ಯಾರೂ ಏನೂ ಮಾಡಕ್ಕಾಗಲ್ಲ, ಎಷ್ಟೇ ಹೋರಾಟ ಮಾಡಿ, ಆಗೋದು ಆಗೋದೇ, ಸಮಾಜದ ಅಲಿಖಿತ, ಕಣ್ಣಿಗೆ ಕಾಣದ ನಿಯಮಗಳಿವೆ, ಅದಕ್ಕೊಂದು ಪ್ರಕ್ರಿಯೆ ಇದೆ, ಎಷ್ಟು ಹಾರಾಡಿಕೊಂಡರೂ, ಆಗೋದು ಆಗೋದೆʼ. ಇದನ್ನು ಒಪ್ಪಿಕೊಂಡಾಗ ಏನಾಗುವುದೆಂದು ನೋಡಿದರೆ, ʼಆದದ್ದು ತುಂಬಾ ಕ್ರೂರವಾದ ಘಟನೆಯಾಗಿದ್ದರೂ, ಈ ಕ್ರೌರ್ಯಕ್ಕೆ ನಾನು ಜವಾಬ್ದಾರನೇ ಅಲ್ಲ, ನಾನು ಇಂತಹ ಕ್ರೌರ್ಯ ಮಾಡಬಾರದು ಅಷ್ಟೇʼ ಎಂದೆನಿಸಿ, ಮತ್ತೇ ಸಮಾಧಾನಪಡುವ ಮನಸ್ಥಿತಿಗೆ ತಲುಪುತ್ತೇವೆ.
ನಮ್ಮಲ್ಲಿ ಹೆಚ್ಚಿನವರಿಗೆ ಜೀವನ ಸುಲಭವಿಲ್ಲ. ವ್ಯಕ್ತಿಗಳಾಗಿ, ಒಂದು ಸಮಾಜವಾಗಿ, ನಾಗರಿಕರಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವುದು ಸಹಜ. ಹಾಗಾಗಿ ಜೀವನವನ್ನು ಸುಲಭಗೊಳಿಸಲು, ‘ಎಂಜಾಯ್’ ಮಾಡಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತೇವೆ; ಕೇವಲ ವ್ಯಕ್ತಿಯಾಗಲ್ಲದೇ ಸಮಾಜವಾಗಿಯೂ ಹೊಸಹೊಸ ದಾರಿಗಳನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ. ಆಯಾ ಕಷ್ಟಗಳು ನಮಗೆ ತಾಗದಿರಲಿ ಎಂದು ಕೆಲವು ರಕ್ಷಣಾ ವಿಧಾನಗಳನ್ನು ಪ್ರತ್ಯಕ್ಷವಾಗಿ ಹಾಗೂ ಹೆಚ್ಚಿನ ಸಲ ಪರೋಕ್ಷವಾಗಿ ಆಯಾ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ.
ನಮಗೆ ತಟ್ಟದಿರಲಿ ಎಂದು ಹೆಚ್ಚು ಸಂಪಾದನೆ ಮಾಡುವುದು, ರೌಡಿಗಳು ನಮ್ಮನ್ನು ಕಾಡದಿರಲಿ ಎಂದು ʼಒಳ್ಳೆಯʼ ಏರಿಯಾದಲ್ಲಿ ಮನೆ ಮಾಡುವುದು, ʼಸೆಕ್ಯುರಿಟಿʼ ಬೇಕು ಎಂದು ಗೇಟೆಡ್ ಸೊಸೈಟಿಯಲ್ಲಿ ವಾಸಿಸುವುದು, (ಅಂದಹಾಗೆ ಈ ಎಲ್ಲ ಗೇಟೆಡ್ ಸೊಸೈಟಿಗಳು ಅಕ್ರಮವೇ) ಅನಾರೋಗ್ಯ ತಟ್ಟದಿರಲಿ ಎಂದು ವ್ಯಾಯಾಮ ಮಾಡುವುದು, ಆರೋಗ್ಯಯುತ ಆಹಾರ ಸೇವಿಸುವುದು, ಹೀಗೆ ಹತ್ತಾರು ದಾರಿಗಳನ್ನು ಕಂಡುಕೊಳ್ಳುತ್ತೇವೆ. ಇದು ವೈಯಕ್ತಿಕವಾದ ದಾರಿಗಳಾದರೆ, ಇಡೀ ಸಮಾಜಕ್ಕೆ ಈ ನೋವುಗಳು ತಟ್ಟದಿರಲಿ ಎಂತಲೂ ಸಮಾಜವೂ, ಸಮಾಜದ ಒಂದು ವಲಯವೂ ಒಂದಲ್ಲ ಒಂದು ದಾರಿ ಕಂಡುಕೊಳ್ಳಲು ನಿರಂತರ ಯತ್ನಿಸುತ್ತಿರುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ಕಷ್ಟಕ್ಕೆ ದೂಡುವ ಶಕ್ತಿಗಳೂ ಸದಾಕಾಲ ಸಕ್ರಿಯವಾಗಿರುತ್ತವೆ. ಜನರನ್ನು ಕಷ್ಟಕ್ಕೆ ದೂಡುವ ಶಕ್ತಿಗಳ ಬಗ್ಗೆ ಸದ್ಯಕ್ಕೆ ಕೆದಕುವುದು ಬೇಡ. ಸಮಾಜವನ್ನು ನ್ಯಾಯಯುತವಾಗಿಸಬೇಕೆಂದು ತಣಿಯುವ ಜೀವಗಳೇ ಯಾವೆಲ್ಲ ರೀತಿಯಲ್ಲಿ ಅಪರೋಕ್ಷವಾಗಿ ದುಷ್ಟ ಶಕ್ತಿಗಳಿಗೆ ಸಹಕಾರಿಯಾಗಬಲ್ಲವು ಎಂಬುದನ್ನು ಪರಿಶೀಲಿಸುವ ಪ್ರಯತ್ನ ಮಾಡುವ.
ಬಿಜಾಪುರದ ಬಾಲಕಿ ದಾನಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಯಿತು. ಹೌದು, ತುಂಬಾ ನೋವಿನ ಸಂಗತಿ. ಆದರೆ ನಾವೇನು ಮಾಡಬಲ್ಲೆವು? ನಾವು ಅಸಹಾಯಕರಲ್ಲವೇ? ನಾನು ಅಸಹಾಯಕ, ದೂರದ ಬಿಜಾಪುರದಲ್ಲಿ ಆದ ಕ್ರೌರ್ಯಕ್ಕೆ ನಾನೂ ಈ ಸಮಾಜದ ಭಾಗವಾಗಿ ಜವಾಬ್ದಾರ ಹೌದು, ಆದರೆ ಈಗ ನಾನೇನು ಮಾಡಬಲ್ಲೆ? ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದ ಕೂಡಲೇ ಒಂದು ರೀತಿಯ ಸಮಾಧಾನ ಆವರಿಸಿಕೊಳ್ಳುತ್ತದೆ. ಹಾಗೂ ಯಾವುದೋ ರೀತಿಯಲ್ಲಿ ನಮ್ಮ ಮನಸ್ಸು ಆ ತೀರ್ಮಾನಕ್ಕೆ ಬರಲು ಒತ್ತಾಯಿಸುತ್ತದೆ. ಏಕೆಂದರೆ, ಅದು ಒಂದು ರಕ್ಷಣಾ ವಿಧಾನ, ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳದಿದ್ದರೆ ಜೀವನ ಹೇಗೆ ಮಾಡುವುದು. ನಮ್ಮ ರಕ್ಷಣಾ ವಿಧಾನ ಇಷ್ಟಕ್ಕೆ ನಿಂತಿದ್ದರೆ ಬಹುಶಃ ಅಷ್ಟು ಅಪಾಯಕಾರಿಯಲ್ಲವೇನೋ. ಈ ರಕ್ಷಣಾವಿಧಾನ ಹಲವಾರು ಇನ್ನೂ ಅಪಾಯಕಾರಿಯಾದ ಸ್ವರೂಪಗಳನ್ನು ಪಡೆದುಕೊಳ್ಳುತ್ತದೆ.
“ಯಾರೂ ಏನೂ ಮಾಡಕ್ಕಾಗಲ್ಲ, ಎಷ್ಟೇ ಹೋರಾಟ ಮಾಡಿ, ಆಗೋದು ಆಗೋದೇ, ಸಮಾಜದ ಅಲಿಖಿತ, ಕಣ್ಣಿಗೆ ಕಾಣದ ನಿಯಮಗಳಿವೆ, ಅದಕ್ಕೊಂದು ಪ್ರಕ್ರಿಯೆ ಇದೆ, ಎಷ್ಟು ಹಾರಾಡಿಕೊಂಡರೂ, ಆಗೋದು ಆಗೋದೆʼ. ಇದನ್ನು ಒಪ್ಪಿಕೊಂಡಾಗ ಏನಾಗುವುದೆಂದು ನೋಡಿದರೆ, ʼಆದದ್ದು ತುಂಬಾ ಕ್ರೂರವಾದ ಘಟನೆಯಾಗಿದ್ದರೂ, ಈ ಕ್ರೌರ್ಯಕ್ಕೆ ನಾನು ಜವಾಬ್ದಾರನೇ ಅಲ್ಲ, ನಾನು ಇಂತಹ ಕ್ರೌರ್ಯ ಮಾಡಬಾರದು ಅಷ್ಟೇ” ಎಂದೆನಿಸಿ, ಮತ್ತೇ ಸಮಾಧಾನ ಪಡುವ ಮನಸ್ಥಿತಿಗೆ ತಲುಪುತ್ತೇವೆ. ಇದೇ ಮುಂದುವರೆದು ನಾವು “Nihilism’ ಅನ್ನು ಒಪ್ಪಿಕೊಳ್ಳುತ್ತೇವೆ. ಜಗತ್ತಿನಲ್ಲಿ ಯಾವುದಕ್ಕೂ ಅರ್ಥವೇ, ನಮ್ಮ ಯಾವ ಕ್ರಮಗಳೂ, ಯಾವ ಪರಿಣಾಮವನ್ನೂ ಬೀರಿಲ್ಲ, ಬೀರುವುದಿಲ್ಲ ಎಂಬ ನಂಬಿಕೆಯನ್ನು ಒಪ್ಪಿಕೊಳ್ಳುವುದು. ಇದೂ ಕೂಡ ನಮ್ಮ ಡಿಫೆನ್ಸ್ ಮೆಕ್ಯಾನಿಸಂನ ಒಂದು ದಾರಿಯೇ. ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳುವ ಇನ್ನೊಂದು ದಾರಿ.

ಇದಕ್ಕಿಂತ ಅಪಾಯಕಾರಿಯಾದದ್ದು ಸಿನಿಕತೆ. ಈ ಸಿನಿಕತೆ ಕೇವಲ ಆ ಕ್ರೌರ್ಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನ್ಯಾಯಕ್ಕಾಗಿ ಹೋರಾಡುತ್ತಿರುವ ಎಲ್ಲ ಹೋರಾಟವನ್ನು, ಅದರಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನು ಸಿನಿಕತೆಯಿಂದಲೇ ನೋಡುವುದು. ಅವರಲ್ಲಿನ ಲೋಪಗಳನ್ನು ಕಂಡುಹಿಡಿಯುವುದು. ಹೌದು, ನ್ಯಾಯಪರ ಜೀವಗಳು ಮಾಡುವ ಹೆಚ್ಚಿನ ಹೋರಾಟಗಳು ಆ ಕಾಲಘಟ್ಟದಲ್ಲಿಯೇ ಸಫಲವಾಗುವುದಿಲ್ಲ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿರುವವರಲ್ಲೂ ಅನೇಕ ತಪ್ಪುಗಳು, ಎದ್ದುಕಾಣುವಂತಹ ಮೂರ್ಖತನದ ನಡೆ-ನುಡಿಗಳು ಕಾಣಿಸಿಕೊಳ್ಳುತ್ತವೆ. ನಮ್ಮೊಳಗೆ ಅಡಗಿರುವ ಸಿನಿಕನಿಗೆ ಅವೇ ಎದ್ದು ಕಾಣುತ್ತವೆ. “ನೋಡಿ, ಇವರೆಲ್ಲ ಎಂಥಾ ಮೂರ್ಖರು, ಇವರು ಹೀಗೆ ಮಾಡುವುದರಿಂದಲೇ ದೌರ್ಜನ್ಯಗಳು ಕಡಿಮೆ ಆಗುತ್ತಿಲ್ಲ” ಎಂದು ʼಸಕಾರಣʼವಾಗಿಯೇ ಟೀಕಿಸುತ್ತೇವೆ. ಹೊಸ ಹೊಸ ಹೋರಾಟಗಳ, ನ್ಯಾಯಪರ ಎನ್ನಿಸಿಕೊಂಡಿರುವ ವ್ಯಕ್ತಿಗಳಲ್ಲಿ ಒಂದೇ ಒಂದು ಲೋಪ ಕಂಡ ಕೂಡಲೇ ಸುಖಿಸುತ್ತೇವೆ. ಇದೂ ಕೂಡ, ಆ ಕ್ರೌರ್ಯದೊಂದಿಗೆ ಜೀವಿಸುವ ಒಂದು ರಕ್ಷಣಾ ವಿಧಾನವೇ. ಇದಕ್ಕೆ ಸಂಬಂಧಿಸಿದ ಇನ್ನೊಂದು ರಕ್ಷಣಾ ವಿಧಾನ ನಮ್ಮ ಮೇಲರಿಮೆ. ನಮಗೆ ಎಲ್ಲವೂ ಅರ್ಥವಾಗುತ್ತದೆ, ನಾವು ಯಾವಾಗಲೂ ಸರಿಯಾದದ್ದನ್ನೇ ಹೇಳಿದ್ದೇವೆ, ಹೇಳುತ್ತೇವೆ ಎಂಬ ಮೇಲರಿಮೆ.
ಆ ಕ್ರೌರ್ಯದಲ್ಲಿ ಅಡಗಿರುವ ಆಳವಾದ ಸಾಮಾಜಿಕ ಆಯಾಮಗಳನ್ನು ಕಂಡುಹಿಡಿಯುವ ನಮ್ಮ ಶಕ್ತಿಯಿಂದ, ಕಂಡುಹಿಡಿಯುಲು ನಾವು ಪಡುವ ಶ್ರಮದಿಂದ ಬರುವ ಮೇಲರಿಮೆ. ನನ್ನಷ್ಟು ಆಳವಾದ ನೋಟವನ್ನು ಇತರರು ನೋಡುತ್ತಿಲ್ಲ, ಅವರಿಗೆ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಸಂಕಟಪಡುವ ಬದಲಿಗೆ, ನಮ್ಮ ಆ ʼಆಳವಾದʼ ಜ್ಞಾನವನ್ನು ಸರಳವಾಗಿಸುವ ಬದಲಿಗೆ ಹೆಚ್ಚಿನ ʼಆಳʼವಿದೆ ಎಂದು ಬಿಂಬಿಸಲು ಇನ್ನಷ್ಟು ಕ್ಲಿಷ್ಟಗೊಳಿಸಿ ಸುಖಿಸುವುದು. ಹಾಗೂ ಕೆಲವೊಮ್ಮೆ ಈ ಸಿನಿಕತೆ ಇಲ್ಲದಿದ್ದರೂ ನಾವು ʼಸರಿʼ ಎಂಬ ಭಾವನೆ. ‘Righteousness’, ಇದೂ ಅಷ್ಟೇ ಅಪಾಯಕಾರಿ. ನಾನು ಶೋಷಿತರ ಪರ, ದೌರ್ಜನ್ಯಕ್ಕೆ ಒಳಗಾದವರ ಪರ ಎಂದು ತಮ್ಮ ನ್ಯಾಯಪರ ಭಾವನೆ, ದೌರ್ಜನ್ಯಕ್ಕೆ ಒಳಗಾದ, ಒಳಗಾಗುತ್ತಿರುವ ಜನರ ನೋವನ್ನು ತಾನು ಅನುಭವಿಸುತ್ತೇನೆ ಎಂಬ ಭಾವನೆ. ಅದರಿಂದ ತನ್ನನ್ನು ತಾನು ಇತರರಿಗಿಂತ ಮೇಲ್ಮಟ್ಟದಲ್ಲಿ ಇರಿಸಿ, ನೋಡಿ ಯಾರೂ ನಿಜವಾದ ಕೆಲಸ ಮಾಡುತ್ತಿಲ್ಲ. ನಾನು ಅದರ ಬಗ್ಗೆ ಮಾತನಾಡಿ ನನ್ನ ಕರ್ತವ್ಯವವನ್ನು ನಿಭಾಯಿಸುತ್ತಿದ್ದೇನೆ ಎಂಬ righteous ಭಾವನೆ. ಇದೂ ಕೂಡ ನಮ್ಮ ರಕ್ಷಣಾ ವಿಧಾನದ ಭಾಗವೇ.
ಇನ್ನು ಕೆಲವೊಮ್ಮೆ ನಮ್ಮೊಳಗೆ, ನಮ್ಮ soul ಒಳಗೆ ಇಣುಕಿ, ಯಾಕ್ಹೀಗೇ ಎಂದು ಕೇಳಿ, ನಮ್ಮನ್ನು ನಾವು ನಿಜವಾದ ರೀತಿಯಲ್ಲಿ ಅರಿತುಕೊಳ್ಳಬೇಕು, ಒಂದು ಸ್ಪಿರಿಚುವಲ್ ಜರ್ನಿ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅಧ್ಯಾತ್ಮದ ಕಡೆ ವಾಲುವುದು. ಅಧ್ಯಾತ್ಮ ಎಂಬುದು ಒಳ್ಳೆಯ ವಿಷಯವೇ ಆಗಿರಬಹುದು. ನಾವು ಈ ಜಗತ್ತಿನ ಹುಟ್ಟು ಹೇಗಾಯಿತು, ನಾನು ನಿಜವಾಗಿಯೂ ಯಾರು, ನನಗೂ ಇತರ ಜೀವಿಗಳಿಗೂ ಇರುವ ನಿಜವಾದ ಸಂಬಂಧವೇನುʼ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತ, ಇದೇ ಒಂದು ʼಒಳ್ಳೆಯʼ ಸಮಾಜಕ್ಕೆ ದಾರಿ ಎಂಬುವವರು ಪೆಟ್ರೋಲ್ ಬೆಲೆ ಹೆಚ್ಚಳವಾದುದಕ್ಕೆ ಪಡುವ ಸಂಕಟ, ಕೆವಲ ತನ್ನ ಹೆಸರಿನ, ಜಾತಿಯ, ಧರ್ಮದ ಕಾರಣಕ್ಕೆ ನನಗೆ, ನನ್ನ ಮಕ್ಕಳಿಗೆ ಜೀವಕ್ಕೆ ಕುತ್ತು ಬರುವುದು, ಪಡೆದ ಐನೂರು ರೂಪಾಯಿ ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ಪರಿತಪಿಸುವ ಪಾಡುಗಳೆಲ್ಲವೂ ನಿಜವಾದ ನೋವುಗಳು ಎಂಬುದನ್ನು ಮರೆತುಬಿಡುತ್ತಾರೆ, ಎದುರಿಗಿರುವ ಈ ಸಂಕಟಗಳನ್ನು ಬಗೆಹರಿಸದೇ, ಮನುಕುಲದ ಇತರೆ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸಾಧ್ಯವಿಲ್ಲ ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ಮರೆತುಬಿಟ್ಟಾಗಲೇ ನಮಗೆ ಸಮಾಧಾನ ಸಿಗುವುದು.
ಸಮಾಧಾನದಿಂದ ಇರಬಾರದು ಎಂದು ಹೇಳುವುದೂ ಕಷ್ಟ. ಈ ಲೇಖನದ ಉದ್ದೇಶ ನಮಗೇ ನಾವೇ ಹೇಳುತ್ತಿರುವ ಸುಳ್ಳುಗಳನ್ನು ಹುಡುಕುವ ಪ್ರಯತ್ನವಷ್ಟೇ. ಮನುಷ್ಯರು ರಾಜಕೀಯ ಪ್ರಾಣಿಗಳು ಎಂದು ಒಬ್ಬರು ಹೇಳಿದ್ದರು. ಅದನ್ನು ನಾವು ಮರೆಯುವಂತಿಲ್ಲ. ರಾಜಕೀಯ ಪ್ರಾಣಿಗಳು ಎಂದಾಕ್ಷಣ ನಮ್ಮೆಲ್ಲರ ಮೇಲೂ ಜವಾಬ್ದಾರಿಗಳಿರುತ್ತವೆ, ನಮ್ಮೆಲ್ಲರಿಗೂ ಮಾಡಬೇಕಾಗ ಕರ್ತವ್ಯಗಳಿರುತ್ತವೆ. ಹೌದು, ಕೆಲವೊಮ್ಮೆ, ಕೆಲವೊಮ್ಮೆ ಏಕೆ ಹೆಚ್ಚಿನ ಬಾರಿ ನಮಗೇನೂ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆ ಸಾಧ್ಯವಾಗದಿದ್ದಾಗ, ಸುಳ್ಳು ಕಾರಣಗಳನ್ನು ಹುಡುಕುತ್ತಿದ್ದೀವಾ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು ಎಂಬುದಷ್ಟೇ ಈ ಲೇಖನದ ಉದ್ದೇಶ. ನಾವು ಇಂತಹ ಪರಿಸ್ಥಿತಿಗಳಲ್ಲಿ ನಿಜಕ್ಕೂ ಸುಳ್ಳು ಕಾರಣಗಳನ್ನು ಹುಡುಕುತ್ತಿದ್ದೇವೆಯಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. ಈ ಪ್ರಶ್ನೆಗೆ ಇನ್ನೊಂದು ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸುವೆ.
ಒಂದು ಕಂಪನಿ ಇದೆ ಅದಕ್ಕೆ ನಾವು ಕನ್ಸಲ್ಟಂಟ್ ಆಗಿದ್ದೇವೆ ಎಂದುಕೊಳ್ಳಿ. ಆ ಕಂಪನಿಯಲ್ಲಿರುವ ಸಮಸ್ಯೆಗಳೇನು, ಆ ಸಮಸ್ಯೆಗಳನ್ನು ಬಗೆಹರಿಸಲು ಪರಿಹಾರಗಳೇನು ಎಂಬುದನ್ನೆಲ್ಲ ಅಧ್ಯಯನ ಮಾಡಿ ಹೇಳಿದ್ದೇವೆ ಎಂದಿಟ್ಟುಕೊಳ್ಳಿ. ನಮ್ಮ ಆ ಎಲ್ಲ ಶ್ರಮದ ಹೊರತಾಗಿಯೂ ಕಂಪನಿಯು ಒಂದು ವೇಳೆ ನಷ್ಟ ಅನುಭವಿಸಿದಾಗ, ಅದರ ಜವಾಬ್ದಾರಿಯನ್ನು ನಾವು ಹೊತ್ತಿಕೊಳ್ಳಬೇಜಾಗುತ್ತದೆ, ಮುಂದಿನ ಹಣಕಾಸು ವರ್ಷದಲ್ಲಿ ಲಾಭವಾಗಬೇಕಾದರೆ ಏನೆಲ್ಲ ಮಾಡಬೇಕು ಎಂದು ಚಿಂತಿಸಬೇಕಾಗುತ್ತದೆ. ಅದನ್ನು ಬಿಟ್ಟು, ನಾನು ಹೇಳಿದ್ದೆ, ಈ ಕಂಪನಿಯಿಂದ ಲಾಭ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವ ಅವಕಾಶ ಅಲ್ಲಿರುವುದಿಲ್ಲ. ಇಲ್ಲವಾದರೆ ಕನ್ಸಲ್ಟಂಟ್ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ.
ಈ ಮೇಲೆ ಹೇಳಿದ ಈ ಎಲ್ಲ ‘ಡಿಫೆನ್ಸ್ ಮೆಕ್ಯಾನಿಸಂ’ ಗಳು ನಮ್ಮ ಕೆಲಸ ಉಳಿಸಿಕೊಳ್ಳಲು ಇತರರ ಮೇಲೆ ಗೂಬೆ ಕೂರಿಸುವ ತಂತ್ರಗಳಷ್ಟೇ. ನಾವೆಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಈ ತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ. ಈ ಲೇಖನ ಅಂಥದ್ದೇ ಡಿಫೆನ್ಸ್ ಮೆಕ್ಯಾನಿಸಂನ ಇನ್ನೊಂದು ದಾರಿ ಅಲ್ಲ ಎಂದು ಆಶಿಸುತ್ತಿದ್ದೇನೆ.
ಹೊಸ ಅಂಕಣಗಳನ್ನು ಓದಿರಿ ಕುದಿ ಕಡಲು | ಕನ್ನಡ ಅಸ್ಮಿತೆಯ ಪ್ರಶ್ನೆ
ವಚನಯಾನ | ಕಲ್ಲು ದೇವರ ಪೂಜಿಸುವ ಕತ್ತೆಗಳು
ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!

ರಾಜಶೇಖರ್ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.