ಹುಡುಕಾಟ | ನಾಯಿ, ವರ್ಗ ಮತ್ತು ಗ್ಯಾಸ್‌ಲೈಟಿಂಗ್

Date:

Advertisements

ಒಂದು ಸಮಾಜವೆಂದರೆ, ಅಲ್ಲಿ ಹಾಡು, ಕುಣಿತ, ಕಥೆ ಹೇಳುವುದು, ನಾಟಕ ಆಡುವುದು ಮುಂತಾದವೆಲ್ಲವೂ ಇರುತ್ತವೆ, ಇರಬೇಕು. ಅವೆಲ್ಲ ಸಮಾಜದ ಅವಿಭಾಜ್ಯ ಅಂಗಗಳು. ಅವ್ಯಾವೂ ಇಲ್ಲವೆಂದರೆ ಅದು ಜೀವಂತ ಸಮಾಜವಲ್ಲ. ಎಲ್ಲರೂ ಕುಣಿಯಲೇ ಬೇಕೆಂತೇನಿಲ್ಲ ಅಥವಾ ಹಾಡಲೇಬೇಕೆಂತೇನಿಲ್ಲ. ಹಾಡು ಕುಣಿತವನ್ನು ನೋಡುವ ಅವಕಾಶವಿದ್ದರೂ ಅದನ್ನು ಜೀವಂತವೆನ್ನಬಹುದು. ಬೆಂಗಳೂರಿನಲ್ಲಿ ಯಾರೆಲ್ಲ ಹಾಡುತ್ತಿದ್ದಾರೆ, ಯಾರೆಲ್ಲ ಕುಣಿಯುತ್ತಿದ್ದಾರೆ? ಆ ಸಾಂಸ್ಕೃತಿಕ ಜೀವನ ಯಾರಿಗೆಲ್ಲ ಲಭ್ಯವಿದೆ? ಇದಕ್ಕೆಲ್ಲ ಅಧ್ಯಯನದಿಂದಲೇ ಉತ್ತರ ಸಿಗಬಹುದು.

ನಾಯಿಯಿಂದಲೇ ಶುರು ಮಾಡುವ. ಕಳೆದ ವಾರ ಪತ್ರಿಕೆಯಲ್ಲಿ ಒಂದು ವಿಶಿಷ್ಟ ಸುದ್ದಿ ಕಾಣಿಸಿಕೊಂಡಿತ್ತು. ಬೆಂಗಳೂರಿನ ಒಬ್ಬ ವ್ಯಕ್ತಿ ಒಂದು ವಿರಳ ತಳಿಯ ನಾಯಿಯನ್ನು ಖರೀದಿಸಿದರು. ಆ ವಿಶೇಷ ನಾಯಿಯ ಬೆಲೆ 50 ಕೋಟಿ ರೂಪಾಯಿ. ಹೌದು, ನಂಬಿ. (ಪತ್ರಿಕೆಗಳನ್ನು ನಂಬಬಹುದಾದರೆ.) ಆಯ್ತಪ್ಪ, ಯಾರೋ ಸಾವಿರಾರು ಕೋಟಿ ಹೊಂದಿರುವ ತಿಕ್ಕಲು ಶ್ರೀಮಂತ ವ್ಯಕ್ತಿ ಇರಬಹುದು, ಏನಾದರೂ ನಾಯಿಯನ್ನಾದರೂ ಖರೀದಿ ಮಾಡಲಿ, ಲಕ್ಷ ಕೊಟ್ಟು, ಹೆಗ್ಗಣವನ್ನಾದರೂ ಖರೀದಿ ಮಾಡಲಿ ಎಂದು ಸುಮ್ಮನಾಗಬಹುದು. ಆದರೆ, ಆ ವ್ಯಕ್ತಿ ಆ ದುಡ್ಡನ್ನು ವೇಸ್ಟ್‌ ಮಾಡುತ್ತಿಲ್ಲ. ಆ ನಾಯಿಯಿಂದ ಗಳಿಕೆಯನ್ನೂ ಮಾಡುತ್ತಿದ್ದಾರೆ. ಆ ನಾಯಿಯನ್ನು (ಇತರ ವಿಶೇಷ ನಾಯಿಗಳನ್ನು) ಕೆಲವು ಶೋಗಳಲ್ಲಿ ತೆಗೆದುಕೊಂಡು ಹೋಗಿ ಪ್ರದರ್ಶಿಸುತ್ತಾರೆ. ಆ ಪ್ರದರ್ಶನಕ್ಕೆ ಒಂದು ಗಂಟೆಗೆ ಹನ್ನೆರಡು ಲಕ್ಷ ಚಾರ್ಜ್‌ ಮಾಡ್ತಾರಂತೆ. ನನಗೆ ಪ್ರಶ್ನೆ ಇರುವುದು, ಇವು ಯವಾ ಶೋಗಳು? ಯಾರು, ಯಾಕೆ ಆಯೋಜಿಸುತ್ತಾರೆ? ಯಾರು ನೋಡಲು ಬರುತ್ತಾರೆ? ಉತ್ತರ ನನ್ನ ಬಳಿ ಇಲ್ಲ.

ಆದರೆ ನಾನು ನಾಯಿಯ ಬಗ್ಗೆ ಬರೆಯುವ ಉದ್ದೇಶ ಹೊಂದಿಲ್ಲ. ವರ್ಗದ ಬಗ್ಗೆ ಬರೆಯುವ ಪ್ರಯತ್ನ, ಸಮಾಜದಲ್ಲಿ ವರ್ಗ ಹೇಗೆ ಕೆಲಸ ಮಾಡುತ್ತೆ, ಒಟ್ಟಾರೆ ಸಮಾಜದ ಧ್ವನಿಯನ್ನೇ ಹೇಗೆ ಕಸಿದುಕೊಳ್ಳುತ್ತೆ ಎಂಬುದನ್ನು ಬಿಡಿಬಿಡಿ ವಿಷಯಗಳ ಮೂಲಕ ಅರಿಯುವ ಪ್ರಯತ್ನ. ಇಂಗ್ಲೀಷಿನಲ್ಲಿ ಒಂದು ಪದವಿದೆ; Gaslighting. ಈ ಪದವನ್ನು ಬಹತೇಕ ವೈಯಕ್ತಿಕ ಸಂಬಂಧಗಳಲ್ಲಿ ಬಳಸಲಾಗುತ್ತದೆ. ಒಬ್ಬ ವ್ಯಕ್ತಿ ನೋವು ಅನುಭವಿಸುತ್ತಿದ್ದಾನೆ ಎಂದುಕೊಳ್ಳಿ, ಆ ನೋವನ್ನು ಇನ್ನೊಬ್ಬ ವ್ಯಕ್ತಿಯ ಎದುರಿಗೆ ತೋಡಿಕೊಂಡಾಗ ಆ ಇನ್ನೊಬ್ಬ ವ್ಯಕ್ತಿ, “ಇಲ್ಲ, ನಿನಗೆ ಯಾವ ನೋವೂ ಇಲ್ಲ” ಎಂದು ಆ ಮೊದಲನೆಯ ವ್ಯಕ್ತಿಯ ಭಾವನೆಯನ್ನು, ಆ ವ್ಯಕ್ತಿಯ ವಾಸ್ತವವನ್ನೇ ನಿರಾಕರಿಸುವ ಪ್ರಕ್ರಿಯೆಯನ್ನು ಗ್ಯಾಸ್‌ಲೈಟಿಂಗ್‌ ಎಂದು ಕರೆಯಬಹುದು. ವರ್ಗದ ವಿಷಯದಲ್ಲಿ ಇದು ಏಕೆ ಬರುತ್ತೆ ಎಂಬುದನ್ನು ನೋಡುವ.

protestdp 1696311027

ಒಂದು ಸಮಾಜವೆಂದರೆ, ಅಲ್ಲಿ ಹಾಡು, ಕುಣಿತ, ಕಥೆ ಹೇಳುವುದು, ನಾಟಕ ಆಡುವುದು ಮುಂತಾದವೆಲ್ಲವೂ ಇರುತ್ತವೆ, ಇರಬೇಕು. ಅವೆಲ್ಲ ಸಮಾಜದ ಅವಿಭಾಜ್ಯ ಅಂಗಗಳು. ಅವ್ಯಾವೂ ಇಲ್ಲವೆಂದರೆ ಅದು ಜೀವಂತ ಸಮಾಜವಲ್ಲ. ಎಲ್ಲರೂ ಕುಣಿಯಲೇ ಬೇಕೆಂತೇನಿಲ್ಲ ಅಥವಾ ಹಾಡಲೇಬೇಕೆಂತೇನಿಲ್ಲ. ಹಾಡು ಕುಣಿತವನ್ನು ನೋಡುವ ಅವಕಾಶವಿದ್ದರೂ ಅದನ್ನು ಜೀವಂತವೆನ್ನಬಹುದು. ಬೆಂಗಳೂರಿನಲ್ಲಿ ಯಾರೆಲ್ಲ ಹಾಡುತ್ತಿದ್ದಾರೆ, ಯಾರೆಲ್ಲ ಕುಣಿಯುತ್ತಿದ್ದಾರೆ? ಆ ಸಾಂಸ್ಕೃತಿಕ ಜೀವನ ಯಾರಿಗೆಲ್ಲ ಲಭ್ಯವಿದೆ? ಇದಕ್ಕೆಲ್ಲ ಅಧ್ಯಯನದಿಂದಲೇ ಉತ್ತರ ಸಿಗಬಹುದು. ಆದರೆ ಮನರಂಜನೆಗೆ ಇಂದು ನಮಗೆ ಇಂಟರ್‌ನೆಟ್‌ ಇದೆ, ಮೊಬೈಲ್‌ ಫೋನ್‌ಗಳಲ್ಲಿ ಸಿನೆಮಾದಿಂದ ಹಿಡಿದು ರೀಲ್‌ಗಳನ್ನು ನೋಡುತ್ತಿದ್ದೇವೆ. ಇಂಟರ್‌ನೆಟ್‌ನಿಂದ ಅನೇಕ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಮೊಬೈಲ್‌ನಲ್ಲೇ ಓದಬಹುದು. ಆದರೆ ಯಾರು ಏನು ನೋಡುತ್ತಿದ್ದಾರೆ, ಏನು ಓದುತ್ತಿದ್ದಾರೆ ಎಂಬುದರಲ್ಲಿ ಏನಾದರೂ ವ್ಯತ್ಯಾಸವಿದೆಯೇ? ನಾವು ಬಳಸುವ ಕಾಂಟೆಂಟ್‌ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆಯೇ?

ಇಂದು ರಾಜ್ಯದಲ್ಲಿ ಇಪ್ಪತ್ತು ಬಗೆಯ ಶಾಲೆಗಳಿವೆ. ಅಂತಾರಾಷ್ಟ್ರೀಯ ಪಠ್ಯಕ್ರಮದ ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್‌(IB), ಕೇಂಬ್ರಿಜ್‌ ಅಂತಾರಾಷ್ಟ್ರೀಯ ಪರೀಕ್ಷೆ (CIE), ಫ್ರೆಂಚ್‌ ಬ್ಯಾಕಲೌರಿಯೇಟ್‌(FB), ಕೆನಟಿಯನ್‌ ಬೋರ್ಡ್‌, ರಾಷ್ಟ್ರೀಯ ಪಠ್ಯಕ್ರಮದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕಂಡರಿ ಎಜುಕೇಷನ್‌(CBSE), ಕೌನ್ಸಿಲ್‌ ಫಾರ್‌ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಗ್ಸಾಮಿನೇಷನ್‌(CISCE), ಭಾರತೀಯ ಶಿಕ್ಷಾ ಬೋರ್ಡ್‌, ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌(NIOS), ರಾಜ್ಯ ಪಠ್ಯಕ್ರಮದ ಅನುದಾನರಹಿತ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರತಿಷ್ಠಿತ ಆಂಗ್ಲ ಮಾಧ್ಯಮ, ಸಾಧಾರಣ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಹಾಗೂ ರಾಜ್ಯ ಪಠ್ಯಕ್ರಮದ ಸರಕಾರಿ ಶಾಲೆಗಳಲ್ಲಿ ವಸತಿ ಶಾಲೆಗಳು-ಆಂಗ್ಲ ಮಾಧ್ಯಮ, ಸರಕಾರಿ ಕೆಪಿಎಸ್‌ ಆಂಗ್ಲ ಮಾಧ್ಯಮ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳು, ಉಭಯ (ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮ), ಸರಕಾರಿ ಸಾಮಾನ್ಯ ಕನ್ನಡ ಶಾಲೆಗಳು ಹಾಗೂ ಆಶ್ರಮ ಶಾಲೆಗಳು. (ಇದನ್ನು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಅವರ ಲೇಖನದಿಂದ ಎರವಲು ಪಡೆಯಲಾಗಿದೆ.).

ಇಪ್ಪತ್ತಿರಲಿ, ನೂರಾಇಪ್ಪತ್ತಿರಲಿ, ಸಮಸ್ಯೆ ಏನು? ನೋಡುವ, ಈ ಎಲ್ಲಾ ಶಾಲೆಗಳ ಮಕ್ಕಳ ಪಠ್ಯಕ್ರಮ ಬೇರೆಯದ್ದೇ ಆಗಿರುತ್ತೆ, ಅವರು ಓದುವ ಪುಸ್ತಕಗಳು ಬೇರೆ, ಕಲಿಸುವ ವಿಧಾನ ಬೇರೆ, ಅವರು ಮಾಡುವ ಪಠ್ಯೇತರ ಚಟುವಟಿಕೆಗಳು ಬೇರೆ, ಹಾಡುಗಳು ಬೇರೆ, ಕಥೆಗಳು ಬೇರೆ. ಇಷ್ಟಕ್ಕೇ ನಿಲ್ಲುವುದಿಲ್ಲ. ಆಯಾ ಶಾಲೆಗಳಿಗೆ ಹೋಗುವ ಮಕ್ಕಳೇ ಬೇರೆ. ಅಂದರೆ ವರ್ಗಾಧಾರಿತವಾಗಿ ಮಕ್ಕಳು ತಮ್ಮ ತಮ್ಮ ವರ್ಗದವರೇ ಬರುವಂತಹ ಶಾಲೆಗಳಿಗೆ ಹೋಗುತ್ತಾರೆ. ನಾವು ಶಾಲೆಗೆ ಹೋಗುತ್ತಿದ್ದಾಗ, ಒಬ್ಬ ಉನ್ನತ ಅಧಿಕಾರಿಯ ಮಕ್ಕಳೂ, ಸಮಾಜದ ಅತ್ಯಂತ ಬಡ ಮತ್ತು ಶೋಷಿತ ಸಮುದಾಯದ ಮಕ್ಕಳೂ ಒಂದೇ ಶಾಲೆಗೆ ಹೋಗಿ, ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದೆವು. (ಹೌದು, ಆಗಲೂ ಅನೇಕ ಸಮಸ್ಯೆಗಳಿದ್ದರೂ ಅದನ್ನು ರೋಮಾಂಟಿಸೈಜ್‌ ಮಾಡುವ ಅವಶ್ಯಕತೆ ಇದೆ.) ಆದರೆ, ಎಲ್ಲರೂ ಎಲ್ಲಾ ವರ್ಗಗಳ ಮಕ್ಕಳೊಂದಿಗೆ ಬರೆಯುತ್ತಿದ್ದರು, ವರ್ಗಾಧಾರಿತ(ಕೆಲವೊಮ್ಮೆ ಜಾತಿಯಾಧಾರಿತ ಮತ್ತು ಧರ್ಮಾಧಾರಿತ) ಗುಂಪುಗಳು ಇರುತ್ತಿದ್ದಿಲ್ಲ ಎಂತೇನಿಲ್ಲ. ಆದರೂ ಎಲ್ಲರೂ ಜೊತೆಗೇ ಆಡಬೇಕಾಗಿತ್ತು, ಎಲ್ಲರೂ ಎಲ್ಲರಿಗೆ ಕಾಣಿಸುತ್ತಿದ್ದರು, ನಮ್ಮ ಸಾಂಸ್ಕೃತಿಕ ಇಂಪ್ರೆಷನ್‌ಗಳು ಬಹುತೇಕ ಒಂದೇ ಆಗಿರುತ್ತಿದ್ದವು. ಬೇರೊಂದು ವರ್ಗದವನು ಅಥವಾ ಸಮುದಾಯಕ್ಕೆ ಸೇರಿದವನು ನಮಗೆ ಇಷ್ಟವಿಲ್ಲದಿದ್ದರೂ, ಅವನು ಅಥವಾ ಅವಳು ಆ ಜಾಗದಲ್ಲಿಯೇ ಇದ್ದನು/ಳು. ಎಲ್ಲರ ಅಸ್ತಿತ್ವವನ್ನು ಸಹಜವಾಗಿ, ಕಾನ್ಷಿಯಸ್‌ ಆಗಿಯೋ ಅಥವಾ ಅನ್‌ಕಾನ್ಷಿಯಸ್‌ ಆಗಿಯೋ ಒಪ್ಪಿಕೊಂಡಿದ್ದೆವು. ಈಗ?
ಐಬಿ ಶಾಲೆಗೆ ಹೋಗುವ ವಿದ್ಯಾರ್ಥಿಯು ಬೇರೊಂದು ಶಾಲೆಗೆ ಹೋಗುವ ವಿದ್ಯಾರ್ಥಿ ಇಬ್ಬರೂ ಸ್ನೇಹಿತರಾಗಬಹುದೇ, ಮುಂದಿನ ದಿನಗಳಲ್ಲಿ ಹೇಗೋ ಆಕಸ್ಮಿಕವಾಗಿ ಭೇಟಿಯಾಗಿ, ಪ್ರೀತಿಸಿ ಮದುವೆ ಆಗಬಹುದೇ? ಅದಿರಲಿ, ಐಬಿ ಅಥವಾ ಸಿಬಿಎಸ್‌ಸಿಯ ವಿಧ್ಯಾರ್ಥಿಯ ಕಣ್ಣಿಗೆ ಸ್ಟೇಟ್‌ ಬೋರ್ಡ್‌ನಲ್ಲಿ ಓದುವ ವಿದ್ಯಾರ್ಥಿಯೊಬ್ಬ ಎಂದಾದರೂ ಬೀಳಬಹುದೇ?

Advertisements
WhatsApp Image 2023 11 26 at 1.10.33 PM 1 2023 11 5f3bc5252ff41f2bb90e0fd8e8f0e50d scaled 1

ನಿರ್ದಿಷ್ಟವಾದ ಉತ್ತರ ಕೊಡಲು ಸಾಧ್ಯವಿಲ್ಲವಾದರೂ, ಒಂದು ರೀತಿಯ ಅದೃಷ್ಯಗೊಳಿಸುವ ಪ್ರಕ್ರಿಯೆ ಇಲ್ಲಿ ಶುರುವಾಗುತ್ತದೆ. ಭೌಗೋಳಿಕವಾಗಿ ಸ್ವಲ್ಪ ದೂರದಲ್ಲಿಯೇ ಇರುವ ಇವರು, ನೀಲಿ ಬಟ್ಟೆ ಹಾಕಿಕೊಂಡು ಎಂಥದ್ದೋ ಶಾಲೆಗೆ ಹೋಗುವವರು, ಇವರು ಓದಿದ ಸಾಹಿತ್ಯದ ಹೆಸರನ್ನೂ ಕೇಳದವರು, ಒಂದು ವೇಳೆ ಬಲವಂತಾಗಿ ಇಬ್ಬರನ್ನೂ ಜೊತೆಗೆ ಒಂದೆಡೆ ಕೂರಿಸಿದರೂ, ಮಾತನಾಡಲು ಇಬ್ಬರಿಗೂ ಕಾಮನ್‌ ಇರುವಂತಹ ವಿಷಯವೇ ಇಲ್ಲದಿರುವ ಸಂದರ್ಭ ನಿಧಾನವಾಗಿ ಬೆಳೆಯುತ್ತದೆ. ಇರಲಿ, ಬೇಡ ನಮಗೆ, ನಮಗೆ ನಮ್ಮವರು ಇದಾರೆ, ನಾವು ನಮ್ಮವರೊಂದಿಗೆ ಮಾತನಾಡುತ್ತೀವಿ, ಆಟವಾಡುತ್ತೀವಿ, ಅವರ್ಯಾಕೆ ಬೇಕೆ ನಮಗೆ ಎಂದು ವಾದಿಸಬಹುದು. ಅದರಲ್ಲಿ ಅಂಥ ತಪ್ಪೇನೂ ಕಾಣುವುದಿಲ್ಲ. ಶ್ರೀಮಂತರು ನನ್ನಂತಹ ಬಡವನೊಂದಿಗೆ ಮಾತನಾಡದಿದ್ದರೆ ನನ್ನ ಗಂಟು ಏನು ಹೋಗುವುದಿದೆ ಎನ್ನಬಹುದು. ಆದರೆ, ಕೇವಲ ಸಾಮಾಜಿಕ ಬಂಡವಾಳ ಹೊಂದಿದರವರು (ಉಳ್ಳವರು ಮತ್ತು ಉಳ್ಳದೇ ಇರುವವರನ್ನು Haves and Have nots ಎಂತಳು ಕರೆಯಲಾಗುತ್ತದೆ) ಕೇವಲ ಇತರರನ್ನು ಅದೃಷ್ಯಗೊಳಿಸುವುದಿಲ್ಲ, ಆ ಇತರರ ಸಮಸ್ಯೆಗಳನ್ನು, ನೋವುಗಳನ್ನು, ಕಥೆಗಳನ್ನೂ ಅದೃಷ್ಯಗೊಳಿಸುತ್ತಾರೆ. ದೊಡ್ಡವರ ಸಮಸ್ಯೆಗಳು ಮಾತ್ರ ಸಮಾಜದ ಸಮಸ್ಯೆಗಳಾಗಿ ಮುನ್ನೆಲೆಗೆ ಬರುತ್ತವೆ. ಆ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಮೂಲಭೂತ ಸಮಸ್ಯೆಗಳನ್ನೇ ಮರೆಯುವಂತೆ ಮಾಡುವ ಶಕ್ತಿ ಈ ವರ್ಗಾಧಾರಿತ ಸಮಾಜಕ್ಕಿದೆ.

ಅಂದರೆ, ಬಡವರ ಮಕ್ಕಳು ಕಾಲರಾದಿಂದ ಸಾಯುತ್ತಿದ್ದರೂ, ಐವತ್ತು ಪರ್ಸೆಂಟ್‌ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ, ಅವುಗಳ ಬಗ್ಗೆ ಚರ್ಚೆ ಆಗುವುದಿಲ್ಲ, ಅವುಗಳು ಕೇವಲ ನಂಬರ್‌ಗಳಾಗಿ ಒಂದೆರಡು ವರದಿಗಳಲ್ಲಿ ಬರುತ್ತವೆಯೇ ಹೊರತು, ಅವು ಸಮಾಜದ ಸಮಸ್ಯೆಯೆಂದು ಪರಿಗಣಿಸಲಾಗುವುದಿಲ್ಲ. ಅದೇ ಸಮಯದಲ್ಲಿ ವೈದ್ಯಕೀಯ ವಲಯವು ಬೇರಿಯಾಟ್ರಿಕ್‌(ಸ್ಥೂಲಕಾಯ) ಸರ್ಜರಿ, ಕೂದಲು ಉದುರಿವಿಕೆಯ ಬಗ್ಗೆ ಅಧ್ಯಯನ ಮಾಡುತ್ತಿರುತ್ತದೆ, ಇತರ ಶ್ರೀಮಂತ ದೇಶದ ಜನರು ಇಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಮೆಡಿಕಲ್‌ ಟೂರಿಸಂಅನ್ನು ಪ್ರೋತ್ಸಾಹಿಸುತ್ತೆ.

ಇಂಗ್ಲೀಷಿನಲ್ಲಿ empathy ಎಂಬ ಪದವಿದೆ. ಅದನ್ನು ಕನ್ನಡದಲ್ಲಿ ಅನುಭೂತಿ ಎನ್ನಬಹುದು. ಇತರರ ನೋವನ್ನು, ಇತರರ ಅನುಭವವನ್ನು, ಭಾವನೆಗಳನ್ನು ನಮ್ಮದಾಗಿಸಿಕೊಂಡು ನೋಡುವುದನ್ನು empathy ಎಂದು ಕರೆಯಬಹುದು. ಕೌನ್ಸಲಿಂಗ್‌, ಆಪ್ತಸಮಾಲೋಚನೆ ಮಾಡುವಾಗ ತಮ್ಮೆದುರಿಗಿನ ವ್ಯಕ್ತಿಯೊಂದಿಗೆ empathize ಮಾಡಿ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದು, ಆಯಾ ವ್ಯಕ್ತಿಗಳು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತೆ ಮಾಡಬೇಕಾಗುತ್ತದೆ. ಆಪ್ತಸಮಾಲೋಚಕರಿಗೆ ಇದರಲ್ಲಿ ತರಬೇತಿ ಕೊಡಲಾಗುತ್ತದೆ. ಸಾಮಾನ್ಯರಿಗೆ ಈ ತರಬೇತಿ ಇಲ್ಲದಿದ್ದರೂ, ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ, ನಮ್ಮದೇ ಆದ ಮಟ್ಟಿಗೆ ಇತರರೊಂದಿಗೆ ಅನುಭೂತಿ ಹೊಂದಿರುತ್ತೇವೆ ಅಥವಾ ಹೊಂದುವ ಪ್ರಯತ್ನವನ್ನು ಮಾಡುತ್ತೇವೆ.

ಆದರೆ ನಮಗೆ ಸಹಾನುಭೂತಿ, ಅನುಭೂತಿ ಹೊಂದಲು ಸಾಧ್ಯವಾಗುವುದು ನಮ್ಮಂತಹ ಜನರೊಂದಿಗೆ ಮಾತ್ರ ಅಂದರೆ ಅವರ ಜೊತೆಗೆ ಏನಾದರೂ ಕಾಮನ್‌ ಅಂಶಗಳು ಇರಬೇಕು. ಎಲ್ಲೋ ಒಂದು ಕಡೆ ನಮ್ಮವರು ಎಂದೆನಿಸಿದಾಗ ಮಾತ್ರ. ನಮಗೆ ನಮ್ಮ ರೀತಿಯ ಜನರನ್ನು ಹೊರತುಪಡಿಸಿ ಇತರರು ಕಾಣಿಸದೇ ಇದ್ದಾಗ ಅನುಭೂತಿ ಹೊಂದುವ ಪ್ರಶ್ನೆಯೇ ಬರುವುದಿಲ್ಲ. ನಾವು ಬರೆಯುವ ಹಾಡು, ಕವಿತೆ, ಕಥೆ, ಸಿನೆಮಾಗಳಲ್ಲಿ ವರ್ಗಗಳು ಗಟ್ಟಿಯಾಗುತ್ತ ಹೋದಂತೆ ಇತರರು ಕಾಣುವುದು ಕಷ್ಟವಾಗುತ್ತಲೇ ಹೋಗುತ್ತದೆ. ಇತರರು ಜೀವನ್ಮರಣದ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಅವರ ಸಮಸ್ಯೆಗಳು ಮುಖ್ಯಧಾರೆಗೆ ಬರೆವುದಿಲ್ಲ. ಆದರೆ ಅದೇ ಸಮಯದಲ್ಲಿ ಮೇಲ್ವರ್ಗದವರು ಎದುರಿಸುವ ಸಣ್ಣಪುಟ್ಟ ಸಮಸ್ಯೆಗಳೂ ದೊಡ್ಡದಾಗಿ ಕಾಣತೊಡುತ್ತವೆ.

ಹತ್ತು ವರ್ಷ ಹಿಂದೆ ಆದ ಘಟನೆ, ಅದು ಪತ್ರಿಕೆಯಲ್ಲಿ ವರದಿಯಾದ ರೀತಿಯು ಈ ವಿದ್ಯಮಾನವನ್ನು ಪುಷ್ಟೀಕರಿಸುತ್ತದೆ. ಆದದ್ದು ಇಷ್ಟು; ಬೆಂಗಳುರಿನ ಅನಾಥಾಶ್ರಮದಲ್ಲಿ ಓದುತ್ತಿದ್ದ ಹತ್ತನೆಯ ತರಗತಿಯು ಬಾಲಕಿಯೊಬ್ಬಳು ಯಾವುದೋ ಒಂದು ಕ್ಷೋಭೆಯಿಂದ ಬಳಲುತ್ತಿದ್ದಳು. ಒಂದು ರಾತ್ರಿ ಅವಳು ಲಾಲ್‌ಬಾಗ್‌ ಒಳಗೆ ಬಂದು, ಅಲ್ಲಿನ ಕೆರೆಗೆ ಜಿಗಿದು ಜೀವ ಕಳೆದುಕೊಳ್ಳುತ್ತಾಳೆ. ಮರುದಿನ ಬೆಳಗ್ಗೆ ಲಾಲ್‌ ಬಾಗ್‌ನಲ್ಲಿ ವಾಕ್‌ ಮಾಡಲು ಬಂದು ಜನರು ಅವಳ ಮೃತದೇಹವನ್ನು ನೋಡಿ ಶಾಕ್‌ ಆಗುತ್ತಾರೆ. ಸಂಬಂಧಪಟ್ಟ ಪೊಲೀಸರಿಗೆ ತಿಳಿಸುತ್ತಾರೆ. ನಾವೆಲ್ಲ ಒಡಾಡುವಂತಹ ಲಾಲ್‌ ಬಾಗ್‌ನಲ್ಲಿ ಇದೆಂತಹ ಸೆಕ್ಯುರಿಟಿ ಲಾಪ್ಸ್‌ (ಭದ್ರತಾ ಲೋಪ) ಆಯಿತೆಂದು ಧ್ವನಿ ಎತ್ತುತ್ತಾರೆ. ಮರುದಿನ ಪತ್ರಿಕೆಯೊಂದರಲ್ಲಿ ವರದಿಯಾಗುತ್ತೆ, ಆ ವರದಿಯ ಶೀರ್ಷಿಕೆ: “Girl’s floating body shocks Lalbagh walkers at sunrise!”

ಅಲ್ಲಿ ಮಾರ್ನಿಂಗ್‌ ವಾಕ್‌ ಮಾಡಲು ಬಂದ ಜನರ ಆಘಾತವೇ ಸುದ್ದಿಯಾಗುತ್ತೆ ಹೊರತು ಆ ಬಾಲಕಿಯ ಸಾವು ಅವರಿಗೆ ಸುದ್ದಿಯಾಗುವುದಿಲ್ಲ. ಯಾಕೆ ಲಾಲ್‌ಬಾಗ್‌ನಲ್ಲಿ ಭದ್ರತೆ ಕಲ್ಪಿಸಲಿಲ್ಲ? ಸರಿಯಾದ ಭದ್ರತೆ ಇದ್ದಿದ್ದರೆ ಆ ಬಾಲಕಿ ಇಲ್ಲಿ ಬಂದು ಸಾಯುತ್ತಿರಲಿಲ್ಲ, ಮಾರ್ನಿಂಗ್‌ ವಾಕರ್‌ಗಳಿಗೆ ಶಾಕ್‌ ಆಗುತ್ತಿರಲಿಲ್ಲ. ಓದುವವರೂ ಅದನ್ನು ಒಪ್ಪಿಕೊಂಡರು. ಇದರ ಗಂಭೀರತೆ ಇಷ್ಟಕ್ಕೆ ನಿಲ್ಲುವುದಿಲ್ಲ. ʼಮೇಲ್ವರ್ಗʼದವರನ್ನು, ಅವರ ದುಷ್ಟತೆಯನ್ನು ನಾವು ದೂಷಿಸಿ ಸುಮ್ಮನಾಗುವುದು ಸಾಕಾಗುವುದಿಲ್ಲ. ಇದು ಒಟ್ಟಾರೆ ಸಮಾಜವನ್ನೇ ದುಷ್ಟತನಕ್ಕೆ ದೂಡುತ್ತದೆ. ಇಡೀ ಸಮಾಜ ಇತರರ ನೋವನ್ನು ನೋಡದಂತೆ ತಡೆಯುತ್ತದೆ. ಪ್ರತಿದಿನ ನಾವು ಪ್ರಯಾಣಿಸುವಾಗ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಅಷ್ಟು ಹತ್ತಿರದಿಂದ ಅವರೊಂದಿಗೆ ವ್ಯವಹಿರಿಸದರೂ, ಅವರ ಇರುವಿಕೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅವರು ಬೇರಾವುದೋ ಲೋಕದವರಂತೆ ಕಾಣುತ್ತಾರೆ. ಇದು ನಮ್ಮ ಸಮಸ್ಯೆ. ಆ ಭದ್ರತಾ ಸಿಬ್ಬಂದಿಯ ಭಾವನೆಗಳೇನಿರಬಹುದು. ದಿನಕ್ಕೆ ಸಾವಿರ ಜನರ ತಪಾಸಣೆ ಮಾಡಿದಾಗ, ಯಾವೊಬ್ಬನೂ/ಳೂ ತನ್ನನ್ನು ಮನುಷ್ಯನಂತೆ ನೋಡದೇ ಇದ್ದಾಗ, ಆತನೋ ಆಕೆಯೋ ಇತರರೊಂದಿಗೆ ಅನುಭೂತಿ ಹೊಂದಲು ಹೇಗೆ ಸಾಧ್ಯ? ಆ ತಣ್ಣನೆಯ ಕ್ರೌರ್ಯವನ್ನು ಮರೆಯಲು, ಯಾವುದೋ ಒಂದು ರಕ್ಷಣಾ ವಿಧಾನವನ್ನು ಅವರೂ ಅಳವಡಿಸಿಕೊಳ್ಳಬೇಕಾಗುತ್ತದೆ. ಅವರೂ ಇತರರನ್ನು ಸಂಖ್ಯೆಗಳಾಗಿ ನೋಡಬೇಕಾಗುತ್ತದೆ. ಅವರೂ, ತಮ್ಮ ಬಾಸ್‌ ಹೇಳಿದ್ದನ್ನಷ್ಟೇ ಮಾಡಿ, ತಣ್ಣನೆಯ ಕ್ರೌರ್ಯವನ್ನು ಇತರರೊಂದಿಗೆ ಪ್ರದರ್ಶಿಸಬೇಕಾಗುತ್ತದೆ. ಒಟ್ಟಾರೆ ಎಲ್ಲೆಡೆಯೂ ತಣ್ಣನೆಯ ಕ್ರೌರ್ಯ.

Lalbagh 5

ಸಮಾಜದ ಎಲ್ಲರೂ ಏನೋ ಕಳೆದುಕೊಂಡರೂ, ಎಲ್ಲವನ್ನು ಕಳೆದುಕೊಳ್ಳುವುದು ಕೆಳವರ್ಗದವರೇ ಆಗಿರುತ್ತಾರೆ. ಉಳ್ಳವರಿಗೆ ಕುಣಿಯಲು, ಹಾಡಲು, ಮಾತನಾಡಲು, ವಾಯುವಿಹಾರ ಮಾಡಲು, ಹರಟೆ ಕೊಚ್ಚಲು ಜಾಗಗಳಿವೆ; ಡಿಸ್ಕೋ, ಕರಾವೋಕೆ, ಬಾಲಿಂಗ್‌ ಅಲೇಸ್‌, ಕೆಫೆಗಳು, ಸುಂದರವಾದ ಪುಸ್ತಕದಂಗಡಿಗಳು, ಉದ್ಯಾನವನಗಳು ಎಲ್ಲವೂ ಇವೆ, ಇತರರಿಗೆ? ಎಲ್ಲರಿಗೂ ಹಾಡುವ, ಕುಣಿಯುವ, ತಮ್ಮ ಅಭಿವ್ಯಕ್ತಿ ಪ್ರಕಟಿಸುವ ಜಾಗಗಳು ಎಲ್ಲಿ? ನಮ್ಮ ಅಭಿವ್ಯಕ್ತಿಗೆ ಜಾಗ ಇಲ್ಲವೆಂದಾಗ, ಅವನ್ನು ವ್ಯಕ್ತಪಡಿಸುವ ಹಕ್ಕನ್ನೇ ನಿಧಾನಕ್ಕೆ ಕಳೆದುಕೊಂಡಂತಾಗುತ್ತದೆ. ಪ್ರತಿದಿನ ನೂರಾರು ನಾಯಿ ಕಡಿತದ ಘಟನೆಗಳು ವರದಿಯಾದರೂ, ಆಗೊಮ್ಮೆ ಈಗೊಮ್ಮೆ ನಾಯಿಗಳು ಗುಂಪುಗಳು ದಾಳಿ ಮಾಡಿ, ಕೊಚ್ಚಿ ಕೊಚ್ಚಿ ಕೊಲೆ ಮಾಡಿದರೂ, ಮಕ್ಕಳನ್ನು ನಾಯಿಗಳ ಕಾಟದಿಂದ ಹೊರಗೆ ಬಿಡಲು ಭಯಭೀತರಾಗಿದ್ದರೂ, ಪತ್ರಿಕೆಗಳಲ್ಲಿ ಶ್ವಾನಪ್ರೀತಿಯ, ಅವುಗಳ ಆರೈಕೆಯ, ಅವಗಳ ಸೈಕಾಲಜಿ, ಅವುಗಳ ತರಬೇತಿಯ ಪಾಠಗಳನ್ನು ನಾವು ಓದುತ್ತೇವೆ, ಅವರ ಖುಷಿಯಲ್ಲಿ ನಮ್ಮ ಖುಷಿ ಕಾಣುತ್ತ, ನಮ್ಮ ಮೇಲಾಗುತ್ತಿರುವ ಸಾಂಸ್ಥಿಕ ಅನ್ಯಾಯವನ್ನು ಮರೆಯುತ್ತೇವೆ.

ಹಾಗಾದರೆ ನಾವೇನು ಮಾಡಬೇಕು? ಮೊದಲಿಗೆ, ಇವೆಲ್ಲ ಸಮಾಜ ಬೆಳೆದಂತೆ ಆದ ಸಹಜವಾದ ಬೆಳವಣಿಗೆಗಳು ಅಲ್ಲ ಎಂಬುದನ್ನು ಅರಿಯುವುದು. ಇವೆಲ್ಲ ನಾವು ತೆಗೆದುಕೊಂಡ ರಾಜಕೀಯ ನಿರ್ಧಾರಗಳ ಪರಿಣಾಮಗಳು. ಉಳ್ಳವರೇ ರಾಜಕೀಯದ ನೀತಿಗಳನ್ನು ತೀರ್ಮಾನಿಸಿದಾಗ, ಅವರು ಸಹಜವಾಗಿಯೇ ಅಂಚಿನಲ್ಲಿರುವ, ಅವರಿಗೆ ಕಾಣಿಸದೇ ಇರುವ ಜನಸಮೂಹದ ಸಮಸ್ಯೆಗಳನ್ನು ಕಡೆಗಣಿಸುತ್ತಾರೆ. ಉಳ್ಳವರ ಹಿತಾಸಕ್ತಿಯನ್ನು ಕಾಪಾಡಲೆಂದೇ ನೀತಿ ರೂಪಿಸುತ್ತಾರೆ. ನಮ್ಮ ನೋವುಗಳನ್ನು ವ್ಯಕ್ತಪಡಿಸಲು, ನಮ್ಮ ಹಕ್ಕಿನ ಜಾಗಗಳನ್ನು ಪಡೆದುಕೊಳ್ಳಲು, ಹಾಡುವ, ಕುಣಿಯುವ, ಪ್ರತಿಭಟಿಸುವ, ಹಾಸ್ಯ ಮಾಡುವ ಹಕ್ಕನ್ನು ಮರುಪಡೆಯಲು, ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು, ರಾಜಕೀಯವೊಂದೇ ದಾರಿ. ನಮ್ಮ ನೋವುಗಳ ಬಗ್ಗೆ ಮಾತನಾಡುವ, ನಮ್ಮ ಹಾಡುಗಳನ್ನು ಹಾಡುವ, ಐವತ್ತು ಕೋಟಿ ರೂಪಾಯಿಯ ನಾಯಿಯ ಬಗ್ಗೆ ಓದುತ್ತ, ನಮ್ಮ ಮಕ್ಕಳಿಗೆ ಆಟವಾಡುವುದಕ್ಕೂ ಜಾಗ ಇಲ್ಲದಿರುವುದನ್ನು, ಅಪೌಷ್ಟಿಕತೆಯನ್ನು ಮರೆಯದಿರೋಣ. ರಾಜಕೀಯದ ಚರ್ಚೆಗಳಲ್ಲಿ ಈ ವಿಷಯಗಳು ಮುನ್ನಲೆಗೆ ಬರುವಂತೆ ಮಾಡೋಣ.

ಅಂದಹಾಗೆ, ಈ ಎಲ್ಲ ವಿಷಯಗಳಿಗೂ ಮತ್ತು ಜಾತಿಯಾಧಾರಿತ ತಾರತಮ್ಯಕ್ಕೂ ಖಂಡಿತವಾಗಿಯೂ ಸಂಬಂಧವಿದೆ. ಈ ಬರಹದಲ್ಲಿ ಅದರ ಬಗ್ಗೆ ಬರೆದಿಲ್ಲ ಅಷ್ಟೆ.

ಇದನ್ನೂ ಓದಿ ಹುಡುಕಾಟ | ರಾಜಕೀಯ ಎಂದರೇನು? ಸರಳೀಕರಿಸುವ ಒಂದು ಪ್ರಯತ್ನ

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X