ʻಬೀದರ್ನಲ್ಲಿ ತಕ್ಷಣ ಮಾಲಿನ್ಯವನ್ನು ತಡೆಗಟ್ಟಬೇಕು, ಕರ್ನಾಟಕದಲ್ಲಿ ನಿಮ್ಮ ಮಾಲಿನ್ಯ ಹರಡುವುದನ್ನು ಸಹಿಸುವುದಿಲ್ಲ, ಕೂಡಲೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ತೀವ್ರವಾದ ದಾಳಿ ನಡೆಸಲಾಗುವುದೆಂದು ನಿಮ್ಮ ಮಾಲೀಕರಿಗೆ ತಿಳಿಸಿ…ʼ ಎಂದು ʻಖಡಕ್ಕಾಗಿʼ ತಾಕೀತು ಮಾಡಲಾಯಿತು. ಒಂದು-ಒಂದೂವರೆ ನಿಮಿಷದೊಳಗೆ ಎಲ್ಲ ಮುಗಿಸಿದ ತಂಡ ತಣ್ಣಗೆ ಕೆಳಗಿಳಿದು ಜನಜಂಗುಳಿಯಲ್ಲಿ ಬೆರೆತುಹೋಯಿತು…
(ಮೊದಲಿನ 2 ಭಾಗಗಳಲ್ಲಿ: 1990ರ ದಶಕದ ಆರಂಭದಲ್ಲಿ ಬೀದರ್ ನಗರಕ್ಕೆ ಕೇವಲ 7 ಕಿ.ಮೀ. ಸಮೀಪದಲ್ಲಿ 1760 ಎಕರೆ ವಿಸ್ತೀರ್ಣದ ʻಕೊಳ್ಹಾರ ಕೈಗಾರಿಕಾ ಪ್ರದೇಶʼದಲ್ಲಿ ಹತ್ತಾರು ರಾಸಾಯನಿಕ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅವುಗಳ ನಿರಂತರ ಮಾಲಿನ್ಯದಿಂದಾಗಿ ಸುತ್ತಲಿನ ಎಂಟು-ಹತ್ತು ಹಳ್ಳಿಗಳಲ್ಲಿ ವ್ಯಾಪಕ ವಿನಾಶ ಉಂಟಾಗತೊಡಗಿತು. ಕರ್ನಾಟಕ ವಿಮೋಚನಾ ರಂಗವು ಮಾಲಿನ್ಯದ ವಿರುದ್ಧದ ರೈತರ ಹೋರಾಟಕ್ಕೆ ಮುಂದಾಳತ್ವ ವಹಿಸಿತು. ಸಮಸ್ಯೆ ಪರಿಹರಿಸಲು ಒತ್ತಾಯಿಸಿ 1994ರ ಫೆಬ್ರವರಿ 27ರಂದು ದೊಡ್ಡ ಪ್ರತಿಭಟನೆಯೊಂದಿಗೆ ಸುದೀರ್ಘ ಹೋರಾಟ ಆರಂಭವಾಯಿತು. ಅನೇಕ ಸುತ್ತಿನ ಪ್ರತಿಭಟನೆಗಳು, ಜಂಟಿ ಸಭೆಗಳ ನಂತರವೂ ಕಂಪನಿಗಳು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಪಾರ ಸಂಖ್ಯೆಯಲ್ಲಿ ಜಾನುವಾರುಗಳ ಸಾವು, ಬೆಳೆ ನಾಶ ಮುಂದುವರಿದಾಗ, ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕೆಂದು ರೈತಾಪಿ ಜನತೆ ಒಕ್ಕೊರಲಿನಿಂದ ಆಗ್ರಹಿಸಿದರು. ಈ ನಡುವೆ…) ಮುಂದೆ ಓದಿ:
ಒಂದು ಮಿಂಚಿನ ʻಕಾರ್ಯಾಚರಣೆʼ!
ಜನರಿಗೆ ಇಷ್ಟೆಲ್ಲ ತೊಂದರೆ ಆಗುತ್ತಿದ್ದರೂ ಕಂಪನಿಗಳ ಮಾಲೀಕರು ಸರ್ಕಾರದ ಜೊತೆ ಸರಿಯಾದ ಮಾತುಕತೆಗೆ ಹಾಜರಾಗುತ್ತಿರಲಿಲ್ಲ, ಹಾಜರಾದರೂ ಸಹ ಯಾವುದೇ ಕಾರ್ಯಸಾಧು ಪರಿಹಾರಗಳ ಜೊತೆ ಬರುತ್ತಿರಲಿಲ್ಲ, ಸರ್ಕಾರದ ಪ್ರಸ್ತಾಪಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿರಲಿಲ್ಲ, ಸರ್ಕಾರದ ಸಂಬಂಧಿತ ಅಧಿಕಾರಿಗಳೂ ಸಹ ಕೆಲವು ಸಲ ನೆಪ ಮಾತ್ರಕ್ಕೆಂಬಂತೆ ಮೀಟಿಂಗ್ ನಡೆಸುತ್ತಿದ್ದರು. ಹೀಗಾಗಿ, ಕಂಪನಿಗಳಿಗೆ ʻಬಿಸಿ ಮುಟ್ಟಿಸಬೇಕುʼ ಎಂದು ಕವಿರಂ ರಾಜ್ಯ ಸಮಿತಿ ಯೋಚಿಸಿತು. ಹಳ್ಳಿಗಳ ಆಯ್ದ ಕೆಲವೇ ಮಂದಿ ಮುಖಂಡರ ಮತ್ತು ಪ್ರಮುಖ ಕಾರ್ಯಕರ್ತರ ಜೊತೆಗೂ ಚರ್ಚಿಸಿ ತೀರ್ಮಾನಕ್ಕೆ ಬರಲಾಯಿತು. ಎಸ್ಓಎಲ್ (ಸೋಲ್) ಕಂಪನಿಯ ಗೋಡೌನ್-ಕಂ-ಮಾರಾಟ ಶಾಖೆಯೊಂದು ಬೆಂಗಳೂರಿನ ಒಂದು ಪ್ರಮಖ ಸ್ಥಳದಲ್ಲಿ ಮೂರ್ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಇರುವುದನ್ನು ಪತ್ತೆ ಮಾಡಿ, ಒಂದು ಮಿಂಚಿನ ಕಾರ್ಯಾಚರಣೆ ನಡೆಸಲಾಯಿತು. ಒಂದು ನಿಗದಿತ ದಿನ ಬೆಳಿಗ್ಗೆ ಹತ್ತೂವರೆ ಹನ್ನೊಂದರ ಹೊತ್ತಿನಲ್ಲಿ ಆರೇಳು ಜನರ ತಂಡ ದಿಡೀರಾಗಿ ಕಚೇರಿ ಹೊಕ್ಕು, ಸಿಬ್ಬಂದಿ ವರ್ಗದವರನ್ನು ಬೇರೊಂದು ಕೋಣೆಗೆ ಕಳಿಸಿ, ಅಲ್ಲಿ ಶೇಖರಿಸಿ ಇಟ್ಟಿದ್ದ ಮಾಲನ್ನೆಲ್ಲ ಮಣ್ಣುಪಾಲು ಮಾಡಿತು; ಪೀಠೋಪಕರಣ, ಕಪಾಟುಗಳು, ಕಂಪ್ಯೂಟರ್ ಮತ್ತಿತರ ಸಲಕರಣೆಗಳನ್ನೂ ಹಾಳುಗೆಡವಿತು. ʻಬೀದರ್‌ನಲ್ಲಿ ತಕ್ಷಣ ಮಾಲಿನ್ಯವನ್ನು ತಡೆಗಟ್ಟಬೇಕು, ಕರ್ನಾಟಕದಲ್ಲಿ ನಿಮ್ಮ ಮಾಲಿನ್ಯ ಹರಡುವುದನ್ನು ಸಹಿಸುವುದಿಲ್ಲ, ಕೂಡಲೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ತೀವ್ರವಾದ ದಾಳಿ ನಡೆಸಲಾಗುವುದೆಂದು ನಿಮ್ಮ ಮಾಲೀಕರಿಗೆ ತಿಳಿಸಿ…ʼ ಎಂದು ʻಖಡಕ್ಕಾಗಿʼ ತಾಕೀತು ಮಾಡಲಾಯಿತು. ಒಂದು-ಒಂದೂವರೆ ನಿಮಿಷದೊಳಗೆ ಎಲ್ಲ ಮುಗಿಸಿದ ತಂಡ ತಣ್ಣಗೆ ಕೆಳಗಿಳಿದು ಜನಜಂಗುಳಿಯಲ್ಲಿ ಬೆರೆತುಹೋಯಿತು.
ಇದು ಬೀದರ್‌ನ ಕಂಪನಿಗಳ ವಲಯದಲ್ಲಿ ದೊಡ್ಡ ಸುದ್ದಿಯಾಯಿತು. ನಮ್ಮ ಹಳ್ಳಿಗಳಲ್ಲಂತೂ ಈ ಸುದ್ದಿ ಬಣ್ಣಬಣ್ಣದ ಗರಿಗಳನ್ನು ಸಿಕ್ಕಿಸಿಕೊಂಡು ಹಾರಾಡಿತು. ಹಳ್ಳಿಯ ಜನರು ಅದನ್ನು ರಸವತ್ತಾಗಿ ವರ್ಣಿಸುತ್ತ ಖುಷಿಪಟ್ಟರು. ಗುಂಪು ದಾಳಿ, ಬೆಂಕಿ ಹಚ್ಚುವ ಯತ್ನ ಮುಂತಾಗಿ ದೊಡ್ಡದೊಡ್ಡ ಸೆಕ್ಷನ್‌ಗಳನ್ನು ಹಾಕಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಯಿತು. ನಾನು ಬೀದರ್ ಬಿಟ್ಟು ಹೋಗಿರಲಿಲ್ಲ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ, ಅದರ ವಿವರಗಳೂ ನನಗೆ ಮುಂಚಿತವಾಗಿ ಗೊತ್ತಿರಲಿಲ್ಲ. ಆದರೂ ಪೊಲೀಸರ ರೂಢಿಯಂತೆ ನನ್ನನ್ನು ಮೊದಲ ಆರೋಪಿಯನ್ನಾಗಿ (ಎ-1) ಮಾಡಿ ರಾಜ್ಯ ಸಮಿತಿಯ ಪದಾಧಿಕಾರಿಗಳೆಲ್ಲರನ್ನೂ ಸಿಲುಕಿಸಲಾಯಿತು.
ʻಹ್ಯಾಂಡ್ಸಪ್! …ʼ
ಅದಾಗಿ ಒಂದು ದಿನ ಬೀದರ್‌ನಲ್ಲಿ ನಾನೂ ಗೆಳೆಯ ಮಾರುತಿ ಭಾವಿದೊಡ್ಡಿಯವರೂ ಪೇಟೆಯಲ್ಲಿ ಹೋಗುತ್ತಿದ್ದಾಗ ರಸ್ತೆಬದಿ ನಿಲ್ಲಿಸಿದ್ದ ಒಂದು ಕಾರಿನಲ್ಲಿದ್ದ ಕೆಲವರು ದಿಡೀರಾಗಿ ನನ್ನ ಮೇಲೆ ಮುಗಿಬಿದ್ದು, ಕಣ್ಣುಮುಚ್ಚಿ ತೆರೆಯುವುದರೊಳಗೆ ಕಾರಿನೊಳಗೆ ತುಂಬಿಕೊಂಡು ಹೈದರಾಬಾದಿನ ರಸ್ತೆಯಲ್ಲಿ ವೇಗವಾಗಿ ಹೋಗಿಬಿಟ್ಟರು. ಬೀದರ್ನಲ್ಲಿ ಹೈದರಾಬಾದಿನ ರೌಡಿ ಗ್ಯಾಂಗ್‌ಗಳಿಗೆ ಸುಪಾರಿ ಕೊಟ್ಟು ಹಲ್ಲೆ/ದಾಳಿ ಮಾಡಿಸುವುದು ಮಾಮೂಲಿ ಸಂಗತಿಯಾಗಿದ್ದು, ಕಾರ್ಖಾನೆಗಳ ಮಾಲೀಕರು ನನ್ನ ಮೇಲೂ ಅಂಥ ದಾಳಿ ಮಾಡಿಸುವ ಸಂಭವವಿದೆ ಎನ್ನುವ ಗುಮಾನಿ ಈಗಾಗಲೇ ಅನೇಕರಲ್ಲಿತ್ತು. ಜೊತೆಗೆ ಆಗ (ಅವಿಭಜಿತ) ಆಂಧ್ರಪ್ರದೇಶದಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ಆಗಾಗ ಪರಸ್ಪರ ದಾಳಿಗಳು ನಡೆಯುತ್ತಿದ್ದು, ಪೊಲೀಸರು ನಕ್ಸಲ್ ಬೆಂಬಲಿಗರೆಂಬ ಸಂಶಯ ಬಂದವರನ್ನು ಎತ್ಹಾಕಿಕೊಂಡು ಹೋಗಿ ಚಿತ್ರಹಿಂಸೆ ನೀಡಿ ʻಎನ್ಕೌಂಟರ್ʼ ಹೆಸರಿನಲ್ಲಿ ಕೊಂದು ಹಾಕುವುದು ಮಾಮೂಲಿ ಸಂಗತಿಯಾಗಿತ್ತು. ನಮ್ಮ ಕವಿರಂ ಕೂಡ ನಕ್ಸಲ್ ಬೆಂಬಲಿತ ಸಂಘಟನೆ ಎಂಬುದು ಪೊಲೀಸರ ಊಹೆಯಾಗಿತ್ತು. ಕಾರಿನಲ್ಲಿದ್ದವರು ಗಟ್ಟಿಮುಟ್ಟಾಗಿ, ಆಂಧ್ರದವರಂತೆ ಕಾಣುತ್ತಿದ್ದರು ಹೊರತು ಕರ್ನಾಟಕದವರಂತೆ ಕಾಣಲಿಲ್ಲ. ಹಾಗಾಗಿ ನಾನು, ಒಂದುವೇಳೆ ಇದು ರೌಡಿಗಳಾಗಿದ್ದರೂ ಎದೆಗುಂದಬಾರದು, ಅಥವಾ ಆಂಧ್ರದ ಪೊಲೀಸರಾಗಿದ್ದಲ್ಲಿ ಎಷ್ಟೇ ಚಿತ್ರಹಿಂಸೆ ಮಾಡಿದರೂ ಕವಿರಂ ವಿಚಾರ ಹೊರತು ಆಗ ನನಗೆ ಗೊತ್ತಿದ್ದ ಬೇರಾವುದೇ ಸಂಗತಿಯನ್ನೂ ಬಾಯಿ ಬಿಡುವುದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿಕೊಂಡು ಸಮಾಧಾನವಾಗಿ ಕೂತೆ.
ಅತ್ತ, ಇದು ರೌಡಿಗಳದೇ ಕೆಲಸ ಎಂದು ಭಾವಿಸಿದ ಮಾರುತಿ ಅವರು ಕಾರ್ ನಂಬರ್ ಗುರುತು ಹಾಕಿಕೊಂಡು, ಕೂಡಲೇ ಹಿರಿಯ ಪತ್ರಕರ್ತರಾದ ʻದಮನ್ʼ ಪಾಟೀಲರ ಬಳಿ ಓಡಿ ವಿಷಯ ಮುಟ್ಟಿಸಿದರು, ಅವರು ತಕ್ಷಣ ಎಸ್ಪಿ ಸಂಜಯವೀರ್ ಸಿಂಗ್ ಅವರಿಗೆ ಫೋನ್ ಮಾಡಿ, ನಾಗರಾಜನಿಗೆ ಏನಾದರೂ ಆದರೆ ಬೀದರ್‌ನಲ್ಲಿ ಬಹಳ ಸೂಕ್ಷ್ಮ ಪರಿಸ್ಥಿತಿ ಉಂಟಾಗಬಹುದು ಎಂದು ತಿಳಿಸಲಾಗಿ, ಎಸ್ಪಿಯವರು ಬೀದರ್-ಹೈದರಾಬಾದ್ ಹೆದ್ದಾರಿಯ ಟೋಲ್ ಗೇಟ್ನ ಕಾವಲು ಪೊಲೀಸರಿಗೆ, ತಾನು ಸ್ಥಳಕ್ಕೆ ಬರುವವರೆಗೆ ಸದರಿ ಕಾರನ್ನು ತಡೆಹಿಡಿಯುವಂತೆ ಆದೇಶಿಸಿದರು. ಅವರು ಗೇಟ್ ಬಂದ್ ಮಾಡಿಕೊಂಡಿದ್ದು, ಕಾರು ಅಲ್ಲಿಗೆ ತಲುಪಿದ ತಕ್ಷಣ ಬದಿಗೆ ನಿಲ್ಲಿಸಲು ಹೇಳಿದರು. ಕಾರಿನಲ್ಲಿದ್ದ ಒಬ್ಬ ಗಟ್ಟಿಮುಟ್ಟಾದ ವ್ಯಕ್ತಿ ಹೊರಬಂದು ತನ್ನ ಗುರುತಿನ ಚೀಟಿ ತೋರಿಸಲೆಂದು ಎರಡು ಹೆಜ್ಜೆ ಮುಂದಿಡುತ್ತಿದ್ದಂತೆ ಕಾವಲಿನ ಪೊಲೀಸ್ ತನ್ನ ರೈಫಲ್ಲನ್ನು ʻಖಟ್ ಖಟ್ʼ ಎಂದು ಬಾರ್ ಮಾಡಿ, ʻಹ್ಯಾಂಡ್ಸಪ್ʼ ಎನ್ನುತ್ತ ಆತನಿಗೆ ಗುರಿ ಹಿಡಿದುಬಿಟ್ಟ! ಆತ ಹೆಜ್ಜೆ ಹಿಂದಿಟ್ಟು, ತಾವುಗಳು ಬೆಂಗಳೂರಿನ ಪೊಲೀಸರೆಂದು ಗುರುತು ಹೇಳಿದನಾದರೂ, ಎಸ್ಪಿಯ ಆದೇಶ ಇರುವುದನ್ನು ತಿಳಿಸಿ ಕಾರನ್ನು ನಿಲ್ಲಿಸಿಕೊಂಡರು.
ನಂತರ ಎಸ್ಪಿ ಸ್ಥಳಕ್ಕೆ ಬಂದು, ಕಾರಿನಲ್ಲಿ ಬಂದಿದ್ದವರು ಬೆಂಗಳೂರಿನ ಪೊಲೀಸರೇ ಹೌದು ಎಂಬುದನ್ನು ಖಚಿತ ಪಡಿಸಿಕೊಂಡು ಕಾರನ್ನು ಹೋಗಗೊಟ್ಟರು. ನನಗೆ ದೈಹಿಕವಾಗಿ ಏನೂ ಮಾಡದಂತೆ ಅವರಿಗೆ ಕಿವಿಮಾತನ್ನೂ ಹೇಳಿದರು. ಇದಕ್ಕೆ ಬಹುಶಃ ದಮನ್ ಪಾಟೀಲರ ಫೋನ್ ಕಾರಣವಾಗಿದ್ದಿರಬಹುದು. ನನ್ನನ್ನು ಬೆಂಗಳೂರು ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂಬುದು ತಿಳಿದಾಗ ನಾನು, ʻಸುಪ್ರೀಂ ಕೋರ್ಟ್ ಆದೇಶದಂತೆ ನನ್ನ ಕುಟುಂಬಕ್ಕೆ ಮತ್ತು ನಿಕಟವರ್ತಿಗಳಿಗೆ ನನ್ನನ್ನು ಪೊಲೀಸರು ಪಿಕಪ್ ಮಾಡಿರುವುದನ್ನು ತಿಳಿಸಲು ನನಗೆ ಅವಕಾಶ ಕೊಡಬೇಕುʼ ಎಂದು ಒತ್ತಾಯಿಸಿದೆ. ಆಗೆಲ್ಲಾ ಮೊಬೈಲ್ ಫೋನ್‌ಗಳಿರಲಿಲ್ಲ, ಏನಿದ್ದರೂ ಟ್ರಂಕ್ ಕಾಲ್ ಹಾಗೂ ಟೆಲಿಫೋನ್ ಬೂತ್‌ಗಳು ಮಾತ್ರ. ಹಾಗೆ ಒಂದೆರಡು ಸಲ ಫೋನ್ ಬೂತ್ ಕಂಡಾಗ ಕಾರು ನಿಲ್ಲಿಸಲು ಒತ್ತಾಯಿಸಿದೆ, ಆದರೆ ಪೊಲೀಸರು ಕಿವಿಗೊಡಲಿಲ್ಲ. ಆಗ ನಾನು, “ನೋಡಿ, ನಾನು ಹೇಳುವುದು ಹೇಳಿದೀನಿ. ನಾವು ಹೋರಾಟಗಾರರು, ಕ್ರಿಮಿನಲ್ಗಳಲ್ಲ. ನಮಗೂ ಬೇಕಾದವರು ಸರ್ಕಾರದ ಮತ್ತು ನಿಮ್ಮ ಇಲಾಖೆಯ ಉನ್ನತ ಹಂತಗಳಲ್ಲಿ ಇದ್ದಾರೆ. ಅಲ್ಲದೆ ಕೋರ್ಟಿನಲ್ಲೂ ಈ ವಿಷಯ ನ್ಯಾಯಾಧೀಶರ ಗಮನಕ್ಕೆ ತರ್ತೀನಿ. ಮಿಕ್ಕಿದ್ದು ನಿಮಗೆ ಬಿಟ್ಟಿದ್ದು” ಎಂದು ಹೇಳಿ ಆರಾಮಾಗಿ ಒರಗಿಕೊಂಡು ಕಣ್ಮುಚ್ಚಿ ಕೂತುಬಿಟ್ಟೆ. ಸ್ವಲ್ಪ ದೂರ ಹೋದಾಗ ಒಂದು ಬೂತ್ ಕಾಣುತ್ತಿದ್ದಂತೆ ಅವರಲ್ಲೇ ಒಬ್ಬರು ದಡಬಡಿಸಿ, ʻಏ ಏ ತರುಬು ತರುಬು…ʼ ಎಂದು ಹೇಳಿ ಗಾಡಿ ನಿಲ್ಲಿಸಿದರು. ನಾನು ದಮನ್ ಪಾಟೀಲರಿಗೆ ಫೋನ್ ಮಾಡಿ, ನನ್ನನ್ನು ಎತ್ಹಾಕಿಕೊಂಡು ಬಂದಿರುವುದು ಬೆಂಗಳೂರಿನ ಪೊಲೀಸರು ಎಂಬುದನ್ನು ತಿಳಿಸಿ, ನಾನು ಆರಾಮವಾಗಿರುವುದಾಗಿ ಗುಲ್ಬರ್ಗದಲ್ಲಿರುವ ನನ್ನ ಕುಟುಂಬಕ್ಕೂ ತಿಳಿಸುವಂತೆ ಕೇಳಿಕೊಂಡೆ.
ದಾರಿಯಲ್ಲಿ ಪೊಲೀಸರು ರಾತ್ರಿ ಒಳ್ಳೆಯ ಊಟ ಮಾಡಿಸಿದರು. ರಾತ್ರಿಯಿಡೀ ಪ್ರಯಾಣ ಮಾಡಿ ಬೆಳಗಿನ ಜಾವ ಬೆಂಗಳೂರು ತಲುಪಿದೆವು. ಅಷ್ಟರಲ್ಲಿ ಪರಸ್ಪರ ಸ್ನೇಹಿತರಾಗಿಬಿಟ್ಟಿದ್ದೆವು. ಅಶೋಕನಗರ ಠಾಣೆಯ ಒಂದು ಕೊಠಡಿಯಲ್ಲಿ ದೀವಾನ್ ಮೇಲೆ ಮಲಗಿ ರೆಸ್ಟ್ ಮಾಡಲು ನನಗೆ ತಿಳಿಸಿ, ಒಂಬತ್ತು ಗಂಟೆಗೆ ಬರುವುದಾಗಿ ಹೇಳಿ ಅವರುಗಳು ಹೊರಟುಹೋದರು. ನಾನು ಒಳ್ಳೆಯ ನಿದ್ದೆ ಮಾಡಿ ಎದ್ದು ಫ್ರೆಶಪ್ ಆಗುವ ಹೊತ್ತಿಗೆ ಇನ್ಸ್ಪೆಕ್ಟರ್ ಬಂದರು. ನನ್ನನ್ನು ಕೋರ್ಟಿಗೆ ಹಾಜರುಪಡಿಸುವ ಹೊತ್ತಿಗೆ ನಮ್ಮ ರಾಜ್ಯ ಸಮಿತಿಯ ಇನ್ನೊಬ್ಬ ಕಾರ್ಯದರ್ಶಿಯಾಗಿದ್ದ ಪಾರ್ವತೀಶ್ ಠಾಣೆಗೆ ಬಂದರು. ದಮನ್ನರು ರಾತ್ರಿಯೇ ರಾಜ್ಯ ಸಮಿತಿಗೆ ವಿಷಯ ತಿಳಿಸಿದ್ದರು, ಹಾಗಾಗಿ ರಾಜ್ಯ ಸಮಿತಿಯವರು ನನಗೆ ಜಾಮೀನು ಕೊಡಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ನಮಗೆ ಜೈಲು-ಬೇಲಿನ ಪ್ರಕ್ರಿಯೆಯೆಲ್ಲ ತೀರಾ ಹೊಸದು. ಕೋರ್ಟಿನಲ್ಲಿ ಶ್ಯೂರಿಟಿ ನೀಡಿದ ಕೂಡಲೇ ಜಾಮೀನಿನಲ್ಲಿ ಬಿಡುಗಡೆ ಮಾಡಿಬಿಡುತ್ತಾರೆ ಎಂದುಕೊಂಡಿದ್ದೆವು. ಆದರೆ ಬೆಂಕಿ ಹಚ್ಚುವ ಪ್ರಯತ್ನ ಮುಂತಾದ ಸೆಕ್ಷನ್ಗಳು ಇದ್ದ ಕಾರಣ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಬೇಲ್ ಸಿಗಲಿಲ್ಲ. 15 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಿಬಿಟ್ಟರು. ʻಕರ್ನಾಟಕ ವಿಮೋಚನಾ ರಂಗʼದ 6 ವರ್ಷಗಳ ಇತಿಹಾಸದಲ್ಲಿ ಜೈಲುವಾಸಿಯಾದ ಮೊದಲ ಹೋರಾಟಗಾರ ನಾನೇ ಆಗಿದ್ದೆ! ಸ್ನೇಹಿತರು ನನಗೆ ಚಪ್ಪಲಿ, ಬಟ್ಟೆಬರೆ, ಟೂತ್ ಪೇಸ್ಟ್-ಬ್ರಶ್ ಮುಂತಾದ ಅಗತ್ಯ ವಸ್ತುಗಳನ್ನು ತಂದುಕೊಟ್ಟರು. ಕವಿರಂನ ಬೆಂಗಳೂರು ನಗರ ಕಾರ್ಯದರ್ಶಿಯಾಗಿದ್ದ ಗೆಳೆಯ ಶಶಿಕಾಂತ ಯಡಹಳ್ಳಿ (ರಂಗಕರ್ಮಿ ಮತ್ತು ಬರಹಗಾರರಾಗಿ ಖ್ಯಾತಿ ಗಳಿಸಿದ್ದಾರೆ) ದಿನವೂ ಮನೆಯಿಂದ ಊಟ-ನಾಶ್ಟಾ ತಂದುಕೊಡುವುದಾಗಿ ಹೇಳಿದರು. ಆದರೆ, “ಜೈಲಿನ ಸಾಮಾನ್ಯ ಕೈದಿಗಳು ಉಣ್ಣುವುದನ್ನೇ ನಾನೂ ಊಟ ಮಾಡುತ್ತೇನೆ” ಎಂದು ಹೇಳಿ ಅವರ ಕಳಕಳಿಯ ಕೊಡುಗೆಯನ್ನು ನಯವಾಗಿ ನಿರಾಕರಿಸಿದೆ.
ಸೆಂಟ್ರಲ್ ಜೈಲಿನಲ್ಲಿ ಎರಡು ವಾರ
ಮಧ್ಯಾನ್ಹ 1 ಗಂಟೆ ಸುಮಾರಿಗೆ ನನ್ನನ್ನು ಜೈಲಿಗೆ ಕರೆದೊಯ್ಯಲಾಗಿತ್ತು. ಜೈಲಿನ ನಿಯಮದಂತೆ, ಒಳಬರುವ ಕೈದಿಗಳ ವಿವರಗಳನ್ನು ಅಲ್ಲಿನ ʻರಿಸೆಪ್ಶನ್ ಕೌಂಟರ್ʼ(!)ನಂತಹ ಮೊದಲ ಕೊಠಡಿಯಲ್ಲಿ ದಾಖಲಿಸಿಕೊಂಡು, ನಮ್ಮ ಬಳಿಯಿರುವ ಹಣ-ವಸ್ತುಗಳನ್ನೆಲ್ಲ ದಾಖಲಿಸಿ ತೆಗೆದಿಟ್ಟುಕೊಳ್ಳುತ್ತಾರೆ. ಅಂತಹ ಹಣದ ಗತಿ ಮತ್ತೇನಾಗುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಹಾಗೆಯೇ ನನ್ನ ಬಳಿಯೂ ಮುನ್ನೂರ ರೂ.ಗಳಷ್ಟು ಹಣ ಇತ್ತು. ಅಭ್ಯಾಸ ಬಲದಂತೆ ನನ್ನ ಹಣವನ್ನೂ ʻಒಳಗೆʼ ಹಾಕಲು ಒಬ್ಬ ಸಿಬ್ಬಂದಿ ನೋಡಿದಾಗ ಇನ್ನೊಬ್ಬರು ʻಹೇ ಹೇ, ಪತ್ರಕರ್ತರಂತೆ, ಎಂಟ್ರಿ ಮಾಡಿಬಿಡುʼ ಎಂದು ಆತನನ್ನು ಎಚ್ಚರಿಸಿದರು. ವಿದ್ಯಾವಂತ, ಪತ್ರಕರ್ತ ಎಂಬುದನ್ನು ಗಮನಿಸಿದ ಜೈಲರ್ ಸುಂದರ್ ಎಂಬವರು ನನ್ನ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ, ʻಬೆಂಗಳೂರಲ್ಲಿ ನಿಮ್ಮವರು ಯಾರಾದರೂ ಇದ್ದಾರಾ?ʼ ಎಂದು ವಿಚಾರಿಸಿದರು. ನಾನು ಕವಿರಂ ಮತ್ತು ಬಂಜಗೆರೆ ಜಯಪ್ರಕಾಶ್ ಹೆಸರು ಹೇಳಿದಾಗ ಅವರು, “ಬಂಜಗೆರೆ ಜಯಪ್ರಕಾಶ್ ಮೈಸೂರು ವಿವಿಯಲ್ಲಿ MSW ಓದುತ್ತಿದ್ದಾಗ ಆತ ನನಗಿಂತ ಒಂದು ವರ್ಷ ಜೂನಿಯರ್, ಒಳ್ಳೆಯ ಕವಿ, ಮಾತುಗಾರ” ಎಂದು ಜ್ಞಾಪಿಸಿಕೊಂಡು, “ಇವತ್ತೊಂದು ದಿನ ಬ್ಯಾರಕ್ಕಿನಲ್ಲಿರಿ. ನಾಳೆ ಆಸ್ಪತ್ರೆಗೆ ಶಿಫ್ಟ್ ಮಾಡಿಸ್ತೀನಿ” ಎಂದು ಹೇಳಿದರು. ಅದರಂತೆ ಮರುದಿನ ಶಿಫ್ಟ್ ಮಾಡಿಸಿದರು.
ಜೋಳಿಗೆ | ಪಟ್ಟು ಬಿಡದೆ ಹೋರಾಡಿ ದಟ್ಟ ಕಾಡು ಉಳಿಸಿಕೊಂಡ ರೈತಾಪಿ ಜನ
ಜೈಲಿನಲ್ಲಿ ʻಆಸ್ಪತ್ರೆʼ ಅಂತ ಒಂದು ಇರುತ್ತೆ. ಸುಮಾರು 20 ಮಂಚಗಳು ಇದ್ದಿರಬಹುದಾದ ಅದರ ವಾರ್ಡಿನಲ್ಲಿ ರೋಗಿಗಳು ಇದ್ದಿದ್ದು ನನಗೆ ಅಷ್ಟಾಗಿ ಕಾಣಲಿಲ್ಲ (ಸಣ್ಣಪುಟ್ಟ ಸಮಸ್ಯೆಗಳಿದ್ದವರು ಒಬ್ಬಿಬ್ಬರು ಇದ್ದರೇನೋ). ಬದಲಿಗೆ ಅದು ಅಕಸ್ಮಾತ್ ಜೈಲುಪಾಲಾಗುವ ಮೇಲ್ಮಧ್ಯಮ ವರ್ಗದ ಪ್ರಭಾವಿಗಳು, ಸ್ವಲ್ಪ ʻಸ್ಟೇಚರ್ʼ ಇರುವ ರೌಡಿಗಳು ಮುಂತಾದವರು (ಅವರು ಜೈಲಿನ ಮೇಲಧಿಕಾರಿಗಳಿಗೆ ಯಥೇಚ್ಛವಾಗಿ ಕೈಬಿಸಿ ಮಾಡಿದರೆ) ಬ್ಯಾರಕ್ಕೆಂಬ ನರಕ ವಾಸವನ್ನು ತಪ್ಪಿಸಿಕೊಳ್ಳುವ ಒಂದು ಸ್ಥಳವಾಗಿ ನನಗೆ ಕಂಡಿತು. ಶ್ರೀಮಂತ ವರ್ಗದವರು, ದೊಡ್ಡ ರಾಜಕಾರಣಿಗಳು ಸಾಮಾನ್ಯವಾಗಿ (ಶೇ. 99 ಭಾಗ) ಜೈಲಿಗೆ ಹೋಗುವುದಿಲ್ಲವಲ್ಲ. ಮೇಲಿನ ಕೋರ್ಟು, ಅದರ ಮೇಲಿನ ಕೋರ್ಟು… ಎಲ್ಲಾದರೊಂದು ಕಡೆ ಅವರಿಗೆ ತಡೆಯಾಜ್ಞೆಯೋ ವಿನಾಯ್ತಿಯೋ ಸಿಗುತ್ತಲ್ಲ. ಹೆಚ್ಚೆಂದರೆ ಅವರು ಅಂತಹ ʻರಿಲೀಫ್ʼ ಸಿಗುವವರೆಗೆ ಕೆಲವು ದಿನ ʻಅಬ್ಸ್ಕಾಂಡ್ʼ ಆಗಿರುತ್ತಾರೆ ಅಷ್ಟೆ ತಾನೆ? ಹೀಗೆ ಈ ಆಸ್ಪತ್ರೆ ಎಂಬಲ್ಲಿಗೆ ಸೇರಿದರೆ ಮಲಗಲು ಮಂಚದ ಸೌಕರ್ಯ ಸಿಗುತ್ತದೆ ಹಾಗೂ ಬ್ಯಾರಕ್ಕಿನ ಕಕ್ಕಸನ್ನು ಮತ್ತು ಇಡೀ ಜೈಲಿನ ಆವರಣವನ್ನು ಸ್ವಚ್ಛಗೊಳಿಸುವ ʻಡ್ಯೂಟಿʼಗಳಿಂದ ವಿನಾಯ್ತಿ ದೊರಕುತ್ತದೆ. ಈ ಸೌಕರ್ಯವನ್ನು ಸುಂದರ್ ಅವರು ಮುಂದಿನ 14 ದಿನಗಳ ವಾಸದಲ್ಲಿ ನನಗೂ ಒದಗಿಸಿ ಉಪಕಾರ ಮಾಡಿದರು. (ಈ ʻಜೈಲುಲೋಕʼವನ್ನು ಕುರಿತು ಮುಂದೆ ಎಂದಾದರೂ ಪ್ರತ್ಯೇಕವಾಗಿ ಬರೆದೇನು.)
ಈ ನಡುವೆ, ನನ್ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕವಿರಂನ ವಿವಿಧೆಡೆಯ ಘಟಕಗಳು ಪ್ರತಿಭಟನೆಗಳನ್ನು ನಡೆಸಿದವು. ಆ ಪೈಕಿ, ಸಿಂಧನೂರಿನ ಸಂಗಾತಿಗಳು ಹುಟ್ಟುಹಾಕಿದ “ಸಿರಿಮನೆಯನ್ನು ಸೆರೆಮನೆಗೆ ತಳ್ಳಿದ ಸರ್ಕಾರಕ್ಕೆ ಧಿಕ್ಕಾರ!” ಎಂಬ ಘೋಷಣೆ ಕವಿರಂ ಇದ್ದಲ್ಲೆಲ್ಲ ಮನೆಮಾತಾಗಿ ಬಹಳ ಸಮಯ ಪ್ರಚಾರದಲ್ಲಿತ್ತು, ಹಲವಾರು ಕಡೆ ಗೋಡೆಗಳ ಮೇಲೂ ರಾರಾಜಿಸಿತು.
ನಂತರ ಸೆಶನ್ಸ್ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆದು, 14 ದಿನಗಳ ನಂತರ ನನಗೆ ಬೇಲಾಯಿತು. ಆ ಮಧ್ಯದಲ್ಲಿ ಬಹುಶಃ ರಾಷ್ಟ್ರೀಯ ಬಸವ ದಳದ ಯಾವುದೋ ಕಾರ್ಯಕ್ರಮಕ್ಕೆ ಅಂತ ನೆನಪು, ಬೀದರ್ನ ನಮ್ಮ ಹಳ್ಳಿಗಳಿಂದ ಬಂದಿದ್ದ ಹಲವರು ನನ್ನನ್ನು ಕಾಣಲು ಜೈಲಿಗೆ ಬಂದರು. ಸರಳುಗಳ ಹಿಂದೆ ಬಂದಿಯಾಗಿದ್ದ ನನ್ನನ್ನು ಕಂಡು ಅವರಲ್ಲಿ ಹಲವರು ನನ್ನ ಕೈ ಹಿಡಿದುಕೊಂಡು, “ಎಲ್ಲಿಂದಲೋ ಬಂದು ನಮ್ಮ ಸಲುವಾಗಿ ಜೇಲಖಾನಿ ಪಾಲಾದಿಯಲ್ಲಪ್ಪಾ ತಂದೆ!” ಎನ್ನುತ್ತ ಕಣ್ಣಿರು ಹಾಕಿದರು. “ಏನೂ ಚಿಂತಿಸಬೇಡಿ, ನಾನು ಆರಾಮಾಗಿದೀನಿ. ಬೇಗ ವಾಪಸ್ ಬಂದುಬಿಡ್ತೀನಿ” ಅಂತ ನಾನೇ ಅವರಿಗೆ ಧೈರ್ಯ ಹೇಳಿ ಕಳಿಸಬೇಕಾಯಿತು. ಆನಂತರ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್ ಮತ್ತಿತರರನ್ನೂ ಬಂಧಿಸಲಾಯಿತು, ಒಂದೆರಡು ದಿನಗಳಲ್ಲಿ ಅವರಿಗೂ ಜಾಮೀನಾಯಿತು.
ಇದನ್ನೂ ಓದಿ ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ- 1
ಬಳಿಕ, ಎಲ್ಲ ಕನ್ನಡ ಚಳವಳಿಗಾರರ ಪ್ರಕರಣಗಳನ್ನೂ ಉಚಿತವಾಗಿ ನಡೆಸಿಕೊಡುವ ಜನಪ್ರಿಯ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯ ಅವರ ಬಳಿ ನಮ್ಮ ಕೇಸನ್ನು ಒಯ್ದೆವು. ಅವರು ಅದನ್ನು ಒಪ್ಪಿಕೊಂಡು ತಮ್ಮ ಒಬ್ಬ ಹಿರಿಯ ಸಹೋದ್ಯೋಗಿ ಬಸವರಾಜು ಅವರಿಗೆ ವಹಿಸಿದರು. ಮೂರ್ನಾಲ್ಕು ವರ್ಷ ಕೇಸ್ ನಡೆದು, ʻಸಾಕ್ಷ್ಯಾಧಾರದ ಕೊರತೆʼಯ ಕಾರಣಕ್ಕೆ ಖುಲಾಸೆಯಾಯಿತು. ಆಗೊಂದು ತಮಾಷೆ ನಡೆಯಿತು! ಖುಲಾಸೆ ಆಗಿ ಎಲ್ಲರೂ ಹೊರಗೆ ಬರುತ್ತಿದ್ದಂತೆ, ಕೇಸಿನ ಪ್ರಧಾನ ಸಾಕ್ಷಿ ಆಗಿದ್ದ ಬೆಂಗಳೂರಿನ ಎಸ್ಓಎಲ್ ಮಾರಾಟ ಶಾಖೆಯ ಮ್ಯಾನೇಜರ್ ನಮ್ಮವರಲ್ಲಿ ಒಬ್ಬರನ್ನು ಉದ್ದೇಶಿಸಿ ಇಂಗ್ಲೀಷಿನಲ್ಲಿ, “ಹೇ ಮ್ಯಾನ್, ಅವತ್ತು ಅಟ್ಯಾಕ್ ಅನ್ನು ಲೀಡ್ ಮಾಡಿದ್ದು ನೀವೇ. ನನಗೆ ನಿಮ್ಮ ಗುರುತು ಚೆನ್ನಾಗಿ ನೆನಪಿದೆ. ನಿಮ್ಮ ಜೊತೆ ಸಂಘರ್ಷ ಯಾಕೆ ಅಂತ ಜಡ್ಜ್ ಮುಂದೆ ನಿಮ್ಮನ್ನು ಗುರುತಿಸಲಿಲ್ಲ” ಎಂದರು. ಗೆಳೆಯರು ನಗುತ್ತ “ಹೌದಾ? ಏನೋ ನನಗೆ ನೆನಪಿಲ್ಲ … ” ಎಂದು ಹೇಳಿ, ನಂತರ ಎಲ್ಲರೂ ಒಟ್ಟಿಗೆ ಕೋರ್ಟ್ ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಅವರನ್ನು ಕಳಿಸಿಕೊಟ್ಟೆವು.
ಈಗ ಬೀದರ್ ಮತ್ತು ಕೊಳಾರಕ್ಕೆ ವಾಪಸ್ ಬರೋಣ.
ಬಹುಮುಖ ಪ್ರಚಾರ
ಎಷ್ಟು ಪ್ರತಿಭಟನೆ, ಸಭೆಗಳನ್ನು ನಡೆಸಿದರೂ ಮಾಲಿನ್ಯದ ಸಮಸ್ಯೆಗೆ ಸಮರ್ಪಕ ಪರಿಹಾರ ದೊರೆಯಲಿಲ್ಲ. ಅದು ಅಷ್ಟು ಸುಲಭವೂ ಆಗಿರಲಿಲ್ಲ. ಯಾಕೆಂದರೆ, ಪರಿಸರ ಕಾಯ್ದೆಗಳ ಪ್ರಕಾರ ಯಾವುದೇ ಕಾರ್ಖಾನೆ ತನ್ನಲ್ಲಿ ಉಂಟಾಗುವ ಮಾಲಿನ್ಯದ ನಿವಾರಣೆಗೆ ಅಗತ್ಯ ಮಾಲಿನ್ಯ ನಿಯಂತ್ರಣ ಘಟಕಗಳನ್ನು ಹೊಂದಿರಲೇಬೇಕಿದೆ ಮತ್ತು ಸಾಮಾನ್ಯವಾಗಿ ಅವು ಸಾಕಷ್ಟು ದುಬಾರಿಯಾಗಿರುತ್ತವೆ. ಇಲ್ಲಿ ವಿವಿಧ ರಾಸಾಯನಿಕಗಳನ್ನು ಸಂಸ್ಕರಿಸಿ ಜೀವರಕ್ಷಕ ಔಷಧಿಗಳನ್ನು ಉತ್ಪಾದಿಸುವ ಈ ಕಾರ್ಖಾನೆಗಳು ಲಾಭದಾಯಕ ಅನ್ನಸಿದ್ದುದೇ ಮಾಲಿನ್ಯ ನಿಯಂತ್ರಣದ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳದೆ ಉತ್ಪಾದನೆ ನಡೆಸುವ ಮೂಲಕ. ಅವುಗಳನ್ನು ಸ್ಥಾಪಿಸಲು ಬೀದರ್ನಂಥ ಹಿಂದುಳಿದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಇಲ್ಲದಿದ್ದರೂ ಜನ ವಿರೋಧಿಸಲಾರರು ಎಂಬ ನಿರೀಕ್ಷೆಯಿಂದ. ಇದು ಸರ್ಕಾರ ನಡೆಸುವವರಿಗೂ ಗೊತ್ತಿತ್ತು, ಮಾಲಿನ್ಯ ನಿಯಂತ್ರಣ ಮಂಡಳಿಗೂ ಗೊತ್ತಿತ್ತು. ಆದರೆ ಇಲ್ಲಿ ಪ್ರತಿರೋಧ ತೀವ್ರವಾದಂತೆ ಮಾಲಿನ್ಯ ನಿಯಂತ್ರಣಕ್ಕೆ ಏನಾದರೊಂದು ಪರಿಹಾರ ಹುಡುಕಲೇ ಬೇಕಾಯಿತು. ಪ್ರತಿಯೊಂದು ಕಾರ್ಖಾನೆಯೂ ತನ್ನದೇ ಘಟಕ ನಿರ್ಮಿಸಲು ಸಿದ್ಧವಿರಲಿಲ್ಲ. ಹಾಗಾಗಿ ಎಲ್ಲಾ ಕಾರ್ಖಾನೆಗಳಿಗೂ ಒಟ್ಟಿಗೆ ಒಂದೇ ತ್ಯಾಜ್ಯ ಸಂಸ್ಕರಣ ಘಟಕದ ಸ್ಥಾಪನೆ ಮಾಡಲು ಸಂಬಂಧಪಟ್ಟವರು ಪ್ರಯತ್ನಿಸುತ್ತಿದ್ದರು. ಹೀಗಾಗಿ ಪರಿಹಾರ ದೊರೆತಿರಲಿಲ್ಲ, ಸಮಯ ಸರಿಯುತ್ತಲೇ ಇತ್ತು, ವಿನಾಶ ಮತ್ತು ನಷ್ಟಗಳೂ ಮುಂದುವರಿದಿದ್ದವು.
ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 2
ಈ ಹಿನ್ನೆಲೆಯಲ್ಲಿ ಈ ವಿಚಾರ ಇನ್ನಷ್ಟು ಜನಜನಿತವಾಗುವ ಅಗತ್ಯವಿತ್ತು. ಅದಕ್ಕಾಗಿ ಒಂದು ತಜ್ಞರ ಸಮಿತಿಯಿಂದ ಸತ್ಯ ಶೋಧನಾ ಪ್ರವಾಸ ಏರ್ಪಡಿಸಿದೆವು. ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಪರಿಸರ ತಜ್ಞರ ತಂಡ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿ ವರದಿ ಕೊಟ್ಟಿತು. ಅದನ್ನು ರಾಜ್ಯ ಸಮಿತಿಯಿಂದ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲಾಯಿತು. ಇದಲ್ಲದೆ ಧಾರವಾಡದ ವೈದ್ಯರಾದ ಡಾ. ಗೋಪಾಲ ದಾಬಡೆ ಮತ್ತು ತೀರ್ಥಹಳ್ಳಿಯಲ್ಲಿ ನೆಲೆಸಿರುವ ಕೃಷಿ ವಿಜ್ಞಾನಿ ಡಾ. ಎ.ಎನ್. ನಾಗರಾಜ್ ಇವರುಗಳೂ ಬಂದು ಪರಿಶೀಲನೆ ನಡೆಸಿ ವರದಿಗಳನ್ನು ನೀಡಿದರು. ನಾನು ಬೆಂಗಳೂರಿಗೆ ಹೋಗಿ, ʻಪ್ರಜಾವಾಣಿʼ ಅಂಕಣಕಾರ ಮತ್ತು ತಜ್ಞ ಪರಿಸರ ಕಾರ್ಯಕರ್ತ ನಾಗೇಶ ಹೆಗಡೆಯವರ ಸಲಹೆಯಂತೆ ಅದರ ಸಂಪಾದಕರನ್ನು ಭೇಟಿ ಮಾಡಿ ಸಮಸ್ಯೆಯ ಅಗಾಧತೆ ವಿವರಿಸಿದೆ. ಸ್ಥಳ ಸಂದರ್ಶಿಸಿ ವರದಿ ಮಾಡುವ ಜವಾಬ್ದಾರಿಯನ್ನು ಅವರು ನಾಗೇಶ ಹೆಗಡೆಯವರಿಗೇ ವಹಿಸಿದರು. ಅವರು ಬೀದರ್ಗೆ ಬಂದು ಪೂರ್ತಿ ಪ್ರದೇಶ ಸುತ್ತಾಡಿದರು, ಹಳ್ಳಿಗರನ್ನು ಮಾತಾಡಿಸಿದರು, ಮಾಲೀಕರ ಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಯ ಅಭಿಪ್ರಾಯಗಳನ್ನೂ ಕೇಳಿಕೊಂಡರು, ʻಪ್ರಜಾವಾಣಿʼ ಮತ್ತು ʻಡೆಕ್ಕನ್ ಹೆರಾಲ್ಡ್ʼ ಎರಡರಲ್ಲೂ ವಿಸ್ತೃತವಾದ ಪ್ರತ್ಯೇಕ ವರದಿಗಳನ್ನು ಪ್ರಕಟಿಸಿದರು. ʻಡೆಕ್ಕನ್ ಹೆರಾಲ್ಡ್ʼನಲ್ಲಿ ಅದು ರಾಷ್ಟ್ರೀಯ ಪುಟದಲ್ಲಿ ಪ್ರಕಟವಾಯಿತು.
ಬೀದರ್ ನಗರದ ನಾಗರಿಕರನ್ನು ನಿಕಟವಾಗಿ ಒಳಗೊಳ್ಳುವ ಸಲುವಾಗಿ ಕಾರ್ಯಾಗಾರದ ರೀತಿಯ ಹಾಲ್ ಮೀಟಿಂಗ್ ಒಂದನ್ನು ಏರ್ಪಡಿಸಿದೆವು. ಜನದ್ರೋಹಿ ಮುಖಂಡರು ಈ ಸಭೆಗೆ ಬಂದು ಅಡಚಣೆ ಒಡ್ಡುವ ಪ್ರಯತ್ನ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡು ಹೋದರು. ಬೀದರ್ನ ಒಂದೆರಡು ಪ್ರಮುಖ ಕಾಲೇಜುಗಳಲ್ಲೂ ಪ್ರಚಾರ ನಡೆಸಿದೆವು. ನಿವೃತ್ತ ಸೇನಾ ಜನರಲ್ ಆಗಿದ್ದ ಬೀದರ್ನ ಗುರು ನಾನಕ್ ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲರು ಈ ಸಮಸ್ಯೆ ಕುರಿತು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಭೆ ಏರ್ಪಡಿಸಿ ಅಲ್ಲಿ ಮಾತಾಡಲು ನನ್ನನ್ನು ಆಹ್ವಾನಿಸಿದರು. ವಿದ್ಯಾರ್ಥಿಗಳು ಸ್ವಲ್ಪ ವಂತಿಗೆ ಕೂಡ ಸಂಗ್ರಹಿಸಿ ಕೊಟ್ಟರು. ಕವಿರಂ ಪ್ರಕಟಿಸುತ್ತಿದ್ದ ʻಸ್ವತಂತ್ರ ಕರ್ನಾಟಕʼ ಮಾಸ ಪತ್ರಿಕೆಯಲ್ಲೂ ಲೇಖನಗಳನ್ನು ಪ್ರಕಟಿಸಿದೆವು. ಹೀಗೆ ಕೈಗಾರಿಕಾ ಪ್ರದೇಶದ ಮಾಲಿನ್ಯದ ಸಮಸ್ಯೆ ಅಲ್ಲಿನ ಹಳ್ಳಿಗಳದ್ದು ಅಥವಾ ಬೀದರ್ ಜಿಲ್ಲೆಯದು ಮಾತ್ರವೇ ಆಗದೆ, ಇಡೀ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿ ಬಿಂಬಿತಗೊಂಡು ರಾಜ್ಯದೆಲ್ಲೆಡೆಯ ಪರಿಸರಾಸಕ್ತರ ಗಮನ ಸೆಳೆಯಿತು.

ಅಪಾರ ಸಂಖ್ಯೆಯ ದನ-ಕುರಿ ಸಾವು
ಇತ್ತ, ಜನರ ರೋಷದ ಬೆಂಕಿಗೆ ತುಪ್ಪ ಸುರಿದದ್ದು ದನಕರುಗಳ ಸಾವಿನ ಪ್ರಮಾಣ. ವಾರದಲ್ಲಿ ಕನಿಷ್ಠ ಒಂದೆರಡಾದರೂ ದನ-ಕುರಿ ದಾರುಣವಾಗಿ ಸಾಯುತ್ತಿದ್ದವು. ನಿಜಾಂಪುರದ ತಿಪ್ಪಣ್ಣ ಎಂಬ ಹಿರಿಯರಿಗಾದ ನಷ್ಟವಂತೂ ಎಂಥ ಕಲ್ಲು ಹೃದಯವನ್ನೂ ಕರಗಿಸುತ್ತಿತ್ತು: ಅವರ ಇಪ್ಪತ್ತೈದು ಕುರಿಗಳು ಒಂದೇ ವಾರದಲ್ಲಿ ಸಾವಪ್ಪಿದ್ದವು. ಅದಕ್ಕಿಂತಲೂ ಮುಖ್ಯವಾಗಿ, ಅವರದ್ದೊಂದು ಮಿಶ್ರತಳಿ ಹಸುವಿಗೆ ಮನೆಯಲ್ಲೇ ಹುಟ್ಟಿದ್ದ ಹೆಣ್ಣು ಕರು ದಷ್ಟಪುಷ್ಟವಾಗಿ ಬೆಳೆದು ತಾನೇ ತಾಯಿಯಾಗುವ ವಯಸ್ಸಿಗೆ ಬಂದಿತ್ತು. ಬೇರೆಯವರು ಇಪ್ಪತ್ತೈದು ಸಾವಿರಕ್ಕೆ ಕೇಳಿದರೂ ತಿಪ್ಪಣ್ಣ ಕೊಟ್ಟಿರಲಿಲ್ಲ; ಮನೆಯಲ್ಲೇ ಹುಟ್ಟಿದ ಲಕ್ಷ್ಮಿ ಎಂದು ಮುದ್ದಿನಿಂದ ಸಾಕಿದ್ದರು. ಅದು ಒಂದು ದಿನ ಕೆಮಿಕಲ್ ನೀರು ಕುಡಿದು ಸಾವಿಗೀಡಾದಾಗ ಇಡೀ ಹಳ್ಳಿ ಅಯ್ಯೋ! ಎಂದು ಮರುಗಿತ್ತು. ಕೊಳಾರದ ಪಾಪಡೆ ಎಂಬ ಶ್ರೀಮಂತರ ಅರವತ್ತು ಸಾವಿರದ ಒಂದು ಜೋಡಿ ಉತ್ಕೃಷ್ಟ (ಅವ್ವಲ್) ಎತ್ತುಗಳು ಒಂದೇ ರಾತ್ರಿ ಸಾವನ್ನಪ್ಪಿದ್ದವು. ಅವರದ್ದೇ ಒಂದು ಹಸು ಕೂಡ ಸತ್ತಿತ್ತು. ಇದ್ಯಾವುದಕ್ಕೂ ಕಾರ್ಖಾನೆಗಳ ಮಾಲೀಕರಾಗಲಿ ಜಿಲ್ಲಾಡಳಿತವಾಗಲಿ ಪರಿಹಾರ ಕೂಡ ಕೊಡಲಿಲ್ಲ.
ಒಂದು ನಿರ್ಣಾಯಕವಾದ ಹೋರಾಟಕ್ಕೆ ಮುಂದಾಗುವ ಸಮಯ ಬಂದಿತ್ತು. ಜನರೆಲ್ಲ “ನಡೀರಿ, ಅವ್ನೌ… ಪ್ಯಾಟ್ರೀ ಬಂದೇ ಮಾಡಿಸಿಬಿಡೋಣ!” ಅಂತ ಒಂದೇ ಸಮ ಒತ್ತಾಯ ಮಾಡತೊಡಗಿದ್ದರು. ಕವಿರಂ ರಾಜ್ಯ ಸಮಿತಿಯಲ್ಲೂ ಚರ್ಚಿಸಿ, ಬೇರೆಬೇರೆ ಕಡೆಗಳಿಂದಲೂ ಕಾರ್ಯಕರ್ತರು, ರಾಜ್ಯ ಸಮಿತಿ ಸದಸ್ಯರು ಬೀದರ್ಗೆ ತೆರಳಿ ಹೋರಾಟಕ್ಕೆ ಸಾಥ್ ಕೊಡಬೇಕು ಎಂದು ತೀರ್ಮಾನವಾಯಿತು. ಹಳ್ಳಿಯಲ್ಲೂ ಹೋರಾಟ ಸಮಿತಿಯ ಹೊಸ ಮುಂದಾಳುಗಳ ಜೊತೆ, ಮುಖ್ಯವಾಗಿ ಅಕ್ಕಂದಿರ ಜೊತೆ ಚರ್ಚಿಸಿ ಗಟ್ಟಿಯಾದ ಹೋರಾಟಕ್ಕಿಳಿಯುವ ತೀರ್ಮಾನ ಕೈಗೊಂಡು, 1995ರ ಅಕ್ಟೋಬರ್ ೧೦ರಿಂದ ಆರಂಭಿಸಿ, ಕಾರ್ಖಾನೆಗಳು ಬಂದ್ ಆಗುವವರೆಗೂ ನಿರಂತರ ಹೋರಾಟ ನಡೆಸಬೇಕು ಎಂದು ನಿರ್ಧರಿಸಲಾಯಿತು. ಹೋರಾಟಕ್ಕೆ ನಾಲ್ಕೈದು ದಿನ ಇರುವಾಗಲೇ ರಾಜ್ಯದ ವಿವಿಧ ಕಡೆಗಳಿಂದ ಕವಿರಂ ಕಾರ್ಯಕರ್ತರು ಬೀದರ್ಗೆ ಬಂದಿಳಿದರು. ಮುಂದೆ 2004ರ ನವೆಂಬರಿನಲ್ಲಿ ದಕ್ಷಿಣ ಕನ್ನಡದ ಈದು ಎಂಬ ಹಳ್ಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮಳಾದ ಪಾರ್ವತಿಯೂ ಬಂದಿದ್ದಳು. ರಾಜ್ಯ ಸಮಿತಿಯ ಮೂರು-ನಾಲ್ಕು ಜನ ಸದಸ್ಯರೂ ಬಂದಿದ್ದರು. ಕರಪತ್ರಗಳನ್ನು ಮುದ್ರಿಸಿ ಕೈಗಾರಿಕಾ ಪ್ರದೇಶದ ಎಲ್ಲ ಹಳ್ಳಿಗಳಲ್ಲೂ ಬೀದರ್ ನಗರದಲ್ಲೂ ವ್ಯಾಪಕವಾಗಿ ಹಂಚಲಾಯಿತು. ಗೋಡೆ ಬರಹಗಳು ಬೀದರ್ ನಗರದಲ್ಲೂ ಎಲ್ಲೆಡೆ ಗಮನ ಸೆಳೆದವು. ಎಲ್ಲಾ ಕಡೆ ವ್ಯಾಪಕವಾದ ಚರ್ಚೆ-ಪ್ರಚಾರ ನಡೆಯಿತು, ಹೋರಾಟದ ರೂಪುರೇಷೆ ಸಿದ್ಧವಾಯಿತು. ಪ್ರದೇಶದಾದ್ಯಂತ ಹೊಸದೊಂದು ಚೈತನ್ಯದ ಸಂಚಾರವಾಯಿತು. ಸ್ಥಳೀಯ ಯುವಕರೂ ಪ್ರಚಾರ ತಂಡಗಳ ಜೊತೆ ಹಾಸುಹೊಕ್ಕಾಗಿ ಬೆರೆತರು. ವಿವಿಧ ಹಳ್ಳಿಗಳಿಂದ ಹೋರಾಟದ ದಿನ ಜನರನ್ನು ಹೊರಡಿಸಿ ಕರೆತರುವ ಜವಾಬ್ದಾರಿಗಳನ್ನು ವಿವಿಧ ತಂಡಗಳಿಗೆ ಹಂಚಿಕೊಡಲಾಯಿತು.
ಜಿಲ್ಲಾ ಅಧಿಕಾರಿಗಳು ನಾಪತ್ತೆ! (ಮುಂದಿನ ಭಾಗದಲ್ಲಿ ಮುಂದುವರಿಯುವುದು)

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ