಯ ಯುವತಿಯಾದ ಸುಭಾಷಿಣಿಯನ್ನು ಪ್ರೀತಿಸುತ್ತಿದ್ದ. ಆದರೆ, ಈ ಸಂಬಂಧವನ್ನು ಸುಭಾಷಿಣಿಯ ಕುಟುಂಬ, ವಿಶೇಷವಾಗಿ ಆಕೆಯ ಸಹೋದರ ಸುರ್ಜಿತ್ ಮತ್ತು ತಂದೆ ಸರವಣನ್ (ಪೊಲೀಸ್ ಸಬ್-ಇನ್ಸ್‌ಪೆಕ್ಟರ್) ತೀವ್ರವಾಗಿ ವಿರೋಧಿಸಿದ್ದರು.

ಜುಲೈ 27ರಂದು, ಕವಿನ್‌ನನ್ನು ಸುರ್ಜಿತ್ ತನ್ನ ಬೈಕ್‌ನಲ್ಲಿ ಸಿಧಾ ಕೇಂದ್ರದ ಬಳಿಗೆ ಕರೆದೊಯ್ದು ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ‘ಮರ್ಯಾದೆಗೇಡು ಹತ್ಯೆ’ (Honour Killing) ಎಂದು ವರ್ಗೀಕರಿಸಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಸುರ್ಜಿತ್ ಕವಿನ್‌ನನ್ನು ಕರೆದೊಯ್ಯುವುದು ದಾಖಲಾಗಿದೆ. ಕವಿನ್‌ನ ಕುಟುಂಬಸ್ಥರು ಈ ಕೃತ್ಯದಲ್ಲಿ ಸುರ್ಜಿತ್‌ನ ತಂದೆ ಸರವಣನ್ ಕೂಡ ಭಾಗಿಯಾಗಿದ್ದಾರೆಂದು ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪೊಲೀಸರು ಸುರ್ಜಿತ್‌ನನ್ನು ಜುಲೈ 28ರಂದು ಬಂಧಿಸಿದ್ದು, ಆತನ ವಿರುದ್ಧ ಕೊಲೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ, ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸರವಣನ್‌ನನ್ನು ಜುಲೈ 31ರಂದು ಸಿಬಿ-ಸಿಐಡಿ ಬಂಧಿಸಿತು ಮತ್ತು ಆತನನ್ನು ಮತ್ತು ಆತನ ಪತ್ನಿ ಕೃಷ್ಣಕುಮಾರಿಯನ್ನು (ಪೊಲೀಸ್ ಅಧಿಕಾರಿ) ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸರವಣನ್‌ನ ಬಂಧನದ ಬಳಿಕವೇ ಕವಿನ್ ಮೃತದೇಹವನ್ನು ಆತನ ಕುಟುಂಬ ಸ್ವೀಕರಿಸಿ ಅಂತ್ಯಕ್ರಿಯೆ ನಡೆಸಿತು.

ಹೀಗೆ ಮೊನ್ನೆ ಮೊನ್ನೆ ನಡೆದ ಈ ಮರ್ಯಾದೆಗೇಡು ಹತ್ಯೆಯನ್ನು ಎಷ್ಟು ಜನ ಚರ್ಚಿಸುತ್ತಾರೆ? ಎಷ್ಟು ಟಿವಿ ಚಾನೆಲ್ಲುಗಳು ಚರ್ಚಿಸುತ್ತವೆ? ಎಷ್ಟು ಸಾಮಾಜಿಕ ಸಂಘಟನೆಗಳ, ಹೋರಾಟಗಾರರ ಗಮನ ಸೆಳೆದಿದೆ? ಈ ಘಟನೆ ತಮಿಳುನಾಡಿನಲ್ಲಿ ಜಾತೀವಾದ ಮತ್ತು ಮರ್ಯಾದೆಗೇಡು ಹತ್ಯೆಗಳ ವಿರುದ್ಧ ತೀವ್ರ ಚರ್ಚೆಗೆ ಕಾರಣವಾಗಿದೆ. ಕಮಲ್ ಹಾಸನ್ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಜಾತಿ ಆಧಾರಿತ ಹತ್ಯೆಗಳನ್ನು ತಡೆಗಟ್ಟಲು ಪ್ರತ್ಯೇಕ ಕಾನೂನಿನ ಒತ್ತಾಯವೂ ಕೇಳಿಬಂದಿದೆಯಂತೆ.  

ಸಮಾಜದಲ್ಲಿ ಇವತ್ತಿಗೂ ಜೀವಂತವಿರುವ ಜಾತಿ ತಾರತಮ್ಯ, ಲಿಂಗ ತಾರತಮ್ಯವನ್ನು ಹೋಗಲಾಡಿಸಬಲ್ಲ ಯಾವ ಹೋರಾಟಗಳೂ  ಕಣ್ಣಿಗೆ ಕಾಣುತ್ತಿಲ್ಲ. ಇದರ ಬದಲು ವರ್ಣ –ಜಾತಿ- ಧರ್ಮದ ಮೇಲುಗೈಯಾಗುತ್ತಿದೆ. ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಮೂಲಭೂತವಾದ ಮುನ್ನೆಲೆಗೆ ಬಂದಿದೆ. ಜನರು ಮತಾಂಧರಾಗುತ್ತಿದ್ದಾರೆ.

WhatsApp Image 2025 08 20 at 10.22.07 AM
ಧಡಕ್ 2 ಚಿತ್ರದ ದೃಶ್ಯ

ಧಡಕ್ 2 ನಾಯಕ ಚಮ್ಮಾರ ಜಾತಿಯವನಾಗಿದ್ದು ಮೇಲ್ಜಾತಿಯ ಶಿಕ್ಷಿತ ಆರ್ಥಿಕವಾಗಿ ಪ್ರಬಲವಾಗಿರುವ ಕುಟುಂಬದ ಯುವತಿಯ ನಡುವೆ ಪ್ರೇಮವುಂಟಾಗುತ್ತದೆ. ಇಂತಹ ಅಂತರ್ಜಾತಿಯ ಪ್ರೇಮಿಗಳನ್ನು ಹುಡುಕಿ ಹುಡುಕಿಯೇ ಕೊಲ್ಲುತ್ತಿರುವ ಒಬ್ಬ ವ್ಯಕ್ತಿ ಕಾನೂನಿಯ ಶಿಕ್ಷೆಯ ಯಾವ ಭಯವೂ ಇಲ್ಲದೇ ನಮ್ಮ ನಡುವೆ ಓಡಾಡಿಕೊಂಡಿರುತ್ತಾನೆ. ಹೀಗೆ ಜಾತಿ- ವರ್ಣ ಧರ್ಮಶುದ್ಧತೆಯ ರಕ್ಷಕರು ನಮ್ಮ ನಡುವೆ ಇದ್ದಾರೆ ಎನ್ನುವ ಒಂದು ಪಾತ್ರವನ್ನು ಇಲ್ಲಿ ತೋರಿಸಲಾಗಿದೆ. ಹಿಂದೆ ಇಂತಹ ಮರ್ಯಾದೆಗೇಡು ಹತ್ಯೆಗಳು ಸಾಕಷ್ಟು ನಡೆದಿವೆ. ಅವೆಲ್ಲ ಹೆಚ್ಚು ಸುದ್ದಿಯಾಗದೆ ಯಾವುದೇ ಶಿಕ್ಷೆಗೆ ಒಳಪಡದೆ ಈಗ ಆರೋಪಿಗಳು ಬಿಂದಾಸ್ ಓಡಾಡಿಕೊಂಡಿರಬಹುದು. ಇಲ್ಲಿಯೂ ನಾಯಕ ನಟನನ್ನು ಕೊಲ್ಲುವ ಪ್ರಯತ್ನ ನಡೆಯುತ್ತವೆ. ಮೇಲ್ಜಾತಿಯ ನಾಯಕಿಗೆ ಈ ಜಾತಿ ತಾರತಮ್ಯ ಇದರ ಸಂಭಾವನೀಯ ಹೋರಾಟಗಳನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದಿರುವುದರಿಂದ ಕೋಪಗೊಂಡು ನಾಯಕ ಹೇಳುತ್ತಾನೆ, “ಶತ ಶತಮಾನಗಳ ತಾರತಮ್ಯದ ಬಾಕಿಯನ್ನು ಕೇವಲ 70 ವರ್ಷಗಳಲ್ಲಿ ತೀರಿಸಲಾಗದು”. ಇದು ಅವರ ಜಗತ್ತುಗಳ ನಡುವಿನ ವಿಭಜನೆಯನ್ನು ಮತ್ತು ಸವಲತ್ತಿನ ಕುರುಡುತನವನ್ನು ತೋರಿಸುತ್ತದೆ. ಅಲ್ಲದೇ ಜಾತಿ ತಾರತಮ್ಯದ ಆಳವಾದ ಸ್ವರೂಪವನ್ನು ಒತ್ತಿ ಹೇಳುತ್ತದೆ.

ಇನ್ನೊಂದು ಸಂಭಾಷಣೆಯಲ್ಲಿ ನಾಯಕ ಹೇಳುತ್ತಾನೆ. ರಸ್ತೆಗಳು ನಮ್ಮವಲ್ಲ, ಭೂಮಿ ನಮ್ಮದಲ್ಲ, ನೀರೂ ನಮ್ಮದಲ್ಲ, ಇಲ್ಲಿ ಜೀವನವೂ ಸಹ ನಮ್ಮದಲ್ಲ” ಸಾಯುವ ಹಂತಕ್ಕೆ ಬಂದಾಗ ಹಳ್ಳಿಯನ್ನು ತೊರೆದು ಶಹರಿಗೆ ಬಂದೆವು“ ಎನ್ನುತ್ತಾನೆ. ಇದು ಪ್ರಖ್ಯಾತ ಹಿಂದಿ ಕವಿ ಓಂಪ್ರಕಾಶ್ ವಾಲ್ಮೀಕಿ ಅವರ “ಠಾಕೂರನ ಬಾವಿ” ಯಿಂದ ಪ್ರೇರಿತವಾದ ಸಾಲುಗಳಾಗಿವೆ. ಆ ಕವಿತೆಯ ಉಳಿದ ಕೆಲ ಸಾಲುಗಳು ಹೀಗಿವೆ.

ಒಲೆ ಮಣ್ಣಿನದು, ಮಣ್ಣು ಕೆರೆಯದು, ಕೆರೆ ಠಾಕೂರನದು.
ಹಸಿವೆ ರೊಟ್ಟಿಯದು, ರೊಟ್ಟಿ ಸಜ್ಜೆಯದು, ಸಜ್ಜೆ ಹೊಲದ್ದು, ಹೊಲ ಠಾಕೂರನದು
ಎತ್ತು ಠಾಕೂರನದು, ನೇಗಿಲು ಠಾಕೂರನದು, ನೇಗಿಲು ಹೂಡುವ ಕೈಗಳು ನಮ್ಮವು ಫಸಲು ಠಾಕೂರನದು…  ಹೀಗೆ
ಬಾವಿ ಠಾಕೂರನದು, ನೀರು ಠಾಕೂರನದು, ಹೊಲ ಗದ್ದೆಗಳು ಠಾಕೂರನವು, ಓಣಿ ಕೇರಿಗಳು ಠಾಕೂರನವು ಹಾಗಾದರೆ ನಮ್ಮದೇನಿದೆ? ಊರು..? ಶಹರು? ದೇಶ……

ಇದೇ ಸಂಭಾಷಣೆಯಲ್ಲಿ ನಾಯಕ “ರಸ್ತೆಗಳು ಸವರ್ಣೀಯರವು, ಅವರು ನಮ್ಮನ್ನು ಜೀವಂತವಾಗಿ ಸುಟ್ಟುಬಿಡುತ್ತಿದ್ದರು” ಎನ್ನುತ್ತಾನೆ. ಈಗಲೂ ನಿರ್ದಿಷ್ಟ ಸಮುದಾಯಗಳ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ ಮತ್ತು ಬದುಕಲು ಶಹರಿಗೆ ಓಡಿ ಬರಬೇಕಾಗುತ್ತದೆ ಎನ್ನುತ್ತಾನೆ.   

ಇದನ್ನೂ ಓದಿ ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ

ಇಲ್ಲಿ ತನ್ನ ಸಿದ್ದಾಂತ- ಹೋರಾಟವನ್ನು ಮಾರಿಕೊಳ್ಳದ ವ್ಯವಸ್ಥೆಗೆ ಬಲಿಯಾದ ವೇಮುಲನಿದ್ದಾನೆ. “ದುಃಖದ ಮೋಡದಲ್ಲಿ ಮಿಂಚುವ ಒಂದು ನಕ್ಷತ್ರವಿದೆ, ಇಂದು ನಮ್ಮದಾಗದಿರಬಹುದು, ಆದರೆ ನಾಳೆ ನಮ್ಮದೇ” ಎನ್ನುವ ವೇಮುಲನ ಸಾಲುಗಳು ಇದು ಕಷ್ಟದ ನಡುವೆಯೂ ಆಸೆ, ನಿರೀಕ್ಷೆ ಮತ್ತು ತಾಕತ್ತನ್ನು ತಿಳಿಸುತ್ತದೆ. ಜಾತಿ ಆಧಾರಿತ ಸವಾಲುಗಳ ಹೊರತಾಗಿಯೂ ಉತ್ತಮ ಭವಿಷ್ಯಕ್ಕಾಗಿ ಹೋರಾಡುವ ಚಿತ್ರದ ಸಂದೇಶವನ್ನು ಸಮರ್ಥವಾಗಿ ಬಳಸಿಕೊಂಡಿದೆ.

ಈಗಷ್ಟೇ ಭಾರತವಾಸಿಗಳಾದ ನಾವೆಲ್ಲ 78ನೇ ಸ್ವಾತಂತ್ರೋತ್ಸವವನ್ನು ಆಚರಿಸಿದ್ದೇವೆ. ಪ್ರತಿವರ್ಷವೂ ಆಚರಿಸುತ್ತೇವೆ. ದೇಶಭಕ್ತಿಯಲ್ಲಿ ಮಿಂದೇಳುವ ಸ್ವಾತಂತ್ರೋತ್ಸವದ ಸಂಭ್ರಮವನ್ನು ದೇಶದಾದ್ಯಂತ ಹಳ್ಳಿ ಗ್ರಾಮ, ಕೊಂಪೆ ಕೊಂಪೆಗಳಲ್ಲಿಯೂ ಕಾಣಬಹುದು. ಆದರೆ ಇವತ್ತಿಗೂ ಸ್ವಾತಂತ್ರವೆನ್ನುವುದು ಯಾರಿಗೆ ಎಷ್ಟು ಸಿಕ್ಕಿದೆಯೆಂಬುದರ ಬಗ್ಗೆ ಪ್ರಶ್ನೆಗಳು ಬಾಕಿ ಉಳಿದಿವೆ. ಹರ್ ಘರ್ ತಿರಂಗಾ ಅಭಿಯಾನದಡಿ ತ್ರಿವರ್ಣ ಧ್ವಜ ಮನೆ ಮನೆಗಳ ಮಾಡುಗಳ ಮೇಲೆ ಹಾರಾಡಿತು. ಅದೇ ಬುಲ್ಡೋಜರ್ ನೆಲಸಮ ಮಾಡಿದ ಮನೆಗಳ ಲೆಕ್ಕ ಮರೆತರು. ಪ್ರತಿ ಮನೆಗೂ ತ್ರಿವರ್ಣ ಧ್ವಜ ಎಂಬುದರ ಬದಲು ಪ್ರತಿ ಕೈಗಳಿಗೂ ರೊಟ್ಟಿ, ಪ್ರತಿ ಕೈಗಳಿಗೂ ಕೆಲಸ, ಪ್ರತಿ ಕೈಗಳಿಗೂ ಲೇಖನಿ, ಪ್ರತಿ ಕೈಗಳಿಗೂ ಪುಸ್ತಕ ಎಂಬ ಸಂಕಲ್ಪ ಆಗಬೇಕಿತ್ತು. ಇದು ಎಂದಿಗೂ ನನಸಾಗದ ಕನಸು ಎಂದು ಡಾ.ಲಕ್ಷ್ಮಣ್ ಯಾದವ್ ಯುಟ್ಯೂಬರ್ ತಮ್ಮ ಒಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದು ಅಕ್ಷರಶಃ ಸರಿ ಎನಿಸುವುದಿಲ್ಲವೇ?

ಈಗಲೂ ದಲಿತರು, ಹಿಂದುಳಿದವರು ಆದಿವಾಸಿಗಳು ತಮ್ಮ ಅಸ್ಮಿತೆಗಾಗಿ ಹೋರಾಡುತ್ತಿದ್ದಾರೆ. ದಲಿತ ಮದುಮಗ ಕುದುರೆ ಹತ್ತುವಂತಿಲ್ಲ, ಸೂಟುಬೂಟು ಹಾಕುವಂತಿಲ್ಲ, ಒಳ್ಳೆಯ ಹೋಟೆಲಿಗೆ ಹೋಗಿ ಊಟ ಮಾಡಿದರೆ ಥಳಿಸುತ್ತಾರೆ, ಮಂಟಪ ಹಾಕಿ ಅಲಂಕರಿಸಿ, ಡಿಜೆ ಹಾಕಿ ಸಮಾರಂಭ ಮಾಡುವ ಹಾಗಿಲ್ಲ. ಒಟ್ಟಿನಲ್ಲಿ ಸವರ್ಣೀಯರನ್ನು ಅನುಸರಿಸುವಂತೆ ಬದುಕಬಾರದು. ಹೀಗೆ ಕಂಡು ಕೇಳರಿಯದ ವರ್ಜಿತಗಳು ಉತ್ತರಭಾರತದಲ್ಲಿವೆ.

ಅದೆಲ್ಲ ಹೋಗಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಂಥವರೇ ತಮ್ಮ ಸರಕಾರಿ ನಿವಾಸವನ್ನು ತೊರೆದಾಗ, ಈಗ ಆಳುವ ಸರ್ಕಾರ ಗಂಜಳ ಹಾಕಿ ಆ ಮನೆಯನ್ನು ಶುದ್ಧಗೊಳಿಸಿದ್ದನ್ನು ಸ್ವತಃ ಅಖಿಲೇಶರೇ ಹೇಳಿಕೊಂಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೇ ಹೀಗೆ ನಡೆದುಕೊಳ್ಳುವ, ಬಲಿಷ್ಠ ಯಾದವ ಸಮುದಾಯದ ಕಥಾವಾಚಕರ ತಲೆ ಬೋಳಿಸಿ ಮೂತ್ರ ಕುಡಿಸಿದ ಈ ಸಮಾಜ ದುರ್ಬಲರನ್ನು ಇದಕ್ಕಿಂತಲೂ ಹೀನವಾಗಿ ನಡೆಸಿಕೊಳ್ಳಲು ಹೇಸುವುದಿಲ್ಲ. ಮನುಸ್ಮೃತಿಯೇ ತಮ್ಮ ದೇವರು, ಸಂಘ ಪರಿವಾರವೇ ಬಂಧು ಬಳಗ ಎಂದು ಕೆಂಪುಕೋಟೆಯಿಂದಲೇ ಸಾಬೀತುಪಡಿಸುತ್ತಿರುವವರಿಗೆ ದೇಶದ ಜನ ಹೇಳುವುದಾದರೂ ಏನನ್ನು? ಮುಂದಾದರೂ ಉತ್ತರ ಕೊಟ್ಟಾರೆಯೇ?. 

ಇದನ್ನೂ ಓದಿ ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?  

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ  

ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ,...

Download Eedina App Android / iOS

X