ಸುತ್ತಾಟ | ಝೊಕೊ ಕಣಿವೆ (Dzukou Valley) ಮತ್ತು ಹಾರ್ನ್ ಬಿಲ್ ಹಬ್ಬದ ಅನುಭವ

Date:

Advertisements

ನಾಗಾಲ್ಯಾಂಡ್, ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿಗಳು ಮತ್ತು ಬಹು ಶ್ರೀಮಂತ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ರಾಜ್ಯದಲ್ಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲೆರಡು ವಾರದಲ್ಲಿ ನಡೆಯುವ ಹಾರ್ನ್ ಬಿಲ್ ಹಬ್ಬ ಮತ್ತು ಕೊಹಿಮಾದ ಸಮೀಪವಿರುವ ಝೊಕೊ ಕಣಿವೆ—ಇವು ಎರಡು ಕೂಡ ವಿಭಿನ್ನ ಅನುಭವಗಳು.

ಕೆಲವು ಅನುಭವಗಳು ಹಾಗೇ – ಎಷ್ಟೇ ಬಾರಿ ನೋಡಿದರೂ, ಓದಿದರೂ, ಕೇಳಿದರೂ, ಮತ್ತೆ ಮತ್ತೆ ನೋಡಬೇಕು, ಮತ್ತೆ ಹೇಳಬೇಕು, ಮತ್ತೆ ಮತ್ತೆ ಕೇಳಬೇಕು, ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು ಅಂತ ಅನಿಸುತ್ತವೆ. ಆ ಅನುಭವಗಳ ಸರಳತೆಯಲ್ಲಿ ಮತ್ತು ಆ ನೆನಪುಗಳ ಸಾರದಲ್ಲೇ ಜೀವನವಿದೆ. ‘Life is nothing but collection of little stories’ – (ಸಣ್ಣ ಪುಟ್ಟ ನೆನಪುಗಳ ಸಂಗ್ರಹವೇ ಜೀವನ ) – ಎಲ್ಲೋ ಚಾರಣ ಮಾಡುವಾಗ ನೋಡಿದ್ದು – ಯಾರೋ ಗೀಚಿದ ಸಾಲುಗಳು.

ನಾನು ಕಳೆದ ಬಾರಿ ನಾಗಾಲ್ಯಾಂಡಿನ ಸುಂದರ ಸಾರಮತಿ ಬೆಟ್ಟದ ಕುರಿತು ಬರೆದಿದ್ದೆ. ಆದರೆ ನಾಗಾಲ್ಯಾಂಡ್ ಅಷ್ಟಕ್ಕೇ ಸೀಮಿತವಲ್ಲ. ಇನ್ನೂ ಹಲವಾರು ಸುಂದರ, ಮನೋಹರ ಜಾಗಗಳನ್ನು, ನಿಸರ್ಗಮಯ ತಾಣಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ರಾಜ್ಯ ನಾಗಾಲ್ಯಾಂಡ್. ಇವತ್ತು ನಾನು ಬರೆಯಲು ಹೊರಟಿದ್ದು ನಾಗಾಲ್ಯಾಂಡಿನ ಇನ್ನೆರಡು ವೈಶಿಷ್ಟ್ಯಗಳಾದ – ಝೊಕೊ ಕಣಿವೆ ಮತ್ತು ಹಾರ್ನ್ ಬಿಲ್ ಹಬ್ಬದ ಬಗ್ಗೆ.

Advertisements

ಝೊಕೊ ಕಣಿವೆ (Dzukou Valley) – ಈ ಹೆಸರನ್ನು ಮೊದಲ ಬಾರಿಗೆ ಕೇಳಿದಾಗ, “ಇದನ್ನು ಹೇಗೆ ಉಚ್ಛರಿಸುವುದಪ್ಪ?, ಇದನ್ನು ಕನ್ನಡದಲ್ಲಿ ಹೇಗೆ ಬರಿಯೋದು?” ಅನ್ನುವ ಯೋಚನೆ ಬಂದಿದ್ದಂತೂ ನಿಜ. ಇದನ್ನು ದ್ಝೋಕೋ ಅನ್ನೋದ, ಅಥವಾ ದ್ಝುಕೋ ಅನ್ನೋದ ಅಂತ ದ್ವಂದ. ಹೆಸರು ಎಷ್ಟು ವಿಶಿಷ್ಟವೋ, ಕಣಿವೆ ಕೂಡ ಅಷ್ಟೇ ಅಪರೂಪದ್ದು. ನಮಗೆಲ್ಲ ಉತ್ತರಾಖಂಡದ ‘ಹೂವುಗಳ ಕಣಿವೆ’ (Valley of Flowers) ಬಗ್ಗೆ ಗೊತ್ತಿದೆ. ಆದರೆ ಝೊಕೊ ಕಣಿವೆಯ ಬಗ್ಗೆ ಬರಹಗಳು ಕಡಿಮೆ, ಪ್ರಚಾರ ತೀರಾ ಕಡಿಮೆ. ಬಹುಶಃ ಅದಕ್ಕೆ ನಾಗಾಲ್ಯಾಂಡ್ ರಾಜ್ಯದ ಪ್ರವಾಸೋದ್ಯಮ ಪ್ರಚಾರದ ಕೊರತೆಯೂ ಕಾರಣವಾಗಿರಬಹುದು. ನಮ್ಮ ದೇಶದ ಈಶಾನ್ಯ ರಾಜ್ಯಗಳು ಬಹು ಸುಂದರ – ಅರುಣಾಚಲ ಪ್ರದೇಶ, ಸಿಕ್ಕಿಂ, ಮೇಘಾಲಯ, ಅಸ್ಸಾಂ ಹೀಗೆ ಈ ಎಲ್ಲ ರಾಜ್ಯಗಳು ತಮ್ಮದೇ ವಿಶಿಷ್ಟ ಚೆಲುವನ್ನು ಉಳ್ಳಂತಹ ರಾಜ್ಯಗಳು. ಈಶಾನ್ಯ ಭಾರತದ ರಾಜ್ಯಗಳು ಬಹು ಚಿಕ್ಕದಾಗಿದ್ದು, ಅಲ್ಲಿನ ಲೋಕಸಭೆಯ ಪ್ರತಿನಿಧಿಗಳ ಸಂಖ್ಯೆಯೂ ಕೂಡ ತೀರಾ ಕಡಿಮೆಯಿದೆ. ಬಹುಶಃ ಇದರಿಂದಾಗಿ ಈ ರಾಜ್ಯಗಳ ಅಭಿವೃದ್ಧಿ, ಅದರಲ್ಲಿಯೂ ಪ್ರವಾಸೋದ್ಯಮದ ಬೆಳವಣಿಗೆ ಕೂಡ ನಿಧಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಒಂದಿಷ್ಟು ಬದಲಾವಣೆಯನ್ನು ನಾವು ಕಾಣಬಹುದು.

WhatsApp Image 2025 04 11 at 2.53.54 PM

ನಾಗಾಲ್ಯಾಂಡ್, ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿಗಳು ಮತ್ತು ಬಹು ಶ್ರೀಮಂತ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ರಾಜ್ಯದಲ್ಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲೆರಡು ವಾರದಲ್ಲಿ ನಡೆಯುವ ಹಾರ್ನ್ ಬಿಲ್ ಹಬ್ಬ ಮತ್ತು ಕೊಹಿಮಾದ ಸಮೀಪವಿರುವ ಝೊಕೊ ಕಣಿವೆ—ಇವು ಎರಡು ಕೂಡ ವಿಭಿನ್ನ ಅನುಭವಗಳು. ಹಾರ್ನ್ ಬಿಲ್ ಸಾಂಸ್ಕೃತಿಕ ಜೀವಂತಿಕೆಯ ಅನುಭವವಾದರೆ, ಇನ್ನೊಂದು ನಿಸರ್ಗಚಿತ್ತದ ಚಿರಂತನ ಶಾಂತಿಯ ಜೊತೆ ನವ್ಯತೆಯ ಹಸಿರುಚೌಕಟ್ಟಿನೊಂದಿಗೆ – ನೋಡುವವರಿಗೆ ಅದ್ಭುತ ಅನುಭವ ನೀಡಬಲ್ಲ ತಾಣ.

ಕಿಸಾಮಾ ಹೆರಿಟೇಜ್ ಗ್ರಾಮದಲ್ಲಿನ ಸಾಂಸ್ಕೃತಿಕ ಉತ್ಸವ – ಹಾರ್ನ್ ಬಿಲ್ ಹಬ್ಬ

ಹಾರ್ನ್ ಬಿಲ್ ಹಬ್ಬವು ನಾಗಾಲ್ಯಾಂಡಿನ ಕಿಸಾಮಾ ಗ್ರಾಮದಲ್ಲಿ ನಡೆಯುತ್ತೆ. ನಾಗಾಲ್ಯಾಂಡ್‌ನ 16 ಪ್ರಮುಖ ಬುಡಕಟ್ಟುಗಳ ಸಾಂಸ್ಕೃತಿಕ ವೈಭವವನ್ನು ಒಂದು ವೇದಿಕೆಯ ಮೇಲೆ ಕಾಣಬಹುದಾದ ಈ ಹಬ್ಬದ ಮೊದಲ ದಿನವೇ ಒಂದು ದೃಶ್ಯ ವೈಭವ. ಆಂಗಾಮಿ, ಕೋನ್ಯಾಕ್ ಮತ್ತು ಲೋಥಾ ಹೀಗೆ ವಿವಿಧ ಬುಡಕಟ್ಟುಗಳ ಯುವಕರು ತಮ್ಮ ಪರಂಪರೆಯಿಂದ ಬಂದ ತಂತ್ರಜ್ಞಾನ, ಧೈರ್ಯ ಮತ್ತು ಯುದ್ಧ ಶೈಲಿಗಳನ್ನು ಪ್ರತಿಬಿಂಬಿಸುವಂತೆ ಕತ್ತಿ ಮತ್ತು ಬಾಣಗಳನ್ನು ಹಿಡಿದುಕೊಂಡು ಮಾಡುವ ಯುದ್ಧ ನೃತ್ಯ ಬಹು ಆಕರ್ಷಕ. ಇದನ್ನು ನೋಡಲು ವಿದೇಶಗಳಿಂದಲೂ ತುಂಬಾ ಜನ ಪ್ರವಾಸಿಗರು ಬರುತ್ತಾರೆ.

ಈ ನೃತ್ಯಗಾರರು ತಮ್ಮ ತಲೆಯನ್ನು ಕಾಡುಹಂದಿಯ ಕೊಂಬುಗಳು, ಹಕ್ಕಿ ಗರಿಗಳಿಂದ ಮಾಡಿದ ತಲೆದಿರಿಸು, ವರ್ಣರಂಜಿತ ಪೇಟಗಳಿಂದ ಅಲಂಕರಿಸಿಕೊಂಡು, ತಮ್ಮ ತಮ್ಮ ಬುಡಕಟ್ಟಿನ ವಿವಿಧ ಆಕರ್ಷಕ ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ, ಗಂಭೀರ ಮುಖಭಾವಗಳೊಂದಿಗೆ ನಡೆಸಿಕೊಡುವ ಈ ಸಾಂಸ್ಕೃತಿಕ ವೈಭವ ನಿಜಕ್ಕೂ ಮನಸ್ಸನ್ನು ಸೆಳೆಯುತ್ತವೆ. 16 ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಉಡುಪು, ನೃತ್ಯ, ಯುದ್ಧ ನೃತ್ಯ, ವಾದ್ಯಗಳು, ಪೋಷಾಕು, ಆಹಾರ ಪದ್ಧತಿ, ಬಾಳ್ವೆ ಶೈಲಿ ಹೀಗೆ ಎಲ್ಲವನ್ನೂ ಇಲ್ಲಿ ಪ್ರಸ್ತುತಪಡಿಸುತ್ತವೆ. ಅದರಲ್ಲೂ ಅವರ ಮಹಿಳಾ ಉಡುಗೆ ಪುರುಷರ ಉಡುಗೆಗಿಂತ ಬಹು ವಿಭಿನ್ನ. ಈ ಪುಟ್ಟ ರಾಜ್ಯದಲ್ಲಿ ಈ 16 ಬುಡಕಟ್ಟುಗಳಲ್ಲಿಯೇ ಎಷ್ಟೊಂದು ವೈವಿಧ್ಯತೆ. ನಿಜಕ್ಕೂ, ವೈವಿಧ್ಯತೆಯಲ್ಲಿ ಏಕತೆಯ ಸಂಭ್ರಮವದು.

WhatsApp Image 2025 04 11 at 3.01.12 PM

ಹಬ್ಬದ ಗ್ರಾಮದಲ್ಲಿ ವಿವಿಧ ಬುಡಕಟ್ಟು ಸಮುದಾಯಗಳ ಮನೆ ನಿರ್ಮಾಣ ಶೈಲಿಯನ್ನು ಕೂಡ ನೋಡಬಹುದು. ಪ್ರತಿಯೊಂದು ಬುಡಕಟ್ಟಿನ ಮನೆ ನಿರ್ಮಾಣದ ವಿನ್ಯಾಸ, ಒಳಗೆ ಬಳಸುವ ವಸ್ತುಸಾಮಗ್ರಿಗಳು, ಅವರ ನಿತ್ಯಜೀವನದ ಅಂಶಗಳನ್ನು ಪ್ರತಿಬಿಂಬಿಸುವಂತೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಜೊತೆಗೆ, ಪ್ರತಿದಿನವೂ ಒಂದೊಂದು ಬುಡಕಟ್ಟಿನ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನಗಳನ್ನು ಕೂಡ ನೋಡಬಹುದು. ಪ್ರತೀ ದಿನವೂ ಕೂಡ ಒಂದಲ್ಲ ಒಂದು ಸಮಾರಂಭ ಇದ್ದೇ ಇರುತ್ತದೆ.

ವಿವಿಧ ಖಾದ್ಯ ಮತ್ತು ಸಂಗೀತದ ಮೋಡಿ

ಬರಿಯ ವೇಷ ಭೂಷಣವಷ್ಟೇ ಅಲ್ಲ, ಅವರ ಆಹಾರ ಪದ್ಧತಿ ಕೂಡ ಬಹು ವಿಭಿನ್ನ. 16 ಬುಡಕಟ್ಟುಗಳ ವಿಶಿಷ್ಟ ಖಾದ್ಯಗಳನ್ನು ಸವಿಯುವ ಸದವಕಾಶ ಕೂಡ ಈ ಹಬ್ಬ ಒದಗಿಸುತ್ತದೆ. ನಾಗಾ ಆಹಾರ ಮಾಂಸಾಹಾರ ಕೇಂದ್ರಿತವಾದರೂ, ಸಸ್ಯಾಹಾರಿ ಖಾದ್ಯಗಳೂ ಇವೆ. ಹಂದಿ ಮಾಂಸ (ಸಮಕ್ಕಿತ್ರಿ), ಬಿದಿರಿನ ಓಟೆಯಲ್ಲಿ ಬೇಯಿಸಿದ ಅಕ್ಕಿ, ಮತ್ತು ಇಲ್ಲಿನ ಜೋಲೋಕಿಯಾ ಮೆಣಸಿನಕಾಯಿ ಹೀಗೆ ಎಲ್ಲವೂ ಇಲ್ಲಿ ಸಿಗುತ್ತೆ. ಜೊತೆ ಜೊತೆಗೆ ಸ್ಥಳೀಯ “ನಾಗಾ ರೈಸ್ ಬೀರ್” ಕೂಡ ಬಹು ಪ್ರಸಿದ್ಧ.

ಸಂಗೀತ ಪ್ರೇಮಿಗಳಿಗಾಗಿ ಹಾರ್ನ್ ಬಿಲ್ ರಾಕ್ ಕನ್ಸರ್ಟ್ ಕೂಡ ಇದೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲದೇ ಇರಬಹುದು – ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಕ್ ಕಾನ್ಸರ್ಟ್ ಗೆ (ಪಾಶ್ಚಾತ್ಯ ಸಂಗೀತ ಶೈಲಿ) ಕೂಡ ಹೆಸರುವಾಸಿ. ಪಾಶ್ಚಾತ್ಯ ಶೈಲಿಯ ಸಂಗೀತ ಇಲ್ಲಿ ಹೊಸ ರೂಪದಲ್ಲೇ ಮೂಡಿಬರುತ್ತದೆ. ನಾನು ಉಳಿದುಕೊಂಡಿದ್ದ ಹೋಂಸ್ಟೇಯಲ್ಲಿ ಪ್ರತೀ ರಾತ್ರಿ ಸ್ಥಳೀಯ ಯುವ ಪ್ರತಿಭೆಗಳು ಹಾಡು-ನೃತ್ಯ ಪ್ರದರ್ಶಿಸುತ್ತಿದ್ದರು—ಇಡೀ ಹಳ್ಳಿಯೇ ಒಂದು ಸಾಂಸ್ಕೃತಿಕ ಮೇಳದಂತೆ ಭಾಸವಾಗುತ್ತೆ. ಈ ಹಬ್ಬದ ಇನ್ನೊಂದು ವಿಶೇಷವೆಂದರೆ ಕೊನೆಯ ದಿನ. ಅವತ್ತು ಇಡೀ ಭಾರತದ ಈಶಾನ್ಯ ರಾಜ್ಯಗಳ ಬೇರೆ ಬೇರೆ ತಂಡಗಳಿಂದ (ಅಸ್ಸಾಂ, ಸಿಕ್ಕಿಂ, ಮೇಘಾಲಯ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ) ಆ ರಾಜ್ಯಗಳ ನೃತ್ಯ, ಹಾಡು, ಸಾಂಸ್ಕೃತಿಕ ಉಡುಗೆ, ತೊಡುಗೆ, ಹೀಗೆ ಎಲ್ಲವನ್ನೂ ಕೂಡ ಒಂದೇ ವೇದಿಕೆಯಲ್ಲಿ ನೋಡಬಹುದು. ಒಟ್ಟಾರೆಯಾಗಿ ಇಡೀ ಹಬ್ಬದ ಅನುಭವವೇ ಒಂದು ವರ್ಣ ರಂಜಿತ ಸಾಂಸ್ಕೃತಿಕ ಅನುಭವ.

WhatsApp Image 2025 04 11 at 2.52.44 PM

ನಾಗ ಜೀವನ ಶೈಲಿಯ ಒಂದು ಮೇಲುನೋಟ

ಈ ಇಡೀ ಹಬ್ಬ ನಾಗ ಬುಡಕಟ್ಟುಗಳ ದೈನಂದಿನ ಜೀವನಶೈಲಿಯನ್ನು ಪ್ರತಿಬಿಂಬಿಸುವ ಒಂದು ಪ್ರಯತ್ನ. ಇಲ್ಲಿನ ಎಕ್ಸಿಬಿಷನ್ ನಲ್ಲಿ – ಬಿದಿರಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಮರದ ಕೆತ್ತನೆಗಳು ಮತ್ತು ಕೈಮಗ್ಗ – ನಾಗಾ ಶಾಲುಗಳು ಹೀಗೆ ಎಲ್ಲವೂ ಲಭ್ಯ. ಇಲ್ಲಿನ ಬುಡಕಟ್ಟುಗಳ ಕರಕುಶಲ ವಸ್ತುಗಳು ಸ್ಮರಣಿಕೆ ಮಾತ್ರವಲ್ಲ, ಆ ಜನರ ಜೀವನದ ಪ್ರತಿಬಿಂಬವೂ ಹೌದು. ನಾನು ಇಲ್ಲಿ ಖರೀದಿಸಿದ ಕೈಯಿಂದ ನೇಯ್ದ ಇಂಚುಂಗ್ ಬುಡಕಟ್ಟಿನ ಶಾಲು ಇನ್ನೂ ಆ ಸವಿ ನೆನಪುಗಳನ್ನು ಜೀವಂತವಾಗಿ ಇಟ್ಟಿದೆ. ಹಾಗೆಯೇ – ನಾನು ಇಲ್ಲಿಂದ ತಂದಿದ್ದ ಝೋಲೋಕಿಯ ಮೆಣಸಿನಕಾಯಿ (ತುಂಬಾ ಖಾರವಾದ ಮೆಣಸಿನಕಾಯಿ ಅಂತ ಪ್ರಸಿದ್ಧ ) ಹಬ್ಬದಿಂದ ವಾಪಾಸ್ ಬಂದ ಬಳಿಕವೂ ಮೂರು ಲೋಕವನ್ನು ತೋರಿಸಿತ್ತು.

ಝೊಕೊ ಕಣಿವೆ (Dzukou Valley)

ಹಬ್ಬ ಮುಗಿಸಿಕೊಂಡು, ನಾವು ಹೊರಟಿದ್ದು ಝೊಕೊ ಕಣಿವೆಯತ್ತ. ಈ ಕಣಿವೆಯ ಬಗ್ಗೆ ಹಿಂದೆಂದೂ ಕೇಳಿರಲಿಲ್ಲ, ಹಾಗಾಗಿ ಅಷ್ಟೇನೂ ಉತ್ಸಾಹದಿಂದ ಹೊರಟಿರಲಿಲ್ಲ. ನಾವು ಉಳಿದುಕೊಂಡಿದ್ದ ಹೋಮ್ ಸ್ಟೇಯ ಸಿಬ್ಬಂದಿ ಸೂಚಿಸಿದ ಜಾಗವಿದು. ಕಿಸಾಮಾ ಹಳ್ಳಿಯಿಂದ ವಿಸ್ವೇಮಾ ಎಂಬ ಹಳ್ಳಿಯವರೆಗೆ ಟ್ಯಾಕ್ಸಿಯಲ್ಲಿ ಹೋಗಿ ಅಲ್ಲಿಂದ ಮುಂದೆ ನಡೆದುಕೊಡು ಹೋಗಬೇಕಾದ ದಾರಿ. ಇಲ್ಲಿಂದ ಝೊಕೊ ಕಣಿವೆಯ ತನಕ ಸರಿ ಸುಮಾರು 17 ಕಿ.ಮೀ ದೂರದ ಹಾದಿ- 7-8 ಗಂಟೆಯ ಹಾದಿ (ಹೋಗಿ ಬರಲು). ಕಣಿವೆಯ ಆಳದಲ್ಲಿ ಕ್ಯಾಂಪಿಂಗ್ ಮಾಡಲು ಅವಕಾಶವೂ ಇದೆ. ಮೊದಲೇ ಅನುಮತಿ ಮತ್ತು ತಯಾರಿ ಮಾಡುಕೊಂಡು ಹೋಗಬೇಕು. ನಾವು ಕ್ಯಾಂಪಿಂಗ್ ಮಾಡಿರಲಿಲ್ಲ.

ಅಂತಹ ಕಷ್ಟದ ಹಾದಿಯೂ ಅಲ್ಲ. ಯಾರೂ ಕೂಡ ಹೋಗಬಹುದಾದ ಜಾಗ – ಹಾದಿಯಲ್ಲಿ ಎಲ್ಲೂ ಕೂಡ ನೀರು, ಆಹಾರ ಯಾವುದೂ ಸಿಗಲ್ಲ, ಹಾಗಾಗಿ ಎಲ್ಲವನ್ನೂ ತೆಗೆದುಕೊಂಡು ಹೋಗಬೇಕು. ಕಣಿವೆಯ ಕೊನೆಯಲ್ಲಿ ಒಂದು ಪುಟ್ಟ ಅಂಗಡಿಯಿದೆ (ಇಲ್ಲಿ ಮ್ಯಾಗಿ, ಚಹಾ ಸಿಗುತ್ತೆ). ಹಾಗೆಯೇ ಈ ಕಣಿವೆಯ ಉದ್ದಕ್ಕೂ ತುಂಬಾ ಚಳಿ ಮತ್ತು ಹಿಮಗಾಳಿ ಇರುವುದರಿಂದ (ಕೆಲವೊಮ್ಮೆ ಸಣ್ಣ ಜಡಿಮಳೆ ಬರುವ ಸಾಧ್ಯತೆಯೂ ಇದೆ). ತಕ್ಕನಾದ ಜಾಕೆಟ್, ಶೂ ಅತೀ ಅಗತ್ಯ.

WhatsApp Image 2025 04 11 at 2.52.58 PM

ಟ್ರೆಕ್ಕಿಂಗ್‌ನ ಆರಂಭದಲ್ಲಿ, ‘ಇಲ್ಲಿ ಅಂತಹ ವಿಶೇಷ ಏನಿದೆ?’ ಎಂಬ ಅನುಮಾನ ಹುಟ್ಟಿದರೂ, ಝೊಕೊ ಕಣಿವೆಯ ನಿಜವಾದ ಮಂತ್ರಮುಗ್ಧಗೊಳಿಸುವ ದೃಶ್ಯವನ್ನು ನೋಡಲು ಕೊನೆಯ ಹಂತ ತಲುಪಲೇ ಬೇಕು. ಸಮುದ್ರಮಟ್ಟದಿಂದ 2438 ಮೀಟರ್ ಎತ್ತರದಲ್ಲಿ ವಿಸ್ತಾರವಾಗಿ ಹರಡುವ ಹಸಿರು ಮೈದಾನಗಳು, ನಡುಗಾಡಿನ ಹಸುರಿನ ಹಾಸುಗಳು, ಮನಸಿಗೆ ಮುದ ನೀಡುವ ಹಿಮಗಾಳಿಯ ಸ್ಪರ್ಶ—ಎಲ್ಲವೂ ಜೊತೆಗೂಡಿ ಒಟ್ಟಾರೆ ಕಣಿವೆಯೇ ಒಂದು ಪ್ರಕೃತಿಯ ಚಿತ್ತಾರವೆನಿಸುತ್ತದೆ. ನಾನು ಬೇರೆಂದೂ ಇಂತಹ ದೃಶ್ಯ ನೋಡಿಲ್ಲ ಅನ್ನಿಸುತ್ತೆ. ಕಣ್ಣು ಹಾಯಿಸಿದಷ್ಟು ಹಸಿರಿನ ಲೋಕ, ಆ ಹಸಿರಿನ ಹಿಂದೆ ಸ್ವಚ್ಛಂದ ನೀಲಿ ಆಕಾಶ- ನಿಮ್ಮ ಸುತ್ತಮುತ್ತಲಿನ ಇಡೀ ಪ್ರಕೃತಿಯೇ ಒಂದು ಹಸಿರು ಕವಿತೆಯಂತೆ ಭಾಸವಾದರೆ ಅದು ಉತ್ಪ್ರೇಕ್ಷೆಯೇನಲ್ಲ.

ಈ ಹಸಿರಿನ ಪ್ರಪಂಚಕ್ಕೆ ಕಾಲಿಟ್ಟಾಗ ಒಂದು ಕಡೆ ನಾಗಾಲ್ಯಾಂಡ್, ಇನ್ನೊಂದೆಡೆ ಮಣಿಪುರ ರಾಜ್ಯದ ಗಡಿಭಾಗ ಕಾಣಸಿಗುತ್ತೆ. ಅಂಗಾಮಿ ಹಾಗೂ ಮಾವೋ ಭಾಷೆಯಲ್ಲಿ ಝೊಕೊ (Dzokou) ಎಂದರೆ ತಣ್ಣೀರು. ಇಲ್ಲಿ ಬೀಸುವ ಹಿಮಗಾಳಿಯಿಂದಾಗಿ ಈ ಹೆಸರು ಬಂದಿದೆಯಂತೆ. ಹಾಗೆಯೇ – ಇಲ್ಲಿಗೆ ಬಿಳಿ ಆನೆಗಳು ನೀರು ಕುಡಿಯಲು ಬರುತ್ತವೆ ಎಂಬುವುದು ಸ್ಥಳೀಯ ನಂಬಿಕೆ.

ಝೊಕೊ ಕಣಿವೆಗೆ ಪ್ರವೇಶಿಸುವ ಮುನ್ನ ಪ್ರವೇಶ ಶುಲ್ಕ ಪಾವತಿಸಬೇಕು ಎಂಬ ನಿಯಮವಿದೆ. ಹಾಗೆಯೇ ಪ್ಲಾಸ್ಟಿಕ್ ವಸ್ತುಗಳಿಗೆ ಭದ್ರತಾ ಠೇವಣಿ ಕೂಡ ನೀಡಬೇಕು. ವಾಪಾಸ್ ಬಂದು, ನಿಮ್ಮಲ್ಲಿರುವ ಕಸವನ್ನು ಹಿಂತಿರುಗಿಸಿದ ಮೇಲೆ ಠೇವಣಿ ವಾಪಸ್ ಸಿಗುತ್ತೆ. ಈ ವ್ಯವಸ್ಥೆಯಿಂದಾಗಿ ಝೊಕೊ ಕಣಿವೆ ಪ್ಲಾಸ್ಟಿಕ್-ಮುಕ್ತವಾಗಿದೆ. ನಾನು ಗಮನಿಸಿದಂತೆ, ಕೇವಲ ಝೊಕೊ ಕಣಿವೆ ಮಾತ್ರವಲ್ಲ—ಇಡೀ ನಾಗಾಲ್ಯಾಂಡ್ ರಾಜ್ಯವೇ ಪರಿಸರದ ಬಗ್ಗೆ ಉತ್ಕೃಷ್ಟವಾದ ನಾಗರಿಕ ಜವಾಬ್ದಾರಿ ಉಳ್ಳಂತಹ ರಾಜ್ಯ. ಕಿಸಾಮಾ ಹಬ್ಬದ ಗ್ರಾಮದಿಂದ ಹಿಡಿದು ವಿಸ್ವೇಮಾ ಹಳ್ಳಿಯವರೆಗೆ, ಎಲ್ಲೆಡೆ ಕಸದ ತೊಟ್ಟಿಗಳ ಮೇಲೆ ‘Civic Sense (ನಾಗರೀಕ ಪ್ರಜ್ಞೆ)ಬಾಕ್ಸ್ ಅಂತ ಬರೆದಿರುವುದನ್ನು ನಾವು ಕಾಣಬಹುದು. ಹಾಗಾಗಿಯೇ ಇಡೀ ಝೊಕೊ ಕಣಿವೆಯ ಉದ್ದಕ್ಕೂ ಸ್ವಚ್ಛತೆಯನ್ನು ಕಾಪಾಡಲಾಗಿದೆ. ನಿಮಗೆ ಎಲ್ಲಿಯೂ ಕೂಡ ಪ್ಲಾಸ್ಟಿಕ್ ಕಸ ಕಾಣಸಿಗಲ್ಲ. ಇಲ್ಲಿಯ ಜನರ ಸಾಂಸ್ಕೃತಿಕ ಪ್ರೌಢತೆ, ಮತ್ತು ಪ್ರಕೃತಿಯ ಕುರಿತಾದ ಗೌರವ – ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಬೆರೆತಿರುವುದನ್ನು ಕಾಣಬಹುದು. ಇಂತಹ ನಾಗರಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಬೆಳೆದರೆ ಎಷ್ಟು ಚೆಂದ?

ನಾಗಾ ಜನರು ಬಹಳ ಸರಳ ಹಾಗೆಯೇ ಇತರರನ್ನು ಗೌರವಿಸುವವರು – ಅದರಲ್ಲೂ ಈ ಹಾರ್ನ್ ಬಿಲ್ ಹಬ್ಬದ ಸಂದರ್ಭದಲ್ಲಿ ಇವರ ಸಹಜ ಆತಿಥ್ಯತೆಯನ್ನು ಮತ್ತಷ್ಟು ನೋಡಬಹುದು. ಸುತ್ತ ಮುತ್ತಲಿನ ಸ್ಟಾಲಿನಲ್ಲಿ ಸ್ಥಳೀಯರು, ನಿಮ್ಮನ್ನು ಒಂದು ಗ್ಲಾಸ್ “ರೈಸ್ ಬಿಯರ್ ಗೆ” ಆಹ್ವಾನಿಸುವುದು ಸಾಮಾನ್ಯ. ಹಾಗೆಯೇ ಯುವ ಸಂಗೀತಗಾರರು ನಿಮಗಾಗಿ ಹಾಡು ಹಾಡುವುದು ಕೂಡ ಸಾಮಾನ್ಯ. ಮೊದಲೇ ಹೇಳಿದ ಹಾಗೆ ಇಡೀ ಹಳ್ಳಿಯೇ ಒಂದು ಸಾಂಸ್ಕೃತಿಕ ಅನುಭವ ತಾಣದಂತೆ ಬಾಸವಾಗುತ್ತೆ.

ಸಂಸ್ಕೃತಿ ಮತ್ತು ಪ್ರಕೃತಿಯ ತಾಳಮೇಳಗಳನ್ನು ಸಾಕಷ್ಟು ಸವಿದು ವಾಪಾಸ್ ದಿಮಾಪುರಕ್ಕೆ ಮರಳಿದಾಗ, ನನ್ನ ಕ್ಯಾಮೆರಾದಲ್ಲಿ ಸುಮಾರು 500ಕ್ಕೂ ಹೆಚ್ಚು ಫೋಟೋಗಳು ಮತ್ತು ಮನಸ್ಸಿನಲ್ಲಿ ಸಾವಿರಾರು ನೆನಪುಗಳು ಉಳಿದಿದ್ದವು.

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X