ಕುದಿ ಕಡಲು | ಕನ್ನಡ ಅಸ್ಮಿತೆಯ ಪ್ರಶ್ನೆ

Date:

Advertisements

ನೆಲ, ಜಲ, ನುಡಿ-ಇವುಗಳನ್ನು ಪೊರೆಯಲು ತಮಿಳರು ಯಾವ ಹಂತಕ್ಕೂ ಹೋಗಬಲ್ಲರು. ಅಧಿಕಾರಿಗಳು, ರಾಜಕಾರಣಿಗಳು, ವಿದ್ವತ್‌ ವಲಯದವರು, ಬುದ್ಧಿಜೀವಿಗಳು, ಕೃಷಿಕರು, ಕಾರ್ಮಿಕರು ಹೀಗೆ ಎಲ್ಲರೂ ಇಂಥ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಹೋರಾಡಬಲ್ಲರು. ಕರ್ನಾಟಕದಲ್ಲಿ ಇಂಥ ಮನೋಭಾವವೇ ಮರೆಯಾಗಿದೆ. ನಮ್ಮ ಅಭಿಮಾನ, ರಾಜಕೀಯ, ಹೋರಾಟ ಎಲ್ಲವೂ ಹೊಂದಾಣಿಕೆಯ ಮೇಲೆಯೇ ನಡೆಯುತ್ತ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.

ಇವತ್ತಿಗೂ ನಮಗೆ, ಕನ್ನಡಿಗರಿಗೆ, ಕರ್ನಾಟಕಕ್ಕೆ ಅನೇಕ ವಿಚಾರಗಳಲ್ಲಿ ಹೋಲಿಕೆಗೆ ಸಿಕ್ಕುವುದು ತಮಿಳುನಾಡಿನಿಂದಲೇ. ಭಾಷೆ, ಅಭಿಮಾನ, ಅಸ್ಮಿತೆ, ಘನತೆ, ದಿಟ್ಟತನ, ಸವಾಲೊಡ್ಡಿ ನಿಲ್ಲುವ ಹಟ- ಎಲ್ಲದರಲ್ಲೂ ತಮಿಳುನಾಡು ನಮಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಒಂದು ಮಾದರಿಯನ್ನು ಮುಂದಿಟ್ಟಿರುವ ರಾಜ್ಯ. ಇನ್ನೊಂದು ಮಾದರಿ ಸಿಕ್ಕುವುದಾದರೆ ಅದು ಪಶ್ಚಿಮ ಬಂಗಾಳ; ನಂತರ ಕೇರಳ. ಕರ್ನಾಟಕ ಈ ಎಲ್ಲ ವಿಚಾರಗಳಲ್ಲೂ ಇನ್ನೂ ತನ್ನ ದಾರಿಯನ್ನು ರೂಪಿಸಿಕೊಂಡಿಲ್ಲ. ಇದು ವಿಷಾದದ ಸಂಗತಿಯಾದರೂ ನಾವೆಲ್ಲ ಒಪ್ಪಿಕೊಳ್ಳಲೇಬೇಕಾದ ಕಹಿ ಸತ್ಯ.

ಕನ್ನಡ ಭಾಷೆ, ಅದರ ಸಾಹಿತ್ಯ, ಪರಂಪರೆಗೆ ಪ್ರಾಚೀನವಾದ ಗ್ರಂಥಗಳು, ದಾಖಲೆಗಳು, ಶಿಲಾ ಶಾಸನಗಳು, ಅಕ್ಷರದ ಹಿನ್ನೆಲೆ ಇತ್ಯಾದಿ ಇದ್ದರೂ, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವ ದೊರೆತದ್ದು ತಮಿಳುಭಾಷೆಗೆ ಈ ಸ್ಥಾನ ದೊರೆತ ನಾಲ್ಕು ವರ್ಷಗಳ ನಂತರವೇ. ಇಡೀ ರಾಷ್ಟ್ರದಲ್ಲಿಯೇ ಮೊದಲು ಶಾಸ್ತ್ರೀಯ ಭಾಷೆ ಎನ್ನುವ ಗೌರವ ದೊರೆತದ್ದು ತಮಿಳುನಾಡಿಗೆ. ಇದು ಈ ಭಾಷೆಯ, ಸಾಹಿತ್ಯದ ಪ್ರಾಚೀನತೆ, ಪ್ರಾಮುಖ್ಯತೆಯನ್ನು ಗಮನಿಸಿ ನೀಡಿದ ಗೌರವ ಎಂದು ಕಾರಣಗಳನ್ನು ಪಟ್ಟಿ ಮಾಡಿದರೂ, ಮುಖ್ಯವಾದ ಪ್ರಬಲ ಕಾರಣ ತಮಿಳರು ತಮ್ಮ ನುಡಿ, ಸಾಹಿತ್ಯ, ಅಸ್ಮಿತೆ, ಘನತೆಯ ಬಗ್ಗೆ ಇಟ್ಟುಕೊಂಡಿರುವ ಅಪಾರವಾದ ಅಭಿಮಾನ. ಜೊತೆಗೆ ತಮಿಳುನಾಡಿನ ರಾಜಕೀಯ ಮೊದಲಿನಿಂದಲೂ ತೋರುತ್ತ ಬಂದಿರುವ ಪ್ರಚಂಡವಾದ ಇಚ್ಛಾಶಕ್ತಿ. ಉಡುಗೆ, ತೊಡುಗೆ, ಆಹಾರ ಪದ್ಧತಿ ಹೀಗೆ ಬದುಕಿನ ಎಲ್ಲ ವಿಚಾರಗಳಲ್ಲೂ ಸದಾ ಎಚ್ಚರವಾಗಿರುವ ತಮಿಳರು ತಮ್ಮ ಘನತೆಗೆ ತೊಂದರೆ ಬಂದಾಗ ಯಾವುದೇ ಹೋರಾಟಕ್ಕೂ ಸಿದ್ಧರಾಗಿ ನಿಲ್ಲುವ ಗಟ್ಟಿತನವೂ ಮುಖ್ಯವಾದದ್ದು.

Advertisements

ನೆಲ, ಜಲ, ನುಡಿ-ಇವುಗಳನ್ನು ಪೊರೆಯಲು ತಮಿಳರು ಯಾವ ಹಂತಕ್ಕೂ ಹೋಗಬಲ್ಲರು. ಅಧಿಕಾರಿಗಳು, ರಾಜಕಾರಣಿಗಳು, ವಿದ್ವತ್‌ ವಲಯದವರು, ಬುದ್ಧಿಜೀವಿಗಳು, ಕೃಷಿಕರು, ಕಾರ್ಮಿಕರು ಹೀಗೆ ಎಲ್ಲರೂ ಇಂಥ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಹೋರಾಡಬಲ್ಲರು. ಕರ್ನಾಟಕದಲ್ಲಿ ಇಂಥ ಮನೋಭಾವವೇ ಮರೆಯಾಗಿದೆ. ನಮ್ಮ ಅಭಿಮಾನ, ರಾಜಕೀಯ, ಹೋರಾಟ ಎಲ್ಲವೂ ಹೊಂದಾಣಿಕೆಯ ಮೇಲೆಯೇ ನಡೆಯುತ್ತ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕು ಹದಿನೇಳು ವರ್ಷಗಳಾಗಿವೆ. (2008ರಲ್ಲಿ ಈ ಸ್ಥಾನ ದೊರೆತರೂ, ಅಧ್ಯಯನ ಕೇಂದ್ರ ಆರಂಭವಾದದ್ದು 2011ರಲ್ಲಿ) ಇವತ್ತಿಗೂ ಕನ್ನಡ ಶಾಸ್ತ್ರೀಯ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿಯೇ ಕೆಲಸ ಮಾಡುತ್ತಿದೆ. ಇಲ್ಲಿ ನಡೆಯುತ್ತಿರುವ ಸಂಶೋಧನೆ, ಅಧ್ಯಯನಗಳಿಗೆ ಅಗತ್ಯ ಹಣಕಾಸಿನ ನೆರವೂ ಸಿಕ್ಕುತ್ತಿಲ್ಲ. ತಮಿಳು ಭಾಷಾ ಕೇಂದ್ರವೂ ಸ್ವಾಯತ್ತ ಸಂಸ್ಥೆಯಾಗಿದೆ. ಕೇಂದ್ರದಿಂದ ಅದಕ್ಕೆ ದೊರೆಯುತ್ತಿರುವ ಹಣಕಾಸಿನ ನೆರವೂ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಜೊತೆಗೆ ಈ ಸಂಸ್ಥೆಯನ್ನು ತಮಿಳುನಾಡು ಸರ್ಕಾರಕ್ಕೆ ವಹಿಸಿಕೊಡಲಾಗಿದೆ. ತಮಿಳರ ಅಭಿಮಾನ ಮತ್ತು ರಾಜಕೀಯ ಶಕ್ತಿಯನ್ನು ಗಮನಿಸಿ ಕೇಂದ್ರ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ.

ತಮಿಳು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಮಾಡುತ್ತಿರುವ ಕೆಲಸಗಳನ್ನು ಗಮನಿಸಿದರೆ, ತಮಿಳರ ಅಭಿಮಾನ ಒಣ ಅಭಿಮಾನವಲ್ಲ ಎಂಬುದೂ ತಿಳಿಯುತ್ತದೆ. ಕನ್ನಡ ಶಾಸ್ತ್ರೀಯ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಅಗತ್ಯ ನಿವೇಶನವನ್ನು ಕೊಟ್ಟರೆ ತಾನು ಕಟ್ಟಡ ನಿರ್ಮಿಸಿಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿ, ಎಷ್ಟೋ ಕಾಲವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿಯೇ 4 ಎಕರೆಗೂ ಹೆಚ್ಚಿನ ಜಾಗವನ್ನು ಮೈಸೂರು ವಿ.ವಿ. ನೀಡಿದೆ. ರಾಜ್ಯ ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೂಚನೆ ನೀಡಿ ಈ ನಿವೇಶನವನ್ನು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಹೆಸರಿಗೆ ನೋಂದಣಿ ಮಾಡಿಸಿದರೆ ಮುಗಿಯಿತು. ಕೇಂದ್ರ ಸರ್ಕಾರ ತಮಿಳುನಾಡಿಗೆ ಕಟ್ಟಿಸಿಕೊಟ್ಟಿರುವಂತೆ ಒಳ್ಳೆಯ ಕಟ್ಟಡವನ್ನು ಕಟ್ಟಿಸಿಕೊಡುತ್ತದೆ. ಆದರೆ ನಮ್ಮ ರಾಜ್ಯ ಸರ್ಕಾರದ ಸೋಮಾರಿತನ ಎಷ್ಟಿದೆ ಎಂದರೆ, ಈ ಸಣ್ಣ ಕೆಲಸವೂ ಆಗದೆ, ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಹಂಗಾಮಿಯಾಗಿ ಮೈಸೂರು ವಿ.ವಿ. ಒಂದು ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರ ಇನ್ನೂ ಸ್ವಾಯತ್ತೆ ಪಡೆಯದೆ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿಯೇ ಉಳಿದಿದೆ.

tamil languge
ತಮಿಳು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸ್ವಂತ ಕಟ್ಟಡ

ಇಂಥ ಅತಂತ್ರ ಸ್ಥಿತಿಯ ನಡುವೆಯೇ ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಮಾತನ್ನು ಕೇಂದ್ರ ಸರ್ಕಾರ ಆಡುತ್ತಿದೆ. ಯಾಕಾಗಿ ಈ ಸ್ಥಳಾಂತರ? ಬೆಂಗಳೂರು ಈಗಾಗಲೇ ತುಂಬಿ ತುಳುಕುತ್ತಿದೆ. ವಿಕೇಂದ್ರೀಕರಣದ ಮೂಲಕವೇ ಬೆಂಗಳೂರನ್ನು ಉಳಿಸಬೇಕಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ನೆಲೆಸಿರುವ ಸಂಸ್ಥೆಗಳನ್ನು, ಕೇಂದ್ರಗಳನ್ನು ಕರ್ನಾಟಕದ ಬೇರೆ ಬೇರೆ ಊರುಗಳಿಗೆ ದೂಡುವುದೊಂದೇ ಉಳಿದಿರುವ ದಾರಿ. ಇಂಥ ಹೊತ್ತಿನಲ್ಲಿ ಕೇಂದ್ರ ಸರ್ಕಾರಕ್ಕೆ ಕನ್ನಡ ಭಾಷೆಯ ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಆಲೋಚನೆ ಯಾಕೆ ಬಂತು? ಕೇಂದ್ರ ಸರ್ಕಾರ ನೀಡಿರುವ ಕಾರಣ: ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಅಭಿವೃದ್ಧಿಯಾಗಬೇಕಾದರೆ, ಅದು ನಡೆಸುವ ಸಂಶೋಧನೆಗಳು ಪ್ರಗತಿಯಾಗಬೇಕಾದರೆ ಬೆಂಗಳೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಲಾಭ ಪಡೆಯಬೇಕು.

ಇದು ವಿಚಿತ್ರವಾದ ತರ್ಕ. ಸಣ್ಣ ಹಳ್ಳಿಯಲ್ಲಿದ್ದೂ ವಿಜ್ಞಾನ ಮತ್ತು ತಂತ್ರಜ್ಞಾನದ ಲಾಭವನ್ನು ಪಡೆಯಬಹುದು. ಅನೇಕ ಸಂಸ್ಥೆಗಳು ಈಗಾಗಲೇ ಇದನ್ನು ಮಾಡಿ ತೋರಿಸಿವೆ. ಕೇಂದ್ರ ಸರ್ಕಾರ ಸ್ಥಳಾಂತರಕ್ಕೆ ನೀಡುತ್ತಿರುವ ಕಾರಣ ಅರ್ಥಹೀನವಾದದ್ದು.
ಮೈಸೂರಿನಲ್ಲಿರುವ ಈ ಕೇಂದ್ರದಲ್ಲಿ ನಡೆಯಬೇಕಾದ ಸಂಶೋಧನೆ, ಅಧ್ಯಯನಗಳಿಗೆ ಅಗತ್ಯವಾದ ವಾತಾವರಣ ಮೈಸೂರಿನಲ್ಲಿಯೇ ಇದೆ. ಅಗತ್ಯ ನೆರವು ನೀಡಬಲ್ಲ ಬಹುಮುಖ್ಯವಾದ ಸಂಸ್ಥೆಗಳು, ಕೇಂದ್ರಗಳು ಇಲ್ಲಿಯೇ ಇವೆ. ವಿಜ್ಞಾನ-ತಂತ್ರಜ್ಞಾನದ ಪ್ರಯೋಜನ ಪಡೆಯಲು ಮೈಸೂರಿನಲ್ಲಿ ಅಡ್ಡಿಯಾಗುವ ಸಂಗತಿಗಳೇನೂ ಇಲ್ಲ.

ಈ ಕೇಂದ್ರಕ್ಕೆ ಸ್ವಾಯತ್ತೆಯನ್ನು ಕೊಡುವ ಭರವಸೆಯನ್ನೇನೋ ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರದ ವಶಕ್ಕೆ ಕೊಡುವ ವಿಚಾರವನ್ನು ತಳ್ಳಿಹಾಕಿದೆ. ತಮಿಳುನಾಡು ಸರ್ಕಾರದ ವಶದಲ್ಲಿಯೇ ಇರುವ ತಮಿಳು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಿ ಅರ್ಥಪೂರ್ಣವಾಗಿಯೇ ಮುನ್ನಡೆಯುತ್ತಿದೆ. ಕನ್ನಡ ಕೇಂದ್ರಕ್ಕೆ ಇದು ಸಾಧ್ಯವಾಗುವುದಿಲ್ಲವೇ?

ಕನ್ನಡಿಗರ ಅಭಿಮಾನದ ಕೊರತೆಯನ್ನು ಮತ್ತು ಕರ್ನಾಟಕ ಸರ್ಕಾರದ ಇಚ್ಛಾಶಕ್ತಿಯ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ಕೇಂದ್ರ ಸರ್ಕಾರ ಇಂಥ ತೀರ್ಮಾನಗಳಿಗೆ ಮುಂದಾಗುವಂತೆ ಕಾಣುತ್ತಿದೆ. ಇಂಥ ಅಧ್ಯಯನ ಸಂಸ್ಥೆಗಳ ಮಹತ್ವ ಮತ್ತು ಒಂದು ಭಾಷೆಯ, ಸಾಹಿತ್ಯದ, ಪ್ರಾಚೀನತೆಯ ಘನತೆಯನ್ನು ತಿಳಿದು ಕೇಂದ್ರ ಸರ್ಕಾರ ಅದರ ನೆರವಿಗೆ ಧಾವಿಸಬೇಕೇ ಹೊರತು ತನ್ನ ರಾಜಕೀಯ ಚದುರಂಗದಾಟಕ್ಕೆ ದಾಳವಾಗಿ ಇಂಥ ವಿಚಾರಗಳನ್ನು ಬಳಸಬಾರದು.

ಕನ್ನಡ ಶಾಸ್ತ್ರೀಯ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ 12 ಜನ ಸಂಶೋಧಕರು ದುಡಿಯುತ್ತಿದ್ದಾರೆ. ಒಬ್ಬ ನಿರ್ದೇಶಕರ ಮಾರ್ಗದರ್ಶನವೂ ಇದೆ. ಇತರೆ ಸಿಬ್ಬಂದಿಯಾಗಿ ನಾಲ್ವರು ಇದ್ದಾರೆ. ಈ ಕೇಂದ್ರಕ್ಕೆ ಈಗ ನೀಡುತ್ತಿರುವ ಹಣಕಾಸು ಸಾಕಾಗುವುದಿಲ್ಲ. ತಮಿಳು ಭಾಷಾ ಕೇಂದ್ರಕ್ಕೆ ಕೊಡುತ್ತಿರುವಷ್ಟು ಹಣಕಾಸು ನೆರವನ್ನು ಕನ್ನಡಕ್ಕೆ ಯಾಕೆ ಕೊಡಲು ಸಾಧ್ಯವಿಲ್ಲ. ಶಾಸ್ತ್ರೀಯ ಭಾಷಾ ಸ್ಥಾನವನ್ನು ಪಡೆದಿರುವ ಎಲ್ಲ ಭಾಷೆಗಳೂ ಸಮಾನವೇ. ಹೀಗಿರುವಾಗ ತಾರತಮ್ಯ ಯಾಕೆ ಮಾಡಬೇಕು?

ಹೆಚ್ಚಿನ ಹಣಕಾಸು ದೊರೆಯುವುದರಿಂದ ಅತ್ಯುನ್ನತ ಮಟ್ಟದ ಸಂಶೋಧನೆ, ಅಧ್ಯಯನ ನಡೆಯುತ್ತವೆ. ಪ್ರಾಚೀನ ಸಾಹಿತ್ಯ ಗ್ರಂಥಗಳ ಸಂರಕ್ಷಿಸುವುದು, ದಾಖಲೀಕರಿಸುವುದು, ಡಿಜಿಟಲೈಸ್‌ ಮಾಡುವುದು, ಪ್ರಾಚೀನ ಗ್ರಂಥಗಳನ್ನು ಮತ್ತು ಸಂಶೋಧನೆಗಳನ್ನು ಮುದ್ರಿಸುವುದು, ಮುಖ್ಯ ಗ್ರಂಥಗಳನ್ನು ಅನ್ಯಭಾಷೆಗಳಿಗೆ ಭಾಷಾಂತರಿಸುವುದು ಇತ್ಯಾದಿ ಹಲವಾರು ಕೆಲಸಗಳು ನಡೆಯುತ್ತವೆ. ಜೊತೆಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ, ಕೇಂದ್ರೀಯ ವಿದ್ಯಾಲಯಗಳಲ್ಲಿ, ವಿದೇಶಗಳಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಪೀಠಗಳನ್ನು ಕೂಡಾ ತೆರೆಯಬಹುದು. ಇದರಿಂದ ಕನ್ನಡ ಭಾಷೆ ಬೆಳೆಯಲು ಮತ್ತು ಉದ್ಯೋಗಗಳನ್ನು ಹುಟ್ಟುಹಾಕಲು ಸಾಧ್ಯವಾಗುತ್ತದೆ. ಅಲ್ಲದೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮನ್ನಣೆಯನ್ನು ಕನ್ನಡದ ಪ್ರಾಚೀನ ಕೃತಿಗಳು ಪಡೆದುಕೊಳ್ಳಲೂ ಈ ಕೆಲಸಗಳು ನೆರವು ನೀಡುತ್ತವೆ. ಈಗಾಗಲೇ ಕೆಲವು ಖಾಸಗೀ ಸಂಸ್ಥೆಗಳು ಕನ್ನಡದ ಹಳೆಯ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ ಭಾಷೆಗೆ ಅನುವಾದ ಮಾಡುವ ಕೆಲಸವನ್ನು ಆರಂಭಿಸಿ, ಕನ್ನಡ ಸಾಹಿತ್ಯದ ಕಡೆಗೆ ವಿದೇಶೀಯರು ಕುತೂಹಲದಿಂದ ನೋಡುವಂತೆ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿಯಾದರೂ ನಮ್ಮ ಕೇಂದ್ರ ಸರ್ಕಾರ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಅಧ್ಯಯನ ಕೇಂದ್ರಗಳನ್ನು ಬಲಗೊಳಿಸಬೇಕು. ರಾಜಕೀಯ ಒಲವು-ನಿಲುವುಗಳು ಮಧ್ಯೆ ಬರಬಾರದು.

ಒಂದು ಭಾಷೆ ಎಂದರೆ, ಅದು ಕೇವಲ ಸಮುದಾಯದ ನಿತ್ಯ ಬಳಕೆಗೆ ಮಾತ್ರ ಸೀಮಿತವಾದ ನುಡಿಯಲ್ಲ. ಭಾಷೆಯ ಜೊತೆಗೆ ಸಮುದಾಯ, ಅದರ ಚರಿತ್ರೆ, ನಡೆದ ದಾರಿ, ಚಿಂತನೆ, ಬದುಕಿನ ರೀತಿ ನೀತಿ, ಸಾಹಿತ್ಯ, ಕಲೆ, ರಾಜಕೀಯ, ಏರಿಳಿವು ಇತ್ಯಾದಿ ಹಲವು ಸಂಗತಿಗಳು ಸೇರಿದ ಸಂಕೀರ್ಣ ರೂಪವೇ ಭಾಷೆಯಾಗಿರುತ್ತದೆ. ಹೀಗಾಗಿ ಭಾಷೆಯ ಪ್ರಾಚೀನತೆ ನಾಗರಿಕತೆಯ ಪ್ರಾಚೀನತೆಯೂ ಆಗಿರುತ್ತದೆ. ಯಾವುದೇ ರಾಷ್ಟ್ರಕ್ಕೆ ಇದು ಮುಖ್ಯ ಮತ್ತು ಕಾಳಜಿಯಿಂದ ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!
ಇದನ್ನೂ ಓದಿ ವಚನಯಾನ | ಕಲ್ಲು ದೇವರ ಪೂಜಿಸುವ ಕತ್ತೆಗಳು

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X