ಹವಾಮಾನ ವೈಪರೀತ್ಯಕ್ಕೆ ಪರಮಾಣು ಶಕ್ತಿ ಪರಿಹಾರ ಎನ್ನುವುದು ನಮ್ಮ ಹಲವು ಪರಮಾಣು ಶಕ್ತಿ ಪ್ರತಿಪಾದಕರ ಅಭಿಪ್ರಾಯ. ಇದೀಗ ಕೃತಕ ಬುದ್ದಿಮತ್ತೆ (ಎಐ) ಡೆಟಾ ಕೇಂದ್ರಗಳಿಗೆ ಅಗತ್ಯವಾಗಿರುವ ಶಕ್ತಿ ಮೂಲವಾಗಿ ಪರಮಾಣು ಸ್ಥಾವರಗಳನ್ನು ಸ್ಥಾಪಿಸುವ ಸುದ್ದಿ ಕೇಳಿ ಬರುತ್ತಿದೆ. ಅಮೆರಿಕ ತನ್ನ ಖಾಸಗಿ ಸಂಸ್ಥೆಗಳಿಗೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತದಲ್ಲಿಅವಕಾಶ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಅಮೆರಿಕ ಕಂಪನಿಗಳಿಗೆ ಅನುಕೂಲವಾಗುವಂತೆ ಭಾರತ ತನ್ನ ನೀತಿಗಳನ್ನು ಸಡಲಿಕೆ ಮಾಡಬೇಕು ಎನ್ನುವುದು ಅಮೆರಿಕದ ಬೇಡಿಕೆ. ಈ ಹಿನ್ನಲೆಯಲ್ಲಿ ಹವಾಮಾನ ಬದಲಾವಣೆಗೆ ಪರಮಾಣು ಶಕ್ತಿ ಸ್ಥಾವರಗಳು ಪರಿಹಾರವೇ ಎನ್ನುವ ಚರ್ಚೆ ಇಲ್ಲಿದೆ.
ಚೆರ್ನೋಬಿಲ್ ದುರಂತ
ಜಗತ್ತು ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಒಂದು ಎಂದು ದಾಖಲಾಗಿರುವುದು ಚೆರ್ನೋಬಿಲ್ ಪರಮಾಣು/ನ್ಯೂಕ್ಲಿಯರ್ ವಿದ್ಯುತ್ ಸ್ಥಾವರದಲ್ಲಿ ನಡೆದ ದುರಂತ. ಈ ಘಟನೆ ಸಂಭವಿಸಿ ಹತ್ತಿರಹತ್ತಿರ ನಾಲ್ಕು ದಶಕಗಳೇ ಕಳೆದರೂ ಈ ದುರಂತ ಪರಮಾಣು ವಿದ್ಯುತ್ ಸ್ಥಾವರಗಳ ಕುರಿತಾದ ಜನರ ಆತಂಕವನ್ನು ಇನ್ನು ಹಸಿಯಾಗಿಯೇ ಇಟ್ಟಿದೆ. ಈ ಮೊದಲು ಸೋವಿಯತ್ ಯೂನಿಯನ್ ರಷ್ಯಾದ ಭಾಗವಾಗಿದ್ದ, ಪ್ರಸ್ತುತ ಉಕ್ರೇನ್‌ನಲ್ಲಿರುವ ಆದರೆ ರಷ್ಯಾದ ಅತಿಕ್ರಮಣಕ್ಕೆ ಒಳಗಾಗಿರುವ ಚರ್ನೋಬಿಲ್‌ನ ಪರಮಾಣು ವಿದ್ಯುತ್ ಸ್ಥಾವರದಲ್ಲಿ ರಿಯಾಕ್ಟರ್ ಉಪಕರಣಗಳ ಪರೀಕ್ಷೆ ನಡೆಸುತ್ತಿರುವಾಗ ಒಮ್ಮೆಲೆ ಪ್ರವಹಿಸಿದ ವಿದ್ಯುತ್, ಇಲ್ಲಿನ ಒಂದು ಘಟಕವನ್ನೇ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟಿತ್ತು. ಇಷ್ಟೇ ಅಲ್ಲದೆ ಈ ಅಪಘಾತ ಜೀವಕೋಶಗಳು ಮತ್ತು ಡಿಎನ್‌ಎ ಗಳಿಗೆ ಹಾನಿಮಾಡಬಲ್ಲ ಅತೀವ ಪ್ರಮಾಣದ, ವಿಕಿರಣಗಳನ್ನು ಹೊರಸೂಸುವ ರೇಡಿಯೋನ್ಯೂಕ್ಲೈಡ್(ರೇಡಿಯೋ ಆಕ್ಷೀವ್)ಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಿತು.
ಈ ಸ್ಫೋಟ ನಡೆದ ಕೆಲವು ವಾರಗಳ ನಂತರ, ರೇಡಿಯೋನ್ಯೂಕ್ಲೈಡ್‌ಗಳ ಸೋರಿಕೆಯನ್ನು ನಿಯಂತ್ರಿಸಲು ಇಲ್ಲಿನ ಹಾನಿಗೊಳಗಾದ ಘಟಕವನ್ನು ತಾತ್ಕಾಲಿಕ ಕಾಂಕ್ರೀಟ್ ರಚನೆಯಲ್ಲಿ ಸಂಪೂರ್ಣವಾಗಿ ಮುಚ್ಚಲಾಯಿತು. ಆದರೆ ಅಷ್ಟರಲ್ಲಿ ಈ ವಿಕಿರಣಗಳ ಮಾಲಿನ್ಯ ಸೋವಿಯತ್ ಒಕ್ಕೂಟದ ದೊಡ್ಡ ಭಾಗಗಳಲ್ಲಿ, ಅಂದರೆ ಈಗಿನ ಬೆಲಾರಸ್, ಉಕ್ರೇನ್ ಮತ್ತು ರಷ್ಯಾದ ಮೇಲೆ ಹರಡಿಯಾಗಿತ್ತು. ಅಧಿಕೃತ ವರದಿಗಳ ಪ್ರಕಾರ, ಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವತ್ತೊಂದು ಜನ ಸಿಬ್ಬಂದಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ನಂತರದಲ್ಲಿ ಇನ್ನು ಅನೇಕ ಸಾವುಗಳಿಗೆ ಈ ಘಟನೆ ಕಾರಣವಾಯಿತು ಮತ್ತು ಅನೇಕರು ಅಕ್ಯೂಟ್ ರೇಡಿಯೇಶನ್ ಸಿಕ್‌ನೆಸ್‌ಗೆ ಒಳಗಾದರು. ಅಗ್ನಿಶಾಮಕಗಳಲ್ಲಿ ಮತ್ತು ಇತರೆ ವಿಕೋಪ ನಿರ್ವಹಣಾ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದ್ದ 6,00,000 ಸಿಬ್ಬಂದಿಗಳು ಈ ವಿಕಿರಣಗಳನ್ನು ನೇರವಾಗಿ ಎದುರಿಸಬೇಕಾಯಿತು. ಸುಮಾರು 84,00,000 ಜನರನ್ನು ಈ ವಿಕಿರಣಗಳು ಆವರಿಸಿದವು. ಸುಮಾರು 52,000 ಚದರ ಕಿ.ಮೀ. ವಿಸ್ತೀರ್ಣದ ಕೃಷಿ ಪ್ರದೇಶಗಳು ಕಲುಷಿತಗೊಂಡಿತು. ಸುಮಾರು 4,04,000 ಜನರನ್ನು ಪುನರ್ವಸತಿಗೊಳಿಸಲಾಯಿತು. ಆದರೂ ಇನ್ನೂ ಲಕ್ಷಾಂತರ ಜನರು ನಿರಂತರವಾಗಿ ಆರೋಗ್ಯದ ಮೇಲೆ ವೈರುಧ್ಯ ಪರಿಣಾಮಗಳನ್ನು ಉಂಟುಮಾಡಬಲ್ಲ ಈ ಪರಿಸರದಲ್ಲಿಯೇ ವಾಸಿಸುತ್ತಿದ್ದಾರೆ.

ಈ ದುರಂತದ ದುಷ್ಪರಿಣಾಮಗಳು ಇಲ್ಲಿ ಇನ್ನೂ ಜೀವಂತವಾಗಿವೆ. ಥೈರಾಯ್ಡ್ ಕ್ಯಾನ್ಸರ್ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮಕ್ಕಳಲ್ಲೂ ಕಾಣಿಸಿಕೊಂಡಿದೆ. ವಿಕಿರಣಗಳ ದಾಳಿಗೆ ನೇರವಾಗಿ ಒಳಗಾದವರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಇಲ್ಲಿನ ನಿವಾಸಿಗಳು ಮತ್ತು ವಿಪತ್ತಿನಿಂದ ಸ್ಥಳಾಂತರಗೊಂಡವರ ಮೇಲೆ ಈ ಘಟನೆ ಹಲವು ಮಾನಸಿಕ ಪರಿಣಾಮಗಳನ್ನು ಬೀರಿದೆ. ಇದು ಖಿನ್ನತೆ, ಮದ್ಯಪಾನ, ಅಲ್ಪಾವಧಿಯ ಜೀವಿತಾವಧಿಯ ಕಳವಳ ಮತ್ತು ಸಂಭಾವ್ಯ ಆರೋಗ್ಯ ಪರಿಣಾಮಗಳ ಬಗ್ಗೆ ಆತಂಕ ಇತ್ಯಾದಿಗಳನ್ನು ಒಳಗೊಂಡಿದೆ. ಹೀಗಿರುವಾಗ ರಷ್ಯಾ ಹಾಗು ಉಕ್ರೇನ್ ನಡುವಣ ಯುದ್ಧದಲ್ಲಿ ರಷ್ಯಾ ಈ ಸ್ಥಳದ ಮೇಲೆ ದಾಳಿ ಮಾಡಿದೆ ಎಂಬ ಸುದ್ದಿ ಕೆಲಕಾಲ ಎಲ್ಲರನ್ನೂ ನಡುಗಿಸಿ ಬಿಟ್ಟಿತ್ತು. ನಂತರದಲ್ಲಿ ರಷ್ಯಾ ಸೇನೆ ಸ್ಥಾವರಕ್ಕೆ ಯಾವುದೇ ರೀತಿಯ ಹಾನಿ ಉಂಟುಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ನಿಟ್ಟುಸಿರು ಬಿಡಲಾಯಿತು.
ಫುಕುಶಿಮಾ ಅಣು ವಿದ್ಯುತ್ ಸ್ಥಾವರದ ವಿಕಿರಣ ಸೋರಿಕೆ
ಚೆರ್ನೊಬಿಲ್ ನಂತರದಲ್ಲಿ ಘೋರ ದುರಂತಕ್ಕೆ ಒಳಗಾದ ಇನ್ನೊಂದು ಸ್ಥಾವರ ಜಪಾನ್‌ನ ಫುಕುಶಿಮಾ ಅಣು ವಿದ್ಯುತ್ ಸ್ಥಾವರ. ಯಾವುದೇ ವಿಕಿರಣಶೀಲ ಇಂಧನವು ಹೆಚ್ಚಿನ ಪ್ರಮಾಣದಲ್ಲಿ ವಿಕಿರಣಶೀಲ ವಿದಳನ (ಯಾವುದಾದರೂ ಒಂದು ಭಾರವಾದ ಪರಮಾಣು ನ್ಯೂಟ್ರಾನ್ ಕಣದ ಘಷ೯ಣೆಯಿಂದ ಎರಡು ಭಾಗಗಳಾಗಿ ಒಡೆದು ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವ ಕ್ರಿಯೆ) ಉತ್ಪನ್ನಗಳನ್ನು ಹೊಂದಿರುತ್ತದೆ. ಯುರೇನಿಯಂ ಅಥವಾ ಪ್ಲುಟೋನಿಯಂನ ಕಣಗಳು ಶಕ್ತಿಯನ್ನು ಉತ್ಪಾದಿಸಲು ವಿಭಜನೆಯಾದಾಗ ಈ ಅಂಶಗಳು ಉತ್ಪತ್ತಿಯಾಗುತ್ತವೆ.
ಹಾನಿಕಾರಕ ವಿಕಿರಣದ ಮೂಲವಾಗಿರುವುದರ ಜೊತೆಗೆ, ಈ ವಿದಳನ ಉತ್ಪನ್ನಗಳು ಶಾಖವನ್ನು ಸಹ ಉತ್ಪಾದಿಸುತ್ತದೆ. ಈ ಶಾಖವನ್ನು ತಕ್ಷಣವೇ ನಿವಾರಿಸದಿದ್ದರೆ, ಇಲ್ಲಿ ಶಕ್ತಿ ಉತ್ಪಾದನೆಗಾಗಿ ಬಳಸಲಾದ ಇಂಧನವೇ ಕರಗಿ ವಿಕಿರಣಶೀಲ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಅನಾಹುತಗಳಿಗೆ ಕಾರಣವಾಗುತ್ತದೆ.
ಜಪಾನ್‌ನಲ್ಲಿ ಫುಕುಶಿಮಾ ಪರಮಾಣು ಸ್ಥಾವರ ಇದೇ ರೀತಿಯ ದುರ್ಘಟನೆಗೆ ಸಾಕ್ಷಿಯಾಯಿತು. ಜಪಾನ್‌ನಲ್ಲಿ 2011ರಲ್ಲಿ ಮೊದಲಿಗೆ ಸಂಭವಿಸಿದ ಭೂಕಂಪವು ಬಾಹ್ಯ ವಿದ್ಯುತ್ ಸರಬರಾಜುಗಳನ್ನು ಕಡಿತಗೊಳಿಸಿತು. ಆ ಭೂಕಂಪದ ನಂತರ ರಿಯಾಕ್ಟರ್‌ಗಳನ್ನು ತ್ವರಿತವಾಗಿ ಸ್ಥಗಿತಗೊಳಿಸಲಾಗಿದ್ದರೂ, ಅವು ಇನ್ನೂ ಬಿಸಿಯಾಗಿಯೇ ಇದ್ದವು. ಭೂಕಂಪದ ಬೆನ್ನಲ್ಲೇ ಬಂದಪ್ಪಳಿಸಿದ ಸುನಾಮಿ ಸ್ಥಾವರದಲ್ಲಿದ್ದ ರಿಯಾಕ್ಟರ್‌ಗಳನ್ನು ತಂಪಾಗಿಸುವ ತುರ್ತು ಜನರೇಟರುಗಳ ವ್ಯವಸ್ಥೆಯನ್ನು ನಾಶಮಾಡಿತು. ಬೇರೆ ಪರ್ಯಾಯ ವ್ಯವಸ್ಥೆ ಆಲೋಚನೆ ಮಾಡುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ರಿಯಾಕ್ಟರ್‌ಗಳಲಿದ್ದ ನ್ಯೂಕ್ಲಿಯರ್ ಇಂಧನ ಶಾಖ ಹೆಚ್ಚಾಗಿ ಕರಗಲಾರಂಭಿಸಿತ್ತು (ನ್ಯೂಕ್ಲಿಯರ್ ಮೆಲ್ಟ್‌ಡೌನ್). ಸ್ಥಾವರವು ಅದಾಗಲೇ ಅನೇಕ ರಾಸಾಯನಿಕ ಸ್ಪೋಟಕ್ಕೆ ತುತ್ತಾಗಿ ಶಿಥಿಲಗೊಂಡದ್ದರಿಂದ ಇದು ವಿಕಿರಣಗಳ ಸೋರಿಕೆಗೆ ಕಾರಣವಾಯಿತು. ಹೀಗೆ ಸೋರಿಕೆಯಾದ ವಿಕಿರಣಗಳು ಸ್ಥಾವರದ ಹೊರಗಿನ ವಾತಾವರಣಕ್ಕೂ ಮತ್ತು ಪೆಸಿಫಿಕ್ ಸಾಗರಕ್ಕೂ ಹರಡಲು ಆರಂಭಿಸಿತು.

ಹೀಗಾಗಿ ಸುಮಾರು 1,50,000 ಜನರನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕಾಯಿತು. ಈ ದುರ್ಘಟನೆಯಲ್ಲಿ ಮಡಿದವರ, ಗಾಯಗೊಂಡವರ ಸಂಖ್ಯೆಗಳನ್ನು ಇಂದಿಗೂ ನಿಖರವಾಗಿ ನೀಡಲಾಗಿಲ್ಲ. ಈ ಘಟನೆ ನಡೆದು ದಶಕಗಳೇ ಸರಿದರೂ ಇಲ್ಲಿಂದ ಸ್ಥಳಾಂತರಿಸಲಾದ ಜನರನ್ನು ಈ ಸ್ಥಳಕ್ಕೆ ಮತ್ತೆ ವಾಪಾಸ್ ಕರೆ ತರಲಾಗುತ್ತಿಲ್ಲ. ಕೆಲವರು ಇಲ್ಲಿಗೆ ಪುನಃ ಬರಲು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದಾರೆ. ಈ ಸ್ಥಳವನ್ನು ಸೋರಿಕೆಯಾದ ವಿಕಿರಣಗಳಿಂದ ಮುಕ್ತಗೊಳಿಸಿ ಪುನಃ ಮೊದಲಿನಂತೆಯೇ ಮಾಡಬೇಕಾದರೆ ಇನ್ನೂ ಸುಮಾರು 40 ವರ್ಷಗಳು ಬೇಕಾಗಬಹುದು ಮತ್ತು ಸುಮಾರು ಹತ್ತು ಸಾವಿರ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅದೇ ರೀತಿ ಒಂದು ಮಿಲಿಯನ್ ಟನ್ ವಿಕಿರಣಪೂರಿತ ನೀರು ಇಲ್ಲಿದೆ ಅದು ಈಗಾಗಲೇ ಅಂತರ್ಜಲವನ್ನೂ ಕಲುಷಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.
ನ್ಯೂಕ್ಲಿಯರ್ ಈಸ್ ನಾಟ್ ದ ಸೊಲ್ಯೂಷನ್: ಡಾ. ಎಂ.ವಿ. ರಮಣ
ಹೀಗೆ ದಶಕಗಳೇ ಉರುಳಿ ಈ ವಿಕಿರಣಗಳ ಪ್ರಭಾವ ಅದೆಷ್ಟೋ ಕಿಲೋಮೀಟರ್‌ಗಟ್ಟಲೆ ದೂರಕ್ಕೆ ಹರಡಿದ್ದರೂ, ನೀರು, ಗಾಳಿ, ಮಣ್ಣು ಹೀಗೆ ಸಮಸ್ತ ವಾತಾವರಣವನ್ನು ಕಲುಷಿತಗೊಳಿಸಿ ಜನರ ಆರೋಗ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದ್ದರೂ, ಕೇಂದ್ರ ಸರ್ಕಾರ ಇನ್ನೂ ಈ ಉಷ್ಣ ವಿದ್ಯುತ್ ಸ್ಥಾವರಗಳನ್ನು ಹೊಸದಾಗಿ ಸ್ಥಾಪಿಸುವ, ಪ್ರಸ್ತುತ ಈ ಸ್ಥಾವರಗಳ ಮೂಲಕ ಉತ್ಪಾದಿಸಲಾಗುತ್ತಿರುವ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಸ್ತಾವನೆಗಳನ್ನು ಮುಂದಿಡುತ್ತಿದೆ. ಇದೆಲ್ಲಕ್ಕಿಂತ ದೊಡ್ಡ ದುರಂತವೆಂದರೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಉಷ್ಣ ವಿದ್ಯುತ್ ಸ್ಥಾವರಗಳನ್ನು ಪರಿಹಾರ ಎಂಬಂತೆ ಬಿಂಬಿಸುತ್ತಿರುವುದು.
ಇಂಧನ ಕಂಪನಿಗಳಿಂದ ಮೊದಲುಗೊಂಡು, ಸರ್ಕಾರಗಳು, ಬಿಲ್‌ಗೇಟ್ಸ್‌ನಂತಹ ತಂತ್ರಜ್ಞಾನ ವಲಯದ ಬಿಲಿಯನೇರ್‌ಗಳು ಮತ್ತು ಪರಮಾಣು ಶಕ್ತಿಯ ಪ್ರತಿಪಾದಕರುಗಳವರೆಗೆ – ಎಲ್ಲರು ಹವಾಮಾನ ಬದಲಾವಣೆಗೆ ಪರಿಹಾರವಾಗಿ, ಶುದ್ಧ ವಿದ್ಯುತ್ ಮೂಲ ಎಂಬುದಾಗಿ ಈ ಪರಮಾಣು ತಂತ್ರಜ್ಞಾನವನ್ನು ಪ್ರಚುರಪಡಿಸುತ್ತಿದ್ದಾರೆ.
ಕೆನಡಾದ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಕೊಲಂಬಿಯಾದ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಮತ್ತು ಗ್ಲೋಬಲ್ ಅಫೇರ್ಸ್‌ನ (ಸಾರ್ವಜನಿಕ ನೀತಿ ಮತ್ತು ಜಾಗತಿಕ ವ್ಯವಹಾರಗಳ )ವಿಭಾಗದ ಡಾ. ಎಂ.ವಿ. ರಮಣ ಅವರು ತಮ್ಮಪುಸ್ತಕ ʻಪರಮಾಣು ಪರಿಹಾರವಲ್ಲ: ಹವಾಮಾನ ಬದಲಾವಣೆಯ ಯುಗದಲ್ಲಿ ಪರಮಾಣು ಶಕ್ತಿಯ ಬಳಕೆ ಮೂರ್ಖತನದ ಪರಮಾವಧಿʼ (ನ್ಯೂಕ್ಲಿಯರ್ ಈಸ್ ನಾಟ್ ದ ಸೊಲ್ಯುಶನ್: ದ ಫಾಲಿ ಆಫ್ ಅಟಾಮಿಕ್ ಪವರ್ ಇನ್ ದ ಏಜ್ ಆಫ್ ಕ್ಲೈಮೇಟ್ ಚೇಂಜ್) ಪುಸ್ತಕದಲ್ಲಿಈ ಕುರಿತು ಹೇಳುತ್ತಾರೆ.
ಪರಮಾಣು ತಂತ್ರಜ್ಞಾನವನ್ನು ಇದು ಹೊರಹೊಮ್ಮಿಸುವ ಇಂಗಾಲದ ಪ್ರಮಾಣ ಕಡಿಮೆ ಹೀಗಾಗಿ ಇದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸಹಕಾರಿ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಈ ಪುಸ್ತಕದಲ್ಲಿ ಡಾ ರಮಣ ಈ ಯೋಜನೆಗೆ ತಗಲುವ ವೆಚ್ಚ ಮತ್ತು ಸ್ಥಾವರವನ್ನು ಸ್ಥಾಪಿಸಲು ಬೇಕಾಗುವ ಸಮಯ ಈ ಎರಡು ಅಂಶಗಳನ್ನು ಚರ್ಚಿಸುತ್ತ ಈ ವಾದವನ್ನು ಅಲ್ಲಗಳೆಯುತ್ತಾರೆ.
ಪರಮಾಣು ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಅತ್ಯಂತ ದುಬಾರಿ ಎಂದು ಡಾ ರಮಣ ಹೇಳುತ್ತಾರೆ. ಪರಮಾಣು ಸ್ಥಾವರವನ್ನು ನಿರ್ಮಿಸಲು ತೆಗೆದುಕೊಳ್ಳುವ ಸಮಯದ ಕುರಿತಾಗಿ ಚರ್ಚಿಸುತ್ತ ಡಾ ರಮಣ ಇವುಗಳನ್ನು ಸ್ಥಾಪಿಸಲು ದಶಕಗಳೇ ಬೇಕಾಗುತ್ತದೆ ಎನ್ನುತ್ತಾರೆ. ಪರಿಸರಕ್ಕೆ ಸಂಬಂಧಿಸಿದ ಅನುಮತಿಗಳು, ಸಾರ್ವಜನಿಕರ ಒಪ್ಪಿಗೆ ಮತ್ತು ಅಗತ್ಯವಿರುವ ಬೃಹತ್ ಪ್ರಮಾಣದ ಹೂಡಿಕೆ, ಈ ಎಲ್ಲವನ್ನು ತಯಾರಿ ಮಾಡಿಕೊಳ್ಳಲು ತಗಲುವ ಸಮಯ ಎಲ್ಲವನ್ನು ಲೆಕ್ಕಹಾಕಿದರೆ, ಹೊಸದಾಗಿ ಸ್ಥಾವರ ಸ್ಥಾಪಿಸಿ ಪರಮಾಣು ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲು ಸುಮಾರು 15 ರಿಂದ 20 ವರ್ಷಗಳೇ ಬೇಕಾಗುತ್ತದೆ. ಹೀಗಾಗಿ ಇದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಭಾಯಿಸಲು ಅಗತ್ಯವಿರುವ ತುರ್ತು ಕಾರ್ಯಾಚರಣೆಗೆ ಯಾವ ರೀತಿಯಿಂದಲೂ ಸಹಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರಮಾಣು ಶಕ್ತಿ ಪ್ರತಿಪಾದಕರು ಮಂಡಿಸಿರುವ ವಾದಸರಣಿಯಲ್ಲಿ ಚರ್ಚಿಸಲಾದ ವಿಷಯಗಳಲ್ಲಿ ಪರಮಾಣು ಶಕ್ತಿ ವಿಫಲಗೊಳ್ಳುತ್ತದೆ ಎಂದು ಡಾ ರಮಣ ಅಭಿಪ್ರಾಯಪಡುತ್ತಾರೆ.

ಪರಮಾಣು ಶಕ್ತಿಯನ್ನು ಹವಾಮಾನ ಬದಲಾವಣೆಗೆ ಪರಿಹಾರ ಎಂದು ಬಿಂಬಿಸುವ ಅತ್ಯುತ್ಸಾಹದಲ್ಲಿ ಇದರ ಪ್ರತಿಪಾದಕರು ಇದಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ರಮಣ ಆತಂಕ ವ್ಯಕ್ತಪಡಿಸುತ್ತಾರೆ. ಈ ಸ್ಥಾವರಗಳಿಂದ ಉಂಟಾಗಬಲ್ಲ ಅಪಾಯಗಳನ್ನು ಡಾ ರಮಣ್ ಹೀಗೆ ಪಟ್ಟಿ ಮಾಡುತ್ತಾರೆ.
ಮೊದಲನೆಯದಾಗಿ, ಪರಮಾಣು ರಿಯಾಕ್ಟರ್‌ಗಳು ಸ್ವಭಾವತಃ ವಿಕಿರಣಶೀಲ ಅಂಶಗಳನ್ನು ಬಿಡುಗಡೆ ಮಾಡುತ್ತವೆ. ಫುಕುಶಿಮಾ ಮತ್ತು ಚೆರ್ನೋಬಿಲ್ ದುರಂತದಲ್ಲಿ ಈ ವಿಕಿರಣಗಳ ಸೋರಿಕೆಯಾದಾಗ ಅದು ಉಂಟುಮಾಡುವ ಅಪಾಯದ ತೀವ್ರತೆ ಎಷ್ಟಿತ್ತು ಎಂಬುದನ್ನು ನಾವು ಈಗಾಗಲೇ ಅರಿತಿದ್ದೇವೆ. ಇದೇ ರೀತಿಯ ತೀವ್ರ ಅಪಘಾತಗಳು ಮತ್ತೆ ಭವಿಷ್ಯದಲ್ಲಿ ಸಂಭವಿಸುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ.
ಎರಡನೆಯದಾಗಿ, ಈ ಪರಮಾಣು ಸ್ಥಾವರಗಳಿಗೆ ಅಗತ್ಯವಿರುವ ಯುರೇನಿಯಂ ಗಣಿಗಾರಿಕೆಯಿಂದ ಹಿಡಿದು, ಈ ಸ್ಥಾವರಗಳು ಉತ್ಪಾದಿಸುವ ವಿಕಿರಣಶೀಲ ತ್ಯಾಜ್ಯಗಳನ್ನು ನಿರ್ವಹಿಸುವವರೆಗೆ ಪರಮಾಣು ಇಂಧನ ಉತ್ಪಾದನಾ ಸರಪಳಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸಾರ್ವಜನಿಕರು ಮತ್ತು ಪರಿಸರದ ಮೇಲೆ ಗಮನಾರ್ಹವಾದ ಪರಿಣಾಮಗಳನ್ನು ಬೀರುತ್ತವೆ. ಈಗಾಗಲೇ ಕೆಲವು ವಿಕಿರಣಶೀಲ ವಸ್ತುಗಳು ಇನ್ನೂ ವಾತಾವರಣದಲ್ಲಿ ಅಪಾಯಕಾರಿಯಾಗಿಯೇ ಉಳಿದಿವೆ. ಈ ತ್ಯಾಜ್ಯಗಳನ್ನು ನಿರ್ವಹಿಸಲು ಯಾವುದೇ ಸೂಕ್ತ ಪರಿಹಾರವನ್ನು ಈವರೆಗೂ ಸೂಚಿಸಲಾಗಿಲ್ಲ.
ಮೂರನೆಯದಾಗಿ, ಪರಮಾಣು ಶಕ್ತಿಯನ್ನು ಉತ್ಪಾದಿಸುವ ತಂತ್ರಜ್ಞಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ತಂತ್ರಜ್ಞಾನಕ್ಕೆ ನಿಕಟ ಸಂಬಂಧ ಹೊಂದಿದೆ. ಪರಮಾಣು ಶಕ್ತಿಯನ್ನು ವಿಸ್ತರಿಸುವುದರಿಂದ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಅಂತಿಮವಾಗಿ ಡಾ ರಮಣ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಕೇವಲ ತಂತ್ರಜ್ಞಾನ ಮಾತ್ರವಲ್ಲ ಅದಕ್ಕೆ ಸೂಕ್ತ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬದಲಾವಣೆಗಳ ಅಗತ್ಯವೂ ಇದೆ ಎನ್ನುತ್ತಾರೆ.
ಇದನ್ನೂ ಓದಿ ಭೂಮ್ತಾಯಿ | ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಹವಾಮಾನ ಬದಲಾವಣೆ ಮತ್ತು ಕಸ್ತೂರಿ ರಂಗನ್ ವರದಿ
ಒಂದು ಅಂದಾಜಿನ ಪ್ರಕಾರ ಭೂಗ್ರಹದಲ್ಲಿ ಸುಮಾರು 3,00,000 ಟನ್ ರೇಡಿಯೋ ಆಕ್ಟೀವ್ ತ್ಯಾಜ್ಯ ಇದೆ. ಆದರೆ ಅದನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಹೆಚ್ಚಿನ ದೇಶಗಳಲ್ಲಿ ಈ ವಿಕಿರಣ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕಾರ್ಯಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಉಳಿದಿರುತ್ತವೆ.
ಆದರೂ ಪರಮಾಣು ಉದ್ಯಮವು ಜಾಗತಿಕ ತಾಪಮಾನ ಏರಿಕೆಗೆ ತಾನು ಪರಿಹಾರ ಮಾರ್ಗೋಪಾಯದ ಭಾಗವಾಗಬಹುದು ಎಂದು ನಂಬಿಸಲು ಪ್ರಯತ್ನಿಸುತ್ತಿದೆ. ಪರಮಾಣು ಶಕ್ತಿ ಮಾತ್ರ ಕಡಿಮೆ ಇಂಗಾಲದ ಹೊರಸೂಸುವಿಕೆಯ ಮೂಲಕ ವಿದ್ಯುತ್ ಉತ್ಪಾದಿಸಬಲ್ಲುದು ಎಂದು ಹೇಳುತ್ತಿದೆ.
ಆದರೆ ವಾಸ್ತವಿಕವಾಗಿ ಈಗಾಗಲೇ ಚರ್ಚಿಸಿರುವಂತೆ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದು ಸುಲಭವಲ್ಲ. ಪರಮಾಣು ವಿದ್ಯುತ್ ಸ್ಥಾವರಗಳನ್ನು ದ್ವಿಗುಣಗೊಳಿಸಿದರೂ ಸಹ ಇದು ಜಾಗತಿಕ ಮಟ್ಟದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕೇವಲ ಶೇಕಡಾ 4 ರಷ್ಟು ಮಾತ್ರ ತಗ್ಗಿಸಬಹುದು. ಆದರೆ ಈ ಕಾರ್ಯಾಚರಣೆಗೆ ತಗಲುವ ವೆಚ್ಚ ಮಾತ್ರ ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಇಲ್ಲಿ ಉತ್ಪಾದಿಸಲಾದ ವಿದ್ಯುತ್‌ಗೆ ಬೆಲೆಯೂ ಜಾಸ್ತಿ.
ಈಗಾಗಲೇ ನಡೆದಿರುವ ವಿಕಿರಣ ಸೋರಿಕೆ ಘಟನೆಗಳು ಜನರ ಆರೋಗ್ಯದ ಮೇಲೆ, ಜೀವಗೋಳ, ಭೂಗೋಳ, ವಾಯುಗೋಳದ ಮೇಲೆ ಯಾವ ರೀತಿ ಪರಿಣಾಮ ಬೀರಿವೆ ಎಂಬುದರ ಕುರಿತು ಇನ್ನೂ ಸಾಕಷ್ಟು ಅಧ್ಯಯನಗಳನ್ನು ಕೈಗೊಳ್ಳಬೇಕಿದೆ. ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಮಿತಗೊಳಿಸಬೇಕೆಂಬ ಷರತ್ತು ಪರಮಾಣು ಶಕ್ತಿಯ ಪುನರುಜ್ಜೀವನಕ್ಕೆ ಕಾರಣವಾಗಬಾರದು. ಹೀಗಾಗಿ ಪರಮಾಣು ಶಕ್ತಿಯು ಹವಾಮಾನ ಬದಲಾವಣೆಗೆ ಪರಿಹಾರ ಎಂಬ ಈ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ