ಜೋಳಿಗೆ | ನನ್ನ ಆರೆಸ್ಸೆಸ್ ದಿನಗಳು

Date:

Advertisements

ಸಾಮಾನ್ಯವಾಗಿ ಆರೆಸ್ಸೆಸ್ ನಾಯಕರು ಬಹಳ ಮೃದು ಸ್ವಭಾವದವರಾಗಿ ಕಾಣುತ್ತಾರೆ. ಅವರ ಅಸಹನೆ, ಆಕ್ರೋಶ, ಕ್ರೌರ್ಯ ಏನಿದ್ದರೂ ಅವರ ಘೋಷಿತ ʻಶತ್ರುʼಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ʻಕಮ್ಯೂನಿಸ್ಟʼರ ವಿರುದ್ಧ ಮಾತ್ರ. ʻಕಮ್ಯೂನಿಸ್ಟʼರೆಂದರೆ ಅದರಲ್ಲಿ ಸಮಾಜವಾದಿಗಳು, ಜಾತ್ಯತೀತವಾದಿಗಳು ಹಾಗೂ ಎಲ್ಲ ಪ್ರಜಾತಂತ್ರವಾದಿಗಳೂ ಬರುತ್ತಾರೆ.

ಈಗ ನಾನೊಬ್ಬ ಕಮ್ಯೂನಿಸ್ಟ್; “ಮಾಜಿ” ಮಾವೋವಾದಿ ಹೋರಾಟಗಾರ. ಆದರೆ ಕಮ್ಯೂನಿಸ್ಟ್ ಆಗುವ ಮೊದಲು ಭರ್ತಿ ಎಂಟು ವರ್ಷ, ಮಾಧ್ಯಮಿಕ ಶಾಲಾ ದಿನಗಳಿಂದ ಬಿಎಸ್ಸಿ ಪದವಿ ದಿನಗಳವರೆಗೆ ನಾನೊಬ್ಬ ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತನಾಗಿದ್ದೆ. ಅದೂ ಸಹ ನನ್ನ ಶಾಲಾ-ಕಾಲೇಜು ಪಯಣ ಸಾಗಿದಂತೆ ಒಂದಲ್ಲ, ಮೂರು ಊರುಗಳಲ್ಲಿ. ಕೊನೆಗೊಮ್ಮೆ ಅದರಿಂದ ಹೊರಬಂದು, ನನ್ನಂಥವರು ಎಲ್ಲಿ ಇರಬೇಕೋ ಅಲ್ಲಿಗೆ ತಲುಪಿದೀನಿ!

ನನ್ನ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಸಿರಿಮನೆ (ಹುಟ್ಟಿದ್ದು 1952ರ ಜುಲೈಯಲ್ಲಿ). ಪ್ರಾಥಮಿಕ ವಿದ್ಯಾಭ್ಯಾಸ ಸಿರಿಮನೆಯಿಂದ ಸುಮಾರು 19-20 ಕಿಲೋಮೀಟರ್ ದೂರದ ನಮ್ಮ ತಾಯಿಯ ತೌರೂರು, ಕಿರಕೋಡು ಎಂಬಲ್ಲಿ. ಮಾಧ್ಯಮಿಕ ಮತ್ತು ಪ್ರೌಢಶಾಲೆ ಶೃಂಗೇರಿಯಲ್ಲಿ. 1968ರ ಏಪ್ರಿಲ್ನಲ್ಲಿ ಎಸ್ಸೆಸ್ಸೆಲ್ಸಿ. 68-69ರಲ್ಲಿ ಪಿಯೂಸಿ ಉಡುಪಿಯಲ್ಲಿ. ಆಗ ಒಂದೇ ವರ್ಷದ ಪಿಯೂಸಿ ಇದ್ದುದು. ನಂತರ ಅದು ಎರಡು ವರ್ಷದ್ದಾಯಿತು. 69ರ ಜುಲೈಯಲ್ಲಿ ಮೈಸೂರು ಸೇರಿ, ಅಣ್ಣನ ಮನೆಯಲ್ಲಿದ್ದುಕೊಂಡು ಯುವರಾಜಾ ಕಾಲೇಜಿನಲ್ಲಿ ಬಿಎಸ್ಸಿ. 73ರಲ್ಲಿ ಬಿಎಸ್ಸಿ ಮುಗಿದ ಕೂಡಲೇ ಅಂಚೆ-ತಂತಿ ಇಲಾಖೆಯಲ್ಲಿ ಖಾಯಂ ಉದ್ಯೋಗ ಸಿಕ್ಕಿತು. 79ರ ಸೆಪ್ಟೆಂಬರ್‌ವರೆಗೂ ಸೇವೆಯಲ್ಲಿದ್ದು, ರಾಜೀನಾಮೆ ಕೊಟ್ಟು, ಪೂರ್ಣಾವಧಿ ಚಳವಳಿಗಾರನಾಗಿ ʻದೀಕ್ಷೆʼ ತೆಗೆದುಕೊಂಡೆ. ಅಂದಿನಿಂದ ಇಂದಿನವರೆಗೂ ಏನೇನು ಏರುಪೇರುಗಳಾದರೂ ಚಳವಳಿಗೆ-ಹೋರಾಟಕ್ಕೆ ಬೆನ್ನು ತೋರಿಸದೆ, ಆ ದೀಕ್ಷೆಗೆ ಬದ್ಧನಾಗಿ ಉಳಿದಿದೀನಿ.

ಇರಲಿ, ಈಗ ನನ್ನ ಆರೆಸ್ಸೆಸ್ ದಿನಗಳಿಗೆ ಬರೋಣ.

ನಾನು ಆರೆಸ್ಸೆಸ್ಸಿಗೆ ಸೇರಿದ್ದು ಆರನೇ ತರಗತಿಯಲ್ಲಿದ್ದಾಗ – 196೩ರಲ್ಲಿ; ಆಗ ನನಗೆ ಕೇವಲ 11 ವರ್ಷ. ಸುಮಾರು 78-79ರ ಆಸುಪಾಸಿನ ವಯಸ್ಸಿನಲ್ಲಿ ಇಂದಿಗೂ ಕಟ್ಟಾ ಆರೆಸ್ಸೆಸ್ಸಿಗ/ಬಿಜೆಪಿಗನಾಗಿರುವ ನನ್ನ ಎರಡನೇ ಅಣ್ಣ ಸುಬ್ಬಣ್ಣ (ಸುಬ್ರಾಯ) ನನ್ನನ್ನು ಆರೆಸ್ಸೆಸ್ಸಿಗೆ ಸೇರಿಸಿದವನು. ನಾನು ಅಪೌಷ್ಟಿಕತೆಯ ಕಡ್ಡಿ ಪೈಲ್ವಾನ್ ಆಗಿದ್ದರೂ ಆಟೋಟಗಳಲ್ಲಿ ಹಿಂದಿರಲಿಲ್ಲ. ಚೆನ್ನಾಗಿ ಕಬಡ್ಡಿ ಆಡುತ್ತಿದ್ದೆ. ಚುರುಕು ಬುದ್ಧಿ, ನೆನಪಿನ ಶಕ್ತಿ ಮುಂತಾದವುಗಳಿಗಾಗಿ ಆಡಿಸುವ ಆಟಗಳಲ್ಲೂ ಚುರುಕಾಗಿದ್ದೆ. ಜೊತೆಗೆ ಆರೆಸ್ಸೆಸ್ಸಿನ ಹಾಡುಗಳನ್ನು ಹಾಡುವುದು, ʻನಮಸ್ತೇ ಸದಾ ವತ್ಸಲೇ…ʼ ಪ್ರಾರ್ಥನೆ, ಪ್ರತಿದಿನ ಸಂಜೆಯ ʻಶಾಖೆʼಯ ನಿರ್ವಹಣೆ, ಹೀಗೆ ಎಲ್ಲದರಲ್ಲೂ ಮುಂದಿದ್ದೆ. ಪ್ರತಿದಿನವೂ ಶಾಖೆ ನಡೆಸುವ ಜವಾಬ್ದಾರಿ ಯಾರಾದರೂ ಒಬ್ಬರು ʻಸ್ವಯಂಸೇವಕʼನದಾಗಿರುತ್ತದೆ (ಆ ಹುದ್ದೆ ಅಥವಾ ಜವಾಬ್ದಾರಿಗೆ ಏನು ಹೆಸರು ಅಂತ ನನಗೀಗ ನೆನಪಿಲ್ಲ). ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಾಧವ ರಾವ್ ಎಂಬವರು ಆಗ ಆ ಹೊಣೆ ನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿ ಪ್ರಕಾಶ ಕಾಮತ್, ಶಶಿಧರ, ಮಹಾಬಲೇಶ್ವರ ಗುಪ್ತ ಇವರಲ್ಲೊಬ್ಬರು ಆ ಕೆಲಸ ಮಾಡುತ್ತಿದ್ದರು. ನನ್ನ ಅಂದಾಜಿನಂತೆ ಇವರೆಲ್ಲರೂ ನಂತರ ಆರೆಸ್ಸೆಸ್ಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟುಹೋದರು. ಅಷ್ಟೇ ಅಲ್ಲ, ದೂರದೂರದ ಯಾವುದೋ ಆದಿವಾಸಿ ಅಥವಾ ಹಿಂದುಳಿದ ಪ್ರದೇಶಗಳಲ್ಲಿ ಆರೆಸ್ಸೆಸ್ಸಿನ ವಿವಿಧ ಅಂಗ ಸಂಘಟನೆಗಳ ಬಹುತೇಕ ಭೂಗತ ಸಂಘಟಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶೃಂಗೇರಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿದ್ದೆ. ನಾನು ಶೃಂಗೇರಿಯಲ್ಲಿದ್ದ 1968ರವರೆಗೂ ಮತ್ತೆಂದೂ ಅವರನ್ನು ಕಂಡಿದ್ದಿಲ್ಲ.

Rashtriya Swayamsevak Sangh

ಸಾಮಾನ್ಯವಾಗಿ ಆರೆಸ್ಸೆಸ್ ನಾಯಕರು ಬಹಳ ಮೃದು ಸ್ವಭಾವದವರಾಗಿ ಕಾಣುತ್ತಾರೆ. ಅವರ ಅಸಹನೆ, ಆಕ್ರೋಶ, ಕ್ರೌರ್ಯ ಏನಿದ್ದರೂ ಅವರ ಘೋಷಿತ ʻಶತ್ರುʼಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ʻಕಮ್ಯೂನಿಸ್ಟʼರ ವಿರುದ್ಧ ಮಾತ್ರ. ʻಕಮ್ಯೂನಿಸ್ಟʼರೆಂದರೆ ಅದರಲ್ಲಿ ಸಮಾಜವಾದಿಗಳು, ಜಾತ್ಯತೀತವಾದಿಗಳು ಹಾಗೂ ಎಲ್ಲ ಪ್ರಜಾತಂತ್ರವಾದಿಗಳೂ ಬರುತ್ತಾರೆ. ಆದರೆ ಮಾಧವರಾವ್ ಅವರು ನಿಜವಾಗಿಯೂ ಸಹೃದಯಿ ವ್ಯಕ್ತಿಯಾಗಿದ್ದರು. ಒಂದೆರಡು ವರ್ಷಗಳ ಬಳಿಕ ಅವರಿಗೆ ಮಂಗಳೂರ ಕಡೆ ವರ್ಗವಾಗಿತ್ತು. ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಆರೆಸ್ಸೆಸ್ಸಿನಿಂದ ವಜಾ ಮಾಡಲಾಯಿತು ಎಂದು ಕೇಳಿದೆ.

ನಾನು ಓದಿನಲ್ಲಿ (ಪರೀಕ್ಷೆಯಲ್ಲಿ ಅಂಕ ಗಳಿಸುವುದರಲ್ಲಿ ಅಂತ ಓದಿಕೊಳ್ಳಿ!) ಬಹಳ ಮುಂದಿದ್ದುದರಿಂದ ನನಗೆ ಶಾಲೆಯ ಪಾಠಗಳ ಚಿಂತೆಯೇನೂ ಇರಲಿಲ್ಲ. ಈಗಿನಂತೆ ಆಗ ಹೆಚ್ಚು ಹೋಂ ವರ್ಕ್ಗಳನ್ನೂ ಕೊಡುತ್ತಿರಲಿಲ್ಲ. ಹಾಗಾಗಿ ನಾನು ಶಾಲೆ ಶುರುವಾಗುವುದಕ್ಕೆ ಮುಂಚೆ ಮಾಧವ ರಾಯರ ಮನೆಗೆ ಹೋಗುತ್ತಿದ್ದೆ. ಅವರು ದೇಶದ ಕುರಿತು ಅನೇಕ ವಿಚಾರಗಳನ್ನು ತಿಳಿಸುತ್ತಿದ್ದರು. ಅವರಿಂದ ಹಾಡುಗಳನ್ನು ಬರೆದುಕೊಳ್ಳುತ್ತಿದ್ದೆ. ಸಂಜೆ ಶಾಲೆ ಬಿಟ್ಟ ಮೇಲೆ ಆರೆಸ್ಸೆಸ್ನ ಇನ್ನೊಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಡಾ. ಬಿ.ವೈ.ಉಪೇಂದ್ರ ಅವರ ಕ್ಲಿನಿಕ್ಕಿಗೆ ಹೋಗುತ್ತಿದ್ದೆ. ಅವರು ಕಂಚಿನ ಕಂಠದ ಒಳ್ಳೆಯ ಹಾಡುಗಾರರು. ಸಾಮಾನ್ಯವಾಗಿ ಅವರು ಬಿಡುವಾಗಿಯೇ ಇರುತ್ತಿದ್ದರು. ಅವರ ಬಳಿ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೆ. ಅಲ್ಲಿ ಚಂದ್ರಶೇಖರ ಝಡೈ ಎಂಬ ನಡು ವಯಸ್ಸು ದಾಟಿದ ಹಿರಿಯ ಪ್ರಚಾರಕರನ್ನು ಆಗಾಗ ನೋಡುತ್ತಿದ್ದೆ. (ಉಪೇಂದ್ರ ಅವರು ಮುಂದೆ ಪೂರ್ಣಾವಧಿ ಪ್ರಚಾರಕರಾಗಿ ರಾಜ್ಯ ಅಥವಾ ಬಹುಶಃ ಇನ್ನೂ ಉನ್ನತ ಮಟ್ಟದ ನಾಯಕರಾಗಿದ್ದರು, 2012ರಲ್ಲಿ ತೀರಿಕೊಂಡರು)

ಹೀಗೆ 1968ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಯುವವರೆಗೂ ನಾನು ಶೃಂಗೇರಿಯಲ್ಲಿ ಆರೆಸ್ಸೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿದೆ. ನಂತರ 69ರಲ್ಲಿ ಪಿಯೂಸಿ ಓದಲು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಸೇರಿದೆ. ಆ ವರ್ಷದ ಉಡುಪಿ ʻಪರ್ಯಾಯʼದಲ್ಲಿ ಕೃಷ್ಣ ದೇಗುಲದ ಮುಂದಿನ ಎರಡು ವರ್ಷಗಳ ಆಡಳಿತಾಧಿಕಾರ ಪೇಜಾವರ ವಿಶ್ವೇಶತೀರ್ಥರ ಪಾಲಿಗೆ ಬಂದಿತ್ತು. ಆಗಿನ್ನೂ ಅವರು ಬಹುಶಃ 28-30 ವರ್ಷದ, ಕೃಶ ಶರೀರದ ಯತಿಯಾಗಿದ್ದರು. ಇರುವೆಯಂತೆ ಚುರುಕಾಗಿ ಓಡಾಡಿಕೊಂಡಿರುತ್ತಿದ್ದರು. ಅವರು ಮಠದ ಭೋಜನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ನೀಡುತ್ತಿದ್ದುದನ್ನು ದೊಡ್ಡ ಪ್ರಮಾಣಕ್ಕೆ ವಿಸ್ತರಿಸಿದ್ದರು. ಆ ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಬ್ರಾಹ್ಮಣ ಬಾಹುಳ್ಯದ ತಾಲೂಕುಗಳ ನೂರಾರು ವಿದ್ಯಾರ್ಥಿಗಳು ಮಠದ ಎರಡು ಹೊತ್ತಿನ ಉಚಿತ ಊಟದ ಕಾರಣಕ್ಕೆ ಉಡುಪಿಯಲ್ಲಿ ಕಾಲೇಜುಗಳಿಗೆ ಸೇರಿದ್ದರು. ನಾನು ಮತ್ತು ನನ್ನ ಚಿಕ್ಕಪ್ಪನ ಮಗನೂ ಅದರ ಫಲಾನುಭವಿಗಳಾಗಿದ್ದೆವು.

ಉಡುಪಿಯಲ್ಲೂ ನಾನು ನಿಷ್ಠೆಯಿಂದ ಆರೆಸ್ಸೆಸ್ ಸೇವೆ ಮುಂದುವರಿಸಿದೆ. ಅಲ್ಲಿ ಕೃಷ್ಣ ಶೆಣೈ ಎಂಬವರು ಮುಖ್ಯರಾಗಿದ್ದರು. ಆರೆಸ್ಸೆಸ್ ಚಟುವಟಿಕೆಯ ಭಾಗವಾಗಿ ಅವರ ಮನೆಗೂ ಆಗಾಗ ಹೋಗುತ್ತಿದ್ದೆ. ಆ ವರ್ಷ ಬಹುಶಃ ಡಿಸೆಂಬರಿನಲ್ಲೋ ಏನೋ, ವಿಶ್ವ ಹಿಂದು ಪರಿಷತ್ತಿನ ಮೊಟ್ಟಮೊದಲ ಅಖಿಲ ಭಾರತ ಬೃಹತ್ ಸಮಾವೇಶ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಿತು. ಪೇಜಾವರರೇ ಅದರ ಆತಿಥ್ಯ ವಹಿಸಿದ್ದರು. ಆಗ ಮಠದೂಟದ ಫಲಾನುಭವಿಗಳಾದ ನಾವೆಲ್ಲರೂ ಮತ್ತು ನನ್ನಂತಹ ಆರೆಸ್ಸೆಸ್ ನಿಷ್ಠಾವಂತರು ಎಂಟೋ ಹತ್ತೋ ದಿನಗಳ ಕಾಲ ಅದರ ಸಕಲ ಕೆಲಸ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ದುಡಿದಿದ್ದೆವು. (ಸಮಾವೇಶ ಮುಗಿದ ಬಳಿಕ ನಮಗೆಲ್ಲ ಡಬ್ಬಲ್ ಸ್ವೀಟಿನ ಭರ್ಜರಿ ಊಟ ಹಾಕಿದ್ದರು) ಸಮಾವೇಶದ ಬೃಹತ್ ವೇದಿಕೆಯ ಹಿನ್ನೆಲೆಯ ಭಾರೀ ಬ್ಯಾನರಿನಲ್ಲಿ (ಬ್ಯಾಕ್ಡ್ರಾಪ್ನಲ್ಲಿ) ಕಣ್ಣು ಕೋರೈಸುವಂತಹ ಬಣ್ಣಗಳಲ್ಲಿ ಇಸ್ಲಾಂ, ಕ್ರೈಸ್ತ ಮತ್ತು ಕಮ್ಯೂನಿಸಂಗಳನ್ನು ಪ್ರತಿನಿಧಿಸುವ ಹಸಿರು-ಬಿಳಿ-ಕೆಂಪು ಮೋಡಗಳು ಭಾರತ ಮಾತೆಯನ್ನು ಮುತ್ತಲು ಹವಣಿಸುತ್ತಿರುವಂತೆ ಚಿತ್ರಿಸಿದ್ದು ಈಗಲೂ ನನ್ನ ಮನಃಪಟಲದಲ್ಲಿ ಹಾಗೇ ಉಳಿದಿದೆ.

ಹಾಗೆ ಆ ವರ್ಷ ಪಿಯುಸಿ ಮುಗಿಸಿ 1969ರ ಜುಲೈಯಲ್ಲಿ ಬಿಎಸ್ಸಿ ಓದಲು ಮೈಸೂರಿಗೆ ನನ್ನ ಹಿರಿಯ ಅಣ್ಣನ ಮನೆಗೆ ಬಂದೆ. ಮೈಸೂರಿನಲ್ಲೂ ʻಶಾಖೆʼಗೆ ಹೋಗುವುದನ್ನು ಮುಂದುವರಿಸಿದೆ. ಮೈಸೂರಿಗೆ ಬಂದಾಗ ನಾನು ಕಡು ದೈವಭಕ್ತ ಮತ್ತು ಸಂಪ್ರದಾಯ ನಿಷ್ಠನಾಗಿದ್ದೆ. ದಿನವೂ ಸಂಧ್ಯಾವಂದನೆ ಮಾಡುತ್ತಿದ್ದೆ, ದಿನಕ್ಕೆ ಒಂದು ಹೊತ್ತಾದರೂ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದೆ. ಆದರೆ ಬೆಳೆಯುವ ಹದಿವಯಸ್ಸಿನಲ್ಲಿ ಹಸಿವು ನನ್ನನ್ನು ವಿಪರೀತ ಬಾಧಿಸಲು ಶುರುವಾಗಿತ್ತು. 7-8-9ನೇ ತರಗತಿಯ ಮೂರು ವರ್ಷ ಹೊರತುಪಡಿಸಿದರೆ, ಚಿಕ್ಕಂದಿನಿಂದಲೂ ನನ್ನ ಶಾಲಾ ವಿದ್ಯಾಭ್ಯಾಸ ಅರೆಹೊಟ್ಟೆಯಲ್ಲೇ ನಡೆದಿತ್ತು. ಅದು, ಮನುಷ್ಯನ ಬೆಳವಣಿಗೆಯ ಉತ್ತುಂಗದ ವರ್ಷಗಳಾದ 17-18-19ನೇ ವಯಸ್ಸಿಗೆ ಬರುವಷ್ಟರಲ್ಲಿ ಅಸಹನೀಯ ಎನ್ನಿಸುವಷ್ಟಾಗಿತ್ತು. ದಿನವೂ ಬೆಳಿಗ್ಗೆ ಎಂಟು ಗಂಟೆಗೆ ಅನ್ನ-ಸಾರು-ಮಜ್ಜಿಗೆ ಊಟ ಮಾಡಿ, ಮೈಸೂರಿನ ವಿದ್ಯಾರಣ್ಯಪುರದ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಯುವರಾಜಾ ಕಾಲೇಜಿಗೆ ನಡೆದೇ ಹೋಗಬೇಕಿತ್ತು. ಮತ್ತೆ ಸಂಜೆ ಆರಕ್ಕೋ ಏಳಕ್ಕೋ ಮನೆಗೆ ಬಂದು ಊಟ. ಏಳೋ ಎಂಟೋ ರೂಪಾಯಿಗೆ ಸಿಟಿ ಬಸ್ಸಿನ ತಿಂಗಳ ಪಾಸ್ ಸಿಗುತ್ತಿತ್ತು. ೪೦-೪೫ ರೂಪಾಯಿಗೆ ಸೆಕೆಂಡ್ ಹ್ಯಾಂಡ್ ಸೈಕಲ್ ಸಿಗುತ್ತಿತ್ತು. ಆದರೆ ಸಿರಿಮನೆಯಲ್ಲಿ ಆಗ ಕಡು ಬಡತನದ ಅವಧಿ; ಇಷ್ಟು ಹಣವನ್ನು ಕೂಡ ಒದಗಿಸಲು ನಮ್ಮ ಅಪ್ಪಯ್ಯನಿಗೆ ಸಾಧ್ಯವಿರಲಿಲ್ಲ. ನನಗೆ ತಿಂಗಳಿಗೆ ೪೦ ರೂಪಾಯಿ ಕಳಿಸುತ್ತಿದ್ದರು. ಅದರಲ್ಲಿ ಈ ಖರ್ಚನ್ನು ತೂಗಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಅಸಹನೀಯವಾದ ಹಸಿವಿನಲ್ಲೇ ದಿನ ದೂಡಬೇಕಾಗಿತ್ತು.

ಎರಡನೇದಾಗಿ, ನಮ್ಮ ಪಕ್ಕದ ಮನೆಯಲ್ಲಿ ಕೂಲಿಕಾರರ ಒಂದು ಕುಟುಂಬವಿತ್ತು. ಗಂಡ ಹೆಂಡತಿ ಇಬ್ಬರೂ ದುಡಿಯಲು ಹೋಗುತ್ತಿದ್ದರು. ಹೆಂಡತಿ ಸಂಜೆ ಮನೆಗೆ ಬಂದು ಅಡಿಗೆ ಕೆಲಸ ಶುರು ಹಚ್ಚಿಕೊಂಡರೆ, ಗಂಡ ಕುಡಿದು ಬಂದು ಆಕೆಗೆ ದಿನವೂ ಬಡಿಯುತ್ತಿದ್ದ. ಆಕೆಯ ಆರ್ತನಾದವನ್ನು ಕೇಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನಾನೂ ಒಳ್ಳೆಯ ದೈವಭಕ್ತ; ಆ ಮಹಿಳೆಯೂ ಸಹಜವಾಗಿ ದೈವಭಕ್ತೆಯೇ. ಆದರೆ ದೇವರು ಇರುವುದು ಹೌದಾಗಿದ್ದಲ್ಲಿ ಅವರಿಗೆ ನಮ್ಮ ಪ್ರತಿದಿನದ ಪ್ರತಿ ಕ್ಷಣದ ಸಂಕಟ ಯಾಕೆ ಕಾಣುವುದಿಲ್ಲ? ಯಾಕೆ ಅರ್ಥವಾಗುವುದಿಲ್ಲ? ಎಂಬ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡತೊಡಗಿತು.

ಆರೆಸ್ಸೆಸ್ಸಿನಲ್ಲಿ ನಮಗೆ ಜಗದ್ಗುರುಗಳು-ಮಠಾಧೀಶರಿಗೆ ಪರಿಪೂರ್ಣ ಗೌರವ ತೋರಿಸಬೇಕೆಂದು ಬೋಧಿಸುತ್ತಾರೆ. ಆದರೆ ಉಡುಪಿಯಲ್ಲಿ ಅಲ್ಲಿನ ಜಗದ್ಗುರುಗಳ-ಮಠಾಧೀಶರುಗಳ ವಿಷಯಲಂಪಟತನ ಜಗಜ್ಜಾಹೀರಾದದ್ದು. ಅದರ ಬಗೆಗೆಲ್ಲ ಕಿರಿಯರಾದ ನಮಗೆ ಸಹಜವಾಗಿ ತೀವ್ರವಾದ ಹೇವರಿಕೆ ಇತ್ತು. ಆದರೂ ಅವರನ್ನು ಗೌರವಿಸಬೇಕು ಅಂದರೆ ನನ್ನ ಮನಸ್ಸು ವಿರೋಧಿಸಿತು. ಹಾಗೆಯೇ ಆರೆಸ್ಸೆಸ್ಸಿಗೆ ನಿಷ್ಠರಾಗಿದ್ದ ಅನೇಕ ಶ್ರೀಮಂತರು, ನಾಯಕರು – ಅವರು ಶೃಂಗೇರಿ-ಉಡುಪಿಗಳಲ್ಲಿ ನಾನು ಕಂಡವರಾಗಿರಬಹುದು, ಅಥವಾ ದೇಶ ಮಟ್ಟದಲ್ಲಿ ನಾವು ಕೇಳಿದವರಾಗಿರಬಹುದು – ನಡೆಸುವ ಅನ್ಯಾಯ-ಅಕ್ರಮಗಳನ್ನೂ ನಾವು ಪ್ರಶ್ನಿಸುವಂತಿರಲಿಲ್ಲ.

ವಿದ್ಯಾರಣ್ಯಪುರದ ನಮ್ಮ ಶಾಖೆಯನ್ನು ನಡೆಸುತ್ತಿದ್ದವನು ಚಿದಾನಂದ ಎಂಬ ನನ್ನದೇ ಸಮವಯಸ್ಕ ಕಾಲೇಜು ವಿದ್ಯಾರ್ಥಿ. ಅವನು ಆ ಪ್ರದೇಶದ ಬಡ ಮತ್ತು ಕೆಳಮಧ್ಯಮ ವರ್ಗದ ಜನರ ಮಕ್ಕಳ ಶಿಕ್ಷಣದ ಆಸರೆಯಾಗಿದ್ದ ಸೈಂಟ್ ಮೇರೀಸ್ ಕಾನ್ವೆಂಟ್ ಶಾಲೆಯ ವಿರುದ್ಧ ವಿನಾಕಾರಣ ಪುಕಾರು ಎಬ್ಬಿಸಿದ, ಆರೆಸ್ಸೆಸ್ನವರು ಎಲ್ಲೆಲ್ಲಿಂದಲೋ ಬಂದು ಶಾಲೆಯ ವಿರುದ್ಧ ಗಲಭೆ ಎಬ್ಬಿಸಿದರು. ಇದು ಆತನೊಬ್ಬನೇ ಮಾಡಿದ್ದಲ್ಲ, ಅದಕ್ಕೆ ಆರೆಸ್ಸೆಸ್ ನಾಯಕರ ಚಿತಾವಣೆ, ಮಾರ್ಗದರ್ಶನ ಇದ್ದುದು ನನಗೆ ಗುಟ್ಟಾಗೇನೂ ಇರಲಿಲ್ಲ. ನಾನು ಅವನ ಬಳಿ ಇದು ತಪ್ಪು, ಮಾಡಕೂಡದು ಎಂದು ವಾದಿಸಿದರೆ ಅವನು ಕೇಳಲಿಲ್ಲ. ಹೀಗೆ ಒಂದೊಂದೇ ಕಾರಣಗಳು ನನ್ನಲ್ಲಿನ ದೈವಭಕ್ತಿಯನ್ನು, ದೇವರ ಮೇಲಿನ ನಂಬಿಕೆಯನ್ನು ಕರಗಿಸಿದರೆ, ಆರೆಸ್ಸೆಸ್ ಬಗ್ಗೆ ನನ್ನಲ್ಲಿ ಪ್ರಶ್ನೆಗಳನ್ನು ಹುಟ್ಟಿಸತೊಡಗಿದವು.
ಇದೆಲ್ಲಕ್ಕಿಂತ ಅತಿ ಮುಖ್ಯವಾದ ಅಂಶ ಮುಸ್ಲಿಮರಿಗೆ ಸಂಬಂಧಿಸಿದ್ದು. ʻಶಾಖೆʼಯಲ್ಲಿ ನಮಗೆ ಚಿಕ್ಕಂದಿನಿಂದಲೂ ʻಶತ್ರು ಶತ್ರುʼ ಎಂಬ ಅಮೂರ್ತವಾದ ಕಲ್ಪನೆಯೊಂದನ್ನು ತಲೆಯಲ್ಲಿ ಹೊಗಿಸುತ್ತಾರೆ. ಲಾಠಿ ಕವಾಯತು ಮಾಡುವಾಗ ಲಾಠಿಯ ಬಲವಾದ ಏಟು ಹೇಗೆ ಶತ್ರುವಿನ ನೆತ್ತಿಗೆ ಸರಿಯಾಗಿ ಬೀಳಬೇಕು, ಬಾಕು (ಸಿಖ್ಖರ ಕೃಪಾಣದಂಥದ್ದು) ಕವಾಯತಿನಲ್ಲಿ ಅದರ ಅಲಗಿನ ಏಟು ಹೇಗೆ ಶತ್ರುವಿನ ಎದೆಯನ್ನು ಹೊಕ್ಕು ಸೀಳಬೇಕು ಎಂದು ಕಲಿಸುತ್ತಾರೆ. ತಲೆಗೆ ತುಂಬುವ ಅನೇಕ ʻಕತೆʼಗಳಲ್ಲಿ ಈ ʻಶತ್ರುʼ ಸದಾಕಾಲ ಹಿಂದೂಗಳಿಗೆ ಹಿಂಸೆ ಮಾಡುವವನು, ಮಹಿಳಾ ಪೀಡಕ ಎಂದೆಲ್ಲ ಚಿತ್ರಿಸಲಾಗುತ್ತದೆ. ಇನ್ನು ದೇಶಭಕ್ತಿಯ ಕತೆಗಳಂತೂ ಎಲ್ಲವೂ ಹಿಂದೂ ವೀರರು ʻಶತ್ರುʼ ರಾಜರನ್ನು ಸೋಲಿಸಿದ, ಕೊಂದ ಕತೆಗಳೇ ಆಗಿರುತ್ತವೆ; ಇಲ್ಲವೇ, ಅವರಿಂದ ಹಿಂದೂ ರಾಜರು ಅನ್ಯಾಯಕ್ಕೊಳಗಾಗಿ ʻರಾಷ್ಟ್ರʼ ವಿನಾಶಕ್ಕೆ ಈಡಾಯಿತು ಎಂಬವಾಗಿರುತ್ತವೆ. ನನ್ನ ತಿಳುವಳಿಕೆ ಬೆಳೆದಂತೆ ಈ ʻಶತ್ರುʼ ಎಂದರೆ ಮತ್ಯಾರೂ ಅಲ್ಲ, ಮುಸ್ಲಿಮರು ಎಂಬುದು ಅರ್ಥವಾಯಿತು.

ಆದರೆ ನನಗೆ ಚಿಕ್ಕಂದಿನಿಂದಲೂ ಜಾತಿ ಭೇದವಂತೂ ಇರಲಿಲ್ಲ. ಅಲ್ಲದೆ ಅನೇಕ ಮುಸ್ಲಿಂ ಹುಡುಗರು ನಮಗೆ ಸಹಜವಾದ ಆಪ್ತ ಸ್ನೇಹಿತರಾಗಿರುತ್ತಿದ್ದರು. ಈಗ ಎರಡನೇ ಬಿಎಸ್ಸಿಗೆ ಬರುವ ವೇಳೆಗೆ ಹಸಿವಿನ ಅವಾಂತರದಿಂದಾಗಿ ನಾನು ಕೇವಲ ಒಬ್ಬ ʻಆವರೇಜ್ʼ ವಿದ್ಯಾರ್ಥಿಯಾಗಿಬಿಟ್ಟಿದ್ದೆ. ʻಜಾಣʼರೆನ್ನಿಸಿದ್ದ ʻಜಾತಿʼ ಸ್ನೇಹಿತರು ಒಂದೋ ನನ್ನಿಂದ ಏನಾದರೂ ನೋಟ್ಸ್-ಪಠ್ಯಪುಸ್ತಕ ಮುಂತಾದ ಲಾಭ ಪಡೆಯುವಷ್ಟಕ್ಕೆ ಸೀಮಿತವಾದರೆ ಮತ್ತೊಂದೆಡೆ ನನ್ನನ್ನು ಕಡೆಗಣಿಸುತ್ತಿದ್ದರು. ಹಾಗಾಗಿ ನಾನು ಅವರ ಸಹವಾಸದಿಂದ ದೂರವೇ ಉಳಿದಿದ್ದೆ. ಅಲ್ಲದೆ ನಮ್ಮ ತರಗತಿಯಲ್ಲಿದ್ದ ಅಬ್ದುಲ್ ಖಯೂಂ, ಅಬ್ದುಲ್ ರಹಮಾನ್ ಖಾನ್, ಮುಹಮ್ಮದ್ ತಜಮ್ಮುಲ್ ಮುಸ್ತಾಸಿನ್, ಝಫ್ರುಲ್ಲಾ ಖಾನ್, ಅನೀಸುರ್ ರಹಮಾನ್ ಎಂಬ ಐವರು ಮುಸ್ಲಿಂ ಹುಡುಗರು ಹಾಗೂ ನಮ್ಮದೇ ತರಗತಿಯ ಬೇರೆ ಸೆಕ್ಷನ್ಗಳ ಸಾಜಿದ್ ಮತ್ತು ಅಸ್ರಾರ್ ಎಂಬಿಬ್ಬರು ನನ್ನ ಜೀವದ ಗೆಳೆಯರಾಗಿದ್ದರು. ತರಗತಿ, ಲ್ಯಾಬ್, ಸಿನಿಮಾ, ಹೀಗೇ ಪೇಟೆ ಸುತ್ತಾಟ… ಎಲ್ಲದರಲ್ಲೂ ಆ ಏಳು ಜನರು ಮತ್ತು ನಾನು ಜೊತೆಯಾಗಿರುತ್ತಿದ್ದೆವು. ಅವರೂ ನನ್ನಂತೆಯೇ ಕೆಳ ಮಧ್ಯಮ ವರ್ಗದವರು ಮತ್ತು ʻಆವರೇಜ್ʼ ವಿದ್ಯಾರ್ಥಿಗಳಾಗಿದ್ದರು. ಹಾಗಾಗಿ ನಮ್ಮ ನಡುವೆ ಎಂಥದೂ ಹಮ್ಮುಬಿಮ್ಮು ಬಡಿವಾರಗಳಿರಲಿಲ್ಲ. ಕೃತ್ರಿಮವಿರಲಿಲ್ಲ. ಎಲ್ಲಾ ನಿಚ್ಚಳ ನಿಷ್ಕಲ್ಮಶ. ಆದರೆ ಆರೆಸ್ಸೆಸ್ಸು ನನಗೆ ನನ್ನ ಈ ಜೀವದ ಗೆಳೆಯರನ್ನು ದ್ವೇಷಿಸಲು ಹೇಳುತ್ತಿತ್ತು. ಅದು ಹೇಗೆ ಸಾಧ್ಯ?

Advertisements

ಇದನ್ನೂ ಓದಿ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜಿ ಸಾಧ್ಯವಿಲ್ಲ, ಭಾರತದ ದಾಳಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ: ಸಿದ್ದರಾಮಯ್ಯ

ಇದೆಲ್ಲವನ್ನೂ ನಾನು ಆರೆಸ್ಸೆಸ್ ಮತ್ತು ಎಬಿವಿಪಿಯ ಕಾಲೇಜು ಸಭೆಗಳಲ್ಲಿ ಪ್ರಶ್ನಿಸತೊಡಗಿದೆ. ಅದಕ್ಕೆ ಸಮಂಜಸ ಉತ್ತರ ಕೊಡುವ ಬದಲು ತಳ್ಳಿಹಾಕುತ್ತಿದ್ದರು. ಕ್ರಮೇಣ ನನ್ನನ್ನೇ ಮೂಲೆಗುಂಪು ಮಾಡಿದರು. ನನಗೂ ಇಷ್ಟು ಹೊತ್ತಿಗೆ ಆರೆಸ್ಸೆಸ್ಸಿನ ಒಳ ಹೂರಣ ಪೂರ್ತಿಯಾಗಿ ಅರ್ಥವಾಗಿತ್ತು. ಹಾಗಾಗಿ ನಾನೂ ಭರ್ತಿ ಎಂಟು ವರ್ಷದ ಅದರ ಸಹವಾಸದಿಂದ ಶಾಶ್ವತವಾಗಿ ಬಿಡಿಸಿಕೊಂಡೆ. ಅಷ್ಟೇ ಅಲ್ಲ, ದೇವರು-ದೇವಸ್ಥಾನ-ಪೂಜೆ-ಪುನಸ್ಕಾರ-ಸಂಧ್ಯಾವಂದನೆ-ಜನಿವಾರ ಎಲ್ಲದರಿಂದಲೂ ಬಿಡುಗಡೆಗೊಂಡು ಒಂದು ರೀತಿ ʻನಿರ್ವಾಣʼವಾದೆ. ಸಂಕುಚಿತ ಅರ್ಥದ ಧರ್ಮ ಜಾತಿ ಎಲ್ಲವನ್ನೂ ತೊರೆದು ಮನುಷ್ಯ ಧರ್ಮ ಮನುಷ್ಯ ಜಾತಿಗೆ ಸೇರಿಬಿಟ್ಟೆ. ಅದು 1971. ನನಗಾಗ ಹತ್ತೊಂಬತ್ತು ವರ್ಷ ವಯಸ್ಸು.

ಮನಸ್ಸನ್ನು ಆವರಿಸಿದ್ದ ಒಂದು ಖಾಲಿಯಾದಾಗ ಅಲ್ಲಿ ನಿರ್ವಾತ ಇರುವಂತಿಲ್ಲವಲ್ಲ, ಅಲ್ಲಿ ಮತ್ತೇನಾದರೂ ಹುಟ್ಟಿಕೊಳ್ಳಲೇ ಬೇಕಲ್ಲ. ಹಾಗೆ ಎರಡು ವರ್ಷ ತಲೆಯೊಳಗೆ ಕೊತಕೊತ ಕುದಿತ. ಎಲ್ಲಿ ನೋಡಿದರೂ ಮೋಸ, ಅನ್ಯಾಯ, ದೌರ್ಜನ್ಯ, ತಾರತಮ್ಯ, ಅಸಮಾನತೆ, ಅಜ್ಞಾನ, ಸಂಕಟ … ಇದಕ್ಕೆಲ್ಲ ಏನು ಕಾರಣ? ಏನು ಪರಿಹಾರ ಮಾರ್ಗ? ಪ್ರಶ್ನೆಗಳು ಪ್ರಶ್ನೆಗಳು ಪ್ರಶ್ನೆಗಳು. ಈ ಹುಡುಕಾಟದ ಫಲವಾಗಿ ನನಗೆ ಧುತ್ತೆಂದು ಸಿಕ್ಕಿದ್ದೇ ಮಾವೋವಾದಿ ಧಾರೆಯ ಕಮ್ಯೂನಿಸಂ …
ಅದೆಲ್ಲದರ ಕುರಿತು ಮುಂದೆ ಎಂದಾದರೂ ಬರೆದೇನು…

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

2 COMMENTS

  1. ಅರ್ಧ ಸತ್ಯ ಅರ್ಧ ಸುಳ್ಳಿ ಕಪೂಲ ಕಲ್ಪಿತ ಭಾವನೆಗಳಿಂದ ಕೂಡಿದ ಲೇಖನ RSS ಪ್ರಚಾರಕಾರ ಜೀವನವನ್ನು ಪೂರ್ಣವಾಗಿ adhyana ಮಾಡಿಲ್ಲ. ಅಟಲ್ಜಿ, ದೀನದಯಾಳ ಉಪಾಧ್ಯಯ ಜಗನ್ನಾಥ ಜೋಶಿ ಇವರ ಜೀವನ ಚರಿತ್ರೆ ಓದಬೇಕು ಅವರ ಜೀವನವನ್ನು ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನನ್ನ ಸುಕೃತದಿಂದ ಅವರಿಗೆ ಪ್ರಭಂದಕರ್ರಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ಇವರೆಲ್ಲ ಮಹಾನ್ ಚೇತನಗಳು. ಇವರೆಲ್ಲರೂ RSS
    ನಮ್ಮ ಮೋದಿಯವರು ಸಹ ಆರ್ಎಸ್ಎಸ್. ಆರ್ಎಸ್ಎಸ್ ನಂತೆ ಕಮ್ಯುನಿಸ್ಟ್ ಬಗ್ಗೆ ಸಹ ಇವರು ಬರೆಯ ಬೇಕು. ಕಮ್ಯುನಿಸ್ಟ್ ಏನೂ ದೇವಲೋಕದಿಂದ ಧರೆಗಿಳಿದ ಸಿದ್ದಂತ ವಲ್ಲ ವಂದೇ ಮಾತರಂ.

  2. 30 ವರ್ಷದಿಂದ ನಾನು ನಿಷ್ಠಾವಂತ rss ಕಾರ್ಯಕರ್ತ… ನಿಮ್ಮ ಪ್ರತೀ ಮಾತು ಅಕ್ಷರಶಃ ಶುದ್ಧ ಸುಳ್ಳು… ಗಂಜಿಗೆ ದುಡ್ಡು ಬೇಕಿದ್ದರೆ ಕೇಳಿ, ನಾನೇ ದುಡ್ಡು ಕೊಡ್ತೀನಿ…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X