ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ, ಅವರ ಗಂಡಂದಿರ ಆಯಸ್ಸು ಕ್ಷೀಣಿಸುತ್ತದೆ, ಅವರು ವಿಧವೆಯರಾಗುತ್ತಾರೆ, ಎಂಬ ಬಲವಾದ ನಂಬಿಕೆಯು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಸ್ಸುಂದರಿದೇವಿ ಅಕ್ಷರ ಕಲಿಯಲು ಮುಂದಾಗುತ್ತಾಳೆ. ಅಡಿಗೆ ಮಾಡುತ್ತಾ, ಅಡಿಗೆ ಮನೆಯ ಒಂದು ಮೂಲೆಯಲ್ಲಿ ಮಸಿ ಹಿಡಿದು ಕಪ್ಪಾದ ಗೋಡೆಯ ಮೇಲೆ ಗುಟ್ಟಾಗಿ ವರ್ಣಮಾಲೆಯನ್ನು ತಿದ್ದುತ್ತಾ ಬರಹವನ್ನು ಕಲಿಯುತ್ತಾಳೆ
ಬಂಗಾಲದ ರಾಸ್ಸುಂದರಿದೇವಿ ತಮ್ಮ ಎಂಭತ್ತೆಂಟನೇ ವಯಸ್ಸಿನಲ್ಲಿ ಬರೆದ ಏಕೈಕ ಸಾಹಿತ್ಯ ಕೃತಿ ‘ಅಮಾರ್ ಜಿಬನ್’ (ನನ್ನ ಜೀವನ) ಅನ್ನು ಭಾರತದ ಮೊದಲ ಮಹಿಳಾ ಆತ್ಮ ಕತೆಯೆಂದು ಗುರುತಿಸಲಾಗುತ್ತದೆ. 1876ರಲ್ಲಿ ಪ್ರಕಟವಾದ ರಾಸ್ಸುಂದರಿದೇವಿಯ ಆತ್ಮಚರಿತ್ರೆ ‘ಅಮಾರ್ ಜಿಬನ್’ ಬಂಗಾಳಿ ಭಾಷೆಯಲ್ಲಿ ರಚಿತವಾಗಿದ್ದು, ಇದನ್ನು ಭಾರತೀಯ ಭಾಷೆಯಲ್ಲಿ ರಚಿತವಾದ ಮೊದಲ ಮಹಿಳಾ ಆತ್ಮಚರಿತೆಯೆಂದು ಗುರುತಿಸುತ್ತಾರೆ. ರವೀಂದ್ರನಾಥ ಟ್ಯಾಗೋರರ ಅಣ್ಣ ಹಾಗೂ ಅಂದಿನ ಸಮಕಾಲೀನ ನಾಟಕಕಾರರೂ ಆಗಿದ್ದ ಜ್ಯೋತಿರಿಂದ್ರನಾಥ ಟ್ಯಾಗೋರರು ಈ ಕೃತಿಗೆ ಮುನ್ನುಡಿಯನ್ನು ಬರೆಯುತ್ತ ಹೊಗಳಿಕೆಯ ಮಾತುಗಳಿಂದ ಲೇಖಕಿಯ ಬೆನ್ನು ತಟ್ಟಿದ್ದಾರೆ. ದೇವರ ಪರಿಕಲ್ಪನೆಯನ್ನು ಅತ್ಯಂತ ಔನತ್ಯಕ್ಕೆ ಏರಿಸಿರುವ ಈ ಆತ್ಮಕತೆಯ ಪುಸ್ತಕವು ಪ್ರತಿಯೊಂದು ಕುಟುಂಬದಲ್ಲೂ ಇರಲೇಬೇಕೆಂದು ಶಿಫಾರಸ್ಸು ಮಾಡಿದ್ದಾರೆ.
1809ರಲ್ಲಿ ರಾಸ್ಸುಂದರಿ ದೇವಿ ಪೂರ್ವ ಬಂಗಾಳದ ಪಾಬ್ನಾ ಜಿಲ್ಲೆಯ ಪೋಟಜಿಯಾ ಹಳ್ಳಿಯಲ್ಲಿ (ಈಗ ಅದು ಬಾಂಗ್ಲಾದೇಶದಲ್ಲಿದೆ) ಜನಿಸಿದಳು. ಅವಳ ಬದುಕಿನಲ್ಲಿ ತಂದೆಯನ್ನು ತುಂಬ ಬೇಗ ಕಳೆದುಕೊಂಡದ್ದರಿಂದ ತನ್ನನ್ನು ತಾಯಿಯ ಮಗಳು ಎಂದೇ ಭಾವಿಸಿದ್ದಳು. ಅವಳನ್ನು ಅವಳ ತಂದೆಯ ಮಗಳೆಂದು ಯಾರೋ ಕರೆದಾಗ, ಎಷ್ಟೊಂದು ವ್ಯಾಕುಲಗೊಂಡಿದ್ದಳು ಎಂದು ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾಳೆ. ಅವಳ ಅಸ್ಮಿತೆಯನ್ನು ಸತತವಾಗಿ ಹೆಚ್ಚು ದೃಢವಾಗಿ ಎಂತಹ ಪ್ರತಿಕೂಲ ಸಂದರ್ಭದಲ್ಲೂ ವ್ಯಕ್ತಪಡಿಸಿರುವುದೇ ಅವಳ ಈ ಕಥನದ ಮುಖ್ಯ ಲಕ್ಷಣ. ಬಾಲ್ಯದಲ್ಲಿ ಅವಳು ಮಹಾ ಪುಕ್ಕಲು ಹುಡುಗಿ. ಹೆದರಿಕೆಯಾದಾಗ ಹೇಗೆ ಪ್ರಾರ್ಥನೆ ಮಾಡಬೇಕು, ಎಂಬುದನ್ನು ಅಮ್ಮ ಹೇಳಿಕೊಟ್ಟಿದ್ದಾಳೆ. ಚಿಕ್ಕವಳಿರುವಾಗ ಚಿಕ್ಕ ಪುಟ್ಟ ವಿಷಯಗಳಿಗೆಲ್ಲಾ ಅವಳು ಹೆದರುತ್ತಿರುತ್ತಾಳೆ. ಆಗ ಅವಳ ಅಮ್ಮ ಹೇಳಿಕೊಟ್ಟ ಅಭಯ ರಕ್ಷೆಯೆಂದರೆ ಆ ‘ದಯಾ ಮಾಧವ’ನನ್ನು ಪ್ರಾರ್ಥಿಸು, ಅವನು ನಿನ್ನನ್ನು ರಕ್ಷಿಸುತ್ತಾನೆ. ಅವಳು ಯಾವುದೇ ಮೂರ್ತಿಪೂಜೆಯನ್ನು ಮಾಡುವುದಿಲ್ಲ. ಸದಾ ದಯಾಮಾಧವ ಅವಳ ಕಣ್ಣಮುಂದೆ ಬರುತ್ತಾನೆ. ಅವನ ಧ್ಯಾನದಲ್ಲಿ ಅವಳು ತನ್ನೆಲ್ಲ ಬದುಕಿನ ಕಷ್ಟಗಳನ್ನು, ಜಂಜಡಗಳನ್ನು ಮರೆಯುತ್ತಾಳೆ. ಅವನ ಧ್ಯಾನದಲ್ಲಿಯೇ ಸಂಪೂರ್ಣ ಮೈಮರೆಯುತ್ತಾಳೆ.

ಅಂದಿನ ಸಂಪ್ರದಾಯದಂತೆ, ಅವಳನ್ನು ಹನ್ನೆರಡು ವರ್ಷಕ್ಕೆ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದಂದು “ನಾನು ನೇರವಾಗಿ ನನ್ನ ತಾಯಿಯ ತೋಳುಗಳೊಳಗೆ ಹುದುಗಿಕೊಂಡೆ. ಅಳುತ್ತಾ, ಅಮ್ಮಾ, ನನ್ನನ್ನು ಅಪರಿಚಿತನೊಬ್ಬನಿಗೆ ಏಕೆ ಕೊಟ್ಟುಬಿಟ್ಟೆ?” ಎಂದು ಅಳುತ್ತಾ ಗಂಡನ ಮನೆ ಸೇರುತ್ತಾಳೆ. ಫರೀದಾಪುರದ ರಾಮದಿಯಾ ಹಳ್ಳಿಯ ಶ್ರೀಮಂತ ಜಮೀನುದಾರ ಸೀತಾನಾಥ ರೇಯನ್ನು ಮದುವೆಯಾಗಿ ಆ ಕುಟುಂಬದ ಗೃಹಿಣಿಯಾದ ರಾಸ್ಸುಂದರಿ ದೇವಿಯು ಆರಂಭದಲ್ಲಿ ಅಂದಿನ ನವ ವಧುಗಳು ಎದುರಿಸಬೇಕಾದಂತಹ ಜರ್ಜರಿತ ಮನೆ ಕೆಲಸದ ಹೊರೆ ಮತ್ತು ಮೂದಲಿಕೆ- ಮುಂತಾದವನ್ನು ಎದುರಿಸಬೇಕಾಗಿ ಬರಲಿಲ್ಲ. ಅವಳ ಅತ್ತೆ ಅವಳನ್ನು ಅತ್ಯಂತ ಕರುಣೆಯಿಂದ ನಡೆಸಿಕೊಂಡರು. ಅವಳಿಗೆ ಹದಿನಾಲ್ಕು ವರ್ಷ ವಯಸ್ಸಾದಾಗ ಅವಳ ಅತ್ತೆ ತೀರಾ ಅನಾರೋಗ್ಯದಿಂದ ಹಾಸಿಗೆ ಹಿಡಿಯಬೇಕಾಗಿ ಬಂದು ಇಡೀ ದೊಡ್ಡ ಕುಟುಂಬದ ಜವಾಬ್ದಾರಿ ಅವಳ ಪುಟ್ಟ ಹೆಗಲ ಮೇಲೆ ಬೀಳುತ್ತದೆ. ಅದನ್ನು ಅವಳು ಒಂಟಿಯಾಗಿ ನಿಭಾಯಿಸಿದ ರೀತಿ ಮತ್ತು ಮನೆಗೆಲಸದ ಜಂಜಾಟದ ದೀರ್ಘ ವಿವರಣೆ ಅವಳ ಆತ್ಮಚರಿತ್ರೆಯಲ್ಲಿ ಸಿಕ್ಕುತ್ತದೆ. ಮಕ್ಕಳು ಹುಟ್ಟಿದ ಮೇಲಂತೂ ಹಗಲಿರುಳೆನ್ನದೆ ದುಡಿಯಬೇಕಾದ ಅವಳ ಕೆಲಸದ ಹೊರೆಯನ್ನು ಕುರಿತು ಬರೆಯುತ್ತಾಳೆ. ಅವಳ ಭಾಷೆಯಲ್ಲಿ ಹೇಳುವುದಾದರೆ ಗಂಡನ ಮನೆಯೆನ್ನುವುದು “ ದಾಸ್ಯ ಮತ್ತು ಸೆರೆಮನೆ”. ಪಂಜರದ ಪಕ್ಷಿ, ಬಲೆಯಲ್ಲಿ ಸಿಕ್ಕಿ ಬಿದ್ದ ಮೀನಿನಂತೆ ತನ್ನ ಸ್ಥಿತಿಯಾಗಿತ್ತು, ಎಂದು ಹೇಳುತ್ತಾಳೆ. ಆದರೆ ಸಾಯುತ್ತಾ ಮಲಗಿದ್ದರೂ ಅಮ್ಮನ ಬಳಿ ಹೋಗಲು ಇತರರು ಬಿಡುವುದಿಲ್ಲ, ಎಂಬ ಅಸಮಾಧಾನ ಅವಳಲ್ಲಿ ಮಡುಗಟ್ಟಿದೆ
ಅವಳೇನಾದರೂ ಗಂಡಸಾಗಿ ಹುಟ್ಟಿದ್ದರೆ, ಅಮ್ಮನಿಗೆ ಸೇವೆ ಮಾಡಬಹುದಾದ ಮೂಲಭೂತ ಕರ್ತವ್ಯವನ್ನು ಮಾಡಲು ಸಾಧ್ಯವಾಗುತ್ತಿತ್ತಲ್ಲ ಎಂದು ಮರುಗುತ್ತಾಳೆ. ಅವಳ ಕೌಟುಂಬಿಕ ಜೀವನದ ಕೌಶಲಗಳು ಒಂದು ತೂಕವಾದರೆ, ತನ್ನ ಬದುಕಿನ ನಡೆಯಲ್ಲಿ ಸದಾ ತನಗೆ ರಕ್ಷಕನಾಗಿ ಪೊರೆಯಬಲ್ಲ ದಯಾ ಮಾಧವನ ಸ್ಮರಣೆಯು ಅವಳ ಬದುಕನ್ನು ಮುನ್ನಡೆಸುತ್ತದೆ. ದೊಡ್ಡ ಕುಟುಂಬದ ಸೊಸೆಯಾದ ಅವಳ ಚಿತ್ರಣವನ್ನು ನವಿರಾಗಿ ಹೀಗೆ ಚಿತ್ರಿಸುತ್ತಾರೆ: ತಲೆಯ ಮೇಲಿನಿಂದ ಇಳಿಬಿದ್ದ ಅವಕುಂಠನ, ಸೇವಕರ ಮುಖವನ್ನೂ ನೋಡಕೂಡದು. ಅವರೊಡನೆ ಮಾತನಾಡಕೂಡದು. ಅವಳ ಪಾದಗಳು ಮಾತ್ರ ಅವಳಿಗೆ ಕಾಣಿಸುವಂತಿತ್ತು. ಅವಳ ಗೃಹಕೃತ್ಯದ ಹೊರೆಯ ಅಗಾಧತೆ ಯಾರನ್ನೂ ಬೆಚ್ಚಿಬೀಳಿಸುತ್ತದೆ. ಅವರ ಮನೆಯಲ್ಲಿ ಎಂಟು ಜನ ಸೇವಿಕೆಯರು ಇದ್ದರೂ ಅವರೆಲ್ಲಾ ಮನೆಯ ಹೊರಗಿನ ಕೆಲಸ ಮಾಡುವವರು. ಮನೆಯೊಳಗಿನ ಕೆಲಸಗಳು, ಅಡಿಗೆಮನೆಯ ಕೆಲಸವನ್ನು ಸಂಪೂರ್ಣವಾಗಿ ಅವಳೊಬ್ಬಳೇ ಮಾಡಬೇಕಿತ್ತು. ಮನೆಯಲ್ಲಿ ಅವಳಿಗಿಂತ ಚಿಕ್ಕವರಾದ ವಿಧವೆಯರಾಗಿದ್ದ ನಾದಿನಿಯರಿದ್ದರೂ ಕೆಲಸದ ಹೊರೆ ಇವಳೇ ಹೊರಬೇಕಿತ್ತು.ಇಪ್ಪತ್ತೈದು ಮಂದಿ ತಿನ್ನುವ ಬಾಯಿಗಳಿದ್ದರಿಂದ ಕೆಲವು ಬಾರಿ ಅವಳಿಗೇ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ನಸುಕಿನಲ್ಲಿ ಎದ್ದು ಕೆಲಸ ಆರಂಭಿಸಿದರೆ, ಮಧ್ಯರಾತ್ರಿಯವರೆಗೆ ಮುಗಿಯದ ಚಾಕರಿ. ಇದರ ಜೊತೆಗೆ ನಿಲ್ಲದ ಹೆರುವ ಕೆಲಸ.
ಅವಳ ಬಸಿರು ಮತ್ತು ಮಕ್ಕಳ ಹೆರಿಗೆಯಂಥ ವಿಷಯಗಳನ್ನು ಕುರಿತು ವಿವರವಾಗಿ ಬರೆಯುವುದು ಆಶ್ಚರ್ಯಕರವಾಗಿದೆ. ಅವಳಿಗೆ ಹದಿನೆಂಟು ವರ್ಷ ವಯಸ್ಸಾದಾಗ ಮೊದಲ ಬಾರಿ ಗರ್ಭಿಣಿಯಾದಾಗ ತನ್ನ ಹೊಟ್ಟೆಯಲ್ಲಿ ಮಗುವೊಂದು ಬೆಳೆಯುತ್ತಿದೆಯೆಂಬ ವಿಷಯವೇ ಅತ್ಯಂತ ಬೆರಗಿನ ವಿಷಯವೆನಿಸುತ್ತದೆ. ಮುಂದೆ ಅವಳಿಗೆ ನಲವತ್ತೊಂದು ವರ್ಷ ವಯಸ್ಸಾಗುವವರೆಗೂ ಇಪ್ಪತ್ತುಮೂರು ವರ್ಷಗಳ ಅವಧಿಯಲ್ಲಿ ಹದಿಮೂರು ಮಕ್ಕಳಿಗೆ ಜನ್ಮ ನೀಡುತ್ತಾಳೆ. ತನ್ನ ಅಸ್ಮಿತೆ ಕೇವಲ ಮಗು ಹೆರುವುದಕ್ಕೆ ಮಾತ್ರ ಸೀಮಿತವಾಯಿತಲ್ಲಾ, ಎಂದು ವಿಷಾದಿಸುತ್ತಾಳೆ.
ಈ ಕೆಲಸದ ಏಕತಾನತೆಯ ನಡುವೆ ಅವಳು ಓದು – ಬರೆಹ ಕಲಿಯಲು ಪ್ರಯಾಸಪಟ್ಟ ಘಟನೆಯನ್ನು ಓದಲು ಆಕರ್ಷಕವಾಗಿದೆ. “ನಾನು ಹೆಣ್ಣಾಗಿ ಹುಟ್ಟಿರುವುದರಿಂದ ಸ್ವತಂತ್ರವಾಗಿ ಓದುವುದೂ ಒಂದು ಅಪರಾಧವೇ?” ಎಂದು ಪ್ರಶ್ನಿಸುತ್ತಾಳೆ. ಅವಳು ಶಿಕ್ಷಣಕ್ಕಾಗಿ ಹಪಹಪಿಸುವ ರೀತಿ ಅಂದಿನ ಮಹಿಳೆಯರ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಅವಳ ಬಾಲ್ಯದಲ್ಲಿ ಅವಳಿಗೆ ಶಿಕ್ಷಣ ಪಡೆಯುವ ಅವಕಾಶವೇ ಸಿಕ್ಕುವುದಿಲ್ಲ. ಸಿಕ್ಕ ಗೃಹಿಣಿಯ ಮನೆವಾಳ್ತನಕ್ಕೆ ಏನು ಬೇಕೋ ಅದನ್ನು ಚೆನ್ನಾಗಿ ಕಲಿತುಕೊಳ್ಳುತ್ತಾಳೆ. ಆದರೆ ‘ಚೈತನ್ಯ ಭಾಗವತ’ವನ್ನು ಓದಬೇಕೆಂಬ ಹಂಬಲ ಅವಳಲ್ಲಿ ಬೃಹದಾಕಾರವಾಗಿ ಬೆಳೆಯುತ್ತದೆ. ಅವಳ ಈ ಧರ್ಮದ ಹುಡುಕಾಟವೇ ಅವಳಿಗೆ ಕಲಿಯಬೇಕೆಂಬ ಆಸೆಗೆ ನೀರೆರೆಯುತ್ತದೆ. ಅವಳು ನಂಬುವ ಧರ್ಮ ಶಾಸ್ತ್ರ, ಸಂಪ್ರದಾಯ, ವಿಧಿವಿಧಾನಗಳಿಂದ ಸುತ್ತುವರಿದ ಬಾಹ್ಯ ಆಚರಣೆಯಾಗಿರದೆ ಆಧ್ಯಾತ್ಮಕ ನೆಲೆಯದಾಗಿರುತ್ತದೆ. ಅವಳಿಗೆ ವಿದ್ಯೆ ಕಲಿಯುವುದು ಕತೆ, ಕಾದಂಬರಿ, ವರ್ತಮಾನ ತಿಳಿಯುವುದಕ್ಕಾಗಿ ಅಲ್ಲ, ಆದರೆ ತಾನು ನೆಚ್ಚಿರುವ ಚೈತನ್ಯ ಭಾಗವತವನ್ನು ಓದಿ ಅರ್ಥಮಾಡಿಕೊಳ್ಳಬೇಕು.

ಮಸಿ ಹಿಡಿದ ಅಡುಗೆ ಮನೆಯಲ್ಲಿ ಇದ್ದಿಲಿನಿಂದ ಗುಟ್ಟಾಗಿ ಅಕ್ಷರಗಳನ್ನು ತಿದ್ದುತ್ತಾ ಕಲಿಕೆಯನ್ನೂ ಆರಂಭಿಸುವ ಅವಳ ಉತ್ಸಾಹ ಮನಸ್ಸು ತಟ್ಟುತ್ತದೆ. ಕಲಿಕೆಯೆಂಬ ಪ್ರಬಲವಾದ ಆಸೆ ಅವಳಲ್ಲಿ ಹುಟ್ಟಿದ್ದಕ್ಕೆ ಅವಳನ್ನೇ ಅವಳು ನಿಂದಿಸಿಕೊಳ್ಳುತ್ತಾಳೆ. “ನನ್ನ ದಿನ ಮುಂಜಾನೆಯೇ ಆರಂಭವಾಗುತ್ತಿತ್ತು. ರಾತ್ರಿ ಎರಡು ಗಂಟೆಯವರೆಗೂ ನನ್ನ ಕೆಲಸ ನಡೆದಿರುತ್ತಿತ್ತು. ನನಗಾಗ ಹದಿನಾಲ್ಕು ವರ್ಷ. ನನಗೋ ಪುಸ್ತಕವನ್ನು ಓದಬೇಕೆಂಬ ಹುಚ್ಚು. ಆದರೆ ನಾನು ನತದೃಷ್ಟಳು. ಆ ದಿನಗಳಲ್ಲಿ ಹೆಣ್ಣುಮಕ್ಕಳು ಓದುವಂತಿರಲಿಲ್ಲ.” ಹೀಗಿರುವಾಗ ಅವಳು ಓದುವುದು ಹೇಗೆ ಎಂಬುದು ಅವಳನ್ನು ಸದಾ ಕಾಡುವ ಪ್ರಶ್ನೆ. ಅದಕ್ಕಾಗಿ ಅವಳು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ದೂಷಿಸುತ್ತಾಳೆ. ಅವಳ ಯೋಚನಾ ಲಹರಿ ಹೀಗೆ ಸಾಗುತ್ತದೆ: ಹೆಣ್ಣುಮಕ್ಕಳನ್ನು ಕಲಿಕೆಯಿಂದ ದೂರವಿಟ್ಟಿರುವ ಜನ ಸಾಧಿಸುವುದಾದರೂ ಏನು? ಹೆಣ್ಣನ್ನು ಪ್ರಾಣಿಗಳಂತೆ ಭಾವಿಸುತ್ತಾರೆ. ವಯಸ್ಸಾದ ಹಿರಿಯ ಹೆಂಗಸರೂ ಕೂಡ ಹೆಣ್ಣುಮಕ್ಕಳ ಕೈಯಲ್ಲಿ ಕಾಗದವಿರುವುದನ್ನು ಕಂಡರೆ ಅಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಈ ಎಲ್ಲ ವಿಷಯಗಳನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಪುಟ್ಟ ಮಗುವಾಗಿದ್ದಾಗ ಪ್ರೈಮರಿ ಶಾಲೆಯಲ್ಲಿ ಮಕ್ಕಳು ಶ್ಲೋಕಗಳನ್ನು ಹೇಳುತ್ತಿದ್ದರೆ, ಅದನ್ನು ಕೇಳಿಸಿಕೊಳ್ಳುತ್ತಿದ್ದೆ. ಅಲ್ಲಿ ಅವರು ಹೇಳುತ್ತಿದ್ದ ವರ್ಣಮಾಲೆಯ ಮೂವತ್ತು ಅಕ್ಷರಗಳನ್ನು ಮತ್ತು ಸ್ವರಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಅವುಗಳನ್ನು ಸ್ವಲ್ಪ ಗುರುತಿಸಬಲ್ಲೆನಾದರೂ ನನಗೆ ಬರೆಯುವುದಕ್ಕೆ ಖಂಡಿತ ಬರುವುದಿಲ್ಲ. ಗುರು ಇಲ್ಲದಿದ್ದರೆ ಪಾಠ ಕಲಿಯುವುದು ಹೇಗೆ ಸಾಧ್ಯ? ನಾನು ಹೆಣ್ಣು, ಅದರಲ್ಲೂ ಗೃಹಿಣಿ. ಯಾರೊಡನೆಯೂ ಮಾತನಾಡಕೂಡದು. ದೇವರು ಮಾತ್ರ ನನಗೆ ಸಹಾಯ ಮಾಡಬಲ್ಲ. ಅವನಲ್ಲಿ ಮೊರೆಯಿಟ್ಟೆ. ‘ಚೈತನ್ಯ ಭಾಗವತ’ವನ್ನು ನಾನು ಓದುತ್ತಿರುವಂತೆ ಕನಸು ಕಂಡೆ.
ನಮ್ಮ ಮನೆಯಲ್ಲಿ ತುಂಬ ಪುಸ್ತಕಗಳಿದ್ದವು. ಅದರಲ್ಲಿ ಚೈತನ್ಯ ಭಾಗವತವೂ ಇದ್ದಿರಬಹುದು. ಇದ್ದರೇನು? ನನ್ನಂತಹ ಅನಕ್ಷರಸ್ಥೆ ಅದನ್ನು ಓದಲು ಸಾಧ್ಯವೇ? ಮತ್ತೆ ದೇವನಲ್ಲಿ ಮೊರೆಯಿಟ್ಟೆ. ಒಂದು ದಿನ ನನ್ನ ಗಂಡ ನನ್ನ ಎಂಟು ವರ್ಷದ ಮಗ ಬಿಪಿನ್‍ಗೆ ಹೇಳಿದ: ಇಲ್ಲಿ ಚೈತನ್ಯ ಭಾಗವತವನ್ನು ಇಟ್ಟಿದ್ದೇನೆ. ನಾನು ಕೇಳಿದಾಗ ನೀನು ಇದನ್ನು ನನಗಾಗಿ ತೆಗೆದುಕೊಂಡು ಬಾ, ಎಂದು ಹೇಳಿದ. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಇದು ಕೇಳಿಸಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಯ್ತು. ದೇವರೇ ನನ್ನ ಬಯಕೆಯನ್ನು ಈಡೇರಿಸಿದ ಎಂದುಕೊಂಡೆ. ಕೂಡಲೇ ಪುಸ್ತಕವಿದ್ದಲ್ಲಿಗೆ ಓಡಿದೆ. ಆಗ ಪುಸ್ತಕಗಳನ್ನು ಮಾಡುತ್ತಿದ್ದ ರೀತಿಯೇ ಬೇರೆ ರೀತಿಯಿತ್ತು. ಮರದ ಚೌಕಟ್ಟಿನಲ್ಲಿ ಬಿಡಿ ಹಾಳೆಗಳನ್ನು ಕೂಡಿಸಿರುತ್ತಿದ್ದರು. ಆ ಚೌಕಟ್ಟುಗಳಲ್ಲಿ ಚಿತ್ರಗಳಿರುತ್ತಿದ್ದವು. ಓದಲು ಬಾರದ ನಾನು ಚಿತ್ರಗಳನ್ನು ಗುರುತಿಟ್ಟುಕೊಳ್ಳುತ್ತಿದ್ದೆ. ಆ ಪುಸ್ತಕವನ್ನು ಎತ್ತಿಕೊಂಡು ಕೋಣೆಯೊಳಗೆ ಹೋದೆ. ಆ ಪುಸ್ತಕದಿಂದ ಒಂದು ಹಾಳೆಯನ್ನು ಕಿತ್ತು ತೆಗೆದೆ. ಈ ವಿಷಯ ಯಾರಿಗಾದರೂ ತಿಳಿದರೆ ನನ್ನ ಪರಿಸ್ಥಿತಿಯೇನಾಗಬಹುದು, ಎಂದು ಬೆದರಿ ಬಳಲಿದೆ. ಆದರೂ ಕಿತ್ತ ಆ ಒಂದು ಹಾಳೆಯನ್ನು ಅಡಿಗೆ ಮನೆಯ ಅಟ್ಟದಲ್ಲಿ ಗುಟ್ಟಾಗಿ ಬಚ್ಚಿಟ್ಟೆ. ಇಡೀ ದಿನ ಅಡಿಗೆಯ ಕೆಲಸ ಮಾಡುವುದೇ ಸಾಕಾಗುತ್ತಿತ್ತು. ಇದನ್ನೆಲ್ಲಾ ಮುಗಿಸಿದ ಮೇಲೆ ಮಕ್ಕಳು ಒಬ್ಬೊಬ್ಬರಾಗಿ ಎದ್ದು ಅವರ ವಿಧ ವಿಧದ ಬೇಕುಗಳನ್ನು ನನ್ನಿಂದ ಪೂರೈಸಿಕೊಳ್ಳುತ್ತಿದ್ದರು. ಅದೆಲ್ಲ ಮುಗಿಸುವ ಹೊತ್ತಿಗೆ ನನಗೇ ನಿದ್ದೆ ಬರುತ್ತಿತ್ತು. ಹೀಗಿರುವಾಗ ನನಗೆ ನಿದ್ದೆಗೆ ಸಮಯವಾದರೂ ಎಲ್ಲಿದೆ? ಯಾವುದೇ ದಾರಿಯೂ ನನ್ನ ಕಣ್ಣ ಮುಂದೆ ತೋರಲಿಲ್ಲ. ಕೆಲವು ಅಕ್ಷರಗಳನ್ನು ಮಾತ್ರ ಗುರುತಿಸಬಲ್ಲವಳಾಗಿದ್ದೆ. ಆದರೆ ಅವುಗಳನ್ನು ಬರೆಯುವುದಂತೂ ಸಾಧ್ಯವೇ ಇರಲಿಲ್ಲ. ನಾನು ಕಿತ್ತು ತಂದ ಹಾಳೆಯನ್ನು ಓದುವುದಾದರೂ ಹೇಗೆ ಎನ್ನುವುದೇ ಭಾರಿ ಸಮಸ್ಯೆಯಾಯಿತು. ಯಾವ ದಾರಿಯೂ ಕಾಣದಾಗ ದೇವನಲ್ಲಿ ಮೊರೆಯಿಟ್ಟೆ. ನನ್ನ ಮಗ ಕೈಬರೆಹವನ್ನು ತಿದ್ದುತ್ತಾ ಅಭ್ಯಾಸ ಮಾಡುವ ತಾಳೆ ಎಲೆಯಲ್ಲಿ ಒಂದನ್ನು ಎತ್ತಿಕೊಂಡೆ. ನನ್ನ ಬಳಿಯಿದ್ದ ಹಾಳೆಯಲ್ಲಿನ ಅಕ್ಷರವನ್ನು ನೋಡುತ್ತಾ ತಿದ್ದಲು ಆರಂಭಿಸಿದೆ. ಒಮ್ಮೆ ಹಾಗೆ ತಿದ್ದಿದ ಹಾಳೆ ಮುಗಿದ ಮೇಲೆ ಅದನ್ನು ಆ ಪುಸ್ತಕದಲ್ಲಿಟ್ಟು ಮತ್ತೊಂದು ಹಾಳೆಯನ್ನು ತೆಗೆದುಕೊಳ್ಳುತ್ತಿದ್ದೆ. ಆದರೂ ಬರೆಯುವುದು ನನಗೆ ಬಹಳ ಕಷ್ಟವಾಯಿತು. ಬೇಸರವಾಗಿ ಬರೆಯುವುದನ್ನು ಪಕ್ಕಕ್ಕಿಟ್ಟು ಓದುವುದನ್ನು ಕಲಿಯಲು ಪ್ರಯತ್ನಿಸಿದೆ. ನನಗೆ ಇಪ್ಪತ್ತೈದು ವರ್ಷ ವಯಸ್ಸಾಗುವ ವೇಳೆಗೆ ಸ್ವಲ್ಪ ಓದಲು ಮತ್ತು ಬರೆಯುವುದನ್ನು ಗುಟ್ಟಾಗಿ ಕಲಿತೆ.
ಅಮಾರ್ ಜಿಬನ್ ಎರಡು ಭಾಗಗಳಲ್ಲಿ ಬರೆಯಲಾಗಿದೆ. 1876ರಲ್ಲಿ ಪ್ರಕಟವಾದ ಮೊದಲ ಭಾಗದಲ್ಲಿ ಹದಿನಾರು ಅಧ್ಯಾಯಗಳಿವೆ. ಎರಡನೆಯ ಭಾಗವು 1906ರಲ್ಲಿ ಪ್ರಕಟವಾಯಿತು. ಪ್ರತಿಯೊಂದು ಅಧ್ಯಾಯವು ಒಂದು ಪದ್ಯದಿಂದ ಆರಂಭವಾಗುತ್ತದೆ. ಮೊದಲ ಅಧ್ಯಾಯದಲ್ಲಿನ ಪದ್ಯಗಳು ದೀರ್ಘವಾಗಿವೆ. ಬಂಗಾಳಿ ಸಮಾಜ ಹೆಣ್ಣನ್ನು ಹೇಗೆ ನೋಡುತ್ತಿತ್ತು, ಎಂಬುದರ ವಸ್ತುನಿಷ್ಠ ಚಿತ್ರಣ ಈ ಬರಹದಲ್ಲಿ ಕಾಣಬಹುದು. ಕೃತಿಯ ಆರಂಭದಲ್ಲಿ ಒಂದು ಶ್ಲೋಕ ಗೀತೆಯಿದೆ.
ಆರಂಭದ ಪ್ರಾರ್ಥನಾ ಗೀತೆ
ತಾಯಿ ಸರಸ್ವತಿಗೆ ನನ್ನ ನಮನ.
ಶಕ್ತಿ ಮತ್ತು ಯುಕ್ತಿಯ ಫಲದಾಯಿ
ಬಾಗುವುವು ನಿನ್ನ ಆಣತಿಗೆ ಈ ಜಗದ ಎಲ್ಲ ಚರಾಚರಗಳು
ನನಗೆ ದಯೆತೋರಿಸು ಹೇ ತಾಯೆ.
ನನ್ನ ಹೃದಯ ಕಮಲದಲ್ಲಿ ಬಂದು ವಾಸಿಸು.
ನನ್ನ ಸಾಮರ್ಥ್ಯವಿರುವಷ್ಟು ನಾನು ಆರಾಧಿಸುವೆ
ನಾನೋ ನಿನ್ನ ಅಸೂಕ್ಷ್ಮ, ದುರ್ಬಲ ಪುತ್ರಿ
ನನ್ನ ಆಸೆಯು ಕೈಗೂಡಲು ನಿನ್ನ ದಯೆ ತೋರು ಬಾ
ಪೂಜಿಸುವೆ, ಆರಾಧಿಸುವೆ.
ನಿನ್ನ ಪ್ರಾಣಕಾಂತನ ಜೊತೆಗೆ ನನ್ನ ಕಂಠದಲ್ಲಿ ಬಂದು ನೆಲೆಯೂರಮ್ಮ.
ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ, ಅವರ ಗಂಡಂದಿರ ಆಯಸ್ಸು ಕ್ಷೀಣಿಸುತ್ತದೆ. ಅವರು ವಿಧವೆಯರಾಗುತ್ತಾರೆ, ಎಂಬ ಬಲವಾದ ನಂಬಿಕೆಯು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಸ್ಸುಂದರಿದೇವಿ ಕಲಿಯಲು ಮುಂದಾಗುತ್ತಾಳೆ. ಅಡಿಗೆ ಮಾಡುತ್ತಾ, ಮನೆಯ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಅಡಿಗೆ ಮನೆಯ ಒಂದು ಮೂಲೆಯಲ್ಲಿ ಮಸಿ ಹಿಡಿದು ಕಪ್ಪಾದ ಗೋಡೆಯ ಮೇಲೆ ಗುಟ್ಟಾಗಿ ವರ್ಣಮಾಲೆಯನ್ನು ತಿದ್ದುತ್ತಾ ಬರಹವನ್ನು ಕಲಿಯುವ ಇವಳಿಗೆ ಎಲ್ಲ ದೇವರಿಗಿಂತ ವಿದ್ಯಾಧಿದೇವತೆ ಸರಸ್ವತಿಯ ಕೃಪೆ ಬೇಕೆನಿಸಿದ್ದು ಸಹಜವಾಗಿದೆ. ಇಪ್ಪತ್ತೈದು ವರ್ಷಕ್ಕೆ ಓದಲು ಕಲಿಯಲಾರಂಭಿಸಿದಾಗ “ಅದೇನೋ ಆ ಭಗವಂತನೇ ಓದಲು ಕಲಿಸಿದ. ನನಗೆ ಅಷ್ಟೂ ಓದಲು ಬಂದಿರದಿದ್ದರೆ, ನಾನು ಇತರರ ಮೇಲೆ ಅವಲಂಬಿತಳಾಗಿರಬೇಕಿತ್ತು …” ಎನ್ನುತ್ತಾಳೆ.
ಅವಳು ತನ್ನ ಗಂಡನ ಬಗ್ಗೆ ಇಲ್ಲಿ ಬರೆಯುವುದು ಸ್ವಲ್ಪ ಕಡಿಮೆಯೇ. ಆದರೆ ಅವಳ ಕಾಲಕ್ಕೆ ಸ್ವಲ್ಪ ಅಪರೂಪವೆನಿಸುವಂತೆ ತನ್ನ ಗಂಡನ ರೂಪವನ್ನು ಕುರಿತು ಬರೆಯುತ್ತಾಳೆ (ಹದಿನೈದನೇ ಅಧ್ಯಾಯದಲ್ಲಿ). ಅವಳ ಪತಿ 1869ರಲ್ಲಿ ಗತಿಸಿದಾಗ ಅವಳು ಅಂದಿನ ದರಿದ್ರ ಸಾಮಾಜಿಕ ಕಟ್ಟಲೆಯ ಅನುಗುಣವಾಗಿ ತನ್ನ ತಲೆಯ ಕೂದಲನ್ನು ತೆಗೆಸಿಕೊಳ್ಳಬೇಕಾಗುತ್ತದೆ. “ಸಾವಿಗಿಂತಲೂ ಹೆಚ್ಚಿನ ನೋವಿನ ಸಂಗತಿ” ಎಂದು ಅದನ್ನು ಕುರಿತು ಪ್ರತಿಕ್ರಿಯಿಸುತ್ತಾಳೆ. ಯಾವಾಗಲೂ ಅವಳು ತನ್ನ ವೈಯಕ್ತಿಕ ಕಷ್ಟಗಳ ನೆಲೆಯಲ್ಲೇ ಇತರರ ನೋವನ್ನು ಅರಿಯುತ್ತಿದ್ದಳು. “ನನ್ನ ಬದುಕನ್ನು ಪೂರ್ಣವಾಗಿ ಬದುಕಿದ್ದೇನೆ. ನನ್ನ ಮಕ್ಕಳನ್ನು ಸಾಕಿ, ಅವರು ಸ್ವತಂತ್ರವಾಗಿ ಅವರ ಜೀವನವನ್ನು ಮುಂದಕ್ಕೊಯ್ಯುವಂತೆ ಮಾಡಿದ್ದೇನೆ. ಇಷ್ಟಾದರೂ ನನ್ನ ದೀರ್ಘ ಬದುಕಿನ ಕೊನೆಯಲ್ಲಿ ವಿಧವೆಯಾದ ನನ್ನನ್ನು ʼನತದೃಷ್ಟೆʼ ಎಂದು ಕರೆಯುವುದರ ಬಗ್ಗೆ ನನಗೆ ನೋವು ಮತ್ತು ನಾಚಿಕೆಯಾಗುತ್ತದೆ” ಎಂದು ಹೇಳುತ್ತಾಳೆ.
ರಾಸ್ಸುಂದರಿ ದೇವಿಯ ಈ ಆತ್ಮಚರಿತ್ರೆ ಭಾರತದ ಒಂದು ನಿರ್ದಿಷ್ಟ ಪ್ರಾಂತ್ಯದ, ನಿರ್ದಿಷ್ಟ ಜಾತಿ, ವರ್ಗಕ್ಕೆ ಸೇರಿದ ಹೆಣ್ಣಿನ ಜೀವನ ಚರಿತ್ರೆಯಾದರೂ ಚಾರಿತ್ರಿಕ ಕಾರಣಕ್ಕಾಗಿ ಬಹಳ ಮುಖ್ಯವಾದದ್ದು. ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ಹುಟ್ಟಿಕೊಂಡ ರಾಷ್ಟ್ರೀಯತಾವಾದಿ ಮತ್ತು ಸುಧಾರಣಾವಾದಿ ಚಳವಳಿಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದ ಸ್ತ್ರೀ ಶಿಕ್ಷಣ ಮತ್ತು ಮಹಿಳೆಯರ ಬರಹಗಳ ಹಿನ್ನೆಲೆಯಲ್ಲಿ ಈ ಕೃತಿಯ ಪ್ರಾಮುಖ್ಯತೆಯನ್ನು ನೋಡಬೇಕು. ಆಧುನಿಕ ಮಹಿಳಾ ಬರಹಗಳ ಪ್ರತಿನಿಧಿಯಾಗಿ ಮತ್ತು ಆತ್ಮಚರಿತ್ರೆಯ ಶೈಲಿಗೆ ನಾಂದಿ ಹಾಡಿದ ಇಂತಹ ಬರಹಗಳು ಸಾಂಸ್ಕೃತಿಕವಾಗಿಯೂ ಮಹತ್ವದ ಸ್ಥಾನ ಪಡೆಯುತ್ತವೆ.
ಇದನ್ನೂ ಓದಿ : ಹೊಸ ಅಂಕಣಗಳು ನುಡಿಯಂಗಳ | ಉಚ್ಚಾರಣೆ ಎಂದರೆ ಸಾಲದೇ! ಉಚ್ಛಾರಣೆ ಎನ್ನಬೇಕೇ?
ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!
ಕುದಿ ಕಡಲು | ಕನ್ನಡ ಅಸ್ಮಿತೆಯ ಪ್ರಶ್ನೆ
ವಚನಯಾನ | ಕಲ್ಲು ದೇವರ ಪೂಜಿಸುವ ಕತ್ತೆಗಳು
ಸುತ್ತಾಟ | ಸಾರಮತಿಯ ಹಾದಿಯಲ್ಲಿ ಜೀವನ ಪಾಠ!
ಹುಡುಕಾಟ | ‘ಸುಳ್ಳು ಕಾರಣಗಳನ್ನು ಬಿಡೋಣ, ಸತ್ಯವನ್ನು ಒಪ್ಪಿಕೊಳ್ಳೋಣ’
ರಾಯಭಾರ | ಡಿಕೆ ಸಾಹೇಬರ ‘ಮಿಷನ್ ಚೀಫ್ ಮಿನಿಸ್ಟರ್’ ಎಂಬ ಯೋಜನೆ ‘ಗಾಳಿ ತೆಗೆಯುವ ಕಾರ್ಯಕ್ರಮ’ವಾದ ಪರಿ!

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).