ಸುತ್ತಾಟ | ಕೊಡಚಾದ್ರಿಯ ಕಥೆ – ಪ್ರಕೃತಿಯ ಹಾದಿಯಲ್ಲಿ ನನ್ನ ಹೆಜ್ಜೆಗಳು

Date:

Advertisements

ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವ, ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ, ಚಾರಣ ಪ್ರಿಯರಿಗೆ, ತನ್ನ ರಮಣೀಯ ಸೌಂದರ್ಯ, ಶ್ರೀಮಂತ ಜೀವವೈವಿಧ್ಯಗಳೊಂದಿಗೆ ಮರೆಯಲಾಗದ ಚಾರಣ ಅನುಭವವನ್ನು ನೀಡುತ್ತದೆ ಎನ್ನುವುದು ಸತ್ಯ ಸಂಗತಿ. ಅನುಭವೀ ಚಾರಣಿಗರಿಂದ ಹಿಡಿದು ಆರಂಭಿಕ ಚಾರಣಿಗರಿಗೂ ಮುದ ನೀಡುವ ಹಚ್ಚ ಹಸುರಿನ ಸುಂದರ ಬನವಿದು.

ತಂತ್ರಜ್ಞಾನ, ವೈಯಕ್ತಿಕ ಗುರಿ, ದೈನಂದಿನ ಓಡಾಟ, ಮಾನಸಿಕ ಉದ್ವಿಗ್ನತೆ, ಬದುಕಿನ ಜಂಜಾಟ, ಸಾಮಾಜಿಕ ಬದುಕು, ಜಗತ್ತಿನ ಜಂಜಾಟ, ಇವೆಲ್ಲದರ ನಡುವೆ ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ನೀಡುವ ತಾಣ: ಪ್ರಕೃತಿಯ ಮಡಿಲು ಮಾತ್ರ. ಎಲ್ಲೂ ಸಿಗದ ಪರಿಹಾರಗಳು ಪ್ರಕೃತಿಯ ಮಡಿಲಲ್ಲಿ ಹೊಳೆದದ್ದು ಇದೆ. ಎಲ್ಲೂ ಕಾಣದ ಉತ್ತರ ಸೂರ್ಯಾಸ್ತವನ್ನು ವೀಕ್ಷಿಸುತ್ತ ಕಂಡುಕೊಂಡಿದ್ದೂ ಇದೆ. ಪ್ರಕೃತಿಯ ಮಡಿಲಲ್ಲಿನ ನಿಶ್ಯಬ್ದತೆ ಎಷ್ಟೋ ಬಾರಿ ಮನದೊಳಗಣ ಸಂಭಾಷಣೆಗೆ ಅನುವು ಮಾಡಿಕೊಟ್ಟದ್ದೂ ಇದೆ. ಇದೇ ಕಾರಣಕ್ಕಾಗಿಯೋ ಏನೋ, ಅದೆಷ್ಟೋ ಬಾರಿ ಕಾರ್ಪೊರೇಟ್ ಬದುಕಿನ ನಡುವೆ ವಾರಾಂತ್ಯವೊಂದು ಬಂದರೆ ಸಾಕೆಂದು ಅಂದುಕೊಂಡಿದ್ದು ಇದೆ. ವಾರಾಂತ್ಯವೆಂದರೆ ಮನಸಿನಲ್ಲಿ ಹಚ್ಚ ಹುಸುರಿನ ನಡುವೆ ನಡೆದಾಡುವುದು ರೂಢಿಯಾಗಿ ಬಿಟ್ಟಿತ್ತು. ಸಮುದ್ರ ತಟದಲ್ಲಿ ಬೆಳೆದ ನನಗೆ ಬೆಟ್ಟಕಾಡುಗಳು ಕೂಡ ಅಷ್ಟೇ ಉಲ್ಲಾಸವನ್ನು ನೀಡುವ ಜಾಗವಾಗಿತ್ತು.

ಪರ ದೇಶ, ಪರ ರಾಜ್ಯ, ದೂರದ ಆಫ್ರಿಕಾ, ನೇಪಾಳ, ರಶಿಯಾ ಹೀಗೆ ಎಲ್ಲೆಂದರಲ್ಲಿ ಪರ್ವತ ಶಿಖರಗಳನ್ನು ಹುಡುಕುತಿದ್ದ ಜೀವ ಕೆಲವೊಮ್ಮೆ ಬದಿಯ ಇನ್ನೊಂದು ಹಳ್ಳಿಯಲ್ಲಿರುವ ಬೆಟ್ಟಕ್ಕೆ ಮನ ಸೋತು ಹೋದದ್ದೂ ಇದೆ. ಕೊಡಚಾದ್ರಿ ಅಂತಹ ಒಂದು ಜಾಗ. ಬಹು ದೀರ್ಘ ಕಾಲದಿಂದ ಕೇಳುತ್ತಿದ್ದ ಹೆಸರು -“ಕೊಡಚಾದ್ರಿ ಬೆಟ್ಟ”. ಎಷ್ಟೋ ಸಲ ಹೋಗಬೇಕೆಂದು ಪ್ಲಾನ್ ಮಾಡಿದರೂ, ಅರೆ ನಮ್ಮದೇ ಊರು, ಯಾವಾಗಲಾದರೂ ಹೋದರಾಯಿತು ಅಂತ ಪ್ರತೀ ಸಲವೂ ಪ್ಲಾನ್ ಮುಂದೂಡುತಿದ್ದೆ. ನನಗೆ ಗೊತ್ತಿರುವ ಕೆಲವೊಂದು ಚಾರಣಿಗರು ಕೂಡ ಹಾಗೆಯೇ: ಹಿಮಾಲಯದ ಎಲ್ಲ ಪರ್ವತವನ್ನೂ ಹತ್ತಿ ಬಂದಿರುತ್ತಾರೆ, ಅದೇ ನಮ್ಮದೇ ಊರ ಬದಿಯ ಗುಡ್ಡ, ಬೆಟ್ಟಗಳನ್ನು ನೋಡಿರುವುದಿಲ್ಲ. ಇದರ ಹಿಂದೆ ಯಾವುದೇ ಕೆಟ್ಟ ಉದ್ದೇಶಗಳಿರುವುದಿಲ್ಲ, ಬದಲಿಗೆ – ಅರೆ ಇಲ್ಲೇ ಇದೆಯಲ್ಲ, ಯಾವಾಗಲಾದರೂ ಹೋದರಾಯಿತು ಅನ್ನುವ ಭಾವನೆ. ಇತ್ತೀಚಿಗೆ ಈ ರೀತಿ ಮುಂದೂಡುವುದನ್ನು ನಿಲ್ಲಿಸಿದ್ದೇನೆ. ಇದಕ್ಕೆ ಎರಡು ಕಾರಣ; ಒಂದು, ಪ್ರಪಚದಲ್ಲೆಡೆ ಆಗುತ್ತಿರುವ ಕಲಹಗಳಿಂದ ಯಾವಾಗ ಯಾವ ಜಾಗ ಸೂಕ್ಷ್ಮ ಪ್ರದೇಶವಾಗಿ ಬಿಡುವೊದೋ ಎನ್ನುವ ಭಯ, ಇನ್ನೊಂದು – ಜಗತ್ತಿನ ಹವಾಮಾನ ಬದಲಾವಣೆಯಿಂದ ಯಾವ ಬೆಟ್ಟ, ಪರ್ವತ, ಸೂರ್ಯಾಸ್ತ ಯಾವಾಗ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಳ್ಳುವೊದೋ ಎನ್ನುವ ಆತಂಕ. 2014ರಲ್ಲಿ ನವ್ವು ರಷ್ಯಾದಲ್ಲಿ ಭೇಟಿ ಕೊಟ್ಟ ಶಿಖರವೊಂದು ಯುದ್ಧದ ಕಾರಣದಿಂದಾಗಿ ಶಾಶ್ವತವಾಗಿ ಮುಚ್ಚಲಾಗಿದೆ. ಹೀಗೆ, ಯಾವ ಘಟನೆ ಯಾವಾಗ ಯಾವ ಬದಲಾವಣೆ ತರುವುದು ಎಂದು ಹೇಳುವುದು ಪ್ರಸ್ತುತ ಪ್ರಪಂಚದಲ್ಲಿ ಬಲು ಕಷ್ಟ. ಆದುದರಿಂದ, ನೋಡಬೇಕೆಂದು ಮನದಲ್ಲಿ ಲಿಸ್ಟ್ ಮಾಡಿರುವ ಜಾಗಗಳನ್ನು ಸಾಧ್ಯವಿದ್ದರೆ ನೋಡುವುದು ಒಳಿತು. ಕೊಡಚಾದ್ರಿಯ ಸೂರ್ಯಾಸ್ತವನ್ನು ನೋಡಬೇಕು ಅಂತ ಮನದ ಲಿಸ್ಟಿನಲ್ಲಿ ಈ ಹೆಸರು ಎಂದೋ ಬರೆದಿತ್ತು. ಅಂತೂ ಕೊನೆಗೊಮ್ಮೆ ದೃಢ ನಿರ್ದಾರ ಮಾಡಿ ಬೆಟ್ಟ ಚಾರಣಕ್ಕಾಗಿ ಬಿಡುವು ಮಾಡಿಕೊಂಡು ಹೊರಟೇ ಬಿಟ್ಟೆವು. ಅಂದಿದ್ದನ್ನು ಸಾಧ್ಯವಾದರೆ ನೋಡಿ ಬಿಡಬೇಕು.

Advertisements
WhatsApp Image 2025 07 04 at 3.27.50 PM

ಬೆಂಗಳೂರಿನಿಂದ ರಾತ್ರಿ ರೈಲು ಹಿಡಿದುಕೊಂಡು ಬೆಳಗಿನ ಜಾವ ಶಿವಮೊಗ್ಗ ತಲುಪುವುದರ ಜೊತೆಗೆ ನಮ್ಮ ಪ್ರಯಾಣ ಆರಂಭವಾಗಿತ್ತು. ರೈಲು ಹಾದಿಯಲ್ಲಿ ಕಾಣಿಸಿದ ತೆಳುವಾದ ಮೋಡ, ಬೆಳಗಿನ ಸೂರ್ಯ, ನಮ್ಮ ಕಡಲ ತೀರಕ್ಕೆ ಅಷ್ಟೊಂದು ಪರಿಚಿತವಲ್ಲದ ಹವಾಮಾನ. ಶಿವಮೊಗ್ಗದಿಂದ ಬೆಳ್ಳಂಬೆಳಗ್ಗೆ ನಿಟ್ಟೂರಿಗೆ ಬಸ್ಸಿನಲ್ಲಿ ಪ್ರಯಾಣ. ನಿಟ್ಟೊರಿನಲ್ಲಿ ಹಲವಾರು ತಂಗುದಾಣಗಳು, ಹೋಮ್ -ಸ್ಟೇ ಗಳು ಇವೆ. ಇಲ್ಲಿ ಉಳಿದು ಕೊಳ್ಳುವ ಅವಕಾಶವೂ ಇವೆ. ನಿಟ್ಟೂರಿನಿಂದ ಕೊಡಚಾದ್ರಿ ಬೆಟ್ಟದ ಹಾದಿಯು ಹಿಡ್ಲುಮನೆ ಜಲಪಾತ ಹಾದಿಯಾಗಿದೆ. ಇರುವ ಮಾರ್ಗಗಳಲ್ಲಿ ಇದು ಅತೀ ಸರಳವಾದ ಚಾರಣ ಮಾರ್ಗ, ಹಾಗೆಯೇ ಇಲ್ಲಿಂದ ನೇರವಾಗಿ ಬೆಟ್ಟದ ತಪ್ಪಲಿಗೆ ಜೀಪಿನಲ್ಲಿ ಹೋಗುವ ವ್ಯವಸ್ಥೆ ಕೂಡ ಇದೆ. ಆದರೆ ಚಾರಣದ ಹಾದಿಯಷ್ಟು ಸುಂದರವಾದ ಹಾದಿಯಲ್ಲ.

ಇತ್ತೀಚಿನ ದಿನಗಳಲ್ಲಿ ಚಾರಣ, ಪ್ರವಾಸ, ಹೀಗೆ ಹಲವಾರು ಜಾಗಗಳಲ್ಲಿ ಆಗುವ ಅನಾಹುತಗಳಿಂದಾಗಿ, ಕರ್ನಾಟಕ ಸರ್ಕಾರ ಎಲ್ಲ ಕಡೆಯೂ ಚಾರಣ ಕೈಗೊಳ್ಳಲು ಅನುಮತಿ ಪಡೆಯುವುದನ್ನು ಕಡ್ಡಾಯವಾಗಿಸಿದೆ. ಹಾಗೆಯೇ ಕೊಡಚಾದ್ರಿ ಚಾರಣಕ್ಕೂ ಕೂಡ ಅರಣ್ಯ ಇಲಾಖೆಯ ಪರ್ಮಿಷನ್ ಅತೀ ಅಗತ್ಯ. ಈ ಚಾರಣ ಹಿಡ್ಲುಮನೆ ಜಲಪಾತದ ದಾರಿಯಿಂದ ಸರಿ ಸುಮಾರು 11 ಕಿಲೋಮೀಟರು ಇದೆ (ಹೋಗಲು ಹಾಗೂ ವಾಪಸ್ ಬರಲು ಸರಿ ಸುಮಾರು 22 ಕಿಲೋಮೀಟರು ದಾರಿ). ಹಾಗೆಯೇ ಹಿಂತಿರುಗುವಾಗ, ಸೂರ್ಯಾಸ್ತ ಸವಿಯುತ್ತಾ, ಕತ್ತಲಾದರೆ ಬೆಟ್ಟದ ಮೇಲಿಂದ ಕೆಳಗೆ ಬರಲು ಜೀಪುಗಳು ಕೂಡ ಇವೆ. ಈ ಜೀಪು ಸವಾರಿ ಒಬ್ಬರಿಗೆ ರೂಪಾಯಿ 300 ರಿಂದ 400 ರವರೆಗೆ ತಗಲುತ್ತದೆ. ಮಾನ್ಸೂನ್ ಕಳೆದು ನವೆಂಬರ್ ನಂತರ ಈ ಚಾರಣಕ್ಕೆ ಸರಿಯಾದ ಸಮಯ. ಮಳೆಯಿಂದ ಹಚ್ಚ ಹಸುರು ಬನ, ಬೆಟ್ಟ, ಜಲಪಾತ ಎಲ್ಲವನ್ನು ನೋಡುವುದೇ ಚಂದ.

ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವ, ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ, ಚಾರಣ ಪ್ರಿಯರಿಗೆ, ತನ್ನ ರಮಣೀಯ ಸೌಂದರ್ಯ, ಶ್ರೀಮಂತ ಜೀವವೈವಿಧ್ಯಗಳೊಂದಿಗೆ ಮರೆಯಲಾಗದ ಚಾರಣ ಅನುಭವವನ್ನು ನೀಡುತ್ತದೆ ಎನ್ನುವುದು ಸತ್ಯ ಸಂಗತಿ. ಅನುಭವೀ ಚಾರಣಿಗರಿಂದ ಹಿಡಿದು ಆರಂಭಿಕ ಚಾರಣಿಗರಿಗೂ ಮುದ ನೀಡುವ ಹಚ್ಚ ಹಸುರಿನ ಸುಂದರ ಬನವಿದು. 1,343 ಮೀಟರ್ (4,406 ಅಡಿ) ಎತ್ತರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಅತೀ ಎತ್ತರದ ಬೆಟ್ಟ, ಹಾಗೂ ಕರ್ನಾಟಕದ 13ನೇ ಎತ್ತರದ ಬೆಟ್ಟವೆಂಬ ಖ್ಯಾತಿಯ ಕೊಡಚಾದ್ರಿಯ ತಪ್ಪಲಿನಿಂದ – ದಟ್ಟವಾದ ಕಾಡುಗಳು, ವೈವಿಧ್ಯಮಯ ವನ್ಯಜೀವಿಗಳು ಮತ್ತು ಸ್ಪಷ್ಟ ದಿನಗಳಲ್ಲಿ ಅರೇಬಿಯನ್ ಸಮುದ್ರದವರೆಗೆ ವಿಸ್ತರಿಸುವ ವಿಹಂಗಮ ನೋಟಗಳನ್ನು ಸವಿಯಬಹುದು.

WhatsApp Image 2025 07 04 at 3.26.56 PM

ಕೊಡಚಾದ್ರಿ ಚಾರಣ ಮಾತ್ರವಲ್ಲದೆ, ಒಂದು ಯಾತ್ರಾಸ್ಥಳವೂ ಆಗಿರುವುದರಿಂದ, ಇಲ್ಲಿ ಜೀಪಿನಲ್ಲಿ ಬರುವ ಭಕ್ತಾದಿಗಳು ಕೂಡ ತುಂಬಾ ಸಂಖ್ಯೆಯಲ್ಲಿ ಇರುತ್ತಾರೆ. ಕೊಡಚಾದ್ರಿಗೆ ಇತ್ತೀಚಿನ ವರ್ಷಗಳಲ್ಲಿ ಮಾತ್ರವಲ್ಲದೆ, ಹಳೆಯ ಕಾಲದಿಂದಲೂ ದಕ್ಷಿಣ ಕನ್ನಡದ ಸ್ಥಳೀಯರು ಹಾಗೂ ಕೇರಳದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾ ಬಂದಿದ್ದಾರೆ. ಕ್ರಿಸ್ತ ಶಕ 7ರಲ್ಲಿ ಆದಿ ಶಂಕರಾಚಾರ್ಯರು ಕೊಡಚಾದ್ರಿಯನ್ನು ಭೇಟಿ ಮಾಡಿ, ಬೆಟ್ಟದ ತಪ್ಪಲಲ್ಲಿ ಧ್ಯಾನ ಮಾಡಿದ್ದರೆಂದು ಪ್ರತೀತಿ. ಕೊಡಚಾದ್ರಿ ಶಿಖರದ ಮೇಲೆ ಕಲ್ಲಿನಿಂದ ನಿರ್ಮಿಸಲಾದ “ಸರ್ವಜ್ಞಪೀಠ” ಎಂಬ ಚಿಕ್ಕ ಪೀಠವು ಅವರಿಗೆ ಸಮರ್ಪಿತವಾಗಿದೆ. ಹಾಗೆಯೇ, ಕೊಲ್ಲೂರಿಗೆ ಬರುವ ದಕ್ಷಿಣ ಭಾರತದ ಕೆಲ ತೀರ್ಥಯಾತ್ರಿಕರು ಕೊಡಚಾದ್ರಿಗೂ ಪಾದಯಾತ್ರೆ ಮಾಡುವುದು ಸಾಮಾನ್ಯವಾಗಿದೆ.

19ನೇ ಶತಮಾನದಲ್ಲಿ ಯುರೋಪಿಯನ್ ಪ್ರವಾಸಿಗಳು ಸಹ ಈ ಶಿಖರವನ್ನು ಹತ್ತಿದ ದಾಖಲೆಗಳಿವೆ. 1862ರಿಂದ 1870ರ ನಡುವೆ ಮೈಸೂರು ಪ್ರಾಂತ್ಯದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಲೆವಿನ್ ಬೆಂಥಮ್ ಬೋವ್ರಿಂಗ್ ತಮ್ಮ ಕಥನ- ಈಸ್ಟರ್ನ್ ಎಕ್ಸ್ಪೀರಿಯನ್ಸ್” (ಪೂರ್ವದ ಅನುಭವಗಳು) -ದಲ್ಲಿ ಕೊಡಚಾದ್ರಿಯನ್ನು ಹೀಗೆ ವರ್ಣಿಸುತ್ತಾರೆ

“ಅದ್ಭುತವಾದ ಅರಣ್ಯಗಳಿಂದ ಆವೃತ್ತವಾಗಿರುವ ಈ ಬೆಟ್ಟದ ಆರೋಹಣವು ಒಂದು ಸ್ಥಳದಲ್ಲಿ ನಿಜಕ್ಕೂ ತುಂಬಾ ಕಡಿದಾಗಿದೆ… ದೂರದಿಂದ ನೋಡುವಾಗ ಮಂದವಾಗಿ ಕಾಣುವ ಈ ಬೆಟ್ಟ, ಬೆಟ್ಟದ ತುದಿಯಿಂದ ಕಾಣುವ ನೋಟ, ವಾಸ್ತವದಲ್ಲಿ ಅದು ಚಾಕುವಿನಷ್ಟು ಹರಿತವಾಗಿದ್ದರೂ, ನೋಡಲು ಬಹು ಸುಂದರವಿದು. ಈ ಶಿಖರದ ಮೇಲೆ ಕಾಣುವ ದೃಶ್ಯ ಅಚ್ಚರಿ ಮೂಡಿಸುವಂತಿದೆ, ವಿಜೃಂಭಿಸುವ ಘಟ್ಟಗಳ ಸಾಲು, ಕೊಂಕಣದ (ಇಂದಿನ ಕರಾವಳಿ) ದೊಡ್ಡ ಭಾಗ, ಹಾಗೂ ಮಲೆನಾಡಿನ ಭವ್ಯವಾದ ನೋಟವನ್ನು ನೋಡಬಹುದಾಗಿದೆ.”

ಉಡುಪಿ ಜಿಲ್ಲೆಯ ಪ್ರಸಿದ್ಧ ಲೇಖಕ ಡಾ. ಕೆ. ಶಿವರಾಮ ಕಾರಂತ ಅವರು 1940ರ ದಶಕದಲ್ಲಿ ಕೊಡಚಾದ್ರಿಗೆ ಪಾದಯಾತ್ರೆ ಮಾಡಿದ ಅನುಭವವನ್ನು ದಾಖಲಿಸಿದ್ದು, ಈ ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಪ್ರಶಂಸಿಸಿ, ಕರಾವಳಿ ಕರ್ನಾಟಕದ ಮೂರು ಶ್ರೇಷ್ಠ ಪರ್ವತಗಳಲ್ಲಿ (ಕುದುರೆಮುಖ ಹಾಗೂ ಕುಮಾರಪರ್ವತ ಇತರ ಎರಡು) ಕೊಡಚಾದ್ರಿಯನ್ನು ಅತಿ ಸುಂದರವಾದ ಶಿಖರವೆಂದು ಬಣ್ಣಿಸಿದ್ದಾರೆ. ಇವೆಲ್ಲವೂ ನಮ್ಮ ಪಕ್ಕದಲ್ಲೇ ಇರುವ ಈ ಬೆಟ್ಟದ ಸೌಂದರ್ಯಕ್ಕೆ ಒಂದು ಉದಾಹರಣೆ.

ಕೊಡಚಾದ್ರಿ ಬೆಟ್ಟ ಅತೀ ಸರಳವಾದ ಚಾರಣವಾದರೂ, ಅದು ನಿಮ್ಮ ಮುಂದಿಡುವ ನಿಸರ್ಗ ಸೌಂದರ್ಯ, ಯಾವುದೇ ಇತರ ಎತ್ತರದ ಶಿಖರಗಳಿಗಿಂತ ಕಡಿಮೆಯೇನಲ್ಲ. ಕೊಡಚಾದ್ರಿಯ ತಪ್ಪಲಿನಿಂದ ಕಾಣುವ ಸೂರ್ಯಾಸ್ತ, ಆ ದಟ್ಟ ಕಾಡಿನ ನಡುವೆ ಹಬ್ಬಿರುವ ಹಸಿರು ಸುಳಿಗಳನ್ನು ನೋಡಿದಾಗ ಮನಸ್ಸು ಖಂಡಿತ ನಲಿದಾಡುವುದು. ಅಲ್ಲಿ ನಿಮ್ಮ ಮನಸು ಖಂಡಿತವಾಗಿಯೂ – ಏತಕ್ಕೆ ಈ ಚಾರಣವನ್ನು ಇಲ್ಲಿಯತನಕ ಮುಂದೂಡಿದ್ದೆ ಅನ್ನುವ ಪ್ರಶ್ನೆ ಕೇಳದೆ ಬಿಡದು. ಕೆಲವೊಂದು ಚಾರಣಗಳು ನಮ್ಮನ್ನು ನಾವು ಶ್ರೇಷ್ಠರೆಂದು ಸಾಬೀತುಪಡಿಸಿಲಿಕ್ಕಾಗಿ ಅಲ್ಲ, ಬದಲಿಗೆ, ಅವು ನಮ್ಮನ್ನು ನಾವು ಆಲಿಸುವುದಕ್ಕಾಗಿ. ಬದುಕಿನ ಎಷ್ಟೋ ಘಟನೆಗಳು ಕೂಡ ಹಾಗೆಯೇ ಅಲ್ಲವೇ? – not to conquer, but to feel, ಅದು ನಮ್ಮನ್ನು ನಾವು ಜಯಿಸಲಿಕ್ಕಾಗಿ ಅಲ್ಲ, ಬದಲಿಗೆ ನಮ್ಮನ್ನು ನಾವು ಆಲಿಸಲಿಕ್ಕಾಗಿ ಮಾತ್ರ.

WhatsApp Image 2025 07 04 at 3.25.27 PM

ನಾವು ಸಂಜೆಯ ಸೂರ್ಯಾಸ್ತದ ಅದ್ಭುತ ಕ್ಷಣವನ್ನು ಸವಿಯಲು ಕಾಯುತ್ತ ಕುಳಿತಿದ್ದೆವು. ಕೊಡಚಾದ್ರಿಯ ಬೆಟ್ಟದ ಮೇಲೆ ಹರಡಿದ್ದ ನೀಲಿ ಬಣ್ಣದ ಆಕಾಶದಲ್ಲಿ, ಸೂರ್ಯನು ಕೆಂಪು ನುರಿತ ಬೆಳಕಿನಲ್ಲಿ ತನ್ನ ಅಂತಿಮ ನೃತ್ಯವನ್ನಾಡುತ್ತಿದ್ದ. ನಮ್ಮ ಸುತ್ತಮುತ್ತಲಿನ ನಿಶ್ಯಬ್ದತೆಯ ಮಧ್ಯೆ ನಾವೆಲ್ಲರೂ ಪ್ರಪಂಚದಿಂದ ಕೆಲವು ಕ್ಷಣಗಳನ್ನು ಕಿತ್ತುಕೊಂಡು, ಪ್ರಕೃತಿಯ ಮೌನ ಧ್ವನಿಗಳನ್ನು ಆಲಿಸುತ್ತಿದ್ದೆವು. ಇದರ ಜೊತೆಜೊತೆಗೆ ಆ ಮೌನದಲ್ಲಿ ನಮ್ಮ ಮನದೊಳಗಿನ ಆಲೋಚನೆಗಳಿಗೆ ನಾವೇ ಬಾಗಿಲು ತೆರೆದು ಪ್ರವೇಶಿಸುತ್ತಿದ್ದೇವೇನೋ ಎನ್ನುವಂತೆ ಭಾಸವಾಗುತಿತ್ತು. ಪ್ರಕೃತಿಯ ಈ ಸರಳ, ಸಹಜ, ದೈನಂದಿನ ಕ್ಷಣಗಳು ಕೆಲವೊಮ್ಮೆ ಅಸಾಧಾರಣ/ಅದ್ಭುತ ಎಂದು ಅನಿಸುತ್ತವೆ. ಆ ಕ್ಷಣದಲ್ಲಿ ನನಗೆ ಶಬ್ದವೇ ಇಲ್ಲದಿರುವ ಅನಿಸಿಕೆ. ಸುತ್ತಲೂ ಎಲ್ಲರೂ ನೋಡುತ್ತಿದ್ದರೂ, ಪ್ರತಿಯೊಬ್ಬರೂ ನೋಡುವ ದೃಶ್ಯವೇ ವಿಭಿನ್ನವಾಗಿತ್ತು. ಹೌದು, ಎಲ್ಲರೂ ಒಂದೇ ಆಕಾಶ, ಒಂದೇ ಸೂರ್ಯ, ಒಂದೇ ಕೆಂಪು ಬಣ್ಣ, ಒಂದೇ ಹಸಿರು, ಒಂದೇ ನಿಶ್ಯಬ್ದತೆಯನ್ನು ಅನುಭವಿಸುತ್ತಿದ್ದರೂ, ಪ್ರತಿಯೊಬ್ಬರ ಹೃದಯದೊಳಗಿನ ಸಂಭಾಷಣೆ ಬೇರೆಯದೇ ಆಗಿತ್ತು. ನಾಳೆಯೂ ಇದೇ ಜಾಗ, ಇದೇ ಸೂರ್ಯ, ಇದೇ ಆಕಾಶ ಮತ್ತೆ ಬೇರೊಂದು ಮನದೊಳಗಣ ಸಂಭಾಷಣೆಗೆ ದಾರಿಮಾಡಿಕೊಡಬಹುದು, ಈ ಸಾಧ್ಯತೆಯೇ ಪ್ರಕೃತಿಯ ಮರ್ಮ.

ಪ್ರಕೃತಿಯ ಮಡಿಲು ಎಷ್ಟೋ ಬಾರಿ ನಮ್ಮೊಳಗಿನ ತತ್ವಜ್ಞಾನಿಯನ್ನು ಎಬ್ಬಿಸುತ್ತದೆ. ನಾವು ಸಾಮಾನ್ಯವಾಗಿ ಕಾಣುವ ದಿನನಿತ್ಯದ ನೋಟಗಳು, ಸೂರ್ಯಾಸ್ತ, ಹಸುರು ಬೆಟ್ಟ, ತಂಪಾದ ಗಾಳಿ ಎಲ್ಲವೂ ಪ್ರಕೃತಿಯ ಅಳಿಸಲಾಗದ ಭಾಷೆಯಲ್ಲಿ ನಮಗೆ ಯಾವುದೇ ಉಪದೇಶವಿಲ್ಲದೆ ಸಹ ಆಳವಾದ ಅರ್ಥವನ್ನು ಬೋಧಿಸುತ್ತವೆ. ಈ ರೀತಿ ಪ್ರಕೃತಿಯ ಮಡಿಲಲ್ಲಿ ಕೆಲ ಕ್ಷಣಗಳನ್ನು ಕಳೆದಾಗ, ನಾವೆಂದಿಗೂ ಕಾಣದ ಹೊಸ ಪ್ರಪಂಚವೊಂದು ನಮ್ಮ ಮುಂದೆ ತೆರೆಯುತ್ತದೆ. ಕೆಲವೊಮ್ಮೆ ನಮಗೂ ತಿಳಿಯದಂತೆ, ನಮಗೆ ಅನ್ಯರಾಗಿದ್ದ ನಮ್ಮದೇ ಸ್ವರೂಪವೊಂದನ್ನು ಅವಲೋಕಿಸಲು ಕೂಡ ಇದು ಅನುವು ಮಾಡಿ ಕೊಡುತ್ತದೆ.

WhatsApp Image 2025 07 04 at 3.25.40 PM

ಕೊಡಚಾದ್ರಿ ಎನ್ನುವುದು ಕೇವಲ ಒಂದು ಪರ್ವತವಲ್ಲ, ಅದು ನಮ್ಮ ಬದುಕಿನ ತಲ್ಲಣಗಳ ಮಧ್ಯೆ ಪ್ರಕೃತಿಯ ಮಡಿಲಿನಲ್ಲಿ ಮನಸ್ಸಿಗೆ ಮುದ ನೀಡುವ, ನೆಮ್ಮದಿ ತರುವ ತಂಗುದಾಣ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಪ್ರವಾಹ ಹೆಚ್ಚಾಗಿರುವುದರಿಂದ, ಎಲ್ಲ ಬೆಟ್ಟಗುಡ್ಡಗಳ ದಾರಿಗಳ ಪಕ್ಕದಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲಿಗಳು, ಬೇಕರಿ ಹೂಡಿಕೆಗಳು ನಮ್ಮ ಈ ಹಚ್ಚ ಹಸಿರು ತಾಣವನ್ನು ಕೊಚ್ಚೆಯಾಗಿಸುತ್ತಿರುವುದು ನೋವಿನ ಸಂಗತಿ. ಈ ನಿತ್ಯ ಸುಂದರತೆಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪ್ರಕೃತಿ, ನಮ್ಮ ಸ್ವತ್ತು ಅಲ್ಲ, ಬದಲಿಗೆ ಅದು ನಾವು ಭವಿಷ್ಯತ್ತಿನ ಜನಾಂಗದಿಂದ ಪಡೆದಿರುವ ಎರವಲು (We owe our environment to the future generation). ನಮ್ಮ ಪ್ರಕೃತಿ ನಮ್ಮ ಮುಂದಿನ ತಲೆಮಾರಿಗೆ ನಾವು ನೀಡಬೇಕಾದ ಹೊಣೆಗಾರಿಕೆಯ ಎರವಲು. ನಾವು ಅದನ್ನು ಹಾಗೆಯೇ ಉಳಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಹಾಳುಮಾಡುವ ಹಕ್ಕು ನಮಗಿಲ್ಲ; ಬದಲಿಗೆ ಅದು ಜೀವಂತವಾಗಿ ಉಳಿಯುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದುದರಿಂದ ಅದು ಇರುವ ಹಾಗೆ ಇರಲು ಬಿಡುವುದು ನಮ್ಮ ಜವಾಬ್ದಾರಿ.

ಇದನ್ನೂ ಓದಿ ಯುಗಧರ್ಮ | ಬಿಹಾರದಲ್ಲಿ ಮತದಾರರ ಪಟ್ಟಿ ವಿವಾದ; ಒಂಬತ್ತು ಮಿಥ್ಯೆಗಳು ಮತ್ತು ಒಂದು ಸತ್ಯ

ನಮ್ಮ ರಾಜ್ಯದಲ್ಲಿಯೇ ಇರುವ ಈ ಅಪರೂಪದ ತಾಣವನ್ನು ನಿರ್ಲಕ್ಷಿಸದೇ, ಇದರ ನಿಸರ್ಗಸೌಂದರ್ಯವನ್ನು ಕಾಪಾಡುವುದು ನಾವು -ನೀವು ಎಲ್ಲರೂ ಕೈಜೋಡಿಸಿ ಮಾಡಬೇಕಾದ ಕಾರ್ಯ. ಪ್ರಕೃತಿಯ ಅಂಗಳದಲ್ಲಿ ನಾವು ನೆಮ್ಮದಿಯನ್ನು ಹುಡುಕುತ್ತಿದ್ದರೆ, ಆ ನೆಮ್ಮದಿಯ ಮೂಲವಾಗಿರುವ ಪ್ರಕೃತಿ ಉಳಿಯಬೇಕು ಎಂದರೆ, ನಾವು ಅದನ್ನು ಉಳಿಸಬೇಕು. ಇದನ್ನು ಪ್ರೀತಿಯಿಂದ, ಜವಾಬ್ದಾರಿಯಿಂದ, ಮತ್ತು ಕೃತಜ್ಞತೆಯಿಂದ ನಿಭಾಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ ಕೂಡ.

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X