ಜಾತಿ ಎಂಬುದಕ್ಕೆ ಹಲವಾರು ಆಯಾಮಗಳಿವೆ, ಬೇರೆ ಬೇರೆ ಸ್ತರಗಳಲ್ಲಿ, ಆಯಾಮಗಳಲ್ಲಿ ಕೆಲಸ ಮಾಡುತ್ತದೆ. ಅದರಲ್ಲಿ ಒಂದು ಅತ್ಯಂತ ಕ್ರೂರವಾದ ನಡೆ; ದಲಿತರಿಗೆ ಕಾಮನ್ಸ್‌ಗಳ ಪ್ರವೇಶಕ್ಕೆ ನಿರ್ಬಂಧ. ಹಳ್ಳಿಗಳ ಕಾಮನ್ಸ್ ಎಂದರೆ ಕೇವಲ ಗೋಮಾಳ ಅಥವಾ ಕೆರೆ ಎಂದುಕೊಳ್ಳಬೇಡಿ. ದೇವಸ್ಥಾನಗಳೂ ಕಾಮನ್ಸ್‌ಗಳೇ. ನಮ್ಮ ಹೆಚ್ಚಿನ ದೇವಸ್ಥಾನಗಳು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೇ ಆಗಿದ್ದವು. ಈಗ ಪರಿಸ್ಥಿತಿ ಚೂರು ಬದಲಾಗಿದೆ.
ತಮಿಳಿನಲ್ಲಿ ಒಂದು ಪದವಿದೆ; ಪೊರೊಂಬೋಕು. ಇಂಗ್ಲಿಷಿನ ಕಾಮನ್ಸ್ ಪದಕ್ಕೆ ಸಮಾನಾರ್ಥಕವಾದ ಪದ ಎನ್ನಬಹುದು. ಪೊರೊಂಬೋಕು ಅಥವಾ ಕಾಮನ್ಸ್ ಎಂದರೆ ಎಲ್ಲರೂ ಬಳಸಬಹುದಾದ ಸಾರ್ವಜನಿಕ ಸ್ಥಳ. ಅದು ರಸ್ತೆ ಆಗಿರಬಹುದು, ಆಟದ ಮೈದಾನ ಆಗಿರಬಹುದು, ಉದ್ಯಾನವನ ಆಗಿರಬಹುದು. ಆದರೆ, ಆ ಪೊರೊಂಬೋಕು ಎಂಬ ಪದದ ಬಗ್ಗೆ ಇನ್ನಷ್ಟು ಹುಡುಕಿದಾಗ, ಅದನ್ನು ಒಂದು ಬೈಗುಳವಾಗಿ ಬಳಸಲಾಗುತ್ತೆ ಎಂದು ತಿಳಿಯಿತು. ಪೊರೊಂಬೋಕು ಎಂದರೆ ಹಾಳಾದವನೇ ಎಂಬ ಅರ್ಥದಲ್ಲಿ ಬಯ್ಯಲು ಬಳಸುತ್ತಾರಂತೆ. ನಮ್ಮ ಕಾಲದ ಅತ್ಯಂತ ವಿಶಿಷ್ಟ ಶಾಸ್ತ್ರೀಯ ಗಾಯಕನಾದ ಟಿ ಎಂ ಕೃಷ್ಣ ಇದರ ಬಗ್ಗೆಯೇ ಒಂದು ಹಾಡು ಹಾಡಿದ್ದಾರೆ. ʻಪೊರೊಂಬೋಕು ನನ್ನದಲ್ಲ, ಪೊರೊಂಬೋಕು ನಿನ್ನದಲ್ಲ, ಪೊರೊಂಬೋಕು ಎಂದರೆ ಎಲ್ಲರದು, ಪೊರೊಂಬೋಕು ಎಂದರೆ ನೆಲ…ʼ ಎಂದು ಆ ಹಾಡು ಶುರುವಾಗುತ್ತದೆ. ಇಂತಹ ಪದವನ್ನು ಹಾಳಾದವನೇ ಎಂದು ಬಯ್ಯಲು ಏಕೆ ಬಳಸಲು ಶುರುಮಾಡಿದರು ಎಂಬ ಪ್ರಶ್ನೆಯನ್ನು ಆ ಹಾಡಲ್ಲಿ ಕೇಳಲಾಗುತ್ತದೆ.
ಎಲ್ಲ ಸಮಾಜದಲ್ಲಿ ಆಳುವ ವರ್ಗ ಎಂಬುದು ಕೆಲಸ ಮಾಡುತ್ತಿರುತ್ತದೆ. ಆಳುವ ವರ್ಗ ಎಂದರೆ ಸರಕಾರವಲ್ಲ, ಅಧಿಕಾರಿಗಳಲ್ಲ, ರಾಜಕಾರಣಿಗಳಲ್ಲ. ಆ ಆಳುವ ವರ್ಗ ಸರಕಾರದ ಆದ್ಯತೆ ಏನಿರಬೇಕು, ಜನರು ಯಾವುದರ ಬಗ್ಗೆ ವಿಚಾರ ಮಾಡಬೇಕು ಎಂಬುದನ್ನು. ಯಾವ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕು ಎಂಬ ವಿಷಯಗಳನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ಚಿಂತಕರೊಬ್ಬರು ಇದರ ಉದಾಹರಣೆ ಕೊಟ್ಟರು: ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಲಾಗಿತ್ತು, ಏಕೆಂದರೆ ಆ ಆಳುವ ವರ್ಗಕ್ಕೆ ಅದರ ಅವಶ್ಯಕತೆ ಇತ್ತು, ತದನಂತರ ಕಾಲೇಜು ಶಿಕ್ಷಣಕ್ಕೆ ಒತ್ತು ಕೊಡಲಾಯಿತು ಕ್ರಮೇಣ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿ, ದೇಶದಲ್ಲಿ ಅತ್ಯುತ್ತಮ ಯುನಿವರ್ಸಿಟಿಗಳನ್ನು ಕಟ್ಟಿ ಬೆಳೆಸಲಾಯಿತು. ಆದರೆ ಹೇಗೆಲ್ಲ, ಆ ಆಳುವ ವರ್ಗ ಬೇರೆ ದಾರಿಯನ್ನು ಕಂಡುಕೊಂಡಿತೋ, ಆ ಆಯಾ ಸಂಸ್ಥೆಗಳು ದುರ್ಬಲವಾಗುತ್ತ ಬಂದವು. ಮೊದಲು ಪ್ರಾಥಮಿಕ ಶಿಕ್ಷಣವನ್ನು ದುರ್ಬಲಗೊಳಿಸಲಾಯಿತು, ನಂತರ ʼಒಳ್ಳೊಳ್ಳೇʼ ಖಾಸಗಿ ಯುನಿವರ್ಸಿಟಿಗಳು ಬರತೊಡಗಿದ ನಂತರ ಸಾರ್ವಜನಿಕ ಯುನಿವರ್ಸಿಟಿಗಳ ಮೇಲೆ ಗಮನ ಕೊಡುವುದು, ಅವುಗಳ ಗುಣಮಟ್ಟ ಹೆಚ್ಚಿಸುವುದು, ಅವುಗಳಿಗೆ ಆರ್ಥಿಕ ಸಹಾಯ ಇವೆಲ್ಲವೂ ಕಡಿಮೆ ಆದವು.

ಈ ಮೇಲಿನ ವಿದ್ಯಮಾನದ ಬಗ್ಗೆ ಹೇಳಿದ್ದೇಕೆ ಎಂದರೆ, ಈ ಆಳುವ ವರ್ಗ ನೇರವಾಗಿ ಕೆಲಸ ಮಾಡುವುದಿಲ್ಲ, ಬಹುತೇಕ ಕೆಲಸಗಳು ಪರೋಕ್ಷವಾಗಿಯೇ ನಡೆಯುತ್ತವೆ. ಕೆಲವು ಕೆಲಸಗಳು ಒಟ್ಟಾರೆ ಸಮಾಜದ ಸೈಕಾಲಜಿಯ ಮೇಲೆ ಕೆಲಸ ಮಾಡುತ್ತಿರುತ್ತವೆ. ನಮಗೆ ಗೊತ್ತೇ ಆಗದಂತೆ ನಾವು ಅದರ ಬಲಿಪಶುಗಳಾಗಿ, ಸಮಾಜದ ಹೆಚ್ಚಿನ ಜನರಿಗೆ ಅನಾನುಕೂಲ ಆಗುತ್ತಿದ್ದರೂ, ಅವರ ಭಾಷೆಯನ್ನು ನಾವು ಮಾತನಾಡುವಂತೆ ಮಾಡುತ್ತದೆ. ಅದಕ್ಕೆ ಇನ್ನೊಂದು ಉದಾಹರಣೆ: ಶ್ವಾನಪ್ರೀತಿ. ಹೆಚ್ಚಿನ ಆಂಗ್ಲ ಪತ್ರಿಕೆಗಳಲ್ಲಿ ನಾಯಿಗಳ ಕೇರ್ ಹೇಗೆ ಮಾಡಬೇಕು, ನಾಯಿಗಳೊಂದಿಗೆ ಹೇಗೆ ವ್ಯವಹರಿಸಬೇಕು, ನಾಯಿಗಳ ಮಾನಸಿಕ ಆರೋಗ್ಯದ ಬಗ್ಗೆ ಏನೆಲ್ಲ ಕಾಳಜಿ ವಹಿಸಬೇಕು, ಅವುಗಳ ಆಹಾರ ಹೇಗಿರಬೇಕು ಎಂಬುದರ ಬಗ್ಗೆ ಪುಂಖಾನುಪುಂಖವಾಗಿ ಲೇಖನಗಳು ಪ್ರಕಟಿಸಲಾಗುತ್ತದೆ.
ಇನ್ಸ್ಟಾಗ್ರಾಂನಲ್ಲಿ, ಫೇಸ್‌ಬುಕ್‌ನಲ್ಲಿ ʼಕ್ಯೂಟ್ʼ ನಾಯಿಗಳ ವಿಡಿಯೋಗಳ ದಂಡೇ ಕಾಣಿಸುತ್ತವೆ. ಅಂದಹಾಗೆ ಕರ್ನಾಟಕದಲ್ಲಿ ದಿನಕ್ಕೆ ಎಷ್ಟು ನಾಯಿಕಡಿತದ ಘಟನೆಗಳು ದಾಖಲಾಗುತ್ತವೆ ಗೊತ್ತೆ? 900ಕ್ಕೂ ಹೆಚ್ಚು. ಹೌದು, ಪ್ರಜಾವಾಣಿ ಪತ್ರಿಕೆಯ ಈ ವರದಿಯ ಪ್ರಕಾರ ಕರ್ನಾಟಕದಲ್ಲಿ 2024ರಲ್ಲಿ ಒಟ್ಟಾರೆ 3,32,754 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ನೆನಪಿಡಿ, ಇವೆಲ್ಲ ನಾಯಿಕಡಿತಕ್ಕೆ ಒಳಗಾದವರು ಬಿಬಿಎಂಪಿಗೋ, ಬೇರಾವುದೋ ಇಲಾಖೆಗೆ ಮಾಹಿತಿ ನೀಡಿದ ಘಟನೆಗಳು. ಆಗೊಮ್ಮೆ ಈಗೊಮ್ಮೆ ಮಕ್ಕಳನ್ನು, ವೃದ್ಧರನ್ನು ನಾಯಿಗಳು ಗುಂಪುಗೂಡಿ ಕಚ್ಚಿದ ವರದಿಗಳನ್ನು ನೋಡಿದ್ದೇವೆ, ಕೆಲವೊಮ್ಮೆ ಹೃದಯವಿದ್ರಾವಕ ವಿಡಿಯೋಗಳೂ ಹರಿದಾಡಿವೆ. ಕರ್ನಾಟಕದ ಯಾವುದೇ ನಗರದಲ್ಲಿ ಮಕ್ಕಳನ್ನು ತಮ್ಮಷ್ಟಕ್ಕೆ ತಾವೇ ಆಟವಾಡಲಿ ಎಂದು ಹೊರಗೆ ಬಿಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಈ ಕಾಮನ್ಸ್‌ಗೂ ಜಾತಿಗೂ ಏನು ಸಂಬಂಧ? ಜಾತಿ ಎಂಬುದಕ್ಕೆ ಹಲವಾರು ಆಯಾಮಗಳಿವೆ, ಬೇರೆ ಬೇರೆ ಸ್ತರಗಳಲ್ಲಿಕೆಲಸ ಮಾಡುತ್ತದೆ. ಅದರಲ್ಲಿ ಒಂದು ಅತ್ಯಂತ ಕ್ರೂರವಾದ ನಡೆ; ದಲಿತರಿಗೆ ಕಾಮನ್ಸ್‌ಗಳ ಪ್ರವೇಶಕ್ಕೆ ನಿರ್ಬಂಧ. ಹಳ್ಳಿಗಳ ಕಾಮನ್ಸ್ ಎಂದರೆ ಕೇವಲ ಗೋಮಾಳ ಅಥವಾ ಕೆರೆ ಎಂದುಕೊಳ್ಳಬೇಡಿ. ದೇವಸ್ಥಾನಗಳೂ ಕಾಮನ್ಸ್‌ಗಳೇ. ನಮ್ಮ ಹೆಚ್ಚಿನ ದೇವಸ್ಥಾನಗಳು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೇ ಆಗಿದ್ದವು. ಈಗ ಪರಿಸ್ಥಿತಿ ಚೂರು ಬದಲಾಗಿದೆ. ಮೊದಲನೆಯದಾಗಿ ಹಳ್ಳಿಗಳಿಂದ ನಗರಕ್ಕೆ ವಲಸೆಯ ಪ್ರಮಾಣ ಹೆಚ್ಚಾಗಿದೆ, ಎರಡನೆಯದಾಗಿ ಹೆಚ್ಚಿನ ಹಳ್ಳಿಗಳಲ್ಲಿ ಮೊದಲು ನಡೆಯುತ್ತಿದ್ದಂತಹ ಸಾಂಸ್ಕೃತಿಕ ಚಟುವಟಿಕೆಗಳು ಅಷ್ಟಾಗಿ ನಡೆಯುತ್ತಿಲ್ಲ. (ಈಗ ಡಿಜೆ ಬಂದಿದೆ.) ಇರಲಿ, ಜಾತಿ ಎಂಬ ಹೆಸರು ಹೇಳಿ ಕೆಲವರನ್ನು ಆ ಸ್ಥಳಗಳಿಂದ ಹೊರಗಿಡಲು ಸುಲಭವಾಗಿತ್ತು. ಆದರೆ, ನಗರದಲ್ಲಿ ಅಷ್ಟು ಸುಲಭವಿಲ್ಲವಲ್ಲ, ಆಗ ಏನು ಮಾಡುವುದು? ಈ ಪ್ರಶ್ನೆಗೆ ಹೋಗುವುದಕ್ಕಿಂತ ಮುನ್ನ ಜಾತಿ ಎಂಬ ವಿದ್ಯಮಾನದ ಒಂದು ಅರ್ಥವನ್ನು ನೋಡುವ. (ಇದರ ಬಗ್ಗೆ ಅತ್ಯಂತ ಉತ್ಕೃಷ್ಟವಾದ ಅಧ್ಯಯನಗಳು ಇವೆ, ಇಲ್ಲಿ ಒಂದು ಆಯಾಮದಲ್ಲಿ ಮಾತ್ರ ಅರ್ಥಮಾಡಿಕೊಳ್ಳುವ ಪ್ರಯತ್ನ) ಒಂದರ್ಥದಲ್ಲಿ ಜಾತಿ ಎಂದರೆ ಇತರರನ್ನು ಅನ್ಯಗೊಳಿಸುವುದು, ಇತರರನ್ನು ತಮಗಿಂತ ಕೀಳು ಎಂದು ಭಾವಿಸುವುದು, ಅವರಿಗೆ ಸಹಜವಾಗಿ ಸಿಗಬೇಕಾದ ಹಕ್ಕುಗಳನ್ನು ʼಅವರು ತಮಗಿಂತ ಕೀಳುʼ ಎನ್ನುವ ಕಾರಣಕ್ಕಾಗಿ ನಿರಾಕರಿಸುವುದು, ಇತರರನ್ನು ಕೀಳು ಎಂದಾಗ ಮಾತ್ರ ಅವರಿಗೆ ತಾವು ʻಶ್ರೇಷ್ಠʼ ಎಂಬ ಭಾವನೆ ಬರುತ್ತದೆ. ಜಾತಿಗೂ ವರ್ಗಕ್ಕೂ ಇರುವ ಸಂಬಂಧ ಹೇಳಬೇಕಿಲ್ಲ. ಎಲ್ಲರನ್ನು ಒಳಗೊಂಡಾಗ ತಾವು ʻಶ್ರೇಷ್ಠʼ ಎಂಬ ಭಾವನೆ ಕಳೆದುಹೋಗುವ ಸಾಧ್ಯತೆ ಇರುತ್ತದೆ.

ಈ ಭಾವನೆಯೇ ನಗರಗಳಲ್ಲೂ ಕೆಲಸ ಮಾಡುತ್ತಿದೆ. ಇಲ್ಲಿನ ಉದ್ಯಾನವನಗಳಲ್ಲಿ, ಆಟದ ಮೈದಾನಗಳಲ್ಲಿ. ಕೆರೆಯ ಸುತ್ತಲ ಜಾಗಗಳಲ್ಲಿ ಜಾತಿ ಹೇಳಿ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ ನಿರ್ಬಂಧಿಸದೇ ಹೋದರೆ, ಎಲ್ಲರೂ ಆ ಸ್ಥಳಗಳಲ್ಲಿ ಬರಲು ಅನುವು ಮಾಡಿಕೊಟ್ಟರೆ, ನಾವು ʻಶ್ರೇಷ್ಠʼ ಎಂದು ಭಾವಿಸುವುದು ಹೇಗೆ? ಅದಕ್ಕೆ ಬೇರೆ ಬೇರೆ, ಹೊಸ ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಉದ್ಯಾನವನಗಳನ್ನು ʼಸುಂದರʼಗೊಳಿಸುವ ಹಾಗೂ ಸುರಕ್ಷಿತಗೊಳಿಸುವ ಹೆಸರಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮೊದಲು ಈ ʻಸುಂದರʼಗೊಳಿಸುವ ಪ್ರಕ್ರಿಯೆಯನ್ನು ನೋಡುವ, ಅದು ಹೇಗೆ ಹೆಚ್ಚಿನ ಜನರನ್ನು ನಿರ್ಬಂಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ.
ಯಾವುದೇ ಸ್ಥಳಕ್ಕೆ ನೀವು ಹೋಗಬೇಕೆಂದರೆ ಅದು ನಮ್ಮದು ಅನ್ನಿಸಬೇಕು, ಆ ಜಾಗ ನಮ್ಮನ್ನು ಸ್ವಾಗತಿಸುತ್ತದೆ ಎಂದು ಅನ್ನಿಸಬೇಕು. ಹಾಗೆ ಅನ್ನಿಸದೇ ಇದ್ದಾಗ ಆ ಜಾಗಗಳಿಗೆ ಹೋಗಲು ನಮಗೆ ಅವ್ಯಕ್ತ ಭಯ ಆವರಿಸಿಕೊಳ್ಳುತ್ತದೆ. ನಾವೊಂದು ರಸ್ತೆ ಬದಿಯ ಹೋಟೆಲ್‌ಗೆ ಹೋಗಿ ಚಾ ಕುಡಿಯಬಹುದು, ದುಡ್ಡು ಇಲ್ಲ ಎಂದಾಗ ನೀರು ಕುಡಿದಾದರೂ ಬರಬಹುದು ಹಾಗೂ ಅಂಥದ್ದೇ ಒಂದು ಹೋಟೆಲ್‌ನಲ್ಲಿ ಟಾಯ್ಲೆಟ್ ಇದ್ದರೆ, ಅವಶ್ಯಕತೆ ಇದ್ದಾಗ ಅದನ್ನೂ ಬಳಸಬಹುದು, ಅಲ್ಲಿ ಹೆಚ್ಚಿನ ಮುಜುಗರ ಆಗುವುದಿಲ್ಲ. ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿಯೂ ಟಾಯ್ಲೆಟ್ ಇರುತ್ತವೆ, ಅಲ್ಲಿಯೂ ನಾವು ಅದನ್ನು ಯಾವುದೇ ಶುಲ್ಕವಿಲ್ಲದೇ ಬಳಸಬಹುದು. ರಸ್ತೆ ಬದಿಯ ಅಂಗಡಿಯಲ್ಲಿ ಚಾ ಹತ್ತೋ ಹದಿನೈದು ಇದ್ದರೆ ಆ ಹೋಟೆಲ್‌ನಲ್ಲಿ ಇನ್ನೂರು ರೂಪಾಯಿ ಇರಬಹುದು, ಆಯ್ತು ಇವತ್ತು ಹೇಗೂ ದುಡ್ಡಿದೆ, ಇನ್ನೂರು ರೂಪಾಯಿ ಚಾ ಕುಡಿದುಬರುತ್ತೇನೆ ಎಂದು ಹೇಳಲು ಆಗುತ್ತಾ? ಆ ಫೈವ್ ಸ್ಟಾರ್ ಹೋಟೆಲ್‌ನ ಟಾಯ್ಲೆಟ್‌ಅನ್ನು ಫ್ರೀಯಾಗಿ ಬಳಸಲು ಆಗುತ್ತಾ? ಇಲ್ಲ, ಆಗುವುದಿಲ್ಲ. ಏಕೆಂದರೆ ಅದರ ವಿನ್ಯಾಸ, ಗಾತ್ರ, ಅದರ ʻಸೌಂದರ್ಯʼ ನಮ್ಮನ್ನು ತಡೆಯುತ್ತದೆ. ಇದು ನಮ್ಮ ಸಲುವಾಗಿ ಮಾಡಿದ್ದಲ್ಲ ಎಂದು ಅಲ್ಲಿ ಗೋಡೆಗಳು, ಗೋಡೆಗಳ ಮೇಲಿನ ಚಿತ್ರಗಳು, ಹೂಕುಂಡಗಳು ಗಟ್ಟಿಯಾಗಿ ಹೇಳುತ್ತವೆ. ಆಯ್ತು, ಇವೆಲ್ಲ ನಮ್ಮ ಸಲುವಾಗಿ ಏಕೆ ಮಾಡಿಲ್ಲ ಎಂದು ದೂರಲು ಬರುವುದಿಲ್ಲ. ಅಲ್ಲಿನ ಚಾದ ಬೆಲೆಯೂ, ಒಳವಿನ್ಯಾಸವೆಲ್ಲವೂ ನಮ್ಮನ್ನು ಹೊರಗಿಟ್ಟರೆ ನಮಗೆ ತೊಂದರೆಯಾಗಬೇಕಿಲ್ಲ ಎನ್ನಬಹುದು. ಆದರೆ ಕಾಮನ್ಸ್‌ಗಳಲ್ಲಿ, ನಗರದ ಪಾರ್ಕ್‌ಗಳನ್ನು, ರೈಲ್ವೇ ಸ್ಟೇಷನ್‌ನ ಒಟ್ಟಾರೆ ಆವರಣವನ್ನು, ಕೆರೆಗಳ ಬದಿಯ ಜಾಗವನ್ನು, ಫುಟ್‌ಪಾತ್‌ಗಳನ್ನು, ಇಡೀ ರಸ್ತೆಗಳನ್ನು ಆ ರೀತಿಯಲ್ಲಿ ವಿನ್ಯಾಸಗೊಳಿಸಿದರೆ?
ಹೌದು, ಅದನ್ನೇ ಮಾಡುತ್ತಿರುವುದು. ಹಾಗೂ ಇವನ್ನೆಲ್ಲ ಅತ್ಯಂತ ಸೂಕ್ಷ್ಮವಾಗಿ, ಅನ್‌ಕಾನ್ಷಿಯಸ್ ಆದ ರೀತಿಯಲ್ಲಿ ಮಾಡಲಾಗುತ್ತದೆ. ಈ ಎಲ್ಲ ಕ್ರಮಗಳಿಗೆ ಅತ್ಯಂತ ಲಾಜಿಕಲ್ ಅನ್ನಿಸಬಹುದಾದ ಕಾರಣಗಳನ್ನು ಕೊಡಲಾಗುತ್ತದೆ. ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿ ಒಳಗೆ ಪ್ರವೇಶಿಸಲು ನಲವತ್ತು ರೂಪಾಯಿ ಕೊಡಬೇಕು. ಏಕೆ ಕೊಡಬೇಕು? ಅದಕ್ಕೆ ಮೆಂಟೇನನ್ಸ್ ಆಗುತ್ತಲ್ಲವಾ? ಅದರ ಖರ್ಚು ನೀಗಿಸಬೇಕಲ್ಲವಾ? ಎಂದು ಹೇಳುತ್ತಾರೆ, ಹೌದು ಅನ್ನಿಸಬಹುದು. ಆದರೆ ಬೆಳಗ್ಗೆ ಅಲ್ಲಿ ʻವಾಕ್ʼ ಮಾಡಲು ಬರುವ ಜನರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅವರು ಅಲ್ಲಿಯೇ ವಾಸಿಸುವವರು ತಾನೇ? ಅವರಿಗೆ ಏಕೆ ವಿಧಿಸಬೇಕು ಯಾವುದೇ ಶುಲ್ಕವನ್ನು? ಮಧ್ಯಾಹ್ನ ಪಾರ್ಕ್‌ಗಳ ಗೇಟನ್ನು ಮುಚ್ಚುವುದಕ್ಕೆ ಯಾವ ಕಾರಣವಿದ್ದಿರಬಹುದು? ಸರಳ ಕಾರಣವಿದೆ: ಮಧ್ಯಾಹ್ನ ತೆರೆದಿಟ್ಟಾಗ ತಳ್ಳುಗಾಡಿಯ ವ್ಯಾಪಾರಿಗಳು, ಮತ್ತಿತರ ʼಇತರೆʼ ವರ್ಗದ ಜನರು ಬಂದು ಅಲ್ಲಿನ ಬೆಂಚಿನ ಮೇಲೆ ಮಲಗಿಕೊಳ್ಳುತ್ತಾರೆ. ಪಾರ್ಕ್ ನಡೆದಾಡಲು ಇರಬೇಕೇ ಹೊರತು, ಮಲಗಲು ಇಲ್ಲ ಎಂಬುದು ಇವರುಗಳ ವಾದ. ಹಾಗಾಗಿ, ಮುಚ್ಚೇ ಇಡಬೇಕು ಎಂದು ತೀರ್ಮಾನಿಸಲಾಗಿತ್ತು. ನಮಗಿಲ್ಲದಿದ್ದರೂ ನಡೆಯುತ್ತೆ, ಆದರೆ ಯಾವುದೇ ಕಾರಣಕ್ಕೂ ʻಅವರುʼ ಈ ಸ್ಥಳಗಳನ್ನು ಬಳಸುವಂತೆ ಆಗಬಾರದು ಎಂಬುದೇ ಇವರ ಇಂಗಿತ.

ಇನ್ನು ಸುರಕ್ಷತೆಯ ವಿಚಾರ: ʻಎಲ್ಲರಿಗೂ ಮುಕ್ತವಾಗಿಟ್ಟರೆ ʼಆಂಟಿಸೋಷಿಯಲ್ ಎಲೆಮೆಂಟ್’ಗಳು ಬರ್ತಾವೆ. ಆಗ ಏನು ಮಾಡೋದು? ಬಂದು ಮಹಿಳೆಯರನ್ನು ಚುಡಾಯಿಸುತ್ತಾರೆ, ಕಳ್ಳತನ ಆಗಬಹುದು, ಬೇರೆ ಬೇರೆ ಅಪರಾಧ ಎಸಗಬಹುದು. ಆಗ ಯಾರ ಜವಾಬ್ದಾರಿ?ʼ ಆದರೆ ಯಾರು ಕಳ್ಳರು, ಮಹಿಳೆಯರಿಗೆ ತೊಂದರೆ ಕೊಡುವವರು ಎಂದು ಗುರುತಿಸುವುದು ಹೇಗೆ? ಅದಕ್ಕೆ ಕಂಡುಕೊಂಡ ಸುಲಭವಾದ ಉತ್ತರ: ಹೇಗಾದರೂ ಮಾಡಿ ಬಡವರನ್ನು, ಇತರರನ್ನು ಹೊರಗಿಟ್ಟರೆ ಸಾಕು ಎಂಬುದು. ಆ ʻಇತರರೇ ಅಪರಾಧಿಗಳು, ಸಂಭಾವ್ಯ ಅಪರಾಧಿಗಳು ಎಂಬುದು ಇವರ ಅಂಬೋಣ. ಆ ಕಾರಣಕ್ಕಾಗಿಯೇ ಅವನ್ನು ಇನ್ನಷ್ಟು ʻಸುರಕ್ಷಿತʼಗೊಳಿಸುವ, ಸುಂದರಗೊಳಿಸುವ, ಗೇಟಿನ ಬಳಿ ಸುರಕ್ಷಾ ಸಿಬ್ಬಂದಿಗಳನ್ನು ನಿಲ್ಲಿಸುವ, ಜಾಗಿಂಗ್ ಟ್ರ್ಯಾಕ್ ಬಳಸಲು ಐದು ರೂಪಾಯಿ ಶುಲ್ಕ ವಿಧಿಸುವ, ಮುಂತಾದ ತಂತ್ರಗಳನ್ನು ಕಂಡುಕೊಳ್ಳಲಾಗಿದೆ. ಇದನ್ನು ಪರೀಕ್ಷಿಸಬೇಕೆಂದರೆ, ಬೆಂಗಳೂರಿನ ಯಾವುದೇ ʻಉಚ್ಚʼ ವರ್ಗದ ಜನರಿರುವ ಸುಂದರವಾದ ಪಾರ್ಕ್‌ಗಳನ್ನು ನೋಡಿ, ಖಾಲಿ ಹೊಡೆಯುತ್ತಿರುತ್ತವೆ. ಒಂದು ಕೋಟಿಗಿಂತ ಹೆಚ್ಚು ಜನರಿರುವ ಬೆಂಗಳೂರಿನ ಪಾರ್ಕ್‌ಗಳಲ್ಲಿ ಬೆರಳೆಣಿಕೆಯ ಜನರು ಬರುತ್ತಾರೆ ಎಂದರೆ ಏನು ಅರ್ಥ?
ನಾನು ವಾಸಿಸುವ ಏರಿಯಾದಲ್ಲಿ ಒಂದು ಆಟದ ಮೈದಾನವಿದೆ. ಅದಕ್ಕೆ ಸರಿಯಾದ ಗೇಟ್ ಇಲ್ಲ. ಆ ಮೈದಾನದಲ್ಲಿ ಯಾವ ಸಮಯದಲ್ಲಿಯೂ ಯಾರು ಬೇಕಾದರೂ ಹೋಗಬಹುದು. ಅದು ಯಾರಿಗೂ ಅಸುರಕ್ಷಿತ ಎಂಬ ಭಾವನೆ ಕೊಡುವುದಿಲ್ಲ. ಅಲ್ಲಿ ಯಾವುದೇ ಅಪರಾಧ ಆದ ವರದಿಗಳೂ ಇಲ್ಲ. ಆ ಮೈದಾನ ಏಕೆ ಸುರಕ್ಷಿತ? ಕೆಂಗೇರಿಯ ಒಂದು ರಸ್ತೆಯ ಪಕ್ಕದುದ್ದಕ್ಕೂ ಉದ್ದನೆಯ ಪಾರ್ಕ್ ಇದೆ, ಅದಕ್ಕೆ ಗೇಟ್ ಇರುತ್ತವೆ. ಅದು ಸುರಕ್ಷಿತ ಎನ್ನಿಸುವುದಿಲ್ಲ ಆದರೆ ಅದಕ್ಕೆ ಹತ್ತಿಕೊಂಡೇ ಇರುವ ಫುಟ್‌ಪಾತ್ ಏಕೆ ಸುರಕ್ಷಿತ ಅನ್ನಿಸುತ್ತದೆ? ಪಾರ್ಕ್‌ಗೆ ʻಸುರಕ್ಷತೆʼ ಬೇಕು ಎನ್ನಿಸುವವರಿಗೆ ʻಫುಟ್‌ಪಾತ್ʼಗೆ ಏಕೆ ಸುರಕ್ಷತೆ ಕೇಳುವುದಿಲ್ಲ?
ಏಕೆಂದರೆ ಸುರಕ್ಷತೆ ಎಂಬುದು ಕೇವಲ ಒಂದು ಸಬೂಬು. ಆಳದಲ್ಲಿ ಅವರಿಗೆ ಬೇಕಾಗಿರುವುದು: ಆ ಇತರರು ಇಲ್ಲಿ ಬರಬಾರದು ಎಂದು. ಅದನ್ನು ತುಂಬಾ ಯಶಸ್ವಿಯಾಗಿ ಮಾಡಿದ್ದಾರೆ. (ಅಂದಹಾಗೆ, ಪಾರ್ಕ್‌ಗಳು ಮತ್ತು ಇತರ ಸ್ಥಳಗಳು ಅಸುರಕ್ಷಿತ ಎಂಬುದಕ್ಕೆ ಯಾವುದೇ ಕಾರಣಗಳಿದ್ದರೂ, ಅವು ಸುರಕ್ಷತೆಯ ಭಾವನೆ ಕೊಡುವುದಿಲ್ಲ. ಅದಕ್ಕೆ ಒಂದು ಸರಳ ಕಾರಣವೂ ಇದೆ. ಅಲ್ಲಿ ಹೆಚ್ಚು ಜನ ಇರುವುದಿಲ್ಲ. ಯಾವ ಜಾಗ ನಿರ್ಜನವಾಗಿರುತ್ತದೋ, ಅದು ತನ್ನಿಂತಾನೇ ಅಸುರಕ್ಷಿತ ಎಂಬ ಭಾವನೆಯನ್ನು ಅನೇಕರಲ್ಲಿ ಬಿತ್ತುತ್ತದೆ. ಎರಡನೆಯದು, ಅಲ್ಲಿ ಹೆಚ್ಚಿನ ಬೆಳಕು ಮತ್ತು ವಿಸಿಬಲಿಟಿ ಇರುವುದಿಲ್ಲ, ಅಲ್ಲಿನ ಗೋಡೆಗಳು, ಪೊದೆಗಳು ಮತ್ತಿತರ ರಚನೆಗಳು ಒಂದು ಕಡೆಯಿಂದ ಇನ್ನೊಂದು ಕಡೆ ನೋಡಲು ಅಡೆತಡೆಗಳಾಗಿರುತ್ತವೆ, ಆಗ ಯಾರಾದರೂ ಏನಾದರೂ ಮಾಡಿದರೆ ಎಂದು ಕೆಲವರು ಭಾವಿಸಿದರೆ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಆಗುವುದಿಲ್ಲ. ಆದರೆ ಅದಕ್ಕೆ ಪರಿಹಾರ ಜನರನ್ನು ನಿರ್ಬಂಧಿಸುವುದು ಖಂಡಿತ ಅಲ್ಲ, ಅದಕ್ಕೆ ತದ್ವಿರುದ್ಧವಾಗಿ ಹೆಚ್ಚಿನ ಜನರು ಬರುವಂತೆ ಮಾಡುವುದು ಆ ಸ್ಥಳವನ್ನು ಸುರಕ್ಷಿತಗೊಳಿಸುತ್ತದೆ. ಆ ಜಾಗದಲ್ಲಿ ದೊಡ್ಡ ಮರಗಳನ್ನು ಹೊರತುಪಡಿಸಿ, ವಿಸಿಬಿಲಿಟಿಗೆ ಅಡ್ಡಿಪಡಿಸುವ ಪೊದೆಗಳನ್ನು, ಚಿಕ್ಕಪುಟ್ಟ ಗಿಡಗಳನ್ನು ತೆಗೆದುಹಾಕಿದರೆ ಆ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅದು ಅವರಿಗೆ ಬೇಕಾಗಿಲ್ಲ)

ಈಗ ಮೊದಲ ಪ್ರಶ್ನೆಗೆ ಬರುವ. ಪೊರೊಂಬೋಕು ಎಂಬ ಸುಂದರ ಪದವನ್ನು ʻಹಾಳಾದವʼ ಎಂಬರ್ಥದಲ್ಲಿ ಏಕೆ ಬಳಸಲು ಆರಂಭಿಸಲಾಯಿತು? ಉತ್ತರ ನನಗೆ ಸ್ಪಷ್ಟವಿಲ್ಲ. ಆದರೆ, ಎಲ್ಲ ರೀತಿಯ ಕಾಮನ್ಸ್‌ಗಳನ್ನು ಕಬಳಿಸುವ, ಇತರರು ಬಳಸದೇ ಇರುವಂತೆ ತಡೆಯುವ, ಕೆಲವೇ ಕೆಲವು ಜನರು ತಮಗಾಗಿ ಈ ಜಾಗಗಳನ್ನು ಮೀಸಲಿಡುವ ಹುನ್ನಾರ ನಡೆಯುತ್ತಲೇ ಇರುತ್ತದೆ. ಈ ಹುನ್ನಾರದ ಭಾಗವಾಗಿಯೇ ಪೊರೊಂಬೋಕು ಪದವನ್ನು ಈ ರೀತಿ ಬಳಸಲಾಗುತ್ತಿದೆ ಎಂಬುದು ನನ್ನ ಗುಮಾನಿ. ಕೆಲವು ʻಉಚ್ಚʼ ವರ್ಗದವರಿಗೆ ಇತರರನ್ನು ಹೊರಗಿಟ್ಟಾಗಲೇ ತಮ್ಮ ʻಉಚ್ಚʼತನದ ಭಾವನೆ ಮೂಡುವುದು. ನಿಮಗೆ ಎಲ್ಲವೂ ಇದೆ. ಥರ್ಡ್ ವೇವ್ ಇದೆ, ಸ್ಟಾರ್‌ಬಕ್ಸ್ ಇದೆ, ಬಾಲಿಂಗ್ ಅಲೆಗಳು ಇವೆ, ಒಳ್ಳೊಳ್ಳೆ ಪಬ್‌ಗಳು, ಹೋಟೆಲ್‌ಗಳು, ಮಾಲ್‌ಗಳು, ಹೊಸಹೊಸ ವಿನ್ಯಾಸದ ಕೆಫೆಗಳು, ಎಲ್ಲವೂ ಇವೆ. ಆದರೆ ಬಡವರಿಗೆ ಇವ್ಯಾವೂ ಇಲ್ಲ, ಅವರಿಗೆ ಕಾಮನ್ಸ್‌ಗಳು ಮಾತ್ರ ಇರುವುದು. ಈ ಕಾಮನ್ಸ್‌ಗಳ ಮೇಲೆ ಏಕೆ ಕಣ್ಣುಹಾಕುತ್ತೀರಿ ಎಂದು ಕೇಳಬಹುದು. ಆದರೆ ಅದಕ್ಕಿಂತ ಮುಖ್ಯವಾದ ಪ್ರಶ್ನೆ; ನಮ್ಮ ಹಕ್ಕಿನ ಜಾಗಗಳಾದ ಕಾಮನ್ಸ್‌ಗಳನ್ನು ನಾವೇಕೆ ಕೆಲವೇ ಕೆಲವು ಜನರಿಗಾಗಿ, ಉಚ್ಚ ವರ್ಗಕ್ಕೆ ಏಕೆ ಬಿಟ್ಟುಕೊಡುತ್ತಿದ್ದೀವಿ? ನಮಗೆ ಆಟದ ಮೈದಾನಗಳು ಬೇಕು, ಕೆರೆಬದಿಯ ಜಾಗದಲ್ಲಿ ವಿಹರಿಸಲು ಅವಕಾಶ ಬೇಕು, ಉದ್ಯಾನವನಗಳು ಬೇಕು. ಅವುಗಳ ಮೇಳೆ ಹಕ್ಕುಸ್ಥಾಪಿಸುವುದು ನಮ್ಮ ಆದ್ಯತೆ.
ಕೊನೆಯ ಎರಡು ಮಾತು, ಮಹಿಳೆ ಮತ್ತು ಕಾಮನ್ಸ್ ಬಗ್ಗೆ ಇನ್ನಷ್ಟು ಆಳವಾಗಿ ಚಿಂತಿಸಬೇಕಿದೆ. ಅದರ ಬಗ್ಗೆ ಅಧ್ಯಯನ ಮಾಡಿ ಬರೆಯಲು ಪ್ರಯತ್ನಿಸುತ್ತೇನೆ. ಕೊನೆಯದಾಗಿ, ಎಲ್ಲ ಪಾರ್ಕ್‌ಗಳು ಇಡೀ ದಿನ, ಅಂದರೆ ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೆ ತೆರೆದಿಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆಯು ಸುತ್ತೋಲೆ ಹೊರಡಿಸಿದೆ, ಇದನ್ನು ಸ್ವಾಗತಿಸುವ. ಈ ಸುತ್ತೋಲೆ ಹೊರಡಿಸಿ, ವರ್ಷಗಳಾದರೂ ಇನ್ನೂ ಕೆಲವು ಪಾರ್ಕ್‌ಗಳನ್ನು ಹಗಲೊತ್ತಿನಲ್ಲಿ ಮುಚ್ಚಲಾಗುತ್ತಿದೆ. ಅವು ತೆರೆದಿರುವಂತೆ ನೋಡಿಕೊಳ್ಳೋಣ.

ರಾಜಶೇಖರ್ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.
ಪೊರಂಬೋಕು (ಕಾಮನ್ಸ) ಪರಿಭಾಷೆಯನ್ನು ಇಟ್ಟುಕೊಂಡು ಜಾತಿ ಒಳಸುಳಿಗಳ ರಾಜಕಾರಣವನ್ನು ಅಥ೯ಪೂಣ೯ವಾಗಿ ವಿವರಿಸಿದ್ದೀರಿ.ನಿಮ್ಮ ಚಿಂತನೆಯ ಅಭಿವ್ಯಕ್ತಿ ಆಪ್ತವಾಗಿ ಓದುಗರನ್ನು ಆವರಿಸಿಬಿಡುತ್ತದೆ.