ವಚನಯಾನ | ಬ್ರಾಹ್ಮಣ ಶ್ರೇಷ್ಠತೆಯ ವಿರುದ್ಧ ನಡೆದಿತ್ತು ವಚನ ಚಳವಳಿಯ ಸಾಂಘಿಕ ಹೋರಾಟ

Date:

Advertisements

ಶರಣರು ಸನಾತನಿಗಳ ಅಸ್ಪೃಶ್ಯತಾಚರಣೆಗಳನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯ ವಿರುದ್ಧ ವಚನ ಚಳವಳಿ ಸಾಂಘಿಕವಾಗಿ ಹೋರಾಡಿದೆ. ಬ್ರಾಹ್ಮಣವಾದಿಗಳು ಜಾತಿ ವ್ಯವಸ್ಥೆಯನ್ನು ಸೃಷ್ಠಿಸಿ ಅದನ್ನು ಶೂದ್ರರ ಮುಂದಾಳತ್ವದಲ್ಲಿ ಪೋಷಿಸಿಕೊಂಡು ಬಂದಿದ್ದಾರೆ. ಅದು ಸನಾತನಿಗಳು ಸುಲಭವಾಗಿ ಕಂಡುಕೊಂಡ ಬದುಕುವ ದಾರಿ. ಅವರ ಈ ಹುನ್ನಾರವನ್ನು ಖಂಡಿಸಿ ಭಯವನ್ನು ಹುಟ್ಟಿಸಿದವರು ಬಸವಾದಿ ಶರಣರು.

ಜಾತಿ ವ್ಯವಸ್ಥೆ ಭಾರತಕ್ಕೆ ಅಂಟಿದ ಜಾಡ್ಯ. ಮೇಲು-ಕೀಳು, ಹೊಲೆಯ, ಮಾದಿಗ ಮುಂತಾದ ತಾರತಮ್ಯವು ಸನಾತನ ಬ್ರಾಹ್ಮಣ ಧರ್ಮದ ಹೃದಯವಿದ್ದಂತೆ. ಜಾತಿ ವ್ಯವಸ್ಥೆ ತೆಗೆದರೆ ಸನಾತನ ಬ್ರಾಹ್ಮಣ ಧರ್ಮದ ಹೃದಯ ನಿಂತು ಹೋಗುತ್ತದೆ. ಮನುಸ್ಮೃತಿಯು ಸನಾತನ ಬ್ರಾಹ್ಮಣ ಧರ್ಮದ ಧರ್ಮಶಾಸ್ತ್ರ ಮತ್ತು ನ್ಯಾಯಶಾಸ್ತ್ರ. ಮನುಸ್ಮೃತಿಯಲ್ಲಿ ಜಾತಿಗಳ ಆಧಾರದಲ್ಲೆ ನ್ಯಾಯ ಒದಗಿಸುವ ತಿರುಳಿದೆ. ಅದಕ್ಕೆಂದೆ ಈಗಿನ ಸನಾತನಿಗಳು ಡಾ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಮಾನತೆಯ ಸಂವಿಧಾನವನ್ನು ದ್ವೇಷಿಸುತ್ತಾರೆ ಮತ್ತು ಮನುಸ್ಮೃತಿಯು ಭಾರತದ ಸಂವಿಧಾನವಾಗಬೇಕು ಎಂದು ಪರಿತಪಿಸುತ್ತಾರೆ. ಸನಾತನಿಗಳು ವೇದವನ್ನು ಪ್ರಮಾಣವಾಗಿ ಸ್ವೀಕರಿಸುತ್ತಾರೆ. ವೇದಗಳು ಚಾತುರ್ವರ್ಣವನ್ನು ಪ್ರತಿಪಾದಿಸುತ್ತವೆ. ಋಗ್ವೇದದ10ನೇ ಮಂಡಲದ ಪುರುಷಸೂಕ್ತವು ವರ್ಣ ವ್ಯವಸ್ಥೆಯನ್ನು ವಿವರಿಸುತ್ತದೆ. ಮನುಷ್ಯ ಹೇಗೆ ಸೃಷ್ಠಿಯಾದ ಎನ್ನುವ ಕಥಾನಕವೆ ಬಾಲಿಶ ಮತ್ತು ತಾರತಮ್ಯಪೂರಿತವಾದದ್ದು. ವೇದಗಳ ನಂತರ ಅತ್ಯಂತ ತೀಕ್ಷ್ಣವಾಗಿ ಜಾತಿ ವ್ಯವಸ್ಥೆಯನ್ನು ಸಮರ್ಥಿಸುವುದು ಮನುಧರ್ಮಶಾಸ್ತ್ರವೆಂದೆ ಕುಖ್ಯಾತಿ ಗಳಿಸಿರುವ ಮನುಸ್ಮೃತಿ. ಸನಾತನಿಗಳ ಆಡಳಿತದಲ್ಲಿ ಉತ್ತರ ಭಾರತದ ನ್ಯಾಯಾಲಯವೊಂದರ ಆವರಣದಲ್ಲಿ ಮನುವಿನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮನುಸ್ಮೃತಿಯನ್ನು ಚೆನ್ನಾಗಿ ಓದಿಕೊಂಡಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅದನ್ನು ಸಾರ್ವಜನಿಕವಾಗಿ ಅದನ್ನು ಸುಟ್ಟಿದ್ದು ನಾವು ಇಲ್ಲಿ ಸ್ಮರಿಸಬಹುದು.

ಮನುವಾದಿಗಳು ಶ್ರೇಣಿಕೃತ ವರ್ಣ ವ್ಯವಸ್ಥೆಯ ಮರುಸ್ಥಾಪನೆಗೆ ಈಗ ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿದೆ ಎನ್ನುವ ಕುರಿತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಆಳವಾಗಿ ಅಧ್ಯಯನ ಮಾಡಿದ್ದರು. ಅವರ ‘ಹಿಂದೂ ಧರ್ಮದ ಒಗಟುಗಳು’ˌ ‘ಜಾತಿ ನಿರ್ಮೂಲನೆ’ ಮುಂತಾದ ಕೃತಿಗಳಲ್ಲಿ ಈ ಕುರಿತು ವಿವರವಾಗಿ ಬರೆದಿದ್ದಾರೆ. ಮನುವಿನ ಕರಾಳ ಮುಖವನ್ನು ತಮ್ಮ ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಸ್ತ್ರೀಯರು, ಅಸ್ಪ್ರಸ್ಯರು ಹಾಗೂ ಶೂದ್ರರ ಕುರಿತು ಮನುವಿನ ವಿಷಪೂರಿತ ಮಾತುಗಳು ಸನಾತನ ಬ್ರಾಹ್ಮಣ ಧರ್ಮದ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ. ಅಸ್ಪ್ರಸ್ಯರುˌ ಪಂಚಮರು ಅಥವಾ ಚಾಂಡಾಲರ ಹುಟ್ಟಿನ ಕುರಿತು ಅತ್ಯಂತ ಕೀಳಾಗಿ ಮನು ತನ್ನ ಮನುಸ್ಮೃತಿಯಲ್ಲಿ ಬರೆದುಕೊಂಡಿದ್ದಾನೆ. ಬ್ರಾಹ್ಮಣ ಮಹಿಳೆ ಮತ್ತು ಕ್ಷತ್ರೀಯ ಅಥವಾ ವೈಶ್ಯ ಪುರುಷರ ಅಕ್ರಮ ಸಮಾಗಮದಿಂದ ಹುಟ್ಟಿದವರೆ ಅಸ್ಪ್ರಸ್ಯರು, ಪಂಚಮರು ಅಥವಾ ಚಾಂಡಾಲರು ಎಂದು ಮನು ವಿವರಿಸುತ್ತಾನೆ. ಹಿಂದಿನಿಂದಲೂ ಈ ಅಲಕ್ಷಿತ ಜನಸಮುದಾಯದ ಸಂಖ್ಯೆ ಅವಲೋಕಿಸಿದರೆ ಭಾರತದ ಜನಸಂಖ್ಯೆಯ ಶೇ. 30ಕ್ಕೂ ಹೆಚ್ಚಿನ ಪ್ರಮಾಣದಲ್ಲಿದೆ. ಅಂದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿರುವ ಅಸ್ಪೃಶ್ಯರು, ಪಂಚಮರು ಅಥವಾ ಚಾಂಡಾಲರು ಅಕ್ರಮ ಸಂಬಂಧದಿಂದ ಹುಟ್ಟಿದವರು ಎನ್ನುತ್ತಾನೆ ಮನು. ಇದು ಸಾಧ್ಯವೇ? ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರು ಇಷ್ಟೊಂದು ಪ್ರಮಾಣದಲ್ಲಿ ಅನೈತಿಕ ಸಂಬಂಧದಿಂದ ಮಕ್ಕಳನ್ನು ಹೆರುತ್ತಿದ್ದರೇ?

Advertisements
ಮನುಸ್ಮೃತಿ

ಬ್ರಾಹ್ಮಣ ಸ್ತ್ರೀಯರು ಅಷ್ಟೊಂದು ನೀತಿಹೀನರಾಗಿದ್ದರೇ? ಆಗ ಬ್ರಾಹ್ಮಣ ಪುರುಷರು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತವೆ. ತಳವರ್ಗದ ಜನರನ್ನು ಅಕ್ರಮ ಸಬಂಧಗಳಿಂದ ಹುಟ್ಟಿದವರು ಎಂದು ವ್ಯಾಖ್ಯಾನಿಸುವ ಭರದಲ್ಲಿ ಮನು ತನ್ನದೆ ವರ್ಣದ ಸ್ತ್ರೀಯರ ಮಾನವನ್ನು ಇನ್ನಿಲ್ಲದಂತೆ ಹರಾಜು ಹಾಕಿದ್ದಾನೆ. ಮನುವಿನ ಈ ಅಭಿಪ್ರಾಯವು ಸತ್ಯಕ್ಕೆ ಅತ್ಯಂತ ದೂರವಾಗಿದೆ. ಅನ್ಯರ ಮಾನ ಕಳೆಯುವ ಭರದಲ್ಲಿ ತನ್ನ ಮಾನವನ್ನಷ್ಟೆ ಅಲ್ಲದೆ ಬ್ರಾಹ್ಮಣ ವರ್ಣದವರ ಮಾನವನ್ನು ಕೂಡ ಮನು ಕಳೆದಿದ್ದಾನೆ.

“ಜಗತ್ತಿನ ಎಲ್ಲಾ ಧರ್ಮಗಳು ಮಾನವ ಘನತೆಯನ್ನು ಎತ್ತಿ ಹಿಡಿದರೆ ಮನು ತನ್ನ ಕೃತಿಯಲ್ಲಿ ಮಾನವ ಘನತೆಯನ್ನು ಪ್ರಪಾತಕ್ಕೆ ತಳ್ಳಿದ್ದಾನೆ” ಎನ್ನುತ್ತಾರೆ ಡಾ. ಬಿ. ಆರ್ ಅಂಬೇಡ್ಕರ್ ಅವರು ತಮ್ಮ ಕೃತಿಯಲ್ಲಿ. ಇದು ಮನುಸ್ಮೃತಿಯ ಕರಾಳತೆಯನ್ನು ಹಾಗೂ ವಿಕೃತಿಯನ್ನು ಎತ್ತಿ ತೋರಿಸುವ ಸಂಗತಿ. ಜಾತಿ ವ್ಯವಸ್ಥೆ ಸನಾತನ ಧರ್ಮದಲ್ಲಿ ಇಲ್ಲವೆ ಇಲ್ಲ ಎಂದು ವಾದಿಸುವ ಇಂದಿನ ಸನಾತನಿಗಳ ಸಂತತಿ ಮನುಸ್ಮೃತಿಯನ್ನು ಹಾಗೂ ಅದರ ಕುರಿತು ಅಂಬೇಡ್ಕರ್ ಅವರು ಬರೆದ ವಿಮರ್ಶೆಯನ್ನು ಚೆನ್ನಾಗಿ ಓದಿಕೊಳ್ಳಬೇಕು. ಜಾತಿ ವ್ಯವಸ್ಥೆಯ ಆಧಾರದಲ್ಲಿಯೆ ಸನಾತನಿಗಳು ಭಾರತೀಯರನ್ನು ಶತಮಾನಗಳಿಂದ ಹೀನಾಯವಾಗಿ ಶೋಷಿಸಿದ್ದಾರೆ. ಸನಾತನ ಬ್ರಾಹ್ಮಣ ಧರ್ಮದ ರಕ್ತದ ಕಣಕಣದಲ್ಲೂ ಜಾತಿಯತೆ, ವರ್ಗ ತಾರತಮ್ಯ , ವರ್ಣಭೇದ ತುಂಬಿ ತುಳುಕುತ್ತದೆ. ಈ ಜಾತಿ ಮನಸ್ಥಿತಿ ಸನಾತನಿಗಳ ಇಂದಿನ ಅಧುನಿಕ ಸಂತತಿಯಲ್ಲಿಯೂ ಸಹ ಮುಂದುವರೆದಿದೆ.

ಸಂವಿಧಾನವನ್ನು, ಜನತಂತ್ರವನ್ನು, ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸುವ ಸನಾತನಿಗಳ ಇಂದಿನ ಸಂತತಿ ತಮ್ಮ ಪೂರ್ವಜರು ಮನುವಿನ ಮಾರ್ಗದಲ್ಲಿ ಬದುಕಿದ್ದನ್ನು ಆದರ್ಶವಾಗಿ ಮಾಡಿಕೊಂಡಿದೆ. ಸನಾತನಿಗಳು ಅಂದು ಇಂದು ಮುಂದೆ ಕೂಡ ಜಾತಿವಾದಿಗಳಾಗಿಯೇ ಬದುಕುತ್ತಾರೆ. ಸನಾತನವಾದಿಗಳು ಬಿತ್ತಿದ ಜಾತಿ ಶ್ರೇಷ್ಠತೆ, ಕುಲ, ಹೊಲೆ ಮುಂತಾದ ಅನಿಷ್ಟ ಪದ್ದತಿಗಳನ್ನು ಕಾಲಕಾಲಕ್ಕೆ ಈ ನೆಲದಲ್ಲಿ ವಿರೋಧಿಸುವ ಚಳವಳಿಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಹನ್ನೆರಡನೇ ಶತಮಾನದ ವಚನ ಚಳವಳಿಯು ಅತ್ಯಂತ ಪ್ರಮುಖವಾದದ್ದು. ಶರಣರು ಸನಾತನಿಗಳ ಹೊಲೆ, ಮಾದಿಗ ಮುಂತಾದ ಅಸ್ಪ್ರಶ್ಯಾಚರಣೆಗಳನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯ ವಿರುದ್ಧ ವಚನ ಚಳವಳಿ ಸಾಂಘಿಕವಾಗಿ ಹೋರಾಡಿದೆ. ಬ್ರಾಹ್ಮಣವಾದಿಗಳು ಜಾತಿ ವ್ಯವಸ್ಥೆಯನ್ನು ಸೃಷ್ಠಿಸಿ ಅದನ್ನು ಶೂದ್ರರ ಮುಂದಾಳತ್ವದಲ್ಲಿ ಪೋಷಿಸಿಕೊಂಡು ಬಂದಿದ್ದಾರೆ. ಅದು ಸನಾತನಿಗಳು ಸುಲಭವಾಗಿ ಕಂಡುಕೊಂಡ ಬದುಕುವ ದಾರಿ. ಅವರ ಈ ಹುನ್ನಾರವನ್ನು ಖಂಡಿಸಿ ಅವರ ಪರಾವಲಂಬಿ ಬದುಕಿಗೆ ಭಯವನ್ನು ಹುಟ್ಟಿಸಿದವರು ಬಸವಾದಿ ಶರಣರು. ಹೊಲೆಯ ಮಾದಿಗ ಎಂದು ಮನುಷ್ಯರನ್ನು ವಿಘಟಿಸಿ ನಡೆಸುತ್ತಿದ್ದ ಶೋಷಣೆಯ ಕಾಲದಲ್ಲಿ ಶರಣರು ಬ್ರಾಹ್ಮಣವಾದದ ವಿರುದ್ಧ ಬಂಡೆದ್ದಿದ್ದಾರೆ. ಅದರ ಫಲಶೃತಿಯೆ ಕಲ್ಯಾಣದ ಕ್ರಾಂತಿ. ಆ ವೈಚಾರಿಕ ಕ್ರಾಂತಿಯ ಉಪ ಉತ್ಪನ್ನಗಳೆ ಶರಣರು ಬರೆದ ವಚನಗಳು.

ಕುಲಾಚಾರ,ಮಡಿ ಮೈಲಿಗೆಗಳು ಮಾನವ ಸೃಷ್ಠಿಸಿದ ವಿಕೃತಿಗಳು. ವೀರಗಣಾಚಾರಿ ಶರಣ ಮಡಿವಾಳ ಮಾಚಿದೇವರು ಈ ಕುಲ ಹೊಲೆ ಮುಂತಾದ ಬ್ರಾಹ್ಮಣವಾದದ ವಿಕೃತ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಬರೆದ ಒಂದು ಕ್ರಾಂತಿಕಾರಿ ವಚನ:

“ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ.
ಹತ್ತು ನುಡಿದಡೇನು ಒಂದೂ ನಿಜವಿಲ್ಲದವನೆ ಹೊಲೆಯ.
ಅರ್ಥದಾಸೆಗೆ ಪ್ರಾಣವ ಹತವ ಮಾಡುವನೆ ಹೊಲೆಯ.
ಸತ್ಯ ಸದ್ಗುಣ ನಿತ್ಯಾಚಾರ ಧರ್ಮವಿಲ್ಲವೆಂಬವನೆ ಹೊಲೆಯ.
ಭಕ್ತಿ ಮುಕ್ತಿಯ ಪಥವ ಹುಸಿಯೆಂಬವನೆ ಹೊಲೆಯ.
ನಿತ್ಯ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದವಿಲ್ಲವೆಂಬವನೆ ಹೊಲೆಯ.
ಮತ್ತೆ ಪಶುಘಾತಕವ ಮಾಡುವನೆ ಹೊಲೆಯ.
ಇಂತೀ ಏಳುಹೊಲೆಯ ಹಿಂಗಿಸದೆ, ತನ್ನ ಕುಲದ ಹೆಮ್ಮೆಯ ಮೆರೆವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.”

ಭಾವಾರ್ಥ

ಪ್ರತಿದಿನ ಲಿಂಗಾರ್ಚನೆಯ ಮಾಡದೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಆಚಾರಹೀನ ನಡೆ. ಹಾಗೆ ಮಾಡುವವರು ಹೊಲೆಯರು. ಹನ್ನೆರಡನೇ ಶತಮಾನದಲ್ಲಿ ತಳವರ್ಗದ ಹೊಲೆ -ಮಾದಿಗರೆಲ್ಲ ಲಿಂಗದೀಕ್ಷೆ ಪಡೆದು ನಿತ್ಯ ಲಿಂಗಾರ್ಚನೆ ಮಾಡುತ್ತ ಲಿಂಗಾಯತರಾದರು. ಆದರೆ ಬ್ರಾಹ್ಮಣ ಶ್ರೇಷ್ಠತೆಯ ವ್ಯಸನಿಗಳು ಇಷ್ಟಲಿಂಗಧಾರಣೆ ಮಾಡಿಕೊಳ್ಳಲಿಲ್ಲ, ನಿತ್ಯ ಲಿಂಗಾರ್ಚನೆ ಮಾಡಲಿಲ್ಲ. ಅವರು ಒಣ ಮಡಿಮಂತಿಕೆ ಆಚರಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದರು. ಆದ್ದರಿಂದ ಮಾಚಿದೇವರು ಲಿಂಗಾರ್ಚನೆ ಮಾಡದೆ ಹೊಟ್ಟೆ ಹೊರೆಯುವವರು ನಿಜವಾದ ಹೊಲೆಯರು ಎನ್ನುತ್ತಾರೆ. ಮನುಷ್ಯ ಮಾತುಗಾರ. ಆತ ನೂರೆಂಟು ಮಾತುಗಳನ್ನು ಆಡುತ್ತಿರುತ್ತಾನೆ. ಪುಢಾರಿಗಳು, ಪುರಾಣಕಾರರು, ನೂರೆಂಟು ಮಾತುಗಳನ್ನು ಹೇಳುತ್ತಾರೆ. ಆದರೆ ಅವುಗಳೆಲ್ಲವೂ ಸುಳ್ಳಿನ ಮಾತುಗಳು. ಹಾಗೆ ಸುಳ್ಳು ಹೇಳುವವರೆ ಹೊಲೆಯರು. ಹಣದ ಆಸೆಗೆ ಕೊಲೆ ಮಾಡುವವರೂ ಸಹ ಹೊಲೆಯರು. ಡಾ. ಕಲಬುರಗಿ, ಗೋವಿಂದ ಪಾನ್ಸರೆ, ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ ಮುಂತಾದವರ ಕೊಲೆ ಮಾಡಿದವರು ಹಾಗೂ ಹಿಂದೆ ನಿಂತು ಪಿತೂರಿ ಮಾಡಿ ಕೊಲೆ ಮಾಡಿಸಿದವರೂ ಸಹ ಹೊಲೆಯರು. ಸತ್ಯದ ಮಾರ್ಗದಲ್ಲಿ ನಡೆಯದವನು ಹಾಗೂ ದಿನ ನಿತ್ಯ ಸದಾಚಾರ ಸದ್ಗುಣಗಳನ್ನು ಆಚರಿಸಲಾರದವನು ಹೊಲೆಯ. ಭಕ್ತಿ ಹಾಗೂ ಮುಕ್ತಿಯ ಮಾರ್ಗದಲ್ಲಿ ನಡೆದು ಸಮಾಜೋನ್ನತಿ ಬಯಸದಾತನು ಸಹ ಹೊಲೆಯ.

ವಿಚಾರವಾದಿಗಳು 1

ಪ್ರತಿನಿತ್ಯ ಗುರುಲಿಂಗಜಂಗಮ ಸೇವೆ ಮಾಡಲಾರದವನು ಕೂಡ ಹೊಲೆಯ. ಇಲ್ಲಿ ಗುರು ಎಂದರೆ ಅರಿವು ಮತ್ತು ಜ್ಞಾನˌ ಲಿಂಗವೆಂದರೆ ಅರಿವಿನ ಕುರುಹು, ಜಂಗಮನೆಂದರೆ ನಿತ್ಯ ಚೈತನ್ಯ ತತ್ವ ಅಥವಾ ಸಮಾಜ. ಅರಿವು ಹಾಗೂ ಜ್ಞಾನವನ್ನು ಹೊಂದಿ ಸದಾ ಸಮಾಜ ಸೇವೆ ಮಾಡುತ್ತಿರಬೇಕು. ಹಾಗೆ ಮಾಡದಿದ್ದವನು ಸಹ ಹೊಲೆಯ. ಪ್ರಾಣಿ ಹತ್ಯೆ ಮಾಡುವಾತನೂ ಸಹ ಹೊಲೆಯ. ಅಂದರೆ ಯಜ್ಞˌ ಯಾಗˌ ಹೋಮ-ಹವನಗಳ ನೆಪದಲ್ಲಿ ಹೋತ, ಹಸು, ಎತ್ತು ಮುಂತಾದ ಪ್ರಾಣಿಗಳನ್ನು ಬಲಿ ಕೊಡುವ ಸನಾತನಿ ಸಹ ಹೊಲೆಯ ಎಂದು ಮಾಚಿತಂದೆ ನೇರವಾಗಿ ವೈದಿಕರ ಕುರಿತು ಈ ಮಾತು ಹೇಳಿದ್ದಾರೆ. ಹೀಗೆ ನಿತ್ಯ ಲಿಂಗಾರ್ಚನೆಯ ಮಾಡದ, ಸತ್ಯವನ್ನು ನುಡಿಯದ, ಸದಾಚಾರ, ಸದ್ಗುಣಗಳು ಆಚರಿಸದ, ಪ್ರಾಣಿ ಹತ್ಯೆ ಮಾಡುವˌ ಹಣದಾಸೆಗೆ ಕೊಲೆ ಮಾಡುವ, ಭಕ್ತಿ, ಮುಕ್ತಿಯ ಮಾರ್ಗದಲ್ಲಿ ನಡೆಯದವˌ ಗುರು-ಲಿಂಗ-ಜಂಗಮ ಸೇವೆ ಅಥವಾ ಸಮಾಜ ಸೇವೆ ಮಾಡದವನು ಹೊಲೆಯನಾಗಿರುತ್ತಾನೆ. ಈ ರೀತಿಯಾಗಿ ಮೇಲೆ ಹೇಳಿದ ಏಳು ಬಗೆಯ ಅನಾಚಾರಗಳನ್ನು ಮಾಡಿಯೂ ಮತ್ತೆ ತಾವೇ ಶ್ರೇಷ್ಠ ಕುಲದವರೆಂದು ಮೆರೆಯುವ ಸನಾತನಿಗಳೆ ನಿಜವಾದ ಹೊಲೆಯರು ಎನ್ನುವುದು ಶರಣ ಮಡಿವಾಳ ಮಾಚಿತಂದೆಯ ಖಚಿತ ನಿಲುವು.

ಟಿಪ್ಪಣಿ

ಋಗ್ವೇದದ ಪುರುಷಸೂಕ್ತದ ಆಧಾರದಲ್ಲಿ ಸನಾತನಿಗಳು ವರ್ಣಗಳನ್ನು ವರ್ಗೀಕರಿಸಿದರೆˌ ಮನುಸ್ಮೃತಿಯಲ್ಲಿ ಮನು ಅನೈತಿಕ ಸಂಬಂಧದಿಂದ ಹುಟ್ಟಿದವರು ಚಾಂಡಾಲರು, ಪಂಚಮರು ಅಥವಾ ಅಸ್ಪ್ರಶ್ಯರೆಂದು ವರ್ಗೀಕರಿಸಿದ್ದಾನೆ. ಪುಷ್ಯಮಿತ್ರ ಶುಂಗನು ಭಾರತೀಯ ಸಮಾಜವನ್ನು 6000ಕ್ಕೂ ಮಿಕ್ಕು ಜಾತಿ, ಉಪಜಾತಿಗಳಲ್ಲಿ ಜನರನ್ನು ವಿಭಜಿಸಿದ್ದಾನೆ. ಚಾಂಡಾಲರುˌ ಪಂಚಮರನ್ನು ಹೊಲೆಯರುˌ ಮಾದಿಗರೆಂದು ಹೆಸರಿಸಿˌ ಅವರನ್ನು ಊರ ಹೊರಗಿಟ್ಟು ತುಚ್ಛವಾಗಿ ನೋಡಲಾಗುತ್ತಿತ್ತು. ಕುಲದಿಂದ ಹೊಲೆಯನರಸದೆ ಶರಣರು ಗುಣದಿಂದ ಹೊಲೆತನವನ್ನು ನಿರ್ಧರಿಸಿ ಜಾತಿ ವ್ಯವಸ್ಥೆ ಹುಟ್ಟಿಸಿದವರ ಜನ್ಮ ಜಾಲಾಡಿದ್ದಾರೆ. ಶರಣ ಮಡಿವಾಳ ಮಾಚಿದೇವರ ಮೇಲಿನ ವಚನದಲ್ಲಿ ಬಹಳ ಸ್ಪಷ್ಟವಾಗಿ ಮನುಷ್ಯನ ಗುಣಗಳ ಆಧಾರದಲ್ಲಿ ಹೊಲೆತನವನ್ನು ಗುರುತಿಸಲಾಗಿದೆ. ವಚನದ ಪ್ರತಿಯೊಂದು ಸಾಲುಗಳು ಯಾರು ನಿಜವಾದ ಹೊಲೆಯರು ಎಂಬುದನ್ನು ವಿವರಿಸುತ್ತವೆ. ವಚನದಲ್ಲಿ ಬರುವ ಏಳು ಬಗೆಯ ಆಚಾರಗಳು ಶರಣ ಧರ್ಮದ ಆಚಾರಗಳಾಗಿ ಗುರುತಿಸಿಕೊಂಡಿವೆ. ಅಂದಿನ ದಿನಮಾನದಲ್ಲಿ ಸನಾತನಿಗಳು ಊರ ಹೊರಗಿಟ್ಟಿದ್ದ ಪಂಚಮರನ್ನು ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಕೊಟ್ಟು ಶರಣರನ್ನಾಗಿ ಮಾಡಿದ್ದಾರೆ. ಆ ಶರಣರು ಅನುಸರಿಸುವ ಏಳು ಆಚರಣೆಗಳು ಯಾರು ಮಾಡುವುದಿಲ್ಲವೊ ಅವರೆ ನಿಜವಾದ ಹೊಲೆಯರು ಎನ್ನುವುದು ವಚನದ ಮೂಲ ಆಶಯವಾಗಿದೆ. “ಲಿಂಗ’ ವಿಲ್ಲದವನನ್ನು ‘ಭವಿ’ ಎನ್ನುತ್ತಿದ್ದ ಶರಣ ಸಂಕುಲ ಸನಾತನಿಗಳನ್ನು ಭವಿಗಳನ್ನಾಗಿ ಗುರುತಿಸಿದೆ. ಸನಾತನಿಗಳು ಮಾಡುವ ಅನಾಚಾರಗಳಿಂದ ಅವರನ್ನು ಹೊಲೆಯರು ಎಂದು ಮಡಿವಾಳ ಮಾಚಿದೇವರ ವಚನ ಸಾರುತ್ತದೆ.

ಇದನ್ನೂ ಓದಿ ಮಂಗಳೂರು | ದ್ವೇಷ ಭಾಷಣಗಳಿಗೆ ತಡೆಯಿಲ್ಲ, ಪ್ರಕರಣಗಳಿಗೆ ಒಂದೇ ದಿನದಲ್ಲಿ ತಡೆಯಾಜ್ಞೆ!; ಕಾನೂನಿನ ಕಾರಣಗಳೇನು?

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X