ಭಾರತದಲ್ಲಿ ರೈತಾಪಿ ವರ್ಗವು ಕ್ರಾಂತಿಕಾರಿ ಹೋರಾಟದ ಪ್ರಧಾನ ವಾಹಕವಾದರೂ ಕಾರ್ಮಿಕ ವರ್ಗವೇ
ಕಮ್ಯೂನಿಸ್ಟ್ ಪಕ್ಷದ ಆಧಾರ ಸ್ತಂಭ ಎನ್ನುವುದು ಎಂಎಲ್ ಚಿಂತನೆಯ ಒಂದು ಮುಖ್ಯಾಂಶವಷ್ಟೆ. ಈ ನಿಟ್ಟಿನಲ್ಲಿ
ನಾವು ಕಾರ್ಮಿಕ ವರ್ಗದ ನಡುವೆ ಕೆಲಸ ಆರಂಭ ಮಾಡಬೇಕೆಂದು ನಿರ್ಧರಿಸಿದೆವು.
ಬಿಹಾರದಲ್ಲಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದ್ದ ವಿನೋದ್ ಮಿಶ್ರಾ ನೇತೃತ್ವದ ಸಿಪಿಐ-ಎಂಎಲ್‌ಗೆ
ಸೇರುವ ಮೂಲಕ ಕರ್ನಾಟಕದಲ್ಲಿ ನಮ್ಮದೇ ಹೊಸ ʻಪಕ್ಷʼ ಕಟ್ಟಿಕೊಂಡಿದ್ದಾಯಿತು. ಅದನ್ನು ಬೆಳೆಸಿ
ವಿಸ್ತರಿಸಬೇಕಲ್ಲ. ಲಕ್ಷ್ಮಿ (ಡಾ. ವಿ. ಲಕ್ಷ್ಮೀನಾರಾಯಣ) ಮತ್ತು ನಾನು ಆ ಪ್ರಯತ್ನ ಶುರು ಮಾಡಿದೆವು. ರಾಜ್ಯದ
ಬೇರೆಬೇರೆ ಊರುಗಳಲ್ಲಿದ್ದ ನಮ್ಮ ಹಳೆಯ ಕಮ್ಯೂನಿಸ್ಟ್ ಒಲವಿನ ಸ್ನೇಹಿತರು, ಕುಕ್ಕರಹಳ್ಳಿಯ ಮಾರ್ಕ್ಸ್‌ವಾದಿ
ಲೈಬ್ರೆರಿಗೆ ಹಿಂದೆ ಭೇಟಿ ನೀಡುತ್ತಿದ್ದವರು, ಸಿಪಿಐ ಅಥವಾ ಸಿಪಿಎಂ ಪಕ್ಷದ ಬಗೆಗೆ ಒಂದುವೇಳೆ ಸಹಾನುಭೂತಿ ಇದ್ದರೂ
ನಿರ್ದಿಷ್ಟವಾಗಿ ಯಾವುದೇ ಒಂದು ಪಕ್ಷಕ್ಕೆ ಸೇರಿರದೆ ಹೆಚ್ಚು ಮುಕ್ತವಾದ ಧೋರಣೆಯುಳ್ಳವರು, ಹೀಗೆ
ಕೆಲವರನ್ನು ಭೇಟಿ ಮಾಡಿದೆವು. ಅವರುಗಳ ಜೊತೆ ನಮ್ಮ ವಿಚಾರಗಳನ್ನು ಚರ್ಚಿಸಿ ಅವರನ್ನು ನಮ್ಮ ಪಕ್ಷದ
ಮತ್ತು ಅದರ ವಿಚಾರಧಾರೆಯ ʻಸಹಾನುಭೂತಿಪರʼರನ್ನಾಗಿ (ಸಿಂಪಥೈಸರ್ಸ್ ಆಗಿ) ಮಾಡಿಕೊಳ್ಳುವುದು, ಆ
ಮೂಲಕ ನಮ್ಮ ಪಕ್ಷ ಮತ್ತು ವಿಚಾರಧಾರೆಯ ವ್ಯಾಪ್ತಿಯನ್ನು ಕರ್ನಾಟಕದಲ್ಲಿ ವಿಸ್ತರಿಸುವುದು ಈ ಪ್ರಯತ್ನದ
ಮುಖ್ಯ ಉದ್ದೇಶವಾಗಿತ್ತು. ಅಂಥವರಲ್ಲಿ ಕೆಲವರು ಅಥವಾ ಒಬ್ಬಿಬ್ಬರಾದರೂ ಪೂರ್ಣಾವಧಿ ಕಾರ್ಯಕರ್ತರಾಗಿ
ಅಲ್ಲದಿದ್ದರೂ ಹೆಚ್ಚು ಸೀರಿಯಸ್ ಆದ ಕಾರ್ಯಕರ್ತರಾಗಿ ಮುಂದೆ ಬರಬಹುದು ಎಂಬ ನಿರೀಕ್ಷೆಯೂ ಇತ್ತು. (ಆಗಿನ
ಕಾಲದಲ್ಲಿ ಸಿಪಿಐಗೆ ಬಲ ಕಮ್ಯೂನಿಸ್ಟ್ ಪಕ್ಷವೆಂದೂ, ಸಿಪಿಎಂಗೆ ಎಡ ಕಮ್ಯೂನಿಸ್ಟ್ ಪಕ್ಷವೆಂದೂ ಕರೆಯುವುದು
ರೂಢಿ! ಆಗ ಇದ್ದಿದ್ದು ಇವೆರಡೇ ಕಮ್ಯೂನಿಸ್ಟ್ ಪಕ್ಷಗಳು. ನಕ್ಸಲೀಯ ಪಕ್ಷವಾದ ಸಿಪಿಐ-ಎಂಎಲ್‌ನಲ್ಲಿ ಅದಾಗಲೇ
ಉಂಟಾಗಿದ್ದ ಮೂರ್ನಾಲ್ಕು ಧಾರೆಗಳು ಮುಖ್ಯವಾಹಿನಿ ಕಮ್ಯೂನಿಸ್ಟ್ ಪಕ್ಷಗಳಾಗಿರಲಿಲ್ಲ, ಅಲ್ಲದೆ ಅವು
ಭೂಗತವಾಗಿದ್ದುದರಿಂದ ಇನ್ನೂ ಜನರ ನಡುವೆ ಹೆಚ್ಚು ಪ್ರಚಲಿತಕ್ಕೆ ಬಂದಿರಲಿಲ್ಲ)
ಭಾರತದಲ್ಲಿ ರೈತಾಪಿ ವರ್ಗವು ಕ್ರಾಂತಿಕಾರಿ ಹೋರಾಟದ ಪ್ರಧಾನ ವಾಹಕವಾದರೂ ಕಾರ್ಮಿಕ ವರ್ಗವೇ
ಕಮ್ಯೂನಿಸ್ಟ್ ಪಕ್ಷದ ಆಧಾರ ಸ್ತಂಭ ಎನ್ನುವುದು ಎಂಎಲ್ ಚಿಂತನೆಯ ಒಂದು ಮುಖ್ಯಾಂಶವಷ್ಟೆ. ಈ ನಿಟ್ಟಿನಲ್ಲಿ
ನಾವು ಕಾರ್ಮಿಕ ವರ್ಗದ ನಡುವೆ ಕೆಲಸ ಆರಂಭ ಮಾಡಬೇಕೆಂದು ನಿರ್ಧರಿಸಿದೆವು. ನಾನು ಟೆಲಿಫೋನ್ ಇಲಾಖೆಯಲ್ಲಿನ
ಲೈನ್‌ಮನ್‌ಗಳು, ʻಡಿʼ ದರ್ಜೆ ನೌಕರರು, ದಿನಗೂಲಿ ಕಾರ್ಮಿಕರಾದ ʻಮಜ್ದೂರ್ʼಗಳು ಮತ್ತಿತರ ತಳಸ್ತರದ
ಸಿಬ್ಬಂದಿಯ ಜೊತೆ ಆಗಲೇ ವ್ಯಾಪಕ ಒಡನಾಟ ಹೊಂದಿದ್ದೆ. ಲೈನ್‌ಮನ್‌ಗಳಿಗಿಂತ ಮೇಲಿನ ಹುದ್ದೆಗಳಾದ ʻಸಬ್
ಇನ್‌ಸ್ಪೆಕ್ಟರ್ʼ, ʻಲೈನ್ ಇನ್‌ಸ್ಪೆಕ್ಟರ್ʼ ಮತ್ತು ʻಕೇಬಲ್ ಜಾಯಿಂಟರ್ʼಗಳ ಕೈಕೆಳಗೆ ಈ ʻಮಜ್ದೂರ್ʼಗಳು
ಹಲವು ವರ್ಷ ಕೆಲಸ ಮಾಡಿ ನಂತರ ಮಿಡಲ್ ಸ್ಕೂಲ್ ಮಟ್ಟದ ಒಂದು ಸರಳವಾದ ಇಲಾಖಾ ಪರೀಕ್ಷೆ ಪಾಸು ಮಾಡಿ
ಲೈನ್‌ಮನ್‌ಗಳಾಗುವವರು. ಅವರಲ್ಲೂ ಕೆಲವು ಲೈನ್‌ಮನ್‌ಗಳು ಮತ್ತು ಡಿ ದರ್ಜೆ ನೌಕರರು ಒಂದು ನಿಗದಿತ
ಅವಧಿಯ ಸರ್ವೀಸ್ ಮುಗಿಸಿದ ನಂತರ ಇಲಾಖಾ ಪರೀಕ್ಷೆ ಪಾಸು ಮಾಡಿ ಟೆಲಿಫೋನ್ ಆಪರೇಟರ್, ಕ್ಲಾರ್ಕ್,
ಟೆಕ್ನಿಶಿಯನ್ ಅಥವಾ ಡ್ರೈವರ್‌ಗಳಾಗಿ ಬಡ್ತಿ ಹೊಂದುತ್ತಿದ್ದರು. ಮಜ್ದೂರ್‌ಗಳ ದಿನಗೂಲಿಯು ಇಲಾಖೆಯಿಂದಲೇ
ನಿಗದಿಯಾಗಿರುತ್ತಿತ್ತು, ಹೀಗಾಗಿ ಅದೂ ಸಹ ಒಂದರ್ಥದಲ್ಲಿ ಖಾಯಂ ಕೆಲಸದಂತೆಯೇ ಆಗಿಬಿಟ್ಟಿತ್ತು. ಒಬ್ಬ ಸಬ್
ಇನ್‌ಸ್ಪೆಕ್ಟರ್, ಲೈನ್ ಇನ್‌ಸ್ಪೆಕ್ಟರ್ ಅಥವಾ ಕೇಬಲ್ ಜಾಯಿಂಟರ್ ಎಷ್ಟು ಮಂದಿ ಮಜ್ದೂರ್‌ಗಳನ್ನು
ನೇಮಿಸಿಕೊಳ್ಳಬಹುದು ಎಂಬುದಕ್ಕೆ ನಿಗದಿತ ಮಿತಿ ಇತ್ತು. ಹಾಗಾಗಿ ಯಾರಾದರೂ ಸಬ್ ಇನ್‌ಸ್ಪೆಕ್ಟರ್‌ಗಳು /
ಲೈನ್ ಇನ್‌ಸ್ಪೆಕ್ಟರ್‌ಗಳು ತಮ್ಮನ್ನು ಮಜ್ದೂರ್‌ಗಳಾಗಿ ಕೆಲಸಕ್ಕೆ ತೆಗೆದುಕೊಳ್ಳಲೆಂದೇ ಅನೇಕ ಯುವಕರು
ಅವರುಗಳಿಗೆ ಅದೂಇದೂ ಕೈಕೆಲಸ ಮಾಡಿಕೊಡುತ್ತ ಅವರ ಒಲವು ಗಳಿಸಿಕೊಂಡಿರುತ್ತಿದ್ದರು. ನಾನು ಇಂಥ
ಸಿಬ್ಬಂದಿಗಳಲ್ಲಿ ಕೆಲವರ ಮೇಲೆ ಗಮನ ಕೇಂದ್ರೀಕರಿಸಿ ಅವರನ್ನು ಈ ಚಿಂತನೆಯ ಜೊತೆಯಲ್ಲಿ ಬೆಳೆಸುವ
ಪ್ರಯತ್ನವನ್ನು ಇಲಾಖೆಗೆ ರಾಜೀನಾಮೆ ಕೊಡುವ ಮೊದಲೇ ಶುರು ಮಾಡಿದ್ದೆ. ರಾಜೀನಾಮೆ ಕೊಟ್ಟ ಮೇಲೂ
ಮುಂದುವರಿಸಿದೆ.

ಮೈಸೂರಿನ ಯಾದವಗಿರಿಯಲ್ಲಿ ಜಾವಾ ಮೋಟಾರ್ ಸೈಕಲ್ ಫ್ಯಾಕ್ಟರಿ ಆ ಕಾಲದಲ್ಲಿ ತುಂಬಾ ಹೆಸರು
ಮಾಡಿದ್ದ ಕಂಪನಿಯಾಗಿತ್ತು. ಅಲ್ಲಿ ಸುಮಾರು 40000ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಲ್ಲದೆ
ಅಲ್ಲೇ ಸುತ್ತಮುತ್ತ ಅದರ ಬಿಡಿ ಭಾಗಗಳ ಉತ್ಪಾದನಾ ಘಟಕಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದವು. ಜಾವಾದಲ್ಲಿ
ಸಿಪಿಐ ಪಕ್ಷದ ಎಐಟಿಯುಸಿ ಯೂನಿಯನ್ ಇದ್ದು ಕಾಮ್ರೇಡ್ ರಹಮಾನ್ ಅದರ ನಾಯಕರಾಗಿದ್ದರು. ಉಪ
ಘಟಕಗಳಲ್ಲಿನ ಸಣ್ಣ ಸಂಖ್ಯೆಯ ಕಾರ್ಮಿಕರೂ ಈ ಯೂನಿಯನ್ನಿನ ಪ್ರಭಾವದಲ್ಲೇ ಇದ್ದುದು ಸಹಜವಾಗಿತ್ತು.
ಇದಲ್ಲದೆ ಕೃಷ್ಣರಾಜಸಾಗರ ರಸ್ತೆಯ ಮೇಟಗಳ್ಳಿಯಲ್ಲಿ ಸ್ಥಾಪನೆಯಾಗಿದ್ದ ಕೈಗಾರಿಕಾ ಕ್ಷೇತ್ರದಲ್ಲೂ ಹಲವಾರು ಕೈಗಾರಿಕೆಗಳಿದ್ದವು. ಅವುಗಳ ಪೈಕಿ ವಿಕ್ರಾಂತ್ ಟೈರ್ ಫ್ಯಾಕ್ಟರಿ ಅತಿ ದೊಡ್ಡದಾಗಿತ್ತು. ಅಲ್ಲಿನ ಕಾರ್ಮಿಕ ಸಂಘಕ್ಕೆ ಮೊದಲು ಸಿಪಿಎಂ ಪಕ್ಷದ ಸಿಐಟಿಯುವಿನ ಕಾಮ್ರೇಡ್ ಸೂರಿಯವರು ನಾಯಕರಾಗಿದ್ದರು. ಆದರೆ ನಂತರದಲ್ಲಿ
ಆ ಯೂನಿಯನ್ನು ಸಿಐಟಿಯುದಿಂದ ಬೇರ್ಪಟ್ಟು, ರಾಜ್ಯ ರಾಜಕಾರಣದಲ್ಲಿನ ಎರಡರಲ್ಲೊಂದು ರಾಜಕೀಯ ಪಕ್ಷದ
ನೇತೃತ್ವದಲ್ಲಿರುವುದು ವಾಡಿಕೆಯಾಗಿತ್ತು. ಇದಲ್ಲದೆ ಶಿವಮೊಗ್ಗ ಸ್ಟೀಲ್ಸ್ ಎಂಬ ತಕ್ಕಮಟ್ಟಿಗೆ ದೊಡ್ಡ ಕಾರ್ಖಾನೆ,
ಫಾಲ್ಕನ್ ಟೈರ್ಸ್ ಲಿಮಿಟೆಡ್ ಎಂಬ ಇನ್ನೊಂದು ಮಧ್ಯಮ ಪ್ರಮಾಣದ ಟೈರ್ ಕಾರ್ಖಾನೆ ಮುಂತಾದುವೂ ಇದ್ದವು.
ಇವಲ್ಲದೆ 10-20ರಿಂದ 100+ ಕಾರ್ಮಿಕರನ್ನು ಒಳಗೊಂಡ ಕೆಲವು ಕಾರ್ಖಾನೆಗಳೂ ಇದ್ದವು. ಬಹುತೇಕ
ಕಾರ್ಖಾನೆಗಳ ಕಾರ್ಮಿಕರು ಒಂದೋ ಅಸಂಘಟಿತರಾಗಿದ್ದರು, ಇಲ್ಲವೇ ಏಐಟಿಯುಸಿಗೆ ಸೇರ್ಪಡೆಗೊಂಡಿದ್ದರು. ಕೆಲವು
ಕಾರ್ಖಾನೆಗಳವರು ಸಿಐಟಿಯುಗೂ ಸೇರಿದ್ದರು. ಕೆಲವು ಕಾರ್ಖಾನೆಗಳಲ್ಲಿ ಯಾವುದೇ ಯೂನಿಯನ್ ಇರಲಿಲ್ಲ.
ಎರಡು ಕಾರ್ಖಾನೆಗಳಲ್ಲಿ ಇಬ್ಬರು ಯುವಕರು ಸ್ವತಂತ್ರ ಕಾರ್ಮಿಕ ಸಂಘಗಳನ್ನು ಕಟ್ಟಿ ಚೆನ್ನಾಗಿ ನಡೆಸುತ್ತಿದ್ದರು.
ಅವುಗಳೆಂದರೆ ಸಿದ್ದಪ್ಪ ಎಂಬ ಸುಮಾರು 24-25ರ ಪ್ರಾಯದ ಯುವಕನ ನೇತೃತ್ವದ ಸುನಂದಾ ಆರೋಮ್ಯಾಟಿಕ್
ಇಂಡಸ್ಟ್ರೀಸ್ ಹಾಗೂ ಸುಸೈ ಎಂಬ ಸುಮಾರು ಅಷ್ಟೇ ಪ್ರಾಯದ ಯುವಕ ಡೈಮಂಡ್ ಡೈಸ್
ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರೀಸ್ ಎಂಬ ಕಾರ್ಖಾನೆಯಲ್ಲಿ ಕಟ್ಟಿದ್ದ ಕಾರ್ಮಿಕ ಸಂಘ. ಈ ಇಬ್ಬರೂ ಯುವಕರು
ಸ್ಥಾಪಿತ ಕಾರ್ಮಿಕ ಸಂಘಗಳಡಿ ಕೆಲಸ ಮಾಡಿ ಭ್ರಮನಿರಸನಗೊಂಡು ಸ್ವತಂತ್ರ ಸಂಘ ಸ್ಥಾಪಿಸಿದ್ದವರು. ಪರಸ್ಪರರ
ಕೆಲಸದ ಬಗ್ಗೆ ತಿಳಿದು ಅಭಿಮಾನಗೊಂಡು ಪರಿಚಯ ಮಾಡಿಕೊಂಡು ಪರಸ್ಪರರಿಗೆ ಹೆಗಲಾಗಿ ಯೂನಿಯನ್
ನಡೆಸುತ್ತಿದ್ದರು.
ಒಂಟಿಕೊಪ್ಪಲಿನಲ್ಲಿ ನಮ್ಮ ಹೇಮಾ ಅವರ ಮನೆಯ ಸ್ವಲ್ಪ ಹಿಂದೆ ಸಿದ್ದಪ್ಪ ರೂಂ ಮಾಡಿಕೊಂಡಿದ್ದ
(ನಾವು ಆತನನ್ನು ಬಹುವಚನದಲ್ಲೇ ಮಾತಾಡಿಸುತ್ತಿದ್ದುದು, ಇಲ್ಲಿ ಬರವಣಿಗೆಯ ಸೌಕರ್ಯಕ್ಕಾಗಿ ಏಕವಚನ
ಬಳಸಿದೀನಿ) ಚಿತ್ರದುರ್ಗ ಜಿಲ್ಲೆಯ ಹಳ್ಳಿಗನಾದ ಈತ ಬಿಎವರೆಗೆ ಓದಿದ್ದ (ಬಹುಶಃ ಪಾಸು ಮಾಡಿರಲಿಲ್ಲ)
“ಮೂರ್ತಿ ಚಿಕ್ಕದಾದರೂ …” ಎಂಬ ಮಾತಿಗೊಪ್ಪುವಂತೆ ಬಡಕಲು ಶರೀರದ ಈತ ಒಂದು ರೀತಿ ವಿಶಿಷ್ಟ
ಯುವಕನಾಗಿದ್ದ. ಒಂಟಿಕೊಪ್ಪಲು ಮೂಲ ಹಳ್ಳಿಯ ಸುತ್ತ ನಗರ ಬೆಳೆದು ವಿ.ವಿ.ಮೊಹಲ್ಲಾ ಆಗಿತ್ತು.
ಒಂಟಿಕೊಪ್ಪಲು, ಕನ್ನೇಗೌಡನ ಕೊಪ್ಪಲು, ಕುಂಬಾರಕೊಪ್ಪಲು, ಮುಂತಾಗಿ ನಗರದೊಳಗೆ ಸೇರಿಹೋಗಿದ್ದ
ಸುತ್ತಮುತ್ತಲಿನ ಹಳ್ಳಿಗಳಲ್ಲಿನ್ನೂ ಹಳೆಯ ಕಾಲದ ಗೌಡಿಕೆಯೇ ಢಾಳಾಗಿ ಚಾಲ್ತಿಯಲ್ಲಿತ್ತು. ಒಂದೊಂದರಲ್ಲೂ
ಒಂದೋ ಎರಡೋ ರೌಡಿ ಗುಂಪುಗಳು ಸಕ್ರಿಯವಾಗಿದ್ದು, ಬಲಾಢ್ಯರು ಮತ್ತು ರಾಜಕಾರಣಿಗಳು/ಪುಡಾರಿಗಳು
ಅವುಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವುದು ಮಾಮೂಲಿ ಸಂಗತಿಯಾಗಿತ್ತು. ಹೀಗೆಯೇ ಮೂಲ
ಒಂಟಿಕೊಪ್ಪಲು ಹಳ್ಳಿಯಲ್ಲಿ ಸಿದ್ದಪ್ಪನ ರೂಮಿನ ಸುತ್ತಮುತ್ತಲಲ್ಲೂ ಕೆಲವು ರೌಡಿ ಯುವಕರಿದ್ದರು. ಈತ ಅವರ
ಜೊತೆ ಸ್ನೇಹವಾಗಿದ್ದುದು ಮಾತ್ರವಲ್ಲ, ತಾನು ಅವರಿಗಿಂತ ಸ್ವಲ್ಪ ಕಿರಿಯನಾದರೂ ಸಹ, “ಹೊಡೆದಾಡಿ
ಸಾಯೋದಂತೂ ಸಾಯ್ತೀರ, ಊರಿಗೆ ಸಮಾಜಕ್ಕೆ ಒಳ್ಳೇದಾಗುವಂಥ ಏನಕ್ಕಾದರೂ ಹೊಡೆದಾಡ್ರಯ್ಯ…” ಅಂ
ಅವರುಗಳಿಗೆ ಬುದ್ಧಿವಾದವನ್ನೂ ಹೇಳಬಲ್ಲವನಾಗಿದ್ದ! ಜೊತೆಗೆ ಅವರುಗಳು ಸಮಯ ಬಂದರೆ ಅವನಿಗೆ ರಕ್ಷಣೆ
ನೀಡುವವರೂ ಆಗಿದ್ದರು.
ಸುನಂದಾ ಆರೋಮ್ಯಾಟಿಕ್ ಇಂಡಸ್ಟ್ರಿಯಲ್ಲಿ ದವನ ಎಂಬ ಸುಗಂಧಭರಿತ ಸಸ್ಯದ ಸೊಪ್ಪನ್ನು ಭಟ್ಟಿಯಿಳಿಸಿ
ಅಪರೂಪದ ಸುಗಂಧ ದ್ರವ್ಯವೊಂದನ್ನು ತಯಾರಿಸುತ್ತಿದ್ದರು. ಅದನ್ನು ತಯಾರಿಸುತ್ತಿದ್ದುದು ಇಡೀ ದೇಶದಲ್ಲಿ
ಅದೊಂದೇ ಕಾರ್ಖಾನೆಯಾಗಿತ್ತು ಎನ್ನಲಾಗಿದ್ದು, ಅದಕ್ಕೆ ಅಪಾರ ಬೇಡಿಕೆಯಿದ್ದುದರಿಂದ ಕಾರ್ಖಾನೆ ಒಳ್ಳೆಯ
ಲಾಭದಲ್ಲಿ ನಡೆಯುತ್ತಿತ್ತು. ಕಾರ್ಖಾನೆಯಲ್ಲಿ ಸ್ವಚ್ಛತಾ ಕಾರ್ಮಿಕರೂ ಸೇರಿ 107 ಜನ ಕಾರ್ಮಿಕರಿದ್ದು, ಅವರೆಲ್ಲ
ಯೂನಿಯನ್ ಸದಸ್ಯರಾಗಿದ್ದರು. ಮಾಲೀಕರು ಕಾರ್ಮಿಕ ಸಂಘಕ್ಕೆ ಮೊದಮೊದಲು ಎಲ್ಲ ಕಡೆಗಳಂತೆಯೇ ಯಥಾಶಕ್ತಿ
ಅಡ್ಡಿಪಡಿಸಿದರಾದರೂ, ಕಾರ್ಖಾನೆ ಒಳ್ಳೆಯ ಲಾಭದಲ್ಲಿ ಇದ್ದುದರಿಂದ, ಸಿದ್ದಪ್ಪನ ಚಾಣಾಕ್ಷ ನಾಯಕತ್ವದಲ್ಲಿ
ಸಂಘ ಬೇಗನೆ ಮೇಲುಗೈ ಪಡೆಯಿತು. ಆಗ ಬೆಂಗಳೂರಿನಿಂದ ಡೊಮಿನಿಕ್ ಎಂಬ ವಯೋವೃದ್ಧ ಮತ್ತು ಅತ್ಯಂತ
ಅನುಭವಿ ಲೇಬರ್ ಲಾಯರ್ 15 ದಿನಕ್ಕೊಮ್ಮೆ ಮೈಸೂರಿಗೆ ಬಂದು, ತಮ್ಮ ಮಾರ್ಗದರ್ಶನದಲ್ಲಿದ್ದ ಕೆಲವು
ಕಾರ್ಮಿಕ ಸಂಘಗಳ ಕೆಲಸಗಳನ್ನು ಅಟೆಂಡ್ ಮಾಡುತ್ತಿದ್ದರು. ಅವರನ್ನೇ ಸಿದ್ದಪ್ಪ ತಮ್ಮ ಸಂಘಕ್ಕೂ
ಮಾರ್ಗದರ್ಶಕರನ್ನಾಗಿ, ಅಲ್ಲದೆ ಮೈಸೂರಿನ ಜನಾನುರಾಗಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಸಿದ್ದಯ್ಯನವರನ್ನು
ಸಂಘದ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದ. ಡೊಮಿನಿಕ್ ಅವರ ನಿರ್ದೇಶನದಂತೆ ಸಿದ್ದಪ್ಪ ಕಾರ್ಮಿಕ ಕಾಯ್ದೆಗಳಲ್ಲಿನ
ಎಲ್ಲ ಅವಕಾಶಗಳನ್ನೂ ಬಳಕೆ ಮಾಡಿಕೊಳ್ಳುತ್ತ ನಿರಂತರವಾಗಿ ಬಹಳ ದಿಟ್ಟವಾದ ಹೋರಾಟಗಳನ್ನು ನಡೆಸುತ್ತ
ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳೆಲ್ಲವನ್ನೂ ಪಡೆದುಕೊಳ್ಳುತ್ತ ಬಂದಿದ್ದ.

ಮತ್ತೊಂದೆಡೆ ಡೈಮಂಡ್ ಡೈಸ್ ಕಾರ್ಖಾನೆಯಲ್ಲಿ ಸುಸೈ ಕೂಡ ಚಾಕಚಕ್ಯತೆಯಿಂದ ಕಾರ್ಮಿಕರ
ಹಕ್ಕೊತ್ತಾಯಗಳನ್ನು ಗೆಲ್ಲುತ್ತ ಬಂದಿದ್ದು, ಕ್ರಮೇಣ ಇಬ್ಬರು ಯುವ ಲೀಡರ್‌ಗಳೂ ಪರಸ್ಪರ ಹೆಗಲಿಗೆ ಹೆಗಲಾಗಿ
ಕೆಲಸ ಮಾಡತೊಡಗಿದ್ದರು. ಈ ಕಾರ್ಮಿಕರ ಸಾಧನೆಗಳು ಇತರ ಸಣ್ಣಪುಟ್ಟ ಕಾರ್ಖಾನೆಗಳ ಕಾರ್ಮಿಕರನ್ನು ಸೆಳೆಯಲು
ಬಹಳ ಕಾಲ ಬೇಕಾಗಲಿಲ್ಲ. ಫಲವಾಗಿ, (1981ರ ಜುಲೈಯಲ್ಲಿ ನಾವು ಮೈಸೂರು ಬಿಡುವ ವೇಳೆಗೆ) ಇತರ
ಕಾರ್ಖಾನೆಗಳಲ್ಲೂ ಕಾರ್ಮಿಕ ಸಂಘಗಳನ್ನು ಆರಂಭಿಸಲು ಸಿದ್ದಪ್ಪ-ಸುಸೈ ಜೋಡಿ ಆರಂಭ ಮಾಡಿದ್ದರು.
ಸುನಂದಾದಲ್ಲಿ ಸಿದ್ದಪ್ಪನಿಗಿಂತಲೂ ಕೃಶಾಂಗನಾದ, ಆದರೆ ಸಿದ್ದಪ್ಪನಂತೆಯೇ ಬೆಂಕಿಯುಂಡೆಯಂಥ
ಮಲ್ಲ(ಪ್ಪ) ಎಂಬೊಬ್ಬ ಸ್ವಚ್ಛತಾ ಕಾರ್ಮಿಕ ಸಿದ್ದಪ್ಪನ ಬಲಗೈಯಂತಿದ್ದ. ಕೆಆರ್‌ಎಸ್ ರಸ್ತೆಯ ಎಡ ಮಗ್ಗಲಿಗೆ
ಪಿ.ಕೆ.ಸ್ಯಾನಿಟೋರಿಯಂ ಕ್ಷಯರೋಗ ಆಸ್ಪತ್ರೆಗೂ ಅದರ ಹಿಂಭಾಗದಲ್ಲಿರುವ ಕುಂಬಾರಕೊಪ್ಪಲಿಗೂ ನಡುವೆ
ತಗ್ಗಿನಲ್ಲಿ ಹರಿಯುತ್ತಿದ್ದ ಕೊಳಚೆ ಕಾಲುವೆ ಪಕ್ಕದಲ್ಲಿ 15-20 ದಲಿತ ಕುಟುಂಬಗಳು ಗುಡಿಸಲು ಕಟ್ಟಿಕೊಂಡು
ಹತ್ತಾರು ವರ್ಷಗಳಿಂದ ವಾಸವಿದ್ದು, ಅವರೆಲ್ಲ ಪೌರ ಕಾರ್ಮಿಕರಾಗಿ ಮತ್ತು ಕುಂಬಾರಕೊಪ್ಪಲಿನ ರೈತರ
ಜಮೀನುಗಳಲ್ಲಿ ಕೃಷಿ ಕೂಲಿಗಳಾಗಿ ದುಡಿಯುತ್ತಿದ್ದವರು. ಅಲ್ಲೇ ಈ ಮಲ್ಲಪ್ಪನ ಗುಡಿಸಲು ಮನೆಯೂ ಇತ್ತು.
ನಾನು, ಹೇಮಾ ಆಗಾಗ ಅವನ ಮನೆಗೆ ಹೋಗಿ ಮಾತಾಡುತ್ತ ಕೂರುತ್ತಿದ್ದೆವು. ರಾತ್ರಿಯಾದರೆ ಅಲ್ಲೇ ಮುದ್ದೆ ಊಟ
ಮಾಡುತ್ತಿದ್ದೆವು. ಅವರ ಹೋರಾಟದ ಕತೆಗಳನ್ನು ಮಲ್ಲಪ್ಪ ಆಕರ್ಷಕವಾಗಿ ವರ್ಣಿಸುತ್ತಿದ್ದ. ಆ ಇಡೀ ಗುಡ್ಡದ
ಬಯಲು ಆಸ್ಪತ್ರೆಗೆ ಸೇರಿತ್ತಾದ್ದರಿಂದ ಗುಡಿಸಲು ಮನೆಗಳನ್ನೆಲ್ಲ ತೆರವುಗೊಳಿಸಲು ಆಸ್ಪತ್ರೆಯವರು ಆಗಲೇ ತಾಕೀತು
ಶುರು ಮಾಡಿದ್ದು, ಅವರಿಗೆಲ್ಲ ಸೂಕ್ತ ಪುನರ್ವಸತಿ ಕಲ್ಪಿಸದೆ ಖಾಲಿ ಮಾಡಿಸಬಾರದು ಎಂಬುದಾಗಿ ಸಿದ್ದಪ್ಪನ
ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದ್ದರು. ಆ ಕೋರಿಕೆ ಈಡೇರಿರುವ ಸಾಧ್ಯತೆ ಕಡಿಮೆ; ಈಗ ಮನೆಗಳೆಲ್ಲ
ಖಾಲಿಯಾಗಿವೆ, ಪೂರ್ತಿ ಪ್ರದೇಶಕ್ಕೆ ಕಾಂಪೌಂಡ್ ಹಾಕಲಾಗಿದೆ. 2015ರ ನಂತರ ನಾನು ಅಜ್ಞಾತವಾಸದಿಂದ
ಹೊರಬಂದ ಮೇಲೆ ಮೈಸೂರಿಗೆ ಹೋಗಿದ್ದಾಗ ಸಿದ್ದಪ್ಪ, ಮಲ್ಲಪ್ಪ, ಸುಸೈಗಳ ಜಾಡನ್ನು ಪತ್ತೆ ಮಾಡುವ ಪ್ರಯತ್ನ
ಮಾಡಿದೆ, ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ ಜೋಳಿಗೆ | ಮೈಸೂರು ಎಂಬ ಚಳವಳಿ, ಹೋರಾಟಗಳ ಕುಲುಮೆಯಲ್ಲಿ- ಭಾಗ 2
ಸಿದ್ದಪ್ಪನ ರೂಮಿನ ಓನರ್ ಮನೆಯವರು ಹಸುವಿನ ಹಾಲು ಮಾರುತ್ತಿದ್ದು, ಹೇಮಾ ದಿನವೂ ಅಲ್ಲಿಂದಲೇ
ಹಾಲು ತರುತ್ತಿದ್ದರು. ಸಿದ್ದಪ್ಪ ಕಾರ್ಖಾನೆಯ ಕಾರ್ಮಿಕ ನಾಯಕ ಎಂಬುದು ಗೊತ್ತಾಗಿ ಆತನ ಪರಿಚಯ
ಮಾಡಿಕೊಂಡಿದ್ದರು. ಆತನಿಂದ ಆತನ ಕಾರ್ಮಿಕ ಸಂಘಟನೆ ಮತ್ತು ಹೋರಾಟಗಳ ಅನುಭವಗಳನ್ನು ಕೇಳಿ
ತಿಳಿದುಕೊಂಡಿದ್ದರು. ಇಲ್ಲಿ ಪ್ರಾಸಂಗಿಕವಾಗಿ ಹೇಳಬಹುದಾದ ಒಂದು ಮಾಹಿತಿಯೆಂದರೆ, ನನ್ನ ಹಾಗೆಯೇ ಹೇಮಾ
ಕೂಡ ಅವರ ಬ್ಯಾಂಕ್ ಯೂನಿಯನ್ನಿನಲ್ಲಿ ಸಕ್ರಿಯವಾಗಿದ್ದರು; ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಕ್ಕೆ (ಏಐಬಿಇಎಗೆ) ಒಂದು ಅವಧಿಗೆ ಅಖಿಲ ಭಾರತ ಉಪಾಧ್ಯಕ್ಷೆಯೂ ಆಗಿದ್ದರು. ಸಿದ್ದಪ್ಪನ ಪರಿಚಯ ಅವರಿಗೆ
ಇದ್ದುದು ಕಾರ್ಮಿಕರ ನಡುವೆ ನಮ್ಮ ಕೆಲಸವನ್ನು ಬೆಳೆಸುವ ಪ್ರಯತ್ನಕ್ಕೆ ಅನುಕೂಲವಾಯಿತು. ಆತನಿಗೆ
ಬಿಡುವಿದ್ದಾಗಲೆಲ್ಲ ನಾನು ಆತನ ಜೊತೆ ಓಡಾಡುತ್ತಿದ್ದೆ. ನನಗೆ ತಿಳಿದಷ್ಟು ಮಟ್ಟಿಗೆ ಕ್ರಾಂತಿಕಾರಿ ಹೋರಾಟದ
ವಿಚಾರಗಳನ್ನು ಆತನಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೆ. ಅದೇನೂ ಅಷ್ಟು ಸುಲಭವಾಗಿರಲಿಲ್ಲ. ಆದರೂ ನನ್ನ
ಪ್ರಯತ್ನ ಬಿಟ್ಟಿರಲಿಲ್ಲ. ಇದಲ್ಲದೆ ಶಿವಮೊಗ್ಗ ಸ್ಟೀಲ್ಸ್ ಕಾರ್ಖಾನೆಯಲ್ಲೂ ನಾನು ಕಾರ್ಮಿಕರ ಸಂಪರ್ಕ ಸಾಧಿಸಿದೆ.
ಮುಂದುವರಿಯುವುದು…

ಸಿರಿಮನೆ ನಾಗರಾಜ್
ಲೇಖಕ, ಸಾಮಾಜಿಕ ಚಿಂತಕ
What i do not realize is if truth be told how you are no longer actually much more well-appreciated than you might be right now. You’re so intelligent. You already know therefore significantly relating to this topic, made me personally consider it from so many various angles. Its like men and women aren’t fascinated except it is one thing to accomplish with Woman gaga! Your personal stuffs nice. All the time care for it up!