ಹಳ್ಳಿ ಪುರಾಣ | ಮೈಸೂರಿನಲ್ಲಿ ಸಿಕ್ಕ ಈರಮ್ಮಜ್ಜಿ

Date:

Advertisements

ಅದಾಗಲೇ ಚಳಿಗಾಲ ಆರಂಭವಾಗಿತ್ತು. ಅಂದೊಂದು ರಾತ್ರಿ ಗೆಳೆಯ ಸದಾಶಿವನ ರೂಮಿನಿಂದ ಊಟ ಮುಗಿಸಿ ವಾಪಸ್ ಬಂದಾಗ, ಮೆಟ್ಟಿಲ ಕೆಳಗಿನ ಜಾಗದಲ್ಲಿ ಅಜ್ಜಿ ಅಲ್ಲಲ್ಲಿ ಹರಿದಿದ್ದ ಒಂದು ಸಣ್ಣ ಕಡ್ಡಿ ಚಾಪೆಯ ಮೇಲೆ ಮೆಲ್ಲಗೆ ನರಳುತ್ತಾ ಮಲಗಿತ್ತು. ತಲೆ ಮೇಲುಗಡೆ ಒಂದು ಹಳೆಯದಾದ ಕಬ್ಬಿಣದ ಟ್ರಂಕು, ಕಾಲ ಬಳಿ ಕಸ ಗುಡಿಸಿ ಮುಕ್ಕಾಗಿದ್ದ ಒಂದು ಈಚಲಿನ ಕಸಬರಿಗೆ, ಧ್ವನಿ ಕ್ಷೀಣಿಸಿತ್ತು…

ಅವರು ಬೆಳೆದು ಬಂದ ಪರಿಸರದಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಯಾರಿಗೂ ಆ ಪ್ರತಿಭೆ, ಕಲೆ, ವಾಚಾಳಿತನ, ಹೋರಾಡುವ ಗುಣ. ಯಾವುದರ ಕಿಂಚಿತ್ತೂ ಕುರೂಹು ಅಲ್ಲಿರುವುದಿಲ್ಲ ಅಥವಾ ಯಾವುದೇ ಶಾಲೆ, ಕಾಲೇಜು ಮೆಟ್ಟಿಲಗಳನ್ನು ಏರಿ, ಮಣ ಭಾರದ ಪುಸ್ತಕಗಳನ್ನೂ ಓದಿ ಆ ಜ್ಞಾನವನ್ನು ಪಡೆದಿರುವುದಿಲ್ಲ. ಹಗಲಿರುಳು ಕಷ್ಟಪಟ್ಟು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಲಿತವರನ್ನು ಅವರು ಬಹಳ ಸುಲಭವಾಗಿ ಹಿಂದೆ ಹಾಕುತ್ತಾರೆ.‌ ಹೆಚ್ಚಿನ ಸಲ ಅವರ ಬಗ್ಗೆ ತೀವ್ರವಾದ ಅಸೂಯೆ ಸ್ವಾಭಾವಿಕವಾಗಿ ಮೂಡುತ್ತದೆ. ಈ ರೀತಿ ಅಸೂಯೆ ಪಡುವುದು ತಪ್ಪಲ್ಲವಾ ಎಂದು ಮನಕ್ಕೆ ಮತ್ತೆ ಮತ್ತೆ ಬಂದರೂ ನಾನಾದರೂ ಇಷ್ಟೆಲ್ಲಾ ಶ್ರಮಪಟ್ಟರೂ ಸಿಗದ ಆ ಜ್ಞಾನ ಇವರಿಗೆ ಸಿಕ್ಕಿದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತಲೇ ಇದ್ದು, ಮನದಲ್ಲಿನ ಅಸೂಯೆಯ ಕಾವಿಗೆ ಮತ್ತಷ್ಟು ಉರುವಲು ತುಂಬುತ್ತಲೇ ಇರುತ್ತದೆ.

ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರಾ…? ಅದಕ್ಕೆ ಕಾರಣ ಇದೆ‌. ನಿಮಗೆಲ್ಲಾ ಈ ನನ್ನ ಕತೆ, ವ್ಯಥೆ ಹೇಳಿ ಮನಸ್ಸು ಹಗುರ ಮಾಡ್ಕೋಬೇಕು, ನಾನು ಈಗ ಹೇಳಬೇಕೆಂದು ಹೊರಟಿರುವುದು ಒಬ್ಬ ಅಜ್ಜಿಯ ಕತೆ. ಎಲ್ಲ ಹಳ್ಳಿಯ ಹುಡುಗರಂತೆ ಓದಲಿಕ್ಕೆ ಪಟ್ಟಣ ಸೇರಿದೆ. ಮೈಸೂರಿನಲ್ಲಿ ಎಲ್ಲಿದ್ದುಕೊಂಡು ಓದುವುದು? ಯಾರನ್ನು ಕೇಳುವುದು? ನೆಂಟರ ಮನೆಯಾ, ಹಾಸ್ಟೆಲ್ ಸೇರುವುದಾ? ಎಂಬ ಗೊಂದಲದಲ್ಲಿ ಹಾಸ್ಟೆಲ್ ಸೇರುವುದೇ ಸರಿ, ನನ್ನಿಂದ ಯಾರಿಗೂ ತೊಂದರೆಯಿರುವುದಿಲ್ಲ. ಜೊತೆಗೆ ಸಿನಿಮಾ ನೋಡಲು, ಸ್ನೇಹಿತರ ಜೊತೆ ಸುತ್ತಾಡಲು ಸ್ವಾತಂತ್ರ ಇರುತ್ತೆ. ಆದರೆ ಪ್ರತಿ ತಿಂಗಳು ದುಡ್ಡು ಕಟ್ಟಬೇಕಂತಲ್ಲಾ ಎಲ್ಲಿಂದ ತರಲಿ? ಅಮ್ಮನ ಮಾತಿನಂತೆ ಅವರ ದೊಡ್ಡಮ್ಮನ ಮಗನ ಮನೆ ಸೇರುವುದೇ ಸದ್ಯಕ್ಕೆ ಒಳಿತು. ಹೇಗೋ ಒಂದು ವರುಷ ಕಳೆದ ಮೇಲೆ ಹಾಸ್ಟೆಲ್ ಸೇರಿ ಇಲ್ಲಾ ಒಂದು ರೂಮು ಎನ್ನುವ ಒಂದು ಗೂಡು ಹುಡುಕಿ ನನ್ನದೇ ನಳಪಾಕ ಪ್ರಯೋಗ ಮಾಡುತ್ತಾ, ಸ್ವತಂತ್ರವಾಗಿಯೇ ಬದುಕುವುದೇ ಚಂದ. ಈ ರೀತಿ ತರ್ಕ, ದ್ವಂದ್ವಗಳೊಡನೆ ಪಿಯುಸಿ ಪಾಸಾಯಿತು.‌

Advertisements

ಮೆಡಿಕಲ್ ಅಥವಾ ಎಂಜಿಯರಿಂಗ್ ಸೇರಲು ಬೇಕಾದ ಅಂಕಗಳಿಲ್ಲ.‌ ನಾನು ಸಾಮಾನ್ಯ ವರ್ಗವಾ ಅಥವಾ ಹಿಂದುಳಿದ ವರ್ಗವಾ? ಈ ಬಗ್ಗೆ ನಾನು ಯಾರನ್ನೂ ಕೇಳಿರಲಿಲ್ಲ. ಯಾರು ಇದರ ಬಗ್ಗೆ ನನಗೆ ಹೇಳಿ ಪುಣ್ಯ ಕಟ್ಟಿಕೊಳ್ಳುವ ಭಾಗ್ಯವಂತರಿರಲಿಲ್ಲ. ನಂತರದಲ್ಲಿ ಕೆಲವು ಸ್ನೇಹಿತರೂ ಲೋ …ಆದಾಯ ಮತ್ತು ಜಾತಿ ಧೃಡೀಕರಣ ಪತ್ರ ಮಾಡಿಸಿದ್ದರೇ ನಿನಗೂ ಎಂಜಿನಿಯರಿಂಗ್ ಸಿಗುತ್ತಿತ್ತು ಕಣ್ಲಾ… ಎಂದಾಗಲೂ ಯಾವ ಬೇಸರವೂ ಆಗಲಿಲ್ಲ. ನಮ್ಮ ಅಜ್ಞಾನಕ್ಕೆ ನಾವು ಬೇಸರ ಪಟ್ಟುಕೊಳ್ಳುವುದು, ನಮಗೆ ನಾವು ಮಾಡಿಕೊಂಡ ಅವಮಾನವೇ ಸರಿ. ಕೊನೆಗೂ ಬಿಎಸ್ಸಿ ಸೇರಲು ಮನಸ್ಸು ಮಾಡಿದೆ.‌ ಅದರಲ್ಲೂ physics, chemistry ಇಲ್ಲದ combination ಆದರೆ ಇನ್ನೂ ಚಂದ ಅಂದ್ಕೊಂಡೆ. ಆಡ್ಮಿಶನ್ ದಿನ ಬಂತು, ಕೈಯಲ್ಲಿ ಅಂಕಪಟ್ಟಿ, ಪ್ಯಾಂಟಿನ ಜೇಬೊಳಗೆ ಅಪ್ಪನಿಂದ ಕಾಡಿ ಬೇಡಿ, ಆತ ಸಾಲ ಮಾಡಿ ತಂದು ಕೊಟ್ಟಿದ್ದ ನೂರರ ಹತ್ತು ನೋಟುಗಳು. ಪ್ರಿನ್ಸಿಪಾಲ್ ಚೇಂಬರ್ ಮುಂದೆ ಬಾಗಿಲು ಕಾಯುತ್ತಾ ನಿಂತಿದ್ದೇನೆ. ಎರಡು, ಮೂರು ಕೋರ್ಸುಗಳು ತಲೆಯಲ್ಲಿವೆ. ಯಾವ ಕೋರ್ಸಿಗೆ ಸೇರುವುದು ಎಂದು ಇನ್ನೂ ಖಚಿತವಾಗಿಲ್ಲ. ಅಷ್ಟರಲ್ಲಿ ಸೊಕ್ಕಿಗೆ ಮತ್ತೊಂದು ಹೆಸರಾಗಿದ್ದ ಅಟೆಂಡರ್ ಮಹಾದೇವಣ್ಣ ನನ್ನ ಹೆಸರು ಕರೆದ.‌ ಸೊಕ್ಕಿನ ಮಹಾದೇವಣ್ಣ ನನ್ನ ಹೆಸರು ಕರೆದೊಡನೇ ಪ್ರಿನ್ಸಿಪಾಲ್ ಚೇಂಬರಿಗೆ ಹೋದೆ.‌ ಅಲ್ಲಿ ಪ್ರಿನ್ಸಿಪಾಲರ ಜೊತೆಗೆ ಇನ್ನಿಬ್ಬರು ಅಧ್ಯಾಪಕರಿದ್ದರು. ನನ್ನ ಪದವಿಯ ಪ್ರವೇಶದ ಅರ್ಜಿ ನೋಡಿ ನೀನು ಯಾವ ಕೋರ್ಸು ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದ್ದಿಯಾ ಮತ್ತು ಎಷ್ಟು ದುಡ್ಡು ತಂದಿದ್ದೀಯಾ ಅಂತಾ ಕೇಳಿದ್ರು. ಸರ್ ಸಾವಿರ ರೂಪಾಯಿ ಇದೆ‌ ಅಂದೆ. “ನೋಡು‌ ಸ್ವಾಮಿ, ಈಗ ನಮ್ಮ ಕಾಲೇಜಿಗೆ ಹೊಸ ಕೋರ್ಸು ಬಂದಿದೆ. ಇದಕ್ಕೆ ಬಹಳ ಭವಿಷ್ಯವಿದೆ. ಡೊನೇಷನ್ ಕೇವಲ ಸಾವಿರ ರೂಪಾಯಿ, ಉಳಿದ ಪೀಜು ಮುನ್ನೂರೈವತ್ತನ್ನು ನಾಳೆ ತಂದು ಕಟ್ಟು” ಎಂದೇಳಿ ನನ್ನ ಬಿಎಸ್ಸಿ ಪದವಿಗೆ ಪ್ರವೇಶ ಮಾಡಿಕೊಂಡುಬಿಟ್ರು.

ಏನು ನಡೆಯುತ್ತಿದೆ ಎಂದು ತಿಳಿಯುವುದರಷ್ಟಲ್ಲಿ ಎಲ್ಲಾ ಮುಗಿದು ಹೋಗಿತ್ತು. ಮತ್ತೆ ಸಂಜೆ ಊರಿಗೆ ಹೋಗಿ ಮರುದಿನ ಬಂದು ಉಳಿದ ಫೀಜು ಕಟ್ಟಿದೆ.‌ ಕಾಲೇಜು ಪಾಠಗಳು ಆರಂಭವಾಯಿತು. ಮೈಸೂರಿನಲ್ಲಿ ನೆಲೆ ಹುಡುಕಾಟ ಆರಂಭವಾದರೂ ಎಲ್ಲಿಯೂ ಯಾವ ರೂಮುಗಳು ಸಿಗುತ್ತಿಲ್ಲ.‌ ಪ್ರತಿ ದಿನ ಊರಿಂದ ಬಂದು ಹೋಗಲು ಅಷ್ಟು ದುಡ್ಡಿಲ್ಲ. ಮತ್ತೆ ನೆಂಟರ ಮನೆಗೆ ಹೋಗುವಂತೆ ಅಮ್ಮನ ಸಲಹೆ. ದಿನ ಬಿಟ್ಟು ದಿನ ಕಾಲೇಜಿಗೆ ಹಾಜರಿ, ತಿಂಗಳು ಕಳೆಯುತ್ತಾ ಬಂದರೂ ರೂಮು ಸಿಗುವ ಸೂಚನೆಗಳಿಲ್ಲ. ಒಂದು ಮಧ್ಯಾಹ್ನ ಸಹಪಾಠಿ ರಾಜೇಶ‌ ಕಾಲೇಜಿಂದ ಮೂರು ಕಿಲೋಮೀಟರ್ ದೂರದ ವಿದ್ಯಾರಣ್ಯಪುರಂನಲ್ಲಿ ತನ್ನ ರೂಮಿನ ಪಕ್ಕದಲ್ಲಿ ಒಂದು ರೂಮು ಖಾಲಿ ಇರುವುದಾಗಿ, ಸಂಜೆ ಬಂದು ನೋಡುವಂತೆ ಹೇಳಿದ. ಅದೊಂದು ಸಾಧು ಸಮಾಜವೆಂಬ ಆಶ್ರಮ. ಪೂಜೆಯ ಖರ್ಚಿನ ಬಾಬತ್ತಿಗೆ ಪಕ್ಕದಲ್ಲಿ ಆರು ರೂಮುಗಳ ಬಾಡಿಗೆ.‌ ಮುಂಗಡ ಹಣ ಎರಡು ಸಾವಿರ, ತಿಂಗಳ ಬಾಡಿಗೆ ನೂರೈವತ್ತು ರೂಪಾಯಿ. ಅಂತೂ ಕೊನೆಗೊಂದು ನೆಲೆ ಸಿಕ್ಕ ಖುಷಿಯಲ್ಲಿ ಒಂದು ದೀರ್ಘ ನಿಟ್ಟುಸಿರು.

ಮರುದಿನವೇ ಊರಿಂದ ಹಣ ತಂದು ಸ್ಟೌ, ಪಾತ್ರೆ, ತಟ್ಟೆ, ಲೋಟ, ಚಾಪೆ, ಬಕೆಟ್ ಖರೀದಿಸಿ ಹೊಸ ಜೀವನ ಆರಂಭಿಸಿದೆ.‌ ದಿನಾಲೂ ಕಾಲು ನಡಿಗೆಯಲ್ಲೇ ರಾಜೇಶನೊಂದಿಗೆ ಕಾಲೇಜಿಗೆ ಹೋಗಿ ಬರುವುದು. ಬೆಳಿಗ್ಗೆ ಬಿಡುವಿದ್ದರೇ ಚಿತ್ರಾನ್ನ, ಉಪ್ಪಿಟ್ಟಿನ ತಯಾರಿ ಪ್ರಯೋಗ ಇಲ್ಲವೇ ಕಾಲೇಜಿನ ಕ್ಯಾಂಟಿನ್. ರಾತ್ರಿಗೆ ಅನ್ನ ಮಾಡಿ, ಹೋಟೆಲ್ ಸಾಂಬಾರ್ ತಂದು ಊಟ ಮಾಡುವುದು ರೂಢಿಯಾಯಿತು.‌ ನಿಧಾನಕ್ಕೆ ಅಕ್ಕ ಪಕ್ಕದ ರೂಮಿನವರಿಂದ ಒಗ್ಗರಣೆ ಪಾಕ ಪ್ರವೀಣನೆಂಬ ಬಿರುದಿಗೆ ಪಾತ್ರನಾದೆ. ಆ ಆಶ್ರಮದ ಟ್ರಸ್ಟಿಗಳು ಕೆಲ ಮಂದಿ ಎಂಜಿನಿಯರ್, ವಕೀಲರು, ಕಂಟ್ರಾಕ್ಟರ್‌‌ಗಳು. ಪ್ರತಿ ಭಾನುವಾರ ಸತ್ಸಂಗ, ಪೂಜೆ‌‌.‌‌‌ ಕೊನೆಗೆ ದೇವರ ಪ್ರಸಾದ. ನಾಮಕರಣ, ನಿಶ್ಚಿತಾರ್ಥ, ತಿಥಿ ಕಾರ್ಯಕ್ರಮಗಳು ಸದಾ ನಡೆಯುತ್ತಿದ್ದ ಜಾಗವದು. ಆಂಧ್ರದಿಂದ ಬಂದಿದ್ದ ಇಲ್ಲಿಯೇ ನೆಲೆಸಿದ್ದ ಶಿವಾನಂದ ಪುರಿ ಎನ್ನುವ ಸಾಧುರವರಿಗೆ ಪೂಜೆಯ ಉಸ್ತುವಾರಿ.‌ ದಿನಾಲೂ ನಾಲ್ಕುವರೆಗೆ ಏಳುತ್ತಿದ್ದ ಅವರು ಸ್ನಾನ ಮಾಡಿ ಸಂಗೀತಾಭ್ಯಾಸ ಮಾಡಿ, ಕೊನೆಗೆ ಪೂಜೆ ಮುಗಿಸುತ್ತಿದ್ದರು‌. ಬೆಳಗ್ಗೆ ಒಂಬತ್ತಕ್ಕೆ ಭಕ್ತರ ಮನೆಗೆ ಹೊರಟು ಪೂಜೆ, ಪ್ರಸಾದ ಮುಗಿಸಿ ಸಂಜೆಗೆ ತರಕಾರಿ, ಹಣ್ಣುಗಳೊಡನೆ ವಾಪಸ್ ಬರುತ್ತಿದ್ದರು‌‌.‌ ಅವರು ಖುಷಿಯಿದ್ದಾಗ ಒಮ್ಮೊಮ್ಮೆ ಕರೆದು ನಮಗೂ ಹಣ್ಣುಗಳನ್ನು ಕೊಡುತ್ತಿದ್ದದ್ದು ಉಂಟು. ಅಕ್ಕ ಪಕ್ಕದ ಮನೆಯವರೆಲ್ಲಾ ನಮಗೆಲ್ಲಾ ಆಶ್ರಮದ ಹುಡುಗರೆಂದು ನಾಮಕರಣ ಮಾಡಿಬಿಟ್ಟಿದ್ದರು.

ಹೀಗೆ ಪ್ರಶಾಂತವಾಗಿ ನಡೆಯುತ್ತಿದ್ದ ಆಶ್ರಮಕ್ಕೆ ಒಂದು ದಿನ ಒಬ್ಬ ಆರವತ್ತರ ಸುಮಾರಿನ ನಾಲ್ಕೂವರೆ ಅಡಿ ಎತ್ತರದ ಬೆನ್ನು ಬಾಗಿದ ಬಡಕಲು ಅಜ್ಜಿಯ ಪ್ರವೇಶವಾಯಿತು. ಅದುವೇ ಈರಮ್ಮಜ್ಜಿ. ಕಥಾನಾಯಕಿ. ನಾನು ಜೀವನದಲ್ಲಿ ಎಂದಿಗೂ ಮರೆಯಲಾಗದ ವ್ಯಕ್ತಿತ್ವ. ನನಗೆ ಮನೋವಿಜ್ಞಾನದ ಬಗ್ಗೆ ಆಸಕ್ತಿ ಕೆರಳಲು ಕಾರಣವಾದಾಕೆ.

ಅದು ಸೆಪ್ಟೆಂಬರ್ ತಿಂಗಳಿರಬಹುದು. ಮುಂಜಾನೆ ಏಳರ ಸಮಯ, ಎಂದಿನಂತೆ ನಿತ್ಯಕರ್ಮ, ಸ್ನಾನಕ್ಕೆ ಕೆಳಗಿನ ನೆಲ ಅಂತಸ್ತಿನಲ್ಲಿದ್ದ ಬಾತ್‌ರೂಮಿಗೆ ಹೋಗಲು ಮೆಟ್ಟಿಲುಗಳನ್ನು ಇಳಿಯುತ್ತಿದ್ದೆ. ನಾಲ್ಕೂವರೆ ಅಡಿ ಎತ್ತರದ, ಒದ್ದೆ ಕೂದಲನ್ನೇ ತುರುಬು ಕಟ್ಟಿ, ಮಾಸಿದ ಕಪ್ಪು ಬಣ್ಣದ, ನಡುವೆ ಹೂವಿನ ಚಿತ್ರವಿದ್ದ ಸೀರೆಯುಟ್ಟು, ಹಾಗೇ ಹಣೆಯ ಮೇಲೆ ಜೋರಾಗಿ ತಿದ್ದಿದ ವಿಭೂತಿ ಪಟ್ಟೆಯ ಅರವತ್ತರ ಅಸುಪಾಸಿನ ಅಜ್ಜಿಯೊಂದು ತನ್ನ ಗೂನು ಬೆನ್ನನ್ನು ಬಗ್ಗಿಸಿ, ಸೊಂಟದ ಮೇಲೆ ಎರಡು ಕೈಯಿಟ್ಟು ನನ್ನನ್ನೇ ದಿಟ್ಟಿಸಿ ನೋಡುತ್ತಿದೆ.

ಹಲ್ಲುಗಳು ಮುತ್ತಿನಂತೆ ಜೋಡಿಸಲ್ಪಟ್ಟು ಗಟ್ಟಿಯಾಗಿವೆ.‌ ಆಕೆಯ ನೋಟದಲ್ಲಿ ತೀಕ್ಷ್ಣತೆಯಿದೆ, ವಿನೋದದ ನಗೆಯಿದೆ. ನನ್ನನ್ನು ನೋಡುತ್ತಿದ್ದಂತೆ “ಏನ್ ಹುಡುಗ? ಮೇಲ್ಗಡೆ ರೂಮಿನಲ್ಲಿದ್ದೀಯಾ” ಅಂತು. ಬಳಸಿದ ಭಾಷೆ, ಉಚ್ಚಾರದಲ್ಲಿನ ಸ್ಪಷ್ಟತೆ, ಧ್ವನಿಯ ಗಡುಸು ಈ ಅಜ್ಜಿ ಯಾರೋ ವಿಶೇಷ ಇರಬೇಕು. ಆಶ್ರಮಕ್ಕೆ ಬಂದಿರುವ ಅತಿಥಿ ಇರಬೇಕು ಅನಿಸಿತು.‌ ಮೇಲ್ಗಡೆ ಮಧ್ಯದ ರೂಮಿನಲ್ಲಿ ಬಾಡಿಗೆಗೆ ಇರೋದು. ಕೆಳಗೆ ಮಹಡಿಯಲ್ಲಿದ್ದ ಒಂದೇ ಬಾತ್ ರೂಮಿನಲ್ಲಿ ಪಕ್ಕದ ರೂಮಿನ ಆಟೋ ಡ್ರೈವರ್ ನರಸಿಂಹ ಸ್ನಾನ ಮಾಡ್ತಾ ಇದ್ದ. ಹೊರಗೆ ಕಾಯ್ತಾ ಅಜ್ಜಿ ಜೊತೆ ಮಾತು ಮುಂದುವರೆಯಿತು.‌ “ಯಾವ್ ಊರೋ ಹುಡುಗ ನಿಂದು” ಅಂತು. “ಮಳವಳ್ಳಿ ಹತ್ತಿರದ ಒಂದು ಹಳ್ಳಿ” ಎಂದೆ. “ಸರಿ! ಚೆನ್ನಾಗಿ ಓದ್ಕೋ, ಅಪ್ಪ, ಅಮ್ಮನಿಗೆ ಒಳ್ಳೆಯ ಹೆಸರು ತರಬೇಕು. ಸಿನಿಮಾ ನೋಡೋಕ್ತಾ ಪೋಲಿ ಹುಡುಗರ ಸಹವಾಸ ಮಾಡಬೇಡ” ಎನ್ನುವ ಆಕೆಯ ಉಪದೇಶ ಕಮ್ ಆಜ್ಞೆಗೆ ತಲೆ ಬಾಗಿದೆ.

ಮತ್ತೆ “ಅಜ್ಜಿ ನೀನಾರು ಅಂತಾ ಹೇಳಲೇ ಇಲ್ಲ. ಕೇಳಿದೊಡನೇ ಗತ್ತಿನಲ್ಲಿ “ನನ್ನ ಹೆಸರು ಈರಮ್ಮ ಅಂತಾ, ಈ ಮೊದಲು ಬೇರೆ ಇನ್ನೊಂದು ಆಶ್ರಮದಲ್ಲಿದ್ದೆ. ಅಲ್ಲಿ ನನಗೆ ಬಂದಿದ್ದ ದುಡ್ಡನ್ನೆಲ್ಲಾ ಒಬ್ಬ ಹೆಂಗಸು ಲಪಾಟಾಯಿಸಿ ನನ್ನನ್ನು ಆಚೆ ಕಳುಹಿಸಿಬಿಟ್ಟಳು.‌ ನನ್ನ ಕಷ್ಟ ನೋಡಿ, ಅಗಿರೋ ಅನ್ಯಾಯ ನೋಡಿ ಜಟ್ಟಪ್ಪ ಇಲ್ಲಿಗೆ ಕರೆದುಕೊಂಡು ಬಂದ್ರು. ನನಗೆ ಇಲ್ಲೇ ಒಂದು ರೂಮು ಕಟ್ಟಿಸಿ ಕೊಡ್ತಾರಂತೆ, ಅಲ್ಲಿಯ ತನಕ ಇಲ್ಲಿನ ಮೆಟ್ಟಿಲ ಕೆಳಗಡೆ ಜಾಗದಲ್ಲಿ ವಾಸಿಸಲು ಹೇಳಿದ್ದಾರೆ” ಅಂದ್ಲು. ಅಷ್ಟರಲ್ಲಿ ನರಸಿಂಹನ ಸ್ನಾನ ಮುಗೀತು, ಕಾಲೇಜಿಗೆ ತಡವಾಗುತ್ತಿದ್ದರಿಂದ ಸಂಜೆ ಮಾತನಾಡುತ್ತೇನೆ ಎಂದು ಹೇಳಿ, ಬೇಗ ಸ್ನಾನ ಮುಗಿಸಿ ಕಾಲೇಜಿಗೆ ಹೋದೆ.

ಸಂಜೆ ವಾಪಸ್ ಬಂದಾಗ, ಅಜ್ಜಿ ನಮ್ಮ ಆಶ್ರಮದ ಪಕ್ಕದ ಮನೆಯಲ್ಲಿನ ಒಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಾ ಇತ್ತು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯಾಕೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ MBBS ಕಲಿಯುತ್ತಿದ್ದಳು, ತುಂಬಾ ಗೌರವಸ್ತ, ಸಂಪ್ರದಾಯ ಕುಟುಂಬ. ಮಾತು ಮುಗಿಸಿ ಬರುವಾಗ ಚಕ್ಕುಲಿ, ನಿಪ್ಪಟ್ಟು ಕೊಟ್ಟು ಕಳುಹಿಸಿದ್ದರು. ರೂಮಿನಲ್ಲಿ ಪುಸ್ತಕವಿಟ್ಟು ಕೆಳಗೆ ಬಂದು ಮೆಟ್ಟಿನ‌ ಮೇಲೆ ಕುಳಿತೆ. ಬಂದವನಿಗೆ ಪೇಪರ್ ನಲ್ಲಿ ಮುಚ್ಚಿಟ್ಟಿದ್ದ ಚಕ್ಕುಲಿ, ಕೊಡುಬಳೆ ಕೊಡಲು ಬಂತು. “ನನಗೆ ಬೇಡಜ್ಜಿ” ಎಂದೆ. ಸರಿ, ಎಂದು ಅಜ್ಜಿ ಎದುರುಗಡೆ ಕುಳಿತು ತನ್ನ ಕತೆ ಆರಂಭಿಸಿತು.

Can old age still have a happy ending

“ನಾವು ಒಕ್ಕಲಿಗ ಗೌಡರು, ನಾನು ಹುಟ್ಟಿದ್ದು ಬನ್ನೂರು ಹತ್ತಿರ ಒಂದು ಹಳ್ಳಿ, ಹೆಗ್ಗಡದೇವನ ಕೋಟೆ ಹತ್ತಿರದ ಒಂದು ಹಳ್ಳಿಗೆ ಮದ್ವೆ ಮಾಡಿ ಕೊಟ್ಟಿದ್ರು. ಮದ್ವೆಯಾದ ನಾಲ್ಕೆ ವರುಷಕ್ಕೆ ಗಂಡ ಸತ್ತು ಹೋದ, ಮಕ್ಕಳಲಾಗಿರಲಿಲ್ಲ.‌ಕೊನೆಗೆ ನಮ್ಮ ಯಜಮಾನನ ಅಣ್ಣ, ತಮ್ಮಂದಿರೆಲ್ಲಾ ಏನು ಆಸ್ತಿ ಕೊಡದೇ ಮೋಸ ಮಾಡಿ ಬಿಟ್ರು, ಕೂಲಿ ಮಾಡ್ತಾ ಬದುಕ್ತಾ ಇದ್ದೆ, ಆಮೇಲೆ ಕಂಟ್ರಾಕ್ಟರ್ ಶಿವಣ್ಣ ತಮ್ಮ ತೆಂಗಿನ ತೋಟದಲ್ಲಿ ಕೆಲಸ ಕೊಟ್ರು, ಆಮೇಲೆ ಅಲ್ಲೇ ಪಕ್ಕದಲ್ಲಿದ್ದ ಆಶ್ರಮದಲ್ಲಿ ಕೆಲಸಕ್ಕೆ ಸೇರಿದೆ. ಹದಿನೈದು ವರುಷ ಕೆಲಸ ಮಾಡಿದ ಮೇಲೆ ಅಲ್ಲಿ ಆಯಮ್ಮ ನನ್ನ ದುಡ್ಡನ್ನೆಲ್ಲಾ ನುಂಗಿ ಹಾಕಿ, ಈ ಸ್ಥಿತಿಯಲ್ಲಿ ಹೊರಗೆ ಹಾಕಿದಳು” ಅಂತು.‌ ಅವಳ ದುರ್ದೈವಕ್ಕೆ, ಸ್ಥಿತಿಗೆ ಮರುಕವಾಯಿತು. “ಒಳ್ಳೆಯದಾಗುತ್ತೆ ಬಿಡಜ್ಜಿ, ಹೇಗೂ ಜಟ್ಟಪ್ಪ ನಿನಗೇ ರೂಮು ಕಟ್ಟಿಸಿ ಕೊಡ್ತಾರಲ್ಲ” ಎಂದೆ.‌ ಜಟ್ಟಪ್ಪ ನಾವಿದ್ದ ಆಶ್ರಮದ ಕಾರ್ಯದರ್ಶಿಯಾಗಿದ್ದರು. ಹೀಗೆಯೇ ಅಜ್ಜಿ ಮತ್ತು ನಮ್ಮ ನಡುವೆ ಕಷ್ಟ ಸುಖದ ಚರ್ಚೆ ಮುಂದುವರೆಯುತ್ತಿತ್ತು. ಜೊತೆಗೆ ಅಕ್ಕ, ಪಕ್ಕದಲ್ಲಿನ ಎಲ್ಲಾ ಮನೆಯವರ ಜೊತೆ ಕುಶಲೋಪರಿ ಜೊತೆಗೆ ಭಾಂದವ್ಯ ವೃದ್ಧಿಯಾಗುತ್ತಿತ್ತು.

ಇದನ್ನೂ ಓದಿ ಹಳ್ಳಿ ಪುರಾಣ | ʼವಾರದೊಳಗೆ ನನ್ನ ಬಳಿ ಬಾ ಅಂತಾ ಹೇಳವ್ನೆ ಶಿವʼ ಎಂದಿದ್ದ ಕುಂದೂರು ಬಸಪ್ಪ ಹೊರಟೇಬಿಟ್ಟಿದ್ದ…!

ಅದಾಗಲೇ ಚಳಿಗಾಲ ಆರಂಭವಾಗಿತ್ತು ಅಂದೊಂದು ರಾತ್ರಿ ಗೆಳೆಯ ಸದಾಶಿವನ ರೂಮಿನಿಂದ ಊಟ ಮುಗಿಸಿ ವಾಪಸ್ ಬಂದಾಗ, ಮೆಟ್ಟಿಲ ಕೆಳಗಿನ ಜಾಗದಲ್ಲಿ ಅಜ್ಜಿ ಅಲ್ಲಲ್ಲಿ ಹರಿದಿದ್ದ ಒಂದು ಸಣ್ಣ ಕಡ್ಡಿ ಚಾಪೆಯ ಮೇಲೆ ಮೆಲ್ಲಗೆ ನರಳುತ್ತಾ ಮಲಗಿತ್ತು. ತಲೆ ಮೇಲುಗಡೆ ಒಂದು ಹಳೆಯದಾದ ಕಬ್ಬಿಣದ ಟ್ರಂಕು, ಕಾಲ ಬಳಿ ಕಸ ಗುಡಿಸಿ ಮುಕ್ಕಾಗಿದ್ದ ಒಂದು ಈಚಲಿನ ಕಸಬರಿಗೆ.‌ ಆ ಕ್ಷೀಣ ಧ್ವನಿ ಕೇಳಿದೊಡನೇ “ಯಾಕಜ್ಜಿ ಏನಾಯ್ತು ಉಷಾರಿಲ್ವಾ!” ಅಂದೆ, “ಯಾಕೋ ಜರಾ ಬಂದ್ಹಗೇ ಅದೆ, ಹೊಟ್ಟೆ ಹಸೀತಾ ಇದೆ, ನನ್ಹತ್ರ ದುಡ್ಡಿಲ್ಲ ಕಣೋ” ಅಂತು. ತಕ್ಷಣ ಸೈಕಲ್ ಏರಿ ಅಲ್ಲಿಯೇ ತುಸು ದೂರದಲ್ಲಿದ್ದ ಆನಂದ್ ಇದ್ದ ಮೆಡಿಕಲ್ ಶಾಪಿಗೆ ಹೋಗಿ ಜ್ವರದ ಮಾತ್ರೆಯನ್ನು, ಬ್ರೆಡನ್ನು ತಂದು ಕೊಟ್ಟೆ, ಮಾತ್ರೆ ನುಂಗಿ, ಬ್ರೆಡ್ ತಿಂದು ನೀರು ಕುಡಿದ ಅಜ್ಜಿ ಮೆಲ್ಲಗೆ ಕಣ್ಣರಳಿಸಿ ಮುಖದ ಮೇಲೆ ತುಸು ನಗು ಬೀರುತ್ತಾ “ದೇವರು ಒಳ್ಳೆಯದನ್ನು ಮಾಡಲಿ” ಎಂದು ಹರಸಿ ಮೇಲೊಂದು ಸೀರೆ ಹೊದ್ದು ಮಲಗಿತು. ಮೇಲೆ ರೂಮಿಗೆ ಬಂದು ಮಲಗಿದವನಿಗೆ, ಮನಸ್ಸಿಗೆ ಚುರ್ ಚುರ್ ಅನುಭವ. ಕಣ್ಣಿಗೆ ಸರಿಯಾಗಿ ನಿದ್ದೆ ಹತ್ತುತ್ತಿಲ್ಲ. ಏನೋ ಚಡಪಡಿಕೆ! ಒಮ್ಮೆ ಶಾಲೆಯಿಂದ ಜ್ವರ ಬಂದು ಮಧ್ಯಾಹ್ನವೇ ಮನೆಗೆ ಬಂದಾಗ ನನ್ನಜ್ಜಿ ನಂಜಮ್ಮ ಮಾಡುತ್ತಿದ್ದ ಅಡುಗೆ ನಿಲ್ಲಿಸಿ, ಯಾರಿಗೂ ಕಾಯದೇ ತಕ್ಷಣ ಬೇರೆ ಸೀರೆ ಉಟ್ಟು ಟೀ ನರಸೀಪುರದ ಶಿವನಾಗಪ್ಪ ಡಾಕ್ಟರಿಗೆ ತೋರಿಸಿ ಬಂದು ಗಂಜಿ ಕಾಯಿಸಿ ಕೊಟ್ಟಿದ್ದಳು. ಗಂಡು ಮಕ್ಕಳ ಸಂತಾನವಿಲ್ಲದ ಚನ್ನಬಸವ ಒಡೆಯರ್ ಮನೆತನದ ಆಕೆಗೆ ನಾನೇ ಮೊದಲ ಮೊಮ್ಮಗ. ಕುಟುಂಬದ ಶಾಪ ತಪ್ಪಿಸಲು ಜನರಿಂದ ಭಿಕ್ಷೆ ಎತ್ತಿ ಮೂಗಿನ ನತ್ತು ಮಾಡಿಸಿ, ಹೊಸ್ತಿಲ ಕೆಳಗೆ ಹೂತು, ನಾನು ಹುಟ್ಟಿದ ಆರು ತಿಂಗಳಿಗೇ ಮೂಗು ಚುಚ್ಚಿಸಿ ನತ್ತು ಹಾಕಿಸಿದ್ದರು.‌‌ ನನ್ನ ನಂತರ ಮತ್ತೆ ಮೂರು ಗಂಡು ಮೊಮ್ಮಕ್ಕಳ ಆಗಮನವಾಗಿತ್ತು.

ಆ ನನ್ನ ಅಜ್ಜಿಯದೇ ವಯಸ್ಸಿನ ಈಕೆಗೆ ಏನಾದರೂ ಸಹಾಯ ಮಾಡಬೇಕು, ಅನ್ಯಾಯವನ್ನು ಸರಿ ಪಡಿಸಬೇಕೆನ್ನುವ ಹಟ ಹೆಚ್ಚಾಗುತ್ತಿತ್ತು. (…ಮುಂದುವರಿಯುತ್ತದೆ).

WhatsApp Image 2025 05 24 at 10.45.33 AM
ಗಂಗಾಧರ ಸ್ವಾಮಿ
+ posts

ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಂಗಾಧರ ಸ್ವಾಮಿ
ಗಂಗಾಧರ ಸ್ವಾಮಿ
ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X