ವಚನಯಾನ | ಮದ್ಯ ಮಾಂಸ ಸೇವಿಸುವವರನ್ನು ಹೀನವಾಗಿ ಕಾಣುವ ಜನರು ಶ್ರೇಷ್ಠರಲ್ಲ-ಅಲ್ಲಮ

Date:

Advertisements

ಮದ್ಯ ಸೇವನೆಗಿಂತ ಅಷ್ಟಮದಗಳು ಸೊಕ್ಕುವುದು ಬಲು ಕೇಡು. ಮಾಂಸ ತಿನ್ನುವುದಿಲ್ಲ ಎಂದು ನೀವು ಗರ್ವದಿಂದ ಹೇಳುತ್ತೀರಿ, ಸಂಸಾರದಲ್ಲಿ ಸ್ತ್ರೀಸಂಗ ಮಾಡುವುದು ಮಾಂಸ ಸೇವಿಸಿದಂತಲ್ಲವೇನು ಎಂದು ಅಲ್ಲಮರು ಪ್ರಶ್ನಿಸುತ್ತಾರೆ. ಅಷ್ಟಮದಗಳನ್ನು ಮೆಟ್ಟಿನಿಂತು, ಸಂಸಾರ(ಲೌಕಿಕ) ಸಂಗವನ್ನು ಬಿಟ್ಟವನೇ ನಿಜವಾಗಿ ಶ್ರೇಷ್ಠನು. ಕೇವಲ ಮದ್ಯ ಮಾಂಸ ಸೇವಿಸುವವರನ್ನು ಹೀನವಾಗಿ ಕಾಣುವ ಜನರು ಶ್ರೇಷ್ಠರಲ್ಲ ಎನ್ನುತ್ತಾರೆ ಅಲ್ಲಮರು.

ಸನಾತನ ವೈದಿಕರು ಈ ಉಪಖಂಡದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಒಳಗೊಂಡಂತೆ ಸಮಗ್ರವಾಗಿ ತಾರತಮ್ಯಪೂರಿತ ವ್ಯವಸ್ಥೆಯನ್ನು ಹುಟ್ಟಿಹಾಕಿದ್ದಾರೆ. ಮನುಷ್ಯರಲ್ಲಿ ಮೊದಲು ಗಂಡು-ಹೆಣ್ಣೆಂಬ ಭೇದಭಾವವನ್ನು ಕಲ್ಪಿಸಿದ್ದಾರೆ. ಆಮೇಲೆ ಉಚ್ಛ-ನೀಚ, ಮೇಲು-ಕೀಳು, ಶ್ರೇಷ್ಠ-ಕನಿಷ್ಠವೆಂಬ ತಾರತಮ್ಯ ರೂಪಿಸಿದ್ದಾರೆ. ಪ್ರಾಣಿಗಳಲ್ಲೂ ಹಸು ಶ್ರೇಷ್ಠ, ಎಮ್ಮೆ ಕನಿಷ್ಠ, ಬೆಕ್ಕು, ಗೂಬೆ ಅಪಶಕುನ ಇತ್ಯಾದಿ ವಿಂಗಡನೆ ಮಾಡಿದ್ದಾರೆ. ಮನುಷ್ಯನ ದೇಹದಲ್ಲಿನ ಅಂಗಾಂಗಗಳಲ್ಲೂ ತಾರತಮ್ಯ ನೀತಿ ಇದೆ. ಎಡ ಕನಿಷ್ಠ, ಬಲ ಶ್ರೇಷ್ಠವೆಂಬ ನಂಬಿಕೆ ಬಿತ್ತಿದ್ದಾರೆ. ಹಣ್ಣು, ಹೂಗಳಲ್ಲೂ ಪೂಜೆಗೆ, ಅರ್ಚನೆಗೆ ನೈವೇದ್ಯಕ್ಕೆ ಯೋಗ್ಯ ಹಾಗೂ ಅಯೋಗ್ಯವೆಂದು ಭೇದ ಭಾವ ಹುಟ್ಟುಹಾಕಲಾಗಿದೆ. ಇನ್ನು ನಿಸರ್ಗವೆ ನಿರ್ಮಿಸಿದ ದಿಕ್ಕುಗಳಲ್ಲೂ ತಾರತಮ್ಯವಿದೆ. ಉತ್ತರ ಶ್ರೇಷ್ಠ, ದಕ್ಷಿಣ ಕನಿಷ್ಠವೆಂಬ ಕಲ್ಪಿತ ಭ್ರಮೆ ಬಿತ್ತಲಾಗಿದೆ. ಮಧ್ಯ ಏಷಿಯಾದಿಂದ ವಲಸೆ ಬಂದು ಉತ್ತರ ಭಾರತದಲ್ಲಿ ನೆಲೆಸಿದ್ದ ಆರ್ಯನ್ನರು ದಕ್ಷಿಣದಲ್ಲಿರುವ ದ್ರಾವಿಡ ಮೂಲನಿವಾಸಿಗಳ ಪ್ರಜ್ಞಾವಂತಿಕೆಯನ್ನು ಸಹಿಸಿಕೊಳ್ಳಲಾಗದೆ ದಕ್ಷಿಣ ದಿಕ್ಕನ್ನೆ ಅಪಶಕುನವೆಂದು ಕತೆ ಕಟ್ಟಿದ್ದಾರೆ. ದಕ್ಷಿಣದವರು ಆರಾಧಿಸುವ ಷಣ್ಮುಖನು(ಕಾರ್ತಿಕೇಯ/ಮುರುಗನ್) ಉತ್ತರದವರು ಆರಾಧಿಸುವ ಗಣಪತಿಗಿಂತ ದಡ್ಡ ಎನ್ನುವ ಕತೆಯನ್ನು ಹೆಣೆದಿದ್ದಾರೆ. ಮನುಷ್ಯ ತಿನ್ನುವ ಆಹಾರದಲ್ಲಿಯೂ ಭೇದಭಾವ ರೂಪಿಸಲಾಗಿದೆ. ಆಹಾರಕ್ಕೂ ಧರ್ಮಕ್ಕೂ ಸಂಬಂಧ ಬೆಸೆಯಲಾಗಿದೆ. ಮೂಲದಲ್ಲಿ ಗೋಮಾಂಸ ಭಕ್ಷಕರಾಗಿದ್ದ ಆರ್ಯನ್ನರು ತದನಂತರ ಸಸ್ಯಾಹಾರಿಗಳಾಗಿ ಬದಲಾದವರು.

ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಸಂಖ್ಯೆಯ ಜನರಲ್ಲಿ ಇರದಿರುವ ಆಹಾರ ಶ್ರೇಷ್ಠತೆಯ ಭ್ರಮೆ ಭಾರತೀಯರಲ್ಲಿ ಆರ್ಯನ್ನರು ಸೃಷ್ಠಿಸಿದ್ದಾರೆ. ಅಷ್ಟೆ ಏಕೆ, ಶೇ. 70ಕ್ಕೂ ಹೆಚ್ಚಿನ ಸಂಖ್ಯೆಯ ಭಾರತೀಯರ ಆಹಾರ ಪದ್ದತಿಯನ್ನು ಅವಹೇಳನ ಮಾಡಲಾಗುತ್ತದೆ. ನಿಸರ್ಗ ನಿರ್ಮಿತ ಆಹಾರ ಸರಪಳಿಯನ್ನು ಅವಮಾನಿಸಲಾಗುತ್ತದೆ. ಆಶ್ಚರ್ಯದ ಸಂಗತಿ ಏನೆಂದರೆ ಈ ಆಹಾರ ಶ್ರೇಷ್ಠತೆಯೆಂಬ ಎಂದಿಗೂ ಗುಣಪಡಿಸಲಾಗದ ರೋಗದಿಂದ ಬಳಲುತ್ತಿರುವ ಆರ್ಯನ್ನರ ಪೂರ್ವಜರು ಗೋಮಾಂಸ ಭಕ್ಷಕರಾಗಿದ್ದುದು. ಆರ್ಯನ್ನರ ಧರ್ಮ ಗ್ರಂಥಗಳಾಗಿರುವ ವೇದ, ಶಾಸ್ತ್ರ, ಮನುಸ್ಮೃತಿಗಳಲ್ಲಿ ಗೋಮಾಂಸ ಭಕ್ಷಣೆಯ ಕುರಿತು ಅನೇಕ ಸಾಕ್ಷ್ಯಗಳು ಸಿಗುತ್ತವೆ. ಈ ಜಗತ್ತು ಕಂಡ ಶ್ರೇಷ್ಠ ವೈಚಾರಿಕ ಸಂತ ಸ್ವಾಮಿ ವಿವೇಕಾನಂದರು ಮಾಂಸಾಹಾರಿಗಳಾಗಿದ್ದರು ಹಾಗು ಅವರು ತಮ್ಮ ಕೃತಿಶ್ರೇಣಿ ಗ್ರಂಥಗಳಲ್ಲಿ ಆರ್ಯನ್ನರ ಗೋಮಾಂಸ ಭಕ್ಷಣೆಯ ಕುರಿತು ವಿವರವಾಗಿ ಬರೆದಿದ್ದಾರೆ. ಜಗತ್ತಿಗೆ ಅಹಿಂಸೆಯನ್ನು ಭೋದಿಸಿದ ಗೌತಮ ಬುದ್ದ ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಸಕಲ ಪ್ರಾಣಿಗಳೆಲ್ಲವುಗಳಲ್ಲಿ ದಯವಿರಬೇಕು, ಹಿಂಸೆ ಮಾಡಬಾರದು ಎನ್ನುವ ಬಸವ ಧರ್ಮದ ವಾಣಿ ನಾವೆಲ್ಲ ಪಾಲಿಸಬೇಕಿದೆ. ಹಿಂಸೆ ಹಾಗೂ ನೋವು ಕೇವಲ ಪ್ರಾಣಿಗಳಿಗೆ ಮಾತ್ರ ಅನುಭವಕ್ಕೆ ಬರುವುದಿಲ್ಲ ಅದು ಜೀವವಿರುವ ಸಸ್ಯಗಳಿಗೂ ಆಗುತ್ತದೆ. ಜೀವಿಗಳಿಗೆ ಪಂಚೇಂದ್ರೀಯಗಳಿದ್ದರೆ ಸಸ್ಯಗಳಿಗೆ ಒಂದಿಂದ್ರೀಯ ಇರುತ್ತದೆ ಎನ್ನುತ್ತಾರೆ ಬಸವಣ್ಣನವರು.

ಯಾರಿಗೂ ಹಿಂಸೆಯಾಗದಂತೆ ಲಿಂಗಕ್ಕರ್ಪಿಸಿ ಏನನ್ನಾದರೂ ತಿನ್ನಿ ಎನ್ನುವುದು ಬಸವವಾಣಿ. ಅಷ್ಟಕ್ಕೂ ಆಹಾರಕ್ಕೂ ಧರ್ಮಕ್ಕೂ ಸಂಬಂಧ ಕಲ್ಪಿಸುವ ಕೊಟ್ಟಿ ಕಥಾನಕಗಳು ನಂತರದ ಕಾಲಘಟ್ಟದಲ್ಲಿ ಉತ್ಪಾದನೆ ಮಾಡಲಾಗಿದೆ. ಸಸ್ಯಾಹಾರವು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎನ್ನುವ ವಾದವೂ ಒಂದೆಡೆಗೆ ಇದೆ. ಯಾವ ಆಹಾರವನ್ನು ಸೇವಿಸಬೇಕು ಎನ್ನುವ ನಿರ್ಧಾರ ಮತ್ತು ಆಯ್ಕೆ ತೀರ ವ್ಯಕ್ತಿಗತವಾದದ್ದು. ಆದರೆ ಆಹಾರವನ್ನು ಶ್ರೇಷ್ಠ, ಕನಿಷ್ಠವೆಂದು ವಿಂಗಡಿಸುವುದು ಒಂದು ವಿಕೃತವಾದ ಮನೋರೋಗ. ರಾಜಸ, ತಾಮಸ ಹಾಗೂ ಸಾತ್ವಿಕ ಆಹಾರವೆನ್ನುವ ವಿಂಗಡನೆಯು ಅತ್ಯಂತ ಹೀನ ಮನಸ್ಥಿತಿಯ ಜನರ ಸೃಷ್ಠಿ. ಸಸ್ಯಾಹಾರ ಸೇವಿಸುವವರರಲ್ಲಿ ಅತ್ಯಂತ ಕಪಟಿ, ಕ್ರೂರಿ, ಆಕ್ರಮಣಕಾರಿ, ತಾಮಸಿ, ಹಿಂಸಾವಾದಿಗಳನ್ನು ನೋಡಬಹುದು. ಮನುಷ್ಯ ಅಥವಾ ಪ್ರಾಣಿಗಳಲ್ಲಿನ ಈ ಮೇಲಿನ ಗುಣಗಳಿಗೂ ಆಹಾರಕ್ಕೂ ಯಾವುದೇ ನಂಟಿಲ್ಲ. ಹಾಗಾಗಿ ಆಹಾರದಲ್ಲಿ ಭೇದ ಭಾವ ಮಾಡಬಾರದು. ಆಹಾರದ ಕುರಿತು ತುಚ್ಛ ಭಾವ ಹೊಂದಿರುವ ನೀಚ ಮನುಷ್ಯರ ಕುರಿತು ಶರಣರು ಮಾರ್ಮಿಕವಾದ ಮಾತುಗಳನ್ನಾಡಿದ್ದಾರೆ. ಮದ್ಯ ಹಾಗೂ ಮಾಂಸಗಳನ್ನು ನಾವು ಸೇವಿಸುವುದಿಲ್ಲ. ಏಕೆಂದರೆ ನಾವು ಶ್ರೇಷ್ಠ ಕುಲದವರು ಎನ್ನುತ್ತಿದ್ದ ಆಶಾಢಭೂತಿಗಳನ್ನು ಶರಣರು ತೀಕ್ಷ್ಣವಾದ ಶಬ್ದಗಳಲ್ಲಿ ವಿಡಂಬಿಸಿದ್ದಾರೆ. ಮದ್ಯ ಹಾಗೂ ಮಾಂಸವನ್ನು ಸೇವಿಸುವವರು ಕೀಳು ಕುಲದವರು ಎಂದು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ಈ ಶ್ರೇಷ್ಠತೆಯ ವ್ಯಸನಿಗಳಿಗೆ ಶರಣರು ಬುದ್ದಿ ಹೇಳಿದ್ದಾರೆ.

ಆಹಾರ ಶ್ರೇಷ್ಠತೆಯ ವ್ಯಸನಿಗಳನ್ನು ಕುರಿತು ಅಲ್ಲಮಪ್ರಭುದೇವರ ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ:

“ಮದ್ಯ ಮಾಂಸಾದಿಗಳ
ಮುಟ್ಟೆವೆಂಬಿರಿ, ನೀವು ಕೇಳಿರೆ.
ಮದ್ಯವಲ್ಲವೇನು ಅಷ್ಟಮದಂಗಳು?
ಮಾಂಸವಲ್ಲವೇನು ಸಂಸಾರ ಸಂಗ?
ಈ ಉಭಯವನತಿಗಳೆದಾತನೆ,
ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು”

ಭಾವಾರ್ಥ

ನಾವು ಶ್ರೇಷ್ಠ ಕುಲದವರು, ಮದ್ಯ ಮಾಂಸಗಳನ್ನು ಸೇವಿಸುವುದಿಲ್ಲ ಎಂದು ಏಕೆ ಸೊಕ್ಕಿನಿಂದ ಮೆರೆಯುತ್ತೀರಿ? ನಿಮ್ಮೊಳಗಿರುವ ಅಷ್ಟಮದಗಳು ಮದ್ಯವಲ್ಲವೆ? ಮದ್ಯ ಸೇವನೆ ಮನುಷ್ಯನನ್ನು ಕ್ಷಣ ಕಾಲ ನಶೆ ಏರಿಸಿದರೆ ಅಷ್ಟಮದಗಳು ಶಾಸ್ವತವಾಗಿ ಶ್ರೇಷ್ಠತೆಯ ವ್ಯಸನಕ್ಕೆ ದೂಡುತ್ತವೆ. ಮದ್ಯ ಸೇವನೆಗಿಂತ ಅಷ್ಟಮದಗಳು ಸೊಕ್ಕುವುದು ಬಲು ಕೇಡು. ಮಾಂಸ ತಿನ್ನುವುದಿಲ್ಲ ಎಂದು ನೀವು ಗರ್ವದಿಂದ ಹೇಳುತ್ತೀರಿ, ಸಂಸಾರದಲ್ಲಿ ಸ್ತ್ರೀಸಂಗ ಮಾಡುವುದು ಮಾಂಸ ಸೇವಿಸಿದಂತಲ್ಲವೇನು ಎಂದು ಅಲ್ಲಮರು ಪ್ರಶ್ನಿಸುತ್ತಾರೆ. ಅಷ್ಟಮದಗಳನ್ನು ಮೆಟ್ಟಿನಿಂತು, ಸಂಸಾರ ಸಂಗವನ್ನು ಬಿಟ್ಟವನೇ ನಿಜವಾಗಿ ಶ್ರೇಷ್ಠನು. ಕೇವಲ ಮದ್ಯ ಮಾಂಸ ಸೇವಿಸುವವರನ್ನು ಹೀನವಾಗಿ ಕಾಣುವ ಜನರು ಶ್ರೇಷ್ಠರಲ್ಲ ಎನ್ನುತ್ತಾರೆ ಅಲ್ಲಮರು. ಮೇಲಿನ ಅಲ್ಲಮರ ವಚನವು ಮಧ್ಯ ಹಾಗೂ ಮಾಂಸ ಸೇವನೆಯ ಕುರಿತು ಹಾಗೂ ಆಹಾರ ಶ್ರೇಷ್ಠತೆಯ ವ್ಯವಸನ ಕುರಿತು ಒಂದು ಸ್ಪಷ್ಟವಾದ ಸಂದೇಶವನ್ನು ಕೊಡುತ್ತದೆ. ಮಾನವನ ಶ್ರೇಷ್ಠತೆ ಹಾಗೂ ಕನಿಷ್ಠತೆಯನ್ನು ಆಹಾರ ಪದ್ದತಿಯಿಂದಲಾಗಲಿ ಆತನ ಜಾತಿಯಿಂದಲಾಗಲಿ ಅಳೆಯುವುದಲ್ಲ, ಬದಲಾಗಿ ಆತನ ಆಚಾರ, ವಿಚಾರಗಳ ಮೇಲೆ ಶ್ರೇಷ್ಠತೆ-ಕನಿಷ್ಠತೆಗಳು ನಿರ್ಧಾರವಾಗಬೇಕು ಎನ್ನುವುದು ಅಲ್ಲಮರ ವಚನದ ಮುಖ್ಯ ಭಾವವಾಗಿದೆ.

ಟಿಪ್ಪಣಿ

ಮನುಷ್ಯ ನಾಗರಿಕತೆಯ ಪೂರ್ವದಲ್ಲಿ ಯಾವ ಭೇದ-ಭಾವವೂ ಇಲ್ಲದೆ ಬದುಕುತ್ತಿದ್ದ. ನಾಗರಿಕತೆ ಬೆಳೆದಂತೆ ಸಾಮಾಜಿಕ ಕಟ್ಟುಪಾಡುಗಳನ್ನು ಬೆಳೆಸಿಕೊಂಡು ಸಂಕುಚಿತನಾಗುತ್ತ ಸಾಗಿದ. ವ್ಯವಸ್ಥೆ ಹಾದಿ ಬಿಟ್ಟಾಗಲೆಲ್ಲ ಹೊಸ ವಿಚಾರಧಾರೆಗಳು ಹುಟ್ಟುಪಡೆದವು. ಕಾಲಮಾನದ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಬದುಕಿನಲ್ಲಿ ಬದಲಾವಣೆಗಳು ಮಾಡಿಕೊಳ್ಳುವುದು ಮನುಷ್ಯನಿಗೆ ಅನಿವಾರ್ಯವಾಯಿತು. ತಾನು ತಿನ್ನುವ ಆಹಾರವನ್ನೂ ಒಳಗೊಂಡಂತೆ ಎಲ್ಲಾ ವಸ್ತುಗಳಲ್ಲಿ ಶ್ರೇಷ್ಠತೆ ಹಾಗೂ ಕನಿಷ್ಠತೆಯನ್ನು ಸೃಷ್ಠಿಸಿದ ಮನುಷ್ಯ ವೈಚಾರಿಕವಾಗಿ ಕುಬ್ಜನಾಗುತ್ತ ನಡೆದ. ಮದ್ಯವನ್ನು ಕಂಡು ಹಿಡಿದ ಮನುಷ್ಯ ಅದನ್ನು ಸೇವಿಸುವವರು ಕನಿಷ್ಠ ಎಂದು ಹೇಳಲಾರಂಭಿಸಿದ. ಆರಂಭದಲ್ಲಿ ಹಸಿ ಮಾಂಸ, ಗೆಡ್ಡೆ ಗೆಣಸುಗಳನ್ನು ತಿಂದು ಬೆಳೆದರೂ ಮಾಂಸಾಹಾರ ಕನಿಷ್ಠವೆಂದು ಪರಿಗಣಿಸಿದ. ನೈಸರ್ಗಿಕ ಆಹಾರ ಚಕ್ರದ ಹಿಂದಿನ ನಿಸರ್ಗ ನಿಯಮವನ್ನು ಹಾಗೂ ಜೀವಜಗತ್ತಿನ ದೈನಂದಿನ ಬದುಕಿನ ವೈಜ್ಞಾನಿಕ ಕ್ರಮವನ್ನು ಗೌಣಗೊಳಿಸಿ ಸ್ಥಾಪಿತ ಧಾರ್ಮಿಕ ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಸಂಕುಚಿತತೆಯಿಂದ ಬದುಕಲಾರಂಭಿಸಿದ. ಇದು ಮನುಷ್ಯ ಮನುಷ್ಯರ ನಡುವೆ ಬಹುದೊಡ್ಡ ಕಂದಕವನ್ನೆ ಸೃಷ್ಠಿಸಿತು. ಇದನ್ನು ಸರಿಪಡಿಸಲು ಅನೇಕ ದಾರ್ಶನಿಕರು ಪ್ರಯತ್ನಿಸಿದರುˌ ಅಂತಹ ದಾರ್ಶನಿಕರಲ್ಲಿ ಅಲ್ಲಮರು ಅಗ್ರಗಣ್ಯರು. ಅಲ್ಲಮರ ಮೇಲಿನ ವಚನವು ಸ್ಪಷ್ಟವಾಗಿ ಆಹಾರ ಶ್ರೇಷ್ಠತೆಯ ಮನೋರೋಗಿಗಳ ಇಬ್ಬಂದಿತನವನ್ನು ಅನಾವರಣಗೊಳಿಸುತ್ತದೆ.

ಇದನ್ನೂ ಓದಿ

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X