ಹೊಸಿಲ ಒಳಗೆ-ಹೊರಗೆ | ದಿಕ್ಕು ತೋರಿಸುವ ಘೋಷವಾಕ್ಯಗಳು

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಚಿಂತನೆಗಳನ್ನು ಹರಿತಗೊಳಿಸುವ ಸಾಧನಗಳು ಬರೀ ಶುಷ್ಕವಾಗಿ ಇದ್ದರೆ ಸಾಲದು; ಸೃಜನಶೀಲವಾಗಿರಬೇಕು, ಪ್ರೇರಣೆ ನೀಡುವಂತಿರಬೇಕು, ಕಾರ‍್ಯಕ್ಕೆ ಇಳಿಯಲು ಮಾರ್ಗದರ್ಶನ ಕೊಡುವಂತಿರಬೇಕು. ಈ ಸಾಮೂಹಿಕ ಪ್ರಕ್ರಿಯೆಗಳು ಹೊಸ ಸಂಚಲನ ಮೂಡಿಸುತ್ತವೆ, ಸಂವೇದನೆ ಹೆಚ್ಚಿಸುತ್ತವೆ; ಅಂತಹ ಸಾಧನಗಳಲ್ಲಿ ಘೋಷವಾಕ್ಯಗಳೂ ಒಂದು

‘ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿ’ – ಇದು ವಿಶ್ವಸಂಸ್ಥೆಯು 2024 ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆಂದು ರೂಪಿಸಿದ ಘೋಷವಾಕ್ಯ. ಎರಡೇ ಪದಗಳಲ್ಲಿ ಇದು ಮಹತ್ತರವಾದ ಆಶಯವನ್ನು ಸೂಚಿಸುತ್ತದೆ. ಮಹಿಳೆಯರ ಒಳಗೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಪ್ರೇರೇಪಿಸಿದಾಗ ನಾವು ಉತ್ತಮ ಜಗತ್ತನ್ನು ರೂಪಿಸುತ್ತೇವೆ. ಇತರರ ಪ್ರೇರಣೆಯಿಂದ ಮಹಿಳೆಯರು ಒಳಗೊಳ್ಳುವುದು ಒಂದು ಹಂತವಾದರೆ, ಮಹಿಳೆಯರು ತಾವಾಗಿಯೇ ಒಳಗೊಳ್ಳಲು ಪ್ರೇರಣೆ ಪಡೆಯುವುದು ಇನ್ನೊಂದೇ ಹಂತ. ಆಗ ಅಲ್ಲಿ ನಮ್ಮದೆಂಬ ಭಾವನೆ ಹುಟ್ಟುತ್ತದೆ, ಸ್ವಂತಿಕೆ ಇರುತ್ತದೆ, ಪ್ರಸ್ತುತವಾಗಿರುತ್ತದೆ ಹಾಗೂ ಸಬಲೀಕರಣದ ಪ್ರಜ್ಞೆ ಇರುತ್ತದೆ.

ಲಿಂಗಸಮಾನತೆಯ ಕನಸನ್ನು ಸಾಕಾರಗೊಳಿಸುವ ದಾರಿಯಲ್ಲಿ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಬೇರೆ-ಬೇರೆ ಸ್ತರಗಳಲ್ಲಿ ಆದ ಚಿಂತನೆಗಳು ಹತ್ತು ಹಲವು. ವಿಶ್ವಸಂಸ್ಥೆ ಗುರುತಿಸಿ ಆಚರಿಸುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನವೂ ಹೊಸ ಚಿಂತನೆಗಳಿಗೆ, ಅವಲೋಕನಗಳಿಗೆ ಒಂದು ಜಾಗತಿಕ ವೇದಿಕೆ. 1908ರಲ್ಲಿ ಸುಮಾರು 15,000 ಮಹಿಳೆಯರು, ತಮ್ಮ ಕೆಲಸದ ಅವಧಿಯಲ್ಲಿ ಕಡಿತ, ಉತ್ತಮ ವೇತನ ಹಾಗೂ ಮತದಾನದ ಹಕ್ಕಿಗಾಗಿ ಒತ್ತಾಯಿಸಿ ನ್ಯೂಯಾರ್ಕ್ ನಗರಾದ್ಯಂತ ಮೆರವಣಿಗೆ ನಡೆಸಿದರು. ಒಂದು ವರುಷದ ನಂತರ ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೆರಿಕ ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಘೋಷಿಸಿತು. ಕಮ್ಯುನಿಸ್ಟ್ ಕಾರ್ಯಕರ್ತೆ ಮತ್ತು ಮಹಿಳಾ ಹಕ್ಕುಗಳ ಪ್ರತಿಪಾದಕಿ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆಯಿಂದ ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಮಾಡುವ ಆಲೋಚನೆ ಬಂದಿತು. 1910ರಲ್ಲಿ ಕೋಪನ್ ಹೇಗನ್‍ನಲ್ಲಿ ನಡೆದ, ದುಡಿಯುವ ಮಹಿಳೆಯರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಆಲೋಚನೆಯನ್ನು ಸೂಚಿಸಿದರು. ಅಂದಿನಿಂದ ಪ್ರತಿ ವರುಷ ವಿಶ್ವಸಂಸ್ಥೆಯು ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸುತ್ತಿದೆ. ಪ್ರತೀ ವರುಷವೂ ಆಶಯವನ್ನು ಸೂಚಿಸುವ ರೀತಿಯಲ್ಲಿ, ಕಾರ್ಯಾಚರಣೆಗೆ ದಿಶೆ ನೀಡುವ ರೀತಿಯಲ್ಲಿ ಒಂದು ಘೋಷವಾಕ್ಯವನ್ನು ಆ ಹೊತ್ತಿನ ಅಗತ್ಯ, ಸನ್ನಿವೇಶಗಳಿಗೆ ಅನುಗುಣವಾಗಿ ರೂಪಿಸಲಾಗುತ್ತದೆ.

‘ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿ’ ಅನ್ನುವುದು ನೇರ ಕಾರ್ಯಾಚರಣೆಗೆ ನೀಡುವ ಒಂದು ಕರೆಯೂ ಹೌದು. ಮಹಿಳೆಯರನ್ನು ನಿಜವಾಗಿಯೂ ಒಳಗೊಳ್ಳುವುದು ಅಂದರೆ, ಅವರ ಜನಾಂಗ, ವಯಸ್ಸು, ಸಾಮರ್ಥ್ಯ, ನಂಬಿಕೆ, ಲಿಂಗತ್ವದ ಅಸ್ಮಿತೆ ಎಂಬುದರ ವೈವಿಧ್ಯತೆಯನ್ನು ಬಹಿರಂಗವಾಗಿ, ಗೌರವಪೂರ್ಣವಾಗಿ ಅಪ್ಪಿಕೊಳ್ಳುವುದು. ಮನೆಯಿಂದ ಶುರುವಾಗಿ ಸಮುದಾಯದಲ್ಲಿ, ಕೆಲಸದಲ್ಲಿ ಹಾಗೂ ಅದರಾಚೆಗೂ ಗಮನದಲ್ಲಿ ಇರಬೇಕು. ಮನೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ, ಸರ್ಕಾರದಲ್ಲಿ ಯಾವುದೇ ನೀತಿಯನ್ನು ರೂಪಿಸುವಾಗ ಇದು ಎಲ್ಲರನ್ನೂ ಒಳಗೊಳ್ಳುತ್ತದೆಯೇ ಎಂಬುದನ್ನು ಪ್ರಶ್ನಿಸುತ್ತ ಇದ್ದರೆ ಮಾತ್ರ ಈ ಸೂಕ್ಷ್ಮಗಳು ಕಾಣುವುದಕ್ಕೆ ಸಾಧ್ಯ.

ಈ ಹಿಂದೆ ಕೂಡ ಕೆಲವು ಘೋಷವಾಕ್ಯಗಳು ಜಾಗತಿಕವಾಗಿ ಚಿಂತನೆಗೆ ಹಚ್ಚುವ ಪ್ರಯತ್ನ ಮಾಡಿವೆ. ಉದಾಹರಣೆಗೆ, 1996ರ ‘ಭೂತಕಾಲವನ್ನು ಆಚರಿಸುವುದು; ಭವಿಷ್ಯವನ್ನು ಯೋಜಿಸುವುದು,’ 1997ರ ‘ಮಹಿಳೆ ಮತ್ತು ಶಾಂತಿ,’ 1998ರ ‘ಮಹಿಳೆಯರು ಮತ್ತು ಮಾನವ ಹಕ್ಕುಗಳು,’ 2000ದ ‘ಶಾಂತಿಗಾಗಿ ಮಹಿಳೆಯರು ಒಗ್ಗೂಡುವುದು,’ 2015ರ ‘ಮಹಿಳೆಯರ ಸಬಲೀಕರಣ, ಮಾನವೀಯತೆಯ ಸಬಲೀಕರಣಗೊಳಿಸುವುದು, ಅದನ್ನು ಚಿತ್ರಿಸಿ’ ಎಂಬ ರೀತಿಯ ಘೋಷವಾಕ್ಯಗಳು ಇವೆ.

ಒಂದೆಡೆ ಹೀಗೆ ಜಾಗತಿಕ ಚಿಂತನೆಗಳು ಹರಿದು ಬರುತ್ತಿದ್ದರೆ, ಇನ್ನೊಂದೆಡೆ ಸ್ಥಳೀಯವಾಗಿಯೂ ಇಂತಹ ಚಿಂತನ-ಮಂಥನಗಳು ನಡೆಯುತ್ತಿರುತ್ತವೆ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕಳೆದ ಹನ್ನೆರಡು ವರುಷಗಳಿಂದ ಮಾರ್ಚ್ 8ರ ದಿನವನ್ನು ‘ಮಹಿಳಾ ಚೈತನ್ಯ ದಿನ’ವನ್ನಾಗಿ ಆಚರಿಸುತ್ತ ಬಂದಿದೆ. ಕೆಲಸದ ಸ್ವರೂಪ ಮತ್ತು ಆಶಯಗಳನ್ನು ಗುರುತಿಸಲು, ಹಿಡಿದಿಡಲು ಪ್ರತಿವರುಷ ಘೋಷವಾಕ್ಯವನ್ನು ರೂಪಿಸಿಕೊಳ್ಳುತ್ತದೆ. 2024ರ ಮಾರ್ಚ್‌ನಲ್ಲಿ ಉಡುಪಿಯಲ್ಲಿ ನಡೆದ ಮಹಿಳಾ ಸಮಾವೇಶದ ಘೋಷವಾಕ್ಯ – ‘ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ’ ಎಂಬುದಾಗಿತ್ತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವಳಾದ, ಗಂಡು ಹಿರಿಮೆಯನ್ನು ಧಿಕ್ಕರಿಸಿದ ಸಿರಿಗೆ ಶರಣು ಹೇಳುವುದರ ಮೂಲಕ ಆ ದಿಟ್ಟತನವನ್ನು ಮೈಗೂಡಿಸಿಕೊಳ್ಳುವ ಆಶಯ ಇದೆರಲ್ಲಿದೆ. ಜೊತೆಗೆ, ಎಲ್ಲಕ್ಕೂ ಮಿಗಿಲಾದ ಮೈತ್ರಿ ಭಾವದೊಂದಿಗೆ ಮುನ್ನಡೆಯುವ ಕರೆಯೂ ಉಂಟು.

ಮೊದಲ ಬಾರಿಗೆ ಮಂಗಳೂರಿನಲ್ಲಿ ಸಮಾವೇಶ ನಡೆದಾಗ ಮೊಳಗಿದ ಘೋಷವಾಕ್ಯ – ‘ಇನ್ನು ಸಾಕು…’ ‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇನ್ನು ಸಾಕು’ ಅಂತ ಹೇಳಿಕೊಂಡದ್ದು ಇಂದಿಗೂ ಪ್ರಸ್ತುತವಾಗಿದೆ. ಇನ್ನೊಂದು ಘೋಷವಾಕ್ಯ ‘ಮೆರವಣಿಗೆ ಹೊರಡುತ್ತೇವೆ’ ಎಂಬುದಾಗಿತ್ತು; ಇದು, ವಿನಯಾ ಒಕ್ಕುಂದ ಅವರ ಹಾಡಿನ ಸಾಲು. ಈ ಸಾಲು ವಿವಿಧ ಚಿಂತನೆಗಳಿಗೆ ಎಡೆಮಾಡಿಕೊಟ್ಟಿದೆ. ‘ಮೆರವಣಿಗೆ ಹೊರಡುತ್ತೇವೆ’ ಅಲ್ಲ, ಹೊರಟಿದ್ದೇವೆ ಅನ್ನುವ; ಅನುದಿನವೂ ಮೆರವಣಿಗೆ ಹೊರಡುತ್ತೇವೆ ಅನ್ನುವ ಭಾವವನ್ನು ಗಟ್ಟಿ ಮಾಡಿದೆ. ಈ ಮೆರವಣಿಗೆ ಕೂಡ ಒಂದು ಅದ್ಭುತವಾದಂತಹ ಅನುಭವ, ಇದು ಒಂದು ಸಮೂಹದ ಗುರುತನ್ನು ಗಟ್ಟಿ ಮಾಡುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಕೂಗಿದ ಘೋಷವಾಕ್ಯ ‘ನಮ್ಮ ಮಗಳು ಜಗದ ಬೆಳಕು; ನನ್ನ ದೇಹ, ನನ್ನ ಹಕ್ಕು.’ ನನ್ನ ದೇಹ ನನ್ನ ಹಕ್ಕು – ಒಂದು ಮಹತ್ತರವಾದ ಸಿದ್ಧಾಂತವೂ ಹೌದು. ಮಹಿಳೆಯರ ಅಧೀನತೆಯನ್ನು ಸಾಧಿಸಲು ಅವಳ ದೇಹವನ್ನು ಮುಲಾಜಿಲ್ಲದೆ ಬಳಸಲಾಗುತ್ತದೆ. ಆದರೆ ‘ನನ್ನ ದೇಹ ನನ್ನ ಹಕ್ಕು’ ಎಂಬ ಮಾತು ಬಳಸಲು ಈ ಸಮಾಜ ಮುಜುಗುರಪಡುತ್ತದೆ. ಮರ್ಯಾದೆಯ ಆತಂಕ ಕಾಡುತ್ತದೆ. ಈ ಪೊಳ್ಳು ಮರ್ಯಾದೆಗೆ ಸವಾಲು ಹಾಕುವಂತೆ, ಈ ನಿಟ್ಟಿನಲ್ಲಿ ಆಳವಾಗಿ ಚಿಂತಿಸುವಂತೆ ಮಾಡಲು ಇಂತಹ ಘೋಷವಾಕ್ಯಗಳು ಅಗತ್ಯವಾಗಿವೆ. ಮಹಿಳಾ ಚಳವಳಿಯಲ್ಲಿ ಗಮನಿಸಿದ ಒಂದು ಅಂಶ ಏನು ಅಂದರೆ, ನಿರ್ಬಂಧಗಳು ಹೆಣ್ಣಿನ ದೇಹದ ಮೇಲೆ ಚಿಕ್ಕ ವಯಸ್ಸಿನಿಂದಲೂ ಶುರುವಾಗುತ್ತದೆ. ಕೈಕಾಲು ಆಡಿಸುವುದರಿಂದ ಹಿಡಿದು ಎಲ್ಲ ದೈಹಿಕ ಚಲನವಲನಗಳನ್ನು ನಿರ್ಬಂಧಿಸಲಾಗಿದೆ. ಮುಟ್ಟು ಅನ್ನುವ ಹೆಸರಿನಲ್ಲಿ ದೇಹದ ಮೇಲೆ ಮತ್ತೆ ನಿರ್ಬಂಧ. ಎಲ್ಲ ದೌರ್ಜನ್ಯಗಳೂ, ಅದರಲ್ಲೂ ಮುಖ್ಯವಾಗಿ ಲೈಂಗಿಕ ದೌರ್ಜನ್ಯಗಳು ಕೇಂದ್ರವಾಗಿರಿಸಿರುವುದೇ ದೇಹವನ್ನು. ಪ್ರಜನನ ವಿಚಾರಕ್ಕೆ ಬಂದರೂ ಎಷ್ಟೊಂದು ವಿಚಾರದ ಮೇಲೆ ನಿರ್ಬಂಧಗಳು. ಈ ಎಲ್ಲ ನಿರ್ಬಂಧಗಳನ್ನು ಪ್ರಶ್ನಿಸುವುದೇ ‘ನನ್ನ ದೇಹ ನನ್ನ ಹಕ್ಕು.’

ಇನ್ನೊಂದು ನಮ್ಮ ಘೋಷವಾಕ್ಯ – ‘ನಮ್ಮ ಮತ ನಮ್ಮ ಆಯ್ಕೆ, ಇರಲಿ ಹೆಣ್ನೋಟದ ಹೆಗ್ಗಳಿಕೆ’ಯು – ಮಹಿಳೆಯರಾಗಿ ನಮ್ಮ ರಾಜಕೀಯ ನೆಲೆಯೇನು? ನಾವು ಅದರ ಜೊತೆಗೆ ಹೇಗೆ ಗುರುತಿಸಿಕೊಳ್ಳುತ್ತೇವೆ? ಎಂಬುದನ್ನು ಪ್ರಶ್ನೆ ಮಾಡಿಕೊಳ್ಳುವ, ಚಿಂತನೆ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿತ್ತು. ಬರೀ ಚುನಾವಣಾ ರಾಜಕೀಯ ಮಾತ್ರವಲ್ಲದೆ ಮಹಿಳಾ ಚಳವಳಿಗಳು ಮೊದಲಿಂದಲೇ ಹೇಳಿಕೊಂಡು ಬಂದಿರುವ, ‘ಪರ್ಸನಲ್ ಈಸ್ ಪೊಲಿಟಿಕಲ್’ ಎಂಬುದನ್ನೂ ಅರ್ಥಮಾಡಿಕೊಳ್ಳುವುದು ಅಗತ್ಯ. ಅಂದರೆ, ರಾಜಕೀಯ ಅನ್ನುವುದು ನಮ್ಮ ಎಲ್ಲ ಕೆಲಸಗಳಲ್ಲಿ ಇದೆ, ಅದನ್ನು ರಾಜಕೀಯ ಪ್ರಜ್ಞೆಯಾಗಿ ಗುರುತಿಸಿಕೊಳ್ಳುವುದು ಮತ್ತು ನಡೆಸಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.

ಒಕ್ಕೂಟದ ಚಿಂತನೆಗಳು ಹರಿದುಬಂದ ರೀತಿಯನ್ನು ಪ್ರತಿವರುಷದ ಘೋಷವಾಕ್ಯಗಳಲ್ಲಿ ಪ್ರತಿಫಲನಗೊಳ್ಳುವುದನ್ನು ಕಾಣಬಹುದು. ‘ಸಂವಿಧಾನವೇ ಉಸಿರು, ಬಹುತ್ವವೇ ಬದುಕು’ – ನಾಲ್ಕು ಸರಳ ಪದಗಳ ಮೂಲಕ ಸುಂದರವಾದ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಇಲ್ಲಿದೆ; ಇದರ ಕಡೆ ಬದ್ಧತೆ ಬೆಳೆಸುವ ಉದ್ದೇಶವೂ ಇದರೊಳಗೆ ಅಡಗಿದೆ. ಈ ಘೋಷವಾಕ್ಯಗಳು ಹಠಾತ್ತನೆ ರೂಪುಗೊಳ್ಳುವುದಿಲ್ಲ. ಸಾಕಷ್ಟು ಸಾಮೂಹಿಕ ಚಿಂತನೆಗಳು ನಡೆಯುತ್ತವೆ. ಆಯಾಯ ಹೊತ್ತಿನ ಸಾಮಾಜಿಕ ಸ್ಥಿತಿಗತಿಗಳ ಕುರಿತು ಸಂವಾದಿಸುತ್ತ ಇವು ರೂಪುಗೊಳ್ಳುವ ಪ್ರಕ್ರಿಯೆ ಕೂಡ ಬಹಳ ಮಹತ್ವದ್ದು. ರೂಪುಗೊಂಡ ಮೇಲೆ ಇತರರೊಂದಿಗೆ ಸಂವಾದಕ್ಕೂ ಎಡೆ ಮಾಡಿಕೊಡುವ ಪ್ರಕ್ರಿಯೆ ಕೂಡ ಬಹಳ ಮಹತ್ವದ್ದು.

ಚಿಂತನೆಗಳನ್ನು ಹರಿತಗೊಳಿಸುವ ಸಾಧನಗಳು ಬರೇ ಶುಷ್ಕವಾಗಿ ಇದ್ದರೆ ಸಾಲದು; ಸೃಜನಶೀಲವಾಗಿರಬೇಕು, ಪ್ರೇರಣೆ ನೀಡುವಂತಿರಬೇಕು, ಕಾರ್ಯಕ್ಕೆ ಇಳಿಯಲು ಮಾರ್ಗದರ್ಶನ ಕೊಡುವಂತಿರಬೇಕು. ಈ ಸಾಮೂಹಿಕ ಪ್ರಕ್ರಿಯೆಗಳು ಹೊಸ ಸಂಚಲನ ಮೂಡಿಸುತ್ತವೆ, ಸಂವೇದನೆ ಹೆಚ್ಚಿಸುತ್ತವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X