ನುಡಿಯಂಗಳ | ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ

Date:

Advertisements

ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲಿ ನೀಡುವುದು ಅತ್ಯಂತ ಫಲಪ್ರದ ಎಂದು ಹೇಳಲು ಜಗತ್ಪ್ರಸಿದ್ಧ ಭಾಷಾವಿಜ್ಞಾನಿಯೇ ಆಗಬೇಕಾಗಿಲ್ಲ. ಭಾಷಾ ಮನೋವಿಜ್ಞಾನದ ಪ್ರಕಾರ ಒಂದು ಮಗು ತನ್ನ ಐದನೇ ವರ್ಷ ವಯಸ್ಸನ್ನು ತಲುಪುವ ಹೊತ್ತಿಗೆ ತನ್ನ ಮನೆಯ ಭಾಷೆಯ 90%ರಷ್ಟು ಕಲಿತಿರುತ್ತದೆ. ಇಂಥ ಸಿದ್ಧತೆ ಮನೆಯಿಂದಲೇ ಹೊತ್ತು ತರುವ ಮಗುವಿಗೆ ಅದೇ ಭಾಷೆಯಲ್ಲಿಯೇ ಔಪಚಾರಿಕ ಶಿಕ್ಷಣವನ್ನು ಮುಂದುವರಿಸುವುದು ಅತ್ಯಂತ ತಾರ್ಕಿಕ.


ನನ್ನ ಮಗಳು ಬೀನಾ ಪಾಷಳಿಗೆ ಒಂದನೇ ತರಗತಿ ಸೇರುವ ವಯಸ್ಸಾಗುವ ಹೊತ್ತಿಗೆ ನಾನು ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದೆ. ಬಾಲವೃಂದ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದೆನಾದ್ದರಿಂದ ಮಂಗಳೂರಲ್ಲಷ್ಟೇ ಅಲ್ಲ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಶಾಲೆಯ ಮುಖ್ಯಶಿಕ್ಷಕರು ನನಗೆ ಪರಿಚಯವಿದ್ದರು. ನಾನು ಬೀನಾಳಿಗಾಗಿ ಮಂಗಳೂರಲ್ಲಿ ಒಂದು ಒಳ್ಳೆಯ ಶಾಲೆಯನ್ನು ಆಯ್ದುಕೊಂಡೆ. ಅದು ಸೇಂಟ್ ಮೇರಿಸ್ ಪ್ರಾಥಮಿಕ ಶಾಲೆ.

ಬೀನಾ ಜೊತೆ ಹೋಗಿ ಅಲ್ಲಿನ ಪ್ರಿನ್ಸಿಪಾಲರನ್ನು ಭೇಟಿ ಮಾಡಲು ಹೋದೆ. ಅವರು ನನಗೆ ನಮಸ್ಕಾರ ಹೇಳಿ, ಎದುರಿಗೆ ಇನ್ನೊಬ್ಬ ಪೋಷಕರು ಕೂತಿದ್ದರಿಂದ ಸ್ವಲ್ಪ ಹೊತ್ತು ಕಾಯಲು ಹೇಳಿದರು. ಎದುರಿಗೆ ಕುಳಿತಿದ್ದವರೂ ತಮ್ಮ ಮಗನಿಗಾಗಿ ಆ ಶಾಲೆಯಲ್ಲಿ ಒಂದನೇ ತರಗತಿಗಾಗಿ ಸೀಟು ಕೇಳಲು ಬಂದಿದ್ದರು. ಪ್ರಿನ್ಸಿಪಾಲರು ಈಗಾಗಲೇ ಸೀಟುಗಳು ಭರ್ತಿಯಾಗಿವೆ, ಕ್ಷಮಿಸಿ ಎಂದು ಹೇಳುತ್ತಿದ್ದರೂ, ಆ ಪೋಷಕರು ತುಳು ಭಾಷೆಯಲ್ಲಿ ಮಾತಾಡುತ್ತಾ, ಬಗೆಬಗೆಯಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಕೊನೆಗೆ, ಆಗ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್‍ ಅವರಿಂದ ತಂದಿದ್ದ ಶಿಫಾರಸ್ಸು ಪತ್ರವನ್ನೂ ಕೊಟ್ಟರೂ ಕೊನೆಗೆ ಪ್ರಿನ್ಸಿಪಾಲರು ಆಯಿತು, ಏನಾದರೂ ಕಾರಣಕ್ಕೆ ಒಂದು ಸೀಟು ಖಾಲಿಯಾದರೆ ನೋಡುತ್ತೇನೆ ಎಂದು ಹೇಳಿ ಅವರನ್ನು ಬೀಳ್ಕೊಟ್ಟರು.

ನಂತರ ನಾನು ಮತ್ತೊಮ್ಮೆ ಪ್ರಿನ್ಸಿಪಾಲರನ್ನು ವಂದಿಸಿ ಅವರ ಎದುರಿಗೆ ಇರುವ ಕುರ್ಚಿಯಲ್ಲಿ ಕುಳಿತೆ. ಈ ಬಾರಿ ಆಕಾಶವಾಣಿಯ ಕಾರ್ಯಕ್ರಮದ ಸಂಬಂಧ ಬಂದಿಲ್ಲ, ಮೊದಲ ಸಲ ವೈಯಕ್ತಿಕ ಮನವಿಯೊಂದಿಗೆ ಬಂದಿದ್ದೇನೆ ಎಂದು, ನನ್ನ ಮಗಳಿಗೆ ನಿಮ್ಮ ಶಾಲೆಯಲ್ಲಿ ಪ್ರಥಮ ತರಗತಿಯಲ್ಲಿ ಪ್ರವೇಶ ಬೇಕು ಎಂದು ಹೇಳಿದೆ.

ಕನ್ನಡವೆನ್ನಿ

ಅದನ್ನು ಕೇಳಿ ಅವರು ತುಂಬಾ ಪೇಚಾಡಿಕೊಂಡರು. “ನೀವು ತುಂಬಾ ತಡವಾಗಿ ಬಂದಿರಿ ಪಾಷ. ನಮ್ಮ ಶಾಲೆಯಲ್ಲಿ ಪ್ರವೇಶಾತಿಗಳು ಏಪ್ರಿಲ್ ತಿಂಗಳಲ್ಲಿಯೇ ಮುಗಿದುಹೋಗಿರುತ್ತವೆ. ಈಗ ಸ್ವಲ್ಪ ಹೊತ್ತಿನ ಹಿಂದೆ ನೋಡಿದಿರಲ್ಲ. ಅವರು ಒಂದು ಸರಕಾರಿ ಕಚೇರಿಯಲ್ಲಿ ಕಾರ್ ಡ್ರೈವರ್. ಮಗನಿಗೆ ಸೀಟು ಕೇಳಲು ಬಂದಿದ್ದರು. ನಾನು ಇಲ್ಲ ಎನ್ನಬೇಕಾಯಿತು. ಆದರೂ, ನಿಮ್ಮ ಮಗಳಲ್ಲವಾ? ನಮ್ಮ ಶಾಲೆಯಲ್ಲಿ ಸೇರುವುದು ನಮಗೂ ಸಂತೋಷ. ಏನಾದರೂ ಪ್ರಯತ್ನ ಮಾಡುತ್ತೇನೆ…”
ಅವರು ಪೇಚಾಡಿಕೊಳ್ಳುತ್ತಿದ್ದುದನ್ನು ನೋಡಿ, ನನಗೆ ತಿಳಿದು ಹೋಯಿತು. ಅವರು ನನ್ನ ಮಗಳನ್ನು ನಾನು ಅವರ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಸೇರಿಸಲು ಬಂದಿದ್ದೇನೆ ಎಂದು. ಅದೇ ಶಾಲೆಯಲ್ಲಿ ಕನ್ನಡ ಮಾಧ್ಯಮದ ವಿಭಾಗವೂ ಇತ್ತು. ಒಳ್ಳೆಯ ಶಾಲೆ. ಕನ್ನಡ ಮಾಧ್ಯಮ. ಇದು ಶ್ರೇಷ್ಠ ಸಂಯೋಗ. “ಇಲ್ಲ, ನಾನು ನನ್ನ ಮಗಳನ್ನು ಅಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಸೇರಿಸಲು ಬಂದಿರಲಿಲ್ಲ. ಮ್ಯಾಡಮ್, ಮಗಳಿಗೆ ನಾನು ಕನ್ನಡ ಮಾಧ್ಯಮದಲ್ಲಿ ಸೇರಿಸಬೇಕಾಗಿದೆ,” ಎಂದೆ.
ಕನ್ನಡ ಮಾಧ್ಯಮದಲ್ಲಿ ಸೀಟೇ!

ಅದನ್ನು ಕೇಳಿ ಪ್ರಿನ್ಸಿಪಾಲರಿಗೆ ಮೂರ್ಛೆ ಹೋಗುವಷ್ಟು ಆಶ್ಚರ್ಯವಾಯಿತು. “ಏನೂ?!! ನಿಮ್ಮ ಮಗಳಿಗೆ ಕನ್ನಡ ಮಾಧ್ಯಮದಲ್ಲಿ ಸೀಟು ಬೇಕಾ?!!” ಎಂದು ತಮ್ಮ ಕಿವಿಯನ್ನು ನಂಬಲಾರದೇ ಮತ್ತೊಮ್ಮೆ ಕೇಳಿ ಖಚಿತಪಡಿಸಿಕೊಂಡರು. ನಾನು ಕನ್ನಡ ಮಾಧ್ಯಮದಲ್ಲಿ ಸೀಟು ಕೇಳಿದ್ದಕ್ಕೆ ಅವರಿಗೆ ಅಷ್ಟೊಂದು ಅಚ್ಚರಿ ಏಕೆ ಆಗಬೇಕು ಎಂಬುದು ಆಗ ನನಗೂ ಸ್ವಲ್ಪ ಹೊಳೆಯತೊಡಗಿತು.

Advertisements
ಕನ್ನಡ ಮಾಧ್ಯಮ ೨

ಕಡೆಗೂ ಬೀನಾಳಿಗೆ ಒಂದನೇ ತರಗತಿಯಲ್ಲಿ ಪ್ರವೇಶಬೇಕಾಗಿರುವುದು ಕನ್ನಡ ಮಾಧ್ಯಮದಲ್ಲಿ ಎಂದು ಖಚಿತವಾದ ನಂತರ, ಅವರಿಗೆ ಭಯಂಕರ ಖುಶಿಯಾಗಿ, ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕಿಯನ್ನು ಕರೆದು, ನೋಡಿ… ಎಂದು ನನ್ನನ್ನು ತೋರಿಸುತ್ತಾ ಅಚ್ಚರಿಯ ಸುದ್ದಿಯನ್ನು ತಲುಪಿಸಿದಾಗ ಅವರೂ ಸಂತೋಷದಿಂದ ಹಿಗ್ಗಿದರು. ಪ್ರಿನ್ಸಿಪಾಲರು ಬೀನಾಳನ್ನು ಕರೆದುಕೊಂಡು ಶಾಲೆಯನ್ನು ತೋರಿಸಿ ಎಂದು ಕಳಿಸಿಕೊಟ್ಟರು. ಅವರು ಅಲ್ಲಿಂದ ಹೋದ ನಂತರ ಅವರು ಮತ್ತೊಮ್ಮೆ ಹೊಸದಾಗಿ ಎಂಬಂತೆ, “ಈಗ ಹೇಳಿ, ಮಿ.ಪಾಷ. ನಿಮ್ಮ ಮಗಳನ್ನು ನೀವು ಕನ್ನಡ ಮಾಧ್ಯಮ ಶಾಲೆಗೆ ಏಕೆ ಸೇರಿಸಬೇಕು?” ಎಂದು ಕೇಳಿದರು. ನಾನು ಅಷ್ಟೇ ನಿರ್ಭಾವದಿಂದ, “ನನ್ನ ಮಗಳಿಗೆ ಉತ್ತಮ ಶಿಕ್ಷಣ ಬೇಕು, ಅದಕ್ಕೆ.” ಎಂದು ಉತ್ತರಿಸಿದೆ. “ಹೌದು, ಕನ್ನಡ ಮಾಧ್ಯಮವೇ ಏಕೆ?” ಎಂದರು. ಅದಕ್ಕೆ ನಾನು, “ಸ್ವಲ್ಪ ಹೊತ್ತಿನ ಹಿಂದೆ ಒಬ್ಬ ತುಳು ಮಾತೃಭಾಷೀಯ ಪೋಷಕರೊಬ್ಬರು ನಿಮ್ಮ ಬಳಿ ಕುಳಿತು ಸೀಟಿಗಾಗಿ ಗೋಗರೆಯುತ್ತಿದ್ದರಲ್ಲ, ಅವರಿಗೆ ನೀವು ಕೇಳಬೇಕಾಗಿತ್ತು, ‘ಇಂಗ್ಲಿಷ್ ಮಾಧ್ಯಮ ಏಕೆ?’ ಎಂದು. ಬದಲಿಗೆ ನನಗೆ ಕೇಳುತ್ತಿದ್ದೀರಲ್ಲ, ‘ಕನ್ನಡ ಮಾಧ್ಯಮ ಏಕೆ ಎಂದು?”

ನನ್ನ ಈ ತರ್ಕ ಪ್ರಿನ್ಸಿಪಾಲರಲ್ಲಿ ಇನ್ನಷ್ಟು ಕೆದಕುವ ಕುತೂಹಲವನ್ನು ಮೂಡಿಸಿರಬೇಕು. ನಾನೊಬ್ಬ ಭಾಷಾವಿಜ್ಞಾನದ ವಿದ್ಯಾರ್ಥಿ ಎಂಬುದು ಅವರಿಗೆ ಗೊತ್ತಿಲ್ಲದಿದ್ದರೂ, ಆಕಾಶವಾಣಿಯಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಬ್ಬ ಹಿರಿಯ ಅಧಿಕಾರಿಯಾಗಿರುವ ನಾನು ಮಗಳಿಗೆ ಉದ್ದೇಶಸಹಿತವಾಗಿ ಕನ್ನಡ ಮಾಧ್ಯಮವನ್ನು ಪ್ರಥಮ ಆಯ್ಕೆಯನ್ನಾಗಿ ಮಾಡಿಕೊಂಡಿದ್ದರ ಹಿಂದಿನ ವೈಚಾರಿಕತೆಯನ್ನು ಅವರಿಗೆ ತಿಳಿಯಬೇಕಿತ್ತು. ಹೇಳಿ ಎಂದರು. ಕಾಫಿû ತರಿಸಿಕೊಟ್ಟರು. ನಾನು ಸ್ವಲ್ಪ ವಿಸ್ತಾರವಾಗಿ ಹೇಳಿದೆ.

ಶಿಕ್ಷಣದಲ್ಲಿ ಮಾಧ್ಯಮದ ಮಹತ್ವ

ನಮ್ಮೂರು (ಹಿಂದಿನ) ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ. ಕರಾವಳಿ ಹೊರತುಪಡಿಸಿ, ಕರ್ನಾಟಕದ ಮುಸ್ಲಿಮ್ ಸಮುದಾಯದ ಮನೆ ಮಾತು ಉರ್ದು. ನಮ್ಮ ಕುಟುಂಬವೂ ಅದಕ್ಕೆ ಹೊರತಾಗಿರಲಿಲ್ಲ. ನಾವು ಚಿಕ್ಕವರಿರುವಾಗ ನಮ್ಮ ತಂದೆ ಮುಹಿಯುದ್ದೀನ್ ಸಾಹೇಬರು ನಮ್ಮನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಅದು ಅವರಿಗೆ ಆಯ್ಕೆಯಾಗಿರಲಿಲ್ಲ, ಅನಿವಾರ್ಯವಾಗಿತ್ತು. ಏಕೆಂದರೆ ಆಗ ಹಡಗಲಿಯಲ್ಲಿ ಇಂಗ್ಲಿಷ್ ಅಥವಾ ಉರ್ದು ಮಾಧ್ಯಮ ಶಾಲೆ ಇರಲಿಲ್ಲ.
ಆದರೆ, ನಾನು ನನ್ನ ಮೂರೂ ಜನ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮಂಗಳೂರು/ಬೆಂಗಳೂರಿನಲ್ಲಿ ಉರ್ದು ಮಾಧ್ಯಮದ ಶಾಲೆಗಳೂ ಇದ್ದವು, ಇಂಗ್ಲಿಷ್ ಮಾಧ್ಯಮದ ಶಾಲೆಗಳೂ ಇದ್ದವು, ನಾನಿದ್ದ ಸ್ಥಿತಿಯಲ್ಲಿ ನನ್ನ ಮಕ್ಕಳಿಗೆ ಯಾವ ಶಾಲೆಯಲ್ಲಿ ಬೇಕಾದರೂ ಸೀಟು ಸಿಗುತ್ತಿತ್ತು. ಆದರೂ… ನಾನು ನನ್ನ ಮೂರೂ ಜನ ಮಕ್ಕಳನ್ನು ಓದಿಸಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಇದು ಅನಿವಾರ್ಯವಾಗಿರಲಿಲ್ಲ, ಪ್ರಜ್ಞಾಪೂರ್ವಕ ಆಯ್ಕೆಯಾಗಿತ್ತು.

ಮಾತೃಭಾಷೆಯಲ್ಲಿ ಶಿಕ್ಷಣ: ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲಿ ನೀಡುವುದು ಅತ್ಯಂತ ಫಲಪ್ರದ ಎಂದು ಹೇಳಲು ಜಗತ್ಪ್ರಸಿದ್ಧ ಭಾಷಾವಿಜ್ಞಾನಿಯೇ ಆಗಬೇಕಾಗಿಲ್ಲ. ಭಾಷಾ ಮನೋವಿಜ್ಞಾನದ ಪ್ರಕಾರ ಒಂದು ಮಗು ತನ್ನ ಐದನೇ ವರ್ಷ ವಯಸ್ಸನ್ನು ತಲುಪುವ ಹೊತ್ತಿಗೆ ತನ್ನ ಮನೆಯ ಭಾಷೆಯ 90%ರಷ್ಟು ಕಲಿತಿರುತ್ತದೆ. ಇಂಥ ಸಿದ್ಧತೆ ಮನೆಯಿಂದಲೇ ಹೊತ್ತು ತರುವ ಮಗುವಿಗೆ ಅದೇ ಭಾಷೆಯಲ್ಲಿಯೇ ಔಪಚಾರಿಕ ಶಿಕ್ಷಣವನ್ನು ಮುಂದುವರಿಸುವುದು ಅತ್ಯಂತ ತಾರ್ಕಿಕ. ಮಗು ಮನೆಯಲ್ಲಿ ಗಳಿಸಿಕೊಂಡಿರುವ ಭಾಷಾ ಕೌಶಲಗಳು ಎಂದರೆ, ಆಲಿಸುವುದು ಮತ್ತು ಮಾತಾಡುವುದು; ಶಾಲೆಯಲ್ಲಿ ಈ ಕೌಶಲಗಳನ್ನೂ ಸಶಕ್ತಗೊಳಿಸಬೇಕು. ಅದರ ಬುನಾದಿಯ ಮೇಲೆ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸಿಕೊಡಬೇಕು.
ಕನ್ನಡ ಭಾಷಾ ಪಠ್ಯದಲ್ಲಿ, ಮುಖ್ಯವಾಗಿ ಭಾಷಾಕೌಶಲದ ವಿವಿಧ ಆಯಾಮಗಳ ಕಲಿಕೆ, ಬಳಕೆ, ಪ್ರಬುದ್ಧತೆಯೇ ಇಲ್ಲಿ ಪ್ರಾಮುಖ್ಯವನ್ನು ಪಡೆಯಬೇಕು. ಹಾಗೆ ಸಬಲಗೊಂಡ ಭಾಷೆಯ, ಎಂದರೆ ಕನ್ನಡ ಭಾಷೆಯ ಮಾಧ್ಯಮದಲ್ಲಿ ಸಮಾಜವಿಜ್ಞಾನ, ವಿಜ್ಞಾನ ಮತ್ತು ಗಣಿತದಂಥ ವಿಷಯಗಳನ್ನು ಕಲಿಸಿದರೆ ಅವುಗಳ ಕಲಿಕೆಯೂ ಫಲಕಾರಿಯಗಿರುತ್ತವೆ ಎನ್ನುವುದು ಸಹಜ. ಕನ್ನಡ ಭಾಷಾ ಪಠ್ಯ/ಪಠ್ಯ ಪುಸ್ತಕಗಳು ಈ ಗುರಿಯನ್ನು ಪೂರೈಸುವ ಹಾಗೆ ಇವೆಯೇ ಎನ್ನುವ ಚರ್ಚೆ ಬೇರೆ. ಆದರೆ, ಮಾತೃಭಾಷೆಯಲ್ಲಿ ಮನೆಯಿಂದ ಕಲಿತುಬಂದ ಕೌಶಲಗಳನ್ನು ಮುಂದುವರೆಸಿ ಓದು, ಬರಹ ಮತ್ತು ಅದರಲ್ಲಿ ಇತರ ಶಿಕ್ಷಣ ನೀಡುವುದು ಹೆಚ್ಚು ವೈಜ್ಞಾನಿಕವಾದ ಕಾರ್ಯವಿಧಾನ. ಆದರೆ, ಸ್ವಲ್ಪ ಇರಿ… ನಮ್ಮ ಮನೆ ಮಾತು ಕನ್ನಡವಲ್ಲ, ಉರ್ದು. ಮೇಲಿನ ತರ್ಕವನ್ನು ಅನುಸರಿಸುವುದಾದರೆ ನಾನು ನಮ್ಮ ಮಕ್ಕಳನ್ನು ಸೇರಿಸಬೇಕಾಗಿದ್ದು ಉರ್ದು ಮಾಧ್ಯಮ ಶಾಲೆಗೆ. ಅದನ್ನು ಬಿಟ್ಟು ನಾನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದು ಏಕೆ?

ಮಾತೃಭಾಷೆಯೆನ್ನಬೇಡಿ, ಕನ್ನಡವೆನ್ನಿ

ನಾನೊಬ್ಬ ಭಾಷಾವಿಜ್ಞಾನದ ವಿದ್ಯಾರ್ಥಿ. ಭಾಷೆಗಳ ವಿಚಾರ ಬಂದಾಗ ನಾನು ಭಾವನೆಗಳಿಗೆ ಪಕ್ಕಾಗುವುದಕ್ಕಿಂತ ಹೆಚ್ಚಾಗಿ ವಾಸ್ತವ ತರ್ಕವನ್ನು ಅನುಸರಿಸುತ್ತೇನೆ. ನಮ್ಮ ಮಕ್ಕಳಿಗಾಗಿ ಭಾಷಾ ಮಾಧ್ಯಮವನ್ನು ಆಯ್ಕೆ ಮಾಡುವಾಗಲೂ ನಾನು ಇದನ್ನೇ ಅನುಸರಿಸಿದೆ.

ಒಂದನೆಯದಾಗಿ, ಉರ್ದು ಮಾಧ್ಯಮ ಶಾಲೆಗಳು ರಾಜ್ಯದ ಎಲ್ಲಾ ಕಡೆ, ಎಲ್ಲಾ ಪ್ರದೇಶಗಳಲ್ಲಿ ಇಲ್ಲ. ಅವು ಸಾಮಾನ್ಯವಾಗಿ ಇರುವುದು ಮುಸ್ಲಿಮ್ ಸಮುದಾಯವು ಬಹುಸಂಖ್ಯೆಯಲ್ಲಿ ವಾಸಿಸುವ ಊರು/ಬಡಾವಣೆಗಳಲ್ಲಿ. ನಾವು ಅದು ಹೇಗೋ ಮೊದಲಿಂದಲೂ ಅಂಥ ಸ್ಥಳಗಳಲ್ಲಿ ವಾಸವಿರಲಿಲ್ಲ. ಹೀಗಾಗಿ ಮನೆಯ ಹತ್ತಿರದಲ್ಲಿ ಉರ್ದು ಶಾಲೆಗಳಿರಲಿಲ್ಲ.

ಎರಡನೆಯದಾಗಿ, ಕರ್ನಾಟಕದ ಮುಸ್ಲಿಮ್ ಸಮುದಾಯದವರು ಮಾತಾಡುವ ಮನೆ ಮಾತನ್ನು ಉರ್ದು ಎಂದು ಕರೆದರೂ ಅದು ಸಾಮಾನ್ಯವಾಗಿ, ಯಾವುದನ್ನು ಶಿಷ್ಟ, ಸಾಹಿತ್ಯಕ, ದೆಹಲ್ವಿ, ಲಕ್ನೋವಿ ಎನ್ನುತ್ತೇವೆಲ್ಲ ಅಥವಾ ನಮ್ಮದೇ ರಾಜ್ಯದಲ್ಲಿ ಉರ್ದು ಮಾಧ್ಯಮ ಶಾಲೆಯ ಪಠ್ಯಪುಸ್ತಕಗಳಲ್ಲಿ ಬಳಸಲಾಗುತ್ತದೆಯಲ್ಲ, ಅಂಥ ಔಪಚಾರಿಕ ಉರ್ದುವಿಗಿಂತ ಬಹಳವೇ ಭಿನ್ನ. ನಾವು ಮಾತಾಡುವ ಉರ್ದುವನ್ನು ಸಾಮಾನ್ಯವಾಗಿ ‘ದಖನಿ’ ಎನ್ನುತ್ತೇವೆ. ಅಲ್ಲದೇ, ಎಲ್ಲಾ ಆಡುಮಾತಿನ ಭಾಷೆಗಳಿಗೆ ಸಹಜವಾಗಿರುವ ಹಾಗೆ ರಾಜ್ಯಾದ್ಯಂತ ಮಾತಾಡುವ ದಖನಿ ಉರ್ದುವಿನಲ್ಲಿ ಪ್ರಾದೇಶಿಕ ಪ್ರಬೇಧಗಳೂ ಇವೆ. ಹೀಗಾಗಿ ಕರ್ನಾಟಕದ ಮುಸ್ಲಿಮರಿಗೆ ಉರ್ದು ಮಾಧ್ಯಮ ಸ್ವಲ್ಪ ಕಷ್ಟವೇ.

ಶಾಸ್ತ್ರೀಯ ಉರ್ದು ಭಾಷೆ ಇಂಡೋಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ್ದು. ಕರ್ನಾಟಕದಲ್ಲಿ ಮಾತಾಡುವ ಉರ್ದು ಭಾಷೆಯೂ ಪ್ರಕಾರ ಅದೇ ಕುಟುಂಬಕ್ಕೆ ಸೇರಿದ್ದು ಎಂದುಕೊಂಡರೂ ಅದು ಕನ್ನಡಕ್ಕೇ ಹೆಚ್ಚು ಹತ್ತಿರವಿರುವ ಹಾಗೆ ಭಾಸವಾಗುತ್ತದೆ. ಕನ್ನಡ ಭಾಷೆಯ ಪದಗಳನ್ನು ಅನಾಯಾಸ ಬಳಸಿಕೊಳ್ಳುವುದಲ್ಲದೇ ವ್ಯಾಕರಣದ ಅಂಶಗಳು, ವಾಕ್ಯರಚನೆ, ವಾಕ್ಯದ ಧ್ವನಿ ಏರಿಳಿತ ಇವು ಆಯಾ ಪ್ರದೇಶದ ಕನ್ನಡವನ್ನು ಬಹುವಾಗಿ ಹೋಲುತ್ತವೆ. ಅದಕ್ಕಾಗಿ ನಾನು ನಮ್ಮ ಉರ್ದುವನ್ನು ಸಾಮಾನ್ಯವಾಗಿ ‘ಕುರ್ದು’ ಎಂದೂ ಕರೆಯುತ್ತೇನೆ.

ಬರವಣಿಗೆ ೩

ಅಲ್ಲದೇ, ಉರ್ದು ಭಾಷೆಯನ್ನು ಬರೆಯಲು ಬಳಸುವ, ಪರ್ಶಿಯೋ-ಅರೆಬಿಕ್ ಎನ್ನುವ ಲಿಪಿಯಲ್ಲಿ ಅಕ್ಷರ, ಕಾಗುಣಿತ, ಒತ್ತಕ್ಷರ ಇತ್ಯಾದಿ ಆಕಾರ ಮತ್ತು ತಂತ್ರಗಳು ಕನ್ನಡಕ್ಕೆ ಹೋಲಿಸಿದರೆ ಸಾಕಷ್ಟು ಬಿನ್ನ. ಅಲ್ಲದೇ, ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ ನೂರಾರು ಭಾಷೆಗಳನ್ನು ನಾವು ಬರೆಯುವುದು ಎಡದಿಂದ ಬಲಕ್ಕೆ. ಆದರೆ ಅರೇಬಿಕ್, ಪರ್ಶಿಯನ್ ಮತ್ತು ಉರ್ದು ಭಾಷೆಯ ಲಿಪಿಯನ್ನು ನಾವು ಬರೆಯುವುದು ಬಲದಿಂದ ಎಡಕ್ಕೆ. ಯಾವುದೇ ಹಂತದಲ್ಲಿ ಉರ್ದು ಭಾಷೆಯಿಂದ ಕನ್ನಡ ಅಥವಾ ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ಬಲಾಯಿಸಿದರೂ ಈ ಅಂಶವು ಮಕ್ಕಳ ಕಲಿಕೆಯ ಸುಗಮ ಮುಂದುವರಿಕೆಗೆ ಸ್ವಲ್ಪ ತೊಡಕಾಗಬಹುದು.

ಉರ್ದು ಮನೆಮಾತಿನ ಮಕ್ಕಳನ್ನು ಉರ್ದು ಮಾಧ್ಯಮ ಶಾಲೆಗೆ ಸೇರಿಸಿದರೂ ಆದಷ್ಟು ಬೇಗ (ಉದಾಹರಣೆಗೆ ಐದನೇ ತರಗತಿಯ ನಂತರ) ಅವರನ್ನು ಕನ್ನಡದ ಮುಖ್ಯವಾಹಿನಿಗೆ ತಂದು ಬಿಡಬೇಕು. ಈಗ ಉರ್ದು ಮಾಧ್ಯಮದ ಶಾಲೆಗಳು ಪ್ರಚಲಿತವಿರುವ ಪ್ರದೇಶಗಳಲ್ಲಿ ಸಮುದಾಯದ ಒತ್ತಡದಿಂದಾಗಿ ಹತ್ತನೇ ತರಗತಿಯ ವರೆಗೂ ಉರ್ದು ಮಾಧ್ಯಮದ ಶಾಲೆಗಳನ್ನು ಮುಂದುವರೆಸುವ ಪ್ರವೃತ್ತಿ ಇದೆ. ಇತ್ತೀಚೆಗೆ ಬೀದರ್ ಜಿಲ್ಲೆಯಲ್ಲಿ ಎರಡು ವರ್ಷದ ಪಿಯುಸಿಯನ್ನೂ ಉರ್ದು ಮಾಧ್ಯಮದಲ್ಲಿ ಕೊಡಮಾಡುವಂತೆ ಬೇಡಿಕೆ ಬಂದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಿದ್ದರು.
ನನ್ನ ಪ್ರಕಾರ ಈ ಬೆಳವಣಿಗೆ ಮುಸ್ಲಿಮ್ ಸಮುದಾಯದ ಮಕ್ಕಳ ಹಿತದಲ್ಲಿ ಇಲ್ಲ. ಮುಸ್ಲಿಮರಲ್ಲಿಯೇ ಶ್ರೀಮಂತ ವರ್ಗದವರು ಹೇಗೂ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತು ಶಿಕ್ಷಿತ ಸಮಾಜದ ಎಲ್ಲಾ ಸೌಕರ್ಯಗಳನ್ನು ಚೆನ್ನಾಗಿ ಬಳಸಿಕೊಂಡು ಉದ್ಧಾರವಾಗುತ್ತಾರೆ. ಆದರೆ ಅದೇ ಬಡ ಮುಸ್ಲಿಮರು ಉರ್ದು ಮಾಧ್ಯಮದಲ್ಲಿಯೇ ಪ್ರೌಢಶಾಲೆಯವರೆಗೆ ಓದಿ ಮುಖ್ಯವಾಹಿನಿಯಲ್ಲಿ ಸಮರ್ಥವಾಗಿ ಸೇರಿಕೊಳ್ಳದೇ ಹಿಂದುಳಿಯುತ್ತಾರೆ. ನನ್ನ ಮಕ್ಕಳು ಈ ಸುಳಿಯಲ್ಲಿ ಸಿಲುಕಿಕೊಳ್ಳದಂತೆ ನಾನು ನೋಡಿಕೊಳ್ಳಬೇಕಾಗಿತ್ತು.

ಕನ್ನಡ ೪


ಸಹಜ ದ್ವಿಭಾಷಿಗಳು: ಇನ್ನೊಂದು ಮುಖ್ಯವಾದ ಅಂಶವೆಂದರೆ, ಕರ್ನಾಟಕದಲ್ಲಿ ಮನೆಯಲ್ಲಿ ಉರ್ದು ಮಾತಾಡುವ ಮಕ್ಕಳು ಬಾಲ್ಯದಲ್ಲಿ ಬಹಳ ಬೇಗನೇ ಮನೆಗಳಿಂದ ಹೊರಗೆ ಆಯಾ ಪ್ರದೇಶದ ಕನ್ನಡ ಭಾಷೆಯನ್ನೂ ಕಲಿತುಬಿಡುತ್ತಾರೆ. (ದಟ್ಟವಾಗಿ ಮುಸ್ಲಿಮರೇ ಹೆಚ್ಚಾಗಿರುವ, ಇತರ ಸಮುದಾಯದ ಸಂಪರ್ಕ ಕಡಿಮೆ ಇರುವ ಮೊಹಲ್ಲಾಗಳಲ್ಲಿ ಇದು ಆಗದೇ ಇರುವ ಸನ್ನಿವೇಶವನ್ನೂ ನಾನು ಗುರುತಿಸಿದ್ದೇನೆ. ಅಲ್ಲಿನ ಮಕ್ಕಳಿಗೆ ಕನ್ನಡ ಬರುವುದಿಲ್ಲ.) ನಮ್ಮ ಮಕ್ಕಳೂ ಶಾಲೆಗೆ ಹೋಗುವ ಮುಂಚೆಯೇ ಕನ್ನಡವನ್ನು ಮನೆಮಾತು ಉರ್ದುವಿನಷ್ಟೇ ಚೆನ್ನಾಗಿ ಆಲಿಸುವುದು ಮತ್ತು ಮಾತಾಡುವುದನ್ನು ಕಲಿತುಬಿಟ್ಟಿದ್ದರು. ಒಂದರ್ಥದಲ್ಲಿ ಮನೆವಾರ್ತೆಗಿಂತ ಹೆಚ್ಚು ವಿಸ್ತೃತವಾದ ಸಾಮಾಜಿಕ ಸಂಪರ್ಕಕ್ಕೆ ಅವರ ಉರ್ದುವಿಗಿಂತ ಕನ್ನಡವೇ ಹೆಚ್ಚು ಪ್ರಯೋಜನಕಾರಿಯಾಗಿತ್ತು. (ನನ್ನದೂ ಹಾಗೆಯೇ).

ಇಂಗ್ಲಿಷ್ ಪೂರ್ತಿ ಅಪರಿಚಿತ: ಇನ್ನು ಇಂಗ್ಲಿಷ್ ಭಾಷೆ ಬಗ್ಗೆ ಮಾತಾಡುವುದಾದರೆ, ನಮ್ಮ ಮನೆಗಳಲ್ಲಿ ನಾವು ಇಂಗ್ಲಿಷನ್ನು ಆಡುಮಾತಿನ ಭಾಷೆಯಾಗಿ ಬಳಸುತ್ತಿರಲಿಲ್ಲ. ಪರಿಸರದಲ್ಲಿಯೂ ಆ ಭಾಷೆ ನಮ್ಮ ಮಕ್ಕಳ ಕಿವಿಯ ಮೇಲೆ ಬೀಳುತ್ತಿರಲಿಲ್ಲ. ಕನ್ನಡದಲ್ಲಿ ಸಿಗಬಹುದಾದ ಚೆನ್ನಾಗಿ ಆಲಿಸುವ ಮತ್ತು ಮಾತಾಡುವ ಕೌಶಲ ಇಂಗ್ಲಿಷ್ ಭಾಷೆಯಲ್ಲಿ ದಕ್ಕುತ್ತಿರಲಿಲ್ಲ. ಭಾಷಿಕವಾಗಿ ಇಂಥ ದುರ್ಬಲ ಸ್ಥಿತಿಯಲ್ಲಿರುವ ಮಕ್ಕಳನ್ನು ಸೀದಾ ತೆಗೆದುಕೊಂಡು ಹೋಗಿ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿದರೆ ಅವರ ಸ್ಥಿತಿ ಅತಂತ್ರವಾಗುವುದು ಖಂಡಿತ.

ಇನ್ನು ಶಾಲೆಯಲ್ಲಿಯೂ, ಶಿಕ್ಷಕರಿಗೂ ಇಂಗ್ಲಿಷ್ ಪ್ರಥಮ ಭಾಷೆಯಾಗಿಯೂ ಇರುವುದಿಲ್ಲವಾದ್ದರಿಂದ ಅವರಿಂದಲೂ ಮಕ್ಕಳು ಆಲಿಸುವ ಮತ್ತು ಮಾತಾಡುವ ಕೌಶಲಗಳನ್ನು ಪ್ರಯೋಜನಕಾರಿಯಾಗಿ ಕಲಿಯುವುದಿಲ್ಲ. ಆಲಿಸುವ ಮತ್ತು ಮಾತಾಡುವ ಕೌಶಲಗಳ ಭದ್ರ ಬುನಾದಿಯಿಲ್ಲದೇ ಓದುವುದು ಮತ್ತು ಬರೆಯುವುದು ಕಲಿತರೆ ಅದೂ ದುರ್ಬಲವಾಗಿರುವುದು ಖಚಿತ.
ಕನ್ನಡವಲ್ಲದ ಇತರ ಅಲ್ಪಸಂಖ್ಯಾತ ಭಾಷೆಗಳಿಗೂ ಈ ಮಾತು ಅನ್ವಯವಾಗುತ್ತದೆ. ಆಯಾ ಭಾಷಾ ಸಮುದಾಯಗಳು ಒಮ್ಮೆ ಆಲೋಚಿಸಲಿ.

ಈ ಎಲ್ಲಾ ಕಾರಣಗಳಿಗಾಗಿ ನಾವು ನಮ್ಮ ಮಕ್ಕಳನ್ನು ಉರ್ದು ಅಥವಾ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಲಿಲ್ಲ. ಆನಂದವಾಗಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದೆವು. ಪತ್ರಿಕೆ, ಪುಸ್ತಕಗಳು, ರೇಡಿಯೋ/ಟಿವಿ ಮಾಧ್ಯಮ, ಬಂದುಹೋಗುವ ಸ್ನೇಹಿತರು, ನನ್ನ ಸಾಹಿತ್ಯ ಕೃಷ್ಟಿ ಇತ್ಯಾದಿ ನೆಲೆಯಲ್ಲಿಯೂ ನಮ್ಮ ಮನೆಯಲ್ಲಿ ಕನ್ನಡದ ಫಲವತ್ತಾದ ಪರಿಸರವಿತ್ತು. ನಮ್ಮ ಮಕ್ಕಳು ಶಿಕ್ಷಣದಲ್ಲಿಯೂ ಉತ್ತಮ ಸ್ಥಿತಿಯಲ್ಲಿದ್ದರು; ಜೊತೆಗೆ ಶಾಲೆಯಲ್ಲಿ ನಡೆಯುವ ಭಾಷಾ ಮತ್ತು ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಓದಿದ ಸಿದ್ಧಗಂಗಾ ಮತ್ತು ವಿದ್ಯಾವರ್ಧಕ ಸಂಘ ಶಾಲೆಗಳೂ ಉತ್ತಮ ಶಿಕ್ಷಕರು/ಶಿಕ್ಷಣವನ್ನು ಹೊಂದಿದ್ದವು. ನಮ್ಮ ಮಕ್ಕಳು ಗೆದ್ದರು.

ಏಳರ ನಂತರ ಇಂಗ್ಲಿಷಿಗೆ

ಮೂಲ ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆಯ ಸ್ಥಾನವನ್ನು ನಾವು ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ಮಕ್ಕಳಿಗೂ ಆ ಸಾಮಥ್ರ್ಯವನ್ನು ಸಶಕ್ತವಾಗಿಯೇ ಒದಗಿಸಬೇಕಾಗಿತ್ತು. ಒಂದರಿಂದ ಏಳನೇ ತರಗತಿಯವರೆಗೆ ಸಮಾಜವಿಜ್ಞಾನ, ವಿಜ್ಞಾನ ಮತ್ತು ಗಣಿತವನ್ನು ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರು, ಜೊತೆ ಕನ್ನಡದ ಜೊತೆಗೆ (ಹಿಂದಿ ಮತ್ತು) ಇಂಗ್ಲೀಷನ್ನೂ ಭಾಷಾ ವಿಷಯವಾಗಿ ಕಲಿತಿದ್ದರು, ಮತ್ತು ಚೆನ್ನಾಗಿಯೇ ಕಲಿಯುತ್ತಿದ್ದರು.

ಕನ್ನಡ ಮಾಧ್ಯಮ ೫

ಮುಂದೆ ಇಂಗ್ಲಿಷ್ ಒಂದು ಮಾಧ್ಯಮವಾಗಿ ಸ್ವೀಕರಿಸುವಷ್ಟು ಕಲಿತಿದ್ದರು. ಆದ್ದರಿಂದ ನಾವು ಎಂಟನೇ ತರಗತಿಯಿಂದ ಅದೇ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ವಿಭಾಗಕ್ಕೆ ಸೇರಿಸಿದೆವು. ಮೊದಲ ವರ್ಷ ಎಂಟನೇ ತರಗತಿಯಲ್ಲಿ ವಿಷಯಗಳ ಕಲಿಕೆ ಸ್ವಲ್ಪ ಹಿಂಜರಿಕೆಯಾಗಿರಬಹುದು. ಒಂಭನೇ ತರಗತಿಯಲ್ಲಿ ಅದು ಚೇತರಿಸಿಕೊಂಡಿತು. ಹತ್ತನೇ ತರಗತಿಯ ಹೊತ್ತಿಗೆ ಮಕ್ಕಳು ಚೆನ್ನಾಗಿ ಸಜ್ಜಾಗಿ ಉತ್ತಮ ಅಂಕಗಳೊಂದಿಗೆ ಪಾಸಾದರು. ಅವರಿಗೆ ಕನ್ನಡವೂ ಚೆನ್ನಾಗಿ ಬರುತ್ತದೆ, ಇಂಗ್ಲಿಷೂ ಚೆನ್ನಾಗಿ ಬರುತ್ತ್ತದೆ.
ಮುಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಇಂಗ್ಲಿಷಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದರು. ಈಗ ನನ್ನ ಮಗಳು ಬೀನಾ ಪಾಷ, ಡ್ರೀಮ್ eóÉೂೀನ್ ಎಂಬ ಕಂಪನಿಯಲ್ಲಿ ರಾಷ್ಟ್ರ ಮಟ್ಟದ ಬಿಸಿನೆಸ್ ಮ್ಯಾನೇಜರ್ ಆಗಿದ್ದಾಳೆ; ಮಗ ಮನು ಪಾಷ, ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾನೆ, ಮತ್ತು ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರಿಕೆಟ್ ಅಂಪಾಯರ್ ಆಗಿದ್ದಾನೆ. ಚಿಕ್ಕ ಮಗಳು ನೀಲಿಮಾ ಪಾಷ ವಿಜಿಯೋಥೆರಪಿ ಕ್ಷೇತ್ರದಲ್ಲಿ ಪರಿಣತಿ ಪಡೆದು ಈಗ ಅಮೆರಿಕದ ಲಾಸ್ ಆ್ಯಂಜಲಿಸ್‍ನಲ್ಲಿ ವೃತ್ತಿಯಲ್ಲಿದ್ದಾಳೆ. ಉಳಿದೆಲ್ಲಾ ಸನ್ನಿವೇಶ, ಸಂಪನ್ಮೂಲಗಳೊಂದಿಗೆ ನಾವು ಅವರ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿ ಭಾಷೆ ಮತ್ತು ಭಾಷಾ ಮಾಧ್ಯಮಗಳ ಕುರಿತು ತೋರಿದ ವಿವೇಚನೆ ಪ್ರಯೋಜನಕ್ಕೆ ಬಂತು ಎಂಬುದು ನನ್ನ ಅನಿಸಿಕೆ.

ಭಾಷೆ ಮತ್ತು ಶಿಕ್ಷಣ ಮಾಧ್ಯಮದ ಕುರಿತಾದ ಭಾಷಾವೈಜ್ಞಾನಿಕ ತರ್ಕವನ್ನು ಆಧರಿಸಿದ ಈ ಪರಿಕಲ್ಪನೆ ಮತ್ತು ಅನುಸರಣೆ ಇತರ ಮಾತೃಭಾಷೆಗಳ ಕುಟುಂಬಗಳಿಗೆ ಹೇಗೆ ಸಮ್ಮತ ಅನಿಸುತ್ತವೆ; ಈ ಭಾಷಾ ನೀತಿ ಪ್ರಯೋಜನಕಾರಿಯಾಗಿದ್ದರೆ ಇದನ್ನು ಸರಕಾರದ ಮಟ್ಟದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವುದು ಇನ್ನೊಂದು ಚರ್ಚೆಯ ವಿಷಯ.

ಇದನ್ನೂ ಓದಿ ಹಿಡನ್‌ ಅಜೆಂಡಾ | ಸೆಕ್ಸ್‌ ಮತ್ತು ಪಾಲಿಟಿಕ್ಸ್‌ಗೂ ಏನು ಸಂಬಂಧ?

ಕೊನೆಯದಾಗಿ: ಮಾತೃಭಾಷೆಯಲ್ಲಿ ಶಿಕ್ಷಣ ಎಂದು ಮಾತಾಡುವಾಗ ಹೆಚ್ಚಿನವರು ‘ಮಾತೃಭಾಷೆ’ ಎಂದರೆ ‘ಕನ್ನಡ’ ಎಂದೇ ಅಂದುಕೊಂಡು ಮಾತಾಡುವ ಅಭ್ಯಾಸವಿದೆ. ಇವರೆಲ್ಲರೂ ಕನ್ನಡ ಮಾತೃಭಾಷೀಯರು. ಹೀಗಾಗಿ ಅವರ ದೃಷ್ಟಿ, ನೇರ ಮತ್ತು ಸೀಮಿತವಾಗಿರುತ್ತದೆ. ಇದೇ ‘ಮಾತೃಭಾಷೆಯಲ್ಲಿ ಶಿಕ್ಷಣ’ ಎನ್ನುವ ಮಾತನ್ನು ಕರ್ನಾಟಕದಲ್ಲಿರುವ, ಉರ್ದು, ತುಳು, ಕೊಡವ, ಬ್ಯಾರಿ, ಬಂಜಾರ ಇತ್ಯಾದಿ ಐವತ್ತಕ್ಕೂ ಹೆಚ್ಚು ಭಾಷಿಗರು ತಮ್ಮ ತಮ್ಮ ಮಾತೃಭಾಷೆಯಲ್ಲಿ ಎಂದು ತಿಳಿಯುವ ಸಂಭವವಿರುತ್ತದೆ. ಕರ್ನಾಟಕದ ಸನ್ನಿವೇಶದಲ್ಲಿ ಅದು ಸಮಂಜಸವಲ್ಲ ಎಂಬುದನ್ನು ಮೇಲೆ ವಿಸ್ತಾರವಾಗಿ ಚರ್ಚಿಸಿಲಾಗಿದೆ. ಆದ್ದರಿಂದ, ಇನ್ನು ಮೇಲಿಂದ ಶಿಕ್ಷಣದ ಮಾಧ್ಯಮದ ಬಗ್ಗೆ ಮಾತಾಡುವಾಗ, ಮಾತೃಭಾಷೆ ಎನ್ನಬೇಡಿ, ಕನ್ನಡವೆನ್ನಿ.

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X