ಮಹಿಳೆಯರನ್ನು ಮಾಟಗಾತಿ, ಡಾಕಿನಿ ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ, ಬಹಿಷ್ಕಾರ ಹಾಕುವ ಅಥವಾ ಕೊಂದುಹಾಕುವ ಕ್ರೂರ ಸಾಮಾಜಿಕ ಪದ್ಧತಿಯೇ ʼಡಾಯನ್ʼ. ಈ ಪದ್ಧತಿ ವಿಶೇಷವಾಗಿ ಝಾರ್ಖಂಡ್, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ಕಂಡುಬರುತ್ತದೆ.
ಕೆಲವೊಂದು ಘಟನೆಗಳು ಮನಸ್ಸಿನಿಂದ ಹೋಗುವುದೇ ಇಲ್ಲ. ಅವು ನಮ್ಮ ಸಾಮಾಜಿಕ, ಶೈಕ್ಷಣಿಕ ಹಾಗೂ ಕಾನೂನು ವ್ಯವಸ್ಥೆಯ ಬಗ್ಗೆ ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತವೆ. ನಿದ್ದೆಗೆಡಿಸುತ್ತವೆ. ಬೆಚ್ಚಿಬೀಳುವಂತೆ ಮಾಡುತ್ತವೆ. ಅರೇ ನಾವೆಲ್ಲಿಗೆ ಹೋಗುತ್ತಿದ್ದೇವೆ! ಎಲ್ಲಿಗೆ ತಲುಪಿದ್ದೇವೆ? ಚಂದ್ರ- ಮಂಗಳಗ್ರಹ ಕಡೆಗೆ ಸೂರ್ಯನ ಕಕ್ಷೆಯನ್ನೂ ತಲುಪಿದ್ದೇವೆಂದು ಹೆಮ್ಮೆ ಪಡುವ ದೇಶದಲ್ಲಿ ಜನರನ್ನು ಜೀವಂತ ಸುಡುತ್ತಾರೆ, ಅದರಲ್ಲೂ ಮಹಿಳೆಯರನ್ನು ’ಡಾಯನ್ʼ ರೆಂದು ಕೊಲ್ಲಲಾಗುತ್ತದೆ ಎಂದರೆ ಯಾರಾದರೂ ನಂಬುತ್ತಾರೆಯೇ? ಇದೇನು ನೂರು ವರ್ಷಗಳ ಹಿಂದಿನ ಕತೆಯಲ್ಲ. ಪಂಚತಂತ್ರದ ಕತೆಯೂ ಅಲ್ಲ. ನಮ್ಮ ದೇಶದಲ್ಲೇ ನಡೆದ ಮೊನ್ನೆ ಮೊನ್ನಿನದೇ ಘಟನೆ!
ಇತ್ತೀಚೆಗೆ ಅಂದರೆ ಜುಲೈ 6 ರಂದು ಬಿಹಾರದ ಪೂರ್ಣಿಯಾದ ಒಂದು ಹಳ್ಳಿಯಲ್ಲಿ ಕುಟುಂಬದ ಐದು ಜನರನ್ನು ಕಂಬಕ್ಕೆ ಕಟ್ಟಿಹಾಕಿ ಜೀವಂತ ಸುಟ್ಟುಹಾಕಲಾಯಿತು. ನಾವಿರುವ ಇಪ್ಪತ್ತೊಂದನೇ ಶತಮಾನದಲ್ಲಿ ಇಂತಹ ಕ್ರೂರ ಘಟನೆ ನಡೆಯುತ್ತದೆಂದರೆ ಜನರಲ್ಲಿ ಅಜ್ಞಾನ, ಮೌಢ್ಯವೆಷ್ಟಿದೆ? ನಾವಿರುವ ಈ ಸಮಾಜ ಅದೆಷ್ಟು ಕೊಳೆತಿದೆ, ರೋಗಗ್ರಸ್ಥವಾಗಿದೆಯೆಂದು ತಿಳಿಯುತ್ತದೆ.
ಪೂರ್ಣಿಯಾದ ಟೊಟಗಾಮ್ ಎನ್ನುವ ನಲ್ವತ್ತು ಕುಟುಂಬಗಳು ವಾಸಿಸುತ್ತಿದ್ದರೆನ್ನಲಾಗುವ ಕೇರಿಯಲ್ಲಿ ಮೂವತ್ತು ಕುಟುಂಬಗಳು ದಲಿತರದಾದರೆ ಹತ್ತು ಕುಟುಂಬಗಳು ಆದಿವಾಸಿ ವರ್ಗಕ್ಕೆ ಸೇರಿದವರು. ಅದೇ ಹಳ್ಳಿಯಲ್ಲಿ ಒಂದು ಕುಟುಂಬದಲ್ಲಿ ಒಂದು ಮಗುವಿಗೆ ಅನಾರೋಗ್ಯವಾಗುತ್ತದೆ. (ಆರೈಕೆ ಔಷಧೋಪಚಾರ ಮಾಡಿದ್ದರ ಬಗ್ಗೆ ಮಾಹಿತಿ ಇಲ್ಲ, ಔಷಧೋಪಚಾರ ಮಾಡದ ಅಜ್ಞಾನ, ಬಡತನ ತುಂಬಿದೆ) ಅದಕ್ಕೆ ಗುಣವಾಗುವುದಿಲ್ಲ. ಆಗ ಆ ಕುಟುಂಬ ಈ ಟೊಟಗಾಮಿನ ಒಂದು ಕುಟುಂಬ ಏನೋ ಮಾಟ ಮಾಡಿದ್ದರಿಂದಲೇ ಮಗುವಿಗೆ ಗುಣವಾಗುತ್ತಿಲ್ಲ ಎಂದು ತೀರ್ಮಾನಿಸಿ ಆ ಕುಟುಂಬವನ್ನು “ ಡಾಯನ್” (ಮಾಟಗಾತಿ/ಗಾರ) ಎಂದು ಹಣೆಪಟ್ಟಿ ಹಚ್ಚಿ ಕುಟುಂಬದ ಮೂವರು ಹೆಂಗಸರು ಇಬ್ಬರು ಗಂಡಸರನ್ನು ಕಂಬಕ್ಕೆ ಕಟ್ಟಿಹಾಕಿ ಜೀವಂತ ಸುಟ್ಟುಹಾಕುತ್ತಾರೆ. ಜೀವ ಉಳಿಸಿಕೊಂಡ ಅದೇ ಕುಟುಂಬದ ಒಬ್ಬ ತರುಣ ಹೇಗೋ ಅಲ್ಲಿಂದ ಓಡಿಹೋಗಿ ಪೊಲೀಸರಿಗೆ ಸುದ್ದಿ ಮುಟ್ಟುತ್ತದೆ. ಮನುಷ್ಯರನ್ನು ಜೀವಂತ ಸುಡುವ ಕ್ರೂರ ಘಟನೆ ನಡೆದದ್ದು ಮಧ್ಯರಾತ್ರಿಯ ಬಳಿಕ ಜಗತ್ತು ನಿದ್ದೆಯಲ್ಲಿ ಮೈಮರೆತಿರುವ ಹೊತ್ತಿನಲ್ಲಿ. ಮನುಷ್ಯತ್ವವಿರುವ, ವಿದ್ಯಾವಂತರಾಗಿರುವ ವಿವೇಕವುಳ್ಳ ಯಾರಾದರೂ ಆ ಹಳ್ಳಿಯಲ್ಲಿದ್ದಿದ್ದರೆ ಈ ಅಮಾನುಷ ಘಟನೆಯನ್ನು ತಪ್ಪಿಸುತ್ತಿದ್ದರೋ ಏನೋ.
ಈ ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತೆಂಟು ವರ್ಷಗಳಾದರೂ ಇನ್ನೂ ಮೂಢನಂಬಿಕೆ, ಅನಕ್ಷರತೆಯಿಂದ ಉತ್ತರಪ್ರದೇಶ ಒಳಗೊಂಡು ಉತ್ತರಭಾರತದ ಬಿಹಾರ್, ಜಾರ್ಖಂಡ, ರಾಜಸ್ಥಾನ, ಮಧ್ಯಪ್ರದೇಶದ ಅನೇಕ ಹಳ್ಳಿಗಳು ನರಳುತ್ತಿವೆ. ಅಲ್ಲಿ ಡಾಯನ್ ಪದ್ಧತಿ ಇನ್ನೂ ಜೀವಂತವಾಗಿದೆ. ಪ್ರಪಂಚದ ಮುಂದುವರಿದ ದೇಶಗಳಲ್ಲೊಂದಾದ, ವಿಶ್ವಗುರುವಾಗುತ್ತಿರುವ ಈ ದೇಶದಲ್ಲಿ ಅಸಂಖ್ಯ ಹಿಂದುಳಿದ ಹಳ್ಳಿಗಳಿವೆ. ವಿಸ್ತೀರ್ಣದ ದೃಷ್ಟಿಯಿಂದ ಅತಿ ದೊಡ್ದ ರಾಜ್ಯವಾದ ಉತ್ತರಪ್ರದೇಶ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಹೇಳಬಹುದು. ಜಾತಿಪದ್ಧತಿ ಆಳವಾಗಿ ಬೇರೂರಿದೆ. ದಲಿತ, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ ಅಪರಾಧಗಳು ಎಗ್ಗಿಲ್ಲದೇ ನಡೆಯುತ್ತವೆ.
ಡಾಯನ್ ಪದ್ಧತಿ ಎಂದರೆ?
ಮಹಿಳೆಯರನ್ನು ಡಾಯನ್ (ಮಾಟಗಾತಿ, ಡಾಕಿನಿ) ಎಂದು ಅಂಧವಿಶ್ವಾಸದಿಂದ ಬಿಂಬಿಸಿ ಆ ಮಹಿಳೆಗೆ ಹಿಂಸೆ ನೀಡುವ, ಬಹಿಷ್ಕಾರ ಮಾಡುವ ಅಥವಾ ಕೊಂದುಹಾಕುವ ಹಿಂಸಾತ್ಮಕ ಮತ್ತು ಕ್ರೂರ ಸಾಮಾಜಿಕ ಪದ್ಧತಿಯೇ ಇದು. ಈ ಪದ್ಧತಿ ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ಝಾರ್ಖಂಡ್, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ಕಂಡುಬರುತ್ತದೆ.

ಮಹಿಳೆಯರ ಮೇಲೆ ಅಜ್ಞಾನ, ಅಂಧನಂಬಿಕೆ, ಜಾತಿ, ಆಸ್ತಿಗೆ ಸಂಬಂಧಿಸಿದ ಕಲಹ, ಅಥವಾ ವೈಯಕ್ತಿಕ ದ್ವೇಷ ಇವುಗಳಿಂದ ಪ್ರೇರಿತವಾಗಿ “ಡಾಯನ್” ಎಂಬ ಅಪವಾದ ಹೊರಿಸಲಾಗುತ್ತದೆ. ಆ ಕಾರಣದಿಂದ ಆಕೆಯನ್ನು ಕುಟುಂಬದಿಂದ ಬೇರ್ಪಡಿಸಿ, ಊರ ಹೊರಗೆ ಒಂಟಿಯಾಗಿ ವಾಸಿಸುವಂತೆ ಮಾಡಲಾಗುತ್ತದೆ. ಬೆತ್ತಲು ಮೆರವಣಿಗೆ ಮಾಡುತ್ತಾರೆ, ಬಹಳ ಸಲ ಕೊಂದೇ ಹಾಕುತ್ತಾರೆ. ಇದು ಕ್ರೂರ ಮತ್ತು ಅಮಾನುಷ ಪದ್ಧತಿಯಾಗಿದೆ. ಈ ಪದ್ಧತಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ಪಿತೃಸತ್ತಾತ್ಮಕ ಶಕ್ತಿಗಳಿಂದ ಮಹಿಳೆಯರ ಮೇಲೆ ಹೇರಲಾಗುವ ಹಿಂಸೆಯ ಒಂದು ರೂಪವಾಗಿದೆ. ಹಲವಾರು ರಾಜ್ಯಗಳಲ್ಲಿ ಇದನ್ನು ನಿಷಿದ್ಧಗೊಳಿಸಲು ಕಾನೂನುಗಳು ಅಸ್ತಿತ್ವದಲ್ಲಿವೆ.
ಈ ಕೆಟ್ಟ ಪದ್ಧತಿ ಮೊದಲು ಇದು ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿತ್ತು. ಈ ಡಾಕಿನಿ, ಡಾಯನ ಮಹಿಳೆಯರು ಮಕ್ಕಳನ್ನು ಶಿಶುಗಳನ್ನು ಕೊಲ್ಲುತ್ತಾರೆ ಎಂದು ಆರೋಪಿಸಿ ಅವರನ್ನು ಕಳಂಕಿತರನ್ನಾಗಿಸುವ ಆ ಮೂಲಕ ಅಂತಹ ಮಹಿಳೆಯರನ್ನು ಶೋಷಿಸುತ್ತಿದ್ದರು, ಹಿಂಸಿಸುತ್ತಿದ್ದರು, ನಿರ್ದಯವಾಗಿ ಕೊಂದು ಹಾಕುತ್ತಿದ್ದರು. ಹದಿನಾರನೆಯ ಶತಮಾನದಲ್ಲಿ ರಾಜಪೂತ ರಾಜರುಗಳು ಈ ಕ್ರೂರ ಪದ್ಧತಿಯನ್ನು ಶಾಸನದ ಮೂಲಕ ನಿಷೇಧಿಸಿದ್ದರು. ಮೊಟ್ಟಮೊದಲಿಗೆ 1853ರಲ್ಲಿ ಮೇವಾಡದ ಮಹಾರಾಣಾ ಸ್ವರೂಪ್ ಸಿಂಗ್ ನ ಕಾಲದಲ್ಲಿ ಉದಯಪುರದ ಖೇರವಾಡದಲ್ಲಿ ಈ ಪದ್ಧತಿಯನ್ನು ಕಾನೂನುಬಾಹಿರವೆಂದು ಘೋಷಿಸಲಾಗಿತ್ತು. ಈಗ ಭಾರತದಲ್ಲಿ ಕೆಲವು ರಾಜ್ಯಗಳು ಈ ಕಾಲಾ ಜಾದೂ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿವೆ. ಮಹಾರಾಷ್ಟ್ರದಲ್ಲಿ Anti Superstition and Black Magic Act) 2013 ರಲ್ಲಿ ಜಾರಿಗೆ ಬಂದಿದೆ.
ದಶಕಕ್ಕೂ ಹಿಂದೆ 2015ರ ಸುಮಾರು ಇದೇ ಝಾರ್ಖಂಡದ ಚೈಪಾ ಗ್ರಾಮದಲ್ಲಿ ಮಕ್ಕಳಿಗೆ ಜ್ವರ ಬರುತ್ತಿತ್ತಂತೆ. ಅನೇಕ ಮಕ್ಕಳು ಜ್ವರದಲ್ಲಿ ಸತ್ತುಹೋಗುತ್ತಿದ್ದರು. ಆಗ ಜನ ಅದು ಡಾಯನಳದೇ ಕೆಲಸವೆಂದು ತಿಳಿದು ಅದೇ ಗ್ರಾಮದ ಸುಕುರಮಣಿ ತಿರಿ ಜಾಂಗಿ ಮತ್ತು ನಾಲ್ವರು ಮಹಿಳೆಯರನ್ನು ಡಾಯನ್ ಎಂದು ಆರೋಪ ಹೊರಿಸಿ, ಅವರ ಮಾಟದಿಂದಲೇ ಮಕ್ಕಳು ಸಾಯುತ್ತಿವೆಯೆಂದು ತಿಳಿದು ಆ ಮಹಿಳೆಯರ ಮನೆಗಳಿಗೆ ನುಗ್ಗಿ ಲಾಠಿಯಿಂದ ಹೊಡೆದು ಆ ಮಹಿಳೆಯರನ್ನು ಸಾಯಿಸಲಾಯಿತು. ಇಂಥ ಮೂಢನಂಬಿಕೆಗಳಿಗೆ ಬಲಿಯಾಗುವವರು ಮಹಿಳೆಯರೇ ಎಂಬುದು ಗಮನಾರ್ಹವಾಗಿದೆ. ವರ್ಷಕ್ಕೆ ಸಾವಿರಾರು ಮಹಿಳೆಯರು ಈ ಆರೋಪಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾರೆ. ಕೊಂದವರಿಗೆ ಏನೂ ಆಗುವುದಿಲ್ಲ.
ಇದಕ್ಕೆ ಅಪವಾದವೋ ಎಂಬಂತೆ ’ಡಾಯನ್’ ಆರೋಪದಡಿ ಗ್ರಾಮದಿಂದ ಹೊರಹಾಕಲ್ಪಟ್ಟಿದ್ದ ಛುಟನಿ ಮಹತೋ ಎಂಬ ಮಹಿಳೆಗೆ ಭಾರತ ಸರ್ಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದ್ದು ಒಂದು ದಾಖಲೆ. ಕ್ರೂರ ಸಮಾಜ, ಕುಟುಂಬ ಛುಟನಿಯನ್ನು ತ್ಯಜಿಸಿದ್ದರೂ ಆಕೆ ತನ್ನ ನೋವನ್ನು ಚಳವಳಿಯನ್ನಾಗಿಸಿ ಹೋರಾಡಿದಳು. ಜಾರ್ಖಂಡದ ಹಳ್ಳಿ ಹಳ್ಳಿಗೂ ಹೋಗಿ ’ಡಾಯನ್ ಪದ್ಧತಿ’ಯ ವಿರುದ್ಧ ದನಿಯೆತ್ತಿದಳು. ಜನರಲ್ಲಿ ಈ ಕ್ರೂರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿದಳು. ಛುಟನಿಯ ಹೋರಾಟದಿಂದಾಗಿ ಇಂದು ಸಾವಿರಾರು ಮಹಿಳೆಯರು ಸುರಕ್ಷಿತವಾಗಿದ್ದಾರೆ. ಅನೇಕ ಹಳ್ಳಿಗಳು ಈ ಪದ್ಧತಿಯಿಂದ ಮುಕ್ತವಾಗಿವೆಯೆಂದು ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಓದಿದೆ. ಪ್ರತಿಯೊಬ್ಬ ಮಹಿಳೆಯೂ ಛುಟನಿ ಮಹತೋ ಆಗಬೇಕು. ಹೆದರಿ ಕುಳಿತರೆ ಈ ಪಿತೃಸತ್ತಾತ್ಮಕ ಸಮಾಜ ಕೊಂದುಹಾಕಲು ಹಿಂಜರಿಯುವುದಿಲ್ಲ.
ಈ ಸಂದರ್ಭದಲ್ಲಿ ಖ್ಯಾತ ಕಾದಂಬರಿಕಾರ್ತಿ ಸಾಮಾಜಿಕ ಹೋರಾಟಗಾರ್ತಿ ಮಹಾಶ್ವೇತಾದೇವಿ ಅವರ ಒಂದು ಕತೆ ಓದಿದ್ದು ನೆನಪಾಗುತ್ತದೆ. ನಿಖರವಾದ ವಿವರಗಳು ನೆನಪಿಲ್ಲ. ಆದರೆ ಕತೆಯ ಸಾರಾಂಶವೆಂದರೆ, ಒಂದು ಗ್ರಾಮದಲ್ಲಿ ಚಂಡಿ ( ಅಥವಾ ಚಿಂತಾಮಣಿ) ಎನ್ನುವ ಶವಸುಡುವ ಜಾತಿಗೆ ಸೇರಿದ ಒಬ್ಬ ಮಹಿಳೆಯನ್ನು ಊರವರು ʼಡಾಕಿಣಿʼ ಎಂದು ಭಾವಿಸಿ ಗ್ರಾಮದಿಂದ ದೂರವಿರಿಸಲಾಗುತ್ತದೆ. ಗ್ರಾಮದ ಹೊರಗೆ ಒಂಟಿಯಾಗಿ ಜೀವನ ನಡೆಸುವ ಚಂಡಿಯ ಬದುಕು ಸಾಮಾಜಿಕ ಶೋಷಣೆ, ಲಿಂಗಾಧಾರಿತ, ಜಾತಿ ಆಧಾರಿತ ತಾರತಮ್ಯ, ಶೋಷಣೆಯ ರೂಪವಾಗಿದೆ. ಚಂಡಾಲರಂತಹ ಕೆಳವರ್ಗದ ಜನರನ್ನು ಸಮಾಜದಿಂದ ದೂರವಿಡುವುದು ಅವರಿಗೆ ಮಾನವೀಯ ಗೌರವವನ್ನು ನಿರಾಕರಿಸುವುದು, ಮತ್ತು ಅವರ ಮೇಲೆ ಅಂಧಶ್ರದ್ಧೆಯ ಆರೋಪಗಳನ್ನು ಹೊರಿಸುವುದು- ಈ ಎಲ್ಲವೂ ಸಾಮಾಜಿಕ ಅನ್ಯಾಯದ ರೂಪಗಳಾಗಿವೆ. ಮಹಾಶ್ವೇತಾ ದೇವಿಯವರು ಈ ಕತೆಯ ಮೂಲಕ ಶೋಷಿತರಿಗೆ ಧ್ವನಿಯಾಗಿ, ಜಾತೀಯತೆಯ ವಿರುದ್ಧ ತೀವ್ರವಾದ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.
ಚಂಡಿಯ ಮಾನಸಿಕ ವೇದನೆಯನ್ನು ಒಬ್ಬ ಮಹಿಳೆಯಾಗಿ ಮಹಾಶ್ವೇತಾದೇವಿಯವರು ಬಹಳ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಗಂಡ, ಮಗನಿಂದ ದೂರವಾದ ಚಂಡಿ ಒಬ್ಬಂಟಿಯಾಗಿ ಶವಸುಡುವ ಕಾಯಕವನ್ನು ಮಾಡಿಕೊಂಡಿರುವಾಗ ಒಂದಿನ ಆಕೆಯ ಮಗ ಒಂದು ಅಪಘಾತದಲ್ಲಿ ತೀರಿಹೋಗುತ್ತಾನೆ. ಮಗನ ಮುಖವನ್ನು ಕಾಣಲು ಹಂಬಲಿಸುತ್ತಿದ್ದ ಚಂಡಿ ಕೊನೆಗೆ ಸತ್ತ ಮಗನನ್ನು ತಾನೇ ಕೈಯಾರೆ ಹೂಳುವ ದುರಂತ ಸ್ಥಿತಿಗೆ ತಲುಪುತ್ತಾಳೆ. ಎದೆಯೊಡೆದು ಹೋಗುವ ದಾರುಣ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದು ಕತೆಯ ಅತ್ಯಂತ ದುಃಖದಾಯಕ ಕ್ಷಣ. ಬಂಗಾಳದಲ್ಲಿಯೂ ಡಾಕಿಣಿ ಪದ್ಧತಿ ಇತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಭಾರತೀಯ ಸಮಾಜದ ಜಾತೀಯ ರಚನೆಯ ಕ್ರೂರ ಸತ್ಯವನ್ನು ಬಿಚ್ಚಿಡುತ್ತದೆ. ಈ ಕತೆಗೆ ಕಾಲು ಶತಮಾನವೋ ಅರ್ಧ ಶತಮಾನವೋ ಆಗಿರಬೇಕು. ಆದರೆ ಪೂರ್ಣಿಯಾದ ಘಟನೆಯನ್ನು ನೋಡಿದರೆ ನಾವು ಅರ್ಧ ಶತಮಾನ ಹಿಂದಕ್ಕೆ ಚಲಿಸಿದ್ದೇವೆ ಅಥವಾ ಚಲಿಸುತ್ತಿದ್ದೇವೆಂದು ಅನಿಸದೇ ಇರಲಾರದು.

ಮಹಾಶ್ವೇತಾ ದೇವಿ ಅವರ ಈ ಕಥೆಯು ಆದಿವಾಸಿ ಮತ್ತು ದಲಿತ ಸಮುದಾಯಗಳ ಶೋಷಣೆಯನ್ನು ಎತ್ತಿ ತೋರಿಸುತ್ತದೆ. ಇದು ಸಮಾಜದ ಅನಿಷ್ಟ ವಿಚಾರಗಳನ್ನು, ವಿಶೇಷವಾಗಿ ಡಾಯನ್, ಡಾಕಿನಿ, ಆರೋಪಗಳಂತಹ ಅಂಧವಿಶ್ವಾಸಗಳನ್ನು, ತೀವ್ರವಾಗಿ ಟೀಕಿಸುತ್ತದೆ. ಈ ಕಥೆಯು ಓದುಗರಿಗೆ ಸಾಮಾಜಿಕ ಅನ್ಯಾಯದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತದೆ ಮತ್ತು ಶಿಕ್ಷಣ, ಜಾಗೃತಿ, ಮತ್ತು ಕಾನೂನಿನ ಮೂಲಕ ಸುಧಾರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಆದರೆ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಈಗಾಗಲೇ ರಾಜ್ಯದಲ್ಲಿ 5000 ಸರಕಾರಿ ಶಾಲೆಗಳನ್ನು ಮುಚ್ಚಿಸುತ್ತಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಬಿಜೆಪಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಿಸುತ್ತಿದ್ದು ವಿಲೀನದ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಖಾಸಗಿ ಶಾಲೆಯ ಖರ್ಚುವೆಚ್ಚದ ಭಯದಿಂದಲೇ ಸಾವಿರಾರು ಮಕ್ಕಳು ಶಾಲೆಬಿಟ್ಟಿದ್ದಾರೆ. ಕೋಮುದ್ವೇಷಿಗಳು ಹಲ ವರ್ಷಗಳ ಹಿಂದೆ ಮದರಸಾಗಳನ್ನು ಮುಚ್ಚಿಹಾಕಿದ್ದರು. ಒಟ್ಟಿನಲ್ಲಿ ಜನ ಶಿಕ್ಷಿತರಾಗಬಾರದು. ಅಶಿಕ್ಷಿತರಾಗಿಯೇ ಒಳ್ಳೆಯ ಉದ್ಯೋಗವಿಲ್ಲದೇ, ಆರ್ಥಿಕವಾಗಿ ದುರ್ಬಲರಾಗಿದ್ದುಕೊಂಡೇ ಬದುಕಬೇಕು. ಹೀಗೆ ನೂರೆಂಟು ಅಭಿವೃದ್ಧಿ ಯೋಜನೆಗಳಿಗಾಗಿ, ಸ್ಮಾರ್ಟ್ ಸಿಟಿಗಳಿಗಾಗಿ, ಮಣ್ಣು ಮಸಿ ಎಂದು ದೊಡ್ಡ ದೊಡ್ಡ ಯೋಜನೆಗಳಿಗೆ ಮೀಸಲಿಟ್ಟಿದ್ದ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ನೀರು ಕುಡಿಯಲು ದೊಡ್ಡ ಕಾರ್ಪೊರೇಟ್ ಪೂಂಜಿವಾದಿಗಳ ಪಡೆಯೇ ಇದೆ.
ಈ ಸಂದರ್ಭದಲ್ಲಿ ಮತ್ತೆ ಮತ್ತೆ ಡಾ. ಬಿ. ಆರ್. ಅಂಬೇಡ್ಕರ್ ನೆನಪಾಗುತ್ತಾರೆ. ಇದೇ ಉತ್ತರಪ್ರದೇಶದ ಫೈಜಾಬಾದಿನ ಅಕ್ಬರ್ ಪುರದಲ್ಲಿ ಜನಿಸಿ ಜಾತಿವ್ಯವಸ್ಥೆಯ ನಿರ್ಮೂಲನೆಗಾಗಿ ಹೋರಾಡಿದ ರಾಮಮನೋಹರ್ ಲೋಹಿಯಾ ನೆನಪಾಗುತ್ತಾರೆ. ಇಬ್ಬರೂ ಮಹಾನ್ ಜನನಾಯಕರು ಜಾತಿ ವ್ಯವಸ್ಥೆ, ಶೋಷಣೆ, ಮತ್ತು ಅಂಧವಿಶ್ವಾಸದ ವಿರುದ್ಧ ತೀವ್ರವಾದ ಹೋರಾಟ ನಡೆಸಿದವರು.
ಬಾಬಾ ಸಾಹೇಬರು ಅಂಧವಿಶ್ವಾಸವನ್ನು “ಅಜ್ಞಾನದ ಗುಲಾಮಗಿರಿ” ಎಂದು ಕರೆದಿದ್ದರು. ಶಿಕ್ಷಣವನ್ನು ಸಾಮಾಜಿಕ ಸುಧಾರಣೆಯ ಪ್ರಮುಖ ಸಾಧನವೆಂದು ಪರಿಗಣಿಸಿದ್ದರು. ಆದರೆ ಇಂದು ಅವರ ತತ್ವಗಳ ಹಾದಿಯಲ್ಲಿಯೇ ನಡೆಯುತ್ತೇವೆಂದು ಹೇಳಿಕೊಳ್ಳುವವರ, ದೇಶವನ್ನು ವಿಶ್ವಗುರುವನ್ನಾಗಿಸುತ್ತೇವೆಂದು ಡಂಗುರ ಸಾರುತ್ತಿರುವವರ ಕೈಯಲ್ಲಿ ಈ ದೇಶ ಇನ್ನಷ್ಟು ಜಾತಿ ಧರ್ಮ, ಮೂಢನಂಬಿಕೆ, ಅನಕ್ಷರತೆಗೆ ಬಲಿಯಾಗಿದೆ.
ಇದನ್ನೂ ಓದಿ ದಿಲ್ಲಿ ಮಾತು | ಕೇಸರಿ ಪುಂಡರ ಕಾಂವಡಯಾತ್ರೆ
ಪೂರ್ಣಿಯಾದಲ್ಲಿ ನಡೆದ ಘಟನೆ ಶಿಕ್ಷಣದ ಕೊರತೆ, ಸಾಮಾಜಿಕ ಅಜ್ಞಾನಕ್ಕೆ ಕನ್ನಡಿ ಹಿಡಿದಿದೆ. ರಾಜಕೀಯ ಪಕ್ಷಗಳು ಕೇವಲ ಚುನಾವಣೆಯ ತಂತ್ರಗಳಾಗಿ ಕೆಲಸಮಾಡುತ್ತಿವೆಯೆ ಹೊರತು ಸಾಮಾಜಿಕ ಜಾಗೃತಿಯನ್ನುಂಟುಮಾಡುವ ಯಾವ ಯೋಜನೆಗಳನ್ನೂ ಮುನ್ನೆಲೆಗೆ ತರುತ್ತಿಲ್ಲ. ಯೋಜನೆಗಳು ಘೋಷಣಾ ಪತ್ರಗಳಲ್ಲಿ, ಅಥವಾ ಚುನಾವಣಾ ಪ್ರಣಾಳಿಕೆಯ ವಿಷಯಗಳಾಗಿ ಪ್ರಚಾರಗಿಟ್ಟಿಸುತ್ತಿವೆಯೇ ಹೊರತು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಅಲ್ಲದೇ ಅವು ಅನುಷ್ಠಾನಗೊಂಡಿವೆಯೋ ಅಥವಾ ತಣ್ಣನೆಯ ಚೀಲದಲ್ಲಿ ಕುಳಿತಿವೆಯೋ ಎಂದು ಯೋಚಿಸುವಷ್ಟೂ ಪುರುಸೊತ್ತು, ವಿವೇಚನೆ ಇಲ್ಲದೆ ಜನಸಾಮಾನ್ಯರು ಬದುಕುತ್ತಿದ್ದಾರೆ. ಮಹಿಳೆಯರ ಹಕ್ಕುಗಳ ಬಗ್ಗೆ, ಸಬಲೀಕರಣದ ಬಗ್ಗೆ, ಮಹಿಳೆಯರ ಮೇಲಿನ ದೌರ್ಜನ್ಯ ಶೋಷಣೆಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವವರು ಸಮಸ್ಯೆಯ ಮೂಲಕ್ಕೆ ಹೋಗಿ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ನೂರು ವರ್ಷಗಳ ಹಿಂದೆಯೇ ಡಾ ಅಂಬೇಡ್ಕರ್ ಉತ್ತರಭಾರತ ಮತ್ತು ದಕ್ಷಿಣಭಾರತದ ನಡುವಿರುವ ಸಾಮಾಜಿಕ, ಬೌದ್ಧಿಕ ಅಂತರವನ್ನು ಒಂದೆಡೆ ಲಿಖಿತ ರೂಪದಲ್ಲಿ ದಾಖಲಿಸಿದ್ದರು. ಆಗಲೂ ಉತ್ತರಭಾರತ ಅಂಧವಿಶ್ವಾಸ, ಅನಕ್ಷರತೆ, ಜಾತಿಪದ್ಧತಿಯ ಕೂಪವಾಗಿತ್ತು. ಅದು ಈಗಲೂ ಅದೇ ಅವಸ್ಥೆಯಲ್ಲಿದೆ ಎಂಬುದೇ ದುಃಖದ ಸಂಗತಿ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ