ರಾಯಭಾರ | ಸೌಜನ್ಯ ಹೋರಾಟ; ಸದ್ದು ಸಾಕೇ? ರೂಪುರೇಷೆ, ಆತ್ಮಾವಲೋಕನ ಬೇಡವೇ?

Date:

Advertisements

ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕಾದುದು ನ್ಯಾಯಾಲಯದಲ್ಲಿಯೇ ಹೊರತು ಬೀದಿಗಳಲ್ಲಿ ನಡೆಯುವ ಹೋರಾಟಗಳಲ್ಲಲ್ಲ. ಬೀದಿಗಳಲ್ಲಿ ನಡೆಸುವ ಹೋರಾಟಗಳು, ಮೈದಾನಗಳಲ್ಲಿ ಹಮ್ಮಿಕೊಳ್ಳುವ ಸಮಾವೇಶಗಳು ಸಾರ್ವಜನಿಕವಾಗಿ ಅಭಿಪ್ರಾಯ ಮೂಡಿಸಬಹುದೇ ಹೊರತು, ಅವುಗಳು ನ್ಯಾಯಾಲಯದ ಮೇಲೆ ತಾತ್ವಿಕವಾಗಿ ಯಾವುದೇ ಒತ್ತಡ ನಿರ್ಮಿಸಲಾರವು.

ಒಳಿತಿನಲ್ಲಿ ಕೆಡುಕು ಕಾಣುವುದೋ, ಕೆಡುಕಿನಲ್ಲಿ ಒಳಿತು ಹುಡುಕುವುದೋ… ಇಂತಹ ಸಂದಿಗ್ಧಗಳು ನಮ್ಮ ಸುತ್ತಲಿನ ಸಾಮಾಜಿಕ ಪರಿಸರ ಹೆಚ್ಚೆಚ್ಚು ಸಂಕೀರ್ಣಗೊಂಡಷ್ಟು ನಮ್ಮ ಮುಂದೆ ಪದೇಪದೇ ಉದ್ಭವಿಸುತ್ತವೆ.

ಸಮಾಜವನ್ನು ತಲ್ಲಣಿಸುವ ಯಾವುದೇ ಘಟನೆಗಳನ್ನು ಕಪ್ಪು- ಬಿಳುಪಿನ ಮಾದರಿಯಲ್ಲಿ ಸರಿ-ತಪ್ಪುಗಳ ಗ್ರಹಿಕೆಯಲ್ಲಿ ಸುಲಭವಾಗಿ ಗ್ರಹಿಸುವ, ಅಭಿಪ್ರಾಯವನ್ನು ರೂಪಿಸಿಕೊಳ್ಳುವ ದಿನಮಾನಗಳು ಗತಕಾಲಕ್ಕೆ ಸಂದಿವೆ. ಈಗೇನಿದ್ದರೂ ಎಲ್ಲವನ್ನೂ ಕೂದಲು ಸೀಳಿ ನೋಡುವ, ಸಂಕೀರ್ಣ ಸಂಕಥನಗಳ ಮೂಲಕ ವ್ಯಾಖ್ಯಾನ, ಮರುವ್ಯಾಖ್ಯಾನಕ್ಕೆ ಒಳಪಡಿಸುವ ಕಾಲಮಾನ. ಹಾಗಾಗಿಯೇ, ಒಮ್ಮೆ ಒಂದು ಘಟನೆ ಇಲ್ಲಿ ಖಾಸಗಿ ವ್ಯಾಪ್ತಿಯನ್ನು ದಾಟಿ ಸಾರ್ವಜನಿಕ ವಲಯ ಪ್ರವೇಶಿಸಿತು ಎಂದರೆ ಅದು ನೇರ, ಸರಳ ಗ್ರಹಿಕೆಗಳಿಗೆ ದಕ್ಕುವ ವಿದ್ಯಮಾನವಾಗಿ ಉಳಿಯುವುದಿಲ್ಲ.

Advertisements

ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣ ಇದಕ್ಕೆ ಒಂದು ನಿಚ್ಚಳ ಉದಾಹರಣೆ. ಸಮಾಜ ತಲೆತಗ್ಗಿಸುವಂತಹ ಒಂದು ಹೇಯ, ಘೋರ ಅಪರಾಧ ಕಣ್ಣಮುಂದಿದೆ, ಆದರೆ, ಆ ಕೃತ್ಯಕ್ಕೆ ಕಾರಣರಾದವರನ್ನು ದಂಡಿಸುವ ಬಗೆ ಹೇಗೆ ಎನ್ನುವುದನ್ನು ತಿಳಿಯದಂತಹ ಗೊಂದಲಮಯ ಪರಿಸ್ಥಿತಿ ಪ್ರಜ್ಞಾವಂತ ಸಮಾಜದ ಮುಂದಿದೆ. ಕೃತ್ಯಕ್ಕೆ ಕಾರಣರಾದವರು ಯಾರು ಎನ್ನುವುದು ಪತ್ತೆ ಹಚ್ಚಿದರೆ ತಾನೇ ದಂಡಿಸುವ ಮಾತು ಎಂದು ಇಲ್ಲಿ ಕೇಳಬಹುದು. ವ್ಯಕ್ತಿ ಯಾರು ಎನ್ನುವುದರ ಆಧಾರದಲ್ಲಿ ಶಿಕ್ಷೆಯೇನೂ ನಿರ್ಧಾರವಾಗುವುದಿಲ್ಲ. ವ್ಯಕ್ತಿ ಎಸಗಿದ ಕೃತ್ಯಕ್ಕೆ ಆತನಿಗೆ ಶಿಕ್ಷೆಯೇ ಹೊರತು, ಆತ ಯಾರು ಎನ್ನುವುದರ ಮೇಲೆ ಕಾನೂನು ಶಿಕ್ಷೆಯನ್ನು ನಿರ್ಧರಿಸುವುದಿಲ್ಲ.

ಸೌಜನ್ಯ ಪ್ರಕರಣದಲ್ಲಿ ಆರೋಪಿ ಎಂದು ಬಂಧಿತನಾದ ವ್ಯಕ್ತಿಯನ್ನು ನ್ಯಾಯಾಲಯವು ಅನುಮಾನಕ್ಕೆ ಆಸ್ಪದವಿಲ್ಲದಂತೆ ಆತ ಆರೋಪಿಯೇ ಅಲ್ಲ, ಆತನಿಗೂ ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಡುಗಡೆ ಮಾಡಿದೆ. ಇದರ ವಿರುದ್ಧದ ಮೇಲ್ಮನವಿಯೂ ಹೈಕೋರ್ಟ್‌ನಲ್ಲಿ ತಿರಸ್ಕೃತವಾಗಿದೆ. ಹಾಗಾಗಿ, ಕೃತ್ಯವನ್ನು ಎಸಗಿದ ನೀಚರು, ಅಪರಾಧಿಗಳು ನಮ್ಮ ನಡುವೆಯೇ ಇದ್ದಾರೆ ಎನ್ನುವುದರಲ್ಲಿ ಸಾರ್ವಜನಿಕವಾಗಿ ಯಾವುದೇ ಅನುಮಾನ ಉಳಿದಿಲ್ಲ.

ಯಾವುದೇ ಅಪರಾಧ ಕೃತ್ಯ ಗೋಚರವಾದಾಗ ಪ್ರಕರಣದ ತನಿಖೆಯನ್ನು ಕೈಗೊಳ್ಳುವ ತನಿಖಾಧಿಕಾರಿಯ ಹೆಗಲ ಮೇಲೆ ಗುರುತರವಾದ ಜವಾಬ್ದಾರಿ ಇರುತ್ತದೆ. ಅಪರಾಧ ಕೃತ್ಯ ಜರುಗಿದ ನಂತರ ಕಾಲ ಸರಿದಂತೆಲ್ಲಾ ಅದರ ಲಾಭ ಅಪರಾಧವೆಸಗಿದವರಿಗೆ ಹೆಚ್ಚು, ತನಿಖೆಗೆ ಅಗತ್ಯವಾದ ಪ್ರಮುಖ ಸಾಕ್ಷ್ಯಗಳು ಸಹ ಒಂದೊಂದೇ ಕೈಜಾರಲು ತೊಡಗುತ್ತವೆ. ಹಾಗಾಗಿಯೇ, ಕಾಲನ ಹರಿವಿಗೆ ವಿರುದ್ಧವಾಗಿ ಹಿಮ್ಮುಖವಾಗಿ ಸಾಗಲು ಸಾಕ್ಷ್ಯಗಳ ನೆರವು ಬೇಕು. ಈ ಸಾಕ್ಷ್ಯಗಳ ಜಾಡು ಹಿಡಿದು ಹಿಂದೆ ಹಿಂದೆ ಸಾಗುತ್ತಾ ಅಂತಿಮವಾಗಿ ಅಪರಾಧ ಎಸಗಿದವರ ಮನೆಯ ಬಾಗಿಲು ತಲುಪಬೇಕು. ಅವರನ್ನು ಸರಳುಗಳ ಹಿಂದೆ ಸೇರಿಸಿ ನ್ಯಾಯೋಚಿತವಾದ ರೀತಿಯಲ್ಲಿ ದಂಡನೆಯಾಗುವಂತೆ ತನಿಖಾಧಿಕಾರಿ ಹಾಗೂ ಪ್ರಾಸಿಕ್ಯೂಷನ್‌ ನೋಡಿಕೊಳ್ಳಬೇಕು.

ಈ ಕಾರಣಕ್ಕೆ ಅಪರಾಧ ಕೃತ್ಯದ ತನಿಖೆಯ ವೇಳೆ ತನಿಖಾಧಿಕಾರಿ ಸಂಗ್ರಹಿಸುವ ಒಂದೊಂದು ಮಹತ್ವದ ಸಾಕ್ಷ್ಯವೂ ಅಪರಾಧಿ ಅಥವಾ ಅಪರಾಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಬಿಗಿಯಾಗಿ ಬಂಧಿಸಲು ಕಾರಣವಾಗುತ್ತವೆ. ನ್ಯಾಯಾಲಯದ ವಿಚಾರಣೆಯ ವೇಳೆ ಪ್ರಾಸಿಕ್ಯೂಷನ್‌ ವಾದಕ್ಕೆ ಶಕ್ತಿ ತುಂಬಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಾರಣವಾಗುತ್ತವೆ.

ಆದರೆ, ಸೌಜನ್ಯ ಪ್ರಕರಣದಲ್ಲಿ ಆಗಿರುವುದೇನು? ಇಲ್ಲಿ ತನಿಖಾಧಿಕಾರಿ ಸಂಗ್ರಹಿಸಿರುವ ಸಾಕ್ಷ್ಯಗಳು, ಘಟನೆಯನ್ನು ನಿರೂಪಿಸಿರುವ ರೀತಿ ತನಿಖಾಧಿಕಾರಿಯನ್ನು ಅಪರಾಧಿ ಅಥವಾ ಅಪರಾಧಿಗಳ ಮನೆಯ ಬಾಗಿಲಿಗೆ ಕರೆದೊಯ್ಯಲೇ ಇಲ್ಲ, ಬದಲಿಗೆ ಘಟನೆಗೆ ಸಂಬಂಧವೇ ಇಲ್ಲದ ಓರ್ವ ಅಮಾಯಕನ ಬಳಿಗೆ ಕರೆದೊಯ್ದಿತು! ಸಾಕ್ಷ್ಯಗಳನ್ನು ಜತನದಿಂದ ಸಂಗ್ರಹಿಸುವುದಿರಲಿ, ಸಂಗ್ರಹಿಸಿದ ಸಾಕ್ಷ್ಯವನ್ನು ಸಹ ವೈಜ್ಞಾನಿಕವಾಗಿ ವಿಧಿವಿಜ್ಞಾನ ಪರಿಶೀಲನೆಗೆ ಒಳಪಡಿಸುವುದಕ್ಕೂ ತನಿಖಾಧಿಕಾರಿಗೆ ಮರೆವು ಅಮರಿಕೊಂಡಿತ್ತು!! ಈ ಕಾರಣಕ್ಕೆ, ತನಿಖೆಯ ಉದ್ದೇಶವೇ ಇಲ್ಲಿ ಸಂಶಯಾಸ್ಪದವಾಗಿದ್ದು, ಅಪರಾಧಿಗಳು ತೆರೆಮರೆಯಲ್ಲಿ ಸುರಕ್ಷಿತವಾಗಿ ಉಳಿದಿದ್ದಾರೆ.

ಈ ಪ್ರಕರಣದಲ್ಲಿ ತನಿಖಾಧಿಕಾರಿ ಹಾದಿ ತಪ್ಪಿದರೆ? ಅಥವಾ ಅಡಿಗಡಿಗೂ ಅವರ ಮೇಲೆ ಸ್ಥಳೀಯ ಪ್ರಭಾವಿ ಮುಖಂಡರು, ಅಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಪಕ್ಷದ ಆಯಕಟ್ಟಿನಲ್ಲಿದ್ದವರು ಪ್ರಭಾವ ಬೀರಿ ತನಿಖೆಯ ದಿಕ್ಕು ತಪ್ಪುವಂತೆ ಮಾಡಿಸಿದರೆ ಎನ್ನುವ ಪ್ರಶ್ನೆ ಹಾಗೆ ಉಳಿದಿದೆ. ಅದೇನೇ ಇದ್ದರೂ ತನಿಖೆ ನಡೆದ ಪರಿ, ವಿಚಾರಣೆ ಎಲ್ಲವೂ ಸಾರ್ವಜನಿಕವಾಗಿ ಲಭ್ಯವಿದೆ, ಚರ್ಚೆಗೊಳಪಟ್ಟಿದೆ. ಇದನ್ನೆಲ್ಲಾ ಆಧರಿಸಿ ಪ್ರಕರಣದ ತನಿಖೆಯ ಸುತ್ತ ಬೆಳಕು ಚೆಲ್ಲುವಂತಹ ವಿಡಿಯೋ ಒಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿ, ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆಗೊಳಗಾಯಿತು. ಆ ಮೂಲಕ ಇಡೀ ಪ್ರಕರಣ ಮತ್ತೊಮ್ಮೆ ಚರ್ಚೆಯ ಕೇಂದ್ರಕ್ಕೆ ಬಂದಿತು.

Dhoota Sameer MD d5c3e0

ಈ ಮೊದಲೇ ಹೇಳಿದಂತೆ ದಾಖಲೆಯ ವೀಕ್ಷಣೆಗೊಳಗಾದ ವಿಡಿಯೋದಲ್ಲಿ ಹೊಸ ಅಂಶಗಳೇನೂ ಇರಲಿಲ್ಲ. ವಿಡಿಯೋದಲ್ಲಿನ ಬಹುತೇಕ ಅಂಶಗಳು ಸಾರ್ವಜನಿಕವಾಗಿ ಚರ್ಚೆಗೊಳಪಟ್ಟಿರುವಂತಹವು, ಇಲ್ಲವೇ ವಿಚಾರಣೆಯ ವೇಳೆ ನ್ಯಾಯಾಲಯದ ಮುಂದೆ ಬೆಳಕಿಗೆ ಬಂದಿರುವಂಥವು. ಇದೆಲ್ಲವನ್ನೂ ಈ ವಿಡಿಯೋದ ನಿರ್ಮಾತೃವಾದ ಯೂಟ್ಯೂಬರ್‌ ಸಮೀರ್‌ ತನ್ನದೇ ಆದ ನಿರೂಪಣೆಯಲ್ಲಿ ಸಂಕಲಿಸಿ ಜನರ ಮುಂದಿರಿಸಿದ್ದ. ಪ್ರಕರಣದಲ್ಲಿ ನ್ಯಾಯದಾನ ಮರೀಚಿಕೆಯಾಗಲು ಕಾರಣವಾದ ಅಂಶಗಳು, ಅದರ ಹಿಂದಿನ ಉದ್ದೇಶ, ಅದಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾದ ಪ್ರಭಾವಿ ಧಾರ್ಮಿಕ ಮುಖಂಡರ ಕುಟುಂಬದ ಸುತ್ತಲಿನ ವಿವಾದಗಳು ಮುಂತಾದ ವಿಷಯಗಳನ್ನು ಜನಸಾಮಾನ್ಯರಿಗೆ ಒಂದೇ ಗುಕ್ಕಿಗೆ ದಕ್ಕುವಂತೆ ಸರಳ ಶೈಲಿಯಲ್ಲಿ ನಿರೂಪಿಸಿದ್ದ.

ಈ ವಿಡಿಯೋ ಸಾಮಾಜಿಕ ಸಂಚಲನ ಸೃಷ್ಟಿಸತೊಡಗಿದಂತೆ, ಇದರ ಸುತ್ತಲಿನ ಚರ್ಚೆಯನ್ನು ಹಾದಿ ತಪ್ಪಿಸುವ ಪ್ರಯತ್ನಗಳೂ ಬಿರುಸಾಗಿ ನಡೆದವು. ಸಮೀರ್‌ ಎತ್ತಿದ್ದ ವಿಷಯ ಹಿನ್ನೆಲೆಗೆ ಸರಿದು ಆತನ ಧರ್ಮ, ಆತ ಹಿಂದೂ ಧಾರ್ಮಿಕ ಕ್ಷೇತ್ರವೊಂದರ ಮೇಲೆ ಹಿಡಿತ ಹೊಂದಿರುವ ಮತ್ತೊಂದು ಅಲ್ಪ ಸಂಖ್ಯಾತ ಧರ್ಮದ ಕುಟುಂಬದ ಬಗ್ಗೆ ಬೆರಳು ಮಾಡಿದ್ದಾನೆ ಎನ್ನುವ ವಿಷಯಗಳು ಮುಂಚೂಣಿಗೆ ಬಂದವು. ಇದು ಹಿಂದೂ ಧಾರ್ಮಿಕ ಕ್ಷೇತ್ರವೊಂದರ ಪಾವಿತ್ರ್ಯಕ್ಕೆ ಮಸಿ ಬಳಿಯಲು, ಮುಸಲ್ಮಾನ ವ್ಯಕ್ತಿಯೊಬ್ಬ ತನ್ನ ಧರ್ಮದ ಮೂಲಭೂತವಾದಿಗಳ ಚಿತಾವಣೆಯಿಂದ ನಡೆಸಿರುವ ಪ್ರಯತ್ನ ಎಂದು ಹುಯಿಲೆಬ್ಬಿಸವ ಪ್ರಯತ್ನಗಳು ನಡೆದವು. ಸಮೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಯಿತು, ಅಷ್ಟೇ ವೇಗದಲ್ಲಿ ಅವನಿಗೆ ನ್ಯಾಯಾಲಯದಿಂದ ರಕ್ಷಣೆಯೂ ದೊರೆಯಿತು ಎನ್ನುವುದು ಸಮಾಧಾನದ ಸಂಗತಿ.

ಗಮನಿಸಬೇಕಾದ ಅಂಶವೆಂದರೆ, ಸಮೀರ್‌ ವಿರುದ್ಧ ನಡೆದ ಅಪಪ್ರಚಾರವನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿದ್ದು ಸೌಜನ್ಯಗೆ ನ್ಯಾಯ ಕೊಡಿಸಬೇಕು ಎಂದು ಹೋರಾಡುತ್ತಿರುವ ಮುಖ್ಯವಾಹಿನಿಯಲ್ಲಿಲ್ಲದ ಕೆಲ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ಗುಂಪುಗಳು. ಇಂತಹ ಚಿತಾವಣೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ಸಮೀರ್‌ನನ್ನು ಇವರು ಸಮರ್ಥಿಸಿಕೊಂಡಿದ್ದು ಮಾತ್ರವೇ ಅಲ್ಲದೆ, ಆತನನ್ನು ಕಾನೂನು ಚೌಕಟ್ಟಿನಲ್ಲಿ ರಕ್ಷಿಸುವ ಪ್ರಯತ್ನಗಳಿಗೂ ಮುಂದಾದರು.

ಸೌಜನ್ಯ ಪ್ರಕರಣವನ್ನು ಸಾಗಿ ಬಂದಿರುವ ಹಾದಿ ಗಮನಿಸಿದರೆ, ಈ ಲೇಖನದ ಆರಂಭದಲ್ಲಿ ಹೇಳಿದ ಮಾತುಗಳು ದನಿಸುವುದು ಏನು ಎನ್ನುವುದು ಸ್ಪಷ್ಟವಾಗುತ್ತದೆ. ಈ ಪ್ರಕರಣದ ಕೇಂದ್ರದಲ್ಲಿ ಹಿಂದೂ ಧರ್ಮಕ್ಷೇತ್ರವಿದೆ, ಅಲ್ಲಿನ ದೇವಳದ ಮೇಲೆ ಹಿಡಿತ ಹೊಂದಿರುವ ಕುಟುಂಬದ ಮೇಲೆ ಗುರುತರ ಆರೋಪಗಳಿವೆ. ಸೌಜನ್ಯ ಹತ್ಯೆಯ ಹಿನ್ನೆಲೆಯಲ್ಲಿ ದೊಡ್ಡದಾಗಿ ದನಿ ಎತ್ತಿರುವ ಸ್ಥಳೀಯ ಹಿಂದೂ ಸಂಘಟನೆಗಳ ಮುಖಂಡರಿದ್ದಾರೆ, ಸೈದ್ಧಾಂತಿಕ ವಿರೋಧಗಳ ನಡುವೆಯೂ ಅವರ ಹೋರಾಟದೊಟ್ಟಿಗೆ ತಾತ್ವಿಕವಾಗಿ ಕೈಜೋಡಿಸಿರುವ ಪ್ರಗತಿಪರ ಗುಂಪುಗಳಿವೆ. ಇವರೆಲ್ಲರ ಜೊತೆಗೆ ಧರ್ಮ, ಸಿದ್ಧಾಂತಗಳ ಗಂಧಗಾಳಿಯೂ ಇಲ್ಲದೆ ಸೌಜನ್ಯಳ ನೋವಿಗೆ ಮಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಇರುವ ಜನಸಾಮಾನ್ಯರಿದ್ದಾರೆ.

‘ಸೌಜನ್ಯಳಿಗೆ, ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು’ ಎನ್ನುವುದೇ ಹೋರಾಟದ ಪ್ರಧಾನ ಆಶಯವೆಂದು ಗುರುತಿಸಿರುವ ಕಾರಣಕ್ಕೆ ಎಲ್ಲ ನ್ಯೂನತೆಗಳ ನಡುವೆಯೂ ಈ ಹೋರಾಟಕ್ಕೆ ಅಗಾಧ ಜನಬೆಂಬಲ, ನೈತಿಕ ಬಲ ದೊರೆತಿದೆ. ಆದರೆ, ಹೋರಾಟದ ನ್ಯೂನತೆಗಳನ್ನು, ವಾಸ್ತವದ ನೆಲೆಗಟ್ಟಿನಲ್ಲಿ ಅದು ಸಾಗುತ್ತಿರುವ ಹಾದಿಯನ್ನು ವಿಶ್ಲೇಷಿಸದೆ ಹೋದರೆ ಅದು ಸಾರ್ವಜನಿಕ ಹೋರಾಟವೊಂದಕ್ಕೆ ಮಾಡುವ ದ್ರೋಹವೂ ಆಗುತ್ತದೆ. ಆ ನಿಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಎದುರಾಗಿರುವ ಸವಾಲುಗಳು, ಚರ್ಚಿಸಬೇಕಾದ ಅಂಶಗಳನ್ನು ಹೀಗೆ ಗುರುತಿಸಬಹುದು:

ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕಾದುದು ನ್ಯಾಯಾಲಯದಲ್ಲಿಯೇ ಹೊರತು ಬೀದಿಗಳಲ್ಲಿ ನಡೆಯುವ ಹೋರಾಟಗಳಲ್ಲಲ್ಲ. ಬೀದಿಗಳಲ್ಲಿ ನಡೆಸುವ ಹೋರಾಟಗಳು, ಮೈದಾನಗಳಲ್ಲಿ ಹಮ್ಮಿಕೊಳ್ಳುವ ಸಮಾವೇಶಗಳು ಸಾರ್ವಜನಿಕವಾಗಿ ಅಭಿಪ್ರಾಯ ಮೂಡಿಸಬಹುದೇ ಹೊರತು, ಅವುಗಳು ನ್ಯಾಯಾಲಯದ ಮೇಲೆ ತಾತ್ವಿಕವಾಗಿ ಯಾವುದೇ ಒತ್ತಡ ನಿರ್ಮಿಸಲಾರವು.

ನ್ಯಾಯಾಲಯದ ನ್ಯಾಯದಾನ ಅಂತಿಮವಾಗಿ ಪ್ರಕರಣದಲ್ಲಿನ ವಾಸ್ತಾವಾಂಶಗಳಿಗೆ ಸಂಬಂಧಿಸಿದಂತೆ ತನ್ನ ಮುಂದೆ ಇರಿಸಲಾದ ಸಾಕ್ಷ್ಯ, ದಾಖಲೆಗಳನ್ನು ಮಾತ್ರವೇ ಆಧರಿಸಿರುತ್ತದೆ.

ಸೌಜನ್ಯಳಿಗೆ ನ್ಯಾಯಕೊಡಿಸುವುದು ಬೇರೆ, ಸೌಜನ್ಯ ಪ್ರಕರಣದಂತಹ ಮತ್ತೊಂದು ಪ್ರಕರಣ ಅದೇ ಧಾರ್ಮಿಕ ಸ್ಥಳದಲ್ಲಿಯಾಗಲಿ ಅಥವಾ ದೇಶದ ಮತ್ತಾವುದೇ ಮೂಲೆಯಲ್ಲಾಗಲಿ ನಡೆಯದಂತೆ ನೋಡಿಕೊಳ್ಳುವುದು ಬೇರೆ – ಇವೆರಡನ್ನೂ ಪ್ರತ್ಯೇಕವಾಗಿಯೇ ವಿಂಗಡಿಸಿಕೊಂಡು ಆ ದಿಕ್ಕಿನಲ್ಲಿ ಹೋರಾಟ, ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

soujanya 1

ಸೌಜನ್ಯಳಿಗೆ ನ್ಯಾಯ ಕೊಡಿಸಲು ಕಾನೂನಾತ್ಮಕ ಹೋರಾಟವೇ ಏಕೈಕ ಹಾದಿ. ಆದರೆ, ಈ ಕಾನೂನಾತ್ಮಕ ಹೋರಾಟ ಬಹುತೇಕವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ. ಅರೋಪಿ ಎಂದು ಬಿಂಬಿಸಲಾದ ವ್ಯಕ್ತಿ ಆರೋಪಿಯಲ್ಲ ಎಂದು ನ್ಯಾಯಾಲಯ ಶಂಕೆಗೆ ಆಸ್ಪದವಿಲ್ಲದಂತೆ ಹೇಳಿದೆ. ಈ ತೀರ್ಪಿನ ವಿರುದ್ಧದ ಮೇಲ್ಮನವಿಯೂ ತಿರಸ್ಕೃತವಾಗಿದೆ. ಹೀಗಿರುವಾಗ, ಪ್ರಕರಣದಲ್ಲಿನ ಎಫ್‌ಐಆರ್‌ ಮಾತ್ರವೇ ಉಳಿಸಿಕೊಂಡು, ಮರುತನಿಖೆಗೆ ಆದೇಶಿಸಲು ಇರುವ ಸಾಧ್ಯತೆಯನ್ನು ಕಾನೂನಾತ್ಮಕವಾಗಿ ಅನ್ವೇಷಿಸಬೇಕಿದೆ. ಇದಕ್ಕೆ ಬಾಯಲ್ಲಿ ಕೆಂಡಕಾರುವ ಉಗ್ರಪ್ರತಾಪಿಗಳ ಅಗತ್ಯಕ್ಕಿಂತ ಹೆಚ್ಚಾಗಿ ಅಪರಾಧಿಕ ಕಾನೂನು, ಅವುಗಳ ಇತಿಮಿತಿ, ಕಾನೂನು ಪ್ರಕ್ರಿಯೆಯ ತಾಂತ್ರಿಕತೆಯ ಅರಿವಿರುವ ತೀಕ್ಷ್ಣ ಕಾನೂನುಮತಿಗಳ, ಹೃದಯವಂತರ ಅಗತ್ಯವಿದೆ. ಹಾಗಾಗಿ, ಸೌಜನ್ಯ ಪ್ರಕರಣದಲ್ಲಿ ಪ್ರಸ್ತುತ ಅಗತ್ಯವಿರುವುದು ದಿಟ್ಟ ಕಾನೂನಾತ್ಮಕ ಸಲಹೆಗಳೇ ಹೊರತು ಅಧಿಕಾರ ರಾಜಕಾರಣಕ್ಕೆ ಬೇಕಾಗುವಂತಹ ಚತುರ ರಾಜಕೀಯ ಸಲಹೆಗಳಲ್ಲ.

ಸರ್ಕಾರದ ಹಂತದಲ್ಲಿ ಪ್ರಕರಣವನ್ನು ಮರುತನಿಖೆಗೆ ಒಪ್ಪಿಸಲು ಇರುವ ಸಾಧ್ಯತೆಗಳೇನು, ಅದಕ್ಕಾಗಿ ಒಗ್ಗೂಡಿ ಎಲ್ಲಿ, ಹೇಗೆ ಒತ್ತಡ ನಿರ್ಮಿಸಬೇಕು, ಮನವಿ ಮಾಡಬೇಕಕು ಎನ್ನುವುದನ್ನು ಅರಿತು ಹೋರಾಟದ ಮುಂದಿನ ಯೋಜನೆಯನ್ನು ಹೋರಾಟಗಾರರು ರೂಪಿಸಬೇಕು.

ನ್ಯಾಯಕ್ಕಾಗಿ ಹೋರಾಟ ನಡೆಯಬೇಕೆ ಹೊರತು, ಯಾವುದೇ ವ್ಯಕ್ತಿಯ, ಸಂಘಟನೆಯ ವಿಜೃಂಭಣೆಗಾಗಿ ಅಲ್ಲ. ಇಂತಹ ಹೋರಾಟಗಳು ಸಂಪೂರ್ಣ ರಾಜಕಾರಣ ಮುಕ್ತವಾಗಿರುವುದಿಲ್ಲ, ಅದರೆ ರಾಜಕಾರಣವನ್ನು ಎಷ್ಟು ಮಿತಿಗೊಳಿಸಲು ಸಾಧ್ಯವೋ ಅಷ್ಟು ಮಿತಿಗೊಳಿಸುವುದು ಉತ್ತಮ. ವ್ಯಕ್ತಿಗಳು ಹಿಂದೆ ಸರಿದು, ಹೋರಾಟದ ಉದ್ದೇಶ ಮುನ್ನೆಲೆಗೆ ಬರಬೇಕು.

ನೋವಿಗೆ, ಚೀತ್ಕಾರಕ್ಕೆ ಧರ್ಮವಿರುವುದಿಲ್ಲ. ಅವುಗಳಿಗೆ ಮಿಡಿಯುವ ಮನಸ್ಸು, ಹೃದಯಗಳಿಗೂ ಧರ್ಮದ ಸಂಕೋಲೆಗಳು ಇರಬಾರದು. ಹೋರಾಟ ಯಾವುದೇ ಒಬ್ಬ ವ್ಯಕ್ತಿ, ಒಂದು ಪ್ರದೇಶದ ಶೋಷಕರ ವಿರುದ್ಧ ಮಾತ್ರವಾಗಿರದೆ ಎಲ್ಲ ಬಗೆಯ ಧಾರ್ಮಿಕ, ಸಾಮಾಜಿಕ ಅಧಿಕಾರ ಕೇಂದ್ರಗಳು ಹೇಗೆ ತಮ್ಮಲ್ಲಿ ಸಂಚಯಗೊಳ್ಳುವ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎನ್ನುವುದರ ವಿರುದ್ಧ ತಿರುಗಬೇಕು. ಯಾವುದೇ ಬಗೆಯ ಅಧಿಕಾರ ಕೇಂದ್ರಗಳು, ಆಡಳಿತ ವ್ಯವಸ್ಥೆಯೊಡನೆ, ಸರ್ಕಾರಗಳೊಡನೆ ಏರ್ಪಡಿಸಿಕೊಳ್ಳುವ ಅಪವಿತ್ರ ಮೈತ್ರಿ, ರಕ್ಷಣಾತಂತ್ರಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅವುಗಳನ್ನು ಸಂಘಟನಾತ್ಮಕವಾಗಿ ಎದುರಿಸುವ, ಅವುಗಳ ವಿರುದ್ಧ ಜಾಗೃತಿ ಮೂಡಿಸುವ ನಿರಂತರ ಪ್ರಯತ್ನಗಳು ನಡೆಯಬೇಕು.

ಮಹಿಳೆಯರ ವಿರುದ್ಧದ ಅತ್ಯಾಚಾರ, ಶೋಷಣೆಗಳಿಗೆ ಧರ್ಮ, ದೇಶಗಳ ಗಡಿ ಇಲ್ಲ. ಸಾಂಪ್ರದಾಯಿಕ-ಸಾಮಾಜಿಕ ಸಂರಚನೆಗಳು, ಲಿಂಗಾಧಾರಿತ ತಾರತಮ್ಯಗಳು, ಅಸ್ವಸ್ಥ ಮನಸ್ಸಿನ ವಿಕೃತಿಗಳು, ಅವಕಾಶಕ್ಕೆ ಹೊಂಚುಹಾಕುವ ಕಾಮಪಿಪಾಸುಗಳು ಹೀಗೆ ಪಟ್ಟಿ ದೊಡ್ಡದಿದೆ. ಇವುಗಳ ವಿರುದ್ಧ ಹೋರಾಡಲು ಹಿಂದೂ ಹುಲಿಗಳಾಗುವ ಅಥವಾ ಮತ್ತಾವುದೇ ಧರ್ಮದ ಹುಲಿಗಳಾಗುವ ಅಗತ್ಯವಿರುವುದಿಲ್ಲ, ಮನುಷ್ಯತ್ವವೊಂದು ಸಾಕು. ಸ್ವಸ್ಥ ಮನಸ್ಸಿನ ಮನುಷ್ಯರೆಲ್ಲರೂ ಇಂತಹ ಹೋರಾಟಕ್ಕೆ ತಮ್ಮ ತಮ್ಮ ನೆಲೆಯಲ್ಲಿ ಹೆಚ್ಚೆಚ್ಚು ಕೈಜೋಡಿಸಬೇಕು. ಸಮಾಜವನ್ನು ಹೆಚ್ಚು ಸಂವೇದನಾಶೀಲಗೊಳಿಸಿ, ಜಾಗೃತಿ ಮೂಡಿಸುವೆಡೆಗೆ ಎಲ್ಲರೂ ಗಮನಹರಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಿಯವರೆಗೆ ರಕ್ತ, ವಂಶವಾಹಿನಿಗಳನ್ನು ಧರ್ಮಾಧಾರಿತವಾಗಿ ವಿಂಗಡಿಸಿ ಗುರುತಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಧರ್ಮವನ್ನು ದೇವರ ಕೋಣೆಯಲ್ಲಿರಿಸಿ, ಆಚರಣೆಗಳನ್ನು ವೈಯಕ್ತಿಕ ನೆಲೆಗಟ್ಟಿಗೆ ಸೀಮಿತಗೊಳಿಸಿ ಸಮಾಜದಲ್ಲಿ ಮನುಷ್ಯರಾಗಿ, ಮಾನವೀಯತೆಯಿಂದ ಜೀವಿಸಬೇಕು.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ರೂಪುಗೊಳ್ಳುವಂತಹ ಹೋರಾಟಗಳು ಹೆಚ್ಚು ಅರ್ಥಪೂರ್ಣವೂ, ದೂರಗಾಮಿಯೂ, ಪರಿಣಾಮಕಾರಿಯೂ ಆಗುತ್ತವೆ. ಇಲ್ಲವಾದರೆ, ಸದ್ದು ಮಾಡಿ ನಿಸ್ತೇಜಗೊಂಡ ಪಟಾಕಿಯಂತೆ ಸಿಡಿದು ಹೊಗೆಯಾಗುತ್ತವೆ.

ಇದನ್ನೂ ಓದಿ ಮಳವಳ್ಳಿಯ ಗೋಕುಲ ಶಾಲೆಗೆ ಮೇಘಾಲಯದಿಂದ ಮಕ್ಕಳನ್ನು ಕರೆತಂದವರು ಆರೆಸ್ಸೆಸ್‌ ಪ್ರಚಾರಕ ಸೀತಾರಾಂ!

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X