ಜಾತಿವ್ಯವಸ್ಥೆಯ ಶ್ರೇಣೀಕರಣವು ಭಾರತೀಯ ಭಾಷೆಗಳನ್ನು ಅಂತರ್ಗತವಾಗಿ ಹೆಣೆದುಕೊಂಡಿದೆ ಎಂಬ ದಲಿತ-ಶೂದ್ರ ಚಿಂತನೆ ಹರಳುಗಟ್ಟಲು ತೊಡಗಿದೆ. ಜಾಗತೀಕರಣಗೊಂಡಿರುವ ಇಂದಿನ ಮಾರುಕಟ್ಟೆ ಪ್ರಾಬಲ್ಯದ ವ್ಯವಸ್ಥೆಯಲ್ಲಿ ಇಂಗ್ಲಿಷಿನ ಪ್ರಾಮುಖ್ಯವನ್ನು ಅಲ್ಲಗಳೆಯುವುದು ಜಾಣತನವಾಗದು. ಚೀನೀಯರು- ಜಪಾನೀಯರು ಇಂಗ್ಲಿಷ್ ಭಾಷೆ ಕಲಿಕೆಗೆ ನೀಡುತ್ತಿರುವ ಆದ್ಯತೆಯೇ ಈ ಮಾತಿಗೆ ಸಜೀವ ರುಜುವಾತು.
ಮೋದಿ ಸರ್ಕಾರದ ‘ನಂಬರ್ ಟೂ’ ಎನಿಸಿಕೊಂಡಿರುವ ಗೃಹಮಂತ್ರಿ ಅಮಿತ್ ಶಾ ಇಂಗ್ಲಿಷ್ ಭಾಷೆಯ ವಿರುದ್ಧ ವಿಷ ಕಾರಿದ್ದಾರೆ. “ಇಂಗ್ಲಿಷ್ ಮಾತಾಡುವವರು ನಾಚಿಕೆಯಿಂದ ತಲೆತಗ್ಗಿಸುವ ದಿನಗಳು ಸದ್ಯದಲ್ಲೇ ಬರಲಿವೆ” ಎಂಬ ಅಪಾಯಕಾರಿ ‘ಭರವಸೆ’ ನೀಡಿದ್ದಾರೆ.
ಸಂಸ್ಕೖತ ಮತ್ತು ಪರ್ಷಿಯನ್ ಭಾರತದ ಜನವರ್ಗವನ್ನು ಆಳಿದ ಕುಲೀನ ಭಾಷೆಗಳು. ತರುವಾಯ ಪಟ್ಟಾಭಿಷೇಕ ಹೊಂದಿದ್ದು ಬ್ರಿಟಿಷ್ ವಸಾಹತುಶಾಹಿಯ ಇಂಗ್ಲಿಷ್ ಭಾಷೆ. ಸರ್ಕಾರದಲ್ಲಿ, ತಂತ್ರಜ್ಞಾನದಲ್ಲಿ ಮಾತ್ರವೇ ಅಲ್ಲದೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಿಷ್ಠ ಭಾರತೀಯರ ಭಾಷೆಯಾದ ಇಂಗ್ಲಿಷ್ ಶೇ.95ರಷ್ಟು ಜನಸಂಖ್ಯೆಯಿಂದ ದೂರವೇ ಉಳಿದಿರುವ ಭಾಷೆ. ಇಂಗ್ಲಿಷನ್ನು ನಾನಾ ಹಂತಗಳಲ್ಲಿ ಓದುವ ಮತ್ತು ಅರ್ಥ ಮಾಡಿಕೊಳ್ಳುವ ಭಾರತೀಯರ ಪ್ರಮಾಣ ಶೇ.10ರಿಂದ ಶೇ.20 ಎಂದು ಅಂದಾಜು ಮಾಡಲಾಗಿದೆ.

ಸಮಾಜವಾದಿ ಚಿಂತಕ-ಹೋರಾಟಗಾರ ರಾಮ ಮನೋಹರ ಲೋಹಿಯಾ ಅವರ ಇಂಗ್ಲಿಷ್ ನ ಕಡು ವಿರೋಧ ಲೋಕಪ್ರಸಿದ್ಧ. ಬ್ರಿಟಿಷರು ಭಾರತವನ್ನು ಆಳಿದ್ದು ‘ಬಂದೂಕ್ ಕೀ ಗೋಲೀ ಔರ್ ಅಂಗ್ರೇಜಿ ಕೀ ಬೋಲೀ’ ಎಂಬುದು ಅವರ ನಿಲುವಾಗಿತ್ತು. ಬಲಿಷ್ಠ ಜಾತಿ, ಸಿರಿಸಂಪತ್ತು ಹಾಗೂ ಇಂಗ್ಲಿಷ್ ಜ್ಞಾನದ ಪೈಕಿ ಯಾವುದಾದರೂ ಎರಡನ್ನು ಹೊಂದಿದವರು ಆಳುವ ವರ್ಗದವರು ಎಂದು ಅವರು ಕರೆದಿದ್ದರು. ಎಲ್ಲ ಖಾಸಗಿ ಶಾಲೆಗಳನ್ನು ಮುಚ್ಚಿ ಮೇಲ್ಜರ್ಜೆಗೇರಿಸಿದ ಸರ್ಕಾರಿ ಶಾಲೆಗಳನ್ನು ತೆರೆಯಬೇಕೆಂಬುದು ಅವರ ಅಭಿಮತವಾಗಿತ್ತು. ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ಅವಕಾಶ ಈ ಶಾಲೆಗಳಲ್ಲಿ ದೊರೆಯುವುದು ಸಾಧ್ಯ. ಜಾತಿ ವ್ಯವಸ್ಥೆ ಉಂಟು ಮಾಡಿರುವ ಕಂದರಗಳನ್ನು ಈ ಶಾಲೆಗಳು ತುಂಬಬಲ್ಲವು ಎಂದು ಅವರು ನಂಬಿದ್ದರು.
ಇಂಗ್ಲಿಷ್ ಬರವಣಿಗೆಯ ಮೇಲೆ ತಾವು ಕಿರಿಯ ವಯಸ್ಸಿನಲ್ಲೇ ಸಾಧಿಸಿದ ಪ್ರಭುತ್ವವನ್ನು ಬಿಟ್ಟುಕೊಟ್ಟವರು ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ಥಿಯಾಂಗೋ. ವಸಾಹತುಶಾಹೀ ಮತ್ತು ಸಾಮ್ರಾಜ್ಯಶಾಹೀ ವಿರೋಧಿ ಚಿಂತಕ. ಇಂಗ್ಲಿಷನ್ನು ಆಫ್ರಿಕಾದ ಮೇಲೆ ಬಿದ್ದ ‘ಸಾಂಸ್ಕೖತಿಕ ಬಾಂಬ್’ ಎಂದು ಬಣ್ಣಿಸುತ್ತಾರೆ. ವಸಾಹತುಶಾಹೀ ಪೂರ್ವದ ಸಂಸ್ಕೖತಿಗಳ ನೆನಪುಗಳು ಮತ್ತು ಇತಿಹಾಸವನ್ನು ಅಳಿಸಿ ಹಾಕಿ ಹೊಸ ವಸಾಹತುಶಾಹಿಯ ಪ್ರಾಬಲ್ಯವನ್ನು ಸ್ಥಾಪಿಸುವ ಸತತ ಪ್ರಕ್ರಿಯೆ ನಡೆದಿದೆ ಎಂದಿದ್ದಾರೆ. ಇಂಗ್ಲಿಷ್ ಸಂರಚನೆಯಲ್ಲಿ ನವ ವಸಾಹತುಶಾಹಿಯ ಅಪಾಯಗಳನ್ನು ಗುರುತಿಸಿದ್ದಾರೆ.
ಆದರೆ ಭಾರತದ ಸಂದರ್ಭದಲ್ಲಿ ಹಿಂದೀ ಸೇರಿದಂತೆ ಮೇಲ್ವರ್ಗದ ಹಿಡಿತವಿರುವ ಭಾಷೆಗಳು ಕುರುಡು ರಾಷ್ಟ್ರೀಯವಾದ, ಕೋಮುವಾದ, ಜಾತಿವಾದ ಹಾಗೂ ಯಥಾಸ್ಥಿತಿವಾದವನ್ನು ಎತ್ತಿ ಹಿಡಿದಿವೆ. ಹೀಗಾಗಿ ದಮನಿತ ವರ್ಗಗಳು ಇಂಗ್ಲಿಷನ್ನು ತಮ್ಮ ಬಿಡುಗಡೆಯ ಭಾಷೆ ಎಂದು ಹೆಚ್ಚು ಹೆಚ್ಚಾಗಿ ತಿಳಿಯತೊಡಗಿವೆ.
ಈ ತಿಳಿವಿಗೆ ಸುಮಾರು 150 ವರ್ಷಗಳನ್ನು ಮೀರಿದ ಚರಿತ್ರೆಯಿದೆ. ಸಾವಿತ್ರಿ ಬಾಯಿ ಫುಲೆ, ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಇತ್ತೀಚಿನ ಕಂಚ ಐಲಯ್ಯ ಮತ್ತು ಚಂದ್ರಭಾನು ಪ್ರಸಾದ್ ಮುಂತಾದವರ ತನಕ. ಮೇಲು ಕೀಳಿನ ಕ್ರೂರ ಜಾತಿವ್ಯವಸ್ಥೆಯ ದಬ್ಬಾಳಿಕೆಯಿಂದ ದಲಿತರನ್ನು ಬಿಡಿಸುವ ಭಾಷೆ ಇಂಗ್ಲಿಷ್ ಎಂಬ ಭಾವನೆ ನಿಧಾನವಾಗಿಯಾದರೂ ಬೇರಿಳಿಸತೊಡಗಿದೆ.
ಇಂಗ್ಲಿಷ್ ಕೇವಲ ಭಾಷೆಯಾಗಿ ಉಳಿದಿಲ್ಲ. ಅದೊಂದು ನೈಪುಣ್ಯ. ಅದಿಲ್ಲದೆ ಹೋದರೆ ನೀವು ಕೌಶಲ್ಯ ಇಲ್ಲದ ಕೂಲಿಕಾರನಂತೆ ಎಂಬುದು ಅನೇಕ ದಲಿತ ಚಿಂತಕರ ಅನಿಸಿಕೆ.
ದಲಿತರು-ಮಹಿಳೆಯರ ವಿಮುಕ್ತಿಗಾಗಿ, ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಇಂಗ್ಲಿಷ್ ಕಲಿಕೆಯ ಪ್ರಬಲ ಪ್ರತಿಪಾದಕರಾಗಿದ್ದರು. ವಿಶೇಷವಾಗಿ ನಿಮ್ನ ವರ್ಗಗಳ ಪಾಲಿಗೆ ಇಂಗ್ಲಿಷ್ ಕಲಿಕೆಯು ಸಶಕ್ತೀಕರಣ ಮತ್ತು ಪ್ರಗತಿಯ ಸಾಧನ ಎಂದು ಬಣ್ಣಿಸಿದ್ದರು. ಆಧುನಿಕ ತಿಳಿವು, ವಿಜ್ಞಾನ, ಜಾಗತಿಕ ವಿಚಾರಗಳ ಕಲಿಕೆಯ ಹೆಬ್ಬಾಗಿಲು ಇಂಗ್ಲಿಷ್. ಭಾರತದಲ್ಲಿ ಜಾತಿಯನ್ನು ಮತ್ತು ಪಾರಂಪರಿಕ ದಬ್ಬಾಳಿಕೆಯ ತಡೆಗೋಡೆಗಳನ್ನು ಕೆಡವುವ ಶಕ್ತಿ ಇಂಗ್ಲಿಷಿಗಿದೆ ಎಂದಿದ್ದರು.

ಅವಕಾಶಗಳನ್ನು ಮುಟ್ಟಲು, ಸಾಮಾಜಿಕ ಏಣಿಶ್ರೇಣಿಗಳಿಗೆ ಸವಾಲೆಸೆಯಲು, ಆಡಳಿತದಲ್ಲಿ ಭಾಗಿಗಳಾಗಲು ದಲಿತರು ಮತ್ತು ಅವಕಾಶ ವಂಚಿತ ಜನಸಮುದಾಯಗಳು ಇಂಗ್ಲಿಷನ್ನು ಅಗತ್ಯವಾಗಿ ಕಲಿಯಬೇಕು. ಇಂಗ್ಲಿಷ್ ಕೇವಲ ಭಾಷೆಯಲ್ಲ, ವಿಮರ್ಶಾತ್ಮಕ ಚಿಂತನೆಗೆ, ಜನತಾಂತ್ರಿಕ ಆದರ್ಶಗಳೊಡನೆ ಬೆಸೆದುಕೊಳ್ಳಲು ಬೇಕಿರುವ ದಾರಿ. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವ್ಯಾಸಂಗದ ಅವಧಿಯಲ್ಲಿ ಪಾಶ್ಚಿಮಾತ್ಯ ತತ್ವಶಾಸ್ತ್ರ, ಆರ್ಥಶಾಸ್ತ್ರ ಹಾಗೂ ಕಾನೂನನ್ನು ಅರಿಯಲು ಅಂಬೇಡ್ಕರ್ ಅವರಿಗೆ ಇಂಗ್ಲಿಷೇ ಸಾಧನವಾಗಿತ್ತು. ಸಮಾಜಸುಧಾರಣೆಯ ಅವರ ದೃಷ್ಟಿಕೋನವನ್ನು ರೂಪಿಸಿದ ಅಧ್ಯಯನವಿದು.
ಆದರೆ ಪ್ರಾದೇಶಿಕ ಭಾಷೆಗಳನ್ನು ಬಲಿಕೊಟ್ಟು ಇಂಗ್ಲಿಷನ್ನು ಮೆರೆಸುವ ಪರವಾಗಿರಲಿಲ್ಲ ಅವರು. ಇಂಗ್ಲಿಷಿನ ಜೊತೆಜೊತೆಗೆ ಪ್ರಾದೇಶಿಕ ಭಾಷೆಗಳನ್ನೂ ಬೆಳೆಸಬೇಕೆಂದರು. ಸಾಂಸ್ಕೃತಿಕ ಗುರುತನ್ನು ಕಾಪಿಟ್ಟುಕೊಳ್ಳಲು ಪ್ರಾದೇಶಿಕ ಭಾಷೆಗಳು ಬೇಕೇ ಬೇಕೆಂದರು. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳ ನಡುವೆ ಸಮತೂಕ ಸಾಧಿಸಬೇಕೆಂಬುದು ಅವರ ಸಲಹೆಯಾಗಿತ್ತು.
ವಿದ್ಯಾವಂತರಾಗಿ, ಹೋರಾಡಿರಿ, ಒಗ್ಗಟ್ಟಾಗಿರಿ ಎಂಬ ಅವರ 1953ರ ಭಾಷಣದಲ್ಲಿ ಇಂಗ್ಲಿಷ್ ಗೆ ಒತ್ತು ಕೊಟ್ಟಿದ್ದರು. ಈ ಭಾಷೆಯು ತಳಸಮುದಾಯಗಳ ಪಾಲಿಗೆ ಬಿಡುಗಡೆಯ ಭಾಷೆ ಎಂಬುದು ಅವರ ನಂಬಿಕೆಯಾಗಿತ್ತು. ಇಂಗ್ಲಿಷನ್ನು ಒಳಗೊಂಡ ಆಧುನಿಕ ಶಿಕ್ಷಣ ಸರ್ವರಿಗೂ ಸಿಗಬೇಕೆಂಬ ಪ್ರತಿಬದ್ಧತೆಯಿಂದಲೇ ಅವರು ಪೀಪಲ್ಸ್ ಎಜುಕೇಶನ್ ಸೊಸೈಟಿಯಂತಹ ಸಂಸ್ಥೆಗಳನ್ನು ಕಟ್ಟಿದ್ದರು.
ಅಂಬೇಡ್ಕರ್ ಅವರಿಗಿಂತ ಮುಂಚಿತವಾಗಿ ಬದುಕಿದ್ದ ಬಹುದೊಡ್ಡ ಸಮಾಜ ಸುಧಾರಕಿ ಸಾವಿತ್ರಿ ಬಾಯಿ ಫುಲೆ. ಸಾಮಾಜಿಕ ದಾಸ್ಯದ ನೊಗವನ್ನು ಕಿತ್ತೊಗೆಯಲು ಇಂಗ್ಲಿಷ್ ತಾಯಿಯನ್ನು ಪ್ರಾರ್ಥಿಸಿ ಬರೆದಿರುವ ಪದ್ಯ ಉಂಟು.
ಬಾಲಕಿಯರಿಗಾಗಿ ಮೊದಲ ಶಾಲೆಗಳನ್ನು ತೆರೆದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. ಮಹಿಳೆಯರು, ಅದರಲ್ಲೂ ವಿಶೇಷವಾಗಿ ತಳವರ್ಗದ ಹೆಣ್ಣುಮಕ್ಕಳಿಗೆ ಇಂಗ್ಲಿಷು ವಿಮೋಚನೆಯ ಭಾಷೆ ಎಂದಿದ್ದರು. ಪ್ರಾಯಶಃ ಈ ಮಾತನ್ನು ಹೇಳಿದ ಮೊದಲ ಸಮಾಜ ಸುಧಾರಕರಿವರು.
ಇಂಗ್ಲಿಷನ್ನು ಮೆಚ್ಚಿ 1854ರಲ್ಲಿ ಅವರು ರಚಿಸಿದ್ದ ಕವಿತೆಯ ಅನುವಾದ ಹೀಗಿದೆ-
ಇಂಗ್ಲಿಷ್ ತಾಯಿ ಬಂದಳು, ಬೆಳಕಿನ
ಕಿರಣವ ತಂದಳು,
ಬ್ರಾಹ್ಮಣ ಪುರೋಹಿತರ ಆಳ್ವಿಕೆಯ ಕತ್ತಲೆಯ
ಹರಿದೊಗೆದಳು
ಓ ದಮನಿತರೇ, ಈ ಸದವಕಾಶವ
ಕೈ ಚೆಲ್ಲದಿರಿ, ಕಲಿಯಿರಿ, ಮುರಿದೊಗೆಯಿರಿ
ಮನುವಿನ ಸಂಕೋಲೆಗಳನ್ನು
ಕೈವಶ ಮಾಡಿಕೊಳ್ಳಿರಿ ಸ್ವಾತಂತ್ರ್ಯವನ್ನು
ಶಿಕ್ಷಣವೇ ನಿಮ್ಮ ಹತಾರು, ಜ್ಞಾನವೇ
ನಿಮ್ಮ ಬಲ,
ಎದ್ದೇಳಿರಿ, ಇಂಗ್ಲಿಷ್ ಕಲಿಯಿರಿ,
ಕೊನೆಗೊಳಿಸಿರಿ ಈ ದುಮ್ಮಾನಗಳ ದೀರ್ಘ ಇರುಳನ್ನು.
ನಿಮ್ಮನ್ನು ಜಾತಿಗಳಲ್ಲಿ ಬಂಧಿಸುವ ಶಾಸ್ತ್ರಗಳನ್ನು
ಎತ್ತಿ ಬಿಸಾಡಿರಿ, ಸ್ವಾವಲಂಬಿಗಳಾಗಿರಿ
ಸಾವಿತ್ರಿ ಬಾಯಿ ಅವರ ‘ಕಾವ್ಯಾ ಫುಲೆ’ ಎಂಬ ಮರಾಠೀ ಕವಿತಾ ಸಂಕಲನದ ಕವಿತೆಯಿದು. ಅದರ ಇಂಗ್ಲಿಷ್ ಅನುವಾದಗಳ ಮೂಲಕ ಮರುನಿರ್ಮಿಸಿದ ಆವೃತ್ತಿಯಿದು.
ಇಂಗ್ಲಿಷ್ ಕಲಿಯಬೇಕೆಂಬ ಸಾವಿತ್ರಿಬಾಯಿ ಅವರ ಕರೆಯನ್ನು ಬ್ರಿಟಿಷರಿಗೆ ನೀಡಿದ ಬೆಂಬಲವೆಂದು ತಿಳಿಯುವುದು ತಪ್ಪಾದೀತು. ಬ್ರಾಹ್ಮಣಿಕೆಯ ಯಜಮಾನ್ಯದಿಂದ ಬಿಡಿಸಿಕೊಳ್ಳುವ ಸಾಧನವೆಂದು ಬಗೆಯಬೇಕು. ದಮನಿತರು ಮತ್ತು ಹೆಣ್ಣುಮಕ್ಕಳಿಗೆ ಅಕ್ಷರವನ್ನು ನಿರಾಕರಿಸಿದ್ದ ಸಮಾಜದೊಂದಿಗೆ ಅಕ್ಷರದವ್ವನ ಮುಖಾಮುಖಿಯಿದು. ಇಂಗ್ಲಿಷ್ ಶಿಕ್ಷಣವನ್ನು ತಾಯಿ ಎಂದು ಕರೆಯುವ ಮೂಲಕ ಅವರು ಗಂಡಾಳಿಕೆಯ ಬ್ರಾಹ್ಮಣವಾದಿ- ಜಾತಿವಾದಿ ಶಾಸ್ತ್ರಗಳ ರೂಪದಲ್ಲಿದ್ದ ‘ತಂದೆ’ಯ ವಿರುದ್ಧ ದನಿಯೆತ್ತಿದ್ದಾರೆ. ಶತಮಾನಗಳಿಂದ ಜರುಗಿದ್ದ ಜಾತಿಗ್ರಸ್ತ ದಮನದ ವಿಮೋಚನೆಯ ರೂಪವಾಗಿ ಇಂಗ್ಲಿಷ್ ಶಿಕ್ಷಣವನ್ನು ಅವರು ಕಂಡಿದ್ದಾರೆ.
ಜಾತಿವ್ಯವಸ್ಥೆಯ ಶ್ರೇಣೀಕರಣವು ಭಾರತೀಯ ಭಾಷೆಗಳನ್ನು ಅಂತರ್ಗತವಾಗಿ ಹೆಣೆದುಕೊಂಡಿದೆ ಎಂಬ ದಲಿತ-ಶೂದ್ರ ಚಿಂತನೆ ಹರಳುಗಟ್ಟಲು ತೊಡಗಿದೆ. ಜಾಗತೀಕರಣಗೊಂಡಿರುವ ಇಂದಿನ ಮಾರುಕಟ್ಟೆ ಪ್ರಾಬಲ್ಯದ ವ್ಯವಸ್ಥೆಯಲ್ಲಿ ಇಂಗ್ಲಿಷಿನ ಪ್ರಾಮುಖ್ಯವನ್ನು ಅಲ್ಲಗಳೆಯುವುದು ಜಾಣತನವಾಗದು. ಚೀನೀಯರು- ಜಪಾನೀಯರು ಇಂಗ್ಲಿಷ್ ಭಾಷೆ ಕಲಿಕೆಗೆ ನೀಡುತ್ತಿರುವ ಆದ್ಯತೆಯೇ ಈ ಮಾತಿಗೆ ಸಜೀವ ರುಜುವಾತು.
ಬಲಿಷ್ಠ ಜಾತಿಗಳು ಇಂಗ್ಲಿಷ್ ಮತ್ತು ದೇಸೀ ಸಂಸ್ಕೃತಿಯ ನಡುವಣ ವೈರುಧ್ಯವನ್ನು ಬಹಳ ಸಲೀಸಾಗಿ ನಿಭಾಯಿಸಿಕೊಂಡಿವೆ. ಬ್ರಾಹ್ಮಣ ಮತ್ತು ಇತರೆ ಕುಲೀನ ಕುಲಗಳು ಇಂಗ್ಲಿಷ್ ಕಲಿತು ಬ್ರಿಟಿಷ್ ಸಾಮ್ರಾಜ್ಯದ ಸೇವೆಯಲ್ಲಿರಲಿಲ್ಲವೇ? ಸ್ವಾತಂತ್ರ್ಯಾನಂತರವೂ ಇಂಗ್ಲಿಷ್ ಭಾಷೆಯನ್ನು ಈಡಾಡುತ್ತಿದ್ದ ವರ್ಗ ಯಾವುದು?
ಉತ್ತರಪ್ರದೇಶ- ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಹಿಂದಿಯೇ ಪರಮವೆಂದು ಮೆರೆದಿದ್ದು, ಇಂಗ್ಲಿಷ್ ದ್ರಾಕ್ಷಿ ಹುಳಿ ಎಂಬ ಭಾವನೆಯನ್ನು ಅಮಯಾಕ ಜನಮಾನಸದಲ್ಲಿ ಬಿತ್ತುತ್ತ ಬರಲಾಗಿದೆ.
ಕನ್ನಡ ಭಾಷೆಯನ್ನು ಉಳಿಸುವ ಹೊಣೆಗಾರಿಕೆಯನ್ನು ಶೂದ್ರ-ದಲಿತ ಸಮುದಾಯಗಳು ಮತ್ತು ಹಳ್ಳಿಗಾಡಿನ ಜನರ ಹೆಗಲಿಗೆ ವರ್ಗಾಯಿಸಿರುವ ಅನ್ಯಾಯ ಜರುಗಿದೆ.
ತಳವರ್ಗಗಳು ಇಂಗ್ಲಿಷ್ ಕಲಿಯಲು ಆರಂಭಿಸಿದ ನಂತರ, ಕೂಲಿನಾಲಿ ಮಾಡುವವರೂ ಕಷ್ಟಬಿದ್ದು ತಮ್ಮ ಮಕ್ಕಳನ್ನು ‘ಕಾನ್ವೆಂಟು’ಗಳಿಗೆ ಕಳಿಸಲು ತೊಡಗಿ ದಶಕವೇ ಉರುಳಿರಬೇಕು. ಉತ್ತರಪ್ರದೇಶದ ಲಖ್ಖೀಂಪುರ್ ಖೇರಿ ಜಿಲ್ಲೆಯ ಬಂಕಾದಲ್ಲಿ ದಲಿತರು ‘ಅಂಗ್ರೇಜಿ ದೇವಿ’ಯ ಗುಡಿ ಕಟ್ಟಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆಯುವ ಸಾಮಾಜಿಕ-ರಾಜಕೀಯ ಒತ್ತಡ ಎದುರಿಸಿವೆ. ಮೇಲ್ಜಾತಿಗಳ ಇಂಗ್ಲಿಷ್ ವಿಶೇಷಾಧಿಕಾರದ ಉಕ್ಕಿನ ಕವಚ ಶಿಥಿಲಗೊಳ್ಳುವ ಸೂಚನೆಗಳಿವೆ.
ಈ ಎಲ್ಲ ಬೆಳವಣಿಗೆಯ ನಂತರವೂ ಈ ದೇಶದ ಕುಲೀನ ಮಕ್ಕಳು ಕಲಿಯುವ ಇಂಗ್ಲಿಷ್ ಶಾಲೆಗಳು ಮತ್ತು ಸಾಮಾನ್ಯ ಜನಸಮೂಹಗಳ ಮಕ್ಕಳು ಕಲಿಯುವ ‘ಇಂಗ್ಲಿಷ್’ ಶಾಲೆಗಳ ನಡುವೆ ಆಡು- ಆನೆಯ ಅಂತರವಿದೆ.
ಈ ಹಂತವನ್ನು ಆಯ್ದುಕೊಂಡಿರುವ ಶಕ್ತಿಗಳು ಶೂದ್ರ-ದಲಿತರ ಸಬಲೀಕರಣದ ಭಾಷೆಯಾಗುವ ‘ಅಪಾಯ’ವನ್ನು ಮನಗಂಡು ಸಂಸ್ಕೃತಿಯ ಗುರಾಣಿ ಹಿಡಿದು ಇಂಗ್ಲಿಷ್ ಮೇಲೆ ಖಡ್ಗ ಬೀಸಿವೆ. ಇಂಗ್ಲಿಷಿನ ಜಾಗದಲ್ಲಿ ಹಿಂದೀ ಭಾಷೆಯನ್ನು ತುಸು ತುಸುವಾಗಿಯೇ ಹೇರುತ್ತ ಬಂದವು. ಕಳೆದ ಹನ್ನೊಂದು ವರ್ಷಗಳಲ್ಲಿ ಈ ಹೇರಿಕೆ ಆಕ್ರಮಣಕಾರಿ ರಭಸ ಪಡೆದಿದೆ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಕಾರ್ಯಸೂಚಿಯ ಭಾಗವಿದು.
ಕೆಳವರ್ಗಗಳಿಗೆ ಉತ್ತಮ ಶಿಕ್ಷಣ ನೀಡದೆ ಸ್ವತಂತ್ರ ಭಾರತವು ಮತ್ತೊಂದು ರೂಪದಲ್ಲಿ ವಸಾಹತುಶಾಹಿ ಅನ್ಯಾಯವನ್ನೇ ಮುಂದುವರೆಸಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು
ಅದ್ಬುತ ಅಜ್ಞಾನದ ಪ್ರದರ್ಶನ… ಕನ್ನಡ ಓಲಾಟಗಾರರು ಓದಲೇಬೇಕಾದ ಬರಹ..
ಹೌದು
ಕನ್ನಡ ಹೋರಾಟಗಾರರು ಕನ್ನಡ ಅನುಷ್ಠಾನವಾಗಬೇಕು ಎಂದು ಧ್ವನಿ ಎತ್ತಿದ್ದರೀಮದ ಬೆಂಗಳೂರಿನಲ್ಲಿ ಇಷ್ಟಾದರೂ ಕನ್ನಡ ಉಳಿದಿದೆ. ಇದು ವಿಷಯವೇ ಬೇರೆ. ಇಂಗ್ಲಿಷ್ ಬರದಿರುವ ಬಹುತೇಕ ಬಿಜೆಪಿಯ ನಾಯಕರಿಂದ ದೇಶದೆಲ್ಲೆಡೆ ಹಿಂದಿ ಹೇರಿಕೆ ಮಾಡುವ ಹುನ್ನಾರ ನಡೆದಿದೆ. ಅಮಿತ್ ಶಾನಿಗೆ ಇಂಗ್ಲಿಷ್ ಗೊತ್ತಿಲ್ಲ. ಇಂಗ್ಲಿಷ್ ಕಲಿಯುವ ಬದಲು ಇಂಗ್ಲಿಷ್ ಮಾತನಾಡುವವರು ನಾಚಿಕೆಪಡುವಂತೆ ಮಾಡುತ್ತಾರಂತೆ! ಇದಕ್ಕಿಂದ ದೊಡ್ಡ ಹುಚ್ಚು ಹೇಳಿಕೆ ಬೇರೆ ಸಿಗಲಾರದು. ಇದನ್ನು ಅಮಿತ್ ಶಾನಿಗೆ ಓದಲು ಹೇಳಬೇಕು.
ಮೊದಲು ಶಾಲೆಯಲ್ಲಿರುವ ಜಾತಿ ಕಾಲಮಾನ ತೆಗೀರಿ ಯಾಕ್ ಬೇಕಪ್ಪ ಶಾಲೆಯಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಮಾನ ರೀತಿಯಲ್ಲಿ ಎಲ್ಲ ಮಾಡಿದರೆ ದೊಡ್ಡವರಾದ ಮೇಲೆ ಅವರ ಜಾತಿಯ ಅವಶ್ಯಕತೆ ಬರುವುದಿಲ್ಲ ಶಾಲೆಯಲ್ಲಿ ಯಾಕಪ್ಪ ಜಾತಿ ಬೇಕು ಮೊದಲಿದನ್ ಸರಿ ಮಾಡಿದಂಗೆ ಇವರಿಗೆ ಇಂಗ್ಲಿಷ್ ಕಲಿಸಬೇಕಂತೆ ಏನಿದೆ ಇಂಗ್ಲೀಷಲ್ಲಿ ಕಿತ್ತಾಕುಂತ ದೊಡ್ಡದು ನಮ್ಮ ಭಾಷೆಗಳು ಎಷ್ಟು ವೈಜ್ಞಾನಿಕವಾಗಿದ್ದ ಗೊತ್ತಿದೆಯಾ ಬೇರೆದು ನಾನು ಕೇಳಬಹುದಲ್ಲ ನನ್ನ ಕನ್ನಡದ ಹಳೆಗನ್ನಡವನ್ನು ಓದಿ ಎಷ್ಟು ವೈಜ್ಞಾನಿಕವಾಗಿದೆ ಎಂದು ತಿಳಿಯುತ್ತದೆ ಮೊದಲು ನಮ್ಮತನವನ್ನು ಕಳೆಯಿರಿ