ಬಹುಪಾಲು ಪ್ರವಾಸೀ ತಾಣಗಳಲ್ಲಿ ಅಗತ್ಯ ಸೌಕರ್ಯಗಳು ಮೆಚ್ಚುವಂತಿಲ್ಲ. ಪ್ರವಾಸಿಗರನ್ನು ಸುಲಿಯುವ ಕ್ಯಾಂಟೀನ್ ಗಳು, ತಿನಿಸುಗಳು, ಪಾನೀಯಗಳು ಇತ್ಯಾದಿ. ಸ್ವಚ್ಛತೆಯ ವಿಚಾರದಲ್ಲಿಯೂ ಪ್ರವಾಸೋದ್ಯಮ ಇಲಾಖೆ ಗಮನ ನೀಡಿರುವುದು ಕಾಣುವುದಿಲ್ಲ. ಕೇವಲ ಶ್ರೀಮಂತ ಮತ್ತು ವಿದೇಶೀ ಪ್ರವಾಸಿಗರ ಸೇವೆಗೇ ಸಿದ್ಧವಾಗಿರುವಂತೆ ಈ ಇಲಾಖೆ ಕಾಣಿಸುತ್ತದೆ. ಶ್ರೀಸಾಮಾನ್ಯರೂ ನಮ್ಮ ಬಹುಮುಖ್ಯ ತಾಣಗಳನ್ನು ಕಡಿಮೆ ಹಣದಲ್ಲಿ ನೋಡಿ, ಆನಂದದಿಂದ ಹಿಂದಿರುಗುವಂತೆ ನೋಡಿಕೊಳ್ಳುವುದೂ ಸರ್ಕಾರದ ಹೊಣೆ.
ಪ್ರವಾಸೋದ್ಯಮ ಎಂಬುದು ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಾಷ್ಟ್ರಗಳಲ್ಲಿಯೂ ಬಹುದೊಡ್ಡ ಉದ್ಯಮವಾಗಿದೆ. ಪ್ರತಿಯೊಂದು ರಾಷ್ಟ್ರದ ಆರ್ಥಿಕ ಬಲವನ್ನು ಹೆಚ್ಚಿಸುವುದರಲ್ಲಿಯೂ ಈ ಪ್ರವಾಸೋದ್ಯಮದ ಪಾತ್ರ ದೊಡ್ಡದಾಗಿಯೇ ಇದೆ. ಅನೇಕ ರಾಷ್ಟ್ರಗಳು ಕೈಬೀಸಿ ಕರೆಯುತ್ತ, ಪ್ರವಾಸಿಗರಿಗೆ ನೂರಾರು ಸೌಲಭ್ಯಗಳನ್ನು ಸೃಷ್ಟಿಸುತ್ತ ಪ್ರವಾಸಿಗರ ಮನಗೆಲ್ಲಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ.
ಹೊಸ ನಾಡಿನ ಜನ, ಬದುಕು, ಸಂಸ್ಕೃತಿ, ಪರಿಸರ, ಸಾಮಾಜಿಕ ಸಂಗತಿಗಳು, ಆರ್ಥಿಕ ವಿಚಾರಗಳು, ರೀತಿ ನೀತಿಗಳು ಪ್ರವಾಸಿಗರಲ್ಲಿ ಕುತೂಹಲದ ಸಂಗತಿಗಳಾಗಿವೆ. ಜೊತೆಗೆ ಆ ನಾಡಿನ ರಾಜಕೀಯ, ಸಾಹಿತ್ಯ ಸಂಸ್ಕೃತಿ, ಇತಿಹಾಸ, ಪುರಾತತ್ವ ಸಂಗತಿಗಳು ಹೀಗೆ ಪ್ರವಾಸಿಗರ ಆಸಕ್ತಿಗೆ ನೂರಾರು ಸಂಗತಿಗಳು ಇರುತ್ತವೆ. ಜೊತೆಗೆ ಚಾರಣ, ಸಾಹಸಗಳೂ ಸೇರಿರುತ್ತವೆ.
ನಮ್ಮ ಕರ್ನಾಟಕವೂ ಪ್ರವಾಸೋದ್ಯಮಕ್ಕೆ ಯೋಗ್ಯವಾದ ತಾಣವೇ. ಇಲ್ಲಿನ ಕರಾವಳಿಯ ಸೊಬಗು, ಮಲೆನಾಡಿನ ಕಾಡು, ದಾಂಡೇಲಿಯ ಅರಣ್ಯ, ಹಂಪಿ, ಪಟ್ಟದ ಕಲ್ಲು ಬಾದಾಮಿ ಐಹೊಳೆಯ ಐತಿಹಾಸಿಕ ಸಿರಿ, ಬಿಜಾಪುರ, ಗುಲ್ಬರ್ಗಗಳ ಇತಿಹಾಸದ ಪಳೆಯುಳಿಕೆಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರು ಕರ್ನಾಟಕಕ್ಕೆ ಮುಗಿಬೀಳುತ್ತಲೇ ಇದ್ದಾರೆ.
ಸ್ಥಳೀಯ ಉದ್ಯೋಗ ಸೃಷ್ಟಿ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹಣ, ಹೋಟೆಲು ಉದ್ಯಮಕ್ಕೆ ಬೆಂಬಲ, ಹೋಂ ಸ್ಟೇಗಳ ಹೆಚ್ಚಳಕ್ಕೆ ವೇಗವರ್ಧಕ ಕೊಡುಗೆ ಇವೆಲ್ಲ ಎದ್ದುಕಾಣುವ ಸಂಗತಿಗಳೇ. ಜೊತೆಗೆ ಪರೋಕ್ಷ ಕೊಡುಗೆಯಲ್ಲಿಯೂ ಈ ಪ್ರವಾಸೋದ್ಯಮ ಮಹತ್ವದ ಪಾತ್ರ ವಹಿಸುತ್ತದೆ.

ಸರ್ಕಾರದ ಕಣ್ಣು ಸಹಜವಾಗಿಯೇ ಈ ಆದಾಯ ಮೂಲದ ಮೇಲಿರುತ್ತದೆ. ಕರ್ನಾಟಕ ಸರ್ಕಾರ ಇತ್ತೀಚೆಗೆ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರಕಟಿಸಿರುವ ಎರಡು ಯೋಜನೆಗಳು ವಿವಾದಕ್ಕೆ ಮತ್ತು ಜನರ ಪ್ರಬಲ ವಿರೋಧಕ್ಕೆ ಕಾರಣವಾಗಿವೆ. ಮೈಸೂರಿಗೆ ಸಮೀಪದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಬಳಿ ಈ ಯೋಜನೆಗಳು ಕಾರ್ಯರೂಪಕ್ಕೆ ಬರಲು ಹವಣಿಸುತ್ತಿವೆ. ಒಂದು ಮೋಜಿನ ಪಾರ್ಕ್. ಇನ್ನೊಂದು ಕಾವೇರಿ ಆರತಿ. ಇವೆರಡೂ ಪ್ರವಾಸಿಗರನ್ನು ಸೆಳೆಯಲು ರೂಪಗೊಂಡಿವೆ. ತನ್ನ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಈ ಯೋಜನೆಗಳ ಕನಸು ಕಂಡಿದೆ.
ವಿರೋಧ ಬರುತ್ತಿರುವುದು ಈ ಅಣೆಕಟ್ಟೆಯ ನೀರನ್ನು ಬಳಸುತ್ತಿರುವ ರೈತರಿಂದ, ಸಾರ್ವಜನಿಕರಿಂದ. ಮುಖ್ಯ ಕಾರಣ ಈ ಎರಡೂ ಯೋಜನೆಗಳು ಅಣೆಕಟ್ಟೆಯ ಸುಭದ್ರತೆಗೆ ಮಾರಕವಾಗಿವೆ ಎನ್ನುವುದು. ವಿವಿಧ ಕ್ಷೇತ್ರಗಳ ಪರಿಣತರೂ ಇದೇ ಮಾತನ್ನು ಹೇಳುತ್ತಿದ್ದಾರೆ. ಆದರೂ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಲ್ಲ. ಈ ವಿವಾದ ನ್ಯಾಯಾಲಯದ ಕಟ್ಟೆಯನ್ನೂ ಏರಿದೆ.
ಸರ್ಕಾರ ವಿವೇಚನೆಯಿಂದ ಹೆಜ್ಜೆ ಇಡಬೇಕಾದ ಅಗತ್ಯ ಇದೆ. ನಿಜ, ಪ್ರವಾಸೋದ್ಯಮ ಎನ್ನುವುದು ಪ್ರವಾಸಿಗರನ್ನು ಸೆಳೆಯಬೇಕು. ಆದರೆ ತನಗೆ ತಾನೇ ಅಪಾಯ ತಂದುಕೊಂಡು ಪ್ರವಾಸಿಗರನ್ನು ಬರಮಾಡಿಕೊಳ್ಳುವ ಚಿಂತನೆಯನ್ನು ಯಾವ ಸರ್ಕಾರವೂ ಮಾಡಬಾರದು. ಅಣೆಕಟ್ಟು, ಅದರ ಭದ್ರತೆ, ಅದು ಪೂರೈಸುತ್ತಿರುವ ಅಮೂಲ್ಯವಾದ ನೀರು ಪ್ರವಾಸೋದ್ಯಮಕ್ಕಿಂತ ಮುಖ್ಯವಾದದ್ದು.ಈ ಅಂಶವನ್ನು ಸರ್ಕಾರ ಮುಕ್ತ ಮನಸ್ಸಿನಿಂದ ನೋಡಬೇಕು. ಸಾಧಕ ಬಾಧಕಗಳನ್ನು ತಾಳೆ ಹಾಕಬೇಕು.

ಕರ್ನಾಟಕದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಹು ದೊಡ್ಡ ಸಂಖ್ಯೆಯಲ್ಲಿಯೇ ನುಗ್ಗಿ ಬರುತ್ತಿದ್ದಾರೆ. ಆದರೆ ಸರ್ಕಾರ ಕಲ್ಪಿಸಿರುವ ಸವಲತ್ತುಗಳು ಸಮರ್ಪಕವಾಗಿವೆಯೇ ಎಂಬುದರ ಪರಿಶೀಲನೆ, ವಿಮರ್ಶೆ ಕೂಡಾ ನಡೆಯಬೇಕಾಗಿದೆ. ಅನೇಕ ಪ್ರವಾಸಿ ತಾಣಗಳು ಬಹಳ ಮುಖ್ಯ ತಾಣಗಳಾಗಿದ್ದರೂ ಅಲ್ಲಿನ ಸೌಲಭ್ಯಗಳು ಕಳಪೆಯಾಗಿವೆ. ವಿವೇಚನೆ ಇಲ್ಲದ ನಿಯಮಗಳು ಈ ತಾಣಗಳಲ್ಲಿ ಜಾರಿಯಲ್ಲಿವೆ. ಉದಾಹರಣೆಗೆ : ಸೋಮನಾಥಪುರ ಮತ್ತು ಶ್ರೀರಂಗಪಟ್ಟಣಗಳಲ್ಲಿರುವ ವ್ಯವಸ್ಥೆಯನ್ನೇ ಗಮನಿಸಬಹುದು. ಇಲ್ಲಿ ಪ್ರವೇಶಕ್ಕೆ ಅಗತ್ಯವಾದ ಟಿಕೆಟ್ ಕೊಳ್ಳಲು ಆನ್‌ಲೈನ್ ಪದ್ಧತಿಯನ್ನು ಜಾರಿಯಲ್ಲಿಡಲಾಗಿದೆ. ಮೊಬೈಲ್ ಇಲ್ಲದವರು, ಗ್ರಾಮಾಂತರ ಪ್ರದೇಶಗಳಿಂದ ಬರುವ ಓದು ಬರಹ ತಿಳಿಯದವರು ಟಿಕೆಟ್ ಪಡೆಯಲು ಪರದಾಡುತ್ತಾರೆ; ಪರಾವಲಂಬಿಗಳಾಗಿ ಕಣ್ ಕಣ್ ಬಿಡುತ್ತಾರೆ. ಇದ್ಯಾಕೆ ಹೀಗೆ? ಈ ತಾಣಗಳಲ್ಲಿರುವ ಸಿಬ್ಬಂದಿಯ ಮೇಲೆ ಇಲಾಖೆಗೆ ನಂಬಿಕೆ ಇಲ್ಲವೇ? ಈ ಟಿಕೆಟ್ ಕೊಡುವ ವಿಧಾನವನ್ನು ಸರಳಗೊಳಿಸಲು ಸಾಧ್ಯವಿಲ್ಲವೇ?
ಬಹುಪಾಲು ಪ್ರವಾಸೀ ತಾಣಗಳಲ್ಲಿ ಅಗತ್ಯ ಸೌಕರ್ಯಗಳು ಮೆಚ್ಚುವಂತಿಲ್ಲ. ಪ್ರವಾಸಿಗರನ್ನು ಸುಲಿಯುವ ಕ್ಯಾಂಟೀನ್ ಗಳು, ತಿನಿಸುಗಳು, ಪಾನೀಯಗಳು ಇತ್ಯಾದಿ. ಸ್ವಚ್ಛತೆಯ ವಿಚಾರದಲ್ಲಿಯೂ ಪ್ರವಾಸೋದ್ಯಮ ಇಲಾಖೆ ಗಮನ ನೀಡಿರುವುದು ಕಾಣುವುದಿಲ್ಲ. ಕೇವಲ ಶ್ರೀಮಂತ ಮತ್ತು ವಿದೇಶೀ ಪ್ರವಾಸಿಗರ ಸೇವೆಗೇ ಸಿದ್ಧವಾಗಿರುವಂತೆ ಈ ಇಲಾಖೆ ಕಾಣಿಸುತ್ತದೆ. ಶ್ರೀ ಸಾಮಾನ್ಯರೂ ನಮ್ಮ ಬಹುಮುಖ್ಯ ತಾಣಗಳನ್ನು ಕಡಿಮೆ ಹಣದಲ್ಲಿ ನೋಡಿ, ಆನಂದದಿಂದ ಹಿಂದಿರುಗುವಂತೆ ನೋಡಿಕೊಳ್ಳುವುದೂ ಸರ್ಕಾರದ ಹೊಣೆ. ಅದು ಒಂದು ನಾಡಿನ ಸಂಸ್ಕೃತಿಯನ್ನೂ ಬಿಂಬಿಸುತ್ತದೆ. ಪ್ರವಾಸೀ ತಾಣಗಳ ಸುತ್ತಮುತ್ತ ಇರುವ ಖಾಸಗೀ ಹೋಟೆಲುಗಳು, ಅಂಗಡಿಗಳ ಮೇಲೂ ಸರ್ಕಾರದ ನಿಯಂತ್ರಣ ಬೇಕಾಗುತ್ತದೆ. ವಾಹನಗಳ ಪಾರ್ಕಿಂಗ್ ಎನ್ನುವುದು ಹಣ ಸುಲಿಯಲು ದಾರಿಯಾಗಬಾರದು. ಸ್ವಚ್ಛತೆ, ಆರೋಗ್ಯಕ್ಕೆ ಹಾನಿಯಾಗದಂಥ ವ್ಯವಸ್ಥೆ ಪ್ರವಾಸೋದ್ಯಮವನ್ನು ನಿಜಕ್ಕೂ ಬಲಗೊಳಿಸುತ್ತದೆ.
ಕೃಷ್ಣರಾಜಸಾಗರದ ಬಳಿಯ ಉದ್ದೇಶಿತ ಮೋಜಿನ ಪಾರ್ಕನ್ನು ಸರ್ಕಾರ ಬೇರೆ ಯೋಗ್ಯವಾದ ಜಾಗದಲ್ಲಿ ಮಾಡಬಹುದು. ಕಾವೇರಿ ಮಾತೆಯ ಬೃಹತ್ ಪ್ರತಿಮೆಯನ್ನು ಕೂಡಾ ಅಪಾಯವಿಲ್ಲದ ಜಾಗದಲ್ಲಿ ರೂಪಿಸಬಹುದು.
ಕಾವೇರಿ ಆರತಿಯಂತೂ ಅರ್ಥವಿಲ್ಲದ ಆರತಿ. ೨೫,೦೦೦ ಕುರ್ಚಿಗಳ ಆಸನ ವ್ಯವಸ್ಥೆ, ಅದೂ ಅಣೆಕಟ್ಟೆಯ ಸಮೀಪದಲ್ಲಿ. ತಮಾಷೆಯಾಗಿ ಕಾಣಿಸುತ್ತದೆ. ಇದಕ್ಕಾಗಿ ನೂರು ಕೋಟಿ ರೂಪಾಯಿಯನ್ನು ಸರ್ಕಾರ ಖರ್ಚುಮಾಡಲು ಸಿದ್ಧವಿದೆ. ಮೋಜಿನ ಪಾರ್ಕಿಗೆ ೨೬೬೩ ಕೋಟಿ ರೂಪಾಯಿ. ಈ ಪಾರ್ಕ್ ನುಂಗುತ್ತಿರುವುದು 198 ಎದರೆ ಪ್ರದೇಶವನ್ನು.

ಕೆ.ಆರ್.ಎಸ್. ಬಳಿ ಇರುವ ಬೃಂದಾವನ್ ಗಾರ್ಡನ್ ಜಗದ್ವಿಖ್ಯಾತ ಎಂದು ಹೇಳುತ್ತಾರೆ. ಆದರೆ ಇದರ ನಿರ್ವಹಣೆ ಹೇಗಿದೆ? ಪ್ರವಾಸಿಗರು ಈ ಜಾಗದ ಸುತ್ತಮುತ್ತ ಎಷ್ಟು ಗಲೀಜು ಏಳಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಸ್ಥಳೀಯ ಪತ್ರಿಕೆಗಳಲ್ಲಿ ಚಿತ್ರಸಮೇತ ಪ್ರಕಟವಾಗಿದ್ದ ವರದಿಯನ್ನು ಪ್ರವಾಸೋದ್ಯಮ ಇಲಾಖೆ ನೋಡಲಿಲ್ಲವೇ? ಇವತ್ತಿಗೂ ಶಿವನ ಸಮುದ್ರದ ಸುತ್ತಮುತ್ತ (ಕೆಳಭಾಗದಲ್ಲಿ) ಯಾರೂ ಕಾಲಿಡಲಾಗದಷ್ಟು ಗಲೀಜು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇದನ್ನೆಲ್ಲ ಸರಿಪಡಿಸುವವರು ಯಾರು? ಪ್ರವಾಸೋದ್ಯಮ ಎಂದರೆ ಬೇಕಾಬಿಟ್ಟಿ ಉದ್ಯಮವೇ?
ಇದನ್ನೂ ಓದಿ ಕುದಿ ಕಡಲು | ಕೃಷ್ಣರಾಜ ಸಾಗರದ ಬೆನ್ನಲ್ಲಿ ಅರ್ಥವಿಲ್ಲದ ಮೋಜಿನ ಪಾರ್ಕ್
ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹೇಗಿದೆ? ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಜನರೇಕೆ ಹೆದರುತ್ತಾರೆ? ಪೌರ ಕಾರ್ಮಿಕರೇಕೆ ಮುಷ್ಯರ ಮಾಡುತ್ತಿದ್ದಾರೆ? ನಮ್ಮ ರಾಜ್ಯದ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿದೆಯಾ? ನಮ್ಮ ಕೃಷಿ ಕ್ಷೇತ್ರ ಯಾಕೆ ವರ್ಷದಿಂದ ವರ್ಷಕ್ಕೆ ಬಡವಾಗುತ್ತಿದೆ?
ಇಂಥ ಹತ್ತಾರು ಜ್ವಲಂತ ಪ್ರಶ್ನೆಗಳಿರುವಾಗ ಸರ್ಕಾರ ಅರ್ಥವೇ ಇಲ್ಲದ ಯೋಜನೆಗಳನ್ನು ರೂಪಿಸುತ್ತಾ ಹೋಗುವುದು ಅದರ ವೈಚಾರಿಕ ದಾರಿದ್ರ್ಯವನ್ನು ಸೂಚಿಸುತ್ತದೆ. ನಿಜವಾದ ಕಾಳಜಿಯಿಂದ, ಜನಪರ ಕೆಲಸಗಳಿಂದ ಜನರ ಮನವನ್ನು ಗೆಲ್ಲಬೇಕೇ ಹೊರತು, ಅನರ್ಥಗಳಿಗೆ ಎಡೆಮಾಡುವ ಯೋಜನೆಗಳಿಂದ ಅಲ್ಲ.
