ನುಡಿಯಂಗಳ | ಭರತನ ನಾಟ್ಯಶಾಸ್ತ್ರ; ಸಂವಹನದ ಪಾಠ

Date:

Advertisements

ಸಂವಹನದಲ್ಲಿ ತೊಡಗಿರುವ ವ್ಯಕ್ತಿಯು ಕೇಳುಗರೊಂದಿಗೆ ಸಹೃದಯತೆಯನ್ನು ಹೊಂದಿರಬೇಕು. ಎಂದರೆ, ಅವರೊಂದಿಗೆ ಸಮಾನವಾಗಿ ಸ್ಪಂದಿಸುವ ಮನಸ್ಸನ್ನು ಹೊಂದಿರಬೇಕು. ಸಹೃದಯತೆಯೆಂದರೆ, ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವ ಮತ್ತು ಅದನ್ನು ಮೆಚ್ಚುವ ದೊಡ್ಡ ಮನಸ್ಸು ಎಂದಷ್ಟೇ ಅರ್ಥವಲ್ಲ, ಸಂವಹನಕಾರ ಕೇಳುಗರೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದಾಗಿದೆ


ಆಗ ನಾನು ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದೆ. ಹಲವಾರು ಬಗೆಯ ರೂಪಕಗಳನ್ನು ನಾನೂ ಬರೆದು, ಇತರ ಪರಿಣತರಿಂದಲೂ ಬರೆಸಿ ರೇಡಿಯೋಜನಿಕವಾಗಿ ನಿರ್ಮಿಸಿ ಪ್ರಸಾರ ಮಾಡುತ್ತಿದ್ದೆ. “ಗೆಜ್ಜೆ ಮಾತಾಡುತಾವೋ!” ಅಂಥ ಅಪರೂಪದ ಒಂದು ಪ್ರಯೋಗವಾಗಿತ್ತು. ಭರತನಾಟ್ಯವನ್ನು ನಮ್ಮ ಶ್ರೋತೃಗಳಿಗೆ ಪರಿಚಯಿಸುವುದು ಅದರ ಉದ್ದೇಶವಾಗಿತ್ತು.

ಆಗ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ, ಸ್ವತಃ ಭರತನಾಟ್ಯ ಕಲಾವಿದರು ಮತ್ತು ಅದೇ ಕ್ಷೇತ್ರದಲ್ಲಿ ಪಿಎಚ್.ಡಿ. ಮಾಡಿದ್ದ ಡಾ.ಚೂಡಾಮಣಿ ನಂದಗೋಪಾಲ್ ಇದರ ಮೂಲಬರಹವನ್ನು ರಚಿಸಿದ್ದರು. ಸುಸಂಗತವಾದ ನಿರೂಪಣೆ, ಭರತನಾಟ್ಯದ ವಿವಿಧ ಅಂಗಗಳ ಪ್ರಯೋಗ, ಸಂಗೀತ ಮತ್ತು ಇತರ ಧ್ವನಿವಿಶೇಷಗಳ ವಿಶಿಷ್ಟ ಸಂಯೋಜನೆಯಿಂದ ನಿರ್ಮಿತವಾದ ರೂಪಕ, “ಗೆಜ್ಜೆ ಮಾತಾಡುತಾವೋ!” ಪ್ರಸಾರವಾದಾಗ, ಹಲವು ಸಹೃದಯ ಶ್ರೋತೃಗಳಿಂದ ಬಂದ ಪ್ರಶಂಸೆಯ ಸಾರಾಂಶ: “ಭರತನಾಟ್ಯವನ್ನು ಕಣ್ಣಾರೆ ನೋಡಿದ ಅನುಭವವಾಯಿತು”…

ಮುಂದೆ ಇದೇ ಬರಹವನ್ನು ರಂಗಕ್ಕೆ ಅಳವಡಿಸಿ, ಸುಮಾರು ಒಂದೂವರೆ ಗಂಟೆಯ, ನಾಟ್ಯದರ್ಪಣ ಎಂಬ ಪ್ರಯೋಗವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 10 ಪ್ರದರ್ಶನಗಳನ್ನು ನೀಡಲಾಯಿತು. ಈ ಎರಡೂ ಪ್ರಯೋಗಗಳನ್ನು ಸಾಕಾರಗೊಳಿಸುವ ಅವಧಿಯಲ್ಲಿ ನಾನು ಭರತ ಮುನಿಯ ‘ನಾಟ್ಯಶಾಸ್ತ್ರ’ದ ಪ್ರಾಥಮಿಕ ಅಧ್ಯಯನವನ್ನು ಮಾಡುವ ಅವಕಾಶ ಸಿಕ್ಕಿತ್ತು.

WhatsApp Image 2025 05 01 at 8.08.53 AM 1
ಡಾ.ಚೂಡಾಮಣಿ ನಂದಗೋಪಾಲ್

ಭರತ ಮುನಿ (ಕ್ರಿ.ಪೂರ್ವ 200 – ಕ್ರಿ.ಶ.200ರಲ್ಲಿ) ಸಂಸ್ಕೃತದಲ್ಲಿ ರಚಿಸಿರುವ, ಮೂವತ್ತಾರು ಅಧ್ಯಾಯಗಳಲ್ಲಿರುವ 6000 ದ್ವಿಪದಿಗಳಲ್ಲಿ ವ್ಯಾಪಿಸಿರುವ ಈ ನಾಟ್ಯಶಾಸ್ತ್ರವು ಮೂಲಭೂತವಾಗಿ ನೃತ್ಯ ಮತ್ತು ನಾಟಕದ ಪ್ರಯೋಗಗಳನ್ನು ಸೈದ್ಧಾಂತೀಕರಿಸುತ್ತದೆ. ನಿರ್ದೇಶಕರು, ನಟರು ಮತ್ತು ಪ್ರೇಕ್ಷಕರ ನಡುವಿನ ಸಂಬಂಧ, ನಾಟಕವನ್ನು ರಚಿಸುವುದು, ನಟನಾ ತಂತ್ರಗಳು, ವೇಷಭೂಷಣಗಳು ಮತ್ತು ಮೇಕಪ್, ಬಳಸಬೇಕಾದ ಸಂಗೀತ ಮತ್ತು ಸಂಗೀತ ವಾದ್ಯಗಳು, ವೇದಿಕೆಯ ಆಯಾಮಗಳು ಮತ್ತು ಬೆಳಕಿನೊಂದಿಗೆ ಅದರ ಅಲಂಕಾರಗಳು ಮತ್ತು ಸಭಾಂಗಣದ ಗಾತ್ರ ಮತ್ತು ಪ್ರೇಕ್ಷಕರ ಆಸನಗಳನ್ನು ಎಲ್ಲವನ್ನೂ ವಿಶದವಾಗಿ ವಿವರಿಸುವ ಭವ್ಯ ಕೃತಿ ಇದು. ಮುಖ್ಯವಾಗಿ, ರಂಗದ ಮೇಲೆ ಸೃಷ್ಟಿಗೊಳ್ಳುವ ನಾಟಕದ ವಸ್ತು, ಕಥೆ, ಭಾವ, ರಸ ಇತ್ಯಾದಿ ಎದುರಿಗೆ ಕುಳಿತಿರುವ ಸಹೃದಯ ಪ್ರೇಕ್ಷಕರಿಗೆ ತಲುಪುವ ವಿದ್ಯಮಾನದ ಕುರಿತಾದ ವಿವರವು ನನ್ನ ಮನಸ್ಸನ್ನು ಸೆಳೆದಿತ್ತು.

ಸಂವಹನಕ್ಕೆ ಅನ್ವಯಿಸಿ
ಹಾಗೆ ಸುಮಾರು ಐದು ದಶಕಗಳಿಂದ ಬೀದಿ ನಾಟಕದಿಂದ ಹಿಡಿದು ರಂಗಭೂಮಿ, ರೇಡಿಯೋ, ಟೆಲಿವಿಷನ್, ಸಿನಿಮಾ ಇತ್ಯಾದಿ ಹಲವು ಮಾಧ್ಯಮಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ನಾನು ಇತ್ತೀಚೆಗೆ ವ್ಯಕ್ತಿ-ವ್ಯಕ್ತಿ ನಡುವೆ ಮತ್ತು ವ್ಯಕ್ತಿ ಮತ್ತು ಸಮೂಹದ ನಡುವಿನ ಮುಖಾಮುಖಿ ಸಂವಹನದ ಕುರಿತು ಬಹಳ ಆಳವಾಗಿ ಅಧ್ಯಯನ, ಅಧ್ಯಾಪನ, ಬರಹ, ತರಬೇತಿ ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದೇನೆ. ನನಗೆ ನಾಟಕ ಮತ್ತು ನೃತ್ಯದ ಸಂವಹನದ ಕುರಿತು ಭರತ ಮುನಿ ಬರೆದಿರುವ ಕೆಲವು ಅಂಶಗಳು ಸಾರ್ವಜನಿಕ ಸಂವಹನದಲ್ಲಿಯೂ ಬಹಳ ಉಪಯುಕ್ತ ಎಂದು ಕಂಡುಬಂದವು. ಈ ತತ್ತ್ವವನ್ನು ಸಾರ್ವಜನಿಕ ಭಾಷಣ, ತರಬೇತಿ, ತರಗತಿಯಲ್ಲಿ ಬೋಧನೆ ಇತ್ಯಾದಿ ಸನ್ನಿವೇಶಗಳಲ್ಲಿಯೂ ಪರಿಣಾಮಕಾರಿಯಾಗಿ ಬಳಸಬಹುದು ಎಂದು ನನಗೆ ಮನನವಾಯಿತು. ಅದರಲ್ಲಿ ನನಗೆ ವಿಶಿಷ್ಟವಾಗಿ ಉಪಯುಕ್ತವಾಗಿ ಕಂಡಿದ್ದು ಎಂದರೆ, “ಸಾಧಾರಣೀಕರಣ” ಎಂಬ ಪರಿಕಲ್ಪನೆ.

“ಸಾಧಾರಣ” ಎಂದರೆ ಕನ್ನಡದಲ್ಲಿ ಸಾಮಾನ್ಯ, ಉತ್ತಮವಲ್ಲದ ಎಂಬ ಅರ್ಥವೇ ಹೆಚ್ಚು ರೂಢಿಯಲ್ಲಿದೆ. ಸಂಸ್ಕೃತದಲ್ಲಿನ ಈ “ಸಾಧಾರಣ್” ಎಂಬ ಪದವನ್ನು ವಿದ್ವಾಂಸರು ಹಲವು ಬಗೆಗಳಲ್ಲಿ ಅನುವಾದಿಸಿಕೊಂಡಿದ್ದಾರೆ, “ಅನೇಕ ಜನರದಾದ”, ‘ಸಾಮೂಹಿಕ”, ‘ಎಲ್ಲರಿಗೂ ಅನ್ವಯಿಸುವ”, ‘ಸಾಮಾನ್ಯೀಕೃತ’ ಎನ್ನುವ ಅರ್ಥಗಳು ಇವೆ. ಈ ಬಗೆಯ ಅರ್ಥದಲ್ಲಿ ಹೇಳುವುದಾದರೆ ‘ಸಾಧಾರಣೀಕರಣ’ ಎಂದರೆ, ಸಂವಹನದ ಸಾಮೂಹೀಕರಣ, ‘ಸರ್ವೋಪಯೋಗಿ ಸಂವಹನ’, ‘ಸಾರ್ವತ್ರಿಕೀಕೃತ ಸಂವಹನ’ ಎಂಬ ಅರ್ಥ ಹೊಮ್ಮುತ್ತದೆ.

Advertisements
WhatsApp Image 2025 05 01 at 8.08.54 AM

ಭರತ ಮುನಿಯ ಪ್ರಕಾರ ‘ಸಾಧಾರಣೀಕರಣ’ದ ತತ್ತ್ವಗಳು ಐದು: ಸಹೃದಯತೆ, ವಿನಿಮಯ, ರಸೋತ್ಪತ್ತಿ-ರಸಾಸ್ವಾದನೆ, ಸರಳೀಕರಣ ಮತ್ತು ಅಸಮತೆ. ಇವುಗಳನ್ನು ಸಾರ್ವಜನಿಕ ಸಂವಹನದ ಸಂದರ್ಭದಲ್ಲಿ ಕೆಳಗಿನಂತೆ ಅರ್ಥೈಸಿಕೊಳ್ಳಬಹುದು.

ಸಹೃದಯತೆ
ಸಂವಹನದಲ್ಲಿ ತೊಡಗಿರುವ ವ್ಯಕ್ತಿಯು ಕೇಳುಗರೊಂದಿಗೆ ಸಹೃದಯತೆಯನ್ನು ಹೊಂದಿರಬೇಕು. ಎಂದರೆ, ಅವರೊಂದಿಗೆ ಸಮಾನವಾಗಿ ಸ್ಪಂದಿಸುವ ಮನಸ್ಸನ್ನು ಹೊಂದಿರಬೇಕು. ಸಹೃದಯತೆಯೆಂದರೆ, ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವ ಮತ್ತು ಅದನ್ನು ಮೆಚ್ಚುವ ದೊಡ್ಡ ಮನಸ್ಸು ಎಂದಷ್ಟೇ ಅರ್ಥವಲ್ಲ, ಸಂವಹನಕಾರ ಕೇಳುಗರೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದಾಗಿದೆ. ಅವರ ಬದುಕು ಸಂಸ್ಕೃತಿ ತನ್ನದೂ ಹೌದು ಎನ್ನುವ ರೀತಿಯಲ್ಲಿ ಬದುಕಿ ಅವರ ಸಮಸ್ಯೆಗಳ ತನ್ನದೇ ಸಮಸ್ಯೆಗಳು ಎಂಬ ರೀತಿಯಲ್ಲಿ ಅನುಭವಿಸಿದಾಗ ಮಾತ್ರ ಈ ಸಹೃದಯತೆ ಸಾಧಿತವಾಗುತ್ತದೆ. ಇಂಥ ಸಮಾನ ಸ್ಪಂದನದ ‘ಸಹೃದಯತೆ’ ಸಂವಹನದ ಪ್ರಮುಖ ತತ್ವವಾಗಿದೆ. ಗಾಂಧೀಜಿ ಬದುಕಿದ ರೀತಿ, ಅವರ ಉಡುಗೆತೊಡುಗೆ, ನಡೆನುಡಿ, ಅಹಾರ ವಿಹಾರ ಇವೆಲ್ಲವನ್ನು ಗಮನಿಸಿದಾಗ ನಮಗೆ ಸಹೃದಯತೆಯ ಅರ್ಥ ತಿಳಿಯುತ್ತದೆ. ಅವರು ಇಡೀ ದೇಶದ ಜನರೊಂದಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಸಂವಹನ ಮಾಡುತ್ತಿದ್ದರಾದರೆ ಅದಕ್ಕೆ ಮೂಲ ಕಾರಣ ಈ ‘ಸಹೃದಯತೆ’ಯೇ ಸರಿ.

ವಿನಿಮಯ
ಪಾಶ್ಚಾತ್ಯ ಪರಿಕಲ್ಪನೆಯ ಪ್ರಕಾರ ಉತ್ತಮ ಸಂವಹನ ಎಂದರೆ, ‘ಮನವೊಲಿಸುವ’ ಕಾರ್ಯ ಎಂದೇ ಅರ್ಥ. ತಮ್ಮ ವಿಚಾರಗಳ ಪರವಾಗಿ, ಅಭಿಪ್ರಾಯಗಳ ಪರವಾಗಿ ಕೇಳುಗರ ಮನವೊಲಿಸುವುದು. ಆದರೆ, ಭರತನ ನಾಟ್ಯಶಾಸ್ತ್ರದಲ್ಲಿ ಬರುವ ಸಾಧಾರಣೀಕರಣದ ಎರಡನೆಯ ತತ್ವ, ವಿನಿಮಯ. ಸಂವಹನಕಾರ ಹಾಗೂ ಕೇಳುಗರು ಇವರುಗಳ ನಡುವೆ ಯಾವುದೋ ಒಂದು ನಿರ್ದಿಷ್ಟ ವಿಚಾರದ ಸಂದರ್ಭದಲ್ಲಿ ಮಾಹಿತಿ, ಜ್ಞಾನದ ವ್ಯತ್ಯಾಸವಿದೆ ಸಂವಹನಕಾರ ತನಗೆ ತಿಳಿದಿರುವ ವಿಚಾರವನ್ನು ತಿಳಿಯದ ಕೇಳುಗರಿಗೆ ಮುಟ್ಟಿಸಬೇಕು. ಎಂದರೆ, ಆತ ಅದನ್ನು ಅವರೊಂದಿಗೆ “ಹಂಚಿಕೊಳ್ಳುತ್ತಾರೆ”ಯೇ ವಿನಾ ಅವರಿಗೆ, “ಕೊಡುವುದಿಲ್ಲ” ಸಂವಹನದ ಪ್ರಕ್ರಿಯೆಯಲ್ಲಿ ಸಂವಹನಕಾರರು ಕೊಡುವುದರ ಜೊತೆಗೆ ತಾವೂ ಪಡೆಯುತ್ತಿರುತ್ತಾರೆ. ವಿನಿಮಯದ ಪ್ರಕ್ರಿಯೆಯಲ್ಲಿ ಸಂವಹನಕಾರರರೂ ಆನಂದವನ್ನು ಅನುಭವಿಸುತ್ತಿರುತ್ತಾರೆ. ಈ ಕ್ರಿಯೆಯಲ್ಲಿ ಒಂದು ಹಂತದಲ್ಲಿ ನಿಗದಿತ ‘ಮಾಹಿತಿ’ಯ ದೃಷ್ಟಿಯಿಂದ ಅಸಮಾನರಾಗಿದ್ದ ಸಂವಹನಕಾರ ಹಾಗೂ ಅವರ ಕೇಳುಗರು ಸಮಾನರಾಗಿಬಿಡುತ್ತಾರೆ.

ರಸೋತ್ಪತ್ತಿ ರಸಾಸ್ವಾದನೆ
ಯಾವುದೇ ಸಂವಹನದಲ್ಲಿ ಸಂವಹನಕಾರ ಮತ್ತು ಕೇಳುಗ ಇಬ್ಬರೂ ಅಷ್ಟೇ ಆಸಕ್ತಿಯಿಂದ ಒಳಗೊಂಡಿರುವುದು ಬಹಳ ಮುಖ್ಯ. ಸಂವಹನಕಾರ ತನ್ನ ಕೌಶಲದಿಂದ ವಿಷಯವನ್ನು ಕೇವಲ ಶುಷ್ಕವಾಗಿ ಸಂವಹನಿಸದೇ, ಅದರಲ್ಲಿ ಸೂಕ್ತ ರಸವನ್ನು ಬೆರೆಸಿ ಆಕರ್ಷಕವನ್ನಾಗಿ ಮಾಡುತ್ತಾರೆ. ಅದನ್ನು ತಾವೇ ಭಾವನಾತ್ಮಕವಾಗಿ ಅನುಭವಿಸುತ್ತಾರೆ. ಇದೇ ರಸೋತ್ಪತ್ತಿ. ಇದನ್ನು ಪರಿಣಾಮಕಾರಿಯಾಗಿ ಮಾಡಿದಾಗ ಆ ಭಾವನೆಗಳು ಸ್ವೀಕರ್ತರಲ್ಲಿಯೂ ಉದ್ದೀಪನಗೊಳ್ಳುತ್ತವೆ. ಅದು ಕರುಣೆ, ಕೋಪ, ಪಶ್ಚಾತಾಪ, ನಿರ್ಣಯ, ಅನುಕಂಪ, ಸಹಾನುಭೂತಿ, ಹಾಸ್ಯ ಹೀಗೆ ಅನೇಕ ಭಾವನೆಗಳನ್ನು ಅನುಭವಿಸುವಂತೆ ಮಾಡುತ್ತಾರೆ. ಸ್ವೀಕರ್ತ ಹೀಗೆ ಉತ್ಪನ್ನವಾದ ಭಾವನೆಗಳನ್ನು ಅನುಬವಿಸುತ್ತಾರೆ. ಅದೇ ರಸಾಸ್ವಾದ. ಸಂವಹನ ಯಶಸ್ವಿಯಾಗ್ಬೇಕು ಎಂದರೆ, ಸಂವಹನಕರ ಹಾಗು ಸ್ವೀಕರ್ತ ಇಬ್ಬರೂ ಈ ರಸೋತ್ಪತ್ತಿ ಹಾಗು ರಸಾಸ್ವಾದದ ಕ್ರಿಯೆಯಲ್ಲಿ ಬಿಚ್ಚು ಮನಸ್ಸಿನಿಂದ ಭಾಗವಹಿಸಬೇಕು. ಸಂವಹನಕಾರ ಪ್ರಚೊದಿಸುವ ಭಾವನೆಗಳು ಮೊತ್ತದಲ್ಲಿ ಅವರು ಹೇಳುತ್ತಿರುವ ವಿಚಾರಗಳನ್ನು ಸ್ವೀಕರ್ತ ಸ್ವೀಕರಿಸುದಕ್ಕೆ ಪೂರಕವಾಗಿರಬೇಕು. ಹೀಗಾದಾಗಲೇ ಸಂವಹನವು ಪೂರ್ಣಗೊಳ್ಳುವುದು, ಸಾರ್ಥಕವಾಗುವುದು.

ಸರಳೀಕರಣ
“ಸಾಧಾರಣೀಕರಣ”ದ ಇನ್ನೊಂದು ಪ್ರಮುಖ ತತ್ವವೆಂದರೆ, “ಸರಳೀಕರಣ”. ಸಂವಹನದ ಸಂದರ್ಭದಲ್ಲಿ ಒಂದು ವಿಚಾರವು ಸಂವಹನಕಾರರ ಮನಸ್ಸಿನಲ್ಲಿ ಸ್ವಲ್ಪವಾಗಿರಬಹುದು. ಅದು ಅವರ ಕಲಿತ ವಿಚಾರವಾದ್ದರಿಂದ ಅಷ್ಟರ ಮಟ್ಟಿಗೆ ಅವರಿಗೆ ಸರಳವೇ ಆಗಿರಬಹುದು. ಆದರೆ ಕೇಳುಗರಿಗೆ ಅದು ಹೊಸದು, ಆದ್ದರಿಂದ ಅದು ಅವರಿಗೆ ಸುಲಭವಾಗಿ ಅರ್ಥವಾಗುತ್ತಿರಲಿಕ್ಕಿಲ್ಲ; ಅದು ಅವರಿಗೆ ಕಠಿಣವಾಗಿ, ಕ್ಲಿಷ್ಟವಾಗಿ ಸಂಪೂರ್ಣ ಅಪರಿಚಿತವಾಗಿ ತೋರಬಹುದು. ಸಂವಹನಕಾರ ಈ ವಾಸ್ತವವನ್ನು ಗಮನಿಸಿದೇ ಹೋದರೆ ಸಂವಹನವು ಸೋತುಹೋಗುತ್ತದೆ. ಅದಕ್ಕೆ ಉತ್ತಮ ಸಂವಹನಕಾರರು ಕೇಳುಗರ ಪ್ರತಿಕ್ರಿಯೆಗಳನ್ನು ಕಣ್ಣಲ್ಲಿ ಕಣ್ಣಟ್ಟು ಗಮನಿಸುತ್ತಾರೆ. ತಾನು ಹೇಳುತ್ತಿರುವ ವಿಚಾರವು ಸ್ವೀಕರ್ತನೆಗೆ ಅರ್ಥವಾಗಲು ತೊಂದರೆಯಗುತ್ತಿದೆ ಎಂದು ಕಂಡುಬಂದರೆ, ಅವರು ಅದನ್ನು ಇನ್ನೂ ಸರಳ ಮಾಡಿ ಹೇಳಬೇಕು; ವಿಸ್ತರಿಸಿ ಹೇಳಬೇಕು; ಅಪರಿಚಿತ ಎನ್ನಿಸುವ ವಿಚಾರಗಳನ್ನು ಸ್ವೀಕರ್ತರಿಗೆ ಪರಿಚ್ಯವಿರುವ ವಿಚಾರಗಳ ಚೌಕಟ್ಟಿನಲ್ಲಿ ಹೇಳಬೇಕು; ಉದಾಹರಣೆ, ನಿದರ್ಶನ, ಉಪಕಥೆಗಳ ಮೂಲಕ ಸ್ಪಷ್ತ ಪಡಿಸಬೇಕು, ಇದೇ ಸಂವಹನದ ‘ಸರಳೀಕರಣ’ ತಂತ್ರ.

WhatsApp Image 2025 05 01 at 8.08.54 AM 1


ಅಸಮತೆ
ಯಾವ ಮಾಹಿತಿ, ವಿಷಯ, ಸಂಗತಿಯನ್ನು ಸಂವಹನ ಮಾಡಲು ನೋಡುತ್ತಿದ್ದೇವೆಯೋ ಅದರ ಮಟ್ಟಿಗೆ ಸಂವಹನಕಾರರು ಮತ್ತು ಸ್ವೀಕರ್ತರ ನಡುವೆ ಒಂದು ಮಟ್ಟದ ವ್ಯತ್ಯಾಸ ಇದ್ದೇ ಇರುತ್ತದೆ. ಹಾಗಿದ್ದಾಗ ಮಾತ್ರ ಸಂವಹನದ ಅಗತ್ಯವಿರುತ್ತದೆ. ಈ ಸನ್ನಿವೇಶವನ್ನೇ ಸಾಮಗ್ರಿಯ ಅಸಮತೆ ಎನ್ನುತ್ತೇವೆ.

ಸಂವಹನ ಕಾರ್ಯ ಒಂದು ಹಂತದಲ್ಲಿ ಪೂರ್ಣಗೊಂಡಾಗ ಹೇಳುಗರು ಮತ್ತು ಕೇಳುಗರ ನಡುವೆ ಇಂಥ ಅಸಮತೆ ಇರಬಾರದು ಎಂಬುದು ಆದರ್ಶ. ಆದರೂ ಸಂವಹನಕಾರರು ಮತ್ತು ಸ್ವೀಕರರ್ತರ ನಡುವೆ ಅಸಮತೆ ಉಳಿದಿರುತ್ತದೆ. ಸಂವಹನಕಾರರಿಗೆ ಒಂದು ವಿಷಯದ ಬಗ್ಗೆ ಗೊತ್ತಿರುವ ಎಲ್ಲದರ ಬಗ್ಗೆಯಲ್ಲ, ಬದಲಿಗೆ ಆ ಒಂದು ಅವಧಿಯಲ್ಲಿ ಸಂವಹನಿಸಲು ಹಮ್ಮಿಕೊಂಡಿರುವ ವಿಷಯದ ಮಟ್ಟಿಗೆ ಇಬ್ಬರ ನಡುವೆ ಅಸಮತೆ ಕನಿಷ್ಠವಾಗಿರಬೇಕು ಎಂಬುದು ಸಮರ್ಥ ಸಂವಹನದ ಗುರಿಯಾಗಿರಬೇಕು.
ಸಂವಹನ ಹೇಗಿರಬೇಕು.

ನಾವು Communication ಎಂಬ ಪದವನ್ನು ಕನ್ನಡದಲ್ಲಿ ‘ಸಂವಹನ’ ಎನ್ನುತ್ತೇವೆ. ನಮ್ಮ ಸಂವಹನ ಹೇಗಿರಬೇಕು ಎನ್ನುವುದನ್ನು ಈ ಪದದ ಮೂಲಕ ಅರ್ಥ ಮಾಡಿಕೊಳ್ಳಲು ನಾನು ಸ್ವಲ್ಪ ಭೌತವಿಜ್ಞಾನದ ನೆರವು ಪಡೆಯಬಯಸುತ್ತೇನೆ. ಶಾಖದ ಪ್ರಸರಣದಲ್ಲಿ ಮೂರು ವಿಧಾನಗಳಿವೆ: ವಹನ, ಸಂವಹನ ಮತ್ತು ವಿಕಿರಣ. ಘನವಸ್ತುವಿನಲ್ಲಿ ನಡೆಯುವ ‘ವಹನ’ ಎಂಬುದರಲ್ಲಿ ವಸ್ತುವಿನ ಒಂದು ತುದಿಯಲ್ಲಿ ನೀಡಲಾದ ಶಾಖವು ಆ ವಸ್ತುವಿನಲ್ಲಿ ಪರಸ್ಪರ ಅಕ್ಕಪಕ್ಕ ಇರುವ ಪರಮಾಣುಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗಾವಣೆಯಾಗಿ ಪ್ರಸರಣಗೊಳ್ಳುತ್ತದೆ. ಉದಾಹರಣೆಗೆ ಒಂದು ಕಬ್ಬಿಣದ ಕಡ್ಡಿಯನ್ನು ಕೈಯಲ್ಲಿ ಹಿಡಿದು ಅದರ ಒಂದು ತುದಿಯನ್ನು ಬೆಂಕಿಗೆ ಒಡ್ಡಿದರೆ, ಕಡ್ಡಿಯನ್ನು ಹಿಡಿದ ಕೈ ಮೊದಲು ಸುಡುವುದಿಲ್ಲ. ಸ್ವಲ್ಪ ಹೊತ್ತಾದ ನಂತರ ಕೈ ಸುಡುತ್ತದೆ. ಶಾಖವು ಕಡ್ಡಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪುತ್ತದೆ. ಇದು ವಹನ.

ಇನ್ನು ವಿಕಿರಣದಲ್ಲಿ ಶಾಖದ ಪ್ರಸರಣಕ್ಕೆ ಮಾಧ್ಯಮವೇ ಬೇಕಾಗಿಲ್ಲ. ಇದು ನಿರ್ವಾತದಲ್ಲಿಯೂ ನಡೆಯುತ್ತದೆ. ಇಲ್ಲಿ ಶಾಖದ ವರ್ಗಾವಣೆಯು ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ಅಥವಾ ಕಣಗಳ ಮೂಲಕ ನಡೆಯುತ್ತದೆ. ಅದಕ್ಕೆ ಬೆಂಕಿಯನ್ನು ನೇರವಾಗಿ ಮುಟ್ಟದೇ ಇದ್ದರೂ ಕೈಯನ್ನು ಅದರ ಒಂದಷ್ಟು ಹತ್ತಿರಕ್ಕೆ ತೆಗೆದುಕೊಂಡು ಹೋದರೆ ನಮಗೆ ಶಾಖದ ಅನುಭವವಾಗುತ್ತದೆ. ಸೂರ್ಯನ ಶಾಖವು ನಮಗೆ ತಲುಪುವುದು ಈ ವಿಕಿರಣ ಕ್ರಿಯೆಯ ಮೂಲಕವೇ.

WhatsApp Image 2025 05 01 at 8.08.54 AM 2

ಪರಿಣಾಮಕಾರಿ ಸಂವಹನದ ಕುರಿತು ಮಾತಾಡುತ್ತಿರುವ ನಮಗೆ ಇಲ್ಲಿ ಮುಖ್ಯವಾಗಿರುವುದು ಶಾಖದ ಪ್ರಸರಣದ ಸಂವಹನ ಎಂಬ ವಿಧಾನ. ಇದು ದ್ರವ ಮತ್ತು ಗಾಳಿಯಲ್ಲಿ ನಡೆಯುತ್ತದೆ. ಚಿತ್ರದಲ್ಲಿ ದ್ರವದಲ್ಲಿ ನಡೆಯುವ ಸಂವಹನ ಕ್ರಿಯೆಯನ್ನು ಗಮನಿಸಿ. ಶಾಖವು ಮೊದಲು ನೀರಿನ ಕೆಳಗಿನ ಭಾಗದಲ್ಲಿ ತಗಲುತ್ತದೆ. ಅದರ ಸಂಪರ್ಕಕ್ಕೆ ಬಂದ ನೀರಿನ ಅಣುಗಳು ಬಿಸಿಯಾಗುತ್ತವೆ. ಬಿಸಿಯಾಗಿ ಹಿಗ್ಗುತ್ತವೆ, ಹಗುರವಾಗಿ ಮೇಲಕ್ಕೇರುತ್ತವೆ. ಅವುಗಳ ಜಾಗದಲ್ಲಿ ಹೆಚ್ಚು ತಣ್ಣಗಿರುವ ಅಣುಗಳು ಕೆಳಗೆ ಬರುತ್ತವೆ. ಇವೂ ಶಾಖದ ಸಂಪರ್ಕದಲ್ಲಿ ಬಿಸಿಯಾಗಿ, ಮೇಲಕ್ಕೇರುತ್ತವೆ, ಅವುಗಳಿಗಿಂತ ತಂಪಾಗಿರುವ ಅಣುಗಳು ಕೆಳಕ್ಕೆ ಬರುತ್ತವೆ ಈ ರೀತಿಯಲ್ಲಿ ಮೇಲೆ ಕೆಳಕ್ಕೆ ನಿರಂತರ ಚಲನೆ ಉಂಟಾಗುತ್ತದೆ. ಯಾವುದೋ ಒಂದು ಘಟ್ಟದಲ್ಲಿ ಇಡೀ ನೀರಿನ ಶಾಖವು ಹೆಚ್ಚು ಕಡಿಮೆ ಸಮಾನವಾಗುತ್ತದೆ. ಮನುಷ್ಯ, ಮನುಷ್ಯರ ನಡುವಿನ ‘ಸಂವಹನ’ವೂ ಇದೇ ರೀತಿ ನಡೆಯುತ್ತದೆ. ಹಾಗೆ ನಡೆದರಷ್ಟೇ ಅದನ್ನು ಫಲಕಾರಿ ಸಂವಹನ ಎನ್ನಬಹುದು. ಇಲ್ಲವಾದರೆ ಇಲ್ಲ.

ಇದನ್ನೂ ಓದಿ ಕನ್ನಡ ನೆಲದಲ್ಲಿ ಧರ್ಮ & ಅಧ್ಯಾತ್ಯ: ನಡೆದ ದಾರಿ ಮರೆತಿದೆಯೇ ಕರ್ನಾಟಕ?

ಹೇಳುಗರು ಮತ್ತು ಕೇಳುಗರು ಎಂಬ ಇಬ್ಬರ ನಡುವೆ ನಡೆಯುವ ಸಂವಹನದ ಮಾದರಿಯನ್ನು ಗಮನಿಸೋಣ. ಇಲ್ಲಿ, ಹೇಳುಗರಿಗೆ ಏನನ್ನೋ ಹೇಳುವುದಿರುತ್ತದೆ, ಅದು ಕೇಳುಗರಲ್ಲಿ ಆ ಹೊತ್ತಿಗೆ ಇರುವುದಿಲ್ಲ. ಹೇಳುವುದನ್ನು ಕೇಳುಗರಿಗೆ ವರ್ಗಾಯಿಸಲು ಇಂತಿಷ್ಟು ಸಮಯ ಬೇಕು ಎಂದಿಟ್ಟುಕೊಳ್ಳಿ. ಹೇಳುಗರು ಸಂವಹನ ಮಾಡಲು ತೊಡಗುತ್ತಾರೆ. ಕೇಳುಗರು ಅದನ್ನು ಸ್ವಲ್ಪ ಸ್ವಲ್ಪವೇ ಗ್ರಹಿಸತೊಡಗುತ್ತಾರೆ. ಕ್ರಮೇಣ ಈ ಕೊಡುಕೊಳ್ಳುವಿಕೆ ಕ್ರಿಯೆ ಮುಂದುವರೆದು, ಆ ಅವಧಿ ಮುಗಿಯುವ ಹೊತ್ತಿಗೆ, ಉದ್ದೇಶಿತ ಮಾಹಿತಿ/ಸಂಗತಿಯು ಹೇಳುಗರು ಮತ್ತು ಕೇಳುಗರು ಇಬ್ಬರಲ್ಲಿಯೂ ಸರಿಸುಮಾರು ಒಂದೇ ಮಟ್ಟದಲ್ಲಿ ಇರುತ್ತದೆ. ಹಾಗೆ ಆದಾಗಲೇ ಇದು ಪರಿಣಾಮಕಾರಿ ಸಂವಹನವಾದೀತು.

ಉತ್ತಮ ಸಂವಹನಕಾರರಾಗಲು ನಾವು ಭರತ ಮುನಿಯ ನಾಟ್ಯಶಾಸ್ತ್ರದಿಂದ ಪಡೆದ ಈ ತತ್ತ್ವ ಮತ್ತು ತಂತ್ರಗಳನ್ನು ಅನುಸರಿಸುವುದು ಉಪಯುಕ್ತ.

ನುಡಿಯಂಗಳ | ಸಮರ್ಥ ಬರಹದ ಸಾಧನ ಲೇಖನ ಚಿಹ್ನೆಗಳು

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X