ಟಿಪ್ಪು ಸುಲ್ತಾನ್‍ರವರು 1757ರಲ್ಲಿ ಬಂಗಾಳದಿಂದ ಮೈಸೂರು ಸಂಸ್ಥಾನಕ್ಕೆ ರೇಷ್ಮೆ ಕೃಷಿಯನ್ನು ಪರಿಚಯಿಸಿದರು. ಬಂಗಾಳದಿಂದ ತಂದ ರೇಷ್ಮೆ ಮೊಟ್ಟೆ ಮತ್ತು ಹಿಪ್ಪುನೇರಳೆ ಸೊಪ್ಪಿನ ಬೆಳೆಯನ್ನು ಬಳಸಿ ಮೊಟ್ಟಮೊದಲಿಗೆ ಕೊಳ್ಳೇಗಾಲ ಬಳಿಯ ಮಾಂಬಳ್ಳಿಯಲ್ಲಿ ರೇಷ್ಮೆ ಕೃಷಿಯನ್ನು ಮಾಡಲಾಯಿತು.
ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಕಾಲದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ರೇಷ್ಮೆ ಸಮ್ಮೇಳನದ ಆಯೋಜನೆ, ರೇಷ್ಮೆ ಇಲಾಖೆಯ ರಚನೆ, ಟಾಟಾ ಸಿಲ್ಕ್ ಫಾರ್ಮ್‍ನಲ್ಲಿ ತರಬೇತಿ, ರೇಷ್ಮೆ ಕೃಷಿಗೆ ಸಾಲ ಸೌಲಭ್ಯ, ರೇಷ್ಮೆ ಸಂಶೋಧನೆಗೆ ಒತ್ತು ಮುಂತಾದ ಕ್ರಮಗಳಿಂದಾಗಿ ಇಂದು ಮೈಸೂರ್ ಸಿಲ್ಕ್ ಸೀರೆಗಳು ಮತ್ತು ಉಡುಪುಗಳು ವಿಶ್ವ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯನ್ನು ಪಡೆದಿವೆ.
ಭಾರತದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿ ಮತ್ತು ರೇಷ್ಮೆ ವಹಿವಾಟು ಕುರಿತು 1871ರಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಭಾರತದ ಕೃಷಿ ಮತ್ತು ತೋಟಗಾರಿಕೆ ಸೊಸೈಟಿಯ ಸದಸ್ಯರಾದ ಕ್ಯಾಪ್ಟನ್ ಥಾಮಸ್ ಹಟ್ಟನ್‍ರವರು ಭಾರತ ಮತ್ತು ಏಷ್ಯದ ರೇಷ್ಮೆ ಕೃಷಿಯ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿದರು. ರೇಷ್ಮೆ ಕೃಷಿಯಲ್ಲಿ ಪ್ರಗತಿ ಸಾಧಿಸಲು ಇಲ್ಲಿಯವರೆಗಿನ ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ ಎಂದರವರು.
ಕ್ಯಾಪ್ಟನ್ ಹಟ್ಟನ್‍ರವರು ಸಂಗ್ರಹಿಸಿರುವ ‘ನೋಟ್ಸ್ ಆನ್ ದಿ ಇಂಡಿಯನ್ ಬಾಂಬಿಸಿಡೇ’ (Notes on the Indian Bombycidae) ಕುರಿತ ಮಾಹಿತಿಯನ್ನು ಗೆಜೆಟ್ ಆಫ್ ಇಂಡಿಯಾದಲ್ಲಿ ಜುಲೈ 26, 1871ರಂದು ಪ್ರಕಟಿಸಲಾಗಿದೆ. ಅದರಂತೆ ಭಾರತದ ಹಲವು ಪ್ರದೇಶಗಳು ಮತ್ತು ವಿಶ್ವದ ವಿವಿದೆಡೆ ಒಟ್ಟು 46 ರೇಷ್ಮೆ ಹುಳುಗಳ ತಳಿಗಳಿರುವುದನ್ನು ಪಟ್ಟಿ ಮಾಡಿ ವಿವರಿಸಲಾಗಿದೆ. ‘ಇಂಡಿಯನ್ ಬಾಂಬಿಸಿಡೇ’ ಕುರಿತು ‘ಮಾನೋಗ್ರಾಫಿಕ್ ಸ್ಕೆಚ್’ (Monographic sketch) ಅನ್ನು ಸಲ್ಲಿಸಿದ್ದಕ್ಕಾಗಿ ಭಾರತ ಸರ್ಕಾರವು ಹಟ್ಟನ್‍ರವರಿಗೆ ವಂದನೆಗಳನ್ನು ಸಲ್ಲಿಸಿತು.
ಕ್ಯಾಪ್ಟನ್ ಹಟ್ಟನ್‍ರವರ ‘ಇಂಡಿಯನ್ ಬಾಂಬಿಸಿಡೇ’ ಮಾಹಿತಿಯ ಪ್ರಕಟಣೆಯನ್ನು ಹೊಂದಿರುವ ಗೆಜೆಟ್ ಆಫ್ ಇಂಡಿಯಾದ ಪ್ರತಿಗಳನ್ನು ಭಾರತ ಸರ್ಕಾರದ ಕಾರ್ಯದರ್ಶಿಯವರ ಆದೇಶದಂತೆ ಸ್ಥಳೀಯ ಸರ್ಕಾರಗಳು (ಮದ್ರಾಸ್, ಬಾಂಬೆ, ಬೆಂಗಾಲ್, ನಾರ್ಥ್ ವೆಸ್ಟರ್ನ್ ಪ್ರಾಂತ್ಯ, ಪಂಜಾಬ್), ಮುಖ್ಯ ಆಯುಕ್ತರು (ಔಧ್, ಕೇಂದ್ರಿಯ ಸಂಸ್ಥಾನಗಳು, ಬ್ರಿಟಿಷ್ ಬರ್ಮಾ, ಮೈಸೂರು ಮತ್ತು ಕೂರ್ಗ್), ಚೇಂಬರ್ ಆಫ್ ಕಾಮರ್ಸ್ (ಮದ್ರಾಸ್, ಬಾಂಬೆ, ಬೆಂಗಾಲ್), ಕೃಷಿ ಮತ್ತು ತೋಟಗಾರಿಕೆ ಸೊಸೈಟಿ (ಮದ್ರಾಸ್, ಬಾಂಬೆ, ಬೆಂಗಾಲ್ ಪಂಜಾಬ್ ಮತ್ತು ಔಧ್), ಹೈದರಾಬಾದ್ ರೆಸಿಡೆಂಟ್ ಹಾಗೂ ಕ್ಯಾಪ್ಟನ್ ಹಟ್ಟನ್‍ರವರಿಗೆ 1871ರಲ್ಲಿ ಕಳುಹಿಸಲಾಯಿತು. ರೇಷ್ಮೆ ಕೃಷಿಯ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಭಾರತ ಸರ್ಕಾರ, ಸ್ಥಳೀಯ ಸರ್ಕಾರಗಳು, ಸರ್ಕಾರದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸಂಗ್ರಹಿಸುವುದು ಈ ಸಂವಹನದ ಉದ್ದೇಶವಾಗಿತ್ತು.
ಇದರಿಂದ ಮನವರಿಕೆಯಾಗುವುದೇನೆಂದರೆ, ರೇಷ್ಮೆ ಕೃಷಿ ಮತ್ತು ರೇಷ್ಮೆ ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು 1871ರಲ್ಲಿ ರಾಷ್ಟ್ರ ಮಟ್ಟದಲ್ಲಿ ಬಹುಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಲಾಲ್‍ಬಾಗಿನಲ್ಲಿದ್ದ ಹಿಪ್ಪುನೇರಳೆ ಪೊದೆಗಳು
ಟಿಪ್ಪು ಸುಲ್ತಾನ್‍ರವರು 1757ರಲ್ಲಿ ಬಂಗಾಳದಿಂದ ಮೈಸೂರು ಸಂಸ್ಥಾನಕ್ಕೆ ರೇಷ್ಮೆ ಕೃಷಿಯನ್ನು ಪರಿಚಯಿಸಿದರು. ಬಂಗಾಳದಿಂದ ತಂದ ರೇಷ್ಮೆ ಮೊಟ್ಟೆ ಮತ್ತು ಹಿಪ್ಪುನೇರಳೆ ಸೊಪ್ಪಿನ ಬೆಳೆಯನ್ನು ಬಳಸಿ ಮೊಟ್ಟಮೊದಲಿಗೆ ಕೊಳ್ಳೇಗಾಲ ಬಳಿಯ ಮಾಂಬಳ್ಳಿಯಲ್ಲಿ ರೇಷ್ಮೆ ಕೃಷಿಯನ್ನು ಮಾಡಲಾಯಿತು.
ಟಿಪ್ಪು ಸುಲ್ತಾನರ ಕಾಲದಲ್ಲಿ ಲಾಲ್‍ಬಾಗಿನ ವಿಸ್ತೀರ್ಣ 36 ಎಕರೆಗಳು ಮಾತ್ರ. ಕಾಲಕಾಲಕ್ಕೆ 1871ರ ನಂತರ ಲಾಲ್‍ಬಾಗನ್ನು ವಿಸ್ತರಿಸಲಾಯಿತು. ಅಂತಿಮವಾಗಿ ಅದರ ವಿಸ್ತೀರ್ಣವು 240 ಎಕರೆಗಳಾಗಿದೆ. ಹಾರ್ಮನ್ ಎಂಬ ಬ್ರಿಟಿಷ್ ಅಧಿಕಾರಿಯು 1875ರ ಸುಮಾರಿಗೆ ಹೊಸದಾಗಿ ವಿಸ್ತಾರಗೊಂಡ ಲಾಲ್‍ಬಾಗಿನ ಪ್ರದೇಶದಲ್ಲಿ ಕೃಷಿ ಪ್ರಯೋಗಗಳನ್ನು ಕೈಗೊಳ್ಳಲು ಅಧೀಕ್ಷಕರಾಗಿ ನೇಮಕಗೊಂಡರು. ಅದಾಗಲೇ ಇದ್ದ ಹಳೆಯ ಲಾಲ್‍ಬಾಗ್ ಕ್ಷೇತ್ರಕ್ಕೆ ಸೀಮಿತವಾಗಿ ಜಾನ್ ಕ್ಯಾಮೆರೂನ್ (John Cameron) ಎಂಬ ಅಧಿಕಾರಿಯು ಅಧೀಕ್ಷಕರಾಗಿದ್ದರು. ಆಗ ಕ್ಯಾಮೆರೂನ್‍ರವರು ಕೊಟ್ಟ ಸಲಹೆಯನ್ನು ಹಾರ್ಮನ್‍ರವರು ಸ್ವೀಕರಿಸಿದರು. ಕ್ಯಾಮೆರೂನ್‍ರವರ ಸಲಹೆಯಂತೆ ಹಳೆಯ ಲಾಲ್‍ಬಾಗ್ ಪ್ರದೇಶದಲ್ಲಿದ್ದ ಹಿಪ್ಪುನೇರಳೆ ಪೊದೆಗಳ ಜಾಗವನ್ನು ವಿಸ್ತರಿಸಿದ ಕೃಷಿ ಫಾರ್ಮಿಗೆ ಸೇರಿಸಿಕೊಳ್ಳಲಾಯಿತು. ಇದರಿಂದ, ತಿಳಿದುಬರುವುದೇನೆಂದರೆ ಲಾಲ್‍ಬಾಗ್ ವಿಸ್ತಾರಗೊಳ್ಳುವುದಕ್ಕಿಂತಲೂ ಮೊದಲೇ ಲಾಲ್‍ಬಾಗಿನಲ್ಲಿ ಹಿಪ್ಪುನೇರಳೆ ತೋಟವನ್ನು ಸೃಜಿಸಲಾಗಿತ್ತು ಎಂಬುದು. ಅದು ಟಿಪ್ಪುವಿನ ಕಾಲದಲ್ಲಾಗಿದ್ದಿರಬಹುದು.
ಬೆಂಗಳೂರಿನ ಟಾಟಾ ಸಿಲ್ಕ್ ಫಾರ್ಮ್
ಟಾಟಾ ಸಿಲ್ಕ್ ಫಾರ್ಮ್ ಅನ್ನು ಜೇಮ್‍ಶೇಟ್ಜಿ ಟಾಟಾ ಅವರಿಂದ 1898ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಟಿಪ್ಪು ಸುಲ್ತಾನ್ ಮರಣದ ನಂತರ ರೇಷ್ಮೆ ಕೃಷಿಯು ಕುಂಠಿತಗೊಂಡಿದ್ದರಿಂದ ಟಾಟಾ ಸಿಲ್ಕ್ ಫಾರ್ಮ್ ಅನ್ನು 3.25 ಎಕರೆಯಲ್ಲಿ ಇಡೀ ಭರತಖಂಡದ ಎಲ್ಲಾ ಸಂಸ್ಥಾನಗಳ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಅಲ್ಲಿ ಜಪಾನಿನ ಒಡ್ಜು (ಔಜzu) ದಂಪತಿಗಳು ರೇಷ್ಮೆ ಕೃಷಿಯ ತಜ್ಞರಾಗಿ ಕಾರ್ಯನಿರ್ವಹಿಸಿದರು. 1903ರಲ್ಲಿ ನಡೆದಿರುವ ಪತ್ರ ವ್ಯವಹಾರದಂತೆ, ಟಾಟಾ ಸಿಲ್ಕ್ ಫಾರ್ಮಿನಲ್ಲಿ ಮೈಸೂರು ಸಂಸ್ಥಾನದ ಶಾಲೆಗಳ ಶಿಕ್ಷಕರಿಗೆ ವಿಶೇಷ ತರಬೇತಿ ಕೊಡಿಸಿ ಅವರನ್ನು ‘ಸಿರಿಕಲ್ಚರ್ ಇನ್ಸ್‍ಪೆಕ್ಟರ್’ ಹುದ್ದೆಗೆ ನೇಮಿಸಿಕೊಳ್ಳಲಾಗಿದೆ. ಬಂಗಾಳದಿಂದಲೂ ತರಬೇತಿಗೆಂದು ಅಭ್ಯರ್ಥಿಗಳನ್ನು 1903ರಲ್ಲಿ ನಿಯೋಜನೆ ಮಾಡಲಾಗಿದೆ.

ರೇಷ್ಮೆ ಹುಳುಗಳ ತಳಿಯ ಹೋಲಿಕೆ
ಒಂದನೇ ದಿನದ ರೇಷ್ಮೆ ಹುಳುವಿನ ಮರಿಯಿಂದ ಗೂಡು ಕಟ್ಟುವ ಸಂದರ್ಭದವರೆಗೆ ತೆಗೆದುಕೊಳ್ಳುವ ಅವಧಿಯನ್ನು ಲೆಕ್ಕ ಹಾಕಲು ಹಲವು ರೇಷ್ಮೆ ಹುಳುಗಳ ತಳಿಗಳನ್ನು ಬಳಸಿ ಪ್ರಯೋಗಗಳನ್ನು 1914ರಲ್ಲಿ ಕೈಗೊಳ್ಳಲಾಗಿದೆ. ಮೈಸೂರು ತಳಿಯು 30 ದಿನಗಳಲ್ಲಿ ಗೂಡು ಕಟ್ಟಿದರೆ, ಇಟಲಿ ತಳಿಯು ಸುಮಾರು 23 ದಿನಕ್ಕೆ ಗೂಡು ಕಟ್ಟುತ್ತದೆ ಎಂದು ಕಂಡುಕೊಳ್ಳಲಾಗಿದೆ. ಮೈಸೂರು ತಳಿ ಮತ್ತು ಇಟಲಿ ತಳಿಗಳಿಂದ ಪಡೆದ ಮಿಶ್ರ ತಳಿಯು 23ರಿಂದ 25ದಿನಗಳಲ್ಲಿ ಗೂಡು ಕಟ್ಟುತ್ತದೆ. ಪೂಸಾ ಸಂಶೋಧನಾ ಕೇಂದ್ರದಿಂದ ಪಡೆದ ‘ಬಿಳತಿಸಾಲು’ ತಳಿಯು ಚನ್ನಪಟ್ಟಣದಲ್ಲಿ ನಡೆಸಿದ ಪ್ರಯೋಗದಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿಲ್ಲ.
ಚಿಕ್ಕಮಗಳೂರು ಮತ್ತು ಬಾಬಾಬುಡನ್ ಗಿರಿಯಲ್ಲಿ ತಣ್ಣನೆ ವಾತಾವರಣವಿರುವುದರಿಂದ ಮೈಸೂರು ಮತ್ತು ಬೆಂಗಾಲ್ ತಳಿಗಳ ಪ್ರಯೋಗವನ್ನು ನಡೆಸಲಾಯಿತು. ಆದರೆ ಅಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಾಗಲಿಲ್ಲ.
ರೇಷ್ಮೆ ಕೃಷಿ ಅಭಿವೃದ್ಧಿ ಕುರಿತು ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಚರ್ಚೆ
ರೇಷ್ಮೆ ಕೃಷಿಯ ಅಭಿವೃದ್ಧಿಗಾಗಿ ಪ್ರತ್ಯೇಕ ರೇಷ್ಮೆ ಇಲಾಖೆಯನ್ನು ಅಸ್ತಿತ್ವಕ್ಕೆ ತರಲು 1917ರಲ್ಲಿ ನಡೆದ ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ. ರೇಷ್ಮೆ ಕೃಷಿಯು ವಿಫಲವಾಗಲು ಇಲ್ಲಿಯವರೆಗೆ ತಪ್ಪು ಪದ್ದತಿಗಳನ್ನು ಅನುಸರಿಸಿದ್ದೇ ಕಾರಣ. ಆಧುನಿಕ ಪದ್ದತಿಗಳನ್ನು ಅನುಸರಿಸಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಬೇಕಿದೆ ಎಂಬ ನಿರ್ಧಾರವಾಯಿತು. ಕಾರ್ಯದರ್ಶಿಗಳು, ಶಿಕ್ಷಣ ಮತ್ತು ಕೃಷಿ ಇಲಾಖೆರವರು ಕೆಲವು ಸಲಹೆಗಳನ್ನು ನೀಡಿದರು. ಅವೆಂದರೆ, ಸೂಕ್ತ ಯಂತ್ರೋಪಕರಣಗಳನ್ನು ಬಳಸಿ ರೇಷ್ಮೆ ನೂಲು ತೆಗೆಯಬೇಕು. ರೇಷ್ಮೆ ನೂಲು ವೃಥಾ ಪೋಲಾಗುವುದನ್ನು ತಪ್ಪಿಸಬೇಕು. ವಿಶ್ವ ಮಾರುಕಟ್ಟೆಯಲ್ಲಿ ಭಾರತದ ರೇಷ್ಮೆಗೊಂದು ಸ್ಥಾನವನ್ನು ದೊರಕಿಸಿಕೊಳ್ಳಬೇಕು. ಸ್ಥಳೀಯವಾಗಿ ರೇಷ್ಮೆ ಬಟ್ಟೆ ತಯಾರಿಸಲು ಉತ್ತಮ ನೂಲನ್ನು ಬಳಸಬೇಕು. ಉತ್ತಮ ತಳಿಯ ರೇಷ್ಮೆ ಹುಳುವಿನ ಸಾಕಣೆಯನ್ನು ಮಾಡಬೇಕು.
ರೇಷ್ಮೆ ಹುಳು ಸಾಕಾಣಿಕೆಗೆ ಅಗತ್ಯವಿರುವ ಪರಿಕರಗಳನ್ನು ಸಿದ್ದಪಡಿಸುವ ವ್ಯವಸ್ಥೆಯಾಗಬೇಕು. ರೇಷ್ಮೆ ಹುಳು ಸಾಕಾಣಿಕೆಯ ಗೃಹಗಳನ್ನು ನಿರ್ಮಿಸಬೇಕು. ರೇಷ್ಮೆ ಕೃಷಿಯ ಅಂಕಿ ಅಂಶಗಳನ್ನು ಸಂಗ್ರಹಿಸಿ ರೇಷ್ಮೆ ಕೃಷಿಗಿರುವ ಭವಿಷ್ಯವನ್ನು ರೂಪಿಸಬೇಕು. ಸಾಂಪ್ರದಾಯಕ ಪದ್ದತಿ ಮತ್ತು ಆಧುನಿಕ ಪದ್ದತಿಯಲ್ಲಿ ರೇಷ್ಮೆ ಹುಳು ಸಾಕಣೆಯ ಹೋಲಿಕೆಯಿರುವ ಚಿತ್ರಗಳ ಒಂದು ಪುಸ್ತಿಕೆಯನ್ನು ಪ್ರಕಟಿಸಬೇಕು. ನೂಲು ತೆಗೆಯುವ ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಉತ್ತಮ ವೇತನ ನೀಡಬೇಕು ಎಂಬ ಹಲವು ಸಲಹೆಗಳನ್ನು ಶಿಕ್ಷಣ ಮತ್ತು ಕೃಷಿ ಇಲಾಖೆಯ ಕಾರ್ಯದರ್ಶಿಗಳು ಕೊಟ್ಟರು.
ಆದರೆ, ಅದೇ ಸಂದರ್ಭದಲ್ಲಿ ವಿಶ್ವದ ಮೊದಲನೇ ಮಹಾಯುದ್ಧ ನಡೆಯುತ್ತಿದ್ದುದರಿಂದ ರೇಷ್ಮೆ ನೂಲು ತೆಗೆಯುವ ಯಂತ್ರಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳುವುದಕ್ಕಾಗಲಿಲ್ಲ. ಅಲ್ಲಿ ಲಭ್ಯವಿರುವ ಕಬ್ಬಿಣದ ಖನಿಜ ಸಂಪತ್ತನ್ನು ಯುದ್ಧ ಸಾಮಗ್ರಿಗಳನ್ನು ತಯಾರಿಸಲು ಬಳಸಿ ಯುದ್ಧ ಗೆಲ್ಲುವುದು ಮೊದಲಾಧ್ಯತೆಯಾಗಿದ್ದುದರಿಂದ ರೇಷ್ಮೆ ನೂಲು ತೆಗೆಯುವ ಯಂತ್ರಗಳ ತಯಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಟ್ಟಾಗ್ಲಿಯ ಎಂಬ ಯಂತ್ರ ತಯಾರಕರು ತಮ್ಮ ಪತ್ರ ಮುಖೇನ ಮೈಸೂರು ಸರ್ಕಾರಕ್ಕೆ ತಿಳಿಸಿದರು.

ರೇಷ್ಮೆ ಗೂಡು ಮತ್ತು ನೂಲಿನ ಇಳುವರಿ
ಚನ್ನಪಟ್ಟಣ ಮತ್ತು ಚಿಕ್ಕಮಗಳೂರಿನಲ್ಲಿ ಸರ್ಕಾರಿ ರೇಷ್ಮೆ ಫಾರಂಗಳಿದ್ದವು. ಚನ್ನಪಟ್ಟಣದಲ್ಲಿ ಮೈಸೂರು, ಬೆಂಗಾಲ್, ಇಟಾಲಿಯನ್, ಚೀನಾ ಬಂಗಾರದ ಹಳದಿ, ಚೀನಾ ಬಿಳಿ, ಜಪಾನ್ ತಳಿಗಳನ್ನು ರೇಷ್ಮೆ ಗೂಡುಗಳ ಇಳುವರಿಯ ಪ್ರಯೋಗಕ್ಕೆ ಒಳಪಡಿಸಲಾಯಿತು. ಹಾಗೆಯೇ, ಚಿಕ್ಕಮಗಳೂರಿನಲ್ಲಿ ಮೈಸೂರು, ಬೆಂಗಾಲ್ ಹಾಗೂ ಇಟಲಿ ಮತ್ತು ಮೈಸೂರು ಮಿಶ್ರತಳಿಗಳನ್ನು 1914-15ರಲ್ಲಿ ಪ್ರಯೋಗಕ್ಕೆ ಒಡ್ಡಲಾಯಿತು. ಮೈಸೂರು ತಳಿಗೆ ಹೋಲಿಸಿದಲ್ಲಿ ಇಟಲಿ ತಳಿಯ ರೇಷ್ಮೆ ಗೂಡುಗಳಿಂದ ದುಪ್ಪಟ್ಟು ರೇಷ್ಮೆ ನೂಲನ್ನು ಪಡೆಯಲಾಯಿತು.
ಚಿಕ್ಕಮಗಳೂರು ಮತ್ತು ಬಾಬಾಬುಡನ್ ಗಿರಿಯಲ್ಲಿ ಸಾಕಿದ ರೇಷ್ಮೆ ಹುಳುಗಳಿಂದ ಉತ್ಪತ್ತಿಯಾದ ಗೂಡುಗಳಿಂದ ನೂಲಿನ ಇಳುವರಿ ತೃಪ್ತಿದಾಯಕವಾಗಿರಲಿಲ್ಲ. ಅಲ್ಲಿ ದಿಢೀರನೇ ಬದಲಾಗುವ ಹವಾಮಾನದಿಂದಾಗಿ ರೇಷ್ಮೆ ಸಾಕಣೆಯು ಲಾಭದಾಯಕವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
ನಂದಿ ಬೆಟ್ಟದಲ್ಲಿ ಒಂದು ಗ್ರೈನೇಜ್ ಸ್ಥಾಪಿಸಲು ಪರಿಶೀಲಿಸಲಾಗಿದೆ. ಹಿಪ್ಪುನೇರಳೆ ಸೊಪ್ಪನ್ನು ಮೈಸೂರು ರಾಜ್ಯದ ಎಲ್ಲ ಕಡೆಯೂ ಬೆಳೆಯಬಹುದು. ಆದರೆ, ಎಲ್ಲ ಕಡೆ ರೇಷ್ಮೆ ಹುಳುಗಳ ಸಾಕಣೆಯು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ.
ರೇಷ್ಮೆ ಕೃಷಿ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ
ಸಹಕಾರ ಸಂಘಗಳ ರಿಜಿಸ್ಟ್ರಾರ್ ಆಗಿದ್ದ ಕೆ. ಎಚ್. ರಾಮಯ್ಯನವರು 1928ರಲ್ಲಿ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಾದ ಎನ್. ರಾಮರಾವ್ ಅವರಿಗೆ ಒಂದು ಪತ್ರ ಬರೆದರು. ‘ಪ್ರತಿ ರೇಷ್ಮೆ ಕೃಷಿ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯವಾಗಿ ರೂ. 400 ಕೊಡಲಾಗಿದೆ. ಐದು ಸಂಘಗಳಿಗೆ ಮಾತ್ರ 1926-27ರಲ್ಲಿ ಸಾಲ ನೀಡಲಾಗಿತ್ತು. ಇತ್ತೀಚೆಗೆ 17 ಹೊಸ ರೇಷ್ಮೆ ಕೃಷಿ ಸಹಕಾರ ಸಂಘಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಏಳು ಸಂಘಗಳಿಗೆ ಪ್ರತಿ ಸಂಘಕ್ಕೆ ರೂ. 400ರಂತೆ ಒಟ್ಟು ರೂ. 2800 ಅನ್ನು ಇಲಾಖೆಯ ಅನುದಾನದಲ್ಲಿ ವಿತರಿಸಲಾಗಿದೆ. ಉಳಿದ 10 ಸಂಘಗಳಿಗೆ ಸಾಲ ನೀಡಬೇಕಿದೆ. ಸಾಧ್ಯವಾದರೆ ಸಾಲದ ಮೊತ್ತವನ್ನು ಏರಿಕೆ ಮಾಡಬೇಕು’ ಎಂದು ಕೋರಿದ್ದಾರೆ. ‘ಇದೇ ವಿಷಯವನ್ನು ಡಿಸೆಂಬರ್ 14, 1927ರಂದು ನಡೆದ ‘ಡೆವೆಲಪ್‍ಮೆಂಟ್ ಬೋರ್ಡ್’ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ, ಫೆಬ್ರವರಿ 22, 1928ರಂದು ಹೊರಡಿಸಿದ ಸರ್ಕಾರದ ಆದೇಶದಂತೆ ರೂ. 3000 ಒದಗಿಸಲಾಗಿದೆ. ಪ್ರತಿ ಸೊಸೈಟಿಗೆ ಸಾಲದ ರೂಪದಲ್ಲಿ ರೂ. 500 ಹಂಚಿಕೆಯಾಗಿದೆ’ ಎಂದು ವಿವರಿಸಿದರು.
ಕುಣಿಗಲ್‍ನಲ್ಲಿ ರೇಷ್ಮೆ ಕೃಷಿಯ ಪ್ರಯೋಗ
ಕುಣಿಗಲ್‍ನಲ್ಲಿ ರೇಷ್ಮೆ ಸಂಶೋಧನಾ ಕೇಂದ್ರವಿತ್ತು. ಅದು 1919ರಲ್ಲಿ ಶುರುವಾಗಿರಬಹುದಾದ ಸಾಧ್ಯತೆಗಳಿವೆ. 1931ರಲ್ಲಿ ಒಂದು ನಡಾವಳಿಯಾಗಿದೆ. ಅಲ್ಲಿ 12 ವರ್ಷಗಳ ಹಿಂದೆ ಸುಮಾರು ಮೂರೂವರೆ ಎಕರೆಗಳಲ್ಲಿ ನೆಟ್ಟಿರುವ ಹಿಪ್ಪುನೇರಳೆ ಸೊಪ್ಪಿನ ಫಸಲು ಸರಿಯಾಗಿ ಬರುತ್ತಿಲ್ಲವಾದ್ದರಿಂದ, ಅಲ್ಲೇ ಒಂದು ಫರ್ಲಾಂಗು ದೂರದಲ್ಲಿದ್ದ ಮುಲ್ಲಂಗಿ ತಿಪ್ಪಯ್ಯ ಶೆಟ್ಟರ ಎರಡೂವರೆ ಎಕರೆ ಜಮೀನನ್ನು ವಾರ್ಷಿಕ ರೂ. 75ರಂತೆ ಬಾಡಿಗೆಗೆ 20 ವರ್ಷಗಳಿಗೆ ಲೀಸ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿ ಬೆಳೆಯುವ ಹಿಪ್ಪುನೇರಳೆ ಸೊಪ್ಪಿನಿಂದ ಉತ್ತಮವಾದ ರೇಷ್ಮೆ ಗೂಡುಗಳನ್ನು ಪಡೆಯಲು ಸಾಧ್ಯವಿದೆ. ಅಂತಹ ಫಲವತ್ತಾದ ಭೂಮಿಯದು. ಆ ರೇಷ್ಮೆ ಗೂಡುಗಳಿಂದ ರೇಷ್ಮೆ ಮೊಟ್ಟೆ ಉತ್ಪಾದಿಸಬಹುದು. ರಾಜ್ಯದ ಹಲವು ಕಡೆ ಪೂರೈಸಬಹುದು ಎಂಬ ತೀರ್ಮಾನವನ್ನು 1931ರಲ್ಲಿ ಕೈಗೊಳ್ಳಲಾಗಿದೆ. ಕುಣಿಗಲ್‍ನಲ್ಲಿದ್ದ ರೇಷ್ಮೆ ಸಂಶೋಧನಾ ಕೇಂದ್ರವು ರಾಜ್ಯದ ಪ್ರಮುಖ ರೇಷ್ಮೆ ಚಟುವಟಿಕೆಗಳ ತಾಣವಾಗಿತ್ತು.

ಬೋರ್ಡ್ ಆಫ್ ಸಿರಿಕಲ್ಚರ್ ರಚನೆ
ಚನ್ನಪಟ್ಟಣದಲ್ಲಿ ನವೆಂಬರ್ 26, 1933ರಂದು ಮೈಸೂರಿನ ಮೂರನೇ ಪ್ರಾದೇಶಿಕ ರೇಷ್ಮೆ ಸಮ್ಮೇಳನ ನಡೆಯಿತು. ರೇಷ್ಮೆ ಕೃಷಿಯ ಹಲವು ಸಮಸ್ಯೆಗಳನ್ನು ಬಗೆಹರಿಸಲು ‘ಬೋರ್ಡ್ ಆಫ್ ಸಿರಿಕಲ್ಚರ್’ ರಚಿಸಲು ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು. ಅಕ್ಟೋಬರ್ 12, 1934ರಂದು ದಿವಾನರಾದ ಮಿರ್ಜಾ ಇಸ್ಮಾಯಿಲ್‍ರವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಅಪ್ಪಣೆಗಾಗಿ ಟಿಪ್ಪಣಿಯನ್ನು ಸಲ್ಲಿಸಿದರು. ಅದರಂತೆ, ‘ಬೋರ್ಡ್ ಆಫ್ ಸಿರಿಕಲ್ಚರ್’ ರಚಿಸಲು ಮಹಾರಾಜರು ಅಕ್ಟೋಬರ್ 16, 1934ರಂದು ರಾಜಾಜ್ಞೆ ಮಾಡಿದರು.
ಚನ್ನಪಟ್ಟಣದಲ್ಲಿ ನಡೆದ ಸಮ್ಮೇಳನದಲ್ಲಿ ‘ರೇಷ್ಮೆ ಕೈಗಾರಿಕೆಗೆ ಉತ್ತೇಜನ ನೀಡಬೇಕು. ದೇಶದ ಪ್ರಮುಖ ನಗರಗಳಲ್ಲಿ ಮೈಸೂರು ರೇಷ್ಮೆ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಬೇಕು’ ಎಂಬ ತೀರ್ಮಾನವಾಯಿತು.
ರೇಷ್ಮೆ ಕೃಷಿ ಸಂಶೋಧನೆಗೆ ಒತ್ತು ನೀಡಲು ಒತ್ತಾಯ
ಚನ್ನಪಟ್ಟಣದಲ್ಲಿ 1933ರಲ್ಲಿ ನಡೆದ ರೇಷ್ಮೆ ಸಮ್ಮೇಳನದಲ್ಲಿ ಸಿಮ್ಲಾದಲ್ಲಿದ್ದ ‘ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್’ನವರು ರೇಷ್ಮೆ ಕೃಷಿ ಸಂಶೋಧನೆಗೆ ಒತ್ತು ನೀಡಬೇಕೆಂಬ ಠರಾವನ್ನು ಕೈಗೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ರೇಷ್ಮೆ ಕೈಗಾರಿಕೆ ಪ್ರಾಮುಖ್ಯತೆ ಪಡೆದಿದೆ. ಬೆಂಗಳೂರು, ಮೈಸೂರು, ತುಮಕೂರು, ಕೋಲಾರ ಜಿಲ್ಲೆಗಳ 2500 ಹಳ್ಳಿಗಳಲ್ಲಿ ರೇಷ್ಮೆ ಕೃಷಿಯು ಉಪಕಸುಬಾಗಿದೆ. ಗುಡಿಕೈಗಾರಿಕೆಯಾಗಿದೆ. ಸುಮಾರು ಎರಡು ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಿದೆ. ಕಾಶ್ಮೀರ, ಅಸ್ಸಾಮ್, ಬೆಂಗಾಲ್, ಮದ್ರಾಸಿನಲ್ಲಿಯೂ ಕೂಡ ಪ್ರಮುಖ ಕೈಗಾರಿಕೆಯಾಗಿದೆ. ಆದ್ದರಿಂದ ರೇಷ್ಮೆ ಕೃಷಿ ಸಂಶೋಧನೆಯನ್ನು ರಾಷ್ಟ್ರಮಟ್ಟದಲ್ಲಿ ಕೈಗೊಳ್ಳಬೇಕಿದೆಯೆಂಬ ಕೋರಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ಚನ್ನಪಟ್ಟಣದ ರೇಷ್ಮೆ ಸಮ್ಮೇಳನದಲ್ಲಿ ಪರಿಗಣಿಸಲಾಯಿತು.
ರೈತರಿಗೆ ಜೀವನಾಡಿಯಾದ ರೇಷ್ಮೆ ಕೃಷಿ
ಮೈಸೂರು ಮಹಾರಾಜರಾದ ನಾಲ್ವಡಿಯವರ ಕಾಲದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಇಂದು ಅದೊಂದು ಆರ್ಥಿಕ ಬೆಳೆಯಾಗಿದೆ. ಶಿಡ್ಲಘಟ್ಟ, ಕೋಲಾರ, ಎಚ್ ಕ್ರಾಸ್, ಚಿಂತಾಮಣಿ, ರಾಮನಗರ, ಕನಕಪುರ ಮತ್ತು ಕೊಳ್ಳೆಗಾಲದಲ್ಲಿ ಪ್ರಮುಖ ರೇಷ್ಮೆ ಗೂಡಿನ ಮಾರುಕಟ್ಟೆಗಳಿವೆ. ರೇಷ್ಮೆ ಮೊಟ್ಟೆ ಉತ್ಪಾದನೆಗಾಗಿ ಬಳಸುವ ಪ್ರತ್ಯೇಕ ರೇಷ್ಮೆ ಗೂಡಿನ ಮಾರುಕಟ್ಟೆಗಳು ಹಾಸನ, ಅತ್ತಿಬೆಲೆ ಮತ್ತು ಸರ್ಜಾಪುರದಲ್ಲಿವೆ. ರೇಷ್ಮೆ ಗೂಡಿನಿಂದ ನೂಲು ತೆಗೆಯುವ ಕೇಂದ್ರಗಳು ಶಿಡ್ಲಘಟ್ಟ, ಕೋಲಾರ, ಕನಕಪುರ, ರಾಮನಗರ ಮತ್ತು ಕೊಳ್ಳೆಗಾಲದಲ್ಲಿವೆ. ಬೆಂಗಳೂರು, ಬೆಂಗಳೂರು ಜಿಲ್ಲೆಯ ವಿಜಯಪುರ, ದೊಡ್ಡಬಳ್ಳಾಪುರ ಮತ್ತು ಮೊಳಕಾಲ್ಮೂರು ಪ್ರಮುಖ ರೇಷ್ಮೆ ಬಟ್ಟೆ ನೇಯುವ ಕೇಂದ್ರಗಳು.
ಇದನ್ನೂ ಓದಿ ಬ್ರಾಹ್ಮಣ್ಯದ ಜನರು ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಾರೆ?
ಇದೀಗ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ರೇಷ್ಮೆ ಕೃಷಿಯಲ್ಲಿ ನಿರತರಾಗಿರುವವರ ಪೈಕಿ ಶೇ. 60ರಷ್ಟು ಮಹಿಳೆಯರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಡವರು, ಭೂರಹಿತರು ಕೂಡ ಉಳ್ಳವರ ಬಳಿ ಹಿಪ್ಪುನೇರಳೆ ಸೊಪ್ಪನ್ನು ಖರೀದಿಸುವ ಮೂಲಕ ರೇಷ್ಮೆ ಹುಳುವಿನ ಸಾಕಣೆಯಲ್ಲಿ ತೊಡಗಿದ್ದಾರೆ. ಸುಮಾರು 12 ಲಕ್ಷ ಕುಟುಂಬಗಳಿಗೆ ರೇಷ್ಮೆ ಕೃಷಿಯು ಉದ್ಯೋಗ ಒದಗಿಸಿದೆ. ಮನಮೋಹಕವಾದ ಮೈಸೂರ್ ಸಿಲ್ಕ್ ಸೀರೆಗಳು ಮತ್ತು ಉಡುಪುಗಳು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ. ಮಹಾರಾಜರಾದ ನಾಲ್ವಡಿಯವರ ಕನಸು ನನಸಾಗಿದೆ.
ಚಿತ್ರ ಕೃಪೆ: ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆಯ ಜಾಲತಾಣ

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ