ಹವಾಮಾನ ಬದಲಾವಣೆಯಿಂದಾಗಿ ಇಳಿಮುಖವಾಗುತ್ತಿರುವ ಬೆಳೆಗಳ ಉತ್ಪಾದನೆಯ ಪ್ರಮಾಣ ಹಾಗು ಗುಣಮಟ್ಟ, ಆಹಾರ ಭದ್ರತೆಗೆ ಇವು ಒಡ್ಡುತ್ತಿರುವ ಅಪಾಯ, ಇವುಗಳಿಗೆ ಪರಿಹಾರ ಎಂಬಂತೆ ಪರಿಚಯಿಸಲಾಗುತ್ತಿರುವ ಹವಾಮಾನ ವೈರುಧ್ಯ ಸಹಿಷ್ಣು ತಳಿಗಳು, ಮತ್ತು ಅವುಗಳನ್ನು ಬೆಳೆಯುವಲ್ಲಿ ಎದುರಾಗಬಲ್ಲ ಸವಾಲುಗಳು ಈ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ.
ಮಾರ್ಚ್ ಮೂರನೇ ವಾರ ಸಮೀಪಿಸಿದ್ದರೂ, ಮಾರುಕಟ್ಟೆಯಲ್ಲೆಲ್ಲೂ ಮಾವಿನ ಹಣ್ಣಿನ ಸುವಾಸನೆ ಇನ್ನೂ ಮೂಗನ್ನು ಮುಟ್ಟುತ್ತಿಲ್ಲ. ಒಂದೆರಡು ತಳಿಯ ಮಾವಿನ ಹಣ್ಣುಗಳಷ್ಟೇ ಮಾರುಕಟ್ಟೆಗೆ ಆಗಮಿಸಿವೆ. ಈ ನಡುವೆ ಮಾವಿನ ಬಂಪರ್ ಫಸಲು ನಿರೀಕ್ಷಿಸಿ ಕೂತವರಿಗೆ, ಹವಾಮಾನ ಬದಲಾವಣೆಯಿಂದಾಗಿ ಈ ವರ್ಷ ಪ್ರಸಿದ್ಧ ಆಲ್ಫೋನ್ಸೊ ಮಾವಿನ ಬೆಳೆ ಒಟ್ಟು ಉತ್ಪಾದನೆ ಕೇವಲ 35 ಶೇಕಡಾಕ್ಕೆ ಕುಸಿಯಲಿದೆ ಎಂಬ ಸುದ್ದಿ ಇನ್ನಷ್ಟು ನಿರಾಶೆ ಉಂಟು ಮಾಡಲಿದೆ. ಸಾಮಾನ್ಯವಾಗಿ ಫೆಬ್ರವರಿ -ಮಾರ್ಚ್ ವೇಳೆಗೆ ಆರಂಭವಾಗಬೇಕಿದ್ದ ಮಹಾರಾಷ್ಟ್ರದ ಕೊಂಕಣ ಕರಾವಳಿಯಲ್ಲಿ ಬೆಳೆಯುವ ಈ ಆಲ್ಫೋನ್ಸೋ ಮಾವಿನ ಋತು, ಈ ಬಾರಿ ವಿಳಂಬಗೊಂಡಿದೆ. ಅಧಿಕ ತಾಪಮಾನ ಕಾರಣದಿಂದ ಮಾವಿನ ಹೂವುಗಳು ಅಧಿಕ ಮಟ್ಟದಲ್ಲಿ ಕರಟಿ ಹಾಳಾಗಿವೆ. ಇದು ಇಳುವರಿ ಮೇಲೆ, ಮಾವಿನ ಹಣ್ಣಿನ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ.
ಕಳೆದ ವರ್ಷವೂ ಭಾರತದ ಒಟ್ಟು ಮಾವು ಉತ್ಪಾದನೆಯಲ್ಲಿ ಶೇಕಡಾ 40ರಷ್ಟು ಮಾವನ್ನು ಪೂರೈಸುವ ಉತ್ತರಭಾರತದ ಭಾಗದಲ್ಲೂ ಸಹ ಹವಾಮಾನ ಬದಲಾವಣೆಯಿಂದಾಗಿ ಮಾವು ಇಳುವರಿ ಸಾಕಷ್ಟು ಕುಸಿತಕಂಡಿತ್ತು. ಉತ್ತರ ಭಾರತದ ಜನಪ್ರಿಯ ತಳಿಗಳಾದ ಚೌಸಾ, ದಶೇರಿ ಮತ್ತು ಲಂಗ್ರಾ ಕೂಡ ತಾಪಮಾನ ಏರಿಕೆಯ ಪರಿಣಾಮವನ್ನು ಎದುರಿಸಿದ್ದವು. ಭೂಮಿಯ ತಾಪಮಾನ 43 ಡಿಗ್ರಿಗಿಂತ ಹೆಚು ಏರಿಕೆಯಾದಲ್ಲಿ ಆ ವಾತಾವರಣ ಮಾವಿನ ಹೂವು ಚಿಗುರಲು ಯೋಗ್ಯವಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಉಳಿದ ಹಣ್ಣಿನ ಬೆಳೆಗಳಿಗೆ ಹೋಲಿಸಿದಾಗ ಮಾವಿಗೆ ಹೂ ಬಿಡುವ ಹಾಗು ಕಾಯಿ ಬಲಿಯುವ ಸಂದರ್ಭದಲ್ಲಿ ವಾತಾವರಣದಲ್ಲಾಗುವ ಬದಲಾವಣೆಗಳನ್ನು ತಾಳಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ. ಕಳೆದ ಎರಡು ಮೂರು ವರ್ಷಗಳಿಂದ ಈಚೆಗೂ ಹವಾಮಾನ ಬದಲಾವಣೆಯಿಂದಾಗಿ ಮಾವು ಬೆಳೆ ಸುಮಾರು 25 ರಿಂದ 30 ರಷ್ಟು ಕುಸಿತ ಕಂಡಿದೆ. ಹವಾಮಾನ ಬದಲಾವಣೆ ಕೇವಲ ಉತ್ಪಾದನೆ ಮಾತ್ರವಲ್ಲ ಹಣ್ಣಿನ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಹಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವ ಹವಾಮಾನ ಬದಲಾವಣೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿದೇಶಗಳಿಗೆ ರಫ್ತಾಗಲು ಹಣ್ಣುಗಳು ನಿಗದಿಗೊಳಿಸಲಾದ ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗುವುದು ಅತೀ ಅವಶ್ಯಕ. ಆದರೆ ಬದಲಾಗುತ್ತಿರುವ ಹವಾಮಾನ ಸನ್ನಿವೇಶಗಳು ಉತ್ತಮ ಗುಣಮಟ್ಟದ ಹಣ್ಣುಗಳ ಉತ್ಪಾದನೆಯಲ್ಲಿ ಅಗತ್ಯವಾಗಿರುವ ಸಸ್ಯಗಳಲ್ಲಿ ನಡೆಯುವ ದ್ವಿತೀಯ ಹಂತದ ಚಯಾಪಚಯ ಕ್ರಿಯೆಗಳಿಗೆ ಅಡ್ಡಿಯಾಗುತ್ತಿವೆ. ಈ ದ್ವಿತೀಯ ಹಂತದ ಚಯಾಪಚಯ ಕ್ರಿಯೆಗಳು ಹಣ್ಣಿನ ಸಾಮಾನ್ಯ ಬೆಳವಣಿಗೆಗೆ ಅಗತ್ಯವಿಲ್ಲ. ಪ್ರಥಮ ಹಂತದ ಚಯಾಪಚಯ ಕ್ರಿಯೆಗಳಷ್ಟೇ ಹಣ್ಣಿನ ಬೆಳವಣಿಗೆಗೆ ಸಾಕಾಗುತ್ತದೆ. ಆದರೆ ಮೊದಲ ಹಂತದ ಚಯಾಪಚಯ ಕ್ರಿಯೆಗಳು ಹಣ್ಣುಗಳಲ್ಲಿ ಪೋಷಕಾಂಶಗಳು ಮತ್ತು ಸಂತಾನೋತ್ಪತ್ತಿಗೆ ಅಗತ್ಯವಿರುವ ಗುಣಗಳನ್ನು ಹೊಂದಲು ಸಹಾಯ ಮಾಡಿದರೆ, ಎರಡನೇ ಹಂತದ ಚಯಾಪಚಯ ಕ್ರಿಯೆಗಳು ಅವುಗಳಲ್ಲಿ ಔಷಧಿಯ ಗುಣಗಳು, ಆಸ್ವಾದ, ಸುವಾಸನೆ, ಬಣ್ಣ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಮಾಡುತ್ತವೆ. ಈ ಎಲ್ಲಾ ಗುಣಗಳಿರುವ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿಬೇಡಿಕೆಯೂ ಹೆಚ್ಚಿದೆ. ಆದರೆ ಹವಾಮಾನ ಬದಲಾವಣೆ ಗುಣಮಟ್ಟದ ಹಣ್ಣಿನ ಬೆಳೆಗೆ ಅಡ್ಡಿಯಾಗಿದೆ.
ಹವಾಮಾನ ಬದಲಾವಣೆ ಹಣ್ಣಿನ ಬೆಳೆಗಳಲ್ಲಿ ಕೇವಲ ಗುಣಮಟ್ಟವನ್ನು ತಗ್ಗಿಸಿರುವುದು ಮಾತ್ರವಲ್ಲದೆ ಕೀಟಗಳ ಕಾಟ ಮತ್ತು ಕಾಯಿಲೆಗಳು ಧಾಳಿ ಮಾಡುವ ಸಾಧ್ಯತೆಯನ್ನು ಹೆಚ್ಚಿಸಿವೆ. ಹಣ್ಣಿನ ಸಸ್ಯಗಳಲ್ಲಿ ಹೂ ಬಿಡುವ ಅವಧಿಯಲ್ಲಿ ವಾತಾವರಣದಲ್ಲಿ ಉಂಟಾಗುವ ಬದಲಾವಣೆಯು ಹೊಸ ಕೀಟಗಳ ಆಕ್ರಮಣ, ಇತರೆ ಸಣ್ಣ ಕೀಟಗಳಿಂದ ಹೆಚ್ಚಿನ ಬಾಧೆ, ರೋಗನಿರೋಧಕ ಶಕ್ತಿಯ ಕುಂಠಿತತೆ ಮುಂತಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹಣ್ಣಿನ ಸಸ್ಯಗಳು ಹೂ ಬಿಡುವ ಸಮಯ , ಹಣ್ಣು ಕೊಯ್ಲಿಗೆ ಬರುವ ಅವಧಿ ಮತ್ತು ಇಳುವರಿ ಎಲ್ಲವುದರ ಮೇಲೂ ಹವಾಮಾನ ಬದಲಾವಣೆ ಪರಿಣಾಮ ಬೀರುತ್ತಿದೆ. ಕಾಯಿ ಪೂರ್ಣವಾಗಿ ಬಲಿತು ಮಾಗಿ ಹಣ್ಣಾಗುವ ಮೊದಲೇ ಬಿಸಿಲಿನ ಝಳಕ್ಕೆ ಹಣ್ಣಾಗುವ ದ್ರಾಕ್ಷಿ, ಕಂದು ಬಣ್ಣ ಕ್ಕೆ ತಿರುಗುತ್ತಿದೆ. ದ್ರಾಕ್ಷಿ ಹಣ್ಣು ನೇರವಾಗಿ ಸೂರ್ಯನ ಬಿಸಿಲಿನ ಝಳಕ್ಕೆ ಒಡ್ಡಿಕೊಳ್ಳುವುದರಿಂದ ಬೇಗ ಹಣ್ಣಾಗುತ್ತವೆ. ಇದರಿಂದಾಗಿ ವೈನ್ ಉತ್ಪಾದನೆಯಲ್ಲಿ ಬಳಕೆಯಾಗುವ ದ್ರಾಕ್ಷಿಯ ಗುಣಮಟ್ಟಕ್ಕೆ ಧಕ್ಕೆ ಯಾಗಿದೆ. ಈ ಹಿಂದೆ ಬಿಹಾರದಲ್ಲಿ ಬೆಳೆಯುವ ಲಿಚಿ ಹಣ್ಣುಗಳು ಇದೇ ರೀತಿ ಹವಾಮಾನ ಬದಲಾವಣೆಯಿಂದಾಗಿ ಉತ್ಪಾದನೆಯಲ್ಲಿ ಕುಸಿತ ಕಂಡಿದ್ದವು.
ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಡಿಮೆಯಾಗುತ್ತಿರುವ ಚಳಿ, ಹಣ್ಣಿನ ಬೆಳೆಗೆ ಬೇಕಾದ ತಂಪಿನ (ಚಿಲ್ಲಿಂಗ್) ಅವಧಿಯನ್ನು ಕುಂಠಿತಗೊಳಿಸುತ್ತಿದೆ. ಇದರಿಂದಾಗಿ ಸೇಬಿಗೆ ಬೆಳೆಯಲ್ಲಿ ಮೊಗ್ಗುಗಳು ಸರಿಯಾಗಿ ಅರಳದೆ ಗುಣಮಟ್ಟದ ಹಣ್ಣುಗಳ ಪ್ರಮಾಣ ಕಡಿಮೆಯಾಗುತ್ತಿದೆ. 2050 ರವೇಳೆಗೆ ವಾತಾವರಣದಲ್ಲಿ ಈ ತಂಪಾಗುವಿಕೆಯ ಅವಧಿಯು 30 ರಿಂದ 60 ಶೇಕಡಾ ಇಳಿಮುಖವಾಗಬಹುದು ಎಂದು ರಾಷ್ಟ್ರೀಯ ಹವಾಮಾನ ಮೌಲ್ಯಮಾಪನದ ವರದಿಗಳು ಹೇಳುತ್ತಿವೆ. ಚಳಿಗಾಲದಲ್ಲಿ ತಾಪಮಾನ ಹೆಚ್ಚಿದರೆ ಅದು ಹಣ್ಣಿನ ಫಸಲಿನ ಆರಂಭಿಕ ಹಂತವಾದ ಮೊಗ್ಗು ಕಟ್ಟುವಿಕೆ ಪ್ರಕ್ರಿಯೆಯಲ್ಲಿಯೇ ಗರ್ಭಪಾತವಾಗುವಂತೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಜಾಗತಿಕ ಮಟ್ಟದಲ್ಲಿಉತ್ಪಾದಿಸಲ್ಪಡುವ 35 ಶೇಕಡಾ ಆಹಾರದ ಪ್ರಮಾಣವು ಪರಾಗಸ್ಫರ್ಶ ಕ್ರಿಯೆಯನ್ನು ಅವಲಂಬಿಸಿದೆ. ತಾಪಮಾನ ಹೆಚ್ಚಳವು ಈ ಪರಾಗಸ್ಫರ್ಶ ಕ್ರಿಯೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ವಾತಾವರಣದಲ್ಲಿ ಉಂಟಾಗುವ ತಾಪಮಾನ ಮತ್ತು ತೇವಾಂಶದ ಏರುಪೇರುಗಳಿಗೆ ಹೂವುಗಳು ಹೆಚ್ಚು ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದರಿಂದ ಹಣ್ಣು ಮತ್ತು ಆಹಾರ ಬೆಳೆಗಳಿಗೆ ಹೋಲಿಸಿದಾಗ ಪುಷ್ಪಕೃಷಿಯು ಹವಾಮಾನ ಬದಲಾವಣೆಯಿಂದ ಹೆಚ್ಚು ತೊಂದರೆಗೊಳಗಾಗಿದೆ. ಹವಾಮಾನ ಬದಲಾವಣೆ ಹೂ ಅರಳುವ ಅವಧಿ, ಪ್ರಮಾಣ ಮತ್ತು ಗುಣಮಟ್ಟವನ್ನು ಅಡ್ಡಿಪಡಿಸುತ್ತಿದೆ.
ಆಹಾರ ಬೆಳೆ, ಹವಾಮಾನ ಬದಲಾವಣೆ ಮತ್ತು ಜಾಗತಿಕ ಆಹಾರ ಭದ್ರತೆ
ಆಹಾರ ಬೆಳೆಗಳ ಮೇಲೆ ಹವಾಮಾನ ಬದಲಾವಣೆ ಒಡ್ಡುತ್ತಿರುವ ಸವಾಲು ಹಣ್ಣಿನ ಬೆಳೆಗಳ ಮೇಲಾಗುತ್ತಿರುವ ಪರಿಣಾಮಕ್ಕಿಂತಲೂ ತೀವ್ರ ಸ್ವರೂಪದ್ದು. ಜಗತ್ತಿನಲ್ಲಿಯೇ ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಎದುರಿಸುತ್ತಿರುವ ಹವಾಮಾನ ಬದಲಾವಣೆಯ ವೈಪರೀತ್ಯಗಳು ಜಾಗತಿಕ ಮಟ್ಟದಲ್ಲಿ ಗೋಧಿ ಪೂರೈಕೆಯನ್ನು ಏರುಪೇರುಗೊಳಿಸಿದೆ. ಗೋಧಿಯನ್ನು ಹೆಚ್ಚು ಬೆಳೆಯಲಾಗುವ ಪ್ರದೇಶಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ತಾಪಮಾನ 42 ರಿಂದ 44 ಡಿಗ್ರಿ ಸೆಲ್ಯಿಯಸ್‌ಗೆ ಏರುತ್ತಿದೆ. ಇದೇ ರೀತಿ ಮುಂದುವರೆದರೆ, ಹವಾಮಾನ ಬದಲಾವಣೆಯನ್ನು ಕುಗ್ಗಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಅದು ಭಾರತದ ಆರ್ಥಿಕತೆ ಮತ್ತು ನಿವ್ವಳ ಆದಾಯ/ಜಿಡಿಪಿಯ ಮೇಲೆ ತೀವ್ರ ತೆರನಾದ ಪ್ರಭಾವ ಬೀರಲಿದೆ ಎಂದು ಲಂಡನ್ ಮೂಲದ ಹಣಕಾಸು ಸಲಹಾ ಸಂಸ್ಥೆ ಡೆಲಾಯ್ಟ್ ವರದಿ ಎಚ್ಚರಿಸುತ್ತದೆ.
ಜಾಗತಿಕಮಟ್ಟದ ಗೋಧಿ ಉತ್ಪಾದನೆಯ ಸೂಚಕಗಳು ಜಾಗತಿಕ ತಾಪಮಾನದಲ್ಲಿನ ಒಂದು ಡಿಗ್ರಿ ಸೆಲ್ಸಿಯಸ್ ಏರಿಕೆಯಾದರೂ ಗೋಧಿ ಉತ್ಪಾದನೆ ಶೇಕಡಾ 6 ಕುಸಿತವನ್ನು ಕಾಣಲಿದೆ ಎಂಬುದಾಗಿ ಹೇಳುತ್ತವೆ. ಇದೇ ರೀತಿ 2030 ರವೇಳೆಗೆ ಜೋಳದ ಉತ್ಪಾದನೆಯು 24 ಪ್ರತಿಶತ ಕುಸಿತ ಕಾಣಲಿದೆ ಎಂದು ನಾಸಾ ಅಧ್ಯಯನವು ಹೇಳುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಭಾರತದಲ್ಲಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯು ಶೇಕಡಾ 6-10 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನ ಸಚಿವಾಲಯ ಮತ್ತು ಭಾರತ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಭಾರತವು ಗೋಧಿಯ ರಫ್ತನ್ನು ನಿಷೇಧಿಸಿರುವ ಹಿಂದಿನ ಕಾರಣಗಳಲ್ಲಿ ಹವಾಮಾನ ಬದಲಾವಣೆಯೂ ಒಂದು. ತಾಪಮಾನ ಹೆಚ್ಚಳದಿಂದಾಗಿ ದೇಶದಲ್ಲಿ ಗೋಧಿ ಉತ್ಪಾದನೆಯು ಸಾಕಷ್ಟು ಕುಸಿತ ಕಂಡಿದೆ. ಹೀಗಿರುವಾಗ ಗೋಧಿಯ ರಫ್ತು ದೇಶದಲ್ಲಿ ಗೋಧಿ ಬೆಲೆಏರಿಕೆಗೆ/ಹಣದುಬ್ಬರಕ್ಕೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಗೋಧಿಯ ರಫ್ತನ್ನು ಸ್ಥಗಿತಗೊಳಿಸಲಾಗಿದೆ. ಹವಾಮಾನ ಬದಲಾವಣೆಯು ದೇಶದ ಆಹಾರ ಭದ್ರತೆಗೆ ತೀವ್ರವಾದ ಆತಂಕವನ್ನು ಒಡ್ಡುತ್ತಿದೆ. ಕೃಷಿಯೇ ಬೆನ್ನೆಲುಬಾಗಿರುವ ರಾಷ್ಟ್ರದಲ್ಲಿ ಆಹಾರ ಭದ್ರತೆ ವಿಚಾರಕ್ಕೆ ಸಾಕಷ್ಟು ಆದ್ಯತೆ ನೀಡಬೇಕಾಗುತ್ತದೆ. ಕೃಷಿ ಉತ್ಪನ್ನಗಳ ಇಳುವರಿ ಕಡಿಮೆ ಆದಂತೆಲ್ಲ ರೈತರ ಆದಾಯವು ಕಡಿಮೆಯಾಗುವುದರಿಂದ ರೈತರ ಆತ್ಮಹತ್ಯೆಯಂಥ ಸಮಸ್ಯೆಗಳು ಇನ್ನಷ್ಟು ಹೆಚ್ಚಬಹುದು..
ಹವಾಮಾನ ಬದಲಾವಣೆಯ ವಿದ್ಯಮಾನಗಳು ಮತ್ತು ಆಹಾರ ಭದ್ರತೆಯ ಮೇಲೆ ಅದು ಒಡ್ಡುತ್ತಿರುವ ಅಪಾಯ ಈ ವಿಷಯಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿದೆ. ಹವಾಮಾನ ಬದಲಾವಣೆಯು ಆಹಾರ ಉತ್ಪಾದನೆ, ಅದರ ಗುಣಮಟ್ಟದ ಅಂಶಗಳು, ಆಹಾರವಸ್ತುಗಳ ಬೆಲೆ ಮತ್ತು ಅವುಗಳ ವಿತರಣಾ ವ್ಯವಸ್ಥೆಗಳ ಮೇಲೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಬಲ್ಲುದು. ಹೀಗಾಗಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಹವಾಮಾನ ವೈರುಧ್ಯ ಸಹಿಷ್ಣು ತಳಿಗಳು
ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಪ್ರಮುಖವಾದುದು. ಹವಾಮಾನ ಬದಲಾವಣೆ ಪ್ರಕ್ರಿಯೆಗಳಿಗೆ ಹೊಂದಿಕೊಳ್ಳಬಲ್ಲ ಬೆಳೆಗಳು, ಪ್ರಭೇದಗಳು ಅಥವಾ ಬೆಳೆಗಳ ತಳಿಗಳ ಬಗ್ಗೆ ಅವರು ರೈತರಿಗೆ ಸೂಕ್ತ ಸಲಹೆ ನೀಡಬೇಕಾಗಿದೆ. ಹವಾಮಾನ ಇಲಾಖೆಯು ಮಾನ್ಸೂನ್ ವೈಫಲ್ಯದ ಮುನ್ಸೂಚನೆ ನೀಡಿದಾಗ ಕೃಷಿ ಇಲಾಖೆಯು ರೈತರಿಗೆ ಭತ್ತದ ಬದಲಾಗಿ ದ್ವಿದಳ ಧಾನ್ಯಗಳನ್ನು ಅಥವಾ ಕಡಿಮೆ ನೀರಿನಲ್ಲಿ ಬೆಳೆಯಬಲ್ಲ ಇತರ ಬೆಳೆಗಳ ಬೀಜಗಳನ್ನು ಬಿತ್ತಲು ಸಲಹೆ ನೀಡಬಹುದು. ಕೃಷಿ ಸಂಶೋಧನೆ ಹಾಗು ರೈತರಿಗೆ ಅದರ ವಿಸ್ತರಣೆಗಾಗಿ ಭಾರತೀಯ ಕೃಷಿ ಸಂಶೋಧನಾ ಸಮಿತಿಯ (ಐಸಿಎಆರ್) ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಿರುವ ಕೃಷಿ ವಿಜ್ಞಾನ ಕೇಂದ್ರಗಳು(ಕೆವಿಕೆ) ಮತ್ತು ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನದಲ್ಲಿರುವ ರೈತ ಸಂಪರ್ಕ ಕೇಂದ್ರಗಳು ಈ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಬೇಕಿದೆ.
ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಅಡಿಯಲ್ಲಿ ಬರುವ ಹಣ್ಣಿನ ಬೆಳೆ, ಆಹಾರ ಬೆಳೆ, ಪುಷ್ಪ ಕೃಷಿ, ಪಶುಸಂಗೋಪನೆ, ಇತ್ಯಾದಿ ಕೃಷಿ ಸಂಬಂಧಿತ ಸಂಶೋಧನೆಗಳಲ್ಲಿ ನಿರತವಾಗಿರುವ ಸಂಸ್ಥೆಗಳು ಹೆಚ್ಚಿನ ಇಳುವರಿ ನೀಡಬಲ್ಲ ಹವಾಮಾನ ವೈಪರೀತ್ಯ ಸಹಿಷ್ಣು ಪ್ರಭೇದಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತಿವೆ. ಇವು ಆಹಾರ ಬೆಳೆ, ತೋಟಗಾರಿಕಾ ಬೆಳೆ ಮತ್ತು ಮೇವಿನ ಬೆಳೆಯೂ ಸೇರಿದಂತೆ 500ಕ್ಕೂ ಮಿಕ್ಕಿ ಹೆಚ್ಚಿನ ಬೆಳೆಗಳನ್ನು ಅಭಿವೃದ್ಧಿಪಡಿಸಿದೆ. ಹೆಚ್ಚುತ್ತಿರುವ ಅನಿರೀಕ್ಷಿತ ಹವಾಮಾನ ಬದಲಾವಣೆಯ ಘಟನೆಗಳ ನಡುವೆ ಇವು ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಭರವಸೆ ನೀಡುತ್ತವೆಯಾದರೂ, ಇವುಗಳ ವಿತರಣೆ ಹೆಚ್ಚು ಸಮರ್ಪಕವಾಗಿ ಆಗಬೇಕಿದೆ.
2023-24ರ ಆರ್ಥಿಕ ಸಮೀಕ್ಷೆಯು 2050ರ ವೇಳೆಗೆ ಮಳೆಯಾಶ್ರಿತ ಭತ್ತದ ಕೃಷಿಯ ಇಳುವರಿಯಲ್ಲಿ ಶೇಕಡಾ 20ರಷ್ಟು ಕುಸಿತ ಉಂಟಾಗಬಹುದು ಎಂದು ಎಚ್ಚರಿಸಿದೆ. ಮುಂದಿನ ದಶಕಗಳಲ್ಲಿ ಭತ್ತದ ಕೃಷಿಗೆ ಅಗತ್ಯವಿರುವ ನೀರಿನ ಪ್ರಮಾಣ ಕಡಿಮೆಯಾಗಬಹುದು ಎಂಬ ಮುಂಜಾಗರೂಕತೆಯಿಂದ ಮುಂಬರುವ ಸವಾಲಿಗೆ ಹೊಂದಿಕೊಳ್ಳಲು ಅಕ್ಕಿಯ ಹೊಸ ಪ್ರಬೇಧಗಳನ್ನು ಬಿಡುಗಡೆಗೊಳಿಸಲಾಗಿದೆ. ಪ್ರಯೋಗಾಲಯದಲ್ಲಿ ಯಶಸ್ವಿ ಎನಿಸಿದ ತಳಿ ಭೂಮಿಯ ಮೇಲೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಕೃಷಿಗೆ ತಗಲುವ ವೆಚ್ಚವೆಷ್ಟು, ಇಳುವರಿಯ ಪ್ರಮಾಣ ಎಷ್ಟಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಹವಾಮಾನ-ಸಹಿಷ್ಣು ಬೀಜಗಳ ಉತ್ಪಾದನೆ ಮತ್ತು ಅದನ್ನು ವೃದ್ಧಿಸಲು ಸುಮಾರು ಮೂರು ವರ್ಷಗಳು ಬೇಕಾಗುತ್ತದೆ ಎಂದು ಅಂದಾಜಿಸಿದೆ. ಆ ನಂತರ ಅದು ರೈತರನ್ನು ತಲುಪಬಹುದು.
ಆದರೆ ಹೆಚ್ಚಾಗಿ ಈ ಹೈಬ್ರಿಡ್ ತಳಿಗಳು ಗೊಂದಲಮಯವಾದ ಫಲಿತಾಂಶಗಳನ್ನು ನೀಡುತ್ತವೆ ಎಂದು ಕೆಲವು ರೈತರು ಅಭಿಪ್ರಾಯಪಡುತ್ತಾರೆ. ವರ್ಷ ಕಳೆದಂತೆ ಅದರ ಇಳುವರಿ ಕಡಿಮೆಯಾಗುತ್ತದೆ ಎಂಬ ಅಂಶವನ್ನು ಮುನ್ನಲೆಗೆ ತರುತ್ತಾರೆ. ಹೈಬ್ರಿಡ್ ಬೀಜಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮರುಖರೀದಿ ಮಾಡಬೇಕಾಗುತ್ತದೆ ಮತ್ತು ಈ ಬೀಜಗಳನ್ನು ಸಬ್ಸಿಡಿ ರಹಿತ ದರದಲ್ಲಿ ಖರೀದಿಸಬೇಕಾಗುತ್ತದೆ ಎನ್ನುತ್ತಾರೆ.
ಈಗಾಗಲೇ ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ರೈತರ ನಡುವೆ ಸಾಕಷ್ಟು ಅಂತರವಿದೆ. ಕೃಷಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಹೈಬ್ರಿಡ್ ತಳಿಗಳು ರೈತರನ್ನು ತಲುಪುತ್ತಿಲ್ಲ. ರೈತರಿಗೆ ಅಗತ್ಯವಿರುವ ತಳಿಗಳು ಯಾವುವು ಎಂಬುದರ ಸಮೀಕ್ಷೆ ನಡೆಸಿ ಅಭಿಪ್ರಾಯವನ್ನು ಪಡೆಯುವ ವ್ಯವಸ್ಥೆಯೂ ಈ ಸಂಶೋಧನಾ ಕೆಂದ್ರಗಳಲ್ಲಿಲ್ಲ. ಮಾಧ್ಯಮಗಳ ಮೂಲಕ ರೈತರಿಗೆ ಈ ಹೈಬ್ರಿಡ್ ತಳಿಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನಗಳನ್ನು ಈ ಹಿಂದೆ ಐಸಿಎಆರ್ ತನ್ನ ನ್ಯಾಶನಲ್ ಅಗ್ರಿಕಲ್ಚರ್ ಇನ್ನೋವೇಟಿವ್ ಪ್ರಾಜೆಕ್ಟ್ಸ್ (ಎನ್‌ಎಐಪಿ) ಗಳ ಮೂಲಕ ಮಾಡಿದೆಯಾದರೂ, ಕ್ರಿಯಾಶೀಲ, ಪ್ರಯೋಗಶೀಲ ರೈತರು ಬೀಜಗಳಿಗಾಗಿ ಸಂಪರ್ಕಿಸಿದಾಗ ಸಾಕಷ್ಟು ಬೀಜಗಳು ಲಭ್ಯವಿಲ್ಲ ಎಂಬ ಉತ್ತರ ಪಡೆದುಕೊಂಡದ್ದೇ ಹೆಚ್ಚು. ಕೆಲವು ವಿಜ್ಞಾನಿಗಳು ತಾವು ಅಭಿವೃದ್ಧಿ ಪಡಿಸಿದ ತಳಿಗಳನ್ನು ಮಾಧ್ಯಮದ ಮೂಲಕ ಪ್ರಚುರಪಡಿಸಿದರೆ ರೈತರಿಂದ ಬೀಜಗಳ ಬೇಡಿಕೆ ಬರುತ್ತದೆ ಎಂದು ತಮ್ಮ ತಳಿಗಳ ಬಗ್ಗೆ ಪ್ರಚಾರವೇ ಬೇಡ ಎಂದು ಹಿಂದೆ ಸರಿದ ಉದಾಹರಣೆಗಳು ಇವೆ. ಕೆಲವು ವಿಜ್ಞಾನಿಗಳು ತಮ್ಮ ಸಂಶೋಧನೆಯ ಹಕ್ಕುಸ್ವಾಮ್ಯವನ್ನು ಖ್ಯಾತ ಹೈಬ್ರಿಡ್ ಬೀಜಗಳ ತಯಾರಕ ಕಂಪನಿಗಳಿಗೆ ಮಾರಿಕೊಂಡಿದ್ದಾರೆ ಎಂಬ ಆರೋಪಗಳೂ ಇಲ್ಲದಿಲ್ಲ. ಸಂಶೋಧನಾ ವೃತ್ತಿಗೆ ಸೇರಿದಂದಿನಿಂದ ನಿವೃತ್ತಿಯಾಗುವವರೆಗೂ ಒಂದೇ ಬೆಳೆಯನ್ನು ಇಟ್ಟಕೊಂಡು ಅದರಲ್ಲೇ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಪ್ರಯೋಗಗಳನ್ನು ನಡೆಸಿದವರ ಉದಾಹರಣೆಗಳೂ ಇಲ್ಲಿ ಇವೆ.
ಹೀಗಾಗಿ ಭವಿಷ್ಯದಲ್ಲಿ ಈ ಹವಾಮಾನ ವೈರುಧ್ಯ ಸಹಿಷ್ಣು ತಳಿಗಳ ಕುರಿತಾದ ಜ್ಞಾನವನ್ನು ರೈತರಿಗೆ ಹಂಚುವುದು ಮತ್ತು ಅದರ ಪ್ರಸರಣಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಈ “ಹವಾಮಾನ-ಸಹಿಷ್ಣುʼ ಬೀಜಗಳನ್ನು ಕೃಷಿ ವಿಜ್ಞಾನ ಕೇಂದ್ರ, ಬೀಜ ಬ್ಯಾಂಕುಗಳು ಮತ್ತು ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ಬಿತ್ತನೆ ವಿಧಾನ, ಹವಾಮಾನ ದೃಷ್ಟಿಕೋನದಿಂದ ಈ ಬೀಜಗಳ ಉಪಯುಕ್ತತೆ, ನೀರಾವರಿ ತಂತ್ರ, ಕುರಿತಾದ ಪ್ರಾತ್ಯಕ್ಷಿಕೆ ಹಾಗು ಅಗತ್ಯವಿರುವ ರೈತ ತರಬೇತಿ ಕೂಡ ಅಗತ್ಯವಾಗಿದೆ.
ಈ ನಡುವೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಾಗು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಎಂದು ಘೋಷಿಸುತ್ತಾ ಕೆಲವು ಕುಲಾಂತರಿ ತಳಿಗಳೂ ಹವಾಮಾನ ಸಹಿಷ್ಣು ತಳಿಗಳ ಹೆಸರಿನಲ್ಲಿ ಪರಿಚಯಿಸಲ್ಪಡುತ್ತಿವೆ. ಈಗಾಗಲೇ ಕುಲಾಂತರಿ ತಳಿಗಳು ಸಾಕಷ್ಟು ವಿವಾದಕ್ಕೀಡಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ ಭೂಮ್ತಾಯಿ | ಎಚ್ಚರಿಕೆ: ಇದು ಹಿಮನದಿಗಳು ಕರಗುವ ಸಮಯ!

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ