ಕುದಿ ಕಡಲು | ಧರ್ಮಸ್ಥಳ ವಿವಾದದ ಸುತ್ತಮುತ್ತ

Date:

Advertisements

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಕೈಕಟ್ಟಿ ಕುಳಿತು ಇಂಥ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ಅದು ಧರ್ಮಸ್ಥಳವೇ ಆಗಿರಲಿ, ಯೋಗಿ ಕೇಂದ್ರವೇ ಆಗಿರಲಿ, ಋಷ್ಯಾಶ್ರಮವೇ ಆಗಿರಲಿ, ಮಠವೇ ಆಗಿರಲಿ. ದೂರು, ಆಪಾದನೆಗಳು ಬಂದರೆ, ಸಾರ್ವಜನಿಕ ಕೂಗುಗಳು ಎದ್ದರೆ ಯಾವುದೇ ಪಕ್ಷದ ಸರ್ಕಾರವಿರಲಿ, ಅದು ಕ್ರಿಯಾಶೀಲವಾಗಬೇಕಾಗುತ್ತದೆ. ಇದು ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ಬಂದ ಸರ್ಕಾರಗಳು ಮಾಡಲೇ ಬೇಕಾದ ಕರ್ತವ್ಯ.

ಧರ್ಮಸ್ಥಳ ಮತ್ತೆ ಸುದ್ದಿಯಲ್ಲಿದೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಮೇಲಿಂದ ಮೇಲೆ ಧರ್ಮಸ್ಥಳದ ಹೆಸರು ಸಾರ್ವಜನಿಕ ರಂಗದಲ್ಲಿ ಚರ್ಚೆಯ ವಿಷಯವಾಗಿತ್ತು. ಇದೀಗ ಇನ್ನಷ್ಟು ವ್ಯಾಪಕವಾದ ರೀತಿಯಲ್ಲಿ ಧರ್ಮಸ್ಥಳ ಚರ್ಚೆಯ ಕೇಂದ್ರವಾಗಿದೆ. ವಿಧಾನ ಪರಿಷತ್ತಿನಲ್ಲಿಯೂ ಇದರ ಪ್ರತಿಧ್ವನಿ ಮೊಳಗಿದೆ.

ವಿರೋಧ ಪಕ್ಷವಾದ ಬಿಜೆಪಿ ಧರ್ಮಸ್ಥಳವನ್ನು ಎತ್ತಿಕೊಂಡು ದೊಡ್ಡ ಗಂಟಲಿನಲ್ಲಿ ಮಾತನಾಡಿದೆ. ಈ ಕ್ಷೇತ್ರ ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿದೆ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸರ್ಕಾರ ಈ ಪಿತೂರಿಕೋರರನ್ನು ಹತ್ತಿಕ್ಕಬೇಕು, ಧರ್ಮಸ್ಥಳದ ಪಾವಿತ್ರ್ಯವನ್ನು ಕಾಪಾಡಬೇಕು ಎಂಬ ಮಾತುಗಳನ್ನು ವಿರೋಧ ಪಕ್ಷದ ಸದಸ್ಯರು ಆಡಿದ್ದಾರೆ.

Advertisements

ನಿಜ. ನೂರಿನ್ನೂರು ವರ್ಷಗಳಿಂದ ಧರ್ಮಸ್ಥಳ ದೊಡ್ಡ ಸಂಖ್ಯೆಯ ಜನರ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಗಳ ಕೇಂದ್ರವಾಗಿದೆ. ಇಲ್ಲಿ ಶೇಖರವಾಗಿರುವ ಮತ್ತು ನಿತ್ಯವೂ ಬಂದು ಬೀಳುತ್ತಿರುವ ಅಪಾರ ಸಂಪತ್ತು ಜನರ ದೇಣಿಗೆಯೇ ಆಗಿದೆ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ಧರ್ಮಕ್ಷೇತ್ರದಲ್ಲಿ ಕಳೆದ ಮೂವತ್ತು ನಲವತ್ತು ವರ್ಷಗಳ ದೀರ್ಘಕಾಲದಿಂದ ಕೆಲವು ಬೆಳವಣಿಗೆಗಳೂ ಆಗಿವೆ. ಅಮಾಯಕ ತರುಣಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ; ಕೊಲೆಯಾಗಿದ್ದಾರೆ; ನಾಪತ್ತೆಯೂ ಆಗಿದ್ದಾರೆ. ಈ ತರುಣಿಯರ ಕುಟುಂಬಗಳು ಕೊನೆಯೇ ಇಲ್ಲದ ನೋವಿಗೆ, ಸಂಕಟಕ್ಕೆ ಬಲಿಯಾಗಿದ್ದಾರೆ. ಈಗಲೂ ನೋವು ಅನುಭವಿಸುತ್ತಿರುವ ಕುಟುಂಬಗಳು ಈ ಭಾಗದಲ್ಲಿ ಅಸಹಾಯಕವಾಗಿ ಮೊರೆ ಇಡುತ್ತಲೇ ಇವೆ. ದೂರು ನೀಡಲು ಹೋದರೆ ಪೊಲೀಸ್ ಠಾಣೆಗಳು ದೂರನ್ನೇ ತೆಗೆದುಕೊಳ್ಳುತ್ತಿಲ್ಲ, ರಕ್ಷಣೆ ಕೇಳಿದರೆ ಅದನ್ನೂ ಕೊಡುತ್ತಿಲ್ಲ ಎಂಬ ಆರೋಪಗಳು ಇವೆ. ಈ ಆರೋಪಗಳು ನಿಜವಾದ ಆರೋಪಗಳೊ ಅಥವಾ ಕೇವಲ ಪಿತೂರಿಗಾರರ ಹೇಳಿಕೆಗಳೊ. ತರುಣಿಯರು ಇಲ್ಲಿ ಕೊಲೆಯಾಗಿರುವುದು, ಅತ್ಯಾಚಾರಕ್ಕೆ ಒಳಗಾಗಿರುವುದು ಸುಳ್ಳೇ ಅಥವಾ ನಿಜವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಕೈಕಟ್ಟಿ ಕುಳಿತು ಇಂಥ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ಅದು ಧರ್ಮಸ್ಥಳವೇ ಆಗಿರಲಿ, ಯೋಗಿ ಕೇಂದ್ರವೇ ಆಗಿರಲಿ, ಋಷ್ಯಾಶ್ರಮವೇ ಆಗಿರಲಿ, ಮಠವೇ ಆಗಿರಲಿ, ದೂರುಗಳು ಬಂದರೆ, ಆಪಾದನೆಗಳು ಬಂದರೆ, ಸಾರ್ವಜನಿಕ ಕೂಗುಗಳು ಎದ್ದರೆ ಸರ್ಕಾರ, ಯಾವುದೇ ಪಕ್ಷದ ಸರ್ಕಾರವಿರಲಿ, ಅದು ಕ್ರಿಯಾಶೀಲವಾಗಬೇಕಾಗುತ್ತದೆ. ಇದು ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ಬಂದ ಸರ್ಕಾರಗಳು ಮಾಡಲೇ ಬೇಕಾದ ಕರ್ತವ್ಯ. ಹಾಗೆಯೇ ಜನಪ್ರತಿನಿಧಿಯಾದ ಸರ್ಕಾರದ ಹೊಣೆಗಾರಿಕೆ ಕೂಡಾ.

ಕರ್ನಾಟಕ ಸರ್ಕಾರ ಈ ಹೊಣೆಗಾರಿಕೆಯನ್ನು ಹೊತ್ತು ವಿಶೇಷ ತನಿಖಾ ದಳವನ್ನು ರಚಿಸಿದೆ. ದಕ್ಷ ಅಧಿಕಾರಿಗಳನ್ನೂ ನೇಮಿಸಿದೆ. ಕೊಲೆಗಳು ನಡೆದಿರುವುದು ನಿಜವೇ, ಶವಗಳನ್ನು ಹೋತಿಟ್ಟುರುವುದು ಕಟ್ಟುಕತೆಯೇ ಅಥವಾ ಘೋರ ವಾಸ್ತವವೇ? ತರುಣಿಯರು ಎಲ್ಲಿ ಹೋದರು? ಅವರ ಮೇಲೆ ಅತ್ಯಾಚಾರ ಎಸಗಿದವರು ಯಾರು, ಕೊಲೆಗಳು ಯಾರಿಂದ ನಡೆದವು? ಈ ಎಲ್ಲ ಪ್ರಶ್ನೆಗಳ ಶೋಧವೇ ತನಿಖಾ ದಳದ ಮುಂದಿರುವ ಕೆಲಸ.

WhatsApp Image 2025 08 13 at 1.10.30 PM

ಧರ್ಮಸ್ಥಳದಲ್ಲಿಯೇ ಇವೆಲ್ಲ ಯಾಕೆ ನಡೆಯುತ್ತಿವೆ? ನೇತ್ರಾವತಿ ನದಿದಂಡೆ ಮತ್ತು ಸುತ್ತಲಿನ ಕಾಡು ಪ್ರಶಸ್ತ ಸ್ಥಳವೇ? ಅಥವಾ ನಿಗೂಢ ಕಿರಾತಕರು ಈ ಪ್ರದೇಶದಲ್ಲಿ ಈ ಭಯಂಕರ ಕೃತ್ಯಗಳನ್ನು ನಡೆಸುತ್ತಿದ್ದಾರೆಯೇ? ಇವುಗಳ ತನಿಖೆ ಕೂಡಾ ನಡೆಯುವುದು ಅನಿವಾರ್ಯ.

ಧರ್ಮಸ್ಥಳ ಒಂದು ಶ್ರದ್ಧಾಕೇಂದ್ರ ಎಂದು ಹೇಳಿ ಇಲ್ಲಿ ನಡೆಯುತ್ತಿರುವ ಘೋರ ಕೃತ್ಯಗಳನ್ನು ಗಮನಿಸದೆ ಅವುಗಳ ಮೇಲೆ ಮುಸುಕೆಳೆಯಲು ಬರುವುದಿಲ್ಲ.

ನಮ್ಮ ಸಂವಿಧಾನಕ್ಕೆ 1976ರಲ್ಲಿ ತಂದ ತಿದ್ದುಪಡಿ ನಮ್ಮ ಸಂವಿಧಾನಕ್ಕೆ ʼಜಾತ್ಯತೀತʼ ತತ್ವವನ್ನು ಸೇರ್ಪಡೆ ಮಾಡಿತು. ಈ ತತ್ವವನ್ನು ಜಾತಿಮತ ನಿರಪೇಕ್ಷ ತತ್ವ ಎಂದೂ ಕರೆಯುತ್ತಾರೆ. ಅಂದರೆ ನಮ್ಮ ರಾಷ್ಟ್ರ ಯಾವ ಧರ್ಮಕ್ಕೂ ಮತಕ್ಕೂ ಜಾತಿಗೂ ಸೇರಿದ್ದಲ್ಲ. ಹಾಗಾಗಿಯೇ ನಮ್ಮ ರಾಷ್ಟ್ರಧರ್ಮ ಎಂದು ಯಾವುದೇ ಒಂದು ಧರ್ಮವನ್ನು ಮಾನ್ಯಮಾಡಲಾಗಿಲ್ಲ. ಎಲ್ಲ ಧರ್ಮಗಳನ್ನೂ ಮತಗಳನ್ನೂ ಸಮಾನವಾಗಿ ನೋಡಬೇಕು. ಬಹುಧರ್ಮಗಳು, ಬಹು ಭಾಷೆಗಳು, ಬಹು ಸಂಸ್ಕೃತಿಗಳು, ಬಹು ಸಮುದಾಯಗಳು ಜೀವಂತವಾಗಿರುವ ಈ ನಾಡಿನಲ್ಲಿ ಇವೆಲ್ಲವೂ ಉಳಿಯಬೇಕು, ಬೆಳೆಯಬೇಕು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬೇಕಾದ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯ ಇರಬೇಕು. ಯಾವ ಪಕ್ಷದ, ಯಾವುದೇ ಸಿದ್ಧಾಂತದ ಸರ್ಕಾರ ಅಧಿಕಾರಕ್ಕೆ ಬಂದರೂ ನಮ್ಮ ಸಂವಿಧಾನದ ಮೂಲ ಆಶಯಗಳಿಗೆ, ತತ್ವಗಳಿಗೆ ಭಂಗ ತಾರದಂತೆ ಕೆಲಸ ಮಾಡಬೇಕು. ಇದು ನಮ್ಮ ಸಂವಿಧಾನದ ಶಕ್ತಿ ಮತ್ತು ಸಾಮರ್ಥ್ಯ.

ಸಂವಿಧಾನದ ಇನ್ನೊಂದು ಆಶಯವೂ, ಮುಖ್ಯ ತತ್ವವಾಗಿಯೇ ಸೇರ್ಪಡೆಯಾಗಿದೆ (ಆರ್ಟಿಕಲ್ 51 ಎ-ಎಚ್) ಅದು ಹೇಳುವುದೇನೆಂದರೆ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಸರ್ಕಾರವೂ ಈ ಹೊಣೆಯನ್ನು ಹೊತ್ತಿರಬೇಕಾಗುತ್ತದೆ. ಅಂದರೆ ಕಾಲಾಂತರದ ಅವಧಿಯಲ್ಲಿ, ಕಾರಣಾಂತರಗಳಿಂದ ನಮ್ಮ ಸಮಾಜ ಆಚರಿಸಿಕೊಂಡು ಬಂದ ಮೌಢ್ಯಾಚರಣೆಗಳಿದ್ದರೆ ಅಂಥವನ್ನು ತೊಡೆದುಹಾಕುವ, ವೈಚಾರಿಕ ಚಿಂತನೆಯನ್ನು ಬೆಳೆಸುವ ಹೊಣೆಯೂ ಜನತೆಯ ಸರ್ಕಾರದ ಮೇಲಿರುತ್ತದೆ.

ಈ ಎಲ್ಲ ಹಿನ್ನೆಲೆಯನ್ನೂ ಗಮನಿಸಬೇಕಾದದ್ದು ನಮ್ಮ ಪ್ರತಿನಿಧಿಗಳ ಜವಾಬ್ದಾರಿಯೂ ಹೌದು. ನಮ್ಮಲ್ಲಿ ಧಾರ್ಮಿಕ ಕೇಂದ್ರಗಳು, ಮಠಗಳು, ಆಶ್ರಮಗಳು ಕಲುಷಿತಗೊಂಡಿಲ್ಲ ಎಂದು ಹೇಳಲು ಬರುವುದಿಲ್ಲ. ಕಳಂಕ ರಹಿತ ಸಂಸ್ಥೆಗಳೂ, ವ್ಯಕ್ತಿಗಳು ಇರಬಹುದು. ಚಿತ್ರದುರ್ಗದ ಮಠದಲ್ಲಿ ಏನು ನಡೆಯಿತು? ಆ ಮಠಾಧೀಶರಾಗಿದ್ದವರು ಯಾಕೆ ಜೈಲು ಸೇರಿದರು ಎಂಬುದನ್ನು ಇಡೀ ರಾಷ್ಟ್ರವೇ ಬಲ್ಲದು. ಇದು ಕೇವಲ ಇತ್ತೀಚಿನ ಉದಾಹರಣೆ ಮಾತ್ರ. ಹುಡುಕುತ್ತಾ ಹೋದರೆ ಯಾವ್ಯಾವ ಶ್ರದ್ಧಾಕೇಂದ್ರಗಳಲ್ಲಿ ಏನೇನು ನಡೆಯುತ್ತಿದೆ, ಜನ ಹೇಗೆ ಮೋಸ ಹೋಗಿದ್ದಾರೆ ಎಂಬುದು ತಿಳಿಯಬಹುದು.

ಭಕ್ತಾದಿಗಳ ಶ್ರದ್ಧಾಕೇಂದ್ರಗಳು ನಿರ್ಮಲವಾಗಿದ್ದರೆ, ಕೇವಲ ಶ್ರದ್ಧಾಕೇಂದ್ರಗಳಾಗಿಯೇ ಇದ್ದರೆ ಯಾವ ತಕರಾರೂ ಇರುವುದಿಲ್ಲ. ಆದರೆ ಅನೇಕ ಕೇಂದ್ರಗಳಲ್ಲಿ ಇವತ್ತಿಗೂ ಮಹಿಳೆಯರ ಶೋಷಣೆ, ಅತ್ಯಾಚಾರ, ಕೊಲೆ ನಡೆಯುತ್ತಿಲ್ಲ ಎಂದು ಧೈರ್ಯವಾಗಿ ಹೇಳಲು ಸಾಧ್ಯವಾಗದ ಪರಿಸ್ಥಿತಿ ನಮ್ಮ ಮುಂದಿದೆ. ಕೊಲೆಗಳು, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದರೆ ಅದನ್ನು ಕಡೆಗಣಿಸಿ ಕಣ್ಮುಚ್ಚಿ ಕುಳಿತುಕೊಳ್ಳುವುದನ್ನು ಯಾವ ಸಮಾಜವೂ ಒಪ್ಪುವುದಿಲ್ಲ. ಹಾಗೊಂದು ವೇಳೆ ಸರ್ಕಾರ ಕಣ್ಮುಚ್ಚಿ ಕುಳಿತರೆ ಅದು ಬಹುಬೇಗ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ.

ಇದನ್ನೂ ಓದಿ ಕಾನೂನಿನ ಮುಂದೆ ಎಲ್ಲರೂ ಸಮಾನರು; ಭರವಸೆ ಮೂಡಿಸಿದ ಪ್ರಜ್ವಲ್‌-ದರ್ಶನ್‌ ಪ್ರಕರಣ

ಸಂಪತ್ತು ಅಪಾರ ಪ್ರಮಾಣದಲ್ಲಿ ಬಂದು ಬೀಳುತ್ತಿದ್ದರೆ ಅಂಥ ಕಡೆಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಇತ್ಯಾದಿ ನಡೆಯುವುದು ಅಪರೂಪವೇನಲ್ಲ. ನಮ್ಮ ದೇಶದಲ್ಲಂತೂ ಢೋಂಗಿ ಬಾಬಾಗಳು, ಯೋಗಿಗಳು, ಶ್ರದ್ಧಾಕೇಂದ್ರಗಳು ಹೆಚ್ಚಾಗಿಯೇ ಇವೆ.

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತ ನಡೆದಿರುವ ನಿಗೂಢ ಕೊಲೆಗಳು, ಅತ್ಯಾಚಾರಗಳು, ತರುಣ ಜೀವಗಳ ಕಣ್ಮರೆಗಳು ಅಗತ್ಯವಾಗಿ ತನಿಖೆಗೆ ಒಳಪಡಬೇಕು; ನ್ಯಾಯಬದ್ಧವಾಗಿಯೇ ಒಳಪಟ್ಟಿವೆ. ಇವುಗಳ ಹಿಂದಿರುವ ಸತ್ಯ ಯಾವುದು? ಅಥವಾ ಇವೆಲ್ಲ ಕೇವಲ ಪಿತೂರಿಗಳೇ? ಯಾರ ವಿರುದ್ಧ ನಡೆದ ಪಿತೂರಿಗಳು, ಯಾಕೆ ನಡೆದವು? ಅಮಾಯಕ ಜೀವಗಳನ್ನು ಬಲಿಕೊಟ್ಟ ಅಸಹಾಯಕ ಕುಟುಂಬಳು ಮಾತಿಲ್ಲದೆ ಕಣ್ಣೀರು ಸುರಿಸುತ್ತ ಕೂಡಬೇಕೇ?

ಇದನ್ನೂ ಓದಿ ಸ್ವಾತಂತ್ರ್ಯ ದಿನ ವಿಶೇಷ | ಕುಗ್ಗುತ್ತಿರುವ ಪ್ರಜಾಪ್ರಭುತ್ವದ ನಡುವೆ ನಾಗರಿಕ ಜಾಗೃತಿಯ ಆಶಾಕಿರಣ

ಇಂಥ ಎಲ್ಲ ಪ್ರಶ್ನೆಗಳಿಗೆ ವಿಶೇಷ ತನಿಖಾ ದಳದ ಶೋಧ ಸಮಾಧಾನವನ್ನು ತರಬಹುದು. ಧರ್ಮಸ್ಥಳಕ್ಕೆ ಅಂಟಿರುವ ಕಳಂಕವೂ ಈ ತನಿಖೆಯಿಂದ ನಿವಾರಣೆಯಾಗಬಹದು. ಹೀಗಾಗಿ ಈ ತನಿಖೆಯನ್ನು ಎಲ್ಲರೂ ಸ್ವಾಗತಿಸಬೇಕು ಮತ್ತು ಬೆಂಬಲಿಸಬೇಕು. ತನಿಖೆಯ ವಿರುದ್ಧ ಧ್ವನಿ ಎತ್ತುವುದೇ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ, ಯಾವ ಸಂಸ್ಥೆಯೂ ಕಳಂಕಗಳನ್ನು ಹೊತ್ತು ಮುಂದುವರಿಯುವುದು ಸಾಧ್ಯವಿಲ್ಲ. ನ್ಯಾಯಧೀಶರು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಹೇಳುವ ಮಾಧ್ಯಮದವರು ಕೂಡ ಈ ನೆಲದ ಕಾನೂನುಗಳಿಗೆ ತಲೆಬಾಗಲೇಬೇಕು. ಆರೋಪಗಳು ಬಂದರೆ ಎಲ್ಲರ ವಿರುದ್ಧವೂ ತನಿಖೆ ನಡೆಯುತ್ತದೆ. ಆರೋಪ ಸಾಬೀತಾದರೆ ಎಲ್ಲರೂ ಶಿಕ್ಷೆಯನ್ನ ಅನುಭವಿಸಲೇಬೇಕಾಗುತ್ತದೆ. ಯಾರಿಗೂ ರಿಯಾಯಿತಿ ಇರುವುದಿಲ್ಲ.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

ದಿಲ್ಲಿ ಮಾತು | ಅಜ್ಞಾನಿಗಳ ನಾಡಿನಲ್ಲಿ ʼಡಾಯನ್‌ʼ ಎಂಬ ಕ್ರೂರ ಪದ್ಧತಿ  

ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ,...

Download Eedina App Android / iOS

X