1931ರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲೆಯೊಬ್ಬಳು ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆದಿತ್ತು. ಆ ಸಭೆಗೆ ಮಹಾತ್ಮ ಗಾಂಧಿಯವರು ಬಂದಿದ್ದರು. ಗಾಂಧಿಯವರನ್ನು ಸ್ವಾಗತಿಸಲು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಅವರೆಲ್ಲಾ ತಮ್ಮ ಮೈಮೇಲಿನ ಆಭರಣಗಳನ್ನು ಬಿಚ್ಚಿ ಗಾಂಧಿಯವರಿಗೆ ಕೊಡುತ್ತಿದ್ದರು. ಅದರಿಂದ ಉತ್ತೇಜಿತಳಾದ ಆ ಬಾಲಕಿಯೂ ತನ್ನ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟಳು.
ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮವು ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರ ಪಾರತಂತ್ರ್ಯದ ವಿರುದ್ಧವಾಗಿ ನಡೆದ ರಾಜಕೀಯ ಹೋರಾಟದ ಜೊತೆಯಲ್ಲಿಯೇ ಹಲವಾರು ಸಾಮಾಜಿಕ, ಆರ್ಥಿಕ ಹೋರಾಟಗಳು ನಡೆಯುತ್ತಿದ್ದವು. ಸ್ಥಳೀಯ ಅರಸರ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧವೂ ಹೋರಾಟಗಳು ನಡೆದವು. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು ಎನ್ನುವುದು ಎದ್ದು ಕಾಣುವ ಸತ್ಯವಾದರೂ ಅಂದಿನ ಸಮಕಾಲೀನ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲೂ ಮಹಿಳೆಯರು ಅದ್ವಿತೀಯವಾಗಿ ಭಾಗವಹಿಸಿದರು. ಹೀಗೆ ಕಮ್ಯುನಿಸ್ಟ್ ಚಳವಳಿಯಲ್ಲಿ ತನ್ನನ್ನು ಗುರುತಿಸಿಕೊಂಡು ದಿಟ್ಟತನದಿಂದ ಹೋರಾಡಿದ ಮಹಿಳೆಯರಲ್ಲಿ ಕೊಂಡಪಲ್ಲಿ ಕೋಟೇಶ್ವರಮ್ಮ ಒಬ್ಬರು. ಆ ಕಾಲಘಟ್ಟದ ಸುಧಾರಣಾ ಚಳವಳಿ, ರಾಷ್ಟ್ರೀಯ ಚಳವಳಿ, ಕಮ್ಯುನಿಸ್ಟ್ ಚಳವಳಿ ಮತ್ತು ನಕ್ಸಲ್ ಬಾರಿ ಚಳವಳಿ – ಎಲ್ಲ ಚಳವಳಿಗಳಿಗೂ ಸಾಕ್ಷಿಯಾದ ಕೋಟೇಶ್ವರಮ್ಮನವರು ತೆಲುಗಿನಲ್ಲಿ ಬರೆದ ಆತ್ಮ ಕಥನ ‘ಒಂಟಿ ಸೇತುವೆ’ ಆಕೆಯ ವೈಯಕ್ತಿಕ ಕಥೆಯಾಗಿರುವುದಷ್ಟೇ ಅಲದ್ಲೆ, ಆ ಕಾಲದ ಸಾಮಾಜಿಕ ಚರಿತ್ರೆಯೂ ಆಗಿರುವುದು ವಿಶೇಷ. ಎಲ್ಲಕ್ಕಿಂತ ಮುಖ್ಯವಾಗಿ, ಮಹಿಳೆಯೊಬ್ಬಳು ಚಳವಳಿಯಲ್ಲಿ ಭಾಗವಹಿಸುವಾಗ ಎದುರಿಸಬೇಕಾದ ಕಷ್ಟನಷ್ಟಗಳು, ತ್ಯಾಗ ಬಲಿದಾನಗಳ ಔನ್ನತ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗುವ ಕೋಟೇಶ್ವರಮ್ಮನವರ ಜೀವನ ಗಾಥೆಯಿದು. ಇದನ್ನು ಸ. ರಘುನಾಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸುಮಾರು ಶತಾಯುಷಿಯಾಗಿ ಬದುಕಿದ ಕೋಟೇಶ್ವರಮ್ಮ ಅವರ ಜೀವಿತದ ಸಂಧ್ಯಾಕಾಲದಲ್ಲಿ ಈ ಆತ್ಮಕಥನವನ್ನು ಬರೆದಿದ್ದಾರೆ. ಅವರ ಜೀವಿತದ ಕಾಲಘಟ್ಟವನ್ನು ಮೂರು ಹಂತದಲ್ಲಿ ಕಾಣಬಹುದು. ಬಾಲ ವಿಧವೆಯಾಗಿದ್ದ ಕೋಟೇಶ್ವರಮ್ಮ ಆದರ್ಶ ಪರಿಸರದಲ್ಲಿ ಬೆಳೆದು ಕಮ್ಯುನಿಸ್ಟ್ ಕೊಂಡಪಲ್ಲಿ ಸೀತಾರಾಮ ಅವರನ್ನು ಮದುವೆಯಾಗುವುದು ಮೊದಲ ಹಂತ. ಕಮ್ಯುನಿಸ್ಟ್ ಚಳವಳಿಯಲ್ಲಿ ಗಂಡನಿಗೆ ಹೆಗಲೆಣೆಯಾಗಿ ನಿಂತು ಹೋರಾಟದ ಅತ್ಯಂತ ಕಠಿಣ ಜೀವನವನ್ನು ಎದುರಿಸಿದ ಹಂತ. ಗಂಡ ಬೇರೆಯವಳೊಂದಿಗೆ ಹೊರಟು ಹೋದ ಮೇಲೆ ಒಬ್ಬಂಟಿಯಾಗಿ ಜೀವನವನ್ನು ಕಳೆದ ನೋವು- ನಲಿವುಗಳ ದೀರ್ಘ ಕಾಲದ ಬದುಕು.
1931ರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲೆಯೊಬ್ಬಳು ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆದಿತ್ತು. ಆ ಸಭೆಗೆ ಮಹಾತ್ಮ ಗಾಂಧಿಯವರು ಬಂದಿದ್ದರು. ಗಾಂಧಿಯವರನ್ನು ಸ್ವಾಗತಿಸಲು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಅವರೆಲ್ಲಾ ತಮ್ಮ ಮೈಮೇಲಿನ ಆಭರಣಗಳನ್ನು ಬಿಚ್ಚಿ ಗಾಂಧಿಯವರಿಗೆ ಕೊಡುತ್ತಿದ್ದರು. ಅದರಿಂದ ಉತ್ತೇಜಿತಳಾದ ಆ ಬಾಲಕಿಯೂ ತನ್ನ ಮೈಮೇಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟಳು. ಗಾಂಧಿ ಆ ಹುಡುಗಿಯನ್ನು ಹರಸಿದರು. ಇಷ್ಟು ಚಿಕ್ಕ ವಯಸ್ಸಿಗೇ ಗಾಂಧಿಯ ದರ್ಶನದಿಂದ ಪುಲಕಿತಳಾದ ಆ ಬಾಲಕಿ ಮತ್ತಾರೂ ಅಲ್ಲ, ಆಂಧ್ರದ ಕೃಷ್ಣ ಜಿಲ್ಲೆಯ ಪಾಮರುವಿನಲ್ಲಿ ಜನಿಸಿದ ಕೋಟೇಶ್ವರಮ್ಮ. ಮನೆಯಲ್ಲಿ ರಾಷ್ಟ್ರೀಯತಾವಾದದ ಪರಿಸರ. ತಾಯಿ ಸದಾ ಚರಕದಲ್ಲಿ ನೂಲು ನೇಯುತ್ತಾ ಕುಳಿತಿರುತ್ತಿದ್ದಳು. ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತರ ಜೊತೆ ಅಸ್ಪೃಶ್ಯತೆಯನ್ನು ವಿರೋಧಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ, ಹೆಂಡವನ್ನು ವಿರೋಧಿಸುತ್ತಾ, ಖದ್ದರ್ ಪ್ರಚಾರ, ವಿದೇಶಿ ವಸ್ತುಗಳ ಬಹಿಷ್ಕಾರದಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ಸುಮಧುರ ಕಂಠವಿದ್ದ ಕೋಟೇಶ್ವರಮ್ಮನವರ ಹಾಡುಗಳು ಕಾರ್ಯಕ್ರಮದ ಮುಖ್ಯ ಭಾಗವಾಗಿರುತ್ತಿದ್ದವು.

ಅಂದಿನ ದಿನಗಳಲ್ಲಿ ಬಾಲ್ಯವಿವಾಹ ಸರ್ವೇ ಸಾಮಾನ್ಯ. ಕೋಟೇಶ್ವರಮ್ಮನಿಗೆ ನಾಲ್ಕೈದು ವರ್ಷಗಳಾಗಿದ್ದಾಗಲೇ ಸೋದರ ಮಾವ ವೀರಾರೆಡ್ಡಿಯವರೊಂದಿಗೆ ಮದುವೆಯಾಗಿತ್ತು. ಮದುವೆಯಾದ ಎರಡು ವರ್ಷಕ್ಕೆ ಆತ ಕ್ಷಯರೋಗದಿಂದ ತೀರಿಹೋದ. ಆರೇಳು ವರ್ಷಕ್ಕೆ ವಿಧವೆಯಾದ ಅವಳಿಗೆ ಇದಾವುದರ ನೆನಪೂ ಇರಲಿಲ್ಲ. ಅವಳು ಹುಟ್ಟಿದ ಸುಧಾರಣಾವಾದಿ ಕುಟುಂಬದಲ್ಲಿ ವಿಧವತ್ವ ವಿಶೇಷ ಸಮಸ್ಯೆಯಾಗದಿದ್ದರೂ ತಾಯಿಗೆ ಮಗಳು ಮದುವೆಯಾಗಲಿ ಅನ್ನುವ ಆಸೆ. ಕಮ್ಯುನಿಸ್ಟ್ ಕಾರ್ಯಕರ್ತನಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರು ಅವಳನ್ನು ಮದುವೆಯಾದದ್ದು ಕ್ರಾಂತಿಕಾರಿಗಳಲ್ಲಿ ಉತ್ಸಾಹವನ್ನು, ನೆಂಟರಲ್ಲಿ ದ್ವೇಷವನ್ನು, ಒಟ್ಟಿಗೆ ಹುಟ್ಟಿಸಿತು. ಮದುವೆಯ ನಂತರ ಕಮ್ಯುನಿಸ್ಟ್ ಪಕ್ಷವನ್ನು ಸೇರುವ ಕೋಟೇಶ್ವರಮ್ಮ ಎರಡು ಬಾರಿ ಕಮ್ಯುನಿಸ್ಟ್ ಪಕ್ಷ ನಿಷೇಧಕ್ಕೊಳಗಾದಾಗಲೂ ಭೂಗತಳಾಗಿ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸುತ್ತಾರೆ.
ಮದುವೆಯ ನಂತರ ಕಮ್ಯುನಿಸ್ಟ್ ಚಳವಳಿಗೆ ಬಂದ ಮೇಲೆ ಕೋಟೇಶ್ವರಮ್ಮ ಪಕ್ಷದ ಮಹಿಳಾ ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಸಾರ್ವಜನಿಕ ಸಭೆಗಳಲ್ಲಿ ಹಾಡುವುದರ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು. ನಂತರ ರಾತ್ರಿಯ ಶಾಲೆಗಳನ್ನು ತೆರೆದು ಶಿಕ್ಷಣ ಕೊಡುವುದು, ಪಕ್ಷವು ಸಂಘಟಿಸುತ್ತಿದ್ದ ಅಂತರ್ಜಾತಿ ವಿವಾಹಗಳು ಮತ್ತು ವಿಧವಾ ವಿವಾಹಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದು, ಪಕ್ಷ ಪ್ರಕಟಿಸುತ್ತಿದ್ದ ‘ಆಂಧ್ರ ಮಹಿಳಾ ಪತ್ರಿಕೆ’ ಯಲ್ಲಿ ಕೆಲಸ ಮಾಡುವುದೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಅವರು ಒಳ್ಳೆಯ ನಟಿ ಮತ್ತು ಹಾಡುಗಾರ್ತಿಯಾಗಿದ್ದರಿಂದ ‘ಅಭ್ಯುದಯ ರಚಯಿತುಲ ಸಂಘಂ’ ಮತ್ತು ‘ಪ್ರಜಾನಾಟ್ಯ ಮಂಡಲಿ’ಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ನಾಟಕಗಳಲ್ಲಿ ಅಭಿನಯಿಸಿದರು.
ಕಮ್ಯುನಿಸ್ಟ್ ಪಕ್ಷವು ತೆಲಂಗಾಣ ಹೋರಾಟದಲ್ಲಿ ತೊಡಗಿಕೊಂಡಾಗ ರಾಜ್ಯ ಕಮ್ಯುನಿಸ್ಟ್ ನಾಯಕರಿಂದ ಹಿಡಿದು ತಾಲ್ಲೂಕು ಮಟ್ಟದ ನಾಯಕರವರೆಗೆ ಎಲ್ಲರೂ ಭೂಗತ ಜೀವನಕ್ಕೆ ನಡೆದರು. ಆಗ ರಹಸ್ಯ ಕಾರ್ಯಾಚರಣೆಯನ್ನು ನಡೆಸಲು ನಾಯಕರ ಪತ್ನಿಯರನ್ನು, ಕೆಲವು ಮಹಿಳಾ ಕುಟುಂಬದ ಸದಸ್ಯರನ್ನು ಪಕ್ಷವು ಹೋರಾಟಕ್ಕೆ ಇಳಿಸಿತು. ಹಲವಾರು ಮಹಿಳೆಯರು ದಿಟ್ಟತನದಿಂದ ಹೋರಾಟದ ಕಣಕ್ಕೆ ಧುಮುಕಿದರು. ಅವರಲ್ಲಿ ಕೋಟೇಶ್ವರಮ್ಮ ಒಬ್ಬರು. ಅಡಗುತಾಣಗಳಲ್ಲಿ ಬಚ್ಚಿಟ್ಟುಕೊಂಡಿದ್ದಾಗ ಸರಿಯಾದ ಊಟ, ನಿದ್ರೆಯಿಲ್ಲದೆ, ಅವರ ಸಣ್ಣ ಮಕ್ಕಳಿಂದಲೂ ದೂರವಿದ್ದು ಬದುಕು ಸಾಗಿಸಿದರು. ಅವರು ಭೂಗತರಾಗಿದ್ದಾಗ ಪೊಲೀಸರಿಗೆ ತಿಳಿಯಬಾರದೆಂದು ಬಸಿರಾದ ಮಹಿಳೆಯರು ತಮ್ಮ ಬಸಿರು ಇಳಿಸಿಕೊಳ್ಳುತ್ತಿದ್ದರು. ಕೋಟೇಶ್ವರಮ್ಮನವರು ಒಮ್ಮೆ ಬಸಿರು ಇಳಿಸಿಕೊಂಡು ನಿತ್ರಾಣಳಾಗಿ ಸಾಯುವಂತಾಗಿದ್ದರು. ಕ್ರಾಂತಿಕಾರಿ ಪುರುಷರ ರಕ್ಷಣೆಗಾಗಿ ಅವರ ಹೆಂಡತಿಯಂತೆ, ಮಗಳಂತೆ, ತಾಯಿಯಂತೆ ಮಹಿಳೆಯರು ಪಾತ್ರವಹಿಸಿ ಅವರೊಡನೆ ಪ್ರಯಾಣ ಮಾಡಬೇಕಾಗಿರುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಕ್ರಾಂತಿಕಾರಿ ಹೆಣ್ಣುಮಕ್ಕಳು ತೆಗೆದುಕೊಳ್ಳಬೇಕಾದ ರಿಸ್ಕ್‌ಗಳು ಬಹಳವಿದ್ದವು. ಕೋಟೇಶ್ವರಮ್ಮನವರ ತಾಯಿಯೂ ಈ ಹೋರಾಟದಲ್ಲಿ ಧುಮುಕಿದ್ದರು. ಈ ಭೂಗತ ಜೀವನದ ಸಮಸ್ಯೆಗಳ ಸಂಕೀರ್ಣತೆಯನ್ನು ಕೋಟೇಶ್ವರಮ್ಮನವರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
ಭೂಗತ ಹೋರಾಟದಲ್ಲಿದ್ದಾಗ ಮೃತನಾದ ವೀರಯೋಧನ ಪತ್ನಿಯೊಂದಿಗೆ ಸಂಬಂಧ ಬೆಳೆದು ಪತಿ ಸೀತಾರಾಮಯ್ಯ ಕೋಟೇಶ್ವರಮ್ಮನವರಿಂದ ದೂರ ಸರಿಯುತ್ತಾರೆ. ಹಾಗೆ ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗಿ ಹೆಂಡತಿಯನ್ನು ತಬ್ಬಲಿ ಮಾಡುತ್ತಾರೆ. ವೈವಾಹಿಕ ಬದುಕಿನಲ್ಲಿ ಬಿರುಕು ಮೂಡಿದಂತೆ ಕಮ್ಯುನಿಸ್ಟ್ ಪಕ್ಷದಲ್ಲೂ ಬಿರುಕು ಮೂಡಿ ಅದರ ಕಹಿ ಪರಿಣಾಮವನ್ನು ಕೋಟೇಶ್ವರಮ್ಮ ಎದುರಿಸಬೇಕಾಗಿ ಬಂತು. ಪಕ್ಷದಲ್ಲಿ ಸ್ನೇಹಿತರಾಗಿದ್ದವರು ಅವರಿಂದ ದೂರ ಸೇರಿದರು. ಕೋಟೇಶ್ವರಮ್ಮನ ಮನಸ್ಸಿಗೆ ಕಮ್ಯುನಿಸ್ಟ್ ಪಕ್ಷವೆಂದರೆ ಒಂದೇ. ಪಕ್ಷಕ್ಕಾಗಿ ತಮ್ಮ ಸಮಯ, ದೇಹಶ್ರಮ, ಸಂಸಾರ ಸುಖ ಮತ್ತು ಹಣ ಎಲ್ಲವನ್ನೂ ಧಾರೆಯೆರೆಯುತ್ತಾರೆ. ಪಕ್ಷ ಒಡೆದಾಗ ತುಂಬ ನೋವನ್ನುಣ್ಣುತ್ತಾರೆ. ಮೊದಲು, ಎರಡು ಪಕ್ಷಗಳಿಗೂ ಸದಸ್ಯತ್ವ ಹಣ ಕಳುಹಿಸುತ್ತಾರೆ.
ಆಕೆ ಮುಂದೆ ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳಬೇಕಾಗುತ್ತದೆ. ಅರ್ಧಕ್ಕೆ ನಿಲ್ಲಿಸಿದ್ದ ಶಿಕ್ಷಣವನ್ನು ಮುಂದುವರಿಸಿ ಕಾಕಿನಾಡ ಪಾಲಿಟೆಕ್ನಿಕ್ ಹಾಸ್ಟೆಲ್‍ನಲ್ಲಿ ಮೇಟ್ರನ್ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಕ್ರಾಂತಿಕಾರಿ ಹೋರಾಟವನ್ನು ಜೀವನದ ಭಾಗವಾಗಿ ಸ್ವೀಕರಿಸಿದ ಮಕ್ಕಳು ಚಂದು ಮತ್ತು ಕರುಣ ಕಣ್ಣ ಮುಂದೆಯೇ ತೀರಿಹೋದದ್ದು ಅವರಿಗೆ ಜೀವನದಲ್ಲಿ ಭಾರಿ ಪೆಟ್ಟನ್ನು ನೀಡುತ್ತದೆ. ಕೆಲಸದಿಂದ ನಿವೃತ್ತರಾದ ಮೇಲೆ ಹತ್ತು ವರ್ಷಗಳ ಕಾಲ ಹೈದರಾಬಾದಿನಲ್ಲಿ ರಾಜೇಶ್ವರರಾವ್ ಅವರ ಹೆಸರಿನ ವೃದ್ಧಾಶ್ರಮದಲ್ಲಿ ಜೀವನ ಸಾಗಿಸುತ್ತಾರೆ. ಜೀವನದ ಕೊನೆಯಲ್ಲಿ ಮೊಮ್ಮಕ್ಕಳು ಸುಧಾ ಮತ್ತು ಅನುರಾಧ ಅವರ ಬಳಿ ಜೀವಿಸುತ್ತಾರೆ.
ಅಶಿಸ್ತಿನ ಹೆಸರು ಹೇಳಿ ಸೀತಾರಾಮಯ್ಯನವರನ್ನು ಕಮ್ಯುನಿಸ್ಟ್ ಪಕ್ಷದಿಂದ ಹೊರಹಾಕಲಾಗುತ್ತದೆ. ಕಮ್ಯುನಿಸ್ಟ್ ಪಕ್ಷದಿಂದ ಬಹಿಷ್ಕೃತರಾದ ಸೀತಾರಾಮಯ್ಯನವರು ‘ಪೀಪಲ್ಸ್ ವಾರ್ ಗ್ರೂಪ್’ ಸಂಘಟನೆ ಸೇರಿ ಭೂಗತನಾಗಿ ಹೋರಾಟ ಮಾಡುತ್ತಿದ್ದವರು ಮುಂದೆ ಆ ಪಕ್ಷವನ್ನೂ ಬಿಟ್ಟು ಬೇರೊಂದು ಪಕ್ಷವನ್ನು ಕಟ್ಟಿ ಕಾಡಿನಲ್ಲಿ ಭೂಗತರಾಗಿ ನಂತರ ಪೊಲೀಸರ ಕೈಗೆ ಸಿಕ್ಕು ಜೈಲು ಸೇರುತ್ತಾರೆ. ವಯಸ್ಸಾಗಿ ಜೀರ್ಣವಾಗಿದ್ದ ಸೀತಾರಾಮಯ್ಯನನ್ನು ಎನ್.ಟಿ.ಆರ್. ಸರ್ಕಾರ ಬಿಡುಗಡೆಗೊಳಿಸಿದಾಗ ಅವರನ್ನು ನೋಡಹೋಗಲು ಕೋಟೇಶ್ವರಮ್ಮ ತಿರಸ್ಕರಿಸುತ್ತಾರೆ. ಬಿಡುಗಡೆಯಾದ ನಂತರ ಅವರ ಜೊತೆ ಜೀವಿಸಲು ನಿರಾಕರಿಸುತ್ತಾರೆ. ಈ ನಿರ್ಧಾರಕ್ಕೆ ಕೋಟೇಶ್ವರಮ್ಮನಿಗೆ ಆಧಾರವಾದ ವಸ್ತುಸ್ಥಿತಿ ಮನ ಕರಗಿಸುವಂತಿದೆ. ಇಲ್ಲಿ ಅಪ್ಪಟ ಸ್ತ್ರೀವಾದಿಯೆನಿಸಿಕೊಳ್ಳುವ ಕೋಟೇಶ್ವರಮ್ಮನ ನಿಲುವುಗಳು ಅಪಾರ ಮೆಚ್ಚುಗೆಯನ್ನು ಪಡೆಯುತ್ತವೆ.
ಮದುವೆಯಾದ ಹೆಂಡತಿಯನ್ನು ಬಿಟ್ಟು ಪರಸ್ತ್ರೀಯೊಂದಿಗೆ ಜೀವನ ಸಾಗಿಸುತ್ತಿದ್ದ ಗಂಡನನ್ನು ಕೋಟೇಶ್ವರಮ್ಮ ಪ್ರಶ್ನಿಸಿದಾಗ ಅವನು ನೀಡುವ ಚಾಟಿ ಏಟಿನಂತಹ ಉತ್ತರ ಓದುಗರ ಎದೆಯಲ್ಲೂ ಚಳುಕು ಹುಟ್ಟಿಸುತ್ತದೆ: “ನೀನು ವಿಧವೆಯಾದರೂ ಮದುವೆ ಮಾಡಿಕೊಂಡು ಹಾಡಿನ ಪಲ್ಲಕ್ಕೆಯೇರಿಸಿ ಹತ್ತು ಮಂದಿ ನಿನ್ನನ್ನು ಮೆಚ್ಚುವಂತೆ ಮಾಡಿದೆ. ನೀನು ಎಲ್ಲರೊಂದಿಗೆ ಸಲಿಗೆಯಿಂದಿರುವಾಗ ನಾನೂ ನಿನ್ನನ್ನು ಅನುಮಾನದಿಂದ ನೋಡಿರಬಹುದ್ದಿತ್ತಲ್ಲವೆ?” ಕಮ್ಯುನಿಸ್ಟ್ ಪಕ್ಷದಲ್ಲಿ ಕೆಲಸ ಮಾಡಿ ಆದರ್ಶ ಪುರುಷನೆಂದು ಕರೆಸಿಕೊಂಡ ಗಂಡನ ಬಾಯಿಯಲ್ಲಿ ಎಂಥ ಮಾತುಗಳು ಬಂದವು, ಎಂಬುದನ್ನು ಗಮನಿಸಿದಾಗ ಕೋಟೇಶ್ವರಮ್ಮ ಗಂಡನನ್ನು ನೋಡಲು ಹೋಗಲು ನಿರಾಕರಿಸಿದ್ದಕ್ಕೆ ಪುರಾವೆ ಸಿಕ್ಕುತ್ತದೆ.
ಜೈಲಿನಿಂದ ಬಿಡುಗಡೆಯಾಗಿ ಬಂದ ಸೀತಾರಾಮಯ್ಯನವರು ಹೆಂಡತಿಯನ್ನು ನೋಡಬೇಕೆಂದು ಬಯಸಿದಾಗ ಕೆಲವು ಕಮ್ಯುನಿಸ್ಟ್ ಸ್ನೇಹಿತರು ಬಂದು ಕೋಟೇಶ್ವರಮ್ಮನವರನ್ನು ‘ಗಂಡನನ್ನು ನೋಡಲು ಬಾ’ ಎಂದು ಪುಸಲಾಯಿಸುತ್ತಾರೆ. ‘ಸೀತಾರಾಮಯ್ಯ ಬಹಳ ನೊಂದುಕೊಂಡಿದ್ದಾನೆ. ನೀನವನನ್ನು ನೋಡಬೇಕಮ್ಮ’ ಎಂದವರಿಗೆ ಕೋಟೇಶ್ವರಮ್ಮ ನೀಡಿದ ಚಾಟಿ ಏಟಿನ ಉತ್ತರ ಗಮನಿಸಬೇಕಾದ್ದು: “ನನಗವರನ್ನು ನೋಡಬೇಕೆನಿಸದು. ಹಿಂದೂಧರ್ಮ ಮತ್ತು ಮನುಸಿದ್ಧಾಂತವೆಂದು ಹೇಳುತ್ತಾ ಪತಿವ್ರತಾ ಶಿರೋಮಣಿಯಾಗಿ ಗಂಡನನ್ನು ನಾನೊಮ್ಮೆ ನೋಡಿಕೊಳ್ಳುತ್ತೇನೆಂದು ಹೇಳಿದರೂ ಕಮ್ಯುನಿಸ್ಟರಾದ ನೀವು ನನ್ನನ್ನು ತಡೆಯಬೇಕು. ಶೋಷಿತ ಮಹಿಳೆಗೆ ಅನ್ಯಾಯ ಮಾಡುವೆಯಾ ಎಂದು ಆತನಿಗೆ ನೀವು ಛೀಮಾರಿ ಹಾಕಬೇಕಿತ್ತು. ಅದರ ಬದಲಿಗೆ ನೀವೇ ಬಂದು ಆತನನ್ನು ನೋಡಿಕೊಳ್ಳಬೇಕೆಂದು ಹೇಳುವುದು ವಿಚಿತ್ರವಾಗಿದೆ” ಎಂದು ಕಡ್ಡಿ ಮುರಿದಂತೆ ಹೇಳಿದರೂ ಅವರ ಒತ್ತಾಯಕ್ಕೆ ಮಣಿದು ಗಂಡನನ್ನು ನೋಡಲು ಹೋಗುತ್ತಾರೆ. ಆದರೆ ಗಂಡ – ಹೆಂಡತಿ ಒಟ್ಟಿಗೆ ಜೀವಿಸಿ, ಎನ್ನುವ ಸಲಹೆಯನ್ನು ತಿರಸ್ಕರಿಸುತ್ತಾರೆ.
ಈ ಆತ್ಮಕಥೆ ಕೋಟೇಶ್ವರಮ್ಮನ ಬದುಕಿನ ವೇದನೆಯ ಕಥೆಯಾದರೂ, ಚಳವಳಿಯಲ್ಲಿ ಭಾಗವಹಿಸಿದ ಹೆಣ್ಣು ಗಳಿಸಿಕೊಂಡ ಅಸ್ಮಿತೆ ಮತ್ತು ಆತ್ಮಸ್ಥೈರ್ಯ ಅವಳನ್ನು ಸಾರ್ಥಕ ಮಹಿಳೆಯಾಗಿ ರೂಪಿಸಿದ ಪರಿ ಬೆರಗು ಹುಟ್ಟಿಸುತ್ತದೆ. ಅವರಿಗೆ ಮೂವತ್ತೈದು ವರ್ಷ ವಯಸ್ಸಾಗುವ ವೇಳೆಗೆ ಕುಟುಂಬ ಒಡೆದಿದ್ದರೆ. ಅದೇ ಸಮಯದಲ್ಲಿ ಅವರ ಜೀವನ ಧ್ಯೇಯವಾಗಿದ್ದ ಪಕ್ಷವೂ ಒಡೆದಿತ್ತು. ಆದರೆ, ಅವರು ಬದುಕಲು ದುಡಿಯಬೇಕಿತ್ತು. ಆಗ ಅವರು ಅರ್ಧಕ್ಕೆ ಬಿಟ್ಟಿದ್ದ ಶಿಕ್ಷಣವನ್ನು ಮುಗಿಸಿ ಮೇಟ್ರನ್ ವೃತ್ತಿಯನ್ನು ಕೈಗೊಳ್ಳುತ್ತಾರೆ. ಅವರ ಈ ಜೀವನ ಹೋರಾಟದಲ್ಲಿ ನೆರವಾಗುವ ಕಾಮ್ರೇಡ್ ರಾಜೇಶ್ವರರಾವ್ ಮತ್ತು ಕಾಮ್ರೇಡ್ ಸುಂದರಯ್ಯನವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಪತ್ರಿಕೆಗಳಿಗೆ ಕಥೆಗಳನ್ನು, ಕವಿತೆಗಳನ್ನು ಬರೆದು ಕಳುಹಿಸುತ್ತಾರೆ. ರೇಡಿಯೋ ನಾಟಕಗಳನ್ನು ಬರೆಯುತ್ತಾರೆ. ಪ್ರಹಸನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಾರೆ. ಕಾಕಿನಾಡ ಅವರ ಕವಿತಾ ಶಕ್ತಿಯನ್ನು ಕಾವ್ಯಲೋಕಕ್ಕೆ ಪರಿಚಯಿಸಿದ್ದಲ್ಲದೆ, ಅವರಿಗೆ ವಿಸ್ತಾರವಾದ ಸ್ನೇಹ ಸಂಪರ್ಕವನ್ನು ಕಟ್ಟಿಕೊಡುತ್ತದೆ. ಸಾಹಿತ್ಯ ಸಮಾವೇಶಗಳಲ್ಲಿ ಭಾಗವಹಿಸುತ್ತಾ ತಮ್ಮ ಸೃಜನಶೀಲತೆಗೆ ಜೀವ ತುಂಬಿಕೊಳ್ಳುತ್ತಿದ್ದರು. ಹಾಸ್ಟೆಲಿನಲ್ಲಿ ವಾರ್ಡನ್ ಕೆಲಸ ಮಾಡುತ್ತಲೇ ಜೊತೆ ಜೊತೆಯಾಗಿ ಸಾಹಿತ್ಯ ಚಳವಳಿಯಲ್ಲೂ ಭಾಗವಹಿಸಿದರು. ಅರಸಂ (ಅಭ್ಯುದಯ ರಚಯಿತುಲ ಸಂಘಂ) ಮತ್ತು ವಿರಸಂ (ವಿಪ್ಲವ ರಚಯಿತುಲ ಸಂಘಂ) ಸಂಘಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸಿದರು. ಬಾಲ ವಿಧವೆಯಾಗಿ ಸಂಪ್ರದಾಯದ ಕೋಟೆಯಲ್ಲಿ ಬಂಧಿತಳಾಗದೆ, ಎಲ್ಲ ಸಂಕೋಲೆಗಳನ್ನು ಮುರಿದು ಸ್ವತಂತ್ರ ಜೀವನ ಆಯ್ದುಕೊಂಡವರು ಕೋಟೇಶ್ವರಮ್ಮ. ಗಂಡ, ಮಕ್ಕಳನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದರೂ ಜೀವನದ ಕೊನೆಗಾಲದವರೆಗೂ ಕಮ್ಯುನಿಸ್ಟ್ ಪಕ್ಷ ಒಂದಾಗಲಿ ಎಂದು ಬಯಸುತ್ತಿದ್ದ ಈ ಜೀವದ ಕಥೆ ಎಲ್ಲ ಹೋರಾಟಗಾರರಿಗೂ ಸ್ಪೂರ್ತಿಯಾಗುವಂತಹುದು. ಅವರ ಆತ್ಮಕಥೆಯ ಈ ಕೆಳಗಿನ ಸಾಲುಗಳು ಅವರ ವ್ಯಕ್ತಿತ್ವವನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ.
ಒಂಟಿತನ, ಒಬ್ಬೊಂಟಿಯೆಂದು ಮುದುಡಿ ಕೂರುವುದಿಲ್ಲ
ಅಮಾನುಷ ಘಟನೆಗಳ ಕಂಡು ಕಣ್ಣೀರ ಗೋದಾವರಿಯಾಗುತ್ತಲಿರುವಳು
ತಾರಕಕ್ಕೇರಿದ ಅಂದಿನ ಹೋರಾಟ ಸಂಸ್ಕೃತಿಯ ನೆನೆದು ಸಾಗರವಾಗುತ್ತಲಿರುವಳು
ಅದರಲಿ ಹುಟ್ಟಿದ ಮುತ್ತುಗಳಂಥ ಆದರ್ಶಗಳನ್ನು
ಭವಿಷ್ಯತ್ತಿಗಾಗಿ ಭದ್ರಪಡಿಸಬೇಕೆಂದು ತಪಿಸುತ್ತಲೇ ಇರುವಳು
ಇಳಿವಯಸ್ಸಿನಲ್ಲೂ ತಾಳ್ಮೆಯಿಂದ ಆ ಮುತ್ತುಗಳ ಅಕ್ಷರಗಳಲ್ಲಿ ಕೋದು ತೃಪ್ತಳಾಗುವಳು

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).