ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರ ಧರ್ಮ ಇಸ್ಲಾಂ ಎಂಬ ಕಾರಣಕ್ಕಾಗಿ ಆಕೆಯನ್ನು ಭಯೋತ್ಪಾದಕರ ಸೋದರಿ ಎಂದು ಕರೆದು ಅವಮಾನಿಸಿದ್ದರು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಹಿರಿಯ ಮಂತ್ರಿ ವಿಜಯ್ ಶಾ. ವಿಜಯ್ ಶಾ ಅವರನ್ನು ಈವರೆಗೆ ಬಂಧಿಸಲಾಗಿಲ್ಲ. ಆದರೆ ಅದೇ ಆರೋಪ ಹೊರಿಸಲಾಗಿರುವ ಡಾ.ಅಲಿ ಖಾನ್ ಅವರನ್ನು ತಡ ಮಾಡದೆ ಒಡನೆಯೇ ಬಂಧಿಸಿಲಾಗಿತ್ತು.
ಪ್ರಧಾನಮಂತ್ರಿಯವರು ಧಾರಾಳವಾಗಿ ಹೊರದೇಶಗಳ ಪ್ರವಾಸ ಮಾಡಿದ್ದಾರೆ. ಭಾರತದ ಪರವಾಗಿ ಈ ದೇಶಗಳ ಸದ್ಭಾವನೆ ಗಳಿಸುವ ಪ್ರಯತ್ನ ಮಾಡಿದ್ದಾರೆ. ಹೀಗೆ ಪ್ರವಾಸ ಹೋದ ಬಹುತೇಕ ಕಡೆಗಳಲ್ಲಿ ಭಾರತವನ್ನು ಗಾಂಧೀ ಮತ್ತು ಬುದ್ಧನ ನಾಡು ಎಂದು ಬಣ್ಣಿಸುತ್ತಾರೆ. ಜಗತ್ತು ಭಾರತವನ್ನು ಈ ಇಬ್ಬರು ಮಹಾನ್ ವ್ಯಕ್ತಿಗಳ ಮೂಲಕ ಗುರುತಿಸುತ್ತ ಬಂದಿದೆ. ದೇಶದ ಹೊರಗೆ ಗಾಂಧೀ ಚಲಾವಣೆಯ ನಾಣ್ಯ. ಚಲಾಯಿಸಲಾಗುತ್ತಿದೆ. ಅದೇ ಹೊತ್ತಿನಲ್ಲಿ ದೇಶದೊಳಗೆ ಗಾಂಧೀಯನ್ನು ನಗಣ್ಯ ಆಗಿಸುವ ಬಗೆಬಗೆಯ ದಾರಿಗಳನ್ನು ಹುಡುಕಲಾಗುತ್ತಿದೆ.
ದೇಶವಿಭಜನೆಗೆ ಗಾಂಧೀ ಕಾರಣ ಅಲ್ಲದಿದ್ದರೂ, ಪಾಕಿಸ್ತಾನಕ್ಕೆ ಅದರ ಹಕ್ಕನ್ನು ಕೊಡಿಸುವ ಕುರಿತು ಗಾಂಧೀ ನಡೆಸಿದ ಹೋರಾಟವೇ ಅವರ ಜೀವಕ್ಕೆ ಮುಳುವಾಯಿತು. ಜೀವ ತೆಗೆದವರನ್ನು ಆರಾಧಿಸುತ್ತಿದೆ ಇಂದಿನ ಭಾರತ. ಮುಸ್ಲಿಮ್ ದ್ವೇಷವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ ಭುಗಿಲೆಬ್ಬಿಸಲಾಗುತ್ತಿದೆ.
ದೆಹಲಿಯ ನೆರೆಹೊರೆಯ ಹರಿಯಾಣದ ಸೋನೆಪತ್ ನ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಅಲಿ ಖಾನ್ ಮಹಮೂದಾಬಾದ್ ಬಂಧನದ ಕುರಿತು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆಪರೇಷನ್ ಸಿಂಧೂರ್ ಕುರಿತ ಅಲಿ ಖಾನ್ ಪೋಸ್ಟ್ ಗಳು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತಂದಿವೆ ಎಂದು ಹರಿಯಾಣದ ಪೊಲೀಸರು ಅವರ ವಿರುದ್ಧ ಎರಡು ಎಫ್ ಐ ಆರ್ ಗಳನ್ನು ದಾಖಲಿಸಿದ್ದಾರೆ.
ತಮ್ಮ ಅಭಿಪ್ರಾಯ ಆಲೋಚನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ ಕ್ರಮವು ಆಲೋಚನೆಯ ಸ್ವಾತಂತ್ರ್ಯದ ದಮನ ಎಂಬುದಾಗಿ ಪ್ರತಿಬಿಂಬಿತವಾಗಿದೆ. ಖಾನ್ ಮೇಲೆ ದೇಶದ್ರೋಹದ (ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152) ಆರೋಪ ಹೊರಿಸಲಾಗಿದೆ. ಬ್ರಿಟಿಷರ ಕಾಲದ ಅಪರಾಧ ಸಂಹಿತೆಯ ಸೆಕ್ಷನ್ 124 ಎ ದೇಶದ್ರೋಹ ಕುರಿತದ್ದಾಗಿತ್ತು. ವಸಾಹತುಶಾಹಿ ಅಪರಾಧ ಸಂಹಿತೆ ಮತ್ತು ಭಾರತೀಯ ದಂಡ ಸಂಹಿತೆಯನ್ನು ರದ್ದು ಮಾಡಿ ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯನ್ನು ಜಾರಿಗೆ ತಂದಿತು ಮೋದಿ ಸರ್ಕಾರ. ಆದರೆ ಕರಾಳ ಕಾಯಿದೆಯಾಗಿದ್ದ ಸೆಕ್ಷನ್ 124 ಎ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಯಾಗಿ, ಮೂಲಕ್ಕಿಂತಲೂ ಹೆಚ್ಚು ದಮನಕಾರಿ ರೂಪ ತಳೆದಿದೆ. ಈ ಮಾತನ್ನು ಕಾನೂನು ತಜ್ಞರು- ನ್ಯಾಯವೇತ್ತರೇ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಕ್ಷ್ಮತೆಗಳನ್ನು ಮತ್ತು ರಾಜಕೀಯ ಪ್ರೇರಿತ ಎಫ್‌ಐಆರ್‌ಗಳ ಸಾಧ್ಯತೆಯನ್ನು ಎತ್ತಿ ತೋರಿರುವ ಪ್ರಕರಣವಿದು. ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರ ಧರ್ಮ ಇಸ್ಲಾಂ ಎಂಬ ಕಾರಣಕ್ಕಾಗಿ ಆಕೆಯನ್ನು ಭಯೋತ್ಪಾದಕರ ಸೋದರಿ ಎಂದು ಕರೆದು ಅವಮಾನಿಸಿದ್ದರು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಹಿರಿಯ ಮಂತ್ರಿ ವಿಜಯ್ ಶಾ.
ವಿಜಯ್ ಶಾ ಅವರನ್ನು ಈವರೆಗೆ ಬಂಧಿಸಲಾಗಿಲ್ಲ. ಆದರೆ ಅದೇ ಆರೋಪ ಹೊರಿಸಲಾಗಿರುವ ಡಾ.ಅಲಿ ಖಾನ್ ಅವರನ್ನು ತಡ ಮಾಡದೆ ಒಡನೆಯೇ ಬಂಧಿಸಿಲಾಗಿತ್ತು. ಈತನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸುಪ್ರೀಮ್ ಕೋರ್ಟು ಆದೇಶ ನೀಡಿದ್ದಲ್ಲದೆ, ಕಠೋರ ನುಡಿಗಳನ್ನು ಶಾ ವಿರುದ್ಧ ಆಡಿದೆ. ಬಿಜೆಪಿ ಶಾ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಸಚಿವ ಸಂಪುಟದಲ್ಲೂ ಅವರು ಮುಂದುವರೆದಿದ್ದಾರೆ. ಕಾನೂನಿನ ಮುಂದೆ ಸರ್ವರೂ ಸಮಾನ ಎಂಬುದು ಈಗಾಗಲೆ ಸುಸ್ಥಾಪಿತ ಮೌಲ್ಯ. ಆದರೆ ಕೆಲವರು ಹೆಚ್ಚು ಸಮಾನ ಎಂದು ಸಾರುವ ತಾರತಮ್ಯಗಳು ನಮ್ಮ ಮುಂದೆ ನಡೆಯುತ್ತಲೇ ಬಂದಿವೆ.
ಒಂದೆಡೆ ಸಾಮಾಜಿಕ ಸಾಮರಸ್ಯವನ್ನು ಚಿಂದಿ ಮಾಡುವ ದ್ವೇಷ ಭಾಷಣಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಮತ್ತೊಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತಿತರೆ ಮೂಲಭೂತ ಹಕ್ಕುಗಳು ಅಪರಾಧಗಳನ್ನಾಗಿ ಬಗೆಯಲಾಗುತ್ತಿದೆ. ಸರಿತಪ್ಪುಗಳ ವಿವೇಚನೆಯನ್ನೇ ಮಾಡದೆ, ಆಲೋಚನೆಯ ಶಕ್ತಿಯನ್ನು ತನ್ನಲ್ಲಿ ಗಿರವಿ ಇಡುವಂತೆ ಆಗ್ರಹಿಸುತ್ತಿದೆ ಆಳುವ ವ್ಯವಸ್ಥೆ.
ಅಲಿ ಖಾನ್ ಬಂಧನದ ಬೆಳವಣಿಗೆಯನ್ನು ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ಫೈನಾನ್ಷಿಯಲ್ ಟೈಮ್ಸ್’ ನಂತಹ ಹಲವು ಸಾಗರೋತ್ತರ ಪತ್ರಿಕೆಗಳು ವಿವರವಾಗಿ ವರದಿ ಮಾಡಿವೆ. ಭಾರತದ ಅನೇಕ ಮುಂಚೂಣಿ ದಿನಪತ್ರಿಕೆಗಳು ಖಾನ್ ಬಂಧವನ್ನು ಖಂಡಿಸಿ ಸಂಪಾದಕೀಯ ಬರೆದಿದ್ದವು. ಬಂಧನದ ಕ್ರಮವು ತರ್ಕರಹಿತ ಮಾತ್ರವೇ ಅಲ್ಲ, ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಖಾನ್ ಈ ಪೋಸ್ಟ್ ಗಳನ್ನು ಯುದ್ಧದಂತಹ ಸೂಕ್ಷ್ಮ ಸಂದರ್ಭದಲ್ಲಿ ಮಾಡಬಾರದಾಗಿತ್ತು ಎಂದು ಹೇಳಲು ಬಂದೀತು. ಅವರ ಅಭಿಪ್ರಾಯಗಳನ್ನು ಒಪ್ಪಲು ಬರುವುದಿಲ್ಲ ಎಂದೂ ಹೇಳಲು ಯಾರು ಬೇಕಾದರೂ ಸ್ವತಂತ್ರರು. ಆದರೆ ಖಾನ್ ಮಂಡಿಸಿದ ವಾದಕ್ಕೆ ಕೋಮುವಾದಿ ವಿಭಜನೆಯ ಬೀಜಗಳನ್ನು ಬಿತ್ತುವ ಉದ್ದೇಶ ಹೊಂದಿತ್ತು ಅಥವಾ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಅಪಾಯಕ್ಕೆ ಒಡ್ಡುವುದಾಗಿತ್ತು, ಮಹಿಳೆಯರ ಘನತೆಯನ್ನು ಕುಂದಿಸುವುದಾಗಿತ್ತು ಎಂದು ಹೇಳಲು ಸಾಧ್ಯವೇ ಇಲ್ಲ. ಬುಡಮೇಲು ಕೃತ್ಯ, ವಿಚ್ಛಿದ್ರಕಾರಿ ಚಟುವಟಿಕೆಗೆ ಧಕ್ಕೆ ತರುವಂತಹ ಯಾವುದೇ ಪದಗಳನ್ನು ಅವರು ಬಳಸಿಲ್ಲ. ಭಿನ್ನಮತ ಮತ್ತು ದೇಶದ್ರೋಹದ ನಡುವೆ ನೆಲ ಮುಗಿಲಿನ ವ್ಯತ್ಯಾಸವಿದೆ. ದೇಶದ್ರೋಹದ ಆಪಾದನೆಯ ಉದ್ದೇಶ ಆರೋಪಿಯನ್ನು ಅಲೆದಾಡಿಸುವ ಸುದೀರ್ಘ ಪ್ರಕ್ರಿಯೆಯೇ ವಿನಾ ಸಜೆ ಕೊಡಿಸುವುದು ಅಲ್ಲ, ಇಲ್ಲಿ ಕಾನೂನು ಪ್ರಕ್ರಿಯೆಯೇ ಪರಮ ಶಿಕ್ಷೆಯಾಗಿ ಪರಿಣಮಿಸುತ್ತದೆ. ಕೇಸು ವಿಚಾರಣೆಯ ಹಂತ ತಲುಪುವ ಮುನ್ನವೇ ಆರೋಪಿಯನ್ನು ಅಪರಾಧೀಕರಣಗೊಳಿಸುವ ಪ್ರಕ್ರಿಯೆ, ಭಿನ್ನಮತವನ್ನು ಶಿಕ್ಷಿಸಲಾಗುವುದು ಎಂಬುದಾಗಿ ಸಮಾಜಕ್ಕೆ ಸಂದೇಶ ರವಾನಿಸುವ ಪ್ರಕ್ರಿಯೆ.
ದೇಶಭಕ್ತಿಯ ಪಾಠ ಹೇಳುವುದು ನ್ಯಾಯಾಲಯದ ಕೆಲಸವಲ್ಲ, ಅಲಿ ಖಾನ್ ಪ್ರಕರಣವನ್ನು ದೇಶಭಕ್ತಿಗೆ ಹೊರಳಿಸುವ ಮೂಲಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಮುಂದಾಗದಿರುವ ಮೂಲಕ ನ್ಯಾಯಾಲಯವು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಒಂದು ನಿರ್ದಿಷ್ಟ ಸಿದ್ಧಾಂತವನ್ನು ನ್ಯಾಯಬದ್ಧಗೊಳಿಸುತ್ತಿದೆ. ಇಂದಿನ ಸ್ಥಿತಿಗತಿಗಳ ಹಲವು ಮಜಲುಗಳಲ್ಲಿ-ಹಲವು ಕ್ಷಣಗಳಲ್ಲಿ ಮಹಾತ್ಮಗಾಂಧೀ, ಜವಾಹರಲಾಲ್ ನೆಹರು ಮಾತ್ರವಲ್ಲದೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೂಡ ದೇಶಭಕ್ತಿ ಇಲ್ಲದವರೆಂದು ಬಗೆಯುತ್ತಿದ್ದುದು ಖಚಿತ ಎಂಬುದಾಗಿ ಪ್ರಸಿದ್ಧ ಚಿಂತಕ ಭಾನು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಮತ್ತು ಕವಿ ಇಮ್ರಾನ್ ಪ್ರತಾಪಗಢಿ ವಿರುದ್ಧ ಗುಜರಾತಿನ ಜಾಮ್ ನಗರ ಪೊಲೀಸರು ಕಳೆದ ಜನವರಿಯಲ್ಲಿ ಕೇಸು ದಾಖಲಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರ ಕವಿತೆಯು ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳ ನಡುವೆ ಹಗೆತನವನ್ನು ಹುಟ್ಟಿ ಹಾಕುತ್ತದೆ ಎಂಬ ಇದೇ ತಗಾದೆಯನ್ನು ಪೊಲೀಸರು ಹೂಡಿದ್ದರು.
ಇಮ್ರಾನ್ ವಿರುದ್ಧ ಎಫ್.ಐ.ಆರ್. ದಾಖಲಿಸಿದ ಪೊಲೀಸರ ಕ್ರಮವನ್ನು ಗುಜರಾತ್ ಹೈಕೋರ್ಟು ಅನುಮೋದಿಸಿತ್ತು. ಈ ಎಫ್.ಐ.ಆರ್. ನ್ನು ರದ್ದು ಮಾಡುವಂತೆ ಇಮ್ರಾನ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.
‘ಹೇ ನೆತ್ತರ ಪಿಪಾಸುಗಳೇ ಕಿವಿಗೊಟ್ಟು ಕೇಳಿ….’ ಎಂಬುದಾಗಿ ಶುರುವಾಗುವ ಹಿಂದೀ-ಉರ್ದು ಶಾಯರಿಯಿದು. ಭಾರತದಲ್ಲಿ ಮುಸಲ್ಮಾನ ಅಸ್ಮಿತೆ ಮತ್ತು ಅನುಭವ ಕುರಿತ ಪ್ರತಿಭಟನಾ ಕಾವ್ಯಕ್ಕೆ ಹೆಸರಾದ ಪ್ರಮುಖರ ಪೈಕಿ ಇಮ್ರಾನ್ ಕೂಡ ಒಬ್ಬರು.
‘ಅನ್ಯಾಯ- ಯಾತನೆಯ ಪಡಿಪಾಟಲನ್ನು ಪ್ರೀತಿಯ ಮೂಲಕ ಎದುರಿಸುವ’ ಕುರಿತ ಇಮ್ರಾನ್ ಕವಿತೆ ಮಹಾತ್ಮಾಗಾಂಧೀ ಸಾರಿದ್ದ ಅಹಿಂಸೆಯ ದಾರಿಯನ್ನು ಎತ್ತಿ ಹಿಡಿದಿದೆ. ಕಲೆ ಮತ್ತು ಕಾವ್ಯದ ಸ್ವತಂತ್ರ ಅಭಿವ್ಯಕ್ತಿಯ ಉಸಿರುಗಟ್ಟಿಸುವ ಪ್ರವೃತ್ತಿ ಕಂಡು ಬಂದಿದೆ. ಸೃಜನಶೀಲತೆ (ಕ್ರಿಯೇಟಿವಿಟಿ) ಕುರಿತು ಯಾರಿಗೂ ಮರ್ಯಾದೆ ಇದ್ದಂತೆ ತೋರುತ್ತಿಲ್ಲ. ಪೊಲೀಸರು ಸ್ವಲ್ಪವಾದರೂ ಸಂವೇದನೆಯನ್ನು ತೋರಬೇಕು. ಇಮ್ರಾನ್ ಪ್ರತಾಪಗಢಿ ಅವರ ಕವಿತೆಯನ್ನು ಓದಿ ಅರ್ಥ ಮಾಡಿಕೊಳ್ಳುವ ಕನಿಷ್ಠ ಪ್ರಯತ್ನವನ್ನಾದರೂ ಅವರು ಮಾಡಬೇಕಿತ್ತು. ಹಾಗೆ ಮಾಡಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ತೋರಿದಂತಾಗುತ್ತಿತ್ತು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕ ಮತ್ತು ಉಜ್ಜಲ್ ಭೂಯಾಂ ಹೇಳಿದ್ದು ಕೇವಲ ಎರಡು ತಿಂಗಳ ಹಿಂದೆಯಷ್ಟೇ.
ಟೀಕೆ-ಟಿಪ್ಪಣಿಗಳು-ವಿಮರ್ಶೆಗಳನ್ನು ಸದಾ ಸರ್ವದಾ ಅಪಾಯ ಎಂದು ಬಗೆಯುವವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು ಎಂಬುದನ್ನು ತೀರ್ಮಾನಿಸಲು ಬರುವುದಿಲ್ಲ. ಟೀಕೆ ಟಿಪ್ಪಣಿಗಳ ಕುರಿತು ಆಕ್ಷೇಪ ಇರುವವರು ಪ್ರತ್ಯುತ್ತರದ ಪ್ರತಿಟೀಕೆ ಮಾಡಬೇಕೇ ವಿನಾ ಪೊಲೀಸ್ ಕ್ರಮಕ್ಕಾಗಿ ಆಗ್ರಹಿಸಕೂಡದು ಎಂದು ಈ ನ್ಯಾಯಪೀಠ ಹೇಳಿತ್ತು.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಾತ್ಮಕ ಸ್ಥಾನಮಾನವನ್ನು (ಅನುಚ್ಛೇದ 370) ರದ್ದು ಕ್ರಮವನ್ನು ಟೀಕಿಸಿದ್ದ ಮತ್ತು ಪಾಕಿಸ್ತಾನಿ ಸ್ವಾತಂತ್ರ್ಯ ದಿನದಂದು ಆ ದೇಶಕ್ಕೆ ಶುಭಾಶಯ ಹೇಳಿದ್ದ ಕೊಲ್ಹಾಪುರದ ಪ್ರೊಫೆಸರ್ ಒಬ್ಬರ ಮೇಲೆ ಪೊಲೀಸರು ಹೂಡಿದ್ದ ಕೇಸನ್ನು ಸುಪ್ರೀಮ್ ಕೋರ್ಟು ಕಳೆದ ವರ್ಷ ರದ್ದು ಮಾಡಿತ್ತು.
ಭಿನ್ನ ಮತದ ಹಕ್ಕು, ಜೀವಂತ ಜನತಂತ್ರದ ಮೊತ್ತಮೊದಲ ತತ್ವ. ಪ್ರಭುತ್ವವನ್ನು ಕುರಿತು ನ್ಯಾಯಬದ್ಧ ಮಿತಿಗಳ ಒಳಗಾಗಿ ಮಾಡುವ ಟೀಕೆ ಟಿಪ್ಪಣಿಗಳನ್ನು ಅಪರಾಧವೆಂದು ಬಗೆಯಕೂಡದು ಎಂದು ಸಾರಿತ್ತು. ಸಂವಿಧಾನದ 19(2) ನೆಯ ಅನುಚ್ಛೇದವು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಗಳೇನೆಂದು ತಿಳಿಸಿದೆ. ಈ ಇತಿಮಿತಿಗಳ ಒಳಗೆ ನಡೆಯುವ ಯಾವುದೇ ನಡೆನುಡಿ ಸಮ್ಮತ ಎನಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈ ಸಾಂವಿಧಾನಿಕ ಇತಿಮಿತಿಗಳೇ ಅಂತಿಮ. ಇವುಗಳಾಚೆಗಿನ ಇತಿಮಿತಿಗಳು ಅಪ್ಪಟ ಸಂವಿಧಾನಬಾಹಿರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿರುವ ಹಲವು ತೀರ್ಪುಗಳಿವೆ.
ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳು ಮತ್ತು ಪ್ರಜ್ಞಾವಂತ ಸಮಾಜ ಸುಪ್ರೀಮ್ ಕೋರ್ಟಿನಿಂದ ಪರಿಹಾರವನ್ನು ಎದುರು ನೋಡಿದ್ದವು. ಕ್ಷುಲ್ಲಕ ನೆಲೆಯ ಮೇಲೆ ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಹೊರಿಸುವ ತನಿಖಾ ಏಜೆನ್ಸಿಗಳನ್ನು ಸುಪ್ರೀಮ್ ಕೋರ್ಟು ತರಾಟೆಗೆ ತೆಗೆದುಕೊಳ್ಳುವುದೆಂದು ನಿರೀಕ್ಷಿಸಿದ್ದವು. ಈ ನಿರೀಕ್ಷೆ ಈಡೇರಿಲ್ಲ.
‘ರಾಕ್ಷಸರು ಬಂದು ನಮ್ಮ ಅಮಾಯಕರ ಮೇಲೆ ದಾಳಿ ನಡೆಸಿದರು. ನಾವು ಒಗ್ಗಟ್ಟಿನಿಂದಿದ್ದೆವು. ಇಂತಹ ಸನ್ನಿವೇಶದಲ್ಲಿ ಅಗ್ಗದ ಜನಪ್ರಿಯತೆ ಪಡೆಯುವ ಪ್ರಯತ್ನ ಯಾಕೆ’ ಎಂದು ಸುಪ್ರೀಮ್ ಕೋರ್ಟು ಪ್ರಶ್ನಿಸಿತು.
ಸುಪ್ರೀಮ್ ಕೋರ್ಟು ಖಾನ್ ಬಿಡುಗಡೆಗೆ ಆದೇಶ ನೀಡಿದೆಯಾದರೂ, ಅವರ ವಿರುದ್ಧದ ಎಫ್.ಐ.ಆರ್.ಗಳನ್ನು ರದ್ದುಗೊಳಿಸಿಲ್ಲ. ಜಾಲತಾಣ ಪೋಸ್ಟ್ ನಲ್ಲಿ ಖಾನ್ ಬಳಸಿರುವ ಪದಗಳ ಆಯ್ಕೆಯನ್ನು ಟೀಕಿಸಿದೆ. ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು ರಚನೆಗೆ ನಿರ್ದೇಶನ ನೀಡಿದೆ. ಅಲಿಖಾನ್ ಅವರ ಪಾಸ್ಪೋರ್ಟನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ವಿಚಾರಣೆಯ ಅವಧಿಯಲ್ಲಿ ಬಾಯಿಗೆ ಬೀಗ ಹಾಕಿಕೊಂಡಿರುವಂತೆ ಖಾನ್ ಗೆ ತಾಕೀತು ಮಾಡಿದೆ.

ತಮ್ಮ ಪೋಸ್ಟ್ ನಲ್ಲಿ ಭಾರತೀಯ ಸೇನಾಪಡೆಗಳ ಕೂಟ ನೀತಿಮೂಲ ಸಂಯಮವನ್ನು ಖಾನ್ ಪ್ರಶಂಸಿಸಿದ್ದಾರೆ. ಪಾಕಿಸ್ತಾನಿ ಮಿಲಿಟರಿಯ ಸನ್ನಿವೇಶದಲ್ಲಿ ಭಯೋತ್ಪಾದಕರು ಮತ್ತು ಸೇನೆಯ ನಡುವಣ ವ್ಯತ್ಯಾಸವೇ ಹೇಗೆ ಕುಸಿದು ಹೋಗಿದೆಯೆಂದು ವಿಮರ್ಶಿಸಿದ್ದಾರೆ. ಮಾಧ್ಯಮಗಳಿಗೆ ವಿವರ ನೀಡಲು ಸೇನಾಪಡೆಗಳ ಮಹಿಳಾ ಅಧಿಕಾರಿಗಳ ಆಯ್ಕೆಯು ನಮ್ಮ ಗಣರಾಜ್ಯದ ಸಂಸ್ಥಾಪಕರ ಜಾತ್ಯತೀತ ದಾರ್ಶನಿಕತೆ ಇನ್ನೂ ಜೀವಂತ ಮಿಡಿದಿರುವುದರ ನಿದರ್ಶನ ಎಂದಿದ್ದಾರೆ. ಕರ್ನಲ್ ಸೋಫಿಯಾ ಖುರೇಶಿ ಅವರನ್ನು ಬೆಂಬಲಿಸಿದ ಭಾರತೀಯ ಬಲಪಂಥದ ನಡೆಯನ್ನು ಮೆಚ್ಚಿರುವ ಖಾನ್ ಅವರು, ಭಾರತೀಯ ಮುಸಲ್ಮಾನರು ದೊಂಬಿ ಹತ್ಯೆಗಳಿಗೆ ಮತ್ತು ಬುಲ್ಡೋಝರ್ ಗಳಿಗೆ ಬಲಿಪಶುಗಳಾಗುತ್ತಿರುವುದನ್ನು ಇಷ್ಟೇ ಗಟ್ಟಿಯಾಗಿ ವಿರೋಧಿಸುವಂತೆ ಬಲಪಂಥೀಯರನ್ನು ಕೋರಿದ್ದಾರೆ. ಶಾಂತಿಯ ಮಹತ್ವವನ್ನು ಸಾರಿರುವ ಅವರು ಕದನಗಳ ಸಂದರ್ಭದಲ್ಲಿ ಬವಣೆಗಳಿಗೆ ತುತ್ತಾಗುವವರು ಬಹುತೇಕ ಬಡವರೇ ಎಂಬ ಕುರಿತು ಗಮನ ಸೆಳೆದಿದ್ದಾರೆ. ಹೇಗೆಲ್ಲ ಪರಿಶೀಲಿಸಿದರೂ ಅವರ ಅಭಿಪ್ರಾಯಗಳಲ್ಲಿ ದೇಶದ್ರೋಹದ ಅಥವಾ ಸ್ತ್ರೀದ್ವೇಷದ ಅಂಶಗಳಿಲ್ಲ. ಬದಲಾಗಿ ಉತ್ತಮ ಪೌರರೆಂದರೆ ಯಾರೆಂದು ತಿಳಿಸಿಕೊಡುವ ಪ್ರಯತ್ನವಿದೆ. ಯೋಧರು ಮತ್ತು ನಾಗರಿಕರಿಬ್ಬರ ಜೀವಗಳ ಕುರಿತೂ ಕಳಕಳಿ ಪ್ರಕಟಿಸುವ ದೇಶಪ್ರೇಮಿಯೊಬ್ಬನ ಮಾತುಗಳು ಈ ಪೋಸ್ಟ್ ಗಳಲ್ಲಿವೆ ಎಂಬುದಾಗಿ ಹೆಸರಾಂತ ಇತಿಹಾಸಜ್ಞರು, ಚಿಂತಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ತಮ್ಮ ಬೆಂಬಲ ಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಅಲಿ ಖಾನ್ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಕ್ರಮಗಳನ್ನು ಕೊಂಡಾಡಿದ್ದರು. ಆದರೆ ಹಿಂದು-ಮುಂದು ಆಲೋಚಿಸದೆ ವಿವೇಚನಾರಹಿತವಾಗಿ ಯುದ್ಧಕ್ಕಾಗಿ ತಹ ತಹಿಸುವ ವರ್ಗವನ್ನು ಟೀಕಿಸಿದ್ದರು. ಹಿಂದು ಪ್ರವಾಸಿಗರ ಹತ್ಯೆಯ ಸೇಡು ತೀರಿಸಿಕೊಳ್ಳುತ್ತಿರುವ ಭಾರತ, ತನ್ನ ನೆಲದಲ್ಲಿ ನಡೆದಿರುವ ಅಲ್ಪಸಂಖ್ಯಾತರ ಮೇಲಿನ ಹಿಂಸೆ-ಕಿರುಕುಳವನ್ನೂ ಮರೆಯಬಾರದು ಎಂದಿದ್ದರು. ಯುದ್ಧವೆಂಬ ಕ್ರಿಯೆಯೇ ಕ್ರೂರ ಮತ್ತು ಹಿಂಸಾತ್ಮಕ. ಯುದ್ಧದ ಬಿಸಿಯಲ್ಲಿ ಬೇಯುವವರು ಬಹುವಾಗಿ ನಿರ್ಗತಿಕರು. ರಾಜಕಾರಣಿಗಳು ಮತ್ತು ಶಸ್ತ್ರಾಸ್ತ್ರ ನಿರ್ಮಾಣ ಕಂಪನಿಗಳಿಗೆ ಯುದ್ಧ ಬೇಕು. ದೊಂಬಿ ಹತ್ಯೆಯ ಬಲಿಪಶುಗಳು, ಮನ ಬಂದಂತೆ ಹರಿಸಲಾಗುವ ಬುಲ್ಡೋಜರ್ ಗಳು ಹಾಗೂ ಬಿಜೆಪಿಯ ದ್ವೇಷಪ್ರಚಾರದ ಬಲಿಪಶುಗಳು ಎಂದು ಅಲಿ ಖಾನ್ ಮೆಹಮೂದಾಬಾದ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಪೋಸ್ಟ್ ನಲ್ಲಿ ಹೇಳಿದ್ದಾಗಿ ಈ ಬೆಂಬಲ ಪತ್ರ ವಿಶ್ಲೇಷಿಸಿದೆ.
ಇದನ್ನೂ ಓದಿ ವಕ್ಫ್ ಕಾಯ್ದೆ ಮುಸ್ಲಿಮರ ಆಸ್ತಿಗಳನ್ನು ದೋಚುವ ಗುರಿ ಹೊಂದಿದೆ, ಮುಂದಿನ ಗುರಿ ಸಿಖ್ಖರು: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ
ಡಾ.ಅಲಿ ಖಾನ್ ಸ್ಪಷ್ಟೀಕರಣವನ್ನು ಕೂಡ ನೀಡಿದ್ದರು. ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಯಾಗಿ ಯುದ್ಧವೇ ಸಾಂಪ್ರದಾಯಿಕ ಉತ್ತರ. ಭಾರತದ ವಿರುದ್ಧ ಭಯೋತ್ಪಾದಕರನ್ನು ಛೂ ಬಿಟ್ಟು ತಾನು ಅವರ ಹಿಂದೆ ಅಡಗಿಕೊಳ್ಳುವುದನ್ನು ಪಾಕಿಸ್ತಾನಿ ಸೇನೆ ಇನ್ನಾದರೂ ನಿಲ್ಲಿಸಬೇಕು. ಒಂದೆಡೆ ತಾನೂ ಭಯೋತ್ಪಾದನೆಯ ಬಲಿಪಶು ಎಂದು ಆಂತಾರಾಷ್ಟ್ರೀಯ ವೇದಿಕೆಯಲ್ಲಿ ಬೊಬ್ಬೆ ಹಾಕುತ್ತಿರುವ ಪಾಕಿಸ್ತಾನ ಇನ್ನೊಂದೆಡೆಗೆ ಅದೇ ಭಯೋತ್ಪಾದಕರಿಗೆ ಮಿಲಿಟರಿ ತರಬೇತಿ ನೀಡಿ ಈ ವಲಯವನ್ನು (ಕಾಶ್ಮೀರ) ಅಸ್ಥಿರಗೊಳಿಸಲು ಬಳಸಿದೆ. ಈ ಆಟ ಬಹುಕಾಲದಿಂದ ನಡೆದಿದೆ. ಪಾಕಿಸ್ತಾನದ ಒಳಗೆ ಕೂಡ ಧಾರ್ಮಿಕ ಒಡಕುಗಳನ್ನು ಬಿತ್ತಲು ಇದೇ ಭಯೋತ್ಪಾದಕರ ಬಳಕೆಯಾಗಿದೆ. ಯುದ್ಧಗಳಲ್ಲಿ ರಣೋತ್ಸಾಹ ಮತ್ತು ನಾಗರಿಕರ ಬವಣೆಯ ಕುರಿತ ತಮ್ಮ ಟೀಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಬಳಸುತ್ತಿರುವುದನ್ನು ತಾವು ಖಂಡಿಸಿರುವುದಾಗಿಯೂ, ಆಳೆದು ತೂಗಿ ಭಾರತ ಕೈಗೊಂಡಿರುವ ಮಿಲಿಟರಿ ಕ್ರಮವನ್ನು ಬೆಂಬಲಿಸಿರುವುದಾಗಿಯೂ ವಿವರಿಸಿದ್ದರು.
ಯಾವ ವಿವರಣೆಯನ್ನೂ, ವಿವೇಕವನ್ನೂ, ಭಿನ್ನದನಿಯನ್ನು ಟೀಕೆಟಿಪ್ಪಣಿಯನ್ನು ಕೇಳುವ ಸ್ಥಿತಿಯಲ್ಲಿಲ್ಲ ಇಂದಿನ ಬಹುಸಂಖ್ಯಾತ ವ್ಯವಸ್ಥೆ. ಮುಸ್ಲಿಮ್ ದ್ವೇಷದಲ್ಲಿ ಒಳಗಣ್ಣು ಹೊರಗಣ್ಣು ಎರಡನ್ನೂ ಕಳೆದುಕೊಂಡಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು