ನುಡಿಯಂಗಳ | ಎಲ್ಲೆಲ್ಲೂ ಪಸರಿಸಲಿ ಕನ್ನಡ ಕಂಪು

Date:

Advertisements

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗಲೂ ನಮ್ಮ ಅಧ್ಯಕ್ಷರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕನ್ನಡ ಬಳಕೆಯ ಕುರಿತು ಪರಿಶೀಲನೆಗೆ ಹೋಗುತ್ತಿದ್ದರು. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಬಳಕೆಯಾಗಿಲ್ಲ ಎಂದು ಕಂಡುಬಂದರೆ ಅವರ ಮೇಲೆ ಜೋರು ಜಬರ್ದಸ್ತಿನಿಂದ ಮಾತಾಡುತ್ತಿದ್ದರು. ಅದನ್ನು ಕಂಡೆ ಆಯಾ ಸಂಸ್ಥೆಗಳು ವರದಿಗಳನ್ನು ಕೊಡುವಾಗಲೇ ಸುಳ್ಳು ವರದಿಗಳನ್ನು ಕೊಡುತ್ತಿದ್ದವು.

ಇವತ್ತು ಬೆಂಗಳೂರಿನಂಥ ನಗರದಲ್ಲಿ ಕೆಲವು ಕಡೆ ನಾಗರಿಕರಿಗೆ ಕನ್ನಡ ಬಾರದೇ ಇರುವುದನ್ನು ಕಂಡು ಆತಂಕಕೊಂಡ ಕೆಲವು ಅಭಿಮಾನಿಗಳು, “ಹೀಗೇ ಆದರೆ, ಇನ್ನು ಕೆಲವು ವರ್ಷಗಳಲ್ಲಿ ಕನ್ನಡ ಭಾಷೆ ಅಳಿದುಹೋಗುತ್ತದೆ” ಎನ್ನುತ್ತಾರೆ. ಇದರಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳೂ ಇದ್ದಾರೆ. ಈ ಆತಂಕಕ್ಕೆ ಆಧಾರವಿಲ್ಲ. ಕೆಲವೇ ಕೆಲವು ಜನರ ಸಮುದಾಯದವಷ್ಟೇ ಮಾತಾಡುವ, ಯಾವುದಾದರೂ ಒಂದು ಲಿಪಿಯನ್ನು ಬಳಸಿ ಬರಹಕ್ಕೆ ಇಳಿದು ಸಾಹಿತ್ಯವನ್ನು ಹೊಂದಿರದ ಬುಡಕಟ್ಟು ಭಾಷೆಗಳು ಕ್ರಮೇಣ ಅಳಿಸುತ್ತವೆ ಎನ್ನಲಾಗುತ್ತದೆ. ಆ ಪ್ರಕಾರ ಕರ್ನಾಟಕದಲ್ಲಿ, ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಪ್ರಕಾರ, ಇರುಳ, ಸೋಲಿಗ, ಬಡಗ, ಯರವ, ಗೌಳಿ, ಬೆಟ್ಟಕುರುಬ ಮತ್ತು ಜೇನುಕುರುಬ ಈ ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂದು ಹೇಳಲಾಗುತ್ತದೆ.

ಕನ್ನಡದ ಅತ್ಯಂತ ಹಳೆಯ ಶಾಸನ ಎಂದು ಭಾರತೀಯ ಪುರಾತತ್ವ ಇಲಾಖೆ ಗುರುತಿಸಿರುವ ಶಿಕಾರಿಪುರ ತಾಲೂಕಿನ ತಾಳಗುಂದ ಶಾಸನವು, ಹಾಸನದ ಹಲ್ಮಿಡಿ ಶಾಸನಕ್ಕಿಂತ ಹಳೆಯದು. ಇದರ ಕಾಲವನ್ನು ಕ್ರಿ.ಶ.370ರಿದ 450ರ ನಡುವೆ ಎಂದು ಅಂದಾಜಿಸಲಾಗಿದೆ. ಅದಕ್ಕಿಂತ ಪ್ರಾಚೀನಕಾಲದಿಂದ ಬೆಳೆದು ಬಂದ ಕನ್ನಡ ನುಡಿ ತನ್ನೆಲ್ಲಾ ವೈವಿಧ್ಯದಿಂದ ಕರ್ನಾಟಕದ ಆರು ಕೋಟಿ ಜನರ ಬಾಯಲ್ಲಿ ಜೀವಂತವಾಗಿದೆ. ಈ ವರೆಗೆ ಆಧುನಿಕ ಕನ್ನಡದಲ್ಲಿಯೇ ಲಕ್ಷಾಂತರ ಪುಸ್ತಕಗಳು ಪ್ರಕಟವಾಗಿವೆ, ನೂರಾರು ಪತ್ರಿಕೆಗಳು, ಇಪತ್ರಿಕೆಗಳು, ಬ್ಲಾಗುಗಳು, ಧ್ವನಿ, ದೃಶ್ಯ ಮಾಧ್ಯಮದ ಉತ್ಪನ್ನಗಳು – ಇತ್ಯಾದಿ ಕನ್ನಡ ಭಾಷೆಯನ್ನು ಸಮೃದ್ಧವಾಗಿ ಬೆಳೆಸುತ್ತಿವೆ.

ಕರ್ನಾಟಕ ಅಧಿಕೃತ ಭಾಷಾ ಅಧಿನಿಯಮ, 1963ರ ಅಡಿಯಲ್ಲಿ ಕನ್ನಡವನ್ನು ನಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ನಾವು ಅಂಗೀಕರಿಸಿದ್ದೇವೆ. ಈ ಆಶಯವನ್ನು ಅನುಷ್ಠಾನಗೊಳಿಸುವ ಸಲುವಾಗಿ ನಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾಷಾಂತರ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ, ನಂತರ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಸಬಲಗೊಳಿಸಲು ಅನೇಕ ಅಧಿನಿಯಮಗಳನ್ನು, ಆದೇಶಗಳನ್ನು ಜಾರಿಗೆ ತಂದಿದ್ದೇವೆ. ಗ್ರಾಮ ಪಂಚಾಯತಿಯಿಂದ ಹಿಡಿದು ಸಚಿವಾಲಯದವರೆಗೆ ಕಚೇರಿಗಳಲ್ಲಿ ಕನ್ನಡವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಜಿಲ್ಲಾ ನ್ಯಾಯಾಲಯಗಳ ವರೆಗೆ ಪಾಟೀಸವಾಲನ್ನು ಕನ್ನಡದಲ್ಲಿಯೇ ಮಾಡುತ್ತಾರೆ, ತೀರ್ಪು ಕನ್ನಡದಲ್ಲಿ ಬರೆಯುವುದು ಇನ್ನಷ್ಟು ವ್ಯಾಪಕವಾಗಿ ಆಗಬೇಕಾಗಿದೆ. ಕನ್ನಡದ ಬೆಳವಣಿಗೆಗಿಂತ ಹೆಚ್ಚಾಗಿ ಕರುನಾಡಿನ ಜನರಿಗೆ ಕನ್ನಡದಲ್ಲಿ ಸೇವೆ ಒದಗಬೇಕು ಎಂಬ ಕಾಳಜಿ ಇರುವವರಿಗೆ ಈಗಲೂ ಅಸಮಾಧಾನ ಇರುವುದು ಸಾರ್ವಜನಿಕ ವಲಯದಲ್ಲಿ ಕನ್ನಡದ ಬಳಕೆ ಕುರಿತು ಸಿಗಬೇಕಾದಷ್ಟು ಮನ್ನಣೆ ಸಿಗುತ್ತಿಲ್ಲ ಎನ್ನುವುದು.

ಸಾರ್ವಜನಿಕ ವಲಯ ಎಂಬುದರಲ್ಲಿ ಮೂರು ಬಗೆ ಇವೆ. ಒಂದು ರಾಜ್ಯ ಸರಕಾರದ ಅಡಿಯಲ್ಲಿ ಬರುವ ಸಂಸ್ಥೆಗಳು, ಇನ್ನೊಂದು ಒಕ್ಕೂಟ ಸರಕಾರಕ್ಕೆ ಸೇರಿದ್ದು, ರಾಜ್ಯದಲ್ಲಿರುವ ಸಂಸ್ಥೆಗಳು ಮತ್ತು ಮೂರನೆಯದು, ಖಾಸಗಿ ಸಂಸ್ಥೆಗಳು. ಒಟ್ಟಾರೆಯಾಗಿ ಇವುಗಳಲ್ಲಿ, ಬಸ್ಸು, ರೈಲು, ವಿಮಾನ, ಮೆಟ್ರೋ ಇತ್ಯಾದಿ ಸಾರಿಗೆ ಸಂಸ್ಥೆಗಳು. ವಿಮೆ, ಬ್ಯಾಂಕು ಇತ್ಯಾದಿ ಹಣಕಾಸು ಸಂಸ್ಥೆಗಳು, ಆರೋಗ್ಯ, ನ್ಯಾಯಾಂಗ, ವಾಣಿಜ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಮತ್ತು ಸಮಾಲೋಚನೆ ಒದಗಿಸುವ ಸಂಸ್ಥೆಗಳು, ಉತ್ಪಾದನೆಯಲ್ಲಿ ತೊಡಗಿರುವ ಕಾರ್ಖಾನೆಗಳು, ಉದ್ಯಮಗಳು, ಕಾರ್ಪೋರೇಷನ್ನುಗಳು ಇತ್ಯಾದಿ ಬರುತ್ತವೆ. ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆ. ಕರ್ನಾಟಕ ಸರಕಾರದ ಇಲಾಖೆಗಳಲ್ಲದೇ, ಅದರ ಅಡಿಯಲ್ಲಿರುವ ಬರುವ ನಿಗಮ, ಮಂಡಳಿಗಳಿಗೂ ಇದು ಅನ್ವಯಿಸುತ್ತದೆ. ಆದರೂ ಕನ್ನಡದ ಬಳಕೆ ಕುರಿತು ಸರಕಾರಿ ಇಲಾಖೆಗಳಲ್ಲಿ ಆಗಿರುವಷ್ಟು ಪ್ರಗತಿ ಇಂಥ ಸಂಸ್ಥೆಗಳಲ್ಲಿ ಆಗಿಲ್ಲ. ಇದಕ್ಕೆ ಕಾರಣ ಏನು ಎಂದು ಕಂಡುಕೊಳ್ಳಬೇಕು.

ಇನ್ನು, ಒಕ್ಕೂಟ ಸರಕಾರದ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನೂರಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇಲ್ಲಿಯೂ ಕನ್ನಡದ ಬಳಕೆ ಪ್ರಶ್ನೆ ಸ್ವಲ್ಪ ಜಟಿಲವಾಗಿದೆ.

ರಾಷ್ಟ್ರದ ಆಡಳಿತ ಭಾಷೆ: ಹಿಂದಿ

೧ 4

ಹೀಗಾಗಿ, ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಅಭಿವೃದ್ದಿಪಡಿಸುವ ಸಲುವಾಗಿ ಒಕ್ಕೂಟದ ಅಡಿಯಲ್ಲಿ, ಅಧಿಕೃತ ಭಾಷಾ ಆಯೋಗ ಮತ್ತು ಇಲಾಖೆಗಳು ಇತ್ಯಾದಿಗಳು ಇವೆ. ಇದನ್ನು ಅನುಸರಿಸಿ ಒಕ್ಕೂಟ ಸರಕಾರದ ದೊಡ್ಡದೊಡ್ಡ ಸಂಸ್ಥೆಗಳಲ್ಲಿ ವ್ಯವಸ್ಥಿತವಾದ, ಸಾಕಷ್ಟು ಸಿಬ್ಬಂದಿ, ಸೌಕರ್ಯಗಳನ್ನು ಹೊಂದಿದ ’ಹಿಂದಿ ಅನುಷ್ಠಾನ ಘಟಕ’ಗಳು ಇವೆ. ಅವು ಪ್ರತಿ ವರ್ಷ ’ಹಿಂದಿ ದಿವಸ್’ ಆಚರಿಸುತ್ತವೆ. ತಮ್ಮ ಆಡಳಿತದಲ್ಲಿ ಹಿಂದಿಯನ್ನು ಹೆಚ್ಚು ಹೆಚ್ಚು ಬಳಕೆಗೆ ತರಲು ಅಧಿಕಾರಿಗಳು, ಸಿಬ್ಬಂದಿ ಶ್ರಮವಹಿಸುತ್ತಿದ್ದಾರೆ. ಅವರು ಹಾಗೆ ಮಾಡುವುದು ನ್ಯಾಯವೇ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಕನ್ನಡವನ್ನು ಅನುಷ್ಠಾನ ಮಾಡುವಲ್ಲಿ ’ಕನ್ನಡ ಭಾಷಾ ಘಟಕ’ಗಳ ವ್ಯವಸ್ಥೆ ಇಲ್ಲ ಎನ್ನುವುದನ್ನು ಗಮನಿಸಬೇಕು.
ಬೆಂಗಳೂರಿನ ರಾಜಾಜಿನಗರದಲ್ಲಿ ನಾನು ಭೇಟಿಕೊಡುವ ಅಪೆಕ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ಕೌಂಟರುಗಳಲ್ಲಿರುವವರು ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತಾಡುತ್ತಾರೆ. ಸಾರ್ವಜನಿಕರಿಗೆ ಸಂಬಂಧ ಪಟ್ಟ ನಮೂನೆಗಳು ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡದಲ್ಲೂ ಇವೆ. ಈ ಕುರಿತು ಭಾರತದ ಎಲ್ಲಾ ಬ್ಯಾಂಕುಗಳ ನಿಯಂತ್ರಕವಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2014ರಷ್ಟು ಹಿಂದೆಯೇ ಹೊರಡಿಸಿದ್ದ ಒಂದು ಸುತ್ತೋಲೆ ಬಹಳ ಮಹತ್ವದ್ದಾಗಿದೆ

Advertisements
೨ 3

ಮಾಸ್ಟರ್ ಸರ್ಕ್ಯುಲರ್ ಎನ್ನಲಾಗುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ, ಜುಲೈ 1, 2014 ಸುತ್ತೋಲೆಯಲ್ಲಿ, “ಎಲ್ಲಾ ಬಗೆಯ ಸರಕಾರಿ/ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಯಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಬಳಸಬೇಕು” ಎಂಬ ಸ್ಪಷ್ಟ ಸೂಚನೆ ಇದೆ. ಜೊತೆಗೆ, “ಸೂಚನಾಫಲಕಗಳು, ಭಿತ್ತಿಪತ್ರಗಳು, ಯೋಜನೆಗಳ ವಿವರಗಳ ಕೈಪಿಡಿಗಳು, ಎಲ್ಲವನ್ನೂ ಕನ್ನಡದಲ್ಲಿಯೂ ಪ್ರಕಟಿಸಬೇಕು” ಎಂದಿದೆ. “ಬ್ಯಾಂಕ್ ಸೇವೆಗಳು ಹೆಚ್ಚು ಹೆಚ್ಚು ಜನರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಗ್ರಾಹಕರು ಬಳಸುವ, ಖಾತೆ ತೆರೆಯುವ ನಮೂನೆ, ಪೇಇನ್ ಸ್ಲಿಪ್, ಪಾಸ್ ಬುಕ್ ಇತ್ಯಾದಿಗಳನ್ನು ಕನ್ನಡದಲ್ಲಿಯೂ ಮುದ್ರಿಸಬೇಕು” ಎಂದು ಈ ಸುತ್ತೋಲೆ ಹೇಳುತ್ತದೆ. ಆದರೂ ಕೆಲವು ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನ ದುರ್ಬಲವಾಗಿಯೇ ಇದೆ.

ಮೈಸೂರು

ಇತ್ತೀಚೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜ್ಯದಲ್ಲಿ ಬ್ಯಾಂಕುಗಳು ಮತ್ತು ಇತರ ಸೇವಾ ಸಂಸ್ಥೆಗಳಲ್ಲಿ ನೇರವಾಗಿ ಸಾರ್ವಜನಿಕ ಸಂಪರ್ಕಕ್ಕೆ ಬರುವ ಸಿಬ್ಬಂದಿ ಕನ್ನಡದಲ್ಲಿಯೇ ಮಾತಾಡುವವರಾಗಿರಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ವರ್ಷದ ಹಿಂದೆಯೇ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಡಾ.ಪುರುಷೋತ್ತಮ ಬಿಲಿಮಲೆಯವರು ಸಚಿವರನ್ನು ಇನ್ನೊಮ್ಮೆ ಭೇಟಿ ಮಾಡಿ ಈ ಕುರಿತು ನೆಲೆಮಟ್ಟದಲ್ಲಿ ಅನುಷ್ಠಾನಕ್ಕಾಗಿ ಕ್ರಮಕೈಗೊಳ್ಳಬೇಕು ಎಂದು ಕೇಳಿದ್ದಕ್ಕೆ ಆಯಿತು ಎಂದಿದ್ದಾರೆ ಎಂದು ತಿಳಿದುಬಂದಿದೆ.

ಇದರಲ್ಲಿ ಕರ್ನಾಟಕ ಸರಕಾರದ ಕರ್ತವ್ಯವೇನು
?

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರ ಪ್ರಕರಣ 7-11ರವರೆಗೆ ಕನ್ನಡವನ್ನು ಅಧಿಕೃತ ಭಾಷೆಯಾಗಿ ಜಾರಿಗೆ ತರುವ ಸಲುವಾಗಿ ರಾಜ್ಯ ಮಟ್ಟದಿಂದ ತಾಲೂಕು ಮಟ್ಟದ ವರೆಗೆ ಜಾರಿ ಸಮಿತಿಗಳ ಪ್ರಸ್ತಾವವಿದೆ. ಇದು ಸಾಲದು ಎಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವನ್ನು ಅಧಿಕೃತ ಜಾರಿ ನಿರ್ದೇಶನಾಲಯವೂ ಆಗಿರತಕ್ಕದ್ದು ಎಂದೂ ಹೇಳಲಾಗಿದೆ. ಆದರೆ, ಇವರಿಗೆ ನೀಡಲಾಗಿರುವ ಎಲ್ಲಾ ಕೆಲಸಗಳು ಕೇವಲ ನಿಗಾವಣೆ, ತಪಾಸಣೆ, ತಾಕೀತುಗಳಿಗೆ ಸಂಬಂಧಪಟ್ಟವಾಗಿವೆ. ಅಧಿಕೃತ ಭಾಷೆಯಾಗಿ ಕನ್ನಡವನ್ನು ಅಭಿವೃದ್ಧಿ ಪಡಿಸುವುದಾಗಲೀ, ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡುವುದಾಗಲೀ ಇವರ ಜವಾಬ್ದಾರಿಗಳಲ್ಲಿ ಇಲ್ಲ.

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗಲೂ ನಮ್ಮ ಅಧ್ಯಕ್ಷರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕನ್ನಡ ಬಳಕೆಯ ಕುರಿತು ಪರಿಶೀಲನೆಗೆ ಹೋಗುತ್ತಿದ್ದರು. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಬಳಕೆಯಾಗಿಲ್ಲ ಎಂದು ಕಂಡುಬಂದರೆ ಅವರ ಮೇಲೆ ಜೋರು ಜಬರ್ದಸ್ತಿನಿಂದ ಮಾತಾಡುತ್ತಿದ್ದರು. ಅದನ್ನು ಕಂಡೇ ಆಯಾ ಸಂಸ್ಥೆಗಳು ವರದಿಗಳನ್ನು ಕೊಡುವಾಗಲೇ ಸುಳ್ಳು ವರದಿಗಳನ್ನು ಕೊಡುತ್ತಿದ್ದವು.

ಇದರ ಬದಲಿಗೆ ಯಾವುದಾದರೂ ಸಂಸ್ಥೆ, ಮಂಡಳಿ, ನಿಗಮದಲ್ಲಿ ಕನ್ನಡ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ಕಂಡುಬಂದರೆ, ಏಕೆ ಆಗುತ್ತಿಲ್ಲ, ಬಳಕೆಯಲ್ಲಿರುವ ತೊಂದರೆಗಳು ಏನು, ಯಾವ ಸಂಪನ್ಮೂಲದ ಕೊರತೆ ಇದೆ, ಸರಕಾರದ ಸಂಸ್ಥೆಗಳಿಂದ ಏನಾದರೂ ಸಹಾಯ ಬೇಕೆ -ಎಂದು ಕೇಳಬೇಕಾಗಿತ್ತು. ಆಗ ಅವರು ತಮ್ಮ ಕೊರತೆಗಳನ್ನು ಮನಸ್ಸು ಬಿಚ್ಚಿ ಹೇಳಿಕೊಳ್ಳುತ್ತಿದ್ದರು. ಅದನ್ನು ಪೂರೈಸುವುದು ಸರಕಾರಗಳ ಕರ್ತವ್ಯವಾಗುತ್ತಿತ್ತು. ಇದು ಸಾರ್ವಜನಿಕ ವಲಯದಲ್ಲಿ ಕನ್ನಡ ಬಳಕೆಯನ್ನು ಜಾರಿಗೆ ತರುವಲ್ಲಿನ ಸುಸ್ಥಿರವಾದ ವಿಧಾನವಾಗಿರುತ್ತದೆ.

೪

ನಾನು, 1975-78ರವರೆಗೆ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿದ್ದೆ. ನಂತರ ಎರಡು ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭಾಷಾ ತರಬೇತಿಗಾಗಿಯೇ ವಿಶೇಷವಾಗಿ ನೇಮಿಸಲ್ಪಟ್ಟಿದ್ದ ಸಹಾಯಕ ನಿರ್ದೇಶಕನಾಗಿದ್ದೆ. ಆಗ ಸಂಸ್ಕೃತಿಯ ಕೆಲಸ ಕಾರ್ಯಗಳನ್ನು ವಿವಿಧ ಅಕಾಡಮಿಗಳಿಗೆ ಬಿಟ್ಟುಕೊಟ್ಟು, ಕನ್ನಡವನ್ನು ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಬಳಕೆಯ ಭಾಷೆಯನ್ನಾಗಿ ಸಮರ್ಥಗೊಳಿಸುವ ಮತ್ತು ಸಿಬ್ಬಂದಿಯನ್ನು ಸಬಲೀಕರಿಸುವ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆವು.

ಕೆಲವು ಉದಾಹರಣೆ ಕೊಡುವುದಾದರೆ, ಕರ್ನಾಟಕಕ್ಕೆ ನೇಮಕವಾಗಿರುವ ಕನ್ನಡ ಬಾರದೇ ಇರುವ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕನ್ನಡವನ್ನು ಹೇಳಿಕೊಡುತ್ತಿದ್ದೆವು. ನಂತರ, ಕರ್ನಾಟಕ ಸರಕಾರದ ಸಚಿವಾಲಯದ ಶಾಖಾಧಿಕಾರಿಗಳು ಮತ್ತು ಅಧೀನ ಕಾರ್ಯದರ್ಶಿಗಳಿಗೆ ಆಡಳಿತದಲ್ಲಿ ಕನ್ನಡವನ್ನು ಕಲಿಸುವ ಕುರಿತು ಪ್ರಾಯೋಗಿಕ ತರಬೇತಿಗಳನ್ನು ನೀಡುತ್ತಿದ್ದೆವು. ಜಿಲ್ಲಾ ಮಟ್ಟದ ನ್ಯಾಯಾಧೀಶರಿಗೆ ಕನ್ನಡದಲ್ಲಿ ತೀರ್ಪನ್ನು ನೀಡುವ ಕುರಿತು ಶಿಬಿರಗಳನ್ನು ನಡೆಸಿದೆವು. ನಂತರ, ರಾಜ್ಯದ ಉದ್ದಗಲಕ್ಕೂ ಆಡಳಿತ ಕನ್ನಡದಲ್ಲಿ ತರಬೇತಿಯನ್ನು ಸಂಘಟಿಸುವ ಸಲುವಾಗಿ, ಶಿಬಿರಗಳ ಕಲಿಕಾಕ್ರಮ ಮತ್ತು ತರಬೇತಿ ಸಾಮಗ್ರಿಯನ್ನು ರೂಪಿಸಿದ್ದೆವು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳ ತರಬೇತಿ ನೀಡಿ, ಅವರ ಮೂಲಕ ಸಿಬ್ಬಂದಿಗಾಗಿ ತರಬೇತಿಗಳನ್ನು ನೀಡುವ ವ್ಯಾಪಕ ಜಾಲವನ್ನು ಸೃಷ್ಟಿ ಮಾಡಿದ್ದೆವು. ಆಗ ಇಲಾಖೆಯಿಂದ ಪ್ರಕಟವಾದ, ನಾನು ಬರೆದ ’ಆಡಳಿತ ಭಾಷೆ: ತರಬೇತಿ ಕೈಪಿಡಿ” ಎಂಬ ಕೃತಿ ಈಗಲೂ ಉಪಯುಕ್ತವಾಗಿದೆ. ಜೊತೆಗೆ ಭಾಷಾಂತರ ಇಲಾಖೆಯ ನೆರವಿನೊಂದಿಗೆ ಸುಮಾರು 63 ಇಲಾಖೆಗಳ ’ಇಲಾಖಾವಾರು ಪದಕೋಶ’ಗಳನ್ನು ರೂಪಿಸಿ ಪ್ರಕಟಿಸಲಾಗಿತ್ತು. ಸಮಗ್ರವಾದ ಕಾನೂನು ಪದಕೋಶ, ಆಡಳಿತ ಪದಕೋಶಗಳನ್ನು ಪ್ರಕಟಿಸಲಾಗಿತ್ತು. ನಾನೂ ವೈಯಕ್ತಿಕವಾಗಿ ಕನ್ನಡ-ಇಂಗ್ಲಿಷ್ ಆಡಳಿತ ಪದಕೋಶವನ್ನು ಸಂಪಾದಿಸಿದ್ದೆ.

WhatsApp Image 2025 02 21 at 3.34.47 PM1

ಇದೇ ರೀತಿಯಲ್ಲಿ ರಿಸರ್ವ್ ಬ್ಯಾಂಕ್, ಕೆನರಾ/ಸಿಂಡಿಕೇಟ್ ಬ್ಯಾಂಕು, ಬಿಇಎಲ್, ಮೈಕೋದಂಥ ಉದ್ಯಮ ಸಂಸ್ಥೆಗಳಲ್ಲಿಯೂ ಕನ್ನಡ ತರಬೇತಿಗಳನ್ನು ನಡೆಸಿದ್ದೆವು. ಕನ್ನಡ ಸಾಹಿತ್ಯ ಪರಿಷತ್ತಿನ ನೆರವಿನೊಂದಿಗೆ ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಸುಮಾರು 80 ಜನ ಶಿಕ್ಷಕರನ್ನು ತರಬೇತಿಗೊಳಿಸಲಾಗಿತ್ತು. ಆ ತರಗತಿಗಳಲ್ಲಿ ಬಳಸುವ ಸಲುವಾಗಿ ಭಾಷಾಕಲಿಕೆಯಲ್ಲಿ ಅತ್ಯಂತ ವೈಜ್ಞಾನಿಕವಾದ ಮೈಕ್ರೊವಿಧಾನ ಎಂಬುದನ್ನು ಬಳಸಿ ನಾನು ರಚಿಸಿದ ’ಸ್ಪೋಕನ್ ಕನ್ನಡ, ಮಾತಾಡುವ ಕನ್ನಡ’ ಎಂಬ ಪುಸ್ತಕವನ್ನು ಕ.ಸಾ.ಪ. ಪ್ರಕಟಿಸಿತ್ತು. ಈ ಪುಸ್ತಕ ಈವರೆಗೆ ಹಲವಾರು ಮುದ್ರಣವನ್ನು ಕಂಡು ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿದೆ.

ಆದರೆ, ನಾನು 1980ರಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಿಟ್ಟ ನಂತರ ಎರಡು ಮೂರು ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಡಳಿತ ಕನ್ನಡ/ಬ್ಯಾಂಕಿಂಗ್ ಕನ್ನಡ/ವಾಣಿಜ್ಯ/ಉದ್ಯಮ ಕನ್ನಡ ತರಬೇತಿಗಳನ್ನು ನೀಡುವುದನ್ನು ನಿಲ್ಲಿಸಿಬಿಟ್ಟಿದೆ. ಸರಕಾರದ ಬೇರೆ ಯಾವುದೇ ಸಂಸ್ಥೆ, ಇಲಾಖೆ ಅಥವಾ ಪ್ರಾಧಿಕಾರಗಳು ಅಂಥ ಯಾವುದೇ ತರಬೇತಿಗಳನ್ನು ಈಗ ನೀಡುತ್ತಿಲ್ಲ. ಆಡಳಿತ ಕನ್ನಡ ಭಾಷಾ ಕೌಶಲ ಅಭಿವೃದ್ಧಿಯ ಇಂಥ ಪರಿಶ್ರಮಗಳ ಹೊರತಾಗಿಯೂ ಖಾಸಗೀ ವಲಯದಲ್ಲಿ ಕನ್ನಡದ ಬಳಕೆ ಆಗಬೇಕು ಎಂದು ನಿರೀಕ್ಷಿಸುವುದು ಅತಾರ್ಕಿಕವಾಗುತ್ತದೆ.

WhatsApp Image 2025 02 21 at 3.34.47 PM

ಕನ್ನಡ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ

ಒಕ್ಕೂಟ ಸರಕಾರದ ಸಾರ್ವಜನಿಕ ಸಂಸ್ಥೆಗಳಲ್ಲಿ, ಹಿಂದಿ ಘಟಕಗಳು ಇವೆ. ಅದೇ ರೀತಿಯಲ್ಲಿ ಕನ್ನಡವನ್ನು ಕಲಿಸುವ ಮತ್ತು ಆಡಳಿತ ಭಾಷೆಯಾಗಿ ಕನ್ನಡವನ್ನು ಸಮರ್ಥಗೊಳಿಸುವ ಹೊಣೆಯನ್ನು ಹೊತ್ತ ಕನ್ನಡ ಭಾಷಾ ಘಟಕಗಳು ಎಲ್ಲ ದೊಡ್ಡ ಸಂಸ್ಥೆಗಳಲ್ಲಿ ಇರಬೇಕು ಎಂದು ನಮ್ಮ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಅಪೇಕ್ಷಿಸುತ್ತದೆ. ಆದರೆ, ಇಂಥ ಭಾಷಾ ಘಟಕಗಳು ಕರ್ನಾಟಕ ಸರಕಾರದ ಸಂಸ್ಥೆಗಳಲ್ಲಿಯೇ ಇಲ್ಲ. ಇನ್ನು ಒಕ್ಕೂಟ ಸರಕಾರದ ಸಂಸ್ಥೆಗಳಲ್ಲಿ ಹಿಂದಿ ಭಾಷಾ ಘಟಕಗಳ ಹಾಗೆ ಕನ್ನಡ ಭಾಷಾ ಘಟಕಗಳನ್ನು ಸ್ಥಾಪಿಸಲು ಅವರಿಗೆ ಕೇಂದ್ರದ ಅನುಮತಿ ಬೇಕಾಗುತ್ತದೆ. ಇದನ್ನು ಅವರು ಪ್ರತ್ಯೇಕ ಪ್ರತ್ಯೇಕವಾಗಿ ಕೇಳಿ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಸರಕಾರ ಇದನ್ನು ಸುಗಮಗೊಳಿಸಬೇಕಾಗುತ್ತದೆ. ಹಾಗೆ ನೋಡಿದರೆ, ಕರ್ನಾಟಕ ಸರಕಾರದಲ್ಲಿಯೇ ಇಂಥದೊಂದು ಅಧಿಕೃತ ಭಾಷಾ ತರಬೇತಿ ಅಥವಾ ಸಂಪನ್ಮೂಲ ಕೇಂದ್ರ ಇಲ್ಲ ಎನ್ನುವುದು ಒಂದು ವಿಪರ್ಯಾಸ.

ಸದ್ಯಕ್ಕೆ ಇರುವ ವ್ಯವಸ್ಥೆಯಲ್ಲಿ ಇದಕ್ಕೆ ಉತ್ತರವನ್ನು ಕೊಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರ ಸಾಧ್ಯ. ಅದು ಈ ಕುರಿತು ಗಮನ ಹರಿಸಲಿ. ಕನ್ನಡ ಭಾಷೆಯ ಸಬಲೀಕರಣ ಮತ್ತು ವ್ಯಾಪಕ ಬೆಳವಣಿಗೆಗಾಗಿ ವೈಜ್ಞಾನಿಕವಾದ ಮತ್ತು ಸುಸ್ಥಿರವಾದ ಯೋಜನೆಗಳನ್ನು ಹಾಕಿಕೊಳ್ಳಲಿ ಎಂದು ಆಶಿಸುತ್ತೇನೆ.

ಇದನ್ನೂ ಓದು ನುಡಿಯಂಗಳ | ಉಚ್ಚಾರಣೆ ಎಂದರೆ ಸಾಲದೇ! ಉಚ್ಛಾರಣೆ ಎನ್ನಬೇಕೇ?

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X