ಜೋಳಿಗೆ | ಪಟ್ಟು ಬಿಡದೆ ಹೋರಾಡಿ ದಟ್ಟ ಕಾಡು ಉಳಿಸಿಕೊಂಡ ರೈತಾಪಿ ಜನ

Date:

Advertisements

ಅದೇ ಸಮಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರೂ ತಾಲೂಕುಗಳ ವ್ಯಾಪ್ತಿಯ ಸಮಾನ ಮನಸ್ಕರು ಸೇರಿ ಕ್ಷೇತ್ರದ ವಿವಿಧೆಡೆ ಏರ್ಪಡಿಸಿದ್ದ ʻಕರ್ನಾಟಕ ಪ್ರಗತಿ ರಂಗʼದ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಸಿದ್ಧ ಸಾಹಿತಿಗಳಾದ ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಅವರನ್ನೂ ಕಾಡಿಗೆ ಕರೆದೊಯ್ದು, ಅಲ್ಲಿನ ವಿನಾಶವನ್ನು ತೋರಿಸಿದಾಗ ಕಳವಳಪಟ್ಟ ಅವರು ನಮ್ಮ ಪ್ರಯತ್ನಗಳನ್ನು ಮನಃಪೂರ್ವಕ ಶ್ಲಾಘಿಸಿ ಬೆಂಬಲಿಸಿದರು.

ಇದು ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ʻಮುಂಜಾವುʼ ಪತ್ರಿಕೆ ನಡೆಸುತ್ತಿದ್ದಾಗ 1988ರಿಂದ ನಾಲ್ಕೈದು ವರ್ಷಗಳ ಕಾಲ ನಡೆದ ಯಶಸ್ವಿ ಪರಿಸರ ಹೋರಾಟದ ಕತೆ. ಅಂದು ʻಬದುಕುಳಿದʼ ಐವತ್ತು ಎಕರೆ ದಟ್ಟ ಕಾಡು ಇಂದೂ ಉಳಿದುಕೊಂಡಿದೆ; ಅದರೊಳಗೆ ಹುಟ್ಟಿ ಹರಿದು ತುಂಗಾ ನದಿಗೆ ಸೇರುವ ಮೊದಲು ಸುಮಾರು ನಾಲ್ಕು ನೂರು ಎಕರೆ ಜಮೀನಿಗೆ ನೀರೊದಗಿಸುತ್ತಿದ್ದ ಗುಬ್ಬಗದ್ದೆ ಹಳ್ಳ ಇಂದೂ ಜುಳುಜುಳು ಹರಿಯುತ್ತಿದೆ.

ಕುವೆಂಪು ಅವರ ಕುಪ್ಪಳಿಯ ಕಾಡು-ಗುಡ್ಡದ ಸೆರಗು ಅಲ್ಲಿಂದ ಆಗ್ನೇಯ ದಿಕ್ಕಿನತ್ತ ಮೂರ್ನಾಲ್ಕು ಕಿಲೊಮೀಟರ್ ಮುಂದುವರಿದು, ಕೊಪ್ಪ ಪೇಟೆಯ ಪಶ್ಚಿಮ ದಿಕ್ಕಿನಲ್ಲಿ ದಕ್ಷಿಣಕ್ಕೆ ಸಾಗಿ ಕೊಪ್ಪ-ಹರಿಹರಪುರ ಘಾಟಿಯಲ್ಲಿ ಕೊನೆಗೊಳ್ಳುತ್ತದೆ. ಕೊಪ್ಪದ ಪಶ್ಚಿಮಕ್ಕೆ, ಗುಡ್ಡದ ಇಳಿಜಾರಿನಲ್ಲಿ 20-22 ಮನೆಗಳಿರುವ ಗುಬ್ಬಗದ್ದೆ ಎಂಬ ಸಣ್ಣ ಹಳ್ಳಿಯಿದೆ. ಇಲ್ಲಿ 50-60 ಎಕರೆಯಷ್ಟು ಭತ್ತದ ಗದ್ದೆಗಳೂ 8-10 ಎಕರೆ ಅಡಿಕೆ ತೋಟವೂ ಇದೆ. ಹಳ್ಳಿಯ ಅರ್ಧದಷ್ಟು ಕುಟುಂಬಗಳು ಸಣ್ಣ-ಮಧ್ಯಮ ರೈತರಾದರೆ, ಇನ್ನರ್ಧ ಕೃಷಿ ಕಾರ್ಮಿಕ ಕುಟುಂಬಗಳು. (ಇದೆಲ್ಲ 1988-93ರ ಸಮಯದ ಅಂಕಿಅಂಶ.) ಈ ಗುಡ್ಡದ ನೆತ್ತಿಯಲ್ಲಿ ಎಂದೂ ಕಡಿತಲೆಗೆ ಒಳಗಾಗದ ದಟ್ಟವಾದ ಕಾಡು (ವರ್ಜಿನ್ ಫಾರೆಸ್ಟ್) ಇದೆ. ಇದರಲ್ಲಿ ಅಗಾಧ ಗಾತ್ರದ ಬೆಲೆಬಾಳುವ ನಾಟಾ (ಟಿಂಬರ್) ಮರಗಳಿವೆ. ಇಲ್ಲಿ ಒಂದು ಸಣ್ಣ ಝರಿ ಹುಟ್ಟಿ ಮುಂದೆ ಹರಿದಂತೆ ದೊಡ್ಡ ಹಳ್ಳವಾಗಿ ಫಲವತ್ತಾದ ಭೂಮಿಗೆ ನೀರುಣಿಸುತ್ತ ತುಂಗಾ ನದಿಗೆ ಸೇರುತ್ತದೆ.

Advertisements

ಕಂದಾಯ ಇಲಾಖೆಯ ಹೆಸರಿನಲ್ಲಿರುವ ಒಂದಷ್ಟು ಎಕರೆ ಕಾಡಿನ ಭೂಮಿಯನ್ನು ಕಾಫಿ ತೋಟಕ್ಕೆಂದು ಮಂಜೂರು ಮಾಡಿಸಿಕೊಂಡು, ಅದರಲ್ಲಿನ ಮರಗಳನ್ನು ಕಡಿದು ಸಾಗಿಸುವುದು, ನಂತರ ಕೆಲವು ವರ್ಷ ಬಿಟ್ಟು, ಸರ್ವೆ ನಕಾಶೆಗಳನ್ನು ಬದಲಿಸಿ, ಪಕ್ಕದ ಅಷ್ಟೇ ಎಕರೆ ಕಾಡಿನ ಮೇಲೆ ಒಡೆತನ ಪಡೆದು ಅಲ್ಲಿಂದ ಮರ ಕಡಿಯುವುದು, ಹೀಗೇ ನೂರಾರು ಎಕರೆಯನ್ನು ತಮ್ಮದಾಗಿ ಮಾಡಿಕೊಳ್ಳುತ್ತಾ ಹೋಗುವುದರ ಜೊತೆಗೆ ಅಲ್ಲಿನ ಬೆಲೆಬಾಳುವ ಮರಗಳನ್ನೂ ಕಡಿಯುವುದು ಮಲೆನಾಡಿನ ಕಾಫಿ ಎಸ್ಟೇಟುಗಳ ಪ್ರಾಂತ್ಯದಲ್ಲಿ ಸರ್ವೇಸಾಮಾನ್ಯ ಎಂದು ಜಿಲ್ಲೆಯ ಪರಿಸರ ಪ್ರಿಯರು ಹೇಳುತ್ತಾರೆ. ಗುಬ್ಬಗದ್ದೆಯಲ್ಲೂ ಇಂಥದ್ದೇ ಒಂದು ಪ್ರಯತ್ನ ನಡೆದಿತ್ತು.

1930ರಷ್ಟು ಹಿಂದೆ ಗುಬ್ಬಗದ್ದೆಯ ರಾಮೇಗೌಡ ಎಂಬ ರೈತರಿಗೆ ಇಲ್ಲಿ 50 ಎಕರೆ ಮಂಜೂರಾಗಿತ್ತು; ಅದು ಒಂದೆರಡು ಬಾರಿ ಹಸ್ತಾಂತರವಾಗಿ, 1970ರ ದಶಕದಲ್ಲಿ ಅದರ ಒಡೆತನ ಹೊಂದಿದ್ದವರು ಅಲ್ಲಿನ ಮರಗಳನ್ನು ಕಡಿದು ಸಾಗಿಸಿ ಆಗಿತ್ತು. ಅದಾಗಿ ಸುಮಾರು 10-12 ವರ್ಷದ ನಂತರ, ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಮಂದಿ ಟಿಂಬರ್ ಕಂಟ್ರಾಕ್ಟರುಗಳು ಕಂದಾಯ ಇಲಾಖೆಯ ನೌಕರರ ಶಾಮೀಲಿನೊಂದಿಗೆ ಈ ಭೂಮಿಯ ನಕಾಶೆ ಬದಲಿಸಿ, ಗುಡ್ಡದ ನೆತ್ತಿಯ ಗುಬ್ಬಗದ್ದೆ ಹಳ್ಳದ ಸುತ್ತಲಿನ ಕಾಡನ್ನು ಸೇರಿಸಿ 50 ಎಕರೆ ಸ್ಕೆಚ್ ಮಾಡಿ, ಅದರಲ್ಲಿನ ಮರಗಳ ಕಡೆತಲೆಗೆ ಪರವಾನಗಿ ಕೊಡುವಂತೆ ಅರಣ್ಯ ಇಲಾಖೆಗೆ ಅರ್ಜಿ ಹಾಕುತ್ತಾರೆ. ಒಂದು ನಿಗದಿತ ಕಾಲಮಿತಿಯೊಳಗೆ ಪರವಾನಗಿಯನ್ನು ಕೊಡದಿದ್ದಲ್ಲಿ ತಾನೇತಾನಾಗಿ ಪರವಾನಗಿ ಲಭ್ಯವಾಗುತ್ತದೆ _ ಡೀಮ್ಡ್ ಪರ್ಮಿಶನ್ – ಎಂಬೊಂದು ಕಲಮು ಅರಣ್ಯ ಕಾಯ್ದೆಯಲ್ಲಿದೆ. ಬಹುಶಃ ಅರಣ್ಯ ಇಲಾಖೆಯ ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿ, ಸದರಿ ಅರ್ಜಿಗೆ ಡೀಮ್ಡ್ ಪರವಾನಗಿ ದೊರೆಯುವಂತೆ ನೋಡಿಕೊಂಡಿದ್ದಾರೆ. ಅದರ ಮೇಲೆ ಕಂಟ್ರಾಕ್ಟರುಗಳು ʻಅರಣ್ಯ ಇಲಾಖೆಯ ವಿರುದ್ಧʼ ಹೈಕೋರ್ಟಿಗೆ ಹೋದಂತೆ ಮಾಡಿ, ಡೀಮ್ಡ್ ಪರವಾನಗಿಯನ್ನು ಮಾನ್ಯ ಮಾಡುವಂತೆ ಕೇಳಿಕೊಂಡು ಆದೇಶ ಪಡೆದುಕೊಂಡು ಬಿಟ್ಟಿದ್ದಾರೆ. ಆ ಸಮಯಕ್ಕೆ ಕೊಪ್ಪ ಅರಣ್ಯ ವಿಭಾಗದ ಡಿಎಫ್ಒ ಆಗಿ ಬಂದಿದ್ದ ಅಧಿಕಾರಿ ಇದರಲ್ಲಿ ಮೋಸ ಆಗಿರುವುದನ್ನು ಕಂಡುಕೊಂಡು, ಅದರ ವಿರುದ್ಧ ಹೈಕೋರ್ಟ್ ವಿಭಾಗ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಹಳೆಯ ಮತ್ತು ತಿದ್ದಿದ ಸರ್ವೆ ನಕಾಶೆಗಳನ್ನೂ, ಸಂಬಂಧಿತ ಇನ್ನಿತರ ಪುರಾವೆಗಳನ್ನೂ ಸಮರ್ಪಕವಾಗಿ ಒದಗಿಸುವಲ್ಲಿ ಮತ್ತು ಅದಕ್ಕೆ ಅನುಗುಣವಾಗಿ ಕೋರ್ಟಿನಲ್ಲಿ ಇಲಾಖೆಯ ಪರ ವಾದ ಮಂಡಿಸಿ, ವಂಚನೆಯನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ಲೋಪ ಆಗಿದೆ. ಹೀಗಾಗಿ ʻಕಂಟ್ರಾಕ್ಟರುಗಳಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹೀಗೆ ಮಾಡುತ್ತಿದ್ದಾರೆʼ ಎಂದು ಪರಿಗಣಿಸಿದ ವಿಭಾಗ ಪೀಠವು, ಮರ ಕಡಿತಲೆಗೆ ಅರಣ್ಯ ಅಧಿಕಾರಿಗಳು ಅಡ್ಡಿ ಮಾಡಕೂಡದೆಂದು ಸ್ಪಷ್ಟ ಆದೇಶ ಮಾಡಿದ್ದಲ್ಲದೆ, ಸಿಂಗಲ್ ಬೆಂಚ್ ತೀರ್ಪಿನ ಬಳಿಕ ದಾಖಲೆಗಳನ್ನು ಮಾರ್ಪಡಿಸಿದ ಆಪಾದನೆ ಹೊರಿಸಿ, ಅಂದಿನ ಜಿಲ್ಲಾಧಿಕಾರಿಯ ಮೇಲೆ ನ್ಯಾಯಾಂಗ ನಿಂದನೆಯ ಕೇಸನ್ನೂ ದಾಖಲಿಸಿಬಿಟ್ಟಿತು! ಡಿಸಿಯೇನೋ ವಿಭಾಗ ಪೀಠದ ಮುಂದೆ ಹಾಜರಾಗಿ ಕ್ಷಮಾಪಣೆ ಕೇಳಿ ನ್ಯಾಯಾಂಗ ನಿಂದನೆ ಕೇಸಿನಿಂದ ವಿನಾಯ್ತಿ ಪಡೆದರಾದರೂ, ಮರಗಳ ಮಾರಣಹೋಮಕ್ಕೆ ವೇದಿಕೆ ಸಿದ್ಧವಾಗಿಬಿಟ್ಟಿತ್ತು.

ಹಳೆಯ ಜಾಗದ ನಕಾಶೆ ತಿದ್ದಿ ಹೊಸದಾಗಿ ಕಾಡು ಕಡಿಯುವ ಪ್ರಯತ್ನದ ಸುಳಿವು ಸಿಕ್ಕಿದಾಗಿನಿಂದಲೂ ಸ್ಥಳೀಯ ರೈತಾಪಿ ಜನತೆ ಅದನ್ನು ತಡೆಗಟ್ಟಲು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಸರಿಯಾದ ಕಾನೂನಿನ ಮಾರ್ಗದರ್ಶನವಾಗಲಿ, ಕಂದಾಯ-ಅರಣ್ಯ ಇಲಾಖೆಗಳಿಂದ ಸರಿಯಾದ ನೆರವಾಗಲಿ ದೊರೆಯದೆ, ಅವರ ಪ್ರಯತ್ನಗಳಿಗೆ ಯಶಸ್ಸು ಸಿಗಲಿಲ್ಲ. ಆಗಲೇ ಅರಣ್ಯ ಇಲಾಖೆಯ ಜೊತೆಯಲ್ಲಿ ರೈತರೂ ಕೇಸಿನಲ್ಲಿ ʻಇಂಟರ್ವೀನ್ʼ ಆಗಿರುತ್ತಿದ್ದಲ್ಲಿ ಬಹುಶಃ ಸಮರ್ಪಕ ದಾಖಲೆ-ಪುರಾವೆಗಳನ್ನು ಒದಗಿಸಿ ವಾದಿಸುವ ಮೂಲಕ ಪ್ರಕರಣ ಬೇರೆ ರೀತಿ ತೀರ್ಮಾನವಾಗುವ ಸಂಭವ ಇರುತ್ತಿತ್ತೇನೋ. ವಿಭಾಗ ಪೀಠದ ಮುಂದೆ ಕೇಸ್ ಹೋಗಿದ್ದ ಹಂತದಲ್ಲಿ ಕೊಪ್ಪಕ್ಕೆ ಬಂದಿದ್ದ ಅಂದಿನ ಡಿ ಸಿ ಬಿ. ಪಾರ್ಥಸಾರಥಿಯವರನ್ನು ಪತ್ರಕರ್ತನಾಗಿ ನಾನು ಕಂಡು ವಿವರ ಕೇಳಿದ್ದಕ್ಕೆ, ಕೇಸು ಕೋರ್ಟಿನಲ್ಲಿ ಇರುವುದರಿಂದ ಯಾವುದೇ ಮಾಹಿತಿ ಕೊಡುವಂತಿಲ್ಲ, ʻಸಬ್ ಜುಡಿಸಿʼ ಆಗುತ್ತದೆ ಎಂದು ಅವರು ಹೇಳಿದರು. ಕೊನೆಗೆ ಎಲ್ಲಾ ತೀರಿ, ಈ ರೀತಿಯ ಆದೇಶ ಬಂದ ನಂತರ ರೈತರು ಮತ್ತೊಮ್ಮೆ ನನ್ನ ಪತ್ರಿಕೆಯ ಬಳಿಗೆ ಓಡಿಬಂದರು.

ರೈತರ ಜೊತೆ ಹಾಗೂ ಹಲವು ಮಂದಿ ಸಮಾನ ಮನಸ್ಕ ಗೆಳೆಯರು ಮತ್ತು ವಕೀಲ ಮಿತ್ರರ ಜೊತೆ ಚರ್ಚಿಸಿ, ಗುಬ್ಬಗದ್ದೆ ಮತ್ತು ಸುತ್ತಲಿನ ಹಳ್ಳಿಗಳ ರೈತರ ಸಮಾಲೋಚನಾ ಸಭೆಯೊಂದನ್ನು ಏರ್ಪಡಿಸಿ, ಅದಕ್ಕೆ ಅಂದಿನ ಶಾಸಕರೂ ಮಂತ್ರಿಗಳೂ ಆಗಿದ್ದ ಎಚ್.ಜಿ. ಗೋವಿಂದ ಗೌಡರನ್ನೂ ಆಹ್ವಾನಿಸಿದೆವು. ಅವರು ಪೂರ್ಣ ಬೆಂಬಲ, ಸಹಕಾರದ ಭರವಸೆಯಿತ್ತರು. ಸಾರ್ವಜನಿಕರ ಪರವಾಗಿ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಹಾಕಬೇಕೆಂದು ತೀರ್ಮಾನವಾಗಿ, ಅದಕ್ಕೋಸ್ಕರ ನಾನು, ಕೆ.ವಿ.ಶಿವಸ್ವಾಮಿ ಮತ್ತು ಶ್ರೀಧರ ಶೆಟ್ಟಿ ಈ ಮೂವರ ತಂಡವನ್ನು ಸಭೆ ಆರಿಸಿತು. ನಾವು ತಡ ಮಾಡದೆ, ಇದ್ದಬದ್ದ ದಾಖಲೆಗಳನ್ನೆಲ್ಲ ಒಟ್ಟುಮಾಡಿಕೊಂಡು ಬೆಂಗಳೂರಿಗೆ ಓಡಿದೆವು. ಈ ಪ್ರಕರಣ ಆರಂಭವಾದ ನಂತರ ಡಿಎಫ್ಓ ಆಗಿ ಮೂರನೆಯವರೋ ನಾಲ್ಕನೆಯವರೋ ಆದ ಕೆ.ಎಸ್. ಸುಗಾರ ಎಂಬ ಅಧಿಕಾರಿ ಬಂದಿದ್ದರು. ಅವರು ಬೆಂಗಳೂರಿನಲ್ಲಿ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಕೂತು, ಕೇಸನ್ನು ಸುಪ್ರೀಂ ಕೋರ್ಟಿಗೆ ಒಯ್ಯುವ ತಯಾರಿ ನಡೆಸಿದರು. ಹೈಕೋರ್ಟಿನಲ್ಲಿ ಸರ್ಕಾರದ ಕಡೆಯಿಂದ ಸರಿಯಾಗಿ ವಾದ ಮಂಡನೆ ಆಗದೆ ಇಂತಹ ವಿನಾಶಕಾರಿ ಆದೇಶ ಬರುವಂತಾದ ಬಗ್ಗೆ ಹಿರಿಯ ಸರ್ಕಾರಿ ವಕೀಲ ಶಾಸ್ತ್ರಿ ಎಂಬವರಿಗೆ ಬಹಳ ಖೇದವಾಗಿತ್ತು, ಅವರು ಸುಗಾರ ಅವರ ಜೊತೆ ಕೂತು ಸುಪ್ರೀಂ ಕೋರ್ಟಿಗೆ ಅತ್ಯಂತ ಸಮರ್ಪಕವಾದ ಮೇಲ್ಮನವಿ ತಯಾರಿಸಿ ಕೊಡುವುದರಲ್ಲಿ ಮಗ್ನರಾದರು.

aks 7 1566915271
ಎ ಕೆ ಸುಬ್ಬಯ್ಯ

ಇತ್ತ ನಾವು ಎ.ಕೆ. ಸುಬ್ಬಯ್ಯನವರನ್ನು ಭೇಟಿ ಮಾಡಿ ಅವರಿಂದ ವಿಭಾಗ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಕೋರಿದೆವು. ಆದರೆ ಅದು ಸಿಗಲಿಲ್ಲ. ಅಷ್ಟರಲ್ಲಿ ಈ ಎಲ್ಲ ಪ್ರಯತ್ನಗಳ ಮಾಹಿತಿ ಪಡೆದ ಕಂಟ್ರಾಕ್ಟರುಗಳು ತರಾತುರಿಯಲ್ಲಿ ಮರ ಕಡಿತಲೆಗೆ ಶುರು ಮಾಡಿಯೇ ಬಿಟ್ಟರು. ಮರಗಳು ತಮ್ಮ ಎದೆಯ ಮೇಲೆಯೇ ಬೀಳುತ್ತಿವೆಯೋ ಎಂಬಂತೆ ರೈತರು ಅಪಾರ ತಳಮಳಕ್ಕೆ ಈಡಾಗಿ ಚಡಪಡಿಸತೊಡಗಿದರು. ಆಗ, ನಮ್ಮ ತಂಡದ ಶಿವಸ್ವಾಮಿಯವರ ಕಾಲೇಜು ಸಹಪಾಠಿಯಾಗಿದ್ದ ಬೆಂಗಳೂರಿನ ಟಿ.ಎನ್. ರಘುಪತಿ ಎಂಬ ಅನುಭವಿ ಸಿವಿಲ್ ವಕೀಲರು ದಾಖಲೆಗಳನ್ನೆಲ್ಲ ನೋಡಿ, ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಗಲು ಸಾಧ್ಯವೇ ಇಲ್ಲ ಎಂಬುದನ್ನು ವಿವರಿಸಿ, ಕೆಲವು ದಿನಗಳ ಮಟ್ಟಿಗಾದರೂ ಮರ ಕಡಿತಲೆ ನಿಲ್ಲಿಸಬಲ್ಲ ಒಂದು ʻಒಳ ಉಪಾಯʼ ಹೇಳಿಕೊಟ್ಟರು. ನಾವು ಚಿಕ್ಕಮಗಳೂರಿಗೆ ಹೋಗಿ ಜಿಲ್ಲಾ ನ್ಯಾಯಾಲಯದಲ್ಲಿ ಕೇಸು ಹಾಕಿದೆವು. ಅಲ್ಲಿ ತಡೆಯಾಜ್ಞೆ ಸಿಕ್ಕಿಯೇ ಬಿಟ್ಟಿತು!

ಆ ʻಉಪಾಯʼ ಹೀಗಿತ್ತು –
ʻಯಾರಾದರೊಬ್ಬ ಗಣ್ಯ ವ್ಯಕ್ತಿಯ ಹೆಸರಲ್ಲಿ ಕೇಸು ಹಾಕಬೇಕು, ಒಳ್ಳೆಯ ಪ್ರತಿಷ್ಠಿತರಾದ ಹಿರಿಯ ವಕೀಲರನ್ನು ಹಿಡಿಯಬೇಕು, ʻಎದೆ ಗಟ್ಟಿ ಇರುವʼ ಜಡ್ಜ್ ಇರಬೇಕು. ಹೈಕೋರ್ಟಿನ ಆದೇಶವನ್ನು ಉಲ್ಲೇಖಿಸದೆ, ಕೇವಲ ದಾಖಲೆಗಳನ್ನು ಮುಂದಿಟ್ಟು ವಾದಿಸಬೇಕು. ಸ್ಟೇ ಸಿಗುತ್ತೆ.ʼ … ನಾವು ಪೂರ್ಣಚಂದ್ರ ತೇಜಸ್ವಿಯವರನ್ನು ಕಂಡು ಪ್ರಕರಣವನ್ನು ವಿವರಿಸಿದಾಗ ಅವರು ಹೌಹಾರಿ, ʻಏನ್ರೋ ಮಾರಾಯ! ಕಾಡಿನ ಇಂಥ ಹಗಲು ದರೋಡೆಗೆ ಇಳಿದಿದ್ದಾರಲ್ಲಯ್ಯ…ʼ ಎಂದು ಕಳವಳಪಟ್ಟು, ಈ ವಿಷಯದಲ್ಲಿ ನನ್ನ ಹೆಸರನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಿ ಎಂದು ಹೇಳಿ ವಕಾಲತ್ತಿಗೆ ಸಹಿ ಹಾಕಿಕೊಟ್ಟರು. ಅವರ ಹೆಸರಿನಲ್ಲೇ ಕೇಸು ಹಾಕಿದೆವು.

ಚಿಕ್ಕಮಗಳೂರಿನ ವಕೀಲರ ಮತ್ತು ನ್ಯಾಯಾಧೀಶರ ವಲಯದಲ್ಲಿ ತುಂಬ ಗೌರವಾನ್ವಿತರಾಗಿದ್ದ, ಸ್ವಾತಂತ್ರ್ಯ ಯೋಧರ ಕುಟುಂಬದ ದಿನೇಶ ರಾವ್ ಎಂಬ ಹಿರಿಯ ವಕೀಲರನ್ನು ಕಂಡು ವಿಚಾರ ವಿವರಿಸಿದೆವು. ಅವರೂ ಒಪ್ಪಿ ಕೈಗೂಡಿಸಿದರು. ಆಗ ಕೋರ್ಟಿಗೆ ರಜಾ ಇತ್ತು; ʻಮಿಲ್ಟ್ರಿ ಮಹದೇವಪ್ಪʼ ಎಂದು ಹೆಸರಾಗಿದ್ದ ರಜಾ ಕಾಲದ ನ್ಯಾಯಾಧೀಶರಿದ್ದರು. ಅವರು ನಾವು ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಸ್ಟೇ ಕೊಟ್ಟುಬಿಟ್ಟರು. ಕೂಡಲೇ ಆದೇಶದ ಪ್ರತಿ ತೆಗೆದುಕೊಂಡು ಕೊಪ್ಪಕ್ಕೆ ಓಡಿದ ನಾವು, ಎಸಿಎಫ್ ಅವರ ಮೂಲಕ ಅದನ್ನು ಕಂಟ್ರಾಕ್ಟರುಗಳ ಮೇಲೆ ಜಾರಿ ಮಾಡಿಸಿ, ಮರ ಕಡಿಯುವುದನ್ನು ನಿಲ್ಲಿಸಿಬಿಟ್ಟೆವು! ಐದೇ ದಿನಗಳಲ್ಲಿ 312 ಮರಗಳನ್ನು ಕಡಿದುರುಳಿಸಿದ್ದರು. ಒಂದೊಂದು ಮರವನ್ನು ತಬ್ಬಲು ಐದಾರು ಜನರೂ ಸಾಕಾಗಲ್ಲ, ಅಂಥಾ ಭಾರಿ ಭಾರಿ ಮರಗಳು ಅವು. ಅವುಗಳಡಿ ಸಿಕ್ಕು ಇನ್ನೂ ಹತ್ತಾರು ಸಣ್ಣಪುಟ್ಟ ಮರಗಳು ಸಸಿಗಳು ನೆಲ ಕಚ್ಚಿದ್ದವು. ಒಂಥರಾ ಸರ್ವನಾಶದ ದೃಶ್ಯ…

ಅತ್ತ ಕಂಟ್ರಾಕ್ಟರುಗಳೂ ಸಹ, ಡಿಎಫ್ಓ ಅವರು ಸುಪ್ರೀಂ ಕೋರ್ಟಿನಲ್ಲಿ ಕೇಸು ದಾಖಲಿಸುವ ಮೊದಲೇ ʻಕೇವಿಯೆಟ್ʼ ಹಾಕುವ ಉದ್ದೇಶದಿಂದ ದೆಹಲಿಗೆ ಹೊರಟಿದ್ದರು. (ಕೇವಿಯೆಟ್ ಅಂದರೆ, ಅದನ್ನು ಸಲ್ಲಿಸಿದವರ ವಾದ ಆಲಿಸದೆ ಅವರ ಎದುರಾಳಿ ಹಾಕಿರುವ ಕೇಸಿನಲ್ಲಿ ಯಾವುದೇ ಆದೇಶ ಮಾಡಬಾರದು ಎಂದು ಕೋರುವ ಅರ್ಜಿ). ಅವರು ರೈಲಿನಲ್ಲಿ ದೆಹಲಿ ತಲುಪುವ ಮೊದಲೇ ಹೋಗಿ ಕೇಸು ದಾಖಲಿಸುವುದು ಡಿಎಫ್ಓ ಸುಗಾರ ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರಿಗೆ ವಿಮಾನ ಪ್ರಯಾಣಕ್ಕೆ ಸರ್ಕಾರದಿಂದ ವಿಶೇಷ ಅನುಮತಿ ಬೇಕಾಗಿತ್ತು (ಆಗ ನಿಯಮ ಹಾಗಿತ್ತು). ಅನುಮತಿಯ ಫೈಲ್ ಸಿದ್ಧವಾಗಿ, ಕಾನೂನು ಇಲಾಖೆಯ ಉಪ-ಕಾರ್ಯದರ್ಶಿಯವರ ಮೂಲಕ ಕಾನೂನು ಕಾರ್ಯದರ್ಶಿಯವರ ಮುಂದೆ ಹೋಗಬೇಕಿತ್ತು. ಆದರೆ ಸದರಿ ಉಪಕಾರ್ಯದರ್ಶಿಯವರು ತಮ್ಮ ಜಿಲ್ಲೆಯವರೇ ಆದ ಕಂಟ್ರಾಕ್ಟರುಗಳಿಗೆ ಉಪಕಾರ ಮಾಡಲು ಯೋಚಿಸಿ, ಸದರಿ ಫೈಲನ್ನು ತಮ್ಮ ವಶದಲ್ಲಿಟ್ಟುಕೊಂಡು ಮಾರನೇ ದಿನಕ್ಕೆ ರಜ ಹಾಕಿ ಹೋಗಿಬಿಟ್ಟರು! ಇದನ್ನು ಸುಗಾರ ನಮಗೆ ಹೇಳಿದಾಗ ಹಿರಿಯ ಕಾರ್ಯದರ್ಶಿಯವರನ್ನು ನಾವೇ ಕಾಣಲು ನಿರ್ಧರಿಸಿದೆವು.

ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದ ಎನ್.ಡಿ.ವಿ. ಭಟ್ ಅವರು ಕಾನೂನು ಕಾರ್ಯದರ್ಶಿಯಾಗಿದ್ದರು. ನಾವು ಈ ಮೊದಲೇ ಒಮ್ಮೆ ಅವರನ್ನು ಭೇಟಿಯಾಗಿ ಸಂಗತಿಯೆಲ್ಲ ವಿವರಿಸಿದ್ದೆವು. ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಕೈಯಿಂದ ಖರ್ಚು ಮಾಡಿಕೊಂಡು ಶ್ರಮಿಸುವುದನ್ನು ಅವರು ತುಂಬಾ ಮೆಚ್ಚಿ, ತನ್ನಿಂದ ಯಾವಾಗ ಏನು ನೆರವು ಬೇಕಿದ್ದರೂ ಬಂದು ಕಾಣಲು ತಿಳಿಸಿದ್ದರು. ಈಗ ಅವರ ಬಳಿಗೆ ಹೋಗಿ, ಈ ಫೈಲಿನ ವಿಚಾರವನ್ನು ಅಳುಕುತ್ತ ಅಳುಕುತ್ತಲೇ ಅವರಿಗೆ ತಿಳಿಸಿದಾಗ, ಅವರು “ಛೆ ಛೆ. ಉಪಕಾರ್ಯದರ್ಶಿಗಳೂ ಒಳ್ಳೆಯ ಹೆಸರಿರುವ ಒಬ್ಬ ನ್ಯಾಯಾಧೀಶರೇ. ಹಾಗೇನೂ ಆಗಿರಲಿಕ್ಕಿಲ್ಲ. … ನಾನು ವಿಚಾರಿಸುತ್ತೇನೆ …” ಎಂದು ತಮ್ಮ ಅಧೀನ ಅಧಿಕಾರಿಯನ್ನು ಬಿಟ್ಟುಕೊಡದೆ ಸಮರ್ಥಿಸಿಕೊಂಡರೂ, ಫೈಲ್ ತರಿಸಿಕೊಂಡು ಡಿಎಫ್ಓ ಅವರ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿಬಿಟ್ಟರು. ಕೂಡಲೇ ದೆಹಲಿಗೆ ತೆರಳಿದ ಸುಗಾರ, ಕಂಟ್ರಾಕ್ಟರುಗಳು ದಿಲ್ಲಿ ತಲುಪುವ ಮೊದಲೇ ಕೇಸು ದಾಖಲಿಸಿದರು. ಅವರು ಎತ್ತಿದ್ದ ಅಂಶಗಳ ಮೇಲೆ ಹೈಕೋರ್ಟು ಪುನರ್ ಪರಿಶೀಲಿಸಬೇಕೆಂಬ ಆದೇಶದೊಂದಿಗೆ ಸುಪ್ರೀಂ ಕೋರ್ಟು ತಡೆಯಾಜ್ಞೆ ಕೊಟ್ಟುಬಿಟ್ಟಿತು. ಹೀಗೆ ಮರಗಳ ಕಡಿತಲೆಗೆ ಬಲವಾದ ಬ್ರೇಕ್ ಬಿದ್ದಿತು.

ನಂತರ ಹೈಕೋರ್ಟಿನಲ್ಲಿ ಪ್ರಕರಣ ಮುಂದುವರಿಯಿತು. ಕಂಟ್ರಾಕ್ಟರುಗಳಿಗೆ ಮರುಕ ತೋರಿದ ಕೋರ್ಟು, ಆಗಲೇ ಕಡಿದಿದ್ದ 312 ಮರಗಳನ್ನು ಹರಾಜು ಹಾಕಿ ಅದರಲ್ಲಿ ಬಂದ ಹಣದಲ್ಲಿ 5 ಲಕ್ಷ ರೂಪಾಯಿಗಳನ್ನು ಅವರ ಖರ್ಚಿಗೆಂದು ಕೊಟ್ಟು ಮಿಕ್ಕಿದ್ದನ್ನು ಕೋರ್ಟಿನಲ್ಲಿ ಜಮಾ ಇಡಬೇಕೆಂದು ತಾತ್ಕಾಲಿಕ ಆದೇಶ ಕೊಟ್ಟಿತು. ಆದರೆ ಮರಗಳ ಕಡಿತಲೆಗೆ ಅನುಮತಿ ನೀಡಲಿಲ್ಲ. ಮುಂದೆ ಹಳ್ಳಿಗರೇ ಕೇಸು ನಡೆಸಿದರು. ಅಷ್ಟರಲ್ಲಾಗಲೇ ಏಳು ಮಂದಿ ಕಂಟ್ರಾಕ್ಟರುಗಳ ಪೈಕಿ ಇಬ್ಬರು ಇಹಲೋಕ ತ್ಯಜಿಸಿ ಆಗಿತ್ತು. ಕೇಸು ನಡೆಸುತ್ತಿದ್ದ ಮುರಳಿ ಮೋಹನ ಶೆಟ್ಟಿ ಎಂಬವರೂ ಇದೆಲ್ಲ ಆಗಿ ಸ್ವಲ್ಪ ಸಮಯದಲ್ಲೇ ತೀರಿಕೊಂಡರು. ಮಿಕ್ಕ ಯಾರೂ ಕೇಸು ಮುಂದುವರಿಸುವವರಿಲ್ಲದೆ ಕೇಸು ಹೈಕೋರ್ಟಿನ ಯಾವುದೋ ಮೂಲೆಯ ಧೂಳಿನಡಿ ಬಹುಶಃ ದಫನ್ ಆಯಿತು!

ಇದೆಲ್ಲಾ ಆಗಿ ಈಗ 32ರಿಂದ 35 ವರ್ಷ ಆಗಿದೆ. ಕಾಡೂ ಉಳಿದಿದೆ; ಗುಬ್ಬಗದ್ದೆ ಹಳ್ಳವೂ ಉಳಿದಿದೆ. ಅಸಾಮಾನ್ಯ ಛಲದಿಂದ ಹೋರಾಡಿದ ಕೇವಲ ಸಾಮಾನ್ಯರಾದ ರೈತರು ಹೆಮ್ಮೆಯಿಂದ, ನೆಮ್ಮದಿಯಿಂದ ಬದುಕು ನಡೆಸಿದ್ದಾರೆ. ಈ ಸುದೀರ್ಘ ಹೋರಾಟ ಕೇವಲ ಕೋರ್ಟಿನಲ್ಲಷ್ಟೇ ನಡೆದಿದ್ದಲ್ಲ. ʻಚಿಕ್ಕಮಗಳೂರು ಜಿಲ್ಲಾ ಪರಿಸರ ಜಾಗೃತಿ ವೇದಿಕೆʼಯ ʻಕೊಪ್ಪ ತಾಲೂಕು ಘಟಕʼದ ಹೆಸರಿನಲ್ಲಿ ಕಾಡಿನಲ್ಲೂ, ಕೊಪ್ಪ ತಾ. ಕಚೇರಿ ಎದುರಲ್ಲೂ ನಿರಂತರ ಧರಣಿ ಸತ್ಯಾಗ್ರಹ ನಡೆಸಿದೆವು. ಸಾಮಾಜಿಕ ಕಾರ್ಯಕ್ಕಾಗಿ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದ ವಯೋವೃದ್ಧೆ ಬಸವಾನಿ ಸಾವಿತ್ರಮ್ಮ ದಂಪತಿ, ಶಿವಮೊಗ್ಗದ ಡಿವಿಎಸ್ ಕಾಲೇಜು ವೈಸ್ ಪ್ರಿನ್ಸಿಪಲ್ ವೆಂಕಟೇಶ ಮೊದಲಿಯಾರ್, ಅಪ್ಪಿಕೊ ಚಳವಳಿಯ ಶಿರಸಿಯ ಪಾಂಡುರಂಗ ಹೆಗಡೆ ಮುಂತಾದವರನ್ನು ಒಳಗೊಂಡಂತೆ ಸುತ್ತಮುತ್ತಲ ಊರುಗಳ ರೈತರೂ ಯುವಜನ ಸಂಘಗಳವರೂ ಧರಣಿಗಳಲ್ಲಿ ಭಾಗವಹಿಸಿದರು. ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಿಂದಲೂ ಪರಿಸರಾಸಕ್ತರು ಬಂದು ಭಾಗವಹಿಸುವುದು, ಇನ್ನಿತರ ರೀತಿಗಳಲ್ಲಿ ನೆರವು, ಬೆಂಬಲ ನೀಡಿದರು. ನಮ್ಮ ಬಳಿ ಇದ್ದಷ್ಟೇ ಸೌಕರ್ಯಗಳಲ್ಲಿ ಆದಷ್ಟೂ ವ್ಯಾಪಕ ಪ್ರಚಾರ ನಡೆಸಿದೆವು. ಹಳ್ಳಿಗಳಲ್ಲಿ ಸುತ್ತಾಡಿದಾಗ ರೈತರು ಮನಮೆಚ್ಚಿ ಕೈಬಿಚ್ಚಿ ದೇಣಿಗೆ ನೀಡಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರೊಫೆಸರ್ ವಿಷ್ಣು ಕಾಮತ್ ಅವರ ನೇತೃತ್ವದಲ್ಲಿ ಒಂದು ʻಸತ್ಯಶೋಧನಾ ತಂಡʼ ಕರೆಸಿ ಅವರಿಂದ ವರದಿ ಮಾಡಿಸಿದೆವು. ಪದೇಪದೇ ಬೆಂಗಳೂರಿಗೆ ಹೋಗಿ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬೆನ್ನು ಹತ್ತಿದೆವು. ಒಮ್ಮೆ ಕಾಡಿನ ಸಮೀಪದಲ್ಲಿ, ಕೊಪ್ಪ-ತೀರ್ಥಹಳ್ಳಿ ರಸ್ತೆ ತಡೆ ಪ್ರತಿಭಟನೆ ಹಾಕಿಕೊಂಡಾಗ, ದುಗ್ಗಪ್ಪ ಗೌಡ ಎಂಬ ಕೊಪ್ಪದ ಸಬ್ ಇನ್‌ಸ್ಪೆಕ್ಟರ್ ತನ್ನ ʻಪಡೆʼಯೊಂದಿಗೆ ರಸ್ತೆಯಲ್ಲಿ ನಿಂತು, ʻಯಾವನಾದ್ರೂ ಲಫಡಾ ಮಾಡಿದ್ರೆ ಬೆನ್ ಸರ್ತ ಮಾಡ್ತೀನಿ …ʼ ಮುಂತಾಗಿ ಕೂಗಾಡ್ತಾ ತಕಥೈ ತಕಥೈ ಮಾಡಿದ್ದೂ ನಡೆಯಿತು.

lankesh and tejaswi
ಪಿ ಲಂಕೇಶ್‌ ಮತ್ತು ಪೂರ್ಣಚಂದ್ರ ತೇಜಸ್ವಿ

ಅಲ್ಲದೆ, ಆ ಗ್ರಾಮದ ಪಂಚಾಯ್ತಿ ಛೇರ್ಮನ್ ಆಗಿದ್ದ, ಒಂದು ಕಾಲದಲ್ಲಿ ನನಗೆ ಗೆಳೆಯನೂ ಆಗಿದ್ದ ಗುಣವಂತೆ ಪರಮೇಶ್ವರ ಎಂಬ ಪುಡಿ ರೌಡಿ ಎಲಿಮೆಂಟ್ ಒಂದು ದಿನ ರಸ್ತೆಯಲ್ಲಿ ನನ್ನನ್ನು ಅಡ್ಡಗಟ್ಟಿ, “ಗುಬ್ಬಗದ್ದೆ ಕಾಡು ಕಡಿಯೋಕೆ ನಿಂದೇನೋ ತಕರಾರು?… ನಿನ್ನಪ್ಪಂದೇನೋ?…” ಇತ್ಯಾದಿ ಒದರುತ್ತ ನನ್ನ ಮೇಲೆ ಹಲ್ಲೆ ಮಾಡಿದ. ಇದನ್ನು ಖಂಡಿಸಿ ಮಾರನೇ ದಿನವೇ ತಾಲೂಕಿನಾದ್ಯಂತದಿಂದ ಪರಿಸರ ಪ್ರಿಯರು, ಜನಸಾಮಾನ್ಯರು ಕೊಪ್ಪಕ್ಕೆ ಬಂದು ದೊಡ್ಡ ಪ್ರತಿಭಟನೆ ನಡೆಸಿದರು. ಮುಂದೆ, ಈ ವಿಚಾರದ ಜೊತೆ, ಕಳ್ಳ ಸಾರಾಯಿ ಅಂಗಡಿಯ ವಿರುದ್ಧ ನಡೆಯುತ್ತಿದ್ದ ಇನ್ನೊಂದು ಹೋರಾಟದ ಕಾರಣವೂ ಸೇರಿ, ಟಿಂಬರ್ ಮತ್ತು ಸಾರಾಯಿ ಕಂಟ್ರಾಕ್ಟರುಗಳು ನನ್ನ ವಿರುದ್ಧ ಬಿದರಗೋಡಿನ ಹೊಸಳ್ಳಿ ವೆಂಕಟೇಶ ಎಂಬ ರೌಡಿಗೆ ಸುಪಾರಿ ಕೊಟ್ಟರು; ನಾನು 20 ಎಂಎಂ ರಾಡ್‌ನಿಂದ ಏಟು ತಿಂದರೂ, ಪವಾಡಸದೃಶವಾಗಿ ತಲವಾರ್ ಹೊಡೆತದಿಂದ ತಪ್ಪಿಸಿಕೊಂಡಿದ್ದೂ ಆಯಿತು. ಮೇಲ್ಕಂಡ ಮೂರೂ ಸಂದರ್ಭಗಳಲ್ಲಿ ಕಂಟ್ರಾಕ್ಟರುಗಳ ಕಾಂಚಾಣ ಸಖತ್ತಾಗಿ ಕೆಲಸ ಮಾಡಿತ್ತು.

ಇಷ್ಟೇ ಅಲ್ಲ, ಅದೇ ಸಮಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರೂ ತಾಲೂಕುಗಳ ವ್ಯಾಪ್ತಿಯ ಸಮಾನ ಮನಸ್ಕರು ಸೇರಿ ಕ್ಷೇತ್ರದ ವಿವಿಧೆಡೆ ಏರ್ಪಡಿಸಿದ್ದ ʻಕರ್ನಾಟಕ ಪ್ರಗತಿ ರಂಗʼದ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಅವರನ್ನೂ ಕಾಡಿಗೆ ಕರೆದೊಯ್ದು, ಅಲ್ಲಿನ ವಿನಾಶವನ್ನು ತೋರಿಸಿದಾಗ ಕಳವಳ ಪಟ್ಟ ಅವರುಗಳು ನಮ್ಮಗಳ ಪ್ರಯತ್ನಗಳನ್ನು ಮನಃಪೂರ್ವಕ ಶ್ಲಾಘಿಸಿ ಬೆಂಬಲಿಸಿದರು. ಅದೇ ಸಮಯದಲ್ಲಿ ಕೈಗಾ ಅಣುಸ್ಥಾವರದ ವಿರುದ್ಧ ದೊಡ್ಡಮಟ್ಟದ ಚಳವಳಿ ನಡೆಯಿತು: ಅಲ್ಲಿಗೂ ಒಂದು ಟಿಟಿ ವಾಹನ ಬುಕ್ ಮಾಡಿ ಕಾರ್ಯಕರ್ತರ ತಂಡವನ್ನು ಕಳಿಸಿಕೊಟ್ಟೆವು. ಆ ವರ್ಷ ಸಂಸತ್ ಚುನಾವಣೆಗೆ ಶಿವರಾಮ ಕಾರಂತರು ಕೈಗಾ ಮತ್ತು ಪರಿಸರ ಚಳವಳಿಯ ಪರವಾಗಿ ಸ್ಪರ್ಧಿಸಿದ್ದರು. ಅವರ ಪ್ರಚಾರಕ್ಕೂ ಒಂದು ಟಿಟಿ ತುಂಬ ವಾಲಂಟಿಯರ್‌ಗಳನ್ನು ಕಳಿಸಿಕೊಟ್ಟೆವು. ನಾಗೇಶ ಹೆಗಡೆ ಅವರನ್ನು ಕರೆಸಿ, ಅಣುಸ್ಥಾವರಗಳಿಂದಾಗುವ ದುರಂತ/ಅಪಾಯಗಳನ್ನು ವಿವರಿಸುವ ಅವರ ಅದ್ಭುತವಾದ ಸ್ಲೈಡ್ ಶೋ ಏರ್ಪಡಿಸಿದೆವು.

govinde gowda1
ಮಾಜಿ ಶಾಸಕ ಗೋವಿಂದ ಗೌಡ

ಒಟ್ಟಿನಲ್ಲಿ, ಸ್ಥಳೀಯ ಹಳ್ಳಿಗರ ಪಟ್ಟುಬಿಡದ ಛಲ, ಸುತ್ತಮುತ್ತಲ ಊರುಗಳ ಹೃದಯವಂತರ ಅಖಂಡ ಬೆಂಬಲ, ಶಾಸಕ ಗೋವಿಂದ ಗೌಡರ ಪ್ರೋತ್ಸಾಹ, ನಾಡಿನ ವಿವಿಧೆಡೆಯ ಪರಿಸರ ಪ್ರಿಯರ ನೆರವು ಎಲ್ಲವೂ ಸೇರಿ ಒಂದು ಜನಹೋರಾಟ ಸಂಪೂರ್ಣ ಯಶಸ್ವಿಯಾಯಿತು.

ಕೊನೆಗೊಂದು ವಿಶೇಷ ಮಾಹಿತಿ: ರಾತ್ರಿ ಹೊತ್ತಿನಲ್ಲಿ ರೇಡಿಯಂ ರೀತಿಯ ಹಸಿರು ಬಣ್ಣದ ಮಿಣುಕು ಬೆಳಕು ಚೆಲ್ಲುತ್ತ ಓಡಾಡುವ ʻಮಿಂಚುಹುಳʼಗಳನ್ನು ಎಲ್ಲರೂ ನೋಡಿದೀವಲ್ಲ. ಅವು ಸಾಮಾನ್ಯವಾಗಿ ಯಾವುದೇ ಕ್ರಮವಿಲ್ಲದೆ ಹೇಗೆಬೇಕೋ ಹಾಗೆ ಮಿಣುಕುತ್ತ ಓಡಾಡಿಕೊಂಡಿರುತ್ತವೆ. ಆದರೆ ನಮ್ಮ ಗುಬ್ಬಗದ್ದೆ ಕಾಡಿನಲ್ಲಿ ಅವುಗಳದ್ದೊಂದು ವಿಶೇಷ ʻಜುಗಲ್ಬಂದಿʼ ನಡೆಯುತ್ತೆ. ಇಡೀ ಕಾಡಿನಾದ್ಯಂತ ಸಾವಿರಾರು ಮಿಂಚುಹುಳುಗಳು ಎರಡು ʻಪಾರ್ಟಿʼಯಂತಾಗಿ, ಒಂದೊಂದು ಪಾರ್ಟಿ ಒಂದೊಂದು ಸರತಿಯಂತೆ ಏಕಕಾಲದಲ್ಲಿ ಬೆಳಕು ಹಚ್ಚುವುದು-ಆರಿಸುವುದು ಮಾಡುತ್ತವೆ – ಇದು ಗೋಡೆ ಗಡಿಯಾರದಲ್ಲಿ ಎಡಕ್ಕೂ ಬಲಕ್ಕೂ ಓಲಾಡುವ ಲೋಲಕದಂತೆ ಕಾಣುತ್ತೆ. ಈ ಜುಗಲ್ಬಂದಿ ಇಡೀ ರಾತ್ರಿ ನಡೆಯುತ್ತದೆ. ನೋಡಲು ಕಣ್ಣಿಗೊಂದು ಹಬ್ಬ.

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X