“ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…”
ಒಂದು ಪ್ರದೇಶದ ಪ್ರಕೃತಿ ಸೌಂದರ್ಯ, ಅಲ್ಲಿನ ಸಾಹಿತ್ಯ ಲೋಕವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ನಮ್ಮ ನಿಸರ್ಗದ ಅಪೂರ್ವ ಸೊಬಗು ಕೂಡ ಒಂದು ಮುಖ್ಯ ಕಾರಣವಾಗಿರಬಹುದು ಎಂಬುದು ಹಲವಾರು ಬಾರಿ ಅನಿಸಿದ್ದು ಇದೆ. ಯಾವುದೇ ಲೇಖಕನ ವಿಚಾರಧಾರೆ, ಅವನ ಒಳಗಿನ ಮತ್ತು ಹೊರಗಿನ ಪ್ರಪಂಚಗಳಿಂದ ಪ್ರೇರಿತವಾಗಿರುತ್ತದೆ. ಅಂತಹ ಸ್ಫೂರ್ತಿದಾಯಕ ನಿಸರ್ಗ ತಾಣಗಳಲ್ಲಿ ಕುದುರೆಮುಖವೂ ಒಂದು.
ಚಿಕ್ಕಂದಿನಿಂದಲೂ ನಾನು ದೂರದಿಂದ ನೋಡುತ್ತಿದ್ದ ಬೆಟ್ಟ—ಕುದುರೆಮುಖ. ಘಟ್ಟದ ಕೆಳಗಿನವರಾದ ನಮ್ಮ ಕಣ್ಣಿಗೆ, ಕಾರ್ಕಳದ ಸುತ್ತಮುತ್ತೆಲ್ಲಾ ಎಲ್ಲಿಂದಲೇ ನೋಡಿದರೂ, ಈ ಬೆಟ್ಟ ವಿಶೇಷವಾಗಿ ಕಾಣುತ್ತಿತ್ತು. ಆದರೆ, ಅದನ್ನು ಒಮ್ಮೆ ತಲುಪಬಹುದು, ಅಲ್ಲಿಗೆ ಒಂದೊಮ್ಮೆ ನನ್ನ ಜೀವನದಲ್ಲಿ ಅಲ್ಲಿಗೆ ಹೋಗುವ ಸಂದರ್ಭ ಬರಬಹುದು ಎಂಬ ಆಲೋಚನೆಯೇ ಇರಲಿಲ್ಲ. ಚಾರಣ, ಪ್ರವಾಸ, ನಿಸರ್ಗ ಸುತ್ತಾಟವೆಲ್ಲಾ “ಉಳ್ಳವರಿ”ಗೆ; ನಮ್ಮಂಥವರಿಗೆ ಅಲ್ಲ ಎಂಬ ದೃಢಭಾವನೆ ಇತ್ತು. ಹಾಗೆಯೇ ನನ್ನ ಸುತ್ತ ಮುತ್ತ ಚಾರಣ ಅಷ್ಟು ಪ್ರಚಲಿತವೂ ಇರಲಿಲ್ಲ. ಹೀಗಾಗಿ, ಕುದುರೆಮುಖ ಎಂದರೆ ನನ್ನ ಪಾಲಿಗೆ ಎಂದಿಗೂ “ದೂರದ ಬೆಟ್ಟವೇ” ಆಗಿತ್ತು. ಆದರೆ, ಈ ಬೆಟ್ಟದ ವಿಶಿಷ್ಟ ಆಕೃತಿಯಿಂದ ಅದು ಎಲ್ಲ ಕಡೆಯಿಂದಲೂ ಕಾಣಿಸುತ್ತಿತ್ತು. “ಕುದುರೆಮುಖ ಕಾಣಲಿಲ್ಲ ಎಂದರೆ, ಮಳೆ ಗ್ಯಾರಂಟಿ!” ಎಂಬ ನಂಬಿಕೆಯೂ ಜನರಲ್ಲಿತ್ತು. ಅಂದರೆ, ಬೆಟ್ಟದ ತಪ್ಪಲಲ್ಲಿ ಮಂಜು ಮಸುಕಿದರೆ, ಘಟ್ಟದ ಕೆಳಗೆ ಮಳೆ ಖಚಿತ ಎಂಬ ನಂಬಿಕೆ.
ಹೀಗೆ, ಕುದುರೆಮುಖ—ಹೆಸರೇ ಹೇಳುವಂತೆ, ದೂರದಿಂದ ಕುದುರೆಯ ಮುಖದಂತೆ ಕಾಣಿಸುವ ಬೆಟ್ಟ—ಕಾರ್ನಾಟಕದ ಅತ್ಯಂತ ಸುಂದರ ಬೆಟ್ಟಗಳಲ್ಲಿ ಒಂದಾಗಿ ಪ್ರಸಿದ್ಧವಾಗಿದೆ. ಹಿಂದಿನ ಕಾಲದಲ್ಲಿ ನಾವಿಕರಿಗೆ ಶಿಖರದ ಕುದುರೆಯ ಮುಖವನ್ನು ಹೋಲುವ ಈ ಬೆಟ್ಟ ಗುರುತಾಗಿ ಕೆಲಸ ಮಾಡುತಿತ್ತು. ಸಮುದ್ರಮಟ್ಟದಿಂದ 6,207 ಅಡಿ (1892 ಮೀಟರ್) ಎತ್ತರದಲ್ಲಿರುವ ಈ ಬೆಟ್ಟ, ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿಯ ನಂತರ ಕರ್ನಾಟಕದ ಮೂರನೇ ಅತಿ ಎತ್ತರದ ಶಿಖರವಾಗಿದೆ.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕುದುರೆಮುಖ ತಲುಪಬಹುದು. ಚಾರಣಿಗರಿಗೆ ಹಲವಾರು ಹೋಂ ಸ್ಟೇ ಗಳು ಚಿಕ್ಕಮಗಳೂರು, ಕೊಟ್ಟಿಗೆಹಾರ, ಮುಳ್ಳೋಡಿ, ಅಥವಾ ಕುದುರೆಮುಖ ಪರ್ವತದ ಹತ್ತಿರದ ಹಳ್ಳಿಗಳಲ್ಲಿ ಇದೆ. ಇಲ್ಲಿ ರಾತ್ರಿ ಬಂದು ವಿಶ್ರಮಿಸಿ, ಮರುದಿನ ಬೆಳಗಾತ ಬೇಗ ಚಾರಣಕ್ಕೆ ಹೊರಡಬಹುದು. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖಕ್ಕೆ ಹತ್ತಿರದ ಪಟ್ಟಣ ಕಳಸ, ಇದು ಸುಮಾರು 20 ಕಿ.ಮೀ ದೂರದಲ್ಲಿದೆ. ಕುದುರೆಮುಖ ಪರ್ವತ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗ. ಈ ರಾಷ್ಟ್ರೀಯ ಉದ್ಯಾನವನ ಭಾರತದ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ವಿಶಾಲವಾದ ಸಂರಕ್ಷಿತ ಪ್ರದೇಶ. ಈ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲ ಪರಿಸರ ಹಚ್ಚ ಹಸಿರಿನ ಮತ್ತು ರಮಣೀಯ ಭೂದೃಶ್ಯಗಳಿಗೆ ಹೆಸರುವಾಸಿ. ಸಾಮಾನ್ಯವಾಗಿ ಅಕ್ಟೋಬರಿನಿಂದ ಹಿಡಿದು ಮಾರ್ಚಿನವರೆಗೆ ಚಾರಣ ಮಾಡಲು ಸೂಕ್ತ ಸಮಯ. ಅಷ್ಟೇನೂ ಬಿಸಿಲು ಇರಲ್ಲ, ಹಾಗೆಯೇ ಮಳೆಯ ಬಿರುಸು ಕೂಡ ಕಡಿಮೆಯಾಗಿ, ಇಡೀ ಪಶ್ಚಿಮ ಘಟ್ಟವೇ ನೋಡಲು ಅದ್ಭುತವಾಗಿರುತ್ತದೆ. ಅಲ್ಲದೆ ಈ ಪರ್ವತದ ಶಿಖರ ತಲುಪಲು ಶೋಲಾ ಕಾಡಿನ ಮೂಲಕ ಕಾಲ್ನಡಿಗೆಯಲ್ಲಿ ಹೋಗಬೇಕು. ಪಶ್ಚಿಮ ಘಟ್ಟಗಳಲ್ಲಿ ಕಾಣುವ ಹುಲ್ಲುಗಾವಲು ಮತ್ತು ಹಚ್ಚ ಹಸಿರು ಪೊದೆಗಳಿಂದ ಆವರಿಸಿರುವ ಈ ಇಡೀ ಬೆಟ್ಟ ಪ್ರದೇಶ ನೋಡುಗರ ಮನಸಿಗೆ ಮತ್ತು ಕಣ್ಣಿಗೆ ಮಹದಾನಂದ ನೀಡುವ ಬೆಟ್ಟ.

ಕುದುರೆಮುಖ ಅರಣ್ಯಪ್ರದೇಶವು ಪ್ರಕೃತಿಯ ಅಪರೂಪದ ಕೊಡುಗೆಯೆಂದರೆ ಅದು ಉತ್ಪ್ರೇಕ್ಷೆಯಲ್ಲ. ಇಲ್ಲಿ ಮುಗಿಲು ಮುಟ್ಟುವಂತಹ ಹಸಿರು ಪರ್ವತಗಳು, ನಿರಂತರವಾಗಿ ಹರಿಯುವ ನೀರಿನ ಧಾರೆಗಳು, ತಂಪು ಗಾಳಿ, ಮತ್ತು ಹಿಮ್ಮಡಿದ ಬೆಟ್ಟಗಳ ಮಧ್ಯೆ ಬಚ್ಚಿಟ್ಟುಕೊಂಡಿರುವ ಅಪರೂಪದ ಜೀವಜಾತಿಗಳ ವೈವಿಧ್ಯತೆ—all these elements create a paradise for nature lovers.
ಈ ಅರಣ್ಯ ಜಿಂಕೆ, ಸಿಂಹಬಾಲದ ಮಕಾಕ್, ಮಲಬಾರ್ ದೈತ್ಯ ಅಳಿಲು, ಚಿರತೆ, ಸಾಮಾನ್ಯ ಲಂಗೂರ್, ಹಾಗೂ ಇನ್ನೂ ಅನೇಕ ವನ್ಯಜೀವಿಗಳಿಗೆ ನೈಸರ್ಗಿಕ ನೆಲೆಯಾಗಿದೆ. ವನ್ಯಜೀವಿಗಳ ಚಲನೆ ಶಾಂತವಾಗಿ, ಅನಾವರಣವಾಗದೆ ನಡೆಯುತ್ತದೆ, ಆದರೆ ಮಳೆಗಾಲದಲ್ಲಿ ಈ ಪ್ರದೇಶ ಕಾಣುವ ಪರಿಯೇ ಬೇರೆ. ಪ್ರತಿ ಹೆಜ್ಜೆಯಲ್ಲೂ ಜಿಗಣೆಗಳ ಲಯಬದ್ಧ ನೃತ್ಯ, ಜಲತೋಪುಗಳಲ್ಲಿ ಮಿನುಗುವ ಅಪರೂಪದ ಕಪ್ಪೆಗಳ ದೃಷ್ಯಗಳು, ಎಲ್ಲವೂ ಈ ಪರಿಸರವನ್ನು ಮತ್ತಷ್ಟು ಮೋಹಕಗೊಳಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಟ್ರೆಕ್ಕಿಂಗ್ ಬಹಳ ಜನಪ್ರಿಯವಾಗಿರುವುದರಿಂದ, ಇಂದು ಹೆಚ್ಚಿನ ಸಂಖ್ಯೆಯ ಜನರು ಪ್ರತಿಯೊಂದು ಬೆಟ್ಟಗಳನ್ನು ಚಾರಣ ಮಾಡುತ್ತಿರುವುದನ್ನು ಕಾಣಬಹುದು. ಆದರೆ ಎಲ್ಲಾ ಬೆಟ್ಟಗಳು ಒಂದೇ ರೀತಿಯಲ್ಲಿರುವುದಿಲ್ಲ. ಕೆಲವೊಂದು ತುಂಬಾ ತಾಂತ್ರಿಕವಾಗಿ(climbing techniques) ಕಠಿಣವಾಗಿರುತ್ತವೆ, ಕೆಲವೊಂದು ಸೂಕ್ಷ್ಮ ಪರಿಸರ ಹೊಂದಿರುತ್ತವೆ, ಹಾಗೂ ಕೆಲವೊಂದು ತೀರಾ ಕಡಿದಾದ ದಾರಿಯನ್ನು ಹೊಂದಿರುತ್ತವೆ. ಇದೇ ರೀತಿಯಲ್ಲಿ, ಕೆಲವು ದುರ್ಘಟನೆಗಳು ಸಂಭವಿಸಿದ ನಂತರ, ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿ, ಸಂಭವನೀಯ ಅಪಾಯಗಳನ್ನು ಮನಗಂಡು, ಇಂದಿನ ದಿನಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅದ್ದರಿಂದ, ಯಾವುದೇ ಅರಣ್ಯ ಪ್ರದೇಶಕ್ಕೆ ಚಾರಣ ಮಾಡಲು ಮುನ್ನ, ಅಗತ್ಯ ಅನುಮತಿ ಕುರಿತು ಒಂದಿಷ್ಟು ರಿಸರ್ಚ್ ಮಾಡಿ ಹೋಗುವುದು ಅತೀ ಅವಶ್ಯಕ.
ಕುದುರೆಮುಖ ಇದಕ್ಕೆ ಹೊರತಲ್ಲ. ಇಲ್ಲಿಯ ಅರಣ್ಯ ಪ್ರವೇಶ ಮಾಡುವ ಮೊದಲು ಕಡ್ಡಾಯ ಅನುಮತಿ ಪಡೆಯಲೇ ಬೇಕು. ಹಾಗೆಯೇ, ಪ್ರತಿಯೊಂದು ಚಾರಣಿಗರು, ಚಾರಣಿಗ ಗುಂಪು ಕಡ್ಡಾಯವಾಗಿ ಅರಣ್ಯ ಇಲಾಖೆ ನಿಗದಿ ಪಡಿಸಿದಂತೆ ಓರ್ವ ಗೈಡನ್ನು ಕರೆದೊಯ್ಯಲೇಬೇಕು. ಕುದುರೆಮುಖ ಚಾರಣಕ್ಕೆ ಯಾವುದೇ ರೀತಿಯ ಟೆಕ್ನಿಕಲ್ ಪರಿಣತಿಯ ಅಗತ್ಯವಿಲ್ಲದಿದ್ದರೂ, ತುಂಬಾ ಶ್ರಮ ಬೇಕಾಗಿರುವ ಪರ್ವತವಿದು. ಕುದುರೆಮುಖ ಚಾರಣದ ಒಟ್ಟು ದೂರ 18-20 ಕಿ.ಮೀ. (ಹೋಗುವುದು ಮತ್ತು ಬರುವುದು ಸೇರಿ) ಸರಿ ಸುಮಾರು 10 ರಿಂದ 12 ಗಂಟೆ (ಊಟದ ವಿರಾಮ ಸೇರಿ ) ತೆಗೆದುಕೊಳ್ಳುತ್ತದೆ.
ಒಂದರ ಮೇಲೆ ಇನ್ನೊಂದು ಹಸಿರು ಕಾರ್ಪೆಟ್ ಹಾಕಿದ ಹಾಗೆ, ಇದಕ್ಕೆ ಅಂತ್ಯವೇ ಇಲ್ಲವೇನೋ ಅನ್ನುವ ಹಾಗೆ ಕಾಣುವ ಬೆಟ್ಟಗಳು, ಝರಿ ಝರಿ ಹರಿಯುವ ಹೊಳೆಗಳಿಂದ ಕೂಡಿದ ಹಚ್ಚ ಹಸಿರಿನ ಕಣಿವೆಗಳು ನಡೆದ ದಾರಿ ಮತ್ತು ಸಮಯ ಕಳೆದಿದ್ದೆ ತಿಳಿಯುವುದಿಲ್ಲ. ಆದರೆ ಇದು ತುಂಬಾ ಸುಲಭವಾಗಿ ಶಿಖರ ತಲುಪಬಲ್ಲ ಬೆಟ್ಟವೂ ಅಲ್ಲ. ಒಂದು ದಿನದಲ್ಲಿ ಈ ಚಾರಣವನ್ನು ಪೂರ್ಣಗೊಳಿಸಲು ದೈಹಿಕ ಫಿಟ್ನೆಸ್ ಮತ್ತು ಒಂದಿಷ್ಟು ಚಾರಣ ಅನುಭವದ ಅಗತ್ಯವಿದೆ. ತುಂಬಾ ಅನುಭವವಿಲ್ಲದ ಚಾರಣಿಗರು ಇದನ್ನು ಪ್ರಯತ್ನಿಸಬಹುದಾದರೂ, ದೈಹಿಕ ಫಿಟ್ನೆಸ್ ಬಹು ಮುಖ್ಯ. ದಾರಿ ಮಧ್ಯೆ ಎಲ್ಲಿಯೂ ನೀರು, ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ, ನೀವು ಉಳಿದುಕೊಂಡಿರುವ ಜಾಗದಿಂದಲೇ ಎಲ್ಲವನ್ನೂ ಕಟ್ಟಿಕೊಂಡು ಚಾರಣ ಪ್ರಾರಂಭಿಸಬೇಕು. ಮಳೆಗಾಲದಲ್ಲಿ ಅಲ್ಲಲ್ಲಿ ಜಾರಿಗಳಿವೆ, ಅಲ್ಲಿಯ ನೀರು ಕುಡಿಯಬಹುದು, ಆದರೆ ಬೇಸಿಗೆ ಕಾಲದಲ್ಲಿ ಇವುಗಳು ಬತ್ತಿ ಹೋಗುವ ಕಾರಣ ಮೊದಲೇ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ಹೊರಡಬೇಕು.

ಶಿಖರ ಏರಲು ಹೊರಟವರಿಗೆ, ಕುದುರೆಮುಖವು ಒಂದು ಅನನ್ಯ ಅನುಭವ ನೀಡುತ್ತದೆ ಎನ್ನುವ ಮಾತಂತೂ ನಿಜ. ಮಳೆಗಾಲದಲ್ಲಂತೂ ಇಡೀ ಪರ್ವತಕ್ಕೆ ಹೊಚ್ಚ ಹೊಸದಾದ ಹಚ್ಚ ಹಸಿರ ಹೊದಿಕೆ ಹೊದ್ದಂತೆ ಕಾಣುತ್ತದೆ. ಎಳೆಯ ಹುಲ್ಲು ಪೈರಿನಿಂದ ನಿಸರ್ಗವೇ ಚಾರಣಿಗರಿಗೆ ಮೆಟ್ಟಿಲುಗಳನ್ನು ಕಟ್ಟಿರುವಂತೆ ಪರ್ವತದ ತುದಿಯತ್ತ ದಾರಿ ಸಾಗುತ್ತಾ ಹೋಗುತ್ತದೆ. ಅದಕ್ಕೆ ಪೂರಕವೆಂಬಂತೆ ದಾರಿ ಉದ್ದಕ್ಕೂ ಅನೇಕ ನೀರ ಜರಿ, ಕಿರಿದಾದ ಹಳ್ಳ, ಸಣ್ಣ ತೊರೆಗಳು! ಕೆಲವು ಸಣ್ಣ ತೊರೆಗಳು ಮನಸಿಗೆ ತಂಪು ಕೊಡುವಂತಿರುತ್ತವೆ, ಆದರೆ ಕೆಲವು ಸ್ಥಳಗಳಲ್ಲಿ ಕಾಲಿನಲ್ಲಿರುವ ಶೂ ನೆನೆಯುವುದಂತೂ ಗ್ಯಾರಂಟಿ. ಈ ಅನುಭವವೆ ಅಪೂರ್ವ. ಪ್ರಕೃತಿಯ ಈ ತವರೂರು, ತನ್ನ ಶಾಂತತೆಯಿಂದ, ಹಸಿರಿನಿಂದ, ಮತ್ತು ಜೀವಜಾತಿಗಳ ವೈವಿಧ್ಯದಿಂದ, ಇಲ್ಲಿ ಬರುವ ಪ್ರತಿ ಪಯಣಿಕನ ಮನಸ್ಸಿನಲ್ಲಿ ಅನನ್ಯ ಅನುಭವವನ್ನು ಮೂಡಿಸುತ್ತದೆ.
ಮುಳ್ಳೋಡಿಯಿಂದ ಕುದುರೆಮುಖದ ಹಾದಿ: ಒಂದು ಪ್ರಕೃತಿ ಪಯಣ
ಕುದುರೆಮುಖ ಚಾರಣದ ಸುಪ್ರಸಿದ್ಧ ದಾರಿ ಮುಳ್ಳೋಡಿ ಎಂಬ ಪುಟ್ಟ ಹಳ್ಳಿಯಿಂದ ಪ್ರಾರಂಭಗೊಳ್ಳುತ್ತದೆ. ಬೆಂಗಳೂರಿನಿಂದ ಹೊರಟವರು ಮೊದಲಿಗೆ ಕಳಸ ತಲುಪಬೇಕು, ಅಲ್ಲಿಂದ ಮುಳ್ಳೋಡಿಗೆ ಹೋಗಿ ಅರಣ್ಯ ಇಲಾಖೆಯ ಅನುಮತಿ ಪಡೆದು ಮಾತ್ರ ಚಾರಣ ಆರಂಭಿಸಬಹುದು. ಈ ಹಾದಿಯ ಮೊದಲಿನ ಹಂತವು ತುಂಬಾ ಸಲೀಸಾಗಿದ್ದು, ಅಷ್ಟೇನೂ ತ್ರಾಸವಿಲ್ಲದ ನಯವಾದ ದಾರಿ. ಆದರೆ ಮಳೆಗಾಲದಲ್ಲಿ ಈ ಹಾದಿಯ ಪರಿ ಬದಲಾಗುತ್ತದೆ—ಎಲ್ಲಾ ದಾರಿಗಳೂ ನೀರು ನುಂಗಿ, ಮಣ್ಣು ಮುಚ್ಚಿ ಒದ್ದೆಯಾಗಿಬಿಡುತ್ತವೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ಚಾರಣ ಶೂಗಳು ಖಂಡಿತವಾಗಿಯೂ ಬೇಕೇಬೇಕು, ಇಲ್ಲದಿದ್ದರೆ ಜಾರಿ ಬೀಳುವುದಂತೂ ಗ್ಯಾರಂಟಿ. ಪಶ್ಚಿಮ ಘಟ್ಟದ ಮಳೆ ಎಂದರೆ, ಅದು ಊಹೆಗೂ ಮೀರಿದ್ದು! ಇಲ್ಲಿ ಮಳೆಗಾಲದಲ್ಲಿ ಚಾರಣ ಮಾಡುವವರಿಗೆ ಇನ್ನೊಂದು ಬೇಕೇ ಬೇಕಾದದ್ದು ಒಂದು ಉತ್ತಮ ಪಾಂಚೊ (raincoat). ಪ್ರಕೃತಿಯ ಸೌಂದರ್ಯದ ಜೊತೆಗೆ ಸಂಕಷ್ಟಗಳೂ ಹೊಸದಲ್ಲ, ಈ ಬೆಟ್ಟವೂ ಇದಕ್ಕೆ ಹೊರತಲ್ಲ. ಈ ಹಾದಿಯಲ್ಲಿ ಇನ್ನೊಂದು ದೊಡ್ಡ ಸವಾಲು – ಇಂಬಳಗಳ ಕಾಟ! ಅವು ಯಾವುದೇ ಚಾರಣಿಗರನ್ನು ಬಿಡುವುದಿಲ್ಲ. Savlon, ವೋಲಿನಿ, ಮೂವ್, ಸುಣ್ಣ, ವ್ಯಾಸೆಲಿನ್—ಯಾವುದೇ ಉಪಾಯ ಪ್ರಯೋಗಿಸಿದರೂ, ಇಂಬಳಗಳ ಮುನಿಸು ಕಡಿಮೆ ಆಗಬಹುದು, ಆದರೆ ಸಂಪೂರ್ಣವಾಗಿ ಇಂಬಳಗಳ ಕಾಟವನ್ನು ತಪ್ಪಿಸಲು ಸಾಧ್ಯವಿಲ್ಲ. Well, ನಾವು ಅವರ ಪ್ರಪಂಚಕ್ಕೆ ಹೋಗುವುದರಿಂದ ಇವೆಲ್ಲವೂ ಅದರ ಒಂದು ಭಾಗವಷ್ಟೇ.
ಆರಂಭದ ದಾರಿಯಿಂದ ಕಾಡು ಹಾದಿಯನ್ನು ದಾಟಿದ ಬಳಿಕ ಹೆಜ್ಜೆ ಹೆಜ್ಜೆಯಾಗಿ ಹಸುರು ಹಾದಿ ಸಾಗಿದಂತೆ, ಚಾರಣಿಗರಿಗೆ ಸಿಗುವ ಒಂದು ಪ್ರಮುಖ ತಾಣ-ಒಂಟಿ ಮರ. ಇದು ಚಾರಣದ ಮೊದಲ ಮಹತ್ವದ ವಿರಾಮ ಪಾಯಿಂಟ್. ಸುತ್ತಲಿನ ಕಾಡು, ಹರಿದುಕೊಂಡು ಹೋಗುವ ಸಣ್ಣ ಜರಿಗಳು, ತೊರೆಗಳ ಮಧ್ಯೆ ಈ ಒಂದು ಮರ ಮಾತ್ರ ಅಲ್ಲೇ ಮೌನವಾಗಿ ನಿಂತಿರುತ್ತದೆ. ಯಾರಿಟ್ಟರೋ ಹೆಸರು – ಒಂಟಿ ಮರವೆಂದು. But, ಅದರ ಗುರುತೇ ಆ ಹೆಸರಾಗಿ ಬಿಟ್ಟಿದೆ. ಇಲ್ಲಿಂದ ಕಣಿವೆಯ ಆಳದಲ್ಲಿ ಹರಿದುಹೋಗುವ ವೇಗದ ತೊರೆ ಸ್ಪಷ್ಟವಾಗಿ ಕಾಣುತ್ತದೆ. ಹಸಿರಿನಿಂದ ಕೂಡಿದ ಕಣಿವೆಯ ಜೊತೆ ಜೊತೆಗೆ, ಕುದುರೆಮುಖ ಪರ್ವತವನ್ನೂ ಇಲ್ಲಿಂದ ನೋಡಬಹುದು.
ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ, ಮುಂದಿನ ಹಂತ—ಎರಡನೇ ಒಂಟಿ ಮರ. ಈ ಹಾದಿಯ ಪ್ರತಿಯೊಂದು ಹಂತವೂ ಹೊಸ ಅನುಭವ, ಹೊಸ ಸವಾಲು, ಹೊಸ ಕನಸು. ಕುದುರೆಮುಖ ಚಾರಣದ ಒಂದು ಅಪೂರ್ವ ವೈಶಿಷ್ಟ್ಯವೆಂದರೆ, ಇಡೀ ಚಾರಣದಲ್ಲಿ ಹಸಿರು ನಿಮ್ಮ ಕಣ್ಣಿನಿಂದ ಒಂದು ಕ್ಷಣವೂ ದೂರವಾಗುವುದಿಲ್ಲ! ಪಯಣ ಎಷ್ಟೇ ಆಯಾಸವೆನಿಸಿದರೂ, ಇನ್ನೂ ಶಿಖರವೇ ಬಂದಿಲ್ಲವಲ್ಲ ಅಂತ ಅಂದುಕೊಂಡರೂ, ಎಲ್ಲಿ ತಿರುಗಿದರೂ, ಸುತ್ತಲೂ ಹಬ್ಬಿಕೊಂಡಿರುವ ನಸುಹಸಿರು ಹುಲ್ಲುಗಾವಲು, ಗಾಢ ಹಸಿರು ಅರಣ್ಯ ಮತ್ತು ಮೋಡಗಳ ಲಯಬದ್ಧ ನೃತ್ಯ—ಎಲ್ಲವೂ ಈ ಪಯಣವನ್ನು ಒಂದು ಮೌನೋತ್ಸವವನ್ನಾಗಿ ಮಾಡುತ್ತದೆ.
ಇಷ್ಟಕ್ಕೂ, ಇಲ್ಲಿನ ತಂಪಾದ ಗಾಳಿ ; ಅದು ಮನಸ್ಸನ್ನು ತಾಕಿ, ಅಸಂಖ್ಯ ಕ್ಷಣಗಳ ನೆನಪನ್ನು ಮೂಡಿಸುತ್ತದೆ. ಇಲ್ಲಿನ ಮುಕ್ತ ವಾತಾವರಣ, ಹಸಿರಿನ ಅಲೆಮಾರಿತನ, ಮತ್ತು ಪ್ರಕೃತಿಯ ಈ ನಿರಂತರ ನೃತ್ಯ – ಇದನ್ನೇ ಡಾ. ನಿಸಾರ್ ಅಹ್ಮದ್ ಅವರು ತಮ್ಮ ಪ್ರಸಿದ್ಧ ಕವನದಲ್ಲಿ ‘ನಿತ್ಯೋತ್ಸವ’ವೆಂದು ಬಣ್ಣಿಸಿರಬಹುದು. ಇಲ್ಲಿ ಪ್ರತಿಯೊಂದು ಹೆಜ್ಜೆಯೂ ಹೇಳುವುದು ಇಷ್ಟನ್ನೇ —ಪ್ರಕೃತಿಯೊಡನೆ ಬದುಕಿದರೆ, ನಿತ್ಯವೂ ಉತ್ಸವ.

ಎರಡನೇ ವಿರಾಮದ ಪಾಯಿಂಟ್ ದಾಟಿದ ನಂತರ, ತುಂಬಾ ಕಡಿದಾದ ದಾರಿ, ಇದು ಈ ಚಾರಣದ ಕಠಿಣ ಹಂತ ಕೂಡ. ಪ್ರತಿಯೊಂದು ಹೆಜ್ಜೆ ಮುಂದಿಟ್ಟು – ಹಿಂದೆ ದೃಷ್ಟಿ ಹಾಯಿಸಿದರೆ, ಆ ಒಂಟಿ ಮರವೊಂದು —a lone guardian in the sea of green ತರಹ ಭಾಸವಾಗುತ್ತದೆ. ಮುಂದೆ ಒಂದು ಮೃದುವಾದ ಇಳಿಜಾರಿನ ಹಾದಿಯಲ್ಲಿ ಸ್ವಲ್ಪ ದೂರ ಮುನ್ನಡೆದ ಬಳಿಕ, ಮತ್ತೆ ಹಠಾತ್ ತೀವ್ರ ಆರೋಹಣ. ಈ ಹಂತದಲ್ಲಿ, ಯಾಕಾದರೂ ಈ ಶಿಖರಗಳೆಲ್ಲ ಈ ರೀತಿ ಕಡಿದಾಗಿರುತ್ತವೆ ಎನ್ನುವ ಪ್ರಶ್ನೆ ಮನಸಿಗೆ ಬರದೇ ಇರದು. ಇಲ್ಲಿ ನೀರೂ ಬೇಡ, ಹಸಿರೂ ಬೇಡ, ಪೋಂಚೊ ಕೂಡ ಬೇಡ, ಇದು “ಜೀವನದಲ್ಲಿ ಜಿಗುಪ್ಸೆ ತರುವ ಜಾಗ” ಎಂದು ಪ್ರತಿಯೊಬ್ಬ ಉತ್ಸಾಹಿ ಚಾರಣಿಗನಿಗೂ ಅನ್ನಿಸದೆ ಇರದು. ಆದರೆ ಪ್ರತಿ ಬಾರಿಯ ಹಾಗೆ, ಮತ್ತೆ ಹಿಂತಿರುಗಿ ನೋಡಿ, ಅರೆ ಇಷ್ಟು ದೂರ ಬಂದಾಗಿದೆಯಲ್ಲ, ಇನ್ನು ಸ್ವಲ್ಪವೇ ಸ್ವಲ್ಪ, ಈ ಹಂತದಲ್ಲಿ ಧೃತಿ ಕೆಡಬಾರದು ಎಂದು ಮನಸಿನ ಯಾವುದೋ ಮೂಲೆಯಲ್ಲಿ ಒಂದು ಧ್ವನಿ ಕೇಳಿಸದೇ ಕೂಡ ಇರದು. ಇದು ಪ್ರತಿಯೊಬ್ಬ ಚಾರಣಿಗನ ಅನುಭವ.
ಪ್ರತಿಯೊಂದು ಕಠಿಣ ಹಂತದ ನಂತರ ಸುಗಮ ದಾರಿ ಬಂದೇ ಬರುವುದು ಎಂಬ ದೃಢ ನಂಬಿಕೆ ಮನುಕುಲವನ್ನೇ ಪೋಷಿಸಿ ಬೆಳೆಸಿದೆ. ಅದೇ ರೀತಿ, ಪ್ರತಿಯೊಂದು ಆರೋಹಣ ಹಂತದ ಬಳಿಕ, ಶಿಖರ ಮತ್ತಷ್ಟು ಹತ್ತಿರವಾಗುತ್ತಿದೆ ಎಂಬ ದೃಢ ನಂಬಿಕೆ ಪ್ರತಿಯೊಬ್ಬ ಚಾರಣಿಗನದ್ದು! ನಾವು ಶಿಖರ ತಲುಪಿದಾಗ ಕೈಯಲ್ಲಿದ್ದ ವಾಚ್ 2pm ಎಂದು ತೋರಿಸುತಿತ್ತು. ಆದರೆ ಅದು ನಿಜವಾಗಿಯೂ ಮಧ್ಯಾಹ್ನವೇ? ಎಂಬ ಅನುಮಾನ ಉಂಟಾಗುವಷ್ಟು ಮಂಜು ಬೆಟ್ಟದ ಹಸಿರಿನ ಮೇಲೆ ತನ್ನ ಛಾವಣಿ ಹಾಕಿತ್ತು. ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಗಿನಿಂದ ಪಾಂಚೊ, ಜಾಕೆಟ್, balaklavaಗಳನ್ನೆಲ್ಲ ಹೊರತೆಗೆದು ತೊಡಲು ಶುರುಮಾಡಿದರು. “ಅರೆ, ಸಡನ್ ಆಗಿ ಇಷ್ಟೊಂದು ಚಳಿ ಎಲ್ಲಿಂದ ಶುರುವಾಯಿತು?” ಎಂಬ ಪ್ರಶ್ನೆ ಪ್ರತಿಯೊಬ್ಬರ ಮುಖದಲ್ಲೂ ಕಾಣುತಿತ್ತು.
ಒಂದತ್ತು ನಿಮಿಷದಲ್ಲಿ, ಕೆಲವೆ ಕ್ಷಣಗಳ ಹಿಂದೆ ಸ್ಪಷ್ಟವಾಗಿ ಕಾಣುತ್ತಿದ್ದ ಬೆಟ್ಟದ ತುದಿಗಳು, ಕಣಿವೆ, ಹಚ್ಚ ಹಸುರಿನ ಹೊದಿಕೆಯಂತಿದ್ದ ಹುಲ್ಲುಗಾವಲಿನ ರಾಶಿ, ಬಂದ ದಾರಿಗಳು ಎಲ್ಲವೂ ಮಂಜಿನ ತೆರೆಮರೆಯಲ್ಲಿ ಅಡಗಿಕೊಂಡಿದ್ದವು. ಕೇವಲ 100 ಮೀಟರ್ ದೂರದಲ್ಲಿದ್ದವರೇ ಕಾಣದಂತಾದರು!
ಮಂದಗಾಳಿಯ ಮೃದುವಾದ ಸ್ಪರ್ಶ, ಮೌನದಿಂದ ತುಂಬಿದ ಶಿಖರ, ಮತ್ತು ಅಪರೂಪದ ಶಾಂತಿ- ಪ್ರತೀ ಬೆಟ್ಟದ ಶಿಖರ ನೀಡುವ ಅನುಭವವೇ ಬೇರೆ. ಒಂದನ್ನೊಂದು ಹೋಲಿಸಲು ಆಗುವುದಿಲ್ಲ. ಹಾಗೆಯೇ ಒಂದಿಷ್ಟು ಹಿಂತಿರುಗಿ ನೋಡಿದರೆ, ನಾವು ದಾಟಿ ಬಂದ ದಾರಿ, ಅವೆರಡು ಒಂಟಿ ಮರಗಳು ಕೂಡ ಮಂಜಿನೊಳಗೆ ಮುಳುಗಿ ಹೋಗಿತ್ತು.

ಬೆಟ್ಟ ಏರುವುದಷ್ಟೇ ಅಲ್ಲ, ಕೆಲವೊಮ್ಮೆ ಅವರೋಹಣ ಕೂಡ ಅಂತಹುದೇ ಅನುಭವ ನೀಡುತ್ತದೆ. ಇಂತಹ ಒಂದು ಅದ್ಭುತ ಅನುಭವ ನೀಡುವ ಬೆಟ್ಟ ಕುದುರೆಮುಖ. ಕುದುರೆಮುಖ ಚಾರಣದ ಇನ್ನೊಂದು ವೈಶಿಷ್ಟ್ಯ ಇಲ್ಲಿನ ಸೂರ್ಯಾಸ್ತ. ಇಲ್ಲಿನ ಸೂರ್ಯಾಸ್ತವು ತುಂಬಾ ವಿಶಿಷ್ಟವಾದ, ಅದ್ಭುತ ವರ್ಣರಂಜಿತ ದೃಶ್ಯ. ಈ ಸೂರ್ಯಾಸ್ತವನ್ನು ನೋಡಲು ಮಳೆಗಾಲದಲ್ಲಿ ಅವಕಾಶ ಅತಿ ಕಡಿಮೆ. ಆದರೆ, ನೀವು ಬೆಟ್ಟದಿಂದ ತ್ವರಿತವಾಗಿ ಕೆಳಗಿಳಿದರೆ, ಸಂಜೆಯ ರಂಗು ರಂಗಿನ ಸೂರ್ಯಾಸ್ತವನ್ನು ಹಿಂತಿರುಗುವ ಹಾದಿಯಲ್ಲಿ ನೋಡಬಹುದು.
ಮಳೆಗಾಲದಲ್ಲಿನ ಮತ್ತೊಂದು ಅವಿಸ್ಮರಣೀಯ ಅನುಭವ: ಕಣಿವೆಯಾಳದಲ್ಲಿ ಮಿಂಚುಹುಳಗಳ ನೃತ್ಯ
ನಾವು ರಂಗುರಂಗಿನ ಸೂರ್ಯಾಸ್ತವನ್ನು ನೋಡುತ್ತಾ, ಇಂಬಳಗಳು ಕಚ್ಚಿ, ರಕ್ತ ಹೀರಿದ ಜಾಗವನ್ನು ತುರಿಸುತ್ತ, ಅದು ಇದೂ ಮಾತನಾಡುತ್ತ, ಕತ್ತಲಾದುದ್ದೇ ತಿಳಿಯಲಿಲ್ಲ. ಆದರೂ ಕೂಡ ಎಲ್ಲರೂ ಬೇಗ ಬೇಗನೆ ನಡೆದು ನಾವು ಉಳಿದುಕೊಂಡಿದ್ದ ಹಳ್ಳಿಯನ್ನು ತಲುಪಬೇಕಿತ್ತು. ಈ ಮಧ್ಯೆ ನಮಗೆಲ್ಲರಿಗೂ ಒಂದು ಅದ್ಭುತ ದೃಶ್ಯಾವಳಿ ಕಾದಿತ್ತು. ಬಹುಶ, ನಾವ್ಯಾರೂ ನಿರೀಕ್ಷಿಸದೆ ಇದ್ದ ಅನುಭವ ಅದು. ಕಂಡು ಕೇಳರಿಯದ ಅನುಭವ ಕೂಡ. ನಮ್ಮ ಅದೃಷ್ಟವೆಂದೇ ಹೇಳಬೇಕು, ಯಾಕೆಂದರೆ ಇದು ಎಲ್ಲ ಸಮಯದಲ್ಲೂ ಕಾಣಸಿಗುವುದಿಲ್ಲ. ನಾವು ಬೆಟ್ಟವನ್ನು ಇಳಿದು, ನಮ್ಮ ಚಾರಣದ ಕೊನೆಯ ಹಂತವನ್ನು ಮುಗಿಸಲು ಕಾಡು ದಾಟುತ್ತಿದ್ದಾಗ, ಕೆಳಗಿನ ಕಣಿವೆಯಲ್ಲಿ ಕಾಣಿಸಿದ ದೃಶ್ಯವು ನಿಜಕ್ಕೂ ನಮ್ಮೆಲ್ಲರ ಕಲ್ಪನೆಗೂ ಮೀರಿದ ಅನುಭವ. ಸಾವಿರ ಸಾವಿರ ಮಿಂಚುಹುಳಗಳು ಕಣಿವೆಯಾಳದಲ್ಲಿ ಸಾಲುಸಾಲಾಗಿ, ಗುಂಪು ಗುಂಪಾಗಿ ನೃತ್ಯಮಾಡುತ್ತಿದ್ದವು. ಇಡೀ ಕಣಿವೆಯೇ ಮಿಂಚುಹುಳಗಳ ನೃತ್ಯದೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದಂತೆ ಕಾಣುತಿತ್ತು. ಈ ಬೆಳಕು ಕಣಿವೆಯ ಮರಗಳು, ಸಸ್ಯಗಳು, ಕಲ್ಲುಗಳು, ಇಡೀ ಪ್ರಕೃತಿಯನ್ನೇ ಮತ್ತಷ್ಟು ಸೌಂದರ್ಯಭರಿತ ಗೊಳಿಸಿತ್ತು. ನಾವೆಲ್ಲರೂ ಕೂಡ ನಮ್ಮ ಕ್ಯಾಮೆರಾ, ಮೊಬೈಲ್ ಎಲ್ಲವನ್ನೂ ಒಳಗಿಟ್ಟು ಈ ಅದ್ಭುತವನ್ನು ನೋಡಿ ಮೂಕವಿಸ್ಮಿತರಾಗಿದ್ದೆವು. ನಮ್ಮ ಸುತ್ತಲೂ ಇರುವ ಈ ಪ್ರಕೃತಿಯ ಅದ್ಭುತ ಕ್ರಿಯಾಶೀಲತೆ, ಅದರ ಅನಂತ ಶಕ್ತಿಯ ಅನಾವರಣ ನಮ್ಮನ್ನು ಬೇರೊಂದು ಲೋಕಕ್ಕೇ ಕೊಂಡೊಯ್ದಿತ್ತು ಎಂದರೆ ತಪ್ಪಾಗಲಾರದು. ಈ ದೃಶ್ಯಾವಳಿ ನನ್ನ ಚಾರಣದ ಅತ್ಯುನ್ನತ ಅನುಭವ, ಮತ್ತು ಅವಿಸ್ಮರಣೀಯ ಅನುಭವ ಕೂಡ.
ಪ್ರಕೃತಿಯೊಂದಿಗಿನ ಪಯಣ ಹಾಗೆಯೇ ಅಲ್ಲವೇ? ಅದು ನೀಡುವ ಅನುಭವವೇ ಅದ್ಭುತ, ಅದು ಎಲ್ಲವನ್ನೂ ಮರೆಯಿಸಿ ಬಿಡುತ್ತದೆ. ಹಾಗೇ ಅದು ನಿಮ್ಮನ್ನು ಸಂಪೂರ್ಣವಾಗಿ ತನ್ನಲ್ಲಿ ಮುಳುಗಿಸಿಬಿಡುತ್ತದೆ. ಕೆಲವೊಮ್ಮೆ ನೀವು ಯಾವತ್ತೂ ಕಲ್ಪಿಸದ ಅನುಭವಗಳನ್ನು ಅದು ನೀಡುತ್ತದೆ. ಆ ಕ್ಷಣದಲ್ಲಿ ಆ ಒಂಟಿ ಮರಗಳು, ಸಾಗಿ ಹಿಂತಿರುಗಿ ಬಂದಿದ್ದ ಕಡಿದಾದ ದಾರಿ, ಕಚ್ಚಿ ರಕ್ತ ಹೀರಿದ್ದ ಇಂಬಳ, ಮೊಬೈಲ್, ಕ್ಯಾಮೆರಾ, ಹೀಗೆ ಎಲ್ಲವೂ ಮರೆತು ಹೋಗಿತ್ತು. ಆ ಕ್ಷಣಕ್ಕೆ ನಮಗೆ ಕಾಣಿಸಿದ್ದು, ಕೇಳಿಸಿದ್ದು, ಆ ಕಣಿವೆಯ ಕತ್ತಲೆಯ ಮಧ್ಯೆ ಪ್ರಕಾಶಮಾನ ಮಿಂಚುಹುಳಗಳ ಬೆಳಕಿನ ನೃತ್ಯೋತ್ಸವ ಮಾತ್ರ .

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.