“ಇಲ್ಲೀವರೆಗೂ ನಾವುಗಳು ಆಕಡೆ ಪೊಲೀಸಿನ ಟೋಪಿ ಕಂಡರೆ ಈಕಡೆ ಗಲ್ಲಿ ಬಿದ್ದು ತಲೆ ಮರೆಸಿಕೊಳ್ಳುತ್ತಿದ್ದೆವು. ಈಗ ನಮಗೆ ಪೊಲೀಸರ ಮತ್ತು ಲಾಠಿಯ ಅಂಜಿಕೆ ಪೂರ್ತಿ ಹೊರಟುಹೋಗಿದೆ. ಅಷ್ಟೇ ಅಲ್ಲ, ರಾಜಕಾರಣಿಗಳನ್ನು ಕುರಿತ ಭಯಭಕ್ತಿಗಳೂ ಬಹಳ ಕಮ್ಮಿಯಾಗಿವೆ. ಬದಲಿಗೆ ಅವರನ್ನು ಎದುರಿಸಿ, ಮೇಜು ಕುಟ್ಟಿ, ʻಕೆಲಸ ಮಾಡಿಕೊಡಿʼ ಎಂದು ಘಟ್ಟಿಸಿ ಕೇಳುವ ಛಾತಿ ಬಂದಿದೆ” ಎಂದು ರೈತರು ಹೇಳತೊಡಗಿದರು.
(ಮೊದಲಿನ 4 ಭಾಗಗಳಲ್ಲಿ: 1990ರ ದಶಕದ ಆರಂಭದಲ್ಲಿ ಬೀದರ್ ನಗರಕ್ಕೆ ಕೇವಲ 7 ಕಿ.ಮೀ. ಸಮೀಪದಲ್ಲಿ 1760 ಎಕರೆ ವಿಸ್ತೀರ್ಣದ ʻಕೊಳ್ಹಾರ ಕೈಗಾರಿಕಾ ಪ್ರದೇಶʼದಲ್ಲಿ ಹತ್ತಾರು ರಾಸಾಯನಿಕ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಅವುಗಳ ನಿರಂತರ ಮಾಲಿನ್ಯದಿಂದಾಗಿ ಸುತ್ತಲಿನ ಎಂಟು-ಹತ್ತು ಹಳ್ಳಿಗಳಲ್ಲಿ ವ್ಯಾಪಕ ವಿನಾಶ ಉಂಟಾಗತೊಡಗಿತು. ʻಕರ್ನಾಟಕ ವಿಮೋಚನಾ ರಂಗʼವು ಮಾಲಿನ್ಯದ ವಿರುದ್ಧದ ರೈತರ ಹೋರಾಟಕ್ಕೆ ಮುಂದಾಳತ್ವ ವಹಿಸಿತು. ಸಮಸ್ಯೆ ಪರಿಹರಿಸಲು ಒತ್ತಾಯಿಸಿ 1994ರ ಫೆಬ್ರವರಿ 27ರಂದು ದೊಡ್ಡ ಪ್ರತಿಭಟನೆಯೊಂದಿಗೆ ಸುದೀರ್ಘ ಹೋರಾಟ ಆರಂಭವಾಯಿತು. ಅನೇಕ ಸುತ್ತಿನ ಪ್ರತಿಭಟನೆಗಳು, ಜಂಟಿ ಸಭೆಗಳ ನಂತರವೂ ಕಂಪನಿಗಳು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಪಾರ ಸಂಖ್ಯೆಯಲ್ಲಿ ಜಾನುವಾರುಗಳ ಸಾವು, ಬೆಳೆ ನಾಶ ಮುಂದುವರಿಯಿತು. 1995ರ ಅಕ್ಟೋಬರ್ 10ರಂದು ಶಾಂತಿಯುತವಾಗಿದ್ದ ಬೃಹತ್ ಪ್ರತಿಭಟನೆಯ ಮೇಲೆ ಪೊಲೀಸರು ವಿನಾಕಾರಣ ಭಾರೀ ದೌರ್ಜನ್ಯ ಎಸಗಿದರು. ಅದರ ಫಲವಾಗಿ ಪ್ರತಿಭಟನೆ ತೀವ್ರಗೊಂಡು, ಕೊನೆಗೆ ಕಾರ್ಖಾನೆಗಳನ್ನು ಶಾಶ್ವತವಾಗಿ ಬಂದ್ ಮಾಡುವ ಹಂತಕ್ಕೆ ಬಂದಾಗ, ಕೊಳಾರದಲ್ಲಿ ಮಾಲಿನ್ಯದ ಸಾಮೂಹಿಕ ಶುದ್ಧೀಕರಣ ಘಟಕ ಸ್ಥಾಪಿಸುವುದಾಗಿಯೂ, ಸದ್ಯಕ್ಕೆ ತ್ಯಾಜ್ಯವನ್ನು ಟ್ಯಾಂಕರ್‌ಗಳಲ್ಲಿ ಪಟ್ಟಂಚೆರುವು ಶುದ್ಧೀಕರಣ ಘಟಕಕ್ಕೆ ಸಾಗಿಸುವುದಾಗಿಯೂ ಕಂಪನಿಗಳು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡವು. ಆದರೆ ಕ್ರಮೇಣ ಟ್ಯಾಂಕರ್ ಗುತ್ತಿಗೆದಾರರು ನೀರನ್ನು ರಾತ್ರಿ ಹೊತ್ತಿನಲ್ಲಿ ಬೀದರ್ ಮತ್ತು ಕೊಳಾರ ಪ್ರದೇಶದ ಸುತ್ತಮುತ್ತಲಲ್ಲೇ ಕಾಲುವೆಗಳಲ್ಲಿ, ಕೆರೆಯ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಚೆಲ್ಲಲು ಶುರು ಮಾಡಿದರು) ಮುಂದೆ ಓದಿ:
ಟ್ಯಾಂಕರ್‌ಗಳ ವಿರುದ್ಧ ಆಕ್ರೋಶ
ಟ್ಯಾಂಕರ್ ಗುತ್ತಿಗೆದಾರರು ತ್ಯಾಜ್ಯವನ್ನು ಕೊಳಾರದ ಸುತ್ತಮುತ್ತಲಲ್ಲೇ ಎಲ್ಲೆಂದರಲ್ಲಿ ಚೆಲ್ಲಲು ಶುರು ಮಾಡಿದ್ದು ಇನ್ನೊಂದು ರೀತಿಯ ಸಮಸ್ಯೆಗೆ ಮತ್ತು ಹೋರಾಟಕ್ಕೆ ದಾರಿ ಮಾಡಿತು. ಹಳ್ಳಿಗಳಲ್ಲಿ ಯುವಕರು ರಾತ್ರಿ ಗಸ್ತು ತಿರುಗತೊಡಗಿದರು. ಬಯಲಿನಲ್ಲಿ ಎಲ್ಲಾದರೂ ಮಾಲಿನ್ಯದ ಟ್ಯಾಂಕರ್ ಕಂಡರೆ ಸಾಕು, ಅದಕ್ಕೆ ಮುತ್ತಿಗೆ ಹಾಕಿ ಗಾಜುಗಳನ್ನು ಪುಡಿ ಮಾಡಿ, ಪೊಲೀಸರನ್ನು ಬರಮಾಡಿಕೊಂಡು ಅವರಿಗೆ ಹಿಡಿದುಕೊಡುತ್ತಿದ್ದರು. ಈ ಕಣ್ಣುಮುಚ್ಚಾಲೆ ನಾಲ್ಕಾರು ತಿಂಗಳಿಗೂ ಹೆಚ್ಚು ಕಾಲ ನಡೆಯಿತು. ನಡುನಡುವೆ ದಿಡೀರಾಗಿ ಒಂದಷ್ಟು ಜನ ರೈತರು, ಯುವಕರು ಎಜಿಐಪಿಐ ಅಥವಾ ಸೋಲ್ ಕಾರಖಾನೆಗೆ ನುಗ್ಗಿ, ಅಲ್ಲಿನ ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ರಾತ್ರಿಯ ಹೊತ್ತು ಕಂಪನಿಗಳ ಹೊರ ಸುತ್ತಿನ ಲೈಟುಗಳನ್ನು ಒಡೆದುಹಾಕುವುದು ಇಂತಹ ಪ್ರತೀಕಾರದ ದಾಳಿಗಳೂ ನಡೆದವು. ಆಗಿನ್ನೂ ಸಿಸಿಟಿವಿ ಕ್ಯಾಮರಗಳು ಬಂದಿರಲಿಲ್ಲ, ಹಾಗಾಗಿ ಪೊಲೀಸ್ ಕೇಸು ದಾಖಲಾಗುತ್ತಿರಲಿಲ್ಲ. ಇತ್ತ ಕಂಪನಿಗಳು ಸ್ಥಳೀಯರಿಗೆ ಖಾಯಂ ಉದ್ಯೋಗಗಳನ್ನೂ ಕೊಡಲಿಲ್ಲ. ಸಾಮೂಹಿಕ ಶುದ್ಧೀಕರಣ ಘಟಕವೂ ನಿರ್ಮಾಣವಾಗಲಿಲ್ಲ. ಎಲ್ಲವೂ ಪೊಳ್ಳು ಭರವಸೆಗಳಾಗಿಯೇ ಉಳಿದವು.
ಇಷ್ಟೇ ಸಾಲದೆಂಬಂತೆ, ಅದಾಗಲೇ ಜಾನುವಾರುಗಳ ನಿರಂತರ ಸಾವಿನಿಂದ ರೈತರು ಆಕ್ರೋಶಗೊಂಡಿದ್ದ ರೈತರಿಗೆ ಇಬ್ಬರು ಕಾರ್ಮಿಕರ ದಾರುಣ ಸಾವು ಬೆಂಕಿಗೆ ತುಪ್ಪ ಸುರಿದಂತಾಯಿತು. 1996ರ ಜನವರಿ 26ರಂದು ಶಿವಶಂಕರ್ ಎಂಬ ಕಾರ್ಮಿಕ ತ್ಯಾಜ್ಯದ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿದ್ದ. ಅದೇ ಜೂನ್ 29ರಂದು ಕೊಳಾರದ ಬಂಡೆಪ್ಪ ಎಂಬ ಯುವಕ ಆಕಸ್ಮಿಕವಾಗಿ ಬೆಂಜೀ಼ನ್ ಆವಿ ಸೇವಿಸಿ ಮೃತಪಟ್ಟಿದ್ದು ಹಳ್ಳಿಗರಲ್ಲಿ ವಿಪರೀತ ತಲ್ಲಣ ಹುಟ್ಟುಹಾಕಿತು. ಲಾ ಡಿಗ್ರಿ ಕೊನೆಯ ವರ್ಷದಲ್ಲಿ ಓದುತ್ತಿದ್ದ ಬಡ ಕುಟುಂಬದ ಬಂಡೆಪ್ಪ ಕಾಲೇಜು ಶುಲ್ಕ, ಪುಸ್ತಕಗಳಿಗಾಗಿ ಸ್ವಲ್ಪ ಸಂಪಾದನೆ ಮಾಡಲೆಂದು ಎಸ್ಓಎಲ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ. ಈಗ ʻಯೋಗ ವ್ಯಾಪಾರಿʼ ರಾಮ್ದೇವ್ ಮಾಡುವಂತೆ ಹೊಟ್ಟೆ ಪೂರ್ತಿ ಒಳಕ್ಕೆಳೆದು ಗರಗರ ತಿರುಗಿಸುವಷ್ಟು ಮಟ್ಟಿನ ಯೋಗ ಪಟುವಾಗಿದ್ದ. ಈ ಮೆದುಮಾತಿನ ಮಗು ಹೃದಯದ ಯುವಕ ಕೊಳಾರದಲ್ಲಿ ಮಾತ್ರವಲ್ಲ, ಅಕ್ಕಪಕ್ಕದ ಹಳ್ಳಿಗಳಲ್ಲೂ ದೊಡ್ಡವರು-ಚಿಕ್ಕವರೆಲ್ಲರ ಕಣ್ಮಣಿಯಾಗಿದ್ದ. ಕಾರ್ಖಾನೆಯವರು ಶಿವಶಂಕರನ ಸಾವಿಗೆ ಕಾರ್ಖಾನೆ ಕಾರಣವೆಂಬುದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ಬಂಡೆಪ್ಪ ಕೊಳಾರದವನೇ ಆಗಿದ್ದರಿಂದ, ಮಾಲೀಕರ ಜೊತೆ ಶಾಮೀಲಾಗಿದ್ದ ಮುಖಂಡರು ಮುಖ ಉಳಿಸಿಕೊಳ್ಳಲು ಅವನ ಕುಟುಂಬಕ್ಕೆ ಒಂದಷ್ಟು ಪರಿಹಾರ ಕೊಡಲೇಬೇಕಾಗಿತ್ತು. ಆದರೆ “ನನಗೆ ರೊಕ್ಕ ಬ್ಯಾಡ. ಕೈಗೆ ಬಂದಿದ್ದ ನನ್ನ ಕಳ್ಳ ಕುಡೀನ್ನ ತಂದ್ಕೊಡ್ರಿ …” ಎಂದು ಹಟ ಹಿಡಿದಿದ್ದ ಅವನ ತಾಯಿಯನ್ನು ಒಪ್ಪಿಸಲು ಅವರು ಹರಸಾಹಸ ಪಡಬೇಕಾಯಿತು. ಬಂಡೆಪ್ಪನ ದುರ್ಮರಣ ಸುತ್ತಲಿನ ಹಳ್ಳಿಗಳ ಎಲ್ಲ ತಾಯ್ತಂದೆಯರ ಪಾಲಿನ ಹಗಲಿರುಳಿನ ದುಃಸ್ವಪ್ನವಾಗಿ ಪರಿಣಮಿಸಿತು.
ಕೊನೇ ಪ್ರತಿಭಟನೆ – ಕಾರ್ಖಾನೆಗಳ ಚರಮಗೀತೆ
ಇದೆಲ್ಲದರಿಂದಾಗಿ ರೈತರಲ್ಲಿ ಮತ್ತೊಮ್ಮೆ ಅಸಹನೆ ಕಟ್ಟೆಯೊಡೆಯಿತು.1996ರ ಕೊನೆಯ ಹೊತ್ತಿಗೆ ರೈತರ ಮತ್ತು ಹಿತೈಷಿಗಳೆಲ್ಲರ ಅಪೇಕ್ಷೆಯಂತೆ ಅಂತಿಮ ಹೋರಾಟಕ್ಕೆ ಕರೆ ಕೊಡಲಾಯಿತು. ಆದರೆ ಈ ಬಾರಿಯ ಹೋರಾಟ ಮುಖ್ಯವಾಗಿ ಸರ್ಕಾರದ ವಂಚನೆ ಮತ್ತು ವೈಫಲ್ಯದ ವಿರುದ್ಧ ಇದ್ದುದರಿಂದ ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಮಾನವ ಸರಪಳಿ ಮತ್ತು ಬಹಿರಂಗ ಸಭೆ ನಡೆಸಲಾಯಿತು. ಜೆಪಿ ಜೊತೆಯಲ್ಲಿ ಸ್ವತಃ 71ರ ಇಳಿ ವಯಸ್ಸಿನ ಭೀಮಣ್ಣಾ ಖಂಡ್ರೆಯವರೂ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಕೋಟೆಯೊಳಗೂ ಸುತ್ತಾಡಿ, ಬಸವೇಶ್ವರ ವೃತ್ತದ ಮೂಲಕ ಮಹಾವೀರ್ ವೃತ್ತಕ್ಕೆ ಬಂದು, ಅಂಬೇಡ್ಕರ್ ವೃತ್ತ ಮತ್ತು ಮಹಾವೀರ್ ವೃತ್ತಗಳ ಮಧ್ಯೆ ಎರಡು ಸುತ್ತಿನ ಮಾನವ ಸರಪಳಿ ನಿರ್ಮಿಸಲಾಯಿತು. ಸುಮಾರು ಒಂದು ಸಾವಿರ ಜನ ಪಾಲ್ಗೊಂಡಿದ್ದ ಇದು ಸುಮಾರು ಒಂದು ಗಂಟೆ ಹೊತ್ತು ನಡೆಯಿತು. ಅಷ್ಟು ಹೊತ್ತೂ ಹೈದರಾಬಾದ್ ದಿಕ್ಕಿನ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ನಂತರ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು. ರಹಮತ್ ತರೀಕೆರೆಯವರನ್ನೂ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಕೊಳಾರದ ದಿಟ್ಟ ನಾಯಕಿ ಚಂದ್ರಮ್ಮಕ್ಕ ಮಾಡಿದ ಭಾಷಣ ಸರ್ಕಾರ ಮತ್ತು ಕಂಪನಿಗಳ ನಿಷ್ಕಾಳಜಿಯನ್ನು ತೊಳೆದು ಹರವಿತು. ಖಂಡ್ರೆಯವರು ʻಇಲ್ಲಿಂದ ಈ ಮಾಲಿನ್ಯದ ಕಾರ್ಖಾನೆಗಳು ತೊಲಗಲೇಬೇಕುʼ ಎಂದು ಸರ್ಕಾರಕ್ಕೆ ಖಡಕ್ಕಾಗಿ ತಾಕೀತು ಮಾಡಿದರು.

ಆಗಲೇ ಮಧ್ಯಾಹ್ನ ಬಹಳ ಸಮಯ ಆಗಿದ್ದರಿಂದ ಜೆಪಿ ಚುಟುಕಾಗಿ ಭಾಷಣ ಮಾಡುವುದಾಗಿ ಹೇಳಿದಾಗ ಸಭಿಕರು ಒಪ್ಪಲಿಲ್ಲ. ಭಾಷಣದಲ್ಲಿ ಅವರು, ಕೈಗಾರಿಕೆ ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಾ ಕಡೆಯೂ ರೈತರಿಗೆ ವಂಚನೆ ಮೋಸ ಮಾಡುತ್ತಿರುವ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ವರ್ಷದ ಪೊಲೀಸ್ ದೌರ್ಜನ್ಯವನ್ನು ವಿವರಿಸಿ ಖಂಡಿಸಿದರು. ಎಸ್ಸೈ ಚಿಕ್ಕಮಠ ಮತ್ತು ಡಿವೈಎಸ್ಪಿ ನಾಯಕ್ ಅವರ ಕ್ರೌರ್ಯವನ್ನು ವ್ಯಂಗ್ಯಭರಿತ ಭಾಷೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರಲ್ಲದೆ, “ಎನ್ಕೌಂಟರ್ ಮಾಡಿಬಿಡ್ತೀನಿ ಹೂಂ! ಲೆಟ್ ಎನ್ಕ್ವೈರಿ ಫಾಲೋ” ಎಂಬ ನಾಯಕ್ರ ಡೈಲಾಗನ್ನು ನಾಟಕೀಯವಾಗಿ ವರ್ಣಿಸಿದಾಗ ಜನ ಬಿದ್ದುಬಿದ್ದು ನಕ್ಕರು. ಮೈದಾನದ ಮೂಲೆಯಲ್ಲಿ ಸಿಬ್ಬಂದಿಯೊಂದಿಗೆ ಜೀಪಿನಲ್ಲಿ ಕೂತಿದ್ದ ನಾಯಕ್ ಚಡಪಡಿಸುತ್ತ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರು. ಇದೇ ನೆಪದಲ್ಲಿ ಜೆಪಿಯನ್ನು ಸಭೆಯ ನಂತರ ಪುನಃ ಬಂಧಿಸುವ ಸುಳಿವು ಕಂಡುಬಂದಾಗ ಹಳ್ಳಿಗರು ಮತ್ತು ಹಿತೈಷಿಗಳು ಪೊಲೀಸರ ಕಣ್ಣು ತಪ್ಪಿಸಿ ಅವರನ್ನು ರಕ್ಷಣೆ ಮಾಡಿದರು.
ಇಷ್ಟೆಲ್ಲಾ ಆದಮೇಲೆ, ಏನು ಮಾಡಿದರೂ ಇಲ್ಲಿ ಈ ಕಾರ್ಖಾನೆಗಳನ್ನು ಜನರು ಇರಗೊಡುವುದಿಲ್ಲ ಎನ್ನುವುದು ಕಂಪನಿಗಳಿಗೂ ಸರ್ಕಾರಕ್ಕೂ ಖಾತ್ರಿಯಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ಸಾಮೂಹಿಕ ಶುದ್ಧೀಕರಣ ಘಟಕ ಎನ್ನುವುದು ನೀರ ಮೇಲಿನ ಬರಹದಂತಾಗಿತ್ತು. ಹೀಗಾಗಿ 1997ರ ಮೊದಲ ಭಾಗದ ವೇಳೆಗೆ ಕೆಮಿಕಲ್ ಕಾರ್ಖಾನೆಗಳು ಒಂದೊಂದಾಗಿ ಮುಚ್ಚಿಕೊಂಡು ಹೋದವು. ದೊಡ್ಡವು ಪಟ್ಟಂಚೆರುವುಗೆ ಸ್ಥಳಾಂತರಗೊಂಡರೆ ಮಿಕ್ಕವು ಶಾಶ್ವತವಾಗಿ ಬಂದ್ ಆದವು. ಕಾರ್ಖಾನೆಗಳು ಬಂದ್ ಆದಮೇಲೂ ಅವು ಉಂಟುಮಾಡಿದ್ದ ತೀವ್ರವಾದ ಮಾಲಿನ್ಯದ ಪರಿಣಾಮ ತೊಳೆದುಹೋಗಲು ಹಲವು ವರ್ಷಗಳೇ ಬೇಕಾದವು.
ಹೋರಾಟದ ಮುಖ್ಯ ಪಾಠಗಳು
ಈ ಹೋರಾಟ ಜನರಿಗೆ, ಅದಕ್ಕಿಂತ ಮುಖ್ಯವಾಗಿ ನಮಗೆ ಕಲಿಸಿದ ಒಂದು ಬಹುಮುಖ್ಯ ಪಾಠವೆಂದರೆ ನಿರಂತರ ಹೋರಾಟದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂಬುದು. ನಮ್ಮ ಮಾರ್ಗದರ್ಶಕರಾದ ಎಚ್.ಎಸ್. ದೊರೆಸ್ವಾಮಿಯವರು “ಟಚ್ ಅಂಡ್ ಗೋ ರೀತಿಯ ಹೋರಾಟ ಮಾಡಬಾರದು. ಒಂದು ಸಮಸ್ಯೆ ಕೈಗೆತ್ತಿಕೊಂಡರೆ ಅದನ್ನು ತುದಿ ಮುಟ್ಟಿಸುವವರೆಗೂ ಕೈ ಬಿಡಬಾರದು” ಎಂದು ಯಾವಾಗಲೂ ಹೇಳುತ್ತಿದ್ದರು. ಈ ಹಿಂದೆಯೂ ಹಲವು ಹೋರಾಟಗಳನ್ನು ದೀರ್ಘ ಕಾಲ ಪಟ್ಟು ಬಿಡದೆ ನಡೆಸಿ ಯಶಸ್ವಿಯಾಗಿದ್ದೆವು. ಬೀದರ್ನಲ್ಲೂ ಮೂರೂವರೆ ವರ್ಷ ಸತತವಾಗಿ ಹೋರಾಟ ಮಾಡಿದ್ದು ಯಶಸ್ಸಿಗೆ ದಾರಿ ಮಾಡಿತು.

ರೈತರಿಗೆ ದೊರಕಿದ ಎರಡನೇ ಮುಖ್ಯ ಪಾಠ ದ್ರೋಹದ್ದು. ಹೋರಾಟದ ಹೆಸರಲ್ಲಿ ಹಣ ಮಾಡುವವರು, ಹೋರಾಟಕ್ಕೆ ದ್ರೋಹ ಬಗೆದು ಶಾಮೀಲಾಗುವವರು ಇದ್ದೇ ಇರುತ್ತಾರೆ. ಹೋರಾಟದ ವಿರುದ್ಧವೇ ಅಪಪ್ರಚಾರವನ್ನೂ ಮಾಡುತ್ತಾರೆ. ಇದರಿಂದ ಧೃತಿಗೆಡಬಾರದು. ಸಾಧ್ಯವಾದಷ್ಟೂ ಇವರನ್ನು ನಿಯಂತ್ರಿಸಲು ಇಲ್ಲವೇ ದೂರ ಇಡಲು ಪ್ರಯತ್ನ ಮಾಡಬೇಕು. ಯಾವ ಪ್ರತಿಕೂಲ ಪರಿಸ್ಥಿತಿಯಲ್ಲೂ ಹೋರಾಟದಿಂದ ಹಿಂದೆಗೆಯುವ ಯೋಚನೆ ಮಾಡಬಾರದು.
ಪ್ರಚಾರಾಂದೋಲನಗಳನ್ನು ಮತ್ತೆಮತ್ತೆ ನಡೆಸಬೇಕು. ಇದು ಜನರನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಲು ಹಾಗೂ ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲು ಹೋರಾಟ ಸಮಿತಿಗೆ ನೆರವಾಗುತ್ತದೆ ಹಾಗೂ ಅದರ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಜನಬಲ ಭದ್ರವಾಗಿರುತ್ತದೆ.
“ಇಲ್ಲೀವರೆಗೂ ನಾವುಗಳು ಆಕಡೆ ಪೊಲೀಸಿನ ಟೋಪಿ ಕಂಡರೆ ಈಕಡೆ ಗಲ್ಲಿ ಬಿದ್ದು ತಲೆ ಮರೆಸಿಕೊಳ್ಳುತ್ತಿದ್ದೆವು. ಈಗ ನಮಗೆ ಪೊಲೀಸರ ಮತ್ತು ಲಾಠಿಯ ಅಂಜಿಕೆ ಪೂರ್ತಿ ಹೊರಟುಹೋಗಿದೆ. ಅಷ್ಟೇ ಅಲ್ಲ, ರಾಜಕಾರಣಿಗಳನ್ನು ಕುರಿತ ಭಯಭಕ್ತಿಗಳೂ ಬಹಳ ಕಮ್ಮಿಯಾಗಿವೆ. ಬದಲಿಗೆ ಅವರನ್ನು ಎದುರಿಸಿ, ಮೇಜು ಕುಟ್ಟಿ, ʻಕೆಲಸ ಮಾಡಿಕೊಡಿʼ ಎಂದು ಘಟ್ಟಿಸಿ ಕೇಳುವ ಛಾತಿ ಬಂದಿದೆ” ಎಂದು ರೈತರು ಹೇಳತೊಡಗಿದರು. ಜನರು, ವಿಶೇಷವಾಗಿ ಮಹಿಳೆಯರು-ಅಜ್ಜಿಯರು ಕಾರ್ಖಾನೆ ಪರಿಶೀಲಿಸಲು ಬರುವ ಎಲ್ಲಾ ಅಧಿಕಾರಿ, ಮಂತ್ರಿ-ಶಾಸಕರು ಎಲ್ಲರನ್ನೂ ಕಾರ್ಖಾನೆ ಆವರಣಗಳಲ್ಲೇ ಭೇಟಿ ಮಾಡಿ ಸಮಸ್ಯೆ ವಿವರಿಸುವುದು ರೂಢಿಯಾಯಿತು. ಕಾಲಿಗೆ ಬೀಳೋರೇನು, ಎದುರಾ ಎದುರೇ ಹಿಡಿ ಶಾಪ ಹಾಕೋರೇನು! ಫ್ಯಾಕ್ಟರಿ ನೋಡೋಕೆ ಯಾರೋ ಬಂದಿದಾರೆ ಅಂತ ಗೊತ್ತಾದರೆ ಸಾಕು, ಅವರೆಲ್ಲ ತಮ್ಮತಾವೇ ಮುಗಿಬೀಳುತ್ತಿದ್ದರು.
ಯುವಜನರಲ್ಲಿ ತಮ್ಮ ತಮ್ಮ ಹಳ್ಳಿಗೆ ಸೀಮಿತವಾಗಿಯಷ್ಟೇ ಸಮಸ್ಯೆಯನ್ನು ನೋಡುವ, ಪ್ರತಿಕ್ರಿಯಿಸುವ ಸೀಮಿತ ದೃಷ್ಟಿ ಹೋಗಿ, ಸಾಮೂಹಿಕವಾಗಿ ಯೋಚಿಸುವ, ಒಟ್ಟುಗೂಡಿ ಕೆಲಸ ಮಾಡುವ ಮನೋಭಾವ ಮತ್ತು ಪ್ರವೃತ್ತಿ (ಟೀಮ್ ಸ್ಪಿರಿಟ್) ಮೂಡಿದೆ ಎಂಬುದು ಹೋರಾಟದ ಬಗೆಗಿನ ಯುವಜನರ ಅನಿಸಿಕೆಯಾಗಿತ್ತು.
(ಬೀದರ್‌ನ ಮಾಲಿನ್ಯದ ಅಧ್ಯಯನ ನಡೆಸಲು 1996ರ ಸೆಪ್ಟೆಂಬರಿನಲ್ಲಿ ಬೀದರ್‌ಗೆ ಭೇಟಿ ಕೊಟ್ಟಿದ್ದ ಕರ್ನಾಟಕ ವಿಧಾನ ಮಂಡಲದ ʻವಿಷಯ ಸಮಿತಿʼಯ ತಂಡದೊಂದಿಗೆ ಹೋಗಿದ್ದ ಉಡುಪಿಯ ʻಮಾನವ ಹಕ್ಕು ರಕ್ಷಣಾ ವೇದಿಕೆʼಯ ಡಾ. ರವೀಂದ್ರನಾಥ ಶಾನಭಾಗರು ಸಂಪೂರ್ಣ ವಿವರಗಳೊಂದಿಗೆ ಬರೆದಿರುವ ಸುದೀರ್ಘ ವಿಶ್ಲೇಷಣಾ ಸಚಿತ್ರ ವರದಿಯು 1997ರ ಏಪ್ರಿಲ್ 13ರ ʻತರಂಗʼ ಪತ್ರಿಕೆಯಲ್ಲಿ ಮುಖಪುಟ ಲೇಖನವಾಗಿ 9+1 ಪುಟಗಳಲ್ಲಿ ಪ್ರಕಟವಾಗಿದೆ. ಆಸಕ್ತರು udupihrpf.org/bidar-tragedy; https://drive.google.com/file/d/12Tqwo-nE4YaNqWp1nJkM4sG3kCU8Th8u/view ಈ ಕೊಂಡಿಗಳಲ್ಲಿ ಅದನ್ನು ನೋಡಬಹುದು)
(ಮುಂದಿನ ಭಾಗದಲ್ಲಿ ಮುಕ್ತಾಯ)

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ