ಬೀದರ್‌ನಲ್ಲಿ ಕೆಮಿಕಲ್ ವಿರೋಧಿ ಹೋರಾಟ ಆರಂಭವಾಗುವುದಕ್ಕೆ ಒಂದು-ಒಂದೂವರೆ ವರ್ಷದ ಮೊದಲು ನಕ್ಸಲೀಯರು ಅಲ್ಲಿನ ರಾಜಕೀಯ ಧುರೀಣ ಗುರುಪಾದಪ್ಪಾ ನಾಗಮಾರಪಳ್ಳಿಯವರ ಮಗ ರಮಾಕಾಂತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆತ ಜೀವದೊಂದಿಗೆ ಪಾರಾದರೂ ಬಲಗೈ ಪೂರ್ತಿ ನಿಷ್ಕ್ರಿಯವಾಗಿ ಹೋಗಿತ್ತು. ಇದು ಬೀದರ್ ಜಿಲ್ಲೆಯಾದ್ಯಂತ ಒಂದು ಎಚ್ಚರಿಕೆ ಗಂಟೆಯನ್ನು ಬಾರಿಸಿತ್ತು. ಜನರು ಕವಿರಂ ಅನ್ನೂ ನಕ್ಸಲ್ ಸಂಘಟನೆ ಎಂದೇ ಭಾವಿಸಿದ್ದರು. ಇದು ಒಂದು ರೀತಿಯಲ್ಲಿ ನನಗೆ ರಕ್ಷಾ ಕವಚವಾಗಿತ್ತು.
(ಮೊದಲಿನ 5 ಭಾಗಗಳಲ್ಲಿ: 1990ರ ದಶಕದ ಆರಂಭದಲ್ಲಿ ಬೀದರ್ ನಗರಕ್ಕೆ ಕೇವಲ 7 ಕಿ.ಮೀ. ಸಮೀಪದಲ್ಲಿ 1760 ಎಕರೆ ವಿಸ್ತೀರ್ಣದ ʻಕೊಳ್ಹಾರ ಕೈಗಾರಿಕಾ ಪ್ರದೇಶʼದಲ್ಲಿ ಹತ್ತಾರು ರಾಸಾಯನಿಕ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅವುಗಳ ನಿರಂತರ ಮಾಲಿನ್ಯದಿಂದಾಗಿ ಸುತ್ತಲಿನ ಎಂಟು-ಹತ್ತು ಹಳ್ಳಿಗಳಲ್ಲಿ ವ್ಯಾಪಕ ವಿನಾಶ ಉಂಟಾಗತೊಡಗಿತು. ʻಕರ್ನಾಟಕ ವಿಮೋಚನಾ ರಂಗʼವು ಮಾಲಿನ್ಯದ ವಿರುದ್ಧದ ರೈತರ ಹೋರಾಟಕ್ಕೆ ಮುಂದಾಳತ್ವ ವಹಿಸಿತು. ಮಾಲಿನ್ಯದ ಸಮಸ್ಯೆ ಪರಿಹರಿಸಲು ಒತ್ತಾಯಿಸಿ 1994ರ ಫೆಬ್ರವರಿಯಿಂದ 1996ರ ಕೊನೆಯವರೆಗೆ ಅನೇಕ ಸುತ್ತಿನ ಹೋರಾಟಗಳು ನಡೆದವು. ಅನೇಕ ಪ್ರತಿಭಟನೆಗಳು, ಜಂಟಿ ಸಭೆಗಳ ನಂತರವೂ ಕಂಪನಿಗಳು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಪಾರ ಸಂಖ್ಯೆಯಲ್ಲಿ ಜಾನುವಾರುಗಳ ಸಾವು, ಬೆಳೆ ನಾಶ ಮುಂದುವರಿಯಿತು. 1995ರ ಅಕ್ಟೋಬರ್ 10ರಂದು ರೈತರ ಬೃಹತ್ ಪ್ರತಿಭಟನೆಯ ಮೇಲೆ ಪೊಲೀಸರು ವಿನಾಕಾರಣ ಭಾರೀ ದೌರ್ಜನ್ಯ ಎಸಗಿದರು. ಯಾವುದಕ್ಕೂ ಜಗ್ಗದ ರೈತರು ನಿರಂತರ ಹೋರಾಟದ ಮೂಲಕ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚಿಸುವುದರಲ್ಲಿ ಯಶಸ್ವಿಯಾದರು.)
ಮುಂದೆ ಓದಿ:
ಚುನಾವಣೆ ಬಹಿಷ್ಕಾರ – ನಿಜಾಂಪುರದ ಅಭೇದ್ಯ ಒಗ್ಗಟ್ಟು
ಮೂರೂವರೆ ವರ್ಷದ ಹೋರಾಟದುದ್ದಕ್ಕೂ ಯುವಕರು ಮತ್ತು ಮಹಿಳೆಯರ ಪಾತ್ರ ಅನನ್ಯವಾದದ್ದು. ಅದಕ್ಕೊಂದು ಸಲಾಮ್ ಹೇಳಲೇಬೇಕು. ಅದರ ಜೊತೆಗೆ ನಿಜಾಂಪುರದ ಅಭೇದ್ಯ ಒಗ್ಗಟ್ಟಿನ ಬಗ್ಗೆಯೂ ಹೇಳಬೇಕು. 1996ರ ಏಪ್ರಿಲ್ 27, ಮೇ 2 ಮತ್ತು ಮೇ 7ರಂದು ಮೂರು ಹಂತಗಳಲ್ಲಿ ಸಂಸತ್ ಚುನಾವಣೆ ನಡೆಯಿತು. ಅದಾಗಲೇ ಅನೇಕ ಕಡೆ ಹಳ್ಳಿಗರು ತಮ್ಮ ದೀರ್ಘಕಾಲದ ಸಮಸ್ಯೆಗಳನ್ನು ಮುಂದೆ ಮಾಡಿ ಚುನಾವಣೆ ಬಹಿಷ್ಕರಿಸುವುದು ಒಂದು ರೂಢಿಯೇ ಆಗಿತ್ತು. ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿನ ಸರ್ಕಾರದ ವಿಫಲತೆ ಮತ್ತು ನಿಷ್ಕಾಳಜಿ ವಿರುದ್ಧ ನಮ್ಮಲ್ಲೂ ಚುನಾವಣೆ ಬಹಿಷ್ಕಾರ ಮಾಡಬೇಕು ಎಂಬ ಪ್ರಸ್ತಾಪ ಕೈಗಾರಿಕಾ ಪ್ರದೇಶದ ಹಳ್ಳಿಗರಿಂದ ಮುಂದೆ ಬಂತು. ಈ ಬಗ್ಗೆ ಕವಿರಂ ರಾಜ್ಯ ಸಮಿತಿ ನಿಯೋಗ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಬೀದರ್‌ಗೆ ಬಂದು ನಮ್ಮ ಹೋರಾಟದ ಎಲ್ಲ ಹಳ್ಳಿಗಳಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿತು. ಕೊಳಾರದಲ್ಲಿ ಶಾಮೀಲುಕೋರ ಮುಂದಾಳುಗಳ ಹೊರತು ಮಿಕ್ಕೆಲ್ಲರಿಂದಲೂ ಸಹಮತ ವ್ಯಕ್ತವಾಯಿತು. ಎಲ್ಲರೂ ಒಗ್ಗಟ್ಟಿನಿಂದಿದ್ದು ಒಂದೇ ಮನಸ್ಸಿನಿಂದ ಬಹಿಷ್ಕಾರ ಮಾಡಬೇಕು ಎಂದು ನಿರ್ಣಯಗಳಾದವು. ಇದಕ್ಕಾಗಿ ಮುಖ್ಯವಾಗಿ ಕೊಳಾರ, ಹಜ್ಜರಗಿ, ಕಮಾಲಪೂರ, ನಿಜಾಂಪುರ ಹಾಗೂ ಬೆಳ್ಳೂರು ಈ ಹಳ್ಳಿಗಳಲ್ಲಿ ವಿಶೇಷ ಒತ್ತು ನೀಡಿ ಪ್ರಚಾರಾಂದೋಲನ ನಡೆಸಿದೆವು. ನಮ್ಮ ʻವಿರೋಧಿʼ ಗುಂಪು ಕೂಡ ಶತಾಯ ಗತಾಯ ಇದನ್ನು ವಿಫಲಗೊಳಿಸಲು ಕೊನೇ ಕ್ಷಣದವರೆಗೂ ಶಕ್ತಿ ಮೀರಿ ಹೆಣಗಿತು. ಪಂಚಾಯ್ತಿ ಸೌಲತ್ತುಗಳ ಆಮಿಷ / ನಿರಾಕರಣೆಯ ಭಯವನ್ನೂ ಬಳಸಿತು. ಭೀಮಣ್ಣಾ ಖಂಡ್ರೆಯವರು ಸ್ವತಃ ಕೊಳಾರಕ್ಕೆ ಬಂದು ಸಭೆ ನಡೆಸಿದರು. ಆದರೆ ಅವರ ಮಾತಿಗೆ ಹಳ್ಳಿಯ ರೈತ ಮಹಿಳೆಯರು ಮತ್ತು ಯುವಕರು ಒಪ್ಪಲಿಲ್ಲ.
ಹೆಚ್ಚಾಗಿ ಹೈದರಾಬಾದಿನಲ್ಲಿ ವಾಸ ಇರುತ್ತಿದ್ದ ಬೀದರ್‌ನ ಪಾಟೀಲ್ ಎಂಬ ಒಬ್ಬ ರೌಡಿಸಂ ವ್ಯಕ್ತಿ ಚುನಾವಣೆಗೆ ಎರಡು ದಿನ ಮುಂಚೆ ಜೀಪಿನಲ್ಲಿ ಬಿಜೆಪಿ ಬಾವುಟ ಹಾರಿಸಿಕೊಂಡು ಊರೊಳಕ್ಕೆ ಬಂದು ಉಳ್ಳವರ ಕೇರಿಯೊಳಕ್ಕೆ ಹೋಗಿಬಿಟ್ಟ. ಇದಕ್ಕೆ ಏನು ಮಾಡಬೇಕು ಎಂದು ಯುವಕರೆಲ್ಲ ಸೇರಿ ಚರ್ಚಿಸಿದರು. ಕುರುಬ ಸಮುದಾಯದ ಹಿರಿಯಜ್ಜ ಮತ್ತು ಊರಿನ ಗೌರವಾನ್ವಿತ ವ್ಯಕ್ತಿಯಾಗಿದ್ದ ಬೀರಪ್ಪಜ್ಜನ ಮಗ ಶಂಕರ್ ಬಹಳ ದಿಟ್ಟ ಯುವಕ, ಹೋರಾಟದ ಗಟ್ಟಿ ಬೆಂಬಲಿಗ. ಅವನ ನೇತೃತ್ವದಲ್ಲಿ ಯುವಕರು ರಸ್ತೆ ಬದಿಯಲ್ಲಿದ್ದ ಒಂದು ವಿದ್ಯುತ್ ಕಂಬವನ್ನು ದಾರಿಗೆ ಅಡ್ಡಲಾಗಿ ಇಟ್ಟು ಕಾದು ನಿಂತರು. ಪಾಟೀಲ ಬಂದು ಅದನ್ನು ತೆಗೆಯಬೇಕೆಂದು ಜಬರ್ದಸ್ತಿ ಮಾಡಿದ. ʻಯಾರೂ ಯಾವುದೇ ಪಕ್ಷದ ಝಂಡಾ ಹಾಕಿಕೊಂಡು ಊರಿಗೆ ಪ್ರಚಾರಕ್ಕೆ ಬರಬಾರದು ಎಂದು ಊರಿನಲ್ಲಿ ನಿರ್ಣಯವಾಗಿದೆ, ಹಾಗಾಗಿ ಜೀಪಿನ ಬಾವುಟ ತೆಗೆದರೆ ಮಾತ್ರ ದಾರಿʼ ಎಂದು ಯುವಕರು ಹೇಳಿದರು. ಬಹಳ ಹೊತ್ತಿನ ನಂತರ ಆತ, ಇನ್ನು ಮುಂದೆ ಝಂಡಾ ಹಾಕಿಕೊಂಡು ಬರುವುದಿಲ್ಲ ಎಂದು ಮಾತು ಕೊಟ್ಟಮೇಲೆ, ಯುವಕರು ಸದ್ಯಕ್ಕೆ ಇಷ್ಟೇ ಸಾಕು ಎಂದುಕೊಂಡು ದಾರಿ ಬಿಟ್ಟುಕೊಟ್ಟರು.
ಚುನಾವಣೆಯ ದಿನ ಎಲ್ಲ ಹಳ್ಳಿಗಳಲ್ಲೂ ಒಂದು ರೀತಿಯ ಉತ್ಸಾಹದ ವಾತಾವರಣವಿತ್ತು: ಮೊದಲ ಸಲ ಇಂತಹದೊಂದು ʻಹೋರಾಟʼ ರೂಪವನ್ನು ಹಳ್ಳಿಗರು ಬಳಸಲು ತೀರ್ಮಾನಿಸಿದ್ದರು. ಅಂತಿಮವಾಗಿ, “ಅತಿ ಹೆಚ್ಚು” ಮತದಾನವಾದ ಕೊಳಾರದಲ್ಲಿ ಕೇವಲ 16% ಓಟಿಂಗ್ ಆಗಿತ್ತು. ನಿಜಾಂಪುರ ಬಿಟ್ಟು ಉಳಿದ ಮೂರು ಹಳ್ಳಿಗಳಲ್ಲಿ ಅತ್ಯಲ್ಪ ಸಂಖ್ಯೆಯ ಮತದಾನ ಆಗಿತ್ತು. ಆದರೆ ನಿಜಾಂಪುರದಲ್ಲಿ ಒಂದೂ ಓಟು ಬೀಳಲಿಲ್ಲ. ಜನರೆಲ್ಲರೂ ಇಡೀ ದಿನ ಅಲ್ಲಲ್ಲಿ ಗುಂಪುಗುಂಪಾಗಿ ಮಂಡಕ್ಕಿ ಒಗ್ಗರಣಿ – ಚಾ ಸಮಾರಾಧನೆ ನಡೆಸುತ್ತ, ಇಸ್ಪೀಟ್ ಆಡುತ್ತ ಹರಟುತ್ತ ಕಳೆದರು. ಇದರ ಪರಿಣಾಮ ಎಷ್ಟಿತ್ತೆಂದರೆ, ಚುನಾವಣಾ ಅಧಿಕಾರಿಗಳಾಗಿ ಬಂದಿದ್ದ ಸರ್ಕಾರಿ ನೌಕರರು ಚುನಾವಣಾ ಸಮಯ ಮುಗಿದ ಬಳಿಕ, ಹಳ್ಳಿಯ ಜನರ ಒಗ್ಗಟ್ಟನ್ನು ಮನದುಂಬಿ ಪ್ರಶಂಸಿಸಿ ಒಂದು ಅಭಿನಂದನಾ ಪತ್ರವನ್ನೇ ಬರೆದುಕೊಟ್ಟು ಬಿಟ್ಟರು! (ಇದೇನಾದರೂ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದಲ್ಲಿ ಈ ಸಿಬ್ಬಂದಿಗೆ ದೊಡ್ಡ ಸಂಕಟ ಉಂಟಾಗಬಹುದಾದ ಕಾನೂನುಬಾಹಿರ ಕೃತ್ಯ ಇದಾಗಿತ್ತು.) ಅಂದು ಕೂಡ ಯುವಕರು ಈ ʻಹೋರಾಟʼ ಯಶಸ್ವಿಯಾಗಿದ್ದಕ್ಕೆ ಕೊಳಾರದಿಂದ ಮೆರವಣಿಗೆ ನಡೆಸಿ, ನಿಜಾಂಪುರದಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಇದು ವಿಶೇಷವಾಗಿ ಕೊಳಾರ ಹೋರಾಟದ ದ್ರೋಹಿಗಳ ವಿರುದ್ಧದ ಗೆಲುವು ಎಂದೇ ಯುವಕರೆಲ್ಲ ಪರಿಭಾವಿಸಿದರು.

ನಿಜಾಂಪುರದ ಈ ಅಭೇದ್ಯ ಒಗ್ಗಟ್ಟನ್ನು ಕಾಪಾಡಿಕೊಂಡಿದ್ದರಲ್ಲಿ ಊರಿನ ಹಿರಿಯ ಭೀಮರಾಯಗೌಡ ಪೊಲೀಸ್ ಪಾಟೀಲ ಅವರ ನ್ಯಾಯನಿಷ್ಠ ಸರಳ ನಡವಳಿಕೆಯದು ದೊಡ್ಡ ಪಾಲಿದೆ. ಅದಕ್ಕಾಗಿ ಅವರಿಗೂ ಒಂದು ಗೌರವಪೂರ್ಣ ಸಲಾಮ್ ಸಲ್ಲುತ್ತದೆ. ಊರಿನ ಗೌಡರಾಗಿದ್ದರೂ, ವಯಸ್ಸು 60 ದಾಟಿದ್ದರೂ ಅವರು ಬೇಸಾಯದ ಕಾಲದಲ್ಲಿ ದಿನವೂ ಬೆಳಿಗ್ಗೆ ಒಂದು ಜೊತೆ ಎತ್ತುಗಳು, ನೊಗ ನೇಗಿಲುಗಳೊಂದಿಗೆ ಎರಡು ಕಿಲೋಮೀಟರ್ ದೂರದ ಹೊಲಕ್ಕೆ ಹೋಗಿ ದಿನವಿಡೀ ಅಲ್ಲೇ ಇದ್ದು ಸಂಜೆಯಾಗುವಾಗಷ್ಟೇ ಹಿಂದಿರುಗುತ್ತಿದ್ದರು.
ʻಸುಪಾರಿʼ ಕೊಲೆ(?) ಯತ್ನ – ಕೂದಲೆಳೆಯಲ್ಲಿ ಪಾರು
ಕೊಪ್ಪದಲ್ಲೊಮ್ಮೆ ನನ್ನ ಕೊಲೆಗೆ ಸುಪಾರಿ ಕೊಡಲಾಗಿತ್ತು, ಕೂದಲೆಳೆಯಲ್ಲಿ ಬಚಾವಾದೆ ಎಂದು ʻಜೋಳಿಗೆʼಯ ಗುಬ್ಬಗದ್ದೆ ಕಾಡಿನ ಹೋರಾಟದ ಲೇಖನದಲ್ಲಿ ಬರೆದಿದ್ದೆ. ಬೀದರ್‌ನಲ್ಲೂ 1997ರ ಆರಂಭದಲ್ಲಿ ಒಮ್ಮೆ ನನ್ನ ಕೊಲೆ ಯತ್ನ ನಡೆಯಿತು. ಆಗಲೂ ಕೂದಲೆಳೆಯಲ್ಲಿ ಪಾರಾದೆ.
ಒಂದು ಕೆಮಿಕಲ್ ಕಾರ್ಖಾನೆಯಲ್ಲಿದ್ದ 30-32 ಜನ ಹೆಲ್ಪರ್‌ಗಳಲ್ಲಿ ಬಹುತೇಕರು ಸ್ಥಳೀಯರೇ ಆಗಿದ್ದರು. ಚಳವಳಿ ಜೋರಿನಲ್ಲಿದ್ದಾಗ ಮಾಲೀಕರು ಅದರಲ್ಲಿ 20 ಜನರನ್ನು ಕೆಲಸದಿಂದ ದಿಡೀರಾಗಿ ವಜಾ ಮಾಡಿದರು. ಕಾರ್ಮಿಕರು ಕಾರ್ಖಾನೆಯ ಮುಂದೆ ಧರಣಿ ಆರಂಭಿಸಿದರು. ಅವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ದಲಿತರು, ಮೂವರು ಮುಸ್ಲಿಮರು, ಮಿಕ್ಕವರು ಕುರುಬ, ಕಬ್ಬಲಿಗ ಮುಂತಾದ ಹಿಂದುಳಿದ ಸಮುದಾಯದವರಾಗಿದ್ದರು. ಕೈಗಾರಿಕಾ ಪ್ರದೇಶದ ಕಾರ್ಮಿಕ ನಾಯಕ ಚಿಮಕೋಡೆ ಎಂಬಾತ ಮಾಲೀಕರ ಜೊತೆ ಶಾಮೀಲಾಗಿ ಕಾರ್ಮಿಕರಿಗೆ ದ್ರೋಹ ಎಸಗಿದ. ಕಾರ್ಮಿಕರು ನನ್ನ ಸಹಾಯ ಕೇಳಿದರು. ವಾಸ್ತವದಲ್ಲಿ, ಕಾರ್ಮಿಕರ ವಿಷಯಕ್ಕೆ ನಾವು ಈಗಲೇ ಕೈ ಹಾಕುವುದು ಬೇಡ ಎಂದು ಕವಿರಂ ರಾಜ್ಯ ಸಮಿತಿಯಲ್ಲಿ ಅಂದುಕೊಂಡಿದ್ದೆವಾದರೂ, ಈಗ ಅವರ ನೆರವಿಗೆ ಹೋಗಬೇಕಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿಯ ಕಚೇರಿಗೆ ನಾನು ಕೆಲ ಮಂದಿ ಕಾರ್ಮಿಕರೊಂದಿಗೆ ಹೋದಾಗ ಅಲ್ಲಿ ಆ ಅಧಿಕಾರಿ, ಕಂಪನಿ ಮಾಲೀಕ, ಚಿಮಕೋಡೆ ಹಾಗೂ ಹೈದರಾಬಾದಿನಲ್ಲಿ ಒಬ್ಬ ಮೀಡಿಯಂ ರೌಡಿಯಾಗಿದ್ದ ಬೀದರ್‌ನ ಒಬ್ಬ ಮುಸ್ಲಿಂ ಇಷ್ಟು ಜನ ವಿಷಯವನ್ನು ಮುಕ್ತಾಯ ಮಾಡುವುದರಲ್ಲಿದ್ದರು. ನಾನು ಅದಕ್ಕೆ ಕಾನೂನುಬದ್ಧವಾಗಿ ತಕರಾರು ಎತ್ತಿದಾಗ ಅಧಿಕಾರಿ ಸಭೆಯನ್ನು ಮಾರನೇ ದಿನಕ್ಕೆ ಮುಂದೂಡಿದರು. ಮಾರನೇ ದಿನ ನಾನು ಪುನಃ ಅಲ್ಲಿಗೆ ಹೋಗಿ ನನ್ನ ರಾಜ್‌ದೂತ್ ಬೈಕನ್ನು ನಿಲ್ಲಿಸುತ್ತಿದ್ದಂತೆ ಇಬ್ಬರು ಯುವಕರು ನನ್ನ ಮೇಲೆ ದಿಡೀರ್ ದಾಳಿ ಮಾಡಿದರು. (ಅದೇ ರೌಡಿ ಹತ್ತಿರದಲ್ಲೇ ಒಂದು ಆಟೋದಲ್ಲಿ ಗಮನಿಸುತ್ತಾ ಕೂತಿದ್ದ). ಸುಧಾಕರ ಎಕ್ಕಂಬೇಕರ್ ಎಂಬ ದಲಿತ ಯುವಕ ನನ್ನ ಎದೆಗೆ ಡಿಚ್ಚಿ ಕೊಟ್ಟ, ಕೂಡಲೇ ನಾನು ಎಚ್ಚರ ತಪ್ಪಿ ಕೆಳಕ್ಕೆ ಬಿದ್ದೆ. ಒಂದೇ ಕ್ಷಣದಲ್ಲಿ ಎಚ್ಚರ ಬಂದು ಏಳಲು ನೋಡುವಾಗ ಅವನ ಜೊತೆಗಾರ ಮುಸ್ಲಿಂ ಯುವಕ ಒಂದು ಸೈಜುಗಲ್ಲನ್ನು ಎತ್ತಿಕೊಂಡು ಇನ್ನೇನು ನನ್ನ ತಲೆಮೇಲೆ ಹಾಕುವುದರಲ್ಲಿದ್ದ. ಅದೇಕೋ ಸುಧಾಕರನೇ ಅವನನ್ನು ತಡೆದ. ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ನನ್ನ ತಲೆ ʻಪಚಕ್ʼ ಆಗಿರುತ್ತಿತ್ತು! ಬಹುಶಃ ಸುಪಾರಿ ಕೇವಲ ಹಲ್ಲೆಗೆ ಮಾತ್ರ ಕೊಟ್ಟಿದ್ದೇನೋ, ಕೊಲೆಗೆ ಇರಲಿಕ್ಕಿಲ್ಲ?
ನಂತರ ಕೇಸ್ – ಕೌಂಟರ್ ಕೇಸ್ ಆಯಿತು. ಸುಧಾಕರ ತನ್ನ ಕೈಗೊಂದು ಸಣ್ಣ ಬ್ಲೇಡ್ ಗಾಯ ಮಾಡಿಕೊಂಡು ಆಸ್ಪತ್ರೆಯಿಂದ ದೊಡ್ಡ ಬ್ಯಾಂಡೇಜ್ ಹಾಕಿಸಿಕೊಂಡು ಸರ್ಟಿಫಿಕೇಟ್ ಮಾಡಿಸಿಕೊಂಡು, ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಮಾಡಲು ಪೊಲೀಸ್ ಸ್ಟೇಶನ್‌ಗೆ ಹೋಗಿದ್ದನಂತೆ. ಹಿಂದುಳಿದ ಸಮುದಾಯದ ಸಿದ್ರಾಮಪ್ಪ ಎಂಬ ಡಿವೈಎಸ್ಪಿ ಇದ್ದವರು, “ಏ ಹುಚ್ ಖೋಡಿ. ಅಂವನ್ಮೇಲೆ ಯಾನ್ ಅಟ್ರಾಸಿಟಿ ಮಾಡೀಯೋ? ಅಂವಾನೇ ದಲಿತ್ ಅದಾನೋ…” ಎಂದು ಹೇಳಿ, ಅಟ್ರಾಸಿಟಿ ಕೇಸ್ ಹಾಕಲು ಬಿಡದೆ, ಮಾಮೂಲಿ ಕೇಸ್ ದಾಖಲಿಸಿಸಿದರಂತೆ. ನಂತರ ಕೇಸು ಯಾವ ಹಳ್ಳ ಹಿಡಿಯಬೇಕೋ ಹಿಡಿದುಹೋಯಿತು. ಕಾರ್ಮಿಕರಿಗೆ ನ್ಯಾಯ ದೊರೆಯಲಿಲ್ಲ.
ಪುಡಿ ರೌಡಿ ಅಣ್ಣತಮ್ಮಂದಿರಿಗೆ ʻಪಾಠʼ
ಬೀದರ್‌ನಲ್ಲಿ ಕೆಮಿಕಲ್ ವಿರೋಧಿ ಹೋರಾಟ ಆರಂಭವಾಗುವುದಕ್ಕೆ ಒಂದು-ಒಂದೂವರೆ ವರ್ಷದ ಮೊದಲು ನಕ್ಸಲೀಯರು ಅಲ್ಲಿನ ರಾಜಕೀಯ ಧುರೀಣ ಗುರುಪಾದಪ್ಪಾ ನಾಗಮಾರಪಳ್ಳಿಯವರ ಮಗ ರಮಾಕಾಂತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆತ ಜೀವದೊಂದಿಗೆ ಪಾರಾದರೂ ಬಲಗೈ ಪೂರ್ತಿ ನಿಷ್ಕ್ರಿಯವಾಗಿ ಹೋಗಿತ್ತು. ಇದು ಬೀದರ್ ಜಿಲ್ಲೆಯಾದ್ಯಂತ ಒಂದು ಎಚ್ಚರಿಕೆ ಗಂಟೆಯನ್ನು ಬಾರಿಸಿತ್ತು. ಜನರು ಕವಿರಂ ಅನ್ನೂ ನಕ್ಸಲ್ ಸಂಘಟನೆ ಎಂದೇ ಭಾವಿಸಿದ್ದರು. ಇದು ಒಂದು ರೀತಿಯಲ್ಲಿ ನನಗೆ ರಕ್ಷಾ ಕವಚವಾಗಿತ್ತು.
ಕೊಳಾರದ ಮುಂದಾಳುಗಳು ಹೋರಾಟಕ್ಕೆ ದ್ರೋಹ ಬಗೆದ ಬಳಿಕ ಅಲ್ಲಿನ ಪುಡಿ ರೌಡಿಗಳೆನ್ನಿಸಿದ್ದ ಮಾದೇವ ಶಂಭು ಮತ್ತು ತಮ್ಮಂದಿರು ಹೋರಾಟಕ್ಕೆ ವಿರುದ್ಧ ನಡೆದುಕೊಳ್ಳತೊಡಗಿದರು. ʻನಮ್ಮ ಕಾರ್ಯಕರ್ತರು ಅಥವಾ ಬೆಂಬಲಿಗರ ಮೇಲೇನಾದರೂ ಕೈ ಮಾಡಿದರೆ ಸುಮ್ಮನೆ ಬಿಡಲ್ಲʼ ಅಂತ ನಾವು ಸಭೆಗಳಲ್ಲಿ ಅವರಿಗೆ ಎಚ್ಚರಿಕೆ ನೀಡಿದ್ದೆವು. ಅದರ ಮೇಲೂ ಅವರು, ಹೋರಾಟದ ಪ್ರಬಲ ಕೇಂದ್ರಗಳಲ್ಲೊಂದಾದ ಹಜ್ಜರಗಿಯಲ್ಲಿ ಐದು ಜನ ಅಣ್ಣತಮ್ಮಂದಿರಿದ್ದ ದಲಿತ ಶರಣಪ್ಪನವರ ಕುಟುಂಬದ ಮೇಲೆ ಒಂದು ರಾತ್ರಿ ದಾಳಿ ಮಾಡಿದರು. ಅವರನ್ನೇ ಹೊಡೆದರೆ ಮಿಕ್ಕವರು ಹೆದರಿ ಹೋರಾಟದಿಂದ ಹಿಂದೆ ಸರಿಯುತ್ತಾರೆ ಎನ್ನುವುದು ಅವರ ಹಂಚಿಕೆ. ಆದರೆ ಆ ಅಣ್ಣತಮ್ಮಂದಿರು ಹೊಡೆದಾಟದ ಅಭ್ಯಾಸ ಇದ್ದವರೇ; ಅಲ್ಲದೆ, ದಾಳಿಕೋರರ ಅತಿ ಆತ್ಮವಿಶ್ವಾಸ ಎಷ್ಟಿತ್ತೆಂದರೆ, ರಾತ್ರಿ ದಾಳಿಗೆ ಬರುವುದಾಗಿ ಸುಳಿವು ಬಿಟ್ಟುಕೊಟ್ಟಿದ್ದರು. ಹೀಗಾಗಿ ಆ ಅಣ್ಣತಮ್ಮಂದಿರು ಸಿದ್ಧರಾಗಿದ್ದು, ದಾಳಿಕೋರರ ಕಣ್ಣಿಗೆ ಖಾರದ ಪುಡಿ ಉಗ್ಗಿ, ಬಡಿಗೆಯಿಂದ ಚೆನ್ನಾಗಿ ಲಾತಾ ಕೊಟ್ಟು ಓಡಿಸಿದರು. ಹಲ್ಲೆಗೆ ಬಂದವರು ʻಅಪ್ಪೋ, ಕೊಂದರಪ್ಪೋ…ʼ ಎನ್ನುತ್ತಾ ಎದ್ದುಬಿದ್ದು ಓಡಿಹೋಗಿ ನೀರಿನ ಕಟ್ಟೆಯಲ್ಲಿ ಗಂಟೆಗಟ್ಟಲೆ ಮುಳುಗಿದ್ದರು. ಇದನ್ನು ಇಷ್ಟಕ್ಕೆ ಬಿಡಬಾರದು ಎಂದು ನಾವು ಪೊಲೀಸ್ ಕಂಪ್ಲೇಂಟನ್ನೂ ಕೊಟ್ಟಿದ್ದಲ್ಲದೆ – ಅದರಿಂದೇನೂ ಪ್ರಯೋಜನ ಆಗುವುದಿಲ್ಲ ಎಂಬುದು ಗೊತ್ತಿತ್ತು – ನಮ್ಮ ಹಳ್ಳಿಗಳಲ್ಲಿ ಗೋಡೆ ಬರಹ ಮತ್ತು ಕೈಬರಹದ ವಾಲ್ ಪೋಸ್ಟರ್ಸ್ ಮೂಲಕ ವಾರ್ನಿಂಗ್ ನೀಡ ವ್ಯಾಪಕ ಪ್ರಚಾರ ನಡೆಸಿದೆವು. ಇದು ಅವರುಗಳ ನಿದ್ದೆಗೆಡಿಸಿತು.

ಎರಡು ದಿನದ ಬಳಿಕ ಒಂದು ಸಂಜೆ ಮಾದೇವ “ಸಾಬ್ರೆ, ನಿಮ್‌ಬಲ್ಲಿ ಒಂದ್ನಿಮಿಷ ಮಾತಾಡೂದದ, ಬರ್ರಿ” ಅಂತ ನನ್ನನ್ನು ಕೊಳಾರದ ಸ್ವಾಮಿಯ ಚಾ ದುಕಾನಿನೊಳಕ್ಕೆ ಕರೆದ. “ಅದೇನು ಹೇಳಲಿಕ್ಕಿದೆ ಇಲ್ಲೇ ಎಲ್ಲರೆದುರೇ ಹೇಳು” ಎಂದೆ. ಅವನು ಸ್ವಲ್ಪ ಒತ್ತಾಯಿಸಿದ. ಗೆಳೆಯರು “ಹೋಗ್ರಿ ಸರ. ನಾವು ಇಲ್ಲೇ ಇರ್ತೇವು” ಎಂದು ಬೆಂಬಲಕ್ಕೆ ನಿಂತರು. ನಾನು ಒಳಗೆ ಹೋದೊಡನೆ, ʻಅದೆಲ್ಲಾ ಯಾಕೆ ಬರೆದೀರಿ ಸರ?ʼ ಎಂದ. ʻನೀವುಗಳು ಮಾಡಿರುವುದಕ್ಕೇ ಬರೆದಿದ್ದುʼ ಎಂದೆ. ʻಇನ್ಮೇಲೆ ಅದೆಲ್ಲ ಬರೆಸಬ್ಯಾಡ್ರಿʼ ಅಂದ. ʻಇನ್ಮೇಲೆ ಬರೆಸೋದಲ್ಲ. ನಮ್ಮ ಬೆಂಬಲಿಗರ ಸುದ್ದಿಗೆ ಬಂದರೆ ಅದರ ತರೀಕಾ (ಕ್ರಮ) ಬ್ಯಾರೇನೇ ಇರ್ತದೆ. ಅಷ್ಟೆ. ನಿಂಗ್ಗೊತ್ತದಲ್ಲ?ʼ ಅಂದೆ ಖಡಕ್ಕಾಗಿ. ʻಹೇ ಹೇ, ಹಾಂಗಲ್ರಿ ಸರ. … ನಿಮ್ದ್ ಹೋರಾಟ ಏನದ, ಅದರಾಗ ನಾವು ಅಡ್ಡ ಬರಲ್ರಿʼ ಅಂದು, ʻಏ ಸ್ವಾಮಿ ಸಾಬರಿಗೆ ಚಾ ಕೊಡುʼ ಅಂದ. ನಾನು ಬೇಡವೆಂದಾಗ, ʻಹಾಲು, ಹಾಲರೆ ಕುಡೀರಿ ಸರʼ ಅಂತ ಒತ್ತಾಯ ಮಾಡಿದ. ಸರಿ ಅಂತ ಹಾಲು ಕುಡಿದೆ. ಅವನು ಹೊರಗೆ ನೆರೆದಿದ್ದ ಗೆಳೆಯರ ಮುಖ ನೋಡದೆ ಬಿರಬಿರನೆ ಹೊರಟುಹೋದ.
ಆ ಹೋಟೆಲಿನ ಮಾಲೀಕರಾದ ಸ್ವಾಮಿ ಕುಟುಂಬವೂ ಹೋರಾಟದ ಬೆಂಬಲಿಗರಾಗಿದ್ದವರು. ಮಾದೇವ ನನ್ನನ್ನು ಅವರ ಹೋಟೆಲೊಳಕ್ಕೆ ಕರೆದಾಗ ಅವರ ಮಗ ಹೆದರಿ ಹೋಗಿದ್ದನಂತೆ. ನಾನು ಮಾದೇವನಿಗೆ ಖಡಕ್ ಮಾತಾಡಿದ್ದು ಕೇಳಿ ಅವನಿಗೆ ಆಶ್ಚರ್ಯದ ಜೊತೆ ಭಾರಿ ಖುಷಿಯಾಗಿತ್ತು. ನಡೆದ ಸಂಭಾಷಣೆಯನ್ನು ಅವನು ಗೆಳೆಯರಿಗೆಲ್ಲ ಉಪ್ಪು-ಖಾರ ಹಚ್ಚಿ ಹೇಳಿದ್ದೇ ಹೇಳಿದ್ದು. ಈ ಅಣ್ಣತಮ್ಮಂದಿರು ಹಜ್ಜರಗಿಯಲ್ಲಿ ಲಾತಾ ತಿಂದಿದ್ದು, ನಾನು ಮಾದೇವನಿಗೆ ವಾರ್ನಿಂಗ್ ಕೊಟ್ಟಿದ್ದು ಎರಡೂ ಅಲ್ಲಿನ ಗೆಳೆಯರಿಗೆ ಮತ್ತಷ್ಟು ಧೈರ್ಯ ತುಂಬಿದವು.
ಗಣೇಶ ಮೈದಾನದ ಜೆಪಿ ಭಾಷಣ ಕೇಳಿದ ಮಾದೇವನ ತಮ್ಮ ಪ್ರಕಾಶ ಜೆಪಿ ಬಳಿ ಬಂದು, “ನಾ ಒಂದ್ ತಪ್ ಮಾಡೇನ್ರಿ ಸರ. ಇನ್ಮೇಲೆ ಮಾಡಂಗಿಲ್ರಿ. ನನ್ ಮ್ಯಾಲೆ ಏನೂ ಕ್ರಮ ತಗೀಬ್ಯಾಡ್ರಿ. ನಾನು ಇನ್ಮೇಲಿಂದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡ್ತೀನ್ರಿ…” ಅಂತ ಪರಿಪರಿಯಾಗಿ ಬೇಡಿಕೊಂಡ.
ʻಹೊರಗಿನಿಂದ ಬಂದವರುʼ – ಮಾತು ಹಿಂಪಡೆದ ಎಸ್ಪಿ
ಒಮ್ಮೆ ಡಿಸಿ ಆಫೀಸ್ ಮುಂದೆ ಹಳ್ಳಿಗರ ಧರಣಿ ನಡೆದಿತ್ತು. ಅಲ್ಲಿಗೆ ಬಂದ ಎಸ್ಪಿ ಸಂಜಯವೀರ್ ಸಿಂಗ್ ರೈತರಿಗೆ “ಹೊರಗಿನಿಂದ ಬಂದವರ ಮಾತು ಕೇಳಿ ಸುಮ್ಮಸುಮ್ಮನೆ ಹೋರಾಟ ಮಾಡಬೇಡಿ” ಎಂದು ದಬಾಯಿಸಲು ನೋಡಿದರು. ಆಗ ಅಲ್ಲೇ ಇದ್ದ ಹಿರಿಯ ಪತ್ರಕರ್ತ ದಮನ್ ಪಾಟೀಲರು ಎಸ್ಪಿಯ ಮಾತಿಗೆ ಆಕ್ಷೇಪ ಎತ್ತಿದರು. “ಬಸವಣ್ಣ ಬಿಜಾಪುರ ಜಿಲ್ಲೆಯ ಬಾಗೇವಾಡಿಯಿಂದ ಬಂದು ಕಲ್ಯಾಣದಲ್ಲಿ ಕ್ರಾಂತಿ ಮಾಡಿದ ನೆಲ ಇದು. ನಾಗರಾಜ ಎಲ್ಲಿಯವನೂ ಅಲ್ಲ, ನಮ್ಮ ಕರ್ನಾಟಕದವನೇ. ನೀವು ಯೂಪಿ-ಬಿಹಾರದಿಂದ ಬಂದು ಇಲ್ಲಿ ಡ್ಯೂಟಿ ಮಾಡಬಹುದಾದರೆ ನಾಗರಾಜ ಯಾಕೆ ಇಲ್ಲಿ ಬಂದು ರೈತರ ಹೋರಾಟಕ್ಕೆ ನೆರವಾಗಬಾರದು? … ನಿಮ್ಮ ಮಾತು ವಾಪಸ್ ತಗೊಳ್ರಿ” ಎಂದು ತಿರುಗೇಟು ನೀಡಿದರು. ಕೂಡಲೇ ರೈತರೆಲ್ಲ ಎಸ್ಪಿ ತನ್ನ ಮಾತನ್ನು ವಾಪಸ್ ತಗೊಂಡು ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದುಬಿಟ್ಟರು. ಸುತ್ತುಮುತ್ತ ಇದ್ದ ಪತ್ರಕರ್ತರೆಲ್ಲ ಬಂದು ಕೂಡಿಕೊಂಡರು. ಕೊನೆಗೆ ಬೇರೆ ದಾರಿ ಕಾಣದೆ ಎಸ್ಪಿ ʻಸಾರಿ, ನನ್ನ ಮಾತು ವಾಪಸ್ ತಗೊಳ್ತೀನಿʼ ಎನ್ನಬೇಕಾಯಿತು.
ಇದನ್ನೂ ಓದಿ ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 5
“ಪ್ಯಾಟ್ರಿಗೆ ಭಿಂಕಿ ಬಿದ್ರ ಫೋನ್ ಹತ್ತದಲ್ವ?”
ಒಮ್ಮೆ ನಿಜಾಂಪುರದ ರೈತರು, ಯುವಕರು “ನಡೀರಿ ಸರ. ಈ ಏಜೀಪಿಯವಂದು ತಕ್ಲೀಪಿ (ತಕ್ಲೀಫ್ – ತೊಂದರೆ) ಭಾಳ ಆಗ್ಯಾದ. ವಿಚಾರಿಸೋಣು ನಡೀರಿ” ಅಂತ ಕರೆದರು. ಅಲ್ಲಿಗೆ ಹೋದಾಗ ಅದರ ಮಾಲೀಕ ಮದನ್ ಮೋಹನ್ ರೆಡ್ಡಿ ಇರಲಿಲ್ಲ; ಅವರದ್ದೇ ಇನ್ನೊಂದು ಕಾರ್ಖಾನೆಯಾದ ಎಸ್‌ಓಎಲ್‌ಗೆ ಮೀಟಿಂಗಿಗೆ ಹೋಗಿದ್ದಾರೆ ಎಂಬ ಉತ್ತರ ಮ್ಯಾನೇಜರ್‌ನಿಂದ ಬಂತು. ಫೋನ್ ಮಾಡಲು ಹೇಳಿದರೆ ಫೋನ್ ಕೆಟ್ಹೋಗಿದೆ ಎಂದ. ಸ್ವಲ್ಪ ಹೊತ್ತು ಕಾದು ಪುನಃ ಕೇಳಿದರೂ ಅದೇ ಉತ್ತರ. ಆಗ ತುಕಾರಾಮ ಎಂಬ ದಲಿತ ಯುವಕ “ಪ್ಯಾಟ್ರಿಗೆ ಭಿಂಕಿ ಬಿದ್ರ ಫೋನ್ ಹತ್ತತದಲ್ವ?” ಎಂದ. ಕೂಡಲೇ ಫೋನೂ ಸರಿಯಾಯಿತು, ರೆಡ್ಡಿಯ ಮೀಟಿಂಗೂ ಮುಗೀತು! ಐದು ನಿಮಿಷದೊಳಗೆ ಬಂದ ಆತ ಎಲ್ಲರನ್ನೂ ಛೇಂಬರಿಗೆ ಕರೆಸಿಕೊಂಡರು. ಟ್ಯಾಂಕರ್‌ನವರು ಎಲ್ಲೆಂದರಲ್ಲಿ ನೀರು ಸುರಿಯುತ್ತಿರುವುದನ್ನು ಕುರಿತು ರೈತರು ಹೇಳಬೇಕಿದ್ದುದನ್ನು ಹೇಳಿದರು. ಅವನು ನಿರಾಕರಿಸುತ್ತಲೇ ಇದ್ದ. (ಮಾತೆಲ್ಲ ಹಿಂದಿಯಲ್ಲೇ.) ಆಗ ನಾನು, “ನೋಡಿ ಮಿ. ರೆಡ್ಡಿ. ನಮಗೆ ಎರಡು ವಿಧಾನವೂ ಗೊತ್ತು – ಅಕ್ರಾಸ್ ದ ಟೇಬಲ್ ಚರ್ಚೆಯೂ ಗೊತ್ತು, ಅದು ಕೆಲಸಕ್ಕೆ ಬರದಿದ್ದರೆ ಬೇರೆ ವಿಧಾನವೂ ಗೊತ್ತು…” ಎಂದಾಗ ಆತ ಮೆತ್ತಗಾದರು. ಟ್ಯಾಂಕರ್‌ಗಳು ಇನ್ನೊಮ್ಮೆ ಇಲ್ಲೆಲ್ಲಾದರೂ ನೀರು ಸುರಿದರೆ ಕಾರ್ಖಾನೆಯನ್ನು ಸುಮ್ನೆ ಬಿಡಲ್ಲ ಅಂತ ರೈತರು ವಾರ್ನಿಂಗ್ ನೀಡಿ ವಾಪಸ್ ಬಂದರು.
ಇಂಥ ಸಣ್ಣಸಣ್ಣ ಮುಖಾಮುಖಿಗಳು ಎಷ್ಟೋ ನಡೆದಿವೆ, ಲೆಕ್ಕ ಇಟ್ಟವರಿಲ್ಲ.

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ