ಆ ರಾತ್ರಿ ನಮ್ಮ ದೇಹ ಚಳಿಯಲ್ಲಿ ಕಂಪಿಸುತ್ತಿದ್ದರೂ, ಮನಸ್ಸು ಮಾತ್ರ ಮರುದಿನ ಬೇಸ್ ಕ್ಯಾಂಪ್ ತಲುಪುವ ಕನಸನ್ನು ಕಾಣುತಿತ್ತು. ಜೊತೆ ಜೊತೆಗೆ ನಮ್ಮೆಲ್ಲರನ್ನೂ ಕೂಡ ಸಣ್ಣ ಆತಂಕವೂ ಕಾಡುತ್ತಿತ್ತು—Altitude sickness? ಬಂದರೆ, ಇಷ್ಟು ದಣಿದ ದೇಹ ನಾಳೆ ಬೆಳಗಾತ ಇನ್ನೊಂದು ದೀರ್ಘ ಪ್ರಯಾಣಕ್ಕೆ ಸಜ್ಜಾಗುವುದೇ? ಎಂಬ ಪ್ರಶ್ನೆಗಳು ದೇಹದ ವೇದನೆಯೊಂದಿಗೆ ಮಿಶ್ರವಾಗಿದ್ದವು.
ಎವರೆಸ್ಟ್ ಎಂಬ ಹೆಸರು ಮೊದಲು ಕೇಳಿದ್ದು ನಾಲ್ಕನೇ ತರಗತಿಯಲ್ಲಿ, ಭೂಮಿಯ ಮೇಲಿನ ಅತ್ಯುನ್ನತ ಶಿಖರ, ಮೌಂಟ್ ಎವರೆಸ್ಟ್. ಅದರ ಎತ್ತರ ಎಷ್ಟು ಅನ್ನುವುದನ್ನು ಊಹಿಸಲೂ ಸಾಧ್ಯವಿಲ್ಲದಷ್ಟು ಬಾಲ್ಯದ ವಯಸ್ಸು. “ಒಂದು ದಿನ ಆ ಶಿಖರವನ್ನು ನಾನೂ ಕಣ್ಣಾರೆ ಕಾಣಬಹುದು, ಅದರ ಬೆಟ್ಟಗುಡ್ಡಗಳ ನಡುವೆ ನಾನು ಕೂಡ ಹೆಜ್ಜೆ ಇಡಬಹುದು” ಎಂಬ ಯೋಚನೆ ಕೂಡ ಬಾರದ ವಯಸ್ಸು. ಎವರೆಸ್ಟ್ ಶಿಖರ ಬಿಡಿ, ಎವರೆಸ್ಟ್ ಬೇಸ್ ಕ್ಯಾಂಪ್ ಬಿಡಿ, ನೇಪಾಳ ದೇಶವನ್ನೇ ಒಂದು ದಿನ ಭೇಟಿಮಾಡಬಹುದು ಎಂಬ ಕನಸು ಸಹ ಮನದಲ್ಲಿ ಮೂಡದ ವಯಸ್ಸದು. ಆದರೆ ಜೀವನವೇ ಹಾಗೆ, ನಾವು ಎಣಿಸದ, ಊಹಿಸದ, ಹಲವು ಬಾರಿ ನಮ್ಮ ಕಲ್ಪನೆಗೂ ಮೀರಿ ಅನುಭವ ಕಲಿಸುವ ಏಕೈಕ ಪಾಠಶಾಲೆ.
ಭೂಮಿಯ ಮೇಲಿನ ಅತ್ಯುನ್ನತ ಶಿಖರ, ಕೇಳಿಯೇ ಮೈ ಜುಮ್ಮೆನಿಸಿತ್ತು. ಸಮುದ್ರ ಮಟ್ಟದಿಂದ 5565 ಮೀಟರ್ ಎತ್ತರ, ಮೈನಸ್ 10 ತಾಪಮಾನ, ಮೈ ನಡುಗಿಸುವ ಚಳಿ. ಭಾರತ, ಜರ್ಮನಿ, ಅಮೆರಿಕ, ಇಂಗ್ಲೆಂಡ್, ಜಪಾನ್, ಚೀನಾ, ಇಟಲಿ, ಪೋಲೆಂಡ್, ಹಾಲೆಂಡ್, ಆಫ್ರಿಕಾ, ಜಗತ್ತಿನಾದ್ಯಂತ ನೂರಾರು ಚಾರಣಿಗರು, ಪ್ರತೀ ದಿನ “ನಮಸ್ತೆ” ಹೇಳುವ ನಗು ಮುಖಗಳು. ಇವೆಲ್ಲದರ ಮಧ್ಯೆ – ನೀವು ಮತ್ತು ನಿಮ್ಮ ಆಲೋಚನೆಗಳು. ಎವರೆಸ್ಟ್ ಬೇಸ್ ಕ್ಯಾಂಪ್ (EBC) ಟ್ರೆಕ್—ವಿಶ್ವದ ಅತ್ಯಂತ ಸವಾಲಿನ ಚಾರಣಗಳಲ್ಲಿ ಒಂದಷ್ಟೇ ಅಲ್ಲ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಯಾಣ ಕೂಡ ಹೌದು.
ಎವರೆಸ್ಟ್ ಬೇಸ್ ಕ್ಯಾಂಪ್ (EBC) ಎಂಬುದು ಎವರೆಸ್ಟ್ ಶಿಖರದ ತುದಿಯನ್ನು ತಲುಪುವ ಮಹತ್ವಾಕಾಂಕ್ಷೆಯ ಚಾರಣಿಗರಿಗಾಗಿ ಇರುವ ಪ್ರವೇಶದ್ವಾರ. ಚಾರಣಿಗರು ಇಲ್ಲಿ ತಮ್ಮ ಮೊಟ್ಟಮೊದಲ ಕ್ಯಾಂಪನ್ನು ಸ್ಥಾಪಿಸಿ, ದೀರ್ಘ ಚಾರಣೆಗೆ ಅಗತ್ಯವಾದ ಸಿದ್ಧತೆಗಳನ್ನು ಆರಂಭಿಸುತ್ತಾರೆ. ಉಚ್ಚತಮ ಶಿಖರವನ್ನು ಶರತ್ಕಾಲ ಅಥವಾ ವಸಂತಕಾಲದಲ್ಲಿ ಏರಲು ತಯಾರಾಗುವ ಈ ಸ್ಥಳದಲ್ಲಿ, ಶರೀರದ ಹೊಂದಾಣಿಕೆ (Acclimitisation), ಸಾಮಗ್ರಿಗಳ ತಪಾಸಣೆ ಮತ್ತು ತಂಡದ ಸಮನ್ವಯದಂತಹ ಅನೇಕ ಅಂಶಗಳು ನಡೆಯುತ್ತವೆ. ಇಲ್ಲಿಂದ ಎವರೆಸ್ಟ್ ಶಿಖರದ ತುದಿ ತಲುಪುವವರೆಗೆ, ಹವಾಮಾನ, ಶಾರೀರಿಕ ಕ್ಷಮತೆ ಮತ್ತು ಮಾರ್ಗದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿ, ಸುಮಾರು 30 ರಿಂದ 90 ದಿನಗಳವರೆಗೆ ಸಮಯ ಬೇಕಾಗುತ್ತದೆ.
ನಾನು ತೆಗೆದುಕೊಂಡ ಎವರೆಸ್ಟ್ ಬೇಸ್ ಕ್ಯಾಂಪ್ (EBC) ಚಾರಣದ ನಿರ್ಧಾರ, ನನ್ನ ಬದುಕಿನ ಅತ್ಯುತ್ತಮ ಮತ್ತು ಅರ್ಥಪೂರ್ಣ ತೀರ್ಮಾನವೆಂದೇ ಹೇಳಬಹುದು. ಹಳ್ಳಿಯಿಂದ ಬಂದ ನನ್ನಂತಹವರಿಗೆ ಟ್ರೆಕ್ಕಿಂಗ್, ಹೈಕಿಂಗ್, ಪರ್ವತಾರೋಹಣ ಎಂಬುದು ದೂರದ ಕನಸಷ್ಟೇ ಅಲ್ಲ, ಕಲ್ಪನೆಯಲ್ಲೂ ಇಲ್ಲದ ವಿಷಯ. ಬಾಲ್ಯದಲ್ಲಿ ಅಂತಹ ಹವ್ಯಾಸಗಳಿಗೂ ಅವಕಾಶಗಳಿಗೂ ಸ್ಪರ್ಶವಿಲ್ಲದ ಜೀವನ ನನ್ನದಾಗಿತ್ತು. ಆದರೂ, ಈ ಚಾರಣ ನನ್ನ ಬದುಕಿನಲ್ಲಿ ಮಹತ್ವದ ಘಟನೆ. ಯಾವ ಒಂದೂ ಅಳುಕೂ ಇಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದರೂ, ಚಾರಣ ಮಾಡುವ ನಿರ್ಧಾರ ತೆಗೆದುಕೊಂಡ ಮೇಲೆ ಬಂದ ಅನುಭವಗಳು ಮಾತ್ರ, ಇಡೀ ಜೀವನವನ್ನು ಬದಲಾಯಿಸುವ ಪಾಠಗಳಾಗಿಬಿಟ್ಟವು.

ಚಾರಣದ ನಿರ್ಧಾರ ತೆಗೆದುಕೊಂಡ ಕ್ಷಣದಿಂದಲೇ ಶರೀರದ ಹಾಗೂ ಮನಸ್ಸಿನ ಸಿದ್ಧತೆ ನನ್ನ ಮೊದಲ ಆದ್ಯತೆ ಆಗಿತ್ತು. ಸ್ವಿಮ್ಮಿಂಗ್, ರನ್ನಿಂಗ್, ಜಾಗಿಂಗ್, ವೆಟ್ ಟ್ರೈನಿಂಗ್, ಟ್ರೆಕ್ಕಿಂಗ್ ಅನುಭವ ಪಡೆಯುವ ನಾನಾ ತರಭೇತಿಗಳು, ಅಷ್ಟೆಲ್ಲವನ್ನೂ ಐದು ತಿಂಗಳುಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿಕೊಂಡು, 5 ತಿಂಗಳುಗಳಲ್ಲಿ, ನಾನು ಪ್ರತೀ ದಿನ 10 ಕಿ.ಮೀ ಓಡುವಷ್ಟು, 20 ಮಹಡಿಗಳನ್ನು ಹತ್ತಬಲ್ಲಷ್ಟು ದೈಹಿಕ ಫಿಟ್ನೆಸ್ ಬಂದಿತ್ತು. ಅದರ ನಂತರವಷ್ಟೇ, ಈ ಪ್ರಯಾಣಕ್ಕೆ ಹೊರಡುವ ಆತ್ಮವಿಶ್ವಾಸ ಕೂಡ ಒಂದಿಷ್ಟು ಬಂದಿತ್ತು. ಇಲ್ಲಿ ಒಂದು ಹೇಳಲೇ ಬೇಕಾದ ಮಾತು: ಇದು ಆರಂಭಿಕ ಚಾರಣಿಗರಿಗೆ ಹೇಳಿದ ಚಾರಣವಲ್ಲ. ಒಂದು 10-15 ಟ್ರೆಕಿಂಗ್ ಅನುಭವ ಬೇಕೇ ಬೇಕು, ಹಾಗೆಯೇ ದೈಹಿಕ, ಅದಕ್ಕಿಂತ ಮೇಲಾಗಿ ಮಾನಸಿಕ ಫಿಟ್ನೆಸ್ ಅತೀ ಅಗತ್ಯ. ಹಾಗೆಯೇ ಈ ಟ್ರೆಕಿಂಗ್ ಮಾಡಲು ನೇಪಾಳ ಸರ್ಕಾರದ ಅನುಮತಿ, ಹಾಗೂ ದೈಹಿಕ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ಅತೀ ಅಗತ್ಯ.
ನಮ್ಮ EBC ಸಾಹಸವು ನೇಪಾಳದ ಕಟ್ಮಂಡುವಿನಿಂದ ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣವಾದ ಲುಕ್ಲಾ ಏರ್ಪೋರ್ಟಿಗೆ ಹಾರುವುದರೊಂದಿಗೆ ಪ್ರಾರಂಭವಾಯಿತು. ನಾವೆಲ್ಲರೂ, ನಮ್ಮ ಪೈಲಟ್ಗೆ “ನಮ್ಮ ಪ್ರಾಣ ನಿಮ್ಮ ಕೈಯಲ್ಲಿದೆ” ಎಂದು ಹೇಳಿಯೇ ನಮ್ಮ ಪ್ರಯಾಣ ಆರಂಭಿಸಿದ್ದೆವು. ಅದ್ಭುತ ವಿಮಾನ ಹಾರಾಟ ಮತ್ತು ಸುರಕ್ಷಿತ ಲ್ಯಾಂಡಿಂಗ್ ನಂತರ, 3 ಪೋರ್ಟರ್ಗಳು ಮತ್ತು ಗೈಡುಗಳೊಂದಿಗೆ ನಾವು EBC ಚಾರಣವನ್ನು ಪ್ರಾರಂಭಿಸಿದೆವು.
ಇಡೀ EBC ಟ್ರೆಕಿಂಗ್ ಸರಿ ಸುಮಾರು 12-15 ದಿನಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ದೇಹ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಇಷ್ಟು ಕಾಲ ಬೆಕಾಗುವುದು (ಇಲ್ಲಿ ಎತ್ತರ ಪ್ರದೇಶದಲ್ಲಿ ಆಮ್ಲಜನಕದ ಕೊರತೆಗೆ ನಮ್ಮ ದೇಹ ಹೊಂದಿಕೊಳ್ಳಲು). ಲೂಕ್ಲದಿಂದ ಮೊದಲ ದಿನದ ತಂಗುದಾಣ – ಪಾಕ್ಡಿಂಗ್. ಎರಡನೇ ದಿನ ಪಾಕ್ಡಿಂಗ್ನಿಂದ ನಾಮ್ಚೆ ಬಜಾರ್ ತಲುಪೂವ ದಾರಿ ನಿಜವಾದ ಚಾರಣದ ಕಸರತ್ತು ಎಂದೇ ಹೇಳಬಹುದು. ನಾಮ್ಚೆ ಬಜಾರ್ ಈ ಪರ್ವತ ಚಾರಣಕ್ಕೆ ಆರಂಭ ತಾಣ. ಇಲ್ಲಿ ಎರಡು ದಿನಗಳ ಕಾಲ ಉಳಿದು, ಶರೀರವನ್ನು ಉನ್ನತ ಗಾತ್ರದ ಉಷ್ಣತೆ ಮತ್ತು ಆಮ್ಲಜನಕದ ಕೊರತೆಗೆ ಹೊಂದಿಸಿಕೊಳ್ಳುವುದು ಅತೀ ಅಗತ್ಯ, ಇದನ್ನು acclimatisation ಎನ್ನುತ್ತಾರೆ. ಈ ಸಮಯದಲ್ಲಿ ಸ್ಯಾಂಗ್ಬೋಚೆ (3860 ಮೀ) ಹತ್ತುವುದು ಮಾನಸಿಕ ಮತ್ತು ದೈಹಿಕ ಶಕ್ತಿ ಪರೀಕ್ಷೆ ಎಂದೇ ಹೇಳಬಹುದು. ಆದರೆ ಸ್ಯಾಂಗ್ಬೋಚೆಯಿಂದ ಕಾಣಲು ಸಿಗುವ ಮೊದಲ ಎವರೆಸ್ಟ್ ಶಿಖರದ ನೋಟ – ನಿರೀಕ್ಷೆಗೂ ಮೀರಿ ನಿಮ್ಮನ್ನು ಮೂಕವಿಸ್ಮೀತರನ್ನಾಗಿಸುತ್ತದೆ. ಅಲ್ಲಿಂದ, ತೇಂಗ್ಬೋಚೆ, ಡಿಂಗ್ಬೋಚೆ ಮೂಲಕ ಸಾಗುವ ಹಾದಿ ಮರಗಳ ನೆರಳು, ಹಿಮ ಪಥಗಳ ಕೂಗು, ಮಧ್ಯೆ ಸಿಗುವ ಯಾಕ್ ಸಂಚಾರ, ತಮ್ಮ ಹೆಗಲ ಮೇಲೆ ಅಸಾಧ್ಯ ಹೊರೆಯನ್ನು ಎತ್ತಿ ಸಾಗುತ್ತಿರುವ ಶೆರ್ಪಾಗಳು, ನಡು ನಡುವೆ ಖುಂಭು ಹಿಮನದಿಯ ನಿರಂತರ ಹರಿದಾಟ – ಹೀಗೆ ಇಡೀ ಸುತ್ತಮುತ್ತಲ ಜಗತ್ತೇ ಹೊಸ ಜಗತ್ತಿನ ತರಹ ಭಾಸವಾಗುತ್ತದೆ. ಹಾಗೆಯೇ, ಇಲ್ಲಿನ ಕಡಿದಾದ ಏರುಗಳು, ಇಳಿತಗಳು, ಮನುಷ್ಯನ ದೈಹಿಕ, ಮಾನಸಿಕ ಶಕ್ತಿಯ ಮಿತಿಗಳನ್ನು ಕೂಡ ನಮ್ಮ ಕಣ್ಮುಂದೆ ಇರಿಸುತ್ತವೆ. ಡಿಂಗ್ಬೋಚೆ ತಲುಪಿದ ಬಳಿಕ, ಅಲ್ಲಿ ಮತ್ತೊಮ್ಮೆ acclimatisation ಚಾರಣಕ್ಕಾಗಿ ಒಂದು ರಾತ್ರಿ ಅಥವಾ ಎರಡು ರಾತ್ರಿ ಕಳೆಯಬೇಕಾಗುತ್ತೆ. ಡಿಂಗ್ಬೋಚೆಯಿಂದ ಸಂಜೆಯ ಸೂರ್ಯಾಸ್ತ, ಮತ್ತು ಬೆಳಗಿನ ಸೂರ್ಯೋದಯ ವೀಕ್ಷಿಸುವುದೇ ರಸದೌತಣ. ಪ್ರತೀ ಬಾರಿಯೂ, ಸೂರ್ಯನ ಕೊನೆಯ ಕಿರಣ, ಮೊತ್ತ ಮೊದಲ ರವಿ ಕಿರಣ ಭೂಮಿಯ ಅತ್ಯುನ್ನತ ಶಿಖರದ ಮೇಲೆ ಪಸರಿಸುವ ಪರಿಯೇ ಬೇರೆ. ಇದನ್ನು ಬಣ್ಣಿಸಲು ಅಸಾಧ್ಯ.

ಡಿಂಗ್ಬೋಚೆಯಲ್ಲಿ ವಿಶ್ರಾಂತಿ ಪಡೆದು, ಒಂದಿಷ್ಟು Acclimitisation ಟ್ರೆಕಿಂಗ್ ಬಳಿಕ, ಏರು ಪ್ರದೇಶದ ಆಮ್ಲಜನಕ ಮಟ್ಟಕ್ಕೆ ನಮ್ಮ ದೇಹವನ್ನು ಹೊಂದಿಸಿಕೊಂಡ ನಂತರ, ನಮ್ಮ ಮುಂದಿನ ಗುರಿಯಾಗಿತ್ತು ಲೋಬುಚೆ. ದಿನದಿನಕ್ಕೂ, ಎತ್ತರ ಹೆಚ್ಚಾಗುತ್ತಿದ್ದಂತೆ, ಉಸಿರಾಟ ದೀರ್ಘವಾಗುತ್ತಿತ್ತು, ಹೆಜ್ಜೆ ಇಡುವುದು ಕಷ್ಟವೆಂದೆನಿಸುತಿತ್ತು. ಆದರೆ ಪ್ರತೀ ನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಕಾಣಸಿಗುತಿದ್ದ ದೂರದ ಎವರೆಸ್ಟ್ ಶೃಂಗದ ಭವ್ಯತೆ ಮನಸ್ಸಿಗೆ ನೂತನ ಶಕ್ತಿಯನ್ನೇ ತುಂಬುತ್ತಿತ್ತು. ಅಂದು ಸಂಜೆ ಲೋಬುಚೆಗೆ ತಲುಪಿದಾಗ ನಾವು ಎವರೆಸ್ಟ್ ಶಿಖರದ ಬೇಸ್ ಕ್ಯಾಂಪಿಗೆ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿದ್ದೇವೆ ಎಂಬ ಯೋಚನೆ ಮನಸ್ಸಿಗೆ ಮತ್ತಷ್ಟು ಪುಷ್ಟಿಯನ್ನು ನೀಡುತಿತ್ತು.
ಅಲ್ಲಿಂದ ಮುಂದಿನ ಹಾದಿ ಗೋರಕ್ಷೇಪ್ ಕಡೆಗೆ. ಲೋಬುಚೆಯಿಂದ ಗೋರಕ್ಷೆಪ್ ತಲುಪುವ ದಾರಿ ಹಿಮನದಿ ಹರಿದುಹೋಗುವ ಸುಂದರ ದೃಶ್ಯಗಳನ್ನೊದಗಿಸಿದರೂ, ದೇಹಕ್ಕೆ ಹಾಗೂ ಮನಸ್ಸಿಗೆ ಈ ದೀರ್ಘ ದಾರಿ ನಿಜಕ್ಕೂ ಪರೀಕ್ಷೆಯಂತಾಗಿತ್ತು. ಒಂದೊಂದು ಹೆಜ್ಜೆ ಕೂಡ ಬಾರವಾದಂತೆ, ಒಂದೊಂದು ಉಸಿರಾಟ ಕೂಡ ದೀರ್ಘವಾಗುತ್ತಿತ್ತು. ಆ ಸಂಜೆ ಗೋರಕ್ಷೇಪ್ ತಲುಪಿದಾಗ, ದೇಹ ಮನಸು ಎರಡೂ ದಣಿದು ಹೋಗಿತ್ತು. ನೀರಿನ ಬಾಟಲಿ ಕೂಡ ಕ್ಷಣಗಳಲ್ಲಿ ಹಿಮವಾಗುತ್ತಿತ್ತು. ದಿನಗಳು ಕಳೆದಂತೆ, ದೇಹ ದಣಿಯುತಿತ್ತು, ಹಸಿವು ಕಡಿಮೆಯಾಗುತಿತ್ತು, ವಾಶ್ರೂಮ್ನಲ್ಲಿ ನೀರು ಮಂಜಾಗುತ್ತಿತ್ತು. ಸವಾಲಿನ ಆದರೆ ಮೋಜಿನ ಸಂಗತಿ ಎಂದರೆ, ನೀರು ಬೇಕಾದರೆ ಅಲ್ಲೇ ಇಟ್ಟಿದ್ದ ಗುದ್ದಲಿಯಲ್ಲಿ ಐಸ್ ಒಡೆಯಬೇಕಾಗಿತ್ತು. ಹಾಕಿದ್ದ ಕೈಗವಸುಗಳು, ಮಂಕಿ ಕ್ಯಾಪ್, ಉಣ್ಣೆಯ ಉಡುಪುಗಳು, 3 ಸಾಕ್ಸ್, 1 ಪುಲ್ ಓವರ್, ಡೌನ್ ಜಾಕೆಟ್, 7 ಪದರಗಳ ಹೊರತಾಗಿಯೂ- ಅಲ್ಲಿದ್ದ ಚಳಿ ಸಹಿಸಲು ಅಸಾಧ್ಯ ಎನ್ನಿಸುವಷ್ಟು ಭೀಕರವಾಗಿತ್ತು. ಆ ಸಂಜೆ, ನಾವಿದ್ದ ತಂಗುದಾಣದಲ್ಲಿ, ಒಂದು ಜಪಾನಿ ದಂಪತಿ ಕೂಡ ಬೇಸ್ ಕ್ಯಾಂಪ್ ಚಾರಣಕ್ಕೆ ಬಂದಿದ್ದರು. ಮಾತುಕತೆ ಆರಂಭಿಸಿದಾಗ ತಿಳಿದು ಬಂದಿದ್ದು, ಆ ದಂಪತಿಗೆ 79 ವರ್ಷ. ಆ ಏರು ವಯಸ್ಸಿನಲ್ಲೂ ಕೂಡ ಅವರ ಜೀವನೋತ್ಸಾಹ ನೋಡಿ ನಮಗೆ ಆಶ್ಚರ್ಯವಾಗಿತ್ತು. ನಿಜಕ್ಕೂ ಫಿಟ್ನೆಸ್ ಎನ್ನುವುದು ಕೆಲೆವೊಮೆ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ ಎನ್ನುವ ಮಾತು ಎಷ್ಟು ಅರ್ಥವತ್ತಾಗಿದೆ ಅನ್ನಿಸಿತ್ತು. ಆ 79 ವರ್ಷದ ಜೋಡಿಯ ಉತ್ಸಾಹವನ್ನು ನೋಡಿಯೇ ನಮ್ಮಲ್ಲೂ ಉತ್ಸಾಹ ಇಮ್ಮಡಿ ಆಗಿತ್ತು.
ಆ ರಾತ್ರಿ ನಮ್ಮ ದೇಹ ಚಳಿಯಲ್ಲಿ ಕಂಪಿಸುತ್ತಿದ್ದರೂ, ಮನಸ್ಸು ಮಾತ್ರ ಮರುದಿನ ಬೇಸ್ ಕ್ಯಾಂಪ್ ತಲುಪುವ ಕನಸನ್ನು ಕಾಣುತಿತ್ತು. ಜೊತೆ ಜೊತೆಗೆ ನಮ್ಮೆಲ್ಲರನ್ನೂ ಕೂಡ ಸಣ್ಣ ಆತಂಕವೂ ಕಾಡುತ್ತಿತ್ತು—”Altitude sickness?” ಬಂದರೆ, “ಇಷ್ಟು ದಣಿದ ದೇಹ ನಾಳೆ ಬೆಳಗಾತ ಇನ್ನೊಂದು ದೀರ್ಘ ಪ್ರಯಾಣಕ್ಕೆ ಸಜ್ಜಾಗವುದೇ?” ಎಂಬ ಪ್ರಶ್ನೆಗಳು ದೇಹದ ವೇದನೆಯೊಂದಿಗೆ ಮಿಶ್ರವಾಗಿದ್ದವು. ಆದರೂ, ಐದು ತಿಂಗಳುಗಳ ತರಬೇತಿ, ಒಂದು ವಾರದ ಪ್ರಯಾಣ, ಮತ್ತು ಜೀವನಪೂರಕ ಕನಸನ್ನು ಹೊತ್ತ ಆ ಕ್ಷಣ, ಎಲ್ಲವನ್ನೂ ಮರೆಸಿ ಬಿಡುತಿತ್ತು. ಕೊನೆಗೆ ಎಲ್ಲವನ್ನೂ ಮರೆತು, ಮರುದಿನ ಎವರೆಸ್ಟ್ ಬೇಸ್ ಕ್ಯಾಂಪನ್ನು ತಲುಪುವ ನಿರೀಕ್ಷೆ ಮನಸ್ಸಿನಲ್ಲಿ ಮಿಂಚುತ್ತಿತ್ತು. ಮನಸು ಹಾಗೆಯೇ ಅಲ್ಲವೇ? ನೀವು ಅದಕ್ಕೆ ಉಣಬಡಿಸಿದ ಹಾಗೆ. ಅದಕ್ಕೆ ಶಕ್ತಿಶಾಲಿಯಾಗು ಎಂದರೆ ಅದು ಅದೇ ನಿಟ್ಟಿನಲ್ಲಿ ಸಾಗುವುದು, ಅದೇ, ನನ್ನಿಂದ ಆಗಲ್ಲ ಎಂದರೆ ತೆಪ್ಪಗೆ ಮೂಲೆ ಸೇರುತ್ತದೆ. Mind Can Move Mountains ಅನ್ನುವ ಮಾತು ಎಷ್ಟೊಂದು ಸತ್ಯ.
ಮರುದಿನ ಬೇಸ್ ಕ್ಯಾಂಪಿನತ್ತ ಪ್ರಯಾಣ. ಮಗದೊಂದು ದೀರ್ಘವಾದ, ದೇಹ ದಣಿಯುವ ಚಾರಣದ ಬಳಿಕ ಕಂಡ ದೃಶ್ಯ ಎಂದೂ ಮರೆಯಲಾಗದ ದೃಶ್ಯ. ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣಗಳಲ್ಲಿ ಒಂದು, ಬೇಸ್ ಕ್ಯಾಂಪಿನಿಂದ ಕಂಡ ಎವರೆಸ್ಟ್ ದೃಶ್ಯ. ಹಿಮಚ್ಛಾದಿತ ಶಿಖರದ ಮಧ್ಯೆ, ಸೂರ್ಯನು ಬೆಳಗಿದಾಗ, ಎವರೆಸ್ಟ್ ಶೃಂಗದ ಮೇಲೆ ಪಡಿಯುವ ಆ ಚಿನ್ನದ ಹೊಳೆಯು ಎಲ್ಲಿಯೂ ಕಾಣಸಿಗದು. ಸುತ್ತಲೂ ಕಾಣಸಿಗುವ ಎವರೆಸ್ಟ್ ಪರ್ವತ ಆರೋಹಣ ಮಾಡಲು ಸನ್ನದ್ಧರಾಗಿರುವ ಪರ್ವಾತಾರೋಹಿಗಳು, ಬಣ್ಣ ಬಣ್ಣದ ಕ್ಯಾಂಪಿಂಗ್ ಟೆಂಟುಗಳು, ಗಾಳಿಯಲ್ಲಿ ಹಾರುತ್ತಿರುವ ಬೌದ್ಧ ಧ್ವಜಗಳು ಶಾಂತಿಯ ನುಡಿಯನ್ನು ನುಡಿಸುತ್ತಿದ್ದವು. ಚಾರಣಿಕರ ಕೂಗು, ಶಬ್ದ, ಸುತ್ತಲಿನ ಸಡ್ಡು ಗದ್ದಲ, ಚಟುವಟಿಕೆಗಳ ನಡುವೆ, ಎವರೆಸ್ಟ್ ಶಿಖರದ ತಳದಲ್ಲಿ ನಿಂತಾಗ ಅನುಭವವಾಗುವ ಒಂದು ವಿಚಿತ್ರ ನಿಶ್ಶಬ್ದತೆ. ಭೂಮಿಯ ಅತೀ ಎತ್ತರದ ಶಿಖರದ ತಳದಲ್ಲಿ ನಾವು ಮಾನವರು ಎಷ್ಟು ಸಣ್ಣವರು ಎನ್ನುವ ಯೋಚನೆ. ನಾವು ಕಣ್ಣಾರೆ ನೋಡಬಹುದಾದ ಭೂಮಿಯ ಮೇಲಿನ ಅತಿ ಎತ್ತರದ ಶಿಖರ – 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್, ತನ್ನ ಸುತ್ತಮುತ್ತಲಿನ ಹಿಮಾಲಯ ಶೃಂಗಗಳ ನಡುವೆ ರಾಜಾಜ್ಞೆಯಂತೆ ಈ ಭೂಮಿಗೆ, ನಮ್ಮೆಲ್ಲರ ಬದುಕಿಗೆ, ಮಾನವ ನಾಗರಿಕತೆಗೆ ಅಚಲ ಸಾಕ್ಷಿಯಾಗಿ ನಿಂತಿತ್ತು. ಅದರ ಬೆರಗಿನ ಪಕ್ಕದಲ್ಲೇ ನುಪ್ಟ್ಸೆ, ಪುಮೋರಿ, ಚೋಲಾಟ್ಸೆ, ಲೋಟ್ಸೆ ಮತ್ತು ಇತರ ಅನೇಕ ಹಿಮಶೃಂಗಗಳು, ಎಲ್ಲವೂ ಒಂದೊಂದು ವಿಭಿನ್ನ ಜಗತ್ತಿನಂತೆ ಭಾಸವಾಗುತಿತ್ತು. ಈ ಕ್ಷಣವು ನಿಜಕ್ಕೂ ನನ್ನ ಜೀವನದ ಅಮರ ಅನುಭವ. ನಿರಂತರ ಪ್ರಕೃತಿಯ ಮೇರು ರೂಪದೆದುರು ನಾವೆಷ್ಟು ಕ್ಷಣಿಕ ಎಂದು ಮನಸು ಹೇಳುತಿತ್ತು. “ಇದು ಬದುಕಿನಲ್ಲೊಮ್ಮೆ ಅನುಭವಿಸಲೇಬೇಕಾದ ದಿನ” ಎಂದು ಮನಸು ಹೇಳುತಿತ್ತು.
ಮರುದಿನ ನಾವು 5,545 ಮೀಟರ್ ಎತ್ತರದಲ್ಲಿರುವ ಕಾಲಾ ಪತ್ತರ್ ಶಿಖರದ ಚಾರಣ ಮಾಡಲು ಹೊರಟಿದ್ದು. ಇಲ್ಲಿರುವ ಕಪ್ಪು ಬಣ್ಣದ ಬಂಡೆಗಳಿಂದಾಗಿ ಇಲ್ಲಿಗೆ ಕಾಲಾ ಪತ್ತರ್ (ನೇಪಾಳಿ ಹಾಗೂ ಹಿಂದಿ ಭಾಷೆಯಲ್ಲಿ ಕಪ್ಪು ಬಂಡೆ/ ಕಪ್ಪು ಕಲ್ಲು) ಅನ್ನುವ ಹೆಸರು ಬಂದಿದ್ದು. ಇಲ್ಲಿಂದ ಮೌಂಟ್ ಎವರೆಸ್ಟ್ ಶೃಂಗದ ಇನ್ನೊಂದು ಬಹು ಸುಂದರ ನೋಟವನ್ನು ಸವಿಯಬಹುದು. ಅಲ್ಲಿಂದ ವಾಪಸ್ ಬಂದ ಬಳಿಕ ಅವರೋಹಣ ಪ್ರಯಾಣದ ಆರಂಭ; ಪೆರಿಚೆ, ಪ್ಯಾಂಗ್ಬೋಚೆ, ಕೇಂಜುಮಾ ಮಾರ್ಗವಾಗಿ ಹಳೆಯ ಹಾದಿಗಳನ್ನೇ ನೆನಪಿಸಿಕೊಂಡು ನಮ್ಮ ಅವರೋಹಣ ಸಾಗಿತ್ತು. ಪ್ಯಾಂಗ್ಬೋಚೆ ಎಂಬ ಹತ್ತಿರದ ಗುರುಸ್ಥಾನ, ಶಾಂತಿ ಪಾಠ ನೀಡುವ ಗೊಂಪಾ, ದಣಿದು ಕುಸಿಯುತ್ತಿದ್ದ ಕಾಲುಗಳಿಗೆ ನವ ಚೈತನ್ಯ ನೀಡಿತ್ತು. ದಿನದಿಂದ ದಿನಕ್ಕೆ ಎತ್ತರ ಕಡಿಮೆಯಾಗುತ್ತಿದ್ದರೂ, ಮನಸ್ಸಲ್ಲಿ ಒಂದು ಹೊಸ ಅನುಭವದ ಪಾಠ ದಿನೇದಿನೇ ಹೆಚ್ಚುತ್ತಿತ್ತು. ಕೊನೆಗೆ ವಾಪಸ್ ಲೂಕ್ಲಾ ತಲುಪಿದಾಗ, ನಾವು ದೈಹಿಕವಾಗಿ ದಣಿದಿದ್ದರೂ, ಮನಸು ಆತ್ಮವಿಶ್ವಾಸದಿಂದ ತುಂಬಿ, ಜೀವನದ ಹೊಸ ಅನುಭವವನ್ನು ಗಳಿಸಿತ್ತು. ಅತ್ಯುನ್ನತ ಶಿಖರಕ್ಕೆ ವಿದಾಯ ಹೇಳಿ ವಿಮಾನದಲ್ಲಿ ಮರಳಿ ಕಠ್ಮಂಡು ತಲುಪಿದಾಗ ಮನಸಿನಲ್ಲಿ ಒಂದು ಹೊಸ ಶಾಂತಿ ನೆಲೆಸಿತ್ತು. ಈ ಒಂದು ಪ್ರಯಾಣ, ತಾತ್ಕಾಲಿಕವಾಗಿ ಮುಗಿದಿದ್ದರೂ, ಬದುಕಿನೊಳಗೆ ಒಂದು ಶಾಶ್ವತ ಪಾಠವಾಗಿ ಉಳಿದಿತ್ತು.

ಈ ಒಂದು ಚಾರಣ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿತ್ತುಎಂದರೆ ತಪ್ಪಾಗಲಾರದು. ಐದು ಅಡಿ ಎತ್ತರದ ಶೆರ್ಪಾಗಳು ಗೋದ್ರೇಜ್ ಬೀರುಗಳನ್ನೂ ತಮ್ಮ ಬೆನ್ನುಗಳಲ್ಲಿ ಹೊತ್ತುಕೊಂಡು ಹೋಗುವುದನ್ನು ನೋಡಿದರೆ ಬದುಕು ಎಲ್ಲರಿಗೂ ಸಮಾನವಲ್ಲ, ಜೀವನದ ಅಸಮಾನತೆ, ಬಡತನ, ನಮ್ಮ ಕಣ್ಣ ಮುಂದೆಯೇ ಗೋಚರಿಸುತ್ತದೆ. ಇಲ್ಲಿನ ಜನರು 2000 ಅಡಿಗಳಿಂದ 18000 ಅಡಿಗಳವರೆಗೆ ಗ್ಯಾಸ್ ಸಿಲಿಂಡರ್, ಮೇಜುಗಳು, ಜನರೇಟರ್ ಮತ್ತು ಹಾಸಿಗೆಗಳನ್ನು ಹೊತ್ತೊಯ್ಯುತ್ತಾರೆ. ಆ 15 ದಿನವೂ ಕೂಡ, ಜಗತ್ತು ಎಷ್ಟು ವಿಶಾಲವಾಗಿದೆಯೋ, ಅಷ್ಟೇ ಸಣ್ಣದಾಗಿದೆ ಎಂದು ಭಾಸವಾಗುತ್ತದೆ. ಹಾಗೆಯೇ ನಮ್ಮ ಚಾರಣದ ಹಾದಿಯೊಂದರಲ್ಲಿ ಸಾವಿರಾರು ಬೆಣಚುಕಲ್ಲುಗಳನ್ನು ಒಂದರ ಮೇಲೊಂದು ಇರಿಸಲಾಗಿತ್ತು. ಅವು ಎವರೆಸ್ಟ್ ಶಿಖರ ಮತ್ತು EBC ಚಾರಣಿಗರ ಮೃತ ಆತ್ಮಚರಿತ್ರೆಗಳಾಗಿದ್ದವು. ತಮ್ಮ ಕನಸುಗಳನ್ನು ಬೆನ್ನಟ್ಟುತ್ತಾ ತನ್ಮದ್ಯೆ ಪ್ರಾಣ ಕಳೆದುಕೊಂಡ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇಲ್ಲಿ ಶವವಾಗಿ ಅಮರವಾಗಿ ನೆಲೆಯೂರಿರುವುದನ್ನು ಕಂಡವರ ಮನ ಮರುಕುವುದು ಸಹಜ. ಇಲ್ಲಿನ ಪ್ರತಿಯೊಂದು ದೃಶ್ಯವೂ ಕೂಡ ಹಾಗೆಯೇ. ದಿನನಿತ್ಯವೂ ಕೂಡ, ಸಾಗುವ ಹಾದಿಯಲ್ಲಿ, ಜಗತ್ತಿನ ಇತರರ ನೋವು ಮತ್ತು ಸಂಕಟಗಳ ಬಗ್ಗೆ ನಿಮ್ಮ ಮನಸು ಆಲೋಚಿಸದೆ ಇರದು. ಇವೆಲ್ಲ ತಿಳಿಯಲು ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಬೇಕೆಂದೇ ಇಲ್ಲ, ನಮ್ಮ ಸುತ್ತಮುತ್ತಲಿನ ಕಡೆ ಒಂದಿಷ್ಟು ಮನಸು ಹಾಯಿಸಿದರೆ ಸಾಕು. ಎಲ್ಲವೂ ನಮ್ಮ ಕಣ್ಣ ಮುಂದೆಯೇ ಇದೆ. ನೋಡುವ ದೃಷ್ಟಿ ಬೇಕಷ್ಟೆ. ಹಾಗೆಯೇ ಸಂವೇದಿಸುವ ಮನಸು ಕೂಡ.
ಇದನ್ನೂ ಓದಿ ಸುತ್ತಾಟ | ಸಾವನದುರ್ಗದಲ್ಲೊಂದು ಸೂರ್ಯೋದಯ
ಎವರೆಸ್ಟ್ ಬೇಸ್ ಕ್ಯಾಂಪ್, ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಭವ್ಯವಾದ ಪರ್ವತ ದೃಶ್ಯಾವಳಿ. ನೀಲಿ ಆಕಾಶ, ಹೊಳೆಯುವ ಸೂರ್ಯ ರಶ್ಮಿ, ಹರಿಯುವ ಶುಭ್ರ ನದಿ, ಮೋಡಿಮಾಡುವ ಮೋಡಗಳು, ಹೆಪ್ಪುಗಟ್ಟಿದ ಹಿಮನದಿಗಳು, ಸೌಮ್ಯವಾದ ಗಾಳಿ, ವಿನಮ್ರ ಶೆರ್ಪಾಗಳು, ನಡುವೆ ಓಡಾಡುವ ಯಾಕ್ಗಳ ಕರೆಗಂಟೆಯ ಸದ್ದು, ಮದ್ಯೆ ಕೇಳಿಬರುವ ಹಿತವಾದ ಬೌದ್ಧ ಮಂತ್ರಗಳು, ತೂಗಾಡುವ ವಿಧವಿಧವಾದ ಮರಗಿಡಗಳು, ಮುತ್ತು ಬಿಳಿ ಪರ್ವತದ ಮೇಲೆ ಭವ್ಯವಾದ ಸೂರ್ಯ ಕಿರಣಗಳು, ಅದ್ಭುತವಾದ ಹಿಮಾಲಯ ಶೃಂಗ ಸಮೂಹ, ಹಿಮಭರಿತ ಮಳೆ, ಪ್ರಕೃತಿಯ ವೈಭವ, ಇದರ ನಡುವೆ ಪ್ರಪಂಚದ ಎಲ್ಲೆಡೆಯಿಂದ ಕನಸು ಹೊತ್ತು ಬಂದ ಚಾರಣಿಗರು. ಈ 15 ದಿನಗಳು, ಜೀವನದ ಸರಳತೆಯನ್ನು, ಪ್ರಕೃತಿಯ ವಿಶಾಲತೆಯನ್ನು, ಮನಸಿನ ಸೌಮ್ಯತೆಯನ್ನು, ಸಂಸ್ಕೃತಿಯ ವೈವಿಧ್ಯತೆಯನ್ನು ನನ್ನ ಮುಂದೆ ಇಟ್ಟಿತ್ತು. ಆ ನಡೆದ ದಾರಿ ಕಡಿದಾಗಿದ್ದರೂ, ಅಲ್ಲಿನ ಗಾಳಿ ಮಿತವಾಗಿದ್ದರೂ, ಅಲ್ಲಿನ ಪ್ರಕೃತಿ ನಿಶಬ್ದವಾಗಿದ್ದರೂ, ಅದು ನೀಡಿದ ಅನುಭವ ವಿಶಾಲವಾಗಿತ್ತು. ಉಸಿರಾಟ ದೀರ್ಘವಾಗಿದ್ದರೂ, ಅದು ನೀಡಿದ ಮನಃಶಾಂತಿ ಶಾಶ್ವತವಾಗಿತ್ತು.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.
ನಿಮ್ಮ ಈ ಪತ್ರಿಕೆಗೆ ಅಂಕಣ ಬರಹ ಬರೆಯಲು ಅವಕಾಶ ಸಿಗಬಹುದೇ?