ವರ್ಣಭೇದ ನೀತಿ ಕೊನೆಯಾದ ನಂತರವೂ ಈ ಪರಿಸ್ಥಿತಿ ಬದಲಾಗಲಿಲ್ಲ. ಒಟ್ಟು ಅಪರಾಧಗಳಿಗೆ ಹೋಲಿಸಿದರೆ ಬಿಳಿಯರ ಮೇಲಿನ ಹಲ್ಲೆಗಳು ಮತ್ತು ಹತ್ಯೆಗಳ ಪ್ರಮಾಣ ಬಹಳ ಕಡಿಮೆ. ದಕ್ಷಿಣ ಆಫ್ರಿಕೆಯನ್ನು ಆಳುತ್ತಿದ್ದ ಬಿಳಿಯರು ಕಪ್ಪು ಜನರ ಸರ್ಕಾರವನ್ನು ಸಹಿಸುತ್ತಿಲ್ಲ. ದಕ್ಷಿಣ ಆಫ್ರಿಕೆಯಲ್ಲೇ ಹುಟ್ಟಿ ಬೆಳೆದ ಎಲಾನ್ ಮಸ್ಕ್ ನಂತಹ ಬಲಪಂಥೀಯರು ಕಪ್ಪು ಜನರ ವಿರುದ್ಧ ಜಾಗತಿಕ ಮಟ್ಟದಲ್ಲಿ ಮಿಥ್ಯಾಪ್ರಚಾರ ನಡೆಸಿದ್ದಾರೆ.
ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಂಫೋಸ ಅವರನ್ನು ಸುದ್ದಿ ಚಾನೆಲ್ ಗಳ ಮುಂದೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿ ಹೋಗಿತ್ತು. ಬಿಳಿಯ ರೈತರನ್ನು ಅವರ ಜಮೀನುಗಳಿಂದ ಹೊರಹಾಕಲಾಗುತ್ತಿದೆ ಮಾತ್ರವಲ್ಲ, ಅವರನ್ನು ಕೊಲ್ಲಲಾಗುತ್ತಿದೆ ಎಂದು ಟ್ರಂಪ್ ಆಪಾದಿಸಿದರು. ಅಮೆರಿಕೆಯಲ್ಲೂ ಯಾವುದೇ ನಾಚಿಕೆ ಹೇಸಿಕೆ ಇಲ್ಲದೆ ಬಹಿರಂಗವಾಗಿ ಬಿಳಿಯರ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ ಟ್ರಂಪ್.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಆಫ್ರಿಕನ್ ಅಧ್ಯಯನ ಕೇಂದ್ರದ ಎಮಿರಿಟಸ್ ಪ್ರೊಪೆಸರ್ ವಿಲಿಯಂ ಬೈನಾರ್ಟ್ ಅವರು ಟ್ರಂಪ್ ಆಪಾದನೆಗಳಿಗೆ ತಳಬುಡವಿಲ್ಲ ಎಂದು ತಳ್ಳಿ ಹಾಕಿದ್ದಾರೆ.
ಇಸ್ರೇಲಿಗಳು ಪ್ಯಾಲೆಸ್ತೀನೀಯರ ಜನಾಂಗೀಯ ಹತ್ಯೆ ನಡೆಸಿದ್ದಾರೆಂಬುದು ದಕ್ಷಿಣ ಆಫ್ರಿಕಾದ ನಿಲುವು. ಈ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದ (International Court of Justice) ಬಾಗಿಲನ್ನೂ ಬಡಿದಿದೆ. ಇಸ್ರೇಲ್ ನ್ನು ಬೆಂಬಲಿಸುತ್ತ ಬಂದಿದೆ ಅಮೆರಿಕ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಈ ಬೆಂಬಲ ಮತ್ತಷ್ಟು ಗಟ್ಟಿಯಾಗಿದೆ. ಪ್ಯಾಲೆಸ್ತೀನೀಯರನ್ನು ಬೆಂಬಲಿಸಿರುವ ದಕ್ಷಿಣ ಆಫ್ರಿಕಾದ ನೀತಿಯ ಕುರಿತು ಟ್ರಂಪ್ ಕೋಪದಿಂದ ಕುದಿದಿದ್ದಾರೆ.
ರಂಫೋಸ ಅವರನ್ನು ತರಾಟೆಗೆ ತೆಗೆದುಕೊಂಡ ದರ್ಪ ದುರಹಂಕಾರದ ಹಿಂದೆ ಈ ಇಸ್ರೇಲ್- ಪ್ಯಾಲೆಸ್ತೀನಿ ರಾಜಕಾರಣವೂ ಕೆಲಸ ಮಾಡಿದೆ.
ಇತಿಹಾಸವನ್ನು ತಲೆಕೆಳಗಾಗಿ ನೋಡುವ ಹುನ್ನಾರವಿದು. ವರ್ಣಭೇದ ನೀತಿಯಡಿ ಬಿಳಿಯರ ಸರ್ಕಾರವು ದಕ್ಷಿಣ ಆಫ್ರಿಕೆಯ ಕಪ್ಪು ಜನರನ್ನು ಅವರ ನೆಲದಿಂದಲೇ ಒಕ್ಕಲೆಬ್ಬಿಸಿತ್ತು. ಈ ನೀತಿ ಅಂತ್ಯಗೊಂಡದ್ದು 1990ರಲ್ಲಿ. ಆಗಲೂ ದಕ್ಷಿಣ ಆಫ್ರಿಕೆಯ ಜಮೀನುಗಳ ಮೇಲೆ ಬಿಳಿಯರ ಕಪಿಮುಷ್ಠಿ ಸಡಿಲ ಆಗಿರಲಿಲ್ಲ. ಗ್ರಾಮೀಣ ಭಾಗದ ಕೊಂಚ ಜಮೀನು ಮಾತ್ರವೇ ಕಪ್ಪು ಜನರ ಕೈಯಲ್ಲಿತ್ತು. ಬಿಳಿಯರ ಜಮೀನುಗಳಲ್ಲಿ ಕೃಷಿ ಕಾರ್ಮಿಕ ಸೇನೆಯೇ ದುಡಿಯುತ್ತಿತ್ತು.
ಕಪ್ಪು ಜನರ ಹೊಸ ಸರ್ಕಾರ ಭೂಸುಧಾರಣೆಗಳಿಗೆ ಆದ್ಯತೆ ನೀಡಿತ್ತು. ಜಮೀನುಗಳನ್ನು ಬಿಳಿಯರು ಸ್ವಇಚ್ಛೆಯಿಂದ ಮಾರುವ ಮತ್ತು ಕಪ್ಪು ಜನರು ಸ್ವಇಚ್ಛೆಯಿಂದ ಖರೀದಿಸುವ ಶಾಂತಿಯುತ ಸ್ವರೂಪವನ್ನು ಈ ಭೂಸುಧಾರಣೆ ಹೊಂದಿತ್ತು. ದಕ್ಷಿಣ ಆಫ್ರಿಕಾ ಮುಂಚಿನಿಂದಲೂ ಹಿಂಸಾತ್ಮಕ ನಾಡು. ಹತ್ಯೆಗಳು ಮತ್ತು ಹಿಂಸಾತ್ಮಕ ಅಪರಾಧಗಳು ಅಲ್ಲಿ ಸರ್ವೇಸಾಮಾನ್ಯ. ವರ್ಣಭೇದ ನೀತಿ ಕೊನೆಯಾದ ನಂತರವೂ ಈ ಪರಿಸ್ಥಿತಿ ಬದಲಾಗಲಿಲ್ಲ. ಒಟ್ಟು ಅಪರಾಧಗಳಿಗೆ ಹೋಲಿಸಿದರೆ ಬಿಳಿಯರ ಮೇಲಿನ ಹಲ್ಲೆಗಳು ಮತ್ತು ಹತ್ಯೆಗಳ ಪ್ರಮಾಣ ಬಹಳ ಕಡಿಮೆ. ದಕ್ಷಿಣ ಆಫ್ರಿಕೆಯನ್ನು ಆಳುತ್ತಿದ್ದ ಬಿಳಿಯರು ಕಪ್ಪು ಜನರ ಸರ್ಕಾರವನ್ನು ಸಹಿಸುತ್ತಿಲ್ಲ. ದಕ್ಷಿಣ ಆಫ್ರಿಕೆಯಲ್ಲೇ ಹುಟ್ಟಿ ಬೆಳೆದ ಎಲಾನ್ ಮಸ್ಕ್ ನಂತಹ ಬಲಪಂಥೀಯರು ಕಪ್ಪು ಜನರ ವಿರುದ್ಧ ಜಾಗತಿಕ ಮಟ್ಟದಲ್ಲಿ ಮಿಥ್ಯಾಪ್ರಚಾರ ನಡೆಸಿದ್ದಾರೆ.
ಆರ್ಥಿಕ ವರ್ಣಭೇದ ನೀತಿ ಈಗಲೂ ಅಳಿದಿಲ್ಲ. ಜಮೀನು, ಅವಕಾಶಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳು ಈಗಲೂ ಕಪ್ಪು ಜನರ ಕೈಗೆಟುಕಿಲ್ಲ. ಬಿಳಿಯರ ಪ್ರಮಾಣ ದಕ್ಷಿಣ ಆಫ್ರಿಕಾದ ಒಟ್ಟು ಜನಸಂಖ್ಯೆಯ ಏಳರಷ್ಟು ಮಾತ್ರ. ಆದರೆ ದೇಶದ ಶೇ.70ರಷ್ಟು ಜಮೀನು ಈಗಲೂ ಬಿಳಿಯರ ವಶದಲ್ಲಿದೆ. ಕಾರ್ಪೊರೇಟ್ ಕಂಪನಿಗಳ ಶೇ.62ರಷ್ಟು ಆಡಳಿತಾತ್ಮಕ ಹುದ್ದೆಗಳು ಬಿಳಿಯರ ಕೈಯಲ್ಲಿವೆ. ಕಪ್ಪು ಜನರಿಗೆ ದಕ್ಕಿರುವ ಪ್ರಮಾಣ ಕೇವಲ ಶೇ.17ರಷ್ಟು. ಆದರೂ ಬಿಳಿಯ ಆಫ್ರಿಕನ್ನರು ಅಪಾಯದಲ್ಲಿ ಬದುಕಿದ್ದಾರೆ, ಸಂಕಟಕ್ಕೆ ಸಿಲುಕಿದ್ದಾರೆ ಎಂಬ ಮಿಥ್ಯಾಪ್ರಚಾರಕ್ಕೆ ತಿದಿ ಒತ್ತಲಾಗುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳ ಒಡೆತನದಲ್ಲಿ ಕಪ್ಪು ಜನರ ಪಾಲು ಶೇ.30ರಷ್ಟು ಇರಲೇಬೇಕು ಎಂಬುದು ಅಲ್ಲಿನ ಸರ್ಕಾರದ ನಿಯಮ. ಹಳೆಯ ಅಸಮಾನತೆಯನ್ನು ನಿವಾರಿಸಲು ಕೈಗೊಂಡಿರುವ ಸುಧಾರಣಾ ಕ್ರಮವಿದು. ತಮ್ಮ ಸ್ಟಾರ್ ಲಿಂಕ್ ಕಂಪನಿಗೆ ಈ ನಿಯಮದಿಂದ ವಿನಾಯಿತಿ ಸಿಗಬೇಕು ಎಂಬುದು ಎಲಾನ್ ಮಸ್ಕ್ ಧೋರಣೆ. ಅದು ಕೈಗೂಡಿಲ್ಲ. ಹೀಗಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದಿವೆ ದಕ್ಷಿಣ ಆಫ್ರಿಕಾ ಸರ್ಕಾರದ ಮೂಲಗಳು. ದಕ್ಷಿಣ ಆಫ್ರಿಕೆಯ ಅಧ್ಯಕ್ಷ ಸಿರಿಲ್ ರಂಫೋಸ ಅವರು ಈ ಅಪಪ್ರಚಾರದ ವಿರುದ್ಧ ಎಲಾನ್ ಮಸ್ಕ್ ಗೆ ಎಚ್ಚರಿಕೆಯನ್ನೂ ನೀಡಿರುವುದುಂಟು.
ದಕ್ಷಿಣ ಆಫ್ರಿಕೆಯ ಕಪ್ಪು ಜನರ ಎದುರಿಸುವ ಕಟು ವಾಸ್ತವ ಬೇರೆಯೇ ಇದೆ.
ಗೆದ್ದ ನಂತರವೂ ಸೋತು ಸುಣ್ಣವಾಗಿ ಹೋಗಿರುವ ಕಪ್ಪು ವರ್ಣೀಯ ಜನಸಮೂಹದ ಕಥೆ ವ್ಯಥೆಯಿಂದ ಮೇಲೆದ್ದಿಲ್ಲ. ಕಪ್ಪು ಜನರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸರ್ಕಾರ ಬಂದ ನಂತರ ಚಿಗುರಿ ಮುಗಳು ನಗೆ ಚೆಲ್ಲಬೇಕಿತ್ತು ನೆಲದ ಮೂಲನಿವಾಸಿಗಳು. ಆದರೆ ಈ ಸಮುದಾಯವನ್ನು ಕಪ್ಪು ಜನರ ಸರ್ಕಾರಗಳೂ ವಂಚಿಸಿದವು., ಅವುಗಳ ಹಿಂದೆ ನಿಂತು ನಿಯಂತ್ರಣದ ಸೂತ್ರ ಹಿಡಿದಿರುವ ಬಿಳಿಯರ ಹುನ್ನಾರಗಳು, ಲಾಭಬಡುಕ ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿಶ್ವಬ್ಯಾಂಕು- ಅಂತಾರಾಷ್ಟ್ರೀಯ ವಿತ್ತ ನಿಧಿಗಳು ಒಂದಾಗಿ ನೇಯ್ದಿರುವ ಜಾಲದಲ್ಲಿ ಸಿಲುಕಿದ್ದಾರೆ ಈ ನೆಲವಾಸಿಗಳು.
ದಕ್ಷಿಣ ಆಫ್ರಿಕಾದ ಜನಸಂಖ್ಯೆ ಹೆಚ್ಚೂ ಕಡಿಮೆ ನಮ್ಮ ಕರ್ನಾಟಕದಷ್ಟೇ. ಆರು ಕೋಟಿ ನಲವತ್ತು ಲಕ್ಷ ಜನಸಂಖ್ಯೆ. ಕನಿಷ್ಠ 34 ಭಾಷೆಗಳನ್ನು ಆಡುತ್ತದೆ ದಕ್ಷಿಣ ಆಫ್ರಿಕಾ. ಹನ್ನೆರಡು ಅಧಿಕೃತ ಭಾಷೆಗಳು. ಅಂಚಿಗೆ ತಳ್ಳಲ್ಪಟ್ಟಿರುವ 25ಕ್ಕೂ ಹೆಚ್ಚು ಅನಧಿಕೃತ ಭಾಷೆಗಳಿವೆ. ‘ಮಳೆಬಿಲ್ಲಿನ’ ಮೈತ್ರಿಯ ದೇಶ ಎಂದೇ ಹೆಸರಾಗಿದೆ.
ಮುಷ್ಠಿಯಷ್ಟು ಬಿಳಿಯರ ಸರ್ಕಾರ ಈ ನಾಡಿನ ಮೂಲನಿವಾಸಿಗಳಾದ ಕಪ್ಪು ಜನ ಸಮಷ್ಟಿಯ ಮೇಲೆ ನಡೆಸಿದ ದಬ್ಬಾಳಿಕೆ ಅತ್ಯಾಚಾರ ಶೋಷಣೆಗಳ ವಿರುದ್ಧ ಅಹಿಂಸೆಯ ಅಸ್ತ್ರ ಬಳಸಿ ಗೆದ್ದ ಮಹಾನಾಯಕ ನೆಲ್ಸನ್ ಮಂಡೇಲ ಕಾಲವಶರಾಗಿದ್ದಾರೆ. ಈತನ ಗೆಲುವು ಈ ನಾಡಿನ ಮೂಲನಿವಾಸಿಗಳಾದ ಕಪ್ಪು ಸಮುದಾಯದ ಗೆಲುವಾಗಬೇಕಿತ್ತು. ಈತ ಮುಂದೆ ನಿಂತು ಮುನ್ನಡೆಸಿದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ವಿಜಯ ಎನಿಸಬೇಕಿತ್ತು. ಆದರೆ ಹಾಗಾಗಿಲ್ಲ.
ಬಿಳಿಯರ ಭೇದ ಭಾವದ ದುರಾಡಳಿತದಲ್ಲಿ ನಾಲ್ಕನೆಯ ದರ್ಜೆಯ ಮೃಗಗಳಿಗೂ ಕಡೆಯಾಗಿ ಬದುಕಿದ ಆ ನೆಲದ ಮೂಲ ನಿವಾಸಿಗಳ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳು ಇಂದಿಗೂ ಸುಧಾರಿಸಿಲ್ಲ. ಅವರ ಬದುಕುಗಳನ್ನು ಘೋರ ನಿರ್ದಯೆಯಿಂದ ಹೊಸಕಿ ಹಾಕಿದ್ದ ಬಿಳಿಯರ ಸರ್ಕಾರದ ಉಕ್ಕಿನ ಹಸ್ತ ಈಗಲೂ ಈ ಜನರ ಬೆನ್ನು ಬಿಟ್ಟಿಲ್ಲ. 1948ರಿಂದ ವರ್ಣಭೇದ ನೀತಿಯ ಘನಘೋರ ದುರಾಚಾರ ನಡೆಸಿದ ಅಲ್ಪಸಂಖ್ಯಾತ ಬಿಳಿಯರ ಸರ್ಕಾರ 1994ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಸರ್ಕಾರಕ್ಕೆ ದಾರಿ ಮಾಡಿದ್ದು ಹೊರನೋಟಕ್ಕಷ್ಟೇ ನಿಜ.
ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ನಾಯಕರಲ್ಲಿ ತಮ್ಮದೇ ದೀನ ಜನಸಮೂಹಕ್ಕೆ ಘನತೆಯ ಆತ್ಮಗೌರವದ ಬದುಕು ಕಟ್ಟಿಕೊಡುವ ಇರಾದೆ ಮರೆಯಾಗಿದೆ. ತಮ್ಮ ಕುಟುಂಬ, ಮಿತ್ರವರ್ಗದ ಉದ್ಧಾರಕ್ಕಷ್ಟೇ ಅವರು ಕಟಿಬದ್ಧರು. ರಾಜಿಗಳನ್ನು ಮಾಡಿಕೊಂಡಾದರೂ ಸರಿ ಅಧಿಕಾರ ಕೈಬಿಡದಂತೆ ಹಿಡಿದಿಡುವ ಸ್ವಾರ್ಥದಲ್ಲಿ ಕುರುಡರು.
ನಿಲ್ಲಲು ನೆಲವಿಲ್ಲದ, ತಲೆಯ ಮೇಲೆ ಸೂರಿಲ್ಲದ ದಕ್ಷಿಣ ಆಫ್ರಿಕೆಯ ಕಪ್ಪು ಜನಸಮೂಹದ ದನಿ ಎನಿಸಿದ್ದರು ಕ್ಯಾಥೊಲಿಕ್ ಧರ್ಮಗುರು ಕೋಸ್ಮಸ್ ಡೆಸ್ಮಂಡ್. ಕಡೆಗೆ ಚರ್ಚನ್ನು ಧಿಕ್ಕರಿಸಿ ಕಪ್ಪುಜನರ ಹೋರಾಟದ ಜೊತೆ ನಿಂತದರು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮಗ್ಗುಲ ಮುಳ್ಳಾಗಿದ್ದರು. ವರ್ಣಭೇದ ನೀತಿ ಅಂತ್ಯಗೊಂಡ ತರುವಾಯವೂ ಕಪ್ಪುಜನರ ಬವಣೆ ನಿಲ್ಲಲಿಲ್ಲ ಎಂದು ದುಃಖಿತರಾಗಿದ್ದರು ಡೆಸ್ಮಂಡ್. ಇವರ ಪ್ರಕಾರ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸು, ಬಿಳಿಯರ ಆಳ್ವಿಕೆಯಲ್ಲಿ ಬಹುದೀರ್ಘ ಕಾಲ ದೇಶಭ್ರಷ್ಟವಾಗಿದ್ದ ಕಾರಣ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಯಾವ ಬೆಲೆಯನ್ನು ಬೇಕಾದರೂ ತೆರಲು ತಯಾರಿತ್ತು. ಹೀಗೆ ಹೇಳುವುದು ಧರ್ಮನಿಂದನೆ ಮಾಡಿದಷ್ಟು ಗುರುತರವೆಂದು ಗಣಿಸಲಾಗುವುದು. ಆದರೆ ದಕ್ಷಿಣ ಆಫ್ರಿಕೆಯ ಮೂಲ ನೆಲವಾಸಿಗಳ ಉದ್ಧಾರಕ್ಕೆ ಕಾಣ್ಕೆಯೊಂದನ್ನು ಕಟ್ಟಿಕೊಡುವ ದಾರ್ಶನಿಕನ ಎತ್ತರಕ್ಕೆ ಮಂಡೇಲ ಏರಲಿಲ್ಲ ಒಂದು ನಿರ್ದಿಷ್ಟ ಪೊಲಿಟಿಕಲ್ ಫಿಲಾಸಫಿಯೇ ಹರಳುಗಟ್ಟಲಿಲ್ಲ. ಬಣ್ಣಬಣ್ಣದಲ್ಲಿ ಉಬ್ಬಿದ ಟೊಳ್ಳು ಮಿಠಾಯಿಯಂತೆ ಏನೂ ಇಲ್ಲದ ನಿರ್ಗತಿಕರು ಮತ್ತು ಎಲ್ಲವನ್ನೂ ಹೊಂದಿದ್ದ ಧನಿಕರ ನಡುವೆ ಕೃತ್ರಿಮ ಅನುಸಂಧಾನವೊಂದು ಏರ್ಪಟ್ಟಿತ್ತು. ವರ್ಣಭೇದ ನೀತಿಯ ಹಿಂದಿದ್ದ ದುರುಳರು, ಆಂಗ್ಲೋ-ಅಮೆರಿಕನ್ ಕಾರ್ಪೊರೇಷನ್ನುಗಳಂತಹ ದೈತ್ಯಶಕ್ತಿಗಳು ಈಗಲೂ ಮಂಕಾಗಿಲ್ಲ. ಹಿಂದಿನಷ್ಟೇ ಭದ್ರವಾಗಿ ಬೇರು ಬಿಟ್ಟು ನಿಂತಿವೆ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸು ಮತ್ತು ಅದರ ಬಾಲಬಡುಕರ ಕೈವಾಡವಿರುವ ಭ್ರಷ್ಟ ಆಚರಣೆಗಳು, ಲೂಟಿಗಳು, ಸುಳ್ಳುಗಳು, ಕಗ್ಗೊಲೆಗಳ ಕುರಿತು ವರದಿಗಳು ಓದುಗರನ್ನು ತಲುಪದಂತೆ ಪತ್ರಿಕಾ ಸೆನ್ಸಾರ್ಷಿಪ್ ವಿಧಿಸುವ ಸಂಚು ನಡೆದಿದೆ’.

ಬಿಳಿಯರ ಕಟ್ಟ ಕಡೆಯ ಸರ್ಕಾರದ ಮುಖ್ಯಸ್ಥ ಎಫ್.ಡಬ್ಲ್ಯೂ.ಡಿ ಕ್ಲರ್ಕ್ 1990ರ ಫೆಬ್ರವರಿಯಲ್ಲಿ ಮಂಡೇಲರ ಬಿಡುಗಡೆಗೆ ಆದೇಶ ನೀಡಿದ್ದ. ಜೊತೆಜೊತೆಗೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಮೇಲಿನ ನಿಷೇಧವನ್ನೂ ತೆರವು ಮಾಡಿದ್ದ. ಆದರೆ ಇದಕ್ಕೆ ಮುನ್ನವೇ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಜೊತೆಗೆ ಬಿಳಿಯರ ಯೋಗಕ್ಷೇಮ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಬೇಡಿಕೆಗಳ ಕುರಿತು ಒಪ್ಪಂದ ಕುದುರಿಸಿಬಿಟ್ಟಿದ್ದ. ಬಿಳಿಯರಿಂದ ಅಧಿಕಾರ ಹಸ್ತಾಂತರದ ಹೊತ್ತಿನಲ್ಲಿ ಮುಖ್ಯ ಸಂಧಾನಕಾರರಲ್ಲಿ ಒಬ್ಬರಾಗಿದ್ದವರು ಮಂಡೇಲರ ನಂತರ ದಕ್ಷಿಣ ಆಫ್ರಿಕೆಯ ಅಧ್ಯಕ್ಷರಾದ ಮ್ಬೆಕಿ. ಅವರೇ ಹೇಳಿರುವ ಪ್ರಕಾರ ಐತಿಹಾಸಿಕ ರಾಜಿ ಒಪ್ಪಂದಗಳ ಸರಣಿಯನ್ನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಗೆ ಏರ್ಪಟ್ಟಿತ್ತು. ಬೇರೆ ದಾರಿಯೀ ಇರಲಿಲ್ಲ (ANC had no choice at all but to accept a series of “historic compromises”).
ಆಳದ ಮಾತು ಒತ್ತಟ್ಟಿಗಿರಲಿ, ಮೇಲ್ಪದರವನ್ನು ಕೂಡ ಕೆದಕುವುದು ಸಾಧ್ಯವಿರಲಿಲ್ಲ. ಹಾಗೆ ಮಾಡಿದ್ದರೆ ದೇಶಕ್ಕೆ ದೇಶವೇ ನೆತ್ತರಿನ ಸ್ನಾನಕ್ಕೆ ತುತ್ತಾಗುವ ಅಪಾಯವಿತ್ತು ಎಂದು ಮ್ಬೆಕಿ ಹೇಳಿದ್ದರು. ದೈತ್ಯ ವ್ಯಾಪಾರ, ವಿದೇಶೀ ಬಂಡವಳಿಗರು, ಖಾಸಗೀಕರಣ ಮುಂತಾದ ನವ ಉದಾರವಾದೀ ನೀತಿಗಳ ದಾರಿಯನ್ನು ತುಳಿದರೆ ಮಾತ್ರ ದಕ್ಷಿಣ ಆಫ್ರಿಕೆಯನ್ನು ಜಾಗತಿಕ ಅರ್ಥವ್ಯವಸ್ಥೆಯ ಒಳಕ್ಕೆ ಬಿಟ್ಟುಕೊಳ್ಳುವ ಷರತ್ತುಗಳನ್ನು ಕಪ್ಪು ಜನರ ಹೊಸ ಸರ್ಕಾರಕ್ಕೆ ವಿಧಿಸಲಾಗಿತ್ತು. ಈ ಮೋಸದ ಷರತ್ತುಗಳನ್ನು ವಿಶ್ವಬ್ಯಾಂಕು, ಬ್ರಿಟನ್, ಅಮೆರಿಕಾ ಒಟ್ಟಾಗಿ ರೂಪಿಸಿದ್ದವು. ಹೀಗಾಗಿ ದಕ್ಷಿಣ ಆಫ್ರಿಕೆಯ ಬಡಜನರ ಬರಡು ಬದುಕುಗಳು ಚಿಗುರಿ ಚೇತರಿಸಿಕೊಳ್ಳಲೇ ಇಲ್ಲ.
ಹಳೆಯ ಶೋಷಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ವಿರುದ್ಧ ಯಾವುದೇ ಹಿಂಸಾಚಾರಕ್ಕೆ ಉತ್ತೇಜನ ನೀಡುವುದಿಲ್ಲ ಎಂಬುದಾಗಿಯೂ ಮಾತು ಕೊಟ್ಟಿತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸು. ಈ ಮಾತಿಗೆ ಸ್ವಾತಂತ್ರ್ಯಾನಂತರ ರಚಿಸಲಾದ ಹಲ್ಲು ಉಗುರುಗಳಿಲ್ಲದ ಬಡಪಾಯಿ Truth and Reconciliation Committeeಯೇ ಜೀವಂತ ಸಾಕ್ಷಿ. ಸಾರಾಂಶದಲ್ಲಿ ಹೇಳುವುದಾದರೆ ಹಳೆಯ ವ್ಯವಸ್ಥೆಯನ್ನೇ ಎತ್ತಿ ಹಿಡಿದು ದಕ್ಷಿಣ ಆಫ್ರಿಕೆಯಲ್ಲಿ ಹಳೆಯ ವ್ಯಾಪಾರ ವ್ಯವಹಾರ ಹಿಂದಿನಂತೆಯೇ ಇಂದು ಕೂಡ ನಡೆದುಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ವಚನ ನೀಡಲಾಗಿತ್ತು. ಹೀಗಾಗಿ ವರ್ಣಭೇದ ನೀತಿ ಜಾರಿಯಲ್ಲಿದ್ದ ದಿನಗಳ ಆರ್ಥಿಕ ನೀತಿಗಳನ್ನೇ ಆನಂತರವೂ ಕಾಪಾಡಿಕೊಂಡು ಬರಲಾಯಿತು.
ಯಾವುದೇ ಬೆಲೆಯನ್ನು ತೆತ್ತಾದರೂ ಭಾರೀ ಬಂಡವಾಳ ಹೂಡಿಕೆಯನ್ನು ಓಲೈಸಿತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಕಾಣ್ಕೆ ಮಬ್ಬಾಗಿ ಹೋಯಿತು, ಕಳಂಕಿತಗೊಂಡಿತು. ದಮನ ದುರಾಚಾರದಲ್ಲಿ ದನಿ ಕಳೆದುಕೊಂಡಿದ್ದ ಜನಸಮುದಾಯದ ಕನಸುಗಳು ನನಸಾಗಲೇ ಇಲ್ಲ.

ಡಿ ಉಮಾಪತಿ
ಹಿರಿಯ ಪತ್ರಕರ್ತರು