ಶಾಂತಿ ಮಾತುಕತೆಯ ವ್ಯರ್ಥ ಮಾತುಕತೆಗೆ ಹೊಸ ಭಾರತದ ಬಳಿ ಸಮಯವಿಲ್ಲ ಎಂದು ಯುಪಿಎ ಸರ್ಕಾರವನ್ನು ಖಂಡಿಸಿದ್ದ ಬಿಜೆಪಿ ಕೇವಲ 24 ತಾಸುಗಳಲ್ಲಿ ಶಾಂತಿ ಮತ್ತು ಸುಸ್ಥಿರತೆಯಲ್ಲಿ ತನ್ನ ವಿಶ್ವಾಸವನ್ನು ಭಾರತ ಪುನರುಚ್ಚರಿಸುವುದಾಗಿ ಟ್ವೀಟ್ ಮಾಡಿರುವುದು ಅಚ್ಚರಿಯ ಸಂಗತಿ. ಮೋದಿ ಸರ್ಕಾರದ ಒಬ್ಬ ಸಚಿವರೂ ಈ ಅವಿವೇಕವನ್ನು ಖಂಡಿಸಿಲ್ಲ.
ಪುಂಡು ಪಾಕಿಸ್ತಾನಿ ಸೇನೆಯ ಹಲವು ಉಲ್ಲಂಘನೆಗಳ ನಡುವೆಯೂ ಭಾರತ-ಪಾಕ್ ಕದನವಿರಾಮ ಕಾಲೂರಿ ನಿಲ್ಲುವ ಸೂಚನೆಗಳಿವೆ. ಗೆಲುವಿನ ಬಾಯಿಂದ ಕದನವಿರಾಮದ ಸೋಲನ್ನು ಕಿತ್ತುಕೊಂಡಿದ್ದಾರೆ ಮೋದಿ ಎಂಬ ಟೀಕೆಗಳನ್ನು ಎದುರಿಸಿದ್ದಾರೆ ಪ್ರಧಾನಿ ಮೋದಿ.
ಕದನ ವಿರಾಮ ಮೋದಿ ಬೆಂಬಲಿಗರ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ಪಾಕಿಸ್ತಾನದ ಏಳು ನಗರಗಳು ಭಾರತದ ವಶಕ್ಕೆ… ಶೀಘ್ರವೇ ಭಾರತದ ವಶವರ್ತಿಯಾಗಲಿದೆ ಪಾಕಿಸ್ತಾನ, ಪಾಕಿಸ್ತಾನದ ರಾಜಧಾನಿ ಭಾರತದ ಕೈವಶ, ಪಾಕಿಸ್ತಾನಿ ಸೇನಾ ಮುಖ್ಯಸ್ಥನ ಬಂಧನ ಮುಂತಾದ ಸುಳ್ಳುಗಳ ಪ್ರಸಾರದಲ್ಲಿ ತೊಡಗಿತ್ತು ಗೋದಿ ಮೀಡಿಯಾ. ಇದನ್ನು ನಂಬಿ ಸಂಭ್ರಮಿಸಿದ್ದ ಭಕ್ತ ಮಂಡಳಿಗೆ ಕದನವಿರಾಮ ತೀವ್ರ ಹತಾಶೆ ಉಂಟು ಮಾಡಿದೆ.
ಭಾರತ-ಪಾಕ್ ಕದನವಿರಾಮವನ್ನು ಅಮೆರಿಕೆಯ ಅಧ್ಯಕ್ಷ ಘೋಷಿಸಿರುವ ವಿಡಂಬನೆ ಜರುಗಿರುವುದು ಚರಿತ್ರೆಯಲ್ಲಿ ಇದೇ ಮೊದಲು. ಪಾಕಿಸ್ತಾನ ಮತ್ತು ಭಾರತವನ್ನು ಒಂದೇ ತಕ್ಕಡಿಯಲ್ಲಿ ತೂಗಿದ್ದಾರೆ ಟ್ರಂಪ್. ‘ಕಾಮನ್ ಸೆನ್ಸ್’ ಮತ್ತು ‘ಇಂಟೆಲಿಜೆನ್ಸ್’ ಬಳಸಿದ್ದಕ್ಕೆ ಥ್ಯಾಂಕ್ಸ್ ಎಂದು ಹಂಗಿಸಿದ್ದಾರೆ. ಮೊದಲ ಬಾರಿಗೆ ಭಾರತ-ಪಾಕ್ ನಡುವಣ ದ್ವಿಪಕ್ಷೀಯ ಕಾಶ್ಮೀರ ವಿಷಯವನ್ನು ಮೂರನೆಯ ದೇಶದ ಮಧ್ಯಸ್ಥಿಕೆಗೆ ಒಪ್ಪಿಸಿರುವ ಪ್ರಮಾದ ಜರುಗಿದೆ. ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಪ್ಪಿಸಬೇಕೆಂದು ಪಾಕಿಸ್ತಾನ ಇಲ್ಲಿಯ ತನಕ ವಾದಿಸುತ್ತ ಬಂದಿದ್ದೇ ಈಡೇರಿದೆ.
ಚೀನಾ ಆಕ್ರಮಣಕಾರಿಯಾಗಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಪಾಕಿಸ್ತಾನದ ಸಾರ್ವಭೌಮತೆ ಮತ್ತು ಸಮಗ್ರತೆಯ ಜೊತೆ ಗಟ್ಟಿಯಾಗಿ ನಿಲ್ಲುವುದಾಗಿ ಸಾರಿದೆ. ಚೀನಾ ಇಲ್ಲಿಯ ತನಕ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸುತ್ತಿತ್ತು. ಇದೀಗ ಬಹಿರಂಗವಾಗಿ ಬೆಂಬಲಿಸುವ ಸ್ಥಿತಿಯನ್ನು ಭಾರತವೇ ಸೃಷ್ಟಿ ಮಾಡಿದಂತಾಯಿತು.
ಅಂತಾರಾಷ್ಟ್ರೀಯ ವಿತ್ತೀಯ ನಿಧಿ ಪಾಕಿಸ್ತಾನಕ್ಕೆ ನೀಡುವ ಸಾಲವನ್ನು ತಡೆಯುವುದಿರಲಿ, ಮುಂದೂಡುವಂತೆ ಒತ್ತಡ ಹೇರುವಲ್ಲಿಯೂ ಭಾರತ ವಿಫಲವಾಗಿದೆ.

ದೇಶದ ಭಕ್ತ-ಭಜನಾ ಮಂಡಳಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಅಮಾಯಕ ಮಗಳನ್ನು ಹೀನಾಮಾನ ಬೈದು ಅವಮಾನಿಸುತ್ತಿದೆ. ನೀಚತನಕ್ಕೆ ಇಳಿದಿವೆ. ದೇಶದ್ರೋಹಿ ಎಂದು ಬಣ್ಣಿಸುತ್ತಿದೆ. ಭಾರತೀಯ ಸೇನೆಯ ಪರಾಕ್ರಮದ ವಿವರಗಳನ್ನು ನೀಡಿದ್ದವರು. ಕದನವಿರಾಮದ ತೀರ್ಮಾನ ಭಾರತ ಸರ್ಕಾರದ್ದೇ ವಿನಾ ಮಿಸ್ರಿ ಅವರದಲ್ಲ. ಮಿಸ್ರಿ ಅವರು ಸರ್ಕಾರದ ತೀರ್ಮಾನವನ್ನು ಘೋಷಿಸಿದ್ದೇ ಅಪರಾಧವೇ?
ಶಾಂತಿ ಮಾತುಕತೆಯ ವ್ಯರ್ಥ ಮಾತುಕತೆಗೆ ಹೊಸ ಭಾರತದ ಬಳಿ ಸಮಯವಿಲ್ಲ ಎಂದು ಯುಪಿಎ ಸರ್ಕಾರವನ್ನು ಖಂಡಿಸಿದ್ದ ಬಿಜೆಪಿ ಕೇವಲ 24 ತಾಸುಗಳಲ್ಲಿ ಶಾಂತಿ ಮತ್ತು ಸುಸ್ಥಿರತೆಯಲ್ಲಿ ತನ್ನ ವಿಶ್ವಾಸವನ್ನು ಭಾರತ ಪುನರುಚ್ಚರಿಸುವುದಾಗಿ ಟ್ವೀಟ್ ಮಾಡಿರುವುದು ಅಚ್ಚರಿಯ ಸಂಗತಿ. ಮೋದಿ ಸರ್ಕಾರದ ಒಬ್ಬ ಸಚಿವರೂ ಈ ಅವಿವೇಕವನ್ನು ಖಂಡಿಸಿಲ್ಲ.
ಇತ್ತೀಚಿನ ದಶಕಗಳಲ್ಲಿ ಭಾರತ-ಪಾಕ್ ಘರ್ಷಣೆಯ ತೀವ್ರ ತುತ್ತ ತುದಿಯ ಕುದಿಯಿದು. ಮಿಲಿಟರಿ ತಾಣಗಳು, ನಾಗರಿಕ ವಸತಿ ಪ್ರದೇಶಗಳೆಂಬ ವ್ಯತ್ಯಾಸವನ್ನೂ ಕಡೆಗಣಿಸಿದೆ ಪಾಕ್ ದಾಳಿ.
ಭಾರತ-ಪಾಕ್ ಗಡಿಯಂಚಿನ ಜನಜೀವನ ಕ್ರಮೇಣ ಎಂದಿನಂತಾಗುತ್ತಿದೆ. ಈ ಸೀಮೆಗಳ ಜನ ನೆಮ್ಮದಿಯ ನಿಟ್ಟುಸಿರು ಎಳೆದಿದ್ದಾರೆ.
ಕಳೆದ ಹಲವು ದಿನಗಳಿಂದ ಪಂಜಾಬ್, ರಾಜಸ್ತಾನ, ಜಮ್ಮು-ಕಾಶ್ಮೀರದ ಗಡಿ ಸೀಮೆಗಳು ಜನಜೀವನ ಯುದ್ಧದಿಂದ ತತ್ತರಿಸಿತ್ತು. ಅಮಾಯಕರ ಸಾವು ನೋವುಗಳು ಸಂಭವಿಸಿವೆ. ಮುಂಬರುವ ದಿನಗಳಲ್ಲಿ ಭಯೋತ್ಪಾದಕರ ದಾಳಿಗಳನ್ನು ತಡೆಯಲೋಸುಗ ಈ ಸಮರ ಅನಿವಾರ್ಯ ಎಂಬ ಅಭಿಪ್ರಾಯಗಳು ಕೇಳಿ ಬರುತ್ತವೆ. ಜೊತೆ ಜೊತೆಗೆ ಯುದ್ಧದ ಭೀಷಣತೆ, ಬರ್ಬರತೆಯಲ್ಲಿ ಬದುಕು ಜೀವನ್ಮರಣದ ನಡುವೆ ತೂಗುಯ್ಯಾಲೆ ಆಡಿರುವ ಆತಂಕ ಬಲು ಭಾರವಾಗಿ ತೂಗುಬಿದ್ದಿದೆ. ಹಸಿವು ನಿದ್ರೆ ನೆಮ್ಮದಿಗಳನು ಕಸಿದುಕೊಂಡಿದೆ. ನಿತ್ಯದ ಬದುಕು ಇನ್ನಿಲ್ಲದಂತೆ ಅಸ್ತವ್ಯಸ್ತಗೊಂಡಿದೆ.

ಬಿಡುವಿರದೆ ಅರಚುವ ವಾಯುದಾಳಿ ಮುನ್ನೆಚ್ಚರಿಕೆ ಸೈರನ್‌ಗಳು. ಇರುಳೆಲ್ಲ ಗುಡುಗುವ ಆ್ಯಂಟಿ ಏರ್ ಕ್ರಾಫ್ಟ್ ಗನ್ನುಗಳು. ಭಾರತದ ಸೇನೆ ಹೊಡೆದುರುಳಿಸಿದ ನಂತರ ಮನೆಯಂಗಳಗಳಿಗೆ ಮುರಿದು ಬೀಳುವ ಶತ್ರುದೇಶದ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ತುಂಡು ಲೋಹಗಳು. ಬೆದರಿ ಊಳಿಡುವ ನಾಯಿಗಳು. ಕಣ್ಣಿ ಕಿತ್ತುಕೊಂಡು ಚೆದುರುವ ದನಕರುಗಳು. ಯಾವಾಗ ಸ್ಫೋಟಿಸುತ್ತವೆಯೋ ಎಂಬ ಆತಂಕ ಮೂಡಿಸಿ ಸಿಡಿಯದೆ ಮಲಗಿರುವ ಶತ್ರು ಕ್ಷಿಪಣಿಗಳು.
ಬಾರಾಮುಲ್ಲ, ಕುಪ್ವಾಡ, ಅಖನೂರ್, ಪೂಂಛ್ ಹಾಗೂ ರಜೌರಿ ಕಾಶ್ಮೀರದ ಗಡಿ ಜಿಲ್ಲೆಗಳು. ಭಾರತ-ಪಾಕ್ ಗಡಿಯ 553 ಕಿ.ಮೀಗಳುದ್ದಕ್ಕೆ ಚಾಚಿರುವ ಪಂಜಾಬಿನ ಫಿರೋಜ್ಪುರ, ಫಾಜಿಲ್ಕ, ತರನ್ ತರನ್, ಗುರುದಾಸಪುರ, ಪಠಾನ್ ಕೋಟ್, ಹಾಗೂ ಅಮೃತಸರ. ವಿಶೇಷವಾಗಿ ಕಾಶ್ಮೀರಿ ಗಡಿಗ್ರಾಮಗಳ ಜನ ಕಳೆದೊಂದು ವಾರ ಮರಣದ ನೆರಳಲ್ಲೇ ಜೀವ ಹಿಡಿದಿದ್ದಾರೆ. ಹಗಲಿರುಳು ಘರ್ಜಿಸಿದ ಪಾಕ್ ಶೆಲ್ಲಿಂಗ್ ದಾಳಿ, ಡ್ರೋನ್ ಹಾಗೂ ಕ್ಷಿಪಣಿ ದಾಳಿ ಅವರನ್ನು ಕಂಗೆಡಿಸಿತ್ತು. ಶುಕ್ರವಾರ ಸಂಜೆ ಘೋಷಿಸಿದ ಕದನವಿರಾಮ ಇವರ ಪಾಲಿಗೆ ಯುದ್ಧದ ಕರಿಮೋಡಗಳ ನಡುವಣ ಬೆಳ್ಳಿ ರೇಖೆ.
ನಾಲ್ಕೈದು ದಿನಗಳ ದುಃಸ್ವಪ್ನ ಕಳೆದು ಹಠಾತ್ತನೆ ಕವಿದ ನಿಶ್ಯಬ್ದ. ಮೂರು ಇರುಳು ಮಲಗಿಲ್ಲ. ದಾಳಿಯ ತೀವ್ರತೆಗೆ ಮನೆಗಳು ಅದುರಿ ಹೋಗುತ್ತಿದ್ದವು. ಮಕ್ಕಳು ಮರಿಗಳು ಬೆಚ್ಚಿ ಬೀಳುತ್ತಿದ್ದವು. ಈಗಲೂ ನೆನೆ ನೆನೆದು ಕಂಪಿಸುವುದು ನಿಂತಿಲ್ಲ. ಪೂಂಛ್ ನ ದೂರದ ಗುಡ್ಡಗಾಡುಗಳಲ್ಲಿ ನೆಲದಡಿಯ ಬಂಕರ್‌ಗಳ ಬದುಕು. ಒಬ್ಬರನ್ನೊಬ್ಬರು ತಬ್ಬಿ ಹಿಡಿದು ಕಳೆದ ಕ್ಷಣಗಳು. ಮಕ್ಕಳ ನಗೆಮುಗುಳುಗಳು ಬತ್ತಿಯೇ ಹೋಗಿವೆ. ಇದು ಕಟ್ಟಕಡೆಯ ಇರುಳಾದೀತು…ಬೆಳಗನ್ನು ನೋಡಲು ಉಳಿದಿರುತ್ತೇವೆಯೇ ಎಂಬ ಪ್ರಶ್ನೆ ಅವರನ್ನು ಕಾಡಿದ್ದು ಸುಳ್ಳಲ್ಲ.
ಗಡಿ ಪ್ರದೇಶದ ನಿಯಂತ್ರಣ ರೇಖೆಯ ಉಡಿ ಮತ್ತು ಪೂಂಛ್‌ನ ಗ್ರಾಮಗಳು ಪ್ರೇತ ಕಳೆಯಲ್ಲಿ ಮುಳುಗಿವೆ. ಅಲ್ಲಿನ ಕುಟುಂಬಗಳು ಪಲಾಯನ ಮಾಡಿವೆ. ಮನೆಗಳು ಮುರಿದು ಬಿದ್ದರೆ ಮತ್ತೆ ಕಟ್ಟಿಕೊಳ್ಳಬಹುದು. ಸತ್ತವರನ್ನು ಮತ್ತೆ ಬದುಕಿಸಿ ತರಲಾದೀತೇ ಎಂಬುದು ಅವರ ಸವಾಲು. ಎರಡು ದೇಶಗಳ ನಡುವಿನ ಈ ಕಾಳಗಕ್ಕೆ ಸಿಕ್ಕಿ ನೆತ್ತರಿನಲ್ಲಿ ಅದ್ದಿ ಹೋಗುವ ಗುಬ್ಬಿಗಳು ನಾವು. ಜೀವಚೈತನ್ಯಗಳು ಘಾಸಿಗೊಂಡಿವೆ. ಬಹಳವೇ ದಣಿದಿದ್ದೇವೆ. ಶಾಂತಿಯಲ್ಲದೆ ಇನ್ನೇನೂ ಬೇಡ ನಮಗೆ ಎನ್ನುತ್ತವೆ ಗಡಿಭಾಗದ ಬಡಜೀವಗಳು.
ಕರೋನಾ ನೋಡಿದೆವು… ರಾಮಮಂದಿರ ನೋಡಿದೆವು..ಭಾರತ-ಪಾಕಿಸ್ತಾನ ಯುದ್ಧವನ್ನು ಕಣ್ಣಾರೆ ಕಾಣುವುದೊಂದು ಉಳಿದಿದೆ ಎಂದು ಜನ ರೀಲ್ಸ್ ಮಾಡ್ತಿದ್ದಾರೆ…ನಾನು ಯೋಧನೊಬ್ಬನ ಪತ್ನಿ. ವಾಸ್ತವ ಏನೆಂದು ನನಗೆ ಮಾತ್ರ ಗೊತ್ತು. ಮಗ ಸುರಕ್ಷಿತವಾಗಿದ್ದಾನಾ, ಮತ್ತೆ ರಜೆಯ ಮೇಲೆ ವಾಪಸು ಬರ್ತಾನಾ ಅಂತ ಅತ್ತೆ ಮಾವು ಟೀವಿ ಮುಂದೆ ಕುಳಿತು ನೋಡ್ತಿರ್ತಾರೆ. ಕದನ ವಿರಾಮವನ್ನು ನಿಂದಿಸಲಾಗುತ್ತಿದೆ. ನಿಮ್ಮ ಮೆಚ್ಚಿನ ನಟ, ನಾಯಕ ಹೋಗ್ತಾನಾ ಯುದ್ಧ ಮಾಡಲು. ಇವರಿಗೆಲ್ಲ ಯುದ್ಧ ಅಂದ್ರೆ ತಮಾಷೆಯಾಗಿ ಹೋಗಿದೆ ಎಂಬ ಯೋಧನ ಪತ್ನಿಯ ರೀಲ್ ವೈರಲ್ ಆಗಿದೆ.
ಕದನವಿರಾಮ ಅನೇಕ ಸಲ ನೋಡನೋಡುತ್ತಲೆ ಕುಸಿದು ಬಿದ್ದಿದೆ. ಯಾವ ಮುನ್ನೆಚ್ಚರಿಕೆಯೂ ಇಲ್ಲದೆ ಅದನ್ನು ಮುರಿಯಲಾಗಿದೆ. ನಮ್ಮ ಮಕ್ಕಳು ಭಯವಿಲ್ಲದೆ ಬದುಕಿದರೆ ಅಷ್ಟೇ ಸಾಕು. ಕಾಶ್ಮೀರ ಕಣಿವೆ ಮುಸ್ಸಂಜೆಯನ್ನ ತಬ್ಬಿಕೊಳ್ಳತೊಡಗಿದಂತೆ ಮಸೀದಿಗಳಿಂದ ಮೊಳಗಿದ ಪ್ರಾರ್ಥನೆಯ ಕರೆಗೆ ಓಗೊಡುವ ಜೀವಗಳು ಪಿಸುಮಾತಿನಲ್ಲೇ ಈಶ್ವರನನ್ನು ಸ್ತುತಿಸುತ್ತಾರೆ.
ಈ ಆಶಂಕೆ ನಿಜವಾಯಿತು. ಕದನವಿರಾಮವನ್ನು ಉಲ್ಲಂಘಿಸಿಯೇ ಪಾಲಿಸುತ್ತಿದೆ ಪಾಕಿಸ್ತಾನ.
ಇದನ್ನೂ ಓದಿ ನಾಗರಿಕರ ಸುರಕ್ಷತೆ ಖಾತರಿಪಡಿಸಲು 10 ಉಪಗ್ರಹಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ: ಇಸ್ರೋ ಅಧ್ಯಕ್ಷ
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ನಡೆದ ಐಸಿ-814 ವಿಮಾನ ಅಪಹರಣದ ಆರೋಪಿಗಳಲ್ಲೊಬ್ಬನಾದ ಮೊಹಮ್ಮದ್ ಯೂಸೂಫ್ ಅಝರ್ ಸೇರಿದಂತೆ ಐವರು ಕುಖ್ಯಾತ ಭಯೋತ್ಪಾದಕರು ಭಾರತದ ದಾಳಿಗಳಲ್ಲಿ ಹತರಾಗಿರುವುದು ತುಸುವಾದರೂ ಸಮಾಧಾನ ನೀಡಿದ ಸಂಗತಿ. ಯೂಸೂಫ್ ಅಝರ್, ಮೊಹಮ್ಮದ್ ಖಾದಿಯಾನ್ ಖಾಸ್, ಹಾಫಿಜ್ ಮೊಹಮ್ಮದ್ ಜಮೀಲ್, ಖಾಲೀದ್ ಹಾಗೂ ಮೊಹಮ್ಮದ್ ಹಸನ್ ಖಾನ್ ಅಂತ್ಯಕ್ರಿಯೆಗಳಲ್ಲಿ ಪಾಕಿಸ್ತಾನಿ ಸೇನೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿರುವ ಚಿತ್ರಗಳು ಬಹಿರಂಗಗೊಂಡಿವೆ. ಭಯೋತ್ಪಾದಕರು ಮತ್ತು ಪಾಕ್ ಸೇನೆ- ಪೊಲೀಸರ ನಡುವಿನ ಸಂಬಂಧಗಳಿಗೆ ಸಾಕ್ಷಿಯಾಗಿವೆ.
ಈ ಸಮರದಲ್ಲಿ ಮೋದಿಯವರು ಗೆದ್ದುಕೊಂಡದ್ದು ಎಷ್ಟು, ಸೋತದ್ದೆಷ್ಟು ಎಂಬುದನ್ನು ಮುಂಬರುವ ದಿನಗಳು ನಿಚ್ಚಳವಾಗಿ ಸಾರಲಿವೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು