ಬಲಪಂಥದ ಇನ್ನೊಂದು ದೊಡ್ಡ ಲಕ್ಷಣ ವ್ಯಾಪಾರ. ಯಾವುದೇ ಸರಕಾರ ಆಯಾ ದೇಶಗಳಲ್ಲಿ ವ್ಯಾಪಾರ ಯಾವ ರೀತಿಯಲ್ಲಿ ನಡೆಯಬೇಕು, ಏನೆಲ್ಲ ನಿಯಮಗಳಿರಬೇಕು, ದೇಶದ ಆರ್ಥಿಕತೆ ಸದೃಢವಾಗಿರಬೇಕು, ಯಾವುದೇ ಕಾರಣಕ್ಕೂ ದೇಶ ದಿವಾಳಿಯಾಗಬಾರದು, ಹೆಚ್ಚಿನ ಜನರಿಗೆ ವ್ಯಾಪಾರ ಮಾಡುವ ಅವಕಾಶ ಸಿಗಬೇಕಾದರೆ ಏಕಸ್ವಾಮ್ಯ ಇರಬಾರದು ಎಂಬ ನಿಯಮಗಳನ್ನು ರೂಪಿಸುತ್ತದೆ ಅಥವಾ ರೂಪಿಸುವ ಪ್ರಯತ್ನ ಮಾಡುತ್ತದೆ. ಆದರೆ ಬಲಪಂಥ ಎನ್ನುವುದು ಈ ಎಲ್ಲ ನಿಯಮಗಳನ್ನು ವಿರೋಧಿಸುತ್ತದೆ.
ನಾವು ಓದುವ ವರದಿಗಳಲ್ಲಿ, ಲೇಖನಗಳಲ್ಲಿ, ನೋಡುವ ಸುದ್ದಿಗಳಲ್ಲಿ ಆಗಾಗ್ಗೆ ಈ ಎಡ, ಬಲ, ನಡು ಮುಂತಾದ ಪದಗಳು ಕಾಣುತ್ತವೆ. ಏನಿವು ಎಂದು ಕೆಲವರಿಗೆ ಪ್ರಶ್ನೆ ಬಂದಿರಬಹುದು. ನನಗೂ ಗೊತ್ತಿರಲಿಲ್ಲ. ಇವನ್ನು ಅರ್ಥಮಾಡಿಕೊಳ್ಳುವ ಪ್ರಯಾಣದಲ್ಲಿ ನಿಧಾನಕ್ಕೆ ಒಂದು ತಿಳಿವಳಿಕೆಗೆ ಬಂದು ತಲುಪಿದೆ. ಆ ತಿಳಿವಳಿಕೆಯನ್ನು ಹಂಚಿಕೊಳ್ಳುವ, ನಿರ್ದಿಷ್ಟವಾಗಿ ಬಲಪಂಥೀಯ ಎಂಬುದರ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡುವೆ.
ಯಾವುದೇ ಸಮಾಜ ಒಂದಿಷ್ಟು ನಿಯಮಗಳ ಅನುಸಾರವಾಗಿ ನಡೆಯುತ್ತೆ. ಆ ನಿಯಮಗಳು ಕೆಲವೊಮ್ಮೆ ಸ್ಪಷ್ಟವಾಗಿ ತಿಳಿದಿರುತ್ತವೆ, ಕೆಲವೊಮ್ಮೆ ತಿಳಿದಿರುವುದಿಲ್ಲ, ಅಂದರೆ ಆ ನಿಯಮಗಳು ಅದೃಶ್ಯವಾಗಿದ್ದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವನ್ನು ಪಾಲಿಸಿಕೊಂಡು ಬರುತ್ತಿರುತ್ತೇವೆ. ನಮ್ಮದೇ ಆದ ಒಂದು ಕೋಡ್ ಆಫ್ ಕಾಂಡಕ್ಟ್ ಅನ್ನು ಪಾಲಿಸುತ್ತಿರುತ್ತೇವೆ. ಹಾಗೂ ಅವೆಲ್ಲ ನೈತಿಕ, ಸರಿಯಾದದ್ದು, ಎಥಿಕಲ್ ಎಂದೂ ಭಾವಿಸುತ್ತೇವೆ. ಆಯಾ ಸಮಾಜವನ್ನು ಆ ನಿಯಮಗಳು ಮುಂದುವರೆಸುತ್ತವೆ. ಒಂದು ಸರಳ ಉದಾಹರಣೆ ಹೇಳಬೇಕೆಂದರೆ, ಮದುವೆಯಲ್ಲಿ ಕೊಡು-ಕೊಳ್ಳುವ ನಿಯಮಗಳು. ಮದುವೆಯ ವರನ ʼಅರ್ಹತೆʼಗೆ ಅನುಗುಣವಾಗಿ ವರದಕ್ಷಿಣೆ ನಿಗದಿಯಾಗುತ್ತದೆ. ಮದುವೆಗೆ ಮುನ್ನ ʻಮಾತುಕತೆʼಗೆ ಹೋದಾಗ ಹೆಣ್ಣಿನ ಕಡೆಯವರು ಎಷ್ಟು ಕೊಡಬೇಕು, ಗಂಡಿನ ಕಡೆಯವರು ಎಷ್ಟು ಖರ್ಚು ಮಾಡಬೇಕು, ಬಂಗಾರ ಎಷ್ಟು, ಸೀರೆ ಯಾವುದು ಮುಂತಾದ ವಿಷಯಗಳ ಬಗ್ಗೆ ʻಮಾತುಕತೆʼ ಮಾಡಿ ಅಂತಿಮಗೊಳಿಸಲಾಗುತ್ತದೆ.
ಹೀಗೆ ಯೋಚಿಸಿದರೆ, ನಮ್ಮ ದೈನಂದಿನ ಬದುಕಿನಲ್ಲಿ, ವ್ಯಾಪಾರದಲ್ಲಿ, ನಮ್ಮ ಧರ್ಮದಲ್ಲಿ, ರಾಜಕೀಯದಲ್ಲಿ, ಕಲೆಯಲ್ಲಿ, ಹೀಗೆ ಎಲ್ಲ ಕ್ಷೇತ್ರಗಳಲ್ಲಿ, ಜೀವನದ ಎಲ್ಲ ಆಯಾಮಗಳಲ್ಲಿ ಇಂತಹ ನಿಯಮಗಳನ್ನು ಪಾಲಿಸಿಕೊಂಡು ಬರುತ್ತೇವೆ. ಎರಡೂ ಪಕ್ಷಗಳಿಗೆ ಆ ನಿಯಮಗಳ ಅರಿವಿದ್ದು, ಅದರ ಅನುಗುಣವಾಗಿ ನಡೆದಾಗ ಮಾತ್ರ ಎಲ್ಲವನ್ನು ಸುಸೂತ್ರವಾಗಿ ನಡೆಸಬಹುದಾಗಿದೆ. ಇಲ್ಲವಾದರೆ ಸಮಾಜದಲ್ಲಿ ಅರಾಜಕತೆ ಹುಟ್ಟುತ್ತೆ. ಅದು ಯಾವ ಸಮಾಜಕ್ಕೆ ಒಪ್ಪಿತವಾಗಿರುವುದಿಲ್ಲ.
ಇನ್ನೊಂದೆರಡು ಉದಾಹರಣೆಗಳನ್ನು ನೋಡುವುದಾದರೆ, ಶಿಕ್ಷಣ. ಈ ಮುಂಚೆ ಶಿಕ್ಷಣ ಎಂಬುದು ಕೆಲವೇ ಕೆಲವು ವರ್ಗಗಳ ಅದರಲ್ಲೂ ಸಮುದಾಯದ ಹಕ್ಕಾಗಿತ್ತು. ಆಯಾ ಸಮುದಾಯದವರು ಶಿಕ್ಷಣ ಪಡೆಯಬೇಕು, ಇತರ ಸಮುದಾದಯವರಿಗೆ, ಅದರ ಅವಶ್ಯಕತೆ ಇಲ್ಲ(ತುಂಬಾ ಮೃದುವಾಗಿ ಹೇಳುವಾಗ) ಎಂದು ಸಾವಿರಾರು ವರ್ಷಗಳಿಂದ ನಂಬಿಸಲಾಗಿತ್ತು. ಗಂಡಸರು ಮಾತ್ರ ಓದಿದರೆ ಸಾಕು, ಹೆಣ್ಣುಮಕ್ಕಳಿಗೆ ಅವಶ್ಯಕತೆ ಇಲ್ಲ ಎಂದು ಸಮಾಜ ಮುಂದುವರೆದಿತ್ತು. ಇವೆಲ್ಲವೂ ನ್ಯಾಯಯುತ ಎಂತಲೂ ಒಟ್ಟಾರೆ ಸಮಾಜವು ನಂಬಿಕೊಂಡಿತ್ತು.
ಆದರೆ, ನೀವು ಈಗಾಗಲೇ ಯೋಚಿಸಿದಂತೆ, ಈ ನಿಯಮಗಳಲ್ಲಿ, ಈ ವ್ಯವಸ್ಥೆಗಳಲ್ಲಿ ಹಲವಾರು ಗಂಭೀರ ಸಮಸ್ಯೆಗಳಿರುತ್ತವೆ. ವರದಕ್ಷಿಣೆಯ ವಿಷಯ ಬಂದಾಗ ಸ್ವಾಭಾವಿಕವಾಗಿಯೇ ಹೆಣ್ಣಿಗೆ, ಹೆಣ್ಣಿನ ಕುಟುಂಬಕ್ಕೆ ಅನ್ಯಾಯವಾಗುತ್ತಿರುತ್ತದೆ. ಶ್ರಮದ ವಿಭಜನೆಯನ್ನು ನೋಡಿದಾಗ ಸ್ವಾಭಾವಿಕವಾಗಿಯೇ ಬಡವರಿಗೆ, ಶೋಷಿತ ಸಮುದಾಯಗಳಿಗೆ ನಿರಂತರ ಅನ್ಯಾಯ ಆಗುತ್ತಲೇ ಇರುತ್ತದೆ. (ಈ ವ್ಯವಸ್ಥೆಗಳಿಂದ ಆದ ಘೋರ ಅನ್ಯಾಯದ ಉದಾಹರಣೆಗಳನ್ನು ನಾನು ದಾಖಲಿಸುವ ಪ್ರಯತ್ನ ಮಾಡುತ್ತಿಲ್ಲ, ಅದು ತಮ್ಮೆಲ್ಲರಿಗೆ ತಿಳಿದಿದೆ ಎಂದುಕೊಂಡಿದ್ದೇನೆ) ಆದರೂ ಈ ಎಲ್ಲ ವ್ಯವಸ್ಥೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ, ಕಾಲಕಾಲಕ್ಕೆ ಗಟ್ಟಿಗೊಂಡಿವೆ, ಕಾಲಕಾಲಕ್ಕೆ ದುರ್ಬಲಗೊಂಡಿದ್ದನ್ನೂ ಇತಿಹಾಸ ದಾಖಲಿಸಿದೆ.

ಅಂತಹ ಘೋರ ಅನ್ಯಾಯಗಳು ಆಗುತ್ತಿದ್ದರೂ ಈ ವ್ಯವಸ್ಥೆಗಳು ಸಾವಿರಾರು ವರ್ಷ ಏಕೆ ಮುಂದುವರೆದವು? ಏನೋ, ಐದ್ಹತ್ತು ಪರ್ಸೆಂಟ್ ಜನರಿಗೆ ಅನ್ಯಾಯ ಆಗಿದ್ದರೆ, ಪಾಪ ಆ ಐದ್ಹತ್ತು ಪರ್ಸೆಂಟ್ ಜನರ ಬಳಿ ಶಕ್ತಿ ಇರಲಿಲ್ಲ ಹಾಗಾಗಿ ಮುಂದುವರೆದಿರಬಹುದು ಅನ್ನಬಹುದಿತ್ತು. ಆದರೆ ಈ ವ್ಯವಸ್ಥೆಗಳು ಹಾಗಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ಈ ವ್ಯವಸ್ಥೆಗಳು ಸುಮಾರು 90% ಜನರಿಗೆ ಅನ್ಯಾಯ ಎಸಗುತ್ತಿದ್ದವು, ಇನ್ನೂ ಎಸಗುತ್ತಿವೆ. (ಆಯಾ ಸಂದರ್ಭಕ್ಕೆ ತಕ್ಕಂತೆ ಶೋಷಣೆ, ಪ್ರತ್ಯೇಕತೆ, ತಾರತಮ್ಯ ನಡೆಯುತ್ತಲೇ ಇರುತ್ತದೆ. ಶಿಕ್ಷಣದ ವಿಷಯದಲ್ಲಿ ಮಹಿಳೆಯರು, ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಿದ್ದನ್ನು ನಾವು ನೋಡಿದ್ದೇವೆ. ಅದಕ್ಕೇ ಸಂಬಂಧಿಸಿದ ಉದ್ಯೋಗಾವಕಾಶದಲ್ಲೂ ತಾರತಮ್ಯ ಕಾಣುತ್ತದೆ. ಇದೇ ರೀತಿ, ವಸತಿಯ ವಿಷಯದಲ್ಲಿ, ಸಂಪತ್ತಿನ ಹಂಚಿಕೆಯ ವಿಷಯದಲ್ಲಿ. ಇನ್ನೂ ಹಲವಾರು ವಿಷಯಗಳಲ್ಲಿ ತಾರತಮ್ಯ ಮುಂದುವರೆಯುತ್ತಲೇ ಇರುತ್ತದೆ. ಹಾಗಾಗಿ 90% ಎಂದು ಬರೆದಿದ್ದೇನೆ) ಬಹುಸಂಖ್ಯಾತರೇ ಈ ವ್ಯವಸ್ಥೆಯ ಬಲಿಪಶುಗಳಾಗಿದ್ದಲ್ಲಿ, ಅನ್ಯಾಯವನ್ನು ಎಸಗುವವರ ಪ್ರಮಾಣವು ಕಡಿಮೆ ಇದ್ದಾಗ, ಸಮಾಜ, ಜನರು ಇವನ್ನು ಏಕೆ ಬದಲಿಸಲಿಲ್ಲ?
ಉತ್ತರ ಸರಳವಾಗಿದೆ, ಇದು ಕೆಲವರಿಗೆ, ಅದರಲ್ಲಿ ಸಮಾಜದ ಪ್ರಬಲ ಸ್ಥಾನದಲ್ಲಿ ಇರುವವರಿಗೆ ಈ ವ್ಯವಸ್ಥೆಗಳು ಅನುಕೂಲ ಮಾಡುತ್ತವೆ. ಅಂದರೆ, ಈ ವ್ಯವಸ್ಥೆಯ ಫಲಾನುಭವಿಗಳು ಅನೇಕರಿದ್ದಾರೆ. ಹಾಗೂ ಅನ್ಯಾಯದ ವ್ಯವಸ್ಥೆಗಳು ಒಂದಕ್ಕೊಂದು ಸಂಬಂಧಿಸಿವೆ. ಅದರ ಫಲಾನುಭವಿಗಳು ಹಾಗೂ ಅನೇಕ ಬಾರಿ ಈ ವ್ಯವಸ್ಥೆಯಿಂದ ಅನ್ಯಾಯಕ್ಕೆ ಒಳಗಾದವರು ಕೂಡ ಈ ವ್ಯವಸ್ಥೆ ಮುಂದುವರೆಯಬೇಕು ಎಂದು ಬಯಸುತ್ತಿರುತ್ತಾರೆ. ಹೊಸದನ್ನು ಅವರಿಗೆ ನೋಡಲೂ ಆಗುವುದಿಲ್ಲ. ಏಕೆಂದರೆ ಹೊಸದೆಂಬುದು ತಮ್ಮ ಸಮಾಜ ನಡೆಯುತ್ತಿರುವ ಅಥವಾ ತಮ್ಮ ಸಮಾಜವನ್ನು ನಡೆಸುತ್ತಿರುವ ವ್ಯವಸ್ಥೆಯ ಚೌಕಟ್ಟಿನ ಹೊರಗೆ ಇರುವಂಥದ್ದು. ಅದನ್ನು ನೋಡುವುದು, ಅದರ ಬಗ್ಗೆ ಚಿಂತಿಸುವುದು, ಯಾರಾದರೂ ಹೇಳಿದಾಗ ಅದನ್ನು ಪರಗಣಿಸುವುದು ಅವರಿಗೆ ನಿಷಿದ್ಧ. ಅದಕ್ಕೆ ಕಾರಣ, ಲಿಂಗದ ಆಧಾರದ ಮೇಲೆ ಆಗುವ ತಾರತಮ್ಯಗಳಿಂದ ಅವರಿಗೆ, ಬಹುತೇಕ ಗಂಡಸರಿಗೆ ಅನುಕೂಲವಾಗಿರುತ್ತೆ, ಹೆಂಡತಿ ಬರುವಾಗ ಒಂದಿಷ್ಟು ವರದಕ್ಷಿಣೆ ತರುತ್ತಾಳೆ, ಮನೆಗೆ ಬಂದು, ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಾಳೆ, ಮನೆಯ ಹಿರಿಯರ, ಕಿರಿಯರ ಸೇವೆ ಮಾಡುತ್ತಾಳೆ, ಒಬ್ಬ ʼಒಳ್ಳೆಯʼ ಹೆಂಡತಿಯಾಗಿ ಹೇಳಿದ ಮಾತನ್ನು ಎದುರು ಮಾತನಾಡದೇ ಕೇಳುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ಅವಳಿಗೆ ಏನಾದರೂ ಅನ್ಯಾಯವಾಗುತ್ತಿದೆಯಾ ಎಂದು ಕೇಳುವುದಾದರೂ ಏಕೆ? ಇದೇ ರೀತಿಯಲ್ಲಿ ನಾವು ಇತರ ಸಾಮಾಜಿಕ ರಚನೆಗಳಲ್ಲೂ ಆಗುತ್ತಿರುವ ಅನ್ಯಾಯಗಳನ್ನು, ಅದನ್ನು ಒಟ್ಟಾರೆಯಾಗಿ ಒಪ್ಪಿಕೊಂಡಿದ್ದನ್ನೂ ನೋಡಬಹುದು.
ಆದರೆ. ಈ ವ್ಯವಸ್ಥೆಗಳಿಗೆ ಸವಾಲುಗಳು ಎದುರಾಗುತ್ತವೆ. ಕೆಲವೊಮ್ಮೆ ಅನ್ಯಾಯಕ್ಕೊಳಗಾದವರೂ ಸಿಡಿದೆದ್ದರೆ, ಕೆಲವೊಮ್ಮೆ ಆಗುತ್ತಿರುವ ಅನ್ಯಾಯವನ್ನು ನೋಡಲಾಗದೇ ಆ ವ್ಯವಸ್ಥೆಯ ಫಲಾನುಭವಿಗಳಾಗುವ ಅವಕಾಶವಿದ್ದರೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಾರೆ. ಬುದ್ಧ, ಬಸವಣ್ಣ ಮುಂತಾದವರ ಉದಾಹರಣೆಗಳು ನಮ್ಮೆದುರಿಗೆ ಇವೆ. ಅವರಷ್ಟೇ ಅಲ್ಲದೇ, ಯಾವುದೇ ಜೀವಂತ ಸಮಾಜದಲ್ಲಿ ಅನ್ಯಾಯವೇ ಪ್ರಮುಖ ಅಂಶವಾಗಿರುವ ಸಂಪ್ರದಾಯಗಳ ವಿರುದ್ಧ ಸದಾಕಾಲ ಕೆಲವರು ಪ್ರತಿಭಟಿಸುತ್ತಲೇ ಇರುತ್ತಾರೆ. ಅವರನ್ನು ಏನೆಂದು ಕರೆಯಬೇಕು ಎಂಬುದನ್ನು ನೀವೇ ತೀರ್ಮಾನಿಸಿ, ಸದ್ಯಕ್ಕೆ ಯಾವುದೋ ಲೇಬೆಲ್ ಅಂಟಿಸಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ಆದರೆ, ಅನ್ಯಾಯವನ್ನು ಸಂಪ್ರದಾಯ, ನಿಯಮ ಎಂಬ ಹೆಸರಿನಲ್ಲಿ ಸಮರ್ಥಿಸಿಕೊಂಡು, ಹೊಸದನ್ನು ಖಡಾಖಂಡಿತವಾಗಿ ವಿರೋಧಿಸುವವರನ್ನು ನಾನು ಬಲಪಂಥೀಯರು ಎಂದು ಕರೆಯುತ್ತೇನೆ.
ಈ ಬಲಪಂಥೀಯರೆಂದರೆ ಮನೆಯಲ್ಲಿ ಎಲ್ಲರನ್ನು, ಎಲ್ಲದಕ್ಕೂ ಬಯ್ಯುತ್ತಿರುವ, ಗೊಣಗಾಡುವ ಮುದುಕರು ಎಂದುಕೊಳ್ಳಬೇಡಿ. ಇವರು, ಜಾತಿ, ಧರ್ಮ, ಸ್ಥಳ, ತಮ್ಮ ಆರ್ಥಿಕ ವರ್ಗದ ಹೆಸರಿನಲ್ಲಿ ಗುಂಪು ಕಟ್ಟಿಕೊಳ್ಳುತ್ತಾರೆ, ನ್ಯಾಯದ ಪರವಾಗಿರುವ ಯಾವುದೇ ಬದಲಾವಣೆಯನ್ನು ತಮ್ಮ ಧರ್ಮಕ್ಕೆ ಕಂಟಕ ಎಂದು ವಿರೋಧಿಸುತ್ತಾರೆ, ದೊಡ್ಡ ದೊಡ್ಡ ಸಂಘಟನೆಗಳನ್ನು ಕಟ್ಟಿಕೊಳ್ಳುತ್ತಾರೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಕ್ಷಗಳನ್ನು ಕಟ್ಟುತ್ತಾರೆ, ದೇಶಗಳನ್ನು ಆಳುತ್ತಾರೆ.

ಒಂದು ಪುಟ್ಟ ಉದಾಹರಣೆ, ಇಪ್ಪತ್ತನೆಯ ಶತಮಾನ ಮೊದಲಾರ್ಧದಲ್ಲಿ ಭಾರತಕ್ಕೆ ಸ್ವಾತಂತ್ರ ಸಿಗಬೇಕು ಎಂದು ಅನೇಕ ಶಕ್ತಿಗಳು ಹೋರಾಡುತ್ತಿದ್ದವು. ಅದರಲ್ಲಿ ಹಲವು ಧಾರೆಗಳಿದ್ದವು. ಬ್ರಿಟಿಷರಿಂದ ಸ್ವಾಂತಂತ್ರ್ಯ ಪಡೆಯುವ ಮುಖ್ಯ ಗುರಿಯಾಗಿಸಿಕೊಂಡಿದ್ದ ಮುಖ್ಯಧಾರೆ, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಮಾಜದಲ್ಲಿಯೂ ಸ್ವಾತಂತ್ರ್ಯ, ಸಮಾನತೆಯೂ ಬೇಕೆನ್ನುವ ಸಮಾನತೆಯ ಧಾರೆ, ಸಶಸ್ತ್ರ ಹೋರಾಟದಿಂದ ಸ್ವಾತಂತ್ರ್ಯ ಪಡೆಯಬೇಕೆಂದು ದುಡಿದು ಮಡಿದ ಸಶಸ್ತ್ರ ಧಾರೆ. ಆದರೆ, ಭಾರತದಲ್ಲಿ ಒಂದು ಶಕ್ತಿ ಮಾತ್ರ ಬ್ರಿಟಿಷರಿಂದ ಸ್ವಾತಂತ್ರ್ಯವನ್ನೇ ಬಯಸಲಿಲ್ಲ, ಸ್ವಾತಂತ್ರ್ಯ ಸಂಗ್ರಾಮದ ಹೊರಾಟಕ್ಕೆ ಅಡೆತಡೆಗಳನ್ನು ನಿರ್ಮಿಸುವ ಕೆಲಸ ಮಾಡಿದರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಬೇಕೆಂದು ತುಡಿಯುತ್ತಿದ್ದ ಜೀವಗಳಿಗೆ, ಇಲ್ಲ ಅದನ್ನು ಮಾಡುವುದು ಬೇಡ ಎಂದು ದಾರಿತಪ್ಪಿಸಿದರು. ಬ್ರಿಟಿಷರಿಂದ ನಿರಂತರವಾಗಿ ದುಡ್ಡು ಪಡೆದು ಈ ಎಲ್ಲ ಕೆಲಸಗಳನ್ನು ಮಾಡಿದರು. ಮೊದಲ ಸಲ ಇದನ್ನು ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು, ಆದರೆ ಇದು ವಾಸ್ತವ. ಹೀಗೇಕೆ ಅವರು ಮಾಡಿದರು ಎಂದು ಕೇಳಿದಾಗ ಉತ್ತರ ಸಿಕ್ಕಿದ್ದು; ಒಂದು ವೇಳೆ ಸ್ವಾತಂತ್ರ್ಯವೇನಾದರೂ ಬಂದುಬಿಟ್ಟರೆ, ಚುನಾವಣೆ ಆಗುತ್ತೆ, ಬಡವರು, ಹಿಂದುಳಿದ ಸಮುದಾಯದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಇವರೆಲ್ಲರೂ ಸೇರಿ ತಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡುತ್ತಾರೆ, ಆಗ ನಮ್ಮ ಅಧಿಕಾರವೆಲ್ಲವನ್ನು ಕಿತ್ತುಹಾಕಿಕೊಳ್ಳುತ್ತಾರೆ ಎಂಬ ಭಯ ಇತ್ತು ಈ ಶಕ್ತಿಗಳಿಗೆ. ಹಾಗಾಗಿಯೇ ಬ್ರಿಟಿಷರಿಗೆ ಸಹಾಯ ಮಾಡುತ್ತಲೇ ಇದ್ದರು. ಆ ಶಕ್ತಿಗಳೂ ಇಂದಿಗೂ ಗಟ್ಟಿಯಾಗಿಯೇ ಇವೆ.
ಇದನ್ನು ಇನ್ನಷ್ಟು ಆಳದಲ್ಲಿ ನೋಡಿದಾಗ, ಅಂದರೆ ನಮ್ಮೊಳಗೆ ಇಣುಕಿ ನೋಡಿದಾಗ ಏಕೆ ಎಂಬುದು ಗೊತ್ತಾಗುತ್ತದೆ. ಬಲಪಂಥ ಎಂಬುದು ಕಮ್ಫರ್ಟ್ ಜೋನ್. ನೀವು ಊರಿನ ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದೀರಿ ಎಂದಿಟ್ಟುಕೊಳ್ಳಿ, ಊರಿನಲ್ಲಿ ಜಾತಿಯಾಧಾರಿತ ಅನ್ಯಾಯಗಳನ್ನು ನಿಲ್ಲಿಸಬೇಕೆಂದರೆ, ನಿಮ್ಮ ಬಹುತೇಕ ಅನುಕೂಲಗಳನ್ನು ಬಿಡಬೇಕಾಗುತ್ತದೆ, ಹೊಲದಲ್ಲಿ ದುಡಿಯುವವರಿಗೆ ಸೂಕ್ತ ವೇತನ ಕೊಡಬೇಕಾಗುತ್ತದೆ, ಇಲ್ಲಿಯ ತನಕ ನಿಮ್ಮ ಹೆಸರಿನ ಕಾರಣದಿಂದ ಪಡೆಯುತ್ತಿದ್ದ ಗೌರವವನ್ನು ನಿರಾಕರಿಸಿ, ಶೋಷಿತ ಸಮುದಾಯದವರಿಗೆ ಅಷ್ಟೇ ಗೌರವ ಕೊಡಬೇಕಾಗುತ್ತದೆ. ಕಷ್ಟ ಅಲ್ಲವೇ? ನಮ್ಮ ಅಡಿಯಾಳಾಗಿ ಬದುಕುತ್ತಿರುವ, ಮನೆಯಲ್ಲಿ, ಸಮಾಜದಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನದಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸದೇ ಇರುವ ಮಹಿಳೆಯರಿಗೂ ಮಾತನಾಡುವ ಹಕ್ಕನ್ನು ನೀಡಬೇಕಾಗುತ್ತದೆ. ಇದು ಕಷ್ಟವಲ್ಲವೇ? ಇರಲಿ. ʼನನ್ನ ಇಡೀ ಅಸ್ತಿತ್ವ ಈ ಸಾಮಾಜಿಕ ಸಂರಚನೆಯ ಮೇಲೆ ಅವಲಂಬಿತವಾಗಿದೆ, ಇದಕ್ಕೆನಾದರೂ ಪರ್ಯಾಯ ದಾರಿ ತೋರಿಸಿಕೊಟ್ಟರೆ ಇದನ್ನು ತೊರೆಯುವೆʼ ಎಂದು ಕೆಲವರು ಹೇಳಬಹುದು. ಆದರೆ ಹಾಗನ್ನದೇ ಧರ್ಮ, ಸಂಸ್ಕೃತಿಯ, ಆಚರಣೆಯ ಹೆಸರಿನಲ್ಲಿ ಇದೇ ಸರಿ ಎನ್ನುವ ಒಂದು ಗುಂಪೂ ಇರುತ್ತದೆಯಲ್ಲವಾ? ಶೋಷಿತರ ಪರವಾಗಿ ನ್ಯಾಯಕ್ಕಾಗಿ ದುಡಿಯುತ್ತಿರುವ ಶಕ್ತಿಗಳನ್ನು, ವ್ಯಕ್ತಿಗಳನ್ನು ಧರ್ಮವಿರೋಧಿ, ದೇಶವಿರೋಧಿ ಎಂದು ಹೆಸರಿಸಿ, ಆದಷ್ಟು ಬೇಗ ಅವರನ್ನು, ಅವರ ಐಡಿಯಾಗಳನ್ನು ಸಂಹರಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಅದುವೆ ಬಲಪಂಥ.
ಬಲಪಂಥದ ಇನ್ನೊಂದು ದೊಡ್ಡ ಲಕ್ಷಣ ವ್ಯಾಪಾರ. ಯಾವುದೇ ಸರಕಾರ ಆಯಾ ದೇಶಗಳಲ್ಲಿ ವ್ಯಾಪಾರ ಯಾವ ರೀತಿಯಲ್ಲಿ ನಡೆಯಬೇಕು, ಏನೆಲ್ಲ ನಿಯಮಗಳಿರಬೇಕು, ದೇಶದ ಆರ್ಥಿಕತೆ ಸದೃಢವಾಗಿರಬೇಕು, ಯಾವುದೇ ಕಾರಣಕ್ಕೂ ದೇಶ ದಿವಾಳಿಯಾಗಬಾರದು, ಹೆಚ್ಚಿನ ಜನರಿಗೆ ವ್ಯಾಪಾರ ಮಾಡುವ ಅವಕಾಶ ಸಿಗಬೇಕಾದರೆ ಏಕಸ್ವಾಮ್ಯ ಇರಬಾರದು ಎಂಬ ನಿಯಮಗಳನ್ನು ರೂಪಿಸುತ್ತದೆ ಅಥವಾ ರೂಪಿಸುವ ಪ್ರಯತ್ನ ಮಾಡುತ್ತದೆ. ಆದರೆ ಬಲಪಂಥ ಎನ್ನುವುದು ಈ ಎಲ್ಲ ನಿಯಮಗಳನ್ನು ವಿರೋಧಿಸುತ್ತದೆ. ಮಾರುಕಟ್ಟೆ ಎಂಬುದು ತನ್ನಿಂತಾನೇ ನಿಯಂತ್ರಿಸಿಕೊಳ್ಳುತ್ತದೆ, ಅದು ಅತ್ಯಂತ ಸಮರ್ಥವಾದ ವ್ಯವಸ್ಥೆ ಎನ್ನುತ್ತ, ಎಲ್ಲ ವ್ಯಾಪಾರಗಳು ಕೆಲವೇ ಕೆಲವು ಕೈಗಳ ಹಿಡಿತದಲ್ಲಿ ಇರಿಸುವ ಪ್ರಯತ್ನ ಮಾಡುತ್ತದೆ. ಈ ಕೆಲಸವನ್ನು ಆಯಾ ನಾಡಿನ ದೊಡ್ಡ ಬಂಡವಾಳಶಾಹಿಗಳು ಸದಾಕಾಲ ಮಾಡುತ್ತ ಬಂದಿದ್ದಾರೆ. ಅವರಿಗೆ ತಮ್ಮ ಹಿತಾಸಕ್ತಿ ಮುಖ್ಯ, ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎನ್ನಬಹುದು. ಆದರೆ, ಈ ವ್ಯಾಪಾರಿಗಳು ತಾವಷ್ಟೇ ಈ ಕೆಲಸ ಮಾಡುವುದಿಲ್ಲ, ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, (ಪರೋಕ್ಷವಾಗಿ ವರ್ಗಾಧಾರಿತವಾಗಿ) ಇತರ ವರ್ಗಗಳು, ಸಮುದಾಯಗಳು, ಲಿಂಗ, ಧರ್ಮದವರ ಮೇಲೆ ಅನ್ಯಾಯ ಎಸಗುವ ಎಲ್ಲ ಶಕ್ತಿಗಳೂ ಈ ಏಕಸ್ವಾಮ್ಯ ಬಯಸುವ ಶಕ್ತಿಗಳ ಕೈಜೋಡಿಸುತ್ತಾರೆ. ಹಾಗಾಗಿ ಈ ದೊಡ್ಡ ಬಂಡವಾಳಶಾಹಿಗಳು ಗೆಲುವು ಸಾಧಿಸಿದಾಗ ಅವರು, ಗೆಲುವು ಕೇವಲ ಕೆಲವು ವ್ಯಾಪಾರಿಗಳದ್ದಾಗಿರುವುದಿಲ್ಲ, ಸೋಲು ಸಣ್ಣ ಪುಟ್ಟ ವ್ಯಾಪಾರಿಗಳದ್ದು ಮಾತ್ರ ಆಗಿರುವುದಿಲ್ಲ. ಅಲ್ಲಿ, ಜಾತಿಯ ಹೆಸರಿನಲ್ಲಿ ಪ್ರಾಬಲ್ಯ ಸಾಧಿಸುವವರೂ, ಲಿಂಗದ ಹೆಸರಿನಲ್ಲಿ ದಬ್ಬಾಳಿಕೆ ಮಾಡುವವರೂ, ವರ್ಗ ತಾರತಮ್ಯ ಮಾಡುವ ಪ್ರಬಲ ವರ್ಗದವರೂ, ಸಮಾಜದಲ್ಲಿ ಸ್ವಾತಂತ್ರ್ಯ ಇರಬಾರದೂ ಎನ್ನುವವರೂ, ಜೀತ ಪದ್ಧತಿಯನ್ನು ಮರುಸ್ಥಾಪಿಸುವ ಶಕ್ತಿಗಳೂ ಗೆಲುವು ಸಾಧಿಸುತ್ತವೆ. ಅದುವೇ ಬಲಪಂಥದ ಶಕ್ತಿ.

ಬಲಪಂಥ ಎಂಬುದು ಎಂದಿಗೂ ಎಲ್ಲರಿಗೂ ಸಮಾನ, ಗುಣಮಟ್ಟದ ಶಿಕ್ಷಣ ಬಯಸುವುದಿಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯ ಬಯಸುವುದಿಲ್ಲ. ವರ್ಗಾಧಾರಿತ ಶೋಷಣೆಯನ್ನು, ಜಾತಿಯಾಧಾರಿತ ದಬ್ಬಾಳಿಕೆಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತದೆ. ಅದಕ್ಕೆ ತಮಗೆ ಬೇಕಿರುವ ಎಲ್ಲ ಸಾಧನಗಳನ್ನು ಬಳಸುತ್ತದೆ, ಹೊಸಹೊಸ ವಾದಗಳನ್ನು ಸೃಷ್ಟಿಸುತ್ತದೆ. ಸಮಾನ, ಗುಣಮಟ್ಟದ ಶಿಕ್ಷಣದ ವಿಷಯ ಬಂದಾಗ, ಶಾಲೆಗಳು ಸರಕಾರದ ಹಿಡಿತದಲ್ಲಿದ್ದಾಗ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೇ ಇಲ್ಲ, ಖಾಸಗಿ ಶಾಲೆಗಳು ಮಾತ್ರ ಗುಣಮಟ್ಟದ ಶಿಕ್ಷಣ ನೀಡಬಲ್ಲವು ಎಂಬ ವಾದ ಹುಟ್ಟುಹಾಕುತ್ತದೆ. (ಅದೇ ಸಮಯದಲ್ಲಿ ಸರಕಾರಿ ಶಾಲೆಗಳಿಗೆ ಫಂಡಿಂಗ್ ಕಡಿಮೆ ಮಾಡಿ, ಅವುಗಳ ಗುಣಮಟ್ಟ ಕುಸಿಯುವುದನ್ನು ಖಾತ್ರಿಪಡಿಸಿಕೊಳ್ಳುತ್ತದೆ.), ವರ್ಗದ, ಬಡತನದ ವಿಷಯ ಬಂದಾಗ, ಬಡತನ ಎಂಬುದು ವೈಯುಕ್ತಿಕ ಸಮಸ್ಯೆ, ಆಯಾ ವ್ಯಕ್ತಿ ಕಷ್ಟಪಡಲಿಲ್ಲ, ಹಾಗಾಗಿ ಬಡವನಾಗಿದ್ದಾನೆ/ಳೆ ಎಂದು ತೋರಿಸುತ್ತದೆ, ಬಡ ಕುಟುಂಬದಿಂದ ಬಂದು ಶ್ರೀಮಂತರಾದ ಒಂದೆರಡು ಉದಾಹರಣೆಗಳನ್ನು ತೋರಿಸಿ, ಈ ವಾದವನ್ನು ಸಮರ್ಥಿಸಿಕೊಳ್ಳುತ್ತದೆ. ಮಹಿಳೆಯರನ್ನು ಸಂಸ್ಕೃತಿಯ ಹೆಸರಿನಲ್ಲಿ ಮಟ್ಟಹಾಕುತ್ತದೆ. ಆದರೆ, ಈ ಎಲ್ಲ ವಾದಗಳನ್ನು ಸುಲಭವಾಗಿ ಹೊಡೆದುಹಾಕಬಹುದಲ್ಲವೇ? ಹೌದು, ಚರ್ಚೆಗೆ ಬಂದರೆ, ಮಾಡಬಹುದು. ಆದರೆ ಬಲಪಂಥೀಯರು ಜಾಣರು, ಚರ್ಚೆಯನ್ನು ಬೇರೊಂದು ಕಡೆಗೆ ತಿರುಗಿಸುತ್ತಾರೆ. ನಮ್ಮ ಸಮಾಜ/ದೇಶದ ಒಳಗೇ, ಕೆಲವೊಮ್ಮೆ ಹೊರಗೆ ವೈರಿಯನ್ನು ಸೃಷ್ಟಿಸುತ್ತಾರೆ; ನೋಡಿ, ನಿಮ್ಮೆಲ್ಲ ಸಮಸ್ಯೆಗಳಿಗೆ ಇವರೇ ಕಾರಣ ಎಂದು ನಂಬಿಸುತ್ತಾರೆ, ಇವರನ್ನು ಮಟ್ಟಹಾಕದಿದ್ದರೆ, ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ನಂಬಿಸುತ್ತಾರೆ. ಆಗ, ಗುಣಮಟ್ಟದ ಶಿಕ್ಷಣದ ವಿಷಯಯಾಗಲೀ, ಉಚಿತ ಆರೋಗ್ಯ ಸೇವೆಯ ವಿಷಯವಾಗಲೀ, ಮಹಿಳೆಯರ ಸ್ವಾತಂತ್ರ್ಯದ ವಿಷಯವಾಗಲೀ ಮುನ್ನೆಲೆಗೆ ಬರದಂತೆ ನೋಡಿಕೊಳ್ಳುತ್ತಾರೆ. ಈಗ ಆಗುತ್ತಿರುವುದೂ ಅದೇ ಅಲ್ಲವೇ?
ಹೌದು, ಬಲಪಂಥ ಎಂಬುದು ಇಷ್ಟೊಂದು ಅಪಾಯಕಾರಿ ಎಂದು ಗೊತ್ತಿದ್ದರೂ, ಅದರಿಂದ ಬಹುಸಂಖ್ಯಾತರಿಗೆ ಅನ್ಯಾಯವೇ ಆಗಿದ್ದರೂ, ಅದೇಕೆ ಗಟ್ಟಿಗೊಳ್ಳುತ್ತದೆ? ಅದನ್ನು ವಿರೋಧಿಸುವ ಶಕ್ತಿಗಳೂ ಸಮಾಜದಲ್ಲಿ ಕೆಲಸ ಮಾಡುತ್ತಿದ್ದಾಗ ಯಾಕೆ ಗೆಲ್ಲುವುದಿಲ್ಲ?
ಇದಕ್ಕೆ ಸರಳ ಉತ್ತರವಿಲ್ಲ. ಮೊದಲನೆಯದಾಗಿ, ಸ್ವಾತಂತ್ರ್ಯಕ್ಕಾಗಿ ದುಡಿಯುವ ಶಕ್ತಿಗಳು, ಬಲಪಂಥವನ್ನು ವಿರೋಧಿಸುವ ಶಕ್ತಿಗಳೂ ಸಮಾಜದಲ್ಲಿ ಅನೇಕ ಬಾರಿ ಮೇಲುಗೈ ಸಾಧಿಸಿವೆ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮವೇ ದೊಡ್ಡ ಉದಾಹರಣೆ. ಎರಡನೆಯದಾಗಿ, ನಾವು ಮೇಲೆ ನೋಡಿದಂತೆ ಬಲಪಂಥವೂ ಬೇರೆ ಬೇರೆ ಹೆಸರಿನಲ್ಲಿ, ಅಪರೋಕ್ಷವಾಗಿ ಕೆಲಸ ಮಾಡುತ್ತಿರುತ್ತದೆ. ಬಲಪಂಥವನ್ನು ವಿರೋಧಿಸುವವರನ್ನು ತನ್ನ ಬುಟ್ಟಿಗೆ ಅನೇಕ ಬಾರಿ ಸುಲಭವಾಗಿ ಹಾಕಿಕೊಳ್ಳುತ್ತದೆ. ಅವರ ವಿಚಾರಗಳನ್ನು ವ್ಯಕ್ತಪಡಿಸುವ ಒಂದಿಷ್ಟು ಸ್ವಾತಂತ್ರ್ಯವನ್ನು ಕೊಟ್ಟಂತೆ ಮಾಡಿ, ತಳಮಟ್ಟದಲ್ಲಿ ಯಾವುದೇ ಬದಲಾವಣೆ ಆಗದಂತೆ, ಆದರೆ ಮಾತನಾಡಲು, ವಿರೋಧಿಸಲು ಅವಕಾಶ ಕೊಟ್ಟ ಖುಷಿಪಡಿಸುವ ಕೆಲಸವನ್ನು ಮಾಡುತ್ತದೆ. ಇನ್ನೂ ಹೆಚ್ಚಿನ ಪ್ರತಿರೋಧ ಯಾರಾದರೂ ತೋರಿದರೆ, ಅವರನ್ನು ಮುಗಿಸುವ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುತ್ತದೆ. ಅದು ತಮ್ಮ ಬುಡವನ್ನು ಅಲುಗಾಡಿಸುವ ತನಕ ತಮ್ಮ ವಿರೋಧಿಗಳ ತಂಟೆಗೆ ಬರುವುದಿಲ್ಲ. ಹಾಗೂ ತನ್ನ ವಿರೋಧಿಗಳನ್ನು ಮಟ್ಟ ಹಾಕುವ ಹೊಸಹೊಸ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುತ್ತದೆ. ಹೊಸ ಬಲೆಗಳನ್ನು ಹೆಣೆಯುತ್ತದೆ. ನಾವು ಬಲಪಂಥ ಹುಟ್ಟುಹಾಕುವ, ಮುಂದುವರೆಸುವ, ಗಟ್ಟಿಗೊಳಿಸುವ ಅನ್ಯಾಯಗಳನ್ನು ವಿರೋಧಿಸಿ, ಬರೆಯುತ್ತೇವೆ, ಮಾತನಾಡುತ್ತೇವೆ, ನಮ್ಮ ಶಕ್ತ್ಯಾನುಸಾರ ಕೆಲಸ ಮಾಡುತ್ತೇವೆ. ಈ ಎಲ್ಲ ಕೆಲಸಗಳಲ್ಲಿ ಬಲಪಂಥವನ್ನು ವಿರೋಧಿಸಿದ್ದು ಸತ್ಯವಾಗಿದ್ದರೂ, ಬಲಪಂಥೀಯ ವ್ಯವಸ್ಥೆಗೆ ಯಾವ ಧಕ್ಕೆಯನ್ನೂ ತಂದಿರುವುದಿಲ್ಲ. ಹಾಗೂ ಈ ವಿರೋಧದ ಸಮಯದಲ್ಲಿಯೇ ಬಲಪಂಥ ಗಟ್ಟಿಗೊಳ್ಳುತ್ತಿದ್ದರೂ ಅದನ್ನು ವಿರೋಧಿಸಿದ, ತಾನೂ ಏನೋ ಕೆಲಸ ಮಾಡಿದೆ ಎಂಬ ಭಾವನೆಯು ಸಂತೃಪ್ತಿ ತಂದುಕೊಡುವ ವಿದ್ಯಮಾನವೂ ಕಂಡುಬರುತ್ತದೆ. ಇದೂ ಒಂದು ಬಲೆಯೇ.
ಇದನ್ನೂ ಓದಿ ವಚನಯಾನ | ಶರಣ ಸಾಹಿತ್ಯವು ರಾಮನ ಕುರಿತು ಅನೇಕ ತಾರ್ಕಿಕ ಪ್ರಶ್ನೆಗಳನ್ನು ಎತ್ತಿದೆ
ಕೊನೆಯದಾಗಿ ಬಲಪಂಥವನ್ನು ಸೋಲಿಸಲು ಬೇಕಾಗುವ ಸೃಜನಶೀಲತೆ ಅಪಾರವಾದದ್ದು. ಸದಾಕಾಲ ಹೊಸದನ್ನು ಹುಡುಕುತ್ತ, ಹುಟ್ಟುಹಾಕುತ್ತ ಇರಬೇಕಾಗುತ್ತದೆ. ಬಲಪಂಥ ಎಂದರೇ ಕಮ್ಫರ್ಟ್ ಜೋನ್, ಅನ್ಯಾಯದ ವ್ಯವಸ್ಥೆಯನ್ನು ಮುಂದುವರೆಸುವವರು ತಮ್ಮ ಕಮ್‌ಫರ್ಟ್ ಜೋನ್‌ನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿರುವಾಗ, ಅದನ್ನು ವಿರೋಧಿಸುವವರು ತಮ್ಮ ವಿರೋಧದಲ್ಲಿಯೇ ಕಮ್‌ಫರ್ಟ್ ಜೋನ್‌ಗೆ ಜಾರಿದರೆ ಅದನ್ನು ಸೋಲಿಸುವುದು ಹೇಗೆ ಸಾಧ್ಯ?
ಈಗ ಬಲಪಂಥವೇನು ಎಂಬುದನ್ನು ಗುರುತಿಸಿದ್ದೇವೆ. ಭಾರತದಲ್ಲಿ ಆ ಶಕ್ತಿಗಳ ಹೆಸರೇನು ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೂ, ಅನ್ಯಾಯವನ್ನು ಮುಂದುವರೆಸುವ, ದೌರ್ಜನ್ಯ ಎಸಗುವ ಶಕ್ತಿಗಳನ್ನು ಹೇಗೆ ಸೋಲಿಸಬೇಕು ಎಂಬ ಚರ್ಚೆ ಇಲ್ಲಿ ಮಾಡಿಲ್ಲ, ಮಾಡಬೇಕಿದೆ. ಲಕ್ಷಾಂತರ ಜನರು ಈ ಹೋರಾಟವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿರುವುದೂ ವಾಸ್ತವ. ಪರಿಣಾಮಕಾರಿಯಾಗಿ ನಾವೇನು ಮಾಡಬೇಕು ಎಂಬ ಹುಡುಕಾಟದ ಭಾಗವಾಗಿಯೇ ಈ ಬರೆಹವನ್ನು ಬರೆದಿದ್ದು.

ರಾಜಶೇಖರ್ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.