ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

Date:

Advertisements

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ ಸಂಘಟನೆಯ ಬೆಂಗಳೂರು ನಗರದ ಐವರು ವಿಭಾಗೀಯ ಕಾರ್ಯದರ್ಶಿಗಳಲ್ಲಿ ಈ ಪೌಲ್ ವಾಜ಼್ ಕೂಡ ಒಬ್ಬರು. ಈಗ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಪ್ರೊಫೆಸರ್ ಮತ್ತು ರಿಜಿಸ್ಟ್ರಾರ್ ಆಗಿ ನಿವೃತ್ತರಾಗಿರುವ ಪ್ರೊ. ಬಾಬು ಮ್ಯಾಥ್ಯೂ ಅವರು ಎಐಟಿಯುಸಿಯ ಕರ್ನಾಟಕದ ಜನರಲ್ ಸೆಕ್ರೆಟರಿಯಾಗಿದ್ದರು…


ನಮ್ಮ ಹೊಸ ಪಕ್ಷವನ್ನು ಬೆಳೆಸುವ, ಕಾರ್ಮಿಕರ ನಡುವೆ ಕೆಲಸ ಮಾಡುವ ನಮ್ಮ ಪ್ರಯತ್ನ ಮುಂದುವರಿಯಿತು. ಸುಮಾರು 150ರಷ್ಟು ಕಾರ್ಮಿಕರಿದ್ದ ಶಿವಮೊಗ್ಗ ಸ್ಟೀಲ್ಸ್ ಕಾರ್ಖಾನೆಯಲ್ಲಿ 1979ರ ಮಧ್ಯ ಭಾಗದಲ್ಲಿ ಕಾರ್ಮಿಕರು ಮುಷ್ಕರ ಹೂಡಿದ್ದರು. ಅವರು ಅದೇ ಮೊದಲ ಬಾರಿಗೆ, ಸ್ವತಂತ್ರವಾದ ಯೂನಿಯನ್ ಸ್ಥಾಪಿಸಿಕೊಂಡಿದ್ದರು ಅಲ್ಲಿ ನಮ್ಮೂರ ಕಡೆಯವನೇ ಆದ ಶ್ರೀಕಾಂತ್ ಎಂಬ ಬ್ರಾಹ್ಮಣ ಯುವಕ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಮೊದಲು ಯಾರಿಂದಲೋ ಆತನ ಪರಿಚಯ ಆಗಿತ್ತು. ಅಲ್ಲಿನ ಯಾರಾದರೂ ಕಾರ್ಮಿಕ ಮುಖಂಡರನ್ನು ಪರಿಚಯ ಮಾಡಿಕೊಡುವಂತೆ ಆತನನ್ನು ಕೇಳಿದ್ದಕ್ಕೆ “ಅವರೆಲ್ಲ ಪ್ರಯೋಜನವಿಲ್ಲ ಕಣ್ರೀ…! ಏನೂ ತಿಳವಳಿಕೆ ಇಲ್ಲದ ಶಂಭುಗಳು. ಯಾರಾದರೂ ಸ್ಟಾಫ್ ಲೀಡರ್‌ಗಳನ್ನು ಪರಿಚಯ ಮಾಡಿಕೊಳ್ಳಿ” ಎಂದಿದ್ದ. ಆದರೂ ನನ್ನ ಒತ್ತಾಯದ ಮೇರೆಗೆ ಮುಷ್ಕರದ ಮುಂಚೂಣಿಯಲ್ಲಿದ್ದ ಇಬ್ಬರು ದಕ್ಷಿಣ ಕನ್ನಡದ ಯುವಕರನ್ನು ಪರಿಚಯ ಮಾಡಿಕೊಟ್ಟ. ಅವರಲ್ಲೊಬ್ಬ ಬಂಟರ ಯುವಕ, ಮತ್ತೊಬ್ಬ ಕ್ರೈಸ್ತ. ಅವರ ಜೊತೆ ಸಾಕಷ್ಟು ಒಡನಾಟ, ಚರ್ಚೆ ನಡೆಸಿದ ನಂತರ ನಮ್ಮ ತಂಡ ಒಂದು ಸಂಜೆ ಅಲ್ಲಿಗೆ ಹೋಗಿ ಕೆಲವು ಹೋರಾಟದ ಹಾಡುಗಳನ್ನು ಹಾಡಿ, ಭಾಷಣ ಮಾಡಿ, ಅವರ ಹೋರಾಟಕ್ಕೆ ಗಟ್ಟಿ ಬೆಂಬಲ ನೀಡುವುದಾಗಿ ಭರವಸೆ ನೀಡಿದೆವು. ಆದರೆ, ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಪತ್ರಿಕಾ ಹೇಳಿಕೆ ನೀಡುವುದು, ಇತರ ಸಂಘಟನೆಗಳಿಂದಲೂ ಅಂಥ ಬೆಂಬಲ ದೊರಕಿಸುವುದು, ಕಾರಖಾನೆ ಪ್ರದೇಶದಲ್ಲೂ ನಗರದೊಳಗೂ ಮೆರವಣಿಗೆ ತೆಗೆದು ಮುಷ್ಕರಕ್ಕೆ ಇತರ ಕಾರ್ಖಾನೆಗಳ ಕಾರ್ಮಿಕರಿಂದ ಮತ್ತು ಸಾರ್ವಜನಿಕರಿಂದ ಬೆಂಬಲ ಕೋರುವಂತೆ ಕಾರ್ಮಿಕರಿಗೆ ಮಾರ್ಗದರ್ಶನ ಮಾಡುವುದು, ಮತ್ತಿತರ ರೀತಿಗಳಲ್ಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮೂಲಕ ನಮ್ಮ ಆ ಭರವಸೆಯನ್ನು ಹ್ಯಾಗೆಲ್ಲ ಕಾರ್ಯರೂಪಕ್ಕೆ ತರಬಹುದೆಂಬುದರ ಕುರಿತು ನಮಗೆ ಅನುಭವ ಇರಲಿಲ್ಲ. ಹಾಗಾಗಿ ನಮ್ಮ ಭರವಸೆ ಕೇವಲ ಮಾತಿನ ಭರವಸೆಯಷ್ಟೇ ಆಗಿ ಉಳಿಯಿತು.

ಆ ಸಮಯದಲ್ಲಿ ಅಲ್ಲಿನ ನನ್ನ ಇಬ್ಬರು ಮಿತ್ರರನ್ನೂ ಒಳಗೊಂಡಂತೆ ಕೆಲವು ಮುಂಚೂಣಿ ಕಾರ್ಮಿಕರು ಒಂದು ದುಸ್ಸಾಹಸದ ಯೋಚನೆ ಮಾಡಿದ್ದನ್ನು ನಾನು ತಡೆಯುವಲ್ಲಿ ಯಶಸ್ವಿಯಾದೆ. ಕಾರ್ಮಿಕರ ಮುಷ್ಕರದ ವೇಳೆ ವಿಪರೀತ ಕಿರುಕುಳ ಕೊಡುತ್ತಿದ್ದ ಒಬ್ಬ ಸೀನಿಯರ್ ಮ್ಯಾನೇಜರ್ನನ್ನು ರೈಲ್ವೆ ಸ್ಟೇಶನ್ ಬಳಿಯ ಓವರ್ಬ್ರಿಡ್ಜ್ ಬಳಿ ಹೊಂಚುದಾಳಿ (ಆಂಬುಶ್) ಮಾಡಿ ಕೊಲ್ಲುವುದು ಆ ಕಾರ್ಮಿಕರ ಆಲೋಚನೆಯಾಗಿತ್ತು. ನಾನು ಅದನ್ನು ಖಡಾಖಡಿ ವಿರೋಧಿಸಿದೆ. “… ಅದರಿಂದ ನೀವೊಂದು ಸೇಡು ತೀರಿಸಿಕೊಳ್ಳಬಹುದು ಅಷ್ಟೇ. ಆದರೆ, ಪ್ರತಿಯಾಗಿ ನಿಮ್ಮಲ್ಲಿ ಕೆಲವರು ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು, ಗಲ್ಲೂ ಆಗಬಹುದು; ಕಾರ್ಮಿಕರಿಗಾಗಿ ತ್ಯಾಗ, ಬಲಿದಾನ ಮಾಡಿದವರೆಂದು ಕೆಲವು ಕಾರ್ಮಿಕರು ನಿಮ್ಮನ್ನು ಹಾಡಿಹೊಗಳಲೂ ಬಹುದು, ಹೊರತು ನಿಮ್ಮ ಸಮಸ್ಯೆಗೇನಾದರೂ ಪರಿಹಾರ ಸಿಗುತ್ತಾ? ನಮ್ಮ ಮೇಲೆ ತೀರಾ ಶೋಷಣೆ, ದಬ್ಬಾಳಿಕೆ, ಅನ್ಯಾಯ ನಡೀತಿರೋದು ನಿಜ. ಅದರ ವಿರುದ್ಧ ಶಕ್ತಿ ಮೀರಿ ಹೋರಾಟ ಮಾಡಬೇಕು. ಗೆಲುವು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಈ ಶೋಷಣೆಯ ಆಳುವ ವ್ಯವಸ್ಥೆ ಕಾರಣ ಹೊರತು ನಿಮ್ಮ ಹೋರಾಟದ ಕೊರತೆ ಕಾರಣವಲ್ಲ. ಈ ಶೋಷಣೆಯ ವ್ಯವಸ್ಥೆಯನ್ನು ಹೋಗಲಾಡಿಸಿ ಜನರಿಗೆ ಸದಾಕಾಲವೂ ನ್ಯಾಯ ದೊರಕುವಂತಹ ವ್ಯವಸ್ಥೆಯ ಕಡೆ ನಮ್ಮ ಹೋರಾಟಗಳನ್ನು ಮುಂದುವರಿಸಬೇಕು, ಅದರ ಬದಲು ಇಂತಹ ದುಸ್ಸಾಹಸದ ಯೋಚನೆ ಮಾಡಬಾರದು…” ಮುಂತಾಗಿ ಅವರಿಗೆ ಮನವರಿಕೆ ಮಾಡಿ, ಅವರು ತಮ್ಮ ಯೋಚನೆಯಿಂದ ಹಿಂದೆ ಸರಿಯುವಂತೆ ಮಾಡಿದೆ.

ಆಗ ಅಜೀಜ್ ಸೇಟ್ ಅವರು ರಾಜ್ಯದ ಕಾರ್ಮಿಕ ಮಂತ್ರಿಯಾಗಿದ್ದರು. ಅವರ ನೆರವಿನಿಂದ ಕಾರ್ಖಾನೆಯ ಮಾಲೀಕ ವರ್ಗದವರು ಮುಷ್ಕರವನ್ನು ಯಶಸ್ವಿಯಾಗಿ ಹತ್ತಿಕ್ಕಿದರು! ನನ್ನ ಇಬ್ಬರು ಮಿತ್ರರನ್ನೂ ಒಳಗೊಂಡಂತೆ ಬಹಳಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರಿಗೆ ಸಿದ್ದಪ್ಪ-ಸುಸೈ ಸ್ವಲ್ಪ ಮಟ್ಟಿಗೆ ನೆರವಾಗಲು ಪ್ರಯತ್ನಿಸಿದರಾದರೂ ಬೇರೆ ಸ್ಥಾಪಿತ ಕಾರ್ಮಿಕ ಸಂಘಟನೆಗಳವರು ಆ ಕಡೆ ಗಮನವನ್ನೇ ನೀಡಲಿಲ್ಲ.

Shivamoga steel

ಆ ಕ್ರಿಶ್ಚಿಯನ್ ಕಾರ್ಮಿಕನ ಆಪ್ತ ಸ್ನೇಹಿತ ಪೌಲ್ ವಾಜ಼್ ಎಂಬಾತ ಬೆಂಗಳೂರಿನ ಭೊರೂಕಾ ಸ್ಟೀಲ್ ಫ್ಯಾಕ್ಟರಿಯಲ್ಲಿ ಕಾರ್ಮಿಕ ಮುಖಂಡನಾಗಿದ್ದಾನೆ ಎಂದೂ, ಅವನನ್ನು ಭೇಟಿ ಮಾಡಿದರೆ ಕಾರ್ಮಿಕ ಸಂಘಟನೆಯನ್ನು ಇನ್ನೂ ಚೆನ್ನಾಗಿ ಕಟ್ಟಬಹುದು ಎಂದೂ ಆತ ಹೇಳಿದ. ನಾನು ಆತನ ವಿಳಾಸ ಮತ್ತು ಕಂಪನಿಯ ಫೋನ್ ನಂಬರ್ ತೆಗೆದುಕೊಂಡು ಬೆಂಗಳೂರಿಗೆ ಹೋದೆ. ಈಗಿನಂತೆ ಆಗ ಮೊಬೈಲ್ ಫೋನ್ಗಳು ಇರಲಿಲ್ಲವಲ್ಲ. ಫ್ಯಾಕ್ಟರಿಗೆ ಫೋನ್ ಮಾಡಿ, ಸಂಜೆ ಅವರ ಡ್ಯೂಟಿ ಮುಗಿದ ಬಳಿಕ ಭೇಟಿ ಫಿಕ್ಸ್ ಮಾಡಿಕೊಂಡೆ. ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ ಸಂಘಟನೆಯ ಬೆಂಗಳೂರು ನಗರದ ಐವರು ವಿಭಾಗೀಯ ಕಾರ್ಯದರ್ಶಿಗಳಲ್ಲಿ ಈ ಪೌಲ್ ವಾಜ಼್ ಕೂಡ ಒಬ್ಬರು. ಈಗ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಪ್ರೊಫೆಸರ್ ಮತ್ತು ರಿಜಿಸ್ಟ್ರಾರ್ ಆಗಿ ನಿವೃತ್ತರಾಗಿರುವ ಪ್ರೊ. ಬಾಬು ಮ್ಯಾಥ್ಯೂ ಅವರು ಎಐಟಿಯುಸಿಯ ಕರ್ನಾಟಕದ ಜನರಲ್ ಸೆಕ್ರೆಟರಿಯಾಗಿದ್ದರು. ಪೀಣ್ಯದಲ್ಲಿ ಪೌಲ್ ವಾಜ಼್ ಒಂದು ರೂಮು ಮಾಡಿಕೊಂಡಿದ್ದರು. ನಾನು ರಾತ್ರಿ ಅವರ ರೂಮಿನಲ್ಲೇ ಉಳಿದೆ. ಸಾಕಷ್ಟು ಚರ್ಚಿಸಿದೆವು. ಕಾರ್ಮಿಕ ಹೋರಾಟಗಳಲ್ಲಿ ಅದಾಗಲೇ ಬಹಳ ವರ್ಷಗಳ ಅನುಭವಿಯಾಗಿದ್ದ ಅವರಿಂದ ನಾನು ಒಂದಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ಆದರೆ ಅವರನ್ನು ನಮ್ಮ ಚಿಂತನೆಯ ಕಡೆಗೆ ಸೆಳೆದುಕೊಳ್ಳುವ ಸಾಧ್ಯತೆ ಸಹಜವಾಗಿಯೇ ಇರಲಿಲ್ಲ.

ಇತ್ತ ಹೇಮಾ ಅವರ ತಂದೆ ತೀರಿಕೊಂಡ ಸ್ವಲ್ಪ ಕಾಲದ ನಂತರ ನಾನು-ಹೇಮಾ ನಮ್ಮ ಕಾರ್ಮಿಕ ಕೆಲಸಕ್ಕೆ ಇನ್ನಷ್ಟು ಅನುಕೂಲವಾಗುವಂತೆ ಮೇಟಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಂಟಿಕೊಂಡಿರುವ ಕುಂಬಾರಕೊಪ್ಪಲಿನಲ್ಲಿ ಮನೆ ಮಾಡುವ ತೀರ್ಮಾನ ಮಾಡಿದೆವು. ಅಲ್ಲಿಯವರೆಗೂ ಒಂಟಿಕೊಪ್ಪಲಿನಲ್ಲಿ ಪಡುವಾರಹಳ್ಳಿಯ ಪಕ್ಕದ ಮುಖ್ಯರಸ್ತೆಯಲ್ಲಿ ವಿಶಾಲವಾದ ಕಾಂಪೌಂಡಿನೊಳಗಿದ್ದ, ಎಲ್ಲಾ ಸೌಕರ್ಯವಿದ್ದ ಔಟ್ಹೌಸಿನಲ್ಲಿ ವಾಸವಿದ್ದೆವು. ಆ ಮನೆಯ ಮಾಲೀಕರೂ ಕೊಂಕಣಿಯವರು; ಮಾಲೀಕರ ಹೆಂಡತಿಗೆ ಹೇಮಾ ಅವರ ವಯೋವೃದ್ಧ ತಾಯ್ತಂದೆಯರ ಬಗ್ಗೆ ವಿಶೇಷ ಕಾಳಜಿಯಿತ್ತು. ಸಾಮಾನ್ಯವಾಗಿ ಕೊಂಕಣಿಯವರು ಆಯಾ ಸೀಸನ್ನಲ್ಲಿ ದೊರೆಯುವ ನಾನಾ ಬಗೆಯ ತರಕಾರಿ, ಹಣ್ಣುಹಂಪಲುಗಳನ್ನು ತಪ್ಪದೆ ಎಷ್ಟೇ ದುಬಾರಿಯಾದರೂ ಬಿಡದೆ ಬಳಸುತ್ತಾರೆ ಹಾಗೂ ಎಲ್ಲಾ ತರಕಾರಿಗಳಿಂದಲೂ ಬಗೆಬಗೆಯ ಅಡಿಗೆ ಮತ್ತು ತಿಂಡಿತಿನಿಸುಗಳನ್ನು ಮಾಡುತ್ತಾರೆ. ಅನುಕೂಲಸ್ಥರೆಂದ ಮೇಲೆ ಕೇಳುವುದೇ ಬೇಡ. ಆಕೆ ವಿಶೇಷವಾಗಿ ಮಾಡಿದ್ದನ್ನೆಲ್ಲ ಈ ತಾಯ್ತಂದೆಯರಿಗೆ ಪ್ರತಿದಿನ ಎಂಬಂತೆ ಕೊಡುತ್ತಿದ್ದರು. ನಾವು ಮನೆ ಬದಲಿಸುವುದನ್ನು ತಿಳಿದು ಆಕೆ, “ಯಾಕೆ ಈ ಮುದಿ ಪ್ರಾಯದಲ್ಲಿ ಇವರನ್ನು ಅಲ್ಲಿಗೆಲ್ಲ ಕರೆದುಕೊಂಡು ಹೋಗ್ತೀರೋ! ಇನ್ನೆಷ್ಟು ಕಾಲ ಇದ್ದಾರು? ಇಲ್ಲೇ ಇದ್ದುಬಿಡಬಹುದಿತ್ತು…” ಎಂದು ತೀವ್ರ ಕಳವಳ ಪಟ್ಟರು. ಆದರೆ ನಾವು ನಿರ್ಧರಿಸಿದಂತೆ ಕುಂಬಾರಕೊಪ್ಪಲಿನಲ್ಲಿ ಚಿಕ್ಕದೊಂದು ಮನೆ ಮಾಡಿದೆವು.

ಮನೆ ಎಂದರೆ ಹಳೆಯ ಕಾಲದ ಕೈಹೆಂಚಿನ ಹಳ್ಳಿ ಮನೆ; ಈಗಿನ ನಮ್ಮ ಮಧ್ಯಮ ವರ್ಗದವರ ಮನೆಗಳ ಹಾಲ್‌ನ ಅರ್ಧದಷ್ಟು ಇದ್ದಿರಬಹುದಾದ ಜಾಗದಲ್ಲಿ ನಡುವೆ ಒಂದು ಅರ್ಧ ಗೋಡೆ ಕಟ್ಟಿ ಎರಡು ʻಕೋಣೆʼಯಾಗಿ ಮಾಡಿದ್ದು. ಅವರು ರೈತರು: ಸ್ವಲ್ಪ ಜಮೀನಿತ್ತು, ದನ-ಕುರಿ ಸಾಕಿದ್ದರು. ಮೈಸೂರಿನ ಕೃಷ್ಣರಾಜೇಂದ್ರ ಬಟ್ಟೆ ಮಿಲ್ನಲ್ಲಿ ಕೆಲಸಗಾರರಾಗಿದ್ದ ಮನೆ ಯಜಮಾನರು ಮಿಲ್ ಬಂದ್ ಆಗಿದ್ದರಿಂದ ಕೆಲಸವಿಲ್ಲದೆ ಹೊಲ, ದನಕುರಿ ನೋಡಿಕೊಂಡಿದ್ದರು. ಅವರ ಮಡದಿ ಕರಿಗೆಮ್ಮ ಬಹಳ ಕಕ್ಕುಲಾತಿಯ ಮಹಿಳೆ. ಸೊಗಸಾಗಿ ರಾಗಿ ಮುದ್ದೆ, ಬಸ್ಸಾರು ಮಾಡುವರು; ನಾವು ಮನೆಯಲ್ಲಿದ್ದ ದಿನ ನಮ್ಮನ್ನೂ ಕರೆದು ಊಟ ನೀಡುತ್ತಿದ್ದರು. ಸುತ್ತಮುತ್ತಲ ಮನೆಗಳಲ್ಲಿ ಕಾರ್ಖಾನೆ ಕಾರ್ಮಿಕರು ಬಾಡಿಗೆಗೆ ಇದ್ದರು, ಅಲ್ಲದೆ ಆ ಮನೆಗಳವರೂ ಒಬ್ಬರಾದರೂ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು. ನಾವು ಅವರುಗಳ ಸ್ನೇಹ ಸಂಪಾದಿಸತೊಡಗಿದೆವು. ಆ ಮನೆಯಲ್ಲಿ ನಾಲ್ಕೈದು ತಿಂಗಳು ಇದ್ದ ನಂತರ, ಆ ಊರಿನ ಬಸ್‌ಸ್ಟ್ಯಾಂಡಿಗೆ ಸಮೀಪದ ಬೇರೊಂದು ಮನೆಗೆ ಬದಲಾಯಿಸಿದೆವು. ಮೈಸೂರು ಬಿಡುವವರೆಗೂ ಅಲ್ಲೇ ಇದ್ದೆವು.

ನಾವು ʻಪಕ್ಷʼ ಕಟ್ಟಿಕೊಂಡಿದ್ದೆಲ್ಲಾ ಸರಿ. ಅದನ್ನು ಬೆಳೆಸಲು ಇಷ್ಟೆಲ್ಲಾ ತಯಾರಿ ಶುರು ಮಾಡಿದ್ದೂ ಆಯಿತು. ಆದರೆ ಮುಂದಿನ ಒಂದು ವರ್ಷದೊಳಗೆ, 1980ರ ಏಪ್ರಿಲ್ ಹೊತ್ತಿಗೆ ನಮ್ಮ ಈ ಹೊಸ ʻಪಕ್ಷʼದ ಎಲ್ಲ ಪ್ರಮುಖರಿಗೂ – ಅಂದರೆ ಲಕ್ಷ್ಮಿಗೆ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯಲ್ಲಿ ಸರ್ಕಾರಿ ವೈದ್ಯನಾಗಿ, ವೇಣುಗೆ ಭದ್ರಾವತಿಯಲ್ಲಿ ಕಾಲೇಜು ಉಪನ್ಯಾಸಕನಾಗಿ, ಹಾಗೂ ರತಿಗೆ ಸಿಎಫ್ಟಿಆರ್‌ಐಯಲ್ಲಿ ಸಂಶೋಧಕಿಯಾಗಿ – ಉದ್ಯೋಗ ಸಿಕ್ಕಿತು. ಗಣೇಶ್ ಅದಾಗಲೇ ತೀರ್ಥಹಳ್ಳಿಯಲ್ಲಿ ಕಾಲೇಜು ಉಪನ್ಯಾಸಕನಾಗಿ ಹೊರಟುಹೋಗಿದ್ದ. ಹೀಗೆ ನಮ್ಮ ಗುಂಪು ಬಹುಮಟ್ಟಿಗೆ ಚದುರುವಂತಾಯಿತು. ಅದೇ ವೇಳೆಗೆ ಲಿಬರೇಶನ್ ಪಕ್ಷದ ವತಿಯಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳಿಗೆ ಇನ್-ಚಾರ್ಜ್ ಆಗಿದ್ದ ಕೇಂದ್ರ ಸಮಿತಿ ಸದಸ್ಯ ನಡೆಸಿದ ಅಹಿತಕರ ನಡವಳಿಕೆಯಿಂದಾಗಿ ಬೆಂಗಳೂರು ಘಟಕಕ್ಕೂ, ಒಟ್ಟಾರೆ ಕರ್ನಾಟಕಕ್ಕೇನೇ ಪಕ್ಷದ ಸಂಪರ್ಕ ಕಡಿದುಹೋಯಿತು. ನಮ್ಮಲ್ಲಿ ಸಾಕಷ್ಟು ಅನುಭವ, ಪ್ರಬುದ್ಧತೆ ಇದ್ದಿದ್ದಲ್ಲಿ ಆಮೇಲೂ ನಾವು ಒಂದು ಗುಂಪಾಗಿ/ಪಕ್ಷವಾಗಿ ಮುಂದುವರಿಯಬಹುದಿತ್ತು, ಅದನ್ನು ಬೆಳೆಸಬಹುದಿತ್ತು. ಆದರೆ ನಮ್ಮಲ್ಲಿನ್ನೂ ಕ್ರಾಂತಿಯ ಬಗ್ಗೆ ಇದ್ದಿದ್ದು ಒಂದು ರೀತಿ ʻಹದಿಹರಯದ ವ್ಯಾಮೋಹʼ (infatuation)ದಂಥದ್ದು ಎಂದು ನನ್ನ ಅನಿಸಿಕೆ. ಹಾಗಾಗಿ ನಮ್ಮಗಳ ನಡುವೆ ಮೊದಲಿನಂತೆಯೇ ಬಹಳ ಆತ್ಮೀಯವಾದ ಸ್ನೇಹ ಉಳಿಯಿತೇ ಹೊರತು (ಅದು ಇಂದಿಗೂ ಗಟ್ಟಿಯಾಗಿ ಉಳಿದಿದೆ) ನಾವೊಂದು ಕ್ರಾಂತಿಕಾರಿ ತಂಡವಾಗಿ ಉಳಿಯಲಿಲ್ಲ; ನಾನು-ಹೇಮಾ ಒಂದು ರೀತಿ ಒಂಟಿಯಾಗಿ ಬಿಟ್ಟೆವು.

ಈಗ ಮುಂದೇನು? ಹೇಮಾಗೇನೋ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗವಿತ್ತು; (ಆದರೂ ಈಗಿನಂತೆ ದೊಡ್ಡ ಸಂಬಳವೇನಲ್ಲ, ಅಂಚೆ-ತಂತಿ ಇಲಾಖೆಗೆ ಹೋಲಿಸಿದರೆ ಸ್ವಲ್ಪ ಉತ್ತಮವಾಗಿತ್ತು ಅಷ್ಟೇ) ಆದರೆ ನಾನು ಉದ್ಯೋಗಕ್ಕೆ ಶಾಶ್ವತವಾಗಿ ರಾಜೀನಾಮೆ ಕೊಟ್ಟುಬಿಟ್ಟಿದ್ದೆ, ಪುನಃ ಅದೇ ಕೆಲಸ ಸಿಗುವುದು ಸಾಧ್ಯವಿರಲಿಲ್ಲ. ಅಲ್ಲದೆ ನನಗೆ ಮತ್ತೆ ಕೆಲಸಕ್ಕೆ ಹೋಗುವ ಉದ್ದೇಶವೂ ಇರಲಿಲ್ಲ. ಹೇಗಾದರಾಗಲಿ, ಕ್ರಾಂತಿಯ ಧ್ಯೇಯವನ್ನು ಮುಂದುವರಿಸಲು ಪ್ರಯತ್ನಿಸಲೇಬೇಕು ಎಂದು ಹೇಮಾ, ನಾನು ನಿರ್ಧರಿಸಿದೆವು. ಆದರೆ ನಮಗಿದ್ದ ತಿಳಿವಳಿಕೆ ಮತ್ತು ಅನುಭವ ಕೇವಲ ಮೇಲ್ಪದರದ್ದು ಮಾತ್ರ. ಪಕ್ಷದ/ಮೇಲ್ಸಮಿತಿಯ ನೆರವು, ಮಾರ್ಗದರ್ಶನವೂ ಇಲ್ಲ. ಹಾಗಾದರೆ ಹೇಗೆ ಮುಂದುವರಿಯಬೇಕು? ಎಂದು ಸಾಕಷ್ಟು ಯೋಚಿಸಿದೆವು.

ಆ ಕಾಲದಲ್ಲಿ ನಮಗೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಚಳವಳಿ ಕಟ್ಟುವ ವಿಚಾರದಲ್ಲಿ ಇದ್ದಿದ್ದು ಬಿಹಾರದ ಭೋಜಪುರದ ಮಾದರಿಯೊಂದೇ. ಆ ನಿಟ್ಟಿನಲ್ಲಿ ಕರ್ನಾಟಕವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಇಲ್ಲಿ ಹೇಗೆ ಮತ್ತು ಎಲ್ಲಿ ಚಳವಳಿ ಕಟ್ಟಿ ಬೆಳೆಸಬೇಕು ಎಂಬ ಬಗ್ಗೆ ಲಕ್ಷ್ಮಿ ಸ್ಥೂಲ ರೂಪುರೇಷೆಯೊಂದನ್ನು ನಮ್ಮಗಳ ಮುಂದಿಟ್ಟಿದ್ದ. ʻಭೋಜಪುರ ಒಂದು ವಿಶಿಷ್ಟ ಸನ್ನಿವೇಶವನ್ನು ಹೊಂದಿರುವ ಜಿಲ್ಲೆ: ಒಂದೆಡೆಗೆ ಅದು ಆ ರಾಜ್ಯದ ಅಕ್ಕಿಯ ಕಣಜ; ಮತ್ತೊಂದೆಡೆಗೆ ಒಳ್ಳೆಯ ವಾಣಿಜ್ಯ ಕೇಂದ್ರ; ಇನ್ನೊಂದೆಡೆ ಒಳ್ಳೆಯ ಬೌದ್ಧಿಕ-ಶೈಕ್ಷಣಿಕ ಕೇಂದ್ರ ಕೂಡ ಹೌದು; ಹಿನ್ನೆಲೆಯಲ್ಲಿ ರಕ್ಷಣಾ ಸ್ಥಾವರವಾಗಬಲ್ಲ ಅರಣ್ಯ ಮತ್ತು ಬೆಟ್ಟಗುಡ್ಡಗಳ ಪ್ರದೇಶ. ಹಾಗಾಗಿ ಅಲ್ಲಿ ಕ್ರಾಂತಿಕಾರಿ ಚಳವಳಿ ಸಾಕಷ್ಟು ಯಶಸ್ವಿಯಾಗಿ ಬೆಳೆಯುತ್ತಿದೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ಹೆಚ್ಚೂಕಮ್ಮಿ ಇಂಥದೇ ಸನ್ನಿವೇಶವನ್ನು ಹೊಂದಿದೆ. ಅದು ರಾಜ್ಯದ ಅಕ್ಕಿಯ ಕಣಜಗಳಲ್ಲೊಂದು; ಹಾಗೆಯೇ ಒಂದು ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವೂ ಹೌದು. ಹಿನ್ನೆಲೆಗೆ ಸಹ್ಯಾದ್ರಿ ಮತ್ತು ಮಲೆನಾಡಿನ ವಿಸ್ತಾರವಾದ ಬೆಟ್ಟಗುಡ್ಡ-ಅರಣ್ಯಗಳ ಪ್ರದೇಶವೂ ಇದೆ. ಜೊತೆಗೆ, ಕಮ್ಯೂನಿಸ್ಟ್ ಚಳವಳಿಯ ಪ್ರಭಾವ ಸಾಕಷ್ಟು ಇರುವ ಭದ್ರಾವತಿ ಮತ್ತು ದಾವಣಗೆರೆಯೂ ಹತ್ತಿರದಲ್ಲೇ ಇವೆ; ದಾವಣಗೆರೆ ಒಂದು ವಾಣಿಜ್ಯ ಕೇಂದ್ರವೂ ಹೌದು. ಹೀಗೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಚಳವಳಿ ಕಟ್ಟಲು ಆರಂಭಿಸುವುದಕ್ಕೆ ಶಿವಮೊಗ್ಗ ಪ್ರಶಸ್ತವಾದ ಪ್ರದೇಶʼ ಎಂಬುದು ಲಕ್ಷ್ಮಿಯ ಅಸೆಸ್ಮೆಂಟ್ ಆಗಿತ್ತು. ಇದು ನಮ್ಮಗಳಿಗೂ ʻಒಪ್ಪಿಗೆʼಯಾಗಿತ್ತು.

ಇದನ್ನೇ ಆಧಾರವಾಗಿಟ್ಟುಕೊಂಡು ನಾವು ಯೋಚಿಸಿದಾಗ, ಶೃಂಗೇರಿ-ಕೊಪ್ಪ-ನರಸಿಂಹರಾಜಪುರ-ಮೂಡಿಗೆರೆ-ತೀರ್ಥಹಳ್ಳಿ-ಹೊಸನಗರ ತಾಲ್ಲೂಕುಗಳನ್ನೊಳಗೊಂಡ ಭೂಪ್ರದೇಶವೂ ಪ್ರಶಸ್ತವಾಗಿದೆ ಎಂದು ನಮಗನ್ನಿಸಿತು. ಇದು ಶಿವಮೊಗ್ಗಕ್ಕೆ ಅಷ್ಟೇನೂ ದೂರವಲ್ಲದ ಪ್ರದೇಶವೂ ಹೌದು. ಪೂರಕವಾಗಿ ಅಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ವ್ಯಾಪಕವಾದ ಪ್ರಭಾವ, ಸಂಘಟನೆ ಹೊಂದಿವೆ. ಇದನ್ನು ಅಕ್ಕಿಯ ಕಣಜ ಎನ್ನಲು ಆಗದಿದ್ದರೂ ಅಕ್ಕಿಯ ಜೊತೆಗೆ ಅಡಿಕೆ, ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆಗಳನ್ನುಳ್ಳ ಸಮೃದ್ಧ ಕೃಷಿ ಆರ್ಥಿಕತೆ ಇದೆ. ಇಲ್ಲಿ ನೆಲೆ ನಿಂತು ತಾಳ್ಮೆಯಿಂದ ಸಂಘಟನೆ ಬೆಳೆಸಿದರೆ ಗಟ್ಟಿಯಾದ ಕ್ರಾಂತಿಕಾರಿ ಚಳವಳಿ ಕಟ್ಟಿ ಬೆಳೆಸಬಹುದು, ಅಷ್ಟರಲ್ಲಿ ಇಂದಲ್ಲಾ ನಾಳೆ ಪಕ್ಷದ ಸಂಪರ್ಕವೂ ಪುನಃ ದೊರೆಯಬಹುದು ಎಂದು ನಾವು ತೀರ್ಮಾನಿಸಿದೆವು. ಹಾಗಿದ್ದರೆ ಅಲ್ಲಿಗೇ ಹೋಗಿ ನೆಲೆಸಿ ಕೆಲಸ ಮುಂದುವರಿಸುವುದು ಎಂದೂ ನಿರ್ಧರಿಸಿದೆವು.

ಇದನ್ನೂ ಓದಿ ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು: ಭಾಗ1

ಆದರೆ ಭದ್ರವಾಗಿ ಕಾಲೂರುವವರೆಗೆ ಜನರ ಕಣ್ಣಿಗೆ ಕಾಣುವಂತಹ ಉದ್ಯೋಗವೊಂದು ಬೇಕಾಗುತ್ತದೆ. ಅದಕ್ಕೇನು ಮಾಡುವುದು? ಪತ್ರಕರ್ತರಾಗಿ ಕೆಲಸ ಮಾಡುವುದಾದರೆ ಎಲ್ಲ ರೀತಿಯಲ್ಲೂ ಸೂಕ್ತವಾಗಿರುತ್ತದೆ. ಎಲ್ಲಾ ಕಡೆಗೆ ಓಡಾಡಲು, ವ್ಯಾಪಕವಾಗಿ ಜನಸಂಪರ್ಕ ಬೆಳೆಸಲು ಅವಕಾಶ ಇರುತ್ತದೆ. ನಮ್ಮ ವಿಚಾರಗಳನ್ನು ಪ್ರಚುರಪಡಿಸಲೂ ಅವಕಾಶ ಸಿಗುತ್ತದೆ. ಇಂತಹ ಹಲವು ಅನುಕೂಲತೆಗಳಿರುತ್ತವೆ. ಹೀಗೆಂದುಕೊಂಡು, ಅಂದಿಗೆ ಹೆಚ್ಚು ಜನಜನಿತವಾಗಿದ್ದ ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸಕ್ಕೆ ಪ್ರಯತ್ನಿಸಿದೆ. ಆದರೆ ಎರಡೂ ಕಡೆ ಕೆಲವೇ ಸಮಯಕ್ಕೆ ಮೊದಲು ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಂಡುಬಿಟ್ಟಿದ್ದರು. ಹಾಗಾಗಿ ಒಂದು ಸ್ವಂತ ಪತ್ರಿಕೆ ನಡೆಸುವುದೊಂದೇ ಮಾರ್ಗ ಎಂದಾಯಿತು. ಅದಕ್ಕೆ ಅನುಭವ ಬೇಕಾಗುತ್ತದೆ. ಅದಕ್ಕೂ ಒಂದು ದಾರಿ ಯೋಚಿಸಿದೆವು. ಮೈಸೂರಿನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಮತ್ತು ಅಚ್ಚುಕಟ್ಟಾಗಿ ಪ್ರಕಟವಾಗುತ್ತಿದ್ದ ʻಆಂದೋಲನʼ ಪತ್ರಿಕೆಯಲ್ಲಿ ಉಚಿತವಾಗಿ ಕೆಲಸ ಮಾಡಿ ಕೆಲಸ ಕಲಿಯುವುದು ಅಂತ ತೀರ್ಮಾನಿಸಿದೆವು. ರಾಮು, ವೇಣು ಅವರ ಸಲಹೆಯನ್ನು ಕೇಳಿದಾಗ ಅವರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಹೇಗೂ ಹೇಮಾ ಅವರ ತಾಯಿ ಇರುವವರೆಗೂ ನಾವು ಮೈಸೂರಿನಲ್ಲೇ ಇರುವುದು ಅನಿವಾರ್ಯವೂ ಆಗಿತ್ತು. ತೊಂಬತ್ತು ವರ್ಷಕ್ಕೆ ಸಮೀಪವಿದ್ದ ಅವರನ್ನು ಆರೋಗ್ಯ ಸೌಕರ್ಯಗಳು ಚೆನ್ನಾಗಿರದಿದ್ದ ಮಲೆನಾಡಿನ ಥಂಡಿಯ ವಾತಾವರಣಕ್ಕೆ ಕರೆದೊಯ್ಯುವುದು ಸೂಕ್ತವಾಗಿರಲಿಲ್ಲ.
ಇಷ್ಟೆಲ್ಲಾ ಆಲೋಚನೆ-ಸಮಾಲೋಚನೆ, ಮಾನಸಿಕ ಸಿದ್ಧತೆ ಎಲ್ಲ ಮಾಡಿಕೊಂಡು, ʻಆಂದೋಲನʼದ ರಾಜಶೇಖರ ಕೋಟಿಯವರನ್ನು ಕಂಡು ಮಾತಾಡಿದೆವು. ಅವರು ಸಂತೋಷದಿಂದಲೇ ಒಪ್ಪಿದರು. ಹೀಗೆ 1980ರ ಮೇ ಸುಮಾರಿಗೆ ನಾನು ʻಆಂದೋಲನʼದಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಂದ 1981ರ ಜುಲೈಯಲ್ಲಿ ನಾವು ಮೈಸೂರು ಬಿಡುವವರೆಗೂ ಅಲ್ಲಿಯೇ ಉಳಿದೆ.
(ʻಆಂದೋಲನʼದಲ್ಲಿ ನನ್ನ ʻತರಬೇತಿʼ – ಮುಂದಿನ ಕಂತಿನಲ್ಲಿ…)

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X