ಕುದಿ ಕಡಲು | ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ರೂಪ; ಕಾಲ ಸನ್ನಿಹಿತ

Date:

Advertisements

ಆರಂಭ ಘಟ್ಟದಲ್ಲಿ ಪರಿಷತ್ತಿನ ಪದಾಧಿಕಾರಿಗಳೆಂದರೆ ಸಾಹಿತಿಗಳು, ಕಲಾವಿದರು, ಗಮಕಿಗಳು, ಕನ್ನಡದ ಬಗ್ಗೆ ಅತೀವ ಕಾಳಜಿ ಹೊಂದಿದವರು. ಒಂದು ರೀತಿಯ ಕನ್ನಡ ಪ್ರೇಮ, ಬದ್ಧತೆ, ಸ್ವಾರ್ಥವಿಲ್ಲದ ದುಡಿಮೆ ಮುಖ್ಯ ತತ್ವಗಳಾಗಿ ಕನ್ನಡದ ಕೆಲಸಗಳು ಅರ್ಥಪೂರ್ಣವಾಗಿಯೇ ನಡೆದವು. ಕಾಲವೆಂಬುದು ನಿಂತ ನೀರಲ್ಲ; ಅದು ನಿರಂತರ ಹರಿಯುವ ನದಿ. ವರ್ಷಗಳು ಜಾರಿದಂತೆ ಮೌಲ್ಯ, ತತ್ವಾದರ್ಶಗಳ ಪಲ್ಲಟವೂ ಆಯಿತು.

ಒಂದು ಶತಮಾನಕ್ಕೂ ಮಿಕ್ಕಿದ ಕಾಲಾವಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಚಾಚಿಕೊಂಡಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಒಂದು ಸಂಘಟನೆ ಇರಬೇಕೆಂದು ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ತಲೆ ಎತ್ತಿದ ಈ ಸಂಸ್ಥೆ ತನ್ನ ಇರವಿನ ಈ ಸುದೀರ್ಘ ಕಾಲಾವಧಿಯಲ್ಲಿ ಅನೇಕ ರೂಪ, ರೂಪಾಂತರಗಳನ್ನು ಪಡೆದುಕೊಂಡಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ವಿಕಾಸಕ್ಕಾಗಿ ರೂಪಗೊಂಡ ಈ ಸಂಸ್ಥೆ ನಿಧಾನಕ್ಕೆ ಕನ್ನಡದ ಅಸ್ಮಿತೆಗಾಗಿ ಹೋರಾಟ ನಡೆಸುವ ಸಂಸ್ಥೆಯೂ ಆಯಿತು. ಕನ್ನಡಿಗರೆಲ್ಲ ಒಂದೆಡೆ ಸೇರಿ ನಾಡು, ನುಡಿ, ಕನ್ನಡಿಗರ ಪಾಡು ಇತ್ಯಾದಿ ಈ ಬಗೆಯ ಸಮಸ್ಯೆಗಳ ಚಿಂತನ ಮಂಥನಕ್ಕೂ ಎಡೆಮಾಡಿಕೊಟ್ಟಿತು. ಕರ್ನಾಟಕದ ಏಕೀಕರಣ, ಕನ್ನಡ ಭಾಷೆಯಲ್ಲಿ ಎಲ್ಲ ವ್ಯವಹಾರಗಳೂ ನಡೆಯಬೇಕೆಂಬ ಜನತೆಯ ಹಂಬಲ ಇತ್ಯಾದಿಗಳನ್ನೂ ಕನ್ನಡ ಸಾಹಿತ್ಯ ಪರಿಷತ್ತು ಕೈಗೆತ್ತಿಕೊಂಡಿತು. ಪರಿಷತ್ತಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಟ್ಟಡ, ಕನ್ನಡದ ಬೆಳವಣಿಗೆಗಾಗಿ ಹಲವಾರು ಯೋಜನೆಗಳು, ಕನ್ನಡದ ಅರಿವನ್ನು ಮೆರೆಸುವ ಉಪನ್ಯಾಸಗಳು, ಪುಸ್ತಕ ಪ್ರಕಟಣೆಗಳು, ಪದಕೋಶಗಳು ಹೀಗೆ ಪರಿಷತ್ತು ವಿಸ್ತಾರಕ್ಕೆ ಹಬ್ಬುತ್ತ ಹೋಯಿತು. ಜನತೆಯಿಂದ ಆರಿಸಿಬಂದ ಸರ್ಕಾರಗಳು ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯ ಧೋರಣೆಗಳನ್ನು ಗಮನಿಸಿ ಈ ಸಂಸ್ಥೆಯ ಬಲವರ್ಧನೆಗೆ ನೀರೆರೆಯುತ್ತ ಬಂದವು. ವರ್ಷಕ್ಕೊ, ಎರಡು ವರ್ಷಕ್ಕೊಮ್ಮೆ ಕನ್ನಡಿಗರೆಲ್ಲ ಒಂದೆಡೆ ಸೇರಿ ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವುದು ಮತ್ತು ಕನ್ನಡಿಗರ ಹಿತಕ್ಕಾಗಿ ಆಗಲೇ ಬೇಕಾದ ಕೆಲಸಗಳನ್ನು ಪಟ್ಟಿಮಾಡಿ, ಸರ್ಕಾರದ ಮೇಲೆ ಒತ್ತಡ ತರುವುದು ಮೊದಲಾದ ಕೆಲಸಗಳನ್ನು ಮಾಡಿತು. ಕನ್ನಡಿಗರ ಪರಸ್ಪರ ಸಮಾಗಮವೂ ಮುಖ್ಯವಾಗಿ, ಪುಸ್ತಕಗಳ ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮ, ಓದುಗರು ಮತ್ತು ಲೇಖಕರ ಭೇಟಿ ಇಂಥ ಹಲವು ಕವಲುಗಳು ಸೇರಿ ಪರಿಷತ್ತಿನ ಸಮ್ಮೇಳನಗಳು ಕಾಂತಿಯಿಂದ ಬೆಳಗಿದವು.

ಆರಂಭ ಘಟ್ಟದಲ್ಲಿ ಪರಿಷತ್ತಿನ ಪದಾಧಿಕಾರಿಗಳೆಂದರೆ ಸಾಹಿತಿಗಳು, ಕಲಾವಿದರು, ಗಮಕಿಗಳು, ಕನ್ನಡದ ಬಗ್ಗೆ ಅತೀವ ಕಾಳಜಿ ಹೊಂದಿದವರು. ಒಂದು ರೀತಿಯ ಕನ್ನಡ ಪ್ರೇಮ, ಬದ್ಧತೆ, ಸ್ವಾರ್ಥವಿಲ್ಲದ ದುಡಿಮೆ ಮುಖ್ಯ ತತ್ವಗಳಾಗಿ ಕನ್ನಡದ ಕೆಲಸಗಳು ಅರ್ಥಪೂರ್ಣವಾಗಿಯೇ ನಡೆದವು. ಕಾಲವೆಂಬುದು ನಿಂತ ನೀರಲ್ಲ; ಅದು ನಿರಂತರ ಹರಿಯುವ ನದಿ. ವರ್ಷಗಳು ಜಾರಿದಂತೆ ಮೌಲ್ಯ, ತತ್ವಾದರ್ಶಗಳ ಪಲ್ಲಟವೂ ಆಯಿತು. ಒಂದೊಂದು ಹೊಸ ತಲೆಮಾರು ಬಂದಾಗಲೂ ಪರಿಷತ್ತು ಹೊಸ ರೂಪವನ್ನು ಪಡೆದುಕೊಳ್ಳುತ್ತಲೇ ಹೋಯಿತು.

Advertisements

ಈಗ ಪರಿಷತ್ತು ಬಂದು ತಲುಪಿರುವ ಘಟ್ಟ ಕಣ್ಣು ಕುಕ್ಕುವಂತಿದೆ. ಪರಿಷತ್ತಿಗೆ ಬೆಂಬಲವಾಗಿ ನಿಂತಿರುವ ಸರ್ಕಾರ, ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಿಗೆ ನೀಡುತ್ತಿರುವ ಹಣ ಲಕ್ಷಗಳನ್ನು ದಾಟಿ, ಕೋಟಿಗಳನ್ನು ಮುಟ್ಟಿದೆ. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹತ್ತಿರ ಹತ್ತಿರ ನಲುವತ್ತು ಕೋಟಿ ರೂಪಾಯಿಗಳನ್ನಾದರೂ ಕೊಡಬೇಕು ಎಂಬ ಬೇಡಿಕೆಯನ್ನು ಪರಿಷತ್ತು ಇಟ್ಟಿದೆ. ಸರ್ಕಾರಕ್ಕೆ ಇದು ದೊಡ್ಡ ಮೊತ್ತವಲ್ಲ. ಇನ್ನೂ ಹತ್ತು ಕೋಟಿ ಸೇರಿಸಿ ಬರೋಬ್ಬರಿ ಐವತ್ತು ಕೋಟಿಯನ್ನು ಕೊಟ್ಟರೂ ಯಾರೂ ಬೆಚ್ಚಿಬೀಳಬೇಕಾಗಿಲ್ಲ.

ಸಮ್ಮೇಳನಗಳಿಗೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಇದೊಂದು ಜಾತ್ರೆ; ಮೂರು ದಿನಗಳ ವೈಭವ. ಕನ್ನಡಿಗರ ಎಂದು ಹೇಳಲಾಗದ ರಾಜಕಾರಣಿಗಳ, ಪರಿಷತ್ತಿನ ಪದಾಧಿಕಾರಿಗಳ ಮೆರೆದಾಟ. ಪೆಂಡಾಲುಗಳು, ವಿದ್ಯುದ್ದೀಪಗಳು, ವಿಸ್ತಾರ ಪ್ರದೇಶದಲ್ಲಿ ಪುಸ್ತಕ ಮಾರಾಟ, ಕಾರುಗಳು, ಬಸ್ಸುಗಳು, ಸ್ಥಳೀಯರಿರಲಿ, ಹೊರಗಿನಿಂದ ಬಂದವರಿಗೂ ಕೊನೆಯಿಲ್ಲದ ನೋಟ. ಈ ಗದ್ದಲದಲ್ಲಿ ಕನ್ನಡದ ವಿಚಾರ, ಸಂಸ್ಕೃತಿಯ ವಿಚಾರ, ಸಾಹಿತ್ಯ ಸಂವಾದ ಯಾರಿಗೆ ತಲುಪುವುದೋ ತಿಳಿಯುವುದಿಲ್ಲ. ಊಟದ ಮೆನು ಮಾತ್ರ ಎಲ್ಲ ಸಮ್ಮೇಳನಗಳಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಊಟದ ಜಾಗಗಳಿಗೆ ಜನರ ನೂಕು ನುಗ್ಗಲು, ರಾಜಕಾರಣಿಗಳ, ಗಣ್ಯರ ಕಾರಣದಿಂದಾಗಿ ಪೊಲೀಸ್‌ ಬಂದೋಬಸ್ತು-ಇಂಥವೇ ಕಣ್ಣು ಕುಕ್ಕುತ್ತವೆ.

ಕೋಟಿ ಗಟ್ಟಲೆ ಹಣ ಓಡಾಡಿದಾಗ ಆಗುವ ದುರಂತವೇ ಈ ಪರಿಷತ್ತಿನಲ್ಲಿಯೂ ಆಗಿದೆ. ಹಣದ ಆಮಿಷಕ್ಕಾಗಿ ಪರಿಷತ್ತಿನ ಅಧಿಕಾರ ಎಂಬುದು ಎಲ್ಲ ಆಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪರಿಷತ್ತಿನ ಅಧ್ಯಕ್ಷರಾಗಲು, ಪದಾಧಿಕಾರಿಗಳಾಗಲು ಸಹಜವಾಗಿಯೇ ಭಾರೀ ಪೈಪೋಟಿ ನಡೆಯತ್ತದೆ. ಇಲ್ಲಿಯೂ ಗುಂಪುಗಳು ಕ್ರಿಯಾಶೀಲವಾಗಿರುತ್ತವೆ. ಸೇವೆ, ಕನ್ನಡದ ಕೆಲಸ ಯಾರಿಗೂ ನೆನಪಿನಲ್ಲಿ ಉಳಿಯುವುದಿಲ್ಲ. ನೆನಪಿನಲ್ಲಿ ಉಳಿಸಿಕೊಂಡವರು ಗೆದ್ದು ಬರುವುದಿಲ್ಲ.

1309433 20mdy 2a

ಇಷ್ಟೊಂದು ವರ್ಷಗಳಲ್ಲಿ ಪರಿಷತ್ತು ಕನ್ನಡ ನಾಡಿನ ಉದ್ದಗಲಕ್ಕೂ ವ್ಯಾಪಿಸಿದೆ. ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ತಲೆ ಎತ್ತಿವೆ. ಕೇಂದ್ರ ಘಟಕ ತುಂಬ ಬಲಗೊಂಡಿದೆ. ಪರಿಷತ್ತಿನ ಅಧ್ಯಕ್ಷರು ಈಗ ಸರ್ಕಾರದ ಕ್ಯಾಬಿನೆಟ್‌ ದರ್ಜೆಯ ಸಚಿವರ ಸ್ಥಾನಮಾನವನ್ನು ಪಡೆದಿದ್ದಾರೆ. ಪರಿಷತ್ತಿನ ಸಮ್ಮೇಳನಕ್ಕೆ ಮಾತ್ರವಲ್ಲದೆ ಸರ್ಕಾರ ಪರಿಷತ್ತಿನ ಹಲವು ಯೋಜನೆಗಳಿಗೆ ಹಣವನ್ನು ಕೊಡುತ್ತಿದೆ. ಹೀಗಾಗಿ ಈಗ ಪರಿಷತ್ತಿನಲ್ಲಿರುವುದು ಹಲವರ ಹಂಬಲವಾಗಿದೆ; ರಾಜಕಾರಣವೂ ಆಗಿದೆ.

ಮಂಡ್ಯ ಈಗ ದೊಡ್ಡ ಹೋರಾಟಕ್ಕೆ ಸಿದ್ಧವಾಗಿದೆ. ಈ ಹೋರಾಟ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅವರ ವಿರುದ್ಧದ ಹೋರಾಟವಾಗಿದೆ. ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಪ್ರೊ ಜಯಪ್ರಕಾಶ್‌ ಗೌಡ ಅವರ ಮುಂದಾಳುತನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಬರಹಗಾರರು, ಬುದ್ಧಿಜೀವಿಗಳು, ಕನ್ನಡಪರ ಹೋರಾಟಗಾರರು, ವಿವಿಧ ಸಂಘಟನೆಯ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಜೋಶಿ ಸರ್ವಾಧಿಕಾರಿಯಾಗಿದ್ದಾರೆ, ಹಣದ ದುರುಪಯೋಗವೂ ಅವರ ವಿರುದ್ಧ ಇದೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಹಣದ ಅವ್ಯವಹಾರದ ಬಗ್ಗೆ ಸರ್ಕಾರ ತನಿಖಾ ಆಯೋಗವನ್ನು ರಚಿಸಬೇಕು ಎಂಬುದು ಈ ಹೋರಾಟದ ಮುಖ್ಯ ಬೇಡಿಕೆಯಾಗಿದೆ.

ಮಹೇಶ್‌ ಜೋಶಿ ತಮ್ಮ ಹಿಡಿತವನ್ನು ಬಲಗೊಳಿಸಲು ಪರಿಷತ್ತಿನ ಬೈಲಾವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗಿರುವ ಅಧಿಕಾರವನ್ನು ಕಿತ್ತುಕೊಂಡು ಸರ್ವಾಧಿಕಾರವನ್ನು ಚಲಾಯಿಸಲು ನೋಡುತ್ತಿದ್ದಾರೆ. ಮಂಡ್ಯ ಸಮ್ಮೇಳನದಲ್ಲಿ ಆಗಿರುವ ಖರ್ಚು ವೆಚ್ಚಗಳ ಲೆಕ್ಕ ಪಾರದರ್ಶಕವಾಗಿಲ್ಲ. ಸಮ್ಮೇಳನದ ಸ್ಮರಣ ಸಂಚಿಕೆ ಸಮ್ಮೇಳನ ಮುಗಿದು ಐದು ತಿಂಗಳಾದರೂ ಇನ್ನೂ ಪ್ರಕಟವಾಗಿಲ್ಲ ಇತ್ಯಾದಿ ಬೇಡಿಕೆಗಳೂ ಈ ಹೋರಾಟಗಾರರ ಪಟ್ಟಿಯಲ್ಲಿವೆ.

ಅಪಾರ ಹಣ, ಅಧಿಕಾರದ ಕೇಂದ್ರೀಕರಣಕ್ಕೆ ಅವಕಾಶವಿರುವಲ್ಲೆಲ್ಲ ಸರ್ವಾಧಿಕಾರಿಗಳ ಉದಯವಾಗುತ್ತದೆ ಎಂಬುದು ಸಾಮಾನ್ಯ ನಿಯಮ. ಜೋಶಿಯವರ ಉದಯ ಅಸಹಜವೇನೂ ಅಲ್ಲ. ಅದರ ವಿರುದ್ಧ ಹೋರಾಡುವ ಎಚ್ಚರ ಜನರಲ್ಲಿ ಮೂಡುತ್ತಿರುವುದು ಸ್ವಾಗತಿಸಬೇಕಾದ ಸಂಗತಿಯೇ. ಕ್ಯಾಬಿನೆಟ್‌ ದರ್ಜೆಯ ತಮ್ಮ ಸ್ಥಾನವನ್ನು ಜೋಶಿ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಜೋಶಿ ಎಂದೂ ಧ್ವನಿ ಎತ್ತಿ ಸರ್ಕಾರವನ್ನು ಎದುರು ಹಾಕಿಕೊಂಡಿಲ್ಲ ಎಂದೆಲ್ಲ ಹೋರಾಟಗಾರರು ಹೇಳುತ್ತಿದ್ದಾರೆ. ಪರಿಷತ್ತಿನ ನಡೆಯನ್ನು, ಸಮ್ಮೇಳನಗಳ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗಾದರೂ, ಜೋಶಿಯವರ ದಿಕ್ಕು ದೆಸೆಗಳು ಕಾಣುತ್ತವೆ. ಮಹೇಶ್‌ ಜೋಶಿ ದೂರದರ್ಶನದ ನಿರ್ದೇಶಕರಾಗಿದ್ದಾಗ ಏನು ಮಾಡಿದರು, ನಂತರದ ವರ್ಷಗಳಲ್ಲಿ ಪರಿಷತ್ತಿನಲ್ಲಿ ಏನು ಮಾಡಿದರು, ಅವರ ಕನ್ನಡಪರ ಕಾಳಜಿ ಎಷ್ಟು ಸಾಚಾ, ಹಣಕಾಸಿನ ವಿಷಯದಲ್ಲಿ ಇವರೆಷ್ಟು ಪಾರದರ್ಶಕವಾಗಿದ್ದಾರೆ ಇವೆಲ್ಲ ವಿಶ್ಲೇಷಣೆಗೆ ಒಳಗಾಗಬೇಕಾದ ಸಂಗತಿಗಳೇ. ಮಂಡ್ಯದ ಹೋರಾಟ ಯಶಸ್ವಿಯಾದರೆ ಪರಿಷತ್ತಿನ ಕೊಳೆ ಸ್ವಲ್ಪಮಟ್ಟಿಗಾದರೂ ತೊಳೆದು ಹೋಗಬಹುದು.

ಮಂಡ್ಯ 34
ಮಂಡ್ಯದಲ್ಲಿ ಸಭೆ ಸೇರಿದ್ದ ಸಮಾನ ಮನಸ್ಕರು. ಮಾತನಾಡುತ್ತಿರುವ ಪ್ರೊ ಜಯಪ್ರಕಾಶ್‌ ಗೌಡ

ಹಿಂದೊಮ್ಮೆ ಕವಿ ಎಂ ಗೋಪಾಲಕೃಷ್ಣ ಅಡಿಗರು ಪರಿಷತ್ತನ್ನು ವಿಸರ್ಜಿಸಲು ಸಲಹೆ ಮಾಡಿದ್ದರು. ಪರಿಷತ್ತಿನ ವಿರುದ್ಧ ಅವರೂ ತೊಡೆತಟ್ಟಿದ್ದರು. ಯಾವುದೇ ಸಂಸ್ಥೆ ಹಳೆಯದಾದಷ್ಟೂ ಅದು ಜಡಗಟ್ಟುತ್ತದೆ. ಹೊಸ ನೀರು ಹರಿಯಲು ಅಲ್ಲಿ ಅವಕಾಶವೇ ಇರುವುದಿಲ್ಲ. ಹೊಸ ನೀರು ಹರಿಯದಂತೆ ನೋಡಿಕೊಳ್ಳುವವರೆ ಹೆಚ್ಚಾಗಿರುತ್ತಾರೆ. ಹಣ ಅಧಿಕ ಪ್ರಮಾಣದಲ್ಲಿ ಬಂದು ಸೇರುತ್ತಿದ್ದರೆ ಬಕಗಳ ನೋಟ ಅಲ್ಲಿಯೇ ನೆಟ್ಟಿರುತ್ತದೆ. ದೊಡ್ಡ ವ್ಯಂಗ್ಯ ಎಂದರೆ ಪರಿಷತ್ತನ್ನು ವಿಸರ್ಜಿಸಲು ಈ ಹಂತದಲ್ಲಿ ಸಾಧ್ಯವಾಗುವುದೇ ಇಲ್ಲ. ಅಷ್ಟೊಂದು ಗಟ್ಟಿಯಾಗಿ ಪರಿಷತ್ತು ಬೆಳೆದುನಿಂತಿದೆ. ಒಳ್ಳೆಯ ಶಕ್ತಿಗಳನ್ನು ತುಳಿಯುವಂತೆ ದುಷ್ಟಶಕ್ತಿಗಳು ಪರಿಷತ್ತುನ್ನು ಆಕ್ರಮಿಸಿವೆ.

ಈಗ ಇರುವ ದಾರಿಯೆಂದರೆ, ಸರ್ಕಾರ ಪರಿಷತ್ತಿನ ಸಮ್ಮೇಳನಗಳಿಗೆ ಕೋಟಿಗಟ್ಟಲೆ ಹಣವನ್ನು ಕೊಡಬಾರದು. ಯೋಜನೆಗಳಿಗೆಂದು ನೀಡುತ್ತಿರುವ ಹಣ ಸರಿಯಾಗಿ ವಿನಿಯೋಗವಾಗುತ್ತಿದೆಯೇ ಎಂದು ಹದ್ದಿನ ಕಣ್ಣಿನಲ್ಲಿ ನೋಡಬೇಕು. ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಬೇಕು. ಹಣ ಹೊಳೆಯಂತೆ ಹರಿದು ಬರುವುದು ನಿಂತ ಕೂಡಲೇ ಹಲವು ಶಕ್ತಿಗಳು ದೂರವಾಗುತ್ತವೆ.

ಈಗಾಗಲೇ ಪುಸ್ತಕ ಮೇಳಗಳು ಅಲ್ಲಲ್ಲಿ ನಡೆಯುತ್ತಿವೆ. ಖಾಸಗಿಯವರು, ಪ್ರಕಾಶನ ಸಂಸ್ಥೆಗಳು ಇವನ್ನು ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಸಾಹಿತ್ಯ ಸಂವಾದ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಬ್ಬರವಿಲ್ಲದೆ, ಅರ್ಥಪೂರ್ಣವಾಗಿ ನಡೆಯುತ್ತಿವೆ. ಇದಲ್ಲದೆ ಬಸು ಅವರು ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಜನರ ನೆರವಿನಿಂದ ಸಾಹಿತ್ಯ ಮೇಳಗಳನ್ನು ನಡೆಸುತ್ತಿದ್ದಾರೆ. ಬಳ್ಳಾರಿಯ ʼಸಂಗಂʼ ಸಂಘಟನೆಯೂ ಗುಣಾತ್ಮಕವಾದ ಸಾಹಿತ್ಯ ಮೇಳಗಳನ್ನು ನಡೆಸುತ್ತಿದೆ. ಮೂರು ವರ್ಷದ ಹಿಂದೆ ಇದೇ ಸಂಘಟನೆ ವಿಶ್ವ ಕಾವ್ಯ ಮೇಳವನ್ನು ಯಶಸ್ವಿಯಾಗಿ ನಡೆಸಿತು. ಧಾರವಾಡದ ಮನೋಹರ ಗ್ರಂಥಮಾಲೆ ನಡೆಸುತ್ತಿದ್ದ ಸಾಹಿತ್ಯ ಸಮ್ಮೇಳನ ಅರ್ಥವ್ಯಾಪ್ತಿಯನ್ನು ಒಳಗೊಂಡಿತ್ತು. ಈಗ ಅದು ನಿಂತು ಹೋಗಿದೆ. ಹೆಗ್ಗೋಡಿನಲ್ಲಿ ಸಂಸ್ಕೃತಿ ಶಿಬಿರಗಳು ನಡೆಯುತ್ತಿವೆ. ಇವೆಲ್ಲ ಒಂದು ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ, ಮಿತವಾದ ಬಂಡವಾಳದಲ್ಲಿ, ನಿಜಕ್ಕೂ ಬರಹಗಾರರಿಗೆ ಮತ್ತು ಓದುಗರಿಗೆ ನೆರವಾಗುವ ಕ್ರಿಯೆಯಲ್ಲಿ ತೊಡಗಿವೆ. ಸರ್ಕಾರ ಇಂಥ ವಿಕೇಂದ್ರೀಕೃತ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕೊಡುವುದು ಹೆಚ್ಚು ಪ್ರಯೋಜನವಾಗಬಹುದು. ಈ ಸಂಘಟನೆಗಳು ಸರ್ಕಾರದ ಹಣಕ್ಕಾಗಿ ಕಾದು ಕುಳಿತಿರದೆ, ತಮ್ಮ ಪಾಡಿಗೆ ತಾವೇ ಜನತೆಯ ನೆರವಿನಿಂದ ಕಾರ್ಯಕ್ರಮ ನಡೆಸುತ್ತಿವೆ. ಹಣಕಾಸಿನ ವಿಷಯದಲ್ಲಿ ಪಾರದರ್ಶಕವಾಗಿಯೂ ಇವೆ.

ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಅದನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ತಾನು ಕೊಡುವ ಸಾರ್ವಜನಿಕ ಹಣಕ್ಕೆ ಲೆಕ್ಕ ಕೇಳುವುದು ಅದರ ಕರ್ತವ್ಯ. ಇಲ್ಲವಾದರೆ ಜನರ ತೆರಿಗೆಯ ಹಣ ಪೋಲಾಗುತ್ತದೆ. ಜೊತೆಗೆ ಸಮ್ಮೇಳನಗಳೆಂದರೆ ಆಯಾ ಜಿಲ್ಲೆಗಳ ಸಚಿವರು, ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಹಣವನ್ನು ಚೆಲ್ಲಾಡುತ್ತಿರುವ ಈಗಿನ ಸಮ್ಮೇಳನಗಳನ್ನು ಸರ್ಕಾರ ಗಮನಿಸಬೇಕಾಗಿದೆ. ಅಧಿಕಾರಿಗಳು ಮತ್ತು ಮಂತ್ರಿಗಳು ಯಾಕೆ ಇದರಲ್ಲಿ ಭಾಗವಹಿಸಬೇಕು? ಸರ್ಕಾರದ ವಾಹನಗಳು ಯಾಕೆ ಹಗಲು ರಾತ್ರಿ ಸುತ್ತಾಡಬೇಕು? ಸಾಹಿತ್ಯ ಸಮ್ಮೇಳನ ಎಂದರೆ ರಾಜಕಾರಣಿಗಳ ಆಡಂಬೋಲವಾಗಬಾರದು. ಸರ್ಕಾರ ದೂರದಲ್ಲಿಯೇ ಉಳಿದು ಸಾಹಿತಿಗಳನ್ನು ಮುನ್ನೆಲೆಗೆ ಬಿಡಬೇಕು. ಪರಿಷತ್ತಿನ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು. ರಾಜಕಾರಣಿಗಳು ಮೆರೆಯಬಾರದು.

ಇದನ್ನೂ ಓದಿ ʼಬಾಯಲ್ಲಿ ಮಂತ್ರ, ಕೈಯಲ್ಲಿ ದೊಣ್ಣೆʼ ಇದು ಕಸಾಪ ಅಧ್ಯಕ್ಷ ಜೋಶಿ ಕಾರ್ಯವೈಖರಿ- ಜಿಲ್ಲಾಧ್ಯಕ್ಷರ ಆರೋಪ

ಸಾಹಿತ್ಯ ಸಮ್ಮೇಳನಗಳ ಗುಣಾತ್ಮಕ ಕೊಡುಗೆ ಏನು? ಸಮ್ಮೇಳನದಲ್ಲಿ ಚರ್ಚೆಯಾಗುವ, ಸಂವಾದಗೊಳ್ಳುವ ಸಂಗತಿಗಳು ಎಂಥವು? ಸಮ್ಮೇಳನದಲ್ಲಿ ಜಾರಿ ಮಾಡುವ ತೀರ್ಮಾನಗಳನ್ನು ಸರ್ಕಾರ ಎಷ್ಟರ ಮಟ್ಟಿಗೆ ಗೌರವಿಸುತ್ತದೆ? ಇವೆಲ್ಲ ಸಾರ್ವಜನಿಕ ಚರ್ಚೆಯಾಗಬೇಕು. ಸರ್ಕಾರ ಕಣ್ಣುಮುಚ್ಚಿಕೊಂಡು ಹಣವನ್ನು ಸುರಿಯಬಾರದು. ಕೋಟಿಗಳು ನಿಂತು ಹೋಗಬೇಕು. ಲಕ್ಷಾಂತರ ಜನರಾದರೂ ಯಾಕಾಗಿ ಸೇರಬೇಕು. ಒಂದೊಂದು ಭಾಗದಲ್ಲಿ ಸಮ್ಮೇಳನಗಳು ನಡೆದು, ಆ ಭಾಗದ ಜನರಿಗೆ ಅನುಕೂಲವಾಗಬೇಕು. ಎಲ್ಲ ರೆವಿನ್ಯೂ ವಿಭಾಗಗಳಲ್ಲಿ ಸಮ್ಮೇಳನಗಳು ಪ್ರತಿವರ್ಷ ನಡೆಯುವಂತಾದರೆ ಜನ ಯಾಕಾಗಿ ಅಖಿಲ ಭಾರತ ಎಂದು ಅರ್ಥವಿಲ್ಲದೆ ಕರೆಯುವ ಸಮ್ಮೇಳನಗಳಿಗೆ ಮುಗಿ ಬೀಳುತ್ತಾರೆ? ಇವೆಲ್ಲ ಚಿಂತಿಸಬೇಕಾದ ಸಂಗತಿಗಳೇ.

ಪರಿಷತ್ತು, ಅದರ ಸ್ವರೂಪ, ಅದು ನಡೆಸುವ ಸಮ್ಮೇಳನ ಎಲ್ಲವನ್ನೂ ಹೊಸ ಬೆಳಕಿನಲ್ಲಿ ನೋಡಿ, ಹೊಸ ರೂಪ ಕೊಡಬೇಕಾದ ಕಾಲ ಸನ್ನಿಹಿತವಾಗಿದೆ. ಕನ್ನಡಿಗರೆಲ್ಲ ಈ ದಿಕ್ಕಿನಲ್ಲಿ ಯೋಚಿಸಬೇಕು. ಇಂದು (ಮೇ 17) ಮಂಡ್ಯದಲ್ಲಿ ನಡೆಯಲಿರುವ ಹೋರಾಟ ಇಂಥ ಚಿಂತನೆಗೆ ದಾರಿಮಾಡಿಕೊಡಬಹುದು.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X