ನುಡಿಯಂಗಳ | ಬ್ಯಾಂಕ್, ಬೇಂಕ್, ಬೈಂಕ್ – ಯಾವುದು ಸರಿ?

Date:

Advertisements

ನಾವು ಬಹಳ ಕಾಲದಿಂದ ಸಂಸ್ಕೃತದಿಂದ ಸಾವಿರಾರು ಪದಗಳನ್ನು ಎರವಲು ಪಡೆದಿದ್ದೇವೆ. ಕೆಲವನ್ನು ತತ್ಸಮವಾಗಿ, ಇನ್ನು ಕೆಲವನ್ನು ತದ್ಭವಗಳಾಗಿ ಬಳಸುತ್ತೇವೆ. ದೇವನಾಗರಿ ಲಿಪಿಯಲ್ಲಿ ಬರೆಯಬೇಕಿದ್ದ ತತ್ಸಮ ಪದಗಳನ್ನು ನಾವು ಕನ್ನಡ ಲಿಪಿಯಲ್ಲಿ ಬರೆಯುತ್ತೇವೆ. ಬಹಳ ಶತಮಾನಗಳಿಂದ ಈ ಭಾಷಾ ವ್ಯವಹಾರ ನಡೆದುದಕ್ಕಾಗಿ ಕಾಲಾಂತರದಲ್ಲಿ ನಮ್ಮ ವರ್ಣಮಾಲೆಯು ಅದಕ್ಕೆ ತಕ್ಕಹಾಗೆ ವಿಕಸಿತವಾಗಿದೆ

ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿದ್ದಾಗ (1978-80) ಸಚಿವಾಲಯದ ಶಾಖಾಧಿಕಾರಿಗಳು ಮತ್ತು ಅಧೀನ ಕಾರ್ಯದರ್ಶಿಗಳಿಗೆ ಆಡಳಿತ ಕನ್ನಡ ತರಬೇತಿಗಳನ್ನು ನಡೆಸುತ್ತಿದ್ದೆ. ಸರ್ಕಾರದ ವ್ಯವಹಾರದಲ್ಲಿ ಬಳಸಲಾಗುವ ಹಲವು ಬಗೆಯ ಪತ್ರಗಳು ಮತ್ತು ಅವು ಒಮ್ಮೆ ಕಡತಗಳಲ್ಲಿ ಬಂದನಂತರ ಬರೆಯಲಾಗುವ ಟಿಪ್ಪಣಿಗಳು ಇತ್ಯಾದಿಗಳನ್ನು ಕನ್ನಡದಲ್ಲಿ ನಿಖರವಾಗಿ ಬರೆಯುವುದು ಹೇಗೆ ಎಂಬುದರ ಕುರಿತು ತರಬೇತಿ. ಇದರ ಭಾಗವಾಗಿ ಬೇರೆ ಭಾಷೆಯಿಂದ ಎರವಲು ಪಡೆದ ಪದಗಳನ್ನು ಕನ್ನಡದಲ್ಲಿ ಬರೆದುಕೊಳ್ಳುವ ವಿಧಾನದ ಬಗ್ಗೆಯೂ ಅಭ್ಯಾಸ ಇರುತ್ತಿತ್ತು.
ಯಾವುದಾದರೂ ಅನ್ಯ ಭಾಷೀಯ ಪದವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಂಡರೆ ಅದನ್ನು ‘ಭಾಷಾಂತರ’ ಎನ್ನುತ್ತೇವೆ; ಬದಲಿಗೆ ಅದನ್ನು ಅನುವಾದ ಮಾಡಿಕೊಳ್ಳದೆ ಅದೇ ಪದವನ್ನು ಎರವಲು ಪಡೆದು ಕನ್ನಡ ಲಿಪಿಯಲ್ಲಿ ಬರೆದುಕೊಂಡರೆ ಅದನ್ನು ‘ಲಿಪ್ಯಂತರ’ ಎನ್ನುತ್ತೇವೆ. ಇದು ನಮ್ಮ ಭಾಷೆಯಲ್ಲಿ ಹೇರಳವಾಗಿ ನಡೆಯುತ್ತದೆ.

WhatsApp Image 2025 06 30 at 4.18.26 PM

ಇಂಗ್ಲಿಷಿನ Bank ಎಂಬ ಪದವನ್ನು ಭಾಷಾಂತರ ಮಾಡಿಕೊಳ್ಳದೇ ಲಿಪ್ಯಂತರ ಮಾಡಿಕೊಂಡು ನಾವು ‘ಬ್ಯಾಂಕ್’ (ಅಥವಾ ಬ್ಯಾಂಕು) ಎಂದು ಬರೆಯುತ್ತೇವೆ. ತರಬೇತಿಯ ಒಂದು ಗೋಷ್ಠಿಯಲ್ಲಿ ಈ ಕುರಿತು ಭಾಗಿಗಳ ನಡುವೆ ವಾದವಿವಾದ ನಡೆಯಿತು. ಹಳೆ ಮೈಸೂರು ಕಡೆಯವರು ಅದನ್ನು ಬ್ಯಾಂಕ್ ಎಂದು ಬರೆದರೇನೇ ಸರಿ ಎಂದರೆ, ಮಂಗಳೂರು ಕಡೆಯವರು, ಇಲ್ಲಿಲ್ಲ, ಅದನ್ನು ‘ಬೇಂಕ್’ ಎಂದು ಬರೆಯಬೇಕು ಎಂದರು. ಹಿಂದಿ ಮಾತೃಭಾಷೀಯರೊಬ್ಬರು, ಖಂಡಿತ ಇಲ್ಲ, ಅದನ್ನು ಹಿಂದಿಯಲ್ಲಿ ‘ಬೈಂಕ್’ ಎಂದು ಬರೆಯುತ್ತೇವೆ. ಧಾರವಾಡದ ಕಡೆ ಅದನ್ನು ‘ಬ್ಯಾಂಕ’ ಎಂದು ಬರೆದರೂ ಬರೆಯಬಹುದು(ಆ ಕಡೆ ಹೇರ ಕಟಿಂಗ ಸಲೂನ ಎಂದು ಬರೆದಿರುವ ಬೋರ್ಡನ್ನು ನಾನು ನೀವೂ ನೋಡಿರಬಹುದು). ಒಂದು ಬೋರ್ಡಿನಲ್ಲಿ ಹಿಂದಿಯಲ್ಲಿ ‘ಬಂಕ್’ ಎಂದು ಬರೆದಿದ್ದನ್ನೂ ನಾನು ನೋಡಿದ್ದೇನೆ. ಇದು ಲಿಪ್ಯಂತರ ಮಾಡಿಕೊಳ್ಳುವಲ್ಲಿನ ವೈವಿಧ್ಯಗಳು.

ಅಗತ್ಯಕ್ಕೆ ತಕ್ಕ ಹಾಗೆ ವಿಕಾಸ

ನಾವು ಬಹಳ ಕಾಲದಿಂದ ಸಂಸ್ಕೃತದಿಂದ ಸಾವಿರಾರು ಪದಗಳನ್ನು ಎರವಲು ಪಡೆದಿದ್ದೇವೆ. ಕೆಲವನ್ನು ತತ್ಸಮವಾಗಿ, ಇನ್ನು ಕೆಲವನ್ನು ತದ್ಭವಗಳಾಗಿ ಬಳಸುತ್ತೇವೆ. ದೇವನಾಗರಿ ಲಿಪಿಯಲ್ಲಿ ಬರೆಯಬೇಕಿದ್ದ ತತ್ಸಮ ಪದಗಳನ್ನು ನಾವು ಕನ್ನಡ ಲಿಪಿಯಲ್ಲಿ ಬರೆಯುತ್ತೇವೆ. ಬಹಳ ಶತಮಾನಗಳಿಂದ ಈ ಭಾಷಾ ವ್ಯವಹಾರ ನಡೆದುದಕ್ಕಾಗಿ ಕಾಲಂತರದಲ್ಲಿ ನಮ್ಮ ವರ್ಣಮಾಲೆಯು ಅದಕ್ಕೆ ತಕ್ಕಹಾಗೆ ವಿಕಸಿತವಾಗಿದೆ. ಉದಾಹರಣೆಗೆ, ಸ್ವರಗಳಲ್ಲಿ ಋ ಸ್ವರ, ವರ್ಗೀಯ ವ್ಯಂಜನಗಳಲ್ಲಿ ಮಹಾಪ್ರಾಣಾಕ್ಷರಗಳು, ಶ ಮತ್ತು ಷ-ಗಳು ಸೇರಿಕೊಂಡಿವೆ. ಇವು ಕನ್ನಡದಲ್ಲಿ ಇರುವುದೇ ಸಂಸ್ಕೃತಜನ್ಯ ಪದಗಳನ್ನು ಬರೆಯುವುದಕ್ಕಾಗಿ. ಉದಾ: ಅಭ್ಯಂತರ, ಸಂಸ್ಕೃತ, ಅಧ್ಯಯನ, ಪಟ್ಟಾಭಿಷೇಕ, ಧನಾದೇಶ, ಋತುಮಾನ, ಭಾಗ್ಯವಿಧಾತ ಇತ್ಯಾದಿ.

Advertisements
WhatsApp Image 2025 06 30 at 4.18.26 PM1

ಆದರೆ, ಕನ್ನಡದ ಹಾಗೆಯೇ ಇನ್ನೊಂದು ದ್ರಾವಿಡ ಭಾಷೆಯಾದ ತಮಿಳು ಸಂಸ್ಕೃತದಿಂದ ಪದಗಳನ್ನು ಎರವಲು ಪಡೆಯುವುದನ್ನು ಆರಂಭದಿಂದಲೇ ನಿರಾಕರಿಸಿದೆ. ಹೀಗಾಗಿ ಅವರಿಗೆ ಸ್ವರಗಳಲ್ಲಿ ಋ ಬೇಕಾಗಿಲ್ಲ. ಹಾಗೆಯೇ ವರ್ಗೀಯ ವ್ಯಂಜನಗಳಲ್ಲಿ ಕ (க) ಆದ ಕೂಡಲೇ ಅದರ ಅನುನಾಸಿಕ (ங்) ಇದೆ. ಖ, ಗ, ಘ-ಗಳಿಗೆ ಸಮಾನಾಂತರವಾದ ಧ್ವನಿಗಳು ಅವರಿಗೆ ಅಗತ್ಯವೇ ಇಲ್ಲ. ಮಹಾಪ್ರಾಣ (ಖ) ಮತ್ತು ಘೋಷ (ಗ) ಅವರಲ್ಲಿ ಇಲ್ಲ. ಇದು ಇತರ, ಚ, ಟ, ತ, ಪ-ವರ್ಗದ ವ್ಯಂಜನಗಳಿಗೂ ಅನ್ವಯವಾಗುತ್ತದೆ. ಅದು ಅದರ ಜಾಯಮಾನ. ಆದರೆ, ಸಂಸ್ಕೃತ ಪದಗಳನ್ನೂ ಕನ್ನಡ ಲಿಪಿಯಲ್ಲಿ ಬರೆಯಬೇಕಾದ ಅಗತ್ಯವಿರುವುದರಿಂದ ನಮ್ಮ ವರ್ಣಮಾಲೆಯಲ್ಲಿ, ಅ-ದಿಂದ ಳ-ವರೆಗೆ ಭರ್ತಿ 49 ವರ್ಣಗಳಿವೆ.

ಜ/ಜ಼ ಮತ್ತು ಫ/ಫ಼್

ಇನ್ನು ಇಂಗ್ಲಿಷಿನ, office, coffee, file, focus ಮುಂತಾದ ಪದಗಳಲ್ಲಿ ಬರುವ ‘ಜಿ’ ಎಂಬ ರೀತಿಯ ಧ್ವನಿ; ಮತ್ತು dozen, oxidized, zone, quiz ಮುಂತಾದ ಪದಗಳಲ್ಲಿ ಬರುವ ‘z’ ರೀತಿಯ ಧ್ವನಿಗಳು ಇತ್ತೀಚಿನವರೆಗೆ ಕನ್ನಡದ ವರ್ಣಮಾಲೆಯಲ್ಲಿರಲಿಲ್ಲ. ಆಗ ಅವುಗಳನ್ನು ಜ ಅಥವಾ ಝ-ಗಳಿಂದ ಮತ್ತು ಪ ಅಥವಾ ಫ-ಗಳಿಂದ ನಿಭಾಯಿಸಬೇಕಾಗಿತ್ತು. ರೈಲು, ಡಜನ್ ಎಂದೆಲ್ಲಾ ಬರೆಯುತ್ತಿದ್ದೆವು. ಆದರೆ ಈಗ ಕಂಪ್ಯೂಟರಿನಲ್ಲಿ ಕೆಳಗಡೆ ಎರಡು ಚುಕ್ಕೆಗಳನ್ನು ಹಾಕಿ, ಜ಼ ಮತ್ತು ಫ಼ ಎಂಬ ವಿಶಿಷ್ಟವಾದ ಧ್ವನಿಯನ್ನು ಸೂಚಿಸುವ ಪದ್ಧತಿ ಜಾರಿಗೆ ಬಂದ ನಂತರ ಮೇಲಿನ ಪದಗಳನ್ನು, school, store, station, speaker- ಮತ್ತು ಡಜನ್, ಆಕ್ಸಿಡೈಂಟ್, ಜೋ಼ನ್, ಕ್ವಿಜ಼್- ಈ ರೀತಿ ಬರೆದು ಮೂಲ ಧ್ವನಿಗೆ ಹೆಚ್ಚು ಹತ್ತಿರ ತರಬಹುದು.

ಕೆಲವು ಭಾಷೆಗಳು ಈ ತರಹ ಎರವಲು ಪದಗಳಿಗಾಗಿ ತಮ್ಮ ಅಕ್ಷರಮಾಲೆಯನ್ನು ಒಗ್ಗಿಸಿಕೊಳ್ಳುವ ಬದಲಿಗೆ ಆ ಪದಗಳ ಧ್ವನಿಯನ್ನೇ ತಮ್ಮ ಬರಹ ವ್ಯವಸ್ಥೆಗೆ ಒಗ್ಗುವ ಹಾಗೆ ಬದಲಿಸಿಕೊಳ್ಳುತ್ತಾರೆ. school, store, station, speaker ಮುಂತಾದ ಪದಗಳನ್ನು ಉರ್ದು ಭಾಷೆಯಲ್ಲಿ, ಕ್ರಮಶಃ, ಇಸ್ಕೂಲ್, ಇಸ್ಟೋರ್, ಇಸ್ಟೇಷನ್, ಇಸ್ಪೀಕರ್- ಎಂದು ಉಚ್ಚರಿಸುತ್ತಾರೆ, ಹಾಗೆಯೇ ಬರೆಯುತ್ತಾರೆ (اسکول,اسٹور, اسٹیشن, اسپیکر). ಪದದ ಆರಂಭದಲ್ಲಿ ಉರ್ದುವಿನ ಸ-ಕಾರದ ಜೊತೆ ಸಂಯುಕ್ತಾಕ್ಷರ ಬರುವುದಿಲ್ಲವಾದ್ದರಿಂದ ಅಂಥ ಪದಗಳನ್ನು ಅವರು ಆರಂಭದಲ್ಲಿ ಸಮಾನವಾಗಿ ಇ-ಸ್ವರವನ್ನು ಸೇರಿಸುವ ಮೂಲಕ ಉಚ್ಚಾರಣೆಯನ್ನು ಸುಲಭಗೊಳಿಸಿಕೊಳ್ಳುತ್ತಾರೆ. ಇವೇ ಪದಗಳನ್ನು ಕಾಶ್ಮೀರಿಯಲ್ಲಿ/ಕಾಶ್ಮೀರಿ ಉರ್ದುವಿನಲ್ಲಿ, ಸಕೂಲ್, ಸಟೋರ್, ಸಟೇಷನ್, ಸಪೀಕರ್ ಎಂಬ ರೀತಿಯಲ್ಲಿ ಮಾರ್ಪಡಿಸಿಕೊಳ್ಳುತ್ತಾರೆ ಎಂದೂ ನಾನು ಕೇಳಿದ್ದೇನೆ.

ಅಂಕಿತ ನಾಮಗಳು

ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ನಾವು ನೂರಾರು ಪದಗಳನ್ನು ಎರವಲು ಪಡೆದಿದ್ದೇವೆ. ಅಂತರ್ಜಾಲವನ್ನು ಆಧರಿಸಿದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದನ್ನು ಆಧರಿಸಿದ ನೂರಾರು ಆಪ್‍ಗಳು ನಿತ್ಯ ಜಾರಿಗೆ ಬರುತ್ತಲೇ ಇರುವ ಈ ಹಂತದಲ್ಲಿ ನಾವು ಇಂಗ್ಲಿಷ್ ಪದಗಳನ್ನು ತತ್ಸಮವಾಗಿ ತೆಗೆದುಕೊಂಡು ಕನ್ನಡ ಲಿಪಿಯಲ್ಲಿ ಬರೆದುಕೊಳ್ಳುತ್ತೇವೆ. ಇನ್ನು ವ್ಯಕ್ತಿ, ಊರು, ದೇಶ, ನದಿ, ಬೆಟ್ಟ, ಸಂಸ್ಥೆ, ಇಲಾಖೆ, ಯೋಜನೆ, ಪುಸ್ತಕ, ಪತ್ರಿಕೆ ಇತ್ಯಾದಿಗಳ ಹೆಸರುಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವಹಾಗಿಲ್ಲ. ಅವುಗಳ ಉಚ್ಚಾರಣೆಯನ್ನು ಅನುಸರಿಸಿ ಕನ್ನಡಕ್ಕೆ ಲಿಪ್ಯಂತರಿಸಿಕೊಳಬೇಕು. ಸಾಮಾನ್ಯವಾಗಿ ಇಂಥ ಅಂಕಿತ ನಾಮಗಳನ್ನು ಮಾತ್ರ ನಾವು ಲಿಪ್ಯಂತರ ಮಾಡಿಕೊಳ್ಳುತ್ತೇವೆ. ಗುಣವಾಚಕ, ಕ್ರಿಯಾಪದ, ಕ್ರಿಯಾವಾಚಕ ಇತ್ಯಾದಿಗಳನ್ನು ಇಂಗ್ಲಿಷಿನಿಂದ ಸಾಮಾನ್ಯವಾಗಿ ಎರವಲು ಪಡೆದು, ಲಿಪ್ಯಂತರ ಮಾಡುವುದಿಲ್ಲ. ಇಂಗ್ಲಿಷ್ ನಾಮಪದಕ್ಕೆ ಕನ್ನಡದ ಪ್ರತ್ಯಯವನ್ನು ಬೇಕಾದರೆ ಅಂಟಿಸಿಕೊಳ್ಳಬಹುದು (ಉದಾ:ಅಯಾನೀಕೃತ).

ಇಂಥ ಇಂಗ್ಲಿಷ್ ಅಂಕಿತ ನಾಮಗಳನ್ನು ಕನ್ನಡದ 49 ವರ್ಣಗಳು, ಈಗ ವಾಡಿಕೆಯಾಗಿರುವ ಜ಼ ಮತ್ತು ಫ಼ ಅಕ್ಷರಗಳು, ಗುಣಿತಾಕ್ಷರ, ಒತ್ತಕ್ಷರ ವಿಧಾನಗಳನ್ನು ಬಳಸಿ ವಾಡಿಕೆಯಲ್ಲಿರುವ ಉಚ್ಚಾರಣೆಯ ಪ್ರಕಾರ ಕನ್ನಡಕ್ಕೆ ಲಿಪ್ಯಂತರಿಸಿಕೊಳ್ಳುತ್ತೇವೆ. ಇಲ್ಲಿ ಈವರೆಗೆ ಕನ್ನಡದಲ್ಲಿ ವಾಡಿಕೆಯಲ್ಲಿರುವ, ಪದದ ಮಧ್ಯದಲ್ಲಿ ಸ್ವತಂತ್ರ ಸ್ವರ ಬರುವುದಿಲ್ಲ, ಕನ್ನಡದಲ್ಲಿ ಈಗ ವ್ಯಂಜನಾಂತ್ಯ ಪದಗಳಿಲ್ಲ ಎಂಬ ನಿಯಮಗಳನ್ನು ಕಾರ್ಯವಾಸಿ ಕೈಬಿಡುತ್ತೇವೆ. ಕೆಳಗಿನ ಲಿಪ್ಯಂತರಗಳನ್ನು ನೋಡಿ: ಜೋಸೆಫ್‌, ಆಮ್ಸ್‍ಟರ್‍ಡಾಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಅಮೇರಿಕನ್, ಡೆವಿಲ್ಸ್ ಪಿಕ್, ಡಿಪಾರ್ಟ್‍ಮೆಂಟ್ ಆಫ್‌ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್, ಯುನೈಟೆಡ್ ಕಿಂಗ್‍ಡಮ್ ಏರ್ ಪಲ್ಯೂಷನ್ ಕಂಟ್ರೋಲ್ ಪ್ರೋಗಾಮ್, ಸೈಕಾಲಜಿ ಆಫ್‌ ಮನಿ, ಟೈಮ್ಸ್ ಆಫ್‌ ಇಂಡಿಯಾ ಇತ್ಯಾದಿ.

ಇಂಗ್ಲಿಷಿನಲ್ಲಿ ಪದಗಳ ಉಚ್ಚಾರಣೆಯಲ್ಲಿ ಯು.ಕೆ., ಅಮೆರಿಕ, ಆಸ್ಟ್ರೇಲಿಯಾ ಎಂಬ ಸ್ಪಷ್ಟವಾದ ಪ್ರಬೇಧಗಳಿವೆ. ಭಾರತದಲ್ಲಿ ಸಾಮಾನ್ಯ ಓದುಗರು/ಬರಹಗಾರರು ಈ ಸೂಕ್ಷ್ಮಗಳಿಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕ್ರಮೇಣ ಇಂಡಿಯನ್ ಇಂಗ್ಲಿಷ್ ಎಂಬ ಒಂದು ಸ್ವರೂಪವೇ ವಿಕಾಸಗೊಂಡಿದೆ. ಅದರಲ್ಲೂ ಭಾರತೀಯರಲ್ಲೇ ಕೇರಳ, ತಮಿಳುನಾಡು, ಒರಿಸ್ಸಾ, ಕಾಶ್ಮೀರ ಇತ್ಯಾದಿ ಪ್ರದೇಶಗಳಲ್ಲಿ ಒಂದೇ ಇಂಗ್ಲಿಷ್ ಪದವನ್ನು ಅವರವರ ಭಾಷಾ ಜಾಯಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಉಚ್ಚರಿಸುತ್ತಾರೆ. ಅದೇ ರೀತಿಯಲ್ಲಿ ತಮ್ಮ ತಮ್ಮ ಲಿಪಿಯಲ್ಲಿ ಬರೆಯುತ್ತಾರೆ.

ಕನ್ನಡದಲ್ಲಿ ಇಂಗ್ಲಿಷಿನಲ್ಲಿರುವ ಹಾಗೆ ಸ್ಪೆಲ್ಲಿಂಗ್ ಇಲ್ಲ. ಇತರ ಭಾರತೀಯ ಭಾಷೆಗಳ ಹಾಗೆ ಕನ್ನಡವೂ ವರ್ಣ ಲಿಪಿ. ನಾವು ಮಾತಿನಲ್ಲಿ ಉಚ್ಚರಿಸಿದ ಹಾಗೆಯೇ ಅಕ್ಷರದಲ್ಲಿ ಬರೆಯುತ್ತೇವೆ; ಇನ್ನೊಬ್ಬರು ಬರೆದದ್ದನ್ನು ಹಾಗೆಯೇ ಉಚ್ಚರಿಸುತ್ತೇವೆ. ಬರೆದವರು ಮತ್ತು ಓದುವರರ ಉಚ್ಚಾರಣೆಯಲ್ಲಿ (ಹೆಚ್ಚುಕಡಿಮೆ) ಏನೂ ವ್ಯತ್ಯಾಸವಿರುವುದಿಲ್ಲ. ಹೀಗಾಗಿ ಇಂಗ್ಲಿಷ್ ಭಾಷೆಯ ಪದಗಳನ್ನು ಕನ್ನಡಕ್ಕೆ ಲಿಪ್ಯಂತರಿಸಿಕೊಳ್ಳುವಾಗ ನಾವು ಆ ಪದವನ್ನು ಸಾಮಾನ್ಯವಾಗಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಲಿಪ್ಯಂತರಿಸಿಕೊಳ್ಳುತ್ತೇವೆ.

ಲೇಖನದ ಆರಂಭದಲ್ಲಿ ನೋಡಿದ ಹಾಗೆ Bank ಎಂಬ ಪದವನ್ನು ರಾಜ್ಯದಲ್ಲಿಯೇ ಅಲ್ಲಿನ ಜನ ಅದನ್ನು ಉಚ್ಚರಿಸುವುದನ್ನು ಅನುಸರಿಸಿ, ಬ್ಯಾಂಕ್ ಮತ್ತು ಬೇಂಕ್ ಎಂದು ಲಿಪ್ಯಂತರಿಸಿಕೊಳ್ಳುತ್ತಾರೆ. ಹಿಂದಿಯಲ್ಲಿ ಅದನ್ನು ಬೈಂಕ್ ಎಂಬಂತೆ ಲಿಪ್ಯಂತರಿಸಿಕೊಂಡರೆ ಅದು ಅವರ ಉಚ್ಚಾರಣೆಯನ್ನು ಅನುಸರಿಸಿ ಆಗಿರುತ್ತದೆ. ಕೆಲವೊಮ್ಮೆ ತುಂಬಾ ಓದಿದವರೂ, ಸಾಕಷ್ಟು ಇಂಗ್ಲಿಷ್ ಬಲ್ಲವರೂ ಮಾಡುವ ಕೆಲವು ಇಂಗ್ಲಿಷ್ ಪದಗಳ ಉಚ್ಚಾರಣೆಯು, ಯಾವುದನ್ನು ಮಾನಕ ಎಂದು ಭಾವಿಸಲಾಗಿರುತ್ತದೆಯೋ ಅದಕ್ಕಿಂತ ಭಿನ್ನವಾಗಿ ಉಚ್ಚರಿಸುತ್ತೇವೆ. ಅಂಥ ಪದಗಳ ಲಿಪ್ಯಂತರ ಮಾಡುವಾಗ ಸಹಜವಾಗಿಯೇ ನಾವು ಸಾಮಾನ್ಯವಾಗಿ ಉಚ್ಚರಿಸುವುದನ್ನು ಅನುಸರಿಸಿ ಕನ್ನಡದಲ್ಲಿ ಬರೆಯುತ್ತೇವೆ.

WhatsApp Image 2025 06 30 at 4.18.26 PM2

environment ಎಂಬ ಪದದ ಒಂದು ಉದಾಹರಣೆಯನ್ನು ನೋಡೋಣ: ಈ ಪದವನ್ನು ನಾವು ಸಾಮಾನ್ಯವಾಗಿ ‘ಪರಿಸರ’ ಎಂದು ಅನುವಾದಿಸಿಕೊಂಡು ಬಿಡುತ್ತೇವೆ. ಆದರೆ, ಈ ಪದವು, Washington Environment Protection Board ಎಂಬ ಹೆಸರಿನ ಭಾಗವಾಗಿ ಬಂದಾಗ, ಅದು ಒಂದು ಅಂಕಿತ ನಾಮವಾದ್ದರಿಂದ ಕೆಲವೊಮ್ಮೆ ಅದರ ಎದುರು (WEPB)ಎಂಬ ಸಂಕ್ಷಿಪ್ತನಾಮವೂ ಇರಬಹುದಾದ್ದರಿಂದ ನಾವು ಅದನ್ನು ಅನುವಾದ ಮಾಡುವಂತಿಲ್ಲ. ಬದಲಿಗೆ ಅದನ್ನು ನಾವು ಲಿಪ್ಯಂತರಿಸಬೇಕಾಗುತ್ತದೆ. ಆಗ ನಾವು ವಿಶಿಷ್ಟವಾಗಿ environment ಪದವನ್ನು ಹೇಗೆ ಲಿಪ್ಯಂತರಿಸುತ್ತೇವೆ? environment ಎಂಬ ಪದವನ್ನು ನಮ್ಮಲ್ಲಿ ಹೆಚ್ಚಿನವರು ಅದರ ಸ್ಪೆಲ್ಲಿಂಗನ್ನು ಅನುಸರಿಸಿ /ಎನ್‍ವಿರಾನ್‍ಮೆಂಟ್/ ಎನ್ನುವ ರೀತಿಯಲ್ಲಿ ಉಚ್ಚರಿಸುತ್ತೇವೆ. ಹಾಗೆಯೇ ಬರೆಯುತ್ತೇವೆ. ಆದರೆ, ಆಕ್ಸ್‌ಫರ್ಡ್ ಯುನಿವರ್ಸಿಟಿ ಇಂಗ್ಲಿಷ್-ಕನ್ನಡ ನಿಘಂಟು ಅಥವಾ ನಮ್ಮದೇ ಆದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ ಪ್ರತಿ ಪದಕ್ಕೂ ಆವರಣದಲ್ಲಿ ಅದರ ಉಚ್ಚಾರಣೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಅದರಲ್ಲಿ environment ಪದದ ಉಚ್ಚಾರಣೆಯನ್ನು /ಇನ್‍ವೈಅರನ್‍ಮಂಟ್/ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಅದೇ ಸರಿ ಎಂದು ಅವರ ಪ್ರತಿಪಾದನೆ. ನೀವೂ ಆ ಪದವನ್ನು ಅನಾಯಾಸ ಹಾಗೆಯೇ ಉಚ್ಚರಿಸುವಿರಾದರೆ ಕನ್ನಡದಲ್ಲಿ ಲಿಪ್ಯಂತರ ಮಾಡಿಕೊಳ್ಳಬೇಕಾದ ಹೊತ್ತಿನಲ್ಲಿ/ಇನ್‍ವೈಅರನ್‍ಮಂಟ್/ ಎಂದು ಬರೆಯಬಹುದು. ನಾವಂತೂ /ಎನ್‍ವಿರಾನ್‍ಮೆಂಟ್/ ಎಂದೇ ಬರೆಯುತ್ತೇವೆ. ಆದರೆ, ಇಬ್ಬರಿಗೂ ಒಂದು ಮಾತು ಮಾತ್ರ ಸಮಾನವಾಗಿ ಅನ್ವಯಿಸುತ್ತದೆ. ಕೊನೆಯ ಪಕ್ಷ ಒಂದು ಬರಹದಲ್ಲಿ ಒಂದು ಪದವನ್ನು ಬೇರೆ ಬೇರೆ ರೀತಿ ಲಿಪ್ಯಂತರಿಸದೇ, ಒಂದೇ ರೀತಿ ಲಿಪ್ಯಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಆಗ ಓದುಗರು ಏನೂ ಗೊಂದಲವಿಲ್ಲದೇ ನಮ್ಮನ್ನು ಅನುಸರಿಸುತ್ತಾರೆ.

ಹಾಗೆಯೇ ಈ ನಿಘಂಟುಗಳು ಮಾನಕ ಎಂದು ಪರಿಗಣಿಸುವವರು/ನಾವು ಅವುಗಳನ್ನು ಸಾಮಾನ್ಯವಾಗಿ ಬರೆಯುವ ರೀತಿಯನ್ನು ನೋಡಿ: ಕ್ಯಾಲಿಂಡರ್/ಕ್ಯಾಲೆಂಡರ್, ಸೆಕಂಡರಿ/ಸೆಕೆಂಡರಿ, ಡೋಸಿಜ್/ಡೋಸೇಜ್‌, ಇನ್‍ಷ್ಯುಅರನ್ಸ್/ಇನ್ಷ್ಯೂರೆನ್ಸ್, ಪೆಟ್ರೋಲಿಅಮ್/ಪೆಟ್ರೋಲಿಯಂ, ಫಿಜಿಆಲಜಿ/ಫಿಜಿಯಾಲಜಿ, ಪಂಕ್ಚುಏಷನ್/ಪಂಕ್ಚುಯೇಷನ್, ಸೆಕ್ರಟರಿಅಟ್/ಸೆಕ್ರಟೇರಿಯಟ್, ಸೆಕ್ಯುಅರಟಿ/ಸೆಕ್ಯೂರಟಿ, ಸ್ಟವ್‍ಟ್/ಸ್ಟೌಟ್ ಇತ್ಯಾದಿ.

ವ್ಯಂಜನಾಂತ್ಯ ಪದಗಳು

ಇವತ್ತಿನ ಕನ್ನಡದಲ್ಲಿ ವ್ಯಂಜನದಿಂದ ಅಂತ್ಯವಾಗುವ ಪದಗಳು ಹೆಚ್ಚುಕಡಿಮೆ ಇಲ್ಲವೇ ಇಲ್ಲ. ಆದರೆ ಬೇರೆ ಭಾಷೆಯಿಂದ ಎರವಲು ಪದಗಳಲ್ಲಿ ವ್ಯಂಜನಾಂತ್ಯ ಪದಗಳು ಹೇರಳವಾಗಿರುತ್ತವೆ: file, court, corporation, computer, software, lens, nitrogen ಇತ್ಯಾದಿ ವ್ಯಂಜನಾಂತ್ಯ ಪದಗಳನ್ನು ಕ್ರಮಶಃ ಫೈಲ್, ಕೋರ್ಟ್, ಕಾರ್ಪೊರೇಷನ್, ಕಂಪ್ಯೂಟರ್, ಸಾಫ್ಟ್‌ವೇರ್, ಲೆನ್ಸ್, ನೈಟ್ರೋಜನ್ ಇತ್ಯಾದಿಯಾಗಿ ಲಿಪ್ಯಂತರ ಮಾಡಿಕೊಳ್ಳಬಹುದು. ಆದರೆ, ಈ ನಾಮಪದಗಳಿಗೆ ಬಹುವಚನ ಮತ್ತು ವಿಭಕ್ತಿ ಪ್ರತ್ಯಯಗಳನ್ನು ಅಂಟಿಸುವಾಗ ಇವು ವ್ಯಂಜನಾಂತ್ಯವಾಗಿಯೇ ಉಳಿಯುತ್ತವೆಯೇ? ಎಂದರೆ ಫೈಲ್‍ಗಳು, ಕೋರ್ಟ್‍ನಿಂದ, ಕಾರ್ಪೊರೇಷನ್‍ನ, ಕಂಪ್ಯೂಟರ್‍ಗಾಗಿ ಇತ್ಯಾದಿ. ಅಥವಾ ಬೇರೇನಾದರೂ ವಿಧಾನವಿದೆಯೇ?

ನಾನು ಶಿಫಾರಸು ಮಾಡುವುದು ಹೀಗೆ: ವ್ಯಂಜನಗಳನ್ನು ಪ್ರತ್ಯೇಕವಾಗಿ ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಿಲ್ಲ, ಹಾಗೆ ಮಾಡಿದರೆ ಅವುಗಳ ಧ್ವನಿ ಹೊರಬರುವುದಿಲ್ಲ. ಅದಕ್ಕೆಂದೆ ಕನ್ನಡದ ವರ್ಣಮಾಲೆಯಲ್ಲಿ ಎಲ್ಲಾ 34 ವ್ಯಂಜನಗಳಿಗೆ ಮೂಲ ‘ಅ’ ಸ್ವರವನ್ನು ಅಂಟಿಸಿಯೇ, ಕ, ನ, ಪ, ಯ, ಷ, ಹ, ಳ ಇತ್ಯಾದಿಯಾಗಿ ಉಚ್ಚರಿಸಲಾಗುತ್ತದೆ.

ಹಾಗೆ ನೋಡಿದರೆ ನಮ್ಮಲ್ಲಿ ಹಳಗನ್ನಡದ ಪೆಸರ್, ಪಾಲ್, ಪೇಳ್ (ಇಂಥ ಪದಗಳಲ್ಲಿ ‘ಪ’ಕಾರವು ‘ಹ’ಕಾರವಾಗಿಯೂ ಬದಲಾಗುತ್ತದೆ), ತೇರ್, ನಾನ್, ಅವಳ್, ಕೀಳ್, ಕೂಳ್ ಎಂಬ ಪದಗಳಿದ್ದವು. ಆಧುನಿಕ ಕನ್ನಡದಲ್ಲಿ ಇವುಗಳನ್ನು ತೇರು, ಹೆಸರು, ನಾನು, ಅವಳು ಎಂದು ಮಾಡಿಕೊಂಡಿದ್ದೇವೆ. ಎಂದರೆ, ವ್ಯಂಜನಾಂತ್ಯ ಪದಗಳಿಗೆ ಉಚ್ಚಾರಣೆಯ ಅನುಕೂಲಕ್ಕಾಗಿ ಸ್ಥಿರವಾಗಿ -ಉ ಸ್ವರವನ್ನು ಸೇರಿಕೊಳ್ಳುವುದು ಒಂದು ಸೂತ್ರ ಎಂಬಂತಾಯಿತು.

ನಾವು ತಲತಲಾಂತರಿಂದ ಎರವಲು ಪಡೆದು ಬಳಸುತ್ತಿರುವ ಬಸ್, ಪೆನ್, ಪೆನ್ಸಿಲ್, ಕಾರ್, ರೈಲ್, ಸವಾಲ್, ಮೈಲ್, ಇಂಚ್ ಇತ್ಯಾದಿ ಪದಗಳಿಗೆ ಸ್ಥಿರವಾಗಿ -ಉ ಸ್ವರವನ್ನೇ ಅಂಟಿಸಿ, ಬಸ್ಸು, ಪೆನ್ನು, ಪೆನ್ಸಿಲ್ಲು, ಕಾರು, ಸವಾಲು, ಮೈಲು, ಇಂಚು ಇತ್ಯಾದಿ ಮಾಡಿಕೊಂಡಿದ್ದೇವೆ. ಇವುಗಳಿಗೆ ಬಹುವಚನ, ವಿಭಕ್ತಿ ಇತ್ಯಾದಿ ಪ್ರತ್ಯಗಳನ್ನು ಅಂಟಿಸಿಯೂ ಬಸ್ಸುಗಳು, ಪೆನ್ನಿನ, ಕಾರಿನಿಂದ, ಪೆನ್ಸಿಲ್ಲಿಗೆ, ಫೈಲಿನಲ್ಲಿ ಇತ್ಯಾದಿ ಪದಗಳನ್ನು ಮಾಡಿಕೊಳ್ಳುತ್ತೇವೆ.

ಹೀಗಿರುವಾಗ, ಇನ್ನಷ್ಟು ಎರವಲು ಪಡೆಯುತ್ತಿರುವ ಇನ್ನಷ್ಟು ವ್ಯಂಜನಾಂತ್ಯ ಪದಗಳಿಗೆ ಇದೇ ಸೂತ್ರವನ್ನು ಅನುಸರಿಸುವುದು ಹೆಚ್ಚು ಸಮಂಜಸವಲ್ಲವೇ? ಹಾಗೆನ್ನುವುದಾದರೆ, ಕಂಪ್ಯೂಟರ್, ಲೆನ್ಸ್, ಸಾಫ್ಟ್‌ವೇರ್, ನ್ಯೂಕ್ಲಿಯಸ್, ಟ್ಯಾಂಕ್, ಕಾಂಟ್ರ್ಯಾಕ್ಟರ್ ಮುಂತಾದ ಪದಗಳನ್ನು ಸ್ವತಂತ್ರವಾಗಿ ಬರೆಯುವಾಗ (ಬೇಕಾದರೆ) ವ್ಯಂಜನಾಂತ್ಯವಾಗಿ ಬರೆದರೂ, ಪ್ರತ್ಯಯಗಳೊಂದಿಗೆ ಸಹಜವಾಗಿ, ಕಂಪ್ಯೂಟರಿನ, ಲೆನ್ಸಿನಿಂದ, ಸಾಫ್ಟ್‌ವೇರಿಗೆ, ನ್ಯೂಕ್ಲಿಯಸ್ಸಿನ, ಟ್ಯಾಂಕಿನಲ್ಲಿ, ಕಾಂಟ್ರ್ಯಾಕ್ಟರುಗಳು ಎಂದು ಬರೆಯುವುದು ಹೆಚ್ಚು ಸಹಜವಾದೀತು. ಅಕಸ್ಮಾತ್ ನೀವು ಬೇರೊಂದು ವಿಧಾನವನ್ನು ಬಳಸುವುದಾದರೆ, ಅಡ್ಡಿಯಿಲ್ಲ; ಆದರೆ, ಆ ವಿಧಾನವು ಇಂಥ ಪದಗಳಿಗೆ ಒಂದೇ ತರಹ ಇರಲಿ, ಮತ್ತು ನಿಮ್ಮ ಬರಹಗಳಲ್ಲಿ ಈ ಕುರಿತು ಒಂದೇ ಸ್ಥಿರತೆ ಇರಲಿ.

WhatsApp Image 2025 06 30 at 4.18.26 PM3

ಕನ್ನಡ ಶೈಲಿ ಕೈಪಿಡಿ

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಸಹಯೋಗದಲ್ಲಿ, ಹಲವು ಕನ್ನಡ ಪರಿಣಿತರು ಸೇರಿ ‘ಕನ್ನಡಶೈಲಿ ಕೈಪಿಡಿ’ ಎಂಬ ಒಂದು ಗ್ರಂಥವನ್ನು ರಚಿಸಿದ್ದಾರೆ. ಇದರ ಸಲಹಾ ಸಮಿತಿಯಲ್ಲಿ ಇದ್ದುಕೊಂಡು ಒಂದಷ್ಟು ಕೊಡುಗೆಯನ್ನು ನೀಡುವ ಅವಕಾಶ ನನಗೂ ಸಿಕ್ಕಿತ್ತು. ನಾನು ಈಗಲೂ ಇದನ್ನು ಆಗಾಗ ನೋಡುತ್ತಿರುತ್ತೇನೆ.
ಇದರಲ್ಲಿ ಪ್ರಸ್ತುತ ವಿಷಯವಾದ ಲಿಪ್ಯಂತರವೂ ಸೇರಿದ ಹಾಗೆ, ಲೇಖನ ಚಿಹ್ನೆಗಳು, ಪದ ವಿಭಜನೆ, ಉಲ್ಲೇಖನಾ ವಿಧಾನ, ಕರಡು ತಿದ್ದುವಿಕೆ ಇತ್ಯಾದಿಗಳ ಕುರಿತು ವಿಸ್ತೃತವಾದ ಮಾರ್ಗದರ್ಶನವಿದೆ. ನಾವೀಗ ಸಾಮಾನ್ಯವಾಗಿ ಕೈಯಿಂದ ಬರೆಯುವುದಿಲ್ಲ, ಟೈಪು ಮಾಡುತ್ತೇನೆ, ಇಂಥ ಸಾಫ್ಟ್‌ಕಾಪಿಯನ್ನು ಪ್ರಕಾಶಕರಿಗೆ ಇ-ಮೇಲಿನಲ್ಲಿ ಕಳಿಸುತ್ತೇವೆ. ಮುದ್ರಣದಲ್ಲಿ ಈಗ ಮೊಳೆ ಜೋಡಿಸುವುದಿಲ್ಲ, ಕಂಪ್ಯೂಟರ್ ತಂತ್ರಗಳನ್ನು ಬಳಸಿ ಪುಟವಿನ್ಯಾಸ ಇತ್ಯಾದಿ ಮಾಡಿ ಮುದ್ರಿಸುತ್ತಾರೆ. ಆದರೂ, 2006ರಲ್ಲಿ ಪ್ರಕಾಶಿಸಲಾದ, ಕನ್ನಡಶೈಲಿ ಕೈಪಿಡಿಯ ಪರಿಷ್ಕೃತ ಆವೃತ್ತಿಯು ನಮಗೂ ಬಹಳ ಉಪಯುಕ್ತವಾಗಿದೆ. ನೀವೂ ಒಮ್ಮೆ ನೋಡಿ.

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X